……ಗುಡುಗು
ಮೋಡಗಳ
ಗಾಢಾಲಿಂಗನ
ಮಳೆಗಾಲ
ಆರಂಭದ
ಅಲಾರ್ಮ
…..ಮಿಂಚು
ಉನ್ಮತ್ತ
ಮೋಡಗಳ
ಮಿಲನ-
ಪ್ರಣಯ ಪ್ರಭೆ
…..ಮೊದಲ ಮಳೆ
ಇಳೆಗೆ
ಪ್ರಥಮ ಚುಂಬನ
ಪುಳಕ ಅಮಲು
ಮಣ್ಣ ಕಣಕಣದಲೂ
ಪ್ರೇಮ ಘಮಲು
……..ಮಳೆ
ಭುವಿಯನ್ನು ಸೇರುವ
ಬಾನಿನ
ಉತ್ಕಟ ಮಿಲನ
ಬಯಕೆ
ಇಳೆಗೆ ಧಾರಾಕಾರ
ಮಳೆ ಕಾಣಿಕೆ
*
……ಜಡಿ ಮಳೆ
ಮೋಡಗಳ
ವಿರಹ ಪ್ರಲಾಪ
ಕಣ್ಣೀರು
ಮುಸಲಧಾರೆ
***
ಕಾಮನ ಬಿಲ್ಲು ೧.
ತುಂತುರು ಮಳೆಹನಿ
ಮತ್ತು
ಸೂರ್ಯಕಿರಣ
ನಡುವಣ
ಒಲವಿನ
ವರ್ಣ ವಿನ್ಯಾಸ
೨.
ಕಣ್ಣುಗಳ ಹನಿ-
ಗೂಡುವಿಕೆ
ಅನಿವಾರ್ಯ
ಮೂಡಲು
ಮನದಲ್ಲಿ
ಕಾಮನ ಬಿಲ್ಲು
- ಗೋಪಾಲ ತ್ರಾಸಿ, (ಮುಂಬೈ)







