ಗ್ರಾಮೀಣ ಪ್ರದೇಶದಲ್ಲಿ ‘ಶಾಲಿಗುಡಿ’ ಎಂಬ ಪದ ಬಳಕೆಯಲ್ಲಿದೆ. ಶಾಲೆ ಎಂದರೆ ವಿದ್ಯಾರ್ಜನೆ ನಡೆಯುವ ಸ್ಥಳ, ಗುಡಿ ಎಂದರೆ ಅಕ್ಷರದೇವತೆಯಾದ ಶಾರದೆಯ ನೆಲೆವೀಡು ಎಂದು ಗ್ರಾಮೀಣ ಜನರು ನಂಬುತ್ತಾರೆ. ಪಾಠವನ್ನು ಬೋಧಿಸುವ, ತಮ್ಮಲ್ಲಿರುವ ಅಗಾಧ ಜ್ಞಾನವನ್ನು ಮಕ್ಕಳಿಗೆ ಧಾರೆಯೆರೆಯುವ, ಮಾರ್ಗದರ್ಶನ ನೀಡುವ ಶಿಕ್ಷಕರು ಇಲ್ಲಿನ ಅರ್ಚಕರು. ವಿದ್ಯಾರ್ಥಿಗಳು ಜ್ಞಾನ ದೇವತೆಯನ್ನು ಆರಾಧಿಸುವ ಭಕ್ತಾಧಿಗಳು ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕುವ ಈ ಪದ ಜನಪದರಿಗೆ ಶಾಲೆಯ ಬಗೆಗಿರುವ ಭಕ್ತಿ ಭಾವವನ್ನು ಬಿಂಬಿಸುತ್ತದೆ. ಸರ್ಕಾರಿ ಶಾಲೆಗಳು ಸಮಾಜದ ಆರೋಗ್ಯವನ್ನು ಕಾಪಾಡುವ ಕೇಂದ್ರಗಳಿದ್ದಂತೆ. ಭವಿಷ್ಯದ ಜನಾಂಗವನ್ನು ಸರಿದಾರಿಗೆ ತರುವ ಸಾಂಸ್ಕೃತಿಕ ಗುಡಿಗಳಿದ್ದಂತೆ. ಇವು ಕೇವಲ ವಿದ್ಯಾದೇಗುಲಗಳಲ್ಲ. ಮುಂದಿನ ಜನಾಂಗವನ್ನು ರೂಪಿಸುವ ತಾಣಗಳೂ ಹೌದು.

ಇಂಥ ಪೂಜ್ಯನೀಯವಾದ ‘ಶಾಲಿಗುಡಿ’ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದಲ್ಲಿ ಸಾವಿರದ ಒಂಬೈನೂರಾ ಹದಿನೆಂಟನೇ ಇಸವಿಯಲ್ಲಿ ಸ್ಥಾಪನೆಗೊಂಡಿತು. ಗ್ರಾಮಸ್ಥರಾದ ದಿ. ರುದ್ರಪ್ಪ ವೀರಬಸಪ್ಪ ಮಲ್ಲಾಡದ ಇವರು ಶಾಲೆಗಾಗಿ ಕಟ್ಟಡ ನಿರ್ಮಿಸಲು 39 ಗುಂಟೆ ಭೂಮಿಯನ್ನು ಸಾವಿರದ ಒಂಬೈನೂರಾ ಐವತ್ತೊಂದರಲ್ಲಿರಲ್ಲಿ ದಾನ ಮಾಡಿದ್ದರು. ಇಂಥ ನಿಸ್ವಾರ್ಥ ಮನಸ್ಸುಗಳು ನಮ್ಮೂರಿನಲ್ಲಿವೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನಮ್ಮ ಶಾಲೆ ಇಂದಿಗೆ ಶತಮಾನವನ್ನು ಪೂರೈಸಿ ಇತಿಹಾಸವನ್ನು ನಿರ್ಮಿಸಿದೆ. ಈ ಸವಿನೆನಪನ್ನು ಸಂಭ್ರಮದಿಂದ ಆಚರಿಸಲು ಶಾಲಿಗುಡಿ ತನ್ನನ್ನು ಬಲು ಚೆಂದವಾಗಿ ಅಲಂಕರಿಸಿಕೊಂಡು ನಮ್ಮ ನಿಮ್ಮೆಲ್ಲರ ಬರುವಿಗೆ ಉತ್ಸುಕತೆಯಿಂದ ಕಾಯುತ್ತಿದೆ. ಇಲ್ಲಿ ಗೋಡೆಗಳು ಮಾತಾಡುತ್ತವೆ. ನೆನಪುಗಳು ಉಸಿರಾಡುತ್ತವೆ. ಇದು ನೆನಪುಗಳನ್ನು ಅಕ್ಷರವಾಗಿಸುವ ಹೊತ್ತು ಕೂಡ ಹೌದು.
ನನ್ನವ್ವ ಈ ಶಾಲೆಯಲ್ಲಿ ನಾಲ್ಕನೇ ಇಯತ್ತೆಯ ತನಕ ಓದಿದವಳು. ಅವಳಿಗೆ ತನ್ನ ಹೆಸರಿನ ಸಹಿ ಮಾಡುವುದು ಬಿಟ್ಟು ಮತ್ತೇನನ್ನೂ ಓದಲೂ ಬರೆಯಲು ಬಾರದು. ಅವಳು ಕಾಗದ ಪತ್ರಗಳಿಗೆ ಸಹಿ ಹಾಕುವಾಗ ಆಕೆಯನ್ನು ಗಮನಿಸುವುದು ನನ್ನ ಹವ್ಯಾಸ. ‘ಮಹಾದೇವಕ್ಕ’ ಎಂದು ಬರೆಯುವಾಗ ‘ಕ’ ದಲ್ಲಿ ಬರುವ ನಡುವಿನ ಗೆರೆಗೂ ಕೊಂಬು ನೀಡುತ್ತಾಳೆ. ಒಟ್ಟಿನಲ್ಲಿ ‘ಕ’ ಅಕ್ಷರಕ್ಕೆ ಅವಳ ಪ್ರಕಾರ ಎರಡು ಕೊಂಬುಗಳು ಉಂಟು. ಅದನ್ನು ನೋಡಿದಾಗಲೆಲ್ಲ “ನಿಂಗೆ ಯಾರವ್ವ ಶಾಲಿ ಕಲಿಸಿದ ಮಾಸ್ತರ?” ಎಂದು ಅವಳನ್ನು ಕೆಣಕುವ ಭಂಗಿಯಲ್ಲಿ ಕೇಳುತ್ತೇನೆ. “ಏ ನೀನು ಅಷ್ಟ ಶಾಲಿ ಕಲ್ತಿ ಏನ್? ನಮಗು ಮಾಸ್ತರು ಇದ್ರು. ಇಲ್ಲೇ ನಮ್ಮೂರಾಗ ಕುಮಾರಸ್ವಾಮಿ ಡಾಕ್ಟರ್ ಅದಾರಲ್ಲ, ಅವರ ಅಪ್ಪಾರು ಪಂಚಾಕ್ಷರಯ್ಯ ಮಠದ ವೀರಭದ್ರಯ್ಯ ಇಂಡುವಳ್ಳಿ, ಮತ್ತ ಮಲ್ಲಪ್ಪ ಮಾಸ್ತರ (ಮಲ್ಲನಗೌಡ ತಂಗೋಡರ) ಇವ್ರೆಲ್ಲಾ ಶಾಲಿ ಕಲ್ಸ್ಯಾರ. ನಮ್ಗ ಓದಾಕ ಬರಿಯಾಕ ಬರಲಿಲ್ಲಂದ್ರ ಹಸಿ ತೊಗರಿ ಕಟ್ಟಿಗೆ ತಗೊಂಡು ಮೊಣಕಾಲಿಗೆ ರಫ್ ರಫ್ ಅಂತಾ ಹೊಡೆಯೋರು.” ಹೀಗೆ ಗುರುಗಳ ಬಗ್ಗೆಯೂ ತನ್ನ ಶಾಲಾ ದಿನಗಳ ಬಗ್ಗೆಯೂ ಹೇಳುವುದನ್ನು ಗಂಟೆಗಳ ಕಾಲ ಮುಂದುವರಿಸುತ್ತಾಳೆ. ಹಾಗೆ ಹೇಳಿಕೊಳ್ಳುವಾಗೆಲ್ಲ ಅವಳ ಕಣ್ಣುಗಳಲ್ಲಿ ಇಣುಕುವ ಹಿಗ್ಗನ್ನು ಬಣ್ಣಿಸಿದರೆ ನನ್ನ ಪದಗಳು ಸಪ್ಪೆ ಎನಿಸಬಹುದು. ಅವಳ ಗುರುಗಳು ಈಗಿಲ್ಲ. ಆದರೆ ಅವರು ಅವ್ವನ ನೆನಪುಗಳಲ್ಲಿ ಹಸಿರಾಗಿರುವುದು ಕಂಡು ಗುರು ಶಿಷ್ಯರ ಬಾಂಧವ್ಯವನ್ನು ನೆನೆದು ಮೈ ರೋಮಾಂಚನಗೊಳ್ಳುತ್ತದೆ.
ಬುದ್ಧನಿಗೆ ಬೋಧಿವೃಕ್ಷವಿದ್ದಂತೆ, ಶಿಷ್ಯನಿಗೆ ಗುರು. ನಮ್ಮೊಳಗೆ ಬೀಜವಾಗಿದ್ದ ಅರಿವನ್ನು ಗುರು ತಮ್ಮ ಜ್ಞಾನಗಂಗೆಯನ್ನು ಧಾರೆಯೆರೆಯುತ್ತ ವಸಂತದ ಹಚ್ಚ ಹಸಿರಾಗಿ ಚಿಗುರಿಸುತ್ತಾರೆ. ದಿವ್ಯ ಕರಗಳಿಂದ ಆಳ ಅಗಲಗಳನ್ನು ವಿಸ್ತರಿಸುತ್ತಾರೆ. ಕೊನೆಗೊಂದು ದಿನ ಬೀಜ ಮರವಾಗಿ ನಿಲ್ಲುತ್ತದೆ. ತಾನೇ ಬಿತ್ತಿದ ಬೀಜ ಮರವಾಗಿ ಬೆಳೆದು, ಇತರರಿಗೆ ನೆರಳಾಗಿದ್ದು ಕಂಡ ಗುರು ಎಲ್ಲಿಲ್ಲದ ಹೆಮ್ಮೆಯಿಂದ ತಲೆಯೆತ್ತಿ “ನೋಡಿ ಇವನು ನನ್ನ ಶಿಷ್ಯ” ಎಂದು ನಾಲ್ಕು ಜನರಲ್ಲಿ ಹೇಳಿಕೊಳ್ಳುತ್ತಾರೆ. ಇತಿಹಾಸದ ಪುಟಗಳಲ್ಲಿ ಗುರುಭಕ್ತಿಗೆ ಮೊದಲ ಸಾಲಿನಲ್ಲಿ ನಿಲ್ಲುವ ಏಕಲವ್ಯ ಯಾರಿಗೆ ತಾನೇ ಗೊತ್ತಿಲ್ಲ? ಮಹಾಭಾರತದಲ್ಲಿ ವ್ಯಾಸ ಮಹರ್ಷಿ ಆತನನ್ನು ಕಟ್ಟಿಕೊಟ್ಟ ರೀತಿ ಅನನ್ಯ. ಆ ಮಹಾಕಾವ್ಯವನ್ನು ಆಧಾರವಾಗಿಟ್ಟುಕೊಂಡು ಕುವೆಂಪು ಬರೆದ ‘ಬೆರಳ್ಗೆ ಕೊರಳ್’ ನಾಟಕ ಉಲ್ಲೇಖನೀಯ. ಬಿಲ್ವಿದ್ಯೆ ಕಲಿಯಬೇಕೆಂಬ ಅದಮ್ಯ ಆಸೆಯಿಂದ ದ್ರೋಣಾಚಾರ್ಯರ ಬಳಿ ಹೋದಾಗ, ಕಾಡು ಜನರ ಜೊತೆ ಸ್ನೇಹ ಮಾಡುವುದರಿಂದ ತಮ್ಮ ಘನತೆ ರಾಜ ವೈಭವಕ್ಕೆ ಧಕ್ಕೆ ಎಂದುಕೊಂಡ ಕ್ಷತ್ರಿಯ ಕುಮಾರರು ಅವನನ್ನು ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳಲು ನಿರಾಕರಿಸಿದರು. ಆದರೆ ಗುರು ದ್ರೋಣರು ಕನಿಕರ ಪಟ್ಟು ತನ್ನ ಮನೆಯಲ್ಲಿಟ್ಟುಕೊಂಡು ಅವನಿಗೆ ವಿದ್ಯೆ ಕಲಿಸುತ್ತಿದ್ದರು. ತಂದೆಯು ತೀರಿಕೊಂಡ ಕಾರಣಕ್ಕೆ ಕಾಡಿಗೆ ಹೋದ ಏಕಲವ್ಯ ಮತ್ತೆ ತನ್ನ ಅಬ್ಬೆಯನ್ನು ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಬರಲು ಮನಸ್ಸಾಗದೆ, ತಾನಿರುವ ಸ್ಥಳದಲ್ಲಿಯೇ ಭಯ ಭಕ್ತಿಯಿಂದ ಗುರುವಿನ ಪ್ರತಿಮೆ ಸೃಷ್ಟಿಸಿ, ದಿನವೂ ಪೂಜೆ ಅರ್ಪಿಸಿ, ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ ಪರಿಣಾಮವೆಂಬಂತೆ ಶಬ್ದವೇಧಿ ವಿದ್ಯೆ (ಗುರಿ ಕಣ್ಣಿಗೆ ಕಾಣದಿದ್ದರೂ, ಪ್ರಯೋಗಿಸಿದ ಬಾಣ ಅಮೋಘ ಗುರಿಗೆ ತಗಲುವುದು/ ನಾಟುವುದು) ಯನ್ನು ಸಾಧಿಸಿದ. ಕಲಿಯುವ ಆಸಕ್ತಿ, ನಿರಂತರ ಶ್ರದ್ಧಾಭಕ್ತಿ ಇದ್ದರೆ ಗುರು ದೈಹಿಕವಾಗಿ ಎಷ್ಟು ದೂರ ಇದ್ದರೂ, ಅವನ ಆಶೀರ್ವಾದಗಳು ನಮ್ಮ ಮೇಲಿರುತ್ತವೆ. ಮಾನಸಿಕವಾಗಿ ಧೈರ್ಯ ತುಂಬಿ ಮುನ್ನಡೆಸುತ್ತಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?
ನಾನು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು ಕೇವಲ ಆರು ಮತ್ತು ಏಳನೆಯ ಇಯತ್ತೆಯಲ್ಲಿ ಮಾತ್ರ. ಹೊಸ ಶಾಲೆ, ಹೊಸ ಶಿಕ್ಷಕರು, ಹೊಸ ಸ್ನೇಹಿತರು ಸಿಕ್ಕಿದರು. ನಡುವಿನಲ್ಲಿ ಬಂದು ಸೇರಿಕೊಂಡ ನನಗೆ ಇಲ್ಲಿಗೆ ಹೊಂದಿಕೊಳ್ಳಲು ಕಷ್ಟವೆನಿಸಲಿಲ್ಲ. ಹೊಂದಾಣಿಕೆಯ ಮನೋಭಾವ ನನ್ನ ರಕ್ತದಲ್ಲಿಯೇ ಅಡಕವಾಗಿತ್ತೋ ಏನೋ. ಅಂತೂ ಈ ಹೊಸ ಪಯಣ ನನ್ನ ಪಾಲಿಗೆ ಕಗ್ಗತ್ತಲಿನಲ್ಲೊಂದು ಬೆಳಕಿನ ಕಿರಣವಾಗಿತ್ತು.
ಈ ದಿನಗಳಲ್ಲಿ ನಮ್ಮ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಕರಬಸಪ್ಪ ಶಿವಪೂಜಿ ಸರ್ ವಿದ್ಯಾರ್ಥಿಗಳ ಬಗ್ಗೆ ತೋರುತ್ತಿದ್ದ ಕಾಳಜಿಯನ್ನು ಮರೆಯುವಂತಿಲ್ಲ. ಹೆಣ್ಣುಮಕ್ಕಳು ಮನೆಯ ಹೊರಗೆ, ಮನೆಯ ಒಳಗೆ ಹೇಗಿರಬೇಕು, ಅವಳ ಬದುಕಿನ ಕಷ್ಟಗಳೇನು, ಸಂದಿಗ್ಧ ಸಂದರ್ಭಗಳನ್ನು ಹೇಗೆಲ್ಲ ನಿಭಾಯಿಸಬೇಕು ಎಂಬ ಸೂಕ್ಷ್ಮವನ್ನು ನಮ್ಮ ಮನಸ್ಸಿಗೆ ತಾಕುವಂತೆ ಹೇಳುತ್ತಿದ್ದರು. ಪಠ್ಯದಾಚೆಗೆಗಿನ ಬದುಕನ್ನು ನಮಗೆ ಅವರು ದರ್ಶನ ಮಾಡಿಸುತ್ತಿದ್ದ ಪರಿ ವಿಶಿಷ್ಟ.
ಲಕ್ಷ್ಮಣ್ ಎಸ್. ಬ್ಯಾಹಟ್ಟಿ ಸರ್ ನಮ್ಮ ಶಾಲೆಯ ದೈಹಿಕ ಶಿಕ್ಷಕರು. ಆಟದೊಂದಿಗೆ ಪಾಠಗಳನ್ನು ಸಹ ಹೇಳುತ್ತಿದ್ದರು. ಪ್ರತಿ ಶನಿವಾರವೂ ಬೆಳಿಗ್ಗೆ ವ್ಯಾಯಾಮ ಮಾಡಿಸುತ್ತಿದ್ದರು. “ಏನು ತಿಂಡಿ ತಿಂದು ಬಂದಿದ್ದಿಯ ಮಧು?” ಎಂದು ಪ್ರತಿ ವಾರವೂ ಕೇಳುತ್ತಿದ್ದರು. ನನ್ನ ಪಕ್ಕದಲ್ಲಿಯೇ ನಿಲ್ಲುತ್ತಿದ್ದ ಗೆಳತಿ ಚೈತ್ರಾ “ಏನೂ ಇಲ್ಲ ಅಂತ ಹೇಳು” ಎಂದು ನನಗೆ ಮೊದಲೇ ಹೇಳಿಕೊಟ್ಟಿರುತ್ತಿದ್ದಳು. ಅವಳು ಹೇಳಿದ ಹಾಗೆ ಮಾಡುತ್ತಿದ್ದೆ. ಆಗ “ನೀರು ಕುಡುದು ಬಂದಿ ಇಲ್ಲೊ ಮತ್ತ?” ಎಂದು ಕೇಳಿದಾಗ ಹೂ ಎಂಬಂತೆ ತಲೆಯಾಡಿಸುತ್ತಿದ್ದೆ. ನನ್ನ ಆರೋಗ್ಯದ ಬಗ್ಗೆ ಅವರು ವಿಶೇಷ ಕಾಳಜಿ ವಹಿಸುವುದು ನನ್ನಲ್ಲಿ ಅತೀವ ಆನಂದ ಉಂಟು ಮಾಡುತ್ತಿತ್ತು. “ದೈನೆಮುಡಗಾ ದೈನೆಮೂಡ್ , ಪಿಚೆಮುಡಗಾ ಪಿಚೆಮೂಡ್” ಎಂದು ಅವರು ಕೂಗಿದಾಗ ಒಂದು ಕಾಲು ಇಡುವುದು ತಪ್ಪಾದರೂ ಅವರ ಕೈಯಲ್ಲಿನ ಕೋಲು ಮಾತನಾಡುತ್ತಿತ್ತು ಹಾಗಾಗಿ ನಾವೆಲ್ಲ ಬಹಳ ಎಚ್ಚರಿಕೆಯಿಂದ ವ್ಯಾಯಾಮ ಮಾಡುತ್ತಿದ್ದೆವು. ನಮ್ಮ ಮೆದುಳಿಗೆ ಕೆಲಸ ಕೊಡುವ ಪ್ರಶ್ನೆಗಳನ್ನು ಆಗಾಗ ಕೇಳುತ್ತಿದ್ದರು.
ಮೇಲುನೋಟಕ್ಕೆ ಸರಳ ಪ್ರಶ್ನೆಗಳೆನಿಸಿದರೂ ಅವುಗಳು ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತಿದ್ದವು. ಅವರು ವಿವರಿಸಿದ್ದನ್ನು ನಾನು ನೆನಪಿನಲ್ಲಿಟ್ಟುಕೊಂಡಂತೆ ನಮ್ಮ ಶಾಲೆಯ ಪಕ್ಕದಲ್ಲೊಂದು ಮಾಸಣಗಿ ಗುಡ್ಡಕ್ಕೆ ಹೋಗುವ ದಾರಿಯೊಂದಿದೆ. ಊರಿನವರು ಯಾರೋ (ಈಗ ನೆನಪಿನಲ್ಲಿಲ್ಲ) ಎತ್ತಿನ ಗಾಡಿಯ ಮೇಲೆ ಏನನ್ನೋ ಹೇರಿಕೊಂಡು ಬರುತ್ತಿರುವಾಗ ಅವರ ಕುತ್ತಿಗೆಯ ಭಾಗದಲ್ಲಿ ಕಬ್ಬಿಣದ ಹಾರಿಯ ಚೂಪಾದ ಭಾಗ ತಿವಿದು ಧಾರಾಕಾರ ರಕ್ತ ಸುರಿಯಿತು. ಅಕ್ಕ ಪಕ್ಕದ ಜನ ಸೇರಿದರು. ಸರ್ ಕೂಡ ಹೋಗಿದ್ದರು. ನೆರೆದವರೆಲ್ಲ “ಅವರ ಕುತ್ತಿಗೆಗೆ ಬಟ್ಟೆ ಕಟ್ಟಿ ಬಿಗಿಯಾಗಿ ಹಿಡಿಯಿರಿ” ಎಂದರು. ಆದರೆ ಸರ್ “ಬಟ್ಟೆ ಕಟ್ಟುವುದು ಬೇಡ. ಬೇಗನೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ” ಎಂದರು. “ನಾನು ಹಾಗೆ ಹೇಳಲು ಏನು ಕಾರಣ?” ಎಂಬ ಪ್ರಶ್ನೆಯನ್ನು ಇಟ್ಟು ಸರ್ ಕೈ ಕಟ್ಟಿ ನಿಂತುಕೊಂಡರು. ಆ ವಯಸ್ಸಿನಲ್ಲಿ ನಮಗೆ ಎಷ್ಟು ಯೋಚಿಸಿದರೂ ಉತ್ತರ ಹೊಳೆಯದೆ ಸರ್ ಕಡೆಗೆ ಪಿಳಿ ಪಿಳಿ ಕಣ್ಣು ಬಿಡುತ್ತಾ ಉತ್ತರಕ್ಕಾಗಿ ಕಾದು ನಿಂತೆವು.ಆಮೇಲೆ ಅವರೇ ಹೇಳಿದರು. “ಆ ಸಂದರ್ಭದಲ್ಲಿ ಗಾಯಗೊಂಡ ವ್ಯಕ್ತಿಯ ರಕ್ತದ ಹರಿವನ್ನು ನಿಲ್ಲಿಸುವುದು ಮುಖ್ಯ. ಆದ್ರೆ ಗಾಯವಾಗಿದ್ದು ಯಾವ ಭಾಗದಲ್ಲಿ ಎನ್ನುವುದು ನೆನಪಿರಲಿ, ಕುತ್ತಿಗೆಗೆ ಯಾರಾದರೂ ಹಾಗೆ ಬಿಗಿದರೆ ಆ ವ್ಯಕ್ತಿ ಇಲ್ಲಿಯೇ ಶಿವನ ಪಾದ ಸೇರಬೇಕಾಗುತ್ತದೆ” ಎಂದು ನಮ್ಮ ಗೊಂದಲಕ್ಕೆ ತೆರೆ ಎಳೆದರು.
ಈ ಪ್ರಸಂಗ ನನ್ನನ್ನು ಈಗಲೂ ಬಹಳ ಕಾಡುತ್ತದೆ. ಬದುಕಿನಲ್ಲಿ ನಾವು ತಕ್ಷಣದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಮುಂದೆ ಯಾವ ಪರಿಣಾಮಗಳನ್ನು ಉಂಟುಮಾಡುತ್ತದೆ ಎನ್ನುವುದನ್ನು ಯೋಚಿಸಿ ನಂತರ ಕಾರ್ಯಪ್ರವೃತ್ತರಾಗಬೇಕೆಂದು ನೆನಪು ಮಾಡಿಕೊಡುತ್ತದೆ. ಮೌಲ್ಯಯುತ ಶಿಕ್ಷಣ ನೀಡಿ ನಮ್ಮನ್ನು ಮನುಷ್ಯರನ್ನಾಗಿ ರೂಪಿಸಿದ ಹೊನ್ನಮ್ಮ ಚಲವಾದಿ ಟೀಚರ್, ಮಂಜುಳಾದೇವಿ ಶಿವಪೂಜಿ ಟೀಚರ್, ಶೋಭಾ ಅಂಗಡಿ ಟೀಚರ್, ಶಾಹ್ನವಾಜ್ ಕಲ್ಮನಿ ಸರ್, ಗಿರಿಜವ್ವ ರಾಮಗಟ್ಟಿಮಠ ಟೀಚರ್, ಬಿ. ಹೆಚ್. ಬಣಕಾರ್ ಟೀಚರ್, ಶಕುಂತಲಾ ಡಂಬಳ್ ಟೀಚರ್, ಮಹೇಶ್ ನಾಯಕ್ ಸರ್ ಅಲ್ಲದೆ ಪ್ರಸ್ತುತ ನಮ್ಮ ಶಾಲೆಯಲ್ಲಿ ಶಿಕ್ಷಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸರ್ವ ಗುರುಮಹೋದಯರೆಲ್ಲರಿಗೂ ಹೃದಯಾಂತರಾಳದ ಧನ್ಯವಾದಗಳು. ನಾವು ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ, ಎಷ್ಟು ದೊಡ್ಡ ಸಾಮಾಜಿಕ ಸ್ಥಾನಮಾನ ಗಳಿಸಿದರೂ ನಮ್ಮ ಅಸ್ತಿತ್ವದ ಬೇರು ಇರುವುದು ನಾವು ಕಲಿತ ಶಾಲೆಯಲ್ಲಿ, ಆಡಿ ಬೆಳೆದ ಪರಿಸರದಲ್ಲಿ , ತಂದೆ ತಾಯಿ ಮತ್ತು ವಿದ್ಯೆ ಬುದ್ದಿ ನೀಡಿದ ಗುರುಗಳ ಪಾದಾರವಿಂದಗಳಲ್ಲಿ. ಇವರಿಗೆ ಎಂದಿಗೂ ಕೃತಜ್ಞರಾಗಿರೋಣ.
ಅಕ್ಷರದ ಚಪ್ಪರದ ಕೆಳಗೆ ಸವಿ ನೆನಪುಗಳನ್ನು ಹಂಚಿಕೊಂಡು ಆಡಿ ಹಾಡಿ, ಕೂಡಿ ಕಲಿತು ಸ್ನೇಹದ ಸವಿಯನ್ನು ಹೆಚ್ಚಿಸಿದ ನನ್ನ ಸಹಪಾಠಿಗಳಾದ ಶ್ರೇಯಾ, ಲಾವಣ್ಯ, ರಾಜೇಶ್ವರಿ, ವಿದ್ಯಾ ಚೈತ್ರಾ, ಅಂಬಿಕಾ, ಪೂಜಾ, ಪವಿತ್ರಾ, ಶಿಲ್ಪಾ ಕಿರಣ, ಸಚ್ಚಿನ್, ಬಸವರಾಜ್, ನೆಹರು, ರಮೇಶ್, ನಾಗರಾಜ್ ಮುಂತಾದವರನ್ನು ಈ ಸಂದರ್ಭದಲ್ಲಿ ಪ್ರೀತಿಯಿಂದ ನೆನೆಯುತ್ತೇನೆ.
ಮನದ ಮೂಲೆಯಲ್ಲಿ ಮತ್ತೆ ಶಾಲೆಯ ದಿನಗಳನ್ನು ಬದುಕಬೇಕೆಂಬ ತೀರದ ಆಸೆಯೊಂದಿದೆ. ಆದರೆ ಕಾಲ ಎಂಥ ಮೋಸಗಾರನೆಂದರೆ ಅವನು ಅಪ್ಪಿತಪ್ಪಿಯೂ ಹಿಂದೆ ನೋಡುವುದಿಲ್ಲ, ಯಾರಿಗಾಗಿಯೂ ಪಥ ಬದಲಿಸುವುದಿಲ್ಲ ನಮ್ಮೊಳಗೆ ನೆನಪುಗಳ ಗೋಪುರ ಕಟ್ಟಿ ಸುಮ್ಮನೆ ಕಣ್ಣು ಮುಚ್ಚಿಕೊಂಡು ಮುಂದೆ ಮುಂದೆ ನಡೆದು ಬಿಡುತ್ತಾನೆ. ಇರಲಿ, ಈ ನೆನಪುಗಳಿಗಾದರೂ ಥ್ಯಾಂಕ್ಸ್ ಹೇಳೋಣ.
- ಮಧು ಕಾರಗಿ, ಕೆರವಡಿ
2 thoughts on “ನೆನಪುಗಳಿಗೆ ನಮನ”
ಶಾಲೆಯ ನೆನಪುಗಳನ್ನು ಅರ್ದ್ರವಾಗಿ ಕಟ್ಟಿಕೊಡುವ ಲೇಖನ.
ಹಳೆಯ ನೆನಪುಗಳು ಯಾವಾಗಲೂ ಮೃದು ಮಧುರ…ಲೇಖನ ಚೆನ್ನಾಗಿದೆ. ಅಭಿನಂದನೆಗಳು ಮೇಡಂ