ಇವರಿಗೂ ರಜೆ ಕೊಡಬಾರದೇ?

ರಜೆ… ರಜೆ… ರಜೆ… ನನಗೂ ರವಿವಾರದ ರಜೆ, ಅಪ್ಪನಿಗೂ ರವಿವಾರದ ರಜೆ, ಅಣ್ಣನಿಗೂ ರಜೆ, ಮನೆಗೆಲಸದವಳಿಗೂ ರಜೆ… ಆದರೆ ಅವ್ವನಿಗೆ ಎಲ್ಲಿ ರಜೆ? ಅಜ್ಜಿಗೆಲ್ಲಿ ರಜೆ? ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸಂವಿಧಾನಾತ್ಮಕವಾಗಿ ರಜೆ ಸಿಕ್ಕುತ್ತದೆ. ಅವ್ವನ ಕೆಲಸ ಕೆಲಸವಲ್ಲವೇ? ಅಜ್ಜಿ ಕೆಲಸ ಕೆಲಸವಲ್ಲವೇ? ಉದ್ಯೋಗ ಮಾಡುವ ಪ್ರತಿಯೊಬ್ಬರಿಗೂ ರಜೆ ಪಡೆಯುವುದು ಅವರ ಹಕ್ಕು. ಮನೆ ಮನೆಗೆ ಒಂದೊಂದು ಬಗೆಯ ಸಂವಿಧಾನವಿರುತ್ತದೆ. ಕೆಲಸ ಮಾಡುವವರಿಗೆ ವಿಶ್ರಾಂತಿಗಾಗಿ ರಜೆಯ ಹಕ್ಕು ಇದ್ದೇ ಇರಬೇಕಲ್ಲವೆ? ಇದು ಬರೆದಿಟ್ಟ ಸಂವಿಧಾನವಲ್ಲದಿದ್ದರೂ ಮಾನವೀಯತೆಯ ಸಂವಿಧಾನವೊಂದರಲ್ಲಿ ಅಲಿಖಿತವಾಗಿ ಬರೆದಿಟ್ಟ ನೀತಿ ನಿಯಮಗಳಿವೆ. ಇದರ ಪರಿದಿಯಲ್ಲಿ ದಿನವಿಡಿ ದುಡಿದ, ಜೀವನವಿಡಿ ದುಡಿದ ಅವ್ವನಿಗಾಗಲಿ, ಅಜ್ಜಿಗಾಗಲಿ ವಿಶ್ರಾಂತಿಯನ್ನು ನಾವು ಕೊಡಬೇಕು.

ಅಂದಹಾಗೆ ರಜೆ ಎಂದರೆ ನನ್ನದೇ ವ್ಯಾಖ್ಯೆಯಲ್ಲಿ ಹೇಳಬೇಕೆಂದರೆ ನಮ್ಮ ನಮ್ಮ ಮನೋಧರ್ಮಗಳಿಗೆ ಅನುಸರಿಸಿ ರಜೆಯ ಕಾರ್ಯಕ್ರಮಗಳನ್ನು ರೂಪಿಸಬಹುದು. ಆದರೆ ಅವ್ವನಿಗೆ, ಅಜ್ಜಿಗೆ ವಯಸ್ಸಾದದ್ದರಿಂದ ರಜೆಯ ದಿನವನ್ನು ಭಿನ್ನವಾಗಿ ರೂಪಿಸಬೇಕಾಗುತ್ತದೆ. ಸಾಧ್ಯವಾದಷ್ಟು ಅವರಿಂದ ಯಾವುದೇ ಮನೆಗೆಲಸವನ್ನು ಮಾಡಿಸದಂತೆ ನೋಡಿಕೊಳ್ಳಬೇಕು. ಅವರು ಇಷ್ಟಪಡುವ ಸ್ಥಳಕ್ಕೆ ನಾವು ಕರೆದೊಯ್ಯೋಬಹುದು. ಅದು ದೇವಸ್ಥಾನವೇ ಆಗಿರಲಿ, ಪ್ರಕೃತಿ ಸೌಂದರ್ಯದ ತಾಣವೇ ಆಗಿರಲಿ ಅಥವಾ ಮಗನ, ಮಗಳ ಊರೇ ಆಗಿರಲಿ ನಾವೇ ಕೈ ಹಿಡಿದು ಕರೆದುಕೊಂಡು ಹೋಗಬೇಕು. ಇಲ್ಲವೇ ಅವರ ಹಳೆಯ ಸ್ನೇಹಿತ, ಸ್ನೇಹಿತೆಯರ ಮನೆಗೂ ಕರೆದೊಯ್ಯಬೇಕು. ಅಲ್ಲಿ ಅವರು ತಮ್ಮ ಹಳೆಯ ನೆನಪಿನ ಗಂಟನ್ನು ಬಿಚ್ಚಿ ಕುಳಿತು ಮನಸ್ಸಾರೆ ಮಾತನಾಡಲು ಅವಕಾಶವನ್ನು ಕಲ್ಪಿಸಬೇಕು. ನಮ್ಮ ಅವ್ವಂದಿರು, ನಮ್ಮ ಅಜ್ಜಿಯರು ಎಂದಿಗೂ ತಮ್ಮ ಆಸೆ, ಅಭಿಲಾಸೆಗಳನ್ನು ಹೊರಹಾಕಲು ಇಷ್ಟ ಪಟ್ಟವರಲ್ಲ. ಹರೆಯದ ಮಕ್ಕಳಾದ ನಾವು ನಮ್ಮ ಅಜ್ಜಿ, ನಮ್ಮ ಅವ್ವ ಬಯಸಿದಂತೆ ಅವರ ತವರಿನಲ್ಲಿರುವ ತಮ್ಮನ ಮನೆಗೋ, ತಂಗಿಯ ಮನೆಗೋ ಕರೆದೊಯ್ದು ನಾಲ್ಕು ದಿನ ಇದ್ದು ಬಾ ಎನ್ನಬೇಕು. ಹೀಗೆಯೇ ಸಿಗಬೇಕು ನಮ್ಮ ಹಿರಿಯರಿಗೆ ರಜೆ! ಇಂದಿನ ದಿನಗಳಲ್ಲಿ ಅವರನ್ನು ಯಾವುದೋ ಒಂದು ರೆಸ್ಟೋರೆಂಟಿಗೆ ಕರೆದೊಯ್ಯೋಣ. ಅಥವಾ ಅವರಿಗೆ ಒಂದು ಸಿನೇಮಾ ತೋರಿಸೋಣ. ಇಲ್ಲವೇ ಒಂದು ಸಾಹತ್ಯಿಕ ಕಾರ್ಯಕ್ರಮಕ್ಕೋ ಸಂಗೀತದ ಕಾರ್ಯಕ್ರಮಕ್ಕೋ ಕರೆದೊಯ್ಯೋಣ. ಹೊರ ಜಗತ್ತಿನ ಹೊಸ ಅನುಭವಗಳ ಬಣ್ಣದ ಬದುಕನ್ನು ಪರಿಚಯಿಸುವ ಮೂಲಕ ಅವರಿಗೊಂದು ಪರ್ಯಾಯ ಪ್ರಪಂಚವನ್ನು ಪರಿಚಯಿಸುತ್ತ ಅವರ ತಿಳಿವಿನ ಆಳ ವಿಸ್ತಾರಗಳನ್ನು ಹೆಚ್ಚಿಸೋಣ.

ಸುಮಾರು ದಿನಗಳ ಹಿಂದೆ ಒಂದು ದಿನ ರಾತ್ರಿ ತನ್ನ ಪರೀಕ್ಷೆಯನ್ನು ಮುಗಿಸಿ ಬಂದ ನನ್ನ ಹರೆಯದ ಮಗಳು ಎಂದಿನಂತೆ ನನ್ನ ಹಾಸಿಗೆಯಲ್ಲಿ ಉರುಳಿಕೊಂಡು ತನ್ನ ಕಾಲನ್ನು ನನ್ನ ಮೇಲೆ ಹೇರುತ್ತಾ ಹೇಳಿದಳು “ಅವ್ವಾ ಪರೀಕ್ಷೆಯನ್ನಂತೂ ಮುಗಿಸಿದ್ದೇನೆ. ಈ ಸಲ ನನ್ನ ಪ್ರೀತಿಯ ಗೆಳತಿ ಸುಮಾನ ಊರಿಗೆ ಹೋಗಬೇಕು ಎನ್ನಿಸಿದೆ. ನೀನು ಅಪ್ಪಣೆ ಕೊಡುತ್ತೀಯಾ?” “ಹೋಗಿ ಬಾ ಕೂಸೆ. ನಾಲ್ಕು ದಿನ ಯಾಕೆ ಸಾಕಾಗುವರೆಗೂ ಇದ್ದು ಬಾ.” ತನ್ನ ಸಂಪೂರ್ಣ ಅನುಮತಿಯನ್ನು ತಿಳಿಸಿದ ಅವ್ವನಿಗೆ “ನಿನಗೊಂದು ಪ್ರಶ್ನೆಯನ್ನು ಕೇಳ ಬೇಕೆಂದಿದ್ದೇನೆ. ನಿನಗೂ ಸ್ನೇಹಿತರು, ಸ್ನೇಹಿತೆಯರು ಇರಬಹುದಲ್ಲ? ಅವರ ನೆನೆಪು ಆಗುವುದಿಲ್ಲವೇ?” “ಯಾಕಾಗುವುದಿಲ್ಲ, ನನ್ನ ಬಾಲ್ಯದ ನಾಲ್ಕು ಜನ ಗೆಳತಿಯರಲ್ಲಿ ಇಬ್ಬರು ಹೊರಟು ಹೋಗಿದ್ದಾರೆ. ಉಳಿದ ಇಬ್ಬರು ನನಗೆ ಆಗಾಗ ಫೋನ್ ಮಾಡುತ್ತಲೇ ಇರುತ್ತಾರೆ. ನಾನು ನನ್ನ ಈ ಮನೆಗೆಲಸ ಬಿಟ್ಟು ಹೇಗೆ ಹೋಗಬೇಕು ಮಗಳೆ. ಹೀಗೆ ನನ್ನ ಆಸೆಯನ್ನು ಮೊಟಕುಗೊಳಿಸಿದ್ದೇನೆ.” “ಹೌದಾ ಏಕಮ್ಮ ಆ ನಿನ್ನ ಗೆಳತಿಯರನ್ನು ಕಾಣುವ ಮನಸ್ಸನ್ನು ಮಾಡುವುದಿಲ್ಲ? ಈ ಜಗತ್ತಿನಲ್ಲಿ ಅತ್ಯಂತ ಮಧುರವಾದ ಸಂಬಂಧವೆಂದರೆ ಗೆಳೆತನದ್ದು. ಅದು ದೇವರು ಮನುಷ್ಯನಿಗೆ ಕೊಟ್ಟ ವರ! ಈ ಸಲವಾದರೂ ನಿನ್ನ ಆ ಗೆಳತಿಯರನ್ನು ಕಾಣಲೇಬೇಕು” ಎಂದಳು. “ಹ್ಯಾಗವ್ವಾ ನಾನು ಹಾಗೆ ಹೋದರೆ ನಿಮ್ಮನ್ನೆಲ್ಲಾ ನೋಡಿಕೊಳ್ಳುವವರು ಯಾರು?” “ಓ… ಈ ಕಾರಣವೇ ನಾನೇನು ಸಣ್ಣವಳೇನು? ನನಗೆ ಕೆಲಸ ಬರುವುದಿಲ್ಲವೇ? ನಿನ್ನನ್ನು ಅವಲಂಬಿಸಿ ನಾನೆಷ್ಟು ದಿನ ಬಾಳಬೇಕು? ನನ್ನ ಈ ಸಲದ ರಜೆಯನ್ನು ನಿನಗಾಗಿ ಬಳಸಿಕೊಳ್ಳುತ್ತೇನೆ. ಆ ನಿನ್ನ ಗೆಳತಿಯರ ಮೊಬೈಲ್ ನಂಬರ್ ಕೊಡು ಫೋನ್ ಮಾಡುತ್ತೇನೆ” ಎಂದಾಗ ಅವ್ವನ ಕಣ್ಣಲ್ಲಿ ಆನಂದಭಾಷ್ಪಗಳು ತುಂಬಿಕೊಂಡವು.

ಆನಂತರ ನನ್ನ ಮಗಳು ಹೇಳಿದಂತೆ ಪರಿವಾರವೆಂಬ ಪಂಜರದಿಂದ ಹಕ್ಕಿಯಂತೆ ಹಾರಿ ಆಕಾಶಕ್ಕೆ ವಿಹರಿಸತೊಡಗಿದೆ. ಆಕೆ ಹೇಳಿದಂತೆ ಏಕತಾನತೆಯ ಜೀವನವನ್ನು ತೊರೆದು ಆಚೆಗಿದ್ದ ಬದುಕಿನ ಅನುಭವಗಳನ್ನು ಪಡೆಯಲು ಹವಣಿಸತೊಡಗಿದೆ. ನನಗೆ ಗೆಳತಿಯರಲ್ಲದೇ ವೃದ್ಧರಾದ ಸ್ನೇಹಿತರೂ ಇದ್ದಾರೆ. ಅವರನ್ನೂ ಕರೆದುಕೊಂಡು ಭೋಜನಾಲಯಕ್ಕೆ ಹೋಗತೊಡಗಿದ್ದೇನೆ. ಅಲ್ಲಿ ಹರಟುತ್ತಾ ನಗುತ್ತಾ, ಕೆಲೆವುತ್ತಾ ಊಟ ಮಾಡುತ್ತೇನೆ. ಎಲ್ಲ ಹಳೆಯ ನೆನಪುಗಳು ನೆನಪಿಸಿಕೊಳ್ಳುತ್ತೇನೆ. ಇಂದಿನ ಕುಟುಂಬ ಪರಿಧಿಯಲ್ಲಿ ಹಿರಿಯರಾದ ಅಜ್ಜಿ-ಅಜ್ಜ, ಅವ್ವ-ಅಪ್ಪಂದಿರನ್ನು ನೋಡಿಕೊಳ್ಳುವ ಕುಟುಂಬಗಳು ಕಡಿಮೆಯಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಗಿಡಕ್ಕೆ ಬೇರಿನ ಅಗತ್ಯ ಎಷ್ಟಿದೆಯೋ ಅಷ್ಟೇ ಕುಟುಂಬಕ್ಕೆ ಹಿರಿಯರ ಅಗತ್ಯವಿದೆ. ಪುಸ್ತಕೀಯ ಜ್ಞಾನವನ್ನು ಶಾಲಾ ಗುರುಗಳು ಕೊಟ್ಟರೆ, ಬದುಕಿನ ಅರಿವನ್ನು ಹಿರಿಯರು ಕೊಡುತ್ತಾರಾದ್ದರಿಂದ ಮನೆಯೊಳಗೆ ಹಿರಿಯರು ಬೇಕು. ಅವರನ್ನು ನಮ್ಮ ಸೇವಕನ್ನಾಗಿಸಿಕೊಳ್ಳುವ ಬದಲಾಗಿ ಅವರು ಬಯಸುವ ಸ್ವತಂತ್ರ ಮನೋಧರ್ಮದ ಜಗತ್ತಿನೆಡೆಗೆ ರಜೆ ಕೊಟ್ಟು ಕರೆದೊಯ್ಯೋಣ. ನಮ್ಮ ಪರಿವಾರಗಳಲ್ಲಿಯ ತರುಣ-ತರುಣಿಯರು ಇದನ್ನು ತಮ್ಮ ಕರ್ತವ್ಯವೆಂದು ಅರಿತುಕೊಳ್ಳುವ ಅಗತ್ಯವು ಇಂದು ತುಂಬಾ ಇರುತ್ತದೆ.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಇವರಿಗೂ ರಜೆ ಕೊಡಬಾರದೇ?”

  1. Raghavendra Mangalore

    ಪುಟ್ಟ ಹಾಗೂ ಸರಳ ಬರಹ…ತುಂಬಾ ಚೆನ್ನಾಗಿದೆ

  2. ಮೊದಲು ಟಿವಿ ,ಆಕಾಶವಾಣಿ ಮತ್ತು ಮೊಬೈಲ್ ಇದ್ದಿದಿಲ್ಲ .
    ಆಗಿನ ತಾಯಿ ಮತ್ತು ಅಜ್ಜಿಯರಿಗೆ ಮನೆಯೇ ಸ್ವರ್ಗ ವಾಗಿತ್ತು .
    ಮಕ್ಕಳ ಸೂಟಿ ಆದಮೇಲೆ ತಮ್ಮ ಮೂಲ ಊರಿಗೆ ೨-೩ ತಿಂಗಳು
    ಹೋಗುತಿದ್ದರು .ಒಂದು ಕುಟಂಬದಲ್ಲಿ ೭-೮ ಮಕ್ಕಳು ಇರುತ್ತಿದ್ದರು .
    ಈಗ ದೇವರು ಮೊಬೈಲ್ ,ಟಿವಿ ಯು-ಟ್ಯೂಬ್ ದಲ್ಲಿ ಇಷ್ಟು ಮೈ ಮೆರತು ಹೋಗಿದ್ದಾರೆ ಅಂದರೆ ,ಅವರಿಗೆ ಯಾರು ಬೇಡ !!!!
    ಇಂತಹ ಕಾಲದಲ್ಲಿ , ತಾಯಿ-ತಂದೆ ವಯಸ್ಸು ಆದಮೇಲೆ ವೃದ್ಧಶ್ರಮ
    ದಲ್ಲಿ ಕಾಲು ಉರುತ್ತಾರೆ .ಭಾರತ ದೇಶ್ ೨೦೪೫ ದಲ್ಲಿ ೭೦% ವೃದ್ಧ
    ದೇಶ್ ವಾಗುತದ್ದೆ . ನಿಮ್ಮ ಕಲ್ಪನೆ ಒಂದು ಕನಸಾಗಿದೆ . ನನಸಾದರೆ
    ನಿಮಗೆ ಕೋಟಿ ಕೋಟಿ ನಮಸ್ಕಾರ ಗಳು .

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai