ನಾನು ಮೊನಾಲೀಸಾ ಅಲ್ಲಾ..
ನಾನೇನು ನನ್ನ ಚೆಲುವ ಅರಳುಗಂಗಳನೇನು
ಮಾರಾಟಕಿಟ್ಟಿಲ್ಲ…
ನಮ್ಮದಿದು ಹೊಟ್ಟೆಪಾಡು..
ನೀವು ಅದಕೂ ಕಲ್ಲ ಹಾಕಿದಿರಲ್ಲ?
ನಾನು ಮಾಡದ ತಪ್ಪಿಗೆ ನಾ ಬಲಿಯಾದೆ..
ಅಪ್ಪ ಆಯ್ದು ತಂದ ರುದ್ರಾಕ್ಷಿಗಳ
ಸರ ಮಾಡಿ ಕೊಡುವ ಅವ್ವ…
ಅಪ್ಪನಿಗೆ ಕೆಲಸದ ಭಾರ ಅತಿಯಾಗಿ
ಈ ಬಾರಿ ನಾ ಸಂತೆಗೆ ಬಂದದ್ದೇ ತಪ್ಪಾಯಿತೇ?
ರುದ್ರಾಕ್ಷಿ ನೋಡದ, ಕೊಳ್ಳದ ಕಣ್ಣುಗಳು
ನನ್ನ ಮತ್ತೆ ಮತ್ತೆ ನೋಡಿದವು…
ನನ್ನ ಚೆಲುವ ಹಾಡಿ ಹೊಗಳಿದವು..
ಹುಚ್ಚೆದ್ದು ನನ್ನೊಂದಿಗೆ ಪೋಜು ಕೊಟ್ಟು
ನನ್ನ ರಾತ್ರಿ ಕಳೆದು ಬೆಳಗಾಗುವಷ್ಟರಲಿ
ಏರಿಸಿದ್ದವು ಆಗಸದ ಏಣಿ…
ನಮ್ಮ ಹಳ್ಳಿಯ ಕೇರಿಗಳಲಿ ನನ್ನದೇ ಮಾತು!
ವರ್ತಮಾನ ಪತ್ರ ತುಂಬ ನನ್ನದೇ ಚಿತ್ರ!
ಯಾರು ಯಾರೊಂದಿಗೋ ಫೋಟೊ!
ಕೆಲ ಮಾತುಗಳು ಕಿಚ್ಚ ಹಚ್ಚಿದರೆ,
ಕೆಲವು ಗಾಳಿ ಹಾಕಿದವು..
ಇನ್ನೂ ಕೆಲವು ಎಣ್ಣೆ ಸುರಿದವು..
ತಮ್ಮ ಬೋನವ ಕಾಸಿಕೊಂಡವು..
ಇಂದು ನಾನು ಮನೆಯಲ್ಲಿ ಬಂದಿ…
ಅಪ್ಪ ‘ಯಾಕವ್ವ, ನೀ ನಮ್ಮಂಥವರ
ಮನೆಯಲ್ಲಿ ಹುಟ್ಟಿದಿ? ಹೊಟ್ಟೆ ಉರಿಸಿದಿ?
ಇನ್ನು ನಿನ್ನ ಭವಿಷ್ಯವೇನು.
ಯಾರು ಮದುವೆ ಆದಾರು?’
ಎಂದು ಚಿಂತಿಸಿ ಕಣ್ಣೀರು ಹಾಕಿದ್ದ!
*****








2 thoughts on “ನಾನು ಮೊನಾಲೀಸಾ ಅಲ್ಲಾ..”
ಸದ್ಯದ ಜಾಲ ತಾಣಗಳ ಮಹಿಮೆಯಿಂದ ರಾತ್ರೋ ರಾತ್ರಿ ಸೆಲೆಬ್ರಿಟಿ ಆದಳು ರುದ್ರಾಕ್ಷಿ ಮಾರಲು ಬಂದ ಹುಡುಗಿ! ವರ್ತಮಾನದ ಕವಿತೆ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಅಭಿನಂದನೆಗಳು ಮೇಡಂ ಅವರಿಗೆ.
ಧನ್ಯವಾದಗಳು ವಿಶ್ವಧ್ವನಿ. 🙏