
ಪ್ಲೂಟೋ ( ಮುಂಭಾಗದಲ್ಲಿರುವದು) ಮತ್ತು ಅದರ ಉಪಗ್ರಹ ಚರೋನ್

ಆಕಾಶ ಗಂಗಾ
ನಮ್ಮ ಸೌರವ್ಯೂಹವು ಬ್ರಹ್ಮಾಂಡದಲ್ಲಿರುವ ಆಕಾಶ ಗಂಗಾ ( Milky Way ) ಎಂಬ ಸುರುಳಿಯಾಕಾರದ ನಕ್ಷತ್ರಪುಂಜದಲ್ಲಿರುವುದು ಅನೇಕರಿಗೆ ತಿಳಿದ ಸಂಗತಿ. ಈ ಸೌರವ್ಯೂಹದಲ್ಲಿ ಸೂರ್ಯ ಮತ್ತು ಗ್ರಹಗಳಷ್ಟೇ ಅಲ್ಲದೆ ನೂರಾರು ಉಪಗ್ರಹಗಳು, ಸಾವಿರಾರು ಧೂಮಕೇತುಗಳು, ಕ್ಷುದ್ರಗ್ರಹಗಳು ಮತ್ತು ಉಲ್ಕಾಶಿಲೆಗಳಂತಹ ಆಕಾಶ ಕಾಯಗಳೂ ಇವೆ. ಇನ್ನು ಯಾವುದೇ ಇಂಥ ನಿರ್ಧಾರಿತ ವರ್ಗದಲ್ಲಿ ವರ್ಗೀಕರಿಸಲಾರದ ಕೆಲ ವಿಶಿಷ್ಟ ಆಕಾಶ ಕಾಯಗಳೂ ಇವೆ. ಅವುಗಳಲ್ಲಿ ಕುಬ್ಜ ಗ್ರಹ (dwarf planet) ಗಳ ಗುಂಪು ಮುಖ್ಯವಾದದ್ದು. ಸಾಕಷ್ಟು ದ್ರವ್ಯರಾಶಿ, ಗುರುತ್ವಾಕರ್ಷಣೆ ಮತ್ತು ಗೋಳಾಕಾರವನ್ನು ಹೊಂದಿರುವ ಕುಬ್ಜ ಗ್ರಹಗಳೂ ಇತರ ಗ್ರಹಗಳಂತೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಆಕಾಶ ಕಾಯಗಳು. ಅವುಗಳ ಹೆಸರೇ ಸೂಚಿಸುವಂತೆ ಕುಬ್ಜ ಗ್ರಹ ಮತ್ತು ಗ್ರಹಗಳ ನಡುವೆ ಕಂಡುಬರುವ ಮುಖ್ಯ ವ್ಯತ್ಯಾಸವೆಂದರೆ ಅವುಗಳ ಗಾತ್ರ . ನೂರಕ್ಕೂ ಹೆಚ್ಚು ಕುಬ್ಜ ಗ್ರಹಗಳು ನಮ್ಮ ಸೌರಮಂಡಲದಲ್ಲಿ ಅಸ್ತಿತ್ವದಲ್ಲಿರಬಹುದು ಎನ್ನುವುದು ಖಗೋಳಶಾಸ್ತ್ರಜ್ಞರ ಅಭಿಪ್ರಾಯವಾಗಿದ್ದರೂ ಸಧ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ ಸೌರವ್ಯೂಹದಲ್ಲಿ ಐದು ಕುಬ್ಜ ಗ್ರಹಗಳಿದ್ದು, ಗಾತ್ರದಲ್ಲಿ ಅವು ಭೂಮಿಯ ಉಪಗ್ರಹವಾದ ಚಂದ್ರನಿಗಿಂತ ಚಿಕ್ಕವು!
ಕ್ರಿ. ಶ 1930 ರಲ್ಲಿ ಕಂಡುಹಿಡಿಯಲಾಗಿದ್ದ ಪ್ಲೂಟೋ ಇತರ ಎಂಟು ಗ್ರಹಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಬಲು ಚಿಕ್ಕದಾಗಿದ್ದರೂ ಅದನ್ನು ನಮ್ಮ ಸೌರವ್ಯೂಹದ 9ನೆಯ ಗ್ರಹವೆಂದು ಪರಿಗಣಿಸಲಾಗಿತ್ತು. ಹಾಗಾಗಿ ಕ್ರಿ. ಶ 1930 ರಿಂದ ಕ್ರಿ. ಶ 2006ರ ವರೆಗಿನ ಎಲ್ಲ ಪಠ್ಯಪುಸ್ತಕಗಳಲ್ಲಿ, ವಿಶ್ವಕೋಶಗಳಲ್ಲಿ ಮತ್ತು ಸೌರವ್ಯೂಹದ ಬಗ್ಗೆ ಲಭ್ಯವಿದ್ದ ಎಲ್ಲ ಮಾಹಿತಿಯ ಮೂಲಗಳ ಪ್ರಕಾರ ಒಟ್ಟು ಒಂಬತ್ತು ಗ್ರಹಗಳಿವೆಯೆಂದು ಪರಿಗಣಿಸಲಾಗಿತ್ತು. ಆದರೆ ಕ್ರಿ. ಶ. 2006 ರಲ್ಲಿ ಖಗೋಳಶಾಸ್ತ್ರಜ್ಞರು ಪ್ಲೂಟೋನ ’ಒಂಬತ್ತನೆಯ ಗ್ರಹ’ದ ಸ್ಥಾನಮಾನವನ್ನು ತೆಗೆದು ಹಾಕಿ, ಅದನ್ನು ಕುಬ್ಜ ಗ್ರಹವೆಂದು ಮರು ವರ್ಗೀಕರಣ ಮಾಡಿದರು! ಇದಕ್ಕೆ ಕಾರಣ ಕ್ರಿ. ಶ. 2006 ರಲ್ಲಿ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು (International Astronomical Union) ಜಾರಿಗೊಳಿಸಿದ ಗ್ರಹಗಳ ಪರಿಷ್ಕೃತ ವ್ಯಾಖ್ಯಾನ! ಕ್ರಿ. ಶ. 2006 ಕ್ಕೆ ಮುಂಚೆ ಮಾನ್ಯವಾಗಿದ್ದ ವ್ಯಾಖ್ಯಾನದ ಪ್ರಕಾರ ಸೌರವ್ಯೂಹದಲ್ಲಿರುವ ಯಾವುದೆ ಗೋಲಾಕಾರದ ಆಕಾಶಕಾಯವು, ಸೂರ್ಯನ ಸುತ್ತ ತನ್ನದೆ ನಿರ್ದಿಷ್ಟ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದ್ದರೆ, ಅದನ್ನು ಗ್ರಹವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಕ್ರಿ. ಶ. 2006 ರಲ್ಲಿ ಜಾರಿಗೆ ಬಂದ ಹೊಸ ವ್ಯಾಖ್ಯಾನದ ಪ್ರಕಾರ ಯಾವುದೆ ಗೋಲಾಕಾರದ ಆಕಾಶಕಾಯವು ಸೂರ್ಯನ ಸುತ್ತ ತನ್ನದೆ ನಿರ್ದಿಷ್ಟ ಕಕ್ಷೆಯಲ್ಲಿ ಪರಿಭ್ರಮಿಸುವುದರ ಜೊತೆಗೆ ತನ್ನ ಪಥದಲ್ಲಿರುವ ಉಳಿದಿರಬಹುದಾದ ಯಾವುದೆ ಭಗ್ನಾವಶೇಷಗಳನ್ನು ಅಥವಾ ಇತರ ಆಕಾಶಕಾಯಗಳನ್ನು ( ತನ್ನ ಚಂದ್ರರನ್ನು ಹೊರತುಪಡಿಸಿ) ತನ್ನ ಗಾತ್ರ ಮತ್ತು ಗುರುತ್ವದ ಪ್ರಭಾವದಿಂದ ತೆರವುಗೊಳಿಸಿದ್ದರೆ ಮಾತ್ರ ಅದನ್ನು ’ಗ್ರಹ’ವೆಂದು ಪರಿಗಣಿಸುವುದು; ಗ್ರಹದ ಇತರ ಮಾನದಂಡಗಳನ್ನು ಪೂರೈಸಿದರೂ ತನ್ನ ಕಕ್ಷೆಯಲ್ಲಿರುವ ಇತರ ಭಗ್ನಾವಶೇಷಗಳನ್ನು ಮತ್ತು ಇತರ ಆಕಾಶಕಾಯಗಳನ್ನು ( ತನ್ನ ಚಂದ್ರರನ್ನು ಹೊರತುಪಡಿಸಿ) ತೆರವುಗೊಳಿಸಲಾಗದ ಪ್ಲೂಟೋವಿನಂಥ ಆಕಾಶಕಾಯಗಳನ್ನು ’ಕುಬ್ಜ ಗ್ರಹ’ಗಳೆಂದು ಪರಿಗಣಿಸುವುದು . ಹಾಗಾಗಿ ಸಧ್ಯಕ್ಕೆ ನಮ್ಮ ಸೌರಮಂಡಲದಲ್ಲಿರುವ ಗ್ರಹಗಳ ಸಂಖ್ಯೆ ಎಂಟು ಮಾತ್ರ : ಬುಧ, ಶುಕ್ರ, ಮಂಗಳ, ಭೂಮಿ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್. ಪ್ಲೂಟೋದ ಹೊರತಾಗಿ ಸೌರಮಂಡಲದಲ್ಲಿ ಎರಿಸ್, ಸೆರೆಸ್, ಮಾಕೆಮಾಕೆ ಮತ್ತು ಹೌಮಿಯಾ ಎಂಬ ನಾಲ್ಕು ಕುಬ್ಜ ಗ್ರಹಗಳೂ ಇವೆ. ಪ್ಲೂಟೋ, ಎರಿಸ್, ಮಾಕೆಮಾಕೆ ಮತ್ತು ಹೌಮಿಯಾ - ಇವು ಸೌರಮಂಡಲದ ಹೊರವಲಯದಲ್ಲಿರುವ ಕೈಪರ್ ಪಟ್ಟಿ (Kuiper Belt)ಯಲ್ಲಿದ್ದರೆ ಸೆರೆಸ್ ಮಾತ್ರ ಮಂಗಳ ಮತ್ತು ಗುರು ಗ್ರಹಗಳ ಕಕ್ಷೆಗಳ ನಡುವೆ ಇರುವ ಮುಖ್ಯ ಕ್ಷುದ್ರಗ್ರಹಗಳ ಪಟ್ಟಿ ( asteroid belt )ಯಲ್ಲಿದೆ. 2,300 ಕಿಲೋಮೀಟರು (1,400 ಮೈಲು) ಗಳ ವ್ಯಾಸವಿರುವ ಪ್ಲೂಟೋ ಉಳಿದ ನಾಲ್ಕು ಕುಬ್ಜ ಗ್ರಹಗಳಿಗಿಂತ ದೊಡ್ದದಾಗಿದೆ.
ಕ್ರಿ. ಶ 1930 ರಲ್ಲಿ ಅಮೆರಿಕದ ಖಗೋಳಶಾಸ್ತ್ರಜ್ಞ ಕ್ಲೈಡ್ ಟೊಂಬಾಗ ಅವರು ಪ್ಲೂಟೋದ ಅಸ್ತಿತ್ವವನ್ನು ಕಂಡುಹಿಡಿದರು. ’ಪ್ಲೂಟೋ’ ಎಂಬ ಹೆಸರನ್ನು ಅದೇ ವರ್ಷ ಇಂಗ್ಲೆಂಡಿನ ವೆನೇಶಿಯಾ ಬರ್ನಿ ಎನ್ನುವ 11 ವರ್ಷದ ಹುಡುಗಿಯೊಬ್ಬಳು ಸೂಚಿಸಿದ್ದಳು. ಪ್ಲೂಟೋ ಎಂಬುದು ರೋಮನ್ನರ ಪುರಾಣದಲ್ಲಿ ಭೂಗತ ಲೋಕದ ದೇವರ ಹೆಸರು. ಮೇಲೆ ತಿಳಿಸಿದಂತೆ ಪ್ಲೂಟೋ ಸೂರ್ಯನಿಂದ ಸುಮಾರು 5.9 ಶತಕೋಟಿ ಕಿಲೋಮೀಟರು ( 3.7 ಶತಕೋಟಿ ಮೈಲು) ದೂರದಲ್ಲಿ ಕೈಪರ್ ಪಟ್ಟಿಯಲ್ಲಿದೆ . ಸೌರವ್ಯೂಹದ ಆರಂಭಿಕ ಇತಿಹಾಸ ಕಾಲದ ಅವಶೇಷಗಳಿರುವ ಕೈಪರ್ ಪಟ್ಟಿಯನ್ನು ಸೌರವ್ಯೂಹದ “ಮೂರನೆಯ ವಲಯ” ಎಂದೂ ಕರೆಯುತ್ತಾರೆ. ನೆಪ್ಚೂನ್ ಗ್ರಹದ ಕಕ್ಷೆಯಾಚೆಗೆ ಡೋನಟ್ ಆಕಾರದಲ್ಲಿರುವ ಕೈಪರ್ ಪಟ್ಟಿಯಲ್ಲಿ ಪ್ಲೂಟೋ ಅಷ್ಟೇ ಅಲ್ಲದೇ ಲಕ್ಷಾಂತರ ಹಿಮಾವೃತ ಆಕಾಶ ಕಾಯಗಳಿವೆ. ಪ್ಲೂಟೋ ಮತ್ತು ಈ ಆಕಾಶ ಕಾಯಗಳನ್ನು ಟ್ರಾನ್ಸ್-ನೆಪ್ಚೂನಿಯನ್ ಕಾಯಗಳು(trans-Neptunian objects) ಎಂದೂ ಕರೆಯುತ್ತಾರೆ.
ಮೇಲ್ಮೈಯಲ್ಲಿ ಪರ್ವತಗಳು, ಕಣಿವೆಗಳು, ಬಯಲು ಪ್ರದೇಶಗಳು, ಕುಳಿಗಳು ಮತ್ತು ಹಿಮನದಿಗಳನ್ನು ಹೊಂದಿರುವ ಪ್ಲೂಟೋ ಬಲು ಸಂಕೀರ್ಣ ಮತ್ತು ನಿಗೂಢ ಪ್ರಪಂಚವಾಗಿದೆ. ಮೌಂಟ್ ಎವರೆಸ್ಟಿಗೆ ಹೋಲಿಸಿದರೆ, ಪ್ಲೂಟೋದ ಪರ್ವತಗಳು ಚಿಕ್ಕದಾಗಿವೆ. ಉದಾಹರಣೆಗೆ ಪ್ಲೂಟೋದ ಮೇಲ್ಮೈಯ್ಯಲ್ಲಿರುವ ಟೆನ್ಜಿಂಗ್ ಮಾಂಟೆಸ್ ( The Tenzing Montes) ಪರ್ವತ ಶ್ರೇಣಿಯಲ್ಲಿರುವ ಅತಿ ಎತ್ತರದ ಪರ್ವತಗಳಿಗಿಂತ ( 3,500 ಮೀಟರ್ ಎತ್ತರ) ಎವರೆಸ್ಟ್ ಪರ್ವತವು ( ಸಮುದ್ರ ಮಟ್ಟದಿಂದ 8,848.86 ಮೀಟರ್ ಎತ್ತರ) ಸುಮಾರು 2.5 ಪಟ್ಟು ಎತ್ತರವಾಗಿದೆ. ತೀವ್ರ ಶೀತ ಮತ್ತು ದುರ್ಬಲ ಗುರುತ್ವಾಕರ್ಷಣೆಯಿಂದಾಗಿ, ಪ್ಲೂಟೋದ ಪರ್ವತಗಳು ಹೆಚ್ಚಾಗಿ ಮಂಜುಗಡ್ಡೆ ಮತ್ತು ಹೆಪ್ಪುಗಟ್ಟಿದ ಅನಿಲಗಳಿಂದ ಮಾಡಲ್ಪಟ್ಟಿವೆ. ಸರಾಸರಿ ತಾಪಮಾನವು -387°F ಅಥವಾ -232° ಡಿಗ್ರಿ ಸೆಲ್ಶಿಯಸ್ಸಿನಷ್ಟಿದ್ದರೆ ತೆಳುವಾದ ವಾತಾವರಣದಲ್ಲಿ ಸಾರಜನಕ, ಮೀಥೇನ್ ಮತ್ತು ಇಂಗಾಲದ ಮೊನಾಕ್ಸೈಡುಗಳಿವೆ.
ಪ್ಲೂಟೋಗೆ ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು 248 ಭೂ ವರ್ಷಗಳು ಬೇಕಾದರೆ ತನ್ನ ಅಕ್ಷದ ಸುತ್ತ ಒಂದು ಸಂಪೂರ್ಣ ಸುತ್ತನ್ನು ಪೂರೈಸಲು 6.4 ಭೂಮಿಯ ದಿನಗಳು (6 ದಿನಗಳು 9 ಗಂಟೆ 36 ನಿಮಿಷಗಳು) ಬೇಕು. ಭೂಮಿಗೆ ತನ್ನ ಅಕ್ಷದ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸಲು 24 ಗಂಟೆಗಳು ಬೇಕಾಗುತ್ತವೆ ಎನ್ನುವುದು ನಮಗೆಲ್ಲ ತಿಳಿದ ಸಂಗತಿ . ಪ್ಲೂಟೋ ಭೂಮಿಗಿಂತ ನಿಧಾನವಾಗಿ ತಿರುಗುವುದರಿಂದ ಅದರ ಒಂದು ದಿನವು ಭೂಮಿಯ ಒಂದು ದಿನಕ್ಕಿಂತ ದೀರ್ಘವಾಗಿದೆ. ಭೂಮಿ, ಗುರು ಮತ್ತು ಮಂಗಳ ಸೇರಿದಂತೆ ಸೌರವ್ಯೂಹದ ಹೆಚ್ಚಿನ ಗ್ರಹಗಳು ಪ್ರೋಗ್ರೇಡ್ ತಿರುಗುವಿಕೆಯನ್ನು ( ಸೂರ್ಯನ ಸುತ್ತ ಪರಿಭ್ರಮಿಸುವ ದಿಕ್ಕಿನಲ್ಲಿಯೇ ತಮ್ಮ ಅಕ್ಷದ ಸುತ್ತ ಕೂಡ ಸುತ್ತುತ್ತವೆ) ಹೊಂದಿದ್ದರೆ, ಶುಕ್ರ ಮತ್ತು ಯುರೇನಸ್ ಗ್ರಹಗಳಂತೆ ಪ್ಲೂಟೋ ಕೂಡ ರಿಟ್ರೋಗ್ರೇಡ್ (ಹಿಮ್ಮುಖ )ತಿರುಗುವಿಕೆಯನ್ನು ಹೊಂದಿದೆ. ಹಾಗಾಗಿ ಭೂಮಿ, ಗುರು ಮತ್ತು ಮಂಗಳ ಗ್ರಹಗಳಿಗೆ ಸೂರ್ಯೋದಯ ಪೂರ್ವದಲ್ಲಿ ಮತ್ತು ಸೂರ್ಯಾಸ್ತ ಪಶ್ಚಿಮದಲ್ಲಾದರೆ ಪ್ಲೂಟೋ ,ಶುಕ್ರ ಮತ್ತು ಯುರೇನಸ್ಸಿನಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ತದ್ವಿರುದ್ಧ ದಿಕ್ಕಿನಲ್ಲಾಗುತ್ತವೆ- ಸೂರ್ಯೋದಯ ಪಶ್ಚಿಮದಲ್ಲಿ ಮತ್ತು ಸೂರ್ಯಾಸ್ತ ಪೂರ್ವದಲ್ಲಿ! ಪ್ಲೂಟೋದ ಕಕ್ಷೆಯು ಸೌರಮಂಡಲದಲ್ಲಿರುವ ಎಂಟೂ ಗ್ರಹಗಳ ಕಕ್ಷೆಗಳಿಗಿಂತ ಹೆಚ್ಚು ವಾಲಿದ ಅಂಡಾಕಾರವಾಗಿದೆ. ಇದಕ್ಕೆ ವಿಜ್ಞಾನಿಗಳು ಎರಡು ಕಾರಣಗಳನ್ನು ಸೂಚಿಸುತ್ತಾರೆ: ಪ್ಲೂಟೋದ ಆರಂಭಿಕ ರಚನೆಯ ಇತಿಹಾಸ ಮತ್ತು ಇತರ ಗ್ರಹಗಳ, ವಿಶೇಷವಾಗಿ ಗುರು ಮತ್ತು ನೆಪ್ಚೂನಿನ ಗುರುತ್ವಾಕರ್ಷಣೆಯ ಪ್ರಭಾವ. ಪ್ಲೂಟೋದ ಗುರುತ್ವಾಕರ್ಷಣ ಶಕ್ತಿಯು ಭೂಮಿಯ ಗುರುತ್ವಾಕರ್ಷಣ ಶಕ್ತಿಗಿಂತ ಬಹಳ ಕಡಿಮೆ (1/15) ಇದೆ. ಅಂದರೆ ಭೂಮಿಯ ಮೇಲೆ 45 ಕಿಲೋಗ್ರಾಮುಗಳಷ್ಟು ತೂಕವಿರುವ ವ್ಯಕ್ತಿಯ ತೂಕವು ಪ್ಲೂಟೊದಲ್ಲಿ 3 ಕಿಲೋಗ್ರಾಮುಗಳು ಮಾತ್ರವಾಗಿರುತ್ತದೆ. ಪ್ಲೂಟೋ ಐದು ಉಪಗ್ರಹಗಳನ್ನು ಹೊಂದಿದೆ. 1978ರಲ್ಲಿ ಕಂಡುಹಿಡಿಯಲಾದ ’ಚರೋನ್’ ಉಪಗ್ರಹವು ಪ್ಲೂಟೋದ ಗಾತ್ರದ ಅರ್ಧದಷ್ಟಿದ್ದು ಇದು ಪ್ಲೂಟೋನ ಇತರ ನಾಲ್ಕು ಚಂದ್ರರಿಗಿಂತ ದೊಡ್ದದಾಗಿದೆ. ಇದನ್ನು ಕಂಡುಹಿಡಿದ ಶ್ರೇಯಸ್ಸು ಅಮೆರಿಕೆಯ ನೌಕಾ ವೀಕ್ಷಣಾಲಯಕ್ಕೆ ಸಲ್ಲುತ್ತದೆ. ಪ್ಲೂಟೋ ಮತ್ತು ಚರೋನನ್ನು ಜೋಡಿ ಕುಬ್ಜಗ್ರಹಗಳೆಂದೂ ಕರೆಯುತ್ತಾರೆ. ಕೆರ್ಬರೋಸ್ (Kerberos) , ಸ್ಟೈಕ್ಸ್ (Styx), ನಿಕ್ಸ್(Nix) ಮತ್ತು ಹೈಡ್ರಾ (Hydra )- ಇವು ಪ್ಲೂಟೋದ ಇತರ ಚಂದ್ರರು.
ಕ್ರಿ. ಶ. 2006ರ ಜನವರಿ 18 ರಂದು ಅಮೆರಿಕದ ನಾಸಾ (NASA) ಸಂಸ್ಥೆಯು ಹಾರಿಬಿಟ್ಟ ನ್ಯೂ ಹೊರೈಜನ್ಸ್ ಬಾಹ್ಯಾಕಾಶ ನೌಕೆಯು ಪ್ಲೂಟೊವನ್ನು ಹತ್ತಿರದಿಂದ ಅನ್ವೇಷಿಸಿದ ಏಕೈಕ ಬಾಹ್ಯಾಕಾಶ ನೌಕೆಯಾಗಿದೆ. ಈ ರೋಬೋಟಿಕ್ ನೌಕೆಯು ಕ್ರಿ. ಶ. 2015 ರ ಜುಲೈ 14ರಂದು ಪ್ಲೂಟೊ ಮತ್ತು ಅದರ ಚಂದ್ರರ ಹತ್ತಿರ ಹಾಯ್ದುಹೋಗುವಾಗ ಸಂಗ್ರಹಿಸಿದ ಮಾಹಿತಿ ಮತ್ತು ಇದಕ್ಕೂ ಮುಂಚೆ ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕದ ಮೂಲಕ ದೊರೆತ ಪ್ಲೂಟೊದ ಹಲವು ಛಾಯಾಚಿತ್ರಗಳ ಸಹಾಯದಿಂದ ವಿಜ್ಞಾನಿಗಳು ಪ್ಲೂಟೋ ಮತ್ತು ಅದರ ಐದು ಚಂದ್ರರ ಬಗೆಗಿನ ಅನೇಕ ವಿಷಯಗಳನ್ನು ಕಲೆಹಾಕಿದ್ದಾರೆ. ಇನ್ನೂ ಕಾರ್ಯಾಚರಣೆಯಲ್ಲಿರುವ ನ್ಯೂ ಹೊರೈಜನ್ಸ್ ಬಾಹ್ಯಾಕಾಶ ನೌಕೆಯು ಸೌರವ್ಯೂಹದ ತುತ್ತ ತುದಿಯಲ್ಲಿರುವ ಇತರ ಆಕಾಶ ಕಾಯಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಭೂಮಿಗೆ ರವಾನಿಸುತ್ತಲಿದೆ. ಈ ಎಲ್ಲ ಮಾಹಿತಿಯ ಸಹಾಯದಿಂದ ನಮ್ಮ ಸೌರವ್ಯೂಹವು ಹೇಗೆ ರೂಪುಗೊಂಡಿತು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
(ನಾಸಾ ಮಾಹಿತಿಯ ಆಧಾರಗಳೊಂದಿಗೆ ಬರೆದ ಲೇಖನ)
1 thought on “ಸೌರವ್ಯೂಹದಲ್ಲಿ ಪ್ಲೂಟೋದ ಸ್ಥಾನಮಾನ”
I had really felt very sad when Pluto was removed from the list of planets. But to day this article gave the full details about Pluto, it’s terrain. Thanks to the author for such a wonderful information. I am also happy to note that I will be weighing just 6 kgs on Pluto.