ದಣಿವರಿಯದ ಕಲಾ ಸೌರಭ – ಸರೋಜಾ ಶ್ರೀನಾಥ್

ಮುಂಬೈಗೆ ಅನ್ಯಾನ್ಯ ಕಾರಣಗಳಿಂದ ವಲಸೆ ಬಂದ ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಯಾರನ್ನೂ ಬೆರಗುಗೊಳಿಸದೇ ಬಿಡದು. ಮುಂಬೈ ಮಹಾನಗರದಲ್ಲಿ ನೆಲೆಸಿ ಸಾಂಸ್ಕ್ರತಿಕ ವಲಯದಲ್ಲಿ ಮಹತ್ವದ ಸೇವೆ ಸಲ್ಲಿಸಿದವರಲ್ಲಿ ಸಂಗೀತ ವಿದ್ವಾನ್ ಸರೋಜಾ ಶ್ರೀನಾಥ್ ಅವರದು ದೊಡ್ಡ ಹೆಸರು. ಮಹಿಳೆಯರು ಅವಕಾಶ ಸಿಕ್ಕರೆ ಎಂಥ ಗುರುತರ ಕಾರ್ಯವನ್ನೂ ಮಾಡಬಲ್ಲರು ಎಂಬುದಕ್ಕೆ ಅವರು ಉತ್ತಮ ಉದಾಹರಣೆ. ಸರೋಜಾ ಶ್ರೀನಾಥ್ ಅವರು ಸಂಗೀತ, ನೃತ್ಯ, ಚಿತ್ರಕಲೆ, ಸಾಹಿತ್ಯ, ಆಡಳಿತಾತ್ಮಕ ಕಾರ್ಯ, ಸಮಾಜಸೇವೆ ಹೀಗೆ ನಾನಾ ನೆಲೆಗಳಲ್ಲಿ ಮಿಂಚಿದ ಮಹಾನ್ ಚೇತನ. ಅವರದು ಬಹುಮುಖ ಪ್ರತಿಭೆ, ನಾನಾ ಬಗೆಯ ಕ್ರಿಯಾಶೀಲ ವ್ಯಕ್ತಿತ್ವ.ಈಗ ಅವರಿಗೆ 90ರ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ ಅನುಭವ ಕಥನ ಅವರು ಹುಟ್ಟಿದ ದಿನದಂದು (ಏಪ್ರಿಲ್ 20) ಮುಂಬೈಯಲ್ಲಿ ಬೆಳಕು ಕಾಣುತ್ತಿದೆ.

ಸರೋಜಾ ಅವರು ಮೂಲತಃ ಮೈಸೂರಿನವರು. ಅಲ್ಲಿಯೇ ಆರಂಭದ ಶಿಕ್ಷಣ ಪಡೆದರು. ಮುಂದೆ ಪದವಿ ಅಧ್ಯಯನಕ್ಕೆ ಮಹಾರಾಣಿ ಕಾಲೇಜಿಗೆ ಸೇರಿದರು. ಬಾಲ್ಯದಲ್ಲೇ ಸಂಗೀತ, ಸಾಹಿತ್ಯದಲ್ಲಿ ಅವರಿಗೆ ವಿಶೇಷ ಒಲವಿತ್ತು. ಕಾಲೇಜು ಸೇರಿದಾಗ ಸಂಗೀತ, ಇತಿಹಾಸ, ಹಾಗೂ ಕನ್ನಡವನ್ನು ಐಚ್ಛಿಕವಾಗಿ ಆಯ್ದು ಕೊಂಡರು. ಆದರೆ ಅಲ್ಲಿ ಕನ್ನಡ ವಿಶೇಷ ಅಧ್ಯಯನಕ್ಕೆ ಅವಕಾಶ ಇರಲಿಲ್ಲ. ಕಾಲೇಜಿನಲ್ಲಿ ವಿಶೇಷ ಕನ್ನಡ ತರಗತಿಯನ್ನು ನಡೆಸುವಂತೆ ಮನವಿ ಮಾಡಿದರು. ಆದರೂ ಪ್ರಯೋಜನವಾಗಲಿಲ್ಲ. ಒಂದು ದಿನ ತಮ್ಮ ಗೆಳತಿಯರೊಂದಿಗೆ ನೇರವಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಅವರನ್ನು ಕಾಣಲು ಹೋದರು. ಆಗ ಅಲ್ಲಿನ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಕಾರ್ಯ ನಿ ರ್ವಹಿಸುತ್ತಿದ್ದವರು ಕುವೆಂಪು ಯಾ ಡಾ. ಕೆ. ವಿ. ಪುಟ್ಟಪ್ಪ. ಇವರನ್ನು ಆತ್ಮೀಯವಾಗಿ ಮಾತನಾಡಿಸಿ ಮಕ್ಕಳ ಕನ್ನಡ ಅಭಿಮಾನವನ್ನು ಕಂಡು ತಕ್ಷಣದಿಂದ ಕನ್ನಡ ಐಚ್ಛಿಕ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಟ್ಟರಂತೆ.ಮುಂದೆ ಕುವೆಂಪು ಅವರ ಭಾಷಣ, ಉಪನ್ಯಾಸ ಸರೋಜಾ ಅವರ ಮೇಲೆ ಅಪಾರವಾದ ಪ್ರಭಾವ ಬೀರಿತು. ಪದವಿ ಪಡೆದ ಬಳಿಕ ಬೆಂಗಳೂರಿನಲ್ಲಿ ಡ್ರಾಮಾಟಿಕ್ ಆರ್ಟ್ಸ್ ಅಂಡ್ ಕ್ರಾಫ್ಟ್ ಡಿಪ್ಲೋಮ ಮಾಡಿದರು. ಅಲ್ಲಿ ರಂಗ ಕಲೆಯನ್ನು ಹೇಳಿಕೊಡುತ್ತಿದ್ದ ಶ್ರೀನಾಥ್ ಅವರ ಪರಿಚಯವಾಗಿ ಅದು ಮದುವೆಗೆ ಕಾರಣವಾಯಿತು.

ಎಚ್. ಎ. ಎಲ್. ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಶ್ರೀನಾಥ್ ಅವರು ಮದ್ರಾಸಿನಲ್ಲಿ ಕೆಲಸಕ್ಕೆ ಸೇರಿಕೊಂಡರು. ಹೀಗಾಗಿ ಪತಿಯೊಂದಿಗೆ ಸರೋಜಾ ಅವರು ಚನ್ನೈಗೆ ಹೋದರು. ಅಲ್ಲಿ ಪ್ರಸಿದ್ದವಾದ ಸೆಂಟ್ರಲ್ ಕಾಲೇಜ ಆಫ್ ಕರ್ನಾಟಿಕ್ ಮ್ಯೂಸಿಕ್ದಲ್ಲಿ ಸಂಗೀತದ ಉನ್ನತ ಅಧ್ಯಯನಕ್ಕೆ ಸೇರಿಕೊಂಡರು. ಮದ್ರಾಸಿನಲ್ಲಿ ಸಂಗೀತದ ನುರಿತ ವಿದ್ವಾಂಸರ, ಕಲಾವಿದರ ಸಾಂಗತ್ಯ ದೊರೆಯಿತು. ಕರ್ನಾಟಕ ಸಂಗೀತದ ಮೇರು ಪ್ರತಿಭೆ ಎಂ. ಬಾಲಮುರುಳಿ ಕೃಷ್ಣ ಅವರ ಬಳಿ ಸಂಗೀತ ಕಲಿಯಲು ಸರೋಜಾ ಅವರಿಗೆ ಅವಕಾಶ ಸಿಕ್ಕಿತು. ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತ ಶಾಸ್ತ್ರದಲ್ಲಿ ಅವರಿಗೆ ಹಿಡಿತ ಸಿಕ್ಕಿತು.ಅಲ್ಲಿ ಸಂಗೀತ ವಿದ್ವಾನ್ ಪದವಿಗೂ ಅವರು ಪಾತ್ರರಾದರು. ಶ್ರೀನಾಥ್ ಅವರು ಮದ್ರಾಸಿನಿಂದ ಪುಣೆಗೆ ವರ್ಗವಾಗಿ ಬಂದರು. ಕೆಲವು ವರ್ಷ ಅವರು ಪುಣೆಯಲ್ಲಿದ್ದು ಮರಾಠಿ, ಹಿಂದಿ ಮೊದಲಾದ ಭಾಷೆಗಳನ್ನು ಕಲಿತರು. ಪುಣೆಯಲ್ಲಿ ಆಗಾಗ ವರಕವಿ ದ. ರಾ. ಬೇಂದ್ರೆ ಅವರನ್ನು ಭೇಟಿ ಮಾಡಲು ಭಾಷಣ ಕೇಳಲು ಅವಕಾಶ ಸಿಕ್ಕಿತು. ಮುಂದೆ ಪತಿಯೊಂದಿಗೆ ಮುಂಬೈಗೆ ಪಯಣ.
ಕಲಿತ ವಿದ್ಯೆ ಅವರನ್ನು ಮುಂಬೈಯಲ್ಲಿ ಕೈಹಿಡಿದು ನಡೆಸಿತು. ಮುಂಬೈ ವಿಶ್ವವಿದ್ಯಾಲಯದ ನಳಂದಾ ನೃತ್ಯ ಕಲಾ ಮಹಾವಿದ್ಯಾಲಯದಲ್ಲಿ ಸಂಗೀತ ವಿದ್ವಾಂಸರಾಗಿ, ಉಪನ್ಯಾಸಕರಾಗಿ ಸೇರಿಕೊಂಡರು. ಅಲ್ಲಿಂದ ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಪದ್ಮ ಭೂಷಣ ಡಾ. ಕನಕರಿಲೇ ಅವರೊಂದಿಗೆ ಅವರೂ ಸಂಗೀತ, ನೃತ್ಯ ಕ್ಷೇತ್ರದಲ್ಲಿ ವಿಶೇಷ ಅಧ್ಯಯನ ಮಾಡಿದರು. ಭರತನಾಟ್ಯ ವಿಭಾಗದ ಮುಖ್ಯಸ್ಥರಾಗಿ, ಸಂಗೀತಶಾಸ್ತ್ರಜ್ಞರಾಗಿ ಇಪ್ಪತ್ತೆಂಟು ವರ್ಷ ಮುಂಬೈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲೆಯ ದೀಕ್ಷೆಯನ್ನು ಕೊಟ್ಟ ಹೆಗ್ಗಳಿಕೆ ಸರೋಜಾ ಅವರದು. ನಾಟ್ಯ,ಸಂಗೀತ ವಿಷಯದಲ್ಲಿ ನೂರಾರು ಶೋಧ ಪ್ರಬಂಧಗಳನ್ನು ದೇಶ ವಿದೇಶಗಳಲ್ಲಿ ಮಂಡಿಸಿ ತಮ್ಮ ಪ್ರತಿಭೆ ಪಾಂಡಿತ್ಯವನ್ನೂ ಅವರು ತೋರಿಸಿ ಕೊಟ್ಟಿದ್ದಾರೆ. ಕನಕಸಭಾ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಎಂಬ ನೃತ್ಯ ಶಾಲೆಯನ್ನು ಮುಂಬೈಯಲ್ಲಿ ಆರಂಭಿಸಿ ನೂರಾರು ಆಸಕ್ತರಿಗೆ ನೃತ್ಯ, ಸಂಗೀತದ ಸವಿಯನ್ನು ಉಣಬಡಿಸಿದ್ದಾರೆ. ಸರೋಜಾ ಅವರ ಮಗಳು ಡಾ. ಸಿರಿ ನೃತ್ಯ ಕಲಾವಿದರಾಗಿ ಅಂತಾರಾಷ್ಟೀಯ ಮಟ್ಟದಲ್ಲಿ ನಾಮಾಂಕಿತರಾಗಿದ್ದಾರೆ. ಮೊಮ್ಮಗಳು ಅಮರ ಸಹ ಕಲಾಮಾತೆಯ ಆರಾಧನೆಯಲ್ಲಿ ನಿರತರಾಗಿದ್ದಾರೆ. ಅವರ ಅಳಿಯ ಸಿಂಗಾಪುರದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಇಡೀ ಕುಟುಂಬವೇ ಕಲೆಯ ಉಪಾಸನೆಯಲ್ಲಿ ನಿರತವಾಗಿದೆ.

ಸರೋಜಾ ಶ್ರೀನಾಥ್ ಅವರದು ಬಹುಭಾಷಿಕ ಸಂವೇದನೆ. ಸಂಸ್ಕೃತ, ಇಂಗ್ಲಿಷ್, ಮರಾಠಿ, ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಕೆಲವು ವಿದೇಶಿ ಭಾಷೆಗಳಲ್ಲಿ ಅವರಿಗೆ ಒಳ್ಳೆಯ ಹಿಡಿತವಿದೆ. ಕನ್ನಡ ನಾಡು ನುಡಿ, ಸಾಹಿತ್ಯ, ಸಂಸ್ಕೃತಿಗಳ ಬಗೆಗೆ ಅವರಿಗೆ ವಿಶೇಷ ಅಭಿಮಾನ. ಅಮರ ರಾಮಾಯಣ, ಮೈಸೂರಿನಿಂದ ಮೌನ್ಟ್ ತಂಬಾರೋವರೆಗೆ, ಜಗದಗಲ ಕುತೂಹಲ, ಸಂಗೀತ ಸಾಹಿತ್ಯ ಅನುಸಂಧಾನ, ಕರ್ನಾಟಕದ ದೇವಾಲಯಗಳು, ತಾತಿ ಹೇಳಿದ ಕತೆಗಳು,ಭಾಗ್ಯಶ್ರೀ, ಪಾರ್ವತಿ ಕಲ್ಯಾಣ, ಕರ್ನಾಟಕ ಸಂಗೀತ ಸಾಹಿತ್ಯ ಅನುಸಂಧಾ ನ, ಸಂಗೀತ ವಾದ್ಯಗಳು ಮೊದಲಾದವು ಸರೋಜಾ ಶ್ರೀನಾಥ್ ಅವರ ಪ್ರಕಟಿತ ಕನ್ನಡ ಗ್ರಂಥಗಳು.ಸದ್ಯ ಸಿಂಗಾಪುರದಲ್ಲಿ ನೆಲೆಸಿರುವ ಅವರು ಕೋಶ ಓದಬೇಕು ದೇಶ ಸುತ್ತಬೇಕು ಎಂಬ ಮಾತನ್ನು ಪಾಲಿಸಿಕೊಂಡು ಬಂದಿದ್ದಾರೆ. ಭಾರತದ ಪ್ರಧಾನಮಂತ್ರಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಅವರನ್ನು ಭೇಟಿಮಾಡಿ ಮಾತಾಡುವ ಅವಕಾಶ ಸಹ ಅವರಿಗೆ ದೊರಕಿತ್ತು. ಚಿತ್ರ ಕಲೆಯಲ್ಲಿಯೂ ಅವರದು ದೊಡ್ಡ ಸಾಧನೆ. ಅವರಿಗೆ ಈಗ 90ರ ಹರೆಯ. ದಣಿವರಿಯದ ಅದಮ್ಯ ಜೀವನೋತ್ಸಾಹ ಅವರದು. ಕನ್ನಡಿಗರು ಅಭಿಮಾನಪಡುವಂಥ ಸಾಧನೆ ಮಾಡಿದ ವಿದುಷಿ, ಕಲಾ ಸೌರಭ, ಸಾಹಿತಿ ಸರೋಜಾ ಶ್ರೀನಾಥ್ ಅವರು
ಈ ಇಳಿ ವಯಸ್ಸಿನಲ್ಲಿ ಬರೆದಿರುವ ಅನುಭವ ಕಥನ ಬೆಳಕು ಕಾಣುತ್ತಿರುವುದು ನಿಜ್ವಾಗ್ಲೂ ಹೆಮ್ಮೆಯ ಸಂಗತಿ. ಸಾಹಿತ್ಯ -ಸಂಗೀತ -ನೃತ್ಯ ಇವುಗಳ ಉಪಾಸನೆಯಲ್ಲಿ ತಮ್ಮನ್ನು ಅದ್ದಿಕೊಂಡಿರುವ ಸರೋಜಾ ಮೇಡಂ ಅವರಿಗೆ ವಿಶೇಷವಾದ ಅಭಿನಂದನೆಗಳು.

* ಡಾ. ಜಿ. ಎನ್. ಉಪಾಧ್ಯ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter