(ಕೊರಡ್ಕಲ್ ಶ್ರೀನಿವಾಸರಾಯರು (1895-1948) ಕನ್ನಡದ ಮೊದಲ ಪ್ರಗತಿಶೀಲ ಕತೆಯೆಂದು ಪರಿಗಣಿಸಲಾದ ‘ಧನಿಯರ ಸತ್ಯನಾರಾಯಣ’ ಕತೆಯ ಲೇಖಕರಾಗಿ ಸಾಹಿತ್ಯ ಲೋಕಕ್ಕೆ ಪರಿಚಿತರು. ಇದು 1938ರಲ್ಲಿ ಪ್ರಕಟವಾದ ‘ನಂದಾದೀಪ’ ಸಂಕಲನದಲ್ಲಿದೆ. ಅವರ ಕತೆಗಳು ದಕ್ಷಿಣ ಕನ್ನಡ ಜಿಲ್ಲೆಯ ‘ಅಂತರಂಗ’, ‘ನವಯುಗ’, ಕಂಠೀರವ’, ‘ರಾಷ್ಟ್ರಬಂಧು’ ಮುಂತಾದ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ನಂದಾದೀಪದ ಕತೆಗಳು ಮೊದಲು ಪತ್ರಿಕೆಗಳಲ್ಲಿ ಪ್ರಕಟವಾಗಿ ಪುಸ್ತಕರೂಪದಲ್ಲಿ ಬಂದಿವೆ. ಅದ್ದರಿಂದ ‘ಧನಿಯರ ಸತ್ಯನಾರಾಯಣ’ ಕತೆಯನ್ನು 1938ಕ್ಕಿಂತ ಹಿಂದೆಯೇ ಬರೆದಿರುವ ಸಾಧ್ಯತೆಯಿದೆ.)
ಕನ್ನಡದಲ್ಲಿ ಸಣ್ಣಕತೆಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನುತ್ತಿದ್ದರೂ ನವೋದಯ ಕಾಲದ ಕೆಲವು ಕತೆಗಳಲ್ಲಿ ಪ್ರಗತಿಶೀಲ, ನವ್ಯ, ಬಂಡಾಯದ ದನಿಗಳು, ಪ್ರಗತಿಶೀಲ ಕತೆ ಮತ್ತು ಕಥನ ತಂತ್ರಗಳಲ್ಲಿ ನವ್ಯ ಸಂವೇದನೆಗಳಿದ್ದವು ಎಂಬುದು ಮುಖ್ಯವಾಗುತ್ತದೆ.
ನವೋದಯ ಕಾಲದ ಕತೆಗಾರರಲ್ಲಿ ಸಾಮಾಜಿಕ ಸಂಸ್ಕಾರಗಳು, ವ್ಯಕ್ತಿ – ಸಮಾಜದ ಸಂಘರ್ಷ ಇವೇ ಹೆಚ್ಚಾಗಿ ಅವರ ಗಮನವನ್ನು ಸೆಳೆದವು. ಪ್ರಗತಿಶೀಲ ಚಳುವಳಿಯ ಪ್ರಭಾವದಿಂದಾಗಿ ಸಾಮಾಜಿಕ ಸಮಸ್ಯೆಗಳಿಗೆ ಇನ್ನೂ ಹೆಚ್ಚಿನ ಮಹತ್ವ ಪ್ರಾಪ್ತವಾಯಿತು. ವ್ಯಕ್ತಿಯ ಆಂತರಿಕ ಸಮಸ್ಯೆಗಳು ನವ್ಯರ ಗಮನವನ್ನು ಸೆಳೆದವು. ಅವರು ಸಾಮಾಜಿಕ ಸಮಸ್ಯೆಗಳಿಗಿಂತಲೂ ಹೆಚ್ಚಾಗಿ ತಮ್ಮ ಸ್ವಂತ ಅನುಭವದ ಗುಪ್ತನಿಧಿಗೆ ಕೈ ಹಾಕಿದರು. ಸಾಮಾಜಿಕ ಸಮಸ್ಯೆ ಎಷ್ಟರ ಮಟ್ಟಿಗೆ ತಮ್ಮ ಅನುಭವದ ಭಾಗವಾಗಿ ಬಂದಿದೆ ಎಂದು ಪರೀಕ್ಷಿಸಿದರು.
ಮಾಸ್ತಿಯವರ ‘ಕಾಮನಹಬ್ಬದ ಒಂದು ಕತೆ’ (ಮಾಸ್ತಿಯವರ ಕತೆಗಳು. ಸಂಪುಟ 1. ಸಂ: ಮಾವಿನಕೆರೆ ರಂಗನಾಥನ್. ಪುರೋಗಾಮಿ ಪ್ರಕಾಶನ 1988) ಯು ಅಸಹನೀಯ ಬದುಕನ್ನು ಎದುರಿಸಿದ ಹೆಂಗಸಿನ ಜೀವನ ಸಂಸ್ಕಾರದ ಚಿತ್ರಣವನ್ನು ನೀಡುತ್ತದೆ. ಆನಂದರ ‘ನಾನು ಕೊಂದ ಹುಡುಗಿ’ಯಲ್ಲಿ ಸಾಮಾಜಿಕ ಅನಿಷ್ಟಗಳಿಗೆ ಬಲಿಯಾದ ಮುಗ್ಧ ಹೆಣ್ಣೊಬ್ಬಳ ಜೀವನದ ಚಿತ್ರಣವಿದೆ. ಇಂಥದೇ ಸಮಸ್ಯೆಯನ್ನು ಎತ್ತಿಕೊಂಡಿರುವ ಅನಂತಮೂರ್ತಿಯವರ ‘ಘಟಶ್ರಾದ್ಧ’ದಲ್ಲಿ ಬಾಲ ವಿಧವೆ ಯಮುನಕ್ಕ ಹರೆಯದ ಬಯಕೆಯನ್ನು ಹತ್ತಿಕ್ಕಲಾರದೆ ಒದ್ದಾಡುತ್ತಾಳೆ. ಅವಳ ಮಾನಸಿಕ ಹೊಯ್ದಾಟ ಮತ್ತು ಯಾತನೆಗಳು ಒಳ ಹೊರಗುಗಳಿಂದ ಕೂಡಿಯೇ ಪ್ರಕಟವಾಗುತ್ತವೆ. ನವೋದಯದವರು ವ್ಯಕ್ತಿಯ ಬದುಕನ್ನು ಹೊರಗಿನಿಂದ ಕಂಡರೆ ನವ್ಯರು ಬದುಕನ್ನು ಒಳಗಿನಿಂದ ಕಂಡರು. ಆದರೂ ಸೇಡಿಯಾಪು ಕೃಷ್ಣ ಭಟ್ಟರ ‘ನಾಗರ ಬೆತ್ತ’, ಕಡೆಂಗೋಡ್ಲು ಶಂಕರ ಭಟ್ಟರ ‘ಅದ್ದಿಟ್ಟು’, ಶಿವರಾಮ ಕಾರಂತರ ‘ಹೋಳಿಗೆ’ ಕೊರಡ್ಕಲ್ ಶ್ರೀನಿವಾಸ ರಾಯರ ‘ಧನಿಯರ ಸತ್ಯನಾರಾಯಣ’ ಎಂಬ ಕತೆಗಳನ್ನು ಮಾರ್ಕ್ಸವಾದಿ ಹಿನ್ನೆಲೆಯಲ್ಲೂ, ಮಾಸ್ತಿಯವರ ‘ಹೇಮಕೂಟದಿಂದ ಬಂದ ಮೇಲೆ’ ಕತೆಯನ್ನು ಅಸ್ತಿತ್ವವಾದಿ ಹಿನ್ನೆಲೆಯಲ್ಲೂ ವಿಶ್ಲೇಷಿಸಬಹುದು.
ಕೊರಡ್ಕಲ್ ಶ್ರೀನಿವಾಸರಾಯರು (1895-1948) ಕನ್ನಡದ ಮೊದಲ ಪ್ರಗತಿಶೀಲ ಕತೆಯೆಂದು ಪರಿಗಣಿಸಲಾದ ‘ಧನಿಯರ ಸತ್ಯನಾರಾಯಣ’ ಕತೆಯ ಲೇಖಕರಾಗಿ ಸಾಹಿತ್ಯ ಲೋಕಕ್ಕೆ ಪರಿಚಿತರು. ಇದು 1938ರಲ್ಲಿ ಪ್ರಕಟವಾದ ‘ನಂದಾದೀಪ’ ಸಂಕಲನದಲ್ಲಿದೆ. ಅವರ ಕತೆಗಳು ದಕ್ಷಿಣ ಕನ್ನಡ ಜಿಲ್ಲೆಯ ‘ಅಂತರಂಗ’, ‘ನವಯುಗ’, ಕಂಠೀರವ’, ‘ರಾಷ್ಟ್ರಬಂಧು’ ಮುಂತಾದ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ನಂದಾದೀಪದ ಕತೆಗಳು ಮೊದಲು ಪತ್ರಿಕೆಗಳಲ್ಲಿ ಪ್ರಕಟವಾಗಿ ಪುಸ್ತಕರೂಪದಲ್ಲಿ ಬಂದಿವೆ. ಅದ್ದರಿಂದ ‘ಧನಿಯರ ಸತ್ಯನಾರಾಯಣ’ ಕತೆಯನ್ನು 1938ಕ್ಕಿಂತ ಹಿಂದೆಯೇ ಬರೆದಿರುವ ಸಾಧ್ಯತೆಯಿದೆ.

ಕನ್ನಡದ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜರು ‘ಮರೆಯಬಾರದ ಹಳೆಯ ಕತೆಗಳು’ ಎಂಬ ಕೃತಿಯಲ್ಲಿ ‘ಧನಿಯರ ಸತ್ಯನಾರಾಯಣ’ ಕತೆಯ ಬಗ್ಗೆ ಬರೆಯುತ್ತಾ ಈ ಕತೆಯು 1938ರಲ್ಲಿ ಪ್ರಕಟವಾದ ಮಲಯಾಳಂ ಭಾಷೆಯ ‘ವಾಳಕ್ಕುಲ’ (ಬಾಳೆಗೊನೆ) ಎಂಬ ಕವಿತೆಯಿಂದ ಪ್ರೇರಣೆಯನ್ನು ಪಡೆದಿರಬಹುದು ಎಂಬ ಸಂದೇಹವನ್ನು ವ್ಯಕ್ತಪಡಿಸಿದ್ದರು. ಮಲಯಾಳದಿಂದ ಕನ್ನಡಕ್ಕೆ ಹಲವಾರು ಕೃತಿಗಳನ್ನು ಅನುವಾದಿಸಿದ ಕೆ. ಕೆ. ನಾಯರ್ ಅವರು ಜನವರಿ 2005ರ ‘ಹೊಸತು’ ಮಾಸಿಕದಲ್ಲಿ ಆ ಕಥನ ಕವನವನ್ನು ಬರೆದವರು ಚಂಙಂಪುಳ (1911-1948) ಎಂದೂ, ಅದು ಕೂಡ 1938ರಲ್ಲಿ ಪ್ರಕಟವಾಯಿತೆಂದು ತಿಳಿಸಿ ಅದೇ ಸಂಚಿಕೆಯಲ್ಲಿ ಅನುವಾದಿಸಿ ಕೊಟ್ಟರು. ಆದ್ದರಿಂದ ಈ ಎರಡೂ ಕೃತಿಗಳನ್ನು ಹೋಲಿಸುವ ಅವಕಾಶವು ಕನ್ನಡಿಗರಿಗೆ ದೊರಕಿತು. ಆದರೆ ಎರಡೂ ಕೃತಿಗಳಲ್ಲಿ ನಿರ್ದಿಷ್ಟ ದಿನಾಂಕಗಳು ಇಲ್ಲದಿರುವುದರಿಂದ ಯಾರಿಂದ ಯಾರು ಪ್ರೇರಣೆಯನ್ನು ಪಡೆದರು ಎಂದು ಹೇಳಲಾಗುವುದಿಲ್ಲ. ಕೊರಡ್ಕಲ್ ಶ್ರ್ರೀನಿವಾಸರಾಯರ ಕತೆಯು ಮೂಲಕ್ಕಿಂತ ಚೆನ್ನಾಗಿದೆ. ಒಂದುವೇಳೆ ಚಂಙಂಪುಳ ಅವರ ಕವನಕ್ಕಿಂತ ನಂತರ ಪ್ರಕಟವಾಗಿದೆ ಎಂದು ಸಾಬೀತಾದರೂ ಕೃತಿಚೌರ್ಯ ಎನ್ನಲಾರದಷ್ಟು ಸ್ವೋಪಜ್ಞವಾಗಿದೆ.
ಚಂಙಂಪುಳ ಅವರ ಕವನದಲ್ಲಿ ಮಲೆಯ ಹೊಲೆಯನೆಂಬವನು ಬಾಳೆಗಿಡವನ್ನು ನೆಡುತ್ತಾನೆ. ಅದರ ಆರೈಕೆಯನ್ನು ಮಾಡುವವರು ದಂಪತಿಗಳೇ ಹೊರತು ಮಕ್ಕಳಲ್ಲ. ಮಕ್ಕಳು ಅದರಡಿಯಲ್ಲಿ ಆಡುತ್ತಾ, ಗೊನೆಗೆ ಆಸೆ ಪಡುತ್ತಾರೆ. ಆದರೆ ಒಡೆಯರ ನೆಲದಲ್ಲಿ ಬೆಳೆದ ಗೊನೆಯಾದ್ದರಿಂದ ಅದನ್ನು ಕಡಿದು ಅವರಿಗೆ ಒಪ್ಪಿಸಬೇಕಾಗುತ್ತದೆ. ಗುಡಿಸಲಿನಲ್ಲಿ ಅಳು, ಬೊಬ್ಬೆ, ಗೋಳಾಟಗಳು ಕೇಳಿಸುತ್ತವೆ. ಮುಂದೆ ಇದೇ ಕವಿತೆಯು ಕೇರಳದಲ್ಲಿ ಪ್ರಸಿದ್ಧವಾಗಿ ಸಾಮಾಜಿಕ ಕ್ರಾಂತಿಗೆ ಕಾರಣವಾಗುತ್ತದೆ. ಕೊರಡ್ಕಲ್ ಶ್ರೀನಿವಾಸರಾಯರ ಕತೆಯಲ್ಲಿ ಮಕ್ಕಳೇ ಬಾಳೆಯ ಗಿಡವನ್ನು ಬೆಳೆಸುತ್ತಾರೆ. ಅದ್ದರಿಂದ ಅವರ ನಿರಾಸೆಯು ಓದುಗರನ್ನು ಹೆಚ್ಚು ತಟ್ಟುತ್ತದೆ. ಶ್ರೀನಿವಾಸರಾವ್ ಅವರದ್ದು ಸಂಯಮದ ಬರವಣಿಗೆ. ಧನಿಗಳ ಅಧಿಕಾರ ದೃಷ್ಟಿ, ತೌಡನ ವಾಸ್ತವಜ್ಞಾನ, ಮಕ್ಕಳ ಮುಗ್ಧ ನ್ಯಾಯ ಈ ಮೂರೂ ದೃಷ್ಟಿಕೋನಗಳನ್ನು ಚಿತ್ರಿಸಿ, ಸತ್ಯನಾರಾಯಣ ಪೂಜೆಯ ನೆಪದಿಂದ ಧಣಿಗಳ ಮನೆಗೆ ಬಾಳೆಗೊನೆಯನ್ನು ಸಾಗಿಸುವಂತೆ ಮಾಡಿ, ಮಕ್ಕಳ ಸಾತ್ವಿಕ ಆಕ್ರೋಶವನ್ನು ತೋರಿಸಿ ಕತೆಯನ್ನು ಮುಗಿಸಿದ ರೀತಿಯು ಪರಿಣಾಮಕಾರಿಯಾಗಿದೆ. ಈ ಕತೆಯನ್ನು ಬಂಡಾಯದ ನೆಲೆಯಲ್ಲೂ ನೋಡಬಹುದು. ಆದರೆ ಕೃತಿಗಳ ಸ್ವಂತಿಕೆಯ ಬಗ್ಗೆ ಗೊಂದಲವಿರುವುದರಿಂದ ಶಿವರಾಮ ಕಾರಂತರ ‘ಹೋಳಿಗೆ’ ಎಂಬ ಕತೆಯನ್ನು ಮೊದಲ ಪ್ರಗತಿಶೀಲ ಕತೆ ಎಂದು ಪರಿಗಣಿಸಬೇಕೆಂಬ ವಿದ್ವಾಂಸರ ಸಲಹೆಯು ಸ್ವಾಗತಾರ್ಹವಾಗಿದೆ.

ಶಿವರಾಮ ಕಾರಂತರ “ಹೋಳಿಗೆ” (ಶಿವರಾಮ ಕಾರಂತರ ಕೃತಿ ಶ್ರೇಣಿ ಸಂಪುಟ 1- ಸಂ: ಮಾಲಿನಿ ಮಲ್ಯ) ಕತೆಯ ಸಣ್ಣಪ್ಪನು ಪಾಕ ಪ್ರವೀಣ. ಅವನು ತಯಾರಿಸಿದ ಹೋಳಿಗೆಯನ್ನು ಜಿಲ್ಲಾಧಿಕಾರಿಯೇ ಹೊಗಳುತ್ತಿದ್ದರು. ಆದರೆ ತಾನು ಮಾಡಿದ ಹೋಳಿಗೆಯ ರುಚಿ ಅವನಿಗೇ ತಿಳಿದಿಲ್ಲ. ಅವನ ಸಿಹಿಮೂತ್ರ ರೋಗ ಅದಕ್ಕೊಂದು ಕಾರಣ. ಹೋಳಿಗೆಗಳನ್ನು ಮನೆಗೆ ಕೊಂಡು ಹೋಗಿ ಮಕ್ಕಳಿಗೆ ತಿನ್ನಲು ಕೊಟ್ಟರೆ, ಒಮ್ಮೆ ಅದನ್ನು ತಿಂದು ನೋಡಿ ಅದರ ಸವಿ ಅಂಟಿದರೆ ಮುಂದೆ ತನ್ನ ಮನೆ ಮಾರಿದರೂ ಆ ತಿಂಡಿಬಾಕತನವನ್ನು ಪೂರೈಸಲು ಸಾಧ್ಯವಿಲ್ಲ ಎಂಬ ಅರಿವು ಇನ್ನೊಂದು ಕಾರಣ. ತಾನು ಉತ್ಪಾದಿಸಿದ ವಸ್ತುವಿನ ಮೇಲೆ ಆತನು ತನ್ನ ಅಧಿಕಾರವನ್ನು ಕಳೆದುಕೊಂಡಿದ್ದಾನೆ. ಅಡುಗೆಭಟ್ಟನಾದುದರಿಂದ ಸಣ್ಣಪ್ಪನು ಸಾಮಾಜಿಕ ಅಂತಸ್ತಿನಲ್ಲೂ ಸುಬ್ಬರಾಯನಿಗಿಂತ ಕೀಳಾಗಿದ್ದಾನೆ. ಹಾಗಾಗಿ ಜಾತಿಯಲ್ಲಿ ಬ್ರಾಹ್ಮಣನಾದರೂ ಇತರರಿಗೆ ಸಿಗುವ ಯೋಗ್ಯ ಮರ್ಯಾದೆಯು ಅವನಿಗೆ ಸಿಗುತ್ತಿಲ್ಲ. ಪ್ರತಿಭೆಯನ್ನು ಹೊಗಳುತ್ತಿದ್ದರೂ ಅಂಗೀಕಾರ ಸಿಗುತ್ತಿಲ್ಲ.
‘ಶ್ರೀಧರನ ಕುಚ್ಚು’ (ಶಿವರಾಮ ಕಾರಂತರ ಕೃತಿ ಶ್ರೇಣಿ ಸಂಪುಟ 1- ಸಂ: ಮಾಲಿನಿ ಮಲ್ಯ) ಎಂಬ ಕತೆಯಲ್ಲಿ ಕಂಡು ಬರುವ ಪರಕೀಯ ಪ್ರಜ್ಞೆಯ ನೆಲೆ ಇದಕ್ಕಿಂತ ಭಿನ್ನವಾಗಿದೆ. ಶ್ರೀಧರನು ಅಪ್ರತಿಮ ಬುದ್ಧಿವಂತನಾದರೂ ಅಸಂಬದ್ಧ ಮಾತಗಳನ್ನಾಡುವುದರಿಂದ ಎಲ್ಲರಿಂದಲೂ ತಿರಸ್ಕಾರಕ್ಕೊಳಗಾಗುತ್ತಾನೆ. ಅವನ ಚಿತ್ರಕಲೆಯ ಸಾಮಥ್ರ್ಯವನ್ನು ಅರಿತುಕೊಳ್ಳುವುದು ನಿರೂಪಕ ಮಾತ್ರ. ಇಲ್ಲಿ ಶ್ರೀಧರನ ವಿಕ್ಷಿಪ್ತ, ಮಾನಸಿಕ ವಿಭ್ರಾಂತಿಗೆ ಹೆಚ್ಚು ಗಮನ ಕೊಟ್ಟಿರುವುದರಿಂದ ಅವನ ಪರಕೀಯ ಪ್ರಜ್ಞೆಯು ವ್ಯಕ್ತಿ ವಿಶಿಷ್ಟ ಸ್ವಭಾವವಾಗಿ ಗಮನಕ್ಕೆ ಬರುತ್ತದೆ. 1932ರಲ್ಲಿ ರಚಿಸಿದ ‘ಹಾವು’ (ಶಿವರಾಮ ಕಾರಂತರ ಕೃತಿ ಶ್ರೇಣಿ ಸಂಪುಟ 1- ಸಂ: ಮಾಲಿನಿ ಮಲ್ಯ) ಕೇವಲ ಸಾಂಕೇತಿಕ ರಚನೆ. ಬದುಕಿನಲ್ಲಿ ನಂಜು ಕಾರಿ ಸಂಸಾರವನ್ನು ಕೆಡಿಸುವ ದುರ್ನಡತೆಯು ಹಾವಾಗಿ ರೂಪಾಂತರಗೊಂಡಿದೆ. ಇಂಥ ವಿಷಜಂತುಗಳು (ಮನುಷ್ಯ) ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದರೆ ಮನಸ್ಸಿನ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಹಾವೆಂದರೆ ಕಾಮ. ನವ್ಯರು ಬರೆಯುವುದಕ್ಕೆ ಮೊದಲು 1932ನೇ ಇಸವಿಯಲ್ಲೇ ಸಂಕೇತವನ್ನು ಬಳಸಿಕೊಂಡು ಕತೆ ಮೂಡಿ ಬಂದಿರುವುದರಿಂದ ಈ ರಚನೆಯು ಮುಖ್ಯವಾಗುತ್ತದೆ.

ದ. ರಾ. ಬೇಂದ್ರೆಯವರ ‘ನಿರಾಭರಣ ಸುಂದರಿ’ (ಮನೋಹರ ಗ್ರಂಥ ಪ್ರಕಾಶನ ಸಮಿತಿ ಧಾರವಾಡ- 1940) ಸಂಕಲನದ ‘ಪಾಲಾಫೂ’ ಕತೆಯ ವಸ್ತು ಬಾಲ್ಯದ ಗೆಳೆತನದ ಸಂಬಂಧ ಮತ್ತು ಅದರ ಏರುಪೇರುಗಳಿಂದ ಉಂಟಾಗುವ ಪರಿಣಾಮಗಳು. ಪ್ರಹ್ಲಾದ ಮತ್ತು ರಾಮ ಸ್ವಭಾವದಿಂದ ಭಿನ್ನರಾದರೂ ಆತ್ಮೀಯ ಗೆಳೆಯರು. ಕ್ಷುಲ್ಲಕ ಕಾರಣದಿಂದಾಗಿ ಅವರಿಬ್ಬರ ನಡುವೆ ಮನಸ್ತಾಪವು ಉಂಟಾಗುತ್ತದೆ. ಬಾಲ್ಯ ಜೀವನದಲ್ಲಿ ಇದೊಂದು ಸಾಮಾನ್ಯ ಘಟನೆಯಾದರೂ ಅದು ಪ್ರಹ್ಲಾದನ ಮನಸ್ಸಿಗೆ ಆಘಾತವನ್ನುಂಟು ಮಾಡುತ್ತದೆ. ಏಕಾಕಿತನವನ್ನು ತಾಳಲಾರದೆ ಆತನು ಸಾವನ್ನಪ್ಪುತ್ತಾನೆ. ರಾಮನು ಅಪರಾಧಿ ಪ್ರಜ್ಞೆಯಿಂದ ಬಳಲುತ್ತಾನೆ. ಅವರ ಕತೆಗಳ ಬಗ್ಗೆ ಜಿ. ಎಸ್ ಆಮೂರರು ಹೀಗೆನ್ನುತ್ತಾರೆ “1920ರ ಸುಮಾರಿಗೆಯೆ ಅವರು ತಮ್ಮ ಮೊದಲ ಕತೆಯನ್ನು ಬರೆದಿರುವ ಸಂಭವವಿದೆ. ನಿರಾಭರಣ ಸುಂದರಿಯಲ್ಲಿ ಈ ಕತೆಗಳು ಕಾಣಿಸಿಕೊಳ್ಳುವ ಕ್ರಮ ಕಾಲಕ್ರಮಕ್ಕೆ ಹೊಂದಿದೆ ಎಂದು ನಂಬುವುದಾದರೆ ‘ಪಾಲಾಫೂ’ ಅವರ ಮೊದಲ ಕತೆಯಾಗಿರಬೇಕು” (ಕನ್ನಡ ಕಥನ ಸಾಹಿತ್ಯ: ಸಣ್ಣಕತೆ- ಪುಟ 84) ‘ಹಿರಿದ ಕತ್ತಿ’ಯ ರಚನೆ ನಾಟಕೀಯವಾಗಿದ್ದು ಸಂಕೇತಗಳನ್ನು ಪ್ರಭಾವಿಯಾಗಿ ಬಳಸಿಕೊಳ್ಳುತ್ತದೆ. ತನ್ನ ಮಗಳನ್ನು ಮುದುಕನೊಬ್ಬನಿಗೆ ಬಲವಂತವಾಗಿ ಗಂಟು ಹಾಕ ಬಯಸುವ ನರಸಿಂಗರಾಯನ ಕ್ರೌರ್ಯದ ರೂಪವಾಗಿ ಹಿರಿದ ಕತ್ತಿ ಕಾಣಿಸಿಕೊಳ್ಳುತ್ತದೆ. ಸಾಮಾಜಿಕ ಪರಿಸರವನ್ನು ಲಕ್ಷಿಸಿದ್ದು ಕತೆಯ ಹೊಸ ಬೆಲವಣಿಗೆಯಾಗಿದೆ. ‘ಮಂಗಾಟ’ ಕತೆಯ ಕೇಂದ್ರ ಒಬ್ಬ ಬಾಲಕ. ನಿವೇದಕನು ಈತನ ಅದ್ಭುತ ಲೋಕವನ್ನು ಪ್ರವೇಶಿಸುವುದು ಕತೆಯ ವಸ್ತು. ನಿವೇದಕನ ಕ್ರಿಯೆಯು ಬಾಲ್ಯಕ್ಕೆ ಮರಳುವ ಪ್ರಕ್ರಿಯೆಯಾದರೆ ಬಾಲಕನ ದೃಷ್ಟಿಯಿಂದ ಅದು ಪ್ರಬುದ್ಧ ಜಗತ್ತಿನೊಡನೆ ಸಂಬಂಧವನ್ನು ಬೆಳೆಸುವ ಕ್ರಿಯೆಯಾಗುತ್ತದೆ. ನವ್ಯರಿಗಿಂತ ಮೊದಲೇ ಪರಕೀಯ ಪ್ರಜ್ಞೆಯ ಎಳೆ, ಮನೋವೈಜ್ಞಾನಿಕ ಆಸ್ಥೆಯನ್ನು ತೋರಿರುವುದು ಗಮನಾರ್ಹವಾಗಿದೆ.
ಬೇಂದ್ರೆಯವರ ಉತ್ತಮ ಕತೆಗಳಲ್ಲೊಂದಾದ ‘ಮಗುವಿನ ಕರೆ’ಯ ಕ್ರಿಯೆಯು ತಾಯಿಯ ಅಂತರಂಗಕ್ಕೆ ಸಂಬಂಧಪಟ್ಟಿದೆ. ಕತೆಯ ಕೇಂದ್ರದಲ್ಲಿ ಮಧ್ಯಮವರ್ಗದ ತರುಣಿ ಸೊಸೆ ಇದ್ದಾಳೆ. ನಡು ಮಧ್ಯಾಹ್ನ ಹೊತ್ತಿನಲ್ಲಿ ನೀರು ತರಲೆಂದು ಊರ ಹೊರಗಿನ ಬಾವಿಗೆ ಹೊರಟ ಶಾಸ್ತ್ರಿಗಳ ಸೊಸೆಯ ಒಳತುಮುಲ-ಹೊರನೋಟಗಳಿಂದ ಕತೆ ಆರಂಭವಾಗುತ್ತದೆ. ಚೊಚ್ಚಲ ಮಗನ ಹಡೆದು ಮನೆಗೆ ಬಂದ ಸೊಸೆಗೆ ತನ್ನ ಗಂಡನು ಮಾನಸಿಕ ರೋಗಿಯೆಂದು ತಿಳಿದು ಭ್ರಮನಿರಸನವಾಗುತ್ತದೆ. ಹುಟ್ಟಿದ ಮಗನ ಕಾಲ್ಗುಣ, ಹುಚ್ಚ ಗಂಡನ ಹೆಂಡತಿಯಾದುದಕ್ಕೆ ಸುತ್ತಲಿನವರ ವ್ಯಂಗ್ಯ, ಕೇಕೆಗಳು ನೆನಪಾಗಿ ತಾನು ಯಾರಿಗೂ ಬೇಡವಾದವಳು ಎಂಬ ಭಾವನೆಯಿಂದ ಆತ್ಮಹತ್ಯೆಗೆ ಮುಂದಾಗುವ ಆಕೆಯ ಮನಸ್ಸನ್ನು ಪರಕೀಯ ಪ್ರಜ್ಞೆಯ ಹಿನ್ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕು. “ಹುಣಸೇಮರ ಹಾಳುಗೋಡೆ ‘ನೀನು ಭಾವಿಗೆ ಬಿದ್ದರೆ ನಮಗೇನು’ ಎಂಬಂತೆ ತಟಸ್ಥಭಾವ ಹೊಂದಿದ್ದವು, ನೀರಿನ ತಳವೆ ನಿನಗೆ ತವರು ಬಾ ಎಂಬಂತೆ ತಣ್ಣನೆ ನೀರು ಕಣ್ಸೆಳೆಯಿತು” ಎಂಬ ಸಾಲುಗಳು ಆಕೆಯ ಒಂಟಿತನಕ್ಕೆ ಪೋಷಕವಾಗಿ ಬರುತ್ತವೆ. ಹೀಗೆ ನಿರ್ಲಿಪ್ತ ಮನದ ವ್ಯಾಪಾರ ಹಂತಹಂತವಾಗಿ ಬಿಚ್ಚುತ್ತಾ ಹೋಗುತ್ತದೆ. ಥಟ್ಟನೆ ಯಾರೋ ಅತ್ತಂತಾಗುತ್ತದೆ. ಅದು ತನ್ನ ಮಗುವೇ ಆಗಿದ್ದಂತೆ ನಿರ್ಧಾರ ಬದಲಿಸಲು ಅಷ್ಟೇ ಸಾಕಾಗುತ್ತದೆ. ಮತ್ತೆ ಮಗುವಿನ ನೆನಪು. ಅದರ ಅಳು. ಮಗನಿಗೆ ತಾನಿಲ್ಲದೆ ಮತ್ತೆ ಯಾರಿದ್ದಾರೆ ಎಂಬ ಭಾವ. ಮನಸ್ಸು ಆತ್ಮವಿಮರ್ಶೆಯನ್ನು ಮಾಡತೊಡಗುತ್ತದೆ.
ಅಂದಿನ ಕಾಲದ ಸಂಸ್ಕಾರಯುತ ಮನಸ್ಸು ಪರಕೀಯ ಪ್ರಜ್ಞೆಯನ್ನು ಮೆಲ್ಲಮೆಲ್ಲನೆ ಮೀರಿ ನಿಲ್ಲುತ್ತದೆ. ವಾತ್ಸಲ್ಯ, ಪತಿಭಕ್ತಿ, ಕೃತಜ್ಞತೆ, ಆದರ ಮುಂತಾದ ಭಾವಗಳು ಆಕೆಯ ಒಂಟಿತನವನ್ನು ಮೀರಿ ಕಾಣಿಸಿಕೊಂಡು ನಾಲ್ಕೆಳೆಯ ಹಗ್ಗವಾಗಿ ಹೊಸೆದು ಮನೆಯ ಕಡೆ ಎಳೆಯುತ್ತವೆ. ಮಾತೃ ವಾತ್ಸಲ್ಯ ಎದೆ ತುಂಬಿ ಬರುತ್ತದೆ. ನನಗಾಗಿ ಜೀವಂತ ಜಗತ್ತು ಅಳುತ್ತಿರುವಾಗ ಯಾರದೋ ಮಾತಿಗೆ, ಮಧ್ಯಾಹ್ನದ ಬೇಸರಕ್ಕೆ ಜೀವಕ್ಕೆ ಎರವಾಗುತ್ತಿದ್ದೆನಲ್ಲ ಎಂಬ ಪಶ್ಚಾತ್ತಾಪದೊಡನೆ ಕತೆಯು ಮುಗಿಯುತ್ತದೆ. ಇದು ಪರಕೀಯತೆಯನ್ನು ಮೀರಿ ನಿಂತ ಜೀವಪರ ನಿಲುವು. ಜಗತ್ತಿಡೀ ಹಂಬಲಿಸುವ ಸುಖೀಭಾವ. ಬಹುಕಾಲ ನೆನಪಿನಲ್ಲಿ ಉಳಿಯುವ ಈ ಕತೆ ತಾಯಿ ಮಗುವಿನ ಸಂಬಂಧಕ್ಕೆ ಬರೆದ ನವಿರಾದ ಭಾಷ್ಯ. ಪರಕೀಯತೆಯನ್ನು ಮೀರಿ ನಿಲ್ಲಲು ವ್ಯಕ್ತಿಗತ ಸಂಬಂಧವು ಮುಖ್ಯ ಎಂಬ ಅರಿವಿಗೆ ಸಂಕೇತ. ಪ್ರಗತಿಶೀಲ ಮತ್ತು ನವ್ಯ ಸಾಹಿತ್ಯ ಆರಂಭವಾಗುವ ಮೊದಲು 1932ನೇ ಇಸವಿಯಲ್ಲೇ ಪ್ರಗತಿಪರ ಧೋರಣೆ, ಅಸ್ತಿತ್ವವಾದ ಮತ್ತು ಸಂಕೇತಗಳನ್ನು ಬಳಸಿಕೊಂಡು ಕತೆಗಳನ್ನು ಬರೆದ ಶಿವರಾಮ ಕಾರಂತರು ಮತ್ತು ಮನಾಸ್ತ್ರೀಯ ನೆಲೆಯಲ್ಲಿ ಬರೆದ ಬೇಂದ್ರೆಯವರು ಓದುಗರನ್ನುಬೆರಗುಗೊಳಿಸುವ ಪ್ರತಿಭೆಗಳು. ಬೇಂದ್ರೆಯವರ ಕಾವ್ಯ ಮತ್ತು ಕಾರಂತರ ಕಾದಂಬರಿಗೆ ಸಿಕ್ಕಿದ ಮನ್ನಣೆಯು ಅವರ ಕತೆಗಳಿಗೂ ದೊರಕಬೇಕಿತ್ತು.
‘ಹೇಮಕೂಟದಿಂದ ಬಂದ ಮೇಲೆ’ ಎಂಬ ಕತೆಯ ಗಮನವು ಶಕುಂತಲೆಯ ಮೇಲೆ ಕೇಂದ್ರಿತವಾಗಿದೆ. ದುಷ್ಯಂತನ ಮೆಚ್ಚಿನ ರಾಣಿಯಾದ ಆಕೆ ತನ್ನ ಮಗನ ಜೊತೆ ತವರಿಗೆ ಬಂದಿದ್ದಾಳೆ. ಬದುಕು ಸುಖಮಯವಾಗಿದ್ದರೂ ಯಾರಲ್ಲೂ ಹೇಳಲಾಗದ ವಿಷಾದವು ಆಕೆಯ ಮನಸ್ಸನ್ನು ಆವರಿಸಿಕೊಂಡಿದೆ. ಪ್ರಪಂಚ ಹಿಂದಿನಂತೆಯೇ ಇದ್ದರೂ ಹಿಂದಿನ ಉಲ್ಲಾಸ ಅವಳಲ್ಲಿ ಮೂಡುವುದಿಲ್ಲ. ಮನಸ್ಸಿನ ಈ ಸ್ಥಿತಿಯೇನು ಎಂದು ಆಕೆಗೆ ಅರಿವಾಗುವುದಿಲ್ಲ. ಅವಳ ಬಾಳು ಯಾರದೋ ಇನ್ನೊಬ್ಬರ ಬಾಳು ಎಂಬಂತೆ ಕಾಣುತ್ತದೆ. ಇವೆಲ್ಲದರ ನಡುವೆಯೂ ಅವಳು ಏಕಾಕಿಯಾಗುತ್ತಾಳೆ. ಆದರೆ ಈ ಕತೆಯೂ ಸೇರಿದಂತೆ ಆ ಕಾಲದ ಕೆಲವು ಕತೆಗಳಲ್ಲಿ ಪರಕೀಯ ಪ್ರಜ್ಞೆಯು ಪಾಶ್ಚಾತ್ಯ ತತ್ವದ ಆಧಾರದಲ್ಲಿ ಮೂಡಿ ಬರಲಿಲ್ಲ ಎಂಬುದು ಈ ಕತೆಗಳಿಗೂ ನವ್ಯ ಕತೆಗಳಿಗೂ ಇರುವ ಮುಖ್ಯ ವ್ಯತ್ಯಾಸವಾಗಿದೆ.
ಹ. ಪೀ. ಜೋಷಿಯವರು (1898-1941) ನವೋದಯ ಕಾಲದ ಕತೆಗಾರರಾದರೂ ಅವರ ಸಂವೇದನೆಯಲ್ಲಿ ನವ್ಯತೆಯ ಅಂಶಗಳಿವೆ. ಅವರ ‘ಭಾವಪ್ರಭಾತ’ (1937) ಸಂಕಲನದ ‘ಅಪೂರ್ಣಾ’ ಎಂಬ ಕತೆಯು ಅರುವತ್ತು ವಯಸ್ಸಿನ ಹೆಂಗಸಿನ ನೆನಪುಗಳನ್ನು ಒಳಗೊಂಡಿದೆ. ಮನೆಯ ಎದುರಿನ ಕೋಣೆಯು ಆಕೆಯ ನೆನಪುಗಳ ಕೇಂದ್ರವಾಗಿದೆ. ಆಕೆಯ ಎಂಟನೇ ವಯಸ್ಸಿನಲ್ಲೇ ನೆನಪಿನಲ್ಲಿ ಸೇರಿದ ಆ ಕೋಣೆಯು ಕೊನೆಯವರೆಗೂ ರಹಸ್ಯ ಸಂಕೇತವಾಗಿದೆ. ಆಕೆಯು ವಿಧವೆಯಾಗಿ ಇಬ್ಬರು ಮಕ್ಕಳೊಂದಿಗೆ ತವರಿಗೆ ಮರಳಿ ಬಂದಾಗಲೂ ಕೋಣೆಯ ಮೇಲಿನ ಆಕರ್ಷಣೆಯು ಕಡಿಮೆಯಾಗುವುದಿಲ್ಲ. ಅದಕ್ಕೆ ಇನ್ನೊಂದು ಕಾರಣವೂ ಇದೆ. ಆ ಕೋಣೆಯಲ್ಲಿ ಈಗ ವಾಸವಾಗಿರುವ ತರುಣನನ್ನು ಅವಳು ಈ ಮೊದಲೇ ಕಂಡಿದ್ದಾಳೆ. ತನ್ನ ಮದುವೆಯ ಹೊತ್ತಿನಲ್ಲಿ ಅನುಭವಿಸಿದ್ದ ಎಳೆತವು ಇನ್ನೂ ಬಲವಾಗಿಯೇ ಇದೆ. ಅವನು ಈ ಕೋಣೆಗೆ ಬಂದದ್ದು ಆಕಸ್ಮಿಕವೇ ಉದ್ದೇಶಪೂರ್ವಕವಾಗಿಯೇ? ಎಂಬ ವಿಚಾರಗಳಿಗೆ ಉತ್ತರವನ್ನು ಕಂಡುಕೊಳ್ಳಲಾರದೆ ಆಕೆಯು ಒದ್ದಾಡುತ್ತಾಳೆ. ‘ನಾನು ಸೂಕ್ಷ್ಮವಾಗಿ ಆತನ ಕಡೆಗೆ ನೊಡಹತ್ತಿದೆ. ನನ್ನ ಮನಸ್ಸು ಚಂಚಲವಾಯಿತು.’ ಕನಸಿನಲ್ಲಿ ‘ಅವರು’ ಬಂದು ಕೈಹಿಡಿದು ನಡೆಸಿದಂತಾಗಿ ಮನಸ್ಸಿಗೆ ನೆಮ್ಮದಿಯಾದರೂ ತರುಣನ ನೆನಪು ಹಸಿರಾಗಿ ಉಳಿದುಕೊಳ್ಳುತ್ತದೆ. ‘ನಾನು ಪರಿಪೂರ್ಣಳಲ್ಲ. ಈಗಲೂ ನನ್ನ ಕೈಹಿಡಿದವರ ಛಾಯಾಚಿತ್ರವನ್ನು ಪೂಜಿಸುತ್ತೇನೆ. ಆತನು ಮಾತ್ರ ಇನ್ನೂ ಕಟ್ಟಿದಂತಿದೆ. ಅಯುಷ್ಯವಂತೂ ಮುಗಿಯುತ್ತ ಬಂದಿರುವುದು. ಏನೋ ಕಾಲ ಹಾಕುವುದು. ಆತನ ಭೆಟ್ಟಿಯ ಆಸೆ ಇಲ್ಲ, ನನ್ನ ಕೈ ಹಿಡಿದವರು ಅಲ್ಲಿ ನನ್ನ ದಾರಿ ಕಾಯುತ್ತಿರುವರು’ ಎಂಬ ಸ್ವಗತದಲ್ಲಿ ಆಕೆಯ ಅವಳ ಮಾನಸಿಕ ಹೊಯ್ದಾಟದ ಚಿತ್ರಣವು ವ್ಯಕ್ತವಾಗುತ್ತದೆ. ಇಂಥ ಕತೆಯನ್ನು ಹ. ಪೀ. ಜೋಷಿಯವರು 1935ರಲ್ಲಿ ಬರೆದಿದ್ದು, ಕತೆಯ ವಸ್ತುವಿನಂತೆ ತಂತ್ರವೂ ನವ್ಯವಾಗಿರುವುದು ಅಚ್ಚರಿಯ ಸಂಗತಿಯಾಗಿದೆ.

ಕೊಡಗಿನ ಗೌರಮ್ಮನವರ ‘ವಾಣಿಯ ಸಮಸ್ಯೆ’ (ಕಂಬನಿ: ಮನೋಹರ ಗ್ರಂಥ ಭಂಡಾರ ಧಾರವಾಡ 1939)ಯಲ್ಲಿ ಎದ್ದು ಕಾಣುವ ಆಧುನಿಕತೆಯಿದೆ. “ದ. ಬಾ. ಕುಲಕರ್ಣಿಯವರು ತಿಳಿಸಿದಂತೆ ಗೌರಮ್ಮನವರಿಗೆ ಪಾಶ್ಚಾತ್ಯ ಸಾಹಿತ್ಯದಲ್ಲಿ ರುಚಿಯಿದ್ದಿತು ಹಾಗೂ ಜಗತ್ತಿನ ಶ್ರೇಷ್ಠ ಕತೆಗಳ ಪರಿಚಯವಿದ್ದಿತು. ಅವರು ತಮ್ಮ ಕತೆಗಾಗಿ ಬಳಸಿದ ತಂತ್ರ ಹೊಸತು. ಆಧುನಿಕತೆಯ ಮುಖ್ಯ ಲಕ್ಷಣಗಳಲ್ಲೊಂದಾದ ಅಂತರ್ಮುಖತೆ ಈ ಕತೆಯ ಜೀವಾಳವಾಗಿದೆ. ‘ಮಾನಸ ವ್ಯಾಪಾರಗಳ ಹೇಳಿಕೆ’ ಗೌರಮ್ಮನವರ ವೈಶಿಷ್ಟ್ಯವೆಂದು ವಿವರಿಸಿದ ಬೇಂದ್ರೆಯವರು ಈ ಅಂಶವನ್ನು ಈ ಅಂಶವನ್ನು ಸರಿಯಾಗಿಯೇ ಗುರುತಿಸಿದರು” (ಕನ್ನಡ ಕಥನ ಸಾಹಿತ್ಯ: ಸಣ್ಣಕತೆ- ಜಿ. ಎಸ್ ಆಮೂರ- ಪುಟ 336) ಇದು ನವೋದಯ ಕತೆಯಾದರೂ ನವ್ಯಕ್ಕೆ ಅಷ್ಟೂ ಹತ್ತಿರವಾದ ಸಂವೇದನೆಯನ್ನು ಒಳಗೊಂಡಿದೆ. ವಾಣಿಯ ಸಮಸ್ಯೆ ಎಂಬ ಹೆಸರಿದ್ದರೂ ಈ ಕತೆಯ ಕೇಂದ್ರಬಿಂದು ಇಂದು. ಅವಳ ಏಕಾಕಿತನ, ಸ್ವಾತಂತ್ರ್ಯ ಪ್ರೀತಿ, ವಾಣಿಯೊಡನೆ ಬೆಳೆಸುವ ಆತ್ಮೀಯತೆ, ರತ್ನನ ಸಂಪರ್ಕದಿಂದ ಹುಟ್ಟಿಕೊಂಡ ಹೊಸ ಬಯಕೆಗಳು, ಅದರಿಂದ ಏಳುವ ನೈತಿಕ ಸಮಸ್ಯೆ, ಕೊನೆಗೆ ಕಂಡುಕೊಳ್ಳುವ ಪರಿಹಾರ ಇವುಗಳೆಲ್ಲ ಸಹಜವಾದ ರೀತಿಯಲ್ಲಿ ಮೂಡಿ ಬರುತ್ತವೆ. ಕತೆಯ ಭಾವನಾ ಪ್ರಪಂಚ ಕೂಡ ತೀರಾ ಸ್ವಾಭಾವಿಕವೆಂದು ಅನುಭವಕ್ಕೆ ಬರುತ್ತವೆ. ಕತೆಯಲ್ಲಿ ಎಲ್ಲೂ ಅಪಸ್ವರಗಳಿಲ್ಲ.
ಇಂದು ವಿಧವೆಯಾದರೂ ಅಸಹಾಯಕಳಲ್ಲ. ಗಂಡನನ್ನು ಕಳೆದುಕೊಂಡರೂ ಮನೆಯ ಆಸರೆಯಿದೆ. ಹೀಗಾಗಿ ಅವಳು ಏಕಾಕಿಯಾದರೂ ಸ್ವತಂತ್ರ ಜೀವನವನ್ನೇ ಆಯ್ದುಕೊಳ್ಳುತ್ತಾಳೆ. ಸ್ನೇಹಜೀವಿಯಾದರೂ ಮಾನವೀಯ ಸಂಬಂಧಗಳಿಂದ ದೂರ ಉಳಿಯುತ್ತಾಳೆ. ಮನೆ-ನೆರೆಮನೆಗಳ ನಡುವಿನ ಬೇಲಿ ಅವಳಿಗೆ ಮುಖ್ಯವಾಗುತ್ತದೆ. ಆದರೆ ವಾಣಿ ಮತ್ತು ರತ್ನರ ಸಂಪರ್ಕದಿಂದಾಗಿ ಅವಳ ಬದುಕು ಸಮಸ್ಯಾತ್ಮಕವಾಗುತ್ತದೆ. ಕೊನೆಗೆ ತಾನು ಬಿಟ್ಟು ಬಂದ ಬಳಗದೆಡೆಗೆ ಮರಳುವುದು ಅವಳ ಸೋಲಾದರೂ ಅದು ಪಲಾಯನವಲ್ಲ. ನೈತಿಕ ಕ್ರಿಯೆ. ಬೇರೆ ಸಾಂಸ್ಕøತಿಕ ಸಂದರ್ಭವಾಗಿದ್ದರೆ ಅವಳಿಗೆ ಹೆಚ್ಚಿನ ಆಯ್ಕೆ ಇರುತ್ತಿತ್ತೇನೋ. ಆದರೆ ಅವಳು ಬದುಕಿದ ಸಮಾಜದಲ್ಲಿ ಅವಳ ನಿರ್ಧಾರವೇ ಸಾಧುವಾಗಿತ್ತು. ಇಂದುವಿನಲ್ಲಿ ಚೆಲುವು, ಅಚ್ಚುಕಟ್ಟುತನ, ಪ್ರೀತಿಸುವ ಶಕ್ತಿ, ಆಳವಾದ ಭಾವನೆ ಮತ್ತು ತನ್ನದಲ್ಲದ ಸಂಸಾರವನ್ನು ಓರಣಗೊಳಿಸುವ ಶಕ್ತಿಯಿದೆ. ಇಷ್ಟೆಲ್ಲಾ ಸಿರಿವಂತಿಕೆಯಿದ್ದರೂ ವಿಧವೆಯೆಂಬ ಕಾರಣಕ್ಕೆ ಸುಖದ ಬಾಗಿಲು ಮುಚ್ಚಿಕೊಳ್ಳುತ್ತದೆ. ಅವಳು ಸ್ವಾರ್ಥಿಯಾಗಿದ್ದರೆ ಸುಖ ದೊರಕಬಹುದಿತ್ತು. ಆದರೆ ಅವಳು ಆ ಹಾದಿಯನ್ನು ಆಯ್ದುಕೊಳ್ಳುವುದಿಲ್ಲ. ಪರಕೀಯ ಪ್ರಜ್ಞೆಯೇ ನೈತಿಕ ಶಕ್ತಿಯಾಗಿ ಅವಳ ವ್ಯಕ್ತಿತ್ವಕ್ಕೆ ಗಟ್ಟಿತನವನ್ನು ಒದಗಿಸುತ್ತದೆ. ಇದು ಪರಕೀಯ ಪ್ರಜ್ಞೆಯ ಧನಾತ್ಮಕ ನೆಲೆ.

ಕನ್ನಡದ ವಿಶಿಷ್ಟ ರಚನೆಗಳಲ್ಲಿ ಒಂದಾದ ‘ಧನ್ವಂತರಿಯ ಚಿಕಿತ್ಸೆ’ ಎಂಬ ಕತೆಯಲ್ಲಿ ಕುವೆಂಪು ಅವರು ಪೌರಾಣಿಕ ಚೌಕಟ್ಟನ್ನು ಬಳಸಿಕೊಂಡು ಭಾರತದ ಕಟು ಸತ್ಯವೊಂದಕ್ಕೆ ಮರೆಯಲಾಗದ ರೂಪವನ್ನು ನೀಡಿದ್ದಾರೆ. ಪ್ರಗತಿಶೀಲ ಚಳುವಳಿಯ ಗಾಳಿ ಬೀಸುವುದಕ್ಕಿಂತ ಹಲವು ವರುಷಗಳ ಮೊದಲೇ ಅವರು ಇಡೀ ವರ್ಗದ ಶೋಷಣೆಗೆ ಕ್ರಾಂತಿಯ ಪರಿಹಾರವನ್ನು ಸೂಚಿಸಿದ ವಿಚಾರವು ಗಮನಾರ್ಹವಾಗಿದೆ. ಈ ಪರಿಹಾರವನ್ನು ಸಂಕಲ್ಪಮೂರ್ತಿ ಸ್ವರೂಪನಾದ ಬ್ರಹ್ಮರ್ಷಿ ವಿಶ್ವಾಮಿತ್ರನೇ ಕಾರ್ಯಗತಗೊಳಿಸುತ್ತಾನೆ ಎಂಬುದು ಮುಖ್ಯವಾಗುತ್ತದೆ.
ಮನುಷ್ಯನ ಬದುಕನ್ನು ಬದುಕಿನಾಚೆ ನಿಂತು ನೋಡುವ ಪ್ರಯತ್ನದಲ್ಲಿ ಭಾಗಿಯಾಗುವ ದೇವತೆಗಳ ಆಯ್ಕೆಯನ್ನು ಗಮನಿಸಬೇಕು. ಇಲ್ಲಿ ದೇವಗುರು ಬೃಹಸ್ಪತಿಯು ಬರುವುದಿಲ್ಲ. ನಾರದನು ಭೂಮಿಯಿಂದ ನಿರಂತರವಾಗಿ ಕೇಳಿಬರುತ್ತಿರುವ ನರಳಿಕೆಗೆ ಸಾಕ್ಷಿಯಾಗಿ ಮಾಯವಾಗುತ್ತಾನೆ. ವಿಶ್ವಾಮಿತ್ರ, ಪರಶುರಾಮ ಮತ್ತು ದೇವಲೋಕದ ವೈದ್ಯ ಧನ್ವಂತರಿ ಮಾತ್ರ ಇದರಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುತ್ತಾರೆ. ವಿಶ್ವಾಮಿತ್ರ ಮತ್ತು ಪರಶುರಾಮರ ಬಗ್ಗೆ ಹಲವಾರು ಪೌರಾಣಿಕ ಕತೆಗಳಿವೆ. ಅವರ ವಿಷಯದಲ್ಲಿ ಹಲವರಿಗೆ ಬೇರೆ ಬೇರೆ ಕಲ್ಪನೆಗಳಿರಬಹುದು. ಕತೆಯಲ್ಲಿ ಅವರ ಬದುಕಿನ ಹಲವು ಮುಖಗಳತ್ತ ಕಡೆಗಣ್ಣಿನ ನೋಟವಿದೆ. ಆದರೆ ಕತೆಯಲ್ಲಿ ಅವರು ದುಷ್ಟ ವಿನಾಶಕ ಕ್ರಾಂತಿಕಾರಿ ಶಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ವಿಶ್ವಾಮಿತ್ರನು ರೋಷದಿಂದ ಹಲ್ಲು ಕಡಿಯುತ್ತಾ “ಜಾಮದಗ್ನಿ, ನೀನಂದು ಆಳುವವರನ್ನೆಲ್ಲ ನಿರ್ನಾಮ ಮಾಡಿ ಸಮತಾ ಪ್ರಚಾರಕ್ಕೆ ಜೀವಮಾನವನ್ನೆಲ್ಲ ತೆತ್ತುದು ವ್ಯರ್ಥವಾಯಿತು” ಎನ್ನುತ್ತಾನೆ. ಇಲ್ಲಿ ‘ಸಮತಾ ಪ್ರಚಾರ’ ಎಂಬ ಪದವನ್ನು ಪ್ರಯೋಗಿಸುವ ಮೂಲಕ ಕುವೆಂಪು ಪೌರಾಣಿಕ ಸಾಮಾಗ್ರಿಗೆ ಹೊಸ ಅರ್ಥವನ್ನು ತರುತ್ತಾರೆ. ಆಗ ಪರಶುರಾಮನು “ನೀನು ಕೂಡ ಮೇಲುಕೀಳುಗಳೆಂಬ ಭೇದವನ್ನು ತೊಡೆದು ಹಾಕಲು ಬಾಳನ್ನೇ ತೇಯಲಿಲ್ಲವೇ?” ಎಂದು ಮರು ಪ್ರಶ್ನಿಸುತ್ತಾನೆ. “ಲೋಕವೆಲ್ಲ ನಿರ್ನಿಯಮವಾಗಿ, ಅರಾಜಕವಾಗಿ, ಅವ್ಯವಸ್ಥೆಯಾದರೆ?” ಎಂಬ ಕ್ರಾಂತಿ ವಿರೋಧಿ ಆಕ್ಷೇಪಕ್ಕೆ ಕತೆಯು ಧನ್ವಂತರಿಯಿಂದ ಸಮಾಧಾನವನ್ನು ಹೇಳಿಸುತ್ತದೆ. ಪುರೋಹಿತ ಮತ್ತು ಸರಕಾರಿ ವೈದ್ಯನ ಭೇಟಿ, ಗುಡಿಯ ಪೂಜಾರಿಯ ವರ್ತನೆ, ನರ್ತಕಿಯ ಪ್ರಸಂಗಗಳು ಕತೆಗೆ ಹೊಸ ಅರ್ಥಗಳನ್ನು ನೀಡುತ್ತವೆ. ಜಗತ್ತಿನ ಕಲ್ಯಾಣಕಾರಕ ಶಕ್ತಿಗಳೇ ರೈತನ ಶೋಷಣೆಯ ವಿರುದ್ಧ ಕ್ರಾಂತಿಯನ್ನು ಆರಂಭಿಸುತ್ತವೆ ಎಂಬ ಸೂಚನೆಯು ಇಲ್ಲಿದೆ. ದೇವ ವೈದ್ಯನಿಂದ ರೈತನಿಗೆ ಚೈತನ್ಯ ಬಂದು, ಅವನ ಎದೆಯ ಮೇಲಿನ ದೇವಾಲಯ, ಅರಮನೆ ಮತ್ತು ಇತರ ಹೊರೆಗಳು ಉರುಳಿ ಬಿದ್ದಿದ್ದರೆ ಕತೆಯು ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತು. ಆಧುನಿಕ ಕನ್ನಡ ಸಣ್ಣ ಕತೆಯ ಅರಂಭದ ಘಟ್ಟದಲ್ಲಿ ಇಂಥ ಕತೆಯೊಂದು ಮೂಡಿ ಬಂದದ್ದು ಅಚ್ಚರಿಯ ಸಂಗತಿ. ಸಣ್ಣ ಕತೆಯ ಮಿತಿಯಲ್ಲಿ ಕುವೆಂಪು ಒಂದು ನಾಡಿನ ಸ್ಥಿತಿಯನ್ನು ಚೆನ್ನಾಗಿ ವಿಶ್ಲೇಷಿಸಿದ್ದಾರೆ.
ಪ್ರಗತಿಶೀಲ ಲೇಖಕ ಅ. ನ. ಕೃಷ್ಣರಾಯರು ‘ರಾಮೋತ್ಸವ’ ಎಂಬ ಕತೆಯಲ್ಲಿ ಹಿನ್ನೋಟ ತಂತ್ರವನ್ನು ಉಪಯೋಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗೀತಗಾರ ಆನಂದರಾಯ ಮತ್ತು ಅವನ ಶಿಷ್ಯೆಯೂ ಪ್ರೇಯಸಿಯೂ ಆದ ಸುಂದರಿಯ ಸಂಬಂಧದ ಮೂಲಕ ಹುಟ್ಟಿ ಕಲಾವಿದನಾಗಿ ಬೆಳೆಯುವ ರಾಮು ಇವರ ನಡುವಿನ ಸಂಬಂಧವೇ ಇಲ್ಲಿನ ಕಥಾವಸ್ತು. ಕ್ರಿಯೆಯು ಸಂಪೂರ್ಣವಾಗಿ ಆಂತರಿಕವಾಗಿರುವ ರಚನೆಯು ಮನೋವೈಜ್ಞಾನಿಕ ಕಥಾ ಸಾಹಿತ್ಯದ ಮೊದಲ ಪ್ರಯೋಗಗಳಲ್ಲಿ ಒಂದು.
ತ.ರಾ.ಸು ಅವರದ್ದು ಪ್ರಗತಿಶೀಲ ಮನೋಧರ್ಮವಾದರೂ ಅವರು ಪಂಥವೊಂದರ ಚೌಕಟ್ಟಿನಲ್ಲಿ ಸೇರಿಬಿಡಲಾರದ ಸಾಹಿತಿ. ಸಾಮಾನ್ಯವಾಗಿ ನವ್ಯ ಸಾಹಿತ್ಯ 1950ರಲ್ಲಿ ಪ್ರಾರಂಭವಾಯಿತು ಎನ್ನಲಾಗುತ್ತದೆ. ‘ಸ್ವತಂತ್ರ ಭಾರತದ ಬಗ್ಗೆ ಇಟ್ಟುಕೊಂಡ ಕನಸುಗಳು ಮುರಿದು, ನಿರಾಶೆ ಕವಿದು ಸಾಹಿತಿಯನ್ನು ಅಂತರ್ಮುಖಿಯನ್ನಾಗಿ ಮಾಡಿತು ಎಂದು ಹೇಳಲಾಗುತ್ತದೆ. 0-0=0 ಇದಕ್ಕೆ ಮೊದಲೇ 1948ರಲ್ಲಿ ಪ್ರಕಟವಾಗಿದ್ದು ನವ್ಯದ ಹರಿಕಾರ ಎನ್ನಬಹುದಾದ ಕತೆ’ ಎಂದು ಎಲ್. ಎಸ್. ಶೇಷಗಿರಿ ರಾವ್ ಅಭಿಪ್ರಾಯಪಡುತ್ತಾರೆ (ತುಷಾರ: ಜನವರಿ 1993)
ಕತೆಯ ಶೀರ್ಷಿಕೆಯೇ ಈಶಾವಾಸ್ಯೋಪನಿಷತ್ತಿನ ಶಾಂತಿ ಮಂತ್ರವನ್ನು (ಪೂರ್ಣಸ್ಯ ಪೂರ್ಣಮದಾಯ ಪೂರ್ಣಮೇವಾವಶಿಷ್ಯತೇ) ಅಣಕವಾಡುತ್ತವೆ. ಸಾವು ಬದುಕುಗಳು ಹೆಣೆದುಕೊಳ್ಳುತ್ತವೆ. ಇಲ್ಲಿ ಸಾಂಪ್ರದಾಯಿಕ ಕಥಾವಸ್ತುವಿಲ್ಲ. ಸಾವು ಬದುಕುಗಳ ನಡುವಿನ ಆಕರ್ಷಣೆ ವಿಕರ್ಷಣೆಗಳ ಹೆಣಿಗೆಯೇ ಈ ಕತೆಯ ಹೂರಣ. ಭಾಷೆ, ಪ್ರತಿಮೆ, ಸಂಕೇತಗಳ ಬಳಕೆ ವಿಶೇಷವಾಗಿದೆ. ಕರುವಿನ ಸಾವಿನ ಗಳಿಗೆಯಲ್ಲಿ ಸತ್ತ ಕರು, ಮುಂದೆ ಕಾಲಿಟ್ಟು ಹಿಂದೆ ಸರಿಯುವ ಹಸು ಸಾವು-ಬದುಕು ಸಂಧಿಸಿದಂತೆ, ಚಿಂತಿಸುವ ವ್ಯಕ್ತಿ-ಗುಂಪುಗಟ್ಟಿದ ಜನ ಇವರಲ್ಲಿ ವ್ಯಷ್ಟಿ ಸಮಷ್ಟಿಗಳ ನಡುವಿನ ಮುಖಾಮುಖಿ ನಡೆಯುತ್ತದೆ. ಇಲ್ಲಿ ವ್ಯಕ್ತಿಗೆ ಕೊನೆಗೂ ಜನರೊಂದಿಗೆ ಬೆರೆಯಲಾಗುವುದಿಲ್ಲ. “ಸಾವೇ ಬರಬೇಕಿತ್ತು ಕಣ್ಣು ತೆರೆಸಲು” ಎನ್ನುವ ವ್ಯಕ್ತಿ ಗುಂಪಿನವರ ನಡುವೆ ಒಂಟಿಯಾಗುತ್ತಾನೆ. ಕತೆಯ ಕೇಂದ್ರ ಪ್ರಜ್ಞೆಯನ್ನು ಹೊಂದಿದ ಅವನು ಬಾವಿಯೊಳಗೆ ಮರೆಯಾದ ಮೇಲೂ ಬಾಳು ಮೊದಲಿನಂತೆಯೇ ಉಳಿದಿದೆ. 0-0=0. ವೃತ್ತ ಪೂರ್ಣತೆಯ ಸಂಕೇತ. ಸೊನ್ನೆ ಶೂನ್ಯತೆಯ ಸಂಕೇತ. ಇವುಗಳೆರಡೂ ‘ಬಯಲು ಬಯಲನೆ ಕೂಡಿ ಬಯಲಾಗಿತ್ತು’ ಎನ್ನುವ ಮಾತಿನಲ್ಲಿ ಮತ್ತೆ ಬೆರೆಯುತ್ತವೆ. ವ್ಯಕ್ತಿಯ ನಿರಾಶೆಯು ಸ್ವತಂತ್ರ ಭಾರತದ ನಡೆಯ ವೈಖರಿಯನ್ನು ಕಂಡ ಚಿಂತನಶೀಲರ ನಿರಾಶೆ, ಬದುಕಿನ ವೈಖರಿಯನ್ನು ಕಂಡ ಪ್ರಾತಿನಿಧಿಕ ವ್ಯಕ್ತಿಯ ನಿರಾಶೆಯಾಗಿ ಪರಕೀಯ ಪ್ರಜ್ಞೆಯು ಘನೀಭೂತವಾಗುತ್ತದೆ. ಇದು ರೂಪುಗೊಳ್ಳುವಾಗಲೇ ಸಾವು-ಬದುಕು, ಭೂತ-ವರ್ತಮಾನ, ವ್ಯಷ್ಟಿ-ಸಮಷ್ಟಿಗಳು ಸಂಧಿಸುತ್ತವೆ. ಹತ್ತು ಜೀವನ ದೃಷ್ಟಿಗಳು ಸಂಧಿಸುತ್ತವೆ.
ಬಾಗಲೋಡಿ ದೇವರಾಯರ ‘ಹುಚ್ಚ ಮುನಸೀಫ ಹಾಗೂ ಇತರ ಕಥೆಗಳು’ (1949) ಸಂಕಲನದಲ್ಲಿರುವ ‘ಹುಚ್ಚ ಮುನಸೀಫರ ಚರಿತ್ರೆ’ ಎಂಬ ಕತೆಯಲ್ಲಿ ನವೋದಯ ಮನೋಧರ್ಮಕ್ಕಿಂತ ಭಿನ್ನವಾದ ಅಂಶಗಳನ್ನು ಗುರುತಿಸಬಹುದು. ಹೆಸರೇ ಸೂಚಿಸುವಂತೆ ಇದು ವ್ಯಕ್ತಿಯೊಬ್ಬನ ಚರಿತೆಯಾಗಿದೆ. ಕತೆಯ ಮೊದಲಿಗೇ ಈತನ ವಿಕ್ಷಿಪ್ತತೆಯ ಸೂಚನೆಗಳಿವೆ. ಕೆಲವರಿಗೆ ಅವನು ಹುಚ್ಚನಾಗಿ ಕಂಡರೆ ಕೆಲವರಿಗೆ ಅವಧೂತನೂ, ಮತ್ತಿತರರಿಗೆ ವಿಚಿತ್ರಾವತಾರಿಯೂ ಆಗಿ ಕಾಣಿಸುತ್ತಾನೆ. ಮುನಸೀಫನ ಕಲ್ಪನೆಯು ತರ್ಕ ಜಾಣತನಗಳಿಗೆ ಸಂಬಂಧಿಸಿದ್ದು ಹುಚ್ಚುತನಕ್ಕೆ ತೀರಾ ವಿರುದ್ಧ ನೆಲೆಯಲ್ಲಿದೆ. ಮೊದಲು ಬಸವನಾಗಿದ್ದು ಬಳಿಕ ಸುಂದರಪ್ಪನಾಗಿ ನಾಮಕರಣಗೊಂಡ ಸುಂದರಪ್ಪನ ವ್ಯಕ್ತಿತ್ವದಲ್ಲಿಯೇ ವಿರೋಧಾಭಾಸಗಳಿವೆ. ಸಾಮಾನ್ಯವಾಗಿ ತಣ್ಣಗೆ ಕಂಡು ಬರುತ್ತಿದ್ದ ಸುಂದರಪ್ಪನು ಒಮ್ಮೊಮ್ಮೆ ರೌದ್ರಾವತಾರವನ್ನು ತಾಳುತ್ತಾನೆ. ಇವನ ಹುಚ್ಚುತನಗಳಿಗೆ ಕತೆಯಲ್ಲಿ ಬಹಳ ಉದಾಹರಣೆಗಳಿವೆ. ಒಂದು ಮೊಕದ್ದಮೆಯಲ್ಲಿ ದನಗಳು ಯಾರ ಪಾಲಿಗೆ ಸೇರಬೇಕೆಂಬ ಪ್ರಶ್ನೆ ಎದುರಾದಾಗ ಅವನು ದನಗಳಿಗೆ ಸಮ್ಮನ್ಸ್ ಜಾರಿ ಮಾಡುತ್ತಾನೆ. ಅವುಗಳ ರಕ್ಷಣೆಯ ದೃಷ್ಟಿಯಿಂದ ಅವುಗಳನ್ನು ಮೊಕದ್ದಮೆಗೆ ಸಂಬಂಧಿಸದ ಹೆಂಗಸಿಗೆ ಒಪ್ಪಿಸಲು ನಿರ್ಧರಿಸುತ್ತಾನೆ. ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗಾರರನ್ನು ಪರೀಕ್ಷಿಸುವ ಹೊತ್ತಿನಲ್ಲಿ ಕೊಲೆ ಕೊಟ್ಟಿಗೆಯಲ್ಲಿ ನಡೆದುದರಿಂದ ಅದರೊಳಗಿದ್ದ ದನಗಳೇ ಸಾಕ್ಷಿ ಹೇಳಬೇಕು ಎಂದು ಹಟ ಮಾಡುತ್ತಾನೆ. ಪ್ರಾಣಿಗಳ ಬಾಯಿಯಿಂದ ದೇವರು ಮಾತನಾಡಿಸುತ್ತಾನೆ ಎಂಬುದು ಅವನ ವಾದ. ಈ ಎರಡೂ ಸಂದರ್ಭಗಳಲ್ಲಿ ದನಗಳ ಪ್ರಸ್ತಾಪ ಬರುವುದು ಆಕಸ್ಮಿಕವಲ್ಲ. ಯಾಕೆಂದರೆ ಅವನ ಬದುಕಿನಲ್ಲಿ ದನಗಳಿಗೆ ಬಹಳ ಮಹತ್ವವಿದೆ.
ಸುಂದರಪ್ಪನು ಏಕಕಾಲಕ್ಕೆ ಎರಡು ವ್ಯಕ್ತಿಗಳಾಗಿರುವುದು ಅವನ ಹುಚ್ಚುತನಕ್ಕೆ ಕಾರಣ. ಅವನು ದನಗಳನ್ನು ಮೇಯಿಸುವ ಮನೆತನದಲ್ಲಿ ಬೆಳೆದ ಹಳ್ಳಿಯ ಬಸವನೂ ಹೌದು. ಮೇಲು ಜಾತಿಯವರ ಮನೆ ಸೇರಿ ಉನ್ನತ ಶಿಕ್ಷಣ ಪಡೆದು ನಾಗರಿಕನೆನಿಸಿಕೊಂಡ ಸುಂದರಪ್ಪನೂ ಹೌದು. ಈ ವ್ಯಕ್ತಿಗಳಲ್ಲಿ ಸಮನ್ವಯವು ಸಾಧ್ಯವಾಗದಿರುವುದರಿಂದ ಅವನ ಕೃತಿಗಳಲ್ಲಿ ಹುಚ್ಚುತನ ಸೇರಿಕೊಳ್ಳುತ್ತದೆ. ಅವನದ್ದು ತನ್ನತನಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರುವುದರಿಂದ ಆತನು ಸಂಕಟಕ್ಕೊಳಗಾಗುತ್ತಾನೆ. ಅವನ ವಿಚಿತ್ರ ನಿರ್ಣಯಗಳನ್ನು ಉಚ್ಚ ನ್ಯಾಯಾಲಯಗಳು ತಳ್ಳಿ ಹಾಕುತ್ತವೆ. ಔದ್ಯೋಗಿಕ ಬದುಕಿನಿಂದ ಬೇಸತ್ತು ಆತ ನಿವೃತ್ತನಾಗುತ್ತಾನೆ. ಸಾಂಸಾರಿಕ ಸೌಖ್ಯಕ್ಕೂ ಎರವಾಗುತ್ತಾನೆ. ಕತೆಯ ಕೊನೆಯ ಭಾಗವು ಅವನ ತನ್ನತನದ ಬಿಕ್ಕಟ್ಟಿನ ಪರಿಣಾಮಗಳನ್ನು ಮನೋವೇಧಕವಾಗಿ ಚಿತ್ರಿಸುತ್ತದೆ. ಅವನ ಒಳ ಬದುಕಿನ ಬಸವ ವ್ಯಕ್ತಿತ್ವದ ಅರಿವಿಲ್ಲದ ಹೆಂಡತಿ ಅವನ ಮೇಲೆ ಕೆಲಸದಾಳು ಬೆಳ್ಳಿಯೊಡನೆ ಅನೈತಿಕ ಸಂಬಂಧದ ಆರೋಪವನ್ನು ಹೊರಿಸಿದಾಗ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ “ತನ್ನ ಹೆಂಡತಿ, ತನ್ನನ್ನು ಪ್ರೀತಿಸಿ, ತನ್ನ ಮನೆಯ ಲಕ್ಷ್ಮಿಯಾಗಿ, ತನ್ನ ಮಕ್ಕಳ ತಾಯಿಯಾಗುವಾಕೆ, ತಾನು ಕನಸಿನಲ್ಲೂ ನೆನೆಸದ ಅಪರಾಧವನ್ನು ತಲೆಯ ಮೇಲೆ ಹೊರಿಸಿದ ಮೇಲೆ ಈ ಜೀವನ, ಈ ಹೊರಗಿನ ಜೀವನ ಮತ್ತು ತನ್ನದೇ ಆದ ಒಳಗಿನ ಬಾಳು ಭೂಮಿ ಆಕಾಶಗಳಷ್ಟು ದೂರ ಇವೆಯೆಂದೂ, ಈ ಎರಡು ಜೀವನಗಳು ನಡು ಹಗಲಿನ ಮುನಸೀಫನ ಹೊರಜೀವನ, ಮತ್ತು ದನವಿನ ಹಟ್ಟಿಯೊಳಗಿನ ಆ ಸ್ವಪ್ನ ಜೀವನ, ಪೂರ್ವಜನ್ಮದ ಜೀವನ ಇವೆರಡರಲ್ಲಿ ಸಾಮರಸ್ಯ ಸಾಧ್ಯವಿಲ್ಲವೆಂದು ಮನದಟ್ಟಾಯಿತು” (ಹುಚ್ಚ ಮುನಸೀಫ ಮತ್ತು ಇತರ ಕತೆಗಳು- ಬಾಗಲೋಡಿ ದೇವರಾಯ- ಜೀವನ ಕಾರ್ಯಾಲಯ ಬಸವನಗುಡಿ ಬೆಂಗಳೂರು- ಪುಟ 18) ಈ ಬಿಕ್ಕಟ್ಟು ಕಾಯಿಲೆಯಲ್ಲಿ ಪರಿಣಮಿಸಿ ಉಲ್ಬಣಿಸಿದಾಗ ಸುಂದರಪ್ಪ ಬಸವಾವಸ್ಥೆಗೆ ಮರಳುತ್ತಾನೆ. “ಕಾಯಿಲೆ ವಿಶೇಷವಾಗಿತ್ತು. ಜೀವಕ್ಕೆ ಅಪಾಯವುಂಟೆಂದು ತಿಳಿಯಿತು. ಒಂದು ದಿನ ಜ್ವರದಲ್ಲಿ ಮಲಗಿಕೊಂಡಿದ್ದ. ಡಾಕ್ಟರರು ನಾಡಿ ನೋಡಿ ಜ್ವರ ಕಂಡು ಹಿಡಿದು ಮುಖ ಕಪ್ಪು ಮಾಡಿಕೊಂಡಿದ್ದರು. ಆದರೆ ಮುರ್ಮುಷುವಿನ ಮನದಲ್ಲಿ ಭಯವಿರಲಿಲ್ಲ. ವಿಕಲತೆ, ವಿಹ್ವಲತೆ ಇರಲಿಲ್ಲ. ಸ್ವಪ್ನದ ಶಾಂತಿ, ಕನಸಿನ ಸಂತೋಷ ಇದ್ದವು. ಆ ಕಾಲಕ್ಕೆ ಬಸವ ಘಟ್ಟದ ಮೇಲೆ ತನ್ನ ಚಿಕ್ಕ ದೇವರ ಪಾಳ್ಯದಲ್ಲಿದ್ದ. ಒಂದು ಲಂಗೋಟಿ, ಮೈಮೇಲಿಡೀ ದೊರಗಾದ ಕಂಬಳಿ; ಬೆಟ್ಟಗಾತ್ರದ ಮುಂಡಾಸು. ಆಚೆಈಚೆಗೆ ನಾಲ್ಕು ಮಂದಿ ಕೌಪೀನ ಮುಂಡಾಸುಧಾರಿಗಳಾದ ಅಣ್ಣತಮ್ಮಂದಿರು, ಅಂಬೇ ಎಂದು ಗುಟುರು ಹಾಕುತ್ತಿರುವ ದೊಡ್ಡ ದೊಡ್ಡ ದನಗಳು. ಸೊಕ್ಕುತ್ತಾ, ನೆಗೆಯುತ್ತಾ, ಓಡುತ್ತಾ, ಹಾರುತ್ತಾ ಕಿವಿಯೊಳಗೆ ಗಾಳಿ ಹೊಕ್ಕಂತೆಲ್ಲಾ ಹುಚ್ಚುಗಟ್ಟಿ ಕುಣಿಯುತ್ತಿದ್ದ ಹುಚ್ಚು ಹುಚ್ಚು ಎಳೆಗರುಗಳು. ಹಿಂದಿನಿಂದ ತಾಯಿ ‘ಲೋ ಬಸವಾ’ ಎಂದು ಕೂಗುತ್ತಿದ್ದಾಳೆ” (ಹುಚ್ಚ ಮುನಸೀಫ ಮತ್ತು ಇತರ ಕತೆಗಳು- ಬಾಗಲೋಡಿ ದೇವರಾಯ- ಜೀವನ ಕಾರ್ಯಾಲಯ ಬಸವನಗುಡಿ ಬೆಂಗಳೂರು- ಪುಟ 19) ಹೀಗೆ ಒಂದೇ ಕಾಲಕ್ಕೆ ಎರಡು ಲೋಕದಲ್ಲಿ ಬದುಕಿ ಬಸವನಾಗಿಯೇ ಸಾಯುವುದರೊಂದಿಗೆ ಸುಂದರಪ್ಪನ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ಉಯಿಲಿನ ಮೇಲೆ ‘ಬಸವ’ ಎಂದು ಕನ್ನಡದಲ್ಲಿಯೇ ರುಜು ಮಾಡುವುದು ಅವನ ಬದುಕಿನ ಕೊನೆಯ ಕ್ರಿಯೆ.
ವಸಾಹತೋತ್ತರ ಸಂದರ್ಭದಲ್ಲಿ ಬಾಗಲೋಡಿಯವರ ಕತೆಗೆ ಇದಕ್ಕೂ ಹೆಚ್ಚಿನ ಸಾಂಕೇತಿಕತೆ ಇದೆ. ವಸಾಹತಿನ ಅನುಭವಕ್ಕೊಳಗಾದ ವ್ಯಕ್ತಿಯು ತನ್ನ ಮೂಲ ಸಂಸ್ಕøತಿಯನ್ನು ಕಳೆದುಕೊಂಡರೂ ಅದು ಅಂತರಂಗದ ಯಾವುದೋ ಮೂಲೆಯಲ್ಲಿ ಜೀವಂತವಾಗಿ ಉಳಿದುಕೊಂಡು ಅವನ ಸ್ವಾಸ್ಥ್ಯವನ್ನು ಕದಡುತ್ತಾ ಇರುತ್ತದೆ. ಈ ಅನುಭವದಿಂದ ಆತ ಪೂರ್ಣವಾಗಿ ಕಳಚಿಕೊಳ್ಳಲಾರ. ಯಾಕೆಂದರೆ ಅದರಿಂದ ಅವನಿಗೆ ದೊರಕಿದ ಮೌಲ್ಯಗಳು ಅವನಿಗೆ ಗ್ರಾಹ್ಯವೆನಿಸುತ್ತವೆ. ಆದರೆ ಅವನು ತನ್ನ ಮೂಲಸಂಸ್ಕøತಿಗೂ ಮರಳುವಂತಿಲ್ಲ. ಹೀಗಾಗಿ ಅವನು ಆತ್ಮಸಂಘರ್ಷಕ್ಕೆ ಒಳಗಾಗಬೇಕಾಗುತ್ತದೆ. ಇದು ದುರಂತದಲ್ಲೂ ಕೊನೆಯಾಗಬಹುದಾಗಿದೆ.
ಈ ಕತೆಯಲ್ಲಿ ಬಾಗಲೋಡಿಯವರು ಎತ್ತಿಕೊಂಡ ತನ್ನತನದ ಸಮಸ್ಯೆ ಮುಂದೆ ಹಲವಾರು ನವ್ಯ ಕತೆಗಾರರನ್ನು ಕಾಡಿದೆ. ಅನಂತಮೂರ್ತಿಯವರ ‘ಕಾರ್ತೀಕ’, ‘ನವಿಲುಗಳು’ ಕತೆಗಳ ನಾಯಕರು ತಮ್ಮ ವ್ಯಕ್ತಿತ್ವದ ಪೂರ್ಣತೆಯನ್ನು ಸಾಧಿಸಲು ಬಾಲ್ಯದ ನೆನಪುಗಳಿಗೆ, ಸ್ಥಳಗಳಿಗೆ ಮರಳುವುದನ್ನು ಗಮನಿಸಬಹುದು. ವ್ಯಕ್ತಿತ್ವದ ಪೂರ್ಣತೆ ಎಂಬ ಕಲ್ಪನೆ ಅಪ್ರಸ್ತುತವಾಗಿರುವ ಆಧುನಿಕ ಸಂದರ್ಭದಲ್ಲಿ ಈ ಕ್ರಿಯೆ ಯಾತನೆ ಮತ್ತು ಪರಕೀಯ ಪ್ರಜ್ಞೆಗೆ ಮಾತ್ರ ಸೀಮಿತವಾಗಿರುತ್ತದೆ. “ಹಲವಾರು ವರ್ಷ ಭಾರತ ರಾಯಭಾರಿಯಾಗಿದ್ದುಕೊಂಡು ನಾಡಿನ ಹೊರಗಡೆಯೇ ಕಳೆದ ಬಾಗಲೋಡಿಯವರಿಗೆ ಇದು ಸ್ವಂತದ ಅನುಭವವೂ ಆಗಿರಬೇಕು ಎನಿಸುತ್ತದೆ” ಎಂದ ಜಿ. ಎಸ್. ಆಮೂರರ ಅಭಿಪ್ರಾಯ ಮುಖ್ಯವಾಗುತ್ತದೆ (ಕನ್ನಡ ಕಥನ ಸಾಹಿತ್ಯ: ಸಣ್ಣಕತೆ- ಜಿ. ಎಸ್. ಆಮೂರ- ಪುಟ 94)
1950ರ ನಂತರ ಬರೆಯತೊಡಗಿದ ನವ್ಯರ ಮೇಲೆ ಫ್ರಾಯ್ಡ್, ಯೂಂಗ್, ಆಡ್ಲರ್ ಮುಂತಾದವರ ಸಂಶೋಧನೆಗಳು ತುಂಬಾ ಪ್ರಭಾವವನ್ನು ಬೀರಿದವು. ಮಾನಸಿಕ ವಿಶ್ಲೇಷಣೆಯು ಅವರ ಪ್ರಭಾವೀ ಸಾಧನವಾಯಿತು. ಮನುಷ್ಯನ ದ್ವಿವಿಧ ವ್ಯಕ್ತಿತ್ವದ ಕುರಿತು ಆಳವಾಗಿ ಆಲೋಚಿಸುವಂತಾಯಿತು. ಮನಸ್ಸಿನಲ್ಲಿ ಜಾಗೃತ ಮತ್ತು ಸುಪ್ತಸ್ತರಗಳಿದ್ದು ಸುಪ್ತಚಿತ್ತದಲ್ಲಿ ನಮಗೆ ಅಪ್ರಿಯವಾದ ಆಸೆ ಅನುಭವಗಳು ಇವೆ. ಮರೆತಂತೆ ತೋರಿದರೂ ಮರೆತುಹೋಗುವುದಿಲ್ಲ. ನವ್ಯರ ಆಸಕ್ತಿಯ ಕೇಂದ್ರವು ಸಮಾಜ ಜೀವಿಯಾದ ಮನುಷ್ಯನಲ್ಲ. ತನ್ನನ್ನು, ತನ್ನ ಸುತ್ತಲನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತಿರುವ ಮನುಷ್ಯ. ಅವನ ಪ್ರಜ್ಞೆಯ ಆಧಾರದಲ್ಲಿ ನವ್ಯರು ವ್ಯಕ್ತಿಯ ಮಾನಸಿಕ ಜಗತ್ತು ಮತ್ತು ರಹಸ್ಯ ತುಮುಲಗಳನ್ನು ಶೋಧಿಸಿದರು.
1 thought on “ದೇಶ ಕಾಲಗಳನ್ನು ಮೀರಿದ ಕತೆಗಳು”
ಉತ್ತಮವಾದ ಬರಹ