ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕೃತಿ ‘ಕನ್ನಡ ನಾಡು ನುಡಿಗೆ  ಮುಂಬೈ ಕೊಡುಗೆ’ ಬೆಳಕಿಗೆ 

ಮುಂಬೈ ಜ. 30: ಮುಂಬೈಗೂ ಕರ್ನಾಟಕಕ್ಕೂ ಅಂಟಿದ ನಂಟಿಗೆ ಶತಮಾನಗಳ ಇತಿಹಾಸವಿದೆ. ಸಾಹಿತ್ಯ ವಲಯವಾಗಿ ಮುಂಬೈ ಹೆಸರು ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಬೈ ವಿಶ್ವವಿದ್ಯಾಲಯ  ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಅವರು ರಚಿಸಿದ ಕನ್ನಡ ನಾಡು ನುಡಿಗೆ ಮುಂಬೈ ಕೊಡುಗೆ ಎಂಬ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ತನ್ನ ನೂತನ ಪ್ರಕಟಣೆಯಾಗಿ ಹೊರ ತಂದಿದೆ. 

ವಿವಿಧ ಕ್ಷೇತ್ರಗಳಲ್ಲಿ ಮುಂಬೈ ಕನ್ನಡಿಗರು ಮಾಡಿರುವ ಸಾಂಸ್ಕೃತಿಕ ಪರಿಚಾರಿಕೆಯನ್ನು ಈ ಕೃತಿ ಒಳಗೊಂಡಿದೆ. 12 ಕಿರು ಅಧ್ಯಾಯಗಳಲ್ಲಿ ಮುಂಬೈನ ತುಳು ಕನ್ನಡಿಗರ ಸಾಹಸ ಸಾಧನೆ, ಇಲ್ಲಿನ ವಿವಿಧ ಸಂಘ ಸಂಸ್ಥೆಗಳು, ಸಾಹಿತಿಗಳು, ಲೇಖಕರು, ಕಲಾವಿದರು, ಹೋಟೆಲ್ ಉದ್ಯಮ, ಕನ್ನಡಿಗರ ಸ್ಥಿತಿಗತಿ ಹೀಗೆ ನಾನಾ  ಆಯಾಮಗಳನ್ನು ಈ ಕೃತಿ ಹಿಡಿದಿಟ್ಟಿದೆ. ಹೊರ ನಾಡಿನಲ್ಲಿ ನೆಲೆಸಿ ಮುಂಬೈ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಶತಮಾನದ ಹಿನ್ನೆಲೆ ಇರುವ ಕನ್ನಡ ಸಾಹಿತ್ಯ ಪರಿಷತ್ತು ಈ ಕೃತಿಯನ್ನು ಪ್ರಕಟಿಸಿರುವುದು ಮುಂಬೈ ಕನ್ನಡಿಗರಿಗೆ ಸಂದ ಗೌರವ ಎಂಬುದಾಗಿ ಕೃತಿಕಾರ ಜಿ. ಎನ್. ಉಪಾಧ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

 ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ. ಡಾ. ಮಹೇಶ ಜೋಶಿ ಅವರು ಈ ಕೃತಿಗೆ ಬರೆದ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ .

ಮುಂಬೈ ಮಹಾನಗರ ಕ್ರಿಯಾಶೀಲರಿಗೆ ಯಾವತ್ತೂ ಅವಕಾಶಗಳನ್ನು ಒದಗಿಸಿದ ತಾಣ. ವಸಾಹತುಶಾಹಿ ಆಳ್ವಿಕೆಯ ಸಂದರ್ಭದಲ್ಲಿ ಅನೇಕ ಸುಧಾರಣಾವಾದಿಗಳು ಮುಂಬೈನಲ್ಲಿ ಸಾಹಿತ್ಯ ನಿರ್ಮಾಣದಲ್ಲಿ ತೊಡಗಿದ್ದು ಮಹತ್ವದ ಸಂಗತಿ.ಚುರುಮುರಿ ಶೇಷಗಿರಿ ರಾಯರು ಮುಂಬಯಿಯಲ್ಲಿ ಕನ್ನಡ ಸಾಹಿತ್ಯ ರಚನೆಗೆ ನಾಂದಿ ಹಾಡಿದ ಬಹುಭಾಷಾ ವಿದ್ವಾಂಸರು. ಪ್ರಗತಿಪರ ಚಿಂತಕರಾಗಿದ್ದ ಶ್ಯಾಮರಾವ್ ಕೈಕಿಣಿ ಹೊಸ ಸಮಾಜದ ಏಳಿಗೆಗೆ ದುಡಿದವರು. ಕರ್ಕಿ ವೆಂಕಟರಮಣ ಶಾಸ್ತ್ರಿಗಳ ಸಾಹಿತ್ಯ ಪರಿಚಾರಿಕೆ ಪ್ರಾತಃ ಸ್ಮರಣೀಯವಾಗಿದೆ. ಹೀಗೆ ಮುಂಬೈ ಕನ್ನಡಿಗರ ಕೊಡುಗೆಗಳನ್ನು ಅತ್ಯಂತ ಸಮರ್ಥವಾಗಿ ದಾಖಲಿಸುವಂತಹ ಕೃತಿ ಇದು ಎಂಬುದಾಗಿ ಈ ಪ್ರಕಟಣೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕೃತಿಯಲ್ಲಿ ಕನ್ನಡಿಗರ ಕೊಡುಗೆಗಳನ್ನು ವಿಶೇಷವಾಗಿ ವಿಶ್ಲೇಷಿಸಲಾಗಿದೆ. ಕವಿಯಾಗಿ ಪತ್ರಿಕೋದ್ಯಮಿಯಾಗಿ, ಸಂಶೋಧಕರಾಗಿ ಹೆಸರು ಮಾಡಿದ್ದ ಹಟ್ಟಿಯಂಗಡಿ ನಾರಾಯಣ ರಾಯರು, ಸಂಶೋಧನೆಯಲ್ಲಿ ಮಹತ್ವದ ಹೆಸರನ್ನು ಮಾಡಿದ ಡಾ. ಭೀಮರಾವ್ ಚಿಟಗುಪ್ಪಿ, ಅನನ್ಯ ಸೃಜನಶೀಲ ಲೇಖಕ ಯಶವಂತ ಚಿತ್ತಾಲ, ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನಕ್ಕೆ ಕಾರಣರಾದ ರಾ.ಹ. ದೇಶಪಾಂಡೆಯವರ ಕೊಡುಗೆಗಳನ್ನು ಇಲ್ಲಿ ವಿಶೇಷವಾಗಿ ಚರ್ಚಿಸಲಾಗಿದೆ. ಇದರ ಜೊತೆಗೆ ಡಾ. ಅಂಬೇಡ್ಕ‌ರ್ ಅವರನ್ನು ಭೇಟಿ ಮಾಡಿ ಅವರ ಕುರಿತು ಕೃತಿಯನ್ನು ರಚಿಸಿದ ಪ್ರೊ. ವಿ.ಎಂ. ಇನಾಂದಾರ್ ಅವರ ಪರಿಚಯ ಕೃತಿಯನ್ನು ಸಮೃದ್ಧಗೊಳಿಸಿದೆ. ಕನ್ನಡಿಗರನ್ನು ಈ ಕೃತಿ ತಲುಪಿ ಆ ಮೂಲಕ ಅಭಿಮಾನದ ಕ್ಷಿತಿಜವನ್ನು ವಿಸ್ತರಿಸಲಿ ಎಂದು ಸಾಹಿತ್ಯ ಪರಿಷತ್ನ ಅಧ್ಯಕ್ಷರು  ಸದಾಶಯ ವ್ಯಕ್ತಪಡಿಸಿದ್ದಾರೆ.ಇದು ಡಾ.ಜಿ. ಎನ್. ಉಪಾಧ್ಯ ಅವರ 91ನೆಯ ಕೃತಿ ಎಂಬುದು ವಿಶೇಷ.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter