ಗಣಿತವೆಂದರೆ ನನಗೆ
ಬಹಳ ಕಷ್ಟದ ವಿಷಯ
ಆದರೂ ಕೂಡಿಸುವುದು ಎಂದರೆ
ಸ್ವಲ್ಪ ಇಷ್ಟವೇ
ಬಹಳಷ್ಟು ಕೂಡಿಸಿದ್ದೇನೆ
ಸಮಾಧಾನವಿದೆ
ಕೂಡಿಸಿದ್ದೆಲ್ಲವೂ
ಸರಿ ಎಂಬ ಧೈರ್ಯ
ಕೂಡಿಸಿ ಬಂದ ಮೊತ್ತವ ಕಂಡು
ಸಂಭ್ರಮಿಸಿದ್ದೇನೆ
ಕಳೆದುಕೊಳ್ಳುವಾಗ ಯಾವಾಗಲೂ
ಲೆಕ್ಕ ತಪ್ಪುವ ಭಯ
ತುಂಬಾ ಕೆಟ್ಟದು
ಕಳೆದುಕೊಂಡ ಫಲಿತಾಂಶವೂ
ಕಳೆಯುವ ಕೆಲಸದಿಂದ
ಆದಷ್ಟು ತಪ್ಪಿಸಿಕೊಂಡಿದ್ದೇನೆ
ಕೆಲವು ಅಸಮಯಗಳನ್ನು
ಹೇಗೋ ಕಳೆದು ಬಿಟ್ಟಂತೆ
ಕಳೆಯಲೇ ಬೇಕೆಂದಾಗ
ಕಳೆದಿದ್ದೇನೆ, ಬೇರೆ ದಾರಿ ಇಲ್ಲದೆ
ಹಾಗಾಗಿಯೇ ಕಳೆದುಕೊಂಡಿದ್ದೇನೆ
ಆತಂಕ ಬಹಳ
ಕಳೆದದ್ದನ್ನು ನೆನಪಿಸಿದಾಗ
ಎಲ್ಲಿ ಇನ್ನೇನು ಎಡವಟ್ಟಾಗಲಿದೆ ಎಂದು
ಆದರೇನಂತೆ,
ಕೆಲವು ಕಳೆಯಿರುವ
ನಿರುಪದ್ರವಿ ಸಂಖ್ಯೆಗಳ ಉಳಿವಿಗೆ
ಕಳೆಯಲೇ ಬೇಕು
ಕಳೆ ಗಿಡಗಳಂತಿರುವುದನ್ನು
ಪರಿಣಾಮ ಹೇಗೆಯೇ ಇರಲಿ
ಅಂಕ ಸಿಗಬಹುದು ಎಂಬ ವಿಶ್ವಾಸ
ಉಳಿದದ್ದಕ್ಕೆ ಮತ್ತೆ ಉಳಿಸಿದ ರೀತಿಗೆ
* ಸೌಮ್ಯ ಪ್ರವೀಣ್
2 thoughts on “ಗಣಿತ”
ಕೂಡುವ ಕಳೆಯುವ ಆ ಲೆಕ್ಕವನ್ನು ಕೂಡುವ ಕಳೆಯುವ ಬಾಳಿನ ಲೆಕ್ಕಕ್ಕೆ ಸಂಧಾನ ಮಾಡಿದ ಕವನ ತುಂಬ ಲಹರಿಯಾಗಿದೆ. ಅಭಿನಂದನೆಗಳು.
ಬಹಳ ಧನ್ಯವಾದಗಳು ಸರ್