ಲಖನೌನ ಚೌಧರಿ ಚರಣಸಿಂಗ್ ವಿಮಾನ ನಿಲ್ದಾಣದಲ್ಲಿ ಕುಳಿತ ಅಮ್ಮ-ಮಗಳಿಬ್ಬರಿಗೂ ಬೆಂಗಳೂರು ತಲುಪಿದ ಮೇಲೆ ಮುಂದೇನು ಎಂಬುದೇ ದೊಡ್ಡ ತಲೆನೋವಾಗಿತ್ತು. ಮೇಘಸ್ಫೋಟಕ್ಕೆ ಸಿಲುಕಬಾರದೆಂಬ ತರಾತುರಿಯಲ್ಲಿ ಮೂರು ತಾಸು ಮುಂಚಿತವಾಗಿಯೇ ಹೊಟೇಲ್ ಖಾಲಿಮಾಡಿದ್ದೆವು. ಬೆಳಗಿನಿಂದ ಬಿರುಬಿಸಿಲನ್ನು ಕಂಡ ನಮಗೆ ಈ ಪರಿಯ ಮಳೆಯನ್ನು ಕಲ್ಪಿಸುವುದಕ್ಕೂ ಸಾಧ್ಯವಿರಲಿಲ್ಲ. ನಮ್ಮ ದುಗುಡ, ಮಾತಿನ ಧಾಟಿಯನ್ನು ಕಂಡು ಪಕ್ಕದಲ್ಲೇ ಕುಳಿತಿದ್ದ ಶೀತಲ್ ತಿವಾರಿ ಹೇಳಿದಳು, “ಈ ರೀತಿಯ ಮೇಘಸ್ಫೋಟ ಲಖನೌನಲ್ಲಿ ಸಾಮಾನ್ಯ. ಇನ್ನು ಎರಡು-ಮೂರು ತಾಸು ವಾತಾವರಣ ಹೀಗೇ ಮುಂದುವರಿಯುವುದರಲ್ಲಿ ಯಾವ ಸಂದೇಹವೂ ಇಲ್ಲ.” ಅವಳಿಗೋ ಬೆಂಗಳೂರು ತಲುಪಿದ ಮೇಲೆ ಏರ್‍ಬಸ್ಸ್ ಹತ್ತಿ ಮೈಸೂರಿಗೆ ಹೋದರಾಯ್ತು. ಆದರೆ ನಮಗೆ ಬೆಂಗಳೂರಿನಿಂದ ಮತ್ತೆ ಮಂಗಳೂರ ಕಡೆಗೆ ಮುಖ ಮಾಡಬೇಕು. ಇನ್ನು ಒಂದು ಗಂಟೆಯಲ್ಲಿ ಬೆಂಗಳೂರಿಂದ ಮಂಗಳೂರಿಗೆ ಹೋಗುವ ಫ್ಲೈಟ್ ಹೊರಟುಬಿಡುತ್ತದೆ...ಮುಂದೇನು?
ಇಂದಿಗೆ ಸರಿಯಾಗಿ ಹದಿನೈದು ದಿನ ಹಿಂದಿನ ಮಾತು. “ನಾನು ಸೌಹಾರ್ದ ಸಮ್ಮಾನ್ ಪುರಸ್ಕಾರಕ್ಕೆ ಆಯ್ಕೆಯಾದ ಅಧಿಕೃತ ಪತ್ರ ಈಗಷ್ಟೇ ಬಂತು. ಮೊತ್ತ ಎರಡು ಲಕ್ಷ. ಕಾರ್ಯಕ್ರಮಕ್ಕೆ ಇನ್ನುಳಿದಿರುವುದು ಕೇವಲ ಹದಿನಾಲ್ಕು ದಿನಗಳು ಮಾತ್ರ. ಡಿಂಪಿ ಈ ಶುಭ ಸಮಾಚಾರವನ್ನು ನೀನೇ ನಿನ್ನ ಪಪ್ಪನಿಗೆ ಕೊಡಬೇಕು. ಆ ದಿನ ಲಖನೌನವರು ಫೋನ್‍ನಲ್ಲಿ ಎಲ್ಲಾ ಡಿಟೇಲ್ಸ್ ಕೇಳಿ ಕನ್ಫರ್ಮ ಮಾಡಿಕೊಂಡಿದ್ದಾರೆ ಅಂದರೆ ಅವರು ನಂಬಲಿಲ್ಲ. ಅದೇನೋ ಫೇಕ್ ಕಾಲ್ ಇರಬೇಕು ಅಂತ ತಮಾಷೆ ಮಾಡಿದರು. ಅವರು ಯಾವತ್ತೂ ನನ್ನನ್ನು ಅಂಡರ್‍ಎಸ್ಟಿಮೇಟ್ ಮಾಡೋದು...ಆಜ್ ಮೈಂ ಊಪರ್, ಆಸಮಾನ್ ನೀಚೆ...” ಹಾಡುತ್ತ ಅಮ್ಮ ಅಡಿಗೆಮನೆ ಕಡೆ ನಡೆದಳು. “ಓಕೇ ಅಮ್ಮಾ, ಪಪ್ಪನಿಗೆ ನಾನೇ ಹೇಳ್ತೇನೆ, ಆದರೆ ಈ ಶುಭ ಸಮಾಚಾರ ಸವಿಯಾಗರಬೇಕು ಅಂದ್ರೆ ನೀನು ಈಗಲೇ ಪಪ್ಪನ ಇಷ್ಟದ ಶೀರಾ ಮಾಡಬೇಕು.” ಅದೇನಾಶ್ಚರ್ಯ! ಅಮ್ಮ ಮಾಡಲಿಕ್ಕೆ ಹೊರಟಿದ್ದು ಅದೇ ಆಗಿತ್ತು. ನನ್ನ ಮಾತು ಮತ್ತು ಅವರ ಕೃತ್ಯ ಒಂದೇ ಆಗಿತ್ತು.
ವಾಕಿಂಗ್ ಮುಗಿಸಿ ಹಿಂದಿರುಗಿದ ಪಪ್ಪನಿಗೆ ಮೊದಲು ಮೂಗಿಗೆ ಬಡಿದದ್ದು ಅಡಿಗೆಮನೆಯಲ್ಲಿ ತಯಾರಾದ ಸಿಹಿಯಾದರೂ, ಅದನ್ನು ಸವಿಯುವ ಮುನ್ನ ಕಿವಿಯ ಮೂಲಕ ಹಾದುಹೋದ ಸುದ್ದಿಯೂ ಅಷ್ಟೇ ಸವಿಯೆನಿಸಿತು. “ಏನೇ ರೇವತಿ, ನಿನ್ನ ಟೆಲೆಂಟ್‍ನ್ನ ನಾನು ಯಾವಾಗ ಅಂಡರ್‍ಎಸ್ಟಿಮೇಟ್ ಮಾಡಿದ್ದೇನೆ? ಇದೋ...ನಮ್ಮ ಫ್ಯಾಮಿಲಿ ವಾಟ್ಸಆಪ್ ಗ್ರೂಪ್‍ಗೆ ಹಾಕಿ ಕೆಲವರಾದರೂ ತಲೆ ಕೆರೆದುಕೊಳ್ಳುವಂತೆ ಮಾಡುತ್ತೇನೆ. ಇವತ್ತೇ ಪ್ರೆಸ್‍ನವರಿಗೆಲ್ಲ ನ್ಯೂಸ್ ಕಳಿಸಿಬಿಟ್ಟರೆ, ನಾಳೆಯೇ ಪೇಪರುಗಳಲ್ಲಿ ಬರಬಹುದು... ಆ ಲೆಟರ್ ಕೊಡು, ಅದರ ಫೋಟೋಕಾಪಿಯನ್ನೂ ಸೇರಿಸಿ ಮೇಲ್ ಮಾಡಿಬಿಡೋಣ. ನಿನ್ನ ಕ್ಯಾಲಿಬರ್ ಮೇಲೆ ಸಂದೇಹ ಪಟ್ಟು ಮೂಗು ಮುರಿಯುತ್ತಿದ್ದವರೆಲ್ಲ ಹುಬ್ಬೇರಿಸುವಂತೆ ಮಾಡೋಣ.” ಪಪ್ಪ ತನ್ನ ಮೊಬೈಲ್‍ನಲ್ಲಿ ಫೋಟೋ ತೆಗೆಯಲು ಮುಂದಾದರು.
ಮರುದಿನ ಅಮ್ಮನ ಫೋಟೋಸಮೇತ ಬಂದ ವರದಿಯನ್ನು ಅವಲೋಕಿಸುತ್ತಿದ್ದ ಪಪ್ಪನ ಮುಖ ಬಲು ಗಂಭೀರವಾಗಿದ್ದಂತೆ ಕಂಡಿತು. ಅಮ್ಮ ಪ್ರಶ್ನಾರ್ಥಕವಾಗಿ ಅವರ ಕಡೆಗೆ ನೋಡುತ್ತಿದ್ದಂತೆ ಕೇಳಿಯೇಬಿಟ್ಟರು, “ರೇವತಿ, ಪ್ರಶಸ್ತಿ ತೆಗೆದುಕೊಳ್ಳೋದಕ್ಕೆ ಲಖನೌಗೆ ಹೋಗಲೇಬೇಕಾ?” ಅಮ್ಮ ತನ್ನ ಸ್ವರವನ್ನು ಆದಷ್ಟು ನಿಯಂತ್ರಿಸಿಕೊಂಡು ಹೇಳಿದಳು, “ಮತ್ತಿನ್ನೇನು? ಮುಖ್ಯಮಂತ್ರಿಗಳ ಕೈಗಳಿಂದ ಪ್ರಶಸ್ತಿ ಸ್ವೀಕರಿಸುವುದನ್ನು ಬಿಟ್ಟು, ನನಗೆ ಬರಲಿಕ್ಕೆ ಆಗೋದಿಲ್ಲ, ಪ್ರಶಸ್ತಿ ಮೊತ್ತ ನನ್ನ ಅಕೌಂಟ್‍ಗೆ ಹಾಕ್ತೀರಾ ಅಂತ ಕೇಳಬೇಕಾ?...ಕಳೆದ ವರ್ಷ ಶ್ರೀನಾಥ್ ಕುಲಕರ್ಣಿಯವರಿಗೆ ಇದೇ ಅವಾರ್ಡ್ ಸಿಕ್ಕಿತ್ತಲ್ವಾ. ಆಗ ಯಾವುದೋ ಕಾರಣದಿಂದಾಗಿ ಸಿ.ಎಂ.ಗೆ ಬರಲಿಕ್ಕಾಗಿರಲಿಲ್ಲವಂತೆ. ಹಾಗಾಗಿ ಎಲ್ಲಾ ಪ್ರಶಸ್ತಿವಿಜೇತರಿಗೂ ಆ ದಿನ ರಾತ್ರಿ ಅವರ ನಿವಾಸದಲ್ಲೇ ಔತಣಕೂಟ ಏರ್ಪಡಿಸಿದ್ದರಂತೆ...” ಅಮ್ಮ ಇಷ್ಟೆಲ್ಲ ಹೇಳಿದರೂ ಪಪ್ಪನ ತಲೆಯಲ್ಲಿ ಕೊರೆಯುತ್ತಿದ್ದುದು ಬೇರೆಯೇ ವಿಷಯ. ಅದಕ್ಕೆ ಶಬ್ದರೂಪ ಕೊಡುತ್ತ ಹೇಳಿದರು, “ಅದೆಲ್ಲ ಸರಿ ಮಹಾರಾಯ್ತಿ. ನನಗೆ ಗೊತ್ತಿರುವ ಹಾಗೆ, ಮಂಗಳೂರಿಂದ ಲಖನೌಗೆ ಡೈರೆಕ್ಟ್ ಫ್ಲೈಟ್ ಆಗಲಿ, ಟ್ರೇನ್ ಆಗಲಿ ಇದ್ದಂತಿಲ್ಲ. ಕನೆಕ್ಟಿಂಗ್ ಟ್ರೇನ್ ಹತ್ತಿಕೊಂಡು ಹೋಗುವುದು ನಿನ್ನಿಂದಾಗದ ಮಾತು. ಈ ವಯಸ್ಸಿನಲ್ಲಿ ನಿನ್ನೊಬ್ಬಳನ್ನು ಫ್ಲೈಟ್ ಹತ್ತಿಸಿ ಕಳಿಸುವುದು ಅಸಾಧ್ಯ. ನೀನೇನು ಹೇಳ್ತೀಯಾ ಡಿಂಪಿ?”
“ಪಪ್ಪಾ, ನನ್ನ ಈ ಸೆಮಿಸ್ಟರ್ ಪೋರ್ಷನ್ಸ್ ಮುಗಿದಿವೆ. ಈಗ ಆಗ್ತಿರೋದು ರಿವಿಜನ್ ಅಷ್ಟೆ. ನಾನು ಅಮ್ಮನ ಜೊತೆ ಹೋಗ್ತೇನೆ. ನಾಲ್ಕೈದು ದಿನ ರಜೆ ಮಾಡಿದರೆ ನನಗೇನೂ ತೊಂದರೆಯಿಲ್ಲ.” ನನ್ನ ಮಾತುಗಳಿಂದ ಪಪ್ಪನಿಗೆ ಸಮಾಧಾನವಾಯಿತು. ತನ್ನ ವಯಸ್ಸಾದ ತಾಯಿಯನ್ನು ಬಿಟ್ಟು ಎಲ್ಲಿಗಾದರೂ ಹೋಗುವುದು ಅವರ ಪಾಲಿಗೆ ಅಸಾಧ್ಯವಾಗಿತ್ತು. ನಾನು ಅಮ್ಮನಿಗೆ ಜೊತೆಯಾಗಿದ್ದನ್ನು ಕಂಡು ಪಪ್ಪನಿಗೂ ನೆಮ್ಮದಿಯಾಯಿತು. ಕೂಡಲೇ ಏರ್ ಟಿಕೆಟ್ ಬುಕ್ ಮಾಡಿದರು.
“ಈ-ಟಿಕೆಟ್ ಕಾಪಿ, ಐಡೆಂಟಿಟಿ ಪ್ರೂಫ್, ಮೊಬೈಲ್, ಪರ್ಸ್, ಅಲ್ಲಿಂದ ಬಂದ ಲೆಟರ್, ಅಲ್ಲಿ ತಲುಪಿದ ಮೇಲೆ ಕಂಟ್ಯಾಕ್ಟ್ ಮಾಡಬೇಕಾದವರ ಫೋನ್ ನಂಬರ್ ಇತ್ಯಾದಿಗಳನ್ನೆಲ್ಲ ಸರಿಯಾಗಿ ಇಟ್ಟುಕೊಂಡಿದ್ದೀರಲ್ವಾ? ಮತ್ತೊಮ್ಮೆ ನನ್ನೆದುರೇ ಚೆಕ್ ಮಾಡಿಕೊಳ್ಳಿ.” ಪಪ್ಪ ನಮಗೆ ಕಿರಿಕಿರಿಯಾಗುವಂತೆ ಹೇಳಿದರು. ಏರೋಡ್ರಮ್‍ನಲ್ಲೂ ಪಪ್ಪ ಮತ್ತದೇ ಪ್ರಶ್ನೆ ಕೇಳಿದರು. ಪಪ್ಪ ಮತ್ತೆ-ಮತ್ತೆ ಹೆಳಿ-ಕೇಳಿ ಕನ್ಫರ್ಮ್ ಮಾಡುವುದು-ಮಾಡಿಕೊಳ್ಳುವುದು ನಮಗಂತೂ ರೂಢಿಯಾಗಿಬಿಟ್ಟಿದೆ. ಹಾಗಾಗಿ ಬೇಸರವಾಗಲಿಲ್ಲ. ಕಾರಣವಿಷ್ಟೇ, ಪಪ್ಪ ಅಷ್ಟು ಬಾರಿ ನೆನಪಿಸಿದ ಮೇಲೂ ಒಂದೆರಡು ವಸ್ತುಗಳು ಮತ್ತೆ ಬಂದು ಬ್ಯಾಗ್ ಸೇರಿಕೊಳ್ಳುವ ಪರಿಸ್ಥಿತಿ ಅಮ್ಮನ ಪಾಲಿಗೆ ಯಾವತ್ತೂ ಇದ್ದೇ ಇರುತ್ತದೆ.
ಮಂಗಳೂರಿಂದ ಬೆಂಗಳೂರು ತಲುಪುವುದು ಲೇಟಾಗಿ, ಮುಂದಿನ ಫ್ಲೈಟ್ ಹಿಡಿಯಲು ಆದ ಟೆನ್ಶನ್ ಅಷ್ಟಿಷ್ಟಲ್ಲ. ಮತ್ತೆ ಅಲ್ಲಿಂದ ಲಖನೌ ತಲುಪಿದಾಗ ಸೂರ್ಯಾಸ್ತವಾಗಿ ಅದೆಷ್ಟೋ ಹೊತ್ತು ಕಳೆದಿತ್ತು. ಸೌಹಾರ್ದ ಸಮ್ಮಾನ ಕಮಿಟಿಯ ಕಾರ್ಯಾಧ್ಯಕ್ಷರಾದ ಶ್ರೀವಾಸ್ತವರು ಎರಡು ದಿನ ಮುಂಚಿತವಾಗಿ ಕೊಟ್ಟಿದ್ದ ರಿಸೆಪ್ಶನ್ ಕಮಿಟಿಯ ಸದಸ್ಯನೊಬ್ಬನ ನಂಬರ್‍ಗೆ ಅಮ್ಮ ಕರೆಮಾಡಿದರು. ಅವರಾಗಲೇ ಏರ್‍ಪೋರ್ಟ್ ಹೊರಗಡೆ ಬ್ಯಾನರ್ ಹಿಡಿದು ನಮಗಾಗಿ ಕಾಯುತ್ತಿದ್ದರು. ಕಾರು ಅಲ್ಲಿಂದ ನೇರವಾಗಿ ಹೊಟೇಲ್ ಮೋಹನ್ ಕಡೆ ಹೊರಳಿತು. “ನಿಮ್ಮ ಪಿಂಕ್ ಸಿಟಿ ಬೆಂಗಳೂರು ತುಂಬಾ ಸ್ವಚ್ಛವಾದ ನಗರ, ನಮ್ಮ ಲಖನೌನಂತಲ್ಲ. ನಮ್ಮ ಸಿ. ಎಂ. ಅಲ್ಲಿಯೇ ಓದಿದವರು...” ಡ್ರೈವರ್ ಮೋಜಿಝ್‍ನ ಲಖನವೀ ಹಿಂದಿ ಮಾತುಗಳನ್ನು ಕೇಳುತ್ತಲೇ ಇರಬೇಕೆನಿಸುತ್ತಿತ್ತು. ಹಾಗಾಗಿ ಅವನ ಮಾತುಗಳಿಗೆ ಹೋಂಗುಡುತ್ತಲೇ ಸಾಗಿದೆವು. ಏರ್‍ಪೋರ್ಟ್‍ನಿಂದ ನಾವಿರಬೇಕಾದ ಹೊಟೇಲ್ ಕೇವಲ ಹದಿನೆಂಟು ಕಿ.ಮಿ. ದೂರದಲ್ಲಿದ್ದರೂ ಫ್ಲೈ ಓವರ್ ಕಾಮಗಾರಿಯಿಂದಾಗಿ, ಅಡ್ಡಾದಿಡ್ಡಿಯಾಗಿ ಹಾಕಿಟ್ಟ ಬ್ಯಾರಿಕೇಡ್‍ಗಳಿಂದಾಗಿ, ನಡುನಡುವೆ ಸಿಗುವ ಟ್ರ್ಯಾಫಿಕ್‍ಗಳಿಂದಾಗಿ ಹೊಟೇಲ್ ತಲುಪುವವರೆಗೆ ಸುಸ್ತೋಸುಸ್ತು!
ಶ್ರೀವಾಸ್ತವರು ಸಮಿತಿಯ ಇತರ ಸದಸ್ಯರೊಡನೆ ಖುದ್ದಾಗಿ ಬಂದು ರಿಸೆಪ್ಶನ್ ಕೌಂಟರ್ ಬಳಿ ಇದ್ದು ಬಂದವರನ್ನೆಲ್ಲ ಸ್ವಾಗತಿಸುತ್ತಿದ್ದರು. ನಮಗಾಗಿ ಕಾದಿರಿಸಿದ ರೂಮ್‍ಗೆ ಹೋಗಿ ಫ್ರೆಶ್ ಆಗಿ ಬಂದು ಊಟದ ಹಾಲ್‍ನಲ್ಲಿ ಡಿನ್ನರ್ ಮುಗಿಸಿದೆವು. ಚೆನ್ನಾಗಿ ನಿದ್ದೆಯೂ ಬಂತು. ಮಾರನೆಯ ದಿನ ಇನ್ನೇನು ಹಾಲ್‍ಗೆ ಹೋಗಿ ಉಪಹಾರ ಸೇವಿಸಿ ಬರೋಣ ಎನ್ನುವಷ್ಟರಲ್ಲಿ ಅಮ್ಮನ ಮೊಬೈಲ್‍ಗೆ ಪಪ್ಪನ ಫೋನ್. “ನಿಮ್ಮ ಫಂಕ್ಷನ್ ಇವತ್ತು ನಡೆಯುತ್ತದೋ ಇಲ್ಲವೋ? ಅಷ್ಟು ದೂರ ಹೋಗಿದ್ದೀರಿ, ಏನು ಕಥೆಯೋ ನಾಕಾಣೆ...ನಿಮಗೇನೂ ಸುದ್ದಿ ಸಿಗಲಿಲ್ವಾ? ತಾಯಿ-ಮಗಳಿಬ್ಬರೂ ನ್ಯೂಸ್ ನೋಡುವ ಪರಿಪಾಟವನ್ನೇ ಬೆಳೆಸಿಕೊಂಡಿಲ್ಲ. ಇಲ್ಲಿ ಟಿ.ವಿಯಲ್ಲಿ ಪ್ರಮುಖ ಸಮಾಚಾರವೇ ಅಲ್ಲಿಯದು. ಸಿ.ಎಂ ಮತ್ತು ಅವರ ಸೋದರ ಮಾವನ ಮಧ್ಯದ ಜಗಳ ಈಗ ಬೀದಿಗೆ ಬಂದಿದೆ... ಇವತ್ತಿನ ಕಾರ್ಯಕ್ರಮದ ಕುರಿತಾಗಿ ಯಾರನ್ನಾದರೂ ಕೇಳಿ ತಿಳಿಸು.” “ನಮಗಂತೂ ಅಂತಹ ಯಾವ ಮಾಹಿತಿಯೂ ಇಲ್ಲ. ನಾವಿಬ್ಬರೂ ಬೇಗ ರೆಡಿಯಾಗಿ ತಿಂಡಿ ತಿನ್ನಲು ಹೋಗ್ತೇವೆ. ಅಲ್ಲಿ ಬೇರೆಯವರೆಲ್ಲ ಏನು ಹೇಳ್ತಾರೆ ಅಂತ ನೋಡ್ತೇವೆ.” ಎಂದು ಅಮ್ಮ ಪಪ್ಪನಿಗೆ ಹೇಳಿದಳು.
ಡೈನಿಂಗ್ ಹಾಲ್‍ನಲ್ಲೇ ಭರ್ಜರಿ ಬ್ರೇಕ್ಫಾಸ್ಟ್ ನಮಗಾಗಿಯೇ ಕಾಯುತ್ತಿತ್ತು. ಬೇರೆ-ಬೇರೆ ರಾಜ್ಯಗಳಿಂದ ಬಂದ ಅತಿಥಿಗಳೆಲ್ಲ ಅಲ್ಲಿ ಸೇರಿದ್ದರು. ಎಲ್ಲರೂ ಅವರಷ್ಟಕ್ಕೆ ಉಪಹಾರ ಸೇವಿಸುತ್ತಿದ್ದರು. ಕಾರ್ಯಕ್ರಮ ರದ್ದಾಗಿರಬಹುದಾದ ಸೂಚನೆ ಎಲ್ಲಿಯೂ ಸಿಕ್ಕಿಲ್ಲ. “ಡಿಂಪಿ, ನಾವು ರೆಡಿಯಾಗಿ ರೂಮ್ ಲಾಕ್ ಮಾಡಿ ರಿಸೆಪ್ಶನ್ ಕೌಂಟರ್‍ಗೆ ಹೋಗೋಣ. ಅಲ್ಲಿ ಶ್ರೀವಾಸ್ತವರು ಬಂದಿರಬಹುದು. ಆದಷ್ಟು ಬೇಗ ವಿಷಯ ತಿಳಿದುಕೊಂಡು ನಿನ್ನ ಪಪ್ಪನಿಗೆ ಫೋನ್ ಮಾಡಬೇಕು.” ನಾವು ಕೆಳಗಿಳಿದು ಲಿಫ್ಟಿಂದ ಹೊರಗಡೆ ಕಾಲಿಟ್ಟಿದ್ದೇವಷ್ಟೆ ನಿನ್ನೆ ಪರಿಚಿತನಾದ ವೇಟರ್ ಗೋಪಿ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುವವರಂತೆ ಕೇಳಲಾರಂಭಿಸಿದ, “ಮೇಡಂ, ನೀವೇನು ಇಷ್ಟು ತಡ ಮಾಡಿದಿರಿ. ಹಿಂದಿ ಸಂಸ್ಥಾನಕ್ಕೆ ಹೋಗುವ ಕೊನೆಯ ಟ್ರಿಪ್‍ನ ಮಿನಿಬಸ್ ಓ ಅಲ್ಲಿ ಸೈಡ್ ಎಂಟ್ರೆನ್ಸ್‍ನಲ್ಲಿದೆ.” ತನ್ನ ತೋರುಬೆರಳನ್ನು ಇನ್ನಷ್ಟು ಉದ್ದ ಮಾಡುವವನಂತೆ ತೋರಿಸಿ ಮುಗುಳುನಕ್ಕ. ಅವನ ತೊದಲು ನುಡಿಯ ಹಿಂದಿ ಇತರೇ ವೇಟರ್‍ಗಳಿಗಿಂತ ಭಿನ್ನವಾಗಿತ್ತಾದರೂ ಆತ್ಮೀಯತೆಯಲ್ಲಿ ಅವನನ್ನು ಮೀರಿಸುವವರೇ ಇಲ್ಲವೇನೋ ಎಂದು ಅನ್ನಿಸುತ್ತಿತ್ತು.
ತುಂತುರು ಮಳೆ ಆಗಲೇ ಆರಂಭವಾಗಿಬಿಟ್ಟಿತ್ತು. ಈ ಸೆಪ್ಟೆಂಬರ್‍ನಲ್ಲಿ ಇದೆಂಥ ಮಳೆ. ಬರೀ ಕಿರಿಕಿರಿ. ಅಮ್ಮ ತನ್ನಷ್ಟಕ್ಕೇ ಗೊಣಗುತ್ತಿದ್ದಳು. “ಅಮ್ಮಾ, ಈ ಕೊಳಚೆ ನೀರು ನಮ್ಮ ಮೈಸೂರು ಸಿಲ್ಕ್ ಸೀರೆಯನ್ನು ಪೂರ್ತಿ ಲಗಾಡಿ ತೆಗೆಯುತ್ತದೆ.” ನನ್ನ ಪ್ರ್ಯಾಕ್ಟಿಕಲ್ ಕಿರಿಕಿರಿಗೆ ಅಮ್ಮ ಸಮಾಧಾನದಿಂದಲೇ ಹೇಳಿದಳು, “ಸೀರೆಯನ್ನು ಸ್ವಲ್ಪ ಎತ್ತಿಕೊಂಡು ಮುಂದಕ್ಕೆ ಹೋಗು. ಇದು ಕೊಳಚೆ ನೀರು ಇರಲಿಕ್ಕಿಲ್ಲ. ಇಲ್ಲಿಯ ಮಣ್ಣೇ ಕಪ್ಪು. ಆಫ್ ಸೀಜನ್ ಮಳೆ ಇಲ್ಲಿ ಕಾಮನ್ ಅಂತ ಬರುವಾಗ ನಿನ್ನ ಪಪ್ಪ ಹೇಳಿದ್ದರಲ್ವಾ.”
“ಪಪ್ಪಾ, ನೀನು ಹೇಳಿದ್ದು ನೂರಕ್ಕೆ ನೂರರಷ್ಟು ಸರಿಯಾಗಿದೆ. ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬರಲೇ ಇಲ್ಲ. ಆರೋಗ್ಯ ಮಂತ್ರಿ ಡಾ. ಮಿಶ್ರಾ ಅಮ್ಮನಿಗೆ ಸನ್ಮಾನ ಮಾಡಿದ್ದು. ಅವರ ಭಾಷೆ, ವಿಷಯ ನಿರೂಪಣೆ ಎರಡೂ ‘ವಾಹ್! ಲಾಜವಾಬ್!’. ಆದರೆ ರಾಜಕೀಯದಲ್ಲಾದ ಬಿಕ್ಕಟ್ಟಿನ ಕುರಿತಾಗಿ ಯಾರೂ ಚಕಾರ ಎತ್ತಲಿಲ್ಲ. ಕಾರ್ಯಕ್ರಮ ಸೂಪರ್ ಆಗಿತ್ತು ಪಪ್ಪಾ.” ಹೊಟೇಲ್‍ಗೆ ಹಿಂದಿರುಗಿದ ಕೂಡಲೇ ಪಪ್ಪನಿಗೆ ಫೋನ್ ಮಾಡಿದೆ. ಕಾರ್ಯಕ್ರಮ ಇದೆ ಎಂಬುದರ ಸೂಚನೆ ಮುಂಜಾನೆಯೇ ಕೊಟ್ಟಿದ್ದೆ. “ಮತ್ತೆ ಮಧ್ಯಾಹ್ನದ ಪ್ಲಾನ್ ಏನು? ಎಲ್ಲಿಗೆ ತಿರುಗಲಿಕ್ಕೆ ಹೋಗ್ತೀರಾ?...” ಪಪ್ಪನ ಪ್ರಶ್ನೆಗೆ “ನೋಡಬೇಕು” ಎಂದಷ್ಟೇ ಹೇಳಿದೆ.
ಊಟ ಮುಗಿಸುವಾಗ ಮೂರು ಗಂಟೆಯಾಗುವುದರಲ್ಲಿತ್ತು. ಹತ್ತಿರದ ಊರವರೆಲ್ಲ ಮನೆಗೆ ಹೊರಡುವ ಸಿದ್ಧತೆ ನಡೆಸಿದ್ದರು. ಕಾಶಿಯ ಓರ್ವ ಪಂಡಿತೋತ್ತಮರಂತೂ ಬೀಡಾ ಬಾಯಿಗೆ ತುರುಕುತ್ತ “ಇಲ್ಲೇನಿದೆ ನೋಡುವುದಕ್ಕೆ, ಮಸೀದಿಗಳನ್ನು ಬಿಟ್ಟರೆ!” ಎಂದು ಬನಾರಸಿಯಲ್ಲಿ ಹೇಳಿ ಬಾಯಿ ಮುಚ್ಚಿಕೊಂಡೇ ಹೂಂ..ಹೂಂ..ಎಂದು ನಕ್ಕು ಉತ್ತರಕ್ಕೂ ಕಾಯದೆ ಹೊರಟೇಬಿಟ್ಟರು. ‘ನಾನೇ ನಿಮಗೆ ಸಂಪೂರ್ಣ ಲಖನೌ ಸುತ್ತಾಡಿಸುತ್ತೇನೆ’ ಎಂದು ಹೇಳಿದ ಡ್ರೈವರ್ ಮೋಜಿಝ್‍ನ ನೆನಪಾಗಿ ಅಮ್ಮ ಮೊಬೈಲ್‍ನಲ್ಲಿ ಸೇವ್ ಮಾಡಿಕೊಂಡಿದ್ದ ಅವನ ನಂಬರ್‍ಗೆ ಕರೆ ಮಾಡಿದಳು. “ಇನ್ನರ್ಧ ಗಂಟೆಯಲ್ಲಿ ಅಲ್ಲಿರುತ್ತೇನೆ ಮೇಡಂ” ಎಂದು ಹೇಳಿದ ಆಸಾಮಿ ಎರಡು ತಾಸಾದರೂ ಪತ್ತೆಯಿಲ್ಲ. ಮತ್ತೊಮ್ಮೆ ಕರೆಮಾಡಿ ಕೇಳಿದರೆ, “ನಾನು ನಿಮಗೆ ಆಗಲೇ ಹೇಳಿದ್ದೆನಲ್ಲಾ, ನನಗೆ ಒಬ್ಬರನ್ನು ಏರ್‍ಪೋರ್ಟ್‍ಗೆ ಬಿಡುವ ಕೆಲಸ ಕೊಟ್ಟಿದ್ದಾರೆ. ಹಾಗಾಗಿ ನನಗಿವತ್ತು ಬರಲಿಕ್ಕಾಗುವುದಿಲ್ಲ” ಅಂತ ಕಡ್ಡಿ ಮುರಿದಂತೆ ಹೇಳಿಬಿಟ್ಟ. ಇವನೆಷ್ಟು ಸುಳ್ಳು ಹೇಳುತ್ತಿದ್ದಾನೆ. ಹಾಗೆ ಹೇಳಿರಲೇ ಇಲ್ಲ. ಇನ್ನು ಅವನೊಂದಿಗೆ ಮಾತಾಡಿ ಪ್ರಯೋಜನವಿಲ್ಲವೆಂದು ಅಮ್ಮ ಆ ಕಡೆಯ ಆಸೆಯನ್ನೇ ಬಿಟ್ಟಳು. ಅಮ್ಮ-ಮಗಳು ಕೆಳಗೆ ಹೋಗಿ ಸ್ವಲ್ಪ ಹೊತ್ತು ರಿಸೆಪ್ಶನ್ ಕೌಂಟರ್ ಬಳಿ ಕುಳಿತುಕೊಂಡೆವು. ಅಲ್ಲಿಂದೆದ್ದು ರಿಸೆಪ್ಶನಿಸ್ಟ್‍ನ ಹತ್ತಿರ ಹೋಗಿ ಲಖನೌ ಸುತ್ತಾಡಿಸುವುದಕ್ಕೆ ಇಲ್ಲಿ ಏನಾದರೂ ವ್ಯವಸ್ಥೆ ಇದೆಯಾ ಎಂದು ಕೇಳಿದೆವು. ಅಲ್ಲಿಯೇ ನಿಂತಿದ್ದ ಗಂಡಸೊಬ್ಬ ತಾನು ಕಾರ್ ಡ್ರೈವರ್‍ನೆಂದು ಪರಿಚಯಿಸಿಕೊಂಡು, ನಿಮಗೆ ಎಲ್ಲೆಲ್ಲಿ ಸುತ್ತಾಡುವ ಪ್ಲ್ಯಾನ್ ಇದೆ ಎಂದು ನಮ್ಮಲ್ಲಿ ವಿಚಾರಿಸಿದ.
ತನ್ನ ನಂಬರ್ ಕೊಟ್ಟು, ಪಾಂಡೆ ಎಂದು ಸೇವ್ ಮಾಡಿಕೊಳ್ಳಿ ಎಂದ. ಮುಂದುವರಿದು, “ಮೇಡಂ, ಇದು ಈದ್ ಮಿಲಾದ್‍ನ ಸಮಯ. ಅದರಲ್ಲೂ ನೀವಿಬ್ಬರೇ ಹೆಂಗಸರು. ಬಡಾ ಇಮಾಮ್‍ಬಾಡಾದಲ್ಲಿ ಬರೀ ಕತ್ತಲು. ಯಾರಾದರೂ ಮೈಮೇಲಿನ ಬಂಗಾರ ದೋಚಿಕೊಂಡರೂ ಗೊತ್ತಾಗದು...ಹೇಗೂ ನೀವು ಲಖನೌ ವರೆಗೆ ಬಂದಿದ್ದೀರಿ. ಅಯೋಧ್ಯೆಗೋ, ನೈಮಿಷಾರಣಕ್ಕೋ ಹೋಗಬಹುದಲ್ವಾ?” ಅಲ್ಲಿದ್ದವರೂ ಹೌದೆನ್ನುವಂತೆ ತಲೆಯಾಡಿಸಿದರು. ನಮ್ಮ ಮೌನವನ್ನು ಕಂಡ ಪಾಂಡೆ ಹೇಳಿದ, “ಅಯೋಧ್ಯೆ ಇಲ್ಲಿಂದ 135 ಕಿ.ಮೀ. ನೈಮಿಷಾರಣ ಕೇವಲ 72 ಕಿ.ಮೀ. ನಾಳೆ ನೀವು ಯಾವುದಾದರೊಂದನ್ನು ನೋಡಬಹುದು, ಎರಡನ್ನೂ ನೋಡುವುದು ಅಸಾಧ್ಯ. ಕಾರಣ, ಇವೆರಡೂ ವಿರುದ್ಧ ದಿಕ್ಕಿನಲ್ಲಿವೆ. ಈಗ ಸಂಜೆಯಾಯ್ತು. ನೀವೇನಾದರೂ ಶಾಪಿಂಗ್ ಮಾಡ್ತೀರಾ?...” “ಇಲ್ಲಿ ಚಿಕನ್ ಮಟೀರಿಯಲ್ ಫೇಮಸ್ ಅಲ್ವಾ?” ನನ್ನ ಮಾತಿಗೆ ತಲೆಯಾಡಿಸುತ್ತ ಹೇಳಿದ, “ಹೌದು ನವಾಬರ ಕಾಲದಿಂದಲೇ ಈ ಕಲೆಗಾರಿಕೆ ನಡೆದುಕೊಂಡು ಬಂದಿದೆ. ಅದರಿಂದಾಗಿಯೇ ಇಲ್ಲಿ ಅದೆಷ್ಟೋ ಕುಟುಂಬ ಸ್ವಾವಲಂಬನೆಯಿಂದ ತುತ್ತು ಅನ್ನ ತಿನ್ನೋದು...ಹೇಗೂ ರೆಡಿಯಾಗಿದ್ದೀರಿ, ಹೊರಡಿ ನಾನು ಈಗಲೇ ಕರೆದುಕೊಂಡು ಹೋಗ್ತೇನೆ.” ಸರಕಾರಿ ಕಾರಲ್ಲೇ ಚಿಕನ್ ಮಟೀರಿಯಲ್ ಮಾರಾಟ ಮಾಡುವ ಒಂದೆರಡು ಗಲ್ಲಿಗಳನ್ನು ಸುತ್ತಿಸಿ “ನಿಮಗೆ ಯಾವ ಅಂಗಡಿಗೆ ಕರೆದುಕೊಂಡು ಹೋಗಲಿ?” ಎಂದು ಕೇಳಿದ. ಆತನ ಈ ಪ್ರಶ್ನೆಗೆ ಅಮ್ಮ ಹೇಳಿದಳು, “ನೀವು ಇಲ್ಲಿಯವರು. ನಿಮಗೆ ಗೊತ್ತಿರುವ ಯಾವುದಾದರೊಂದು ಒಳ್ಳೆಯ ಅಂಗಡಿಗೆ ಕರೆದುಕೊಂಡು ಹೋಗಿ.” ಅಮ್ಮನ ಈ ಮಾತುಗಳೇ ನಾವು ಮಾಡಿದ ಮೊದಲ ಎಡವಟ್ಟು!
ಒಂದು ವೈಭವೋಪೇತ ಜವಳಿ ಅಂಗಡಿಯೆದುರು ಆತ ಕಾರು ನಿಲ್ಲಿಸಿದ. ನಮ್ಮ ಜೊತೆಯಲ್ಲೇ ಒಳಗೆ ಬಂದು, ಗಲ್ಲಾಪೆಟ್ಟಿಗೆಯ ಮೇಲೆ ಕುಳಿತ ಮಾಲಿಕನಿಗೊಂದು ಸಲಾಂ ಹೊಡೆದು, “ಇವರು ನಮ್ಮ ಜನ. ಒಳ್ಳೆಯ ವಸ್ತ್ರಗಳನ್ನು ತೋರಿಸಿ” ಎಂದವನು “ಮೇಡಂ, ನೀವು ನಿಧಾನವಾಗಿ ಶಾಪಿಂಗ್ ಮಾಡಿ ನಾನು ಕಾರಲ್ಲಿರುತ್ತೇನೆ” ಎಂದು ಹೇಳಿ, ಮತ್ತೊಮ್ಮೆ ಮಾಲಿಕನಿಗೆ ಶಿರಬಾಗಿ ವಂದಿಸಿ ಹೊರನಡೆದ.
“ಅಯ್ಯೋ ಈ ಬಟ್ಟೆಗಳೆಲ್ಲ ಎಷ್ಟೊಂದು ದುಬಾರಿ” ಅಮ್ಮ ನನ್ನ ಹತ್ತಿರ ನಮ್ಮ ಭಾಷೆಯಲ್ಲಿ ಹೇಳಿದ್ದರ ಮರ್ಮವನ್ನು ಅರ್ಥ ಮಾಡಿಕೊಂಡ ಅಂಗಡಿಯವ ವಿವರಣೆ ಕೊಡಲಾರಂಭಿಸಿದ, “ನಮ್ಮಲ್ಲಿ ಸಿಗುವಂತಹ ಎಂಬ್ರಾಯ್ಡರಿ ನಮೂನೆಗಳು ಇಡೀ ಲಖನೌನಲ್ಲಿ ನಿಮಗೆಲ್ಲಿಯೂ ಸಿಗೋದಿಲ್ಲ ಮೇಡಂ. ಈ ಕಲರ್ ನೋಡಿ... ಈ ಡಿಝಾಯಿನ್ ನೋಡಿ...” ಹೊಕ್ಕಿದ್ದಕ್ಕೆ ಎರಡು ಸೀರೆ ಮತ್ತೊಂದು ಡ್ರೆಸ್ ಮಟೀರಿಯಲ್ ತೆಗೆದುಕೊಂಡು ಹೊರಬಂದೆವು.
ಕಾರಲ್ಲಿ ಕುಳಿತೊಡನೆ ಪಾಂಡೆ ಕೇಳಿದ, “ಶಾಪಿಂಗ್ ಹೇಗಾಯ್ತು? ಬೇಕಾದ್ದೆಲ್ಲ ಸಿಕ್ಕಿತಾ? ಇನ್ನೂ ಯಾವುದಾದರೂ ಅಗ್ಗದ ಬಟ್ಟೆ ಅಂಗಡಿಗೆ ಹೋಗೋಣವಾ?” ಅಮ್ಮ-ಮಗಳಿಬ್ಬರೂ ಮುಖ-ಮುಖ ನೋಡಿಕೊಂಡೆವು. “ಬೇಡ, ಮತ್ಯಾವ ಅಂಗಡಿಗೂ ಬೇಡ. ಲಗ್ಗೆಜು ಜಾಸ್ತಿಯಾಗಿಬಿಡ್ತದೆ.” ಎಂದಷ್ಟೇ ಅಮ್ಮ ಹೇಳಿದಳು. ‘ಓಹೋ! ಹಾಗಾದರೆ ತಾನು ಕರೆದುಕೊಂಡು ಹೋದದ್ದು ದುಬಾರಿ ಅಂಗಡಿ ಎಂಬುದು, ಇವನಿಗೆ ಮೊದಲೇ ತಿಳಿದಿದೆ.’ ನಾನೇ ನನ್ನಂತರಾತ್ಮದ ಜೊತೆ ಮಾತಾಡಿಕೊಂಡೆ.
“ಮೇಡಂ, ಇನ್ನೇನು ಕತ್ತಲಾಗಿಬಿಡ್ತದೆ. ಇಲ್ಲೇ ಹತ್ತಿರದಲ್ಲಿ ಅಂಬೇಡ್ಕರ್ ಪಾರ್ಕ್ ಇದೆ. ನೀವು ಬೇಕಾದರೆ ಅಲ್ಲಿಗೆ ಹೋಗಬಹುದು. ಇಲ್ಲೊಂದು ರಿಕ್ಷಾ ಸ್ಟೈಂಡ್ ಇದೆಯಲ್ಲ. ಚೌಕಾಸಿ ಮಾಡದೇ ಹತ್ತಬೇಡಿ...” ಅಲ್ಲೇ ಕಾರು ನಿಲ್ಲಿಸಿ, ಒಬ್ಬ ರಿಕ್ಷಾ ಚಾಲಕನನ್ನು ಹಿಡಿದು ನಮ್ಮನ್ನು ಕುಳ್ಳಿರಿಸಿದ. ಅವನು ಕೇಳಿದ 150ನ್ನು 100ಕ್ಕೆ ಇಳಿಸಿ, ತನಗೆ ಅರ್ಜೆಂಟ್ ಕೆಲಸವಿದೆಯೆಂದು ಹೇಳಿ ಬಂದ ದಾರಿಯಲ್ಲೇ ಹಿಂದಿರುಗಿ ಅದೇ ಸೀರೆಅಂಗಡಿಯ ಹತ್ತಿರ ಹೋಗಿ ನಿಂತಿದ್ದನ್ನು ಕಂಡು, ಅಮ್ಮನಿಗೆ ಸನ್ನೆ ಮಾಡಿದೆ.
“ಡಿಂಪಿ, ನಾನಂತೂ ಅಂಬೇಡ್ಕರ್ ಪಾರ್ಕ್ ಅಂದರೆ ಕಾರಂಜಿಯಿರುವ ಹಸಿರುಹಾಸಿನ ಹೂದೋಟ ಅಂದಕೊಂಡಿದ್ದೆ. ಆದರೆ ಇಲ್ಲಿ ನೋಡಿದರೆ ಮಾಯಾವತಿಯ ಆನೆಗಳೇ ತುಂಬಿಕೊಂಡಿವೆ...” ಅಬ್ಬಬ್ಬಾ ಈ ಕಾಂಕ್ರೀಟ್ ಗಾರ್ಡನ್ ತುಂಬೆಲ್ಲ ಬೃಹದ್ ಆನೆಗಳ ಸಾಲುಗಳು, ಅಮೃತಶಿಲೆಯಿಂದ ನಿರ್ಮಿಸಿದ ಮೂರ್ತಿಗಳು. ಆ ಮೂರ್ತಿಗಳ ನಡುವೆ ನಾರಾಯಣ ಗುರುಗಳ ಪ್ರತಿಮೆಯನ್ನು ಕಂಡು ದಂಗಾಗಿಬಿಟ್ಟೆವು. ನೆನಪಿಗಾಗಿ ಆ ವಿಶಾಲಕಾಯ ಪ್ರತಿಮೆಯ ಕಾಲ್ಬುಡದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡೆವು. ಸುಮಾರು ಎರಡು ತಾಸು ತಿರುಗಿದ ಮೇಲೆ ಅಮ್ಮನ ಮಂಡಿನೋವು ಎಚ್ಚರಿಸಿತು. ಹಾಥೀಪಾರ್ಕ್‍ಗೆ ಗುಡ್ ಬೈ ಹೇಳಿ ಹೊಟೇಲ್ ತಲುಪಿದೆವು. ಈ ಬಾರಿಯೂ ರಿಕ್ಷಾವಾಲಾನ ಹತ್ತಿರ ಚರ್ಚೆಮಾಡಿ ವ್ಯವಹರಿಸುವುದನ್ನು ಮರೆಯಲಿಲ್ಲ.
“ಮೇಡಂ, ಇಮಾಮ್‍ಬಾಡಾ ನೋಡಿದಿರಾ? ಇಲ್ಲಿಯ ಭೂಲ್‍ಭುಲೈಯಾ ಭಾರೀ ಫೇಮಸ್. ಅಲ್ಲೆಲ್ಲಾ ಸುತ್ತಾಡಿ ಬಂದಿರಾ? ಹೊರದೇಶದವರೆಲ್ಲ ಬರ್ತಾರೆ.” ಆಟೋ ಡ್ರೈವರ್ ವಿಚಾರಿಸಿದ. “ಇಲ್ಲ, ನಾವಿಬ್ಬರೂ ಹೆಂಗಸರು. ಅದೂ ಅಲ್ಲದೆ ಇದು ಈದ್ ಟೈಮ್...” ಅಮ್ಮ ಏನೋ ಹೇಳುವವಳಿದ್ದಳು. ನಾನವಳ ಕೈಹಿಡಿದು ಜಗ್ಗಿದ್ದರಿಂದ ಸುಮ್ಮನಾದಳು. ಅವನು ವಾಚಾಳಿಯಿರಬೇಕು. ಹಾಗಾಗಿ ಮಾತು ಮುಂದುವರಿಸುತ್ತ ಹೇಳಿದ, “ಇಲ್ಲಿಯ ಸ್ವೀಟ್ಸ್ ಅಂದರೆ ರೇವಡಿ. ಅದರಲ್ಲಿ ತುಂಬಾ ಬಗೆಯಿದೆ. ನೀವು ನಾನ್ ವೆಜಿಟೇರಿಯನ್ ಆಗಿದ್ದರೆ ಟುಂಡೇ ಕಬಾಬ್‍ನ ರುಚಿ ನೋಡದೇ ಹೋಗಬೇಡಿ...” ಇನ್ನೂ ಏನೇನು ಹೇಳುವವನಿದ್ದನೋ, ನಮ್ಮ ಹೊಟೇಲ್ ಬಂತು.
ಡಿನ್ನರ್‍ಗೆ ಹೋದರೆ ಅಲ್ಲಿ ಬೆರಳೆಣಿಕೆಯ ಜನರಷ್ಟೇ. ಬಂದವರೆಲ್ಲ ಹೊರಟುಹೋಗಿದ್ದರು. ಈದ್‍ನಿಂದಾಗಿ ಟಿಕೆಟೆಲ್ಲ ಬುಕ್ ಆಗಿರುವುದರಿಂದ ಮತ್ತೊಂದು ದಿನ ಅಲ್ಲಿಯೇ ಇರಬೇಕಾದ ಅನಿವಾರ್ಯತೆ ನಮ್ಮದಾಗಿತ್ತು. “ಅಮ್ಮಾ ಅಯೋಧ್ಯೆ ತುಂಬಾ ದೂರ. ಅಲ್ಲೇನಾದರೂ ಗಲಾಟೆಯಿದ್ದರೆ, ಹೋಗಿದ್ದೂ ವ್ಯರ್ಥ ಆಗಬಹುದು. ನೈಮಿಷಾರಣದಲ್ಲಿ ಏನಿದೆಯೋ ಗೊತ್ತಿಲ್ಲ. ಆದರೂ ನಾಳೆ ಇಡೀದಿನ ಹೊಟೇಲ್‍ನಲ್ಲಿ ಕುಳಿತುಕೊಂಡು ಮಾಡುವುದಾದರೂ ಏನು?” ಇಬ್ಬರೂ ಒಮ್ಮನಸ್ಸಿನಿಂದ ನೈಮಿಷಾರಣಕ್ಕೆ ಹೋಗುವುದೆಂದು ತೀರ್ಮಾನಿಸಿದೆವು.
ಬೆಳಿಗ್ಗೆ ಆರೂಮುಕ್ಕಾಲಿಗಾಗಲೇ ಪಾಂಡೆ ಫೋನ್ ಬಂತು. “ಮೇಡಂ, ಮುಕೇಶ್ ಅಂತ ನನ್ನ ಪರಿಚಿತ ನಿಮ್ಮನ್ನು ಪಿಕ್ ಮಾಡಲಿಕ್ಕೆ ಬರ್ತಾನೆ. ಟಿಫಿನ್ ಮುಗಿಸಿ ಎಂಟೂವರೆಗೆ ತಯಾರಾಗಿರಿ. ಪಾಂಡೆ ಹೇಳಿದ ಕಾರು ಬಾಡಿಗೆ ಕೊಂಚ ಜಾಸ್ತಿಯೇ ಆಗಿದ್ದರೂ ಮತ್ತೆ ಚರ್ಚೆಗೆ ಹೋಗಲಿಲ್ಲ. ವಿಷಯ ತಿಳಿಸಿದಾಗ ಪಪ್ಪ ಹೇಳಿದರು, “ಸೇಫ್ಟಿ ಮುಖ್ಯ. ಕಾರು ಹತ್ತುವ ಮುನ್ನ ಕಾರಿನ ನಂಬರ್‍ಪ್ಲೇಟ್‍ನ ಫೋಟೋ ತೆಗೆದು ನನಗೆ ವಾಟ್ಸಾಪ್ ಮಾಡು. ನಾನು ಇಲ್ಲಿಂದಲೇ ಅದರ ಲೊಕೇಶನ್ ಚೆಕ್ ಮಾಡುತ್ತಿರುತ್ತೇನೆ.”
ನಮಗೆ ಶುಭ ಪ್ರಯಾಣ ಹೇಳಲು ಪಾಂಡೆಯೂ ಬಂದಂತಿತ್ತು. ಡ್ರೈವರ್ ನಮ್ಮಿಂದ ಐನೂರು ರೂಪಾಯಿ ಎಡ್ವಾನ್ಸ್ ಪಡೆದ. ಬಹುಶಃ ಪೆಟ್ರೋಲ್ ಹಾಕಿಸುವುದಕ್ಕಿರಬಹುದೆಂದು ಅಮ್ಮ ಪರ್ಸ್‍ನಿಂದ ತೆಗೆದು ಡ್ರೈವರ್ ಕೈಗಿತ್ತಳು. ಅವನದನ್ನು ಹಾಗೆಯೇ ಎತ್ತಿ ತನ್ನ ಬಲಗಡೆ ನಿಂತಿದ್ದ ಪಾಂಡೆ ಕೈಗೆ ರವಾನಿಸಿದ. ಮುಕೇಶ್ ಮೃದುಭಾಷಿಯಾಗಿದ್ದರೂ ದಾರಿಯುದ್ದಕ್ಕೂ ಹಿಂದಿ ಸಾಹಿತ್ಯದ ಕುರಿತಾಗಲಿ, ಸಾಹಿತಿಗಳ ಕುರಿತಾಗಲಿ ಕೇಳಿದ್ದಕ್ಕೆಲ್ಲ ಉತ್ತರಿಸುತ್ತಿದ್ದ. ಅಷ್ಟೇ ಏನು, ರಾಜಕೀಯವನ್ನೂ ಬಲು ಆಸಕ್ತಿಯಿಂದ ಮಾತನಾಡುತ್ತಿದ್ದ. “ನೀವು ಭೋಪಾಲನವರು ಇರಬಹುದು ಎಂದುಕೊಂಡಿದ್ದೆ, ಅಲ್ಲಿಯವರು ವ್ಯಾಕರಣಬದ್ಧವಾಗಿ ಮಾತಾಡ್ತಾರೆ. ನಿಮ್ಮ ಮಾತುಗಳನ್ನು ಕೇಳಿದರೆ, ನೀವು ದಕ್ಷಿಣ ಭಾರತದವರೆಂದು ಅನ್ನಿಸುವುದೇ ಇಲ್ಲ.” ಎಂದು ಹೇಳಿ ಅಮ್ಮನನ್ನು ಅಟ್ಟಕ್ಕೇರಿಸಿದ. ಅಮ್ಮನೂ ಹಿಗ್ಗಿ ಹೀರೇಕಾಯಿಯಾದಳು.
ನೈಮಿಷಾರಣದ ಚಿಕ್ಕ-ಪುಟ್ಟ ದೇವಾಲಯಗಳನ್ನು ನೋಡಿ ಬಂದಮೇಲೆ ಕಡೆಯದಾಗಿ ದೊಡ್ಡ ಬಾವಿಯಂತಿದ್ದ ಚಕ್ರತೀರ್ಥ ಎಂಬುದನ್ನು ನೋಡಲು ಮನಸ್ಸಾಗದೆ ಕಾರಿನ ಕಿಟಕಿಯಿಂದಲೇ ಇಣುಕಿದೆವು. ಪ್ರವಾಸದ ಆಯಾಸದಿಂದಲೋ, ಹೊತ್ತಿಗೆ ಸರಿಯಾಗಿ ಹೊಟ್ಟೆಗೆ ಏನೂ ಬೀಳದೇ ಇದ್ದುದರಿಂದಲೋ ಅಥವಾ ನೋಡಿದ ಪ್ರದೇಶಗಳು ಖುಷಿ ಕೊಡದೇ ಇದ್ದುದರಿಂದಲೋ ತಲೆ ವಿಪರೀತ ಸಿಡಿಯಲಾರಂಭಿಸಿತ್ತು. ಹೋದ ದೇವಾಲಯಗಳಲ್ಲೆಲ್ಲಾ ಭಕ್ತಿಗಿಂತ ಭಯದ ವಾತಾವರಣದ ಕೈಯೇ ಮೇಲಾಗಿತ್ತು. ‘ಇಲ್ಲಿ ದುಡ್ಡು ಹಾಕಿ, ಅಲ್ಲಿ ದುಡ್ಡು ಇಡಿ’ ಎನ್ನುವ ಪಂಡಾಗಳದ್ದೇ ದರ್ಬಾರು. ಕೈಯಲ್ಲಿ ಕಾಣಿಕೆ ಇಡದೇ ಹೋದರೆ ದೇವರು ಶಾಪ ಕೊಡುತ್ತಾನೆ, ಎಂದು ಅವರು ಸಾರಾಸಗಟಾಗಿ ಹೇಳುತ್ತಿದ್ದರು. ಭಕ್ತಿಯನ್ನು ಹೊರಹಾಕಲಾರದಂತಹ ಪುಣ್ಯಕ್ಷೇತ್ರಗಳಿವು. ಇಂಥದ್ದರಲ್ಲಿ ತಲೆ ಸಿಡಿಯದೇ ಇನ್ನೇನಾದೀತು! ಇದು ನಮ್ಮ ಅನುಭವವಾದರೆ, ಮುಕೇಶ್‍ನ ಅನುಭವ ಇನ್ನೊಂದು ರೀತಿಯದಾಗಿತ್ತು. “ಹಬ್ಬ-ಹರಿದಿನಗಳಲ್ಲಿ ಇಂಥಲ್ಲಿಗೆ ಬಾಡಿಗೆ ಸಿಕ್ಕರಂತೂ ಮುಗಿದೇ ಹೋಯಿತು, ಅದೇನೋ ಹೇಳ್ತಾರಲ್ವಾ, ಸಂಕ ಮುರಿದಾಗಲೇ ಸ್ನಾನ ಮಾಡಿಕೊಂಡು ಬಿಡಬೇಕು ಎಂಬಂತೆ ನಮ್ಮಮ್ಮ, ನಮ್ಮ ಲೆಕ್ಕದ ಪೂಜೆಯನ್ನೂ ಮಾಡಿಸಿಕೊಂಡು ಬಂದುಬಿಡು, ಎಂದು ಹೇಳಿಬಿಡೋಳು. ಆಗೆಲ್ಲ ಇಲ್ಲಿ ಕಿಲೋಮೀಟರ್‍ಗಳಷ್ಟು ಉದ್ದದ ಸಾಲು. ಬಾಡಿಗೆಯಲ್ಲಿದ್ದಾಗ ನಾನು ಹಾಗೆ ಮಾಡುವುದು ಸಾಧ್ಯವಾ? ಬೇರೆ ದಿನ ಕೂಡ ದೇವರು ಅಲ್ಲೇ ಇರೋದಲ್ವಾ?” ಅವನ ವಾದವೂ ಸರಿಯಾದದ್ದೆ! ಒಂದು ಕಡೆಯಂತೂ ರೋಡ್ ಬ್ಲಾಕ್‍ಆಗಿ ಹೊರಬೀಳುವುದೇ ಕಷ್ಟವಾಯ್ತು. ಅದಕ್ಕೆ ತನ್ನಷ್ಟಕ್ಕೆ ಎಂಬಂತೆ ಅವನು ಹೇಳಿದ, “ಮೊದಲೆಲ್ಲ ಈ ಜನ ‘ಜೋರಸೇ ಬೋಲೋ ಜೈಮಾತಾದೀ’ ಎಂದು ಬೊಬ್ಬೆ ಹಾಕುತ್ತ ರೋಡ್ ಬ್ಲಾಕ್ ಮಾಡ್ತಿದ್ದರು. ಈಗಿಲ್ಲಿ ಗಣೇಶಜೀ ಹವಾ ನಡೀತಾ ಇದೆ. ನಾಳೆ ಗಣೇಶ ವಿಸರ್ಜನೆಯಿದೆ. ಇವತ್ತೇ ರಸ್ತೆಯನ್ನು ಭಕ್ತಾದಿಗಳು ತಮ್ಮ ವಶಕ್ಕೆ ತೆಗೆದುಕೊಂಡಾಗಿದೆ.” ಇಲ್ಲಂತೂ ಮುಕೇಶ್ ಒಬ್ಬ ಸಾಹಿತಿಯಾಗಿ, ತತ್ತ್ವಜ್ಞಾನಿಯಾಗಿ ಕಂಡ.
ಹಿಂದಿರುಗಿ ಬರುವಾಗ ಬಲಗಡೆ ದೂರದಲ್ಲೊಂದು ಸುಂದರ ಕಲಾಮಯ ಕಟ್ಟಡ ಕಾಣಿಸಿತು. ಅವನೇ ಹೇಳಿದ ಅದುವೇ ಭೂಲ್‍ಭುಲೈಯಾ ಇರುವ ಬಡಾ ಇಮಾಮ್‍ಬಾಡಾ. “ಹೇಗೂ ದುಡ್ಡು ಜಾಸ್ತಿ ಹೇಳಿದ್ದಾನೆ, ಅಲ್ಲಿಗೆ ಕರೆದುಕೊಂಡು ಹೋಗಲು ಹೇಳಲಾ?” ಅಮ್ಮ ಪಿಸುಗುಟ್ಟಳು. ಆಗಲೇ ಮೂರು ಗಂಟೆಯಾಗುವುದರಲ್ಲಿತ್ತು. ಹಸಿವಿನಿಂದ ಹೊಟ್ಟೆ ತಿರುಚಿದಂತಾಗುತ್ತಿತ್ತು. ಇಡೀದಿನವನ್ನು ವ್ಯರ್ಥವಾಗಿ ಕಳೆದ ಅನುಭವ ಬಾಧಿಸುತ್ತಿತ್ತು. ಬೇಡವೆಂದಷ್ಟೇ ಹೇಳಿದೆ. ಇಲ್ಲದಿದ್ದರೂ ಹೋಗಲಿಕ್ಕಾಗುತ್ತಿರಲಿಲ್ಲ. ನಾನು ಉತ್ತರಿಸುವಷ್ಟರಲ್ಲಿ ಅದೆಷ್ಟೋ ದೂರ ಸಾಗಿ ಬಂದಿದ್ದೆವು. ಅಂತೂ ನಮ್ಮ ಹೊಟೇಲ್ ಬಂತು. ಉಳಿದ ಹಣ ಕೊಡುತ್ತ ಅಮ್ಮ ವ್ಯಂಗ್ಯಭರಿತವಾಗಿ ಅವನಿಗೆ ಹೇಳಿದಳು, “ನಿಮ್ಮ ಐನೂರು ರೂಪಾಯಿ ಆತ ಮೊದಲೇ ತೆಗೆದುಕೊಂಡು ಹೋದನಲ್ಲ?” “ನಿಮ್ಮಂಥವರಿಗೆ ಇಂಥವೆಲ್ಲ ಅರ್ಥವಾಗದೇ ಇರ್ತದಾ ಮೇಡಂ? ನೀವು ಜಗತ್ತನ್ನು ನೋಡಿದವರು.” ಆತ ಗಂಭೀರವಾಗಿಯೇ ಹೇಳಿ ಕೈಮುಗಿದು ಗಾಡಿ ಸ್ಟಾರ್ಟ್ ಮಾಡಿಕೊಂಡು ಹೋದ.
ಒಳಗೆ ಬರುತ್ತಿದ್ದಂತೆ ವೇಟರ್ ಗೋಪಿ ನಮ್ಮ ಹಸಿವಿನ ಅಗಾಧತೆಯನ್ನು ಅಳೆದು ಬೇಗ ಊಟದ ಹಾಲ್‍ಗೆ ಬರುವಂತೆ ಹೇಳಿದ. ಪಾಂಡೇ ಬಗ್ಗೆ, ನೈಮಿಷಾರಣದ ಬಗ್ಗೆ ಅಮ್ಮ ಆತನಿಗೆ ಸೂಕ್ಷ್ಮವಾಗಿ ಹೇಳಿದಳು. ಅದನ್ನು ಕೇಳಿ ಅವನು ಹೇಳಿದ, “ಏನು ಮೇಡಂ, ನೀವು ನಮಗೆ ಒಂದು ಮಾತು ಹೇಳುವುದಲ್ವಾ? ನೀವು ಕೊಟ್ಟ ಹಣದಲ್ಲಿ ಎರಡು ಬಾರಿ ಅಲ್ಲಿಗೆ ಹೋಗಿ ಬರಬಹುದಿತ್ತು. ಆ ಪಾಂಡೆ ಸರಕಾರಿ ಕೆಲಸದಲ್ಲೇನೋ ಇದ್ದಾನೆ, ಆದರೆ ಮಾಡುವುದು ಇಂಥದ್ದೇ ದಲ್ಲಾಳಿ ಕೆಲಸ.”
ರಾತ್ರಿ ಸರಿಯಾಗಿ ನಿದ್ದೆ ಹತ್ತಲಿಲ್ಲ. ಮಧ್ಯಾಹ್ನ ಹನ್ನೆರಡು ಗಂಟೆಗೆ ಫ್ಲೈಟ್. ಬೆಳಿಗ್ಗೆ ಎದ್ದು ಅವಸರವಸರವಾಗಿ ಇಮಾಮ್‍ಬಾಡಾ, ದಿಲ್‍ಖುಷ್ ಕೋಠಿ, ಬ್ರಿಟಿಷ್ ರೆಸಿಡೆನ್ಸಿಗೆ ಹೋಗಿ ಬರುವಷ್ಟು ಧೈರ್ಯ ಬರಲಿಲ್ಲ. ಪಪ್ಪ ಇದ್ದರೆ ಹೀಗಾಗುತ್ತಿರಲಿಲ್ಲ...ಇದರಿಂದಾಗಿ ನಾನು ಸಾಕಷ್ಟು ತಿಳಿದುಕೊಂಡೆ. ಅದಕ್ಕಿಂತ ಹೆಚ್ಚಾಗಿ ಇಲ್ಲಿಗೆ ಬಂದು ಸಾಕಷ್ಟು ಪಾಠವನ್ನೂ ಕಲಿತೆ. ಹೋಗಬೇಕಾಗಿರುವ ಪ್ರದೇಶಗಳ ಅಧ್ಯಯನ ಮಾಡಿಯೇ ಹೋಗಬೇಕು. ಹಾಗಾದರೆ ಮಾತ್ರ ಮುಂದಿನ ದಿನಗಳಲ್ಲಿ ಇಂಥ ತಪ್ಪುಗಳು ಮರುಕಳಿಸಲಿಕ್ಕಿಲ್ಲ... ಕಿಟಕಿಯಿಂದಾಚೆ ನೋಡುತ್ತ ನಿಟ್ಟುಸಿರುಬಿಟ್ಟೆ.
ನಮ್ಮ ದುರಾದೃಷ್ಟಕ್ಕೆ ನಮ್ಮನ್ನು ಏರ್‍ಪೋರ್ಟ್‍ಗೆ ಬಿಡಲು ಶ್ರೀವಾಸ್ತವರು ಪಾಂಡೆಯನ್ನೇ ಕಳಿಸಿದ್ದರು. ನಾವು ಕೆಳಗಿಳಿದು ಬರುವಷ್ಟರಲ್ಲಿ ಗೋಪಿ ಬಂದು ಅವನಿಗೆ ಸರಿಯಾಗಿ ಉಗಿದಿದ್ದ. ಆತ ನಮ್ಮೊಡನೆ ಏನೂ ಮಾತನಾಡದೆ ನಮ್ಮ ಬ್ಯಾಗುಗಳನ್ನು ಡಿಕ್ಕಿಯಲ್ಲಿಟ್ಟ. ಚೆಕ್‍ಔಟ್ ಮಾಡುವಾಗಂತೂ ಅದುವರೆಗೆ ಕಂಡರಿಯದ ವೇಟರ್‍ಗಳೆಲ್ಲ ಟಿಪ್ಸ್‍ಗಾಗಿ ತಾನು ಮುಂದೆ-ತಾನು ಮುಂದೆ ಎನ್ನುವಂತೆ ಮೈಮೇಲೆ ಬೀಳುತ್ತಿದ್ದರು.
ಏರ್‍ಪೋರ್ಟ್‍ನಲ್ಲಿ ನಮ್ಮೆಲ್ಲ ಲಗೇಜ್ ಕೆಳಗಿಳಿಸಿಕೊಂಡು ಅಮ್ಮ ಪಾಂಡೆಗೆ ಕೈಮುಗಿದು ಸಿಗೋಣ ಎಂದಷ್ಟೇ ಹೇಳಿದಳು. ನಾನೇನೂ ಮಾತಾಡಲಿಲ್ಲ, ಅಷ್ಟೇ ಏಕೆ, ಆತನ ಮುಖವನ್ನೂ ನೋಡಲಿಲ್ಲ. “ಅಮ್ಮಾ, ನೀನೇಕೆ ಅವನನ್ನು ಸುಮ್ಮನೆ ಬಿಟ್ಟೆ? ಸರಿಯಾಗಿ ಉಗಿದು ಬುದ್ಧಿ ಕಲಿಸಬೇಕಿತ್ತು” ಎಂದೆ. ಅಮ್ಮ ತಾಳ್ಮೆ ಕಳೆದುಕೊಳ್ಳದೆ, “ಡಿಂಪಿ, ಇದು ಅವನ ಊರು” ಎಂದಷ್ಟೇ ಹೇಳಿದಳು.
ನಮ್ಮ ದುರಾದೃಷ್ಟಕ್ಕೆ ದಿಲ್ಲಿಯಿಂದ ಲಖನೌಗೆ ಬರುತ್ತಿದ್ದ ಫ್ಲೈಟ್ ಭೀಕರ ಸುಂಟರಗಾಳಿಯಿಂದಾಗಿ ಕೆಳಗಿಳಿಯದೆ ಮತ್ತೆ ದಿಲ್ಲಿಗೆ ಹಿಂದಿರುಗಿತು. ನಾವು ಬೆಂಗಳೂರಿಗೆ ಹೋಗಬೇಕಾಗಿರುವವರು ಎಂದು ತಿಳಿದ ಶೀತಲ್ ತಿವಾರಿ ನಮ್ಮನ್ನು ಸಮಾಧಾನ ಪಡಿಸಿದಳು. ಮೂಲತಃ ಲಖನೌನವಳೇ ಆಗಿದ್ದ ಶೀತಲ್ ಮೈಸೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿ. ನಮ್ಮ ಕಥೆಯನ್ನು-ವ್ಯಥೆಯನ್ನು ಅವಳಿಗೆ ಹೇಳಿದೆ. ಸಮಾಧಾನ ಪಡಿಸುವಂತೆ ಅವಳೆಂದಳು, “ಛೆ! ಯಾಕೆ ಪಾಂಡೆಯಂಥವರನ್ನು ನಂಬಿದಿರಿ? ಗೂಗಲ್ ಹೆಲ್ಪ್ ತೆಗೆದುಕೊಳ್ಳಬೇಕಿತ್ತು. ಹಜರತ್‍ಗಂಜ್ ರೇಲ್ವೇಸ್ಟೇಶನ್ ಹತ್ತಿರ ಚೌಕಾಸಿ ಮಾಡಿದರೆ ಚೀಪ್ ಆಗಿ ಬಾಡಿಗೆ ಕಾರು ಸಿಗುತಿತ್ತು. ಧೈರ್ಯ ಇದ್ದರೆ ದರ್ಗಾಕ್ಕೂ ಹೋಗಬಹುದಿತ್ತು. ಬಡಾ ಇಮಾಮ್‍ಬಾಡಾಕ್ಕೆ ಹೋಗಿ ಭೂಲ್‍ಭುಲೈಯಾ ನೋಡಲೇಬೇಕಿತ್ತು. ಅಲ್ಲಿಗೆ ತುಂಬಾ ಜನರು ಬರ್ತಾರೆ. ಲಖನೌನಲ್ಲಿ ನೋಡುವುದಕ್ಕೆ ಎಷ್ಟೊಂದು ಪ್ರದೇಶಗಳಿದ್ದವು. ನಿಮ್ಮ ಹತ್ತಿರ ಸಮಯವೂ ಇತ್ತು. ಆದರೆ ಅದೇನೋ ಹೇಳ್ತಾರಲ್ವಾ, ಸುಂದರವಾದ ಹೂದೋಟಕ್ಕೆ ಹೋಗಿ ಏನು ನೋಡಿದೆ ಅಂತ ಕೇಳಿದರೆ, ಎಂಟ್ರೆನ್ಸ್‍ನಲ್ಲಿರುವ ಗೋಲಾಕಾರದ ವಾಕಿಂಗ್ ಟ್ರ್ಯಾಕ್‍ನಲ್ಲಿ ಒಂದು ರೌಂಡ್ ಹೋಗಿಬಂದೆ ಎಂಬಂತಾಯ್ತು ನಿಮ್ಮ ಕಥೆ. ನೀವು ಖರೀದಿಸಿದಂತಹ ಚಿಕನ್ ಬಟ್ಟೆಗಳು ಅಮೀನಾಬಾದ್ ಮಾರ್ಕೆಟ್‍ನಲ್ಲಿ ತುಂಬಾ ಚೀಪ್ ಆಗಿ ಸಿಗ್ತವೆ, ಆದರೆ ಅಲ್ಲಿ ನೀವು ಚೌಕಾಸಿ ಮಾಡಿದರೆ ಯಾರೂ ನಿಮ್ಮನ್ನು ಯಾಮಾರಿಸಲು ಸಾಧ್ಯವಾಗದು.” ಅಮ್ಮ-ಮಗಳಿಬ್ಬರೂ ಮುಖ-ಮುಖ ನೋಡಿಕೊಂಡೆವು.
ಆದರೆ ಆ ಕ್ಷಣ ನಮ್ಮ ಪಾಲಿಗೆ ಈ ಸಮಸ್ಯೆಗಿಂತಲೂ ಮುಖ್ಯವಾದದ್ದು ಮುಂದಿನ ಪ್ರಯಾಣದ್ದಾಗಿತ್ತು. ಅದರ ಬಗ್ಗೆ ಯೋಚನೆ ಮಾಡಿದರೆ, ಬಡಾ ಇಮಾಮ್‍ಬಾಡಾದಲ್ಲಿ ಭೂಲ್‍ಭುಲೈಯಾದ ಒಳ ಪ್ರವೇಶ ಮಾಡಿದರೆ ಹೊರಬರುವ ದಾರಿಯನ್ನು ನಾವು ಹೇಗಾದರೂ ಕಂಡುಕೊಳ್ಳುತ್ತಿದ್ದೆವೇನೋ, ಆದರೆ ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಮನೆ ಮುಟ್ಟುವುದೇ ಕಷ್ಟಕರವಾಗಿದೆ. ನನ್ನ ಮಾತು ಅಮ್ಮನಿಗೂ ಸರಿಯೆನಿಸಿತು. ಅವಳ ಮನಸ್ಸೂ ಗೊಂದಲಗಳ ಗೂಡಾಗಿತ್ತು.
ಅಷ್ಟರಲ್ಲಿ ಪಪ್ಪನ ಫೋನ್ ಬಂತು, “ಬೆಂಗಳೂರಿಂದ ನಿಮ್ಮ ಮುಂದಿನ ಪ್ರಯಾಣದ ವ್ಯವಸ್ಥೆಯನ್ನು ಮಾಡಿದ್ದೇನೆ. ಹೇಗೆ ಹೋಗುವುದು, ಎಲ್ಲಿಗೆ ಹೋಗುವುದು ಇತ್ಯಾದಿ ಮೆಸೆಜ್ ಮಾಡುತ್ತೇನೆ.” ಎಂದು ಪಪ್ಪ ಹೇಳಿದ್ದು ಕೇಳಿ ಹೋದ ಜೀವ ಹಿಂದಕ್ಕೆ ಬಂದ ಅನುಭವವಾಯ್ತು. ಸಂತಸದ ವಿಷಯ ತಿಳಿದು ಅಮ್ಮನೂ ನೆಮ್ಮದಿಯ ನಿಟ್ಟುಸಿರುಬಿಟ್ಟಳು.
- ಡಾ. ನಮ್ರತಾ ಬಿ.







