ಕಾಣದಂತೆ ಮಾಯವಾದವೋ ನಮ್ಮ ಕೆರೆ ಕಟ್ಟೆಗಳು…

ಹಾಸ್ಯ/ವಿಡಂಬನೆ ಬರಹ

ಒಂದಾನೊಂದು ಕಾಲದಲ್ಲಿ ಶ್ರೀ ಶ್ರೀ ಗುಂಡಣ್ಣ ಎನ್ನುವ ಮಹಾರಾಜನಿದ್ದ. ರಾಜನಿದ್ದಮೇಲೆ ರಾಣಿ, ಅರಮನೆ, ಸೇವಕರು, ಸೇನೆ ಮತ್ತು ಪ್ರಜೆಗಳು ಇರಬೇಕು ತಾನೇ…ಅವರೂ ಇದ್ದರು. ರಾಜ ದಂಪತಿಗಳು ಅಂದ ಮೇಲೆ ಅವರಿಗೆ ಮಕ್ಕಳು ಇರಬೇಕಲ್ವೇ? ಅದರಲ್ಲೂ ಗಂಡು ಸಂತಾನ ಇದ್ದೇ ಇರಬೇಕು ತಾನೇ… ದಂಪತಿಗಳಿಗೆ ಅಷ್ಟ ದಿಕ್ಪಾಲಕರಂತೆ ಎಂಟು ಜನ ಗಂಡು ಮಕ್ಕಳಿದ್ದರು. ರಾಜನ ಪುತ್ರರು ಯುವ ವಯಸ್ಸಿಗೆ ಬಂದಮೇಲೆ ಮಹಾರಾಜನಿಗೆ ವೃದ್ಧಾಪ್ಯ ಬರದೇ ಇರುತ್ತದೆಯೇ ? ಬಾಯಲ್ಲಿನ ಹಲ್ಲುಗಳ ಸಂಖ್ಯೆ ಕಡಿಮೆ ಆಯಿತು. ಎದುರಲ್ಲಿದ್ದ ವಸ್ತುಗಳು ಅಸ್ಪಷ್ಟವಾಗಿ ಕಾಣತೊಡಗಿದವು. ಬೆನ್ನು ಬಾಗಿತು. ನಡು ಮುರಿಯಿತು. ಒಂದು ದಿವಿನಾದ ದಿನ ಮಹಾರಾಜ ಹಾಸಿಗೆ ಹಿಡಿದ. ಅರಮನೆಯ ಫ್ಯಾಮಿಲಿ ಡಾಕ್ಟರ್ ಬಂದು ಶುಗರ್, ಬಿ ಪಿ ಚೆಕ್ ಮಾಡಿದರು. ಎಲ್ಲವೂ ಗಡಿ ದಾಟಿದ್ದವು. ಜೊತೆಗೆ ಅರ್ಥಟೈಸ್ ಬೇರೆ. ಎರಡೂ ಕಿಡ್ನಿಗಳು ಢಮಾರ್ ಆಗಿದ್ದವು.

ಮೆತ್ತನೆಯ ಹಾಸಿಗೆ ಹಾಕಿದ ಶಯನ ಮಂದಿರದ ಮಂಚದ ಮೇಲೆ ‘ ಖಾಯಂ ಟೆಂಟ್ ‘ ಹಾಕಿಬಿಟ್ಟ ಮಹಾರಾಜ ಶ್ರೀ ಶ್ರೀ ಗುಂಡಣ್ಣ. ಅಷ್ಟ ದಿಕ್ಕುಪಾಲಕರಂತಹ ಎಂಟು ಮಕ್ಕಳನ್ನು ಎಲ್ಲಿದ್ದೀರಿ ಎಂದು ಅಂಗಾತ ಮಲಗಿದ್ದ ಮಹಾರಾಜ ಶ್ರೀ ಶ್ರೀ ಗುಂಡಣ್ಣ ಜೋರಾಗಿ ಕೂಗಿದ ಕುತ್ತಿಗೆಯನ್ನು ಅತ್ತಿಂದಿತ್ತ ತಿರುಗಿಸಲು ಕಷ್ಟಪಡುತ್ತಾ…

” ಇಲ್ಲೇ ಇದ್ದೀವಿ ಡ್ಯಾಡಿ ನಿಮ್ಮ ರಕ್ತವನ್ನು ಹಂಚಿಕೊಂಡು ಹುಟ್ಟಿದ ಪ್ರೀತಿಯ ಎಂಟು ಗಂಡು ಸಿಂಹಗಳು …” ಎಂದು ಕೋರಸ್ಸಾಗಿ ಕೂಗಿ ಹೇಳಿದರು ಮಕ್ಕಳು.

” ಹಾಗಿದ್ದರೆ ನಾನು ಹೇಳುವುದು ಶ್ರದ್ಧೆಯಿಂದ ಕೇಳಿ…ಮಹಾರಾಜ ಹೋದ ಬಳಿಕ ದೊಡ್ಡ ಮಗ ರಾಜ್ಯ ಭಾರ ಮಾಡಬೇಕು ಎನ್ನುವುದು ‘ ಅಂದ ಕಾಲತ್ತಿಲ್ ‘ (ಹಿಂದಿನ ಕಾಲದ) ಹಳೆಯ ನಿಯಮ. ನಾನು ಮನುವಾದಿ ಅಲ್ಲ ಆದರೆ ಅಭ್ಯುದಯವಾದಿ ಅಂತ ನಿಮಗೆ ಗೊತ್ತು ತಾನೇ ? ” ಕ್ಷೀಣ ಸ್ವರದಲ್ಲಿ ನುಡಿದ ಮಹಾರಾಜ ಶ್ರೀ ಶ್ರೀ ಗುಂಡಣ್ಣ.

” ನಮಗೆ ಗೊತ್ತು ಡ್ಯಾಡಿ ನೀವು ಎಂತಹವರು ಅಂತ…ವಿಷಯವನ್ನು ನೇರವಾಗಿ ಹೇಳಿ… ಟಿ ವಿ ಬ್ರೇಕಿಂಗ್ ನ್ಯೂಸ್ ತರಹ ಹೇಳಿದ್ದೇ ಹೇಳುವ ನ್ಯೂಸ್ ರೀಡರ್ ಅಥವಾ ಹೊಸ ಯೂ ಟ್ಯೂಬರ್ ನಂತೆ ಚೂಯಿಂಗ್ ಗಮ್ ಹಾಗೆ ಎಳೆದೆಳೆದು ಹೇಳುವದು ಬೇಡ…” ಎಂದು ಮನವಿ ಮಾಡಿತು ಎಂಟನೆಯ ಹಾಗೂ ಕೊನೆಯ ಸಿಂಹ.

” ಸರಿ…ಹಾಗಿದ್ದರೆ ಯಾವ ಪೀಠಿಕೆ ಹಾಕದೆ ನೇರ ವಿಷಯಕ್ಕೆ ಬರುತ್ತೇನೆ. ಇಂದಲ್ಲ ನಾಳೆ, ನಾಡಿದ್ದು, ಒಂದು ವಾರ ಅಥವಾ ಒಂದು ತಿಂಗಳ ಬಳಿಕವಾದರೂ ವಾಪಸು ಬರದ
ಲೋಕಕ್ಕೆ ನಾನು ಹೋಗುವುದು ಗ್ಯಾರಂಟಿ…” ಎಂದ ಮಹಾರಾಜ ಶ್ರೀ ಶ್ರೀ ಗುಂಡಣ್ಣ ಸುತ್ತುವರೆದ ಎಂಟು ಗಂಡು ಸಿಂಹಗಳನ್ನು ಉದ್ದೇಶಿಸಿ.

” ಪೀಠಿಕೆ ಹಾಕುವುದಿಲ್ಲ ಎನ್ನುತ್ತಲೇ ಮಹಾ ಪೀಠಿಕೆಗೆ ನಾಂದಿ ಹಾಕುತ್ತಿರುವಿರಿ ಡ್ಯಾಡಿ…ಮನುಷ್ಯನಾಗಿ ಹುಟ್ಟಿದ ಮೇಲೆ ರಾಜನಾಗಲಿ, ಮಂತ್ರಿಯಾಗಲಿ, ಶ್ರೀಮಂತನಾಗಲಿ, ಕೊನೆಗೆ ಉಚಿತ ಭಾಗ್ಯಗಳ ಮೇಲೆ ಬದುಕುವ ಬಡವನಾದರೂ ಕೊನೆಗೊಮ್ಮೆ ರಿಟರ್ನ್ ಟಿಕೆಟ್ ಇಲ್ಲದ ಪ್ರಯಾಣ ಮಾಡಲೇಬೇಕು. ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ಸಹಜ…” ಎಂದ ವೇದಾಂತ ಕೇಸರಿ ಐದನೆಯ ಮಗ.

” ವೆರಿ ಗುಡ್… ಸತ್ಯ ಯಾವತ್ತೂ ಸತ್ಯವೇ! ನೀವೆಲ್ಲ ನನಗೆ ನಿಜವಾಗಿ ‘ ಹ್ಯಾಪಿ ಜರ್ನಿ’ ಹೇಳಬೇಕೆಂದು ಬಯಸುವ ಮುಂಚೆ ನಾನು ಹೇಳುವುದನ್ನು ಮೊದಲು ಕೇಳಿ…ಅಲ್ಲದೇ ಮುಂದಿನ ಯುವರಾಜನಿಗೆ ಪಟ್ಟಾಭಿಷೇಕ ಮಾಡುವ ನನ್ನ ಪ್ಲಾನ್ ಕುರಿತು ಒಂದೆರೆಡು ಮಾತು ಕೇಳಿ… ” ಎಂದು ಅರೆಕ್ಷಣ ಮಾತು ನಿಲ್ಲಿಸಿದ ಮಹಾರಾಜ ಶ್ರೀ ಶ್ರೀ ಗುಂಡಣ್ಣ ಖೊಕ್ ಖೊಕ್ ಎಂದು ಕೆಮ್ಮುತ್ತಾ…

” ಅದಕ್ಕೆ ನಾವು ಏನು ಮಾಡಬೇಕು ಹೇಳಿ ಪಿತಾಶ್ರೀ…ಎಂಟು ಸಿಂಹಗಳು ಒಂದೇ ಸಲ ಸಿಂಹಾಸನ ಏರಲು ಸಾಧ್ಯವಿಲ್ಲ…ಅಲ್ಲದೆ ಅದರಲ್ಲಿ ಒಟ್ಟಿಗೆ ಕೂಡಲು ಅಷ್ಟು ಜಾಗವೂ ಇರುವುದಿಲ್ಲ…ನೀವು ಈಗಾಗಲೇ ಹೈ ಬಿ ಪಿ & ಶುಗರ್ ಪೇಷಂಟ್. ನಿಮ್ಮ ಮನಸಿನಲ್ಲಿ ಇರುವುದನ್ನು ಬೇಗ ಹೊರಗೆ ಹಾಕಿ ಮನಸು ಹಗುರ ಮಾಡಿಕೊಳ್ಳಿ ಡ್ಯಾಡ್…” ಎರಡನೆಯ ಸಿಂಹವೊಂದು ತಂದೆಯನ್ನು ಗೋಗರೆಯಿತು…

” ನಮ್ಮ ಅಪ್ಪಾಜಿ ಹಾಗೂ ಅವರ ಅಪ್ಪಾಜಿ ಕಾಲದಿಂದಲೂ ಈ ನಗರದಲ್ಲಿ ಎಂದೂ ಬತ್ತದ ಎಂಟು ದೊಡ್ಡ ಕೆರೆ ಕಟ್ಟೆಗಳು ಇದ್ದವಂತೆ…ನನ್ನ ರೂಲಿಂಗ್ ಅವಧಿಯಲ್ಲಿ ವಂಧಿ ಮಾಗಧರ ಭಜನೆಯನ್ನು ಕೇಳುವದರಲ್ಲೇ ಹೆಚ್ಚು ಕಾಲ ಕಳೆದೆ. ಹೀಗಾಗಿ ಅವುಗಳ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಯುವಕರಾದ ನೀವು ಈಗ ಆ ಅಷ್ಟ (ಎಂಟು) ಕೆರೆಗಳು ಎಲ್ಲಿವೆಯೋ ಪತ್ತೆ ಹಚ್ಚಿ ಅಲ್ಲಿಂದ ಒಂದು ತಾಮ್ರದ ಚೊಂಬಿನಲ್ಲಿ ನೀರು ತುಂಬಿಕೊಂಡು ತಂದು ನಮ್ಮ ಅರಮನೆಯಲ್ಲಿ ಸ್ಥಾಪಿತವಾದ ನಮ್ಮ ರಾಜ್ಯದ ಅಧಿ ದೇವರಾದ ಈಶ್ವರ ಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ಯಾವ ಮಗನು ಮೊದಲು ಕೆರೆಯಿಂದ ನೀರು ತರುತ್ತಾನೋ ಅವನಿಗೇ ಪಟ್ಟಾಭಿಷೇಕ ಗ್ಯಾರಂಟಿ! ” ಎಂದ ಮಹಾರಾಜ ಶ್ರೀ ಶ್ರೀ ಗುಂಡಣ್ಣ ಅಲೆ ಅಲೆಯಾಗಿ ಬಂದ ಕೆಮ್ಮನ್ನು ನಿಯಂತ್ರಿಸುವಲ್ಲಿ ವಿಫಲನಾಗಿ…

” ಓಹ್…ಇಷ್ಟೇನಾ ? ನಮ್ಮನ್ನೆಲ್ಲಿ ಒಲಂಪಿಕ್ಸ್ ನಲ್ಲಿ ಗೋಲ್ಡ್ ಮೆಡಲ್ ಗೆದ್ದು ಬನ್ನಿ ಎಂದು ಹೇಳುತ್ತಿರೆಂದು ಭಯ ಪಟ್ಟೆವು… ಓಕೆ ಡ್ಯಾಡಿ…ನಾವು ನಿಮ್ಮ ಅಷ್ಟ ಸಿಂಹಗಳು ಅಷ್ಟ ದಿಕ್ಕುಗಳತ್ತ ಧಾವಿಸಿ ಓಡಾಡಿ ತಿರುಗಾಡಿ ಕೆರೆ ಕಟ್ಟೆಗಳನ್ನು ಹುಡುಕಿ ತಾಮ್ರದ ಚೊಂಬಿನಲ್ಲಿ ನೀರು ತರಲು ಈಗಲೇ ಹೊರಡುವೆವು. ನಿಮ್ಮ ಆಶೀರ್ವಾದ ಇರಲಿ ಅಪ್ಪಾಜಿ…ಬ್ರದರ್ಸ್ ಹರಿ ಅಪ್….” ಎಂದು ಯುವ ಸಿಂಹವೊಂದು ಗರ್ಜಿಸಿ ಹೇಳಿತು.

ಮಹಾರಾಜ ಶ್ರೀ ಶ್ರೀ ಗುಂಡಣ್ಣನ ಎಂಟು ಪುತ್ರರತ್ನರು ಎಂಟು ದಿಕ್ಕುಗಳತ್ತ ಕೆರೆಯ ಭಾವಚಿತ್ರಗಳೊಂದಿಗೆ ಪ್ರಯಾಣ ಆರಂಭಿಸಿದರು. ಸೈನಿಕರ ಹಾಗೂ ವಂಧಿ ಮಾಗದರ ಜೊತೆ ಕುದುರೆಯ ಮೇಲೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಕುದುರೆ ಸವಾರಿ ಮಾಡಿದರು. ನಂತರ ವಾಕ್ ಆರಂಭಿಸಿದರು. ಎದುರಿಗೆ ಬಂದ ಪ್ರತೀ ಪ್ರಜೆಗೆ ತಮ್ಮಲ್ಲಿರುವ ಕೆರೆಯ ಭಾವಚಿತ್ರವನ್ನು ತೋರಿಸಿ ಇದನ್ನು ಎಲ್ಲಿಯಾದರೂ ಅಥವಾ ಯಾವಾಗಾದರೂ ನೋಡಿದ್ದೀರಾ ? ಎಂದು ಪ್ರಶ್ನಿಸಿದರು. ಬಹಳಷ್ಟು ಜನರು ಕೆರೆಯ ಫೋಟೋ ನೋಡಿ ಇದರಲ್ಲಿ ನೀರು ಇರುತ್ತದೆಯೇ ಎಂದು ಆಶ್ಚರ್ಯಚಿಕಿತಕರಾಗಿ ಉಲ್ಟಾ ಪ್ರಶ್ನಿಸಿದರು. ಇನ್ನು ಮಹಾರಾಜರ ಪುತ್ರರತ್ನ ತಂಡ ಇಂತಹ ಸಾಮಾನ್ಯ ಯುವ ಬೇವರ್ಸಿಗಳನ್ನು ಕೇಳಿದರೆ ಲಾಭವಿಲ್ಲ ಎಂದು ಮನಗಂಡು ಮೂಲೆಗುಂಪಾದ ಕಣ್ಣು ಸರಿಯಾಗಿ ಕಾಣದ, ಕಿವಿ ಕೇಳಿಸದ ಹಣ್ಣು ಹಣ್ಣು ಮುದುಕರನ್ನು ಹುಡುಕುತ್ತಾ ಹೊರಟಿತು. ಕೊನೆಗೊಮ್ಮೆ ಅದರಲ್ಲಿ ವಿಜಯಿಶಾಲಿಯಾಯಿತು. ಅಂತಹ ವಯೋ ವೃದ್ಧರನ್ನು ಹುಡುಕಿ ತಮ್ಮಲ್ಲಿನ ಕೆರೆಯ ಚಿತ್ರ ಪಟ ತೋರಿಸಿ ಪ್ರಶ್ನಿಸಿದರು.

ಮುಪ್ಪಾದ ಮುದುಕರು ತಮ್ಮ ಬೊಚ್ಚು ಬಾಯಿಯಿಂದ ” ನೀವು ತೋರಿಸಿದ ಚಿತ್ರದಲ್ಲಿನ ಕೆರೆಯನ್ನು ನಾವು ಯೌವನದಲ್ಲಿದ್ದಾಗ ನೋಡಿದ್ದೇವೆ…ಅಲ್ಲಿ ಈಜು ಸಹಾ ಆಡಿದ್ದು ನೆನಪಿದೆ ಎಂದು ತಮ್ಮ ‘ ಫ್ಲಾಶ್ ಬ್ಯಾಕ್ ‘ ಓಪನ್ ಮಾಡಿದರು. . ಆದರೆ ಒಬ್ಬರಿಗೂ ಈಗ ಆ ಕೆರೆ ಎಲ್ಲಿದೆ ಎಂದು ಹೇಳಲು ಸಾಧ್ಯವಾಗಲಿಲ್ಲ…

ಕೆರೆಗಳು ಎಲ್ಲಿವೆಯೋ ಯಾರಿಗೂ ಗೊತ್ತಾಗುತ್ತಿಲ್ಲ. ಇನ್ನು ಅಲ್ಲಿಂದ ಒಂದು ಚೊಂಬು ನೀರನ್ನು ಶಿವನ ಜಲಾಭಿಷೇಕಕ್ಕೆ ತರುವುದು ಸಾಧ್ಯವಿಲ್ಲ. ಏನು ಮಾಡಬೇಕೋ ದಿಕ್ಕು ತೋಚಲಿಲ್ಲ ಮಹಾರಾಜ ಶ್ರೀ ಶ್ರೀ ಗುಂಡಣ್ಣನ ಪುತ್ರರಿಗೆ. ಕೊನೆಗೆ ದಟ್ಟ ಕಾಡಿನಲ್ಲಿ ಒಂಟಿ ಕಾಲಿನಲ್ಲಿ ಘೋರ ತಪಸ್ಸು ಮಾಡುತ್ತಾ ಮೈಗೆಲ್ಲಾ ಬೂದಿ ಬಳೆದುಕೊಂಡ ಬೂದಿ ಬಾಬಾ (ಮದುವೆಯ ಬಂಧನವನ್ನು ಧಿಕ್ಕರಿಸಿ ತುಂಡರಿಸಿ ಬಂದ ಧೀರ ಅರ್ಥಾತ್ ಕಾಲ ಜ್ಞಾನಿ!) ನನ್ನು ಭೇಟಿಯಾದರು. ಅವರನ್ನು ಕಳೆದು ಹೋದ ಕೆರೆಗಳು ಎಲ್ಲಿವೆ ಎಂದು ತಮ್ಮ ದಿವ್ಯ ದೃಷ್ಟಿಯಿಂದ ನೋಡಿ ಹುಡುಕಿ ಕೊಡಬೇಕೆಂದು ಮನವಿ ಮೇಲೆ ಮೇಲ್ಮನವಿ ಮಾಡಿಕೊಂಡರು. ಅಲ್ಲದೇ ಕೆರೆ ಕಟ್ಟೆಗಳು ಎಲ್ಲಿವೆ ಎಂದು ತಾವು ಹುಡುಕಿ ಹೇಳುವವರೆಗೆ ಇಲ್ಲೇ ತಮ್ಮೊಂದಿಗೆ ಕಾಡಿನಲ್ಲಿ ವಾಸ ಮಾಡುತ್ತೇವೆಯೇ ಹೊರತು ತಾವು ರಾಜ್ಯಕ್ಕೆ ಮರಳುವುದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿ ಬಾಬಾನ ಎದುರಿನಲ್ಲಿ ಚೇರುಗಳನ್ನು ಹಾಕಿಕೊಂಡು ಸಾಲಾಗಿ ಕುಳಿತರು.

ಒಂದು ಇಡೀ ದಿನದ ಅಖಂಡ ಮೌನದ ಬಳಿಕ ಆ ಸನ್ಯಾಸಿ ಬೂದಿ ಬಾಬಾ ಮೊದಲು ಕಣ್ಣು ತೆರೆದ ನಂತರ ಬಾಯಿ ತೆಗೆದ…ತನ್ನ ದಿವ್ಯ ದೃಷ್ಟಿಗೆ ನಿಲುಕಿದ ಸೀನನ್ನು ಕಾಮೆಂಟರಿ ರೂಪಕದಲ್ಲಿ ಹೇಳಿದ ಬೂದಿ ಬಾಬಾ… ” ಕಾಣದಂತೆ ಮಾಯವಾದ ಎಂಟು ಕೆರೆ ಕಟ್ಟೆಗಳಲ್ಲಿ ಎರಡು ಅರಮನೆಯ ಕೆಳಗೆ…ಒಂದು ಪ್ರಧಾನ ಮಂತ್ರಿಯ ನಿವಾಸದ ಸೆಲ್ಲಾರಿನಲ್ಲಿ…ಮತ್ತೊಂದು ಸೇನಾ ದಂಡ ನಾಯಕನ ಮನೆಯ ಮುಂದಿನ ಅಂಗಳದಲ್ಲಿ… ಇನ್ನೊಂದು ರಾಜ ಗುರುಗಳ ಮನೆಯ ಹಿತ್ತಲಲ್ಲಿ… ಮಗದೊಂದು ಮಹಾರಾಣಿಯ ಆಪ್ತೆ ಹಾಗೂ ಮುಖ್ಯ ಸೇವಕೀಯ ಮನೆಯ ತಳ ಭಾಗದಲ್ಲಿ… ಇನ್ನೂ ಎರಡು ರಾಜ್ಯದ ಅತ್ಯಂತ ಶ್ರೀಮಂತರು ಹಾಗೂ ಮಹಾರಾಜನ ಬಲಗೈ ಬಂಟರ ನಿವಾಸಗಳ ಕೆಳಗೆ ಭೂಗತವಾಗಿವೆ. ಈಗ ಕೆರೆಗಳು ಮತ್ತೊಮ್ಮೆ ಪುನರ್ಜನ್ಮ ಪಡೆಯಲಾರವು ಅಲ್ಲದೇ ಇನ್ನೊಮ್ಮೆ ದರ್ಶನ ಭಾಗ್ಯ ಕೊಡಲಾರವು. ಹೀಗಾಗಿ ಅವುಗಳ ಆಸೆ ಬಿಟ್ಟು ಬೇರೆ ಏನಾದರೂ ಸಣ್ಣ ಪುಟ್ಟ ಕೆಲಸಗಳಿದ್ದರೆ ಮಾಡಿಕೊಳ್ಳಿ ” ಎಂದು ಮಹಾರಾಜನ ಮಕ್ಕಳಿಗೆ ಹಿತವಚನ ಹೇಳಿ ಕಳಿಸಿದರು ಬೂದಿ ಬಾಬಾ.

ಕೊನೆಗೊಂದಂತೂ ಸ್ಪಷ್ಟವಾಯಿತು. ಕೆರೆ ಕಟ್ಟೆಗಳನ್ನು ಆಹುತಿ ತೆಗೆದುಕೊಂಡವರೆಲ್ಲಾ ರಾಜ್ಯದಲ್ಲಿ ಅಧಿಕಾರ ಇದ್ದವರು ಅಥವಾ ಅವರ ಸಂಬಂಧಿಕರು. ಎಲ್ಲರೂ ಆಯಕಟ್ಟಿನ ಜಾಗಗಳಲ್ಲಿ ಇರುವವರೇ… ಇನ್ನು ಅವರ ಅರಮನೆಯಂತಹ ಭವನಗಳನ್ನು ಮುಟ್ಟುವುದಾಗಲಿ ಅಥವಾ ಮುಟ್ಟುಗೋಲು ಹಾಕುವದಾಗಲಿ ಸಾಧ್ಯವಿಲ್ಲದ ಮಾತು. ಒಂದು ವೇಳೆ ಅಂಥವುಗಳನ್ನು ಒಡೆದು ಹಾಕಿದರೆ ಅಲ್ಲಿ ಮತ್ತೆ ಕೆರೆಗಳನ್ನು ಕಾಣುವುದು ಸಾಧ್ಯವೇ ? ಇಂತಹ ವಿಷಮ ಪರಿಸ್ಥಿತಿಯಲ್ಲಿ ಅಷ್ಟ ಸಿಂಹಗಳಲ್ಲಿ ಯಾರಿಗೆ ಪಟ್ಟಾಭಿಷೇಕ ಆಗಬೇಕು? ಅದಕ್ಕೂ ಮುನ್ನ ಶಿವನಿಗೆ ಜಲಾಭಿಶೇಕ ಯಾರು ಮಾಡಬೇಕು ? ಹೀಗೆಲ್ಲ ಸಿಕ್ಕಾಪಟ್ಟೆ ಆಲೋಚನೆಗೆ ಸಿಕ್ಕ ಮಹಾರಾಜರ ಪುತ್ರರ ತಲೆ ಕನ್ನಡ ಧಾರಾವಾಹಿಗಳನ್ನು ಹಗಲೂ ರಾತ್ರಿ ಬಿಟ್ಟೂ ಬಿಡದೆ ನೋಡುವ ಆದರ್ಶ ಗೃಹಿಣಿಯ ಜಿಡ್ಡು ಹಿಡಿದ ತಲೆಯಂತಾಯಿತು!

ಮಹಾರಾಜ ಶ್ರೀ ಶ್ರೀ ಗುಂಡಣ್ಣನ ಪುತ್ರ ರತ್ನರು ಗುಂಪಾಗಿ ಹಗಲೇ ದುರ್ಬೀನು ಹಾಕಿ ಹುಡುಕಿದರೂ ಭೂಗತವಾದ ಕೆರೆ ಕಟ್ಟೆಗಳು ಮತ್ತೆ ಕಾಣುವದಿಲ್ಲ. ನಿಜ ಹೇಳಬೇಕೆಂದರೆ ಮಹಾರಾಜ ಶ್ರೀ ಶ್ರೀ ಗುಂಡಣ್ಣ ಮಲಗಿದ ಶಯನಗೃಹದ ಕೆಳಗೇ ಒಂದು ಕೆರೆ ಶಾಶ್ವತ ನಿದ್ರೆಯಲ್ಲಿದೆ! ಇಂತಹ ಶಾಕಿಂಗ್ ಸತ್ಯವನ್ನು ಬಾಬಾ ಅಲ್ಲದೆ ಬೇರೆ ಯಾರೂ ಹೇಳಲು ಸಾಧ್ಯವಿಲ್ಲ… ಹಲವು ದಿನಗಳು ಸುತ್ತಾಡಿದರೂ ಕೆರೆಗಳು ಕಾಣಲಾರದೆ ದುಃಖಿತರಾಗಿ ಬರಿಗೈಲಿ ವಾಪಸು ಬಂದರು ಅರಮನೆಗೆ ಮಹಾರಾಜ ಶ್ರೀ ಶ್ರೀ ಗುಂಡಣ್ಣನ ಎಂಟೂ ಮಕ್ಕಳು. ಮಹಾರಾಜರು ಹಾಸಿಗೆಯ ಮೇಲೆ ಶಾಂತವಾಗಿ ಮಲಗಿದ್ದರು. ನೆರೆದ ಸಿಂಹಗಳು ಮಹಾರಾಜ ಶ್ರೀ ಶ್ರೀ ಗುಂಡಣ್ಣ ಅವರಿಗೆ ‘ ಹ್ಯಾಪಿ ಜರ್ನಿ ‘ ಎಂದು ವಿಶ್ ಮಾಡುವ ಮುಂಚೆ, ಅದರಲ್ಲೂ ಯಾವ ಮಗನಿಗೆ ಪಟ್ಟಾಭಿಷೇಕ ಮಾಡಬೇಕು ಎಂದು ಆಫೀಸಿಯಲ್ ಅನೌನ್ಸ್ ಮಾಡುವ ಮೊದಲೇ ಸೈಲೆಂಟ್ ಆಗಿ ವಾಪಸು ಬರದ ಲೋಕಕ್ಕೆ ‘ ಸೋಲೋ ‘ (ಏಕಾಕಿ) ಪ್ರಯಾಣ ಮಾಡಿಯೇ ಬಿಟ್ಟರು ಮಹಾರಾಜ ಶ್ರೀ ಶ್ರೀ ಗುಂಡಣ್ಣನವರು.

ಇದು ಒಂದು ರಾಜ್ಯದಲ್ಲಿನ ಪರಿಸ್ಥಿತಿ ಅಂತೂ ಅಲ್ಲ. ಹೆಚ್ಚೂ ಕಡಿಮೆ ನಮ್ಮ ದೇಶದ ಎಲ್ಲ ರಾಜ್ಯಗಳ ಹಣೆ ಬರಹ ಇದೇ ತಾನೇ!


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ಕಾಣದಂತೆ ಮಾಯವಾದವೋ ನಮ್ಮ ಕೆರೆ ಕಟ್ಟೆಗಳು…”

  1. ಮ. ಮೋ. ರಾವ್, ರಾಯಚೂರು

    ವಾಸ್ತವದ ಸುಂದರವಾದ ವಿಡಂಬನೆ. ರಾಜಾಕಾಲುವೆ, ಕೆರೆ, ಮಣ್ಣಿನ ಗುಡ್ಡಗಳನ್ನು ಗುಳುಂ ಮಾಡಿದರೆ ವಿಶಾಲವಾದ ನಿವೇಶನ ಅನಾಯಾಸ ದೊರೆಯುವುದಲ್ಲದೆ ಅನೇಕವೇಳೆ ಆಸ್ತಿತೆರಿಗೆಯೂ ಮಿಗುತ್ತದೆ! ಜನಜೀವನಕ್ಕೆ ಅಗತ್ಯವಾದ ನೀರಿನ ಅನುಕೂಲತೆಗಳನ್ನು ಹಾಳುಮಾಡಿ ಪೀಳಿಗೆಗಳನ್ನು ಸಂಕಷ್ಟಕ್ಕೆ ಈಡುಮಾಡುತ್ತಾರೆ. ಇದು ಒಂದು ಸಕಾಲಿಕ ಎಚ್ಚರಿಕೆಯ ಗಂಟೆಯಾಗಿದೆ. ಅಭಿನಂದನೆಗಳು.

  2. Dattaraj Kulkarni

    ಕೆರೆಗಳಿಂದ ಊರಿಗೆ ಕುಡಿಯುವ, ಬಳಸುವ ಮತ್ತು ಕೃಷಿಗೆ ಆಸರೆಯಾಗಿರುವಂಥ ಜಲ ಅತ್ಯಾಮೂಲ್ಯವಾದ್ ಆಸ್ತಿ .
    ಸರಕಾರ , ಶಾಸಕರು , ಮಂತ್ರಿಗಳು ಮತ್ತು ಪ್ರಜೆಗಳು ಇದರ ಬಗ್ಗೆ ಅವಲೋಕನ ಮಾಡಿ ಕೆರೆಗಳನ್ನು ಊಳಿಸಿದರೆ ನಮ್ಮೆಲ್ಲರಿಗೆ ನೀರಿನ ಅಭಾವ ಆಗಲಾರದು .
    ರಾಘವೇಂದ್ರರ ರಾಜನ ಕಥೆಯ ಮೂಲಕ ಎಲ್ಲರನ್ನು ಎಚ್ಚರ ಗೊಳಿಸಿದ್ದಾರೆ .
    ಶುಭವಾಗಲಿ 💐💐

  3. ಕಾಡು ಕಡಿದು ಕೆರೆ ನುಂಗಿ ಕಾಂಕ್ರೀಟ್ ಕಾಡು
    ಕಟ್ಟಿ ಮಳೆ ದೂರಮಾಡಿ ಈಗ ಕೆರೆ ಬಗ್ಗೆ ಯೋಚಿಸುವ ಮಹಾತ್ಮರ ಬಗ್ಗೆ ವಿಡಂಬನೆ
    ಮೊನಚಾಗಿದೆ
    ಒಮ್ಮೆ ನಗು ಬಂದರೂ ಮತ್ತೊಮ್ಮೆ ಬೇಸರ ಆಗುತ್ತದೆ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai