ಎಲ್ಲಿಗೆ ಬಂತು ಸಂಗಯ್ಯಾ ದೇಶದ ಸಂಸ್ಕೃತಿ…?

ಹಾಯ್, ನಾನು ಕೃತಿಕಾ ಅಂತ. ಎಂಕಾಂ ಸ್ನಾತಕೋತ್ತರ ಪದವೀಧರೆ. ಆರನೇ ತರಗತಿಯಿಂದ ನಾನು ಓದಿದ್ದು ಮುತ್ತಿನ ನಗರಿ ಹೈದರಾಬಾದಿನಲ್ಲಿ. ಎಲ್‍ಕೆಜಿಯಿಂದ ಐದನೇ ತರಗತಿಯವರೆಗೆ ನಾನು ಓದಿದ್ದು ನನ್ನ ಹುಟ್ಟೂರಾದ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ. ಮೂಲತಃ ಆಂಧ್ರಪ್ರದೇಶದವರಾದ ನನ್ನ ತಾತ ಈ ಊರಿಗೆ ಬಂದಿದ್ದು ಸುಮಾರು ಐವತ್ತು ವರ್ಷಗಳ ಹಿಂದೆ. ಈಗ ತಾತನೂ ಇಲ್ಲ, ಅಪ್ಪನೂ ಇಲ್ಲ. ಅಪ್ಪ ನಾನು ಚಿಕ್ಕವಳಿದ್ದಾಗಲೇ ಅಂದರೆ ನಾನು ಆರನೇ ವಯಸ್ಸಿನಲ್ಲಿದ್ದಾಗಲೇ ಅಕಾಲಿಕವಾಗಿ ಮರಣ ಹೊಂದಿದ್ದರು. ಅಜ್ಜಿ, ಅಮ್ಮ, ಅಣ್ಣ ಇರುವರು. ನನಗೂ ಅಣ್ಣನಿಗೂ ಹತ್ತು ವರ್ಷಗಳ ಅಂತರ. ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಅಣ್ಣನ ಮದುವೆಯಾಗಿತ್ತು. ನಿಮಗೆ ಗೊತ್ತಿದೆಯೋ, ಇಲ್ಲವೋ? ನಮ್ಮ ಜನಾಂಗದಲ್ಲಿ ಗಂಡು ಹುಡುಗರು ಮದುವೆಯಾದ ಸ್ವಲ್ಪೇ ದಿನಗಳಲ್ಲಿ ಹೊಸದಾಗಿ ಜೊತೆಯಾದ ತಮ್ಮ ಜೀವನ ಸಂಗಾತಿಯರ ಜೊತೆಗೆ ಹೊಸಮನೆ ಮಾಡಿಕೊಂಡು ಬಿಡುತ್ತಾರೆ. ಪಿತ್ರಾರ್ಜಿತ ಆಸ್ತಿಯನ್ನು ಹಂಚಿಕೊಂಡುಬಿಡುತ್ತಾರೆ. ಅದಕ್ಕೆ ನನ್ನ ಅಣ್ಣನೇನು ಅಪವಾದವಲ್ಲ. ಮದುವೆಯಾದ ಆರು ತಿಂಗಳಲ್ಲೇ ತನ್ನ ಮನದನ್ನೆಯ ಜೊತೆಗೆ ಬೇರೆ ಮನೆ ಮಾಡಿದ್ದ ಅಣ್ಣ. ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾಗಿದ್ದ ಅಮ್ಮ ನನ್ನನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳಬೇಕಾಗಿತ್ತು ವಿಧಿಯಿಲ್ಲದೇ. ಅಪ್ಪ ಗಳಿಸಿದ್ದ ಇಪ್ಪತ್ತು ಎಕರೆ ಗದ್ದೆಯಲ್ಲಿ ಅಮ್ಮನಿಗೆ ಹತ್ತು ಎಕರೆ ಬಿಟ್ಟುಕೊಟ್ಟಿದ್ದೇ ದೊಡ್ಡ ಮಾತಾಗಿತ್ತು ಅಷ್ಟೇ ಅಣ್ಣನದು.

ಅತ್ತಿಗೆಯಂತೂ ನಮ್ಮ ಮನೆಗೆ ಸೊಸೆಯಾಗಿ ಬರಲಿಲ್ಲ. ನನ್ನಣ್ಣನಿಗೆ ಹೆಂಡತಿಯಾಗಿ ಬಂದಳಷ್ಟೇ. ಅಣ್ಣ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಂಡ. ಹಾಗೇ ನಮ್ಮಿಂದ ದೂರ ಹೋದ. ಚಿಕ್ಕ ವಯಸ್ಸಿನ ವಿಧವೆ ತಾಯಿಯ ಬಗ್ಗೆಯಾಗಲೀ, ಚಿಕ್ಕ ವಯಸ್ಸಿನ ತಂಗಿಯ ಬಗ್ಗೆಯಾಗಲೀ ಅವನು ಯೋಚಿಸಲಿಲ್ಲ. ಎಲ್ಲಾ ಜವಾಬ್ದಾರಿ ಅಮ್ಮನಿಗೇ ಬಿತ್ತು. ಆಕೆ ಗಂಡಸಿನಂತೆ ಗದ್ದೆಯಲ್ಲಿ ದುಡಿದಳು. ನನಗೆ ತಂದೆಯಾಗಿ, ತಾಯಿಯಾಗಿ ಕರ್ತವ್ಯವನ್ನು ನಿಭಾಯಿಸಿ ನನ್ನ ಏಳಿಗೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಳು. ಚಿಕ್ಕ ವಯಸ್ಸಿನಲ್ಲಿಯೇ ಗಂಡ ಸತ್ತರೆ ನಮ್ಮ ಜನಾಂಗದಲ್ಲಿ ಹೆಣ್ಣಿಗೆ ಇನ್ನೊಂದು ಮದುವೆ ಮಾಡಿಬಿಡುತ್ತಾರೆ ಅದೆಷ್ಟೋ ಜನರು. ಅಪ್ಪ ತೀರಿಕೊಂಡಾಗ ಅಮ್ಮನಿಗೆ ಆಗ ಏರು ಜವ್ವನದ ವಯಸ್ಸು. ಬರೀ ಮೂವತ್ತಮೂರು ವರ್ಷ ಅಷ್ಟೇ. ತನ್ನ ದೈಹಿಕ ಕಾಮನೆಗಳನ್ನು ತನ್ನಲ್ಲೇ ದಹಿಸಿಕೊಂಡು ಸಮಾಜದಲ್ಲಿನ ಗಂಡೆಂಬ ಕೆಲವು ದುಷ್ಟ ಮೃಗಗಳ ಕಾಮದಾಸೆಯ ಕಣ್ಣುಗಳ ನೋಟ, ಹಾವ-ಭಾವ, ಆಹ್ವಾನಗಳನ್ನು ದಿಟ್ಟತನದಿಂದ ಎದುರಿಸಿ, ಧಿಕ್ಕರಿಸಿ ನನಗಾಗಿ ತನ್ನ ಜೀವವನ್ನೇ ತೇಯ್ದಿದ್ದಾಳೆ.
*****
ನಾನು ಏನನ್ನು ಹೇಳುವುದಕ್ಕೆ ಹೊರಟಿದ್ದೇನೆಂಬುದನ್ನು ಮರೆತು ಏನನ್ನೋ ಹೇಳುತ್ತಿರುವುದಕ್ಕೆ ಶುರುಮಾಡಿರುವುದರಿಂದ ನಿಮಗೆ ಬೇಸರವೆನಿಸುತ್ತಿದೆಯೇ? ಈ ಹಳೆಯ ಪುರಾಣದ ಪ್ರಹಸನವೇಕೆ ಬೇಕಿತ್ತು ಎಂದು ನಿಮಗೆ ಅನಿಸಿ ಬೋರಾಗುತ್ತಿದೆಯೇ? ಸಾರಿ, ನನ್ನ ಮಾತುಗಳಿಂದ ನಿಮಗೆ ಬೋರಾಗುತ್ತಿಲ್ಲವೆಂದು ನಾನು ಅಂದುಕೊಳ್ಳುತ್ತೇನೆ. ಇರಲಿ, ಈಗ ಸದ್ಯದ ವಿಚಾರಕ್ಕೆ ಬರುವೆ.

ಕೃತಿಕಾ ಎಂದು ನನ್ನ ಹೆಸರು ಹೇಳಿದ್ದು ನಿಮಗೆ ನೆನಪಿದೆ ತಾನೇ? ನಾನೀಗ ಇಪ್ಪತ್ತೈದರ ತರುಣಿ. ಮದುವೆಗೆ ರೆಡಿಯಾಗಿ ನಿಂತಿರುವ ತುಂಬು ಹರೆಯದವಳು. ತುಂಬು ಹರೆಯದ ತರುಣಿ ಎಂದ ಕೂಡಲೇ ನೀವು ಈಕೆ 36-24-36ರ ಚೆಲುವಿ ಇರಬೇಕೆಂದು ಭಾವಿಸಿಕೊಂಡರೆ ನಿಮ್ಮ ನಿರೀಕ್ಷೆ ಸುಳ್ಳಾಗುವುದು. ನಾನೊಬ್ಬ ಸಾಧಾರಣ ರೂಪಿನ ಎಣ್ಣೆಗೆಂಪಿನ ಮೈ ಬಣ್ಣದ ಹುಡುಗಿ. ನನ್ನ ಅನಿಸಿಕೆಯ ಪ್ರಕಾರ ನನ್ನ ಮೈಮಾಟ ಆಕರ್ಷಕವಾಗಿಯೇ ಇದೆ. ಸ್ವಲ್ಪ ತೆಳುದೇಹ ಎನ್ನಬಹುದು. ದಾಳಿಂಬೆಯಂಥಹ ದಂತ ಪಂಕ್ತಿ, ರೇಶಿಮೆಯಂಥಹ ಕೇಶರಾಶಿ, ನೀಲಿ ಕಂಗಳು, ಗುಳಿ ಬೀಳುವ ಕೆನ್ನೆಗಳು ಹುಡುಗರ ದೃಷ್ಟಿ ಸೆರೆ ಹಿಡಿಯಬಲ್ಲವು.

ನಾನೀಗ ಹೈದರಾಬಾದಿನ ಹೈ-ಟೆಕ್ ಸಿಟಿಯ ಪ್ರಸಿದ್ಧ ಸಾಫ್ಟ್‍ವೇರ್ ಕಂಪನಿಯೊಂದರಲ್ಲಿ ಅಕೌಂಟ್ಸ್ ಆಫೀಸರ್ ಎಂದು ಕೆಲಸ ಮಾಡುತ್ತಿದ್ದು ಅಮೀರ್‍ಪೇಟೆಯ, `ಜೇನುಗೂಡು’ ಎಂಬ ಪಿಜಿ ಸೆಂಟರಿನಲ್ಲಿ ವಾಸ್ತವ್ಯ ಹೂಡಿದ್ದರೂ ನನ್ನ ಮನಸ್ಸು ಯಾವಾಗಲೂ ಹುಟ್ಟಿದೂರಿನ ನೆನಪಲ್ಲೇ ಗಿರಕಿ ಹೊಡೆಯುತ್ತಿರುತ್ತದೆ. ಅಮ್ಮ, ಅಮ್ಮನ ತಾಯಿ ಅಂದರೆ ನನ್ನ ಹೆಣ್ಣಜ್ಜಿಯ ನೆನಪು ನನ್ನ ಮನದಲ್ಲಿ ತುಂಬಿರುತ್ತದೆ. ಊರಿನ ನಮ್ಮ ಭತ್ತದ ಗದ್ದೆ, ಗದ್ದೆಯಲ್ಲಿಯೇ ಇರುವ ಮನೆ, ಮನೆಯ ಮುಂದೆಯೇ ಹರಿಯುವ ನಮ್ಮ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಚಿಕ್ಕ ಕಾಲುವೆ, ಮನೆಯ ಸುತ್ತ-ಮುತ್ತ ಇರುವ ಅರ್ಧ ಎಕರೆಯ ತೋಟದಲ್ಲಿಯೇ ನನ್ನ ಮನಸ್ಸು ಯಾವಾಗಲೂ ಸುತ್ತುತ್ತಿರುತ್ತದೆ. ಅರ್ಧ ಎಕರೆಯ ತೋಟದಲ್ಲಿನ ಹಣ್ಣಿನ ಗಿಡ-ಮರಗಳು, ಹೂವಿನ ಬಳ್ಳಿಗಳು, ಗಿಡಗಳು, ವಿವಿಧ ತರಕಾರಿಯ ಸಸ್ಯಗಳು ಎಂಥಹ ಅರಸಿಕರ ಮನಸ್ಸಿನವರನ್ನೂ ಸೆರೆಹಿಡಿದು ಸೆಳೆಯುತ್ತವೆ. ಮಾವು, ಪೇರಲ, ಮೋಸಂಬಿ, ಚಿಕ್ಕು, ಪಪಾಯ, ಬಾಳೆ, ಬೋರೆ ಹಣ್ಣಿನ ಗಿಡಗಳು, ಗುಲಾಬಿ, ದಾಸವಾಳ, ಸೇವಂತಿಗೆ, ಸಂಪಿಗೆ, ಮಲ್ಲಿಗೆ ಕನಕಾಂಬರ, ರಾತ್ರಿರಾಣಿಯಂಥಹ ಹೂವಿನ ಗಿಡ-ಬಳ್ಳಿಗಳು, ಬೆಂಡೆ, ಹೀರೆ, ಪಡುವಲ, ಕೋಸುಗಡ್ಡೆ, ಸುವರ್ಣ ಗಡ್ಡೆ, ಹಾಗಲ, ಹೂಕೋಸು, ಚವಳಿ ಮುಂತಾದ ತರಕಾರಿಯ ಸಸ್ಯಗಳು, ಮೆಂತೆ, ಕೊತ್ತಂಬರಿ, ರಾಜಗೀರಿ, ಪಾಲಕ ಮುಂತಾದ ತಪ್ಪಲ ಪಲ್ಲೆಗಳು ಮತ್ತು ನೆಲ್ಲಿಕಾಯಿ ಗಿಡಗಳು ಸುಂದರವಾಗಿದ್ದು ನೋಡುಗರ ಮನಸ್ಸಿಗೆ ಮುದ ನೀಡುತ್ತವೆ.

ಹಳದಿ, ಬಿಳಿ, ಗುಲಾಬಿ, ಮೆರೂನ್, ಕೇಸರಿ ಬಣ್ಣದ ಗುಲಾಬಿ ಹೂವುಗಳ ಅಂದ-ಚೆಂದ ನೋಡುವುದಕ್ಕೆ ಕಣ್ಣುಗಳು ಸಾಲವು. ಹೂವುಗಳ ಘಮ, ಘಮ ಸುವಾಸನೆ ಮತ್ತೇರಿಸುವಂತಿರುತ್ತದೆ. ಬೆಳದಿಂಗಳ ರಾತ್ರಿಯ ದಿನಗಳಲ್ಲಿ ತೋಟದಲ್ಲಿ ಕುಳಿತು ಹಳ್ಳಿಯ ನನ್ನ ಗೆಳತಿಯರ ಜೊತೆಗೆ ಹರಟೆ ಹೊಡೆಯುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಅಮ್ಮ, ಅಜ್ಜಿಯರೊಂದಿಗೆ ಬೆಳದಿಂಗಳೂಟ ಸವಿಯುವುದಕ್ಕೆ ಮನಸ್ಸು ಯಾವಾಗಲೂ ತುಡಿಯುತ್ತಿರುತ್ತದೆ. ನಮ್ಮ ಮನೆ, ತೋಟ ಧರೆಗಿಳಿದು ಬಂದ ಸ್ವರ್ಗ ಎಂದು ನನ್ನ ಅಂತರಂಗ ಬೀಗುತ್ತಿರುತ್ತದೆ. ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಗೆ ನಾನು ಕೆಲವು ಬಾರಿ ಹೋಗಿ ಬಂದಿರುವೆನಾದರೂ ನಮ್ಮ ಮನೆಯ ತೋಟ ನೀಡುವ ಮುದವೇ ಹೆಚ್ಚು ಎಂದು ನನ್ನ ಹುಚ್ಚು ಮನಸ್ಸು ಸಂಭ್ರಮಿಸುತ್ತಿರುತ್ತದೆ. ಹಬ್ಬ-ಹರಿದಿನಗಳು, ರಜೆ ಎಂದು ಊರಿಗೆ ಬಂದು ವಾಪಾಸು ಕಾಂಕ್ರೀಟ್ ಕಟ್ಟಡಗಳ ಮುತ್ತಿನ ನಗರಿಗೆ ಹೋಗಬೇಕೆಂದರೆ ಮನಸ್ಸು ರಚ್ಚೆ ಹಿಡಿಯುತ್ತದೆ. ಅನಿವಾರ್ಯತೆಯಲ್ಲಿ ಒಲ್ಲದ ಮನಸ್ಸಿನಿಂದ ಅಲ್ಲಿಂದ ಕಾಲ್ತೆಗೆಯಬೇಕಾಗುತ್ತದೆ. ಅಂದು ಹೈದರಾಬಾದ್ ತಲುಪುವವರೆಗೂ ದೇಹ ಬಸ್ಸಿನಲ್ಲಿದ್ದರೂ ಮನಸ್ಸು ಮಾತ್ರ ಊರಿನಲ್ಲಿಯೇ ಗಿರಕಿ ಹೊಡೆಯುತ್ತಿರುತ್ತದೆ. ಪ್ರಯಾಣದ ಸಮಯದಲ್ಲಿ ಯಾರಾದರೂ ಸ-ಹೃದಯಿ ಸಹ ಪ್ರಯಾಣಿಕರು ಸಿಕ್ಕರೆ ಅವರೊಂದಿಗೆ ಊರಿನ ಜೊತೆಗಿನ ನನ್ನ ಭಾವನಾತ್ಮಕ ಸಂಬಂಧಗಳು ತಾನು ತಾನಾಗಿಯೇ ಬಿಚ್ಚಿಕೊಳ್ಳುತ್ತವೆ. ಅವೆಲ್ಲವುಗಳನ್ನು ಹಂಚಿಕೊಂಡು ಸಂಭ್ರಮದಿಂದ ಬೀಗುತ್ತಿರುತ್ತೇನೆ.

ಅಯ್ಯೋ, ಒನ್ಸ್ ಅಗೇನ್ ಸಾರಿ ರೀ. ಮತ್ತೆ ನಾನು ನಿಮಗೆ ನನ್ನೂರಿನ ಬಗ್ಗೆಯೇ ಕೊರೆಯಲು ಶುರುಮಾಡಿದೆನಲ್ಲವೇ? ದಯವಿಟ್ಟು ಕ್ಷಮಿಸಿ ಬಿಡಿ. ನನ್ನದು ಅತಿರೇಕದ ಹುಚ್ಚು ಅಭಿಮಾನ ಎಂದುಕೊಳ್ಳಬೇಡಿರಿ. ಅದೇನೋ ಬಿಡಿಸಲಾರದ ನಂಟು ಅಂಟಿಕೊಂಡುಬಿಟ್ಟಿದೆ ನನ್ನೂರಿನೊಂದಿಗೆ. ಏಕೆಂದರೆ ಒಂದು ಸಾರೆ ನಗರಕ್ಕೆ ಹೋದವರು ಮರಳಿ ಹಳ್ಳಿಗೆ ಹೋಗುವುದಕ್ಕೇ ಇಷ್ಟಪಡದ ಕಾಲವಿದಲ್ಲವೇ?
*****
ನಾನು ಅಮೀರ್‍ಪೇಟಿನ, `ಜೇನುಗೂಡು’ ಎಂಬ ಪಿಜಿ ಸೆಂಟರಿನಲ್ಲಿ ವಾಸಿಸುತ್ತಿರುವೆನೆಂದು ಹೇಳಿದೆನಲ್ಲವೇ? `ಅನಂತರಾ’ ಎಂಬ ಇಪ್ಪತ್ಮೂರರ ಬೆಡಗಿ ನನ್ನ ರೂಮ್ ಮೇಟ್. ಅನಂತರಾ ಎಂಬ ಹೆಸರು ನನಗೆ ತುಂಬಾ ಸ್ಪೆಷಲ್ ಆಗಿ ಕಂಡಿತ್ತು. ಅವಳೂ ಹಾಗೇ ಇದ್ದಾಳೆ. ಅನಂತರಾ ತುಂಬಾ ಹೈ ಫೈ ಸ್ಟೈಲಿನ ಹುಡುಗಿ ಎಂದು ಹೇಳಿದರೆ ತಪ್ಪಾಗಲಾರದು. ಇ ಅಂಡ್ ಸಿ ಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರುವ ಅನಂತರಾ ಮೇದಕ್ ಜಿಲ್ಲೆಯ ಹಳ್ಳಿಯೊಂದರ ಹುಡುಗಿ. ಆಕೆಯೂ ಎರಡು ವರ್ಷಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದಾಳಂತೆ. ಆಕೆಯ ತಾಯಿಯೇ ಮನೆಯ ಜವಾಬ್ದಾರಿಯನ್ನು ವಹಿಸಿರುವಳಂತೆ. ಇತ್ತೀಚಿಗೆ ಮಾಹಿತಿ ತಂತ್ರಜ್ಞಾನದ ಕ್ಷೇತ್ರ ಕೊಂಚ ಹಿನ್ನಡೆ ಅನುಭವಿಸುತ್ತಿರುವುದರಿಂದ ಅನಂತರಾ ಪದವಿ ಮುಗಿಸಿದಂದಿನಿಂದ ಪಿಜಿಯಲ್ಲಿದ್ದುಕೊಂಡು ಉದ್ಯೋಗದ ಬೇಟೆಯಲ್ಲಿದ್ದಾಳೆ.

ಪಿಜಿಗೆ ಸೇರಿದ ಮೂರು ನಾಲ್ಕು ವಾರ ವೀಕೆಂಡಿನಲ್ಲಿ ನಾನು ನನ್ನ ಪಿಜಿ ಸೆಂಟರಿನಿಂದ ಸುಮಾರು ಆರು ಕಿಮೀ ದೂರದಲ್ಲಿರುವ ನನ್ನಕ್ಕ ಅಂದರೆ ನನ್ನ ದೊಡ್ಡಪ್ಪನ ಮಗಳ ಮನೆಗೆ ಹೋಗುತ್ತಿದ್ದೆ. ನಮ್ಮ ಸಾಫ್ಟ್‍ವೇರ್ ಸಂಸ್ಥೆ ಫೈವ್ ಡೇಸ್ ವೀಕ್‍ದ ವ್ಯವಸ್ಥೆಯನ್ನು ಅನುಸರಿಸುತ್ತಿರುವುದರಿಂದ ನಾನು ಶುಕ್ರವಾರ ಸಂಜೆ ನನ್ನ ಅಕ್ಕನ ಮನೆಗೆ ಹೋಗಿ ರವಿವಾರ ಸಂಜೆ ಪಿಜಿ ಸೆಂಟರೆಂಬ ಗೂಡಿಗೆ ಮರಳುವ ರೂಢಿಯನ್ನು ಇಟ್ಟುಕೊಂಡಿದ್ದೆ. ಅದೊಂದು ವೀಕೆಂಡ್‍ದ ದಿನ ನಾನು ಅಕ್ಕನ ಮನೆಗೆ ಹೋಗಿರಲಿಲ್ಲ. ಅಕ್ಕ ಸಂಬಂಧಿಕರೊಬ್ಬರ ಯಾವುದೋ ಸಮಾರಂಭಕ್ಕೆಂದು ಬೇರೆಲ್ಲಿಗೋ ಹೋಗಿದ್ದಳು.
ಶನಿವಾರದ ದಿನ ಬೆಳಿಗ್ಗೆ ಹತ್ತುವರೆಯಾಗಿತ್ತು. ಆಗಲೇ ನಮ್ಮ ಬೆಳಗಿನ ಉಪಹಾರ ಮುಗಿದಿತ್ತು. ಯಾವುದೋ ಒಂದು ಮ್ಯಾಗಜೀನನ್ನು ತಿರುವಿ ಹಾಕತೊಡಗಿದ್ದೆ ನಾನು. ಅನಂತರಾ ಹೊರಗೆಲ್ಲೋ ಹೊರಡುವ ತಯಾರಿಯಲ್ಲಿದ್ದಳಂತೆ ತೋರುತ್ತಿತ್ತು. ಓವರ್ ಮೇಕಪ್ ಬೇರೆ ಮಾಡಿಕೊಂಡಿದ್ದಳು. ಅಡಿಯಿಂದ ಮುಡಿಯವರೆಗೆ ಮೈಗಂಟಿಕೊಂಡಿದ್ದ ನುಣುಪಾದ ವೆಲ್ವೆಟ್ಟಿನಂಥಹ ಬಟ್ಟೆಯಲ್ಲಿ ಅವಳ ಸೌಂದರ್ಯ ಇಮ್ಮಡಿಸಿದ್ದುದು ಢಾಳಾಗಿ ಕಾಣುತ್ತಿತ್ತು. ಆಕರ್ಷಕ ಮೈ ಮಾಟದ ಅನಂತರಾಳ ದೇಹದ ಉಬ್ಬು-ತಗ್ಗುಗಳು ಸ್ಫುಟವಾಗಿ ಕಾಣುತ್ತಿದ್ದವು. ಪಡ್ಡೆ ಹುಡುಗರ ಮನ ಕೆಣಕುವಂತಿತ್ತು ಅವಳ ಡ್ರೆಸ್ ಕೋಡ್.

“ಅನಂತರಾ, ಎಲ್ಲೋ ಹೊರಡುವ ತಯಾರಿಯಲ್ಲಿರುವ ಹಾಗಿದೆ…?” ನಾನು ಪ್ರಶ್ನಿಸಿದ್ದೆ ಅವಳ ಕಣ್ಣಲ್ಲೇ ದೃಷ್ಟಿ ನೆಡುತ್ತಾ. ಹಾಗೇ ಮುಂದುವರಿದು, `ನಿನ್ನನ್ನು ನೋಡಿದರೆ ನನಗೆ ಹೇಗೇಗೋ ಆಗುತ್ತಿದೆ. ಪಡ್ಡೆ ಹುಡುಗರ ಗತಿ ಏನೋ ಹೇಗೋ? ಈ ಡ್ರೆಸ್ಸಿನಲ್ಲಿ ನೀ ತುಂಬಾ ಸೆಕ್ಸಿಯಾಗಿ ಕಾಣುತ್ತಿರುವಿ. ನಾನೇನಾದರೂ ಹುಡುಗನಾಗಿದ್ದರೆ ನಿನ್ನನ್ನು ತಬ್ಬಿ ಹಿಡಿದು ಇಲ್ಲೇ ಎಲ್ಲಾ ಮುಗಿಸಿಬಿಡುತ್ತಿದ್ದೆ. ರಿಯಲೀ ಬ್ಯೂಟಿಫುಲ್ ಅಂಡ್ ಪ್ರೊವೋಕೇಟಿವ್’ ಎಂದು ನಾನು ಮೆಚ್ಚುಗೆ ಸೂಚಿಸಿದ್ದೆ. ಅವಳಿಗೆ ಅಷ್ಟೇ ಸಾಕಾಗಿತ್ತೇನೋ?
“ಹೌದೇ ಕೃತಿಕಾ? ಥ್ಯಾಂಕ್ಯೂ ಫಾರ್ ಯುವರ್ ಕಾಂಪ್ಲಿಮೆಂಟ್ಸ್ ಅಂಡ್ ಅಪ್ರಿಸಿಯೇಶನ್. ನನ್ನನ್ನು ನೋಡಿದರೆ ಹೇಗೇಗೋ ಅನಿಸುತ್ತಿದೆಯೇ ನಿನಗೆ? ನಿನಗೆ ಹೇಗೆ ಅನಿಸುತ್ತಿದೆಯೋ ಹಾಗೆ ಮಾಡು, ಬೇಡವೆಂದವರಾರು?” ಎಂದು ಹೇಳುತ್ತಾ ಅನಂತರಾ ನನ್ನನ್ನು ಬಲವಾಗಿ ತಬ್ಬಿಕೊಂಡು ಕೆನ್ನೆ, ತುಟಿಗಳಿಗೆ ಲೊಚಲೊಚನೇ ಮುತ್ತಿಟ್ಟುಬಿಟ್ಟಿದ್ದಳು. ನನ್ನ ಅರಿವಿಗೆ ಬರುವಷ್ಟರಲ್ಲಿ ಇಷ್ಟೆಲ್ಲಾ ಜರುಗಿ ಹೋಗಿಬಿಟ್ಟಿತ್ತು. ನನ್ನ ಕೈಗಳನ್ನು ತೆಗೆದುಕೊಂಡು ಏರಿಳಿಯುತ್ತಿದ್ದ ಉನ್ನತವಾದ ತನ್ನೆದೆಗೆ ಒತ್ತಿಕೊಂಡು ಸಂಭ್ರಮಿಸಿದ್ದಳು. ನನಗೋ ಒಂಥರ ಮುಜುಗರವಾಗಿಬಿಟ್ಟಿತ್ತು.

“ಥೂ ಇಸ್ಸಿ. ಅನಂತರಾ, ನೀನು ಇದೇನು ಮಾಡುತ್ತಿರುವಿ? ನೀನೇನು ಹೋಮೋ, ಗೀಮೋ ಆಗಬೇಕೆಂದಿರುವಿಯೇನು?” ಎಂದು ಹೇಳುತ್ತಾ ಅವಳ ಬಿಗಿ ಹಿಡಿತದಿಂದ ಬಿಡಿಸಿಕೊಂಡಿದ್ದೆ. ಎಂಜಲೆಂಜಲಾಗಿದ್ದ ಕೆನ್ನೆ, ತುಟಿಗಳನ್ನು ಟವೆಲ್ಲಿನಿಂದ ಒರೆಸಿಕೊಂಡಿದ್ದೆ.
“ಹೋಮೋ, ಗೀಮೋ ಅದೆಲ್ಲಾ ನನಗೆ ಗೊತ್ತಿಲ್ಲ. ಯೌವನ ಸಿರಿಯ ಈ ದೇಹ ತಣಿದರೆ ಸಾಕು ಅಷ್ಟೇ. ಇದರಲ್ಲೇನು ತಪ್ಪಿದೆ? ಪಾಶ್ಚಿಮಾತ್ಯ ದೇಶಗಳಲ್ಲಿ ಹತ್ತು-ಹನ್ನೆರಡನೇ ವಯಸ್ಸಿನಿಂದಲೇ ಹುಡುಗ-ಹುಡುಗಿಯರು ಲೈಂಗಿಕ ಸುಖವನ್ನು ಮುಕ್ತವಾಗಿ ಅನುಭವಿಸುತ್ತಾ ಲೈಫನ್ನು ಎಂಜಾಯ್ ಮಾಡುತ್ತಿರುವಾಗ ನಮಗೇಕೆ ಈ ರೀತಿಯ ಅನಾವಶ್ಯಕ ಕಟ್ಟು-ಪಾಡುಗಳು? ನಮ್ಮ ದೇಶದಲ್ಲಿ ಹೆಣ್ಣಿಗೊಂದು ಕಟ್ಟುಪಾಡು, ಗಂಡಿಗೊಂದು ಕಟ್ಟುಪಾಡು. ಅರ್ಥವಿಲ್ಲದ ಮಡಿವಂತಿಕೆಗಳು ಬಹಳ. ಆದರೂ ಬದಲಾವಣೆಯ ಗಾಳಿ ನಮ್ಮ ದೇಶದಲ್ಲೂ ಬೀಸತೊಡಗಿದೆ. ಹೈಸ್ಕೂಲ್ ಲೇವಲ್ಲಿನಿಂದಲೇ ಬಹಳಷ್ಟು ಹುಡುಗ-ಹುಡುಗಿಯರು ಈಗೀಗ ಲೈಂಗಿಕ ಸುಖ ಅನುಭವಿಸಲು ಮುಂದಾಗಿದ್ದಾರೆ. ಒಳ್ಳೇ ಟ್ರೆಂಡ್ ಶುರುವಾಗಿದೆ. ನೀನೊಬ್ಬ ಹಳ್ಳಿ ಗುಗ್ಗು. ಹಳೇ ಕಾಲದ ಗೌರಮ್ಮನಂತೆ ಇರುವಿ. ನಿನಗೆ ಗೊತ್ತಿದೆಯೋ ಇಲ್ಲವೋ? ನಮ್ಮ ಪಿಜಿ ಸೆಂಟರಿನಲ್ಲಿ ವಾಸಿಸುತ್ತಿರುವ ಬಹುತೇಕ ಹುಡುಗಿಯರಿಗೆ ಬಾಯ್ ಫ್ರೆಂಡ್ಸ್ ಇದ್ದಾರೆ. ಕೆಲವೊಬ್ಬರಿಗೆ ಒಬ್ಬರಿಗಿಂತ ಹೆಚ್ಚಿನ ಬಾಯ್ ಫ್ರೆಂಡ್ಸ್ ಇದ್ದಾರೆ. ವೀಕೆಂಡಿನ ದಿನಗಳಲ್ಲಿ ರೂಮಿನಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ತಮ್ಮ ತಮ್ಮ ಜೊತೆಗಾರರೊಂದಿಗೆ ಹೊರಗೆ ಹೋಗಿ ಮಜದಿಂದ ಇದ್ದು ಬರುತ್ತಾರೆ. ಲೈಫ್ ಇರುವುದೇ ಎಂಜಾಯ್ ಮಾಡಲು ಅಲ್ಲವೇ? ಬಹುತೇಕ ಹುಡುಗಿಯರು ರೂಮಲ್ಲಿ ಹೋಮೋಸ್. ರಾತ್ರಿ ಬೆತ್ತಲೆಯಾಗಿ ಲೈಫ್ ಎಂಜಾಯ್ ಮಾಡುತ್ತಾರೆ. ನಿನಗೂ ಬಾಯ್ ಫ್ರೆಂಡ್ ಬೇಕಿದ್ದರೆ ಹೇಳು. ನಾನು ಅರೇಂಜ್ ಮಾಡುವೆ. ಇಲ್ಲವೇ ನಾವಿಬ್ಬರೇ ರೂಮಲ್ಲಿ ಇದೇ ರೀತಿ… ಎಂಜಾಯ್ ಮಾಡಲು ಶುರುಮಾಡೋಣವೇ? ಅಂಜಿಕೆ, ನಾಚಿಕೆ ಬೇಡ” ಎಂದು ಹೇಳುತ್ತಾ ಕಣ್ಣು ಮಿಟುಕಿಸಿದ್ದಳು. ಅವಳ ಕೃತಿ, ಮಾತುಗಳಿಂದ ನನಗೋ ಮೈಯೆಲ್ಲಾ ಉರಿಯುತ್ತಿರುವ ಅನುಭವವಾಗತೊಡಗಿತ್ತು.


“ಅದೆಲ್ಲಾ ಏನೂ ಬೇಡ ತಾಯಿ ನನಗೆ. ನಿನ್ನ ಪಾಡಿಗೆ ನೀನಿರು. ನನ್ನ ಪಾಡಿಗೆ ನಾನಿರುವೆ. ಇಲ್ಲವಾದರೆ ನಾನು ಬೇರೆ ಪಿಜಿ ನೋಡಿಕೊಳ್ಳುವೆ” ಎಂದಿದ್ದೆ.
“ಬಿ ಕೂಲ್, ಬಿ ಕೂಲ್. ಡೋಂಟ್ ವರಿ. ನಾನೇನು ನಿನ್ನನ್ನು ತಿಂದು ಹಾಕುವುದಿಲ್ಲ” ಎಂದು ಅನಂತರಾ ಹೇಳುವಷ್ಟರಲ್ಲಿ ನಮ್ಮ ಪಿಜಿ ಸೆಂಟರಿನ ಮಾಲಕಿ ರಮ್ಯಕೃಷ್ಣಾ ಬಂದಿದ್ದಳು.
“ಅನಂತರಾ ರೆಡಿ ಏನೇ? ನೀನು ತುಂಬಾ ಲೇಟ್ ಮಾಡುತ್ತಿರುವಿ. ಹೊರಡೋಣವೇ? ಹೊರಗಡೆ ಹುಡುಗರು ಕಾಯುತ್ತಿದ್ದಾರೆ” ಎಂದಾಗ, ಈಕೆ, `ರೆಡಿ. ಹೊರಡುವಾ’ ಎಂದು ಹೇಳುತ್ತಾ ನನಗೆ ಕಣ್ಸನ್ನೆ ಮಾಡುತ್ತಾ ಅನಂತರಾ ಅವಳೊಂದಿಗೆ ಹೆಜ್ಜೆ ಹಾಕಿದ್ದಳು. ನನಗಾಗ ಉಸಿರಾಟ ಸರಾಗವಾಗತೊಡಗಿತ್ತು. ಮೂವತ್ತೆರಡರ ಹರೆಯದ ರಮ್ಯಕೃಷ್ಣಾ ಇಂದು ತುಂಬಾ ಮಾಡ್ ಡ್ರೆಸ್ಸಿನಲ್ಲಿದ್ದಳು. ಮೈಗಂಟಿಕೊಂಡಿದ್ದ ಸ್ಲೀವ್‍ಲೆಸ್ಸಿನ ಟಾಪಿನಲ್ಲಿ ಆಕೆಯ ತುಂಬಿದ ತೋಳುಗಳು ದಿವಿನಾಗಿ ಕಾಣುತ್ತಿದ್ದರೆ ಎದೆಯ ಸೀಳು ತುಂಬಾ ಸೆಕ್ಸಿಯಾಗಿ ಇಣುಕುತ್ತಿತ್ತು. ಮದುವೆಯಾಗಿ ಗಂಡ, ಎರಡು ಮಕ್ಕಳಿರುವ ಹೆಂಗಸು ರಮ್ಯಕೃಷ್ಣಾ. ಇಂದು ಮದುವೆಯಾಗದ ಇಪ್ಪತ್ತರ ತರುಣಿಯಂತೆ ಕಾಣುತ್ತಿದ್ದಳು. ಗರಬಡಿದವಳಂತೆ ಪೆಚ್ಚು ಪೆಚ್ಚಾಗಿ ನಾನು ಅವರು ಹೋದ ದಿಕ್ಕಿನತ್ತ ನೋಡತೊಡಗಿದ್ದೆ. ಎರಡನೇ ಅಂತಸ್ತಿನಲ್ಲಿದ್ದ ನಮ್ಮ ರೂಮಿನ ಬಾಲ್ಕನಿಯಿಂದ ಹೊರಗೆ ಇಣುಕಿದಾಗ, ಪಿಜಿ ಸೆಂಟರಿನ ಕಟ್ಟಡದ ಕಂಪೌಂಡಿನ ಮಗ್ಗಲು ಇಬ್ಬರು ಹುಡುಗರು ಇವರಿಗಾಗಿ ಕಾಯುತ್ತಿರುವುದು ಕಂಡು ಬಂತು. ಇವರು ಹೋಗುತ್ತಲೇ ಅವರು ತಮ್ಮ ಬೈಕ್‍ಗಳನ್ನು ಸ್ಟಾರ್ಟ ಮಾಡಿದ್ದರು. ರಮ್ಯಕೃಷ್ಣಾ ಏರಿದ ಬೈಕಿನ ಹುಡುಗ ತುಂಬಾ ಎಳಸು ಎಂದು ನನಗೆ ಅನಿಸಿತ್ತು.
ಶನಿವಾರ ಬೆಳಿಗ್ಗೆ ಹೋಗಿದ್ದ ಅನಂತರಾ ಮತ್ತು ರಮ್ಯಕೃಷ್ಣಾ ಪಿಜಿಗೆ ಬಂದಿದ್ದು ಸೋಮವಾರ ಬೆಳಿಗ್ಗೇನೆ. ನಾನು ಆಫೀಸಿಗೆ ಹೊರಡುವ ತರಾತುರಿಯಲ್ಲಿದ್ದೆ. ಅನಂತರಾಳ ಕೈಯಲ್ಲಿ ಎರಡು ಮೂರು ದೊಡ್ಡ ದೊಡ್ಡ ಕ್ಯಾರಿ ಬ್ಯಾಗುಗಳಿದ್ದವು. ಡ್ರೆಸ್‍ಗಳು, ಕಾಸ್ಮೆಟಿಕ್ಸ್‍ಗಳಿಂದ ತುಂಬಿದ್ದವು. ಅವಳ ಮೊಗ ಸಂತಸದಿಂದ ಬೀಗುತ್ತಿತ್ತು.


“ಹಾಯ್ ಕೃತಿಕಾ. ರಿಯಲೀ ವುಯ್ ಎಂಜಾಯ್ಡ್ ಎ ಲಾಟ್ ಫಾರ್ ಟು ಡೇಸ್. ನಿನ್ನ ನೋಡಿದರೆ ನನಗೆ ಅಯ್ಯೋ ಅನಿಸುತ್ತಿದೆ. ವಿಚಾರ ಮಾಡು. ನೀನು ಹೂಂ ಅಂದರೆ ನಿನಗೆ ಒಳ್ಳೇ ಹುಡುಗನನ್ನು ನೋಡುವೆ. ಗಾಳಿ ಬಂದಾಗ ತೂರಿಕೊಳ್ಳಬೇಕಮ್ಮ. ಸುಖವೆನ್ನುವುದು ಮರೀಚಿಕೆಯಾಗಬಾರದು…” ಎಂದಿದ್ದಳು ಉತ್ಸಾಹದ ಚಿಲುಮೆಯಲ್ಲಿ ತೊನೆದಾಡುತ್ತಿದ್ದ ಅನಂತರಾ. ಹೊಸ ಡ್ರೆಸ್ ಅವಳ ಮೈಯನ್ನು ಅಪ್ಪಿಕೊಂಡಿದ್ದರಿಂದ ನೋಟದಲ್ಲಿ ಮಿಂಚಿಂಗ್ ಇತ್ತು.
“ಅನಂತರಾ, ನೀನು ಮಾಡುತ್ತಿರುವುದೇ ತಪ್ಪು. ನನ್ನಂಥಹವರನ್ನೂ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಬೇಡ. ನೀನೂ ಸಹ ನೈತಿಕತೆಗೆ ಬೆಲೆ ಕೊಡುವುದನ್ನು ಕಲಿತುಕೋ. ಕಳೆದುಕೊಂಡಿದ್ದನ್ನು ಗಳಿಸುವುದು ಕಷ್ಟದ ಕೆಲಸ” ಎಂದು ಹೇಳುತ್ತಾ ನಾನು ಆಫೀಸಿಗೆ ಹೊರಟಿದ್ದೆ.
*****
ಮುಂದಿನ ಶುಕ್ರವಾರ ರಜೆ ಇತ್ತು. ಶುಕ್ರ, ಶನಿ, ರವಿವಾರ ಮೂರು ದಿನಗಳ ರಜೆಯ ಹಂಗಾಮ ಇತ್ತು. ಶುಕ್ರವಾರ ಬೆಳಿಗ್ಗೇನೇ ಮೇಕಪ್ಪಿಗೆ ಶುರುಮಾಡಿಕೊಂಡಿದ್ದಳು ಅನಂತರಾ ಸಣ್ಣಗೆ ಏನೇನೋ ಗುನುಗಿಕೊಳ್ಳುತ್ತಾ ತನ್ನಲ್ಲೇ. ಹೊರಗೆ ಹೊರಡುವ ಸಂಭ್ರಮದಲ್ಲಿದ್ದಳು. ಮೇಲಾಗಿ ಈ ಬಾರಿ ಮೂರು ದಿನಗಳ ರಜೆಗಳ ಸಂಗಮ. ಅಷ್ಟರಲ್ಲಿ ಅಪ್ ಟು ಡೇಟ್ ಅಮ್ಮಯ್ಯ ಆಗಿ ರಮ್ಯಕೃಷ್ಣಾ ಬಂದಿದ್ದಳು. ಅವಳ ವಯ್ಯಾರ, ಒನಪು, ತೊನೆದಾಟ ನೋಡಿ ನನಗೇನೆನ್ನಿಸಿತೋ ಏನೋ, ತಕ್ಷಣ, `ಮೇಡಂ, ನೀವು ತುಳಿದಿರುವ ದಾರಿ ಸರಿಯಾದುದಲ್ಲ. ಎರಡು ಮಕ್ಕಳ ತಾಯಿಯಾಗಿ ನೀವು ನಮ್ಮಂಥಹ ಹುಡುಗಿಯರಿಗೆ ಆದರ್ಶ ವ್ಯಕ್ತಿಯಾಗಬೇಕು. ಅದು ಬಿಟ್ಟು, ಥೂ ನೀವು ಮಾಡುತ್ತಿರುವುದೇನು…?’ ಎಂದಿದ್ದೆ.
“ಕೃತಿಕಾ, ನಾನು ಪಟ್ಟ ಪಡಿಪಾಟಲು, ನೋವು, ಕಷ್ಟ-ಕಾರ್ಪಣ್ಯ ನಿನಗೇನು ಗೊತ್ತು? ಜೀವನವೆಂದರೆ ಏನೆಂದು ಸರಿಯಾಗಿ ತಿಳಿಯದ ಹದಿನೈದನೇ ವಯಸ್ಸಿನಲ್ಲಿ ಸೋದರಮಾವನೊಂದಿಗೆ ನನ್ನ ಮದುವೆ ಆಗಿ ಹೋಯಿತು. ಇಲ್ಲಿ ನೀನೇ ನೋಡುತ್ತಿರುವಿಯಲ್ಲಾ, ನನ್ನ ಗಂಡನನ್ನು? ಅವನೊಬ್ಬ ಸಾಧು ಪ್ರಾಣಿಯೇ. ಭೋಳೇ ಶಂಕರನಂತೆಯೇ ಇದ್ದಾನೆ. ಮೊದಲರಾತ್ರಿಯ ದಿನ ಅವನ ತಾಕತ್ತು ಏನೆಂದು ನನಗೆ ತಿಳಿದಿತ್ತು. ನೂರೆಂಟು ಕನಸುಗಳನ್ನು ಹೆಣೆದುಕೊಂಡು ಪ್ರಸ್ತದ ಕೋಣೆ ಸೇರಿದ್ದ ನನಗೆ ಗೊತ್ತಾಗಿತ್ತು ಅವನಿಂದ ನನ್ನ ಬೆಂಕಿಯಂಥಹ ದೇಹವನ್ನು ತಣಿಸಲು ಆಗುವುದಿಲ್ಲವೆಂದು. ನಾನೇ ಮನಸ್ಸನ್ನು ಗಟ್ಟಿ ಮಾಡಿಕೊಂಡು ಅವನ ಕಾಮಾಸಕ್ತಿಗೆ ಹೊಂದಿಕೊಂಡು ಸಂಸಾರ ಆರಂಭಿಸಿ ಹೇಗೋ ಎರಡು ಮಕ್ಕಳನ್ನು ಪಡೆದಿರುವೆ. ರಭಸದ ಪ್ರವಾಹದಂಥಹ ನನ್ನ ಬಯಕೆಗಳನ್ನು ತಣಿಸಲು ಅವನು ಹೆಣಗಾಡುತ್ತಿದ್ದಾನೆ. ಈಗ ಎರಡು ವರ್ಷಗಳಿಂದ ಜೊತೆಯಾಗಿರುವ ಈ ಹುಡುಗ ನನ್ನ ಮೈ, ಮನಗಳನ್ನು ತಣಿಸುತ್ತಿದ್ದಾನೆ. ಅವನು ನಮ್ಮ ಅನಂತರಾಳ ಕಾಲೇಜಿನಲ್ಲಿ ಅವಳ ಜ್ಯೂನಿಯರ್ ಬ್ಯಾಚಿನ ಹುಡುಗ. ನನಗಿಂತ ವಯಸ್ಸಿನಲ್ಲಿ ತುಂಬಾ ಚಿಕ್ಕವನಾದರೂ ನನ್ನ ಮನಸ್ಸನ್ನು ಅರಿತುಕೊಂಡು ಹೋಗುತ್ತಿದ್ದಾನೆ. ನಾನೇ ಅವನಿಗೆ ಪಾಕೆಟ್‍ಮನಿಯ ಜೊತೆಗೆ ಮೊಬೈಲಿನ ಕರೆನ್ಸಿ ಖರ್ಚು ಇತರ ಖರ್ಚುಗಳನ್ನು ಕೊಡುತ್ತಿದ್ದೇನೆ. ಅವನು ನನಗೆ ಜೊತೆಯಾದಾಗಿನಿಂದ ನಾನು ಸಂಪೂರ್ಣ ಹೆಣ್ಣಾಗಿದ್ದೇನೆಂದು ಅನಿಸುತ್ತಿದೆ.” ಹೀಗೆ ಉದ್ದುದ್ದಾಗಿ ಹೇಳಿದ್ದಳು ರಮ್ಯಕೃಷ್ಣಾ. ಇಷ್ಟು ಹೇಳುತ್ತಾ ಹೇಳುತ್ತಾ ಆಕೆ ಅನಂತರಾಳನ್ನು ತಬ್ಬಿಕೊಂಡು ಮುದ್ದು ಮಾಡುತ್ತಾ, `ಈಕೆ ಜೊತೆಯಾದಾಗಿನಿಂದ ನಾನು ರಿಯಲೀ ಲೈಫ್ ಎಂಜಾಯ್ ಮಾಡುತ್ತಿದ್ದೇನೆ. ಇದೆಲ್ಲಾ ನನ್ನ ಗಂಡನಿಗೂ ಗೊತ್ತಿದೆ’ ಎಂದಿದ್ದಳು ರಮ್ಯಕೃಷ್ಣಾ.

“ಅದೇನೇ ಇರಲಿ, ನಿಮ್ಮಂಥಹವರಿಂದ ನಮ್ಮ ಭಾರತೀಯ ಸಂಸ್ಕøತಿ, ಆಚಾರ, ವಿಚಾರಗಳು ಮೂಲೆಗುಂಪಾಗುತ್ತಿರುವುದಂತೂ ನಿಜ. ನೈತಿಕತೆಯ ಅಧಃಪತನವಾಗುತ್ತಿದೆ. ಇನ್ನೂ ಕಾಲ ಮಿಂಚಿಲ್ಲ. ಈಗಲೂ ನಿಮ್ಮ ನಡತೆಗಳನ್ನು ತಿದ್ದಿಕೊಳ್ಳಬಹುದು. ಇಲ್ಲದಿದ್ದರೆ ಈ ನಿಮ್ಮ ಘನಂದಾರಿ ಗುಣಗಳನ್ನು ನಿಮ್ಮ ಮಕ್ಕಳು ಅಳವಡಿಸಿಕೊಳ್ಳುವ ಕಾಲ ದೂರವೇನಿಲ್ಲ…?” ಎಂದಿದ್ದೆ ತುಂಬಾ ಬೇಸರದಿಂದ.
“ಈಗಿನ ಕಾಲದ ಪ್ರಕಾರ ನೈತಿಕತೆ, ಅನೈತಿಕತೆ, ನ್ಯಾಯ, ಅನ್ಯಾಯ, ಸತ್ಯ, ಅಸತ್ಯಗಳಿಗೆ ಬೇರೆ ಬೇರೆ ಅರ್ಥವಿಲ್ಲ. ಎಲ್ಲಾ ಅವರವರ ಭಾವಕ್ಕೆ ತಕ್ಕಂತೆ ಅಷ್ಟೇ. ನಮಗೆ ಸದ್ಯದ ಸುಖವಷ್ಟೇ ಮುಖ್ಯ. ನಿನಗೂ ಸುಖ ಬೇಕೆಂದರೆ ನಮ್ಮ ಜೊತೆಗೂಡು. ಎಲ್ಲರೂ ಸೇರಿ ಎಂಜಾಯ್ ಮಾಡೋಣ. ಹಾಗೆ ಆಳವಾಗಿ ಯೋಚಿಸಿದರೆ ನಮ್ಮ ಮಕ್ಕಳು ನಮ್ಮಂತೆ ಆದರೆ ಇದರಲ್ಲಿ ಯಾವ ತಪ್ಪೂ ಇಲ್ಲವೆಂದು ನಮ್ಮ ಅನಿಸಿಕೆ.” ರಮ್ಯಕೃಷ್ಣಾ ಹೇಳುತ್ತಾ ನನ್ನನ್ನು ತಬ್ಬಿಕೊಳ್ಳುವ ಪ್ರಯತ್ನಕ್ಕೆ ಮುಂದಾದಾಗ ನಾನು ಪಕ್ಕಕ್ಕೆ ಸರಿದು, `ಇದೆಲ್ಲಾ ನನಗೆ ಇಷ್ಟವಾಗುವುದಿಲ್ಲ. ಒಳ್ಳೆಯದರ ಬಗ್ಗೆ ನಿಮಗೆ ತಿಳಿಸಿ ಹೇಳಲು ನಾನು ಪ್ರಯತ್ನಿಸಿದೆ. ಪಾಲಿಸುವುದು, ಬಿಡುವುದು ನಿಮಗೆ ಬಿಟ್ಟಿದ್ದು’ ಎಂದು ಖಾರವಾಗಿ ಹೇಳಿದಾಗ ಅನಂತರಾ ಮತ್ತು ರಮ್ಯಕೃಷ್ಣಾ ಇಬ್ಬರೂ ಮುಸಿ ಮುಸಿ ನಗುತ್ತಾ, `ಹುಚ್ಚು ಹುಡುಗಿ, ಇದು ಇಪ್ಪತ್ತೊಂದನೇ ಶತಮಾನ. ನೀನು ಲಾಯಕ್ಕಿಲ್ಲ. ಇನ್ನೂ ಅಡಗೂಲಜ್ಜಿಯಂತೆ ಮಾತಾಡುತ್ತಿರುವಿ’ ಎಂದು ಹೇಳುತ್ತಾ ಹೊರಟಿದ್ದರು ತಮ್ಮ ತಮ್ಮ ಹುಡುಗರ ಬೈಕ್ ಏರಲು.
*****
ಅನಂತರಾ, ರಮ್ಯಕೃಷ್ಣಾ ಅವರ ನಡೆಗೆ ಬೇಸತ್ತಿದ್ದ ನಾನು ನನ್ನ ತಲೆ ಚಚ್ಚಿಕೊಳ್ಳುತ್ತಾ ಅಮೇರಿಕಾದಂಥಹ ದೇಶದಲ್ಲಿ, `ಅಕ್ಕ-ತಂಗಿಯರೇ, ಅಣ್ಣ-ತಮ್ಮಂದಿರೇ…’ ಎಂದು ಸಂಬೋಧಿಸುತ್ತಾ ಭಾರತೀಯ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಿದ್ದ ಸ್ವಾಮಿ ವಿವೇಕಾನಂದರಂಥಹ ಆದರ್ಶ ವ್ಯಕ್ತಿತ್ವದ ವ್ಯಕ್ತಿಗಳ ದೇಶದ ಸಂಸ್ಕøತಿ, `ಎಲ್ಲಿಗೆ ಬಂತಲ್ಲ ಸಂಗಯ್ಯಾ…’ ಎಂದು ನನ್ನೊಳಗೇ ಅಂದುಕೊಂಡು ಮುಂದಿನ ತಿಂಗಳ ಮೊದಲ ತಾರೀಖಿಗೆ ಬೇರೊಂದು ಪಿಜಿಯನ್ನು ಹುಡುಕಿಕೊಂಡಿದ್ದೆ. ನನ್ನ ಮಾತುಗಳಿಂದ ನಿಮಗೆ ಬೇಸರವಾಗಿಲ್ಲ ತಾನೇ? ಇಲ್ಲಿಗೆ ಮುಗಿಸಲೇ ನನ್ನ ಮಾತುಗಳನ್ನು…?

* ಶೇಖರಗೌಡ ವೀ ಸರನಾಡಗೌಡರ್, ತಾವರಗೇರಾ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಎಲ್ಲಿಗೆ ಬಂತು ಸಂಗಯ್ಯಾ ದೇಶದ ಸಂಸ್ಕೃತಿ…?”

  1. ಧರ್ಮಾನಂದ ಶಿರ್ವ

    ತಾರುಣ್ಯದ ಬಿಸಿ ಅಲೆಯ ಕಾಮದಾಹ ಕಥೆಯಲ್ಲಿ ಮೂಡಿದೆ. ಇದು ನಡೆಯುತ್ತಲೂ ಇದೆ.
    ಕಥೆಗೊಂದು ಅಂತ್ಯದ ಅವಶ್ಯಕತೆ ಇತ್ತು ಅನಿಸಿತು.
    ಅಭಿನಂದನೆಗಳು.

  2. ಪಿ. ಜಯರಾಮನ್

    ಈಗಿನ ಕಾಲದಲ್ಲಿ ಕೆಲ ಹುಡುಗಿಯರು, ಕೆಲ ಹೆಂಗಸರು ಮಾಡುವ ಅನೈತಿಕ ಚಟುವಟಿಕೆಗಳನ್ನು ತುಂಬಾ ಸೊಗಸಾಗಿ ಬಿಂಬಿಸಿದ್ದೀರಿ. ಈ ಅನೈತಿಕ ಸಂಬಂಧಗಳು ಕೆಲವೊಮ್ಮೆ ಅವರ ಜೀವಕ್ಕೆ ಮುಳುವಾಗುತ್ತದೆ ಎಂಬುದ ಅವರು ಮರೆಯುತ್ತಾರೆ. ಕಥೆ ಚೆನ್ನಾಗಿದೆ ಸರ್.
    ಅಭಿನಂದನೆಗಳು.

  3. Raghavendra Mangalore

    ಇವತ್ತಿನ (ಕು)ಸಂಸ್ಕೃತಿ ಹಾಗೂ ಈಗಿನ ಅದರಲ್ಲೂ ತುಂಬಾ ಓದಿದ ಹುಡುಗಿಯರ ಚೆಲ್ಲು – ಚೆಲ್ಲಾಟದ ಬಗ್ಗೆ ಒಳ್ಳೆಯ ಕಥೆ ಹೆಣೆದಿರುವಿರಿ ಸಾರ್. ನಮ್ಮ ಯುವ ಜನಾಂಗ ದಿಕ್ಕು ತಪ್ಪಿದ ಬಗ್ಗೆ ಖೇದವಾಗುತ್ತಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter