ಚೆಂಡು ಪುರಾಣ…


ಹಾಸ್ಯ/ವಿಡಂಬನೆ ಬರಹ

ಅಸಲು ಈ ಭೂಮಿ ಚಾಪೆಯಂತೆ ಅಥವಾ ಟೇಬಲ್ ಟಾಪ್ ಶೇಪಿನಲ್ಲಿರದೆ ದುಂಡಾದ ಚೆಂಡಿನಂತೆ ಯಾಕಿದೆಯೋ ಅರ್ಥವಾಗುತ್ತಿಲ್ಲ! ನಿಜ ಹೇಳಬೇಕೆಂದರೆ ಭೂಮಿಯೊಂದೇ ಅಲ್ಲ ಆಕಾಶದಲ್ಲಿ ಕಾಣಿಸುವ ಎಲ್ಲ ಗ್ರಹಗಳೂ ಬೇರೆ ಯಾವ ಶೇಪಿನಲ್ಲೂ ಇರದೆ ಬಾಲಿನಂತೆ ದುಂಡಗೆ ಇರಲು ಕಾರಣವೇನು? ಬೇಸ್ ಬಾಲ್, ಫುಟ್ ಬಾಲ್, ಟೆನ್ನಿಸ್ ಬಾಲ್, ಕ್ರಿಕೆಟ್ ಬಾಲ್ ಎಲ್ಲವೂ ಆಕಾರದಲ್ಲಿ ದುಂಡಗೇ ಇರುತ್ತವೆ. ಈ ‘ ಬಿಗ್ ಬಾಲ್ ‘ ತಯಾರಕನಿಗೆ (ಸೃಷ್ಟಿಕರ್ತ!) ಫುಟ್ ಬಾಲ್ ಮಾಡೆಲ್ ಅಂದರೆ ತುಂಬಾ ಇಷ್ಟವೆನಿಸುತ್ತದೆ. ಬಹುಶಃ ಹಿಂದಿನ ಅದ್ಯಾವುದೋ ಜನ್ಮದಲ್ಲಿ ಆತ ಹಿಂದೆ ಒಬ್ಬ ದೊಡ್ಡ ಸಾಕರ್ ಪ್ಲೇಯರ್ ಆಗಿದ್ದಿರಬೇಕು!

ಅಮೇರಿಕ, ರಷ್ಯಾ,ಫ್ರಾನ್ಸ್, ಕೊರಿಯಾ, ಜಪಾನ್ ಇತ್ಯಾದಿ ದೇಶಗಳಲ್ಲಿ ಫುಟ್ ಬಾಲ್ ಅದೇ ಸಾಕರ್ ಅತ್ಯಂತ ಜನಪ್ರಿಯ ಕ್ರೀಡೆ. ಆ ಆಟ ಶುರುವಾದರೆ ಒಂದು ತರಹ ಸುನಾಮಿಯೇ ಪ್ರಾರಂಭವಾಗುತ್ತದೆ ಅಲ್ಲ ಫುಟ್ ಬಾಲ್ ಆಟಕ್ಕೆ ಇದೆ ದೊಡ್ಡ ಮಾಸ್ ಹಿಸ್ಟರಿ… ಈ ಚೆಂಡಿನ ಆಟಕ್ಕಾಗಿ ಜಿಮ್ಮು, ಪಬ್ಬು, ಕ್ಲಬ್ಬು, ಆಫೀಸ್, ಮನೆ ಮಠ, ದೈನಂದಿಕ ಜೀವನ ಎಲ್ಲವನ್ನೂ ಕೆಲ ದಿನಗಳು ಮರೆತು ಕಣ್ಣೆಲ್ಲಾ ಫುಟ್ ಬಾಲ್ ಗ್ರೌಂಡಿನ ಮೇಲೆ ಕೇಂದ್ರೀಕರಿಸಿ ನೋಡುವ ಲಕ್ಷಾಂತರ ಹುಚ್ಚು ಪ್ರೇಕ್ಷಕರಿದ್ದಾರೆ ಅಲ್ಲಿ. ಥೇಟ್ ಫುಟ್ ಬಾಲಿನ ಮಗುವಿನಂತಿರುವ ಕ್ರಿಕೆಟ್ ಚೆಂಡಿನ ಕುರಿತು ಅಂತೂ ಎಲ್ಲರಿಗೂ ಗೊತ್ತು. ಭಾರತದ ಗಲ್ಲಿ ಗಲ್ಲಿಗಳಲ್ಲೂ ಆಡುವ ಅದರ ಕ್ರೇಜ್ ಅಷ್ಟಿಷ್ಟಲ್ಲ!

ಇದು ಯಾಕೆ ಹೀಗೆ ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರ ಏನು ಹೇಳಬೇಕು ಹೇಳಿ? ಭೂಮಿ ದುಂಡಗಿದೆ ಎನ್ನುವುದನ್ನು ಸೂಚ್ಯವಾಗಿ ಸೂಚಿಸುವ ಚೆಂಡನ್ನು (ಬಾಲನ್ನು) ಭೂಮಿಯ ಮೇಲೆ ತಾನೆ ಆಡಬೇಕು! ಆಸೆ, ಅತಿಯಾಸೆ ಉತ್ತರ ದಿಕ್ಕಿನಲ್ಲಿ… ನಿರಾಸೆ, ದುರಾಸೆ ದಕ್ಷಿಣ ದಿಕ್ಕಿನಲ್ಲಿ… ಈ ಎರಡರ ಮಧ್ಯೆ ಪುಟಿಯುತ್ತಾ ನಿಧಾನವಾಗಿ ತೆವಳುವ ಚೆಂಡಿನಂತೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡುವುದು ಮನುಷ್ಯನ ಬದುಕಿನ ತರಹವೇ ತಾನೇ! ನಿಜ ಹೇಳಬೇಕೆಂದರೆ ಮನುಷ್ಯನ ಜೀವನವೇ ಒಂದು ಫುಟ್ ಬಾಲ್ ಆಟ ಇದ್ದಂತೆ… ಅದರಲ್ಲೂ ಗಂಡು – ಚೆಂಡು ಎನ್ನುವ ಎರಡೂ ಶಬ್ದಗಳು ಮತ್ತು ಅವುಗಳ ಪ್ರಾರಬ್ಧಗಳು ಒಂದೇ…ವಯಸ್ಸು ಬೆಳೆದಂತೆಲ್ಲ ಸ್ವಲ್ಪ ಚೆಂಡಿನ ಶೇಪು ಬದಲಾಗುವದು ಅಷ್ಟೇ! ತಾಂಬೂಲ ಕೊಟ್ಟಾಯ್ತು… ಇನ್ನು ನಿಮ್ಮ ಇಷ್ಟ ಬಂದಂತೆ ಆಡಿ ಹೊಡೆದಾಡಿಕೊಳ್ಳಿ ಎನ್ನುವ ರೀತಿಯಲ್ಲಿ ಫುಟ್ ಬಾಲನ್ನು ಗ್ರೌಂಡಿನಲ್ಲಿ ಬಿಸಾಡಿ ಮನುಷ್ಯನ ಆಟವನ್ನು ನೋಡುವನು ಬಾಲ್ ಮೇಕರ್ (ಸೃಷ್ಟಿಸಿದ ದೇವರು!).

ಸಾಕರ್ ರೋಗ ಎನ್ನುವುದು ಮಾಮೂಲಿ ಶೀತ – ನೆಗಡಿ ತರಹ ಅಲ್ಲ. ಇದು ಕೆಲವೊಮ್ಮೆ ಇಡೀ ಪ್ರಪಂಚವನ್ನೇ ಗಡ ಗಡ ನಡುಗಿಸುವ ದೊಡ್ಡ ಚಳಿ ಜ್ವರ ರೋಗ…

ಹುಟ್ಟಿದ ಮಗು ಗುಂಡು ಗುಂಡಾಗಿ ಕಾಣಲಿ, ಬೆಳೆಯಲಿ ಎಂದು ಎಲ್ಲ ಹೆತ್ತವರ ಅಪೇಕ್ಷೆ. ಗುಂಡು ಮುಖದ ಪುಟ್ಟ ಮಗುವನ್ನು ಎಲ್ಲರೂ ಎತ್ತಿಕೊಂಡು ಮುದ್ಧಿಸುವರು ಮತ್ತು ಬೆನ್ನಿನ ಮೇಲೆ ಕೂಡಿಸಿಕೊಂಡು ಅಂಬಾರಿ ಆಟ ಆಡಿಸಿ ಸಡಗರ ಪಡುವರು. ಮೂರು ತುಂಬುವವರೆಗೆ ಅಲ್ಲ, ಈಗ ಎರಡು ವರ್ಷ ಅದ ಕೂಡಲೇ ಅಂತಹ ಗುಂಡು ಮುಖದ ಪುಟ್ಟ ಚೆಂಡನ್ನು ಇಂಗ್ಲಿಷ್ ಕಿಂಡರ್ ಗಾರ್ಡನ್ ಶಾಲೆಯತ್ತ ಉರುಳಿಸುವರು. ಅಲ್ಲಿಂದ ಶುರುವಾಗುತ್ತೆ ಚೆಂಡಿನ ಅಸಲೀ ಆಟ… ಸಣ್ಣಗೆ ಉರುಳತೊಡಗಿದ ಪುಟ್ಟ ಚೆಂಡು ನಿಧಾನವಾಗಿ ವೇಗ ಪಡೆದುಕೊಳ್ಳುತ್ತದೆ. ದೊಡ್ಡ ಸ್ಕೂಲಿಗೆ ಬಂದಾಗ ಪುಟ್ಟ ‘ ಚೆಂಡು (ಬಾಲು) ‘ ಬಾಲಕನಾಗಿ ಬೆಳೆಯುತ್ತದೆ.

ಬಾಲಕ ಎನ್ನುವ ಶಬ್ಧದಲ್ಲೇ ‘ ಬಾಲು ‘ ಸಹಾ ಅಡಗಿದೆ ತಾನೇ! ಇನ್ನು ಸ್ಕೂಲಿನಲ್ಲಿ ಈ ‘ ಪುಟ್ಟ ಬಾಲು ‘ ಹೆಡ್ ಮಾಸ್ಟರ್ – ಸೈನ್ಸ್ ಟೀಚರ್ – ಇಂಗ್ಲಿಷ್ ಟೀಚರ್ – ಗಣಿತ ಟೀಚರ್ ಮತ್ತು ಸೋಶಿಯಲ್ ಸ್ಟಡೀಸ್ ಟೀಚರ್ ಹೀಗೆ ಎಲ್ಲರ ಬಳಿ ಸುತ್ತಾಡಿ ಬರುತ್ತದೆ. ಜೊತೆಗೆ ಟ್ಯೂಷನ್ ಮಾಸ್ಟರ್ ಬಳಿಯೂ ಪ್ರತೀ ದಿನ ಹಾಜರಾಗುತ್ತದೆ. ಮುಂದೆ ಇದೇ ಚೆಂಡು ಕಾಲೇಜಿಗೆ ಬಂದಾಗ ಅದರ ದೊಡ್ಡ ಕಾರಿಡಾರ್ – ಲೈಬ್ರರಿ – ಪ್ರಿನ್ಸಿಪಾಲ್ ರೂಮು – ಕ್ಲಾಸ್ ರೂಮು – ಗರ್ಲ್ಸ್ ಹಾಸ್ಟೆಲ್ – ಕ್ಯಾಂಟಿನ್ ಇತ್ಯಾದಿ ಕಡೆ ‘ ಚೆಂಡು ‘ ವೇಗವಾಗಿ ಉರಳಲು ಶುರು ಮಾಡುತ್ತದೆ. ಈ ‘ ಯಂಗ್ ಚೆಂಡನ್ನು ‘ ಹಲವು ಗರ್ಲ್ ಫ್ರೆಂಡ್ಸ್ ಟಿಶ್ಯೂ ಪೇಪರಿನಂತೆ ಬಳಸಿ ಬಿಸಾಡುವುದು ಉಂಟು! ಒಟ್ಟಿನಲ್ಲಿ ಕಾಲೇಜು ರಂಗದಲ್ಲಿ ‘ ಯಂಗ್ ಚೆಂಡಿನ ‘ ಆಟದ ಸಾಧನೆ ಕಡಿಮೆ ಏನೂ ಇಲ್ಲ.

ಈಗ ‘ ಯುವ ಚೆಂಡು ‘ ಓದು ಮುಗಿಸಿ ಉದ್ಯೋಗ ಪರ್ವದ ಕ್ರೀಡಾಂಗಣದತ್ತ ಹೆಜ್ಜೆ ಹಾಕುತ್ತದೆ. ಬಯೊಡೇಟಾ – ಮಾರ್ಕ್ಸ್ ಕಾರ್ಡ್ – ಟಿ ಸಿ – ಆಧಾರ್ – ಪಾನ್ ಕಾರ್ಡ್ ಇತ್ಯಾದಿಗಳೊಂದಿಗೆ ಹಲವು ಆಫೀಸ್, ಕಂಪನಿಗಳ ರೌಂಡ್ ಹೊಡೆಯುತ್ತದೆ. ಇದು ಫುಟ್ ಬಾಲ್ ಆದ್ದರಿಂದ ಕ್ರಿಕೆಟ್ ಬಾಲಿನಂತೆ ಎಂದೂ ಸಿಕ್ಸರ್ ಹೊಡೆಯಲು ಸಾಧ್ಯವಿಲ್ಲ. ಯಾರೆಷ್ಟೇ ಒದ್ದರೂ ಎಲ್ಲೋ ಒಂದು ಕಡೆ ತೆವಳಿಕೊಂಡು ಹೋಗಿ ನಿಲ್ಲಲು ಪ್ರಯತ್ನ ಮಾಡುವುದು ಈ ಫುಟ್ ಬಾಲಿನ ಸ್ವಭಾವ.

ಇಂಟರ್ವ್ಯೂನಲ್ಲೂ ಅದೇ ಹಣೆ ಬರಹ. ಕಮಿಟಿಯ ಐದು ಸದಸ್ಯರು ಕೇಳುವ ಚಿತ್ರ ವಿಚಿತ್ರ (ಉದ್ಯೋಗಕ್ಕೆ ಸಂಬಂಧಿಸಿದ ಅಥವಾ ಓದಿದ ಕೋರ್ಸಿನ ಬಗ್ಗೆ ಯಾರೂ ಕೇಳುವುದಿಲ್ಲ!) ಪ್ರಶ್ನೆಗಳು ಎದುರಿಸಿ ಸರಿಯಾಗಿ ಉತ್ತರಿಸುವ ಸರದಿ ಯುವಕ ಚೆಂಡಿನದು. ಆನ್ ಲೈನಲ್ಲೂ ಇದೇ ವರಸೆ. ಎಲ್ಲರಿಂದ ಮನ ಬಂದಂತೆ ಕಿಕ್ಕಿಸಿಕೊಂಡು, ತಳ್ಳಿಸಿಕೊಂಡು, ಓಡಿಸಿಕೊಂಡು ಹಾಗೂ ಹೀಗೂ ಒಂದು ಆಫರ್ ಲೆಟರ್ ಪಡೆದಾಗ ಜನ್ಮ ಸಾರ್ಥಕ ಯುವ ಚೆಂಡಿನದು.

ಅಷ್ಟರಲ್ಲಿ ಮನೆಯಲ್ಲಿನ ಹಿರಿಯರ ಒತ್ತಾಯಕ್ಕೆ ‘ ಸಂಸಾರ ‘ ಎನ್ನುವ ಕ್ರೀಡಾಂಗಣಕ್ಕೆ ಚೆಂಡಿನ ಪಯಣ. ಚೆಂಡಿಗೆ ಒಂದು ಸ್ಥಳದಲ್ಲಿ ನೆಲೆ ನಿಂತಿದ್ದೇನೆ ಎನ್ನುವದು ತಾತ್ಕಾಲಿಕ ತೃಪ್ತಿ ಅಷ್ಟೇ…ಅಷ್ಟರಲ್ಲಿ ಗ್ಯಾಸ್ ಸಿಲಿಂಡರ್, ಬಾಡಿಗೆ ಮನೆ, ತರಕಾರಿ, ಕಿರಾಣಿ, ಹೆಂಡತಿ ಮಕ್ಕಳ ಕುಟುಂಬದ ತಾಪತ್ರಯ, ಹಿರಿಯರ ಜಡ್ಡು ಜಾಪತ್ರಯ ಇತ್ಯಾದಿಗಳ ಕಿಕ್ಕುಗಳು ಚೆಂಡಿಗೆ ಶುರುವಾಗುತ್ತವೆ ಪಾಪ!

ಚೆಂಡಿನ (ಮನುಷ್ಯನ) ಬದುಕೇ ಹಾಗೆ…ಗುಂಡು ಗುಂಡಾಗಿ ಮುದ್ದು ಮುದ್ದಾಗಿದ್ದ ಪುಟ್ಟ ಚೆಂಡು, ಕ್ರಮೇಣ ಸ್ವಲ್ಪ ಮಟ್ಟಿಗೆ ಬೆಳೆದು, ನಂತರ ದೊಡ್ಡ ಗಾತ್ರದ ಚೆಂಡಾಗಿ ಉರುಳುತ್ತಾ, ಅವರಿವರ ಕಾಲಲ್ಲಿ ಒದೆ ತಿಂದು, ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೇ ತೆವಳುತ್ತಲೇ ಇರುತ್ತದೆ. ಅದರಲ್ಲೂ ಗಂಡು ಚೆಂಡಿನ ಜೀವನವೇ ವಿಶಿಷ್ಠ. ಗಂಡು ಚೆಂಡು ಮದುವೆಯಾಗುವ ಮುನ್ನ ಅದರ ತಾಯಿ ‘ ನಿನಗೆ ಏನೂ ಗೊತ್ತಾಗೋಲ್ಲ. ಸುಮ್ಮನೆ ಹೇಳಿದಷ್ಟು ಕೇಳು…” ಎಂದು ಅಕ್ಕರೆಯಿಂದ ಹೇಳುವಳು. ಚೆಂಡಿಗೆ ಮದುವೆಯಾದ ಬಳಿಕ ಮುದ್ದಿನ ಮಡದಿ ” ನಿಮಗೆ ಏನೂ ಗೊತ್ತಾಗೋಲ್ಲ. ಸುಮ್ಮನೆ ಹೇಳಿದಷ್ಟು ಕೇಳಿ …”ಎಂದು ಅಸಹನೆಯಿಂದ ಹೇಳುವಳು. ಚೆಂಡಿನ ಮಗಳು ದೊಡ್ಡವಳಾದ ಬಳಿಕ ” ಅಪ್ಪಾ ನಿಮಗೆ ಏನೂ ಗೊತ್ತಾಗೊಲ್ಲ…ಸುಮ್ಮನೆ ಹೇಳಿದಷ್ಟು ಕೇಳಿ…” ಎಂದು ಪ್ರೀತಿಯಿಂದ ಅಪ್ಪನಿಗೆ ಬಯ್ದು ಹೇಳುತ್ತಾಳೆ. ಹೀಗೆ ಚೆಂಡಿನ (ಗಂಡಿನ!) ಬದುಕನ್ನು ಪ್ರವೇಶಿಸುವ ಮೂವರು ಸ್ತ್ರೀಯರು ತಾವು ಹೇಳಿದಂತೆ ಕೇಳುವ ಚೆಂಡನ್ನಾಗಿ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗುವರು. ಒಟ್ಟಿನಲ್ಲಿ ಗಂಡೆಂಬ ಚೆಂಡಿನ ಹಣೆ ಬರಹ ಮೂವರು ‘ ಆದರ್ಶ ಮಹಿಳೆಯರ ‘ ಕೈಯಲ್ಲಿ ಇರುವುದು ಮಾತ್ರ ಸುಳ್ಳಲ್ಲ!

ಕೊನೆಗೊಮ್ಮೆ ಗೋಲ್ ಕೀಪರ್ ತನಗೆ ಸಿಕ್ಕ ಚೆಂಡನ್ನು ಮತ್ತೆ ಪ್ಲೇ ಗ್ರೌಂಡಿಗೆ ‘ ಪುನರ್ಜನ್ಮ ‘ ಎನ್ನುವ ಹೆಸರಿನಲ್ಲಿ ಎಸೆಯುತ್ತಾನೆ ಆ ದೇವರು ಎನ್ನುವುದು ‘ ತತ್ವ ವೇದಾಂತ ಶಿಖಾಮಣಿ ‘ ಶ್ರೀ ಶ್ರೀ ಗುಂಡಣ್ಣನ ಪ್ರಬಲ ವಾದ. ಇದ್ದರೂ ಇರಬಹುದೇನೋ… ನನಗೆ ಗೊತ್ತಿಲ್ಲ…ನಿಮಗೆ ಗೊತ್ತಿದ್ದರೆ ದಯವಿಟ್ಟು ಫೋನಾಯಿಸಿ!


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

15 thoughts on “ಚೆಂಡು ಪುರಾಣ…”

  1. JANARDHANRAO KULKARNI

    ಚೆಂಡಿನ ಆಟ ಮತ್ತು ಗಂಡಿನ ಬದುಕಿನ ಆಟ ಒಂದೇ ಎನ್ನುವ ಹೋಲಿಕೆ ಅದ್ಭುತವಾಗಿದೆ.

    1. I MALLIKARJUNA setty

      ಚೆಂಡು ಪುರಾಣ ಚೆನ್ನಾಗಿ ಮೂಡಿ ಬಂದಿದೆ,
      ರಾಘಣ್ಣ ಅವರಿಗೆ ಧನ್ಯವಾದಗಳು. 🙏.

      1. ಮ. ಮೋ. ರಾವ್, ರಾಯಚೂರು

        ಗಂಡು ಚೆಂಡನ್ನು ಪುಟ್ ಬಾಲಿಗೆ ಹೋಲಿಸಿದ್ದು ಅದ್ಭುತ. ಆಟದಲ್ಲಿ ಎರೆಡು ಟೀಂ ಗಳು ಬಾಲನ್ನು ಜೀವನದಲ್ಲಿ ಮೂರು ಟೀಂ ಗಳು ಬಾಳನ್ನು ಏಕಕಾಲದಲ್ಲಿ ಒದೆಯುವುದುಂಟು. ಈ ಆಟಕ್ಕೊಂದು ಟೈಮ್ ಇರುತ್ತದೆ ಎಂಬುದೇ ಅತ್ಯಂತ ಸಮಾಧಾನಕರ! ಗೋಲ್ಕಿಪರ್ ಬಾಲನ್ನು ಮತ್ತೆ ಗ್ರೌಂಡಿಗೆ ಎಸೆಯುವಾಗ ಅದರಮೇಲೆ ಹೊಸ ಬಣ್ಣ ಬಳಿದು ಬೇರೆಬೇರೆ ಚಿತ್ರ ಬಿಡಿಸಿರುತ್ತಾನೆ. ಹೀಗಾಗಿ ಇದನ್ನು ಹಳೇ ಬಾಲೆಂದು, ಹಗುರುತಿಸಲಿಕ್ಕಾಗದು. ತಿಳಿಹಾಸ್ಯದೊಂದಿಗೆ ಚನ್ನಾಗಿ ಮೂಡಿದೆ. ಅಭಿನಂದನೆಗಳು.

        1. Ravindra Kumar L. V

          ಚೆಂಡಿನ ಪುರಾಣ ನಿಜಕ್ಕೂ ಒಂದು ಅರ್ಥ ಗರ್ಭಿತ ಲೇಖನ..
          ಚೆಂಡನ್ನು ನೋಡುವ ದೃಷ್ಟಿಯೇ ಬೇರೆಯದಾಗಿದೆ.
          ಚೆಂಡಿನ ಪುರಾಣ ಅನಾವರಣಗೊಳ್ಳುವ ಪರಿಯೂ ಸುಂದರವಾಗಿದೆ.
          ರಾಘವೇಂದ್ರರ ಸಾಹಿತ್ಯ ಪಕ್ವಗೊಳ್ಳುತ್ತಿರುವ ಲಕ್ಷಣ ಇಲ್ಲಿದೆ.
          ಅಭಿನಂದನೆಗಳು 💐👍👍

  2. ಶೇಖರಗೌಡ ವೀ ಸರನಾಡಗೌಡರ್

    ಮಾನವನ ಜೀವನವನ್ನು ಚೆಂಡಿನಾಟದಲ್ಲಿ ಚಿತ್ರಿಸಿರುವ ಲೇಖಕರ ಪರಿಕಲ್ಪನೆ ಮೆಚ್ಚುಗೆಗೆ ಪಾತ್ರವಾಗುತ್ತದೆ.
    ಅಭಿನಂದನೆಗಳು.

  3. ಹೌದು ನಮ್ಮ ಬದುಕು ಚಂಡು ವಿನ ಹಾಗೆಯೇ
    ಬಾಲ್ಯ ತಂದೆ ತಾಯಿ ಹೇಗೆ ಒದೆ ಯುತ್ತಾರೋ
    ಹಾಗೆ ಉರುಳುತ್ತಾ ಓದು ಅವರ ಇಚ್ಛೆ ಕೆಲಸ ಅವರ ಇಚ್ಛೆ( ವ್ಯಾಪಾರ ಇತ್ಯಾದಿ ಬೇರೆ ಮನಸಿದ್ದ ರೂ ಬಿಟ್ಟು) ಉದ್ಯೋಗದಲ್ಲಿ ಆಫೀಸರ್ಸ್ ಇಚ್ಛೆಯಂತೆ ಉರುಳುತ್ತಾ ಮುಂದೆ ವಿವಾಹ ದ ಉರುಳು ನಂತರ ಇಡೀ ಜೀವನವೆಲ್ಲಾ ಹೆಂಡತಿ ಉರುಳಿಸಿದ ಕಡೆ ಉರುಳುತ್ತಾ
    ಒಟ್ಟು ಉರುಳುವುದೇ ನಮ್ಮ ಕೆಲಸ
    ಈಕಥೆಯಿಂದ ತಲೆಗೆ ಸಾವಿರ ಚಂಡು (ಹುಳು)
    ಬಿಟ್ಟು ನಾನಾ ಕಡೆ ಉರುಳು ವ ವಿಚಾರ ಕೆ ನಮ್ಮನ್ನು ಹಚ್ಚಿದ್ದೀರಿ

  4. ಪಿ. ಜಯರಾಮನ್

    ಗಂಡಿನ ಜೀವನ ಫುಟ್ಬಾಲಿಗೆ ಹೋಲಿಸಿ ಬರೆದ ಹಾಸ್ಯ ಲೇಖನ ಚೆನ್ನಾಗಿ ಮೂಡಿಬಂದಿದೆ. ಗಂಡು ಮೈದಾನದಲ್ಲಿ (ಜೀವನದಲ್ಲಿ) ಇಳಿದ ಮೇಲೆ ಎಲ್ಲರಿಂದಲೂ ಒದೆಯಿಸಿ ಕೊಳ್ಳಬೇಕಾಗುತ್ತದೆ ಎಂಬುದು ಸತ್ಯ.

    ಲೇಖನ ಚೆನ್ನಾಗಿದೆ ಅಭಿನಂದನೆಗಳು ಸರ್.

  5. ಧರ್ಮಾನಂದ ಶಿರ್ವ

    ಗಂಡಿನ ಜೀವನವನ್ನು ಚೆಂಡಿಗೆ ಸಮೀಕರಿಸಿ ಜೀವನದುದ್ದಕ್ಕೂ ಮೂವರು ಸ್ತ್ರೀಪಾತ್ರಧಾರಿಗಳ ಆಳ್ವಿಕೆಯಲ್ಲಿ ಸುಖಿಸುತ್ತಲೋ, ನಲುಗುತ್ತಲೋ, ನರಳುತ್ತಲೋ ಸಾಗುವ ಪರಿ ವೈಶಿಷ್ಟ್ಯಪೂರ್ಣ ಹುರಿಗೊಂಡ ಬರಹದಿಂದ ವ್ಯಕ್ತವಾಗಿದೆ. ಈ ಪರಿಕಲ್ಪನೆಯೊಂದು ಹೊಸದು. ನಿಮ್ಮ ಬರವಣಿಗೆ ನಿಜಕ್ಕೂ ಪಕ್ವತೆಯ ಹಳಿಯ ಮೇಲಿದೆ.
    ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter