
ಕಾಸರಗೋಡು ಜಿಲ್ಲೆ ಕೇರಳಕ್ಕೆ ಸೇರುವ ಹೊತ್ತಿಗೆ ಡಾ. ರಮಾನಂದ ಬನಾರಿ ಅವರಿಗೆ ಹದಿನಾರರ ಹರೆಯ. ಕನ್ನಡ ಮಾತೆಯ ಕರಗಳಿಂದ ಕಿತ್ತು ಮಲಯಾಳದ ಮಡಿಲಿಗೆ ಗಡಿನಾಡ ಕನ್ನಡಿಗರನ್ನು ಒತ್ತಾಯ ಪೂರ್ವಕ ತಳ್ಳಿದ ದಿವಸಗಳವು. ಯಕ್ಷಗಾನದ ತವರೂರಾದ ಕಾಸರಗೋಡು ಜಿಲ್ಲೆಯ ಪೆರಡಾಲ ಸಮೀಪದ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಹಾಗೂ ಪರಮೇಶ್ವರಿ ಅಮ್ಮನವರ ಸುಪುತ್ರರಾಗಿ ೪. ೬. ೧೯೪೦ರಲ್ಲಿ ಜನಿಸಿದ ರಮಾನಂದ ಬನಾರಿಯವರಿಗೆ ವಿದ್ಯಾಭ್ಯಾಸದ ನಡುವೆಯೂ ಯಕ್ಷಗಾನದಲ್ಲಿ ಆಸಕ್ತಿ. ತಂದೆ ಪ್ರಸಿದ್ಧ ಅರ್ಥಧಾರಿಗಳು. ಮಗನೂ ಅಪ್ಪನಿಗೆ ಸಮಸಮನಾಗಿ ನಿಲ್ಲುವ ಮಟ್ಟಕ್ಕೆ ಅರ್ಥಗಾರಿಕೆಯನ್ನು ರೂಢಿಸಿಕೊಂಡವರು. ಕೀರಿಕ್ಕಾಡಿನ ಬಳಿಕ ಅವರು ಬಂದು ನೆಲೆನಿಂತದ್ದು ದೇಲಂಪಾಡಿಯ ಬನಾರಿಯಲ್ಲಿ. ಮುಂದೆ ತನ್ನ ಹೆಸರಿನ ಜೊತೆಗೆ ಬನಾರಿಯೂ ಸೇರಿಕೊಂಡಿತು.
ಕೇರಳದ ಕ್ಯಾಲಿಕಟ್ ಮೆಡಿಕಲ್ ಕಾಲೇಜಿನಿಂದ ಎಂ.ಬಿ.ಬಿ.ಎಸ್ ಪದವಿ ಪಡೆದ ಬಳಿಕ ಮಂಜೇಶ್ವರದಲ್ಲಿ ನೆಲೆನಿಂತ ಡಾ. ಬನಾರಿಯವರು ಸುಮಾರು ಐವತ್ತೈದು ವರ್ಷಗಳ ಕಾಲ ಪೂರ್ಣ ಪ್ರಮಾಣದ ʻಕುಟುಂಬ ವೈದ್ಯಕೀಯ ವೃತ್ತಿʼಯಲ್ಲಿ ತೊಡಗಿಕೊಂಡರು. ಜನಪ್ರಿಯ ವೈದ್ಯರಾಗಿ ದುಡಿಮೆಗೈಯುವುದರ ಜೊತೆಜೊತೆಗೆ ಸಾರ್ವಜನಿಕ ಜೀವನದಲ್ಲೂ ಯಕ್ಷಗಾನ ಕ್ಷೇತ್ರದಲ್ಲೂ ಕನ್ನಡ ಹೋರಾಟದಲ್ಲೂ ಸಾಹಿತ್ಯ ಸೇವೆಯಲ್ಲೂ ತೊಡಗಿಸಿಕೊಂಡರು. ತಮ್ಮ ಬದುಕಿನ ಪ್ರಮುಖ ಘಟ್ಟಗಳನ್ನಿಟ್ಟುಕೊಂಡು ʻಸವೆಯದ ದಾರಿʼ ಎಂಬ ಆತ್ಮ ವೃತ್ತಾಂತವನ್ನು ರಚಿಸಿದ್ದಾರೆ. ಅದಲ್ಲದೆ ಬೊಗಸೆಗೆ ಬಂದ ಹರಳುಗಳು, ಹಾರಿ ಹೋದ ಹಕ್ಕಿಗಳು, ಭಗವದ್ಗೀತೆ ನಾನು ಕಂಡಂತೆ -ಮುಂತಾದ ಹನ್ನೊಂದು ಗದ್ಯ ಕೃತಿಗಳನ್ನೂ ಅರ್ಥಾಯನ (ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ ಪಡೆದ ಕೃತಿ), ಸಂವಾದ ಭೂಮಿಕೆ ಎಂಬ ಎರಡು ಯಕ್ಷಗಾನ ಸಂಬಂಧೀ ಕೃತಿಗಳನ್ನೂ ಆರೋಗ್ಯಕ್ಕೆ ಸಂಬಂಧಿಸಿದ ಎರಡು ಕೃತಿಗಳನ್ನೂ ಹತ್ತಾರು ಸಂಪಾದಿತ ಕೃತಿಗಳನ್ನೂ ಅವರು ರಚಿಸಿದ್ದಾರೆ.
ಅವರ ಹತ್ತೊಂಬತ್ತು ಕವನ ಸಂಕಲನಗಳಲ್ಲಿ ಎರಡು ಮಕ್ಕಳ ಕವನ ಸಂಕಲನ, ಐದು ಚುಟುಕು ಕವನ ಸಂಕಲನ ಕೂಡ ಸೇರಿಕೊಂಡಿವೆ. ಆರೋಗ್ಯ ಗೀತೆ ಎಂಬುದು ರೋಗಗಳ ಕುರಿತಾದ ವೈದ್ಯಕೀಯ ಕವನ ಸಂಕಲನವಾಗಿದ್ದು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಇದೊಂದು ವಿಶಿಷ್ಟ ಕೊಡುಗೆ.
ಕವಿಗೋಷ್ಠಿಗಳಲ್ಲಿ ಬನಾರಿಯವರ ಕವನ ವಾಚನ ಶೈಲಿ ಯಾವತ್ತೂ ವಿಭಿನ್ನವೆ. ಯಕ್ಷಗಾನದ ಮಾತುಗಾರಿಕೆಯಲ್ಲಿ ಕೂಡ ಅವರದೇ ಆದ ಕಾವ್ಯಾತ್ಮಕ ಶೈಲಿ. ಅರ್ಥಗಾರಿಕೆ ಬನಾರಿಯವರಿಗೆ ವಿಶೇಷ ಗೌರವವನ್ನು ತಂದುಕೊಟ್ಟಿದೆ. ಅವರೊಬ್ಬ ಮುಂಚೂಣಿಯ ಅರ್ಥಧಾರಿ, ವಾಗ್ಮಿ.
ಕನ್ನಡ ಪರ ಹೋರಾಟಗಳಲ್ಲೂ ನೆರವಿಗೆ ಬಂದದ್ದು ಅವರ ಮಾತುಗಾರಿಕೆಯೆ. ಕಾಸರಗೋಡನ್ನು ಭಾಷಾವಾರು ಪ್ರಾಂತ ರಚನೆಯ ಸಂದರ್ಭದಲ್ಲಿ ಕೇರಳಕ್ಕೆ ಸೇರಿಸಿದಾಗ ಕನ್ನಡಿಗರಿಗೆ ಉಸಿರುಗಟ್ಟುವ ಸಂದರ್ಭ ಒದಗಿಬಂದಿತ್ತು. ಇತರ ನಾಯಕರೊಂದಿಗೆ ಸೇರಿಕೊಂಡು ಡಾ.ಬನಾರಿಯವರು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲೆಂದು ನಡೆಸಿದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘವನ್ನು ಸಮಾನ ಮನಸ್ಕರೊಂದಿಗೆ ಸೇರಿ ಸುಮಾರು ೪೫ ವರ್ಷಗಳ ಹಿಂದೆಯೇ ಕಟ್ಟಿ ಬೆಳೆಸಿದರು. ಆ ಮೂಲಕ ʻಸಾಹಿತ್ಯ ಧ್ವನಿʼ ಎಂಬ ಹೆಸರಿನ ಕಾಸರಗೋಡಿನ ಸಮಗ್ರ ಲೇಖಕರ ಪರಿಚಯ ಗ್ರಂಥವನ್ನು ಹೊರತಂದರು.
ಗಡಿನಾಡಿನ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದರು. ಎಡನೀರು ಮಠದ ಅನುಯಾಯಿಯಾಗಿ ಅಲ್ಲಿನ ಭಾರತೀ ಕಲಾ ಸದನದ ಸದಸ್ಯರಾಗಿ ಕಲೆಯ ಪೋಷಕರಾದರು. ಬನಾರಿ ಗೋಪಾಲ ಕೃಷ್ಣ ಯಕ್ಷಗಾನ ಕಲಾಸಂಘದ ಮತ್ತು ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷರಾಗಿ ಯಕ್ಷಗಾನ ಸಂಶೋಧನೆಗೆ ಒತ್ತುಕೊಟ್ಟರು. ʻತಿಂಗಳ ಬೆಳಕುʼ ಎಂಬ ಕಾರ್ಯಕ್ರಮವನ್ನು ಕಾಸರಗೋಡಿನ ಉದ್ದಗಲಗಳಲ್ಲಿ ಹಲವು ತಿಂಗಳುಗಳ ಕಾಲ ಏರ್ಪಡಿಸಿದರು. ಕಾಸರಗೋಡಿನ ಸಮಸ್ಯೆಗೆ ʻಕರ್ನಾಟಕದೊಂದಿಗೆ ಸಾಂಸ್ಕೃತಿಕ ವಿಲೀನೀಕರಣʼ ಎಂಬ ಪರಿಹಾರ ಪ್ರಕಲ್ಪವನ್ನು ನಿರಂತರ ಪ್ರತಿಪಾದಿಸುತ್ತಾ ಬಂದರು. ಇದೀಗ ʻಕನ್ನಡಿಯಲ್ಲಿ ಕನ್ನಡಿಗʼ ಎಂಬ ಹೆಸರಿನ ಸಂಪುಟಗಳನ್ನು ಅದರ ಪ್ರಧಾನ ಸಂಪಾದಕರಾಗಿ ಹಾಗೂ ಪಾಯೋಜಕರಾಗಿ ಸಿದ್ಧಗೊಳಿಸುತ್ತಿದ್ದಾರೆ. ಆ ಮೂಲಕ ಕಾರಗೋಡಿನ ಪ್ರತಿಯೊಬ್ಬ ಕನ್ನಡ ಸಾಹಿತಿಯೂ ದಾಖಲೀಕರಣಗೊಳ್ಳುತ್ತಿದ್ದಾನೆ.
ಬನಾರಿಯವರು ವಿವಿಧ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಗೆ ತಕ್ಕ ಗೌರವವೂ ಸಂದಿವೆ. ಪ್ರಮುಖವಾಗಿ ಡಾ.ರಮಾನಂದ ಬನಾರಿಯವರಿಗೆ ಕರ್ನಾಟಕ ಸರಕಾರ ಕೊಡಮಾಡುವ ಪ್ರೊ. ಬಿ. ಜಿ. ಬಣಗಾರ ಗಡಿನಾಡು ಸಾಹಿತ್ಯ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕೇರಳದ ಐ.ಎಮ್.ಎ. ಯ ʻಶ್ರೇಷ್ಠ ಕುಟುಂಬ ವೈದ್ಯ ಪ್ರಶಸ್ತಿʼಯೂ ಅವರಿಗೆ ಸಂದಿದೆ. ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ಕಿಲ್ಲೆ, ಪೊಳಲಿ, ಶೇಣಿ, ದೇರಾಜೆ, ಪೆರ್ಲ ಮೊದಲಾದವರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ಪ್ರಶಸ್ತಿಗಳೆಲ್ಲವೂ ಬನಾರಿ ಅವರಿಗೆ ಸಂದಿವೆ. ಡಾ.ಪಿ ಎಸ್ ಶಂಕರ ಪ್ರತಿಷ್ಠಾನದ ಶ್ರೇಷ್ಠ ವೈದ್ಯಕೀಯ ಸಾಹಿತ್ಯ ಪ್ರಶಸ್ತಿ, ಗೋವಿಂದ ಪೈ ಪ್ರಶಸ್ತಿ ಇತ್ಯಾದಿ ಹಲವು ಪ್ರಶಸ್ತಿಗಳು ಅವರನ್ನು ಕಾಸರಗೋಡಿನ ಹೆಮ್ಮೆಯ ಕನ್ನಡಿಗನನ್ನಾಗಿ ರುಜುವಾತುಗೊಳಿಸಿವೆ.
ವೈದ್ಯಕೀಯ ವೃತ್ತಿ, ಯಕ್ಷಗಾನ ಅರ್ಥಗಾರಿಕೆ, ಕನ್ನಡ ಪರ ಹೋರಾಟ, ಕನ್ನಡ ಸಾಹಿತ್ಯ ರಚನೆ – ಹೀಗೆ ವಿವಿಧ ಮಜಲುಗಳಲ್ಲಿ ದುಡಿಮೆಗೈದ ಡಾ. ರಮಾನಂದ ಬನಾರಿಯವರಿಗೆ ಇದೇ ಜೂನ್ ೪ಕ್ಕೆ ಎಂಬತ್ತೈದು ವಸಂತಗಳು ತುಂಬಿ ಮೊರೆಯುವುದು. ಗಡಿನಾಡಾದ ಕಾಸರಗೋಡಿನ ಹೆಮ್ಮೆಯ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ನೂರು ನಮನಗಳು.
* ಡಾ. ನಾ. ದಾಮೋದರ ಶೆಟ್ಟಿ.








1 thought on “`ಅರ್ಥ’ವತ್ತಾದ ಬದುಕು: ಡಾ. ಕೆ. ರಮಾನಂದ ಬನಾರಿ-೮೫”
ಹಿರಿಯರಿಗೂ ಕಿರಿಯರಿಗೂ ಸ್ಫೂರ್ತಿಯ ಚಿಲುಮೆಯಂತಿರುವ ಬನಾರಿಯವರ ವೃತ್ತಿ, ಪ್ರವೃತ್ತಿಯ ಯಶೋಗಾಥೆ ಬಣ್ಣನೆಗೆ ನಿಲುಕದ್ದು. ಜನುಮದಿನದ ಶುಭಾಶಯಗಳು.