ಸಿಂಡರೆಲ್ಲಾ

ಸಿಂಡರೆಲ್ಲಾಳ ಮನಸ್ಸು ಉದ್ವಿಗ್ನಗೊಂಡಿತ್ತು, ತಳಮಳಿಸುತ್ತಿತ್ತು, ಗೊಂದಲದ ಗೂಡಾಗಿತ್ತು. ಮುಂದೇನಾಗುವುದೋ ಏನೋ ಎಂಬ ಆತಂಕ, ಭಯ ಅವಳೆದೆಯಲ್ಲಿ ಭುಗಿಲೆದ್ದು ಕುಣಿಯತೊಡಗಿತ್ತು. ʻಈ ನನ್ನ ಪ್ರಾಣಪ್ರಿಯ ಅಮೋಘ ಅದೆಲ್ಲಿ ನನ್ನೆದೆಗೆ ಒದ್ದು ಹೋಗುವನೋ ಏನೋ ಎಂದೆನಿಸತೊಡಗಿದೆ ಇತ್ತೀಚಿನ ದಿನಗಳಲ್ಲಿ. ನನ್ನ ಪ್ರೀತಿಗೆ ಚೂರಿ ಹಾಕುವನೇನೋ ಎಂದು ಹಗಲಿರುಳು ನನ್ನೆದೆಯನ್ನು ಕಾಡುತ್ತಿದೆ. ದೂರದ ಇಂಡಿಯಾದಿಂದ ಇಲ್ಲಿಗೆ ಬಂದು ನನ್ನೆದೆಗೆ, ಹೃದಯಕ್ಕೆ ಲಗ್ಗೆ ಇಟ್ಟ. ಎದೆಯೊಳಗೆ, ಹೃದಯದೊಳಗೆ ನನಗರಿವಿಲ್ಲದೇ ತೂರಿಕೊಂಡೂಬಿಟ್ಟ. ಭದ್ರವಾಗಿ ಅಲ್ಲಿ ಕುಳಿತೂಬಿಟ್ಟ. ಈಗ ಅದ್ಯಾಕೋ ಅವ ಒಂಚೂರು ಅನುಮಾನ ಹುಟ್ಟಿಸುವ ರೀತಿ ಬಿಹೇವ್ ಮಾಡುತ್ತಿರುವನಲ್ಲ…? ಈ ಎಲಿಜಾಬೆಥ್ ಮತ್ತು ಕ್ಯಾಥರೀನ್ ಎಂಬ ಬಿಚ್ಚುಮ್ಮಗಳು ಅವನನ್ನೆಲ್ಲಿ ಯಾಮಾರಿಸಿ ಬಿಡುತ್ತಾರೋ ಎಂಬ ಭಯ ನನ್ನನ್ನು ಕಾಡುತ್ತಿದೆ. ಈ ಸೋಗಲಾಡಿಯರು ನನ್ನ ಅಮೋಘನ ಮೈಮೇಲೆ ಬಿದ್ದು ಅವನನ್ನು ಕೆಣಕುತ್ತಿರುತ್ತಾರೆ. ಇದುವರೆಗೂ ಅವನೇನು ಅವರಿಗೆ ಈಲ್ಡ್ ಆಗಿರಲಿಲ್ಲ. ಆದರೆ ಒಂದುವಾರದ ಮಟ್ಟಿಗೆ ರಿಲೇಟಿವ್ಸ್ ಕಾಣಲು ಹೋಗಿದ್ದೆನಲ್ಲ, ಆ ನನ್ನ ಅಬ್ಸೆನ್ಸ್ದಲ್ಲಿ ಎಲಿಜಾಬೆಥ್ ಅಮೋಘನನ್ನು ಯಾಮಾರಿಸಿದ್ದಾಳೆಂದು ತಿಳಿದು ಬಂದಿದೆ. ಅದು ನಿಜವಿದ್ದರೂ ಇರಬಹುದು. ಇಂದು ಬೇರೆ ಅವನು ಯಾವುದೋ ಪ್ರೊಜೆಕ್ಟ್ ಕೆಲಸದ ಮೇಲೆ ಎಚ್ಕ್ಯೂದಿಂದ ತುಸು ದೂರ ಹೋಗಿದ್ದಾನೆ. ಅದೇನಿದ್ದರೂ ಬಹುಶಃ ಇಂದು ರಾತ್ರಿ ಅಮೋಘ ನನ್ನ ಸಾಂಗತ್ಯ ಬಯಸಿ ಬಂದೇ ಬರುತ್ತಾನೆ. ಆಗ ಸತ್ಯಾಸತ್ಯತೆ ಏನೆಂದು ಅವನ ಬಾಯಿಯಿಂದಲೇ ತಿಳಿದುಕೊಳ್ಳಬೇಕಿದೆ.

ಮೊದಲೇ ಅಮೋಘ ಫ್ಲರ್ಟ್. ಬಿಳಿ ಹುಡುಗಿಯರೆಂದರೆ ಅವನೂ ಬಾಯಿಬಾಯಿ ಬಿಡುವ ಆಸಾಮಿಯೇ. ಹುಡುಗಿಯರೇ ಮೇಲೆ ಬಿದ್ದು ಅವನ ಸಾಂಗತ್ಯಕ್ಕೆ ಹಾತೊರೆಯುತ್ತಿರುವಾಗ ಗಂಡಸಾಗಿ ಅವನು ಸುಮ್ಮನಿರಲು ಸಾಧ್ಯವೇ? ಮೊದಲೇ ದಿ ಮೋಸ್ಟ್ ಹ್ಯಾಂಡ್ಸಮ್ ಗೈ. ಅದಲ್ಲದೇ ದಿ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಸಹ. ಹುಡುಗಿಯರೆದೆಗಳಲ್ಲಿ ಕಿಚ್ಚು ಹಚ್ಚುವಂಥಹ ಹ್ಯಾಂಡ್ಸಮ್ ಪರ್ಸನಾಲಿಟಿ ಅವನದು. ಅದೂ ಅಲ್ಲದೇ ಈಗೀಗ ನಮ್ಮ ಒಂದಿಷ್ಟು ಬಿಳಿ ಹುಡುಗಿಯರು, ಮತ್ತು ಹೆಂಗಸರೂ ಕರಿ ಹುಡುಗರ ಬೆನ್ನು ಬೇರೆ ಹತ್ತಿದ್ದಾರೆ. ಕರಿಯರು ನೋಡಲು ಹ್ಯಾಂಡ್ಸಮ್ ಆಗಿರದಿದ್ದರೂ ಅವರು ತುಂಬಾ ಸ್ಟ್ರಾಂಗ್. ನಮ್ಮ ಬಿಳಿಯ ಹುಡುಗಿಯರು ಅವರ ಸಾಂಗತ್ಯದಲ್ಲಿ ತುಂಬಾ ತುಂಬಾನೇ ಎಂಜಾಯ್ ಮಾಡುತ್ತಿದ್ದಾರೆ. ಎಂಜಾಯ್ ಮಾಡಲು ಅವರ ಬಣ್ಣವೇನು ಅಡ್ಡಿಯಾಗುತ್ತಿಲ್ಲ. ಬಣ್ಣವನ್ನು ತೊಳೆದುಕೊಂಡು ಕುಡಿಯ ಬೇಕಿಲ್ಲವಲ್ಲ? ಹೆಣ್ಣು ದೇಹ ಸುಖಿಸಲು ಬೇಕಿದ್ದನ್ನು ಕೊಡುವ ತಾಕತ್ತು ಅವರಲ್ಲಿದೆ. ಅವರ ಸ್ಟೆಮಿನಾ, ಸ್ಟ್ರೆಂಗ್ಥ್, ಹೆಣ್ಣುಗಳನ್ನು ತಣಿಸುವ ಕೆಪ್ಯಾಸಿಟಿ, ಪಾವರ್ಫುಲ್ನೆಸ್ ವರ್ಣಿಸಲು ಸಾಧ್ಯವಿಲ್ಲ. ಆ ಸಾಮರ್ಥ ನಮ್ಮ ಬಿಳಿ ಹುಡುಗರಿಗಿಲ್ಲ. ಬಿಳಿ ಹುಡುಗಿಯರಂತೂ ತುಂಬಾನೇ ಇಷ್ಟಪಡುವ ವೆಲ್ಬಿಲ್ಟ್ ಬಾಡಿ ಅವರದು. ಅವರ ಬಾಹುಬಂಧನದಲ್ಲಿ, ಪ್ರೀತಿಯಾಟದಲ್ಲಿ ಹಿತವಾಗಿ ನಲುಗಿ ಮುಲುಗದೇ ಇರುವ ಹುಡುಗಿಯರೇ ಇಲ್ಲ. ಈ ನನ್ನ ಅಮೋಘನೂ ಒಂದು ರೀತಿಯಲ್ಲಿ ಕರಿಯನೇ. ಅದೂ ಇಂಡಿಯನ್ ಬಾರ್ನ್ ಲವರ್ ಬಾಯ್. ಹೀಗಾಗಿ ನಾನು ಇವನನ್ನು ಆಯ್ಕೆಮಾಡಿಕೊಂಡಿದ್ದು. ಇವನು ಕರಿಯನೂ ಅಲ್ಲ, ಬಿಳಿಯನೂ ಅಲ್ಲ. ಒಂಥರ ಕೆಂಪುಕೋತಿ ಬಣ್ಣದವ. ಕೆಂಪು ಗಜ್ಜರಿ ಅಂತಾನೂ ಅನ್ನಬಹುದು. ಇವನದೂ ವೆಲ್ಬಿಲ್ಟ್ ಬಾಡಿ. ಅವನ ಸಾಂಗತ್ಯದಲ್ಲಿ ನಾನಂತೂ ತುಂಬಾನೇ ಖುಷಿ ಅನುಭವಿಸುತ್ತಿದ್ದೇನೆ. ಈ ಅಮೋಘ ನನ್ನೇ ಪ್ರೀತಿಸಬೇಕು, ಬೇರೆ ಹುಡುಗಿಯರತ್ತ ಕಣ್ಣೂ ಹಾಕಬಾರದು ಎಂಬುದು ನನ್ನ ಮನದಿಚ್ಛೆ. ಇವನು ಹೂವಿಂದ ಹೂವಿಗೆ ಹಾರುವ ದುಂಬಿಯಾಗಬಾರದು. ಅಮೋಘನೆಂಬ ದುಂಬಿ ಈ ಸಿಂಡರೆಲ್ಲಾ ಎಂಬ ಹೂವಿನ ಮಕರಂದವನ್ನಷ್ಟೇ ಹೀರಬೇಕು ಎಂಬುದು ನನ್ನ ಮನದಭಿಲಾಷೆ. ಈ ಅಮೊಘ ನನ್ನವನಷ್ಟೇ ಆಗಬೇಕು. ಅವನಿಗೆ ನಾನು, ನನಗೆ ಅವನು ಅಷ್ಟೇ ಆಗಬೇಕು. ನಾನಿಲ್ಲದಾಗ ಈ ಮಿಟುಕಲಾಡಿ ಎಲಿಜಾಬೆಥ್ ಅವನನ್ನು ಮಂಚಕ್ಕೆ ಎಳೆದೊಯ್ದಿದ್ದಾಳೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಅದೇನು ಕಥೆಯೋ ಏನೋ, ಮೊದಲು ಅಮೋಘನಿಂದಲೇ ಕನ್ಫರ್ಮ್ ಮಾಡಿಕೊಂಡು ಮುಂದುವರಿಯಬೇಕಿದೆ. ಅವನಿಗೆ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಳ್ಳಬೇಕಿದೆ. ಇನ್ನು ಮುಂದೆ ಅವನ ಬದುಕಿನಲ್ಲಿ ಬೇರೆ ಯಾವ ಹುಡುಗಿಯೂ ಬರಬಾರದು. ಅಮೋಘ ಬೇರೆ ಯಾವ ಹುಡುಗಿಯ ಜೊತೆಗೂ ತನ್ನ ಮೈ, ಮನಗಳನ್ನು ಹಂಚಿಕೊಳ್ಳಬಾರದು. ಅವನಿಂದ ಒಂದು ದೃಢ ನಿಧಾರದ ಮಾತು ಕೇಳಿ ಬರುವವರೆಗೆ ನಾನಂತೂ ಬಿಡುವವಳಲ್ಲ, ನನ್ನ ಮನಸ್ಸಿಗೂ ನೆಮ್ಮದಿಯೂ ಇರುವುದಿಲ್ಲ. ಹಾಗೊಂದು ವೇಳೆ ನನ್ನ ಮಾತು ಅವನಿಗೆ ರುಚಿಸದಿದ್ದರೆ ನಾನವನ ಗೆಳೆತನ ಬಿಟ್ಟುಬಿಡಲೇ…? ಅವನನ್ನು ಬಿಟ್ಟುಬಿಡುವುದು ಅಷ್ಟು ಹಗುರವೇ? ನನ್ನ ನರನಾಡಿಗಳಲ್ಲಿ, ಉಸಿರು ಉಸಿರಲ್ಲಿ ಅವನೇ ತುಂಬಿಕೊಂಡಿದ್ದಾನೆ. ನನ್ನ ಪ್ರತಿ ಉಸಿರಾಟದಲ್ಲಿ ಅವನದೇ ಹೆಸರಿದೆ. ಬಿಟ್ಟುಬಿಡುವುದು ಅದ್ಹೇಗೆ ಸಾಧ್ಯ? ಅವನಿಗೆ ಒಂದಿಷ್ಟು ನೀತಿಪಾಠವನ್ನೂ ಹೇಳಬೇಕಿದೆ. ಇಲ್ಲಿಯವರೆಗೆ ಅವನ ಜೀವನದ ಪಯಣದಲ್ಲಿ ಅದೆಷ್ಟು ಜನ ಹುಡುಗಿಯರು ಹಾಜರಿ ಹಾಕಿದ್ದಾರೋ ಏನೋ? ಆಗಿದ್ದು ಆಗಿಹೋಗಿದೆ. ಇತಿಹಾಸ ಮತ್ತೆ ಮರುಕಳಿಸಬಾರದೆಂಬುದು ನನ್ನ ಮನದಿಚ್ಛೆ.ʼ ಹೀಗೇ ಏನೇನೋ ನೂರೆಂಟು ವಿಚಾರಗಳು ಸಿಂಡರೆಲಾಳ ಮನದಲ್ಲಿ ಸುಳಿದು ಹೋದವು. ಅಮೋಘನೊಂದಿಗೆ ಕಳೆದ ಮಧುರ ಕ್ಷಣಗಳು ಅವಳ ಮೈಮನಗಳಿಗೆ ಮುದ ನೀಡುವುದರ ಜೊತೆಗೆ ಕಚಗುಳಿಯನ್ನೂ ಇಟ್ಟವು. ಜೊತೆಗೆ ಎಲಿಜಾಬೆಥ್ಳ ಜೊತೆಗಿನ ಅವನ ಸಂಬಂಧದ ಸುದ್ದಿ ಅವಳೆದೆಗೆ ಕಿಚ್ಚನ್ನೂ ಹಚ್ಚಿತ್ತು. ಎದೆಯೊಳಗೆ ತಳಮಳವನ್ನೂ ಹುಟ್ಟು ಹಾಕಿತ್ತು.
                     **** 
 
ಸಿಂಡರೆಲಾ ಇಪ್ಪತ್ತಾರರ ಹರೆಯದ ಸಾಫ್ಟ್ವೇರ್ ಇಂಜಿನಿಯರ್. ಮೂರ್ನಾಲ್ಕು ಶತಮಾನಗಳ ಹಿಂದೆ ಅವಳ ವಂಶಸ್ಥರೂ ಕರಿಯರೇ. ಯಾರದೋ ಕಾಲಕ್ಕೆ ಬಿಳಿಯರೊಂದಿಗೆ ವರ್ಣ ಸಂಕರವಾಗಿತ್ತಂತೆ. ಮುಂದೆ ಬಿಳಿಯರೇ ಆದ ಅವಳ ವಂಶಸ್ಥರು ಈಗ ಬಿಳಿಯರೇ ಆಗಿರುವರು. ಅದೇನೋ ಗೊತ್ತಿಲ್ಲ, ಪುಬೆರ್ಟಿಗೆ ಬಂದ ನಂತರ ಅವಳಿಗೆ ಕರಿಯರ ಮೇಲೆ ಬಹು ಆಕರ್ಷಣೆ. ಇಂಜಿನಿಯರಿಂಗ್ ಕೋರ್ಸ್ ಮುಗಿಸುವಷ್ಟರಲ್ಲಿ ಮೂರ್ನಾಲ್ಕು ಕರಿಯ ಯುವಕರ ಸಾಂಗತ್ಯದಲ್ಲಿ ಮೈಮನ ತಣಿಸಿಕೊಂಡ ಹುಡುಗಿ. ಈಗ ಈ ಅಮೋಘ ಅವಳದೇ ಕಂಪನಿಗೆ ಭಾರತದಿಂದ ಆನ್ ಡೆಪ್ಯುಟೇಷನ್ ಮೇಲೆ ಬಂದಿರುವ ಯೌವನಿಗ, ಸುರಸುಂದರಾಂಗ. ಆರಡಿ ಎತ್ತರದ ಆಕರ್ಷಕ ದೇಹಧಾರ್ಡ ಹೊಂದಿರುವ ಹ್ಯಾಂಡ್ಸಮ್ ಹುಡುಗ. ಅವನು ಕರ್ತವ್ಯಕ್ಕೆ ಹಾಜರಾದ ದಿನವೇ ಸಿಂಡರೆಲಾಳಿಗೆ ಅಮೋಘನ ಪರಿಚಯವಾಗಿತ್ತು. ಮೊದಲ ದಿನವೇ ಅವಳು ಅವನನ್ನು ಮೆಚ್ಚಿಕೊಂಡಿದ್ದಳು. ಅಮೋಘ ಅವಳಿಗೆ ತುಂಬಾ ಇಷ್ಟವಾಗಿಬಿಟ್ಟ. ಲವ್ ಅಟ್ ಫಸ್ಟ್ ಸೈಟ್ ಎನ್ನುವ ಮಾತು ಅಕ್ಷರಶಃ ನಿಜವಾಗಿತ್ತು. ಅಲ್ಲಿ ಎಲ್ಲವೂ ಫ್ರೀಸ್ಟೈಲ್. ಸ್ವೇಚ್ಛಾಚಾರಕ್ಕೆ ಯಾವುದೇ ಕಟ್ಟಳೆಗಳಿರಲಿಲ್ಲ. ತನ್ನ ನಯವಾದ ಮಾತುಗಳಲ್ಲಿ ಸಿಂಡರೆಲ್ಲಾ ಅಮೋಘನನ್ನು ತನ್ನೆಡೆಗೆ ಆಕರ್ಷಿಸಿದ್ದಳು. ಅಮೋಘ ಮೊದಲೇ ಮಹಾ ತುಂಟ. ಹಕ್ಕಿ ತಾನಾಗಿಯೇ ಬಲೆಗೆ ಬೀಳುತ್ತಿರುವಾಗ ಕಿಲಾಡಿ ಹುಡುಗನಿಗೆ ಸುಮ್ಮನಿರಲು ಸಾಧ್ಯವೇ…? ಮೇಲಾಗಿ ಭಾರತೀಯ ಆಪ್ತ ಗೆಳತಿ ವೃಷ್ಟಿಯಿಂದ ದೂರದ ದೇಶಕ್ಕೆ ಬಂದವನು. ಒಂಟಿ ದೇಹ ಜೊತೆಗಾಗಿ ಹಪಹಪಿಸುತ್ತಿತ್ತು. ಅಂತೂ ತುಸು ದಿನಗಳಲ್ಲೇ ಸಿಂಡರೆಲ್ಲಾ ಅಮೋಘನಿಗೆ ಹತ್ತಿರವಾಗಿಬಿಟ್ಟಳು, ಜೊತೆಯೂ ಆಗಿಬಿಟ್ಟಳು. ʻಇವನ ಜೊತೆಗೆ ಲಿವ್ ಇನ್ ರಿಲೇಶನ್ದಲ್ಲಿ ಒಂದೇ ಸೂರಿನಲ್ಲಿ ಜೀವನ ಆರಂಭಿಸುವುದು ಒಳ್ಳೆಯದಲ್ಲವೇ? ಲಿವ್ ಇನ್ ರಿಲೇಶನ್ ಏಕೆ, ಆದಷ್ಟು ಬೇಗ ಮದುವೆಯೂ ಆಗುವುದು ಸೂಕ್ತʼ ಎಂಬ ವಿಷಯ ಅವಳ ಮನಸ್ಸಿನಲ್ಲಿ ಓಲಾಡತೊಡಗಿದೆ. 

ʻಹೌದು, ನನ್ನ ಹೃದಯದ ಅಮೋಘನ ಜೊತೆಗಿರಲು ಹಪಹಪಿಸುತ್ತಿದೆ, ತಪತಪಿಸುತ್ತಿದೆ. ಅದೇನೋ ಗೊತ್ತಿಲ್ಲ, ಈಗಾಗಲೇ ಮೂರ್ನಾಲ್ಕು ಜನ ಹುಡುಗರು ನನ್ನ ಲೈಫಲ್ಲಿ ಬಂದು ಹೋಗಿದ್ದರೂ ಯಾರೂ ನನಗೆ ಆಪ್ತರಾಗಿಲ್ಲ. ಸುಮ್ಮನೇ ದೇಹದ ಕಾವು ತಣಿಸಿಕೊಳ್ಳಲಷ್ಟೇ ಅವರ ಸಾಂಗತ್ಯ ಬೇಕಾಗಿತ್ತಲ್ಲವೇ? ಅಲ್ಲಿ ಯಾವುದೇ ಭಾವನಾತ್ಮಕ ಭಾವನೆಗಳು ಕಾಣಿಸಿಕೊಂಡಿರಲಿಲ್ಲ. ಇಂಜಿನಿಯರಿಂಗ್ ಕೋರ್ಸ್ ಮುಗಿದು ಆಗಷ್ಟೇ ನಾನು ಉದ್ಯೋಗ ಪರ್ವಕ್ಕೆ ಎಂಟ್ರಿ ಕೊಟ್ಟಿದ್ದೆ. ಹೂಗಳಂತೆ ಅರಳಿದ್ದ ನನ್ನ ಮೈಮನಗಳು ಬಿಸಿಲಿನಲ್ಲಿ ಬೆಂದ ಭೂಮಿ ಮೊದಲ ಮಳೆಗೆ ಹಾತೊರೆಯುವಂತೆ ಪ್ರೀತಿಗಾಗಿ ಪರಿತಪಿಸುತ್ತಿದ್ದವು. ಆಗ ನನ್ನ ಹೃದಯಕ್ಕೆ ಲಗ್ಗೆ ಇಟ್ಟವ ಸ್ಯಾಮ್. ವರ್ಷಕಾಲದ ಮೊದಲ ಮಳೆಯಂತೆ ಸ್ಯಾಮ್ ನನ್ನೆದೆಯೊಳಗೆ ಇಳಿಯತೊಡಗಿದ. ಸೂರ್ಯನ ಕಿರಣ ಮುತ್ತಿಟ್ಟಾಗಲೇ ಹೂವು ಅರಳುವಂತೆ ಅವನ ಬೆಚ್ಚನೆಯ ಪ್ರೀತಿಯಲ್ಲಿ ನಾನು ಅರಳಿ ನಳನಳಿಸಬೇಕೆನಿಸಿತು ಹರೆಯದ ಹುಚ್ಚುಖೋಡಿ ಮನಸ್ಸಿಗೆ. ಸ್ಯಾಮ್ ನನ್ನಾಸೆಗೆ ಪುಷ್ಟಿ ಕೊಟ್ಟಿದ್ದ. ಅವನ ಒಡನಾಟದಲ್ಲಿ ನಾನೊಂದಿಷ್ಟು ಮಿಂದು ಮೀದಿದ್ದು ನಿಜ. ಸ್ಯಾಮ್ ಎಂದರೆ ಪ್ರೀತಿ, ಪ್ರೀತಿ ಎಂದರೆ ಸ್ಯಾಮ್ ಎಂಬಂತಾಗಿತ್ತು ನನಗೆ. ಸ್ಯಾಮ್ ನನ್ನವನೇ ಆಗಿಬಿಟ್ಟ ಎಂಬ ಸವಿನೆನಪುಗಳ ಸುಂದರ ಲೋಕದಲ್ಲಿ ವಿಹರಿಸುತ್ತಿದ್ದ ನನ್ನೆದೆಗೆ ಬರಸಿಡಿಲು ಬಡಿದಿತ್ತು. ಸ್ಯಾಮ್ಗೆ ನಾನೊಬ್ಬಳೇ ಆಪ್ತ ಗೆಳತಿಯಾಗಿರಲಿಲ್ಲ. ನಮ್ಮ ಜೊತೆಗೇ ಕೆಲಸ ಮಾಡುತ್ತಿದ್ದ ಜಾಸ್ಮಿನ್ ಎಂಬ ಬೆಡಗಿಯೂ ಸ್ಯಾಮ್ನ ಆಪ್ತವಲಯದಲ್ಲಿರುವ ಸುದ್ದಿ ನನ್ನ ಗಮನಕ್ಕೆ ಬಂದಾಗ ಆಗಷ್ಟೇ ಅರಳಿ ನಳನಳಿಸುತ್ತಿದ್ದ ನನ್ನೆದೆಯ ಕನಸುಗಳಿಗೆ ಬೆಂಕಿ ಬಿದ್ದಿತ್ತು. ನನ್ನೆದೆಯ ಕುಸುಮಗಳು ಘಾಸಿಗೊಂಡಿದ್ದವು. ನಾನೂ ದಿಟ್ಟವಾಗಿ ಸ್ಯಾಮ್ನನ್ನು ಪ್ರಶ್ನಿಸಿದ್ದೆ. ʻಡಿಯರ್, ಇಂಥಹ ಸಣ್ಣ ವಿಷಯಕ್ಕೆ ಅದ್ಯಾಕೆ ಅಷ್ಟು ಕೊರಗುತ್ತಿರುವಿ? ಲೈಫ್ ಈಜ್ ವೆರಿ ಸಿಂಪಲ್. ಬಂದಿದ್ದನ್ನು ಜಸ್ಟ್ ಅನುಭವಿಸಬೇಕು. ಟೇಕ್ ಇಟ್ ಈಜಿ. ಈ ಸಾಂಗತ್ಯ ಅನ್ನೋದು ಜಸ್ಟ್ ನಾಲಿಗೆಯ ಮೇಲಿನ ರುಚಿ ಇದ್ದಂತೆ. ನಾಲಿಗೆಯ ರುಚಿಗಾಗಿ ನಾವು ವೆರೈಟಿ ವೆರೈಟಿ ಫುಡ್ ಐಟೆಮ್ಸ್ ತಿನ್ನುವುದಿಲ್ಲವೇ…? ಮೂರು ದಿನದ ಈ ಲೈಫೂ ಹಾಗೇನೇ. ಹುಟ್ಟು ಆಕಸ್ಮಿಕವಾದರೂ ಸಾವು ಮಾತ್ರ ನಿಶ್ಚಿತ ಅಲ್ಲವೇ…? ಅದಕ್ಕಾಗಿ ಜೀವ ಇರುವವರೆಗೆ ಖುಷಿಖುಷಿಯಿಂದ ಇರಬೇಕು ಅಷ್ಟೇ. ಬಿ ಹ್ಯಾಪಿ ಐ ಸೇ…ʼ ಎಂದು ವೇದಾಂತಿಯಂತೆ ಹೇಳಿದ್ದ ಲೋಫರ್. ಯಾಕೋ ಅವನ ಹಿತವಚನ ನನಗೆ ಹಿಡಿಸಲಿಲ್ಲ. ಸೆಕ್ಸ್ ಬಗ್ಗೆ ನನಗೆ ಮೊದಮೊದಲು ಬಹಳಷ್ಟೇ ಕುತೂಹಲ ಇದ್ದದ್ದು ನಿಜ. ಈಗ ಆ ಕುತೂಹಲ ಉಳಿದಿಲ್ಲ. ಎಷ್ಟಿದ್ದರೂ, ಏನಿದ್ದರೂ ಅಷ್ಟೇ ಅಲ್ಲವೇ, ಅದೇ ಅಲ್ಲವೇ…? ಎಂಬ ಭಾವನೆ ಮಿದುಳಿಗೆ ಹೊಕ್ಕಿತ್ತು. ಹಾಗಾಗಿ ಅಲೆಮಾರಿಗಳಂತೆ ಸದಾ ಅಲ್ಲಿ ಇಲ್ಲಿ ಸುತ್ತುವುದು ಬೇಡ, ಕಂಡಕಂಡದ್ದನ್ನು ಇಚ್ಛಿಸುವುದು ಬೇಡ, ಕಬಳಿಸುವುದೂ ಬೇಡ ಎಂದೆನಿಸತೊಡಗಿತ್ತು ಕಳ್ಳು ಕುಡಿದ ಕುದುರೆಯಂತೆ ಕೆನೆದಾಡುತ್ತಿದ್ದ ಹುಚ್ಚು ಚಂಚಲ ಮನಸ್ಸಿಗೆ. ಒಂದು ಕಡೆಗೆ ಹಾಯಾಗಿ ನೆಲೆ ನಿಂತು ನೆಲೆಸಬೇಕೆನಿಸತೊಡಗಿತ್ತು.” ಹೀಗೆ ಸಿಂಡರೆಲ್ಲಾಳ ಮನಸ್ಸಿನಲ್ಲಿ ಒಂದಿಷ್ಟು ನೆನಪುಗಳ ಓಘ.
                    ****

ಮಾಮೂಲಿನಂತೆ ಅಮೋಘ ಒಳ್ಳೇ ಸ್ಪೀಡಿನಲ್ಲಿ ಕಾರನ್ನು ಓಡಿಸುತ್ತಿದ್ದರೂ ಅವನ ಮನಸ್ಸು ಎತ್ತೆತ್ತಲೋ ಹರಿದಾಡತೊಡಗಿತ್ತು. ಆಗಲೇ ಸಿಂಡರೆಲ್ಲಾ ಬಂದಿರುವುದನ್ನು ಫೋನಲ್ಲಿ ಕನ್ಪರ್ಮ್ ಮಾಡಿಕೊಂಡಿದ್ದ. ಕಂಪನಿಯ ಒಂದು ಪ್ರೊಜೆಕ್ಟ್ ಕೆಲಸದ ಮೇಲೆ ಎಚ್ಕ್ಯೂದಿಂದ ತುಸು ದೂರ ಬಂದಿದ್ದವ ಮತ್ತೆ ಎಚ್ಕ್ಯೂಗೆ ಮರಳಲು ಗಾಡಿ ಚಾಲೂಮಾಡಿದ್ದ. ಸಿಂಡರೆಲ್ಲಾಳ ಪ್ರೀತಿಯ ಎರಕದ ಮಾತುಗಳು, ವಿಶೇಷವಾದ ಮೋಹಕ, ಮಾರ್ದವ ನಗು ಅವನಿಗೆ ಯಾವಾಗಲೂ ಇಷ್ಟವೇ. ʻಈ ಮಾರ್ದವ ನಗೆಯೇ ನನ್ನ ಮನಸ್ಸನ್ನು ಅವಳೆಡೆಗೆ ವಾಲುವಂತೆ ಮಾಡಿದ್ದು ಅಲ್ಲವೇ…? ಅವಳ ಆಕರ್ಷಕ ದೇಹದಂತೆ ಅವಳ ನಗುವೂ ಆಕರ್ಷಕವೇ. ತುಂಬಾನೇ ಚೇತೋಹಾರಿಯೂ ಹೌದು. ಅವಳೀಗ ನನ್ನ ಬರುವಿಕೆಗಾಗಿ ಕಾಯುತ್ತಿರಬಹುದು. ಒಂದು ವಾರದಿಂದ ಅವಳ ಮೈಮನಸ್ಸುಗಳು ನನಗಾಗಿ ಪರಿತಪಿಸುತ್ತಿರಬಹುದು, ಹಂಬಲಿಸಿ ಹಪಹಪಿಸುತ್ತಿರಬಹುದು. ನಾನು ಯುಎಸ್ಗೆ ಬಂದ ತುಸು ದಿನಗಳಲ್ಲೇ ತನ್ನ ಮೋಹಕ ನಗೆಯಿಂದ ಮೋಡಿಮಾಡಿಬಿಟ್ಟಳಲ್ಲ…? ತುಂಬು ಯೌವನ ಸೂಸುವ ಅವಳ ಮೈಮನಸ್ಸುಗಳು ನನ್ನನ್ನು ಸೆಳೆದುಬಿಟ್ಟವಲ್ಲ…? ನನ್ನನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಸುಖಿಸತೊಡಗಿರುವಳಲ್ಲ…? ನಾನು ಬೆಂಗಳೂರಿನಿಂದ ಬರುವಾಗ ನನ್ನ ಜೀವದ ಗೆಳತಿ ವೃಷ್ಠಿಗೆ ಪ್ರಮಾಣಮಾಡಿ ನೀಡಿದ್ದ ಒಲವಿನ ಮಾತುಗಳನ್ನು ಗಾಳಿಗೆ ತೂರಿ ಸಿಂಡರೆಲ್ಲಾಳಿಚ್ಛೆಗೆ ಮಣಿದುಬಿಟ್ಟೆನಲ್ಲ…? ವೃಷ್ಠಿ, ಸಿಂಡರೆಲ್ಲಾ ಎಂಬ ಕೋಮಲ ಕುಸುಮಗಳನ್ನು ಆಘ್ರಾಣಿಸಿದ ನಂತರ ಈಗ ಈ ಅಮೋಘನೆಂಬ ಹೂವಿಂದ ಹೂವಿಗೆ ಹಾರುವ ದುಂಬಿ ಎಲಿಜಾಬೆಥ್ ಮತ್ತು ಕ್ಯಾಥರೀನ್ ಎಂಬ ನವನವೀನ ಕುಸುಮಗಳೆಡೆಗೆ ಆಕರ್ಷಿತನಾಗುತ್ತಿರುವನಲ್ಲ…? ಆಕರ್ಷಿತನಾಗುವುದೆಲ್ಲಿ ಬಂತು, ಸಿಂಡರೆಲ್ಲಾಳ ವಾರದ ಅನುಪಸ್ಥಿತಿಯಲ್ಲಿ ಅವರಿಬ್ಬರೂ ನನ್ನ ತೆಕ್ಕೆಯೊಳಗೆ ಸೇರಿಕೊಂಡು ಸಂಭ್ರಮಿಸಿದ್ದೂ ಆತಲ್ಲ…? ಇಂಗದ ನನ್ನ ದಾಹವನ್ನು ನೆನೆಸಿಕೊಂಡಾಗ ನಾನು ನಿಜವಾಗಿಯೂ ಹೂವಿನಿಂದ ಹೂವಿಗೆ ಹಾರುವ ದುಂಬಿಯೇ ಆಗಿರುವೆನಲ್ಲ? ನಾನೇನು ರಾಜಮಹಾರಾಜರ ವಂಶಸ್ಥನೂ ಅಲ್ಲ. ಯಯಾತಿ ಮಹಾರಾಜನಂತೆ ಹೆಣ್ಣುಬಾಕನಾಗುತ್ತಿರುವೆನಲ್ಲ? ನೂರಾರು ರಾಣಿಯರನ್ನು ಕಟ್ಟಿಕೊಂಡಿದ್ದ ರಾಜಮಹಾರಾಜರುಗಳ ಜೀನ್ಸ್ಗಳೇಕೆ ನನ್ನ ರಕ್ತದಲ್ಲಿ ಸೇರಿಕೊಂಡಿವೆ…? ಒಂದೂ ಅರ್ಥವಾಗುತ್ತಿಲ್ಲ. ನಾನು ಕ್ಯಾಥರೀನ್ ಮತ್ತು ಎಲಿಜಾಬೆಥ್ರ ಜೊತೆಗೆ ಸುಖಿಸಿದ್ದು ಸಿಂಡರೆಲ್ಲಾಳಿಗೆ ಗೊತ್ತಾಗಬಾರದು. ಆದರೆ ಇಂಥಹ ವಿಷಯಗಳು ಹೇಗೋ ಸುದ್ದಿಯಾಗಿಬಿಡುತ್ತವೆ ಗೋಡೆಗಳಿಗೂ ಕಿವಿಗಳಿರುತ್ತವೆ ಎಂಬಂತೆ. ಅದೊಂದು ವೇಳೆ ಇದು ಸಿಂಡರೆಲ್ಲಾಳಿಗೆ ಗೊತ್ತಾಗಿ ರಂಪಾಟ ಮಾಡಿದರೆ…? ಅದನ್ನು ನೆನೆಸಿಕೊಂಡರೇ ನನಗೆ ನಡುಕ ಬರುತ್ತಿದೆಯಲ್ಲ…? ಅವಳ ಅಂಜಿಕೆ ಅಷ್ಟಿದ್ದರೂ ಇಂಥಹ ಭಾನಗಡಿ ಕೆಲಸ ಮಾಡಿದ್ದಾರದೂ ಏಕೆ…? ಹೊಸತನಕ್ಕೆ ತುಡಿಯುವ ಕುತೂಹಲ ಎನ್ನುವ ಸೋಗಲಾಡಿತನ ನನ್ನನ್ನು ಆ ಕೃತ್ಯಕ್ಕೆ ಪ್ರಚೋದಿಸಿತ್ತಲ್ಲವೇ? ಹೌದೌದು, ಅದೂ ನಿಜವೇ. ಅದೂ ಅಲ್ಲದೇ ಮೇಲಾಗಿ ಆ ಹುಡುಗಿಯರೇ ಮುಂದಾಗಿ ನನ್ನ ಮೈಮೇಲೆ ಬಿದ್ದರಲ್ಲ? ಅಲ್ಲದೇ ಇದು ಭಾರತ ಅಲ್ಲವಲ್ಲ? ಅಲ್ಲಿಯೂ ಈಗೀಗ ಮೊದಲಿನ ಬಿಗಿ ಕಟ್ಟುಪಾಡುಗಳು ಒಂದಿಷ್ಟು ಸಡಿಲಾಗಿದ್ದರೂ ವಿದೇಶಗಳಲ್ಲಿ ಗಬ್ಬೆದ್ದಷ್ಟು ಇನ್ನೂ ಗಬ್ಬೆದ್ದಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ. ಈಗೇನು ಮಾಡುವುದು…? ಇನ್ನೂ ಆ ಪ್ರಶ್ನೆಯೇ ಉದ್ಭವಿಸಿಲ್ಲವಲ್ಲ? ಈಗಲೇ ಅದೇಕೆ ಈ ಪರಿ ತೊಳಲಾಡುತ್ತಿರುವಿ? ನನ್ನ ಲೌವ್ಲೀ ಸಿಂಡರೆಲ್ಲಾ ಪ್ರಶ್ನಿಸಿದಾಗ ನೋಡಿಕೊಂಡರಾಯಿತು. ಹೌದೌದು, ಅಷ್ಟೇ ಮಾಡಿದರಾಯಿತು. ಅದಲ್ಲದೇ ಇಂಥಹ ಹಪಹಪಿಯಿಂದ ಆಗಲೇ ನನ್ನೆದೆಯಲ್ಲಿ ಅಪರಾಧಿ ಮನೋಭಾವವೂ ಕಾಡತೊಡಗಿರುವುದೂ ನಿಜ. ಇನ್ಮುಂದೆ ಇಂಥಹುದು ಬೇಡವೇ ಬೇಡ ಎಂದು ಮನಸ್ಸು ಎಚ್ಚರಿಸುತ್ತಿರುವುದೂ ಅಷ್ಟೇ ಸತ್ಯ. ಸಿಂಡರೆಲ್ಲಾ ಒಬ್ಬಳಿಗೇ ನಾನು ಲಾಯಲ್ಲಾಗಿರುವುದು ಒಳ್ಳೆಯದುʼ ಎಂದು ಯೋಚಿಸಿದ ಅಮೋಘ ತನ್ನಷ್ಟಕ್ಕೆ ತಾನೇ ಸಮಾಧಾನಿಸಿಕೊಂಡ.     
                    ****

ಸಂಜೆಯ ಗೋಧೂಳಿಯ ಸಮಯ ಸರಿದು ಆಗಲೇ ಕತ್ತಲಾಗತೊಡಗಿತ್ತು. ಟ್ರ್ಯಾಫಿಕ್ ತುಂಬಾ ಕಡಿಮೆ ಇದ್ದುದರಿಂದ ವೇಗದಲ್ಲಿ ಲಯ ಕಂಡುಕೊಂಡಿದ್ದ ಕಾರಿನ ಜೊತೆಗೆ ಅಮೋಘನ ಮನಸ್ಸಿನ ವೇಗವೂ ಹೆಚ್ಚತೊಡಗಿತು. ಅವನ ಮನಸ್ಸು ಬೆಂಗಳೂರಿನ ಗೆಳತಿ ವೃಷ್ಠಿಯನ್ನು ತಲುಪಿತ್ತು. ಅವನಿಲ್ಲಿಗೆ ಬರುವಾಗ ಬೀಳ್ಕೊಡಲು ಏರ್ಪೋರ್ಟಿಗೆ ಬಂದಿದ್ದ ವೃಷ್ಠಿ ಹೇಳಿದ ಮಾತುಗಳು ಅವನೆದೆಯಲ್ಲಿ ಅನುರಣಿಸತೊಡಗಿದವು. ಅವನ ಮನಸ್ಸು ಹಾಗೇ ನೆನಪಿನ ತುಣುಕುಗಳನ್ನು ಮೆಲುಕು ಹಾಕಲು ಮುಂದಾಯಿತು. ʻಅಮೂ, ಈ ನಿನ್ನ ವೃಷ್ಠಿ ಯಾವಾಗಲೂ ನಿನ್ನ ಜೊತೆಗೇ ಇದ್ದಾಳೆ ಎನ್ನುವುದು ನಿನ್ನ ಹೃದಯ, ಮನಸ್ಸುಗಳೆರಡಕ್ಕೂ ತಿಳಿದಿರಲಿ. ಅಲ್ಲಿನ ಸ್ವೇಚ್ಛಾಚಾರಕ್ಕೆ ನಿನ್ನ ಮೌಲ್ಯಗಳನ್ನು ಕಳೆದುಕೊಳ್ಳಬೇಡ. ಒಂಟಿಯಾಗಿರುವಾಗ ಭುಗಿಲೇಳುವ ದೈಹಿಕ ಕಾಮನೆಗಳನ್ನು ಮನೋಬಲದಿಂದ ಹತ್ತಿಕ್ಕಿಕೊಂಡು ನಿನ್ನತನವನ್ನು ಉಳಿಸಿಕೊಂಡು ಬಾ. ಅಲ್ಲಿನ ಹೆಣ್ಣುಗಳ ಚೆಲ್ಲುಚೆಲ್ಲುತನಕ್ಕೆ ಮನಸ್ಸು ಎಳಸದಂತೆ ನೋಡಿಕೋ. ನೀನೇನಾದರೂ ಲೂಜು ಎಂದು ಗೊತ್ತಾದರೆ ಅಲ್ಲಿಯ ಹುಡುಗಿಯರು ನಿನ್ನ ಯಾಮಾರಿಸಿಬಿಡುತ್ತಾರೆ. ಹುಡುಗಿಯರೇನು ಬಂತು, ಹೆಂಗಸರೂ ಯಾಮಾರಿಸುತ್ತಾರೆಂದು ನಾನು ಕೇಳಿರುವೆ. ಹುಷಾರು. ವೃಷ್ಠಿ ಎಂಬ ಹೆಣ್ಣು ಜೀವ ನಿನಗಾಗಿ ಕಾತರಿಸಿ ಕಾಯುತ್ತಿರುತ್ತದೆ ಎಂಬುದನ್ನು ಮರೆಯಬೇಡ. ನಾನು ಯಾವತ್ತೂ ನಿನ್ನವಳೇ. ನೀನು ಯಾವತ್ತೂ ನನ್ನವನೇ. ನಮ್ಮಿಬ್ಬರವು ಎರಡು ದೇಹಗಳಾದರೂ ಜೀವ ಒಂದೇ ಅಲ್ಲವೇ? ನೀರಲ್ಲಿ ನೀರು, ಹಾಲಲ್ಲಿ ಹಾಲು, ಜೇನಲ್ಲಿ ಜೇನು ಬೆರೆತಂಥಹ ಅನುಪಮ ಸಂಬಂಧ ನಮ್ಮದು. ಎನಿವೇ, ಹ್ಯಾಪಿ ಜರ್ನಿ, ದಿ ಹ್ಯಾಪಿಯೆಷ್ಟ್ ಸ್ಟೇ ಅಂಡ್ ಕಲರ್ಫುಲ್ ಮೂಮೆಂಟ್ಸ್. ಬಿ ಇನ್ ಟಚ್ ವಿಥ್ ಮಿ ಆಲ್ವೇಜ್. ನೀನು ದಿನಾಲೂ ನನ್ನೊಂದಿಗೆ ಫೋನಲ್ಲಿ ಮಾತಾಡದಿದ್ದರೆ ನೀ ಇಲ್ಲಿಗೆ ಬಂದ ಮೇಲೆ ಅದರ ಲೆಕ್ಕ ತೀರಿಸಿಕೊಳ್ಳುತ್ತೇನೆ, ಹುಷಾರ್…!ʼ ಹನಿಗಣ್ಣವಳಾಗಿ ಏರಿಳಿಯುತ್ತಿದ್ದ ತನ್ನ ಉನ್ನತ ಎದೆಯನ್ನು ಅಮೋಘನೆದೆಗೆ ಒತ್ತಿಕೊಂಡು ಅದೆಷ್ಟೋ ಹೊತ್ತು ನಿಂತಿದ್ದು ಈಗಲೂ ಅವನ ಸ್ಮೃಟಿ ಪಟಲದ ಮುಂದೆ ಕೇಕೆಹಾಕಿ ನಗುತ್ತಿತ್ತು. ಅವನ ಪ್ರಾಮಾಣಿಕತೆಯನ್ನು ಕೆಣಕುತ್ತಿತ್ತು. ʻವೃಷ್ಠಿ, ಡೋಂಟ್ ವರಿ. ನಾನು ಯಾವತ್ತೂ ನಿನ್ನವನೇ. ನನ್ನ ಪ್ರೀತಿ ನಿನಗಷ್ಟೇ ಮೀಸಲುʼ ಎಂದಿದ್ದ ಅವಳ ಕಣ್ಣೀರು ಒರೆಸಿ ಮುಂಗುರುಳು ನೇವರಿಸುತ್ತಾ. ಅಗಲಿಕೆಯ ದುಃಖದಲ್ಲಿ ನಗುವನ್ನು ಕಳೆದುಕೊಂಡಿದ್ದ ಅವಳ ಮುಖಾರವಿಂದದಲ್ಲಿ ನಗುವನ್ನು ಅರಳಿಸುವ ಪ್ರಯತ್ನ ಮಾಡಿದ್ದ ಅಮೋಘ.

ಬೆಂಗಳೂರಿನಿಂದ ಬಂದ ಎರಡು ತಿಂಗಳವರೆಗೆ ಅಮೋಘ ಒಂಟಿತನದ ವೇದನೆಯನ್ನು ಹೇಗೋ ನಿಗ್ರಹಿಸಿಕೊಂಡಿದ್ದ. ಆದರೆ ಅದು ಸಾಗಿದ್ದು ಅದೆಷ್ಟು ದಿನ…? ಅಲ್ಲಿನ ಹುಡುಗಿಯರ ಚೆಲ್ಲುಚೆಲ್ಲು ವರ್ತನೆಯಿಂದ ಅವನ ಮನಸ್ಸಿನ ಬಿಗಿತ ಸಡಿಲಾಗಿತ್ತು. ಏನೋ ಮೋಹ, ಏನೋ ದಾಹ ಅವನೆದೆಯೊಳಗೆ ಸಿಡಿಯತೊಡಗಿತು. ಸಿಂಡರೆಲ್ಲಾಳ ಗೆಳತನ, ಆಪ್ತ ಭಾವ, ಅವಳೊಂದಿಗೆಗಿನ ಆತ್ಮೀಯ ಓಡಾಟಗಳಲ್ಲಿ ವೃಷ್ಠಿಯೊಂದಿಗೆ ಕಳೆದಿದ್ದ ಕಲರ್ಫುಲ್ ನೆನಪುಗಳು ಮಸುಕಾಗತೊಡಗಿದವು. ಅಂದು ಸಿಂಡರೆಲ್ಲಾಳಿಗೆ ಸುದಿನ. ಅವಳಿಚ್ಛೆಯಂತೆ ಅಮೋಘ ಅವಳನ್ನು ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡಿದ್ದ. ಮನದಲ್ಲಿ ವೃಷ್ಠಿಯನ್ನು ಜ್ಞಾಪಿಸಿಕೊಳ್ಳುತ್ತಲೇ ಸಿಂಡರೆಲ್ಲಾಳ ಮೈಮನಗಳನ್ನು ತಣಿಸಿದ್ದ. ವೃಷ್ಠಿಯ ಸಾಂಗತ್ಯವಿಲ್ಲದೇ ವಿರಹ ವೇದನೆಯಲ್ಲಿ ಬೇಯುತ್ತಿದ್ದ ಅವನ ಮೈ, ಮನಸ್ಸುಗಳೂ ತಂಪಾಗಿದ್ದವು. ಸಿಂಡರೆಲ್ಲಾ ತನ್ನ ಮನಸ್ಸಿಗಾಗಿದ್ದ ಖುಷಿಯನ್ನು ಅಮೋಘನ ಎದೆಯಲ್ಲಿ ತನ್ನ ಮುಖವಿಟ್ಟು ಹಂಚಿಕೊಂಡಿದ್ದಳು. ʻಅಮೂ, ಆಯ್ ಯಾಮ್ ಸೋ ಹ್ಯಾಪಿ ದಟ್ ಆ ಕಾಂಟ್ ಎಕ್ಸಪ್ರೆಸ್ ಮೈ ಹ್ಯಾಪಿನೆಸ್ ಇನ್ ವರ್ಡ್ಸ್ ದಟ್ ಆಯ್ ಗೇನ್ಡ್ ಫ್ರಮ್ ಯು ಮೈ ಡಿಯರ್. ರಿಯಲೀ, ಯು ಆರ್ ಹಿಮ್ಯಾನ್ ಐ ಸೇ. ಮೈ ಡೀಪೆಸ್ಟ್ ಲವ್ ಟು ಯುʼ ಎಂದೆನ್ನುತ್ತಾ ಸಿಂಡರೆಲ್ಲಾ ಅಮೋಘನನ್ನು ಮನಸೋ ಇಚ್ಛೆ ಮುದ್ದಿಸಿ ಸಂಭ್ರಮಿಸಿದ್ದಳು ಅಂದು. ಅವಳ ಸಂತಸಕ್ಕೆ ಪಾರವೇ ಇರಲಿಲ್ಲ. ಅವಳ ಹೊಗಳಿಕೆಯ ಮಾತುಗಳಿಂದ ಅಮೋಘನ ಮುಖ ಹೂವಂತೆ ಅರಳಲಿಲ್ಲ. ಆ ಕ್ಷಣ ಅಮೋಘ ಒಂಥರ ನಿರ್ಲಿಪ್ತ ಭಾವದಲ್ಲಿ ಇದ್ದ. ಅವಳು ಸುಮ್ಮನಿರಲಿಲ್ಲ. ʻಯಾಕೋ, ಇಂಥ ಸಂತಸ ಅರಳುವ ಸಮಯದಲ್ಲೂ ಒಂಥರ ಇದ್ದೀಯಲ್ಲ, ಅದೇಕೆ…?ʼ ಪಿಸುಗುಟ್ಟಿದ್ದಳು. ತುಸು ಹೊತ್ತಿನವರೆಗೆ ಅವನಿಂದ ಮಾತೇ ಹೊರಡಲಿಲ್ಲ. ಮೌನದಲ್ಲಿ ಇಬ್ಬರೂ ನಿರ್ಲಿಪ್ತ ಭಾವಹೊತ್ತು ಸಮಯ ತಳ್ಳಿದ್ದರು. ಆ ರಸಮಯ ಗಳಿಗೆಯ ಭೋರ್ಗರೆತದಲ್ಲಿ ಅದೆಷ್ಟು ಹೊತ್ತು ನಿರ್ಲಿಪ್ತ ಭಾವದಲ್ಲಿ ಇರಲು ಸಾಧ್ಯ? 
“ಸಿಂಡೂ, ನೀನ್ಹೇಳಿದ ಮಾತುಗಳನ್ನೇ ನನ್ನ ವೃಷ್ಠಿ ನಾನು, ಅವಳು ಮೊದಲ ಸಲ ಒಂದಾದ ಕ್ಷಣಗಳಲ್ಲಿ ಉಲಿದಿದ್ದಳು. ನಾವಿಬ್ಬರೂ ಪರಸ್ಪರ ಮನಸಾರೆ ಪ್ರೀತಿಸಿದೆವು. ಒಬ್ಬರಿಗೊಬ್ಬರು ಬಿಟ್ಟಿರಲಾರದ ಪರಿಸ್ಥಿತಿ ಬಂದಾಗ ಮದುವೆಯಾಗಲೂ ತೀಮಾನಿಸಿಕೊಂಡೆವು. ಪ್ರೀತಿ ಗಟ್ಟಿಯಾದ ಮೇಲೇಕೆ ಅನುಮಾನ ಎಂದುಕೊಂಡು ಈಗಿನ ಲೇಟೆಸ್ಟ್ ಟ್ರೆಂಡಿನಂತೆ ಆ ನಂಬಿಕೆಯಲ್ಲಿ ಪರಸ್ಪರ ಅರ್ಪಿಸಿಕೊಂಡು ಸುಖಿಸತೊಡಗಿದೆವು. ಇದೇ ಸಂದರ್ಭದಲ್ಲೇ ನನಗೆ ಎರಡು ವರ್ಷಗಳ ಈ ಫಾರೆನ್ ಅಸೈನ್ಮೆಂಟ್ ಬಂದಿದ್ದು. ಅವಳು ಬೇಡವೇ ಬೇಡ ಎಂದು ಹಟಹಿಡಿದಿದ್ದಳು. ಹಾಗೊಂದು ವೇಳೆ ನೌಕರಿಗೇ ಕುತ್ತು ಬಂದರೆ ಬೇರೊಂದು ಕೆಲಸ ನೋಡಿಕೊಂಡರಾಯಿತೂ ಎಂದು ವೃಷ್ಟಿ ಧೈರ್ಯ ತುಂಬಿದ್ದಳು. ನಾನೇ ಅವಳಿಗೆ ಹೇಗೋ ಕನ್ವಿನ್ಸ್ ಮಾಡಿದೆ, ಒಪ್ಪಿಸಿದೆ. ನಾನು ನಿನ್ನವನೇ. ಆ ನಂಬಿಗೆ ಇರಲಿ ಎಂದು ಒತ್ತಿ ಒತ್ತಿ ಹೇಳಿದೆ. ಅವಳು ನನ್ನ ಮಾತನ್ನು ನಂಬಿ ನನ್ನ ಬೀಳ್ಕೊಟ್ಟಳು. ಈಗ ನಾನು ಮಾಡಿದ್ದೇನು? ಅವಳ ಮಾತುಗಳನ್ನು ಗಾಳಿಗೆ ತೂರಿಬಿಟ್ಟು ವಿದೇಶಿ ಹುಡುಗಿಯ ಬೆನ್ನು ಹತ್ತಿರುವೆ. ಅವಳಿಗೆ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಲಿಲ್ಲ. ವಿಶ್ವಾಸದ್ರೋಹಿಯಾಗಿಬಿಟ್ಟೆ. ಪ್ರೀತಿಯಲ್ಲಿ ನಂಬಿಕೆ, ವಿಶ್ವಾಸ ಉಳಿಸಿಕೊಂಡಾಗ ಮಾತ್ರ ಪ್ರೀತಿಗೆ ಬೆಲೆ ಅಲ್ಲವೇ? ಆ ಪ್ರೀತಿ, ವಿಶ್ವಾಸಗಳನ್ನು ನಾನು ಬಲಿಕೊಟ್ಟುಬಿಟ್ಟೆನಲ್ಲ? ನಿಮ್ಮ ನೆಲದ ಅನ್ನವನ್ನು ಉಣ್ಣುತ್ತಿರುವ ನಾನೂ ನಿಮ್ಮಂತೆಯೇ ಆಗುತ್ತಿರುವೆನೇನೋ…?” ಅಮೋಘ ತನ್ನ ಮತ್ತು ವೃಷ್ಠಿಯ ಪ್ರೀತಿಯ ಬಗ್ಗೆ ಹೇಳಿದ್ದ. ಅಮೋಘ ತುಸು ಹೊತ್ತು ದುಃಖಿಸಿದ್ದ. ಕಣ್ಣೀರು ಕಪಾಳದಿಂದ ಕೆಳಗಿಳಿದಿದ್ದವು. ಸಿಂಡರೆಲ್ಲಾ ಮೌನಗೌರಿಯಂತೆ ಸುಮ್ಮನೇ ಇದ್ದಳು.     
“ಇದಲ್ಲದೇ ಇನ್ನೂ ಒಂದು ಸ್ವಾರಸ್ಯಕರ ಕಥಾನಕವಿದೆ. ಎಕ್ಚುವಲಿ, ನನ್ನ ಸೋದರಮಾವನ ಮಗಳೇ ನನ್ನ ಮಡದಿ ಎಂದು ಘೋಷಿಸಲ್ಪಟ್ಟಿತ್ತು ಹಿರಿಯರಿಂದ. ಆದರೆ ವೃಷ್ಠಿಯ ಪ್ರೀತಿಯ ಜಾಲದಲ್ಲಿ ಬಿದ್ದಾಗ ಆ ಮಾತುಗಳೂ ಬಿದ್ದು ಹೋದವು. ನನ್ನ ಸೋದರಮಾವನ ಮಗಳು ಬಸವಪೂರ್ಣಾಳೇನು ಕುಂಟಿಯಲ್ಲ, ಕುರುಡಿಯೂ ಅಲ್ಲ. ವೃಷ್ಠಿಗಿಂತಲೂ ಚೆಲುವೆಯೇ. ಆದರೆ ನಮ್ಮಿಬ್ಬರ ಪದವಿಗಳು ಮಿಸ್ಮ್ಯಾಚ್ ಆಗುತ್ತಿದ್ದುದರಿಂದ ಅವಳಿಂದ ದೂರಾದೆ. ಅವಳು ಬಿಎ ಬಿಎಡ್ ಮಾಡಿಕೊಂಡು ಟೀಚರ್ ಆಗಿರುವಳು. ನಾನೋ ಸಾಫ್ಟ್ವೇರ್ ಮನುಷ್ಯ.” ಅಷ್ಟರಲ್ಲಿ ಸಿಂಡರೆಲ್ಲಾಳ ಅಪಾರ್ಟಮೆಂಟ್ ಬಂದಿದ್ದರಿಂದ ಅಮೋಘನ ಯೋಚನಾ ಲಹರಿ ತುಂಡಾಗಿತ್ತು. ನಿಗದಿತ ಜಾಗದಲ್ಲಿ ಕಾರನ್ನು ಪಾರ್ಕಮಾಡಿ ಅವಳ ಮನೆಗೆ ದೌಡಾಯಿಸಿದ್ದ. ಎದೆಯಲ್ಲಿ ಅವಳನ್ನು ಕಾಣುವ ಕಾತುರ ಕುಣಿಯತೊಡಗಿತ್ತು.
                     ****

“ಹಾಯ್ ಸ್ವೀಟೀ, ಹೌ ಆರ್ ಯು…? ರಿಲೇಟಿವ್ಸ್ ನೋಡಿಕೊಂಡು ಯಾವಾಗ ಬಂದಿ?” ಎಂದೆನ್ನುತ್ತಾ ಅಮೋಘ ಅವಳ ನಡು ಬಳಸಿದ. 
“ಮೈ ಲವ್ಲೀ ಹೀರೋ, ಈಗ ಊಟದ ಸಮಯ. ನೀನು ಬಂದೇ ಬರುವಿ ಎಂದು ನಾನು ಊಟಕ್ಕೆ ರೆಡಿಮಾಡಿಟ್ಟುಕೊಂಡಿದ್ದೇನೆ. ತುಂಟಾಟ ಬೇಡ. ಮೊದಲು ಊಟಮಾಡು. ಊಟಮಾಡುತ್ತಾ ಮಾತಾಡೋಣ” ಎಂದೆನ್ನುತ್ತಾ ಸಿಂಡರೆಲ್ಲಾ ಅವನಿಗೆ ತಟ್ಟೆ ಹಾಕಿದಳು. ಇಬ್ಬರೂ ಜೊತೆಯಾಗೇ ಊಟಮಾಡಿದರು. ಒಲಿದ ಜೀವಗಳು ಊಟ ಮುಗಿಸಿ ತೃಪ್ತಿಯಿಂದ ಬೀಗಿದ್ದವು. ಒಂದಿಷ್ಟು ಮಾತುಕತೆಗಳ ನಂತರ ತೊಡರಿಕೊಂಡರು. ಸಂತೃಪ್ತಿಯಿಂದ ಬೀಗಿದರು. ಅಮೋಘ ಅವಳೆದೆಯಲ್ಲಿ ಮುಖವಿಟ್ಟು ಬೀಗಿದ.
“ಅಮೂ, ನೀನೇಕೆ ಹೂವಿಂದ ಹಾರುವ ದುಂಬಿಯಂತಾಗುತ್ತಿರುವಿ…?” ಸಿಂಡರೆಲ್ಲಾ ಅವನ ಮುಂಗುರುಳನ್ನು ತೀಡುತ್ತಾ ಏಕಾಯೇಕಿ ಪ್ರಶ್ನಿಸಿದಾಗ ಅಮೋಘನಿಗೆ ಶಾಕ್ ಆಯಿತು.
“ಸಿಂಡೂ, ನಿನ್ನ ಮಾತಿನ ಅರ್ಥ ನನಗಾಗಲಿಲ್ಲ…?” ಅಮೋಘ ರಾಗವೆಳೆದ.
“ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದಂದುಕೊಳ್ಳುತ್ತದೆಯಂತೆ. ನಿಂದೂ ಅದೇ ಕಥೆ. ಅಲ್ಲಾ, ನಾನೊಂದು ವಾರ ಇಲ್ಲಿ ಇಲ್ಲ ಅಂದಕೂಡಲೇ ನೀನು ಆ ಚಿನಾಲಿ ಎಲಿಜಾಬೆಥ್ಳ ತೆಕ್ಕೆಗೆ ಸೇರಿಕೊಂಡಿದ್ದು ಸರೀನಾ…?”
“ಓಹೋ…! ಇದಾ ವಿಷಯ…? ಧಿಸ್ ಈಜ್ ನಾಟ್ ಎ ಗ್ರೇಟ್ ಕ್ರೈಮ್. ಹೇಗೂ ನೀನಿದ್ದಿಲ್ಲಲ್ಲ, ಅವಳು ಬಯಸಿದಳು. ಒಪ್ಪಿದೆ ಅಷ್ಟೇ. ಅವಳಲ್ಲದೇ ಕ್ಯಾಥರೀನ್ ಸಹ ನನಗೆ ತೊಡರಿಕೊಂಡಿದ್ದು ನಿಜ.”
“ಅಂದರೆ ಅವರು ನನಗಿಂತಲೂ ಚೆಲುವೆಯರೇ…? ನನ್ನಲ್ಲಿ ಇಲ್ಲದ್ದು ಅವರಲ್ಲಿ ಏನಾದರೂ ಸ್ಪೆಶಲ್ ಇದೆಯಾ…?” ಸಿಂಡರೆಲ್ಲಾಳ ಕಣ್ಣುಗಳು ಕೆಂಡ ಕಾರುವಂತಾಗಿದ್ದವು.
“ಹಂಗೇನಿಲ್ಲ ಡಿಯರ್. ಇಟ್ ವಾಜ್ ಜಸ್ಟ್ ಫಾರ್ ಎ ಚೇಂಜ್ ಅಷ್ಟೇ. ನೀನು ಇಷ್ಟ್ಯಾಕೆ ರಾಂಗ್ ಆಗುತ್ತಿರುವಿ…?”
“ಅಂದರೆ ನೀನು ಇಂಡಿಯನ್ ಬಾರ್ನ ಹುಡುಗನಾಗಿ ನಿಮ್ಮ ದೇಶದ ಆಚಾರ, ವಿಚಾರ, ಸಂಸ್ಕಾರಗಳನ್ನು ಗಾಳಿಗೆ ತೂರಿ ಅಡ್ಡದಾರಿಯಲ್ಲಿ ಹೆಜ್ಜೆ ಹಾಕುತ್ತಿರುವಿಯಲ್ಲ, ನಾಚಿಕೆಯಾಗುವುದಿಲ್ಲವೇ…? ನನಗಾಗಿ ವೃಷ್ಠಿಯನ್ನು ಬಿಟ್ಟಿ. ಅವಳಿಗಾಗಿ ಬಸವಪೂರ್ಣಾಳನ್ನು ಬಿಟ್ಟಿ. ಈಗ ಆ ಇಬ್ಬರಿಗಾಗಿ ನನ್ನನ್ನೂ ಬಿಡುವ ಮನಸ್ಸು ಮಾಡಿರುವಿಯಾ ಹೇಗೆ…? ಪಕ್ಕಾ ವಿದೇಶಿಯನಾಗಲು ಹೊರಟಿರುವ ಹಾಗಿದೆ ನಿನ್ನ ವರ್ತನೆ. ಇಷ್ಟು ದಿನಗಳ ನಮ್ಮ ಟೆಂಪೊರೆರಿ ಸಂಬಂಧವನ್ನು ಗಟ್ಟಿಗೊಳಿಸಿ ಇಬ್ಬರೂ ಗಂಡ-ಹೆಂಡತಿಯರಾಗಿ ಪರ್ಮನೆಂಟಾಗಿ ನಮ್ಮ ಜೀವನವನ್ನು ಕಟ್ಟಿಕೊಳ್ಳೋಣ ಎಂದಂದುಕೊಂಡಿದ್ದೆ. ಆದರೆ…?”
“ಹಾಗೇನೂ ತಿಳಿದುಕೊಳ್ಳಬೇಡ ಡಾರ್ಲಿಂಗ್. ಮೊದಲಿನ ಕ್ರೇಜ್ ನನಗೂ ಇಷ್ಟವಾಗುತ್ತಿಲ್ಲ. ಮುಂದೆ ನಾನೆಂದೂ ಇಂಥ ಇಲ್ಲೀಗಲ್ ರಿಲೇಶನ್ಗೆ ಪರಿತಪಿಸುವುದಿಲ್ಲ. ನಿನ್ನಾಣೆ ಸಿಂಡೂ. ನೀನು ನನ್ನವಳು. ನಾನು ನಿನ್ನವನು ಅಷ್ಟೇ” ಎಂದೆನ್ನುತ್ತಾ ಅಮೋಘ ಸಿಂಡರೆಲ್ಲಾಳನ್ನು ತನ್ನೆದೆಗೆ ಒತ್ತಿಕೊಂಡು ಸಮಾಧಾನಿಸತೊಡಗಿದ.
“ಪ್ರಾಮೀಜ್…” ಸಿಂಡರೆಲ್ಲಾ ಅವನೆದೆಯ ಕೂದಲಲ್ಲಿ ಬೆರಳಾಡಿಸುತ್ತಾ ಪ್ರಶ್ನಿಸಿದಳು.
“ಎಸ್ ಡಿಯರ್. ಇನ್ಮುಂದೆ ನಾನೆಂದೂ ವಚನ ಭ್ರಷ್ಟನಾಗಲಾರೆ.” 
“ಓಕೇ ಜಂಟ್ಲಮ್ಯಾನ್. ಇನ್ಮುಂದೆ ಈ ದುಂಬಿ ಕೇವಲ ನನ್ನೆದೆಯ ಮಕರಂದವನ್ನಷ್ಟೇ ಹೀರಬೇಕು.” ಸಿಂಡರೆಲ್ಲಾ ಪಿಸುಗುಟ್ಟಿದಾಗ ಇಬ್ಬರ ಮನಸ್ಸುಗಳು ಹಗುರಾಗಿದ್ದವು. ಬಿಗಿದಪ್ಪುಗೆಯ ಬಂಧ ಇನ್ನೂ ಜೋರಾಯಿತು.

* ಶೇಖರಗೌಡ ವೀ ಸರನಾಡಗೌಡರ್, 
ತಾವರಗೇರಾ-೫೮೩೨೭೯, ತಾ:ಕುಷ್ಟಗಿ, ಜಿ:ಕೊಪ್ಪಳ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಸಿಂಡರೆಲ್ಲಾ”

  1. Raghavendra Mangalore

    ಆಧುನಿಕ ಯುವ ಜನಾಂಗದ ಚೆಲ್ಲು ಚೆಲ್ಲಾಟದ ಬಗ್ಗೆ ಬರೆದ ಕಥೆ ಚೆನ್ನಾಗಿದೆ. ಸಂಸಾರ ಬಂಧಕ್ಕಿಂತ ಲಿವಿಂಗ್ ಟುಗೆದರ್ ಕಡೆಗೆ ಈಗಿನ ಯುವ ಜನಾಂಗ ಇಷ್ಟಪಡುತ್ತಿದೆ. ಇದು ದುರಂತ. ಸರಳವಾದ ಕಥೆ. ಅಷ್ಟೇ ಆಹ್ಲಾದಕರ ನಿರೂಪಣೆ. ಅಭಿನಂದನೆಗಳು ಸರ್

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai