ಆಶೀರ್ವಾದನ ಮನಸ್ಸು ಬಹಳಷ್ಟು ವಿಹ್ವಲಗೊಂಡಿತ್ತು, ಪ್ರಕ್ಷುಬ್ಧಗೊಂಡಿತ್ತು, ಗಾಸಿಗೊಂಡಿತ್ತು. ಮನಸ್ಸು, ಹೃದಯಗಳೆರಡೂ ಪರಿತಪಿಸುತ್ತಿದ್ದವು. ಒಳಗೊಳಗೇ ಅಳುತ್ತಿದ್ದವು. ಮುಖಕಾಂತಿ ನಂದಿಹೋಗಿತ್ತು. ತಳಮಳ, ಕಳವಳ ಎದೆಯೊಳಗೆ ಠಳಾಯಿಸಿದ್ದವು. ಮೂಕ ಹಕ್ಕಿಯಂತಾಗಿ ಬಿಟ್ಟಿದ್ದ. ಮನುಷ್ಯ ದುಃಖವನ್ನು ಮಾರಲಾರ, ಖುಷಿಯನ್ನು ಖರೀದಿಸಲಾರ ಅಲ್ಲವೇ? ಎರಡೂ ಕೈಗಳನ್ನು ತಳಿಕೆ ಹಾಕಿಕೊಂಡು ಅವುಗಳ ಮೇಲೆ ತಲೆ ಇಟ್ಟುಕೊಂಡು ಮಲಗಿದ್ದ ಆಶೀರ್ವಾದನ ನೋಟ ಗೋಡೆಯ ಮೇಲಿನ ಪಟದಲ್ಲಿದ್ದ ಶಿವ-ಪಾರ್ವತಿಯರಲ್ಲಿ ನೆಟ್ಟಿತ್ತು. `ಕೋಟ್ಯಾನುಕೋಟಿ ವರ್ಷಗಳಿಂದಲೂ ಶಿವ-ಪಾರ್ವತಿ ಚಿರಯೌವನಿಗರೇ. ಇವರು ಆಗಿನಿಂದಲೂ ಹೀಗೇ ಅನ್ಯೋನ್ಯವಾಗಿದ್ದಾರೆ ಅಲ್ಲವೇ…? ಆದರೆ ಈ ಜುಜುಬಿ ನರಮಾನವ…? ಬಹಳವೆಂದರೆ ನೂರು ವರ್ಷ ಬಾಳಿ ಬದುಕುವ ಈ ಮನುಷ್ಯನೇಕೆ ಶಿವ-ಪಾರ್ವತಿಯರಂತೆ ಅನ್ಯೋನ್ಯವಾಗಿರುವುದಿಲ್ಲ…? ಅವರ ನಡೆಯನ್ನೇಕೆ ಅನುಸರಿಸುತ್ತಿಲ್ಲ…? ಜೀವಿತಾವಧಿಯ ಕೆಲವೇ ವರ್ಷಗಳಲ್ಲಿ ಶಿವ-ಪಾರ್ವತಿಯರಂತೆ ಜೊತೆಜೊತೆಯಾಗಿ ಆದರ್ಶ ದಂಪತಿಗಳಾಗಿ ಜೀವನವನ್ನೇಕೆ ಸಾಗಿಸುವುದಿಲ್ಲ…? ಸೃಷ್ಟಿಕರ್ತನ ನಿಯಮವೇ ಅರ್ಥವಾಗುತ್ತಿಲ್ಲ. ಸೃಷ್ಟಿಸುವಾಗಲೇ ಬರೀ ಒಳ್ಳೆಯದನ್ನೇ, ಒಳ್ಳೆಯವರನ್ನೇ ಸೃಷ್ಟಿಸಿದ್ದರೆ ಆತನ ಮನೆಯ ಗಂಟೇನು ಹೋಗುತ್ತಿತ್ತು…? ಒಳ್ಳೆಯದು, ಕೆಟ್ಟದು ಏಕೆ? ಕೆಟ್ಟದ್ದು ಇರುವುದಕ್ಕೇ ಒಳ್ಳೆಯದಕ್ಕೆ ಬೆಲೆ ಇದೆಯೇನೋ…? ಆದರ್ಶ, ಅನ್ಯೋನ್ಯತೆ, ಸಾಮರಸ್ಯ, ನೈತಿಕತೆ ಸವಕಲು ನಾಣ್ಯಗಳಾಗುತ್ತಿವೆಯಲ್ಲ…? ಈ ಶಬ್ದಗಳು ಮನುಷ್ಯನ ಬಾಳಿನ ಶಬ್ದಕೋಶದಲ್ಲಿ ಅರ್ಥವನ್ನು ಕಳೆದುಕೊಳ್ಳುತ್ತಿವೆಯೇನೋ…? ಮನುಷ್ಯನ ಮನಸ್ಸೇಕೆ ಇಷ್ಟು ಚಂಚಲ…? ಕಳ್ಳು ಕುಡಿದ ಮಂಗನಂತೇಕೆ ಜಿಗಿದಾಡುತ್ತಿದೆ…? ಅದೆಷ್ಟು ಅನುಭವಿಸಿದರೂ, `ಇನ್ನೂ ಬೇಕು’ ಎಂಬ ಬಯಕೆ, ಹಂಬಲ, ಹಪಹಪಿ ಅದೇಕೆ…? ಒಂದೂ ಅರ್ಥವಾಗುತ್ತಿಲ್ಲ. ನನಗೆ ಸಿಕ್ಕಿರುವುದೆಲ್ಲವೂ ಸೃಷ್ಟಿಕರ್ತನ ಕೃಪೆಯಿಂದ. ಪಾಲಿಗೆ ಬಂದಿದ್ದೆಲ್ಲವೂ ಪಂಚಾಮೃತ. ಅದರಲ್ಲಿಯೇ ಸಂತಸ ಕಂಡುಕೊಳ್ಳೋಣ, ಖುಷಿಖುಷಿಯಿಂದ ಜೀವನ ನಡೆಸೋಣ. ಬರುವ ನಾಳೆಗಳೆಲ್ಲ ನೋವು ತರಲಿಕ್ಕಿಲ್ಲ. ಕೇಡು ಎಣಿಸುವುದೇ ಬದುಕಲ್ಲ. ಭರವಸೆ ಕಳೆದುಕೊಳ್ಳುವುದು ಸಲ್ಲ ಎಂದೇಕೆ ಯೋಚಿಸುತ್ತಿಲ್ಲ…? ಇಲ್ಲದ ಸುಖವನ್ನು ಕಲ್ಪಿಸಿಕೊಂಡು ಅದರ ಹುಡುಕಾಟದಲ್ಲಿ ಮನಸ್ಸಿನ ಹತೋಟಿ ಕಳೆದುಕೊಂಡು ಕೊನೆಗೆ ನೈತಿಕ ಅಧಃಪತನಕ್ಕೆ ಕಾರಣೀಭೂತನಾಗುತ್ತಿದ್ದಾನಲ್ಲ ಬುದ್ಧಿವಂತನೆಂಬ ಈ ಮಾನವ…?’ ಹೀಗೆ ಏನೇನೋ ಯೋಚನೆಗಳ ತಾಕಲಾಟದಲ್ಲಿ ಆಶೀವಾದನ ಮನಸ್ಸು ತಳಮಳಿಸುತ್ತಿತ್ತು.
ಆಶೀರ್ವಾದನ ಮನದ ತೆರೆಯ ಮುಂದೆ ಹೃಷಿತಾಳ ಒಂದಿಷ್ಟು ಮಾತುಗಳು ತಕಧಿಮಿ ನಡೆಸಿದವು. ಹೃಷಿತಾ ಅದೆಷ್ಟು ಹಗುರವಾಗಿ, ಸಲೀಸಾಗಿ ಮಾತಾಡಿಬಿಟ್ಟಳಲ್ಲ…?
“ಏಯ್ ಆಶೀರ್ವಾದ್, ಓಬೀರಾಯನ ಕಾಲದವನಂತೆ ಮಾತಾಡುತ್ತಿರುವಿಯಲ್ಲ…? ವಿ ಆರ್ ನಾಟ್ ಲಿವಿಂಗ್ ಇನ್ ನೈಂಟೀನ್ತ್ ಆರ್ ಟೆಂಟೀಯತ್ ಸೆಂಚಿರಿ. ಇದು ಟ್ವೆಂಟಿ ಫಸ್ಟ್ ಸೆಂಚುರಿ ಕಣೋ. ಧಿಸ್ ಈಜ್ ದಿ ಆರ್ಡರ್ ಆಫ್ ದಿ ಡೇ. ಆಫ್ಟರ್ ಆಲ್ ದಿ ಸೆಕ್ಸ್ ಈಜ್ ಎ ಬಯೋಲಾಜಿಕಲ್ ಇನ್ಸಿಂಕ್ಟ್ ವಿಚ್ ಕ್ಯಾನ್ ಬಿ ಸ್ಯಾಟಿಸ್‍ಫೈಡ್ ವಿಥ್ ಎನಿ ಬಡೀ. ಟೂ ಮಚ್ ಇಂಪಾರ್ಟನ್ಸ್ ಶುಡ್ ನಾಟ್ ಬಿ ಗಿವನ್ ಟು ವರ್ಜಿನಿಟಿ. ಇತ್ತೀಚಿನ ವರ್ಷಗಳಲ್ಲಿ ವರ್ಜಿನಿಟಿ ಅನ್ನೋ ಶಬ್ದ ಅರ್ಥವನ್ನೇ ಕಳೆದುಕೊಳ್ಳತೊಡಗಿದೆ ಅಂತ ನನ್ನ ಅಭಿಪ್ರಾಯ. ಸ್ಕಿನ್ ಟು ಸ್ಕಿನ್ ಹ್ಯಾಸ್ ನೋ ಸಿನ್ ಅಂತ ಹಳಬರೇ ಹೇಳಿದ್ದಾರಲ್ಲ…? ಆದಿ ಮಾನವನ ಕಾಲದಲ್ಲಿ ಎವೆರಿಥಿಂಗ್ ವಾಸ್ ಓಪನ್. ಬಟ್ಟೆ-ಬರೆಗಳಿರಲಿಲ್ಲ. ಮನೆ-ಮಠಗಳಿರಲಿಲ್ಲ. ಎಲ್ಲವೂ ಖುಲ್ಲಂ, ಖುಲ್ಲಾ! ಇತರ ಪ್ರಾಣಿ-ಪಕ್ಷಿಗಳಂತೆ ರತಿಕ್ರೀಡೆ ಅನ್ನೋ ಮಾನವ ಸಹಜ ದೈಹಿಕ ಕಾಮನೆಯ ಕ್ರಿಯೆ ಸ್ವಚ್ಛಂದವಾಗಿ ಎಲ್ಲೆಂದರಲ್ಲಿ ನಿರಾಯಾಸವಾಗಿ ನಡೆಯುತ್ತಿತ್ತು. ಇಷ್ಟ ಬಂದವರ ಜೊತೆಗೆ ಇಷ್ಟವಾದ ಪ್ರೀತಿಯ ಆಟ ನಡೆಯುತ್ತಿತ್ತು. ಸೃಷ್ಟಿಯ ಸಹಜ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಲಾರದವರು ಸಮರ್ಥರ ಮುಂದೆ ತಿಣುಕಾಡಿರಬೇಕು. ಅದಕ್ಕೇ ಮುಂದಿನ ದಿನಗಳಲ್ಲಿ ಒಂದಿಷ್ಟು ಕಟ್ಟುಪಾಡುಗಳನ್ನು ಹೇರಿಕೊಂಡಿರಬೇಕು. ನೈತಿಕತೆ, ಪಾವಿತ್ರ್ಯತೆ ಅನ್ನೋ ಪರಿಕಲ್ಪನೆ ಜನ್ಮತಳೆದಿರಬೇಕು.
ನಾಗರೀಕತೆ ಬೆಳೆದಂತೆ ಮನುಷ್ಯ ಒಂದಿಷ್ಟು ನಾಜೂಕಾದ. ಬಟ್ಟೆ-ಬರೆಗಳು ಬಂದವು. ಏಕಾಂತದ ವಾಸಕ್ಕೆ ವಸತಿಯ ಪರಿಕಲ್ಪನೆ ಬಂದಿತು. ತಾನು, ತನ್ನವರು ಎಂಬ ವಿಚಾರದ ಗೋಡೆಗಳನ್ನು ನಿರ್ಮಿಸಿಕೊಂಡ. ಸ್ವಚ್ಛಂದ ಸರಸಕ್ಕೆ ತೆರೆಬಿತ್ತು. ಆದರೂ ತನ್ನಿಷ್ಟದವರು ತನಗೆ ದಕ್ಕದಾದಾಗ ಅವರೊಂದಿಗೆ ಕದ್ದುಮುಚ್ಚಿ ಸಂಬಂಧವಿಟ್ಟುಕೊಂಡು ಬಂದ. ಆಗ ನೈತಿಕತೆ, ಅನೈತಿಕತೆಗಳ ಮಧ್ಯೆ ಗೆರೆಗಳು ಮೂಡಿದವು. ಬಲಾಢ್ಯನಾದವನು ಎಲ್ಲವನ್ನೂ ದಕ್ಕಿಸಿಕೊಂಡ. ಅಶಕ್ತನು ನರಳಿದ. ಸಂಸ್ಕøತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಹುಟ್ಟು ಹಾಕಿದ. ಪಾಶ್ಚಾತ್ಯ ದೇಶಗಳಲ್ಲಿ ನೆಲೆ ಕಂಡುಕೊಂಡ ಮನುಷ್ಯ ಒಂದಿಷ್ಟು ಫ್ರೀಸ್ಟೈಲಿನಲ್ಲಿ ಜೀವನ ಮಾಡತೊಡಗಿದ. ಜಾಗತೀಕರದ ಪ್ರಭಾವದಿಂದ ಜಗತ್ತಿನ ಬಹುತೇಕ ಜನರು ಪಾಶ್ಚಿಮಾತ್ಯ ದೇಶದವರ ರೀತಿ-ನೀತಿಗಳನ್ನು ಅನುಸರಿಸಲು ಮುಂದಾಗಿದ್ದಾರೆ. `ನಮ್ಮದು ಋಷಿ ಮುನಿಗಳ ಬೀಡು; ನಮ್ಮ ಸನಾತನ ಧರ್ಮ ಶ್ರೇಷ್ಠವಾದದ್ದು; ನಮ್ಮ ಸಂಸ್ಕೃತಿ ಮೇಲು’ ಎಂದು ಹೇಳುವ ನಮ್ಮವರು ಪಾಶ್ಚಾತ್ಯರ ನಡೆಯನ್ನು ಅನುಕರಿಸುವುದರಲ್ಲಿ ಮುಂಚೂಣಿಯಲ್ಲೇ ಇದ್ದಾರೆ.
ಆಶೀರ್ವಾದ್, ನಾವೇನು ಇಂಡಿಯಾದಲ್ಲಿ ಇಲ್ಲವಲ್ಲ…? ಇಂಡಿಯಾದಲ್ಲಿ, ಸಂಸ್ಕೃತಿ, ಸಂಸ್ಕಾರ, ನೈತಿಕತೆ ಅದೂ ಇದೂ ಅಂತ ಸುಮ್ಮಸುಮ್ಮನೇ ಬೊಬ್ಬೆ ಹೊಡೆಯುತ್ತಾ ಗಪ್‍ಚಿಪ್ಪಾಗಿ ಕಳ್ಳದಾರಿಯಲ್ಲಿ ಹಿಂದಿನ ಬಾಗಿಲಿನಿಂದ ಸೆಕ್ಸ್ ನ್ನು ಬಾಚಿಕೊಳ್ಳುತ್ತಾ ತಾವು ಪಠಿಸುವ ಆದರ್ಶಗಳೆಲ್ಲವನ್ನೂ ಬದಿಗಿಕ್ಕುತ್ತಿದ್ದಾರೆ. ಕಟ್ಟುಪಾಡುಗಳನ್ನು ಜಾರಿಯಲ್ಲಿ ತಂದವರೇ ಅವುಗಳ ಪಾಲನೆ ಮಾಡದಿರುವುದು ತುಂಬಾ ವಿಷಾದನೀಯ.” ಹೃಷಿತಾ ಆದಿ ಮಾನವನ ಕಾಲ, ಸ್ವಚ್ಛಂದ ಸೆಕ್ಸ್, ಭಾರತೀಯರ ಪೊಳ್ಳು ಮಡಿವಂತಿಕೆ, ವರ್ಜಿನಿಟಿ, ಟ್ವೆಂಟಿಫಸ್ಟ್ ಸೆಂಚುರಿ, ಪಾಶ್ಚಿಮಾತ್ಯ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಅದೂ ಇದೂ ಅಂತ ತುಂಬಾ ಉದ್ದುದ್ದಾಗಿ ಮಾತಾಡಿದ್ದಳು.
“ಹೃಷಿತಾ, ಇದೆಲ್ಲ ಈಗ್ಯಾಕೆ…?” ಗಲಿಬಿಲಿಯಲ್ಲಿ ಪ್ರಶ್ನಿಸಿದ ಆಶೀರ್ವಾದ್.
“ಆಶೀರ್ವಾದ್, ನಿನಗೆ ನಮ್ಮ ಫಸ್ಟ್ ನೈಟ್ ದಿನದ ಸರಸ ಸಲ್ಲಾಪದ ಕ್ಷಣಗಳು ನೆನಪಿರಬಹುದು. ನಮ್ಮ ಮೊದಲ ಸಮಾಗಮದ ನಂತರ ನಾನು ವರ್ಜಿನ್ ಆಗಿರಲಿಲ್ಲ ಎಂದು ನಿನಗೆ ಮನದಟ್ಟಾಗಿರಬಹುದು ಅಂತ ನಾನು ಭಾವಿಸಿದ್ದೆ. ಏಕೆಂದರೆ ರಕ್ತದ ಕಲೆಗಳಿರಲಿಲ್ಲ ನಮ್ಮ ಹಾಸಿಗೆ ಮೇಲು ಹೊದಿಕೆಯಲ್ಲಿ…” ಹೃಷಿತಾ ಯಾವುದೇ ಅಂಜಿಕೆ, ಅಳುಕು ಇಲ್ಲದೇ ಮಾತಾಡಿದ್ದಳು. ಯಾವ ತಪ್ಪಿತಸ್ಥ ಭಾವನೆಯೂ ಇರಲಿಲ್ಲ ಅವಳ ಮಾತು ಮತ್ತು ಮುಖಚರ್ಯೆಯಲ್ಲಿ.
“ಹೃಷಿತಾ, ನಾನಷ್ಟು ಸಂಕುಚಿತ ಮನೋಭಾವದವನು ಅಲ್ಲ. ಆ ವಿಷಯದ ಬಗ್ಗೆ ನನಗೆ ಅನುಮಾನ ಬಂದಿತ್ತಾದರೂ ಬಾಯಿಬಿಟ್ಟು ಕೇಳಲಿಲ್ಲ. ನಿನ್ನನ್ನು ಪ್ರಶ್ನಿಸಲು ಮುಂದಾಗಲಿಲ್ಲ. ಆ ಸಮಯದಲ್ಲಿ ನಿನ್ನನ್ನು ಮುಜುಗರಕ್ಕೀಡೂ ಮಾಡಲಿಲ್ಲ. ಏಕೆಂದರೆ ಇತ್ತೀಚಿನ ದಿನಮಾನಗಳಲ್ಲಿ ಹುಡುಗಿಯರು ಪ್ರೌಢಶಾಲೆ, ಕಾಲೇಜು ಮಟ್ಟದಲ್ಲಿ ಆಟ-ಪಾಟಗಳಲ್ಲಿ ಭಾಗವಹಿಸುವುದು ಸಾಮಾನ್ಯವೇ. ಆಟ-ಪಾಟಗಳಲ್ಲಿ ತೊಡಗಿರುವಾಗ ಯಾವಾಗಲಾದರೂ ಕನ್ಯಾಪೊರೆಗೆ ಧಕ್ಕೆಯಾಗಬಹುದು ಎಂದು ತಜ್ಞರು ಹೇಳುವ ಮಾತು ನನಗೆ ನೆನಪಿತ್ತು. ಹಾಗೇ ಆಗಿರಬಹುದು ಎಂದಂದುಕೊಂಡು ನಾನು ಸುಮ್ಮನಾದೆ ಅಷ್ಟೇ.” ಆಶೀರ್ವಾದನ ಧ್ವನಿಯಲ್ಲಿ ಸತ್ವವಿರಲಿಲ್ಲ.
****
ಹಿಮ್ಮುಕವಾಗಿ ಚಲಿಸಲು ಮುಂದಾದ ಹೃಷಿತಾಳ ಮನಸ್ಸಿನಲ್ಲಿ ನೆನಪಿನ ಅಲೆಗಳ ಮಹಾಪೂರ ಭೋರ್ಗರೆಯತೊಡಗಿತು.
ಹೃಷಿತಾ ಹೆಸರಾಂತ ಗ್ರ್ಯಾನೈಟ್ ಉದ್ಯಮಿ, ಆಗರ್ಭ ಶ್ರೀಮಂತ ಚಂದ್ರಮೌಳಿಯವರ ಮುದ್ದಿನ ಮಗಳು. ತಾಯಿ ಕಾತ್ಯಾಯಿನಿ ಚಂದ್ರಮೌಳಿಯವರ ಮನೆ, ಮನದೊಡತಿ. ಚಂದ್ರಮೌಳಿ-ಕಾತ್ಯಾಯಿನಿಯವರ ಸುಮಧುರ ದಾಂಪತ್ಯಕ್ಕೆ ಜನಿಸಿದವರು ಮೂವರು ಮಕ್ಕಳು. ಮೊದಲನೆಯ ಹೆಣ್ಣು ಮಗಳು ಡಾ.ಇಂದ್ರವಲ್ಲಿ ಸ್ತ್ರೀರೋಗ ತಜ್ಞಳು. ಡಾ.ಗೌತಮ್ ಅವರ ಕೈಹಿಡಿದು ಸುಂದರ ಸಂಸಾರವನ್ನು ಕಟ್ಟಿಕೊಂಡಿದ್ದಾಳೆ. ಎರಡನೆಯವ ಶಿಶಿರ ಬಿಇ ಮುಗಿಸಿಕೊಂಡು ತಂದೆಯ ಗ್ರ್ಯಾನೈಟ್ ವ್ಯವಹಾರದ ಜವಾಬ್ದಾರಿ ಹೊತ್ತಿದ್ದಾನೆ. ಮೂರನೆಯವಳೇ ಹೃಷಿತಾ. ಹೃಷಿತಾಳೂ ಬಿಇ ಪದವೀಧರೆ. ಮೊದಲಿನಿಂದಲೂ ತುಂಬಾ ಹೈಫೈ ಹುಡುಗಿ ಹೃಷಿತಾ. ತುಂಬಾ ಮಾಡ್ ಮಾಡ್. ಓದಿನಲ್ಲೂ ಚೂಟಿ, ಫ್ಯಾಷನ್‍ದಲ್ಲೂ ಚೂಟಿ. ಬೆಂಗಳೂರಿನ ಹೆಸರಾಂತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅವಳಿಗೆ ಬಿಇಗೆ ಸೀಟ್ ಸಿಕ್ಕಿತ್ತು. ಹುಟ್ಟಿದೂರಿನಿಂದ ಸುಮಾರು ಐದು ನೂರು ಕಿಮೀ ದೂರ ಬೆಂಗಳೂರು. ರೇಲ್ವೆ ಸಂಪರ್ಕವಿಲ್ಲದ ಊರು. ಬಸ್ಸಲ್ಲೇ ಅವಳ ಪ್ರಯಾಣ. ಎರಡು ಸ್ಲೀಪರ್ ಕೋಚ್ ಬಸ್ಸುಗಳಿದ್ದವು. ರಾತ್ರಿ ಊಟಮಾಡಿ ಬಸ್ಸು ಏರಿದರೆ ಬೆಳಿಗ್ಗೆ ಬೆಂಗಳೂರಿನಲ್ಲಿ ಇರುತ್ತಿದ್ದಳು. ಹಾಗೇ ರಾತ್ರಿ ಬೆಂಗಳೂರಿನಲ್ಲಿ ಬಸ್ಸು ಹತ್ತಿದರೆ ಬೆಳಿಗ್ಗೆ ಊರಲ್ಲಿ ಇರುತ್ತಿದ್ದಳು. ವಸತಿ ಬೆಂಗಳೂರಿನ ಕಾಲೇಜಿಗೆ ಸಮೀಪದ ಹೈಫೈ ಪಿಜಿಯಲ್ಲಿ. ಪ್ರೈವೆಸಿ ಇರಲಿ ಎಂದು ಸಿಂಗಲ್ ರೂಮನ್ನೇ ತೆಗೆದುಕೊಂಡಿದ್ದಳು. ತುಂಬಾ ಫ್ಯಾಷನೆಬಲ್ ಹುಡುಗಿಯಾಗಿದ್ದ ಹೃಷಿತಾಳಿಗೆ ಮಾದಕ ಬೆಂಗಳೂರು ಕುಮ್ಮಕ್ಕು ನೀಡಿತು. ದುಡ್ಡಿಗೇನು ಬರವಿರಲಿಲ್ಲ. ಕೇಳಿದಷ್ಟು ದುಡ್ಡನ್ನು ಅಪ್ಪ ಅವಳ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದ. ಉಡುಗೆ-ತೊಡುಗೆ, ಮೇಕಪ್‍ಗಳಲ್ಲಿ ತನ್ನ ಚೆಲುವನ್ನು ಬಿಂಬಿಸಿಕೊಳ್ಳತೊಡಗಿದಳು. ಮೊದಲೇ ಸೌಂದರ್ಯವತಿ. ಮೈಮನಗಳಲ್ಲಿ ಯೌವನದ ಹೂವುಗಳು ಅರಳಿ ಘಮಘಮಿಸಲು ಮುಂದಾಗಿದ್ದವು. ಅವಳ ರೂಪರಾಶಿ ಹುಡುಗರ ಚಂಚಲ ಚಿತ್ತಗಳಲ್ಲಿ ಕಚಗುಳಿ ಇಡುವಂತಿತ್ತು. ಮೂರನೇ ವರ್ಷದ ಬಿಇಗೆ ಬರುವಷ್ಟರಲ್ಲಿ ಹೃಷಿತಾ ಕಾಲೇಜಿನ ಯುವರಾಣಿ ಎಂದೆನಿಸಿಕೊಳ್ಳತೊಡಗಿದಳು. ಹೈಫೈ ಡ್ರೆಸ್‍ಗಳಲ್ಲಿ ಅವಳ ಚೆಲುವು ಮತ್ತಷ್ಟು ಒಡೆದು ತೋರತೊಡಗಿತ್ತು. ಟೈಟ್ಸ್‍ಗಳಲ್ಲಿ ಮಿಂಚುತ್ತಿದ್ದ ಅವಳ ದೇಹದ ಓರೆಕೋರೆಗಳಲ್ಲಿ ಪಡ್ಡೆ ಹುಡುಗರ ಕಣ್ಮನಗಳು ಹರಿದಾಡತೊಡಗಿದವು. ಯೌವನವೆನ್ನುವುದೇ ಹಾಗೆ ಅಲ್ಲವೇ…? ಮೈಮನಸ್ಸುಗಳಲ್ಲಿ ನೂರೆಂಟು ಕನಸುಗಳು ಕಟ್ಟುವ ಕಾಲ. ಹೂವುಗಳಂತೆ ಅರಳತೊಡಗುತ್ತವೆ ಯುವಕ, ಯುವತಿಯರ ಮುಖಗಳು. ಬಿಸಿಲಲ್ಲಿ ಬೆಂದ ಭೂಮಿ ಮೊದಲ ಮಳೆಗಾಗಿ ಹಾತೊರೆಯುವಂತೆ ಯುವಕರ ಹೃದಯಗಳು ಪ್ರೀತಿಯ ಮಳೆಗಾಗಿ ಹಾತೊರೆಯುವ ವಸಂತಕಾಲವದು.
ಹೃಷಿತಾ ಕಾಲೇಜ್, ಪಿಜಿ ಮತ್ತು ಸುತ್ತಮುತ್ತಲಿನ ಯುವ ಜನತೆಯ ಹಲ್-ಚಲ್ ಗಮನಿಸತೊಡಗಿದಳು. ಅವಳ ಕಾಲೇಜಿನಲ್ಲಿ ನಾರ್ಥೀ ಹುಡುಗ, ಹುಡುಗಿಯರೇ ಬಹಳ. ಬಹುತೇಕ ನಾರ್ಥೀ ಸಹಪಾಠಿಗಳು ಹುಡುಗರೊಂದಿಗೆ ತುಂಬಾ ಕ್ಲೋಜಾಗಿ ಮೂವಾಗುತ್ತಿದ್ದುದು ಅವಳ ಹರೆಯದ ಹೃದಯದಲ್ಲಿ ಕಚಗುಳಿ ಇಡತೊಡಗಿತು. ಎದೆಯಂಗಳದಲ್ಲಿ ಬಣ್ಣ ಬಣ್ಣದ ಕನಸುಗಳು ಮೇಳೈಸಿ ಕಳೆಗಟ್ಟತೊಡಗಿದವು. ರಜೆ ಮತ್ತು ವೀಕೆಂಡ್ ದಿನಗಳಲ್ಲಿ ಒಂದಿಷ್ಟು ಜನ ಹುಡುಗ-ಹುಡುಗಿಯರು ಜೊತೆಜೊತೆಯಾಗಿ ಎರಡು-ಮೂರು ದಿನಗಳವರೆಗೆ ಸೈಟ್ ಸೀಯಿಂಗ್, ರೆಸಾರ್ಟ ಸ್ಟೇ, ಟ್ರೆಕ್ಕಿಂಗ್ ಅದೂ ಇದೂ ಅಂತ ಹೊರಗಡೆಯೇ ಉಳಿದುಕೊಂಡು ಬರುತ್ತಿರುವುದು ಅವಳ ಗಮನಕ್ಕೆ ಬಂದಿತ್ತು. ಪಿಜಿಯಲ್ಲೂ ಕೆಲವೊಂದಿಷ್ಟು ಹುಡುಗಿಯರು ವೀಕೆಂಡ್‍ನಲ್ಲಿ ಹುಡುಗರೊಂದಿಗೆ ಸುತ್ತಾಡುವುದನ್ನು ಕಂಡ ಅವಳ ಹೃದಯವೂ ಹುಡುಗರ ಸಾಮಿಪ್ಯ, ಸಾನಿಧ್ಯ, ಸಖ್ಯವನ್ನು ಬಯಸತೊಡಗಿತ್ತು. ಅವಳ ಚೆಲುವು, ಚೆಲ್ಲುಚೆಲ್ಲುತನ, ಬಿಂದಾಸ್ ಲುಕ್‍ಗೆ ಮನಸೋತಿದ್ದ ಒಂದಿಷ್ಟು ಜನ ಹುಡುಗರು ಅವಳನ್ನು ಸುತ್ತುವರೆಯತೊಡಗಿದ್ದರು.
ಬಾಯ್ ಫ್ರೆಂಡ್ಸ್‍ಗಳ ಒಡನಾಟದಲ್ಲಿ ಖುಷಿ ಕಂಡುಕೊಳ್ಳತೊಡಗಿದರು. ಬಾಯ್ ಫ್ರೆಂಡ್ ಪ್ರೀತಮ್‍ಗೆ ಅವಳ ಅಂತರಂಗದ ಹಂಬಲ ಅರಿವಿಗೆ ಬಂದು ತುಂಬಾ ಹತ್ತಿರವಾದ. ಬೆಂಗಳೂರಿನವನೇ ಆಗಿದ್ದ ಪ್ರೀತಮ್ ಜೊತೆಗೆ ಹೃಷಿತಾ ಬೇಜಾನ್ ಸುತ್ತತೊಡಗಿದಳು. ಪ್ರೀತಮ್‍ನೂ ಆಗರ್ಭ ಶ್ರೀಮಂತರ ಮನೆತನದ ಹುಡುಗನೇ. ಅವನ ಅಪ್ಪನದು ಹೋಲ್ ಸೇಲ್ ಗಾರ್ಮೆಂಟ್ಸ್ ಬಿಜಿನೆಸ್ ಇತ್ತು. ಹೃಷಿತಾ ಅವನೆದೆಯಲ್ಲಿ ರಂಗುರಂಗಿನ ಭಾವನೆಗಳನ್ನು ಸೃಷ್ಟಿಸುತ್ತಿದ್ದಂತೆ ಬಣ್ಣ ಬಣ್ಣದ ಡ್ರೆಸ್‍ಗಳ ರಾಶಿಯನ್ನೇ ಅವಳಿಗೆ ಪ್ರಜೆಂಟ್ ಮಾಡತೊಡಗಿದ. ಲೆಗ್ಗಿನ್ಸ್, ಟೈಟ್ಸ್, ಜೀನ್ಸ್, ಟಾಪ್ಸ್, ಇನ್ನೂ ಹಲವಾರು ತರಹದ ಮಾಡ್ ಮಾಡ್ ಉಡುಪುಗಳನ್ನು ಅವಳಿಗೆ ಉಡುಗೊರೆಯಾಗಿ ಕೊಟ್ಟು ಅವಳ ಮನದಿಚ್ಛೆ ತಣಿಸಿ ಆ ಡ್ರೆಸ್‍ಗಳಲ್ಲಿನ ಅವಳ ಮಾದಕ ಚೆಲುವನ್ನು ಕಣ್ಮನಗಳಲ್ಲಿ ತುಂಬಿಕೊಂಡು ಆನಂದಿಸಿ ಆರಾಧಿಸತೊಡಗಿದ. ಅವನೊಂದಿಗೆ ಸುತ್ತುವುದೆಂದರೆ ಅವಳಿಗೆ ತುಂಬಾ ಇಷ್ಟ, ಅವಳೊಂದಿಗೆ ಸುತ್ತುವುದೆಂದರೆ ಅವನಿಗೆ ತುಂಬಾ ಖುಷಿ ನೀಡುತ್ತಿತ್ತು. ಇಬ್ಬರೂ ಕಾಲೇಜಿಗೆ ತಮ್ಮ ತಮ್ಮ ಕಾರುಗಳಲ್ಲಿ ಬರುತ್ತಿದ್ದರೂ ಅವನೊಂದಿಗೆ ಬೈಕ್‍ನಲ್ಲಿ ತಿರುಗಾಡುವುದೆಂದರೆ ತುಂಬಾ ಕ್ರೇಜ್ ಅವಳಿಗೆ. ಅವನ ನಡುಬಳಸಿ ಸುತ್ತುವುದು ಅವಳಿಗೆ ಮಿತಿಮೀರಿದ ಸಂತಸ ನೀಡುತ್ತಿತ್ತು. ಅವಳ ಬೋಲ್ಡ್‍ನೆಸ್‍ಗೆ ಅವನು ಸಂಪ್ರೀತನಾಗಿದ್ದ. ಮೊದಮೊದಲು ದಿನವಿಡೀ ಬೆಂಗಳೂರಿನಲ್ಲೇ ಸುತ್ತಾಡಿ ಸಂಜೆಗೆ ತಮ್ಮ ತಮ್ಮ ವಾಸಸ್ಥಳಕ್ಕೆ ಸೇರುತ್ತಿದ್ದವರು ಆತ್ಮೀಯತೆ ಬೆಳೆದಂತೆ ರಜೆಯ ದಿನಗಳಲ್ಲಿ ಔಟ್ ಆಫ್ ಬೆಂಗಳೂರು ಸಿಟಿ ಹೋಗಲು ಬಹಳ ದಿನಗಳೇನು ಬೇಕಾಗಲಿಲ್ಲ. ರೆಸಾರ್ಟ, ಸ್ಟೇ ಹೋಮ್‍ಗಳಲ್ಲಿ ವಸ್ತಿ ಹಾಕತೊಡಗಿದರು. ವಾರಾಂತ್ಯದ ರಜೆಯ ದಿನಗಳಲ್ಲಿ ಪ್ರೀತಮ್ ಮತ್ತು ಹೃಷಿತಾ ಅವರ ಸ್ಟೇ ಆಲ್ಮೋಸ್ಟ್ ಔಟ್ ಆಫ್ ಸಿಟಿ ಆಗಿರುತ್ತಿತ್ತು.
ಹೀಗೇ ಮೊದಲ ಸಲ ಬೆಂಗಳೂರಿನಿಂದ ಅವರು ಸುಂದರ ಮಡಿಕೇರಿಗೆ ಹೋಗಿದ್ದರು. ರೇಸಾರ್ಟವೊಂದರಲ್ಲಿ ವಾಸ್ತವ್ಯ ಹೂಡಿದರು. ರಾತ್ರಿ ಮೊದಲ ಸಮಾಗಮಕ್ಕೆ ಇಬ್ಬರ ಮೈಮನಗಳು ಹಾತೊರೆಯುತ್ತಿದ್ದುದಂತೂ ನಿಜವೇ. ಪ್ರೀತಮನಿಗಿಂತ ಮುಂಚೆಯೇ ಹೃಷಿತಾ ಅವನ ತೋಳ್ತೆಕ್ಕೆಯಲ್ಲಿ ಸೇರಿಕೊಂಡು ಬೆತ್ತಲಾಗಿದ್ದಳು. ಇಬ್ಬರ ದೇಹಗಳು ಬೆಸೆದುಕೊಳ್ಳುವ ಮುಂಚೆ, `ಹೃಷಿತಾ, ನೋ ಕಮಿಟ್‍ಮೆಂಟ್, ನೋ ರೆಸ್ಪಾನ್ಸಿಬಿಲಿಟಿ. ಪ್ರೀತಿ, ಪ್ರೇಮ, ಮದುವೆ ಅಂತ ಕನಸು ಕಾಣುವುದು ಬೇಡ. ನೋ ಸೆಂಟಿಮೆಂಟ್ಸ್. ಅವರ್ ಅಟ್ಯಾಚ್‍ಮೆಂಟ್, ಫ್ರೆಂಡ್ಸಿಪ್ ಆರ್ ಓನ್ಲಿ ಫಾರ್ ಎಂಜಾಯ್‍ಮೆಂಟ್… ಆರ್ ಯು ಪ್ರಿಪೇರ್ಡ್…’ ಎಂದು ಮೆಲ್ಲಗೇ ತೊದಲಿದ್ದ.
“ಪ್ರೀತಿ, ನೀನಾಡಿದ ಮಾತನ್ನು ನಾನೇ ಹೇಳಬೇಕೆಂದಿದ್ದೆ. ನೀನೇ ಹೇಳಿ ನನ್ನ ಕೆಲಸವನ್ನು ಹಗುರ ಮಾಡಿದಿ. ನಮ್ಮಿಬ್ಬರ ವಿಚಾರಧಾರೆ ಒಂದೇ. ಕಾಲೇಜ್ ಸ್ಟಡೀಜ್ ಮುಗಿಯುವವರೆಗೆ ಇಬ್ಬರೂ ಜಸ್ಟ್ ಲೈಫ್ ಎಂಜಾಯ್ ಮಾಡುತ್ತಿರೋಣ. ನಂಥಿಂಗ್ ಟು ವರಿ. ಲೈಫ್ ಇರೋದೇ ಎಂಜಾಯ್ ಮಾಡಲಿಕ್ಕೆ ಅಲ್ಲವೇ…? ಅದ್ಯಾಕೋ ಗೊತ್ತಿಲ್ಲ, ಸೆಕ್ಸ್‍ಗೆ ಮಡಿವಂತಿಕೆ ಬಹಳ ನಮ್ಮ ದೇಶದಲ್ಲಿ. ಮಡಿವಂತಿಕೆಯ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುವವರೇ ಕದ್ದುಮುಚ್ಚಿ ಸಕತ್ ಮಜಾ ಮಾಡುತ್ತಿರುತ್ತಾರೆ. `ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಎಂಬ ಮಾತು ನಮ್ಮ ಜನರಿಗೆ ಬಹಳಾನೇ ಅನ್ವಯವಾಗುತ್ತದೆ. ತೆರೆದ ತೋಳುಗಳಿಂದ ನಿನ್ನನ್ನು ಆಹ್ವಾನಿಸುತ್ತೇನೆ” ಎಂದೆನ್ನುತ್ತಾ ಹೃಷಿತಾ ಪ್ರೀತಮ್‍ನನ್ನು ತನ್ನ ನಳಿದೋಳುಗಳಲ್ಲಿ ಬಿಗಿದಪ್ಪಿಕೊಂಡು ಮೊದಲ ಚುಂಬನದ ಸವಿ ಹಂಚಿದ್ದಳು. ಹೃಷಿತಾ ಪ್ರೀತಮ್‍ನನ್ನು ಪ್ರೀತಿಯಿಂದ ಚುಟುಕಾಗಿ `ಪ್ರೀತಿ’ ಅಂತಾನೇ ಕರೆಯುತ್ತಿದ್ದಳು. ಅದು ಅವನಿಗೂ ಖುಷಿ ನೀಡುವ ಸಂಗತಿಯೇ.
“ಹೌ ಅಬೌಟ್ ಸೈಡ್ ಎಫೆಕ್ಸ್…?” ಅನುಮಾನಿಸುತ್ತಾ ಕೇಳಿದ ಪ್ರೀತಮ್.
“ಆಯ್ ಹ್ಯಾವ್ ಕಮ್ ಪ್ರಿಪೇರ್ಡ್ ಫಾರ್ ದೆಟ್…” ಎಂದೆನ್ನುತ್ತಾ ಹೃಷಿತಾ ಕಾಂಡೋಮ್ಸ್, ಪಿಲ್ಸ್‍ಗಳನ್ನು ಹೊರಗಿಟ್ಟಳು ತನ್ನ ಬ್ಯಾಗಿನಿಂದ.
“ಯ್ಯಾಜ್ ಎ ಪ್ರಿಕಾಶನರಿ ಮೆಸರ್, ನಾನೂ ಇವುಗಳನ್ನೇ ತಂದಿದ್ದೇನೆ. ಇರಲಿ, ಸಮಯವನ್ನೇಕೆ ವೇಸ್ಟ್ ಮಾಡುವುದು…? ವಿ ಶಾಲ್ ಎಂಜಾಯ್… ಎಂಜಾಯ್” ಎಂದೆನ್ನುತ್ತಾ ಪ್ರೀತಮ್ ಹೃಷಿತಾಳನ್ನು ಆವರಿಸಿದ್ದ. ಪ್ರೀತಮ್ ಭೋರ್ಗರೆಯುವ ನದಿಯಂತಾಗಿದ್ದ. ಹೃಷಿತಾ ಮೊದಲ ಮಳೆಗೆ ತಣಿದ ಭುವಿಯಂತಾಗಿದ್ದಳು. ಅವಳ ವರ್ಜಿನಿಟಿ ರಕ್ತದ ರೂಪದಲ್ಲಿ ಬಸಿದು ಹೋಗಿತ್ತು. ಇಬ್ಬರ ತುಂಟಾಟಕ್ಕೆ ಮಿತಿ ಇರಲಿಲ್ಲ. ಇಬ್ಬರಿಗೂ ಮೊದಲ ಅನುಭವ. ಹೃಷಿತಾಳ ತುಂಟಾಟ ಪ್ರೀತಮ್‍ನಿಗೆ ತುಂಬಾ ಇಷ್ಟವಾಗಿತ್ತು. ಹೃಷಿತಾಳ ಸಂತೋಷಕ್ಕೆ ಪಾರವೇ ಇರಲಿಲ್ಲ. `ಅರೇ, ಎಷ್ಟೊಂದು ದಿನಗಳಿಂದ ಪ್ರೀತಿಯ ಸೆಲೆಯ ಈ ಸುಖದ ಪರಾಕಾಷ್ಠೆಯಿಂದ ನಾವು ವಂಚಿತರಾದೆವಲ್ಲ…?’ ಎಂಬ ವಿಚಾರ ಇಬ್ಬರ ಮನಗಳಲ್ಲಿ ಸುಳಿದು ಹೋಗಿತ್ತು. ಮುಂದಿನ ದಿನಗಳಲ್ಲಿ ಅವರ ಸಾಂಗತ್ಯಕ್ಕೆ ಅಡೆತಡೆ, ಮಿತಿ ಎಂಬುದೇ ಇರಲಿಲ್ಲ. ಸಮಯ ಕಲ್ಪಿಸಿಕೊಂಡು ಇಬ್ಬರೂ ಗಂಡ-ಹೆಂಡತಿಯರಂತೆ ಗೋವಾ, ಜೋಗ ಜಲಪಾತ, ಉಂಚಳ್ಳಿ ಜಲಪಾತ, ಮೈಸೂರು ದಸರಾ, ಅದೂ ಇದೂ ಅಂತ ತಿರುಗಾಡಿದ್ದೇ ತಿರುಗಾಡಿದ್ದು. ತಿರುಗಾಟಕ್ಕೆ ಎಣೆಯೇ ಇರಲಿಲ್ಲ. ಪ್ರೀತಮ್ ಮನೆಯಲ್ಲಿ ಏನೇನೋ ಸಮಜಾಯಿಸಿ ಹೇಳುತ್ತಿದ್ದ. ಭೃಂಗದ ಬೆನ್ನೇರಿ ಹೊರಟಿದ್ದ ಹೃಷಿತಾಳು ಯೌವನದ ಅಮಲಿನಲ್ಲಿ ತೇಲಾಡಿ ಸಂತಸ ಅನುಭವಿಸುತ್ತಿದ್ದಳು. ಜೀವನ ಇರುವುದೇ ಈ ರೀತಿ ಖುಷಿ ಅನುಭವಿಸುವುದಕ್ಕೆ ಎಂಬುದು ಅಂಬೋಣ. ಪಿಜಿಯಲ್ಲಿ ಒಂಟಿಯಾಗಿದ್ದಾಗ ಪ್ರೀತಮ್ ಅವಳನ್ನು ತುಂಬಾ ಕಾಡುತ್ತಿದ್ದ. ಬಿಇ ಮುಗಿದಾಗ ಪರಸ್ಪರ ಅಗಲುವ ಗಳಿಗೆ ಬಂದಾಗ, `ಯಾಕಾದರೂ ಪದವಿ ಮುಗಿಯಿತು…?’ ಎಂಬ ಹಳಹಳಿ ಇಬ್ಬರ ಮನದಲ್ಲೂ ಮನೆಮಾಡಿತ್ತು.
****
ಆಶೀರ್ವಾದ್ ಸಾಧಾರಣ ಮಧ್ಯಮ ವರ್ಗದ ಮನೆತನದಿಂದ ಬಂದವನು. ತಂದೆ ಸದಾಶಿವಪ್ಪ ಮತ್ತು ತಾಯಿ ಸುಶೀಲಾದೇವಿ ಕೃಷಿಯ ಜೊತೆಗೆ ಸಣ್ಣ ಪ್ರಮಾಣದ ಕಿರಾಣಿ ವ್ಯಾಪಾರಸ್ಥರೂ ಹೌದು. ಕೃಷಿ ಭೂಮೀನೂ ಅಷ್ಟೇನು ಹೆಚ್ಚಿಗಿರಲಿಲ್ಲ. ಬರೀ ಹತ್ತೆಕರೆ ಅಷ್ಟೇ. ಅದರಲ್ಲಿ ನಾಲ್ಕೆಕರೆ ನೀರಾವರಿಗೆ ಒಳಪಟ್ಟಿತ್ತು. ಸದಾಶಿವಪ್ಪ-ಸುಶೀಲಾದೇವಿ ದಂಪತಿಗಳಿಗೆ ಬರೋಬ್ಬರಿ ಅರ್ಧ ಡಜನ್ ಮಕ್ಕಳು ಬೇರೆ. ಆರು ಜನರಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಆಶೀರ್ವಾದನೇ ಕೊನೆಯ ಮಗ. ಆಶೀರ್ವಾದನ ಬಿಇ ಮುಗಿಯುವಷ್ಟರಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳ ಮದುವೆ ಹೇಗೋ ಮುಗಿದು ಹೋಗಿತ್ತು. ಹೃಷಿತಾಳ ಪ್ರೋಪೋಜಲ್ ಬಂದಾಗ, `ಅವರೋ ಆಗರ್ಭ ಶ್ರೀಮಂತರು. ನಾವೋ ಸಾಧಾರಣ ಮಧ್ಯಮ ವರ್ಗದವರು. ನಮಗೂ, ಅವರಿಗೂ ಆಸ್ತಿ, ಅಂತಸ್ತಿನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹುಡುಗಿ ನಮ್ಮ ಜೀವನ ಶೈಲಿಗೆ ಹೊಂದಿಕೊಳ್ಳುವುದು ಕಷ್ಟವೇ. ಈ ಪ್ರಸ್ತಾವ ಬೇಡ’ ಎಂದು ಮನದಿಂಗಿತ ವ್ಯಕ್ತಪಡಿಸಿದ್ದ ಹೆತ್ತವರ ಜೊತೆಗೆ. ಹೆತ್ತವರೋ ಸಂಬಂಧವನ್ನು ಬೆಳೆಸಲು ತುದಿಗಾಲಲ್ಲಿ ನಿಂತಿದ್ದರು. ಹೃಷಿತಾ ಸಹ ಮೊದಮೊದಲು ತನ್ನ ಹೆತ್ತವರು ಮುಂದಿಟ್ಟಿದ್ದ ಪ್ರಸ್ತಾವವನ್ನು ತಿರಸ್ಕರಿಸಲು ಮುಂದಾಗಿದ್ದಳಾದರೂ ಕೊನೆಗೆ ಆಶೀರ್ವಾದನ ಅಪ್ರತಿಮ ಚೆಲುವು, ವಿದ್ಯಾರ್ಹತೆ, ನಯವಿನಯಗಳಿಗೆ ಮನಸೋತಿದ್ದಳು. ಅಷ್ಟೊತ್ತಿಗೆ ಆಶೀರ್ವಾದ್ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಯುಎಸ್‍ದಲ್ಲಿ ಕೆಲಸ ಮಾಡುತ್ತಿದ್ದ. ಉದ್ಯೋಗದ ಜೊತೆಗೆ ಎಂಎಸ್‍ನ್ನೂ ಬೇರೆ ಮಾಡಿಕೊಂಡಿದ್ದ. ಹೃಷಿತಾಳೂ ಎಂಎಸ್ ಮುಗಿಸಿಕೊಂಡು ಆಶೀರ್ವಾದ್ ಕೆಲಸ ಮಾಡುವ ಸ್ಥಳದಲ್ಲೇ ಬೇರೊಂದು ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸಕ್ಕೂ ಸೇರಿಕೊಂಡಿದ್ದಳು. `ಸದ್ಯ ಇಬ್ಬರೂ ಒಂದೇ ಕಡೆಗೆ ಕೆಲಸ ಮಾಡುತ್ತಿರುವುದು ಅನುಕೂಲವೇ. ಇಬ್ಬರೂ ಕೈತುಂಬಾ ಹಣ ಸಂಪಾದಿಸುವಾಗ ದುಡ್ಡಿಗೇನು ಕೊರತೆ…? ಮೋರೋವರ್ ಆಶೀರ್ವಾದ್ ಈಜ್ ಎ ಹ್ಯಾಂಡ್ಸಮ್ ಗೈ’ ಅಂತ ಅಂದುಕೊಂಡಳು. ಸಂಬಂಧ ಗಟ್ಟಿಯಾಯಿತು. ಹೃಷಿತಾಳ ಹೆತ್ತವರೇ ಆಶೀರ್ವಾದ್-ಹೃಷಿತಾರ ಮದುವೆಯನ್ನು ವಿಜೃಂಭಣೆಯಿಂದ ಮಾಡಿ ಮುಗಿಸಿದ್ದರು.
ಆಶೀರ್ವಾದನಿಗೆ ಒಳ್ಳೊಳ್ಳೆಯ ಬಟ್ಟೆ-ಬರೆ, ಸೂಟ್ಸ್ ಕೊಡಿಸಿದರು. ಬೇಡವೆಂದರೂ ಅವನ ಮೈಮೇಲೆ ಸಾಕಷ್ಟು ಬಂಗಾರದೊಡವೆಗಳನ್ನು ಹೇರಿದರು. `ನಮ್ಮ ಸಂತೋಷಕ್ಕಾಗಿ ಕೊಡುತ್ತಿದ್ದೇವೆ’ ಎಂದು ಸಂತಸದಿಂದ ಬೀಗಿದರು. ಹೃಷಿತಾ ಆಶೀರ್ವಾದನ ಮನ, ಮನೆ ತುಂಬಿದಳು. ಇಬ್ಬರೂ ಯುಎಸ್‍ದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಮದುವೆಯಾದ ತುಸು ದಿನಗಳಲ್ಲೇ ಯುಎಸ್‍ಗೆ ಹಾರಿದರು. ಹೊಸ ಹೊಸ ಕನಸುಗಳರಮನೆಯಲ್ಲಿ ನವಜೋಡಿಯ ದಾಂಪತ್ಯ ಜೀವನ ಆರಂಭವಾಗಿತ್ತು.
****
ಬಿಇಯಲ್ಲಿ ಹೃಷಿತಾ ಕಾಲೇಜಿಗೆ ಸೆಕೆಂಡ್ ಟಾಪರ್ ಆಗಿ ಹೊರಹೊಮ್ಮಿದ್ದಳು. ಅವಳ ಲವ್ಲೀ ಬಾಯ್ ಪ್ರೀತಮ್ ಜೊತೆಗೆ ಸಕತ್ತಾಗಿ ಲೈಫ್ ಎಂಜಾಯ್ ಮಾಡುತ್ತಿದ್ದರೂ ಅಭ್ಯಾಸದಲ್ಲೂ ಟಾಪ್. ಮೊದಲಿನಿಂದಲೂ ಬ್ರಿಲ್ಲಿಯಂಟ್ ಹುಡುಗೀನೆ. ಬಿಇ ಪರೀಕ್ಷಾ ಪರಿಣಾಮದಿಂದ ಹೃಷಿತಾ ತುಂಬಾ ಚೇತೋಹಾರಿಯಾಗಿದ್ದಳು. ಬಿಇ ಮುಗಿಯುತ್ತಲೇ ಹೃಷಿತಾ ಎಂಎಸ್ ಮಾಡಲು ಯುಎಸ್‍ಗೆ ಹಾರಿದ್ದಳು. ದುಡ್ಡಿಗೇನೂ ಬರವಿರಲಿಲ್ಲವಲ್ಲ ಅವಳಪ್ಪನಿಗೆ? ಅವಳ ಬೇಡಿಕೆಗೆ ಚಕಾರವೆತ್ತದೇ ಅವಳಪ್ಪ ಅಸ್ತು ಎಂದಿದ್ದ. ಯುಎಸ್‍ದಲ್ಲೂ ಅವಳ ಪ್ರಣಯಗಾಥೆ ಯಾವುದೇ ಎಗ್ಗಿಲ್ಲದೇ ಶುರುವಾಗಿತ್ತು. ಮೊದಲೇ ಫ್ರೀಸ್ಟೈಲ್‍ನಲ್ಲಿ ಜೀವಿಸುವ ಜನ ಅಲ್ಲಿಯವರು. ಇಂಡಿಯಾದ ರಸಪೂರಿ ಮಾವಿನ ಹಣ್ಣಿನಂಥಹ ಬೆಡಗಿ ತಾನಾಗಿ ಒಲಿದು ಬಂದಾಗ ಬೇಡವೆನ್ನಲು ಸಾಧ್ಯವೇ…? ಅವಳ ಚೆಲ್ಲುಚೆಲ್ಲುತನಕ್ಕೆ ಸಹಪಾಠಿ ಲೆವಿಸ್ ಮಾರುಹೋದ, ಮನಸೋತ. ಹೃಷಿತಾ ಲೆವಿಸ್‍ನನ್ನು ತನ್ನ ನಳಿದೋಳುಗಳಲ್ಲಿ ಸೇರಿಸಿಕೊಂಡು ಸುಖಿಸತೊಡಗಿದಳು. ಕೆಲವೊಂದು ಸಾರೆ ಹೃಷಿತಾ ಯೋಚಿಸುತ್ತಿದ್ದಳು. `ನನಗ್ಯಾಕೆ ಈ ಥರಹದ ಕಾಮಾಸಕ್ತಿ…? ನಾನೊಬ್ಬಳು ನಿಂಫೋಮೇನಿಯಾಳೇ…? ಈ ತರಹದ ಜೀವನವೇಕೆ ನನಗೆ ಖುಷಿಕೊಡುತ್ತಿದೆ…? ಖುಷಿಖುಷಿಯಿಂದ ಇರುವುದೇ ಸಾರ್ಥಕ ಜೀವನವಲ್ಲವೇ…?’ ಎಂದು ಮಥಿಸಿಕೊಳ್ಳುತ್ತಿದ್ದರೂ ಕೊನೆಗೆ ತನ್ನದೇ ಸರಿ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಳು. ಹೃಷಿತಾ ಎಂಎಸ್ ಮುಗಿಸುವಷ್ಟರಲ್ಲಿ ಒಳ್ಳೇ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಅಷ್ಟರಲ್ಲಿ ಆಶೀರ್ವಾದನೊಂದಿಗೆ ಮದುವೆಯೂ ಆಯಿತು. ಮದುವೆಯಾದ ಎರಡನೇ ವರ್ಷವೇ ಹೃಷಿತಾ ಮುದ್ದಾದ ಹೆಣ್ಣು ಮಗು ಸುನೈನಾಳಿಗೆ ತಾಯಿಯಾಗಿದ್ದಳು.
ಸುನೈನಾಳಿಗೆ ಆಗಷ್ಟೇ ಆರು ವರ್ಷ ತುಂಬಿದ್ದವು. ಆಶೀರ್ವಾದನ ತಂದೆ ಇಹಲೋಕಯಾತ್ರೆ ಮುಗಿಸಿದ್ದರು. ತಂದೆಯ ಅಂತಿಮ ದರ್ಶನ ಪಡೆದುಕೊಂಡು ಬರಲು ಆಶೀರ್ವಾದ ಒಬ್ಬನೇ ಊರಿಗೆ ಹೊರಟ. ಆಶೀರ್ವಾದನ ಜೊತೆಗೆ ಹೋಗಿ ಮಾವನ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹೃಷಿತಾ ಇಚ್ಛಿಸಲಿಲ್ಲ. `ಮಗುವನ್ನು ಕಟ್ಟಿಕೊಂಡು ಪ್ರಯಾಣಿಸಲು ತೊಂದರೆಯಾಗುತ್ತೆ. ಆಶೀರ್ವಾದ್, ನೀನೊಬ್ಬನೇ ಹೋಗಿ ಬಾ’ ಎಂದಳು ಹೃಷಿತಾ. ಇಪ್ಪತ್ತು ದಿನಗಳ ರಜೆಯನ್ನು ಹಾಕಿಕೊಂಡ ಆಶೀರ್ವಾದ್.
ಹೃಷಿತಾಳಿಗೆ ಪರಪುರುಷನ ಮೇಲಿನ ಆಕರ್ಷಣೆ ಕಡಿಮೆಯಾಗಲಿಲ್ಲ. ಆಶೀರ್ವಾದ್ ಊರಿಗೆ ಹೋದ ಸಮಯದ ದುರ್ಲಾಭವನ್ನು ಪಡೆದ ಹೃಷಿತಾ ಸಹೋದ್ಯೋಗಿ ಲಿವಿಂಗ್ ಸ್ಟೋನ್‍ನನ್ನು ತೆಕ್ಕೆಗೆ ಹಾಕಿಕೊಂಡಳು. ಲಿವಿಂಗ್‍ಸ್ಟೋನ್ ಹೃಷಿತಾಳಿಗಿಂತ ನಾಲ್ಕು ವರ್ಷ ಚಿಕ್ಕವನು. ಅವನ ಸಾಂಗತ್ಯದಲ್ಲಿ ಸಂಭ್ರಮಿಸತೊಡಗಿದಳು ಹೃಷಿತಾ.
“ಹೃಷಿತಾ, ನಿನ್ನ ಸಾಂಗತ್ಯದ ಸವಿ ನಿಜವಾಗಿಯೂ ಅವಿಸ್ಮರಣೀಯ” ಎಂದೆನ್ನುತ್ತಾ ಲಿವಿಂಗ್ಸ್ಟೋನ್ ಹೃಷಿತಾಳ ಸಂಭ್ರಮಕ್ಕೆ ಕಾರಣವಾಗಿದ್ದ.
“ನಿನ್ನ ಸಾಂಗತ್ಯದಲ್ಲಿ ನಾನೂ ಹಿಂದೆಂದೂ ಅನುಭವಿಸದ ಸಂತಸ ಅನುಭವಿಸುತ್ತಿದ್ದೇನೆ” ಎಂದು ಹೃಷಿತಾಳೂ ಖುಷಿಖುಷಿಯಿಂದ ಬೀಗುತ್ತಿದ್ದಳು.
“ಹೃಷಿತಾ, ಆರ್ ಯು ನಾಟ್ ಹ್ಯಾಪಿ ವಿಥ್ ಯುವರ್ ಹಸ್ಬೆಂಡ್…?” ಒಂದಿನ ಟಕ್ಕಂತ ಪ್ರಶ್ನಿಸಿದ್ದ ಲಿವಿಂಗ್ಸ್ಟೋನ್.
“ಡಾರ್ಲಿಂಗ್, ಇವನ್ ದೋ ಆಯ್ ಯ್ಯಾಮ್ ಹ್ಯಾಪಿ ವಿಥ್ ಮಾಯ್ ಹಸ್ಬೆಂಡ್, ಆ ನೀಡ್ ಎ ಚೇಂಜ್” ಎಂದು ದಿಟ್ಟತನ ಪ್ರದರ್ಶಿಸಿದ್ದಳು.
ಆಶೀರ್ವಾದ್ ಊರಿಗೆ ಹೋಗಿ ಬಂದ ಮೇಲೂ ಹೃಷಿತಾ ಲಿವಿಂಗ್‍ಸ್ಟೋನ್ ಜೊತೆಗೆ ಆಗಾಗ ಕದ್ದುಮುಚ್ಚಿ ಸೇರುವುದನ್ನು ಮುಂದುವರೆಸಿಕೊಂಡು ಬಂದಳು.
ಒಂದು ದಿನ ಹೃಷಿತಾಳ ಕಣ್ಣುಮುಚ್ಚಾಲೆ ಆಟ ಆಶೀರ್ವಾದನ ದೃಷ್ಟಿಗೆ ಬಿತ್ತು. ಅಂದು ಹೃಷಿತಾ ತನ್ನ ಸಹೋದ್ಯೋಗಿ ಲಿವಿಂಗ್ ಸ್ಟೋನ್ ಜೊತೆಗೆ ತಮ್ಮ ಮನೆಯಲ್ಲೇ ಬೆತ್ತಲಾಗಿ ಬೆಸೆದುಕೊಂಡಿದ್ದಾಗ ಸಾಕ್ಷಿ ಸಮೇತ ಆಶೀರ್ವಾದನಿಗೆ ಸಿಕ್ಕಿ ಬಿದ್ದಳು. ಇಬ್ಬರಿಗೂ ಬಹಳಷ್ಟು ಜಟಾಪಟಿಯಾಯಿತು.
“ಹೃಷಿತಾ, ನೀನಿಂಥಹ ಕೀಳು ಮಟ್ಟದ, ಅನೈತಿಕ ಸಂಬಂಧಕ್ಕೆ ಎಳಸುವಿ ಎಂದು ನಾನು ಕನಸು-ಮನಸಿನಲ್ಲಿಯೂ ಊಹಿಸಿರಲಿಲ್ಲ. ನನ್ನ ಸಾಂಗತ್ಯದಲ್ಲಿ ಕೊರತೆ ಏನಾದರೂ ಇದೆಯಾ…? ನನ್ನಿಂದ ಸಿಗದ ಸುಖವನ್ನು ಅನ್ಯ ಪುರುಷನ ಸಾಂಗತ್ಯದಲ್ಲಿ ಅನುಭವಿಸುತ್ತಿರುವಿಯಾ…?”
“ಆಶೀರ್ವಾದ್, ನಿನ್ನಿಂದ ನನಗ್ಯಾವ ಸುಖವೂ ಕಡಿಮೆಯಾಗಿಲ್ಲ.”
“ಮತ್ತೆ…?”
“ಇಟ್ಸ್ ಜಸ್ಟ್ ಫಾರ್ ಎ ಚೇಂಜ್. ಇದರಲ್ಲೇನಂಥಹ ತಪ್ಪಿದೆ? ಏಕತಾನತೆ ನನಗಿಷ್ಟವಿಲ್ಲ. ಗರತಿ ಗೌರಮ್ಮನಂತಿರಲು ನನಗೆ ಮನಸ್ಸಿಲ್ಲ. ಶೀಲ, ನೈತಿಕತೆಗಳಲ್ಲಿ ನನಗೆ ನಂಬಿಕೆ ಇಲ್ಲ. ಜೀವನ ಇರುವುದೇ ಸಕತ್ ಎಂಜಾಯ್ ಮಾಡಲು. ನಿನ್ನೊಬ್ಬನ ಜೊತೆಗಷ್ಟೇ ಸೆಕ್ಸ್ ಎಂಜಾಯ್ ಮಾಡಬೇಕೆಂಬ ನಿಯಮ ಏನಿಲ್ಲವಲ್ಲ…? ಆಯ್ ಯ್ಯಾಮ್ ಎ ಫ್ರೀ ಬರ್ಡ.”
“ಹಾಗಾದರೆ ನಿನ್ನ ಅಭಿರುಚಿ ಸೂಳೆಗಿಂತ ಕೀಳು ಮಟ್ಟದ್ದು. ಇಷ್ಟೊತ್ತಿಗೆ ನೀನು ಹಲವಾರು ಗಂಡಸರ ಜೊತೆಗೆ ಸಂಬಂಧ ಬೆಳೆಸಿರಬಹುದು…”
“ಹಲವಾರು ಗಂಡಸರ ಜೊತೆಗೆ ಇಲ್ಲದಿದ್ದರೂ ಕೆಲವು ಗಂಡಸರ ಜೊತೆಗೆ ನಾನು ಈ ಸುಖ ಅನುಭವಿಸಿದ್ದೇನೆ.”
“ಈಗಲಾದರೂ ನೀನು ನಿನ್ನ ತಪ್ಪನ್ನು ತಿದ್ದಿಕೊಂಡು ನಡತೆಯನ್ನು ಸುಧಾರಿಸಿಕೊಂಡರೆ ಒಳ್ಳೆಯದು. ಇಲ್ಲವಾದರೆ…?”
“ಇಲ್ಲವಾದರೆ ಡೈವೋರ್ಸ ಕೊಡಬೇಕೆನ್ನುವಿಯಾ…?”
“ಹೌದು. ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ.”
“ಅಷ್ಟೇ ಆಗಲಿ. ನೀವು ಮಧ್ಯಮ ವರ್ಗದ ಜನರು ಅರ್ಥವಿಲ್ಲದ ಸಂಪ್ರದಾಯಗಳ ಸುಳಿಯಲ್ಲಿ ಸಿಲುಕಿಕೊಂಡು ವಿಲವಿಲ ಅಂತ ಒದ್ದಾಡುತ್ತಿರುತ್ತೀರಿ. ಅ ಅನಗತ್ಯ ಕಟ್ಟುಪಾಡುಗಳನ್ನು ಹಾಕಿಕೊಂಡಿರುತ್ತೀರಿ, ನಿಮ್ಮಂಥಹವರ ಸಂಬಂಧ ಬೇಡ ಎಂದು ಬಡಕೊಂಡೆ. ಡ್ಯಾಡಿ ಕೇಳಲಿಲ್ಲ.”
****
ಆಶೀರ್ವಾದ್, ಹೃಷಿತಾರ ಮನಸ್ಸುಗಳು ಒಡೆದ ಕನ್ನಡಿಯಂತಾದವು.
`ಜೊತೆಗಿದ್ದು ದಿನನಿತ್ಯ ಕಿತ್ತಾಡುತ್ತಾ ಜೀವನ ನಡೆಸುವುದಕ್ಕಿಂತ ಬಿಟ್ಟುಕೊಟ್ಟು ಬೀಳ್ಕೊಡುವುದು ಲೇಸು. ಪ್ರೀತಿ ಇಲ್ಲದ ಬಂಧದಲ್ಲಿ ಬಂಧಿಯಾಗುವುದಕ್ಕಿಂತ ಬಂಧಮುಕ್ತವಾಗಿ ಬಿಡುಗಡೆ ಹೊಂದುವುದೇ ಲೇಸು. ಬೆರೆತು ಬಿರುನುಡಿಗಳಲಿ ನರಳುವುದಕ್ಕಿಂತ ಬಿಡಿಸಿಕೊಂಡು ದೂರಾಗುವುದೇ ಲೇಸು.’ ಹೀಗೆಂದು ಯೋಚಿಸಿದ ಇಬ್ಬರೂ ಪರಸ್ಪರ ದೂರಾದರು. ವಿಚ್ಛೇದನಕ್ಕಾಗಿ ಕೋರ್ಟಿನ ಮೊರೆ ಹೊಕ್ಕರು. ಆಶೀರ್ವಾದ್ ಹೃಷಿತಾರ ಹತ್ತು ವರ್ಷಗಳ ಸುದೀರ್ಘ ದಾಂಪತ್ಯ ಜೀವನ ಕೊನೆಗೂ ಅಂತ್ಯಗೊಂಡಿತು. ಹೃಷಿತಾಳಿಗೆ ಮಗಳಲ್ಲಿ ಆಸಕ್ತಿ ಇರದಿದ್ದುದರಿಂದ ಸುನೈನಾ ಆಶೀರ್ವಾದನ ಜೊತೆಗೆ ಉಳಿದಳು. ನ್ಯಾಯಾಲಯ ಹಾಗೇ ತೀರ್ಪು ನೀಡಿತು.
ವೈರಾಗ್ಯ ತಳೆದ ಆಶೀರ್ವಾದ್ ಮರುಮದುವೆಯಾಗದೇ ಮಗಳು ಸುನೈನಾಳ ಪಾಲನೆ-ಪೋಷಣೆಯಲ್ಲಿ ತೊಡಗಿಕೊಂಡ. ದೇಹದ ತೃಷೆಯನ್ನು ತಣಿಸಿಕೊಳ್ಳಲು ಹೃಷಿತಾ ಮರುಮದುವೆಯಾಗಿ ಇನ್ನೊಬ್ಬ ಗಂಡಸಿನ ತೆಕ್ಕೆಯೊಳಗೆ ಸೇರಿಕೊಂಡಳು. ಕೆಟ್ಟ ಘಟನೆ ನಡೆಯಿತೆಂದು ಆಶೀರ್ವಾದ್ ದಾಂಪತ್ಯ ಜೀವನದ ಪುಸ್ತಕವನ್ನೇ ಮುಚ್ಚಿಬಿಟ್ಟ. ಹೃಷಿತಾ ಪುಟ ತಿರುಗಿಸಿ ಹೊಸ ಅಧ್ಯಾಯ ಪ್ರಾರಂಭಿಸಿದಳು.
ಶೇಖರಗೌಡ ವೀ ಸರನಾಡಗೌಡರ್,
ತಾವರಗೇರಾ-583279, ತಾ : ಕುಷ್ಟಗಿ, ಜಿ : ಕೊಪ್ಪಳ.
2 thoughts on “ತೃಷೆ”
ವಾಸ್ತವದ ಚಿತ್ರಣ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಆಧುನಿಕ ಯುವತಿಯ ಚೆಲ್ಲಾಟದ ಬದುಕನ್ನು ಚೆನ್ನಾಗಿ ಚಿತ್ರಿಸಿದ್ದೀರಿ…ಫಾರಿನ್ ಸಂಸ್ಕೃತಿಗೆ ಮನ ಸೋತವರಿಗೆ ಇಲ್ಲಿಯ ಸಾಮಾಜಿಕ ಬಂಧಗಳ ಬೆಸುಗೆಯ ಅರಿವು ಇರುವುದಿಲ್ಲ. ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆ.