ಹುಟ್ಟು

ಒಂದು ತಾಸು ಉರಿಯುವಷ್ಟಾದ್ರೂ ಎಣ್ಣೆ ಇದೆಯಾ? ಲಾಟೀನಿನ ತಳಭಾಗವನ್ನು ಅಲುಗಾಡಿಸುತ್ತಾ ರಾಜೀವಿ ಯೋಚಿಸಿದಳು. ಒಲೆಯ ಪಕ್ಕದಲ್ಲಿರುವ ಮಡಕೆಯ ಮುಚ್ಚಳವನ್ನು ತೆರೆದು ನೋಡಿದಾಗ ನೆಮ್ಮದಿಯೆನಿಸಿತು. ಮಗನಿಗೆ ಕುಡಿಯುವಷ್ಟು ಗಂಜಿ ಉಂಟು. ಶಾಲೆಯಿದ್ದ ದಿನಗಳಲ್ಲಿ ಅವನಿಗೆ ಗಂಜಿಯೂಟ ಮತ್ತು ಪಚ್ಚೆ ಹೆಸರಿನ ಉಸಲಿ ಸಿಗುತ್ತಿದ್ರಿಂದ ರಾತ್ರಿಗೆ ಒಂದಷ್ಟು ಗಂಜಿಯೋ ಬೇಯಿಸಿದ ಮರಗೆಣಸಿನ ತುಂಡುಗಳೋ ಸಾಕಾಗ್ತಿತ್ತು. ತುಂಬು ಹೊಟ್ಟೆಯ ನಂಗೇಕೆ ಗಂಜಿ?

ದಣಿವು ತಾಳಲಾರದೆ ಅವಳು ನೀರನ್ನು ಕುದಿಸಿ ಚಹಾ ಹುಡಿಯನ್ನು ಹಾಕಿದಳು. ಹಾಲು ಮತ್ತು ಸಕ್ಕರೆ? ಅವಳು ಅತ್ತಿತ್ತ ನೋಡುತ್ತಿದ್ದಂತೆ ಮಗ ಓಡೋಡಿ ಬಂದ.

“ಬಾಬೂ, ಚಾ ಬೇಕಾ?”

“ಬೇಡಮ್ಮಾ ಅದನ್ನು ನೀನೇ ಕುಡ್ಕೋ.”

ಎಳೆಯ ಕರುವಿನಂತೆ ನೆಗೆಯುತ್ತಾ, ಜಿಗಿಯುತ್ತಾ ಅವನು ಗುಡಿಸಲಿನ ಸುತ್ತ ಓಡತೊಡಗಿದ.

“ನಮಗೆ ಬಾಬು ಮಾತ್ರ ಸಾಲದಾ?” ಹೆರಿಗೆಯ ಬಳಿಕ ಆಕೆ ದಾಮೋದರನಲ್ಲಿ ಕೇಳಿದ್ದಳು. “ಹೆರಿಗೆಗೆ ಎಷ್ಟೆಲ್ಲ ಖರ್ಚು! ಚೆನ್ನಾಗಿ ತಿಂದ್ರೆ ಮಾತ್ರ ಹೊಟ್ಟೆಯೊಳಗಿನ ಮಗುವಿಗೆ ಆರೋಗ್ಯವಿರ್ತದೆ. ಪೋಷಕಾಂಶಗಳಿರೋ ಮಾತ್ರೆ ನುಂಗಬೇಕಾಗ್ತದೆ. ಹೆರಿಗೆಗೆ ಮುನ್ನ ಹೊಸ ಬಟ್ಟೆ, ಎಣ್ಣೆ, ಸಾಬೂನು, ಮೈ ಒರೆಸುವ ಬಟ್ಟೆಗಳೆಲ್ಲ ಬೇಕಾಗ್ತವೆ. ಅಸ್ಪತ್ರೆಯ ವೆಚ್ಚ ಬೇರೆ.”

“ಒಂದು ಹೆಣ್ಣುಮಗು ಕೂಡ ಬೇಕು. ಕಣ್ಣಿಗೆ ಕಾಡಿಗೆ ಹಚ್ಚಿ, ಹಣೆಗೆ ಬೊಟ್ಟಿಟ್ಟು ಚಂದ ನೋಡ್ಲಿಕೆ ನಿಂಗೊಂದು ಹೆಣ್ಣು ಮಗು ಬೇಡ್ವಾ?” “ಮೊದಲ ಹೆರಿಗೆಯಾದಾಗ ನೀವು ಊರಲ್ಲಿರ್ಲಿಲ್ಲ. ದಾರಿ ಖರ್ಚಿಗೂ ದುಡ್ಡಿರ್ಲಿಲ್ಲ. ನಾನು ಏನೂ ತಿಂದಿರ್ಲಿಲ್ಲ. ದಣಿವಿನಿಂದ ಪ್ರಜ್ಞೆ ತಪ್ತಿತ್ತು. ‘ಮಗಳೇ ನೀನೂ ಪ್ರಯತ್ನ ಮಾಡಿದ್ರೆ ಮಾತ್ರ ಮಗು ಪ್ರಪಂಚ ನೋಡ್ತದೆ. ಹೂಂ… ಬೇಗ’ ಅಂತ ಕಮಲಜ್ಜಿ ನನ್ನ ನೆತ್ತಿ ನೇವರಿಸ್ತಾ, ಹುರಿದುಂಬಿಸ್ತಿದ್ಲು. ಹೆರಿಗೆಯ ಬಳಿಕವೂ ರಕ್ತಸ್ರಾವ ನಿಲ್ಲಿಲ್ಲ. ಮೂರು ದಿನ ಕಳೆದ ಮೇಲೆ ನೀವು ಬಂದ್ರಿ. ‘ಇಷ್ಟೊಂದು ಕಷ್ಟದ ಹೆರಿಗೆಯನ್ನು ಇದುವರೆಗೆ ಮಾಡ್ಲಿಲ್ಲ. ಜೀವ ಉಳಿದದ್ದೇ ದೊಡ್ಡದು. ದಿನವಿಡೀ ಪ್ರಜ್ಞೆಯಿಲ್ಲದೆ ಬಿದ್ದುಕೊಂಡಿದ್ಲು. ಹೆರಿಗೆಯ ಹೊತ್ತಲ್ಲಿ ಗಂಡನಾದ್ರೂ ಒಟ್ಟಿಗೆ ಇರ್ಬೇಕೋ ಬೇಡ್ವೋ?’ ಅಂತ ಕಮಲಜ್ಜಿ ನಿಮ್ಮನ್ನು ಬೈದದ್ದು…”

“ಆದ್ರೆ ಒಳಗೆ ಬಂದಾಗ ನಾನು ಕಂಡ ದೃಶ್ಯವೇ ಬೇರೆ. ದಿಟ್ಟ ಮಂದಹಾಸದೊಂದಿಗೆ ನೀನು ಆ ಮಗುವಿನ ನೆತ್ತಿ ನೇವರಿಸ್ತಾ ಮಲಗಿದ್ದೆ. ನಿಮ್ಮ ಕೆಲಸ ಅಂದ್ರೆ ಸುಮ್ಮನೆ ಹೆದ್ರೋದು, ಹೆದ್ರಿಸೋದು. ಈ ಸಲ ಹಾಗೇನೂ ಆಗೋದಿಲ್ಲ. ನೋಡ್ತಿರು, ನಮ್ಮ ಮಗಳೂ ನಿನ್ನಂತೆ ಚೆಲುವೆಯಾಗಿರ್ತಾಳೆ.”

ಸಾಯಂಕಾಲವಾಗಿತ್ತು. ಅಂಗಳದಲ್ಲಿ ಚಪ್ಪಲಿಗಳ ಸದ್ದಾಗುತ್ತಿದ್ದಂತೆ ಬಾಗಿಲಿಗೊರಗಿ ಕುಳಿತು ಬೀಡಿ ಕಟ್ಟುತ್ತಿದ್ದ ರಾಜೀವಿ ಕತ್ತು ಕೊಂಕಿಸಿ ನೋಡಿದಳು.

ಸಂಜೀವಣ್ಣ!

ಒಳ್ಳೆ ಎತ್ತರವಾಗಿರುವ, ಎತ್ತರಕ್ಕೆ ತಕ್ಕ ತೋರವೂ ಇರುವ ಮೈ. ಹೊಳೆಯುವ ಕಣ್ಣುಗಳು. ಅಚ್ಚುಕಟ್ಟಾಗಿ ಬಾಚಿದ ಸೊಂಪಾದ ಕೂದಲು. ಮೊಣಕಾಲಿನಿಂದ ಕೆಳಗೆ ಇಳಿದ ಬಿಳಿ ನಿಲುವಂಗಿ. ಪಾದದವರೆಗೆ ಇಳಿಬಿಟ್ಟ ಪಂಚೆ. ಕತ್ತಲಲ್ಲೂ ದೀಪದಂತೆ ಬೆಳಗುವ ರೂಪ.

“ಆರೋಗ್ಯವಾಗಿರುವೆಯಾ ರಾಜೀವಿ? ಈಗೀಗ ನಿನ್ನನ್ನು ಕಾಣೋದೇ ಇಲ್ವಲ್ಲ?”

“ನಿಮಗೆ ಗೊತ್ತಲ್ಲ” ಸಂಕೋಚದಿಂದ ಪಕ್ಕಕ್ಕೆ ಸರಿದು ನಿಂತು ನೆಲ ನೋಡುತ್ತಾ ಹೇಳಿದಳು ರಾಜೀವಿ. “ಕಷ್ಟಕ್ಕಿಟ್ಟುಕೊಂಡಿದೆ. ಹಿಂದೆಲ್ಲ ತೋಟ ಹಿತ್ತಿಲುಗಳ ಕೆಲಸ, ಸೌದೆ, ಸೊಪ್ಪುಸದೆ ಅಂತ ಒಂದಲ್ಲಾ ಒಂದು ಕೆಲಸ ಇದ್ದೇ ಇರ್ತಿತ್ತು. ಆದರೆ ಈಗ…” ಎಂದು ಉಬ್ಬಿದ ಹೊಟ್ಟೆಯನ್ನು ಸೆರಗಿನಿಂದ ಮರೆಗೊಳಿಸುತ್ತಾ ಮಾತು ಮರೆತವಳಂತೆ ಸುಮ್ಮನಾದಳು.

“ನಾನು ಬಂದದ್ದೇಕೆಂದರೆ” ಹೆಗಲಿನಲ್ಲಿದ್ದ ಶಾಲಿನಿಂದ ಕುತ್ತಿಗೆಗೆ ಗಾಳಿ ಬೀಸುತ್ತಾ ಸಂಜೀವನೆಂದ “ನಾನು ಹೊಸ ಮನೆ ಕಟ್ಟಿಸ್ತಿದ್ದೇನೆ. ಕೆಲಸದವರಿಗೆ ಬೇಯಿಸಿ ಹಾಕ್ಲಿಕೆ ಯಾರೂ ಇಲ್ಲ. ಅಗತ್ಯದ ವಸ್ತುಗಳನ್ನು ತಂದುಕೊಟ್ರೆ ಅವರಿಗೆ ಅಡುಗೆ ಮಾಡಿ ಕೊಡಬಹುದಾ? ಬಡಿಸ್ಲಿಕ್ಕೆ ನಾನಿದ್ದೇನೆ. ನಿಂಗೊಂದಿಷ್ಟು ಆದಾಯವೂ ಆದೀತು.”

“ಆಗಬಹುದು.”

“ಹಾಗಿದ್ರೆ ನಾಳೆಯಿಂದ…”

“ಸರಿ.”


“ಯಾಕೆ ರಾಜೀವಿ, ಮಗನಿಗೆ ಹಾಗೊಂದು ಹೊಡೆಯುತ್ತಿ? ಅಷ್ಟಕ್ಕೂ ಅವನೇನು ಮಾಡಿದ?”

“ಇವ ಹೇಳೋದು ಕೇಳಿತಾ ಸಂಜೀವಣ್ಣಾ? ಇವನೂ ಬರ್ತಾನಂತೆ ಕಾಸರಗೋಡಿಗೆ. ಜೈಲಲ್ಲಿರೋ ಅಪ್ಪನನ್ನು ನೋಡ್ಲಿಕ್ಕೆ.”

“ಅಯ್ಯೋ! ಅವನಿಗೇನು ಗೊತ್ತು? ಸಣ್ಣ ಹುಡುಗ.”

“ಒಂದೆಡೆ ದೇವರ ಏಟು. ಇನ್ನೊಂದೆಡೆ ಇವನ ಮಾತು” ಎನ್ನುತ್ತಾ ಬಸವಳಿದವಳಂತೆ ತಡಿಕೆಗೆ ಒರಗಿಕೊಂಡು ಯಾತನೆಯಿಂದ ಕಣ್ಣುಮುಚ್ಚಿಕೊಂಡಳು ರಾಜೀವಿ.

“ಇಂಥ ಪರಿಸ್ಥಿತಿಯಲ್ಲಿ ವಿಪರೀತ ಕೋಪ ಅಥವಾ ದುಃಖ ಒಳ್ಳೆಯದಲ್ಲ. ಈ ಸುದ್ದಿ ನಿನ್ನ ಕಿವಿಗೆ ಬೀಳಬಾರದು ಅಂತ ತುಂಬಾ ಜಾಗ್ರತೆ ವಹಿಸಿದ್ದೆ. ಆದ್ರೂ ನಿಂಗೆಲ್ಲ ಗೊತ್ತಾಯ್ತು ಅಂತ ಕಾಣ್ತದೆ. ನೀನು ಗಂಡನನ್ನು ಕಂಡು ಮಾತಾಡೋದಾದ್ರೂ ಏನು? ಹೇಗೆ? ಆದ್ದರಿಂದ ನಿಂಗೆ ಗೊತ್ತಾಗದಂತೆ ಕಾಸರಗೋಡಿಗೆ ಹೋಗಿ ಅವನನ್ನು ಭೇಟಿಯಾಗ್ತಿದ್ದೆ.”

“ಏನಂದ್ರು ಅವರು?”

“ಹಾಗೇನಿಲ್ಲ. ಏನೂ ಹೆದರಬೇಕಾದ್ದಿಲ್ಲ. ಕೆಲಸದವರನ್ನು ಊಟಕ್ಕೆ ಬರಹೇಳಲಾ?”

“ನಂಗೆಲ್ಲ ಗೊತ್ತು. ಈ ಸಲ ಅವರು ಬೇರೊಬ್ಬಳ ಸಂಗ ಮಾಡಿದ್ದಾರೆ. ಅವಳು ಸರಕಾರಿ ಆಸ್ಪತ್ರೆಯಲ್ಲಿ ಹೆತ್ತಿದ್ದಾಳೆ. ಅವರ ಕಳ್ಳಾಟ ಕಂಡು ಸಂಶಯಗೊಂಡ ಡಾಕ್ಟರು ಪೋಲೀಸರನ್ನು ಕರೆಸಿದ್ದಾರೆ. ಅವರು ಎಲ್ಲವನ್ನೂ ಒಪ್ಪಿದ್ದಾರೆ. ಅಲ್ವಾ?”

ಸಂಜೀವ ಮಾತನಾಡಲಿಲ್ಲ. ಮೈ ಅಲುಗುವಂತೆ ನಿಟ್ಟುಸಿರು ಬಿಡುತ್ತಾ ಅವಳು ಹೇಳಿದಳು. “ಅವರ ದಿಟ್ಟತನವನ್ನು ಕಂಡೇ ನಾನು ಬಲೆಗೆ ಬಿದ್ದದ್ದು. ಒಂದು ಕ್ಷಣವೂ ಬಿಟ್ಟಿರಲು ಸಾಧ್ಯವಿಲ್ಲ ಎಂಬಲ್ಲಿವರೆಗೆ ಮುಂದುವರಿದಾಗ ಹೆತ್ತವರನ್ನು ತೊರೆದು ಅವರ ಜೊತೆ ತೋರಣಕಟ್ಟೆಗೆ ಓಡಿ ಬಂದೆ. ಅವರ ದೂರದ ನೆಂಟನೊಬ್ಬ ನಮ್ಮನ್ನು ಬರಮಾಡಿಕೊಂಡ. ಮದುವೆಯಾಗಿದೆ ಎಂಬ ಮಾತನ್ನು ನಂಬಿ ತನ್ನ ಕೋಣೆಯನ್ನೇ ಬಿಟ್ಟುಕೊಟ್ಟು ಸಂಬಂಧಿಕರ ಮನೆಗೆ ಹೋದ. ಆಮೇಲೆ ಇಲ್ಲಿಗೆ ಬಂದೆವು. ದಿನ ಕಳೆದಂತೆ ಅವರು ಒಂದೊಂದೇ ಕಾಯಿಲೆಯ ನೆಪ ಹೇಳಿ ಮನೆಯಲ್ಲೇ ಮಲಗಲು ಸುರುಮಾಡಿದಾಗ ಕೆಲಸ ಹುಡುಕ್ತಾ ಮನೆ ಮನೆಗೆ ಹೋಗಬೇಕಾಯ್ತು. ಆಮೇಲೆ ಅವರು ಮನೆಯೊಳಗೂ ಕುಡಿದು ಬೀಳತೊಡಗಿದಾಗ, ‘ದಾಮೋದರನಿಗೆ ವಯನಾಡಿನಲ್ಲಿ ಒಬ್ಬಳಿದ್ದಾಳಂತೆ ಹೌದಾ?’ ಅಂತ ಕಮಲಜ್ಜಿ ಗುಟ್ಟಾಗಿ ಕೇಳಿದಾಗ ನನ್ನ ಎದೆ ನಡುಗಿತು. ಆದರೂ ಮುಗುಳ್ನಕ್ಕೆ. ಏನು ಮಾಡೋದು? ‘ಇನ್ನು ನಮ್ಮನೆಗೆ ಕಾಲಿಟ್ರೆ ಜಾಗ್ರತೆ’ ಅಂತ ತಂದೆತಾಯಿಯರು ಶಪಿಸಿ ಬಿಟ್ಟದ್ರಿಂದ ತವರಿಗೆ ಹೋಗಲು ಸಾಧ್ಯವಾ?”

ಸಂಜೀವ ವಿಷಾದದಿಂದ ತುಟಿ ಕಚ್ಚುತ್ತಾ ಹೇಳಿದ. “ಆದದ್ದಾಯಿತು. ಇನ್ನು ಮುಂದಿನದ್ದನ್ನು ನೋಡ್ಬೇಕು. ಆದ್ರೆ ಒಂದು ಮಾತು. ಯಾರ್ಯಾರ ಮೇಲಿನ ಸಿಟ್ಟಲ್ಲಿ ಮಗನಿಗೆ ಹೊಡೀಬೇಡ. ಹೆಂಡತಿ ಮಕ್ಕಳಿಲ್ಲದವರಿಗೇ ಗೊತ್ತು ಅವರನ್ನು ಕಳಕೊಂಡ ದುಃಖ.”

ರಾಜೀವಿ ಮಾತಿಲ್ಲದೆ ಸೆರಗನ್ನು ಸೊಂಟದ ಸುತ್ತ ಬಿಗಿದುಕೊಂಡು ಎಲ್ಲರಿಗೂ ಊಟಕ್ಕಿಡಲು ಅಣಿಯಾದಳು.

“ಸಂಜೀವಣ್ಣಾ, ನೀವು ನೊಂದುಕೊಳ್ಳದಿದ್ರೆ ನಾನೊಂದು ಮಾತು ಹೇಳಲಾ?”

“ಹೇಳು. ಅದಕ್ಕೇನಂತೆ?”

ರಾಜೀವಿ ಮುಖವನ್ನು ತಗ್ಗಿಸಿದಳು.

“ನಮ್ಮಿಬ್ರ ಬಗ್ಗೆ ಊರವರು ಏನೇನೋ ಹೇಳ್ತಿದ್ದಾರೆ.”

ಕ್ಷಣ ಹೊತ್ತು ಮೌನದ ಬಳಿಕ ಕಣ್ಣೆತ್ತಿದಾಗ ಇಬ್ಬರ ಕಣ್ಣುಗಳು ಒಂದಾದವು. ಸಂಜೀವನು ಕಲ್ಲಿನ ವಿಗ್ರಹದಂತೆ ನಿಂತು ಬಿಟ್ಟಿದ್ದ.

“ನಾನು ಇಲ್ಲಿಗೆ ಬರಬಾರದು ಅಂತಿದ್ದೀಯಾ?”

“ನಾನು ಹಾಗೆ ಹೇಳುವೆನಾ ಸಂಜೀವಣ್ಣಾ?”

ಸಂಜೀವ ದೀರ್ಘವಾಗಿ ಉಸಿರೆಳೆದುಕೊಂಡು ಅಲ್ಲಿಂದ ಹೋಗತೊಡಗಿದ. ಹೊರಗಿಳಿಯುವ ಮುನ್ನ ಇದ್ದಕ್ಕಿದ್ದಂತೆ ನಿಂತು “ಈ ಸುದ್ದಿ ಹಬ್ಬಿಸ್ತಿರೋದು ಯಾರು ಅಂತ ಚೆನ್ನಾಗಿ ಗೊತ್ತು. ನಿನ್ನ ಗಂಡನ ಗೆಳೆಯರೆಂದು ಹೇಳಿಕೊಂಡು ಅವನಿಲ್ಲದಿದ್ದಾಗ ನಿನ್ನ ಗುಡಿಸಲ ಸುತ್ತ ತಿರುಗೋ ಗಂಗು, ಗೋಪ ಮತ್ತು ಪಕ್ಕೀರನ ಮಗ ಕುಮಾರನ ಕೆಲಸ ಇದು. ಲಾರಿಯಲ್ಲಿ ಅಕ್ಕಿ ಮೂಟೆಗಳನ್ನು ಹೇರಿಕೊಂಡು ದಾಮೋದರ ಊರು ಬಿಟ್ಟ ಹೊತ್ತಿನಲ್ಲಿ, ನಿದ್ರಿಸುತ್ತಿರುವ ಮಗು ಬಾಬುವನ್ನು ಗುಡಿಸಲಲ್ಲೇ ಬಿಟ್ಟು ನೀನು ನನ್ನ ಮನೆಗೆ ಕೆಲಸಕ್ಕೆ ಬರತೊಡಗಿದ ಸಂದರ್ಭದಲ್ಲಿ ನಿನ್ನನ್ನು ಒಂಥರಾ ನೋಡ್ತಿದ್ದ ಆ ಮಂದಿಗೆ ಖಡಕ್ಕಾಗಿ ಎಚ್ಚರಿಕೆ ಕೊಟ್ಟದ್ದಕ್ಕೆ, ಅವತ್ತೊಂದು ದಿನ ಅಂಗಳದವರೆಗೂ ಬಂದಾಗ ನೀನು ಅವರನ್ನು ಬೈದು ಓಡಿಸಿದ್ದಕ್ಕೆ, ಈ ರೀತಿ ಹಗೆ ತೀರಿಸಿಕೊಳ್ತಿದ್ದಾರೆ. ದಾಮೋದರನನ್ನು ಕಾಣಲು ಹೋದಾಗ ಆಸ್ಪತ್ರೆಯಲ್ಲಿ ಹೆತ್ತ ಆ ಹೆಂಗಸನ್ನುದ್ದೇಶಿಸಿ ‘ಇವಳೂ ನನ್ನನ್ನು ವಂಚಿಸಿದ್ಲು. ಎಲ್ಲ ಆದ ಮೇಲೆ ಮಾನ ಹೋಯ್ತೂಂತ ಗೊತ್ತಾದ ಕೂಡ್ಲೇ ಜಾತಿಯವರ ಬೆಂಬಲ ಪಡೆದು ನಷ್ಟ ಪರಿಹಾರ ಕೊಡ್ಬೇಕು ಅಂತ ನ್ಯಾಯಾಲಯಕ್ಕೆ ಹೋದ್ಲು’ ಅಂತ ಹೇಳಿದಾಗಲೇ ಗೊತ್ತಾಯ್ತು ನಮ್ಮ ಮೇಲೆ ಅವನಿಗಿದ್ದ ಸಂಶಯ ಹೆಚ್ಚಾಗಿದೆಯೆಂದು. ‘ಇವಳೂ’ ಅಂದರೆ ನೀನು ಕೂಡ ಅವನನ್ನು ವಂಚಿಸಿದೆ ಎಂಬ ಅರ್ಥ ಇಟ್ಕೊಂಡು ಮಾತಾಡಿದ್ದೋ, ಬೇರೆ ಹೆಂಗಸರ ಬಗ್ಗೆ ಹೇಳಿದ್ದೋ ಗೊತ್ತಿಲ್ಲ. ಆದರೆ ನಾವಿಬ್ರು ಎಂಥವರು ಅಂತ ನಮಗೊತ್ತು. ನಾವು ಹೇಗೆಯೇ ಇದ್ರೂ ಅವ್ರಿಗೇನು? ಅವರಿವರು ಕೊಡೋ ಗುಣನಡತೆಯ ಪತ್ರ ನಮಗೇಕೆ?” ಎನ್ನುತ್ತಿದ್ದಂತೆ ದಮ್ಮು ಕಟ್ಟಿದಂತಾಗಿ ಮಾತನ್ನು ನಿಲ್ಲಿಸಿದ. ಆಳವಾಗಿ ಉಸಿರಾಡುತ್ತಾ ಶಾಂತವಾದ ದನಿಯಲ್ಲಿ “ಇರಲಿ, ಮಾತಿನ ಗೌಜಿಯಲ್ಲಿ ನಿಂಗೆ ಕೊಡಬೇಕಾದ್ದನ್ನು ಕೊಡಲು ಮರೆತೆ” ಎನ್ನುತ್ತಾ ಹತ್ತಿರ ಬರುತ್ತಿದ್ದಂತೆ ರಾಜೀವಿ ಎಂದಳು.

“ಹಣ ಬೇಡ ಸಂಜೀವಣ್ಣ, ಕೆಲಸದವರಿಗೆ ಬೇಯಿಸಿ ಹಾಕೋ ನೆಪದಲ್ಲಿ ಮಗನಿಗೂ ನಂಗೂ ಒಪ್ಪೊತ್ತಿನ ಆಹಾರವಾದ್ರೂ ಸಿಕ್ತಲ್ಲ. ಬೇರೆ ಜಾತಿಯವಳಾಗಿದ್ರೂ ನಂಗೆ ಸಹಾಯವಾಗ್ಲಿ ಅಂತ ಅಡುಗೆ ಮಾಡುವ ಅವಕಾಶ ಕೊಟ್ರಲ್ಲ, ಅದೇ ಸಾಕು.”

“ಇವತ್ತಿಗೆ ಕೆಲಸವೆಲ್ಲ ಮುಗೀತು. ಮುಂದೇನು ಮಾಡುವೆ?” ಎನ್ನುತ್ತಾ ಸಂಜೀವನು ಕೆಲವು ನೋಟುಗಳನ್ನು ತಡಿಕೆಯೆಡೆಯಲ್ಲಿ ತುರುಕಿದ.

“ರಾಜೀವಿ.”

“ಹೂಂ?”

“ನಾನಿನ್ನು ಬರಲೇ?”

ಉತ್ತರವಿಲ್ಲ.

“ನಿನ್ನ ಮೋರೆಯಲ್ಲಿ ವಿಪರೀತ ದಣಿವಿದೆ. ಕಣ್ಣುಗಳು ಬಳಲಿವೆ. ತುಟಿಗಳು ಬಿಳುಚಿಕೊಂಡಿವೆ. ಬಸಿರು ಪೂರ್ಣಹಂತಕ್ಕೆ ತಲುಪಿದೆ. ವಿಶ್ರಾಂತಿ ತಗೋ. ಏನಾದರೂ ಅಗತ್ಯವಿದ್ರೆ ನನ್ನನ್ನು ಕರೆಯಲು ಮರೀಬೇಡ” ಎನ್ನುತ್ತಾ ಅವನು ಹೊರನಡೆದ. ಅಂಗಳವನ್ನು ದಾಟಿ ತಿರುಗಿ ನೋಡಿದ. ಅವಳು ಅಲ್ಲೇ ನಿಂತುಕೊಂಡು ಅವನನ್ನೇ ನೋಡುತ್ತಿದ್ದಳು. ಏನೋ ಹೇಳಲೆಂಬಂತೆ ಅವನು ಬಾಯಿ ತೆರೆದ. ಆದರೆ ಹೇಳಲಾಗಲಿಲ್ಲ.

ನಾಚಿಕೆ ಅವಮಾನಗಳಿಂದ ಅವಳ ಕೊರಳು ಕಟ್ಟಿತ್ತು. ಶಕ್ತಿಯೆಲ್ಲ ಉಡುಗಿ ಹೋಗಿತ್ತು. ಚಾಪೆಯ ಮೇಲೆ ಮಲಗಿ ದಿಂಬಿನಲ್ಲಿ ಮುಖಮುಚ್ಚಿಕೊಂಡು ಮನದಲ್ಲೇ ರೋದಿಸಿದಳು. ‘ದೇವರೇ! ಇದನ್ನೆಲ್ಲ ಕೇಳೋದಕ್ಕಾಗಿ ನನ್ನನ್ನು ಜೀವಂತವಾಗಿಟ್ಟಿದ್ದೀಯಾ? ನನ್ನೊಂದಿಗೆ ಇನ್ನೊಂದು ಜೀವ ಯಾವುದೇ ಕಾರಣವಿಲ್ಲದೆ ಅವಮಾನಕ್ಕೊಳಗಾಗುತ್ತಿದೆಯಲ್ಲ. ಬೇರೊಬ್ಬರನ್ನು ಜೊತೆಯಲ್ಲಿ ಸೇರಿಸಿಕೊಂಡು ಕಳಂಕ ಹಚ್ಚುವುದಕ್ಕೆ ನನಗಿರುವ ಅಧಿಕಾರವಾದರೂ ಏನು? ನನ್ನ ಬಗ್ಗೆ ಯೋಚನೆ ಮಾಡಲು ಈ ಲೋಕದಲ್ಲಿ ಬೇರೆ ಯಾರಿದ್ದಾರೆ? ನನಗಾಗಿ ಮಾನ ಕಳೆದುಕೊಳ್ಳುತ್ತಿರುವ ಸಂಜೀವಣ್ಣ ನನಗೇನಾಗಬೇಕು? ಸಂಜೀವಣ್ಣಾ, ಅಪರಿಮಿತ ಪ್ರೀತಿ ವಿಶ್ವಾಸಗಳನ್ನು ಹರಿಸಿಯೇ ಅಲ್ಲವೇ ನೀವು ನನ್ನನ್ನು ಹಾಳು ಮಾಡಿರೋದು? ಆ ಕಾರಣದಿಂದಲೇ ಅಲ್ಲವೇ ನಾವು ಅವಮಾನ ಮತ್ತು ಕಳಂಕಗಳ ಭಾರ ಹೊತ್ತು ಬಿದ್ದಿರೋದು? ಇನ್ನು ಅದು ಸಾಧ್ಯವಿಲ್ಲ. ನನ್ನ ಕಣ್ಣೆದುರು ನೀವು ಅವಮಾನಿತರಾಗುವುದನ್ನು ನೋಡಲಾರೆ. ಇಲ್ಲ. ಖಂಡಿತ ಸಾಧ್ಯವಿಲ್ಲ. ಹೋಗಿ ಸಂಜೀವಣ್ಣಾ, ನನ್ನ ಕಣ್ಣೆದುರಿನಿಂದ ದೂರ ಹೋಗಿ. ನಾನೂ ನಿಮ್ಮೆದುರು ಬರುವುದಿಲ್ಲ.’

“ಅಮ್ಮಾ, ಇವತ್ತು ರಾತ್ರಿ ಅನ್ನವಾ?”

ಬಾಬುವಿನ ಪ್ರಶ್ನೆಯನ್ನು ಕೇಳಿ ರಾಜೀವಿ ಎಚ್ಚೆತ್ತಳು. ಒಲೆಯ ಮೇಲಿನ ಮಡಕೆಯನ್ನೇ ನೋಡುತ್ತಿದ್ದ ಆ ಮುದ್ದು ಮುಖವನ್ನು ಬೊಗಸೆಯಲ್ಲಿ ತುಂಬಿಕೊಳ್ಳುತ್ತಾ ಆಕೆ ನುಡಿದಳು.

“ಅಲ್ಲ ಮಗ, ಗಂಜಿ. ಇವತ್ತು ಇನ್ನೊಬ್ಬ ತುಂಟ ಬರ್ತಾನೆ. ಅವನಿಗೆ ಈ ಅಡುಗೆ.”

ಬಾಬುವಿನ ಕಣ್ಣುಗಳಲ್ಲಿ ಮುಗುಳುನಗೆ ಮೂಡಿತು. ಉರಿಯುತ್ತಿರುವ ಒಲೆಯನ್ನೇ ಅವನು ಎವೆಯಿಕ್ಕದೆ ನೋಡಿದ. ಅರಳಿದ ಕಣ್ಣುಗಳಲ್ಲಿ ಕಿಡಿಗಳು ಕುಣಿದಾಡಿದವು.

“ಮಗಾ, ನೀನೀಗ ಸಂಜೀವಣ್ಣನ ಹಿತ್ತಿಲಿಗೆ ಹೋಗ್ಬೇಕು. ಅವರಲ್ಲಿ ಒಂದ್ಮಾತು ಕೇಳಿ ಅಲ್ಲಿ ಬಿದ್ದಿರೋ ಮಾವಿನ ಹಣ್ಣನ್ನೆಲ್ಲ ಹೆಕ್ಕಬೇಕು. ಮಲ್ಲಿಗೆ ಹೂಗಳನ್ನು ಕೊಯ್ಯಬೇಕು. ಆಮೇಲೆ ಸುಮಾರು ಹೊತ್ತು ಅಲ್ಲೇ ಆಡ್ತಾ ಇರ್ಬೇಕು. ಸ್ವಲ್ಪ ಹೊತ್ತಲ್ಲಿ ಕಮಲಜ್ಜಿ ಬಂದು ಈ ತಟ್ಟಿ ಬಾಗಿಲು ಮುಚ್ತಾಳೆ. ಬಾಗಿಲು ತೆರೆದದ್ದು ಕಂಡಾಗ ಮಾತ್ರ ಇತ್ತ ಬಂದ್ರೆ ಸಾಕು.”

“ಹೂಂ.”

“ಒಳ್ಳೆ ಹುಡುಗನಾಗಿ ಆಡ್ತಾ ಇದ್ರೆ ನಿಂಗೊಂದು ಬಹುಮಾನ ಕೊಡ್ತೇನೆ.”

ಬಾಬು ಖುಷಿಯಿಂದ ನಗುತ್ತಾ, ಕರುವಿನಂತೆ ನೆಗೆಯುತ್ತಾ ಹೊರಗೆ ಓಡಿದ. ರಾಜೀವಿ ಮೆಲ್ಲನೆ ಬಾಗಿಲನ್ನು ಮುಚ್ಚಿದಳು. ಹೊಟ್ಟೆಯೊಳಗೆ ಉರಿ ಏಳುತ್ತಿತ್ತು. ಗಂಟಲು ಒಣಗುತ್ತಿತ್ತು. ನೆಲದ ಮೇಲೆ ಹಾಸಿದ ಚಾಪೆಯ ಮೇಲೆ ಮೆಲ್ಲನೆ ವಾಲುತ್ತಿದ್ದಂತೆ ನೋವು ಕಡಲಿನ ತೆರೆಯಂತೆ ಅವಳ ಟೊಂಕಕ್ಕೆ ಅಪ್ಪಳಿಸುತ್ತಾ ಹಾದು ಹೋಯಿತು.

ಆಹ್!

ಎಲ್ಲೆಲ್ಲೋ ಹರಿದಾಡಿ ಹಿಂತಿರುಗಿ ಬಂತು ಹೆದ್ದೆರೆ.

ಅಯ್ಯೋ ಅಮ್ಮಾ!


ರಾಜೀವಿ ನಿಧಾನಕ್ಕೆ ಕಣ್ಣು ಬಿಟ್ಟಳು. ಹೊಟ್ಟೆಯ ಭಾರ ಇಳಿದಿತ್ತು. ಮನಸ್ಸು ಹಗುರವಾಗಿತ್ತು.

“ಅಮ್ಮಾ, ಇದೇನಾ ಆ ಬಹುಮಾನ? ಹಾಯ್ ಒಂದು ಚಿಕ್ಕ ಮಗು.”

ಅವಳು ಮಲಗಿದಲ್ಲಿಂದಲೇ ತಲೆಯನ್ನು ಓರೆ ಮಾಡಿ ನೋಡಿದಳು. ಅವಳ ಕಣ್ಣಂಚಿನಲ್ಲಿ ಮುಗುಳುನಗೆ ಹಬ್ಬಿತು. ಮಾತು ಮತ್ತು ಸನ್ನೆಗಳ ಮೂಲಕ ಅವಳು ಹೇಳಿದಳು.

“ಮಗಾ, ಪಕ್ಕದ ಮನೆಯ ರಾಧಕ್ಕನ ಹತ್ರ ‘ಅಮ್ಮನಿಗೆ ಕುಡಿಯಲು ಸ್ವಲ್ಪ ಬಿಸಿನೀರು ಬೇಕು’ ಅಂತ ಹೇಳು.”

“ನೀನೀಗ ಆಸ್ಪತ್ರೆಯಲ್ಲಿರುವೆ ರಾಜೀವಿ.”

ಎಂಬ ಮಾತಿನೊಂದಿಗೆ ಆ ವ್ಯಕ್ತಿಯು ರಾಜೀವಿಯನ್ನು ಮೆಲ್ಲಗೆ ಹಿಡಿದೆಬ್ಬಿಸಿ ಬಿಸಿನೀರನ್ನು ಬಾಯಿಗಿರಿಸಿದಾಗ ಅವಳ ಕಣ್ಣುಗಳು ತುಂಬಿ ಬಂದವು.

“ಸಾಕು ಸಂಜೀವಣ್ಣಾ ಸಾಕು.”

“ಎಂಥ ಅನ್ಯಾಯ ರಾಜೀವಿ… ನನ್ನ ಕರೆಯಬಹುದಿತ್ತಲ್ಲ. ನಾವೆಲ್ಲ ಮನುಷ್ಯರಲ್ವಾ?”

ಆಕ್ಷೇಪದೊಳಗಿನ ಅಕ್ಕರೆಯನ್ನು ಸವಿಯುತ್ತಾ ರಾಜೀವಿಯು ಕಂಬನಿಯಿಂದ ಭಾರವಾದ ಕಣ್ಣುಗಳನ್ನು ಮುಚ್ಚಿ ತೆರೆಯುತ್ತಿದ್ದಂತೆ ಕೊರಳವರೆಗೆ ಉಕ್ಕಿ ಬಂದ ಮಾತುಗಳು ಅಲ್ಲೇ ಇಂಗಿಹೋದವು. ಮಂಪರು ಕವಿಯುತ್ತಿದ್ದಂತೆ ಕಣ್ಣುಗಳು ಮುಚ್ಚಿಕೊಳ್ಳತೊಡಗಿದಾಗ ಸಂಜೀವನ ಮಾತು ಕಿವಿಗೆ ಬಿತ್ತು.

“ನಿನ್ನ ಗಂಡ ಬಯಸಿದಂತೆ ಹೆಣ್ಣು ಮಗು. ಚಿನ್ನದ ಗೊಂಬೆಯಂಥ ಮಗು.”

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai