ಚೀನೀಯರ ಹೊಸ ವರ್ಷದ ಆಚರಣೆ ‘Gong Xi Fa Cai!’

ಚೀನಿ ಭಾಷೆಯಲ್ಲಿ Gong Xi Fa Cai ಎಂದರೆ ಹೊಸ ವರ್ಷದ ಶುಭಾಶಯ. ಹೊಸ ವರ್ಷವು ಸುಖ ಸಮೃದ್ಧಿಗಳನ್ನು ತರಲಿ ಎನ್ನುವ ಶುಭೇಚ್ಛೆ. ಕನ್ನಡಿಗರಿಗೆ ಯುಗಾದಿ ಪಾಡ್ಯವಿದ್ದಂತೆ, ಸಿಖ್ಖರಿಗೆ ಬೈಸಾಖಿ ಇದ್ದಂತೆ, ಕ್ರಿಶ್ಚಿಯನ್ನರಿಗೆ ಜನೇವರಿ 1 ರಂತೆ, ಚೀನೀಯರ ನವ ವರ್ಷದ ಮೊದಲ ದಿನವನ್ನು ಚೀನ ದೇಶ, ಮಲೇಶಿಯ, ಸಿಂಗಾಪುರ, ಹಾಂಗಕಾಂಗ್ ಹಾಗೂ ಜಗತ್ತಿನಾದ್ಯಂತ ವಾಸವಾಗಿರುವ ಎಲ್ಲ ಚೀನೀ ಸಮುದಾಯಗಳಲ್ಲಿ ಈ ವರ್ಷದ ಜನೆವರಿ 29ರಂದು ಅತ್ಯಂತ ಸಡಗರದಿಂದ ಆಚರಿಸಲಾಗುವುದು. ಜನೆವರಿ 29ರಿಂದ ಮುಂದಿನ ಹದಿನೈದು ದಿನಗಳ ವರೆಗೆ ಆಚರಿಸಲಾಗುವ ಈ ಹೊಸ ವರ್ಷದ ಸಂಭ್ರಮವು ಆಡಂಬರ ಮಾತ್ರವಾಗಿರದೆ ವೈವೀಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳನ್ನೊಳಗೊಂಡಿರುತ್ತದೆ. ಈ ಹಬ್ಬವನ್ನು ವಸಂತೋತ್ಸವ (spring festival) ಎಂದೂ ಕರೆಯುತ್ತಾರೆ. ಉಳಿದೆಲ್ಲ ಹಬ್ಬಗಳಿಗಿಂತ ಇದು ಚೀನೀಯರು ಅನುಸರಿಸುವ ಚಂದ್ರಮಾನ ಕ್ಯಾಲೆಂಡರಿನ ಅತ್ಯಂತ ಮಹತ್ವದ ಹಬ್ಬ. ಚೀನೀ ರಾಶಿಚಕ್ರವು 12 ವರ್ಷಗಳ ಪುನರಾವರ್ತಿತ ಚಕ್ರವಾಗಿದ್ದು, ಪ್ರತಿ ವರ್ಷವನ್ನು ಒಂದು ಪ್ರಾಣಿಯು ಪ್ರತಿನಿಧಿಸುತ್ತದೆ. ಪ್ರಾಣಿಗಳ ಚಿಹ್ನೆಗಳ ಕ್ರಮವು ನಿಗದಿಯಾಗಿರುತ್ತದೆ. ಇಲಿ, ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಮೇಕೆ, ಮಂಗ , ಹುಂಜ , ನಾಯಿ ಮತ್ತು ಹಂದಿ - ಇವು ರಾಶಿಚಕ್ರದ ಹನ್ನೆರಡು ಪ್ರಾಣಿಗಳಗಿದ್ದು, ಆಯಾ ವರ್ಷದ ಶುಭದ ಚಿನ್ಹೆಯಾಗಿ ಬರುತ್ತವೆ. ಉದಾಹರಣೆಗೆ ಕಳೆದ ವರ್ಷದ ಶುಭ ಚಿನ್ಹೆ ಡ್ರ್ಯಾಗನ್ ಆಗಿತ್ತು. ಈ ವರ್ಷದ ಶುಭ ಚಿನ್ಹೆ ಹಾವು.

ಹೊಸ ವರ್ಷದ ಆಚರಣೆಯ ಬಗ್ಗೆ ಚೀನೀ ದಂತಕಥೆಗಳಲ್ಲಿ ಒಂದು ಕುತೂಹಲಕಾರಿ ಉಲ್ಲೇಖವಿದೆ. ಸಾವಿರಾರು ವರ್ಷಗಳ ಹಿಂದೆ ಸಮುದ್ರವಾಸಿಯಗಿದ್ದ ನೀಆನ್ ಎಂಬ ಸಿಂಹದ ತಲೆ ಮತ್ತು ಎತ್ತಿನ ದೇಹವುಳ್ಳ ದೈತ್ಯಾಕಾರದ ಪ್ರಾಣಿಯೊಂದು ಪ್ರತಿವರ್ಷ ತಪ್ಪದೆ ಹೊಸವರ್ಷದ ಮುನ್ನಾ ದಿನದಂದು ಸಮುದ್ರದಿಂದ ಹೊರಬಂದು ಜನ - ಜಾನುವಾರು, ಮನೆ ಮತ್ತು ಬೆಳೆಗಳನ್ನು ಸರ್ವನಾಶ ಮಾಡುತ್ತಿತ್ತಂತೆ. ಉಪದ್ರವಿ ನೀಆನಿನ ಕಾಟಕ್ಕೆ ಬೇಸತ್ತ ಭಯಭೀತ ಜನ ಅದನ್ನು ದೂರವಿಡಲು ಉಪಾಯ ಹುಡುಕತೊಡಗಿದರು. ಹೀಗಿರುವಾಗ ಒಂದು ದಿನ ಅಚಾನಕ್ಕಾಗಿ ನೀಆನ್ ಕೆಂಪು ಬಣ್ಣವನ್ನು ಕಂಡರೆ ಭೀತಿಪಡುವದಷ್ಟೇ ಅಲ್ಲದೇ ಕಿವಿಗಡಚಿಕ್ಕುವ ಸದ್ದುಗದ್ದಲಕ್ಕೆ ಹೆದರಿ ಓಡಿಹೋಗುತ್ತದೆ ಎಂಬ ರಹಸ್ಯವನ್ನು ಜನರು ಅರಿತುಕೊಂಡರು. ನೀಆನನ್ನು ದೂರವಿಡಲು ಜನ ತಮ್ಮ ಮನೆಗಳ ಮುಂದೆ, ಬಾಗಿಲುಗಳ ಮೇಲೆ ಕೆಂಪು ಕಾಗದದ ಚಿನ್ಹೆಗಳನ್ನು ಅಂಟಿಸಿ, ಕೆಂಪು ಬಣ್ಣದ ಕಂದೀಲುಗಳನ್ನು ತೂಗುಬಿಡುವದನ್ನು ರೂಢಿ ಮಾಡಿಕೊಂಡರು. ಇಷ್ಟೇ ಅಲ್ಲ, ಜೋರಾದ ಶಬ್ದಕ್ಕಂಜುವ ನೀಆನನ್ನು ಅಂಜಿಸಿ, ಓಡಿಸಲು ಪಟಾಕಿಗಳನ್ನು ಹಾರಿಸತೊಡಗಿದರು. ಈ ಎಲ್ಲ ಮುಂಜಾಗರೂಕತೆಗಳ ಫಲವಾಗಿ ನೀಆನಿನ ಹಾವಳಿ ಕಾಲಕ್ರಮದಲ್ಲಿ ನಿಂತುಹೋಯಿತು. ನೀಆನ್ ಸಂಪೂರ್ಣವಾಗಿ ಕಣ್ಮರೆಯಾಯಿತು! ಈ ಸಂದರ್ಭವನ್ನು ವರ್ಷಕ್ಕೊಮ್ಮೆ ಆಚರಿಸುವ ಸಂಪ್ರದಾಯ ಬೆಳೆದು ಬಂದಿದ್ದು ಹೊಸ ವರ್ಷದ ಹಬ್ಬವಾಗಿ ಆಚರಣೆಯಲ್ಲಿ ಬಂದಿತು. ನೀಆನ್ ಎಂದರೆ ಚೀನಿ ಭಾಷೆಯಲ್ಲಿ ’ ಹೊಸ ವರ್ಷ’ ಎಂಬ ಅರ್ಥವೂ ಇದೆ.

ಡ್ರ್ಯಾಗನ್ ನೃತ್ಯ (dragon dance)

ಹೊಸ ವರ್ಷವನ್ನು ಆಚರಿಸಲು ಚೀನೀಯರು ಮೂರು ವಾರಗಳ ಮುಂಚಿತವಾಗಿ ತಯಾರಿ ಪ್ರಾರಂಭಿಸುತ್ತಾರೆ. ಮನೆ ಮನೆಗಳಲ್ಲಿ, ಬೀದಿಗಳಲ್ಲಿ ಸಡಗರದ ವಾತಾವರಣವು ತುಂಬಿಕೊಳ್ಳುತ್ತದೆ. ಹಬ್ಬದ ಸಾಮಾನುಗಳಿಂದ ತುಂಬಿ ಗಿಜಿಗುಡುವ ಮಾರುಕಟ್ಟೆಗಳಲ್ಲಿ ವ್ಯವಹಾರ ಭರಾಟೆಯಿಂದ ನಡೆಯುತ್ತದೆ. ಮನೆಗಳು, ಅಂಗಡಿಗಳು, ಉಪಹಾರ ಗೃಹಗಳು , ಸಣ್ಣ-ದೊಡ್ಡ ಹೋಟೆಲ್ಲುಗಳು, ಶಾಪಿಂಗ್ ಮಾಲುಗಳು ಹಾಗೂ ದೊಡ್ಡ ದೊಡ್ಡ ಕಚೇರಿಗಳ ಬಾಗಿಲಿನ ಎರಡೂ ಬದಿಗಳಲ್ಲಿ ಸಮೃದ್ಧಿ ಮತ್ತು ಸಂತೋಷದ ಚಿನ್ಹೆಗಳಾದ ಪುಟಾಣಿ ಕಿತ್ತಳೆ ಹಣ್ಣುಗಳು ಸುರಿದಿರುವ ಗಿಡಗಳನ್ನು ಇಡುತ್ತಾರೆ. ನಗರಗಳ ಸಮುದಾಯ ಕೇಂದ್ರಗಳಲ್ಲಿ , ವಸತಿ ಸಂಕೀರ್ಣಗಳಲ್ಲಿ, ಜನಪ್ರಿಯ ಶಾಪಿಂಗ್ ಮಾಲುಗಳಲ್ಲಿ ಮತ್ತು ಪ್ರವಾಸಿ ಆಕರ್ಷಣಾ ತಾಣಗಳಲ್ಲಿ ಕೌಶಲ್ಯ ಹಾಗೂ ಕಲಾತ್ಮಕತೆಯ ಅನನ್ಯ ಮಿಶ್ರಣವಾದ ಸಾಂಪ್ರದಾಯಿಕ ಸಿಂಹದ ನೃತ್ಯ (Lion dance) ಮತ್ತು ಡ್ರ್ಯಾಗನ್ ನೃತ್ಯ (dragon dance)ಗಳನ್ನು ಪ್ರದರ್ಶಿಸಲಾಗುತ್ತದೆ. ಈ ನೃತ್ಯಗಳ ವೀಕ್ಷಣೆಯು ಹೊಸ ವರ್ಷದುದ್ದಕ್ಕೂ ಉತ್ತಮ ಅದೃಷ್ಟ ಮತ್ತು ಸಮೃದ್ಧಿಗಳನ್ನು ತರುತ್ತದೆ ಎಂಬುದು ಚೀನೀಯರಲ್ಲಿ ತಲೆತಲಾಂತರಗಳಿಂದ ಬಂದ ನಂಬಿಕೆ. ಈ ನೃತ್ಯಗಳಿಗಾಗಿಯೇ ಬಾರಿಸುವ ವಿಶೇಷ ತಾಳ, ಮದ್ದಳೆ, ಮತ್ತು ಕಂಸಾಳೆಗಳಿಂದೊಡಗೂಡಿದ ವಿಶಿಷ್ಟ ಸಾಂಪ್ರದಾಯಿಕ ಸಂಗೀತವು ಕೆಟ್ಟ ಶಕುನ, ದೆವ್ವ ಭೂತಗಳ ಕಾಟ ಮತ್ತು ಸಂಭಾವ್ಯ ದುರಾದೃಷ್ಟಗಳನ್ನು ಹೊಡೆದೋಡಿಸುತ್ತವೆಯೆಂಬ ಪ್ರತೀತಿಯಿದೆ. ಸಿಂಗಾಪುರ, ಮಲೇಶಿಯಾ ಹಾಗೂ ಮತ್ತಿತರ ದೇಶಗಳಲ್ಲಿರುವ ’ಚೈನಾ ಟೌನ್’ಗಳ ಬೀದಿಗಳು ಹೊಸ ವರ್ಷವನ್ನು ಸ್ವಾಗತಿಸಲು ವರ್ಣರಂಜಿತ ದೀಪಾಲಂಕಾರದೊಂದಿಗೆ ಮನಸೆಳೆಯುತ್ತವೆ. ಚೀನೀ ಸಂಸ್ಕೃತಿಯಲ್ಲಿ ಕೆಂಪು ಬಣ್ಣಕ್ಕೆ ಮಹತ್ವದ ಸ್ಥಾನವಿದೆ. ಈ ಬಣ್ಣ ಸಕಾರಾತ್ಮಕತೆಯ ಸಂಕೇತವಾಗಿದ್ದು, ಆಧ್ಯಾತ್ಮಿಕ ಅರ್ಥವನ್ನೂ ಹೊಂದಿದೆ. ಕೆಂಪು ಸೂರ್ಯನ ಬಣ್ಣವೂ ಆಗಿರುವುದರಿಂದ ಅದು ಶುಭ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆಯೆಂಬ ನಂಬಿಕೆಯಿದೆ. ಅಂತೆಯೆ ಹೊಸವರ್ಷದ ಸ್ವಾಗತಕ್ಕಾಗಿ ಕೆಂಪು ಬಣ್ಣದ ಅಲಂಕಾರ ಸಾಮಗ್ರಿಗಳು ಮತ್ತು ಅನಾನಸ್ ಅಥವಾ ಕಿತ್ತಳೆ ಹಣ್ಣುಗಳ ಆಕಾರದ ಆಕಾಶಬುಟ್ಟಿಗಳನ್ನು ಚೀನೀ ದೇವಾಲಯಗಳ ಮುಂದೆ, ಮನೆಗಳ ಮುಂದೆ, ಅಂಗಡಿ ಮುಂಗಟ್ಟುಗಳ ಸೂರುಗಳಿಗೆ, ರೇಲ್ವೆ ನಿಲ್ದಾಣಗಳಲ್ಲಿ ಹಾಗೂ ಮುಖ್ಯ ಬೀದಿಗಳಲ್ಲಿ ಸಾಲು ಸಾಲಾಗಿ ತೋರಣದಂತೆ ಕಟ್ಟುತ್ತಾರೆ. ಚೀನಿ ಸಮುದಾಯಗಳು ವಾಸವಾಗಿರುವ ನಗರಗಳೆಲ್ಲ ಹೊಸ ವರ್ಷವನ್ನು ಸ್ವಾಗತಿಸಲು ಕೆಂಪು ಬಣ್ಣದ ಊಡುಗೆಯನ್ನು ತೊಟ್ಟು, ಸಿಂಗಾರಗೊಂಡ ನವ ವಧುವಿಂತೆ ತೋರುತ್ತವೆ.

ಹೊಂಗಬಾವೊ (Hongbao)

ಹೊಸ ವರ್ಷದ ಮುನ್ನಾ ದಿನದಂದು ಮನೆ ಮನೆಗಳಲ್ಲಿ ಆಕರ್ಷಕ ಕೆಂಪು ಕಂದೀಲುಗಳನ್ನು ಹಚ್ಚುತ್ತಾರೆ. ಮುಂಬಾಗಿಲಿನ ಮೇಲೆ ಎರಡು ವಿಶೇಷ ಬಾಗಿಲು-ದೇವರುಗಳ ಚಿತ್ರಗಳನ್ನು ಅಂಟಿಸುತ್ತಾರೆ. ಈ ದೇವದ್ವಯರು, ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸದಂತೆ ತಡೆಯುತ್ತಾರೆಂದು ಚೀನೀಯರು ನಂಬುತ್ತಾರೆ. ದುರಾದೃಷ್ಟವು ಮನೆಯೊಳಗೆ ಪ್ರವೇಶಿಸದಂತೆ ತಡೆಗಟ್ಟಲು ಮುಂಬಾಗಿಲಿನ ಚೌಕಟ್ಟಿನ ಎರಡೂ ಬದಿಗಳಲ್ಲಿ ಹೊಸ ವರ್ಷದ ದ್ವಿಪದಿ (Spring Couplets)ಗಳನ್ನು ಅಂಟಿಸುತ್ತಾರೆ. ಮನೆಯೊಳಗೆ ಹೊಸ ವರ್ಷದಲ್ಲಿ ಶುಭ ತರುವ ಹುಂಜ, ಹೂವು ಮತ್ತು ಪಕ್ಷಿ ಅಥಾವಾ ’ ಗ್ವಾನ್ ಯಿನ್ ’ ದೇವತೆ ಮತ್ತು ಎರಡು ಆರೋಗ್ಯವಂತ ಗಂಡು ಹುಡುಗರ ಚಿತ್ರಗಳಿರುವ ವರ್ಣಚಿತ್ರಗಳನ್ನು ಗೋಡೆಗಳ ಮೇಲೆ ತೂಗುಬಿಡುತ್ತಾರೆ. ಕಿಟಕಿಗಳ ಮೇಲೆ ಪುರಾಣ, ದಂತಕಥೆ ಅಥವಾ ಚೀನೀ ಸಂಗೀತ ನಾಟಕದ ದೃಶ್ಯಗಳಿರುವ ಕಾಗದದ ಕೆಂಪು ಬಣ್ಣದ ಕಟೌಟುಗಳನ್ನು ಹಚ್ಚುತ್ತಾರೆ. ಪ್ರತಿ ಕುಟುಂಬದಲ್ಲಿ ಅಜ್ಜ-ಅಜ್ಜಿಯರು, ತಂದೆ-ತಾಯಂದಿರು ಮತ್ತು ಹಿರಿಯರು ಕೆಂಪು ಲಕೋಟೆಗಳಲ್ಲಿ ಹಣವನ್ನಿಟ್ಟು ತಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಉಡುಗೊರೆಯಾಗಿ ಕೊಟ್ಟು, ಅವರಿಗೆ ಹೊಸ ವರ್ಷದಲ್ಲಿ ಆರೋಗ್ಯ, ಯಶಸ್ಸು, ಸಮೃದ್ಧಿ ಹಾಗೂ ಅದೃಷ್ಟಗಳು ದೊರಕಲೆಂದು ಆಶೀರ್ವದಿಸುತ್ತಾರೆ. ಈ ಕೆಂಪು ಲಕೋಟೆಗಳನ್ನು ಹೊಂಗಬಾವೊ (Hongbao) ಎಂದು ಕರೆಯುತ್ತಾರೆ.

ಚೀನೀ ಸಮುದಾಯದಲ್ಲಿ ಹೊಸ ವರ್ಷ ಮತ್ತು ಅದರ ಮುನ್ನಾ ದಿನವೆಂದರೆ ಕೌಟುಂಬಿಕ ಸಂಬಂಧದ ಕೊಂಡಿಗಳನ್ನು ಬೆಸೆದುಕೊಳ್ಳುವ ಒಂದು ವಿಶೇಷ ಸಂದರ್ಭವಿದ್ದಂತೆ. ಹೊಸ ವರ್ಷದ ಮುನ್ನಾ ದಿನದ ಸಂಜೆ ದೂರ ದೂರದಲ್ಲಿ ವಾಸವಾಗಿರುವ ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಕಲೆತು ಮಾಡುವ ವಿಶೇಷ ಭೋಜನ ಕೂಟವನ್ನು ಪುನರ್ಮಿಲನ ಭೋಜನ (Reunion Dinner) ಎಂದು ಕರೆಯುತ್ತಾರೆ. ಈ ಭೋಜನವು ನವ ವರ್ಷದ ಅತ್ಯಂತ ಮಹತ್ವದ ಸಂಪ್ರದಾಯ. ಚೀನೀಯರಲ್ಲಿ ಹೇರಳತೆಯ ಸಂಕೇತವಾದ ಮೀನು, ಚಟುವಟಿಕೆಯ ಸಂಕೇತವಾದ ಲೆಟ್ಯೂಸ್ ತರಕಾರಿ ಸೊಪ್ಪು, ಜ್ಞಾನದ ಸಂಕೇತವಾದ ಕಿರು ಈರುಳ್ಳಿಗಳು, ಪರಿಶ್ರಮ ಹಾಗೂ ಕಾರ್ಯತತ್ಪರತೆಗಳ ಸಂಕೇತವಾದ ಸೆಲರಿ (Celery) ತರಕಾರಿ, ಕೋಳಿ ಮತ್ತು ಬಾತುಕೋಳಿಗಳ ಮಾಂಸ, ಸಂಪತ್ತಿನ ಸಂಕೇತವಾದ ಕಣಕದ ಖಾದ್ಯ (dumplings) - ಇವು ಹಬ್ಬದ ಮುನ್ನಾ ದಿನದ ರಾತ್ರಿಯ ಭೋಜನಕೂಟದಲ್ಲಿ ಇರಲೇಬೇಕಾದ ವಿಶೇಷ ಭಕ್ಷ್ಯಗಳು.

ಆ ದಿನ ಸಂಜೆ ಸುಮಾರು ಎಂಟು ಗಂಟೆಗೆ ಹೊಸವರ್ಷವನ್ನು ಸ್ವಾಗತಿಸುವ ಸಾಂಪ್ರದಾಯಿಕ, ಜಾನಪದ ಹಾಗೂ ಪಾಪ್ ಸಂಗೀತ (pop music) ಸಮಾರಂಭಗಳು ಆರಂಭಗೊಂಡರೆ, ತೆರೆ ಬೀಳುವದು ಮಧ್ಯರಾತ್ರಿಯ ನಂತರವೇ. ಈ ಸಮಾರಂಭಗಳಲ್ಲಿ ಜನಪ್ರಿಯ ಹಾಡುಗಾರರು, ಹೆಸರಾಂತ ನರ್ತಕ - ನರ್ತಕಿಯರು ಹಾಗೂ ನುರಿತ ಲಾಗಪಟುಗಳು (Acrobats) ಪಾಲ್ಗೊಳ್ಳುತ್ತಾರೆ. ಘಂಟೆಯು ಚೀನೀಯರ ಹೊಸ ವರ್ಷದ ಸಾಂಪ್ರದಾಯಿಕ ಚಿನ್ಹೆಯಾಗಿದೆ. ಘಂಟೆಯ ನಾದ ದುರಾದೃಷ್ಟವನ್ನೆಲ್ಲ ಓಡಿಸಿ, ಉತ್ತಮ ಯೋಗವನ್ನು ತರುತ್ತದೆಯೆಂದು ಪ್ರತೀತಿಯಿದೆ. ಅಂತೆಯೇ ದೇವಸ್ಥಾನಗಳಲ್ಲಿ ಹೊಸ ವರ್ಷದ ಆಗಮನವನ್ನು ಸೂಚಿಸಲು ವಿಶೇಷ ಘಂಟೆಗಳನ್ನು ಬಾರಿಸುತ್ತಾರೆ.

ಹೊಸ ವರ್ಷದ ದಿನದಂದು ಮಾಡುವ ಒಳ್ಳೆಯ, ಶುಭ ಸೂಚಕ ಕೆಲಸಗಳು ವರ್ಷವಿಡೀ ಮಾಡುವ ಕೆಲಸಗಳ ಮೇಲೆ ಪರಿಣಾಮ ಬೀರುತ್ತವೆ ಎನ್ನುವದು ಚೀನೀಯರ ಧೃಡ ವಿಶ್ವಾಸ. ಅಂತೆಯೇ ಈ ದಿನ ಪ್ರಾರ್ಥನೆ, ಬಂಧು-ಬಳಗದ ಭೆಟ್ಟಿ, ಸಿಂಹದ ಹಾಗೂ ಡ್ರ್ಯಾಗನ್ ನೃತ್ಯಗಳ ವೀಕ್ಷಣೆ, ಸಾಂಪ್ರದಾಯಿಕ ಆಹಾರ ಸೇವನೆ- ಇವೇ ಮುಂತಾದ ಹರ್ಷದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೊಸ ವರ್ಷದ ಸ್ವಾಗತವು ಅದ್ದೂರಿಯ ಬೆಳಕಿನ ಪಟಾಕ್ಷಿಗಳ ಅದ್ಭುತ ಪ್ರದರ್ಶನಗಳಿಂದ ಪ್ರಾರಂಭಗೊಳ್ಲುತ್ತದೆ. ನಂತರ ತಮ್ಮ ಪೂರ್ವಜರಿಗೆ ಗೌರವ ತೋರಲು ಬಗೆ ಬಗೆಯ ಆಹಾರ, ತಿಂಡಿ, ತಿನಿಸುಗಳನ್ನು ಅರ್ಪಿಸುತ್ತಾರೆ. ಹಬ್ಬಕ್ಕಾಗಿ ಹೆಣ್ಣುಮಕ್ಕಳು ಕೆಂಪು ಬಣ್ಣದ ಚೌಂಗಸ್ಯಾಮ (Cheongsam) ಹಾಗೂ ಗಂಡುಮಕ್ಕಳು ಚೊಂಗ್ಶ್ಯಾನ (Changshan) ನ್ನು ಧರಿಸಿ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ನೆರೆ ಹೊರೆಯವರಿಗೆ ಗೊಂಗ್ಝಿ ಫಾ ಚಾಯ್ (Gong Xi Fa Cai) ಎಂದು ಹಾರೈಸುತ್ತ, ಜೋಡಿ ಕಿತ್ತಳೆ ಹಣ್ಣುಗಳ ವಿನಿಮಯದೊಂದಿಗೆ, ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾರೆ. ಹೊಸ ವರ್ಷದ ಮೊದಲ ದಿನದ ಮಧ್ಯಾನ್ಹದ ಹಾಗೂ ರಾತ್ರಿಯ ಊಟಗಳು ಕುಟುಂಬದ ಸದಸ್ಯರೆಲ್ಲರೂ ಜೊತೆಗೂಡಿ, ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯುವ ವಿಶೇಷ ಸಂದರ್ಭಗಳು. ಸಂಪತ್ತು, ಯಶಸ್ಸು ಮತ್ತು ಚೈತನ್ಯಗಳನ್ನು ಪ್ರತಿನಿಧಿಸುವ ಸಂಕೇತಗಳಾದ ಹೆರೆದ ತಾಜಾ ಮೀನು ಮತ್ತು ವೈವೀಧ್ಯಮಯ ತರಕಾರಿಗಳನ್ನೊಡಗೂಡಿದ 27 ಪದಾರ್ಥಗಳಿಂದ ಮಾಡಿದ ಪಚ್ಚಡಿ - ಯೀ ಸಾಂಗ (Yee Sang) ಅಥವಾ ಯು ಶೆಂಗ್ (Yu Sheng) ನ್ನು ಕುಟುಂಬದ ಸದಸ್ಯರೆಲ್ಲ ಚಾಪ್ ಸ್ಟಿಕ್ಕುಗಳ (chopsticks) ಸಹಾಯದಿಂದ ಟಾಸ್ ಮಾಡುತ್ತಾರೆ. ಇದು ಹೊಸ ವರ್ಷದುದ್ದಕ್ಕೂ ಯಶಸ್ಸು ಸಿಗಲೆಂದು ನೂರಾರು ವರ್ಷಗಳಿಂದ ಪಾಲಿಸಿಕೊಂಡು ಬಂದ ಪದ್ಧತಿ. ಇದನ್ನು ’ಯಶಸ್ಸಿನ ಟಾಸ’ (Prosperity Toss) ಎಂದು ಕರೆಯುತ್ತಾರೆ.

ಲಾಂದ್ರದ ಉತ್ಸವ’ (lantern festival)

ಸಂಜೆಯ ಹೊತ್ತು ಮನರಂಜನಾ ಕಾರ್ಯಕ್ರಮಗಳು, ಮೆರವಣಿಗೆಗಳು ಹಾಗೂ ಬೆಳಕಿನ ಪಟಾಕಿಗಳ ಪ್ರದರ್ಶನಗಳು ಎಲ್ಲೆಡೆ ನಡೆಯುತ್ತವೆ. ಮುಂದಿನ ಹದಿನೈದು ದಿನಗಳ ವರೆಗೆ ಬಂಧು ಮಿತ್ರರನ್ನು ಭೆಟ್ಟಿಯಾಗಿ ಹೊಸ ವರ್ಷದ ಶುಭಾಶಯಗಳನ್ನು ಕೋರುವದು, ಚೀನೀ ದೇವಾಲಯಗಳಲ್ಲಿ, ತಮ್ಮ ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸುವದು, ಸಾಂಪ್ರದಾಯಿಕ ಚಟುವಟಿಕೆಗಳಲ್ಲಿ ಭಾಗವಹಿಸುವದು- ಇವೇ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹದಿನೈದನೆಯ ದಿನದಂದು ಪ್ರಕಾಶಮಾನವಾದ ಸುಂದರ ಕಂದೀಲುಗಳನ್ನು ಹವೆಯಲ್ಲಿ ಹಾರಿ ಬಿಡುವದು ಅಥವಾ ನದಿ ಇಲ್ಲವೇ ಸಮುದ್ರಗಳಲ್ಲಿ ತೇಲಿಬಿಡುವದರೊಂದಿಗೆ, ಹಬ್ಬವು ಸಾಂಪ್ರದಾಯಿಕವಾಗಿ ಕೊನೆಗೊಳ್ಳುತ್ತದೆ. ಹದಿನೈದನೇ ದಿನವನ್ನು ’ ಲಾಂದ್ರದ ಉತ್ಸವ’ (lantern festival) ಎಂದು ಕರೆಯುತ್ತರೆ. ಅಂದು ಹಬ್ಬಕ್ಕಾಗಿಯೇ ವಿಶೇಷವಾಗಿ ತಯಾರಿಸಲಾದ ಅಕ್ಕಿ ಹಿಟ್ಟಿನ ಮೋದಕಗಳನ್ನು ಹೊಲುವ ಖಾದ್ಯ ಹಾಗೂ ಅನ್ನದ ಉಂಡೆಗಳನ್ನು ಊಟದಲ್ಲಿ ಬಡಿಸುತ್ತಾರೆ.

ಅನೇಕ ವರ್ಷಗಳಿಂದ ಸಿಂಗಾಪುರದಲ್ಲಿ ಚೀನೀಯರ ಹೊಸ ವರ್ಷದ ಮೊದಲನೆಯ ವಾರಾಂತ್ಯಕ್ಕೆ ರಾಷ್ಟ್ರೀಯ ಹಬ್ಬವೆಂದೇ ಪ್ರಸಿದ್ಧಿಯಾದ ಚಿಂಗೇ (Chingay) ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಈ ವರ್ಷದ ಚಿಂಗೇ ಮೆರವಣಿಗೆಗಳು ಫೆಬ್ರುವರಿ 7 ಮತ್ತು 8ರಂದು ಪ್ರದರ್ಶನಗೊಳ್ಳಲಿವೆ. ಈ ಬಹು ಜನಪ್ರಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾಲಂಕೃತ ತೆಪ್ಪಗಳು , ಡ್ರ್ಯಾಗನ್ ಮತ್ತು ಸಿಂಹದ ನೃತ್ಯಗಳು, ಗಣೆಗಳ ಮೇಲೆ ನಡೆಯುವವರು, ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿದ ಪ್ರದರ್ಶನಕಾರರು, ಸಂಗೀತ ಹಾಗೂ ನೃತ್ಯ ವೃಂದಗಳು, ವೂಷು ಪಟುಗಳು ಅಷ್ಟೇ ಅಲ್ಲದೇ, ಮನಮೋಹಕ ದೀಪಾಲಂಕಾರ ಮತ್ತು ಲೇಸರ್ ಬೆಳಕು ಮತ್ತು ಪಟಾಕಿಗಳ ಪ್ರದರ್ಶನಗಳನ್ನು ನೋಡಲು, ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “ಚೀನೀಯರ ಹೊಸ ವರ್ಷದ ಆಚರಣೆ ‘Gong Xi Fa Cai!’”

    1. ಮ. ಮೋ. ರಾವ್, ರಾಯಚೂರು

      ಚಿಣಿಯರೂ ಚಾಂದ್ರಮಾನ ಎಣಿಕೆ ಪದ್ಧತಿಯನ್ನು ಅನುಸರಿಸುತ್ತಾರೆಂದು ತಿಳಿಯಿತು. ತುಂಬ ವಿವರವಾದ ಸರಳ ಸೌಜನ್ಯತೆಯಿಂದ ಕುಡಿದ ಲೇಖನ. ಅಭಿನಂದನೆಗಳು.

  1. ಮ. ಮೋ. ರಾವ್, ರಾಯಚೂರು

    ಚಚೀನಿಯರೂ ಚಾಂದ್ರಮಾನ ಎಣಿಕೆ ಪದ್ಧತಿಯನ್ನು ಅನುಸರಿಸುತ್ತಾರೆಂದು ತಿಳಿಯಿತು. ತುಂಬ ವಿವರವಾದ ಸರಳ ಸೌಜನ್ಯತೆಯಿಂದ ಕುಡಿದ ಲೇಖನ. ಅಭಿನಂದನೆಗಳು.

    Reply

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai