ಸ್ತ್ರೀ ಸಂವೇದನೆಯ, ಕೌಟುಂಬಿಕ ‘ನನ್ನಕ್ಕ ನಿಲೂಫರ್’

ಮುಂಬೈಯಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ಮಿತ್ರಾ ವೆಂಕಟರಾಜ ಕೌಟುಂಬಿಕ ಬದುಕಿನ ವಸ್ತುವನ್ನು ಹೊಂದಿರುವ ಕತೆಗಳನ್ನು ಮತ್ತು ಕಾದಂಬರಿಯನ್ನು ಬರೆದವರು.

ಅವರ ನಾಲ್ಕನೇ ಕಥಾ ಸಂಕಲನ ‘ನನ್ನಕ್ಕ ನಿಲೂಫರ್’ ನಲ್ಲಿ ೮ ಕಥೆಗಳು ಮತ್ತು ೮ ಕಿರು ಕಥೆಗಳಿವೆ. ಸೊಗಸಾದ ಪಾತ್ರ ಚಿತ್ರಣ ಮತ್ತು ಸುಲಲಿತವಾದ ಭಾಷೆ ಮಿತ್ರಾರವರ ಕಥೆಗಳ ಆಸ್ತಿ. ಹೆಚ್ಚಿನ ಕಥೆಗಳು ತೆರೆದುಕೊಳ್ಳುವುದು ಮುಂಬಯಿ ಮಣ್ಣಿನಲ್ಲಿ. ಈ ಸಂಕಲನದ ಕಥೆಗಳು ಸ್ತ್ರೀ ಸಂವೇದನೆಯವು. ಇಲ್ಲಿಯ ಕಥಾ ನಾಯಕಿಯರು ಸಹೃದಯವಂತರು ಮತ್ತು ಚಾರಿತ್ರ್ಯವಂತರು. ಬದುಕು ಒಡ್ಡುವ ಸವಾಲನ್ನು ಎದೆಗುಂದದೆ ಸ್ವೀಕರಿಸಿ, ಎದುರಿಸಿ ಒದ್ದಾಡಿ ಗುದ್ದಾಡಿ ಗೆದ್ದವರು. ಇಲ್ಲಿನ ಕಥೆಗಳು ನಮ್ಮ ಸಂಸೃತಿಯನ್ನು ಪ್ರತಿನಿಧಿಸುವ ಮಹಿಳೆಯ ದ್ರಡತೆ, ತಾಳ್ಮೆ ಮತ್ತು ಆಂತರಿಕ ಶಕ್ತಿಯ ಪರಿಚಯವನ್ನು ಗಾಢವಾಗಿ ನೀಡುವಲ್ಲಿ ಯಶಸ್ವಿಯಾಗುತ್ತದೆ. ಹೆಣ್ಣು ತನ್ನ ಅಸ್ತಿತ್ವಕ್ಕಾಗಿ ಪರಿ ಪರಿಯ ಹೋರಾಟ ನಡೆಸುದನ್ನು ಇಲ್ಲಿ ಕಾಣಬಹುದು.

‘ರೈಲು ಪಟ್ಟಿಯ ಗೆರೆಗಳು’ ಕಥೆಯ ನಾಯಕಿ ಲಲಿತಾಂಬೆ ಬದುಕಲ್ಲಿ ನೊಂದವಳು ಬೆಂದವಳು, ಸಂಸಾರದ ಅಲೆಗಳ ವಿರುದ್ಧ ಈಜಿ ಗೆದ್ದವಳು. ಗಂಡನ ದುಡಿಮೆ ಇಲ್ಲದೆ, ತಾನು ಸ್ವತಃ ಬದುಕನ್ನು ಕಟ್ಟಿ ಕೊಳ್ಳುವುದು ಗಂಡನನ್ನು ಬಿಡದೆ, ಮಗನನ್ನು ಸಾಕಿ ವಿದ್ಯಾವಂತನನ್ನಾಗಿ ಮಾಡಿಸುವುದು ಒಂದು ಸವಾಲು. ಮುಂಬೈಯ ದಹಿಸರ್ ನಲ್ಲಿ ಮನೆ ಮಾಡಿ, ಯಾರ ಹಂಗಿಗೂ ಬೀಳದೆ, ಸಮಾಜ ಸೇವೆಯಲ್ಲಿ ತೊಡಗಿಸುವ ಲಲಿತಾಂಬೆ ಓದುಗರಿಗೆ ಆಪ್ತಳಾಗುತ್ತಾಳೆ. ಲಲಿತಾಂಬೆಯ ಪಾತ್ರ ಚಿತ್ರಣ ಬಹಳ ಸುಂದರವಾಗಿ ಮೂಡಿ ಬಂದಿದೆ. ಗಂಡನ ದುರ್ಬಲತೆ ಯನ್ನು ಸ್ವೀಕರಿಸಿ ಬದುಕನ್ನು ಎದುರು ನೋಡುವುದು ಭಾರತಿಯ ಸ್ತ್ರೀ ಯ ಹೆಚ್ಚುಗಾರಿಕೆ. ಕತೆ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರತೋತರ ಕಾಲಮಾನಕ್ಕೆ ಸೇರುತ್ತದೆ. ಇಲ್ಲಿನ ಆಡು ಭಾಷೆ ಕಥೆಯ ಒಟ್ಟಂದಕ್ಕೆ ಪೂರಕವಾಗಿದೆ.

ಪಾತ್ರ ಚಿತ್ರಣದಲ್ಲಿ ಮಿತ್ರಾ ರವರು ಎತ್ತಿದ ಕೈ. ಸಂಕಲನದ ಶೀರ್ಷಿಕೆಯ ಕಥೆ ‘ನನ್ನಕ್ಕ ನಿಲುಫಾರ್’ ನ ನಿರೂಪಣೆ ಚುರುಕಾಗಿದೆ. ಕತೆ ಅನಾವರಣ ಗೊಳ್ಳುವುದು ಟರ್ಕಿ ಯಲ್ಲಿ. ಇದೊಂದು ಮುಸ್ಲಿಂ ಕುಟುಂಬದ ದುರಂತ ಕತೆ. ಓದುಗರಲ್ಲಿ ನೀಲೂಫಾರ್ ಸತ್ತ ಹಾಗೆ ಭ್ರಮೆ ಹುಟ್ಟಿಸಿದ ಕಥೆಗಾರ್ತಿ ಕೊನೆಯಲ್ಲಿ ಸತ್ಯವನ್ನು ಅನಾವರಣ ಗೊಳಿಸುತ್ತಾರೆ. ಪರ್ವಿನ್ ನಂತಹ ಹುಡುಗಿ ತಾನು ಮದುವೆಯಾಗದೆ ಕುಟುಂಬ ಹೊಣೆಗಾರಿಕೆಯನ್ನು ನಿಭಾಯಿಸಿದರೂ ಸಮಾಜದ ಕಣ್ಣಲ್ಲಿ ಗ್ರೇಟ್ ಆಗಿ ಕಾಣದೆ ಇರುವುದು ಇಲ್ಲಿನ ದುರಂತ. ಕುಟುಂಬಕ್ಕಾಗಿ ತ್ಯಾಗ ಮಾಡುವ ಪರ್ವಿನ್ ಓದುಗರ ಮುಂದೆ ದೂರದ ಬೆಟ್ಟ ದಂತೆ ಕಾಣುತ್ತಾಳೆ.

‘ಪ್ರೀತಿ ಡಾಟ್ ಕಾಮ್ ‘ ಕತೆ ನಯನ ಮತ್ತು ಸಮೀರನ ಪ್ರೇಮ, ತದ ನಂತರ ದಾಂಪತ್ಯ ಜೀವನದ ವಸ್ತುವನ್ನು ಹೊಂದಿದೆ. ಪ್ರೀತಿಗೆ ಒಂದು ಸೀಮೆ ಇದೆ. ಪ್ರೀತಿ ಅತಿಯಾದರೆ ಅದು ಸಾಮೀತ್ವ ಕ್ಕೆ ಕಾರಣ ವಾಗುತ್ತದೆ. ನಂತರದ ಹಂತ ಕ್ರೌರ್ಯ. ‘ಪ್ರೀತಿ ಡಾಟ್ ಕಾಮ್ ‘ ಕತೆಯಲ್ಲಿ ನಡೆದ್ದದೆ ಇದು. ಅತಿಯಾದ ಗಂಡನ ಪ್ರೀತಿಯು ಪತ್ನಿಯ ಉಸಿರನ್ನು ಅದುಮಿ ಬದುಕನ್ನು ಹಿಂಸಿಸ ಬಲ್ಲದು ಎನ್ನುದನ್ನು ಸ್ಪಷ್ಟವಾಗಿ ಮನದಟ್ಟು ಮಾಡಿಸುತ್ತದೆ ಈ ಕತೆ.

ಮುಂಬೈಯ ಗಿರಣಿ ಮುಷ್ಕರದ ದಿನಗಳಲ್ಲಿ, ಕಾರ್ಮಿಕರ ಕಷ್ಟಕರ ದಿನನಿತ್ಯ ಬದುಕಿನ ಒಂದು ಸುಂದರ ಚಿತ್ರಣ ‘ ಹೊಗೆಯ ಸುಳಿವಿಲ್ಲ’ ಕಥೆಯ ಕಥಾವಸ್ತು. ಕುಟುಂಬದ ಪರದಾಟ, ಅಸಹಾಯಕತೆ, ಜಗಳ, ಸಿಟ್ಟು, ಅಸಮಾಧಾನ, ಮಕ್ಕಳ ಶಿಕ್ಷಣದ ಹೊರೆ ಇವೆಲ್ಲದರ ಒಟ್ಟು ಅನುಭವವನ್ನು ಓದುಗರಿಗೆ ಕಥೆ ಗಾಢವಾಗಿ ನೀಡುತ್ತದೆ. ಕಥಾನಾಯಕಿ ಶಕ್ಕುವಿನ ಪಾತ್ರದ ಮೂಲಕ ಬದುಕಿನ ಅಭದ್ರ ಸ್ಥಿತಿಯನ್ನು ಕತೆಗಾರ್ತಿ ಸುಂದರವಾಗಿ ಚಿತ್ರಿಸಿದ್ದಾರೆ. ಕೊನೆಗೂ ಮಗಳಿಗೆ ಕೆಲಸ ಸಿಕ್ಕಿದ್ದು ಶಕ್ಕುವಿಗೆ ಸಮಾಧಾನ. ಸಿನಿಮಾ ನಾಟಕ ಚೌಪಾಟಿ ಎಂದು ಗೆಳತಿಯರೊಂದಿಗೆ ಕಾಲ ಕಳೆಯುತಿದ್ದ ಹುಡುಗಿ ಯಾವ ಸುಳಿವು ಕೊಡದೆ ಕೆಲಸ ದಕ್ಕಿಸಿಕೊಂಡದ್ದು ಶಕ್ಕುವಿನ ಪಾಲಿಗೆ ಅನಿರೀಕ್ಷಿತ ಬಿಡುಗಡೆ.

‘ಮಿನುಗೆಲೆ ಮಿನುಗೆಲೆ ನಕ್ಷತ್ರ’ ಸಂಕಲನದ ಅತ್ಯುತ್ತಮ ಕಥೆ. ಕಥಾನಾಯಕಿ ಪೆರಿನಾಜ್ ವಾಡಿಯಾ ಪಾತ್ರ ವನ್ನು ಬೆಳೆಸಿದ ರೀತಿ ಪ್ರಶಂಸನೀಯವಾದುದು. ಸುಂದರವಾದ ನಿರೂಪಣೆ. ತಂದೆ ತಾಯಿಯನ್ನು ಕಳಕೊಂಡ ಪೆರಿನಾಜ್ ಸಿರಿವಂತೆ ಯಾದರೂ ಗೊಂಬೆಗಳ ಮಧ್ಯೆ ಪರ್ಯಾಯ ಜಗತನ್ನು ರೂಪಿಸಿ ತನ್ನ ಒಂಟಿತನವನ್ನು ಮೀರುವುದು ಇಲ್ಲಿನ ಕಥಾವಸ್ತು. ಕತೆಯ ಸಸ್ಪೆನ್ಸ್ ಅನ್ನು ಅನಾವರಣ ಗೊಳಿಸಿದ ಪರಿ ಮೆಚ್ಚುವಂತದ್ದು.
‘ಎರಡನೇ ಅಂಕ’ ಕಥೆ ಕೊನೆಯಲ್ಲಿ ಸಸ್ಪೆನ್ಸ್ ಅನ್ನು ಮಾರ್ಮಿಕವಾಗಿ ಅನಾವರಣ ಗೊಳಿಸಿದೆ. ಪ್ರಮೋದಿನಿ ಸಮಾಜ ಜೀವಿ ಮತ್ತು ಎಲ್ಲವನ್ನು ಹಗುರವಾಗಿ ಕಾಣುವವಳು. ಗಂಡನನ್ನು ಮತ್ತು ಮನೆ ಮಕ್ಕಳನ್ನು ಸಲೀಸಾಗಿ ನಿರ್ವಹಣೆ ಮಾಡಿದ ಭ್ರಮೆಯಲ್ಲಿರುತಾಳೆ. ಆದರೆ ಗಂಡನ ಆಂತರಿಕ ದುಗುಡ ವನ್ನು, ತೃಷೆ ಯನ್ನು ಗುರುತಿಸಲು ಸೋಲುತ್ತಾಳೆ.

‘ಈದ್ ಕಾ ಚಾಂದ್’ ಕಥೆಯ ನಾಯಕ ಇಕ್ಬಾಲ್ ಬದುಕಲ್ಲಿ ವೈರಾಗ್ಯ ತಾಳಿದವನು, ಸಮಾಜ ಸೇವೆಯಲ್ಲಿ ಸಾರ್ತಕತೆ ಯನ್ನು ಕಂಡವನು. ಆದರೆ ಸಂಸಾರದ ಬೇಗುದಿಗೆ, ಸಂಘರ್ಷಕ್ಕೆ, ದಿನ ನಿತ್ಯದ ಬೇಡಿಕೆಗೆ ಇಕ್ಬಾಲ್ ‘ಈದ್ ಕಾ ಚಾಂದ್’. ಕತೆಗಾರ್ತಿ ತಂದೆ ಮಗಳ ವಾತ್ಸಲ್ಯವನ್ನು, ಮತ್ತು ಪಾತ್ರ ಪೋಷಣೆಯನ್ನು ಮನ ತುಡಿಯುವಂತೆ ಚಿತ್ರಿಸಿದ್ದಾರೆ.

ಮಿತ್ರಾರವರಿಗೆ ಕಥೆ ಕಟ್ಟುವ ಕುಶಲತೆ ಸಿದ್ದಿಸಿದೆ. ಭಾಷೆ ಚೆನ್ನಾಗಿದೆ. ಇಲ್ಲಿನ ಕಥೆ ಗಳಲ್ಲಿ ವಸ್ತು ವೈವಿದ್ಯತೆ ಇದೆ. ಕುಂದಾಪ್ರ ಕನ್ನಡದ ಸಿಂಚನವು ಇದೆ. ತಿಳಿ ಹಾಸ್ಯದ ಮಿಶ್ರಣ ಇದೆ. ನಿರೂಪಣೆಯಲ್ಲಿ ಲವಲವಿಕೆ ಇದೆ. ಮಿತ್ರಾರವರಿಂದ ಮನುಷ್ಯ ಸಂಬಂಧದ ಸಂಕೀರ್ಣತೆ ವಿಷಯಗಳ ಕಥೆಗಳು ಮುಂದೆ ಬರುವಂತಾಗಲಿ ಎನ್ನುವುದು ಆಶಯ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai