ಕಾರು ಆ ಊರ ದಾರಿ ಸಾಗಿ ಹದಿನಾರನೇ ಮೈಲಿಗಲ್ಲು ದಾಟಿದರೂ ಯಾಕೋ ಸೀಮಾಳ ಚಿತ್ತ ಮಾತ್ರ ಆ ಮನೆಯತ್ತಲೇ ಎಳೆಯುತ್ತಿತ್ತು. ಕಾರಣ….. ಅಲ್ಲಿ ಕಂಡ ಕುರುಚಲು ಗಡ್ಡ ಮೀಸೆಯುಳ್ಳ ಆ ವ್ಯಕ್ತಿಯ ಮುಖ ಚಹರೆಯಲ್ಲಿ ಏನೋ ಅಸಹಜತೆ ಎದ್ದು ಕಾಣುತ್ತಿತ್ತು. ಇಷ್ಟಲ್ಲದೆ ಆತನಿಂದ ಬಂದ ಪ್ರಶ್ನೆ ಕೂಡ ವಿಚಿತ್ರವೇ ಎನ್ನಬಹುದು. ಪತಿ ಸಂತೋಷ್ ದೊಡ್ಡದೊಂದು ರೆಸ್ಟೋರೆಂಟ್ ಎದುರು ಕಾರು ಪಾರ್ಕ್ ಮಾಡಿ “ಏನು ಅಮ್ಮನೋರು ಕೆಳಗೆ ಇಳಿಯೋದಿಲ್ವ?! ಯಾವ ಲೋಕದಲ್ಲಿದ್ದೀರಿ” ಎಂದು ಡೋರ್ ಎಳೆದು ಎಚ್ಚರಿಸಿದರೂ ” ರೀ ನನಗೇನು ಬೇಡ ಈಗ. ನೀವು ಕಾಫಿ ಕುಡಿದು ಬನ್ನಿ” ಎಂದು ಮತ್ತೆ ತಲೆ ತಗ್ಗಿಸಿ ಯೋಚಿಸುತ್ತ ಕೂರುತ್ತಾಳೆ.
ರಾತ್ರಿ ಹಾಸಿಗೆಯ ದಿಂಬಿಗೆ ತಲೆ ಆನಿಸಿದಾಗ ಅಂದಿನ ಪ್ರಯಾಣದ ಸುಸ್ತಿಗೂ ನಿದ್ರೆ ಹತ್ತಲಿಲ್ಲ ಕಣ್ಣುಗಳಿಗೆ. ಬೆಳಿಗ್ಗೆ ಎದ್ದಾಗಲೂ ಮನಸ್ಸಲ್ಲಿ ಕೊರೆಯುತ್ತಿರುವುದು ಅದೊಂದೇ ವಿಷಯ. ಏನಾದರಾಗಲಿ ಒಬ್ಬಳೇ ತಲೆ ಕೆಡಿಸಿಕೊಂಡು ಮನಸ್ಸು ಹಾಳು ಮಾಡಿಕೊಳ್ಳೋ ಬದಲು ಒಮ್ಮೆ ನೇರವಾಗಿ ವಿಚಾರಿಸುವುದರಿಂದ ತಪ್ಪೇನಿಲ್ಲವಲ್ಲ ಎಂಬ ತೀರ್ಮಾನಕ್ಕೆ ಬಂದು,ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಸ್ನೇಹಿತೆ ಶೈಲಾ ಗೆ ಫೋನಾಯಿಸುತ್ತಾಳೆ.
” ಹಲೋ ಶೈಲೂ….. ಅಕ್ಕ ತಂಗಿ ಸೇರಿ ಇವತ್ತಿನ ಟಿಫಿನ್ ಗೆ ಏನ್ ಸ್ಪೆಷಲ್ ಮಾಡಿದ್ರಿ?! ಬೆಳಗ್ಗಿನ ಕೆಲಸ ಮುಗಿತಾ ಅಥವಾ ಇನ್ನೂ ಸುದ್ದಿ ಹೇಳುವುದ್ರಲ್ಲೇ ಮುಳುಗಿ- ಬಿಟ್ಟಿದ್ದೀರಾ ” ಎಂದು ಕೇಳುತ್ತಿದ್ದಂತೆ
“ಒಹೋ.. ಸೀಮಾ ಮ್ಯಾಡಮ್ ಗೆ ಈಗ ನೆನಪಾಯ್ತಾ?
ನಿನ್ನೆ ದೊಡ್ಡಕೆ ಬಾಯ್… ಎಂದು ರಾಗ ಎಳೆದು ಕೈ ಬೀಸಿ ಹೊರಟವಳಿಗೆ ಹಾಯ್ ವಾಪಾಸ್ ಮನೆಗೆ ತಲುಪಿದೆ ಎಂದು ಒಂದು ಮೇಸೇಜ್ ಹಾಕೋಕು ನೆನಪಿಲ್ಲ ಅಲ್ವಾ? ಏನಾಗಿತ್ತೇ ರೋಗ ನಿಂಗೆ??” ಎಂದಿನಂತೆ ಕಾಲೆಳೆದು ಮಾತಿಗಿಳಿಯುತ್ತಾಳೆ.
ತನ್ನ ಮನದಲ್ಲಿನ ಗೊಂದಲದ ಬಗ್ಗೆ ಪ್ರಸ್ತಾಪಿಸಲು ಸೀಮಾಳಿಗೆ ಈಗ ಬೇಕಾಗಿದ್ದು ಇದೇ ಆಗಿತ್ತು.
” ಅಬ್ಬಾ ಸರಿಯಾಗಿ ಗೆಸ್ ಮಾಡಿದೆ ನೋಡು. ಒಂಥರಾ ಹಾಗೆ ಆಗಿದೆ ಗೊತ್ತಾ. ನಿನ್ನೆ ಅಲ್ಲಿಗೆ ಬಂದು ಹೋದಾಗಿನಿಂದ ಯಾಕೋ ನನ್ನ ಮಂಡೆಯೇ ಸರಿ ಇಲ್ಲ ಕಣೇ…..ಹಾಂ..ಏನೋ ಒಂದು ಕೇಳ್ತೇನೆ ನಿನ್ನಲ್ಲಿ ಅದಕ್ಕೆ ಉತ್ತರ ಇದ್ದೇ ಇದೆ! ಮತ್ತೇ…ಅಲ್ಲಿ ಯಾರಾದ್ರೂ ಇದ್ರೆ ಸ್ವಲ್ಪ ದೂರ ಹೋಗಿ ಮೆಲ್ಲಗೆ ಮಾತಾಡುಓಕೆ “
ಪೀಠಿಕೆ ಕೇಳಿ ಅವಳಿಂದ ಹುಸಿಕೋಪದ ಉತ್ತರ
“ಅದೇನು ಅಂತ ಬೇಗ ಕೇಳು ಮಾರಾಯ್ತಿ.ನನ್ನ ತಲೆಗೂ ಹುಳ ಬಿಟ್ಟು ಗಂಟೆಗಟ್ಲೆ ಸತಾಯಿಸಬೇಡ. ಮಧ್ಯಾಹ್ನದ ಊಟ ಮುಗಿಸಿ ಇಂದು ಸಂಜೆಯೊಳಗೆ ನನ್ ಗೂಡು ಸೇರಿಕೊಳ್ಬೇಕು“ ಮಾತು ಮುಂದುವರೆಸಿದ ಸೀಮಾ,
“ಅಲ್ಲ ಕಣೇ.. ನಿನ್ನೆ ನಿಮ್ಮಕ್ಕನ ಮನೆಗೆ ಬಂದು ಆ ದೊಡ್ಡ ಅಂಕಣದ ಜಗಲಿಯಲ್ಲಿ ಕೂತಿದ್ದೆವು ನೋಡು. ಅದರ ಇನ್ನೊಂದು ಬಾಗಿಲಿಂದ ಸುಮಾರು ಮಧ್ಯವಯಸ್ಸಿನ ಗಂಡಸರೊಬ್ಬರು ಓಡೋಡಿ ಬಂದು ನಮ್ಮೊಂದಿಗೆ “ಆರಾಮ” ಎಂದರು. ನಾವು “ಹೂಂ… ನೀವು ಹೇಗಿದ್ದೀರಿ ?” ಹೇಳುತ್ತಿದ್ದಂತೆ “ಹಾಲ್ ಟಿಕೇಟ್ ತಂದ್ರ?! ” ಅಂತ ಕೈ ಚಾಚಿದರು.ಇದಕ್ಕೆ ಏನ್ ಹೇಳೋಕು ಗೊತ್ತಾಗದೆ ನಾನು ನನ್ನ ಯಜಮಾನರು ಸುಮ್ನೆ ಮುಖ ಮುಖ ನೋಡಿಕೊಂಡೆವು.ಅಷ್ಟ್ರಲ್ಲಿ ಅವರು ಅಲ್ಲಿಂದ ಮಾಯ!
ನಂತರ ನಿಮ್ಮಕ್ಕನ ಆದರ ಆತಿಥ್ಯ, ನಮ್ಮ ಹರಟೆ, ಹೀಗೆ ಸಂಜೆ ತನಕ ಹೊತ್ತು ಕಳೆದದ್ದೇ ತಿಳಿಯಲಿಲ್ಲ. ಅಲ್ಲಿಂದ ಹೊರಟಿದ್ದೆ ತಡ ನೋಡು ಒಂದೇ ಕ್ಷಣ ಕಂಡ ಆ ಮುಖಚಿತ್ರವೂ, ಅವರ ಪ್ರಶ್ನೆಯೂ ಕಣ್ಣೆದುರು ಬಂದು ನನ್ನನ್ನು ಬಿಡದೆ ಕಾಡಲು ಶುರುವಾಗಿದ್ದು.
ಈಗ ನೀನೆ ಹೇಳು…. ಆ ಮನೆಗೆ ಅಂಟಿಕೊಂಡು ಇನ್ನೊಂದು ಮನೆ ಉಂಟಲ್ಲ ಅದು ಯಾರದ್ದು? ಪಕ್ಕದಲ್ಲಿದ್ದವರು ಬಾಡಿಗೆಯವರ? ಹಾಗಾದ್ರೆ ಅಲ್ಲಿ ಯಾರೆಲ್ಲ ಇದ್ದಾರೆ? ಅಲ್ಲ…. ಈ ವಯಸ್ಸಿನಲ್ಲಿ ಆ ಮನುಷ್ಯನಿಗೆ ಹಾಲ್ ಟಿಕೇಟ್ ಯಾಕೆ ಅಂತ? ಅಷ್ಟಕ್ಕೂ ಅವರು ಅಪರಿಚಿತರಾದ ನಮ್ಮೊಂದಿಗೆ ಹಾಗೆ ಕೇಳಿದ್ದಾದ್ರು ಯಾಕೆ? ” ಒಂದೇ ಗುಕ್ಕಿಗೆ ಕೇಳಿದ ಸಾಲು ಸಾಲು ಪ್ರಶ್ನೆಗಳಿಗೆ,
“ಅಯ್ಯೋ…ಪಾಪ ಅವರು ಮತ್ಯಾರು ಅಲ್ಲ ಕಣೇ ನನ್ನಕ್ಕನ ಮೈದುನ. ಅವರದೊಂದು ದೊಡ್ಡ ದುರಂತ ಕಥೆ ಹೇಳ್ತೇನೆ ಕೇಳು” ಎನ್ನುತ್ತ ಅನುಕಂಪದ ಸ್ವರದಲ್ಲಿ ಹೇಳಲಾರಂಭಿಸುತ್ತಾಳೆ.
ವಿದ್ಯಾಧರ ಎಸ್.ಎಸ್.ಎಲ್.ಸಿ ಯಲ್ಲಿ ತನ್ನ ಜಿಲ್ಲೆಗೆ ಪ್ರಥಮ ರ‌್ಯಾಂಕ್ ಗಿಟ್ಟಿಸಿಕೊಂಡ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿ.ಆತನ ವಿದ್ಯಾಭ್ಯಾಸ ಮುಂದುವರೆದದ್ದು ಕುಂದಾನಗರಿಯ ದೊಡ್ಡ ವಿಶ್ವವಿದ್ಯಾನಿಲಯವೊಂದರಲ್ಲಿ.
ಅಲ್ಲಿಂದ ಶುರುವಾದ ಕಾಲೇಜು ಜರ್ನಿ ಡಬ್ಬಲ್ ಡಿಗ್ರಿ ಪಡೆಯುವ ತನಕವೂ ಅದೇ ಉನ್ನತ ಶ್ರೇಣಿಯಲ್ಲಿ ಸಾಗುತ್ತದೆ.
ತಂದೆ ತೀರಿಕೊಂಡಿದ್ದರೂ ಅಜ್ಜನ ಕಾಲದಿಂದಲೂ ಇದ್ದ ಫಲವತ್ತಾದ ದೊಡ್ಡ ಜಮೀನು, ಕೂಡಿಟ್ಟ ಕಾಸಿನ ಗಂಟಿರುವುದರಿಂದ ಇವನ ವಿದ್ಯಾಭ್ಯಾಸಕ್ಕೆ ಯಾವತ್ತೂ ಹಣಕಾಸಿನ ತೊಂದರೆಯಾಗಲಿಲ್ಲ.( ಹಿರಿಯ ಮಗನನ್ನು ಹೆಚ್ಚು ಓದಿಸದೆ ಬೇಗ ಮದುವೆ ಮಾಡಿ ನಿಷ್ಠುರ ಮಾಡಿಕೊಂಡು ಹಿಸ್ಸೆಗೆಂದು ಸ್ವಲ್ಪ ಅಸ್ತಿ, ಮತ್ತು ಉಳಿಯಲು ಅದೇ ಮನೆಯಲ್ಲಿ ಚಿಕ್ಕ ಜಾಗ ಕೊಟ್ಟಿದ್ದರು.) ಈ ಮಗ ಬುದ್ಧಿವಂತ ಮುಂದೆ ಏನೋ ಸಾಧಿಸುವನೆಂಬ ಹೆಮ್ಮೆ ಆ ತಾಯಿಗೆ. ರಜೆಯಲ್ಲಿ ಮನೆಗೆ ಹೋದಾಗಲೆಲ್ಲ ಗರಿ ಗರಿ ನೋಟುಗಳನ್ನೇ ಮಡಿಚಿ ಮಗನ ಜೇಬಿಗೆ ತುರುಕಿ ಕಳಿಸುತ್ತಿದ್ದಳು. ಹೀಗಾಗಿ ಈಗಲೇ ಜಾಬ್ ಗೆ ಸೇರುವ ಆತುರವೇನೂ ಇರಲಿಲ್ಲ.
ಮುಂದೆ ಡಾಕ್ಟರೇಟ್ ಪಡೆವ ಕನಸು ಹೊತ್ತ ವಿದ್ಯಾಧರ ತನ್ನಿಷ್ಟದ ಸೈಕಾಲಜಿ ಸಬ್ಜೆಕ್ಟ್ ಲ್ಲಿ ಪಿ. ಹೆಚ್.ಡಿ ಮಾಡುವ ನಿರ್ಧಾರಕ್ಕೆ ಬಂದಾಗ ಫೆಲೋ ಶಿಪ್ ನಲ್ಲಿ ಸೀಟು ಕೂಡಾ ಸುಲಭವಾಗಿ ಸಿಗುತ್ತದೆ. ಅದು ಹೆಸರಾಂತ ಯೂನಿವರ್ಸಿಟಿಯಾದ್ದರಿಂದ ಹೊರ ರಾಜ್ಯಗಳ ಸ್ಟೂಡೆಂಟ್ಸ್ ಗಳೇ ಹೆಚ್ಚು ಇಲ್ಲಿ. ಕ್ಯಾoಪಸ್ ನಲ್ಲಿಯೇ ಎಲ್ಲಾ ಅನುಕೂಲವಿರುವ ಬಾಯ್ಸ್ ಹಾಸ್ಟೆಲ್ ಇದ್ದುದರಿಂದ ಹೊರಗೆ ರೂಮ್ ಹುಡುಕುವ ಅಗತ್ಯವೂ ಬರಲಿಲ್ಲ.
ಶುರುವಿನಲ್ಲಿ ಅಲ್ಲಿದ್ದವರೆಲ್ಲರೂ ತನ್ನಂತೆ ಒಳ್ಳೆಯ ವಿದ್ಯಾರ್ಥಿಗಳೆಂದು ಕಂಡರೂ ಕೆಲವು ತಿಂಗಳು ಕಳೆಯಲು ಅಲ್ಲಿಯ ವಾತಾವರಣದ ಬಣ್ಣ ಬಯಲಾಗ ಹತ್ತಿತು.ತನ್ನ ಪಾಡಿಗೆ ತಾನಿರುವ, ಬರಿ ಓದಿನ ಕಡೆಗೆ ಮಾತ್ರ ಲಕ್ಷ್ಯ ವಹಿಸುವ ಇವನ ಮುಗ್ಧ ಸ್ವಭಾವ ಉಳಿದವರಿಗೆ ಹೇಗೆ ಹಿಡಿಸೀತು?
ಒಂದೆಡೆ ಕ್ಲಾಸ್ ಲ್ಲಿ ಟಾಪ್ ಲೆವೆಲ್ ನ್ನು ಯಾರಿಗೂ ಬಿಟ್ಟು ಕೊಡದ ಇವನ ಸ್ಕೋರ್ ಮೇಲೆ ಎಲ್ಲರ ಕಣ್ಣಾದರೆ, ಮತ್ತೊಂದು ಕಡೆ ಗುಟುಕಾ,ಸಿಗರೇಟು, ಡ್ರಗ್ಸ್ ಹೀಗೆ ವಿಧ ವಿಧ ಮಾದಕ ಚಟವಿರುವ ತಮ್ಮ ಜೊತೆಗೆ ಇವನು ಬೆರೆಯುವುದಿಲ್ಲವೆಂಬ ಸಿಟ್ಟು ಬೇರೆ.
ಹೀಗೆ ಅಂತಿಮ ವರ್ಷದಲ್ಲಿದ್ದಾಗ ಒಂದು ಪಾರ್ಟಿಯ ನೆಪದಲ್ಲಿ ಎಲ್ಲ ಹುಡುಗರು ಸೇರಿಕೊಂಡು ಹೋಟೆಲ್ ನಲ್ಲಿ ಸರಿಯಾಗಿ ತಿನ್ನಿಸಿ ಆ ರಾತ್ರಿ ಬಿಡದೆ ಬಲವಂತವಾಗಿ ಇವನಿಗೂ ಡ್ರಗ್ಸ್ ಎಂಬ ಮಾದಕ ದ್ರವ್ಯದ ರುಚಿ ತೋರಿಸುತ್ತಾರೆ.ಇದಾದ ನಂತರ ಆಗಾಗ ತಾನಾಗಿಯೇ ಬೇಕೆಂದು ಕೇಳಿ ಪಡೆಯುತ್ತ ಅಡಿಕ್ಟ್ ಆಗಲು ಹೆಚ್ಚು ದಿನ ಹಿಡಿಯಲಿಲ್ಲ. ನಿರಕ್ಷರಕುಕ್ಷಿಯಾದ ತಾಯಿ ಮಗನ ಮೇಲಿನ ಅತಿಯಾದ ನಂಬುಗೆಯಲ್ಲಿ ತಪ್ಪದೇ ಪ್ರತಿ ತಿಂಗಳು ಖರ್ಚಿಗೆ ಕಳುಹಿಸುತ್ತಿದ್ದ ದುಡ್ಡು ಆ ಚಟದಾಸರ ಮೋಜು ಮಸ್ತಿಯಲ್ಲಿ ನೀರಂತೆ ಹರಿದು ಹಂಚಿ ಹೋಗುತಿತ್ತು.
ಅದೀಗ ಕೊನೆಯ ಸಿಲ್ಲಬಸ್ ಮುಗಿದು ಫೈನಲ್ ಎಕ್ಸಾಮ್ ಗೆ ಕೆಲವೇ ಸಮಯ ಬಾಕಿ ಇದ್ದು ಹಾಲ್ ಟಿಕೇಟ್ ಬರಬೇಕಾಗಿತ್ತು.ಅದರೆ ವಿದ್ಯಾಧರ ಡ್ರಗ್ ತೆಗೆದುಕೊಳ್ಳುವದನ್ನು ದಿನದಿನಕ್ಕೂ ಜಾಸ್ತಿ ಮಾಡಿಕೊಂಡು ಮೊದಲಿನಂತೆ ನಿದ್ರೆಗೆಟ್ಟು ಓದುವುದಿರಲಿ ನಿದ್ರೆಯಲ್ಲೇ ಹಗಲು ರಾತ್ರಿಯನ್ನು ಕಳೆಯುತ್ತಿದ್ದ. ಬಹಳ ದಿನಗಳಿಂದ ಕಾಲೇಜು ಕಡೆ ಮುಖ ಹಾಕದೇ ಇದ್ದುದನ್ನು, ಮುಖ್ಯವಾಗಿ ರ‍್ಯಾಂಕ್ ಸ್ಟೂಡೆಂಟ್ ಆದವನೇ ಥೀಸೀಸ್ ಕೂಡ ಸಬ್ಮಿಟ್ ಮಾಡದಿರುದನ್ನೆಲ್ಲ ಗಮನಿಸಿ ವಿಚಾರಿಸಿದ ಇವನ ಗೈಡ್ ಗೆ ವಾಸ್ತವ ವಿಷಯ ತಿಳಿದಾಗ ತುಂಬಾ ನೋವಾಗುತ್ತದೆ. ಆಗಲೇ ಪರಿಸ್ಥಿತಿ ಕೈ ಮೀರಿರುವುದರಿಂದ ಸೂಕ್ಷ್ಮವಾಗಿ ತಾಯಿಗೆ ಸುದ್ದಿ ಮುಟ್ಟಿಸುತ್ತಾರೆ.
ಡ್ರಗ್ಸ್ ಎಂಬ ಹೆಸರೇ ಎಲ್ಲೂ ಕೇಳದ, ನೋಡದ ಆ ತಾಯಿಗೆ ಸರಿ ಅರ್ಥವಾಗದಿದ್ದರೂ ಅದೊಂದು ಕೆಟ್ಟ ಚಟವೆಂದು ಮನದಟ್ಟಾಗಿ ಭಯದಿಂದ ಊರಿನ ಜನರ ಕಳಿಸಿ ಮಗನನ್ನು ಮನೆಗೆ ಕರೆಸಿಕೊಳ್ಳುತ್ತಾರೆ. ಚಿನ್ನದಂತ ಮಗ ಪುಂಡರ ಸಹವಾಸ ದೋಷದಿಂದ ಹೀಗಾಗಿದ್ದನ್ನು ನೋಡಿ ಯಾವ ತಾಯಿ ತಾನೇ ಸಹಿಸಿಕೊಂಡಾಳು. ಹೇಗಾದರೂ ಅದೆಲ್ಲ ಬಿಟ್ಟು ಮೊದಲಿನಂತೆ ಆದರೆ ಸಾಕೆಂಬ ಸಂಕಟದಲ್ಲಿ ಏನು ಪರಿಹಾರ ತೋಚದೆ ( ಕೂರಿಸಿ ನಿಧಾನ ಬುದ್ಧಿ ಮಾತು ಹೇಳುವ ಬದಲು) ಮಗನಿಗೆ ಹೊಡೆಸಿ ಬಡಿಸಿ ಚೆನ್ನಾಗಿ ಥಳಿಸುತ್ತಾರೆ.
ಇಂತಹ ಯಾವುದೇ ತರಹದ ದುರ್ವ್ಯಸನ ಇರುವವರಿಗೆ ಹೀಗೆ ಹಠಾತ್ತಾಗಿ ಅವರ ನಿತ್ಯದ ಅಭ್ಯಾಸ ಬಿಡಿಸಿಬಿಟ್ಟರೆ, ಮಾಮೂಲಾಗಿ ಆ ವಸ್ತು ಸಿಗದೇ ಇದ್ದರೆ ಅವರು ದೈಹಿಕ ಅನಾರೋಗ್ಯ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಾರಂತೆ. ಇವನಿಗೆ ಆಗಿದ್ದು ಹಾಗೆಯೇ.
ಆಹಾರ ತ್ಯಜಿಸಿ ಒಂದಷ್ಟು ದಿನ ಮೂಲೆಯಲ್ಲಿ ಮಂಕಾಗಿ ಕೂತಿರುತ್ತಿದ್ದವನು ಇದ್ದಕ್ಕಿದ್ದಂತೆ ತಾಯಿಯನ್ನು ಕಂಡರೆ ಅವಾಚ್ಯ ಪದಗಳಿಂದ ಬಯ್ಯುವುದು, ಕೈಗೆ ಸಿಕ್ಕಿದ ವಸ್ತು ತೆಗೆದುಕೊಂಡು ಹೊಡೆಯುವುದೆಲ್ಲ ಮಾಡುತ್ತಾನೆ.ಇದು ಅತಿರೇಕಕ್ಕೆ ಹೋದಾಗ ಕೈ ಕಾಲುಗಳಿಗೆ ಸರಪಳಿ ಬಿಗಿದು ಕತ್ತಲ ಕೋಣೆಯಲ್ಲಿ ಕೂಡಿ ಹಾಕದೆ ಬೇರೆ ವಿಧಿ ಇರಲಿಲ್ಲ. ಕಡೆಗೂ ವಿದ್ಯಾಧರ ವಾಸ್ತವದಲ್ಲಿ ಮನೋಶಾಸ್ತ್ರವನ್ನೇ ಕಲಿತು ಅದರಲ್ಲಿ ಪರಿಣಿತಿ ಹೊಂದಿಯೂ ಸಹವಾಸ ದೋಷದಿಂದ ಮಾನಸಿಕನಾಗಿ ಸಮಾಜದ ದೃಷ್ಟಿಗೆ ಓರ್ವ ಹುಚ್ಚನಾದ.
ಮನಕಲಕುವ ಆ ಸತ್ಯಕಥೆಯ ಪ್ರತಿ ಅಧ್ಯಾಯವನ್ನೂ ಗೆಳತಿ ಎದುರು ತೆರೆದಿಟ್ಟ ಶೈಲಾ ಒಮ್ಮೆ ದೀರ್ಘವಾಗಿ ಉಸಿರೆಳೆದು, ಮೌನವಾಗಿ ಆಲಿಸುತ್ತಿದ್ದ ಗೆಳತಿ ಸೀಮಾ ಲೈನ್ ನಲ್ಲಿರುವುದ ಖಾತರಿಪಡಿಸಿಕೊಳ್ಳುತ್ತ ಈ ಬಗ್ಗೆ ತನ್ನ ಮನದಾಳದ ಎರಡು ಮಾತುಗಳನ್ನೂ ಹೇಳಲಿಚ್ಚಿಸುತ್ತಾಳೆ.
“ಏನು ಗೊತ್ತಾ…ಈಗ ನಾಲ್ಕೈದು ವರ್ಷ ಹಿಂದೆ ಇವರ ಸ್ಥಿತಿ ನೋಡಲಾಗದೆ ನನ್ನ ಬಾವನವರೇ ಧಾರವಾಡ ಕ್ಕೆ ಕರೆದುಕೊಂಡು ಹೋಗಿ ಕರೆಂಟ್ ಟ್ರೀಟ್ಮೆಂಟ್, ಕೌನ್ಸೆಲ್ಲಿಂಗ್ ಎಲ್ಲಾ ಕೊಡಿಸಿದ್ದರು. ನಂತರ ಇವರಲ್ಲಿದ್ದ ಕೋಪ, ಕ್ರೂರತನವೆಲ್ಲ ಕಡಿಮೆಯಾಗಿ ಸ್ವಲ್ಪ ಡಿಮ್ ಆದರೂ ಪೂರ್ತಿ ಮೊದಲಿನ ಹಾಗೆ ಆಗಲೇ ಇಲ್ಲ. ತಲೆಯಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ಓದುತ್ತಿದ್ದ ಆ ಕಾಲೇಜು ದಿನಗಳದ್ದೇ ನೆನಪಂತೆ ಪಾಪ.
ಯಾವಾಗ್ಲೂ ಹಾಲ್ ಟಿಕೆಟ್ ತರಬೇಕು, ಎಕ್ಸಾಮ್ ಬರೆಯಬೇಕು ಎನ್ನುವುದೊಂದೇ ಯೋಚನೆ. ಆದ್ದರಿಂದ ಇವತ್ತಿಗೂ ಕೂಡಾ ಅದೇ ಗುಂಗಲ್ಲಿ ತಮ್ಮ ಮನೆಗೆ ಬಂದವರಿಗೆಲ್ಲ ಹಾಲ್ ಟಿಕೆಟ್ ಬಂತಾ?! ಎಂದು ಕೈ ಒಡ್ದು ತ್ತಾರೆ. ಈಗ ತಾಯಿಯೂ ಮುದುಕಿಯಾಗಿ ಹಾಸಿಗೆ ಹಿಡಿದಿದ್ದಾರೆ. ನೋಡು… ಅಂದು ಬೇಡವಾಗಿದ್ದ ನಮ್ಮಕ್ಕನೇ ಈಗ ಹೊತ್ತು ಹೊತ್ತಿಗೆ ಊಟ, ತಿಂಡಿ ಎಲ್ಲವನ್ನು ಕೊಟ್ಟು ಇಬ್ಬರನ್ನೂ ಆರೈಕೆ ಮಾಡಬೇಕು. ಇಲ್ಲಿಗೆ ಬಂದಾಗೆಲ್ಲ ಈ ಮನೆಯ ಗೋಳು ನೋಡುತ್ತಿದ್ದರೆ ಹೃದಯ ಹಿಂಡಿದಷ್ಟು ವೇದನೆಯಾಗುತ್ತದೆ ” ಎನ್ನುತ್ತಾ ಭಾವುಕಳಾಗಿ
ಫೋನ್ ಇಡುತ್ತಾಳೆ.
ಇತ್ತ… ಒಂದು ಸಿನೆಮಾದಂತೆ ನಡೆದ ಆ ಮಾರ್ಮಿಕ ಕಥೆ ಕೇಳಿ ಸೀಮಾಳ ಕಣ್ಣಾಲಿಗಳು ತುಂಬಿ ಹರಿಯುತ್ತಿದ್ದವು. ಆದರೆ…ಇವಳ ಮನದೊಳಗಿನ ತಳಮಳಗಳು ಇದರಿಂದ ಶಾಂತವಾಗುವ ಬದಲು ಕಳವಳ ಇನ್ನೂ ಹೆಚ್ಚಾಗಿತ್ತು.ಹಾಗೆ ಎಲ್ಲೋ ಒಂದು ಕಡೆಯಿಂದ ಮನಸ್ಸು ಜಾಗೃತವಾಗಿ ದೂರದ ಸಿಲಿಕಾನ್ ಸಿಟಿ (ಬೆಂಗಳೂರು) ಯಲ್ಲಿ ಎಂ.ಬಿ. ಬಿ.ಎಸ್ ಓದಲು ಹಾಸ್ಟೆಲ್ ನಲ್ಲಿ ಬಿಟ್ಟ ಮಗ ಶ್ರೇಯಸ್ ನ ನೆನಪು ಉಕ್ಕಿ ಬರುತ್ತದೆ. ಮೌನವಾಗಿ ಕುಳಿತು ಇಡೀ ದಿನ ತನ್ನನ್ನೇ ತಾನು ಆತ್ಮಾವಲೋಕನ ಮಾಡಿಕೊಳ್ಳತೊಡಗುತ್ತಾಳೆ. ಬಿಸಿನೆಸ್ ಮೇಲೆ ಹೊರಗೆ ಹೋಗಿದ್ದ ಸಂತೋಷ್ ಮನೆಗೆ ಬರುತ್ತಿದ್ದಂತೆ ಈ ಸತ್ಯಘಟನೆಯನ್ನು ಹೇಳಿ ವಿವರಿಸಿದಾಗ ಅವನ ಮನವೂ ವಿಹ್ವಲಗೊಳ್ಳುತ್ತದೆ. ತನ್ನ ಮಗನನ್ನು ಮೆಡಿಕಲ್ ಕಾಲೇಜ್ ಗೆ ಸೇರಿಸಿ ಬಂದು ಆಗಲೇ ಎರಡು ವರ್ಷ ಕಳೆದು ಹೋದದ್ದು ಈಗ ಜ್ಞಾಪಕಕ್ಕೆ ಬಂದಿತ್ತು! ಅಪರೂಪಕ್ಕೆ ಮನೆಗೆ ಬಂದಾಗಲೂ ಸ್ವಲ್ಪ ಹೊತ್ತು ಸಹ ಅವನ ಜೊತೆಗಿಲ್ಲದೆ ಬರಿ ಓದು ಓದು ಎಂದು ಟಾರ್ಚರ್ ಕೊಡುತ್ತಿದ್ದದ್ದು, ವಾರಕ್ಕೊಮ್ಮೆ ಅವನಾಗಿಯೇ ಫೋನ್ ಮಾಡಿದ್ರೂ “ಎಕ್ಸಾಮ್ ಯಾವಾಗ? ಫೀಸ್ ಎಷ್ಟು?” ಎಂದು ಮಾತ್ರ ವಿಚಾರಿಸುತ್ತಿದ್ದ ತಾನು ಒಬ್ಬ ತಂದೆಯ ಸ್ಥಾನದಲ್ಲಿದ್ದುಹೀಗೆ ಮಾಡುತ್ತಿದ್ದದ್ದು ಎಷ್ಟರ ಮಟ್ಟಿಗೆ ಸರಿ?ಎಂದು ಪರಿತಪಿಸುತ್ತಾನೆ. ಕೊನೆಯಲ್ಲಿ ಇಬ್ಬರೂ ಇಷ್ಟು ದಿನ ಮಾಡಿದ ತಪ್ಪಿಗೆ ಮರುಗಿ ತಮ್ಮ ಮಗನ ಶ್ರೇಯೋಭಿವೃದ್ಧಿಯನ್ನು ಆಶಿಸುತ್ತ ಆತನ ಭವಿಷ್ಯದೆಡೆಗೆ ,ಒಂದು ಗಂಭೀರ ನಿಲುವು ತಳೆಯುತ್ತಾರೆ.
ಇಷ್ಟಕ್ಕೆಲ್ಲ ಕಾರಣೀಭೂತವಾದ ಆ ಮನೆಯ ಭೇಟಿಗೆ,ಆ ಕರುಣಾಜನಕ ಕಥೆ ಹೇಳಿ ತನ್ನ ಕಣ್ ತೆರೆಸಿದ ಪ್ರಾಣ ಸ್ನೇಹಿತೆಗೆ ಕೃತಜ್ಞತಾಪೂರ್ವಕವಾಗಿ ಸೀಮಾಳಿಂದ ಇಂದು ಮತ್ತೊಂದು ಕರೆ ಹೋಗುತ್ತದೆ “ವಿದ್ಯಾಧರನ ಬದುಕು ನನಗಂತೂ ಒಂದು ಒಳ್ಳೆಯ ಪಾಠ ಕಣೇ ಶೈಲೂ….. ಬರಿ ಮನೆಗೆಲಸ ಬೋರ್ ಎಂದು ಆನ್ಲೈನ್ ಮ್ಯೂಸಿಕ್ ಕ್ಲಾಸ್ ಗೆ ಸೇರ್ಕೊಂಡು ರಾಗ ತಾಳ ಲಯವೆಂದು ಸಂಗೀತ ಸಾಗರದಲ್ಲಿ ತೇಲುತ್ತಿದ್ದ ನನಗೆ, ವರ್ಷ ವರ್ಷಕ್ಕೂ ಪ್ರಾಫಿಟ್ ನಲ್ಲಿ ಸಾಗುತ್ತಿರುವ ನನ್ನವರ ಬ್ಯುಸಿನೆಸ್ ಕಡೆಯ ಒತ್ತಡದ ನಡೆ ಕೂಡ ತಪ್ಪು ಅಂತ ಒಂದು ದಿನವೂ ತೋರಲಿಲ್ಲ. ನಮ್ಮ ಜೀವನದ ಸ್ಟೇಟಸ್ ಮೈಂಟೈನಿನಲ್ಲಿ ನಮ್ಮ ಮಗನಿಗೆ ಒಂದಿಷ್ಟಾದರೂ ಸಮಯ ಕೊಡೋಕೆ ಆಗ್ತಾ ಇಲ್ಲವಲ್ಲ ಅಂತ ಒಮ್ಮೊಮ್ಮೆ ಅನ್ನಿಸ್ತಾ ಇತ್ತಾದರೂ ಈ ತನಕ ಅದರ ಗಹನತೆ ಮನಸ್ಸಿಗೆ ಇಳಿಯಲೇ ಇಲ್ಲ. ನಿಮ್ಮಕ್ಕನ ಮನೆಯಲ್ಲಿ ಮೊನ್ನೆಯ ಆ ದೃಶ್ಯ ಕಣ್ಣಿಗೆ ರಾಚುವಂತೆ ಇತ್ತು ನೋಡು. ಪಾಪದ ಹುಡುಗ ! ಏನೋ ಒಂದು ಕ್ಷಣದ ಆಸೆಗೆ ಬಲಿಯಾಗಿ ಇಡೀ ಜೀವನ ನರಕ ಮಾಡಿಕೊಂಡ. ಹಾಗಂತ ಇದಕ್ಕೆ ಅವನ ಪೋಷಕರನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಅವರೇನು ನಾಲ್ಕಕ್ಷರ ಕಲಿತವರಲ್ಲ.ಮೇಲಾಗಿ ಈಗಿನ ಕಾಲದಂತೆ ನೆಟ್ವರ್ಕ್ ವ್ಯವಸ್ಥೆ ಆದ್ರೂ ಎಲ್ಲಿತ್ತು??
ಆದರೆ ಗ್ರಾಜುಯೇಟೆಡ್ ಆಗಿ ನಾವು ಕಾಣ್ತಾ ಕಾಣ್ತಾ ಎಷ್ಟು ತಪ್ಪು ಮಾಡುತ್ತಿದ್ದೇವೆ ಎಂಬ ಅರಿವು ನಮಗೀಗ ಆಗಿದ್ದು.
ಈಗಿನ ಕಾಲದ ಇನ್ಸ್ಟಿಟ್ಯೂಷನ್ ಗಳಲ್ಲಿ, ಹಾಸ್ಟೆಲ್ ಗಳಲ್ಲಿ ಕೇಳ್ಬೇಕಾ ಅಬ್ಬಾ ರ‍್ಯಾಗಿಂಗ್, ಸ್ಕ್ಯಾಮ್ ಅಂತೆ, ಇದೆಲ್ಲ ನೆನೆಸಿಕೊಂಡ್ರೆ ಮೈ ನಡುಗುತ್ತದೆ.
ಹೇಗೂ ವೀಕೆಂಡ್ ಬಂತಲ್ವಾ ಇಂದು ರಾತ್ರಿಯೇ ನಾವು ಬೆಂಗಳೂರಿಗೆ ಹೊರಡುತ್ತಿದ್ದೇವೆ.ಎರಡು ದಿನ ಅಲ್ಲೇ ಉಳಿದು ಶ್ರೇಯಸ್ ನ ಕಾಲೇಜ್ ಮತ್ತು ಹಾಸ್ಟೆಲ್ ಎಲ್ಲ ನೋಡಿಕೊಂಡು ಪರ್ಮಿಷನ್ ಸಿಕ್ಕರೆ ಅವನನ್ನು ಆಚೆ ಕರೆದುಕೊಂಡು ಓಡಾಡಿಸಿ ಬರುತ್ತೇವೆ. ಈ ಸಲ ಮಾತ್ರವಲ್ಲ ಎಷ್ಟೇ ಕೆಲ್ಸದ ಒತ್ತಡವಿದ್ರೂ ಆಗಾಗ ಅವರೊಬ್ಬರಾದ್ರು ತಪ್ಪದೇ ಹೋಗಿ ನೋಡಿಕೊಂಡು ಬರಲೇಬೇಕು ಎಂದು ನನ್ನವರಿಗೆ ಕಂಡೀಶನ್ ಹಾಕಿದ್ದೇನೆ.
ಇನ್ಮೇಲೆ ಮಗ ನಮ್ಮ ಕಣ್ಣ ಮುಂದೆಯೇ ಬೆಳೀತಾನೆ…
ನಿಜವಾದ ನೆಮ್ಮದಿ ದೊರಕಿದ್ದು ಈಗಲೇ ಶೈಲೂ..” ಎಂದು ಸೀಮಾ ಮಾತನಾಡುತ್ತಿದ್ದರೆ ಶೈಲಾಗೆ ಈ ಒಂದು ಕಥೆ ಹೇಳಿದ ಘಳಿಗೆ ತನ್ನ ಗೆಳತಿಯ ಜ್ಞಾನದ ಅಕ್ಷುಗಳಿಗೆ ಮುಚ್ಚಿದ್ದ ಮಸುಕಾದ ಪರದೆಯನ್ನು ಸರಿಸಿತಲ್ಲ ಎಂಬ ಸಮಾಧಾನ.
. “ಹೋಗಲಿ ಬಿಡು ಸೀಮಾ..ಒಬ್ಬೊಬ್ಬರ ಮನೆಯ ಕಥೆ – ವ್ಯಥೆ ಒಂದೊಂದು ತರಹ. ಯಾರು ಏನೂ ಮಾಡೋಕೆ ಆಗಲ್ಲ ಕಣೇ..ನನಗೆ ಒಂದು ಖುಷಿ ಗೊತ್ತಾ ನೀ ಬದಲಾದೆ ಅಂತ! ಆದ್ರೆ ಈ ಮನೆಯ ಕಷ್ಟಕ್ಕೆ ಪರಿಹಾರವೆಂದು ಗೊತ್ತಿಲ್ಲ.
ನನ್ನ ಅಕ್ಕನ ಮೈದುನ ಅಂತಾದ್ರೂ ವಿದ್ಯಾಧರ ಒಬ್ಬ ಮನೋಶಾಸ್ರ್ತದ ವಿದ್ಯಾರ್ಥಿ. ಅಷ್ಟಕ್ಕೂ ನನ್ನ ನಿನ್ನ ಹಾಗೆ ಮನುಷ್ಯ. ಚಿಕೆತ್ಸೆಗಳ ಪ್ರಭಾವದಿಂದ ಅವನು ಸರಿ ಹೋದ್ರೂ ಅವನ ಕನಸು ಮಾತ್ರ ಕನಸಾಗಿಯೇ ಉಳಿಯುತ್ತಲ್ವಾ? ಇಂತಹ ಮೋಸ ಯಾವ ಮಕ್ಕಳಿಗೂ ಆಗ್ಬಾರ್ದು. ಹೈಯರ್ ಸ್ಟಡೀಸ್ ಗಾಗಿ ದೂರದ ಸಿಟಿಗಳಲ್ಲಿ ಬಿಟ್ಟ ಮಕ್ಕಳಿಗೆ ಪೇರೆಂಟ್ಸ್ ಗಳು ಫೋನ್ ಪೇ ಮಾಡುವುದೊಂದೇ ಇಂಪಾರ್ಟೆoಟ್ ಅಲ್ಲ ಅನ್ನೋದಕ್ಕೆ ವಿದ್ಯಾಧರನ ಹಾಸ್ಟೆಲ್ ಘಟನೆ ಸಾಕ್ಷಿ.
ಹರೆಯದ ವಯಸ್ಸಿನಲ್ಲಿ ಮಕ್ಕಳು ಎಡವದಂತೆ ಸದಾ ಕಣ್ಣಾಗಿರುವುದು ಪೋಷಕರ ಜವಾಬ್ಧಾರಿ.ಈಗಿನ ಮಕ್ಕಳಂತೂ ಬಿಡು ಬರಿ ಪುಸ್ತಕದ ಹುಳಗಳು ಕಣೇ. ಹೊರಗಿನ ತಿಳುವಳಿಕೆ ಸ್ವಲ್ಪ ಕೂಡ ಇಲ್ಲ.ಇಂದಿನ ಶಿಕ್ಷಣ ವ್ಯವಸ್ಥೆ ಕೂಡ ಇದಕ್ಕೆ ಕಾರಣ. ವಿದ್ಯಾರ್ಥಿಗಳು ಬರಿ ಅಂಕಗಳಿಕೆಗಿಂತ ಆತ್ಮ ವಿಶ್ವಾಸ, ಧೈರ್ಯ, ಪ್ರಾಪಂಚಿಕ ಜ್ಞಾನ,ಸ್ವಂತಿಕೆಯಿಂದ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಡುವುದೇ ನಿಜವಾದ ಶಿಕ್ಷಣ ವ್ಯವಸ್ಥೆಯ ಧ್ಯೇಯವಾದಾಗ ಮುಂದಿನ ಯುವ ಪೀಳಿಗೆಗೆ ಸ್ವಾಸ್ಥ್ಯ ಬದುಕು ಲಭ್ಯವಾಗುತ್ತೆ..” ಎಂದು ತನ್ನ ಸುದೀರ್ಘ ಸಂಭಾಷಣೆಗೆ ಮುಕ್ತಾಯ ಹಾಕಿದ ಶೈಲಾಳ ದನಿ ಗಂಭಿರವಾದದ್ದು ಸೀಮಾಳ ಆತ್ಮಬಲವನ್ನು ವೃದ್ಧಿಸಿತ್ತು.
ಸಂಗೀತ ಪಾಠ ಕಲಿಯುವುದರ ಜೊತೆ ಜೊತೆ ಬದುಕಿಗೂ ಬೇಕಾದ ಇಂತಹ ಪಾಠವನ್ನು ತಾನು ಕಲಿತು, ಇತರರಿಗೂ ಕಲಿಸಿಕೊಡಬೇಕು ಎಂಬ ನಿರ್ಧಾರ ಸೀಮಾಳ ಮನಸ್ಸಿನಲ್ಲಿ ಟಿಸಿಲೊಡೆದದ್ದೇ ಅವಳ ಮುಂದಿನ ಕ್ಷಣಗಳಿಗೆ ಭರವಸೆಯನ್ನು ತುಂಬಿತ್ತು..
“ಸ್ತುತಿಸುವೆ ತಾಯೆ ನಿನ್ನ ಜ್ಞಾನದೇವತೆ……..” ಎಂಬ ಹಾಡಿನ ಸಾಲುಗಳನ್ನು ಗುನುಗುತ್ತ , ಮಗನ ನೋಡುವ ಖುಷಿಯಲ್ಲಿ ಪ್ಯಾಕಿಂಗ್ ಮಾಡುತ್ತಿರುವ ಸೀಮಾಳ ತುಟಿಯಂಚಿನಲ್ಲಿ ಮಿನುಗುತ್ತಿದ್ದ ಹೂನಗು ಅವಳ ಮುಖಕ್ಕೆ ಒಂದು ರೀತಿಯ ಮೆರುಗನ್ನು ನೀಡುತ್ತಿದ್ದರೆ ಅತ್ತ ಕರಿಯರ್ ನಲ್ಲಿ ಕಾರ್ಡಿಯಾಲಜಿಸ್ಟ್ ಆಗಬೇಕೆಂದು ಛಲದಿಂದ ಓದುತ್ತಿದ್ದ ಶ್ರೇಯಸ್ ಗೆ ಅಪ್ಪ, ಅಮ್ಮ ಬರುತ್ತಿರುವ ಸಂತಸದ ಸುದ್ದಿ ಕೇಳಿ ಹೃದಯದಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು.
----- ------
ಕುಸುಮಾ. ಜಿ. ಭಟ್