ನಾಗತಿಹಳ್ಳಿ ಚಂದ್ರಶೇಖರ ಅವರ ʻಪುಟ್ಟಿಗೊಂದು ಪುಟ್ಟಿʼ

ಇತ್ತೀಚೆಗೆ ಸಾಕಷ್ಟು ಆತ್ಮಚರಿತ್ರೆಗಳು ಪ್ರಕಟಗೊಳ್ಳುತ್ತಿವೆ. ತನ್ನ ಬದುಕನ್ನು ದಾಖಲಿಸುವ ಹೊತ್ತಿಗೆ ಏನೆಲ್ಲ ವಿಚಾರಗಳು, ಎಷ್ಟೆಲ್ಲ ವಿಚಾರಗಳು ಮನದಲ್ಲಿ ಸುಳಿಯುತ್ತವೆಯೋ ಅದನ್ನೆಲ್ಲ ದಾಖಲು ಮಾಡುವ ಖಯಾಲಿ ಅದರೊಳಗಿರುತ್ತವೆ. ಬರೆಯುವಾತನಿಗೆ ಎಲ್ಲವೂ ಬೇಕು. ತನ್ನ ಕಷ್ಟ, ಸುಖ, ಸೋಲು, ಗೆಲುವು ಎಲ್ಲ. ತಾನು ಅದರಿಂದ ಯಾವ ಸಂದೇಶ ರವಾನೆ ಮಾಡುತ್ತಾನೆ ಎಂಬುದು ಎಷ್ಟೋ ವೇಳೆ ಆತನಿಗೆ ಮುಖ್ಯವಾಗಿರುವುದಿಲ್ಲ.

ಇಲ್ಲೊಂದು ವಿನೂತನ ಮಾದರಿಯ ಬರವಣಿಗೆ. ʻಪುಟ್ಟಿಗೊಂದು ಪುಟ್ಟಿ.ʼ ಮೇಲ್ನೋಟಕ್ಕೆ ಇದು ಇಬ್ಬರು ಪುಟ್ಟ ಹೆಣ್ಣುಮಕ್ಕಳ ಬದುಕನ್ನು ಹೇಳುವ ಕಥನದಂತೆ ಭಾಸವಾಗುತ್ತಿದ್ದರೂ -ಲೇಖಕನ ಆತ್ಮ ಚರಿತ್ರೆಯನ್ನೂ ಒಳಗೊಂಡಂತೆ- ಏಳು ಜೀವಗಳ ಸಂತುಲಿತ ಬದುಕನ್ನು ಈ ಕೃತಿ ನಿರವಿಸುತ್ತದೆ. ಕೃತಿಯ ಆತ್ಮದಲ್ಲಿಯೇ ಲೇಖಕ ಸ್ಥಾನ ಪಡೆದಿರುವುದರಿಂದ ಹಾಗೂ ಲೇಖಕನ ಮೂಲಕ ಇತರ ನೈಜ ಪಾತ್ರಗಳು ಹೊಮ್ಮುವುದರಿಂದ ಇದನ್ನು ಆತ್ಮಚರಿತ್ರೆಯೆಂದೇ ಪರಿಭಾವಿಸಬಹುದು.

ಆತ್ಮಚರಿತ್ರೆಯೆಂಬುದು ವ್ಯಕ್ತಿ ಬದುಕಿನ ʻಅʼ ದಿಂದ ʻಅಃʼ ತನಕ ಹರಡಿರಬೇಕೆಂದೇನೂ ಇಲ್ಲ; ಹೀಗೂ ಇರಬಹುದು ಎಂಬುದಕ್ಕೆ ನಾಗತಿಹಳ್ಳಿಯವರ ʻಪುಟ್ಟಿಗೊಂದು ಪುಟ್ಟಿʼ ಅತ್ಯತ್ತಮ ಉದಾಹರಣೆ.ನಾಗತಿಹಳ್ಳಿ ಚಂದ್ರಶೇಖರರು ಸಾಹಿತ್ಯ ಹಾಗೂ ಸಿನಿಮಾ ವಲಯಗಳಲ್ಲಿ ಬಹಳ ಹೆಸರು ಮಾಡಿದವರು. ಜಗತ್ತನ್ನು ಈಜುಕೊಳವಾಗಿಸಿ ಮಿಂದೆದ್ದವರು. ತನ್ನ ಸಾಂಸಾರಿಕ ಬದುಕಿನಲ್ಲಿ ಪುಟ್ಟಿಯೊಬ್ಬಳು ಹುಟ್ಟಿದಲ್ಲಿಂದ ಮೊದಲ್ಗೊಂಡು ಅವಳಿಗೆ ಒಬ್ಬಳು ಪುಟ್ಟಿ ಹುಟ್ಟುವ ವರೆಗಿನ ಹರಹುಳ್ಳ ಕಥನವಿದು. ಜೊತೆಗೆ ನಾಗತಿಹಳ್ಳಿಯವರ ನಾಗತಿಹಳ್ಳಿ ಪರಿಸರ, ಮಾಸ್ತರಾಗಿದ್ದ ತನ್ನ ಅಪ್ಪ, ಅಪ್ಪನನ್ನೂ ಊರವರನ್ನೂ ಹದ್ದುಬಸ್ತಿನಲ್ಲಿಡಬಲ್ಲ ಚೈತನ್ಯವುಳ್ಳ ಅಮ್ಮ ಪಾರ್ವತಮ್ಮ, ಸಾರ್ವಜನಿಕ ಸಮಾರಾಧನೆಯಿಲ್ಲದ ಅಂತರ್ಜಾತೀಯ ವಿವಾಹ, ವಿವಾಹಪೂರ್ವ ಪ್ರಣಯದ ತುಣುಕುಗಳು, ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ, ಆರ್ಥಿಕ ಸ್ಥಿತಿಗತಿ, ನಾಗತಿಹಳ್ಳಿಯ ಹಳ್ಳಿಶಾಲೆ, ನಗರದ ಬಾಡಿಗೆ ಮನೆಗಳು, ಸಿನಿಮಾ – ಸಾಹಿತ್ಯ- ಸೀರಿಯಲ್ಲುಗಳು, ವಿದೇಶ ಯಾನ, ಸ್ವಂತ ಮನೆ, ಸಿನಿಮಾ ಯಶಸ್ಸು -ಹೀಗೆ ಅದೆಷ್ಟೋ ವಿಚಾರಗಳು ಪುಟ್ಟ ಪುಟ್ಟ ದೃಶ್ಯಗಳಂತೆ ಕಣ್ಣೆದುರಿಂದ ಹಾದು ಹೋಗುತ್ತವೆ. ಹೆಚ್ಚು ವಿವರಣೆಗಳಿಲ್ಲದಿದ್ದರೂ ಮುಖ್ಯವಾದವುಗಳು ಪ್ರಸ್ತಾಪಿತವಾಗದೆ ಹೋಗಬಾರದೆಂಬ ಎಚ್ಚರ ಕೂಡ ಲೇಖಕರಲ್ಲಿದೆ. ಅಲ್ಲಿ ನಡು ನಡುವೆ ಹುದುಗಿರುವುದೇ ಪುಟ್ಟಿಯರ ಕಥನ!

ಮಕ್ಕಳ ಬಾಲಲೀಲೆಗಳನ್ನು ಕುರಿತು ಅದೆಷ್ಟೋ ಓದಿರುತ್ತೇವೆ. ಅದು ಬೇರೆ. ತಮಗೇ ಮಕ್ಕಳಾದಾಗ ಆ ಅನುಭವವನ್ನು ತಮ್ಮೊಳಕ್ಕೆ ಸೆಳೆದುಕೊಳ್ಳುವ ಸುಖವೇ ಬೇರೆ. ಅದನ್ನು ಬಿಂಬಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಅವಷ್ಟನ್ನೇ ಬರೆಯುತ್ತಾ ಕೃತಿಯನ್ನು ಬೆಳೆಸಬಹುದಾಗಿತ್ತು. ಹಾಗೆ ಬೆಳೆಸಿದರೆ ಅದೆಷ್ಟು ಜಾಳಾಗುತ್ತಿತ್ತೆಂದನ್ನು ಬೇರೆ ಹೇಳಬೇಕಾಗಿಲ್ಲ. ತಮ್ಮ ಮಕ್ಕಳ, ಮೊಮ್ಮಕ್ಕಳ ಬಾಲ ಲೀಲೆಗಳನ್ನು ಹಲವರು ನಮ್ಮ ಜೊತೆ ಹಂಚಿಕೊಳ್ಳುತ್ತಾರೆ. ನಾವದನ್ನು ಕೇಳುತ್ತಾ ಸಂತಸ ವ್ಯಕ್ತ ಪಡಿಸಿದರೂ ʻಇದೇ ಅಲ್ವಾ ನಮ್ಮ ಮನೆಯಲ್ಲೂ ನಡೆಯೋದುʼ ಎಂದು ಮನಸಲ್ಲೇ ಅಂದುಕೊಳ್ಳತ್ತೇವೆ. ಅದಷ್ಟೇ ಒಂದು ಕೃತಿಯಾಗಬೇಕಿಲ್ಲ ಎಂಬ ಸೂಕ್ಷ್ಮವನ್ನು ಅರಿತ ನಾಗತಿಯಳ್ಳಿಯವರು ಅದನ್ನು ನೆಪವಾಗಿರಿಸಿ ತಮ್ಮ ಬದುಕನ್ನು ಇಲ್ಲಿ ಹಾಸು-ಹೊಕ್ಕಾಗಿಸಿದ್ದಾರೆ. ಆ ಮೂಲಕ ಪ್ರತ್ಯೇಕ ಆತ್ಮಕಥೆಯನ್ನು ಬರೆಯುವ ಭಾರವನ್ನು ನೀಗಿಸಿಕೊಂಡಿದ್ದಾರೆ. ಮೊಮ್ಮಗಳೂ ಸೇರಿದಂತೆ ಮೂವರು ಪುಟ್ಟಿಯರು ತ್ರಿಕೋನಾಕಾರದಲ್ಲಿ ನಿಂತಿರಲು, (ಕನಸು-ಸಿಹಿ-ಲೀಲಾ) ಹೊರಗೆ ಅಪ್ಪ-ಅಮ್ಮಂದಿರು ತಮ್ಮ ಕಬಂಧಬಾಹುಗಳಿಂದ ಅವರ ಬೆಳವಣಿಗೆಗೆ ಶ್ರೀರಕ್ಷೆಯಾಗುತ್ತಾ ಜೊತೆಯಾಗಿ ಬದುಕು ಸಾಗಿಸುವ ಚಿತ್ರಣ ಇಲ್ಲಿದೆ. ಮಕ್ಕಳನ್ನು ಅಮ್ಮನಿಗಿಂತಲೂ ಅತಿಯಾಗಿ ಮುದ್ದಿಸುವ ಅಪ್ಪನನ್ನು ಇಲ್ಲಿ ನೋಡಬಹುದು. ಅಥವಾ ಬರೆದವರು ಅಪ್ಪನೇ ಆದ್ದರಿಂದ ತಾನು ಕಂಡುಂಡದ್ದಕ್ಕೆ ಮಡದಿಗಿಂತ ಹೆಚ್ಚು ಪ್ರಾಧಾನ್ಯವನ್ನು ಕೊಟ್ಟುಕೊಂಡಿರಬಹುದು.

ಕಾರ್ಯನಿಮಿತ್ತ ವಿದೇಶದಲ್ಲಿ ಅಮ್ಮನಿದ್ದಾಗ ಮಗಳನ್ನು ನೋಡಿಕೊಳ್ಳುವ ಅಪ್ಪ! ಅಂದರೆ ಅಪ್ಪನಿಗೆ ಅನ್ಯ ಕೆಲಸಗಳಿರಲಿಲ್ಲವೇ? ಎಂದು ಯಾರೂ ಪ್ರಶ್ನಿಸಬೇಕಾದ್ದಿಲ್ಲ. ಓರ್ವ ತಂದೆ ತನಗೆ ಬಿಡುವಿಲ್ಲದ ಕೆಲಸವಿದ್ದರೂ ಮಕ್ಕಳಿಗಾಗಿ ಬಿಡುವು ಮಾಡಿಕೊಳ್ಳುವ ಚಿತ್ರಣವೇ ಇಲ್ಲಿರುವುದು. ಈ ಕಾಲಘಟ್ಟದಲ್ಲಿ ತಂದೆಯನ್ನು ಮಕ್ಕಳು ತಿಂಗಳಾನುಗಟ್ಟಲೆ ನೋಡಿಯೇ ಇರುವುದಿಲ್ಲ ಅಥವಾ ಮಕ್ಕಳು ನಿದ್ದೆ ಮಾಡಿರುವಾಗ ಅಪ್ಪ ಮನೆ ಸೇರುತ್ತಾನೆ, ಮಕ್ಕಳು ಎದ್ದಾಗ ಅಪ್ಪ ಆಫೀಸಿಗೆ ಹೋಗಿರುತ್ತಾನೆ. ಅಂಥ ಹೆತ್ತವರೊಮ್ಮೆ ಮುಟ್ಟಿ ನೋಡಿಕೊಳ್ಳುವಂತಿದೆ ಇಲ್ಲಿನ ಬರಹ. ಇಲ್ಲಿ ʻತನಗೆ ಬಿಡುವಿಲ್ಲʼ ಎಂಬ ಹಪಹಪಿಕೆಯೇ ಇಲ್ಲ.

ಇದರೊಳಗೆ ಅಲೆಮಾರಿಯ ಗುಣವಿದೆ. ಅಪ್ಪ ಅಮ್ಮಂದಿರೊಂದಿಗೆ ಮಕ್ಕಳೂ ಜಗಯಾನ ಮಾಡುತ್ತಾರೆ. ಸ್ಕೂಟರಿನಲ್ಲಿ ಓಡಾಡುತ್ತಿದ್ದವರ ಮನೆಯಲ್ಲಿ ಹುಟ್ಟಿದ ಕನಸುಪುಟ್ಟಿ ಬೆನ್ಜ್‌ ಕಾರು ಬರುವುದಕ್ಕೆ ನೆಪವಾಗುತ್ತಾಳೆ. ಲೋಲಾನನ್ನು ಸಾಕುತ್ತಾ ಅದರೊಂದಿಗೆ ಹೊಸಬದುಕನ್ನು ಮೆಲ್ಲುತ್ತಿದ್ದ ಸಿಹಿಪುಟ್ಟಿಗೆ ಅದು ಸತ್ತಾಗ ಆದ ದುಃಖ ಇಡಿಯ ಮನೆಯನ್ನೇ ಆವರಿಸಿದ ಮ್ಲಾನ ಚಿತ್ರಣವೂ ಇಲ್ಲಿದೆ. ತಾವು ಚಿತ್ರೀಕರಣದ ವೇಳೆ ಹೆಜ್ಜೇನಿನೊಂದಿಗೆ ಸರಸವಾಡಿದ(?) ಕಹಿಘಟನೆಯೂ ಇಲ್ಲಿದೆ. ಹುಲಿಯಂತಹ ತಮ್ಮ ತಾಯಿ ಕಾಯ ಬಿಟ್ಟಾಗಿನ ಮೂಕರೋದನವಿದೆ. ಹಳ್ಳಿಯಲ್ಲಿ ನಡೆದ ಕನಸುಪುಟ್ಟಿಯ ಮದುವೆಯಲ್ಲಿ ಎತ್ತಿನ ಗಾಡಿ ಮೆರವಣಿಗೆ! ಆ ಮೇಲೆ ದಂಪತಿಗಳು ನೆಲೆಗೊಂಡದ್ದು ಮಾತ್ರ ಕೆನಡಾದಲ್ಲಿ.

ಇಲ್ಲಿ ಸಿಹಿ ಪುಟ್ಟಿಯ ಸ್ವಾಭಿಮಾನದ ಅದ್ಭುತ ಚಿತ್ರಣವಿದೆ. ಕನಸು ಪುಟ್ಟಿಯ ಬೆಳವಣಿಗೆಯ ವಿವಿಧ ಹಂತಗಳ ಸಂಭ್ರಮೋಪೇತ ಘಟನೆಗಳಿವೆ. ನಡುನಡುವೆ ತಾವು ಮೆಚ್ಚುವ ಸಮನ್ವಯ ಧರ್ಮವಾಲೀ ಅಭಿವ್ಯಕ್ತಿ ವೇದಿಕೆಯಾಗಲೀ ಪುಸ್ತಕ ಪ್ರಕಾಶನದ ಝಲಕುಗಳಾಗಲೀ ಕಾಣಿಸಿಕೊಳ್ಳುತ್ತವೆ. ಕಾರಂತ, ಲಂಕೇಶಾದಿಗಳಂಥ ಅಸಂಖ್ಯ ಸಾಹಿತಿ, ಕಲಾವಿದರ ಜೊತೆಗಿನ ಒಡನಾಟದ ತುಣುಕು ಮಿಣುಕು ಚಿತ್ರಣಗಳೂ ಇವೆ. ಜೊತೆಗೆ ಆಗೊಮ್ಮೆ ಈಗೊಮ್ಮೆ ಮಡದಿ ಶೋಭಾರನ್ನು ನೆನೆಯುವುದನ್ನೂ ಲೇಖಕರು ಮರೆಯುವುದಿಲ್ಲ!

ಈ ಕೃತಿಯ ಭಾಷೆ ಖುಷಿ ಕೊಡುತ್ತದೆ. ಮಕ್ಕಳ ವಿಚಾರವನ್ನು ಹೇಳುವಾಗ ಮಕ್ಕಳಿಗೆ ಹೊಂದುವ ಭಾಷೆಯಲ್ಲಿ ಬರೆದಿದ್ದಾರೆ ಎನಿಸಿದರೂ ಅದರೊಳಗೆ ಮಿಳಿತಗೊಂಡಿರುವ ವಿಚಾರಗಳ ನಿಮಿತ್ತವಾದ ಭಾಷೆ ಹಿರಿಯರಿಗೂ ಸಲ್ಲುವುದು ಗಮನಕ್ಕೆ ಬರುತ್ತದೆ. ಯಾವ ಘಟನೆಯನ್ನೂ ಅನಗತ್ಯ ಬೆಳೆಸುವುದಿಲ್ಲ. ಹಾಗಾಗಿಯೇ ʻಪುಟ್ಟಿಗೊಂದು ಪುಟ್ಟಿʼಯನ್ನು ಓದುವ ಯಾರಿಗಾದರೂ ಸರಿಯೆ ಒಂದೇ ಗುಕ್ಕಿಗೆ ಹೀರುವ ಬಯಕೆಯಾಗುವುದು ಸಹಜವೆ!

ʻಪುಟ್ಟಿಗೊಂದು ಪುಟ್ಟಿʼ
ಲೇ: ನಾಗತಿಹಳ್ಳಿ ಚಂದ್ರಶೇಖರ್‌
ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ, ಬೆಂಗಳೂರು-೫೬೦೦೭೦
ಪುಟ: ೧೩೨
ಕ್ರಯ: ರೂ.೧೮೦/-

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ನಾಗತಿಹಳ್ಳಿ ಚಂದ್ರಶೇಖರ ಅವರ ʻಪುಟ್ಟಿಗೊಂದು ಪುಟ್ಟಿʼ”

  1. K NARAYANANA GOWDA

    ಅಸಂಖ್ಯ ಅಭಿಮಾನಿಗಳಲ್ಲಿ ನಾನೂ ಓರ್ವ ನಿಮ್ಮ ಅಭಿಮಾನಿ ನಿಮ್ಮ ಹುಟ್ಟೂರು ನಾಗತಿಹಳ್ಳಿಯು ಸುಪುತ್ರ ನೀವು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter