ಜನ ಜೀವನದ ಜೋಕಾಲಿಯಲ್ಲಿ ಜೀಕುವ ಜಾನಪದ

ಆಧುನಿಕ ತಂತ್ರಜ್ಞಾನ ಯುಗದಲ್ಲಿ ನಾವು ಕೃತ್ರಿಮತೆಯ ಕಬಂಧ ಬಾಹುವಿನೊಳಗೆ ಸಿಲುಕಿ ಸಹಜತೆಯ ಸುಖವನ್ನು ಮರೆತಿದ್ದೇವೆ. ಮನುಷ್ಯ ಜೀವನದ ಸಕಲ ಸತ್ವವೂ ಅಡಗಿರುವ ಜಾನಪದ ಜಗತ್ತಿನಲ್ಲಿ ಆಗಾಗ ವಿಹರಿಸಿ ಬಂದರೆ ಅದರ ಕೆಲವು ಅಂಶವಾದರೂ ನಮ್ಮ ಬದುಕಿನ ದಾರಿಯಲ್ಲಿ ದೀಪವಾದೀತು. ಹೀಗೆ ಹುಡುಕಾಟದ ದಾರಿಯಲ್ಲಿ ಸಾಗುವಾಗ ಜಾನಪದ ಲೋಕವು ಕಂಡದ್ದು ಹೀಗೆ

ಸಂಸ್ಕೃತಿ ಎನ್ನುವುದು ಸೃಷ್ಟಿಯ ರಚನೆ ಮತ್ತು ನಡಾವಳಿಗಳ ಒಟ್ಟು ಮೊತ್ತ. ಮನುಷ್ಯನು ಸಂಸ್ಕೃತಿಯ ಒಂದು ಭಾಗ. ಸೃಷ್ಟಿಕ್ರಿಯೆಯಲ್ಲಿ ಮಾನವನು ಕಣ್ಣು ಬಿಟ್ಟಾಗಿನಿಂದ ಆತ ಅನುಸರಿಸಿಕೊಂಡು ಬಂದಿರುವ ಸಹಜವಾದ ಜೀವನ ವಿಧಾನವೇ ಜಾನಪದ. ಹೀಗೆ ಬಂದು ಹಾಗೆ ಹೋಗುವ ಮನುಷ್ಯನ ಪ್ರಯಾಣದ ನಡುವೆ ಅನೇಕ ಬಗೆಯ ಸಂಘರ್ಷಗಳು, ಸುಗಮ ಮಾರ್ಗಗಳು, ಸತ್ವ, ತತ್ವ, ನಿಸ್ಸತ್ವಗಳು, ಸಾಧಕ ಬಾಧಕ ಸಂಕೀರ್ಣತೆಗಳು ಅದು ಇದು ಮತ್ತೊಂದು ಮೊಗದೊಂದು ಘಟಿಸುತ್ತಲೇ ಇರುವಾಗ ಅವೆಲ್ಲವನ್ನೂ ಸಮಾಜದ ಒಂದು ಭಾಗವೆಂಬಂತೆ ಸ್ವೀಕರಿಸುತ್ತ ಪ್ರಶ್ನಿಸುತ್ತ ಸಂವಹನ ಮಾಡುವಾಗ ರಚನೆಯಾದದ್ದು ಜಾನಪದ ವಾಂಙ್ಮಯ. ‘ಮನೆಯೇನು, ಮಠವೇನು? ನಿಜದ ನೆನಹೇ ಘನ’ಎನ್ನುವ ನುಡಿಯನ್ನು ಬೆರಗಿನಿಂದ ಕಾಣುತ್ತ ಎಡವುತ್ತ ಏಳುತ್ತ ಜೀವನವನ್ನು ಸಹ್ಯವಾಗಿಸಿಕೊಳ್ಳುವಾಗ ಹುಟ್ಟಿದ ಬೆಡಗಿನ ಭಾಷೆ ಜಾನಪದ. ನಡೆನುಡಿಗಳೊಂದಾಗಿ ದುಡಿವ ಜನರಿಗೆ ಬಿಡುಗಡೆ ಬೇಕೆಂದಾಗ ಹಾಡಿ ಹಗುರವಾಗುವ ಪರಿಯೇ ಜನಪದ ಸಾಹಿತ್ಯ. ಸಂಸ್ಕೃತ ಭೂಯಿಷ್ಟ ಸಾಲುಗಳನ್ನು ಬಿಗಿಯಾದ ಬಂಧದಿಂದ ಬಿಡಿಸಿ ತಮ್ಮದೇ ಆದ ಲಯಕ್ಕೆ ಹೊಂದಿಸಿಕೊಂಡು ಅಭಿವ್ಯಕ್ತಿಪಡಿಸುವ ಜಾನಪದರ ಸಾಹಿತ್ಯವು ಬದುಕುವ ಸುಲಭೋಪಾಯವನ್ನು ತಿಳಿಸಿಕೊಡುವುದು. ಆ ದೇವ ಈ ದೇವ ಎನ್ನುತ್ತಲೇ ತನ್ನ ಸುತ್ತಲ ಜೀವಗಳಿಗೆ ನೆರವಾಗುವವನಲ್ಲಿ, ಎಲ್ಲರಿಗೆ ಲೇಸನ್ನು ಬಯಸುವವನಲ್ಲಿ ದೈವತ್ವವನ್ನು ಕಾಣುವ ಜಾನಪದ ಜಗತ್ತಿನಲ್ಲಿ ದೇವನೆಂದರೆ ಮಿತ್ರ, ಬಂಧು, ಬಿಂದು ಸಿಂಧು ಎಲ್ಲವೂ. ಧರ್ಮದ ಹೆಸರಿನಲ್ಲಿ ಅಧರ್ಮವನ್ನು ಮಾಡುವುದು, ಬೂಟಾಟಿಕೆಯ ಭೂತ ನೃತ್ಯವು ಸಮಾಜದ ರಂಗ ಮಂಚದಲ್ಲಿ ಮೆಚ್ಚುಗೆಯನ್ನು ಗಳಿಸುವುದು, ಮುಖವಾಡಗಳಿಗೇ ಮಣೆ ಹಾಕುವುದು ಮುಂತಾದವುಗಳಿಗೆ ಅದರ ನಿಜರೂಪವನ್ನು ಕಾಣಿಸಿ ಬಣ್ಣವನ್ನು ಬಯಲು ಮಾಡುವ ಹಲವಾರು ಪದ್ಯಗಳು ಜಾನಪದದ ಜ್ಯೋತಿರ್ಲಿಂಗವಾಗಿವೆ. ಜೀವನದಲ್ಲಿ ಘಟಿಸುವ ಒಳಿತು ಕೆಡುಕುಗಳಿಗೆ ಅನುಭವದ ವೇದವನ್ನೂದಿದ ಜಾನಪದದ ಹಲವು ಸಂಗತಿಗಳು ಕಾಲದ ಹರಿವಿನಲ್ಲಿ ತೆರೆಮರೆಯಾಗಿರುವುದು. ಸ್ಮರಣೆಯ ಸಮುದ್ರದಲ್ಲಿ ಸಿಕ್ಕ ಅಣಿಮುತ್ತುಗಳಷ್ಟೇ ಈಗ ನಮ್ಮ ಕೈಗೆ ಸಿಕ್ಕಿರುವುದು.

ಬಾಳಿನಲ್ಲಿ ಕಹಿಯನ್ನು ಉಂಡರೂ ಬಾಳನ್ನು ತಿರಸ್ಕರಿಸದೆ ಅದನ್ನು ಸ್ವೀಕರಿಸುವ ಉದಾತ್ತ ಮನಸ್ಸು ಜಾನಪದ ಸಾಹಿತ್ಯದಲ್ಲಿ ಹುದುಗಿದೆ. “ಹಲಿಗೆ ಬಳಪವ ಹಿಡಿಯದಗ್ಗಳಿಕೆ” ಜಾನಪದದ್ದು. ಪಂಡಿತ ಮಾನ್ಯ ಕವಿಗಳ ಮಣಿ ಮುಕುಟ, ತಟಘಟಿತ ಶೈಲಿಗಳಿಗಿಂತ ಹೊರತಾದ ಸಹಜ ಸುಲಭ ಪದಗಳಲ್ಲಿ ತಮ್ಮ ಭಾವ ಲೋಕವನ್ನು ಕಟ್ಟಿಕೊಟ್ಟ ಜಾನಪದ ಸಾಹಿತ್ಯವು ಪರತತ್ವದಂತಹ ಘನವಾದ ವಿಷಯವನ್ನು ಕೂಡ ದಿನನಿತ್ಯದ ಮಾತಿನ ಮಥನದಿಂದಲೇ ಹೊರತಂದಿರುವುದು ವಿಶೇಷವಾಗಿದೆ. ಜಾನಪದೀಯರಿಗೆ ಶಿವನು ಸಣ್ಣ ಮರಳಿನಲ್ಲೂ ಕಾಣುತ್ತಾನೆ, ಮುಳ್ಳಿನ ಮೊನೆಯೊಳಗೂ ಕಾಣುತ್ತಾನೆ. ನುಣ್ಣನೆಯ ಶಿಲೆಯೊಳಗೂ ಕಾಣುತ್ತಾನೆ, ಬರೆಯುವ ಪಟದೊಳಗೂ ಕಾಣುತ್ತಾನೆ. ಎಲ್ಲಕ್ಕಿಂತ ಮಿಗಿಲಾಗಿ ತನ್ನೊಳಗೂ ಕಾಣುತ್ತಾನೆ. ತಾಯಿಯು ತಾಸಿನೊಳಗೆ ಸಿಗುವಂತೆ ದೇವರೂ ಬೇಕೆಂದಾಗಲೆಲ್ಲ ಅವರ ಸಹಾಯಕ್ಕೆ ಧಾವಿಸುತ್ತಾನೆ. ನಿದ್ದೆಗಣ್ಣಿನಲ್ಲೂ ಸದ್ದ ಗುರುವಿನ ಪಾದವನ್ನು ಕಾಣುತ್ತ ಸೊಬಗಿರುವಲ್ಲಿ ಭಗವಂತನನ್ನು ಕಾಣುವ ಮುಗ್ಧ ಜನರ ಬಾಯಲ್ಲಿ ಬಂಗಾರವಾಗಿ ಬಂದ ಜಾನಪದ ಸಾಹಿತ್ಯವು
“ಲಿಂಗಯ್ಯ ಹೂವಿನಾಗೆ ಹುದುಗ್ಯಾನು, ಮಾಲ್ಯಾಗ ಮಲಗ್ಯಾನು, ಮಗ್ಯಾಗ ಕಣ್ಣ ತೆರೆದಾನು” ಎನ್ನುತ್ತ ಅದರೊಳಗೆ ದೈವತ್ವವನ್ನು ಕಾಣುತ್ತದೆ. ಮಲಗಿದ ಪ್ರಕೃತಿಯನ್ನು ಸುಗ್ಗಿಯ ಮೂಲಕ ಎತ್ತಿ ಕುಣಿಸಿದ ಜಾನಪದರು ದೇವರೊಂದಿಗೆ ಗೆಳೆತನವನ್ನು ಸಾಧಿಸುವಲ್ಲಿ ನಿಪುಣರು. ದೇವರಲ್ಲಿ ತಾನು ಸರಿಯಾಗಿರಬೇಕೆಂಬ ಭಾವದಿಂದಲೇ ಸಮಾಜದಲ್ಲಿ ಬಾಳಿ ಬದುಕುವುದು ಜನಪದ ಸಾಹಿತ್ಯದ ಸಾರವಾಗಿದೆ. ತಮ್ಮ ಸಂಭ್ರಮವಿರುವಲ್ಲಿ ದೇವರನ್ನು ಕರೆದು ಸಂಭ್ರಮಿಸುವ ಜೀವನೋತ್ಸಾಹವು ಹಳ್ಳಿಯ ಜನರನ್ನು ಸದಾ ಬೆಚ್ಚಗಿಡುತ್ತದೆ. ಭಾವದ ಪ್ರವಾಹದಲ್ಲಿ ಹರಿದು ಭಾವದ ಮರೆಯಲ್ಲೇ ಪ್ರಕಟವಾಗುವ ಜನಪದರ ತತ್ವದರ್ಶನವು ವಿಶೇಷವಾದದ್ದು. ವೈವಿಧ್ಯತೆಗಳ ಒಡಲಿನಲ್ಲಿರುವ ಅಪಾರ ಶಕ್ತಿಯು ಜಾನಪದ ರಚನೆಗಳಲ್ಲಿ ಕಂಡುಬರುವುದು.

ದಿನನಿತ್ಯದ ಕೆಲಸ ಕಾರ್ಯಗಳಿಗೂ ಅದರ ರೀತಿ ನೀತಿಗಳಿಗೂ ಸಂಬಂಧಿಸಿದಂತೆ ಹೆಜ್ಜೆ ಹೆಜ್ಜೆಗೂ ಹಾಡು ಕಟ್ಟುತ್ತಾ, ಕಥೆ ಹೆಣೆಯುತ್ತ, ಒಗಟುಗಳ ಆಟ ಆಡುತ್ತ, ಗಾದೆಗಳ ಸುರುಳಿ ಬಿಡಿಸುತ್ತ ಬದುಕಿಗೆ ತಮ್ಮದೇ ಆದ ಹೊಸ ರೂಪವನ್ನು ನೀಡಿ ನಲಿಯುವ ಜಾನಪದ ವಾಂಙ್ಮಯವು ಯಾವ ಶಾಸ್ತ್ರಗಳಿಗೂ ಕಡಿಮೆಯಿಲ್ಲ. ಮಾಸ್ತಿಯವರು ಹೇಳುವಂತೆ “ಯಾವ ತಪೋವನದಲ್ಲಾಗಲಿ, ಅರಮನೆಯಲ್ಲಾಗಲಿ, ಜಾನಪದಕ್ಕೆ ಮೀರಿದ ಸಂಸ್ಕೃತಿ ದೊರೆಯಲಾರದು. ಮನೆಯಲ್ಲಿ ಕುಳಿತವನು ದೊರೆಯಲ್ಲ, ವಿಘ್ನೇಶ ಅಥವಾ ಸ್ಕಂದನಲ್ಲ, ಲವಕುಶನಲ್ಲ. ಆದರೆ ಇಲ್ಲಿ ಅಕ್ಷತೆ ಉಂಟು, ತೂರೆಣ್ಣೆ ಉಂಟು, ಅಕ್ಕ ತಂಗಿಯರ ಕೈಯ ಉಗುರಣ್ಣೆ ಉಂಟು, ಚೆನ್ನೆಯರು ಎರೆಯುವ ಅಗಣಿ ಉಂಟು. ಆ ಸೇವೆಯನ್ನೆಲ್ಲ ದೊರೆತನದ ಭೋಗಕ್ಕೆ ಸಮನಾಗಿ ಮಾಡುವ ಪ್ರೀತಿ ಉಂಟು, ಸಂಭ್ರಮ ಉಂಟು”. ವಿವಾಹವಾದ ಹೆಣ್ಣು ಗಂಡುಗಳು ಜಾನಪದ ಜಗತ್ತಿನಲ್ಲಿ ಸೀತಾರಾಮರಿಗೆ, ಗೌರಿಶಂಕರರಿಗೆ, ಸತ್ಯಭಾಮೆ ಕೃಷ್ಣರಿಗೆ ಸಮಾನರು. ಇಲ್ಲಿ ಮದುವೆ ಎಂಬುದು ಲೋಕ ಕಲ್ಯಾಣ ಹಾಗೂ ಆತ್ಮ ಸಿದ್ಧಿಯ ಪರಮ ಸತ್ಯ.

“ ಉದ್ದೀನ ಹೊಲಾದಲ್ಲಿ ದೊಡ್ಡ ಹೊಟ್ಟೆ ಬೆನವಣ್ಣ
ಉದ್ದಿನುಂಡಲಿಗೆ ಎರೆದುಪ್ಪಾ – ಕೊಡುವೆವು
ಇದ್ದೋಟು ಮತಿಯಾ ಕೊಡು ನಮಗೆ” ಎನ್ನುವ ಜನಗಳಿಗೆ ಹೊಲವೇ ‘ಹೊಟ್ಟೆ ಬೆನಕ’ನ ದೇವಸ್ಥಾನ. ಅಲ್ಲಿ ಗೆಯ್ಯುವುದೇ ಪೂಜೆ. “ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ, ಭೂಮ್ತಾಯ
ಎದ್ದೊಂದು ಗಳಿಗೆ ನೆನೆದೇನು” ಎನ್ನುವ ಗರತಿಗೆ ಪ್ರಕೃತಿಯೇ ಪರದೈವ. ತವರೂರ ಹಾದಿಯಲಿ ಕಲ್ಲಿಲ್ಲ ಮುಳ್ಳಿಲ್ಲ ಎನ್ನುವ ಹೆಣ್ಣು ಮಗಳು “ಹಾಲುಂಡ ತವರಿಗೆ ಏನೆಂದು ಬೇಡಲಿ ಹೊಳೆದಂಡೆಲಿರುವ ಕರಕಿಯ ಕುಡಿಯುಂಗ ಹಬ್ಬಲಿ ಅವಳ ರಸಬಳ್ಳಿ”ಎಂದು ಹರಸುತ್ತಾಳೆ. “ ಅಪ್ಪ ಕೊಟ್ಟ ಮೌಲ್ಯವನ್ನು ಹೊತ್ತೊಯ್ಯುವಾಗ ಆಕೆ ತವರು ಮನೆಯಿಂದ ತುಸುದೂರದ ತಿಟ ಹತ್ತಿ ತಿರುಗಿ ನೋಡುತ್ತಾಳೆ. ಒಂದು ಹೆಣ್ಣಿನ ಭಾವ ಲೋಕವೇ ಇಲ್ಲಿ ಅನಾವರಣವಾಗಿದೆ. ಇದು ಜಾನಪದ ಸಾಹಿತ್ಯದ ಹಿರಿಮೆ. ಮಕ್ಕಳ ಆಟ ಪಾಠಗಳಲ್ಲೂ ಜಾನಪದ ಕಥೆಗಳು, ಹಾಡುಗಳು, ಒಗಟು, ಗಾದೆಗಳು ಜೊತೆ ಜೊತೆಯಾಗಿ ಸಾಗುತ್ತವೆ. ಪುರಾಣ ಕಥೆಗಳ ಮರುರೂಪಣೆಯಲ್ಲಿ ಅತಿ ವಿಶೇಷವಾದ ಒಂದು ಶಬ್ದ ಕೋಶವೇ ನಿರ್ಮಾಣವಾಗುತ್ತದೆ. ಮಕ್ಕಳು ಸ್ವೇಚ್ಛೆಯಿಂದ ಆಡುವ ಆಟದ ನಡುನಡುವೆಯೇ ಮಾತುಗಳು ತುಂಡು ಪ್ರಾಸಗಳಾಗಿ ನಿರರ್ಗಳವಾಗಿ, ಅನನ್ಯವಾಗಿ ಹರಿಯುತ್ತವೆ. ಒಬ್ಬನು “ ಏನೋ ತಿಮ್ಮ” ಎಂದರೆ ಇನ್ನೊಬ್ಬನು “ನೀನೇ ಗುಮ್ಮ”ಎನ್ನುತ್ತಾನೆ. ದೊಡ್ಡವರ ಹಾಡುಗಳನ್ನು ಅನುಕರಿಸುತ್ತಲೇ ಅದೇ ಮಾದರಿಯಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ಪದಗಳನ್ನು ಹಣೆದುಕೊಂಡು ಹಾಡುವ ಮಕ್ಕಳ ಸೃಜನಶೀಲತೆಯು ಜಾನಪದ ಸಾಹಿತ್ಯದಲ್ಲಿ ಮೊಗ್ಗರಳುವ ಹಂತವಾಗಿರುವುದು. ಬಾಲ್ಯದಲ್ಲಿ ಇದನ್ನೆಲ್ಲ ನೋಡಿ ಬೆಳೆದ ಇಂದಿನ ಜನಗಳಿಂಂದ ಹಳ್ಳಿಗಳಲ್ಲಿ ಇಂದಿಗೂ ಜಾನಪದ ರಚನೆಗಳು ಜಾರಿಯಲ್ಲಿವೆ. “ನಾನೊಂದು ತೀರ ನೀನೊಂದು ತೀರ”ಎನ್ನುವ ಸಿನಿಮಾ ಹಾಡಿನಿಂದ ಪ್ರಭಾವಿತವಾದ ಮಹಿಳೆಯೊಬ್ಬಳು ತನಗೂ ತನ್ನ ಅಣ್ಣ ಗೋಪಾಲನಿಗೂ ಆದ ವೈಮನಸ್ಸನ್ನು ವ್ಯಕ್ತಪಡಿಸುವಾಗ “ ಆನೊಂದು ತೀರ ಗೋಪಾಲೊಂದು ತೀರಾ; ಎನಗೂ ಅವಂಗೂ ವೈರ, ಎಮ್ಮನೆ ತಮ್ನೇ ಎಂಗಾಧಾರ” ಎಂದು ಹಾಡು ಕಟ್ಟುತ್ತಾಳೆ.

“ಸಾಗರದಿಂದ ಬತ್ತ ಬಂತು ಕುಟ್ಟುಕ್ ಬಾರೆ ಸಿದ್ದೀ” ಎನ್ನುವ ಒಡತಿಗೆ “ ಕುಟ್ಟಲಾರೆ ದಮ್ಮಯ್ಯ ಚಳಿ ಜ್ವರ ಬಂದೈತಿ” ಎನ್ನುವ ಸಿದ್ದಿಯು ಕುಟ್ಟಿದ ಭತ್ತವನ್ನು ಗೇರುವಾಗ, ಆರಿಸುವಾಗ, ಬೇಯಿಸುವಾಗ “ಬಾರೇ ಸಿದ್ದೀ” ಎಂದು ಕರೆವಾಗಲೆಲ್ಲ “ಚಳಿ ಜರ” ಎನ್ನುತ್ತಾಳೆ. “ಅನ್ನ ಬೇಯಿಸಿ ಇಟ್ಟಿದ್ದೇನೆ ಊಟಕೆ ಬಾರೇ ಸಿದ್ದೀ” ಎನ್ನುವಾಗ “ಊಟಕ್ಕಾದ್ರೆ ಬರ್ತೀನಿ ಚಳಿ ಜರ ಹೋಗೈತಿ” ಎಂದು ಹೇಳುವ ಸಂವಾದ ರೂಪದ ಪದಗಳು ಜನರ ನಡಾವಳಿಗಳನ್ನು ಕಲಿಸುತ್ತವೆ.

ಇನ್ನೊಂದು ಮಕ್ಕಳಾಟದ ಪದ ಸಂವಾದದಲ್ಲಿ
“ ಇಂಬಿಂಬ್ಲಕಾಯೆಲ್ಲ ಎಲ್ಲಿಗ್ಹೋಗಿದ್ದೆ- ?ಸಂತೆಗ್ಹೋಗಿದ್ದೆ.
ಏನ್ ತಂದೆ? – ಬಾಳೆಹಣ್ಣು ತಂದೆ
ಬಾಳೆಹಣ್ಣು ಏನ್ ಮಾಡ್ದೆ?- ಕದದ ಮೂಲೇಲಿ ನಿಂತು ತಿಂದೆ.
ಸಿಪ್ಪೆ ಏನ್ ಮಾಡ್ದೆ? – ಬಸವಂಗೆ ಕೊಟ್ಟೆ.
ಬಸವ ಎನ್ ಕೊಟ್ಟ?- ಸೆಗಣಿ ಕೊಟ್ಟ
ಸೆಗಣಿ ಏನ್ ಮಾಡ್ದೆ?- ಗಿಡಕ್ಕೆ ಹಾಕ್ದೆ
ಗಿಡ ಏನ್ ಕೊಡ್ತು? – ಫಲ ಕೊಡ್ತು
ಫಲ ಏನ್ ಮಾಡ್ದೆ? – ಎಲ್ರೀಗೂ ಹಂಚ್ದೆ.”
ಇದರಲ್ಲಿ ಪ್ರಕೃತಿಯ ಕೊಡು ಪಡೆಯ ಚಕ್ರವೇ ಇರುವುದು. ಹಳ್ಳಿ ಮಕ್ಕಳು ಬೆಳೆದು ಗಟ್ಟಿಯಾಗಲು ಇಂತಹ ಹಲವಾರು ವ್ಯವಹಾರ ಜ್ಞಾನಗಳ ಭಂಡಾರವೇ ಜಾನಪದದಲ್ಲಿ ಇದೆ.

ಜನಾಂಗದಲ್ಲಿ ಹುಟ್ಟಿ ಜನಾಂಗದಲ್ಲಿ ಬೆಳೆಯುವ ಜಾನಪದ ಸಾಹಿತ್ಯವು ಬದಲಾವಣೆಗಳೊಂದಿಗೆ ಅನುಭವ ವಿಸ್ತಾರವನ್ನು ಪಡೆದು ವೈವಿಧ್ಯಮಯವಾಗಿ ಸಮಸ್ತ ಕನ್ನಡಿಗರ ಕಂಠ ಸಿರಿಯಾಗಿ ಮೂಡಿ ಬಂದಿತು. ಕುವೆಂಪು ಅವರು ಜಾನಪದವನ್ನು
“ಪುರಾಣ ಕಥನಗಳನ್ನು ತಲೆಮಾರಿನಿಂದ.ತಲೆಮಾರಿಗೆ ಬಾಯಿಯಿಂದ ಬಾಯಿಗೆ ನೆನಪಿನ ವಾಹಕದಲ್ಲಿ ಸೃಜನಶೀಲವಾಗಿ ಕಾಪಾಡಿಕೊಂಡು ಬಂದ ಮೌಖಿಕ ಜಗತ್ತು” ಎಂಬುದಾಗಿ ಕರೆದಿದ್ದಾರೆ. ಈ ಮೌಖಿಕ ಜಗತ್ತಿನಲ್ಲಿ ಕೇವಲ ಜೀವಿಗಳಷ್ಟೇ ಅಲ್ಲ ದಿನನಿತ್ಯದ ಬಳಕೆಯ ನಿರ್ಜೀವ ವಸ್ತುಗಳೂ ಜೀವ ಪಡೆಯುತ್ತವೆ, ಪೂಜಿಸಲ್ಪಡುತ್ತವೆ. ಜಾನಪದರು ಅದೃಷ್ಟ, ವಿಧಿ, ಹಣೆಬರಹಗಳನ್ನು ಬಲವಾಗಿ ನಂಬುವುದರಿಂದಲೇ ಅಲ್ಲಿನ ಕಥೆಗಳಲ್ಲಿ ಈ ಅಂಶಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಜಾನಪದ ಕಥೆಗಳಲ್ಲಿ ದೇವರಿಗೆ ಸಂಬಂಧಿಸಿದ ಕಾಲ್ಪನಿಕ ಕಥೆಗಳು ಕಾಣುವುದು ಕಡಿಮೆ. ಹೆಚ್ಚಾಗಿ ಜಾನಪದ ಕಥೆಗಳು “ಒಂದೂರಲ್ಲಿ ಒಬ್ಬ ರಾಜನಿದ್ದ”, “ಒಂದೂರಲ್ಲಿ ಒಬ್ಬ ರೈತನಿದ್ದ” “ ಒಂದೂರಲ್ಲಿ ಒಬ್ಬ ಅಜ್ಜಿ ಇದ್ದಳು”ಹೀಗೆ ಆರಂಭವಾಗಿ ಕೊನೆಯಲ್ಲಿ “ಮಡದಿ ಮಕ್ಕಳೊಂದಿಗೆ” ಅಥವಾ” ಪರಿವಾರದೊಂದಿಗೆ ಸುಖವಾಗಿದ್ದರು” ಎಂಬುದಾಗಿ ಅಂತ್ಯವಾಗುತ್ತದೆ. ಸಮಸ್ಯೆಯನ್ನು ಮುನ್ನೆಲೆಗೆ ತರುತ್ತಲೇ ಅದಕ್ಕೆ ಪರಿಹಾರವನ್ನು ಕಂಡುಕೊಂಡು ಸುಖಾಂತ್ಯವನ್ನು ಹೇಳುವ ಕಥೆಗಳು ಸಹಜವಾಗಿಯೇ ಮೌಲಿಕತೆಯನ್ನು ಎತ್ತಿ ಹಿಡಿಯುವಂಥವು. ವೈಚಾರಿಕತೆಯು ಜಾನಪದದಲ್ಲಿ ಹಾಸು ಹೊಕ್ಕಾಗಿದ್ದರೂ ಇಲ್ಲಿ ಎಲ್ಲಿಯೂ ಪ್ರಶ್ನೆ ಮಾಡುವುದಿಲ್ಲ. ಜಾನಪದ ವಿನೋದ ಕಥೆಗಳಲ್ಲಿ ಬರುವ ಪಾತ್ರಗಳು ಭಯಂಕರವಾದ ಹಾಸ್ಯ ರಸವನ್ನು ಸೃಜಿಸುತ್ತವೆ. ಅವು ಸಪ್ಪೆಯ ಆದರ್ಶಗಳಾಗದೆ ‘ದಡ್ಡ’ ‘ಬುದ್ಧಿವಂತ’ ಇಂತಹ ಪಾತ್ರಗಳ ಮುಖಾಂತರವೇ ಮುಂದುವರೆಯುತ್ತವೆ. ಸುಳ್ಳು, ಮೋಸ, ವಂಚನೆ, ಕುಟಿಲತೆ ಇವೆಲ್ಲವನ್ನೂ ನೇರಾನೇರವಾಗಿ ಹೇಳುತ್ತಾ ಬೆಳೆಯುವ ಕಥೆಗಳು ಸಮಾಜದ ಸಮಸ್ಯೆಗಳನ್ನು ವಿಡಂಬನೆಯ ಮೂಲಕ ವ್ಯಕ್ತಪಡಿಸುತ್ತಾ ಹೆಜ್ಜೆ ಹೆಜ್ಜೆಗೂ ನೈತಿಕ ಮೌಲ್ಯಗಳನ್ನು ಬಿತ್ತುತ್ತವೆ. ಇಲ್ಲಿ ದಡ್ಡನ ಪಾತ್ರವೆಂದರೆ ಮನೆಯಲ್ಲಿ ಇಲಿ ಇದೆ ಎಂದು ಮನೆಗೆ ಬೆಂಕಿ ಹಚ್ಚುವವ, ಕೊಂಬೆಯ ಮೇಲೆ ಕುಳಿತು ಮರದ ಬುಡವನ್ನು ಕಡಿಯುವವ, ಹಸುವು ಮೆಲುಕಾಡಿಸುತ್ತಿದ್ದರೆ ಅದು ತನಗೆ ಚೇಷ್ಟೆ ಮಾಡುತ್ತಿದೆ ಎಂದು ತಿಳಿದುಕೊಳ್ಳುವವ ಹೀಗೆ ಶತದಡ್ಡತನದ ಪಾತ್ರಗಳು. ಇವು ಮಕ್ಕಳಿಗೆ ಸರಿಯಾಗಿ ಅರ್ಥವಾಗುವಂತೆ ರೂಪ ಪಡೆದಿರುತ್ತವೆ. ಕ್ರೌರ್ಯವೆಂದರೆ ಮರಕ್ಕೆ ಕಟ್ಟಿ ಹಾಕಿ ಹೊಡೆಯುವುದು, ದರದರನೆ ಎಳೆದುಕೊಂಡು ಹೋಗುವುದು ಇಷ್ಟಕ್ಕೇ ನಿಲ್ಲುವುದೇ ವಿನಃ ಅದಕ್ಕಿಂತ ಮಿಗಿಲಾದ ಕ್ರೌರ್ಯವನ್ನು ಹೆಚ್ಚಾಗಿ ಕಥೆಗಳಲ್ಲಿ ತರುವುದಿಲ್ಲ. ಹಸುವಿಗೆ ಕೊಂಬು, ಗಿಳಿಗೆ ಕೆಂಪು ಮೂತಿ, ಆನೆಯ ಸೊಂಡಿಲು,ದಂತ, ಆಡಿನ ಮಯ್ಯ ಮೇಲೆ ಉಣ್ಣೆ, ಮಂಗನಿಗೆ ಉದ್ದದ ಬಾಲ ಇವೆಲ್ಲದಕ್ಕೂ ಜಾನಪದರ ಕಥೆಗಳಲ್ಲಿ ಅವರದ್ದೇ ಆದ ಕಾರಣಗಳಿರುತ್ತವೆ. ಆ ಮೂಲಕ ಮಕ್ಕಳ ಎಳೆ ಮನಸ್ಸಿನ ಮೇಲೆ ಅದರ ಚಿತ್ರಣವು ಅಚ್ಚಾಗಿರುವಂತೆ ಇಲ್ಲಿ ಕಥೆಗಳನ್ನು ರೂಪಿಸಿರುತ್ತಾರೆ. ಕಥೆಯನ್ನು ಕಟ್ಟುವ ಕೌಶಲ್ಯವು ಸಹಜವಾಗಿಯೇ ಜಾನಪದ ರಚನೆಗಳಲ್ಲಿ ಎದ್ದು ಕಾಣುತ್ತವೆಯೇ ವಿನಃ ಪ್ರಜ್ಞಾಪೂರ್ವಕವಾಗಿ ತಂತ್ರ ವಸ್ತು ವಿಷಯ ಇತ್ಯಾದಿಗಳನ್ನು ಬಳಸಿಕೊಂಡು ರೂಪ ಪಡೆಯುವುದಿಲ್ಲ. ಒಟ್ಟಾರೆಯಾಗಿ ಮನುಷ್ಯನ ಬದುಕಿನಲ್ಲಿ ಬರುವ ಬಾಲ್ಯ, ಯವ್ವನ, ವೃದ್ಧಾಪ್ಯ ಈ ಎಲ್ಲಾ ಘಟ್ಟಗಳ ಸ್ಪಷ್ಟವಾದ ಕಲ್ಪನೆ, ಆಯಾ ಸಂದರ್ಭಗಳಲ್ಲಿ ಜೀವನದಲ್ಲಿ ಬರಬಹುದಾದಂತಹ ಸಮಸ್ಯೆಗಳು ಅವುಗಳಿಗೆ ಕಂಡುಕೊಳ್ಳಬಹುದಾದಂತಹ ಉಪಾಯಗಳು, ಪರ್ಯಾಯ ವ್ಯವಸ್ಥೆಗಳು ಇವೆಲ್ಲವನ್ನೂ ಸುವ್ಯವಸ್ಥಿತವಾಗಿ ಕಟ್ಟಿಕೊಡುವ ಜಾನಪದ ಜಗತ್ತು ಮನುಷ್ಯ ಸಂತತಿ ಇರುವವರೆಗೂ ಪ್ರಸ್ತುತವೇ ಆಗಿದೆ.
ಕನ್ನಡ ಜಾನಪದ ರಚನೆಗಳೆಲ್ಲವೂ ಹೆಚ್ಚಾಗಿ ತ್ರಿಪದಿ ಎಂಬ ಸಾಹಿತ್ಯ ಪ್ರಕಾರಕ್ಕೆ ಸೇರಿದ ನಿಯಮ ಬದ್ಧವಾದ ರಚನೆಗಳು. ಸಾಹಿತ್ಯದ ದೃಷ್ಟಿಯಿಂದ ಜಾನಪದ ತ್ರಿಪದಿಗಳು ವರಕವಿ ಬೇಂದ್ರೆಯವರಿಂದ ‘ಕನ್ನಡದ ಗಾಯತ್ರಿ’ ಎಂದು ಕರೆಯಲ್ಪಟ್ಟಿರುವುದು ಗಮನೀಯ ಸಂಗತಿ.

ಅಂದಂದಿನ ಸಾಮಾಜಿಕ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಅತ್ಯಂತ ನೈಜವಾಗಿ ಹಿಡಿದಿಡುವ ಜಾನಪದ ರಚನೆಗಳು ಕಲೆಯಾಗಿ, ಸಾಹಿತ್ಯವಾಗಿ ಒಗಟು, ಗಾದೆಗಳಾಗಿ ಅಂದೂ ಇಂದೂ ಎಂದೆದೂ ಮುಖ್ಯವಾಗುತ್ತವೆ. ಇಂತಹ ಸಾರ ಸತ್ವವನ್ನು ಹೊಂದಿರುವ, ಸಾಂಸ್ಕೃತಿಕ ಮಹತ್ವವುಳ್ಳ, ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಜಾನಪದ ವಾಂಙ್ಮಯವನ್ನು ಯುವ ಪೀಳಿಗೆಗೂ ಪರಿಚಯಿಸುವ ಮೂಲಕ ಅಖಂಡಗೊಳಿಸುವುದು ಕನ್ನಡಿಗರಾದ ಎಲ್ಲರ ಗುರುತರವಾದ ಜವಾಬ್ದಾರಿಯಾಗಿದೆ.

*ಕಲಾ ಭಾಗ್ವತ್
ಸಂಶೋಧನ ವಿದ್ಯಾರ್ಥಿ
ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter