ಹದಿನಾರಂಕಣದ ವಿಶಾಲವಾದ ಹೆಂಚಿನ ಮನೆ. ವಿಶಾಲವಾದ ಅಂಗಳದಲ್ಲಿ ಒಣಗಿಸಿದ ಗೋಟಡಿಕೆ. ಅದರ ಮೇಲೆ ಅಲ್ಲಿ ಇಲ್ಲಿ ಚಾಚಿದ ತೆಂಗಿನ ಮರದ ನೆರಳು. ಮನೆ ಎದುರಿನ ಜಗುಲಿಯ ಮೇಲೆ ಕಾಲು ಚಾಚಿ ಕುಳಿತಿದ್ದೆ. ದಾಬು ಬಿಟ್ಟಿದ ಕರುವಿನಂತೆ ಕುಣಿಯುತ್ತ ಕಾವ್ಯ ಬಂದಳು. ‘ಅಜ್ಜಿ ಮೂರು ದಿವಸದಿಂದ ಎಂತಾ ಕೇಳ್ತಾ ಇದ್ದಿ ಆನು?’ ‘ನಿಂಗೆಂನ್ತಾ ಮಾಡಲ್ಲೆ ಬ್ಯಾರೆ ಕೆಲಸಿಲ್ಯನೆ?.. ಅಜ್ಜಿ ನಿನ್ನ ಜೀವನದ ಕತೆ ಹೇಳು ಹೇಳಿ ಒಂದೇ ಸಮಾ ಜೀಂವಾ ತಿಂತೆ ಮಳ್ಳು ಕೂಸೆ ಎನ್ನುತ್ತಾ ಮಡಿಲಿನಲ್ಲಿ ಮಲಗಿದ್ದ ಮೊಮ್ಮಗಳ ತಲೆ ಸವರಿದೆ. ಮದುವೆ ಆದ ಮ್ಯಾಲೆ ಯನ್ನ ಹಾಂಗೆ ಬದಕದಿದ್ದು ಹೇಳಡಾ ಮತ್ತೆ! ‘ಶೀ ಆನು ಅನುಭವಿಸಿದ ಬ್ಯಾನೆ ಬ್ಯಾಸರಿಕೆ, ಕಷ್ಟಾ ಸುಖಾ ಯನಗೇ ಸಾಕು ಮಾರಾಯ್ತಿ’ ಎಂದು ಮಾತು ನಿಲ್ಲಿಸಿದೆ.
ತನ್ನ ಕೈಯಿಂದ ನನ್ನ ಬಾಯನ್ನು ಮೆಲ್ಲಗೆ ಮುಚ್ಚಿ ಹಿಡಿದು ಕುತೂಹಲಕ್ಕೆ ಕೇಳ್ತಾ ಇದ್ದಿ ಅಜ್ಜಿ, ನಿನ್ನ ಹಾಂಗೆಲ್ಲ ಆಪ್ಪದಿಲ್ಲೆ ಯನಗೆ’ ಎಂದು ಹರವಿದ್ದ ಮುಂಗುರುಳನ್ನು ಹಿಂದಕ್ಕೆ ಸೇರಿಸುತ್ತಾ ನುಡಿದಳು ಕಾವ್ಯಾ. ಮುಂದೆ ಹರವಿದ್ದ ಕೆಂಪಕ್ಕಿಯಲ್ಲಿ ಅಪರೂಪಕ್ಕೊಂದೊಂದು ಕಲ್ಲಿರುವುದನ್ನು ಆರಿಸಿ ತೆಗೆಯುತ್ತ ಮೆಲ್ಲಗೇ ಹಳೆಯ ಕಥೆ ಕಂತೆಯನ್ನು ಬಿಡಿಸಿದೆ.
ಶಿರಸಿ ಹತ್ರ ಶಿವಣಮನೆ ಹೇಳ ಹಳ್ಳಿಲಿರ ನರಸಿಂಹ ಭಟ್ಟರ ಹಿರೇ ಮಗಳು ಭಾಗ್ಯ ಅಂದ್ರೆ ಆನೇಯಾ ಗೊತ್ತಾತನೆ ಕೂಸೆ. ಯನ್ನ ಅಮ್ಮ ಪಾರ್ವತಕ್ಕ ಅಂದ್ರೆ ಬಡಿ ಗೋವಿನಂತಹ ಹೆಂಗಸು ಹೇಳಿ ಊರಲ್ಲೆಲ್ಲ ಪ್ರಸಿದ್ಧ. ಕೊಟ್ಟಿಗೆಲ್ಲಿರ ಆಕಳು ಸೀತೆ ಕರಾ ಹಾಕಿದ ಹಾಂಗೆ ವರ್ಷ, ಒಂದೂವರೆ ವರ್ಷಕ್ಕೊಂದೊಂದರ ಹಾಂಗೆ ಹತ್ತು ಮಕ್ಕಳ ಹಡೆದ ಮಾತಾಯಿ ಪಾರ್ವತಿ ಹೇಳಿ ಊರವ್ವು ನೆಗಿಯಾಡಿಕ್ಯೋತ ಹೇಳತಿದ್ದ. ಯನ್ನ ಬೆನ್ನಿಗೆ ಮೂರು ತಮ್ಮಂದಿಕ್ಕ ಆರು ತಂಗಿಯಕ್ಕ.. ಎಂಟಂಕಣದ ಮನೆಯ ಮೆತ್ತಿನ ಮೇಲೆ ಉದ್ದಕ್ಕೆ ಹಾಕಿದ ಹರಿ ಹಾಸಿಗೆ ಮ್ಯಾಲೆ ಎಲ್ಲ ಮಕ್ಕಳೂ ಮನಗದು, ಬೆಳಿಗ್ಗೆ ದೊಡ್ಡವ್ವು ತಿಂಬ ದ್ವಾಸೆ ಆಸೆಗಣ್ಣಲ್ಲಿ ನೋಡಿಕ್ಯೋತ ಗಂಜಿ ಉಂಬದು. ಚೀಟಿ ಹೂವಿನ ಅಂಗಿ ಪಲಕಾ ಬಿಟ್ಟು ಮತ್ತೊಂದು ನಮನಿ ಬಟ್ಟೆನೇ ಹಾಕ್ಯಂಡ ನೆನಪಿಲ್ಲೆ. ‘ನಾಲ್ಕನೆತ್ತಿ ಬರಾ ಕಲ್ತು ಮುಗದ ಮ್ಯಾಲೆ ಇನ್ನೆಲ್ಲ ಶಾಲೆ ಕಲಿಯದು ಸಾಕು ಕೂಸೆ.. ಮನೆಲ್ಲಿ ನೀ ದೊಡ್ಡ ಮಗಳು.. ಉಳಿದವರನ್ನೆಲ್ಲ ಸುಧಾರಿಶ್ಗಂಡು ಬದಕವು ಗೊತ್ತಾತ’ ಎಂದು ಅಪ್ಪ ಕೆಂಗಣ್ಣು ಬಿಟ್ಟು ಯನ್ನ ಎಚ್ಚರಿಸಿಕ್ಕೆ ಭಟ್ಟತನಿಕೆ ಮಾಡಲ್ಲೆ ಯಾರದ್ದಾದರೂ ಮನಿಗೆ ಹೋಗತಿದ್ದಾ. ಮನೆಲಿ ಮುಕ್ಕಾಲುವಶಿ ಕೆಲಸ ಯನ್ನ ಪಾಲಿಗೆಯಾ. ಅಮ್ಮಂತೂ ಯಾವಾಗ ನೋಡಿರು ಬಸರಿ ಇಲ್ಲದಗಿದ್ರೆ ಬಾಣಂತಿ.
ಕೂಸಿಗೆ ಹದಿನೈದನೇ ವಯಸ್ಸಿನವರಿಗೆ ಮುಟ್ಟು ಮೀಯದು ಬಂಜಿಲ್ಲೆ ಪುಣ್ಯಕ್ಕೆ ಹೇಳಿ ಅಮ್ಮ ಅಜ್ಜಿ ಹತ್ರ ಗುಸು ಗುಸು ಸುದ್ದಿ ಹೇಳತಿತ್ತು. ಅಮ್ಮನ ಏಳನೇ ಬಾಣಂತನ ಮುಗಿಯ ಹೊತ್ತಿಗೆ ಆನು ಮುಟ್ಟಾಗಿ ಮೀಯಲ್ಲೆ ಶುರುಮಾಡಿದ್ದಿ, ಗೆಳತಿಯಕ್ಕಳಿಗೆ ಹೋಲಿಸಿದ್ರೆ ಅದೆಲ್ಲ ಶುರುವಾಗಿದ್ದು ಸ್ವಲ್ಪ ತಡವೇ ಆತು. ‘ಇನ್ನ ತಡಾ ಮಾಡಂಗಿಲ್ಲೆ ಗಂಡು ಹುಡಕದೇಯಾ.. ದೊಡ್ಡ ಮಗಳಿಗೆ ಮದ್ವೆ ತಡಾ ಮಾಡಿರೆ ಉಳಿದವ್ವಕ್ಕು ತಡಾನೇ ಆಗ್ತು’ ಹೇಳಿದ ಅಪ್ಪಾ ತನ್ನ ಹಾಂಗೆ ಭಟ್ಟತನಿಕೆ ಮಾಡ ಪಕ್ಕದಲ್ಲೇ ಇರ ಹೆಗ್ಗಾರ್ಸಿ ಶಿವರಾಮ ಭಟ್ರ ಮಗ ಹೇರಂಭಂಗೆ ಜಾತಕ ಕೊಟ್ಟಿಕ್ಕೆ ಬಂದ. ಮೊದ್ಲ ಕೊಟ್ಟಲ್ಲೆ ಜಾತಕಾ ಆತು….……
‘ಅಜ್ಜೀ ಬಿಸ್ಲಿಗೆ ಕೆಂಪಗಾಗಿ ಹೊಳಿತಾ ಚೆಂದಾ ಕಾಣ್ತಾ ಇದ್ದೆ. ಈಗಲೇ ಹೀಂಗಿದ್ದೆ ಅಜ್ಜಾ ನಿನ್ನ ನೋಡಲ್ಲೆ ಬರ ಹೊತ್ತಿಗೆ ಇನ್ನ ಎಷ್ಟ ಚೆಂದಿದ್ದಿದ್ಯನ’ ಎನ್ನುತ್ತ ಕಾವ್ಯಾ ಎರಡೂ ಕೆನ್ನೆ ಹಿಡಿದು ಹಣೆಗೆ ಹಣೆ ಡಿಕ್ಕಿ ಹೊಡಶ್ಚು.
‘ಅಂದವ ಚೆಂದವ ನೋಡಿ ಮದುವೆ ಆಗಿದ್ದಲ್ಲದೇ ನಿನ್ನಜ್ಜ. ಬಿಟ್ಟಿ ದುಡಿಯಲ್ಲೆ ಒಂದ ಆಳು ಬೇಕಾಗಿತ್ತು ಈ ಮನಿಗೆ.. ಜಾತಕಾ ಚೊಲೋ ಆಗ್ತು,ಯನ್ನ ಜಾತಕದ ಬಲದ ಮೇಲೆ ಈ ಮನಿಗೆ ಅಷ್ಟೈಶ್ವರ್ಯ ಬರ್ತು ಹೇಳಿ ಸಂಕದಗುಂಡಿ ತಿಮ್ಮಣ್ಣ ಭಟ್ಟರು ಹೇಳಿದ್ರಡ. ಇವು ಯನ್ನ ಮದವೆ ಮಾಡಿಕ್ಯಂಡ ಅಷ್ಟೆಯಾ. ಎರಡು ಮಕ್ಕಳಪ್ಪವರೆಗೂ ಹಗಲಿಗೆ ಅವು ಯನ್ನ ಮುಖನೂ ನೋಡತಿದ್ವಿಲ್ಲೆ, ಮಾತೂ ಆಡತಿದ್ವಿಲ್ಲೆ… ಇದ್ದ ವಿಷಯಾ ಇದ್ದ ಹಾಂಗೆ ಹೇಳ್ತಾ ಇದ್ದಿ!’ ಎಂದೊಡನೆಯೇ ಕಾವ್ಯಾ ಪಿಸಿಪಿಸಿ ನಕ್ಕಳು ಏನೋ ಹೇಳಲು ಬಾಯ್ತೆಗೆದವಳು ಮತ್ತೆ ಸುಮ್ಮನಾದಳು.
ನಿನ್ನಮ್ಮನನ್ನೂ ಸೇರಿ ನಾಲ್ಕು ಮಕ್ಕಳು ಇದ್ದಿದ್ದಂತೂ ನಿನಗೆ ಗೊತ್ತಿದ್ದು. ನಿನ್ನ ಅಜ್ಜ ಬಲು ಕೋಪಿಷ್ಟ. ಎರಡು ಗಂಡು ಮಕ್ಳು ಅಂದ್ರೆ ನಿನ್ನ ಮಾವಂದಿಕ್ಕ ಹುಟ್ಟಿ ಹನಿ ದೊಡ್ಡಕಾಗಿ ಶಾಲಿಗೆ ಹೋಗ ಹೊತ್ತಿಗೆ ಹಿಸೆ ಆತು. ಪಾಲಿಗೆ ಒಂದ ಒಂದೂವರೆ ಎಕರೆ ತ್ವಾಟದಲ್ಲಿ ಆಪ ಅಡಕೆ ಕಮ್ಮಿ. ಬದತನಾ ಹಾಸಿ ಹೊದಿಯಷ್ಟಿತ್ತು. ನಿನ್ನ ದೊಡ್ಡಮ್ಮ, ಅಮ್ಮ ಇದೇ ಮನೆಲಿ ಹುಟ್ದ. ಮತ್ತೂ ಮಕ್ಕಳು ಹುಟ್ಟಿರೆ ಅವಕ್ಕೆ ಅನ್ನ ನೀರು ಕಾಣಸದೆಂಗೆ ಚಿಂತೆ ಆಗ್ತಿತ್ತು. ಅದಕೆಂತ ಮಾಡ್ದೆ ಅಜ್ಜಿ ಎಂದು ಕೀಟಲೆ ದ್ವನಿಯಲ್ಲಿ ಕೇಳಿದಳು ಕಾವ್ಯಾ. ಆ ಕಾಲದಲ್ಲಿ ಮಕ್ಕ ಆಗ್ದಿದ್ದಂಗೆ ಕಟ್ಟ್ ಆಪರೇಷನ್ ಎಂತಿತ್ತಿಲ್ಲೆ.ಎಂತದೋ ಮಾಡ್ದಿ ತಗ..ಸಣ್ಣ ವಯಸ್ಸಿನ ನಿನ್ನ ಹತ್ರ ಅದನೆಲ್ಲ ಹೇಳಲ್ಲೆ ಬತ್ತಿಲ್ಲೆ’ ಎಂದೆ ಕೂಡಲೇ ಕಾವ್ಯಾ ‘ಬ್ಯಾಡಾ ಬಿಡು ಅದ್ನೆಲ್ಲ ಹೇಳದು’ ಎಂದು ಮೂತಿ ಚೂಪಾಗಿಸಿ ಹುಸಿ ಮುನಿಸು ತೋರಿದಳು. ಮರು ಘಳಿಗೆಯಲ್ಲೇ ‘ಅಜ್ಜಿ ಅಜ್ಜಾ ಯನ್ನ ಎಲ್ಲಾ ಎಷ್ಟ ಪ್ರೀತಿ ಮಾಡತಿದ್ದಾ ಅಂವಾ ಸಿಟ್ಟ ಮಾಡಿದ್ದೇ ಕಂಡಿದ್ನಿಲ್ಲೆ ಆನು’ ಎಂದು ರಾಗ ತೆಗೆದಳು ಕಾವ್ಯಾ.
ಕೈಯಲ್ಲಿ ದುಡ್ಡಿಲ್ಲದಿದ್ದಾಗ ಎಂತಾರು ಖರ್ಚ ಮಾಡ ಸಂದರ್ಭ ಬಂದ್ರೆ ಅವ್ರಿಗೆ ಹೆದ್ರಿಕೆ ಆಗ್ತಿತ್ತಕ್ಕು. ಎಂತೆಂತಾರು ನೆವಾ ತೆಗೆದು ಸಿಟ್ಟ ಮಾಡಿಕ್ಯಂಡು ಯಂಗೆ ನಿನ್ನ ಮಾವಂದಿಕ್ಕಗೆ ಕೊಟ್ಟಿಗೆಲಿ ಕಟ್ಟಿದ ದನಗಕ್ಕಿಗೆ ಹೊಡಿತಿದ್ದ! ಇಡೀ ಊರಿಗೆ ಕೇಳುವಾಂಗೆ ಕೂಗಾಡ್ತಿದ್ದ. ಆದ್ರೆ ನಿನ್ನ ಅಮ್ಮ ದೊಡ್ಡಮ್ಮಂಗೆ ಒಂದ ದಿನಾನೂ ಹೊಡಿತಿದ್ರಿಲ್ಲೆ. ಆದ್ರೂ ಅವು ಅಪ್ಪನ್ನ ಕಂಡ್ರೆ ಹೆದರಿ ಸಾಯ್ತಿದ್ದ.
ನಿನ್ನ ಸ್ವಾದರ ಮಾವಂದಿಕ್ಕ ದೊಡ್ಡಕಾಗಿ ಮುಖದ ಮ್ಯಾಲೆ ಮೀಸೆ ಮೂಡಿದ ಮೇಲೆ ಅವರ ಆರ್ಭಟ ಕಡಿಮೆ ಆತು. ಸೊಸೆಯಕ್ಕ ಬಂದ ಮ್ಯಾಲೆ ಮತ್ತೂ ಸಿಟ್ಟು ತಣ್ಣಗಾತು. ಹೆಣ್ಣುಮಕ್ಕಳ ಮದ್ವೆಲಿ ಮೂಗು ಸೊರ ಸೊರ ಮಾಡ್ತಿದ್ರು ಬಗ್ಗಿ ನೋಡಿರೆ ಅಳ್ತಾ ಇದ್ರು! ಮಕ್ಕಗೆ ಹೊಡ್ದಿದ್ದೆಲ್ಲ ಕಟ್ಟು ಕತೆ ಹೇಳವಾಂಗೆ ಮೊಮ್ಮಕ್ಕಳ ತಲೆ ಮ್ಯಾಲಿಟ್ಟಗಂಡು ಮೆರಸ್ತಿದ್ರು ತಪ್ಪು ಮಾಡೀರು ವಹಿಸಿಗ್ಯಂಡು ಮಾತಾಡ್ತಿದ್ರು. ಅರೇ ಮನಷಾ ಹೀಂಗೂ ಬದಲಾಗ್ಲಕ್ಕ? ಹೇಳಿ ಅವ್ರ ಕೊನೆಗಾಲದಲ್ಲಿ ನೋಡಿದಾಗ ಆಶ್ಚರ್ಯ ಆಗತಿತ್ತು.
ಹಗುರವಾಗಿ ನನ್ನನ್ನು ತಬ್ಬಿದ ಕಾವ್ಯಾ ‘ನೀನು ಪಾಪ ಅಜ್ಜಿ, ಅಜ್ಜನ ಹತ್ರ ಹೊಡೆತ ಎಲ್ಲಾ ತಿಂದಿದ್ಯನೆ. ಯನಗೆ ಈ ವಿಷ್ಯಾ ಎಲ್ಲಾ ಗೊತ್ತೇ ಇತ್ತಿಲ್ಲೆ’
‘ಹೇಳಲ್ಲೆ ಅದೆಲ್ಲಾ ಯಾವ ಘನಂದಾರಿ ವಿಷ್ಯನೆ ಕೂಸೆ. ಮನೆಯ ಹುಳುಕು ಕೊಳಕು ಲೋಕಕ್ಕೆ ತಿಳಿಲಾಗ ಹೇಳಿ ಮುಚ್ಚಿಡತಿದ್ದ ಯಂಗಳ ಕಾಲದ ಹೆಂಗಸರು. ಸೀರೆ ಹರದ್ರೆ ನಿರಿಗೇಲಿ ಸೆರಗಲ್ಲಿ ಮುಚ್ಚಿಗ್ಯತ್ತಿದ್ದ ಈಗಿನವ್ವಾದ್ರೆ ಡ್ರೈವರಸ್ ಕೊಡತಿದ್ವನ’ ಎಂದು ನಕ್ಕೆ ಅಜ್ಜಿ ಡಿವೋರ್ಸ ಅದು ಡ್ರೈವರಸ್ ಅಲ್ಲ ಎಂದು ಕಾವ್ಯಾ ತಲೆ ಚಚ್ಚಿಕೊಂಡಳು. ‘ಎಂತದೋ ಒಂದು ಯನಗೆಂತಾ ಇಂಗೀಶ್ ಗೊತ್ತಿದ್ದನೇ? ಆಗೀಗ ಟೀವಿಲಿ ಧಾರಾವಾಹಿ ನೋಡತ್ನಲೇ ಒಂದ ಶಬ್ದಾ ಒಗದಿ’ ಎಂದಾ ಕಾವ್ಯಾ ನೀನು ಒಳ್ಳೆ ಅಜ್ಜಿ ಎನ್ನುತ್ತಾ ರಾಗ ತೆಗೆದು ನಕ್ಕಳು. … ಕಾವ್ಯಾಳ ಮೊಬೈಲು ರಿಂಗಣಿಸಿತು. ಹೆಸರು ನೋಡಿದೊಡನೇ ಅವಳ ಮೊಗವರಳಿತು ‘ಸತ್ಯು ಮಾವಾ..’ ಎಂದವಳೆ ನೆತ್ತಿಕೊಂಡು ಮಾತಾಡುತ್ತಾ ಎದ್ದು ಹೋದಳು. ನಾನು ಅಕ್ಕಿ ಆರಿಸುವುದರಲ್ಲಿ ತಲ್ಲೀನಳಾದೆ.
ತುಸು ಹೊತ್ತಿನಲ್ಲಿ ಹಿಂದಿರುಗಿದಳು ಕಾವ್ಯಾ. ‘ಎಂತದಡೆ ನಿನ್ನ ಮಾವನ ಸುದ್ದಿ?’ ಕೇಳಿದೆ ‘ಅಜ್ಜಿ ಮುಂದಿನ ಸೋಮವಾರ ನಿನ್ನ ಮುದ್ದಿನ ಮಗಾ ಬತ್ನಡಾ. ಯನ್ನ ಹತ್ರ ಅಲ್ಲಿ ತನಕಾ ಅಜ್ಜಿ ಜೊತಿಗೆ ಉಳ್ಕ ಅಂದಾ’ ‘ಮಾರಾಯ್ತಿ ಯನ್ನ ಮುಂದೆ ಸತ್ಯಂಗೆ ಮುದ್ದಿನ ಮಗ ಹೇಳಿದ ಹಾಂಗೆ ನಿನ್ನ ಗಪ್ಪತಿ ಮಾವ ಎದುರಿಗೆ ಯಾವಾಗ್ಲೂ ಹೇಳಿಕ್ಕಡಾ. ಅಪ್ಪ ಅಮ್ಮ ತನಗೆ ಪೌರೋಹಿತ್ಯ ಕಲಿಸಿದ, ತಮ್ಮನ್ನ ಕಲಿಸಿ ಆಯುರ್ವೇದ ಡಾಕ್ಟರ್ ಮಾಡಿದ್ದ ಹೇಳದು ಗಪ್ಪತಿಗೆ ಖಾಯಂ ಬೇಜಾರು’ ನಿಟ್ಟುಸಿರಿಟ್ಟೆ.
ಸಮಾಧಾನ ಹೇಳುವಂತೆ ಕಾವ್ಯಾ ನನ್ನ ಹೆಗಲ ಮೇಲೆ ಮೃದುವಾಗಿ ಹಸ್ತವನ್ನಿಟ್ಟಳು. ಒಳಗಿನ ತಾಕಲಾಟದಿಂದಲೋ ಮೊಮ್ಮಗಳ ಸಾಂತ್ವನದಿಂದಲೋ ಕಣ್ತುಂಬಿದ ಎರಡು ಹನಿ ನೀರು ಕೆನ್ನೆಯ ಮೇಲಿಳಿಯಿತು ಕೈಗೆ ಹಿಡಿದ ಅಕ್ಕಿ ಧೂಳನ್ನು ಕೊಡವಿಕೊಂಡು ಉಟ್ಟ ಸೀರೆಯ ಸೆರಗಿನಿಂದ ಕಣ್ಣೀರೊರೆಸಿಕೊಂಡೆ. ಗಪ್ಪತಿ ಮಾವನೂ ಕಲಿಯಲ್ಲೆ ರಾಶಿ ಜಾಣ ಇದ್ದಿದ್ನಡಾ ಆದ್ರೂ ಕಾಲೇಜಿಗೆ ಕಳಸದೇ ಹತ್ತನೆತ್ತಿ ಮುಗಿದ ಕೂಡ್ಲೆ ಪಾಠಶಾಲಿಗೆ ಕಳಿಸಿದ್ರಡಾ ನಿಂಗ, ನನ್ನ ಅಮ್ಮ ಹೇಳತಿತ್ತು ಎಂತಕ್ಕೆ ಹಾಂಗೆ ಮಾಡಿದ್ರಿ ಅಜ್ಜಿ? ನಿನ್ನ ಅಜ್ಜ ಎಷ್ಟೋ ಮನಿಗೆ ಪುರೋಹಿತರಾಗಿದ್ರು. ಪುಟ್ಟಿ ಅವಂಗೆ ಹೈಸ್ಕೂಲ್ ಮುಗಿಯ ಹೊತ್ತಿಗೆ ನಿನ್ನ ಅಜ್ಜಂಗೆ ಕಾರ್ಯಾ ತಿಥಿ ಊಟಾ ಉಂಡು ಉಂಡು ಸಕ್ಕರೆ ಖಾಯಿಲೆ ಶುರುವಾಗಿ ಸುಸ್ತಾಗ್ತಿತ್ತು. ಬಿ.ಪಿನೂ ಶುರುವಾಗಿತ್ತು. ಶಿಷ್ಯವರ್ಗದವೆಲ್ಲ ತಲೆತಲಾಂತರದಿಂದ ನಿಮ್ಮನೆಯವ್ವೆ ಯಂಗಳ ಮನೆ ಕಾರ್ಯ ಸಾಗಸ್ತಾ ಬಂಜ್ರಿ. ಎರಡು ಗಂಡು ಮಕ್ಕಳಲ್ಲಿ ಒಬ್ಬಂವಂಗಾದ್ರೂ ಭಟ್ಟತನಿಕೆ ಕಲ್ಸಿ ಹೇಳತಿದ್ದ. ಹಿಸೆ ಆಗಿ ಆರೇಳು ವರ್ಷ ಆಗಿತ್ತು. ಯಂಗಳ ಆರ್ಥಿಕ ಪರಿಸ್ಥಿತಿನೂ ಅಷ್ಟಕ್ಕಷ್ಟೇ ಆಗಿತ್ತು. ಅವನ್ನ ಶೃಂಗೇರಿಲಿ ಪಾಠಶಾಲಿಗೆ ಸೇರಿಸಿದ್ಯ. ಊಟಾ ತಿಂಡಿ ವಸತಿ ಯಾವುದಕ್ಕೂ ಯಂಗ ದುಡ್ಡು ಕೊಡದೂ ಇತ್ತಿಲ್ಲೆ. ಅಲ್ಲಿ ರಾಶಿ ಚೊಲೋ ಮಾಡಿ ವಿದ್ಯೆನೂ ಕಲಸಿದ್ದ.
‘ಮತ್ತೆ ಸತ್ಯುಮಾವಂಗೆ ಹ್ಯಾಂಗೆ ಕಲ್ಸಿದಿ?’ ಅಂವಾ ಹತ್ತನೆತ್ತಿಲಿ ತಾಲೂಕಿಗೆ ಒಂದನೇ ನಂಬರ್ ಬಂದಾ. ಅವನ್ನ ಹೈಸ್ಕೂಲ್ ಹೆಡ್ ಮಾಸ್ತರು ಸತ್ಯು ಮಾವಂಗೆ ಒಂದು ದಾರಿ ಮಾಡವು ಹೇಳಿ ತೀರ್ಮಾನಕ್ಕೆ ಬಂದ್ರು. ಮೈಸೂರಿನ ಎಂ ವೆಂಕಟಕೃಷ್ಣಯ್ಯ ಅನ್ನವ್ರು ಒಂದು ಅನಾಥಾಲಯ ಮಾಡಿದ್ರು, ಅವ್ರು ಅನಾಥರೊಂದೇ ಅಲ್ಲ ಬಡ ಬ್ರಾಹ್ಮಣ ಮಕ್ಕಳಿಗೂ ಹಾಸ್ಟೆಲಿನಲ್ಲಿ ಇಟ್ಗಂಡು ಓದಿಸ್ತ್ರು ಹೇಳಿದ್ರು. ನಿಂಗಳ ಕೈಲಾದಷ್ಟೇ ದುಡ್ಡು ಖರ್ಚಿಗೆ ಕೊಡಿ ಹೇಳಿ ತಾವೆ ಅಲ್ಲಿಗೆ ಸತ್ಯುನ ಕರಕಂಡು ಹೋಗಿ ಬಿಟ್ರು. ಮಹಾರಾಜಾ ಕಾಲೇಜಿನಲ್ಲಿ ಪಿ.ಯು.ಸಿಗೆ ಸೇರ್ಸಿದ್ರು. ವೆಂಕಟಕೃಷ್ಣಯ್ಯನವರಿಗೆ ಎಲ್ಲರೂ ತಾತಯ್ಯನವ್ರು ಹೇಳತ. ಅನಾಥಾಲಯದ ಮಕ್ಕಳ ಏಳ್ಗೆಗೆ ಅವು ಭಾರಿ ಕಷ್ಟ ಪಡತಿದ್ರಡಾ. ಆದ್ರೆ ಹುಡುಗರಿಗೆಂತದೂ ಸಮಸ್ಯೆ ಆಗದಿದ್ದ ಹಾಂಗೆ ನೋಡತಿದ್ರಡಾ.
ಇವ್ರಿಗೆ ಗೋದಾನಕ್ಕೆ ಬಂದ ಎರಡು ದನ ಚೊಲೋ ಹಾಲು ಕೊಡತಿದ್ದ. ಹೆಣ್ಣು ಕರಗಳನ್ನೂ ಹಾಕ್ದ. ಆನು ಹಾಲು ತುಪ್ಪಾ ಎಲ್ಲಾ ಮಾರತಿದ್ದಿ. ರಜೆಲಿ ಸತ್ಯು ಬಂದಾಗ ಕೈಲಿದ್ದ ಅಲ್ಪಸ್ವಲ್ಪ ದುಡ್ಡು ಕೊಡತಿದ್ದಿ ಅಷ್ಟೇಯಾ. ಅಂವಾ ಪಿ.ಯೂ.ಸಿಲೂ ಚೊಲೋ ಮಾಕ್ಸ್ ತೆಗೆದ. ಮೈಸೂರಿನಲ್ಲೆ ಸರಕಾರಿ ಆಯುರ್ವೇದಿಕ್ ಕಾಲೇಜು ಸೇರಿಕ್ಯಂಡಾ. ಬಂಗಾರದಂಥಾ ಗುಣನೆ ನಿನ್ನ ಸತ್ಯು ಮಾವಂದು. ಮೆಡಿಕಲ್ಲಿನಲ್ಲಿ ಒಂದ್ರಾಶಿ ಓದದಿದ್ರೂ ವಾರಾನ್ನಕ್ಕೆ ಹೋಪ ಎರಡು ಮನೆ ಹತ್ತನೆತ್ತಿ ಮಕ್ಕಗೆ ಮನೆ ಪಾಠನೂ ಹೇಳತಿದ್ನಡಾ. ಮೈಸೂರಲ್ಲಿ ಗನಾ ಜನ ಇದ್ದ. ಯಾರ್ಯಾರೋ ದೊಡ್ಡ ಮನುಷ್ಯರು ಸಹಾಯಾ ಮಾಡ್ದ ಅವಂಗೆ. . ಅವಂಗೆ ವಿದ್ಯೆ ಬಲಾ ಇದ್ದ ಹಾಂಗೆಯಾ ಜನ ಬಲಾನೂ ಸಿಕ್ತು. ಇವತ್ತಿಗೂ ಅವನ ರೋಗಿಯಕ್ಕ ಅವನ್ನ ಕಂಡ್ರೆ ದೇವ್ರ ಕಂಡ ಹಾಂಗೆ ಮಾಡ್ತ. ..ಅಂವಾ ಕಲ್ತು ಮುಗಿದ ಮೇಲೂ ಮೈಸೂರಲ್ಲೇ ಡಾಕ್ಟರಿಕೆ ಮಾಡಿಕ್ಯೋತ ಉಳಕಂಡಾ. ಅಲ್ದೆ ಅಜ್ಜಿ ಸತ್ಯು ಮಾವಾ ಅವನ್ನ ಸಾಮಥ್ರ್ಯದಿಂದ ಅಂವಾ ಕಲತು ಮ್ಯಾಲೆ ಬಂದಾ. ಎಲ್ಲರಿಗೂ ಎಷ್ಟೆಲ್ಲ ಸಹಾಯ ಮಾಡ್ತಾ. ದೊಡ್ಡಮ್ಮ ಅಮ್ಮನ ಮದ್ವೆಲೂ ಖರ್ಚಿಗೆಲ್ಲ ಅವನೇ ದುಡ್ಡು ಕೊಟ್ಟಿದ್ನಡಾ ಹೌದ? ಆದ್ರೂ ಗಪ್ಪತಿ ಮಾವಂಗೆಂತಕ್ಕೆÀ ಸತ್ಯು ಮಾವನ ಬಗ್ಗೆ ಬೇಜಾರು?
ಬೇಜಾರು ಮಾಡಿಕ್ಯಳವ್ಕೆ ಕಾರಣ ಬೇಕೆ ಬೇಕು ಹೇಳದಿರ್ತಿಲ್ಲೆ ಕೂಸೆ. ಗಪ್ಪತಿ ಕಲತು ಮುಗಿದ ಮೇಲೆ ಊರಲ್ಲಿ ಯಂಗಳ ಜೊತಿಗೆ ಇದ್ದಕಂಡು ಪೌರೋಹಿತ್ಯ ಮಾಡ್ತಾ ಇದ್ದಿದ್ದ. ಗೊತ್ತಿದ್ದವ್ವು ಗೌರವ ಕೊಡ್ತ. ಕೆಲವರು ಭಟ್ಟತನಿಕೆಗೆ ಹೋಗವ್ರನ್ನ ಬಡವರೇನ ಹೇಳುವಾಂಗೆ ಕೇವಲವಾಗಿ ನೋಡತಿದ್ದ. ಆ ಕಾಲದಲ್ಲಿ ನಮ್ಮ ಜಾತೀಲಿ ಡಾಕ್ಟರಿಕೆ ಓದದವ್ವು ಕಡಿಮೆನಲೇ. ಸತ್ಯುಂಗೆ ಗೌರವ ಕೊಡತಿದ್ದ. ಅಂವಾ ಊರಿಗೆ ಬಂದಾಗ ಅವನ್ನ ಮಾತಾಡಿಸಲ್ಲೆ ಹೇಳೆ ಜನ ಬತ್ತಿದ್ದ. ಯಾರಿಗಾದ್ರು ತ್ರಾಸು ಹೇಳಿ ಬಂದ್ರೆ ಅವನೂ ಔಷಧಿ ಉಪಚಾರ ಹೆಂಗೆ ಹೆಂಗೆ ಹೇಳತಿದ್ದಾ. ಆರಾಮಾದವ್ವು ಹೊಗಳತಿದ್ದ. ಗಪ್ಪತಿಗೆ ತನಗೆ ಸಿಗದೇ ಇದ್ದ ಮರ್ಯಾದಿ ತಮ್ಮಂಗೆ ಸಿಗ್ತು ಅನಸಲ್ಲೆ ಹಿಡತ್ತು. ಅವನ್ನ ಮದ್ವೆ ಆದ ಮೇಲೆ ಬಂದ ನಿನ್ನ ಕಮಲತ್ತೆಗೂ ಅದೇ ತ್ರಾಸು ಶುರುವಾತು. ತಾನು ಊರಲ್ಲಿರ್ನಿಲ್ಲೆ ತಾನು ಕಲಿತ ಪಾಠಶಾಲೆಯಲ್ಲೇ ಶಿಕ್ಷಕ ಆಗಿ ಸೇರಿಕ್ಯತ್ತಿ ಹೇಳಿ ಹಠ ಹಿಡದಾ. ನಿನ್ನಜ್ಜ ‘ಯಂಗಳ ಬಿಟ್ಟಿಕ್ಕೆ ಹೋಗಡ್ದಾ ಗಪ್ಪತಿ. ಶಿಷ್ಯವರ್ಗಕ್ಕೆಲ್ಲ ಕಷ್ಟ ಆಗ್ತು, ಜಮೀನು ಮನೆ ನೋಡದು ಯಂಗಳತ್ರು ಆಗ್ತಿಲ್ಲೆ’ ಹೇಳಿ ರಾಶಿ ಒತ್ತಾಯನೇ ಮಾಡ್ದಾ. ಆದ್ರೆ ಅಂವಾ ಕೇಳಿದ್ನೇ ಇಲ್ಲೆ. ಸಂಸಾರ ಸಮೇತವಾಗಿ ಶೃಂಗೇರಿಗೆ ಹೋದಾ.
ಹೆಂಗಸರು ಅತ್ತ ಅತ್ತಾದ್ರೂ ಹಗುರಾಗ್ತ. ಗಂಡಸರು ಹಾಂಗಲ್ಲ ಒಳಗೊಳಗೆ ಕೊರಗ್ತ. ನಾಲ್ಕು ಮಕ್ಕಳನ್ನು ಇದ್ರೂ ಒಬ್ರೂ ಹತ್ರಿರತ್ವಿಲ್ಲೆ ಹೇಳಿ ಯನ್ನ ಮನಸ್ಸಿಗೆ ಕರ್ಕರೆ ಆದ್ರೂ ಹಿತ್ಲು, ಕೊಟ್ಟಿಗೆ ನಾಯಿ ಬೆಕ್ಕು ಹೇಳಿ ಒಂದ ನಮೂನಿ ಪ್ರಪಂಚ ಬೆಳೆಶ್ಗಂಡು ಇಡೀ ದಿನ ಕೆಲಸದಲ್ಲಿ ಮುಳುಗಬುಟಿ. ಇವ್ರು ಮನಸ್ಸಿಗೆ ತಗಂಡ್ರು. ಲಕ್ವ ಹೊಡದು ಹಾಸ್ಗೆ ಬಿಟ್ಟು ಏಳದಗಿದ್ದ ಹಾಂಗಾದ್ರು. ಸತ್ಯು ಮಾವಾ ಆಸ್ಪತ್ರೆ ಕೆಲಸಾ ಬಿಟ್ಟಿಕ್ಕೆ ಬಂದು ಹಗಲೂ ರಾತ್ರಿ ಸೇವೆ ಮಾಡ್ದಾ. ಎದ್ದು ಕೂತ್ಗಂಬಷ್ಟು ಆರಾಮಾದ್ರು. ಇನ್ನೊಂದು ತಿಂಗಳೊಳಗೆ ಆರಾಮಾಗಿ ಓಡಾತ್ರು ಇವ್ರು ಹೇಳತಿದ್ದಾ. ಇದ್ದಕ್ಕಿದ್ದ ಹಾಂಗೊಂದು ದಿನ ಮನಗಿದಲ್ಲೆ ಜೀವ ಹೋಗೋತು. ಅಮ್ಮಾ ಹಾರ್ಟ ಫೇಲಾಗೋಜು ಅಪ್ಪಂಗೆ ಅಂದಾ ಸತ್ಯು. ಯನಗೆ ಮುತ್ತೈದೆ ಸಾವು ಬೇಕಾಗಿತ್ತು. ಆದರೆಂತಾ ಮಾಡ್ತೆ. ಯನಗಿಂತಾ ಮೊದ್ಲು ಅವೇ ದೇವಲೋಕಕ್ಕೆ ಹೋದ. .. ಕಾವ್ಯಾಳ ಕಣ್ಣಲ್ಲಿ ನೀರಿತ್ತು.
‘ಅಜ್ಜಿ ಅಜ್ಜ ಸತ್ತಾಗ ಗಪ್ಪತಿ ಮಾವಾ ಎಂತಕ್ಕೆ ಸತ್ಯು ಮಾವನ ಹತ್ರ ಜಗಳ ಮಾಡ್ದಾ?’
‘ಕೊನೆಗಾಲದಲ್ಲಿ ಅಪ್ಪನ್ನ ಆನು ನೋಡಿಕ್ಯಂಡಿದ್ದಿ. ಆನೇ ಕ್ರಿಯಾ ಹಿಡಿಲ ಕೇಳ್ದಾ ಸತ್ಯು’ ಗಪ್ಪತಿಗೆ ಭಯಂಕರ ಸಿಟ್ಟು ಬಂದೋತು. ಹಿರಿ ಮಗಾ ಇದ್ದಾಗ ಸಣ್ಣ ಮಗಾ ಕ್ರಿಯಾ ಹಿಡದಿದ್ದು ಎಲ್ಲಾದ್ರೂ ನೋಡಿದ್ಯ. ನೀನು ಡಾಕ್ಟರಾಗಿಕ್ಕು ಆದ್ರೆ ಇಂಥಾ ಶಾಸ್ತ್ರದ ವಿಚಾರ ನಿನಗೆಂತಾ ಗೊತ್ತಾಗವು ಎಂದು ತಾನೇ ಕ್ರಿಯಾ ಹಿಡಿದು ಎಲ್ಲಾ ಕಾರ್ಯಾ ಮಾಡದಾ. ಅದೆಲ್ಲ ಮಾಡಿ ಮುಗಿಸವರಿಗೂ ಧುಮು ಧುಮುಗುಟ್ಟತಾನೆ ಇದ್ದಿದ್ದಾ. ಹದಿನಾಲ್ಕನೇ ದಿನದ ಶಾಸ್ತ್ರ ಮುಗಿದ ನಂತರ ‘ಇದ್ದ ಆಸ್ತಿ ಮಾರನ ನೀ ಯನ್ನ ಜೊತಿಗೆ ಬಂದು ಇದ್ದುಬಿಡೇ ಅಮ್ಮಾ ಅಂದಾ. ಸತ್ಯುನೂ ಆಸ್ತಿ ಮಾರಲ್ಲೆ ಒಪ್ಪಿದಾ ಆರೆ ಅಮ್ಮಾ ನೀ ಯನ್ನ ಜೊತಿಗೆ ಇರು ಬಾ ಅಂದಾ. ಅಷ್ಟೆಲ್ಲ ಆಗ ಹೊತ್ತಿಗೆ ಯನಗಾಗಿದ್ದು ಬರೀ ಐವತ್ನಾಲ್ಕು ವರ್ಷ.. ಸತ್ಯುನ ಮನಿಗೆ ಗಪ್ಪತಿ ಮನಿಗೆ ವರ್ಷಕ್ಕೊಂದು ಸಲಾ ಹೋಗಿ ಒಂದು ವಾರ ಇದ್ಕಂಡು ಬತ್ತಿದ್ದಿ. ಅಷ್ಟೇ ದಿನಕ್ಕೆ ಬೇಜಾರು ಬಂದು ಯಾವಾಗ ಊರಿಗೆ ಬತ್ನನ ಅನ್ನಿಸ್ತಿತ್ತು. ಈಗ ಖಾಯಂ ಹೋಗವೇ ವಿಚಾರ ಮಾಡ್ದಿ ಹತ್ರ ಹತ್ರದ ಊರಿಗೆ ನಿನ್ನ ಅಮ್ಮ ದೊಡ್ಡಮ್ಮನ್ನ ಕೊಟ್ಟು ಮದ್ವೆ ಮಾಡಿದ್ಯ. ಇಲ್ಲಿ ಮಾರಿಕ್ಕೆ ಹೋದ್ರೆ ಅವ್ಕೆ ಅಪ್ಪನ ಮನೆ ಹೇಳದೇ ಇಲ್ಲದಗಿದ್ದ ಹಾಂಗಾಗ್ತು.. ಅನ್ನಿಸಿಹೋತು.
:ಯನ್ನ ಜೀವ ಇಪ್ಪಲ್ಲಿವರಿಗೆ ಜಮೀನು ಮಾರದು ಬ್ಯಾಡಾ. ಆನು ಜಮೀನು ಮನೆ ನೋಡಿಕ್ಯತ್ತಿ. ಆಳ್ಗ ಇದ್ದ ಊರವ್ವಿದ್ದ, ಫೋನ್ ಮಾಡಿ ಕರದ್ರೆ ಬಪ್ಪಷ್ಟು ದೂರದಲ್ಲಿ ಹೆಣ್ಣುಮಕ್ಕಳು ಅಳಿಯಂದಿಕ್ಕ ಇದ್ದ’ ಹೇಳ್ದಿ. ಗಪ್ಪತಿಗೆ ಅದಕ್ಕೂ ಸಿಟ್ಟು ಬಂತು ಗಡಿಗೆ ಮುಖ ಮಾಡಕ್ಯಂಡು ಶೃಂಗೇರಿಗೆ ಹೋದಾ. ಸತ್ಯುಂಗೆ ಯನ್ನ ಮನಸ್ಥಿತಿ ಅರ್ಥ ಆತು. ಅಮ್ಮಾ ಆನು ಆಗಾಗ ಬಂದು ಹೋಗಿ ಮಾಡ್ತಿ ಹೇಳಿಕ್ಕೆ ಅವಂಗೆ ತೋಚಿದಷ್ಟು ಸಾಮಾನು ಸರಂಜಾಮು ತಂದಿಟ್ಟಿಕ್ಕೆ ಮೈಸೂರಿಗೆ ಹೋದಾ. ಗಪ್ಪತಿ ಹುಟ್ಟಿದಾಗ ವಂಶೋದ್ಧಾರಕಾ ಹುಟ್ಟಿದಾ ಹೇಳಿ ನಿನ್ನಜ್ಜ ಭಾರಿ ಖುಷಿ ಪಟ್ಟಿದ್ದಿದ್ದಾ. ಅವಂಗೆ ಈ ವಂಶದ ಚಿಂತೆಯೇ ಇಲ್ಲೆ ಸತ್ಯು ಮಾವಾ ಬಂದು ಹೋಗಿ ಮಾಡ್ತಾ ಇರ್ತಾ ನಿನಗೆ ಗೊತ್ತಿದ್ದಲಿ.
ಒಂದು ದಿನಾ ಗಪ್ಪತಿ ತನ್ನ ಭಾವನ ಮದ್ವೆ, ತನ್ನ ಹೆಂಡ್ತಿಗೆ ಹಾಕ್ಯಂಬಲ್ಲೆ ನಿನ್ನ ಬಂಗಾರಾ ಕೊಡು ಹೇಳಿ ಇದ್ದಿದ್ದು ಒಂದು ಸರಾ ನಾಲ್ಕ ¨ಳೆ ತಗಂಡು ಹೋದ. ಆರು ವರ್ಷಾತು ಕೊಟ್ಟ ಬಂಗಾರ ಹಿಂದೆ ತಂದು ಕೊಟ್ಟಿದ್ನಿಲ್ಲೆ.. ಒಂದೆರಡು ಸಲಾ ಕೇಳ್ದಿ ‘ಯಂಗ ಎಂತ ನುಂಗಿದ್ವಿಲ್ಲೆ ನಿನ್ನ ಸರಾ ಬಳೆನ, ತಂದು ಕೊqತ್ಯÀ’ ಅಂದಾ, ನಾನೇ ಹೆತ್ತ ಮಗಾ ಕುತ್ತಿಗೆ ಹಿಡದು ಕೇಳಲ್ಲಾಗ್ತ ಎಂತಾವ? ಸುಮ್ಮನಾದಿ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಹೇಳ್ತ. ನಿನ್ನ ಅಮ್ಮ ದೊಡ್ಡಮ್ಮ ಯನ್ನ ಪ್ರತಿ ಕಷ್ಟದ ಸಂದರ್ಭದಲ್ಲೂ ಅವರಿಬ್ಬರೇ ಮಾತಾಡಿಕ್ಯಂಡು ಯಾರಾದ್ರೊಬ್ಬರು ಬಂದು ತಂಗಕ್ಕಿಗೆ ತಿಳಿದ ಹಾಂಗೆ ಕೆಲಸ ಮಾಡಿಟ್ಟಿಕ್ಕೆ ಹೋಗ್ತ…ಶಾಲೆ ರಜೆ ಬಿದ್ದಾಗಲೆಲ್ಲ ಅಜ್ಜಿ ಒಬ್ಳೆ ಇರ್ತು ಬೇಜಾರಾಗಿರ್ತು, ಹೋಗಿ ಬನ್ನಿ ಹೇಳ್ತಾ ಮಕ್ಕಳ ಕಳಸ್ತ. ನಮ್ಮ ನಮ್ಮ ನಶೀಬದಲ್ಲಿದ್ದಿದ್ದು ನಮಗೆ ಸಿಗತು ಅಷ್ಟೇಯಾ.
ನಿನ್ನ ಸತ್ಯು ಮಾವಂಗೆ ಚಕ್ಕುಲಿ ಅಂದ್ರೆ ಪ್ರೀತಿ ಸ್ವಲ್ಪ ಅಕ್ಕಿ ನೆನಸಿ ಸೌತೇಕಾಯಿ ರಸಾ ಹಾಕಿ ಚಕ್ಕುಲಿ ಮಾಡನ ನೆಡಿ ಕೂಸೆ. ಒಲೆ ಮೂಲೆಲಿ ಇದ್ದ ಹಿತ್ತಂಡೆ ಹಿಡಿಲಿ ಬಗ್ಗಿ ಬಗ್ಗಿ ಗುಡಿಸಿದರೂ ಬೂದಿ ಪೂರಾ ಹೋಗ್ತಿಲ್ಲೆ. ಎಷ್ಟು ಹೇಳಿರೂ ಕತೆಯೂ ಮುಗಿತಿಲ್ಲೆ.….
ನನ್ನ ಕೈಲಿದ್ದ ಅಕ್ಕಿಯ ಮೊರವನ್ನೆತ್ತಿಕೊಂಡು ಕಾವ್ಯಾ ನನ್ನತ್ತ ನೋಡಿದಳು. ಧೂಳು ಮುಸುಕಿದ ನನ್ನ ಕಣ್ಣಿಗೆ ಅವಳ ಮೊಗದ ಭಾವವೇನೂ ತಿಳಿಯಲಿಲ್ಲ.
1 thought on “ಕಾಲನ ತೆಕ್ಕೆಯಲ್ಲಿ”
ಅತೀ ಸುಂದರ…..ಮನ ಮುಟ್ಟುವ ಲೇಖನ ಮಾಲಿಕಾ
ಮತ್ತ ಮತ್ತ ಓದಲೇಬೇಕೆಂದು ಕಾಣ್ತು