ಮೈಲಿಗೆ ಹೂವಿನದ್ದಲ್ಲ

ಹಸುರಿನೊಳು ನಸುಕಂದು ಚಿಗುರು ಮೊಳೆದು
ನವಿರು ಬಣ್ಣ ಬೆಳೆದು ಹೂವಾಗಿ ಬಿರಿದು
ಬೆರಗು ಮೂಡಿಸುವ ಕಾಯ
ಇಂದು ನಿನ್ನೆಯದಲ್ಲ

ಮೋಹಕ ಜಗದೊಡಲಿನ ಮೂಲ ಸತ್ವವೇ
ಈ ಕೋಮಲತೆಯೊಳಿರುವಾಗ
ಕಂಡವರೆಷ್ಟೋ ಕೊಂಡಾಡಿ ಪರವಾದವರೆಷ್ಟೋ
ಪಕಳೆಯ ನಲುಗಿನೊಳಂಟಿದ ಹೆಸರೆಷ್ಟೋ

ಹೂವು ಇಂದಿಗೂ ಅಂತೆಯೇ
ಎದೆಯಾಳದ ನಗುವಂತೆ ಜೀವಸ್ವರ ಮಿಡಿವಂತೆ
ಅದೇ ಹಿಗ್ಗು ಅದೇ ಮೊಗ್ಗು

ತಾನಲ್ಲ ತನ್ನದಲ್ಲವೆಂದವರೂ
ಸುಮಧುರ ಭಾವ ವಿನಿಮಯಕೆ ಬೇಲಿಯೇರಿಸಲಿಲ್ಲ
ಬಣ್ಣ ಭಾವಗಳ ಬಸಿದು ನಿರಾಳವಾದವರೇ ಎಲ್ಲ

ಹಿಂದೆಂದೂ ಇದ್ದಿಲ್ಲದ
ಜಗದ ಜ್ಞಾತರ ಸ್ವ ಶಾಸ್ತ್ರಗಳೀಗ
ಒಂದೊಂದು ಹೂವನೂ ಬಿಡದೆ
ನೈತಿಕತೆಯ ತಕ್ಕಡಿಯಲಿಟ್ಟು ತೂಗುತಿವೆ

ನೂಲಿನ ದಾರಕೆ ಸೇರದ ಹೂವುಗಳು
ಮೈಲಿಗೆಯ ಕೂಪ ಸೇರಿ
ವ್ಯಥೆಯ ಕತೆಯನುಸುರುತಿವೆ

ಸೃಷ್ಟಿಯೊಳಗಿರದ ನೀತಿ
ಆಂತರ್ಯಕೆ ಒಗ್ಗಿಸಲಾಗದ ಶುದ್ಧಿ
ಬರೀ ಕಾಯದ ಮೇಲೇಕೋ…!
ಮೈಲಿಗೆ ಹೂವಿನದ್ದಲ್ಲ

  • ಅನಿತಾ ಪಿ.ತಾಕೊಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಮೈಲಿಗೆ ಹೂವಿನದ್ದಲ್ಲ”

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter