ಮುಸ್ಸಂಜೆ ವಾಯು ವಿಹಾರಕ್ಕೆoದು ರಸ್ತೆಗಿಳಿದ ನನಗೆ ಇಂದೇಕೋ ನಮ್ಮ ಮನೆಯ ಗಡಿ ದಾಟಿ ಎರಡು ಹೆಜ್ಜೆ ಮುಂದಿಡುವ ಮನಸ್ಸಾಯ್ತು!
ಎರಡು ಮೂರು ದಿನಗಳಿಂದ ಮೇಲಿಂದ ಮೇಲೆ ಮಳೆ ಬಿದ್ದು, ನೆಲವೆಲ್ಲ ತೋಯ್ದು ಹದವಾಗಿ ವಾತಾವರಣವೂ ತುಸು ತಂಪಾಗಿತ್ತು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಬೀಸಿ ಬಂದ ಕುಳಿರ್ಗಾಳಿಯೊಡನೆ ದುಂಡು ಮಲ್ಲಿಗೆಯ ಕಂಪಿನ ನೆನಪು ರಪ್ಪನೆ ನಾಸಿಕಕ್ಕೆ ಬಡಿದಂಗೆ ಆಯ್ತು ! ಆ ಪರಿಮಳದ ಗುಂಗಲ್ಲೇ ಪಕ್ಕದಲ್ಲಿದ್ದ ತಗ್ಗಿನ ಮನೆ ಕಡೆಗೆ ಕಣ್ಣಾಡಿಸಿದೆ. ಆದರೆ… ಆ ಜಾಗದಲ್ಲಿ ಇಷ್ಟು ವರುಷದಂತೆ ಗೊಬ್ಬರದ ಗಿಡದ ಉದ್ದುದ್ದ ಗೂಟಕ್ಕೆ ಬಿಗಿದ ಮುಳ್ಳು ತಂತಿ ಬೇಲಿಯಾಗಲಿ, ಬುಡದಲ್ಲಿ ಕಾನು ಮಣ್ಣಿನ ಸಾರಕ್ಕೆ ಸೊಕ್ಕಿ ಹಬ್ಬಿದ ದುಂಡು ಮಲ್ಲಿಗೆ ಬಳ್ಳಿಯಾಗಲಿ ಕಣ್ಣಿಗೆ ಬೀಳಲಿಲ್ಲ. ಬದಲಿಗೆ ಅಗಲದ ಚರಂಡಿ ಹೊದ್ದಿಗೆ ಚೀನಾ ಗೋಡೆಯಂತೆ ಎದ್ದು ನಿಂತ ಆಳೆತ್ತರದ ಸಿಮೆಂಟಿನ ಕಾಂಪೌಂಡ್, ಅದಕ್ಕೊಪ್ಪುವಂತೆ ವಿನ್ಯಾಸ ಮಾಡಿದ ಕಬ್ಬಿಣದ ಗ್ರಿಲ್ಲಿನ ದೊಡ್ಡ ಗೇಟ್ ಕಣ್ಣಿಗೆ ಕೋರೈಸುತ್ತಿತ್ತು. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ನಿರಾಸೆಯಿಂದ ಬೆನ್ನು ತಿರುಗಿಸುತ್ತಿದ್ದೆ, ಮಾರು ದೂರದಲ್ಲಿ ಕಿಕಿಕ್ ….ಕಿರ್ರ್ ಎಂಬ ಹಾರ್ನ್ ನೊಂದಿಗೆ “ಸುಮಕ್ಕಾ…. “ಎಂಬ ರಾಗದ ಸ್ವರ ಕೇಳಿಬಂತು.ದನಿ ಕೇಳಿದತ್ತ ಕತ್ತು ವಾಲಿಸಿದಾಗ ಕಂಡದ್ದು ಅಂಬ್ರೆಲಾ ಚೂಡಿದಾರ್ ತೊಟ್ಟು ದುಂಡನೆಯ ಮುಖಕ್ಕೆ ಕೂಲಿಂಗ್ ಗ್ಲಾಸ್, ಮತ್ತು ಹೆಲ್ಮೆಟ್ ಧರಿಸಿ ತನ್ನ ಕೆಂಪನೆ ಜೂಪಿಟರ್ ಗೆ ಒರಗಿ ನಿಂತ ತಗ್ಗಿನ ಮನೆ ಸೊಸೆ ಹೇಮ!
“ಕತ್ತಲಾಗಿ ಹೋಯಿತಲ್ಲ ಇನ್ನೊಂದಿನ ಬರ್ತೇನೆ ಆಯ್ತಾ” ಎಂದು ನಾ ಹೇಳುವಷ್ಟರಲ್ಲಿ “ಅಕ್ಕ…. ನಾಳೆ ನಮ್ಮ ಅತ್ತೆ ತಿಥಿ. ನೀವೆಲ್ಲರೂ ತಪ್ಪದೆ ಬರಬೇಕು ಮತ್ತೆ ನೆನಪಿರಲಿ. ನನ್ನವರು ಕರೆಯಲು ಬರುತ್ತಾರೆ” ಎಂದಳು.
ನಾಳೆಯೇ ಎಂದ ಮೇಲೆ ನನ್ನಿಂದಾಗುವ ಯಾವುದಾದ್ರೂ ಕೆಲಸವಿತ್ತೋ ಏನೋ ಆದರೆ ‘ತಿಥಿ’ ಶಬ್ಧ ಕೇಳುವಾಗ ತುಂಗತ್ತೆಯ ಕೊನೆಯ ಭೇಟಿಯ ಆ ದಿನವನ್ನು ನೆನೆದು ಮನಸೇಕೋ ಭಾರವಾಯಿತು. “ಹೂಂ” ಗುಡುತ್ತಲೇ ಮನೆ ಕಡೆ ಸರಸರ ನಡೆದು ಬಂದು ಬಿಟ್ಟೆ.
ತುಂಗತ್ತೆ ಸತ್ತು ಆಗಲೇ ಐದು ವರ್ಷ ಕಳೆದು ಹೋಯಿತು ಎಂಬ ವಿಷಾದ ಭಾವ ಮನದಲ್ಲಿ ಮೂಡುವಾಗ ಇನ್ನೇನು.. ‘ನೀನೂ ಬದುಕಿನ ಮಧ್ಯಾಹ್ನಕ್ಕೆ ಕಾಲಿಡುವ ಸಮಯವೂ ಬಂದೇ ಬಿಟ್ಟಿತೆಂದು’ ಸುಪ್ತ ಮನಸ್ಸು ಎಚ್ಚರಿಸಿತ್ತು.
ಇದೇ ರೀತಿ ಬೇಸಿಗೆಯ ಅಬ್ಬರದ ಕಾಲವದು.ಹಾಗೆಯೇ ಪ್ರಕೃತಿ ನಿಯಮದಂತೆ ಒಂದೆರಡು ಮಳೆಯಾಗುತ್ತಿದ್ದಂತೆ ಸರಿ ಸಂಜೆಯ ಸಮಯಕ್ಕೆ ಸದ್ದಿಲ್ಲದೆ ತನ್ನ ಪಾಡಿಗೆ ತಾ ಹಿತ್ತಲಿನಲ್ಲಿ ಬಿರಿದರಳುವ ದುಂಡು ಮಲ್ಲಿಗೆಯ ಶ್ರಾಯವೂ ಹೌದು! ಯಾವ ಹೆಣ್ಣನ್ನು ತಾನೆ ಈ ಮಲ್ಲಿಗೆ ಎಂಬ ಮಾಯಾoಗನೆಯ ಸುಗಂಧ ತನ್ನತ್ತ ಸೆಳೆಯದಿದ್ದೀತು ಹೇಳಿ ?? ಇವತ್ತಿನ ಹಾಗೆ ಅಂದು ಕೂಡ ಅತ್ತಿoದಿಂತ್ತ ದಾರಿಯಲ್ಲಿ ಅಡ್ಡಾಡುತ್ತಿದ್ದವಳ ಕೈ ತನಗರಿವಿಲ್ಲದೆ ತಗ್ಗಿನ ಮನೆ ಬೇಲಿ ಅಂಚಿನಲ್ಲಿ ಮದುವಣಗಿತ್ತಿಯಂತೆ ನಾಚುತ್ತಿರುವ ದುಂಡು ಮಲ್ಲಿಗೆ ಮೊಗ್ಗೆಗಳೆರಡನ್ನು ಕಿತ್ತು ನನಗರಿವಿಲ್ಲದೆ ತಲೆಯ ಮಧ್ಯೆ ತಂದು ಸಿಕ್ಕಿಸಿತ್ತು! ಅಲ್ಲೇ ಅಂಗಳದ ಹೂವಿನ ಕುಂಡಗಳಿಗೆ ನೀರು ಹಾಕುತ್ತಿದ್ದ ತುಂಗತ್ತೆ ಮಲ್ಲಿಗೆ ಮಟ್ಟಿಯ ಸಂದೊಳಗೆ ನನ್ನನ್ನು ಗಮನಿಸಿರಬೇಕು. “ಸುಮಾ… ಬಾರೆ. ಎಷ್ಟು ದಿನ ಆಗೋಯಿತು ನಿನ್ನ ಕಾಣದೆ ? ಮನೆಯಲ್ಲಿ ಯಾರೂ ಇಲ್ಲ…. ಬೇಸಿಗೆ ರಜೆ ಬಂದಿದೆಯಲ್ಲ… ಮೊಮ್ಮಕ್ಕಳ ಕರೆದುಕೊಂಡು ಸೊಸೆ ತವರಿಗೆ ಹೋಗಿದ್ದಾಳೆ.ಇವರಿಗೂ ಈಗೀಗ ಕಿವಿ ಬೇರೆ ಸರಿಯಾಗಿ ಕೇಳಿಸುವುದೇ ಇಲ್ಲ. ಒಬ್ಬಳೇ ಕೆಲಸ ಮಾಡಿ ನಂಗೂ ಬೇಜಾರು ಬಂದೋಯಿತು. ಬಾ… ನಾಲ್ಕು ಮಾತಾಡಿ ಹೋಗುವಿಯಂತೆ” ಎಂದು ಪ್ರೀತಿಯಿಂದ ಕರೆಯುವಾಗ ಮುಖ ಮುರಿದುಕೊಂಡು ಇಲ್ಲವೆಂದು ಹೇಳಲು ಬಾಯಿ ಬಾರದೆ ಅವರ ಹಿಂದೆ ನಡೆದು ಮನೆಯೊಳಗೆ ಹೋದೆ. ಐದು ನಿಮಿಷದಲ್ಲಿ ಒಂದು ಪ್ಲೇಟಿನಲ್ಲಿ ಹಲಸಿನ ಕಾಯಿ ಚಿಪ್ಸ್, ಮತ್ತೊಂದು ಬೌಲ್ ನೊಳಗೆ ಕಂದು ಬಣ್ಣದ ಬಾಳೆ ಹಣ್ಣಿನ ಮುಳುಕ ತಂದಿಟ್ಟು “ತಿನ್ನುತ್ತಾ ಇರು ಕಾಫಿ ತರುತ್ತೇನೆ” ಎಂದು ಅಡುಗೆ ಕೋಣೆ ಹೊಕ್ಕರು.ತುಂಗತ್ತೆಯ ಕೈ ರುಚಿ ಸವಿಯುತ್ತ ಕೈಸಾಲೆಯ ಉದ್ದಕ್ಕೂ ಒಮ್ಮೆ ಕುತೂಹಲದಿಂದ ಕಣ್ಣು ಹಾಯಿಸಿದೆ.
ಮೂಲೆಯಲ್ಲಿ ಮಿಡಿ ಉಪ್ಪಿನಕಾಯಿ ಹಾಕಿಟ್ಟ ಹೊಗೆ ಹಿಡಿದ ಉದ್ದುದ್ದ ಗಾಜಿನ ಭರಣಿಗಳು. ಮತ್ತೊಂದು ಕಡೆ ಕಡಿಗಾಯಿ ತಯಾರಿಸಲು ಕತ್ತರಿಸಿಟ್ಟ ದೊಡ್ಡ ದೊಡ್ಡ ಮಾವಿನಕಾಯಿ ಹೋಳುಗಳು! ಹಾಗೆ ಇದ್ದಿಲು ಒಲೆ ಪಕ್ಕದಲ್ಲಿ ತಣಿಯಲು ಹರಗಿ ಇಟ್ಟಿದ್ದ ಕುಚ್ಚಿದ ಮಾವಿನಕಾಯಿಗಳು.
ಇತ್ತ ಸೆಣಬಿನ ದಾರದಿಂದ ಒಂದೇ ಅಳತೆಯಲ್ಲಿ ಕಟ್ಟಿದ ಬಾಳೆಕಾಯಿ, ಹಲಸಿನ ಹಪ್ಪಳದ ಕಟ್ಟುಗಳನ್ನು ಕಾಟನ್ ಸೀರೆ ಮೇಲೆ ನಾಜೂಕಾಗಿ ಜೋಡಿಸಿಟ್ಟಿದ್ದರೆ, ಮರುದಿನದ ಹಪ್ಪಳದ ಹಿಟ್ಟಿಗೆ ಸಿಪ್ಪೆ ಕೆತ್ತಿದ ದೊಡ್ಡ ದೊಡ್ಡ ಹಲಸಿನ ಕಾಯಿಗಳು ಬಂದು ಕಾಯುತ್ತಿದ್ದವು !
ಒಂದು ಹರಿವಾಣದಲ್ಲಿ ಮನೆಯಲ್ಲೇ ಬೆಳೆದ ಹೊಸ ಅರಿಶಿಣ ಪುಡಿ ಇನ್ನೊಂದರಲ್ಲಿ ವಾಟೆ ಹುಳಿಹುಡಿ.
ಈಗಿನ ಪ್ಲಾಸ್ಟಿಕ್ ಯುಗದಲ್ಲೂ ಹಳೆ ಸಂಪ್ರದಾಯದ ಹೊಂಬಾಳೆಯ ದೊನ್ನೆಗಳನ್ನು ಶಿಸ್ತಾಗಿ ಒಂದರೊಳಗೊಂದು ಜೋಡಿಸಿಟ್ಟಿದ್ದನ್ನು ನೋಡಿ, ಬರುವ ರಾಮನವಮಿ ಉತ್ಸವಕ್ಕೆ ಮಠಕ್ಕೆ ಹೊರೆಗಾಣಿಕೆ ಕೊಡಲು ತಯಾರಿ ಮಾಡಿರಬಹುದು ಎಂದು ಅಂದಾಜಿಸಿದೆ!
ಕೆಂಪಾದ ಮುರುಗಲು ಹಣ್ಣಿನ ಸಿಪ್ಪೆ, ಸಂಡಿಗೆ ಮೆಣಸು, ಸೂಜಿ ಮೆಣಸು,ಬೋಳ್ಕಾಳು(ಬಿಳಿ ಕಾಳು ಮೆಣಸು) ಹೀಗೆ ಒಂದೆರಡಲ್ಲ ಅವುಗಳನ್ನೆಲ್ಲ ನೋಡುತ್ತ ನೋಡುತ್ತಾ ಒಮ್ಮೆ ನನಗೆ ತಲೆ ತಿರುಗಿದಂತಾಯಿತು. ಅದೊಂದು ಸಾಂಬಾರು ಬೆಳೆಗಳ ದೊಡ್ಡ ದಾಸ್ತಾನು ಮಳಿಗೆಗಿಂತ ಏನೂ ಕಡಿಮೆ ಇರಲಿಲ್ಲ! ಅಬ್ಬಬ್ಬಾ…. ಈ ಬೇಸಿಗೆಕಾಲದ ಬಿಸಿಲ ಝಳದಲ್ಲೂ ಎಪ್ಪತ್ತೈದರ ವಸಂತದ ತುಂಗತ್ತೆಯ ಈ ಹುರುಪಿನ ಕಾರ್ಯ ವೈಖರಿಯನ್ನು (ಇವೆಲ್ಲವೂ ಮುಂಬರುವ ಮಳೆಗಾಲದ ಖರ್ಚಿಗೆ ಪೂರ್ವ ತಯಾರಿ ) ಕಂಡು ನಿಜಕ್ಕೂ ನಿಬ್ಬೆರಗಾದೆ.
ಆಗ ತಾನೇ ಕರೆದು ಕಾಯಿಸಿದ ನೊರೆ ಹಾಲಿನ ಕಾಫಿ ಲೋಟ ದೊಂದಿಗೆ ಬಂದ ತುಂಗತ್ತೆ ನನ್ನ ಪಕ್ಕಕ್ಕೆ ಕುಳಿತುಕೊಳ್ಳುತ್ತಿದ್ದಂತೆ “ಅಲ್ಲ.. ಅತ್ತೆ ನೀವು ಒಬ್ಬರೇ ಅಡುಗೆ, ಕೊಟ್ಟಿಗೆ ಕೆಲಸವನ್ನು ಮಾಡುತ್ತಾ ಇಷ್ಟೆಲ್ಲಾ ಹಪ್ಪಳ, ಉಪ್ಪಿನಕಾಯಿಗಳನ್ನು ಯಾವಾಗ ಮಾಡಿಕೊಳ್ಳುತ್ತೀರಿ !? ನೋಡಿದರೆ ಬಹುಷಃ ರಾತ್ರಿಯೂ ಮಲಗೋದು ಅನುಮಾನ!” ಎಂದು ನಾ ಆಶ್ಚರ್ಯದಿಂದ ಪ್ರಶ್ನಿಸಿದಾಗ ಮುಗುಳು ನಗುತ್ತಾ “ಅಯ್ಯೋ ಇದೆಲ್ಲ ಏನ್ ಮಹಾಕೆಲಸ ಬಿಡು ಸುಮಾ… ಹಿಂದಿನ ಕಾಲದಂತೆ ಬಾವಿ ಇಂದ ನೀರು ಸೇಯಬೇಕ? ಒರಳು ಕಲ್ಲಲ್ಲಿ ಬೀಸಬೇಕ? ಮಸಿ ಪಾತ್ರೆ ತಿಕ್ಕಬೇಕಾ?? ಹೇಳು. ಮೊಮ್ಮಕ್ಕಳು ಪಾಪ ಮಳೆಗಾಲದಲ್ಲಿ ಶಾಲೆಯಿಂದ ಬಂದವು ತಿಂದು ಕೊಳ್ತಾವೆ, ನಮಗೂ ಜಡಿಮಳೆ ಹೊಡೆಯೋ ಸಮಯದಲ್ಲಿ ಸುಮ್ಮನೆ ಕುಳಿತು ಬಾಯಿ ಬೇಡುತ್ತೇ ಅಲ್ವಾ? ಅಪರೂಪಕ್ಕೆ ಬಂದ ನೆಂಟರಿಗೂ ಬಡಿಸಲು ಅನುಕೂಲ, ಏನೋ ನನ್ನ ಕೈಲಿ ಸಾಗುವಷ್ಟು ಮಾಡುತ್ತೇನೆ ಅಷ್ಟೇ.
ನೀ ಹೇಳಿದಂತೆ….ಇಂದು ಬೆಳಿಗ್ಗೆ ಏಳುವಾಗಲೇ ಐದು ಗಂಟೆ ಹೊಡೆದಿತ್ತು…. ಹಪ್ಪಳದ ಹಿಟ್ಟು ಹಚ್ಚಲು ಸಮಯ ಸಾಲದೇ ಒಂದಷ್ಟು ಉಳಿದೇ ಹೋಯಿತು ನೋಡು.” ತುಂಗತ್ತೆ ಮುಖ ಚಿಕ್ಕದು ಮಾಡಿವಾಗ ಅವರ ಸಮಾಧಾನಿಸಲು,
“ಅಯ್ಯೋ ಅತ್ತೆ ಇರಲಿ ಬಿಡಿ…. ಅದೆಷ್ಟು ಅಂತ ಒದ್ದಾಡುತ್ತೀರಿ? ಈಗ ದುಡ್ಡು ಕೊಟ್ಟರೆ ಬೇಕಾದ್ದು ಸಿಗುತ್ತದೆ ಮಾರ್ಕೆಟ್ ಲ್ಲಿ . ಇನ್ಮೇಲಾದರೂ ನಿಮ್ಮ ಮತ್ತು ಮಾವನವರ ಆರೋಗ್ಯದ ಕಡೆ ಹೆಚ್ಚು ಗಮನ ಕೊಟ್ಟು ಆರಾಮಾಗಿ ಉಂಡು ತಿಂದುಕೊಂಡು ಇರಿ ಸಾಕು” ಕಿರಿಯಳಾದರೂ ತಿಳಿದೆರಡು ಮಾತಾಡಿದೆ ನಾ.
“ಯಾಕೋ ಸ್ವಲ್ಪ ದಿನಗಳಿಂದ ಕಾಲಿಂದ ನೆತ್ತಿಯ ತನಕ ಒಂದು ನರ ಜುಮುಗುಡುತ್ತೆ.ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಜೀವ ಹಿಂಡಿದಂತೆ ನೋಯುತ್ತದೆ. ಈಗಿನ ಕಾಲಮಾನದ ನಾನಾ ತರ ಖಾಯಿಲೆಗಳ ಹೆಸರು ಕೇಳಿದರೆ ಅರ್ಧ ಜೀವ ಹೋದಂತೆ ಆಗುತ್ತೆ ಕಣಮ್ಮ. ಹೀಗೆ ಮುತ್ತೈದೆಯಾಗಿ ಇದ್ದಾಗಲೇ ಶಿವ,ರಾಮ ಎನ್ನುತ್ತಾ ಪ್ರಾಣ ಬಿಟ್ಟರೆ ಸಾಕು. ಇನ್ನೇನು ಕಾಣಬೇಕಿದೆ ಈ ಜೀವಕ್ಕೆ ??”ಎಂದವರ ಕಂಗಳು ತುಂಬುವ ಸಿದ್ಧತೆಯಲ್ಲಿ ಇದ್ದವು. ಅದಕ್ಕಾಸ್ಪದ ನೀಡಲು ಇಚ್ಛಿಸದ ನನ್ನ ಮನಸ್ಸಿನ ಕರೆಗೆ ಓಗೊಟ್ಟು , ಮನೆಯಲ್ಲಿ ಕೆಲಸವಿದೆ ಎಂಬ ನೆಪವೊಡ್ಡಿ ಅಲ್ಲಿಂದ ಹೊರಡಲು ಎದ್ದೆ.ತುಂಗತ್ತೆ ‘ನಿಲ್ಲಮ್ಮ ಕುಂಕುಮ ಹಚ್ಚುವೆ’ ಎಂದು ತಡೆದು ನನ್ನ ಮಗಳಿಗೆ ಇಷ್ಟವಾದ ಮೇಲೋಗರದ ಮಾವಿನ ಹಣ್ಣುಗಳ ಕೊಟ್ಟೆಯಲ್ಲಿ ತುಂಬಿಕೊಂಡು ತಂದು ಮಮತೆಯಿಂದ ಕೈಗಿರಿಸಿದರು.
ಮನೆಯ ಅಂಗಳದ ತನಕ ನನ್ನೊಂದಿಗೇ ಬಂದದ್ದಲ್ಲದೆ, ಅದಾಗ ತಾನೇ ತುಸು ಬಿರಿದು ನಿಂತು ತನ್ನ ಸೌಂದರ್ಯದಿಂದ ಸುಂದರ ಲೋಕವನ್ನು ಸೃಷ್ಟಿಸಲು ಸಿದ್ಧವಾಗಿ ನಿಂತಿದ್ದ ಮಲ್ಲಿಗೆ ಮೊಗ್ಗುಗಳನ್ನು ಆಸ್ಥೆಯಿಂದ ಆಯ್ದು ಬಾಳೆ ಗಿಡದ ನಾರಿನಿಂದ ಮೊಗ್ಗುಗಳನ್ನು ಒಪ್ಪವಾಗಿ ಪೋಣಿಸಿ ಒಂದು ಮೊಳ ಗಾತ್ರದ ಮಾಲೆಯನ್ನಾಗಿ ಮಾಡುತ್ತಾ, ಅಕ್ಕರೆಯಿಂದ ನನ್ನ ಮುಡಿಗೆ ಮುಡಿಸುವಾಗ ಹೆತ್ತ ತಾಯಿಯ ನೆನಪು ಉಕ್ಕಿಬಂತು. ಮುಗುಳು ನಗೆಯಿಂದ ಹಾರೈಸಿ ಆ ಸಂಜೆಗತ್ತಲಲ್ಲೂ ಕಣ್ಣಿಗೆ ಮರೆಯಾಗುವಷ್ಟು ತನಕ ನೋಡುತ್ತಾ ನನ್ನನ್ನು ಬೀಳ್ಕೊಟ್ಟ ತುಂಗತ್ತೆ ಮರುದಿನದಿಂದ ಕೇವಲ ನೆನಪಾಗಿಯಷ್ಟೇ ಉಳಿಯುತ್ತಾರೆ ಎಂಬ ಸಣ್ಣ ಸೂಚನೆ ಕೂಡ ನನಗೆ ಸಿಕ್ಕಿರಲಿಲ್ಲ ! ಈ ಆಧುನಿಕ ಕಾಲದಲ್ಲಿ ಎಲ್ಲಾ ರೋಗಕ್ಕೂ ಚಿಕಿತ್ಸೆ , ಎಷ್ಟೇ ಹೈಟೆಕ್ ಆಸ್ಪತ್ರೆಗಳು, ತಕ್ಕ ವೈದ್ಯಕೀಯ ಸೌಲಭ್ಯಗಳಿದ್ದರೂ ಸಾವೆಂಬ ವಿಧಿಯ ನಿಯಮಕ್ಕೆ ಎಲ್ಲರೂ ಬದ್ಧರೇ ತಾನೇ !
ನೆನಪುಗಳ ಭಾರವನ್ನು ಕೊಡವಿ ಮತ್ತೆ ನಿತ್ಯದ ದಿನಚರಿಗೆ ಬದ್ಧತೆ ತೋರಲು ಒಂದಿರುಳ ನಿದ್ರೆಯೇ ಬೇಕಾಯಿತು ಎಂದರೆ ಅತಿಶಯೋಕ್ತಿಯಲ್ಲ.
ಪ್ರಾತಃಕಾಲ ಎದ್ದವಳೇ ಎಂದಿಗಿಂತ ಸ್ವಲ್ಪ ಬೇಗನೆ ಉಪಹಾರ, ಸ್ನಾನ ಮುಗಿಸಿ ತುಂಗತ್ತೆಯ ತಿಥಿಯ ಪ್ರಸಾದ ಸ್ವೀಕರಿಸಲು ಹೊರಟು ನಿಂತಾಗ ಏನೋ ಕಳೆದುಕೊಂಡ ಭಾಸ. ತಗ್ಗಿನ ಮನೆ ಇನ್ನೇನು ಸಮೀಪಿಸುತ್ತಿದೆ ಎಂದಾಗ ಮನಸ್ಸಲ್ಲಿ ಮತ್ತಷ್ಟು ದುಗುಡವೇ ತುಂಬಿಕೊಂಡಿತ್ತು. ಜಗಲಿಗೆ ಕಾಲಿರಿಸಿದವಳು ತುಳಸಿ ಹಾರದಿಂದ ಕಂಗೊಳಿಸುತ್ತಿದ್ದ ಕುಂಕುಮದ ಬೊಟ್ಟಿಟ್ಟ ತುಂಗತ್ತೆಯ ಫೋಟೋಕ್ಕೆ ನಮಸ್ಕರಿಸುತ್ತ ಮೌನವಾಗಿ ನಿಂತು ಬಿಟ್ಟೆ. ಅಲ್ಲೇ ಪಕ್ಕದಲ್ಲಿ ಮಂಕಾಗಿ ಕುರ್ಚಿ ಮೇಲೆ ಕುಳಿತಿದ್ದ ಮಾವನವರು ನಿತ್ರಾಣ ಧ್ವನಿಯಲ್ಲಿ ಕೆಮ್ಮಿದಾಗ ಹೇಗೆ ಮಾತಾಡಿಸಲಿ ಎಂಬ ಸಂಟಕದಲ್ಲಿ ಮುಳುಗಿದೆ. (ಧರ್ಮ ಪತ್ನಿ ತುಂಗತ್ತೆ ಯ ಅಗಲಿಕೆಯ ನೋವು ಅವರ ಮುಖದಲ್ಲಿ ಇನ್ನೂ ಮಡುಗಟ್ಟಿತ್ತು)
ನಡುಮನೆ ಹೊಕ್ಕು ಒಳ ಹೋಗುತ್ತಿದ್ದಂತೆ ವೈದಿಕರ ಧ್ವನಿಯಲ್ಲಿ ಅಪರಕಾರ್ಯದ ಮಂತ್ರೋಚ್ಚಾರಣೆ ದೇವರ ಕೋಣೆಯಿಂದ ಕೇಳಿಬರುತ್ತಿದ್ದರೆ,
ತನ್ನ ತಾಯಿಯ ಶ್ರಾದ್ಧ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ತುಂಗತ್ತೆಯ ಮಗ ರಾಘವ ನಮ್ಮನ್ನು ಕಾಣುತ್ತಲೇ ಕಣ್ ಸನ್ನೆಯಲ್ಲೇ ಯೋಗ ಕ್ಷೇಮ ವಿಚಾರಿಸಿದ. ಅಡುಗೆ ಹೆಂಗಸು ಕುಡಿಯಲು ತಣ್ಣನೆ ಹದ ಮಜ್ಜಿಗೆ ತಂದುಕೊಟ್ಟಳು. ಕುಡಿಯುತ್ತ ಏನೋ ನೆನಪಾದವಳಂತೆ ಕಿಟಕಿಯಿಂದ ನನ್ನ ಕಂಗಳನ್ನು ಮನೆಯ ಅಂಗಳದತ್ತ ಹರಿಸಿದರೆ ಬಿಕೋ ಎನ್ನುತ್ತಿದ್ದ ಅಂಗಳ ಶೂನ್ಯತೆಯನ್ನು ಚಿತ್ರಿಸಿದಂತಿತ್ತು. ಬೇಸಿಗೆಯ ಉಲ್ಲಾಸಮಯ ದಿನಚರಿಗೆ ಅಗತ್ಯವಾದ ಹಪ್ಪಳ, ಸೆಂಡಿಗೆ, ಉಪ್ಪಿನಕಾಯಿ, ತಯಾರಿಗೆ ಪಣತೊಟ್ಟು ನಿಂತಂತಿದ್ದ ಹಲಸು, ಮಾವುಗಳ ಕಾರುಬಾರು ಮೌನವಾಗಿತ್ತು. ಈ ಐದು ವರ್ಷ ಮನೆಯ ಚಿತ್ರಣವನ್ನು ಅದೆಷ್ಟು ಬದಲಾಯಿಸಿದೆ ಎಂಬ ನೋವು ನನ್ನನ್ನು ಆ ಕ್ಷಣಕ್ಕೆ ಬಲವಾಗಿ ಕಾಡಿತ್ತು. ತುಂಗತ್ತೆ ಹೇಗೆ ನೆನಪುಗಳ ಪುಟಗಳಲ್ಲಿ ಅಳಿಸಲಾರದ ನೆನಪಾಗಿ ಉಳಿದಿದ್ದಳೋ ಹಾಗೆ ಅವಳು ನೆಟ್ಟು ಸಾಕಿ ಸಲುಹಿದ ಮಲ್ಲಿಗೆ ಬಳ್ಳಿ, ಹಳೆ ಕಾಲದ ಗಿಡಗಂಟೆಗಳು, ಅವಳ ಕೈಚಳಕದಲ್ಲಿ ರೂಪುಗೊಂಡಿದ್ದ ತರಹೇವಾರಿ ತಿನಿಸುಗಳ ರುಚಿ ಕೂಡ ಕೇವಲ ನೆನಪಾಗಿ ಉಳಿದಿದ್ದವು..! ತುಂಬಿ ಬಂದ ನನ್ನ ಕಂಗಳನ್ನು ಇನ್ನೇನು ಒರೆಸಬೇಕು ಎನ್ನುವಷ್ಟರಲ್ಲಿ ಮಡಿಯುಟ್ಟು ಚುರುಕಾಗಿ ಅತ್ತಿಂದಿತ್ತ ಓಡಾಡುತ್ತಿದ್ದ ಹೇಮಾ ಕಣ್ಣಿಗೆ ಕಾಣಿಸಿದಳು. ಅರೆ ಕ್ಷಣ ತುಂಗತ್ತೆಯೇ ಕಣ್ಣ ಮುಂದೆ ಬಂದಂತೆ ಭಾಸವಾಯಿತು.
ತುಂಗತ್ತೆಯ ಹೆಸರನ್ನು ಉಳಿಸುವುದಕ್ಕೋ ಅಥವಾ ಅವರಿಗೆ ತಕ್ಕ ಸೊಸೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೋ ಹೇಮಾಳ ನಡೆ – ನುಡಿಗಳು ತನ್ನ ಅಸ್ಥಿತ್ವವನ್ನು ಭದ್ರಪಡಿಸಿತ್ತು. ಅವಳನ್ನೇ ಒಂದೆರಡು ನಿಮಿಷ ಸೂಕ್ಷ್ಮವಾಗಿ, ದಿಟ್ಟಿಸ ತೊಡಗಿದೆ.ತುಂಗತ್ತೆಯ ಸಂಸ್ಕಾರಯುತ ಮನೋಭಾವ, ಒಪ್ಪ ಓರಣದ ಅವರ ಜೀವನ ತತ್ವಗಳನ್ನು ಸ್ವಲ್ಪ ಮಟ್ಟಿಗಾದರೂ ಮೈಗೂಡಿಸಿಕೊಂಡಿದ್ದ ಹೇಮಾ ತುಂಗತ್ತೆಯ ಹೆಸರನ್ನು ಖಂಡಿತ ಉಳಿಸುತ್ತಾಳೆ ಎಂಬ ಭರವಸೆ ಆಂತರ್ಯಕ್ಕೆ ತಟ್ಟಿದಾಗ ಮನಸ್ಸು ನಿರಾಳವಾಯಿತು.
ಅಲ್ಲಿ ನೆರೆದ ಹೆಂಗಸರೊಂದಿಗೆ
ಕಾಯಿಹೋಳಿಗೆ, ಉದ್ದಿನ ವಡೆ ಕರಿಯುವ ಕೆಲಸದಲ್ಲಿ ನಾನೂ ನೆರವಾಗತೊಡಗಿದೆ.
✍️ ಕುಸುಮಾ ಜಿ ಭಟ್







