ರೊಕ್ಕ ಯಾರಿಗೂ ಪುಗಸಟ್ಟೆ ಸಿಗೋದಿಲ್ಲ

(ಹಾಸ್ಯ/ವಿಡಂಬನೆ ಬರಹ)

ಎದುರಿಗೆ ಮಗುವಿನಂತೆ ನಿಷ್ಕಳಂಕ ನಗೆ ಬೀರುತ್ತ ಕುಳಿತಿದ್ದ  ಮುಗ್ಧ  ಗುಂಡುರಾಜ  ಎನ್ನುವ ಪೇಶಂಟನನ್ನು ಪ್ರಶ್ನಿಸಿದ ಡಾಕ್ಟರ್ ದಾಮೋದರ್.

 ” ದಯವಿಟ್ಟು ನಿಮ್ಮ ಹೆಸರು ಹೇಳುವಿರಾ? “

” ಡೇವಿಡ್ ಜಾನ್ಸನ್ ” ಎಂದು ಕೂಡಲೇ ಉತ್ತರ ಬಂತು ಪೇಶಂಟಿನಿಂದ.

” ಓಕೆ…ನಿಮ್ಮ ಶ್ರೀಮತಿ ಹೆಸರು ಹೇಳಿ ? ” ಎಂದು ಡಾಕ್ಟರ್ ಮತ್ತೊಮ್ಮೆ  ಪ್ರಶ್ನಿಸಿದ.

 ” ಆಕೆಯ ಹೆಸರು ಮೇರಿ ಡೇವಿಡ್ ಜಾನ್ಸನ್. ” ತಡಬಡಿಸದೆ ಸ್ಪಷ್ಟ ಉತ್ತರ ನೀಡಿದ ‘ ಮುಗ್ಧ ‘ ಪೇಶಂಟ್.

 ” ಸೂಪರ್…ನಿಮ್ಮ ಚಿರಂಜೀವಿಗಳ ಅದೇ ಮಕ್ಕಳ ನಾಮಧೇಯ (ಹೆಸರು) ಗಳನ್ನು ತಿಳಿಸಿ? ”  ಮತ್ತೊಮ್ಮೆ ಡಾಕ್ಟರ್ ಪ್ರಶ್ನೆ.

 ” ವಿಕಾಸ್ ಶರ್ಮ ಮತ್ತು ವಿಶಾಲ್ ವರ್ಮ ” ಎಂದು ಫಟಾಫಟ್ ಉತ್ತರಿಸಿದ ಪೇಶಂಟ್.

” ನೀವು ಮಾಡುತ್ತಿರುವ ಉದ್ಯೋಗ ? ” ಮತ್ತೆ ಪ್ರಶ್ನಿಸಿದ ಡಾಕ್ಟರ್.

” ಸದ್ಯ ನಾನು ಈ ವಾರ್ಡಿನ ಕೌನ್ಸಿಲರ್. ಮುಂದೆ  ಈ ಕ್ಷೇತ್ರದ ಎಂ ಎಲ್ ಎ  ಕ್ಯಾಂಡಿಡೇಟ್…”  ಎಂದು  ಬಿಲ್ಲಿನಿಂದ ಛಂಗನೆ ಬಿಟ್ಟ ಬಾಣದಂತೆ ನೇರ ಉತ್ತರ  ಪೇಶಂಟಿನಿಂದ. 

ತಲೆಬುಡವಿಲ್ಲದ ಉತ್ತರಗಳನ್ನು ಎದೆಗೆ  ನಾಟುವಂತೆ ಸ್ಪಷ್ಟವಾಗಿ ಹೇಳುತ್ತಿರುವ ಗಂಡನ  ಮಾತಿನ ವೈಖರಿ ಕಂಡು ಒಳಗೊಳಗೇ ಖುಷಿಯಿಂದ ತಬ್ಬಿಬ್ಬಾದಳು ಗುಂಡುರಾಜನ ಹೆಂಡತಿ ಗುಣ ಸುಂದರಿ.  ಆದರೂ ಹೊರಗೆ ಸ್ವಲ್ಪವೂ ಗೊತ್ತಾಗಬಾರದೆಂದು ಹ್ಯಾಪು ಮೋರೆ (ಖರ್ಗೆ!) ಹಾಕಿ ಕೂತಳು. ಅಷ್ಟಕ್ಕೇ ಸುಮ್ಮನಿರಲಾರದೆ ” ಈ ಸುಡುಗಾಡು ಮರೆಗುಳಿ ರೋಗ ಎಲ್ಲರಿಗೂ ಬಿಟ್ಟು ದೇವರಂತಹ ನನ್ನ ಗಂಡನಿಗೇ ಬರಬೇಕೆ? ” ಎಂದು  ಡಿಜಿಟಲ್ ಡಾಲ್ಫಿ  ಸೌಂಡಿನಲ್ಲಿ ಅಲ್ಲಿದ್ದ  ಎಲ್ಲರಿಗೂ ಕೇಳಿಸುವಂತೆ  ಒಮ್ಮೆ ಜೋರಾಗಿ  ಚೀರಿ  ಅಳು  ಮುಂಜಿಯಾದಳು.

” ನಿಜವಾದ ಬುದ್ಧಿವಂತನಂತೆ (ಉಪೇಂದ್ರ ಅಲ್ಲ!) ಎಲ್ಲದಕ್ಕೂ ಸ್ಪಷ್ಟವಾಗಿ ಉತ್ತರ ಕೊಡುತ್ತಿದ್ದಾನೆ ನಿಮ್ಮ ಪತಿರಾಯ…ನೀವು ಸುಖಾ ಸುಮ್ಮನೆ ಆತನಿಗೆ ಮರೆಗುಳಿ ರೋಗ  ಇದೆ ಎಂದು ಆಪಾದನೆ ಮಾಡ್ತಾ ಇದ್ದೀರಿ? ನಿಜ ಹೇಳಬೇಕೆಂದರೆ ಆತನಿಗಲ್ಲ..  ನಿಮಗೇ ಇರಬೇಕು ಮರೆಗುಳಿ  ರೋಗ…ನನ್ನ ಪೇಶಂಟಿಗಂತೂ ಖಂಡಿತ  ಇಲ್ಲ”  ಕಡ್ಡಿ ತುಂಡಾದಂತೆ ಉತ್ತರಿಸಿದ  ಡಾಕ್ಟರ್ ದಾಮೋದರ್.

” ಅಯ್ಯೋ ಡಾಕ್ಟರ್ ನೀವು ಎಂತಹ  ಅಮಾಯಕರು… ಅವರಿಗೆ ಮರೆಗುಳಿ ರೋಗ ಇಲ್ಲ ಅಂತ ಅದು ಹೇಗೆ ಹೇಳ್ತೀರಿ?…ಅವರ ಹೆಸರು ಗುಂಡುರಾಜ.  ನನ್ನ ಹೆಸರು ಗುಣ ಸುಂದರಿ.  ನಮ್ಮ ಮಕ್ಕಳ ಹೆಸರುಗಳು ಯತಿರಾಜ್ – ಫಣಿರಾಜ್ ” ಎಂದು ಜೋರಾಗಿ ಹೇಳಿ  ಮಾತು ಮುಂದುವರೆಸಿದಳು. ” ಟಿ ವಿ ಯಲ್ಲಿ ಯಾವ ಸಿನಿಮಾ ಬಂದರೂ ಮುಂದಿನ  ಸೋಫಾದ ಮೇಲೆ ಕೂತು  ನೋಡೋದು ನಮ್ಮ ಮನೆಯವರ ದಿನ ನಿತ್ಯದ  ಅಭ್ಯಾಸ. ನನಗೆ ಸೀರಿಯಲ್ ನೋಡುವದಕ್ಕೇ ಬಿಡೋದಿಲ್ಲ…ಗೊತ್ತಾ?  ” ಎಂದು ಪುಟ್ಟ ಬಾಲಕಿಯಂತೆ ಕಂಪ್ಲೇಂಟ್ ಮಾಡಿದಳು ಗುಣ ಸುಂದರಿ ಡಾಕ್ಟರೊಂದಿಗೆ.

” ಹೌದಾ? ” ಎನ್ನುವಂತೆ ತಲೆ ಅಲ್ಲಾಡಿಸಿದ ಡಾಕ್ಟರ್ ದಾಮೋದರ್.  

” ಅವರಿಗೆ  ಸಿನಿಮಾ ತಾರೆಯರ  ಹೆಸರುಗಳು ಚೆನ್ನಾಗಿ ನೆನಪಿರುತ್ತವೆ. ಆದರೆ ಕುಟುಂಬ ಸದಸ್ಯರ ಹೆಸರೇ ನೆನಪಿಲ್ಲ ಅಂದರೆ ನಾನು ಯಾವ (ರಾತ್ರಿ ಕಂಡ!) ಹಾಳು ಭಾವಿಯಲ್ಲಿ ಬೀಳಬೇಕು  ನೀವೇ ಹೇಳಿ ಡಾಕ್ಟರ್. ” ಎಂದು ಅಲ್ಲಿದ್ದ ಯಾರಿಗೂ ಡೌಟ್ ಬರದಂತೆ  ಮುಖದ ಮೇಲೆ ಕೊಶ್ಚನ್  ಮಾರ್ಕ್   ಫೇಸ್ ಹಾಕಿ ಹೇಳಿದಳು ಗುಣ ಸುಂದರಿ.

” ಅದಕ್ಕೇ ಅಲ್ಲವೇ ನನ್ನಂತಹ ಸ್ಪೆಷಲಿಸ್ಟ್  ಡಾಕ್ಟರನ್ನು  ಕರೆಸಿದ್ದು…ಹೀ…ಹೀ… ಅದಿರಲಿ… ಪ್ರಶ್ನೆಗಳನ್ನು ನಾನು ಕೇಳಬೇಕು. ನೀವಲ್ಲ ಗೊತ್ತಾ? ” ಎಂದು ಕಾಲರ್  ಎಗರಿಸುತ್ತಾ  ಬಿರುಸಿನಿಂದ ನುಡಿದ ಡಾಕ್ಟರ್ ದಾಮೋದರ್.

ಇನ್ನೇನು ಮಾತನಾಡದೆ ಗಪ್ ಚಿಪ್ ಆಗಿ ಕುಳಿತಳು ಗುಣ ಸುಂದರಿ.   ಸೀನ್ ಒಂದರಿಂದ ಡಾಕ್ಟರ್ ಜೊತೆ ಮನೆಯೊಳಗೆ ಬಂದ ಬಡ್ಡಿ ಬಂಗಾರಪ್ಪ ಹಾಗೂ ಮೀಟರ್ (ಮಿ.ಟೂ ಅಲ್ಲ!) ಮೀಟಪ್ಪ (ಇಬ್ಬರೂ ನಮ್ಮೂರ ಮೈಕ್ರೋ ಫೈನಾನ್ಸರ್ಸ್!) ಎಲ್ಲವನ್ನೂ ಗಾಬರಿಯಿಂದ ದಿಟ್ಟಿಸಿ ನೋಡುತ್ತಿದ್ದರು.  ಗುಂಡುರಾಜನ  ಧಿಡೀರ್ ಮತ್ತು ದಿಕ್ಕು ತಪ್ಪಿಸುವ ಮರೆಗುಳಿತನ ನೋಡಿ ಒಮ್ಮೆಲೇ ದಿಗ್ಬ್ರಾಂತಿಗೆ ಒಳಗಾದರು. ಇದನ್ನು ಊಹಿಸದ  ‘ ಭಲೇ ಜೋಡಿ ‘ ಗೆ ಗರ ಬಡಿದಂತಾಯಿತು.

ಎರಡೂ  ಮೈಕ್ರೋ ಫೈನಾನ್ಸ್ ಗಳು (ಬಡ್ಡಿ ಬಂಗಾರಪ್ಪ ಮತ್ತು ಮೀಟರ್ ಮೀಟಪ್ಪ)  ತಲಾ ಎರಡು ಲಕ್ಷವನ್ನು  ಗುಂಡುರಾಜನಿಗೆ ಸಾಲಕೊಟ್ಟು ಎಷ್ಟೋ ವರ್ಷಗಳಾಗಿತ್ತು.  ಬಡ್ಡಿ ಮತ್ತು ಕಂತುಗಳನ್ನು ಸರಿಯಾಗಿ ಕಟ್ಟದೆ  ಸತಾಯಿಸುತ್ತಿದ್ದ ಗುಂಡುರಾಜ. ಸಾಲ ಕೊಟ್ಟ ತಪ್ಪಿಗೆ ಡಾಕ್ಟರನ್ನು ಸಹಾ ತಾವೇ ಕರೆದುಕೊಂಡು ಬಂದಿದ್ದರು. ಇದ್ದಕ್ಕಿದ್ದ ಹಾಗೆ  ಗುಂಡುರಾಜ ತನ್ನ ಹೆಸರನ್ನು ‘ ಡೇವಿಡ್  ಜಾನ್ಸನ್ ‘  ಎಂದು  ತಪ್ಪಾಗಿ ಹೇಳಿ ಎಲ್ಲರನ್ನೂ ದಾರಿ ತಪ್ಪಿಸಿದ್ದ.

ಡಾಕ್ಟರ್ ದಾಮೋದರ್,  ಲೇಟೆಸ್ಟ್ ಆಗಿ  ಡೇವಿಡ್ ಜಾನ್ಸನ್ ‘ ಹೆಸರಿಗೆ ಬದಲಾದ  ಗುಂಡುರಾಜನಿಗೆ ಬಡ್ಡಿ ಬಂಗಾರಪ್ಪ ಮತ್ತು  ಮೀಟರ್ ಮೀಟಪ್ಪರನ್ನು ತೋರಿಸುತ್ತಾ ” ಇವರಿಬ್ಬರು ಹಲವು ವರ್ಷಗಳಿಂದ  ನಿಮಗೆ ಚಿರಪರಿಚಿತರು. ಅವರು ಯಾರೆಂದು ಹೇಳಬಲ್ಲಿರಾ…” ? ಎಂದು ಪ್ರಶ್ನಿಸಿದ ಡಾಕ್ಟರ್.

ಬಡ್ಡಿ ಬಂಗಾರಪ್ಪನತ್ತ ಬೆರಳು ತೋರಿಸಿ ” ಇವರು ಕಲ್ಯಾಣಪ್ಪ ಪಾಲ್ಕಡ್ ಅಂತ.  ಕಾಲೇಜಿನ  ಗ್ರೌಂಡಿನಲ್ಲಿ ವಾಕ್ ಮಾಡುವ jsw   (ಜಯನಗರ ಸತ್ಯನಾರಾಯಣ ಪೇಟೆ ವಾಕಿಂಗ್ ಗ್ರೂಪ್) ಗ್ರೂಪಿನ ಅಧ್ಯಕ್ಷರು.  ನಾನು ವಾಕಿಂಗ್ ಶುರು ಮಾಡಿ  ಐದು ನೂರು  ಎಪಿಸೋಡ್ ಮುಗಿದ ಶುಭ  ಸಂದರ್ಭದಲ್ಲಿ ಒಂದು ದೊಡ್ಡ ಸಮಾವೇಶ ಆಯೋಜನೆ ಮಾಡಿ ನನಗೆ  ‘ ವಾಕಿಂಗ್ ಕಿಂಗ್ ‘ ಎಂದು ಬಿರುದು ಕೊಟ್ಟು ಸನ್ಮಾನ ಮಾಡಲು ಹಗಲಿರುಳು ಶ್ರಮ ಪಡುತ್ತಿದ್ದಾರೆ ಪಾಪ! ” ಎಂದು ನುಡಿದ ಗುಂಡುರಾಜ.

ಇದನ್ನು ಕೇಳಿದ ಬಡ್ಡಿ ಬಂಗಾರಪ್ಪ ಅಲ್ಲೇ ಕುದ್ದು ಹೋದ.  ಮನಸಿನಲ್ಲೇ ರೋಧಿಸಿದ. ” ಎಲ್ಲ ನಟರೂ ರಾಜ್ಯ – ರಾಷ್ಟ್ರ ಪ್ರಶಸ್ತಿಗಾಗಿ  ತಮ್ಮ ನಟನೆಯಿಂದ  ಜೀವ ಕಳೆ ತುಂಬಿದರೆ, ಈ ಗುಂಡುರಾಜ ಎನ್ನುವ ಧಿಡೀರ್ ನಟ ಒಂದು ಹೆಜ್ಜೆ ಮುಂದೆ ಹೋಗಿ ಆಸ್ಕರ್ ಪ್ರಶಸ್ತಿ ಪಡೆಯವ ಎಲ್ಲ ಲಕ್ಷಣಗಳು  ಕಂಡು ಬರುತ್ತಿವೆ. ಇವನಿಗೆ ಸನ್ಮಾನ ಭಾಗ್ಯ ಬೇರೆ ಕೇಡು? ” 

” ಸನ್ಮಾನದ ವಿಷಯ  ನಿಜಾನಾ? ”  ಎನ್ನುವಂತೆ ಬಡ್ಡಿ  ಬಂಗಾರಪ್ಪನತ್ತ ಮುಖ ಮಾಡಿ ಕೇಳಿದ ಡಾಕ್ಟರ್.

ಅದನ್ನು ಕೇಳಿ ದುರ್ದಾನ ತೆಗೆದುಕೊಂಡವನಂತೆ  ಮುಖ ಸೊಟ್ಟಗೆ ಮಾಡಿ ಮನಸಿನಲ್ಲೇ ಮತ್ತೊಮ್ಮೆ ಶಪಿಸಿದ ಬಡ್ಡಿ ಬಂಗಾರಪ್ಪ.  ” ಗುಂಡುರಾಜನಿಗೆ  ಸಡನ್ ಆಗಿ ಮರೆಗುಳಿ ರೋಗ ಬಂದು ಇತ್ತೀಚಿಗೆ  ಯಾರನ್ನೂ ಸರಿಯಾಗಿ ಗುರುತು ಹಿಡಿಯುತ್ತಿಲ್ಲ ಎಂದು ಆತನ ಹೆಂಡತಿ ಗುಣ ಸುಂದರಿ ಫೋನ್ ಮಾಡಿ ಅಳುತ್ತಾ ಅವಲತ್ತುಕೊಂಡಿದ್ದಕ್ಕೆ ನಂಬದೆ ತಾವೇ  ‘ ಭಲೆ ಜೋಡಿ ‘ ಗಳು (ಬಡ್ಡಿ ಬಂಗಾರಪ್ಪ ಮತ್ತು ಮೀಟರ್  ಮೀಟಪ್ಪ) ಡಾಕ್ಟರನ್ನು  ಡಬಲ್  ಫೀಸು ಕೊಟ್ಟು ಮನೆಗೆ ಕರೆಯಿಸಿ  ಪರೀಕ್ಷೆ  ಮಾಡಿಸಿದರೆ  ಸದ್ಯದ ಪರಿಸ್ಥಿತಿ  ಹೀಗಿದೆ…ಮುಂದೆ ಹೇಗೋ ಎನೋ ಆ  ಶಿವನೇ ಬಲ್ಲ…”

ಈ ಬಾರಿ ಮೀಟರ್ ಮೀಟಪ್ಪನತ್ತ  ಕೈ ತೋರಿದ ಡಾಕ್ಟರ್ ಮತ್ತೆ ಅಭಿನವ ಡೇವಿಡ್ ಜಾನ್ಸನ್ ನನ್ನು ಪ್ರಶ್ನಿಸಿದ ” ಇವರು ಯಾರು ಹೇಳು? ” ಎನ್ನುವಂತೆ, ” ಥಟ್ಟಂತೆ ಹೇಳಿ… ” ಎನ್ನುವ  ಟಿ ವಿ ಪ್ರೋಗ್ರಾಮ್ ನೆನಪಿಸಿಕೊಂಡು.

” ನಾನೇನು ಕೆಲಸವಿಲ್ಲದ ಕಿಸುಬಾಯಿ ದಾಸನಂತೆ ಕಾಣುತ್ತಿರುವೆನಾ?  ಎಲ್ಲವನ್ನೂ ನನ್ನನೇ ಕೇಳುತ್ತಿರುವಿರಲ್ಲ ಡಾಕ್ಟರ್…” ಎಂದು ಬೇಸರದಿಂದ ನುಡಿದ ಗುಂಡುರಾಜ. 

ಇದೆಲ್ಲ ಸ್ವತಃ ನೋಡಿದ ಡಾಕ್ಟರ್ ದಾಮೋದರ್ ಗುಂಡುರಾಜನ  ಪತ್ನಿ (ಏಕ ಮಾತ್ರ!) ಶ್ರೀಮತಿ ಗುಣ ಸುಂದರಿಯನ್ನು ಉದ್ದೇಶಿಸಿ ನುಡಿದ ” ನಿಮ್ಮಯಜಮಾನರ ನೆನಪಿನ ಶಕ್ತಿ  ಬೆಟ್ಟ ಗುಡ್ಡ ಹತ್ತಿ ಅಲೆದಾಡುತ್ತಿದೆ.  ಸದ್ಯ ಅದು ಕೆಳಗಿಳಿಯೋ ಲಕ್ಷಣಗಳು ಕಾಣುತ್ತಿಲ್ಲ… ನೋಡೋಣ ಒಂದಾರು ತಿಂಗಳು ಕಾಯೋಣ. ಅಲ್ಲಿಯವರೆಗೆ ನನ್ನ ಟ್ರೀಟ್ ಮೆಂಟಿನಲ್ಲಿರಲಿ ಗುಂಡುರಾಜ ” ಎಂದು ಸಹಾನುಭೂತಿ ತೋರಿದ ಡಾಕ್ಟರ್ ದಾಮೋದರ್.

” ಅಂದರೆ ಸದ್ಯಕ್ಕೆ ಗುಣವಾಗುವುದಿಲ್ಲವಾ ಡಾಕ್ಟರ್…? ” 

ಡಾಕ್ಟರ್ ಮಾತುಗಳು  ಮನಸಿಗೆ ಮುದ ನೀಡಿದರೂ  ಮುಖದಲ್ಲಿ ಮಾತ್ರ ದುಃಖ ದುಮ್ಮಾನ ತೋರಿಸಿದಳು  ಗುಣ ಸುಂದರಿ. 

ಭಲೇ ಜೋಡಿಗಳು ಡಾಕ್ಟರನ್ನು ಸ್ವಲ್ಪ  ದೂರಕ್ಕೆ ಕರೆದೊಯ್ದು ಕಿವಿಯಲ್ಲಿ ಉಸುರಿದರು ” ಗುಂಡುರಾಜನಿಗೆ ಯಾವುದೇ ಮರೆಗುಳಿ ರೋಗ ಇಲ್ಲ… ಕಂಪ್ಯೂಟರ್ ಚಿಪ್ಪಿನಂತೆ ಎಲ್ಲವನ್ನೂ ಚೆನ್ನಾಗಿ ಜ್ಞಾಪಕವಿಟ್ಟುಕೊಂಡಿದ್ದಾನೆ ಅಂತ ಹೇಳಿಸಲು ನಿಮ್ಮನ್ನು  ಕರೆದುಕೊಂಡು ಬಂದರೆ ನೀವು ವಿರೋಧಪಕ್ಷದವರಂತೆ ಆಡಳಿತ ಪಕ್ಷದವರ ಜೊತೆ ‘ ಅಡ್ಜಸ್ಟ್ ಮೆಂಟ್ ‘ ರಾಜಕೀಯ ಮಾಡಿಕೊಂಡರೆ ಹೇಗೆ ? “.

ಅದನ್ನು ಕೇಳಿ ಡಾಕ್ಟರ್ ದಾಮೋದರ್ ಟಿ ವಿ ಧಾರಾವಾಹಿಗಳ ಮೇರು ನಟನಂತೆ  ಉತ್ತರಿಸದೆ  ಒಮ್ಮೆ ಜೋರಾಗಿ ನಕ್ಕ ಅಷ್ಟೇ! ಈ ಸಲ ಗುಣ ಸುಂದರಿಯತ್ತ ಮುಖ  ಮಾಡಿತು ಭಲೇ ಜೋಡಿ.

 ” ನನ್ನ ಪತಿ ರಾಯನಿಗೆ ಮರೆಗುಳಿ ಮಾಯಾ ರೋಗ ಬಂದು ವಕ್ರಿಸಿದೆ ಎಂದರೆ ನೀವು ನಂಬಲಿಲ್ಲ. ಈಗ ಅನುಭವಿಸಿ! ” ಎನ್ನುವಂತೆ ತನ್ನ  ಕಣ್ಣೋಟದಿಂದಲೇ ಚುರುಕು ಮುಟ್ಟಿಸಿದಳು ಗುಣ ಸುಂದರಿ.  ಭಲೇ ಜೋಡಿ ಇನ್ನು ಮಾಡುವದಕ್ಕೆ ಏನೂ ಇಲ್ಲ ಎನ್ನುವಂತೆ ಸಪ್ಪನೆಯ  ಮುಖ ಹಾಕಿಕೊಂಡು ” ಗೋವಿಂದಾ…ಗೋವಿಂದಾ ” ಎಂದು ಗೋವಿಂದನ ಭಜನೆ ಮನದಲ್ಲೇ  ಮಾಡುತ್ತಾ  ಬಾಡಿಗೆ ಡಾಕ್ಟರ್  ದಾಮೋದರನನ್ನು ದರ ದರ  ಎಳೆದುಕೊಂಡು ಸಾಮೂಹಿಕವಾಗಿ ಮನೆಯಿಂದ ಹೊರ ನಡೆದರು.

ಅವರೆಲ್ಲ ಹೊರ ಹೋದ ಬಳಿಕ ಗುಂಡುರಾಜ ಮಡದಿ ಗುಣ ಸುಂದರಿಯತ್ತ  ದೃಷ್ಟಿ ಹಾಯಿಸಿ ” ನಾನು ಚಿಕ್ಕವನಿದ್ದಾಗಿನಿಂದ ನಾಟಕಗಳಲ್ಲಿ ಪಾತ್ರ ಮಾಡಿದ್ದೇನೆ ಎಂದರೆ ನೀನು ಇದುವರೆಗೆ ನಂಬಲಿಲ್ಲ. ಈಗಾದರೂ ನನ್ನ ನಟನಾ ಚಾತುರ್ಯವನ್ನು ಮೆಚ್ಚಿಕೊಳ್ತಿಯಾ ಚಿನ್ನಾ…” ಎನ್ನುತ್ತಾ ಹೆಂಡತಿಯ ಹತ್ತಿರ ಬಂದು ಅಪ್ಪಿ ಮುದ್ದಾಡಿದ 

” ಎಂತಹ  ಅಮೋಘ ನಟನೆ ನಿಮ್ಮದು… ಶಹಬ್ಬಾಸ್! ನಿಮ್ಮ ಅದ್ಭುತ  ನಟನೆಗೆ ನನ್ನ ಜೋಹಾರು…”  ಎಂದು ಉದ್ವೇಗ ಹಾಗೂ ಸಂತಸದಿಂದ ಉಲಿದಳು ಗುಣ ಸುಂದರಿ ಗಂಡನನ್ನು ಅಭಿಮಾನದಿಂದ ತಬ್ಬಿಕೊಂಡು… 

” ನನ್ನ ಆಸ್ಕರ್ ಪ್ರಶಸ್ತಿಗೆ ಸಮನಾದ ನಟನಾ ಚಾತುರ್ಯ ನೋಡಿ ಬೆಪ್ಪು ತಕ್ಕಡಿಗಳಾದರು ಭಲೇ ಜೋಡಿಗಳು. ಇನ್ನು ಅವರು ಒಟ್ಟಾಗಿ ಕೊಟ್ಟ ನಾಲ್ಕು ಲಕ್ಷ ‘ ಸಂಪೂರ್ಣ ಸಾಲ ಮನ್ನಾ’ ಆಯಿತು ಎಂದೇ ತಿಳಿ…”  ಎಂದು ಸಂತೋಷದಿಂದ ‘ ಹುರ್ರೇ…’ ಎಂದು  ಗಟ್ಟಿ ಧ್ವನಿಯಲ್ಲಿ ಚೀರಿದ ಗುಂಡುರಾಜ. ಓಡುವ ಕಾಲ  ಎಂದಿಗೂ ನಿಲ್ಲುವುದಿಲ್ಲ…

ಒಂದು ದಿನ ಆಗಷ್ಟೇ ಭರ್ಜರಿ ಊಟ ಮಾಡಿ ಗಡದ್ದಾಗಿ ನಿದ್ದೆ ಮಾಡಿ  ಸಂಜೆಗೆ ಮಡದಿ ಮಾಡಿ ಕೊಡುವ  ಕಡಕ್ ಚಾಯ್ ಸಲುವಾಗಿ  ಗುಂಡುರಾಜ ಕಾಯುತ್ತಿದ್ದ ಸಮಯದಲ್ಲಿ  ಒಬ್ಬ  ಅಜಾನುಭಾವಿ  ‘ ಹಿರಿಯ ‘ ಚೇತನ  ಮನೆಯೊಳಗೆ  ನಮಸ್ಕಾರ  ಎನ್ನುತ್ತಾ ಪ್ರವೇಶ ಮಾಡಿದರು.   ಶ್ವೇತ  ಬಣ್ಣದ (ರಿನ್ ಬಿಳುಪು!) ಜುಬ್ಬಾ ಪೈಜಾಮ…ಹೆಗಲಿನ ಮೇಲೆ ಕವಿ(ಪಿ!)ಗಳ  ಪೇಟೆಂಟ್ ಕನ್ನಡ ಶಾಲು… ಕಡು ಕಪ್ಪು ಮುಖದ ಹಣೆಯ  ಮೇಲೆ  ಮೂರು ಸಾಲುಗಳ ವಿಭೂತಿ ಪಟ್ಟೆ… ಚಾಣಾಕ್ಷ ಕಣ್ಣುಗಳನ್ನು ತನ್ನೊಳಗೆ ಇರಿಸಿಕೊಂಡ  ಬಂಗಾರದ  ಫ್ರೇಮಿನ ಕನ್ನಡಕ…ಒಟ್ಟಿನಲ್ಲಿ ನೋಡಿದ ಕೂಡಲೇ ಗೌರವ ಭಾವ ಸೂಚಿಸುವ ವ್ಯಕ್ತಿ

ಗುಂಡುರಾಜನ  ಎದುರು ತಾನೇ  ಛೇರು ಹಾಕಿಕೊಂಡು ತುಂಬಾ ಪರಿಚಿತನಂತೆ ಕುಳಿತ. ಗುಂಡುರಾಜ ” ಇದು ಯಾವುದು  ಹೊಸ ಕ್ಯಾರೆಕ್ಟರ್ !.. ಈ  ಮುಂಚೆ ಎಂದೂ ನೋಡಿಲ್ಲವಲ್ಲ ” ಎಂದು ಮನಸಿನಲ್ಲೇ ಅಂದುಕೊಂಡ. ಆಗಷ್ಟೇ ಬಂದ  ಆಗಂತುಕನತ್ತ ಸ್ವಲ್ಪ ಭಯಮಿಶ್ರಿತ ನೋಟ ಹರಿಸಿದಳು ಗುಣ ಸುಂದರಿ ಗಂಡನಿಗೆ ಚಾಯ್ ಕಪ್ ಕೊಡುತ್ತಾ…

” ನಾನು ಯಾರು ಹೇಳಿ ನೋಡೋಣ …? ” ಎಂದು  ಪ್ರಶ್ನೆ ಹಾಕಿದ ಆಗಂತುಕ ಗುಂಡುರಾಜನತ್ತ  ನೋಡಿ ನಗುತ್ತಾ… ಸಡನ್ನಾಗಿ ಬಂದ ವಿಪತ್ತನ್ನು ಪರಿಹರಿಸುವಂತೆ ಗುಣ ಸುಂದರಿ ” ಕಾಕಾ…ಇತ್ತೀಚಿಗೆ ಅವರಿಗೆ ಮರೆಗುಳಿ ರೋಗ ಹೆಚ್ಚಾಗಿ  ಯಾರನ್ನೂ ಗುರುತು ಹಿಡಿಯುತ್ತಿಲ್ಲ.. ಈ ವಿಷಯ ನಿಮಗೆ ತಿಳಿದಂತಿಲ್ಲ…”  ಎಂದು ಗಂಡನ ಬೆನ್ನಿಗೆ ನಿಂತಳು.

” ಇದನ್ನು ಹೇಳುವಾಗ ಗುಣ ಸುಂದರಿ  ಮುಖದಲ್ಲಿ ಸ್ವಲ್ಪವೂ  ದುಃಖ ಕಾಣುತ್ತಿಲ್ಲ…ಬದಲಿಗೆ  ಸಂಭ್ರಮ ಮನೆ ಮಾಡಿದೆ. ಕಾರಣ ಏನೋ ಗೊತ್ತಾಗುತ್ತಿಲ್ಲ…” ಎಂದು ಮನಸಿನಲ್ಲೇ ಅಂದುಕೊಂಡರು  ಹಿರಿಯರು.

” ನಿಮ್ಮ ಪತಿರಾಯರು ಸುಮಾರು (₹ 1,11,111/-) ಒಂದು ಲಕ್ಷ ಹನ್ನೊಂದು ಸಾವಿರದ ಒಂದು ನೂರಾ ಹನ್ನೊಂದು ರೂಪಾಯಿಗಳ ಹಣವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿದೆ.  ಬಯಸದೇ ಬಂದ ‘ ಭಾಗ್ಯಲಕ್ಷ್ಮಿ ‘ ಯನ್ನು ಮನೆಗೆ ಬರ ಮಾಡಿಕೊಳ್ಳುತ್ತಿಲ್ಲ.  ಅದೇ ಬೇಸರದ ವಿಷಯ ನನಗೆ…” ಎಂದು ಹಿರಿಯರು ಮೆತ್ತನೆಯ ಸ್ವರದಲ್ಲಿ ನುಡಿದರು.

ರೂಪಾಯಿ ಮಾತು ಕಿವಿಗೆ ಬಿದ್ದಕೂಡಲೇ ಗುಂಡುರಾಜ ಕೂತಲ್ಲೇ  ತುಸು ತಿಣುಕಾಡಿದ. ಹೆಂಡತಿ ಗುಣ ಸುಂದರಿ ಎದೆಯಲ್ಲಿ ಇದ್ದಕ್ಕಿದ್ದಂತೆ  ಢವ ಢವ ಸದ್ದು ಶುರುವಾಯಿತು. ” ಇಂಗ್ಲಿಷ್  ಪ್ರೈವೇಟ್ ಶಾಲೆಯ ಕನ್ನಡ  ಮಾಸ್ತರ ಗುಂಡುರಾಜ ಮಾಡಿದ  ಅಸಲಿ ಸಾಲಕ್ಕಿಂತ ಹೆಚ್ಚು ಬಡ್ಡಿಯನ್ನೇ ಬಡ್ಡಿ ಬಂಗಾರಪ್ಪ  ಹಾಗೂ ಮೀಟರ್ ಮೀಟಪ್ಪನಿಗೆ ಇಲ್ಲಿಯವರೆಗೆ  ಕಟ್ಟಿ ಕಟ್ಟಿ ಸುಸ್ತಾಗಿದ್ದ. ತನ್ನ ಗಂಡನ ಜಾತಕದಲ್ಲಿ ಹಣದ ಯೋಗ  ಈ  ಜನ್ಮಕ್ಕೆ ಇದೆಯೆಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ.  ಗುಣ ಸುಂದರಿಗೆ ನಂಬಲಾಗಲಿಲ್ಲ. ಆದರೆ ಬಂದ ವ್ಯಕ್ತಿ ತುಂಬಾ ಸಭ್ಯರಂತೆ, ಸತ್ಯವಂತರಂತೆ ಕಾಣುತ್ತಿರುವರು.  ವಿಷಯ ಏನು ಎನ್ನುವುದನ್ನು ಅವರ ಬಾಯಿಂದಲೇ  ತಿಳಿದುಕೊಳ್ಳಲು ಬಯಸಿದಳು.

” ಈ ಜನ್ಮಕ್ಕೆ ನನ್ನ ಗಂಡನಿಗೆ ಹಣ ಬರುವ ಯೋಗ ಇದೆ ಅಂತ  ಗೊತ್ತಿರಲಿಲ್ಲ. ಆದರೂ ತಾವು ದಯಮಾಡಿ ಒಗಟಿನಂತೆ ಅಲ್ಲದೆ  ಬಿಡಿಸಿ ಹೇಳಿದರೆ ತಿಳಿಯುತ್ತದೆ ಕಾಕಾ…” ಎಂದು ಹಿರಿಯರನ್ನು  ಉದ್ದೇಶಿಸಿ  ಹೇಳಿದಳು ಗುಣ ಸುಂದರಿ. 

” ಬರುವ ನವಂಬರ್ ಒಂದರ ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡ ಜಾಗೃತಿ ಸಭಾ ಮಂದಿರದಲ್ಲಿ ಕನ್ನಡ ಸಿನಿಮಾಗಳ ಆಧಾರಿತ ಕ್ವಿಜ್ ಒಂದನ್ನು  ನಿರ್ವಹಿಸಲು  ನಿರ್ಧರಿಸಿದ್ದೇವೆ. ಅದರ ಮೊದಲ ಪ್ರೈಜ್  ಮೊತ್ತ ಈಗ ನಾನು  ಹೇಳಿದ್ದು. ನಿನ್ನ ಗಂಡನಿಗೆ ಸಿನಿಮಾಗಳ ವಿಷಯದಲ್ಲಿ ಆಗಾಧ ನಾಲೆಜ್ ಇದೆ ಅಂತ ಎಲ್ಲರಿಗೂ ಗೊತ್ತಿದ್ದ ಹಾಗೆ  ನನಗೂ ಗೊತ್ತು.  ಅವರೇ ಕ್ವಿಜ್ಜಿನಲ್ಲಿ  ‘ ಗ್ಯಾರಂಟಿ ‘ ಗೆಲ್ಲುತ್ತಾರೆ ಮಗಳೇ…”  ಎಂದು ಹಿರಿಯರು ಹೇಳಿದರು ವಿಶ್ವಾಸದ ಧ್ವನಿಯಲ್ಲಿ.

” ನಿಮ್ಮ ಊಹೆ 💯 ನಿಜ ಕಾಕಾ…ಸಿನಿಮಾ ಕ್ವಿಜ್ ಅಂತ ಯಾವ ಮುಠ್ಠಾಳ  ಏರ್ಪಡಿಸಿದರೂ ನನ್ನ ಗಂಡನಿಗೇ ಫಸ್ಟ್ ಪ್ರೈಜ್ ಕಟ್ಟಿಟ್ಟ ಬುತ್ತಿ. ಅದರಲ್ಲಿ ಯಾವ ಸಂಶಯವಿಲ್ಲ. ” ಎಂದು ಗರ್ವದಿಂದ ನುಡಿದಳು ಗುಣ ಸುಂದರಿ.

” ಆದರೆ…ಆದರೆ…ನಿನ್ನ ಗಂಡನಿಗೆ ಸದ್ಯ ಆ ಯೋಗ  ಇದ್ದಂತಿಲ್ಲ. ಯಾಕೆಂದರೆ ಈಗ ಅವರಿಗೆ ಮರೆಗುಳಿ ರೋಗ ವಕ್ರಿಸಿದೆಯಲ್ಲ! ” ಎಂದು ಹೇಳಿ  ಕೂತ  ಛೇರಿನಿಂದ ಎದ್ದು ಮುಂದೆ  ಒಂದೆರಡು ಹೆಜ್ಜೆಗಳನ್ನು ಶತಪಥ ಹಾಕಿ ಮತ್ತೆ  ವಾಪಾಸು ಬಂದು ಕೂತರು ಹಿರಿಯರು.

” ನನ್ನ ಗಂಡನ ಮರೆಗುಳಿ ರೋಗ ಈಗ ವಾಸಿಯಾಗ್ತಾ ಇದೆ ಕಾಕಾ…ಮೊದಲಿಗಿಂತ ಈಗ ಎಷ್ಟೋ ವಾಸಿ… ಬೇಕಿದ್ದರೆ ಈ ಔಷಧಗಳನ್ನು ನೋಡಿ ” ಎಂದು ಗುಂಡುರಾಜ  ಶುಗರ್, ಬಿ ಪಿ,  ಆರ್ಥಟಿಸ್,  ಥೈರಾಯ್ಡ್  ಇತ್ಯಾದಿ ರೋಗಗಳಿಗೆ ತೆಗೆದುಕೊಳ್ಳುವ ಔಷಧಿಗಳ ರಾಶಿಯನ್ನು ಒಂದು ಪ್ಲಾಸ್ಟಿಕ್

ಬುಟ್ಟಿಯಲ್ಲಿ   ಸುರುವಿದಳು.  ಅವುಗಳನ್ನು ನೋಡಿ ಬವಳಿ ಬಂದಂತಾದ ಹಿರಿಯರು  ಕೂಡಲೇ ಸುಧಾರಿಸಿಕೊಂಡು ಹೇಳಿದರು ” ಮಗಳೇ…ನಿನ್ನ ಮಾತು ನಂಬುತ್ತೇನೆ.  ನಿನ್ನ ಗಂಡನಿಗೆ ಈಗ ಮರೆಗುಳಿ ಖಂಡಿತಾ ಕಡಿಮೆಯಾಗಿದೆ ಅಂತ ” ಎಂದರು  ಗತ್ಯಂತರವಿಲ್ಲದೆ.

” ಹಾಗಿದ್ದರೆ ಅವರ ಹೆಸರನ್ನು ಕ್ವಿಜ್ ಪಟ್ಟಿಯಲ್ಲಿ ಸೇರಿಸಿ ಕಾಕಾ …” ಎಂದು ಗೋಗರೆದಳು ಗುಣ ಸುಂದರಿ. 

“ಆದರೂ…ಆದರೂ…ನಿನ್ನ ಗಂಡನ ಮರೆಗುಳಿ ಕಡಿಮೆಯಾಗಿದೆ ಎಂದು ನಿರೂಪಿಸುವ ಅವಕಾಶ  ಕೊಡ್ಡುತ್ತೇನೆ. ನಾನು ಕೇಳುವ ಒಂದೆರಡು ಸಿನಿಮಾಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳಿಗೆ ಅವರು ಸರಿಯಾಗಿ ಉತ್ತರಿಸಿದರೆ ಸಾಕು. ನನಗೂ ಅವರ ಮೇಲೆ ಕಾನ್ಫಿಡೆನ್ಸ್ ಬರುತ್ತದೆ…ಏನಂತಿಯಾ? ” ಎಂದರು ಹಿರಿಯರು.

” ಆಲ್ ರೈಟ್…ಅದೇನು ಕೇಳಿಕೊಳ್ಳುತ್ತಿರೋ ಕೇಳಿಕೊಳ್ಳಿ. ಒಟ್ಟಿನಲ್ಲಿ ಈ ಸಿನಿಮಾ ಕ್ವಿಜ್ ನಲ್ಲಿ ಮೊದಲ ಬಹುಮಾನ ನನ್ನ ಗಂಡನದೇ… ಬೇಕಿದ್ದರೆ ಬರೆದಿಟ್ಟುಕೊಳ್ಳಿ…” ಎಂದು ಓಪನ್ ಚಾಲೆಂಜ್ ಹಾಕಿದಳು ಗುಣ ಸುಂದರಿ.

” ಸರಿ ಆಯ್ತು ಮಗಳೇ… ನೀನು ಇಷ್ಟು ಗ್ಯಾರಂಟಿ ಕೊಟ್ಟ ಮೇಲೆ ಮುಗಿಯಿತು. ಇಗೋ ಪ್ರಶ್ನೆ? ” ಎಂದು ಗುಂಡುರಾಜನತ್ತ  ತಿರುಗಿದರು.

ಅಲ್ಲಿಯವರೆಗೆ ಬೆಪ್ಪುತಕ್ಕಡಿಯಂತೆ ಗಪ್ ಚಿಪ್ ಕೂತಿದ್ದ ಗುಂಡುರಾಜ ಹೆಂಡತಿಯ ಕಣ್ಸನ್ನೆ ಕಂಡು ಮೈ ಕೊಡವಿಕೊಂಡು ಮುಂದೆ ಬಂದು ಕೂತ ಅದೇನು ಕೇಳುತ್ತೀರಿ …ಕೇಳಿಕೊಳ್ಳಿ ಎನ್ನುವ  ಭಂಡ ಧೈರ್ಯದೊಂದಿಗೆ.

” ಇತ್ತೀಚಿಗೆ ರಿಲೀಸ್ ಆಗಿ ಬಾಕ್ಸ್  ಆಫೀಸಿನಲ್ಲಿ ಕೊಳ್ಳೆ (ದರೋಡೆ ಅಲ್ಲ!) ಹೊಡೆದ ಎರಡು  ಸೂಪರ್ ಹಿಟ್ ಚಿತ್ರಗಳ ಹೆಸರು ಹೇಳು…” ಎಂದು ಗುಂಡುರಾಜನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದರು ಹಿರಿಯರು.

” ಓಹ್ ಇಷ್ಟೇನೇ… ಯು ಐ ಮತ್ತು ಮ್ಯಾಕ್ಸ್ ” ಎಂದು ಉತ್ತರಿಸಿ ಹೆಂಡತಿ ಗುಣ ಸುಂದರಿಯತ್ತ ಸಂಭ್ರಮದಿಂದ ನೋಡಿದ ಗುಂಡುರಾಜ.

” ಓಕೆ…ಆ ಸಿನಿಮಾಗಳ ಹೀರೋಗಳ ಹೆಸರು ಹೇಳು ? ” ಮತ್ತೆ ಪುಸಲಾಯಿಸಿದರು ಹಿರಿಯರು.

ಕಾಲರ್ ಎಗರಿಸುತ್ತಾ  ಇಷ್ಟೂ ಗೊತ್ತಿಲ್ಲವೇ  ಎನ್ನುವಂತೆ ಗುಂಡುರಾಜ ಹೇಳಿದ  ” ಕನ್ನಡಕ್ಕೆ ಒಬ್ಬನೇ  ‘ ಬುದ್ಧಿವಂತ ‘ ಉಪೇಂದ್ರ ಮತ್ತು ಕನ್ನಡದ ‘ ಬಾದ್ ಷಾ ‘  ಕಿಚ್ಚ ಸುದೀಪ್… ” 

” ಓಹ್… ಸೂಪರ್… ಇನ್ನೊಂದೇ ಪ್ರಶ್ನೆ. ಕನ್ನಡದ ‘ ಗೋಲ್ಡನ್ ಸ್ಟಾರ್ ‘ ಗಣೇಶ ನಟಿಸಿದ ಮತ್ತು ಕಳೆದ ವರ್ಷ ರಿಲೀಸ್ ಆದ ಫ್ಯಾಮಿಲಿ ಸೂಪರ್ ಹಿಟ್ ಚಿತ್ರ ಯಾವುದು? “

” ಓಹ್…ಅದಾ…ಕೃಷ್ಣಂ ಪ್ರಣಯಂ ಸಖಿ. ಇಷ್ಟು ಸಾಕೆ ? ನನ್ನ ಸಿನಿಮಾ ಜ್ಞಾನವನ್ನು ಪರೀಕ್ಷಿಸಲು ಇನ್ನೂ ಪ್ರಶ್ನೆಗಳು ಇವೆಯೇ ? ” ಎಂದು ಉತ್ಸಾಹದಿಂದ ಕೇಳಿದ ಗುಂಡುರಾಜ.

ಹಿರಿಯರು ಅಭಿಮಾನದಿಂದ ನೋಡಿದರು ಗುಂಡುರಾಜನನ್ನು. ಗಂಡನತ್ತ ಹೆಮ್ಮೆಯಿಂದ ನೋಡಿ ನುಡಿದಳು ಗುಣ ಸುಂದರಿ ” ನಾನು ಏನೋ ಅಂದುಕೊಂಡಿದ್ದೆ. ಸೂಪರ್…ಹ್ಯಾಟ್ಸ್ ಆಫ್ ಮೈ ಹಸ್ಬೆಂಡ್. ಈಗಲಾದರೂ ನನ್ನ ಗಂಡನ ತಾಕತ್ತು ಏನು ಅಂತ ನಿಮಗೆ  ತಿಳಿಯಿತು ತಾನೇ!” ಎಂದು ವಿಕ್ಟರಿ ಸಿಂಬಲ್ ಹಿರಿಯರತ್ತ ತೋರಿಸುತ್ತಾ… ಇದಕ್ಕೆ ಜೋರಾಗಿ ಚಪ್ಪಾಳೆ ತಟ್ಟುವ  ಮೂಲಕ ಸಂತಸ ವ್ಯಕ್ತಪಡಿಸಿದರು ಹಿರಿಯರು. 

ಈಗ ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಮನಸಾರೆ ಒಮ್ಮೆ  ಅಟ್ಟಹಾಸದ ನಗೆ ನಕ್ಕರು. ಅದಕ್ಕೆ ಹಿರಿಯರು ಕೂಡ ಧ್ವನಿಗೂಡಿಸಿದರು. ಆ ಅಟ್ಟಹಾಸದ ನಗುವನ್ನು ಕೇಳುತ್ತಾ ಒಳಗೆ ಬಂದರು ಬಡ್ಡಿ ಬಂಗಾರಪ್ಪ ಮತ್ತು ಮೀಟರ್  ಮೀಟಪ್ಪ  ಮತ್ತಷ್ಟು (ಭೀಕರ ಕವಿ ಗೋಷ್ಠಿ  ಕೊನೆಗೂ ಮುಕ್ತಾಯಗೊಂಡ ಸಂತಸದಲ್ಲಿ ಕಾವ್ಯ ಪ್ರೇಮಿ!) ಜೋರಾಗಿ ಚಪ್ಪಾಳೆ ತಟ್ಟಿ  ಪ್ರೋತ್ಸಾಹಿಸುವಂತೆ… ಅವರ ಮುಖಗಳನ್ನು  ಸಡನ್ ಆಗಿ ನೋಡಿ (ರಾಹು ಕೇತುಗಳನ್ನು  ಒಟ್ಟಾಗಿ ದರ್ಶಿಸಿದಂತೆ !) ತಬ್ಬಿಬ್ಬಾದರು ಗುಂಡುರಾಜ ದಂಪತಿಗಳು.

”  ಪ್ರೀತಿಯ ಮತ್ತು ಆತ್ಮೀಯ ಗುಂಡುರಾಜರೇ ಮರೆಗುಳಿ ಎನ್ನುವ ನಾಟಕವನ್ನು ತಾವು ಯಶಸ್ವಿಯಾಗಿ ಪ್ರಯೋಗಿಸಿ ಉತ್ತಮ ಅಭಿನಯ ನೀಡಿದ ತಮಗೆ  ಮೊಟ್ಟ ಮೊದಲ ಅಭಿನಂದನೆಗಳು. ಬಡ್ಡಿಯ ರುಚಿ ಸವಿದಿದ್ದ ನಮಗೆ ಅದನ್ನು ಕೊಡಲಾರದೆ ಸಾಲವನ್ನೇ ಎತ್ತಿ ಹಾಕಲು ನೀವು ಭರ್ಜರಿ ಪ್ಲಾನ್ ಮಾಡಿದಿರಿ. ದೇವರು ದೊಡ್ಡವನು!  ಈ ಜೀವನವೇ ನಾಟಕ ರಂಗ ಎಂದು ನಾವು ಜ್ಞಾನಿಗಳಿಗೆ ಅದೇ ನಿಮ್ಮಂತಹ ಕನ್ನಡ ಮಾಸ್ತರರಿಗೆ  ಬೇರೆ ಹೇಳಬೇಕಾಗಿಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು…ಇದು ನಮ್ಮ ಸ್ವಂತ  ಡೈಲಾಗ್ ಅಲ್ಲ. ಹಿರಿಯರು ಹೇಳಿ ಕೊಟ್ಟದ್ದು. ಹೀಗಾಗಿ ನಿಮ್ಮ ನಾಟಕಕ್ಕೆ  ನಾವೂ ಪ್ರತೀ ನಾಟಕವನ್ನು ಈ ಹಿರಿಯರ ಮುಖಾಂತರ ಆಡಿಸಿ ನಿಮ್ಮ ಮರೆಗುಳಿತನದ ನಟನೆಯನ್ನು  ಖಾಯಂ  ಆಗಿ ಕಾಡಿಗೆ ಅಟ್ಟ ಬೇಕಾಯಿತು. ಅದಕ್ಕೆ ಕ್ಷಮೆ ಇರಲಿ ” ಎಂದು ಮುಗುಳು ನಗೆ ಸೂಸುತ್ತಾ ಬಡ್ಡಿ ಬಂಗಾರಪ್ಪ ನುಡಿದ.

” ಮಾಸ್ತರ್ ಗುಂಡುರಾಜ ಅವರೇ  ರೊಕ್ಕ ಯಾರಿಗೂ ಪುಗಸಟ್ಟೆ ಸಿಗೋದಿಲ್ಲ. ನಮಗೂ ಅಷ್ಟೇ! ನಿಮಗೂ ಅಷ್ಟೇ!! ನೀವು  ಹವ್ಯಾಸಿ ಕಲಾವಿದರ  ನಾಟಕ ಆಡದೆ ಆಸ್ಕರ್ ಲೆವೆಲ್  ನಟನೆಯ ಅದ್ಭುತ  ನಾಟಕ  ಆಡಿದ್ದಕ್ಕೆ  ಈಗ ನಿಮ್ಮ ಚಕ್ರ ಬಡ್ಡಿ  ಡಬಲ್ ಆಯಿತು.  ನೀವು ಸ್ಕೂಲಿನಲ್ಲಿ ಮಕ್ಕಳಿಗೆ  ಪ್ರತಿದಿನ ಪಾಠ ಹೇಳುತ್ತೀರಷ್ಟೇ… ಆದರೆ ನಾವು ದಿನ ನಿತ್ಯ ಬಡ್ಡಿಗೆ ಸಾಲ ತೆಗೆದುಕೊಳ್ಳುವ  ಅಸಂಖ್ಯಾತ ಸಾಲಗಾರರನ್ನು  ಹಗಲೂ ರಾತ್ರಿ ನೋಡುತ್ತಿರುತ್ತೇವೆ…ನಿಮ್ಮ ಅಕ್ಷರ ಜ್ಞಾನಕ್ಕಿಂತ ನಮ್ಮ ಆರ್ಥಿಕ  ಜ್ಞಾನ ದೊಡ್ಡದು!  ಮುಂದಿನ ತಿಂಗಳು ಅಸಲು ಮತ್ತು ಚಕ್ರ ಬಡ್ಡಿ ಎಲ್ಲಾ ಒಟ್ಟಿಗೇ ತೀರಿಸುತ್ತಿರೋ ಅಥವಾ  ಪ್ರತೀ ತಿಂಗಳು ತಮ್ಮ  ಮೀಟರ್  ಬಡ್ಡಿಯನ್ನು ಕಂತುಗಳ  ಮೂಲಕ  ವಾಪಸು ಮಾಡುತ್ತೀರೋ? ಅಂತಿಮ  ನಿರ್ಧಾರ ನಿಮ್ಮದು. ಓಕೆ ” ಎಂದು ಮೀಟರ್ ಮೀಟಪ್ಪ ಹೇಳಿದಾಗ  ಮೂರ್ಛೆ ಹೋದ ದಂಪತಿಗಳು ಇನ್ನೂ ಎಚ್ಚರಗೊಂಡಿಲ್ಲ ಎನ್ನುವದು ಸದ್ಯದ ಗುಂಡುರಾಜನ ಕುಟುಂಬದ ಕಾ(ಖಾ)ಸ್ ಬಾತ್! 

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

17 thoughts on “ರೊಕ್ಕ ಯಾರಿಗೂ ಪುಗಸಟ್ಟೆ ಸಿಗೋದಿಲ್ಲ”

  1. JANARDHANRAO KULKARNI

    ಲೇಖನ ಹಾಸ್ಯಮಯವಾಗಿ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು ರಾಘಣ್ಣ

  2. ಮ. ಮೋ. ರಾವ್, ರಾಯಚೂರು

    ಮರೆಗುಳಿ ನಾಟಕದ ಆಸ್ಕರ್ ಅಭ್ಯರ್ಥಿ ಗುಂಡುರಾಜನ ನಾಟಕಕ್ಕೆ ಪ್ರತಿನಾಟಕ ಹೂಡಿ ಡಾಕ್ಟರ್ ಗಿಂತ ಚನ್ನಾಗಿ ಮತ್ತು ಕೂಡಲೇ ನೆನಪು ಮರುಕಳಿಸುವಂತೆ ಚಿಕಿತ್ಸೆ ಮಾಡಿದ ಬಡ್ಡಿ ಬಂಗಾರಪ್ಪ ಮತ್ತು ಮೀಟರ್ ಮೀಟಪ್ಪ ರೆ ಭಲೇ. ತುಂಬ ಹಸ್ಯಭರಿತ ಲೇಖನ. ಇಂದಿನ ಪ್ರೈವೇಟ್ ಫೈನಾನ್ಸರ್ಸ್ ಬವಣೆಯನ್ನು ಬಯಲು ಮಾಡಿದ್ದೀರಿ. ಸಾಹಿತಿ ರಾಘವೇಂದ್ರ ಮಂಗಳೂರು ಅವರಿಗೆ ಅಭಿನಂದನೆಗಳು.

  3. MURALIDAHR JOSHI , GANGAVATHI

    ಸೂಜಿಗಿಂತ ಮೊನೆಚಾದ ನಿಮ್ಮ ಬರಹ ತುಂಬ ಸುಂದರ. ಬಡ್ಡಿ ವ್ಯವಹಾರ ಮಾಡುವವರಿಗೆ ಈ ಬರಹ ತಲುಪುವಷ್ಟು ನಾವು ಷೇರ್ ಮಾಡಬೇಕಿದೆ.

    ಮುರಳಿಧರ ಜೋಷಿ
    ಗಂಗಾವತಿ

    1. ಧರ್ಮಾನಂದ ಶಿರ್ವ

      ವಿಡಂಬನೆ ತುಂಬ ಖುಷಿ ಕೊಟ್ಟಿತು. ಓದುತ್ತಿದ್ದಂತೆ ನಗುವೂ ಬಂತು. ವಿಡಂಬನೆಯ ವಸ್ತುವನ್ನು ತಂತ್ರಕ್ಕೆ ಪ್ರತಿತಂತ್ರ ಎನ್ನುವ ರೀತಿಯಲ್ಲಿ ಕುತೂಹಲವನ್ನು ಉಳಿಸಿಕೊಳ್ಳುತ್ತಾ ಬಳಸಿದ್ದೀರಿ.
      ಅಭಿನಂದನೆಗಳು.

  4. ಸೂಪರ್ ವಿಡಂಬನೆ ಸರ್. ಎಲ್ಲರನ್ನೂ ಫೂಲ್ ಮಾಡಿದ ಗುಂಡನ ನಾಟಕದ ಕಥಾವಳಿ ಬಲು ಸುಂದರ

  5. ಸಾಲ ಗಾರ ರು ಚಾಪೆ ಕೆಳಗೆ ನುಸುಳಿದರೆ ಕೊಟ್ಟವರು ರಂಗೋಲಿ ಕೆಳಗೆ
    ಅದರಂತೆ ಇಲ್ಲಿ
    ಯಾವುದೋ ನಾಟಕ ಆಡಿ ಸಾಲ ಕೊಟ್ಟವರನ್ನು
    ಓಡಿಸಿದ ಪತಿ ಪತ್ನಿ ಸುಲಭ ವಾಗೀ ಸಿಗುವ ಬಹುಮಾನ ಕಾಗಿ ಬಕ್ರ ಆಗುವುದು ಪಾಪ ಅನ್ನಿಸುತ್ತೆ
    ಆದರೆ ಮೂರ್ಛೆ ಹೋಗಿದ್ದು ನಿಜವೋ
    ಅಥವಾ ಅದೂ?

  6. ಶೇಖರಗೌಡ ವೀ ಸರನಾಡಗೌಡರ್

    ಎಲ್ಲರನ್ನು ಎಲ್ಲಾ ಸಮಯದಲ್ಲಿ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ನಿರೂಪಿಸಲಾಗಿದೆ.
    ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.
    ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter