ಟಿ. ಎ. ಎನ್. ಖಂಡಿಗೆಯವರ ‘ಹೊಟ್ಟಿನೊಳಗಿನ ಕಿಡಿ’

ಹಲವು ದಶಕಗಳಿಂದ ಕನ್ನಡ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಟಿ. ಎ. ಎನ್. ಖಂಡಿಗೆಯವರು ‘ರಾವುಗನ್ನಡಿ’ (ಕವನ ಸಂಕಲನ) ‘ಮನದ ಕಜ್ಜಳ’, ‘ಮನದ ಮಜ್ಜನ’ (ವೈಚಾರಿಕ ಲೇಖನಗಳ ಸಂಗ್ರಹ) ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು ಹೊರ ತಂದ ಗಮನಾರ್ಹ ಕಥಾ ಸಂಕಲನವೇ ‘ಹೊಟ್ಟಿನೊಳಗಿನ ಕಿಡಿ.’

ಖಂಡಿಗೆಯವರ ಕಥನಲೋಕದಲ್ಲಿರುವ ಮನುಷ್ಯ ಪ್ರಪಂಚವು ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿದೆ. ವ್ಯವಸ್ಥೆಯೊಳಗಿನ ಕ್ರೌರ್ಯ, ಇನ್ನೂ ಉಳಿದಿರುವ ಜಾತಿ ಪದ್ಧತಿ, ಮನುಷ್ಯತ್ವದ ಸೆಲೆಯಿಲ್ಲದಂತೆ ಹೊಗೆಯಾಡುತ್ತಿರುವ ದ್ವೇಷ, ಜಿದ್ದು, ಸ್ವಾರ್ಥಗಳು ನರಕದ ಬೇಲಿಯನ್ನು ಹೆಣೆಯುತ್ತವೆ. ನೆಮ್ಮದಿಯ ಉಸಿರಿಗೆ ಆಸ್ಪದವಿಲ್ಲದ ನರಕದ ಮುಖಗಳನ್ನು ತೋರಿಸುತ್ತವೆ. ವ್ಯವಸ್ಥೆಯೊಳಗೆ ಜನರು ನಲುಗುವ ರೀತಿ, ಅದನ್ನು ಮೆಟ್ಟಿ ನಿಲ್ಲುವ ವ್ಯಕ್ತಿಯ ಘನತೆ, ಬಡವರ ಸ್ವಾಭಿಮಾನಗಳನ್ನು ಗಟ್ಟಿ ಮಾತಿನ ಭಿತ್ತಿಯಲ್ಲಿ ವಿವೇಚಿಸುವ ಕತೆಗಾರರ ಮಾನವೀಯ ದೃಷ್ಟಿಕೋನವು ಮನುಷ್ಯರಲ್ಲಿನ ಉತ್ತಮ ಗುಣಗಳ ಸಾಧ್ಯತೆಗಳೆಡೆಗೆ ಗಮನವನ್ನು ಹರಿಸುತ್ತದೆ.

‘ಹೊಟ್ಟಿನೊಳಗಿನ ಕಿಡಿ’ ಎಂಬ ಪೌರಾಣಿಕ ಕತೆಯು ಪುರಾಣ ಕಾವ್ಯದಲ್ಲಿ ಧೀರೋದಾತ್ತರಾಗಿ ಚಿತ್ರಿತರಾದ ಭೀಷ್ಮ, ದ್ರೋಣರ ವ್ಯಕ್ತಿತ್ವದ ಘನತೆ, ಉದಾತ್ತ ಭಾವಗಳು ಲೇಖಕರ ಆಧುನಿಕ ದೃಷ್ಟಿಕೋನದ ಮೂಲಕ ಮರು ಪರೀಕ್ಷೆಗೊಳಗಾಗುತ್ತವೆ. ಅಭಿಮನ್ಯುವಿನೊಂದಿಗಿನ ಹೋರಾಟದಲ್ಲಿ ಬಲಗೈಯ ಹೆಬ್ಬೆರಳನ್ನು ಕಳೆದುಕೊಂಡ ದ್ರೋಣನಿಗೆ ಏಕಲವ್ಯನ ಮಾವನು ತನ್ನ ಹೆಬ್ಬೆರಳನ್ನೇ ಕೊಯ್ದು ದ್ರೋಣರ ಹೆಬ್ಬೆರಳಿದ್ದ ಜಾಗಕ್ಕೆ ಸೇರಿಸಿ ಹೊಲಿಯುತ್ತಾನೆ. ಸಂಜಯನ ಮೂಲಕ ಈ ವಿಷಯವನ್ನು ತಿಳಿದುಕೊಂಡ ಭೀಷ್ಮರ ಮನಸ್ಸಿನಲ್ಲಿ ಅರಿವಿನ ಸ್ಪೋಟವಾಗುತ್ತದೆ. ತನ್ನ ಶಿಷ್ಯ ಅರ್ಜುನನನ್ನು ಜಗತ್ತಿನ ಅಪ್ರತಿಮ ಬಿಲ್ಲುಗಾರನನ್ನಾಗಿಸುವ ಉದ್ದೇಶದಿಂದ ದ್ರೋಣರು ಯಾವ ಏಕಲವ್ಯನ ಹೆಬ್ಬೆರಳನ್ನು ಕಿತ್ತುಕೊಂಡರೋ ಅದೇ ಏಕಲವ್ಯನ ಮಾವನು ದ್ರೋಣರಿಗೆ ತನ್ನ ಹೆಬ್ಬೆರಳನ್ನು ನೀಡಿದ ವಿಚಾರವನ್ನು ಅರಿತು ಅಸ್ವಸ್ಥರಾದ ಭೀಷ್ಮರು ಮೇಲು ಜಾತಿ-ಕೀಳು ಜಾತಿಗಳ ನಡುವೆ ರಕ್ತ ಸಂಕರವಾಯಿತು ಎಂದು ಹಳಹಳಿಸುತ್ತಾರೆ. ಅರ್ಥಹೀನ ಸಾಂಪ್ರದಾಯಿಕ ಅಡೆತಡೆಗಳು ಮತ್ತು ಭ್ರಮೆಗಳನ್ನು ಏಕಕಾಲಕ್ಕೆ ತೊಡೆದು ಹಾಕಿದ ಏಕಲವ್ಯನ ಮಾವನು ಮಾನವೀಯತೆಯ ಮೂರ್ತಿಯೋ? ತಮ್ಮ ಸಮುದಾಯವನ್ನು ಶೋಷಿಸುತ್ತಿದ್ದ ಆಳುವ ವರ್ಗದ ಮೇಲೆ ಹಗೆಯನ್ನು ತೀರಿಸಲು ಬಂದ ಸೇಡಿನ ಮೂರ್ತ ರೂಪವೋ? ಎಂಬ ಪ್ರಶ್ನೆಯನ್ನು ಎತ್ತಿದ ರೀತಿಯು ಧ್ವನಿಪೂರ್ಣವಾಗಿದೆ. ಲೇಖಕರ ದೃಷ್ಟಿಕೋನವು ಶೋಷಣೆಗೆ ಸುಲಭವಾಗಿ ಬಲಿಯಾಗದ ಸ್ವತಂತ್ರ ಮನೋಭಾವದ ದಿಟ್ಟ ಮನುಷ್ಯನಾದ ಏಕಲವ್ಯನ ಮಾವನ ಪರವಾಗಿದ್ದು ಧೋರಣೆಯ ದಿಕ್ಕು ಇತ್ಯಾತ್ಮಕವಾಗಿದೆ. ತಮ್ಮನ್ನು ಆಪತ್ತಿನಿಂದ ಪಾರು ಮಾಡಿದವರ ಮೇಲೂ ಸಂಕುಚಿತ ದೃಷ್ಟಿಯನ್ನು ತೋರುವ ಮೇಲು ಜಾತಿ ಮತ್ತು ಸಂಪ್ರದಾಯವಾದಿಗಳ ಮನಸ್ಸಿನ ಸೂಕ್ಷ್ಮ ಚಿತ್ರಣವನ್ನು ನೀಡುವ ಕತೆಯು ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ವಾಸ್ತವದ ನೆಲೆಯಲ್ಲಿ ಪರಿಭಾವಿಸುತ್ತದೆ.

ಬಂಡಾಯದ ಬಹುಪಾಲು ಗುಣಗಳನ್ನು ಹೊಂದಿರುವ ‘ಅಗ್ನಿಕುಂಡದ ಮಧ್ಯೆ’ ಎಂಬ ಕತೆಯು ಬದುಕನ್ನು ಕಿಲುಬುಗಟ್ಟಿಸುವ ಸಾಂಪ್ರದಾಯಿಕತೆಯನ್ನು ವೈಯಕ್ತಿಕ ನೆಲೆಯಲ್ಲಿ ಧಿಕ್ಕರಿಸುತ್ತಾ ಬದುಕನ್ನು ಹೊಸತಾಗಿ ಕಟ್ಟುವ ತುಡಿತವನ್ನು ಹೊಂದಿದೆ. ಜಾತಿಯನ್ನು ಅರ್ಥಹೀನ ಸಂಸ್ಥೆಯಾಗಿ ಕಾಣುವ ಬಾಲುವಿನ ಆದರ್ಶ – ವಾಸ್ತವಜ್ಞಾನ, ತಂದೆ ರಾಮಕೃಷ್ಣನ ಹುಸಿ ಜಾತ್ಯತೀತವಾದ – ಸೋಗಲಾಡಿತನ ಮಂಜಣ್ಣನ ಮುಗ್ಧತೆ – ಜೀವನೋತ್ಸಾಹ ಹೀಗೆ ಮೂರೂ ದೃಷ್ಟಿಕೋನಗಳನ್ನು ಚಿತ್ರಿಸುತ್ತಾ ಜಾತಿವಾದಕ್ಕೆ ಕಾರಣವಾದ ಹುಲ್ಲಿನ ಮಂದಿರವನ್ನು ಸುಟ್ಟುಹಾಕಬೇಕೆಂದುಕೊಳ್ಳುವ ಬಾಲುವಿನ ಆಕ್ರೋಶವನ್ನು ಮನಗಾಣಿಸುವವರೆಗೆ ಕತೆಯು ಮಾರ್ಕ್ಸ್ ವಾದಿ ನೆಲೆಗಟ್ಟಿನಲ್ಲಿ ಸಾಗಿದಂತೆ ಕಂಡರೂ ಕತೆಯ ಕೊನೆಯಲ್ಲಿ ಅದು ಬದಲಾಗುತ್ತದೆ. ಮೇಲುಜಾತಿಯನ್ನು ಗಟ್ಟಿದನಿಯಲ್ಲಿ ತೆಗಳುತ್ತಾ ತನ್ನ ಜಾತಿಯನ್ನು ಶಕ್ತಿಮೀರಿ ಪ್ರೋತ್ಸಾಹಿಸುವ ತಂದೆಯನ್ನು ವಿರೋಧಿಸಿ, ಶಾಂತಿ ಮೈದಾನದಲ್ಲಿ ತನ್ನ ಜಾತಿಯವರಿಗೆಂದು ಕಟ್ಟಿದ್ದ ಹುಲ್ಲಿನ ಮಂದಿರವನ್ನು ಯಾರಿಗೂ ತಿಳಿಯದಂತೆ ಸುಟ್ಟು ಹಾಕಿ ಓಡಿ ಬರುತ್ತಿದ್ದ ಬಾಲುವಿಗೆ ಮಂಜಣ್ಣನ ಹೆಣ ಕಾಣಲು ಸಿಕ್ಕಿ ಸಾವಿನಂಥ ಶಕ್ತಿಯ ಸಾಕ್ಷಾತ್ಕಾರವಾಗುತ್ತದೆ. ಅದು ಅವನ ಬದುಕನ್ನು ಬೇರು ಸಹಿತ ಅಲುಗಿಸುವ ಘಟನೆ.

‘ನಿಧಿ’ ಆಕೃತಿಯಲ್ಲಿ ಚಿಕ್ಕದಾದರೂ ಹೃದಯವನ್ನು ಕಲಕುವ ಕತೆಯಾಗಿದೆ. ಮಗಳ ಸ್ಕ್ಯಾನಿಂಗಿಗೆ ಹಣವನ್ನು ಹೊಂದಿಸಲಾರದೆ ಒದ್ದಾಡುವ ಕಲ್ಲೇಶಿಯು ಮಸಣದಲ್ಲಿ ಹೂತ ಹೆಣವನ್ನು ಕದ್ದು ವೈದ್ಯಕೀಯ ಕಾಲೇಜಿಗೊಪ್ಪಿಸಿ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗುವುದೇ ಕತೆಯ ವಸ್ತು. ಕಷ್ಟಗಳಿಂದ ಬಚಾವಾಗಲು ಜೀವಂತ ವ್ಯಕ್ತಿಗಳನ್ನು ನೋಯಿಸದೆ, ನಿರುಪಯುಕ್ತ ಹೆಣದ ಮೂಲಕ ಬದುಕಿನ ದಾರಿಯನ್ನು ಕಂಡುಕೊಳ್ಳುವ ಕಲ್ಲೇಶಿಯ ಧನಾತ್ಮಕ ಚಿಂತನೆಯು ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಕುಂ. ವೀ. ಅವರ ‘ಕಿವುಡ ನಾಯಿಯಾದ ಪ್ರಸಂಗ’ ಎಂಬ ಕತೆಯ ಮುಖ್ಯ ಪಾತ್ರವಾದ ಕಿವುಡನು ಹಸಿವೆಯನ್ನು ತಾಳಲಾರದೆ ಮಣ್ಣನ್ನು ಅಗೆದು ಹೆಣದ ಕಾಲಬುಡದಲ್ಲಿದ್ದ ತೆಂಗಿನಕಾಯಿಗಳಿಗೆ ಕೈ ಹಾಕಿದರೆ ಇಲ್ಲಿ ಕಲ್ಲೇಶನು ಹೆಣವನ್ನು ಎತ್ತಿಕೊಂಡು ಹೋಗುತ್ತಾನೆ. ಅಂತರವೆಂದರೆ ಇವುಗಳ ಸಾಮಾಜಿಕ ಸಂದರ್ಭ, ಆರ್ಥಿಕ ಪರಿಸ್ಥಿತಿ ಮತ್ತು ಕಲೆಗಾರಿಕೆ. ಪ್ರಗತಿಶೀಲ ಮಾದರಿಯಲ್ಲಿ ಮೂಡಿದ ಈ ಕತೆಯು ಕಲ್ಲೇಶನ ಗೋಳನ್ನೇ ಹೇಳುತ್ತಾ ಕೂರದೆ ಹಸಿ ಹಸಿ ಅನುಭವ, ಪೂರ್ವಯೋಜಿತ ಮಾದರಿ, ಏಕರೀತಿಯ ಘಟನಾವಳಿ, ಧ್ವನಿರಹಿತ ಭಾಷೆ, ಸರಳ ನಿರೂಪಣೆ, ಸುಲಭ ಪರಿಹಾರಗಳನ್ನು ಮೀರಿ, ಬದುಕಿನ ಆಳ – ವ್ಯಾಪ್ತಿಗಳನ್ನು ಶೋಧಿಸಲು ಯತ್ನಿಸುತ್ತದೆ.

‘ವೆಂಕಟ ನಾಲಗೆ ಕಳಕೊಂಡ’ ಎಂಬ ಕತೆಯಂತೆ ಕಥನ ತಂತ್ರವೂ ಉಲ್ಲೇಖನೀಯವಾಗಿದೆ. ವೆಂಕಟನ ಕನಸಿನಲ್ಲಿ ಕ್ಷುದ್ರ ಸಮಾಜವೇ ಮೈ ತೆರೆದುಕೊಳ್ಳುತ್ತದೆ. ಒಬ್ಬರ ಪ್ರತಿಭೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸುವ ಧೂರ್ತರು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಪಟ್ಟಭದ್ರ ಹಿತಾಸಕ್ತಿಗಳು ಕತೆಯ ಉದ್ದಕ್ಕೂ ವಿಜೃಂಭಿಸುತ್ತಾರೆ. ಅವರ ಲಾಭಕೋರತನ ಮತ್ತು ಕ್ರೌರ್ಯವನ್ನು ಮೀರಿ ನಿಲ್ಲಬಯಸುವ ವೆಂಕಟನ ಸ್ಥಿರತೆ ಮತ್ತು ಚಲನೆಗಳ ನಡುವಿನ ತಿಕ್ಕಾಟವು ಮುಖ್ಯವಾಗುತ್ತದೆ. ಇಂಥವರ ನಡುವೆ ಸೃಜನಶೀಲರಾದವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಬಗ್ಗೆ ಕತೆಯು ವಿಷಾದವನ್ನು ವ್ಯಕ್ತಪಡಿಸುತ್ತದೆ. ವೆಂಕಟನು ನಾಲಗೆಯನ್ನು ಕಳೆದುಕೊಳ್ಳುವ ಕ್ರಿಯೆಯು ಸಂಕೇತಿಸುವುದು ಅದನ್ನೇ. ಆದರೂ ವೆಂಕಟನಲ್ಲಿ ಜೀವನೋತ್ಸಾಹದ ಸೆಲೆಯಿದೆ. ಮೇಲೆರಗಿದ ಅಪಾಯವನ್ನು ಎದುರಿಸಿ ಮುನ್ನುಗ್ಗುವ ಛಲವಿದೆ. ಮಲ್ಲಿಯು ರಕ್ಷೆಯನ್ನು ಕಟ್ಟಿದಾಗ ಆತನು ಲೇಖನಿ ಮತ್ತು ಕಾಗದಗಳನ್ನು ಕೈಗೆತ್ತಿಕೊಳ್ಳುವ ಕ್ರಿಯೆಯಲ್ಲಿ ಅದು ವ್ಯಕ್ತವಾಗುತ್ತದೆ. ವೆಂಕಟನು ತನ್ನ ನಾಲಗೆಯನ್ನು ಕಳೆದುಕೊಂಡ ವಿಚಾರವು ಆತನ ಕನಸಿನಿಂದ ಹುಟ್ಟಿದ ಭ್ರಮೆಯೇ? ವಾಸ್ತವವೇ? ಎಂಬ ಪ್ರಶ್ನೆಯನ್ನು ಓದುಗರಿಗೆ ಬಿಟ್ಟು ಕೊಟ್ಟ ರೀತಿಯು ಕತೆಯ ಅರ್ಥವಂತಿಕೆಯನ್ನು ಹೆಚ್ಚಿಸುತ್ತದೆ. ಇದೇ ಭಾವಲಹರಿಯು ‘ದೇವರಿಗೆ ಅಜ್ಜ ಹೊಡೆದ ಪ್ರಸಂಗ’ ಕತೆಯಲ್ಲಿ ಮುಂದುವರಿದಿದೆ. ತಿಂಗಳಪದವನ್ನು ರಬ್ಬರ್ ನರ್ಸರಿಯಾಗಿಸುವುದರ ಮೂಲಕ ಆ ಊರನ್ನು ತನ್ನ ಅಧೀನವಾಗಿಸಿಕೊಳ್ಳಲು ಬಂದ ಮುನಿಯಾಂಡಿಯನ್ನು ಎದುರಿಸಿ ಗೆದ್ದ ನೆಲದಜ್ಜನು ವೆಂಕಟನಂತೆ ದುರ್ಬಲನಲ್ಲ. ನೆಲದ ಬದುಕಿಗೆ ರೂಪಕವೆನಿಸಿದ ಇವರು ಊರಿಗೆ ಕೆಟ್ಟ ಹೆಸರು ತರುವ ಯಾವುದೇ ಕೆಲಸವನ್ನು ಉಗ್ರವಾಗಿ ಪ್ರತಿಭಟಿಸುವವರು. ‘ಊರಿಗೊಂದು ಬಾರ್ ಬೇಡ ಶಾಲೆ ಕೊಡಿ’ ಎಂಬ ಹೋರಾಟವನ್ನು ಮಾಡಿದವರು. ರಾಜ್ಯದ ಮೂಲೆ ಮೂಲೆಯಿಂದ ಬಂದ ಸನ್ಮಾನಗಳನ್ನೆಲ್ಲ ಸಾರಾಸಗಟಾಗಿ ನಿರಾಕರಿಸಿದವರು. ಚುನಾವಣೆಯ ಗಾಳದಿಂದ ತಪ್ಪಿಸಿಕೊಂಡವರು. ಯಾವುದೇ ಕೆಲಸ ಮಾಡಿದರೂ ಅದನ್ನೊಂದು ಸಂದರ್ಭವನ್ನಾಗಿ ಪರಿಗಣಿಸಿ ಪ್ರಶಸ್ತಿ – ಪ್ರಚಾರಕ್ಕಾಗಿ ಹಾತೊರೆಯುವ ಮಂದಿಗಳಿಗೆ ತಕ್ಕ ಉತ್ತರವಾಗಿ ರೂಪುಗೊಂಡವರು. ಉಳಿದ ರಚನೆಗಳಿಗಿಂತ ತೀರಾ ಭಿನ್ನವಾಗಿ ತಿಳಿ ಹಾಸ್ಯದ ಧಾಟಿಯಲ್ಲಿರುವ ಈ ಕತೆಯು ಈ ಹೊತ್ತಿನಲ್ಲಿ ನಮ್ಮ ನೆಲಕ್ಕೆ ಒದಗಿದ ಅಪಾಯದ ಕುರಿತು ಗಂಭೀರ ಎಚ್ಚರವನ್ನು ಮೂಡಿಸುತ್ತದೆ. ಆದರೆ ನೆಲದಜ್ಜನು ಮುನಿಯಾಂಡಿಗೆ ಬಾರಿಸಿದಂತೆ ಅದು ಒಂದೇ ಏಟಿಗೆ ನಿವಾರಣೆಯಾಗಲಾರದು. ಮುನಿಯಾಂಡಿಯು ಎಚ್ಚರಗೊಂಡ ಬಳಿಕ ಏಳಬಹುದಾದ ಗುಲ್ಲು, ಮಸಲತ್ತು, ಗಲಾಟೆಗಳಂತೆ ಅದೂ ಕೂಡ ಲೇಖಕರ ಇನ್ನೊಂದು ಕತೆ ಅಥವಾ ಕಾದಂಬರಿಗೆ ವಸ್ತುವಾಗಬಹುದು.

‘ಮಗು ಎಂಬ ಮಾಯೆ’ ಕತೆಯಲ್ಲಿ ವಿಷಮ ದಾಂಪತ್ಯದ ಮುಖವನ್ನು ನೋಡಬಹುದು. ಬಂಜೆ ಎಂಬ ಕಾರಣಕ್ಕಾಗಿ ಹೆಣ್ಣು ಇಲ್ಲಿ ಬಲಿಪಶುವಾಗಿದ್ದಾಳೆ. ಆದರೆ ವಿಷಯವನ್ನು ಭಾವುಕಗೊಳಿಸದೆ ಸಮಸ್ಯೆಯ ಮಗ್ಗುಲುಗಳನ್ನು ಸಾಮಾಜಿಕ ಸ್ತರಗಳಲ್ಲಿ ಶೋಧಿಸಿದ್ದರಿಂದ ಕತೆಗೆ ಸಂಕೀರ್ಣತೆಯು ದೊರಕಿದೆ. ಮಾನವೀಯ ಸಂಬಂಧಗಳನ್ನು ಚಿತ್ರಿಸುತ್ತಲೇ ಅವರೊಳಗಿನ ಸಣ್ಣತನ, ಅಸೂಯೆ, ಅನುಮಾನ, ಸಿಟ್ಟು ಸೆಡವುಗಳನ್ನು ತೋರಿಸುವ ವಾಸ್ತವತೆಯಿದೆ. ಸಾಂಸಾರಿಕ ಜಂಜಾಟಗಳಿಂದ ನೊಂದ ನಿರೂಪಕ ಮತ್ತು ಅವನ ಹೆಂಡತಿಯಲ್ಲಿ ಮೂಡಿದ ಅರಿವು ಮೌಲಿಕವಾದದ್ದು. ಕ್ರೌರ್ಯ ಅಟ್ಟಹಾಸಗಳ ನಡುವೆ ಪ್ರೀತಿ, ಪ್ರೇಮ, ಮಾನವೀಯತೆಗಳೆಲ್ಲವೂ ಕ್ಲೀಷೆಗೊಳಗಾಗಿರುವ ಹೊತ್ತಿನಲ್ಲಿ “ಕಣ್ಣೆದುರು ಮಾತ್ರ ಇದ್ದರೆ ಪ್ರೀತಿಸುವುದು ಅಲ್ಲ. ಕಣ್ಣೆದುರು ಇಲ್ಲದಿದ್ದರೂ ಪ್ರೀತಿಸಬಹುದು. ಪ್ರೀತಿಸುವ ಹೃದಯವಿದ್ದಾಗ ನಮ್ಮ ಸುತ್ತಾ ತುಂಬಾ ಮಕ್ಕಳಿರುತ್ತಾರೆ” (ಪುಟ 41) ಎನ್ನುವ ವೃದ್ಧ ನಂಬೂದಿರಿಯ ಮಾತು ರೋಗಗ್ರಸ್ತ ಸಮಾಜದಲ್ಲಿ ಮದ್ದಿನ ಪರಿಣಾಮವನ್ನು ಉಂಟು ಮಾಡಬಲ್ಲದು.

‘ಒಂದು ಹನಿ ಬೆವರಿಗಾಗಿ’ ಕತೆಯು ಕರ್ಮಸಿದ್ಧಾಂತವನ್ನು ಎತ್ತಿ ಹಿಡಿಯುತ್ತದೆ. ಭಾರತೀಸುತರ ‘ಮೋಚಿ’ ಕತೆಯಲ್ಲಿರುವಂತೆ ಇಲ್ಲಿಯೂ ಒಬ್ಬ ಚಮ್ಮಾರ ಮತ್ತು ನಾಯಕ ಕಂಡುಬರುತ್ತಾರೆ. ಸಾವಿನ ಭಯದಿಂದ ಒದ್ದಾಡುತ್ತಿರುವ ನಾಯಕನು ಚಮ್ಮಾರನ ಕಾಯಕ ನಿಷ್ಠೆಯನ್ನು ನೋಡುತ್ತಾ ಸಾವಿನ ಭಯವನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಾನೆ. ಬದುಕುವುದು ಹೇಗೆ ಎಂದು ತಿಳಿಯದಿದ್ದರೆ ಸಾವನ್ನು ಕುರಿತ ಭಯ ಹುಟ್ಟುತ್ತದೆ. ಇರುವುದನ್ನು ಬಿಟ್ಟು ಇಲ್ಲದುದರ ಕಡೆ ತುಡಿಯುವುದರಿಂದ, ಜೀವಂತ ಸಂವೇದನೆಗಳನ್ನು ಕಳೆದುಕೊಳ್ಳುವುದರಿಂದ ಬದುಕು ದುಃಖಮಯವಾಗಿ ತೋರುತ್ತದೆ. ಬದುಕು ಸ್ವೀಕಾರಾರ್ಹವೆಂದು ತಿಳಿದು ಆಯುಸ್ಸು ಇರುವವರೆಗೆ ನೆಮ್ಮದಿಯಿಂದ ಚಪ್ಪಲಿ ಹೊಲಿಯುತ್ತಾ ತನ್ನ ಕರ್ತವ್ಯವನ್ನು ಮಾಡುವ ಚಮ್ಮಾರನು ದೇವಲೋಕದದ ವೈದ್ಯ ಧನ್ವಂತರಿಯಂತೆ ಭಾಸವಾಗುವುದು ನಾಯಕನಲ್ಲಿನ ಹೊಸ ಬೆಳವಣಿಗೆ. ಮರಣದ ಭೀತಿ ತೊಲಗಿ ದೈವಿಕತೆಯ ಅರಿವು ಮೂಡಿದ್ದಕ್ಕೆ ಸಾಕ್ಷಿ. ಭಯದಿಂದ ಬಿಡುಗಡೆಯನ್ನು ಪಡೆದು ಜೀವನಾಸಕ್ತಿಯು ಮೂಡಿದ್ದರ ಸೂಚನೆ. ಬೆವರಿನ ಹನಿಯು ಹೇಗೆ ಮರಣದ ಲಕ್ಷಣವಾಗಿತ್ತೋ ಹಾಗೆಯೇ ದುಡಿಮೆಯ ಸಂಕೇತವೂ ಆಗಿ ಮೂಡಿ ಬಂದಿರುವುದು ವಿಶೇಷ.

‘ದಳ್ಳುರಿ’ಯು ಹಿಂಸೆಯನ್ನು ತಪ್ಪಿಸಿಕೊಳ್ಳುವ ಒಳದಾರಿಗಳನ್ನು ಹುಡುಕುತ್ತದೆ. ಕೋಮುವಾದಿಗಳ ಹಿಂಸೆಗೆ ಹೆದರಿದ ರಿಕ್ಷಾ ಚಾಲಕನು ಸಂದರ್ಭಕ್ಕೆ ತಕ್ಕಂತೆ ದಾಳಿಕೋರರ ಕೋಮನ್ನು ಸೂಚಿಸುವ ಅರಬಿ ಭಾಷೆಯ ಚೀಟಿಯನ್ನು ಗಾಡಿಯ ಮುಂದಿನ ಗಾಜಿಗೆ ಅಂಟಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಜಾಗಕ್ಕೆ ತಲುಪಿಸುತ್ತಾನೆ. ಇನ್ನೊಬ್ಬ ರಿಕ್ಷಾ ಚಾಲಕನು ಕೇಸರಿ ಶಾಲನ್ನು ಹೊದ್ದುಕೊಂಡು ನಿರ್ದಿಷ್ಟ ಜಾತಿವಾದಿಗಳ ಕಣ್ಣಿಗೆ ಮಣ್ಣೆರಚಿ ಪ್ರಯಾಣಿಕರನ್ನು ಕಾಪಾಡುತ್ತಾನೆ. ಪ್ರಯಾಣಿಕರ ಮೇಲೆ ಉಂಟಾಗಬಹುದಿದ್ದ ಹಿಂಸೆಯನ್ನು ತಪ್ಪಿಸಿದವರ ಮಾನವೀಯ ಮುಖಗಳನ್ನು ಚಿತ್ರಿಸಲಾಗಿದೆ. ಚಾಲಕರು ಹಿಂದೂ ಅಥವಾ ಮುಸ್ಲಿಂ ಎನ್ನುವುದಕ್ಕಿಂತ ಅವರಿಬ್ಬರೂ ಮನುಷ್ಯರು ಎಂಬುದು ಮುಖ್ಯವಾಗುತ್ತದೆ. ನಿರ್ದಿಷ್ಟ ಜಾತಿಯೊಂದನ್ನು ಎತ್ತಿ ಹಿಡಿಯುವ ಮೂಲಕವೇ ಜಾತ್ಯತೀತ ಎನಿಸಿಕೊಳ್ಳಬೇಕೆಂಬ ಒತ್ತಡವನ್ನು ಲೇಖಕರು ಬಿಟ್ಟುಕೊಟ್ಟಿದ್ದಾರೆ. ಮಾನವೀಯತೆಯ ಸೆಲೆಯು ಜಿನುಗಿ ಒರತೆಯಾಗಿ ಕರುಣೆಯ ನೀರನ್ನು ಹನಿಸಲು ಸಾಧ್ಯವಾಗುವ ಪರಿಯನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುವ ಕತೆಯು ಜಾತಿ, ಧರ್ಮ, ವರ್ಗಭೇದ ಮತ್ತು ಅರ್ಥಹೀನ ಹಿಂಸೆ – ಕ್ರೌರ್ಯಗಳನ್ನು ಮಾನವೀಯತೆಯಲ್ಲಿ ಕರಗಿಸಲು ಯತ್ನಿಸುತ್ತದೆ. ಜಗತ್ತಿನಲ್ಲಿ ಹಿಂಸೆಯ ಹಲವು ರೂಪಗಳು ಮರು ಹುಟ್ಟು ಪಡೆಯುತ್ತಿರುವ ಸಂದರ್ಭದಲ್ಲಿ ಇಂಥ ಕತೆಗಳು ಹಿಂಸೆಯನ್ನು ನಿರಾಕರಿಸಿದ ರೀತಿಯು ಆರೋಗ್ಯಪೂರ್ಣವಾಗಿದೆ.

‘ನವೀಕರಣ’ವು ಸಂಬಂಧಗಳ ಸೂಕ್ಷ್ಮತೆಗಳನ್ನು ಶೋಧಿಸುವ ಕತೆ. ಮನೆಯ ಹಂಚಿನ ಮೇಲೆ ಕಾಯಿಗಳು ಬೀಳುವುದರಿಂದ ಶಾಸ್ತ್ರಿಗಳಿಗೆ ತೆಂಗಿನ ಮರವನ್ನು ಕಡಿಯುವುದು ಅನಿವಾರ್ಯವಾಗುತ್ತದೆ. ಮರವು ಹಂತ ಹಂತವಾಗಿ ಇಲ್ಲವಾಗುತ್ತಿದ್ದಂತೆ ಅದರೊಂದಿಗೆ ಹಾಸುಹೊಕ್ಕ ನೆನಪುಗಳು ಅವರ ಮನದಲ್ಲಿ ದಟ್ಟವಾಗುತ್ತಾ ಹೋಗುತ್ತವೆ. ಮರ ಬೀಳುತ್ತಿದ್ದಂತೆ ನೆಲಕ್ಕೆ ಕುಸಿಯುವ ಶಾಸ್ತ್ರಿಗಳ ಚಿತ್ರವು ಪ್ರಕೃತಿ ನಾಶದ ಬಳಿಕ ಭವಿಷ್ಯದಲ್ಲಿ ಬಂದೊದಗುವ ವಿಪತ್ತಿನ ಕುರಿತು ಎಚ್ಚರಿಸುತ್ತದೆ. ಅಮ್ಮ ತೀರಿಕೊಂಡಾಗ ಚಿನ್ನಕ್ಕಾಗಿ ಜಗಳ ಮಾಡುವಂತೆ ಮರ ಬಿದ್ದಾಗ ಚೆಲ್ಲಿದ ಎಳನೀರಿಗಾಗಿ ಜಗಳವಾಡುವ ಮಕ್ಕಳು ಬದುಕಿನ ಕುರಿತು ಸಂವೇದನ ಶೂನ್ಯರಾಗಿರುವ ಆಧುನಿಕ ತಲೆಮಾರಿನ ಪ್ರತೀಕವಾಗಿದ್ದಾರೆ.

ಜನಸಾಮಾನ್ಯರ ಬದುಕಿನಲ್ಲಿ ಆಧುನಿಕತೆಯು ಕಾಲಿರಿಸಿದಾಗ ಅವರು ತಮ್ಮದೇ ಆದ ಭ್ರಮೆಯಲ್ಲಿ ಕಳೆದುಹೋಗುವ ಬಗೆಯನ್ನು ‘ಕಳಚುತ್ತಿರುವ ಕೊಂಡಿಗಳು’ ಎಂಬ ಕತೆಯು ಮಾರ್ಮಿಕವಾಗಿ ಚಿತ್ರಿಸುತ್ತದೆ. ಬೈಕನ್ನು ದಿನಾ ತೊಳೆದು ತಿಲಕವಿಡುವ, ಅದನ್ನು ಮುಟ್ಟಿದವರನ್ನು ಅವಾಚ್ಯವಾಗಿ ಬೈಯುವ ಇಂದ್ರರಾಜನ ನಡವಳಿಕೆಗಳು ಆಧುನಿಕತೆಯ ಅಂಧ ಆರಾಧನೆಯನ್ನು ಸೂಚಿಸುತ್ತವೆ. ಆಧುನಿಕತೆಯ ಸುಳಿಗೆ ಸಿಲುಕಿ ಮಾನವೀಯ ಸಂಬಂಧ ಹದಗೆಡುವುದನ್ನು ಧ್ವನಿಪೂರ್ಣವಾಗಿ ಕಟ್ಟಿಕೊಡುವ ಕತೆಯಲ್ಲಿ ಬೈಕ್ ಆಧುನಿಕತೆಯ ಅತಿರೇಕದ ರೂಪವಾಗಿ ಮೂಡಿ ಬಂದಿದೆ.

ಈ ಸಂಕಲನದಲ್ಲಿ ಲೇಖಕರು ತಾವು ಕಂಡು ಅನುಭವಿಸಿದ ಸಂಗತಿಗಳನ್ನು ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ಮನುಷ್ಯರ ಮನಸ್ಸನ್ನು ಶೋಧಿಸಿದ್ದಾರೆ. ಗ್ರಾಮೀಣ ಬದುಕಿನಲ್ಲಿ ಅಡಗಿರುವ ರೋಗ ರುಜಿನಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದ್ದಾರೆ. ಪುರಾಣ ಪಾತ್ರಗಳ ಮೂಲಕ ವರ್ತಮಾನದಲ್ಲಿ ಅವಗಣನೆಗೊಳಗಾದ ಪಾತ್ರಗಳನ್ನು ಹೊಸತಾಗಿ ಕಂಡರಿಸಿದ್ದಾರೆ. ಪಾತ್ರಗಳ ಅಂತರಂಗವನ್ನು ಹೊಕ್ಕು ಅವರ ನೋವಿಗೆ ಸ್ಪಂದಿಸಿದ್ದಾರೆ. ಬದುಕನ್ನು ದಿಟ್ಟತನದಿಂದ ಸ್ವೀಕರಿಸಿ ಓದುಗರ ಮನದಲ್ಲಿ ನೆಲೆ ನಿಲ್ಲುವ ಮುಕ್ತ ಮನಸ್ಸಿನ ಪಾತ್ರಗಳಲ್ಲಿ ಉಕ್ಕುವ ಮಾನವೀಯ ಸಂವೇದನೆಗಳು ಯಾವುದೇ ಸಿದ್ಧಾಂತದಿಂದ ಮೂಡಿ ಬರದೆ ಬದುಕಿನ ಸಂಘರ್ಷದಿಂದ ರೂಪುಗೊಂಡಿವೆ. ಕತೆಯೊಳಗಿನಿಂದಲೇ ತತ್ವವು ಅರಳಿ ಜೀವನದ ರೀತಿಯಾಗುವ ಬಗೆಯು ಗಮನಾರ್ಹವಾಗಿದೆ. ಆವೇಶದಿಂದ ತೊಯ್ದ ಮಾತುಗಳ ಹಂಗುತೊರೆದ ಕತೆಗಳು ಮಾನವನ ಅಲ್ಪತನ, ಆಕ್ರಮಣಕಾರಿ ಪ್ರವೃತ್ತಿ, ವ್ಯಕ್ತಿತ್ವದ ಬಿರುಕುಗಳು, ಸ್ವಾರ್ಥಪ್ರೇರಿತ ಸುಲಿಗೆ, ಕ್ರೌರ್ಯಗಳ ಹಿಂದೆ ಅಡಗಿದ ಕೆಟ್ಟತನಗಳನ್ನು ಬಯಲಿಗೆಳೆಯುತ್ತವೆ. ವಾಸ್ತವದ ನೆಲೆಯಲ್ಲಿ ಬದುಕಿನ ನಿಗೂಢತೆಯನ್ನು ಶೋಧಿಸುತ್ತಾ ಅದರೊಳಗಿನ ಜೀವನಿಷ್ಠೆ, ಮೌಲ್ಯಗಳನ್ನು ಗುರುತಿಸುತ್ತವೆ. ಬದುಕಿನ ವಿಸ್ತಾರವನ್ನು ಅರಿಯುವಂತೆ ಮಾಡುತ್ತವೆ. ಪ್ರತಿಯೊಂದು ಪಾತ್ರದ ನೋವು, ನರಳಾಟ, ಆದರ್ಶದ ಪ್ರತಿರೂಪವಾಗಿ ಮೂಡಿದ ಕತೆಗಾರರ ಸಹಾನುಭೂತಿ, ಸಂಯಮ, ಜೀವನ ಪ್ರೀತಿಯಿಂದ ಕೂಡಿರುವ ವ್ಯಕ್ತಿತ್ವವು ಜೀವಂತವಾಗಿ ಗೋಚರಿಸುತ್ತದೆ. ಬರವಣಿಗೆಯ ವಿಕಾಸದ ದೃಷ್ಟಿಯಿಂದ ಈ ಸಂಕಲನವು ಟಿ. ಎ. ಎನ್. ಖಂಡಿಗೆಯವರು ಕಂಡುಕೊಂಡ ಹೊಸ ಹಾದಿಯೂ ಹೌದು. ಬದುಕಿನ ಪ್ರಶ್ನೆಗಳಿಗೆ ಹುಡುಕಲು ಹೊರಟ ಉತ್ತರವೂ ಹೌದು.

ಪುಸ್ತಕದ ಹೆಸರು : ಹೊಟ್ಟಿನೊಳಗಿನ ಕಿಡಿ (ಕಥಾಸಂಕಲನ)
ಲೇಖಕರು : ಟಿ. ಎ. ಎನ್. ಖಂಡಿಗೆ
ಪ್ರಕಾಶಕರು : ಜಾಗೃತಿ ಪ್ರಿಂಟರ್ಸ್, ಮಾಗಡಿ ಮುಖ್ಯರಸ್ತೆ, ಬೆಂಗಳೂರು.
ಪುಟಗಳು : 70
ಬೆಲೆ ರೂ. : 70

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter