ಅಪ್ಪನೆಂಬ ಆಕಾಶ


ಅಪ್ಪನೆಂಬ ಆಕಾಶವಿದೆ ನೆತ್ತಿಯ ಮೇಲೆ,
ಹೊತ್ತು ಗೊತ್ತಿಲ್ಲದೆ ಸುರಿವ ಪ್ರೀತಿಧಾರೆಯ
ಬಾಳ ಬೊಗಸೆಯಲಿ ಹಿಡಿದು, ಕುಡಿದು
ಧನ್ಯತೆಯಲ್ಲಿ ಬಾಗಿದ್ದೇನೆ ನಾ ಕಾಮನಬಿಲ್ಲಂತೆ!

ಅಪ್ಪಾ, ನೀನೆ ಹಾರಲು ಕಲಿಸಿದ ಹಕ್ಕಿ ನಾನು,
ರೆಕ್ಕೆ ಬಿಚ್ಚಿದಾಗ ತೋರಿದ ದಿಕ್ಕು ನೀನೇ,
ಬಳ್ಳಿ ತರುಲತೆಯಂತೆ ಸುತ್ತಿಕೊಂಡ ನಿನ್ನ
ಬೆರಳು ಹಿಡಿದು ನಡೆದ ಚಿತ್ರ ಹೇಗೆ ಮರೆಯಲಪ್ಪ!

ಕೋಗಿಲ ಕಂಠದಲ್ಲಿ ನಿನ್ನ ಕರೆದಾಗ,
ಕಣ್ಣರಳಿ ತೊಡೆಯಲ್ಲಿ ಕುಳ್ಳಿರಿಸಿಕೊಂಡು,
ಹೇಳಿದ ರಾಜಕುಮಾರರ ಕತೆಗಳಪ್ಪಾ
ಅನುರಣಿಸುತ್ತಿವೆ ಕಿವಿಯಲ್ಲಿ ಇಂದಿಗೂ!

ನಿನ್ನ ಕ್ರೋಧದ ಗುಡುಗಿಗೆ ಇದಿರಾಗಿ,
ಬಂಡೆದ್ದು ಬಿರುಗಾಳಿಯಾಗಿದ್ದೆ,
ಮೊಂಡು ಸಾಧಿಸುತ್ತಲೇ ನಿನಗೆ ಸೋತು,
ಮಂಡೆಯೂರಿದ್ದು ಇನ್ನೂ ಕಣ್ಣ ಮುಂದಿದೆ!

ಹೃದಯ ದೇಗುಲದಲ್ಲಿ ಇಂದಿಗೂ
ನಿನ್ನ ನೆನಪೇ ನಂದಾದೀಪವು!
ಹೇಳುತ್ತೇನೆ ಇಂದಿಗೂ, ಎಂದೆಂದಿಗೂ
ನೀನಿಲ್ಲದ ಜಗದಲ್ಲಿ ನನಗೇನಿದೆ ಹೇಳಪ್ಪಾ!

ನಿನ್ನ ಮಮತೆಯಪರಂಪಾರವನು
ತುಂಬಿಕೊಂಡಿದ್ದೇನೆ ಕಣ್ಣು, ಎದೆ, ಬೊಗಸೆಯಲ್ಲೂ!
ನೀ ಕೊಟ್ಟ ಚಂದದಾ ಸೀರೆಗಾಗಿ,
ಕುಣಿಯುತ್ತೇನೆ ಮಣಿಯುತ್ತೇನೆ ಇಂದಿಗೂ!!

ನೆನಪು ಸಾಗರದಂತೆ ಭೋರ್ಗರೆದಾಗ,
ಹುಲ್ಲುಗರಿಯಾಗಿ ಕುಣಿವೆ, ಮಣಿವೆ,
ಕೊಟ್ಟು, ಕೊಟ್ಟು ನೀ ಬೆಟ್ಟವಾದೆ ಅಪ್ಪಾ!
ಪಡೆದು ಪುಟ್ಟ ಮಗಳಾಗಿಯೇ ಉಳಿದೆ!!

ಬಾಳಿಗೆ ಚೆಲುವ ಮೊಗೆದು ಕೊಟ್ಟೆ!
ನಿನ್ನದೇ ಬಿಂಬ ನನ್ನ ಕಂದನಲ್ಲಿ!
ನೋಡುತ್ತೇನೆ, ಹಾಡುತ್ತೇನೆ, ಉಡುತ್ತೇನಾದರೂ,
ತೀರಿಸಬಲ್ಲೆನೇ ಎಂದಾದರೂ ನಿನ್ನ ಋಣ!!


  • ಮಾಲತಿ ಪಟ್ಟಣಶೆಟ್ಟಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai