ಬೆಳಗಿನ ಏಳು ಗಂಟೆಯ ಎಳೆಬಿಸಿಲು ಭೂಮಿಯನ್ನು ಬೆಚ್ಚಗಾಗಿಸಿತ್ತು. ಬಲಗೈಯಲ್ಲಿ ಹಿಡಿದ ಉದ್ದನೆಯ ಪೊರಕೆಯನ್ನು ಎಡ ಕಂಕುಳಿನಲ್ಲಿ ಸಿಕ್ಕಿಸಿಕೊಂಡು ಕಣ್ಣು ಹಾಯುವವರೆಗೂ ನೋಡಿದೆ. ನಿತ್ಯವೂ ಪಟೇಲ ನಗರದ ಸರ್ಕಲ್ಲಿನಲ್ಲಿ ಜೊತೆಗೆ ಸೇರಿಕೊಳ್ಳುವ ರಮಣಿ, ಚುಟ್ಕಿ ಇಬ್ಬರನ್ನೂ ಕಾಣದೇ ಇಬ್ರೂ ನನ್ನ ಬಿಟ್ಟಗೊಟ್ಟ ಹ್ವಾದ್ರೇನು ಮತ್ತ…ಗೊಣಗಿಕೊಂಡು ಪುಟ್ಪಾತಿನ ಅಂಚಿಗೆ ಕಾಲು ಇಳಿಬಿಟ್ಟು ಕುಳಿತೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಹರಡಿದ್ದ ಕಸದತ್ತ ನೋಟ ಹರಿಸಿ ಇನ್ನ ಇವರಿಬ್ರೂ ಬಂದಹಂಗಿಲ್ಲ. ಎಂದುಕೊಂಡೆ. ಅಷ್ಟರಲ್ಲಿ ಹಿಂದಿನಿಂದ ಬಂದ ಚುಟ್ಕಿ ‘ಅಕ್ಕಾರ್ರೀ ಬಂದು ಭಾಳ ಹೊತ್ತಾತೇನು?’ ಎಂದು ಭುಜ ತಟ್ಟಿದಳು.
‘ಮಂದಿ ಅಡ್ಡಾಡೊ ಮೊದ್ಲೀಕ ಕಸಾ ಉಡುಗಿ ಮುಗಿಸಬೇಕು ಅನ್ನೋ ಖಬರಿರಂಗಿಲ್ಲ ನಿಮಗ’s.. ಅಂತಾ ಮೇಸ್ತ್ರೀ ಹನಮಂತಪ್ಪ ಮೊನ್ನೆಯರ ಮುಖದ ಮ್ಯಾಲ ಉಗುಳಿದ ಹಂಗ ಹೇಳ್ಯಾನ. . ಕೆಲಸಾ ಸರಿತ್ನಾಗಿ ಮುಗಿಸಲಾದ್ರ ಇದ್ರ ರೊಕ್ಕ ಕೊಡಾಕೂ ಕಾಡತಾನ.ನಮದೇನು ಖಾಯಂ ಕೆಲಸಲ್ಲ. ಅಂತಾದ್ರಾಗ ನೀವು ತಡಾ ಮಾಡತೀರವ್ವಾ, ಎಂದು ಆಕ್ಷೇಪಣೆಯ ದನಿಯಲ್ಲಿ ಹೇಳಿದೆ. ‘ರಮಣಿ ನೀ ಬಲಭಾಗದಾಗ ಕಸಾ ಉಡಗತೀಯೇನು? ನಾ ಎಡಕ್ಕ ಕಸಾ ಉಡಗತೀನಿ. ಚುಟ್ಕಿ ನೀ ಪುಟ್ಪಾತ ಮ್ಯಾಲಿನ ಕಸಾ ತಗಿ’ ಎಂದು ಕೆಲಸ ಹಂಚಿಕೆ ಮಾಡಿದೆ. ಅವರಲ್ಲಿ ಹಿರಿಯಳೂ, ಈ ಕೆಲಸಕ್ಕೆ ಮೊದಲು ಸೇರಿದವಳು ನಾನಾಗಿದ್ದರಿಂದ ಅವರಿಬ್ಬರೂ ನನ್ನ ಮಾತಿಗೆ ಪ್ರತಿಯಾಡದೇ ಕೆಲಸಕ್ಕೆ ತೊಡಗಿದರು. ಎಲ್ಲರೂ ಕೆಲಸದಲ್ಲಿ ಮಗ್ನರಾದೆವು. ಒಂಭತ್ತು ಗಂಟೆಗೆ ಕಸದ ಗಾಡಿ ಬರುವುದರೊಳಗೆ ನಾಲ್ಕೈದು ಫರ್ಲಾಂಗ್ ಉದ್ದನೆಯ ಬೀದಿಯನ್ನು ಗುಡಿಸಿ ಕಸವನ್ನು ಅಲ್ಲಲ್ಲಿ ಗುಂಪಿ ಮಾಡಿಡಬೇಕಿತ್ತು. ಗಾಡಿ ಬಂದಾಗ ಅದರಲ್ಲಿ ಎತ್ತಿ ಹಾಕುವ ಕೆಲಸವನ್ನೂ ಮಾಡಬೇಕಿತ್ತು.
ರಸ್ತೆಯ ಮಧ್ಯಭಾಗದಿಂದ ಅಂಚಿಗೆ ದೊಡ್ಡ ದೊಡ್ಡ ಕಸವನ್ನು ಮೇಲಿನಿಂದ ಎಳೆದು ಸೇರಿಸಿ ನಂತರ ಧೂಳನ್ನೂ ಗುಡಿಸಿ ತೆಗೆಯುತ್ತಾ ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದೆ . ರಸ್ತೆಯನ್ನಾದರೂ ಗುಡಿಸಬಹುದು ಮನಸ್ಸಿನಲ್ಲಿ ಕಸದಂತಹ ಹೊಲಸು ತುಂಬಿಕೊಂಡವರನ್ನು ಹೇಗೆ ಸ್ವಚ್ಛ ಮಾಡೋದು? ಪ್ರಶ್ನೆ ಮನಸ್ಸಿನಲ್ಲಿ ಸುಳಿದಾಡುತ್ತಿತ್ತು. ಮುಂಜಾನೆ ಮನೆಯಲ್ಲಿ ನಡೆದ ಮಾತುಕತೆಗಳು ಮನದಲ್ಲಿರಿದ ಮುಳ್ಳಿನಂತೆ ಘಾಸಿಗೊಳಿಸುತ್ತಲೇ ಇತ್ತು. ‘ರೋಡ್ ಮ್ಯಾಗಿನ ಕಸಾ ತಗಿಯಾಕ ಹೋಗೂ ಮುಂದ ಝಳಕಾ ಮಾಡ್ತಿದೀ, ಅಗದೀ ಆಫೀಸರ್ ಗತಿ ಸೀರಿ ಉಟ್ಟ ಕೂದಲಾ ಬಾಚಕ್ಯಾರ ಹೂವಾ ಬೇರೇ ಮುಡಿತಿದಿ. . ಯಾರನ್ನ ಮೆಚ್ಚಿಸಾಕ ಹೋಗತೀದಿ’ ಎಂದು ವ್ಯಂಗ್ಯವಾಗಿ ಗಂಡ ಹಾಸಿಗೆಯ ಮೇಲೆ ಬಿದ್ದುಕೊಂಡೇ ಕೇಳಿದ. ಮೈಗೆಲ್ಲಾ ಉರಿ ಹತ್ತಿದಂತಾಗಿತ್ತು, ಆದರೂ ಪ್ರತಿಯಾಡಲಿಲ್ಲ. ಅವನ ಪಕ್ಕದಲ್ಲಿ ಹಾಸಿಗೆ ಮೇಲೆ ಕಣ್ಣುಜ್ಜಿಕೊಳ್ಳುತ್ತಾ ಕುಳಿತ ಮಗಳನ್ನು ನೋಡಿ ‘ಬಿಸಿ ನೀರು ಕಾಸಿ ಒಲಿ ಮ್ಯಾಲಿಟ್ಟೇನಿ. ಉಪ್ಪಿಟ್ಟ ಮಾಡಿಟ್ಟೇನಿ. ಝಳಕಾ ಮಾಡಿ ತಿಂಡಿ ತಿಂದು ಸಾಲಿಗೆ ಹೋಗವ್ವಾ ನನ್ನ ಮುದ್ದು ಬಂಗಾರ’ ಎಂದೆ.
‘ಅವ್ವಾ ಐವತ್ರೂಪಾಯಿ ಬೇಕಾಗೇತಿ ನನಗ. ಇಂದ ಹೊಸಾದೆರಡು ನೋಟ್ ಬುಕ್ ತರಾಕ ಸಾಲ್ಯಾಗ ಹೇಳ್ಯಾರ’ ಎಂದ ಮಗಳಿಗೆ
‘ಆತವ್ವಾ ತಗೋ’ ಎಂದು ಪರ್ಸನಲ್ಲಿ ಕೆಲಸ ಮುಗಿದ ನಂತರ ಇಡ್ಲಿ ಚಹಾ ತಿನ್ನಲೆಂದು ಇಟ್ಟುಕೊಂಡ ಏಕೈಕ ಐವತ್ರೂಪಾಯನ್ನು ತೆಗೆದು ಅವಳಳ ಕೈಗಿಟ್ಟೆ. ನಂಜಿನ ನುಡಿಯಾಡುವ ಗಂಡನಾಗಲಿ,ಅತ್ತೆಯಾಗಲಿ ಮಗಳಿಗೆ ಒಂದು ರೂಪಾಯನ್ನೂ ಕೊಡುವ ಯೋಗ್ಯತೆ ಇಲ್ಲದವರು ಎಂಬ ಅರಿವಿನಿಂದ ನಿಟ್ಟುಸಿರಿಟ್ಟಿದ್ದೆ.
ಮಗಳು ನನ್ನ ಸೆರಗು ಹಿಡಿದಳು,
‘ಅವ್ವಾ ನೀ ಈ ಕೆಲ್ಸ ಬಿಟ್ಟು ನಾ ಸಾಲಿಗೆ ಹೋದ ಮ್ಯಾಲೆ ಬ್ಯಾರೇ ಏನರೆ ಕೆಲಸಾ ಮಾಡು’ ಎಂದಳು.
‘ಯಾಕಪ್ಪಿ ಹಂಗ ಯಾಕ ಅನತಿ? ‘
‘ ಝಾಡಮಾಲಿ ಮಗಳು’ ಅಂತಾ ನನ್ನ ಪಕ್ಕದಾಗ ಕೂಡೋ ಹುಡುಗಿ ಶಾರಿ ನನಗ ಅಸಂಯ್ಯ ಮಾಡತಾಳ. ನಾ ಏನರ ಕೊಟ್ಟರ ತಿನ್ನಂಗಿಲ್ಲ. ಆಕಿ ಸಾಲಿ ಟೀಚರ್ ಮಗಳದಾಳ…. ಅವಳ ಕಂಗಳಲ್ಲಿ ತೆಳುವಾಗಿ ನೀರಾಡುತ್ತಿತ್ತು.
‘ಆಕಿಗೇನೂ ಕೊಟ್ಟ ತಿನ್ನಾಕ ಹೋಗಬ್ಯಾಡ. ಈ ವಿಷಯಾ ನಾ ಸಾಲಿಗೆ ಬಂದ ಮಾತಾಡತೇನಿ ಆತಿಲ್ಲೋ, ಈಗ ನಡೀತೀನಿ ಬಿಡ’ ಎಂದು ಅವಳ ಕೈಯಿಂದ ಸೆರಗು ಬಿಡಿಸಿಕೊಂಡು ಬಂದಿದ್ದಾಯಿತು. . ಮುಂದೇನು. ಏಳನೆಯ ತರಗತಿಯವರೆಗಷ್ಟೇ ಓದಿದ ತನಗೆ ಇನ್ಯಾವ ಕೆಲಸ ಸಿಗುತ್ತದೆ. … ಕುಡುಕನೆಂದರಿಯದೇ ದುಡುಕಿನಿಂದ ಮದುವೆ ಮಾಡಿಕೊಟ್ಟ ತವರಿನವರು ಕಷ್ಟಕ್ಕೂ ಬರಂಗಿಲ್ಲ ಸುಖಕ್ಕೂ ಬರಂಗಿಲ್ಲ. ಗೌಂಡಿ ಕೆಲಸ ಮಾಡಿ ಬಂದ ಸಂಬಳವನ್ನೆಲ್ಲ ಹೆಂಡದಂಗಡಿಗೇ ಸುರಿಯುವ ಗಂಡನೊಂದಿಗೆ ಏಗುವುದೆಂದರೆ ಸುಲಭದ ಮಾತಾಗಿರಲೇ ಇಲ್ಲ. ‘ಊರಾಗಿನ ಹೊಲಸ ಬಾಚತಿದಿ. ನೀ ಮಾಡಿದ ಭಕ್ಕರಿ ನಾ ತಿನ್ನಾಕ ಒಲ್ಲೆ’ ಎನ್ನುವ ಅತ್ತೆಯನ್ನು ನೋಡಿ ಬೇಸತ್ತು ಹೋಗಿದ್ದೆ. ಒಂದು ದಿನ ತಾಳ್ಮೆಗೆಟ್ಟು ಅದೇ ಕೆಲಸದಾಗ ದುಡಿದ ರೊಕ್ಕದಾಗ ಜ್ವಾಳಾ ತಂದೇನಿ ಹಿಟ್ಟ ಹಾಕಸೀನಿ ತಿಳಿತತೊ ಇಲ್ಲೋ. ನಾ ಆ ಕೆಲಸಾ ಬಿಟ್ಟು ಮನ್ಯಾಗ ಕೂಡತೇನಿ . ಏನರೆ ಆಸ್ತಿ ಮಾಡಿಟ್ಟೀರೇನು? ಇಲ್ಲಕಿದ್ರ ನಿಮ್ಮ ಮಗಗ ದುಡಿದಿದ್ದು ಮನಿತನಾ ನಡೆಸಾಕ ತಂದು ಕೊಡನ್ರೀ ಅತ್ತಿ’ ಎಂದು ತಿರುಗಿ ಬಿದ್ದಿದ್ದೆ.
‘ಕೆಲಸಕ್ಕ ಹೊಂಟಾಗಿನಿಂದ ಬಾಯ್ ಮಾಡೂದ ಕಲತಾಳ ನಿನ್ನ ಹೆಂಡ್ತಿ’ ಎಂದು ಆಗೀಗ ಮಗನ ಬಳಿ ಅತ್ತೆ ದೂರು ಹೇಳುತ್ತಿದ್ದಳು. ನಶೆಯಲ್ಲಿರುತ್ತಿದ್ದ ಅವನು ‘ಎನ ಮಾಡೋದವ್ವಾ ದುಡೀತೀನಿ ಅನ್ನೋ ಅಹಂಕಾರ ಆಕಿಗೆ’ ಎನ್ನುತ್ತಿದ್ದ.
‘ಕಸಾ ಧೂಳಾ ತೆಗಿಬಹುದು, ಪಾನ್ ಹಾಕಿ ಉಗಳತಾರಲ್ಲಾ ಅದನ್ನ ತೆಗಿಯಾಕ ಆಗಂಗಿಲ್ಲ ಅಲ್ಲೇನಕ್ಕೋ.. ಚುಟ್ಕಿ ಸಾವಿರಾರು ಸಲ ಹೇಳಿದ್ದನ್ನೇ ಅಂದೂ ಪುನರುಚ್ಚರಿಸಿದಳು.
‘ಹೌದವ್ವಾ. ಗುಟ್ಕಾ ಚೀಟಿ, ಪ್ಲಾಸ್ಟಿಕ್ ಕವರು ದಿನಾ ದಿನಾ ಸಿಗತಿರ್ತಾವ. ಗುಟ್ಕಾ ತಿನ್ನಾವ್ರನ್ನ ಕ್ಯಾನ್ಸರ್ ಆಸ್ಪತ್ರೆ ಪ್ರವಾಸಕ್ಕ ಕರಕೊಂಡ ಹೋಗಬೇಕ ಬಾಯಾಗಿನ ಹುಣ್ಣು ನೋಡಿ ಹೆದರಿಕೊಂಡಾದ್ರೂ ಬಿಡತಾರೇನೋ. . ಎಂದೆ.
ರಮಣಿ ಕೆಲಸ ಮುಗಿಸಿ ಕೈ ಕೊಡವಿಕೊಳ್ಳುತ್ತಾ ಬಂದವಳು ಪಿಸಕ್ಕನೇ ನಕ್ಕು ‘ಗುಟ್ಕಾ ಜೀಂವಕ್ಕ ಚೊಲೋ ಅಲ್ಲ ಅನ್ನೋದು ಎಲ್ಲಾರಿಗೂ ತಿಳದಿರ್ತತ್ರೀ ಅಕ್ಕಾರ್ರೀ. ಆದ್ರೂ ಎಂದಾರ ಒಂದ ದಿನಾ ಸಾಯಾಕ ಬೇಕಲ್ಲ. ನಾಲ್ಕ ದಿನಾ ಮೊದಲ ಹೋದ್ರೇನಾತು ಅನಕೊಂತ ತಿನ್ನೂದ್ರೀ… ‘ ಎನ್ನುತ್ತಾ ಸೊಂಟಕ್ಕೆ ಸಿಕ್ಕಿಸಿದ ಗುಟ್ಕಾ ಚೀಟಿ ಹರಿದು ಮುಖ ಮೇಲೆತ್ತಿ ಬಾಯಿಗೆ ಸುರುವಿಕೊಂಡಳು!
‘ಹೋಗಿ ಹೋಗಿ ನಾ ನಿನ್ನ ಮುಂದ ಹೇಳಾ ಹತ್ತೀನಲಾ’.. ಎಂದು ಹಣೆ ಚಚ್ಚಿಕೊಂಡೆ.
‘ಅಕ್ಕಾರ್ರೀ ಹೊಟ್ಟಿ ಹಸದತಿ ಚಾ ಕುಡಿಯೋಣ ನಡ್ರೀ’ ಎನ್ನುತ್ತಾ ಚುಟ್ಕಿಯೂ ಬಂದಳು. ನಾಲ್ಕು ತಿಂಗಳ ಎಳೆ ಬಸುರಿ, ಲಕ್ಷಣವಾಗಿ ಕಾಣುತ್ತಿದ್ದ ಚುಟ್ಕಿಯನ್ನು ನೋಡುತ್ತ ‘ಈಗೂ ಕಸಾ ಉಡುಗೋ ಮುಂದ ಉಲ್ಟಿ ಬಂದ ಹಾಂಗ ಆಕ್ಕೇತೇನು? ಎಂದು ಮಮತೆಯಿಂದ ಕೇಳಿದೆ
‘ಹೂನ್ರೀ ಹುಡುಗೂರು ಮಾಡಿದ ಕಕ್ಕಸ್ಸಿನ ಪ್ಯಾಡೆಲ್ಲ ಒಗದಿರ್ತಾರಲ್ರಿ, ಸ್ವಚ್ಛ ಮಾಡೂ ಮುಂದ ಕಳ್ಳ ಕಿತ್ತ ಬರೂ ಹಾಂಗ ಆಕ್ಕೇತಿ. ನಾ ಕೆಲಸಕ್ಕ ಹೋಗಂಗಿಲ್ಲಾ ಅಂದ್ರ ಹೆರಿಗೆಗೆ ರೊಕ್ಕಾ ಕೊಡಾಕ ನಿಮ್ಮಪ್ಪ ಅದಾನೇನು ಅಂತಾ ಜಜರಿಸ್ತಾನ್ರೀ ಗಂಡ. ಅಪ್ಪ ಸತ್ತಾನಲ್ರೀ ನನಗs.. ಅದಕ್ಕ ಇಂಥಾ ಮಾತ ಕೇಳಬೇಕಾಗೇತಿ’ ಎನ್ನುತ್ತ ವಿಷಾದದಿಂದ ನಕ್ಕಳು ಚುಟ್ಕಿ.
‘ನನಗ ಇಂದ ಹಸಿವಾಗಿಲ್ಲ ನೀವು ನಾಸ್ಟಾ ಮಾಡಿ ಬರ್ರಿ’ ಎಂದೆ
‘ ಮಾರಿ ನೋಡಿದ್ರ ತಿಳಿತತಿ ನಿಮ್ಮ ಹೊಟ್ಯಾಗೇನಿಲ್ಲ. ರೊಕ್ಕ ಇರಲಾದ್ರೆ ಇದ್ರ ನೀವು ಹಿಂಗ ಅನ್ನಾದು. ನನ್ನ ಕಡೆ ಇಂದ ರೊಕ್ಕ ಐತಿ ನಡ್ರಿ’ ಎನ್ನುತ್ತಾ ಹೆಗಲ ಸುತ್ತ ಕೈ ಹಾಕಿದ ರಮಣಿ ಪ್ರೀತಿಯಿಂದ ದಬ್ಬಿಕೊಂಡೇ ಹೊರಟಳು.
****
ಶಾಲೆ ಎದುರು ನಿಂತು ಒಮ್ಮೆ ಸುತ್ತಮುತ್ತ ನೋಡಿದೆ. ಸಮವಸ್ತ್ರ ಧರಿಸಿದ ಮಕ್ಕಳು ಒಂದೆಡೆಗೆ ಖೋಖೋ ಆಡುತ್ತಿದ್ದರು. ಗಂಡು ಮಕ್ಕಳು ಫುಟ್ಬಾಲ್ ಆಡುತ್ತಿದ್ದರು. ಬಟ್ಟೆ ಎಲ್ಲರದ್ದು ಒಂದೇ ರೀತಿ ಇರುವಂತೆ ಮಕ್ಕಳಿಗೆ ತೋರುವ ಪ್ರೀತಿಯೂ ಇದ್ದರೆಷ್ಟು ಚೆನ್ನಾಗಿರುತ್ತಿತ್ತು.
ಶಾಲೆಯಲ್ಲಿ ಜವಾನಿಯಾಗಿ ಕೆಲಸ ಮಾಡುತ್ತಿದ್ದ ಪಾರವ್ವ ಮೆಲ್ಲಗೆ ನನ್ನತ್ತ ಬಂದಳು. ‘ಯಾಕ ಬಂದೆವ್ವಾ?’ ಕೇಳಿದಳು.
‘ನನ್ನ ಮಗಳ ಟೀಚರ್ ಭೆಟ್ಟಿ ಆಗಾಕ ಬಂದೀನ್ರೀ ‘
ಪಾಪ ನಿಮ್ಮ ಹುಡುಗಿಗ ಟೀಚರ್ ಮಗಳ ಭಾಳ ಕಾಡತಾಳ. ಇಂದ ಆಟಾ ಆಡೋ ಮುಂದ ‘ನಮ್ಮ ಸಾಲಿ ಪಾಯ್ಕಾನಿ ಹೊಲಸಾಗೇದ, ನಿಮ್ಮವ್ವನ ಕರಕೊಂಡ ಬಂದು ತೊಳಿಯಾಕ ಹಚ್ಚ’ ಅಂದಳ್ರೀ. ಉಳಕಿದ ಮಕ್ಕಳು ನಗಾಕ ಹತ್ತಿದ್ವು. ನೋಡ್ರಿ ಅಲ್ಲಿ ಅಳಕೊಂತ ಕುಂತಾಳು’ ಎಂದು ಪಾರವ್ವ ಮರದ ಕೆಳಗಿನ ಕಟ್ಟೆಯ ಮೇಲೆ ಕುಳಿತ ಹುಡುಗಿಯತ್ತ ಕೈ ತೋರಿದಳು.
ಸರಸರನೇ ಮಗಳತ್ತ ನಡೆದೆ ಎರಡೂ ಕೈಗಳಿಂದ ಮುಖ ಮುಚ್ಚಿದ ಹುಡುಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಮೈ ಎಲ್ಲ ಸಣ್ಣಗೆ ನಡುತ್ತಿತ್ತು. ಹೆತ್ತ ಕರುಳಿಗೆ ಸಂಕಟ ತಡೆಯದಾಯ್ತು. ಬಾಚಿ ತಬ್ಬಿದೆ. ಮೃದುವಾಗಿ ಸಾಂತ್ವನ ಹೇಳುವಂತೆ ಅದೆಷ್ಟೋ ಸಮಯ ತಟ್ಟಿದೆ. ಕ್ರಮೇಣ ಅವಳ ಅಳು ಒಂದು ಹದಕ್ಕೆ ಬಂದಿತು.
‘ನಡಿ ನಿನ್ನ ಕ್ಲಾಸ್ ಟೀಚರ್ ಭೇಟ್ಟಿ ಮಾಡಿ ಬರೋಣು.
‘ಅವ್ವಾ ಟೀಚರಗೋಳು ಇಂದ ಮಹಿಳಾ ದಿನಾಚರಣೆ ಮಾಡಾಕ ಹತ್ಯಾರ. ನಮ್ಮ ಟೀಚರು ಭಾಷಣಾ ಮಾಡತಾರಂತಿದ್ರು’ ಎಂದಳು. ….
ಸರಿ ನೋಡೋಣ ನಡಿ ಎನ್ನುತ್ತಾ ಕಾರ್ಯಕ್ರಮ ನಡೆಯುವಲ್ಲಿಗೆ ಹೋದೆವು.
‘ಮಾನವ ಸೃಷ್ಟಿಯಲ್ಲಿ ಹೆಣ್ಣು ಗಂಡು ಎಲ್ಲರೂ ಸಮಾನರು. ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎಂದು ಟೇಬಲ್ ಗುದ್ದಿ ಭಾಷಣ ಮಾಡುತ್ತಿದ್ದವರು ಬೇರೆ ಯಾರು ಅಲ್ಲ ಶಾರಿಯ ಅಮ್ಮನೇ!. ಮಗಳು ತಾಯಿಯ ಭಾಷಣಕ್ಕೆ ಚಪ್ಪಾಳೆ ತಟ್ಟುತ್ತಿದ್ದಳು. .
ನನ್ನ ಸಿಟ್ಟು ನೆತ್ತಿಗೇರುತ್ತಿತ್ತು. ಇಷ್ಟ ತಿಳವಳಿಕೆ ಇರಾವ್ರು ನನ್ನ ಮಗಳಿಗ್ಯಾಕ ಕಾಡತಾರ? ನಾ ಬೀದಿ ಕಸಾ ಉಡಗಿದರೆ ಇವ್ರಿಗೇನು ಕಷ್ಟಾತು?
ನನ್ನ ಮೊಗದ ಭಾವ ನೋಡಿ ಬೆದರಿದ ಮಗಳು ನನ್ನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಳು. ..
- ಮಾಲತಿ ಹೆಗಡೆ







