ತಣ್ಣನೆಯ ಗಾಳಿ, ಹಿತವಾದ ಬೆಳಕು, ಓಡುವಂತೆ ತೋರುವ ಚಂದಿರ, ಅವನನ್ನು ಹಿಂಬಾಲಿಸುವಂತೆ ತೋರುವ ಒಂದೋ ಎರಡೋ ನಕ್ಷತ್ರಗಳು, ಚಲಿಸುವ ಹತ್ತಿಯಂತಹ ಮೋಡಗಳನ್ನು ಪ್ರತಿ ಹುಣ್ಣಿಮೆಯಲ್ಲಿಯೂ ಹುಚ್ಚಿಯಂತೆ ನೋಡುತ್ತಾ ಸರಿ ರಾತ್ರಿಯವರೆಗೂ ಅಂಗಳದಲ್ಲಿ ಕುಳಿತಿರುತ್ತಿದ್ದ ನನ್ನನ್ನು ನೋಡಿ ಗಂಡ ಅದೆಷ್ಟು ಸಲ ಗೇಲಿ ಮಾಡುತ್ತಿದ್ದ. ಆದರೆ ಇಂದು ಹುಣ್ಣಿಮೆಯಾದರೂ ಅಂಗಳಕ್ಕಿಳಿಯುವಂತಿರಲಿಲ್ಲ. ಆಗಸವೇ ಕಳಚಿ ಬೀಳುವಂತೆ ಮಳೆ ಸುರಿಯುತ್ತಿತ್ತು, ಮನೆಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿದ್ದ ಶಾಲ್ಮಲಾ ನದಿಯ ಭೋರ್ಗರೆವ ಸಪ್ಪಳ ಕೇಳಿ ಕಿವಿ ಮುಚ್ಚಿಕೊಳ್ಳುವಂತಾಗುತ್ತಿತ್ತು. ಬೇಸಿಗೆಯಲ್ಲಿ ಸಳ ಸಳ ಸಪ್ಪಳ ಮಾಡುತ್ತ ಹಿತವಾಗಿ ಹರಿವ ಕೋಮಲೆಯಾದ ಶಾಲ್ಮಲಾ ಮೂರು ದಿನಗಳ ಮಳೆಗೆ ಅಬ್ಬರಿಸುತ್ತದೆಯಲ್ಲ ಎಂದುಕೊಂಡೆ.
ಮೊದಲೇ ಹಳೆಯ ಮನೆ, ಅಲ್ಲಲ್ಲಿ ಸೋರಿ ಒದ್ದೆಯಾದ ನೆಲ. ಮಳೆ ನೀರ ತಂಪಿಗೆ ನೆನೆದು ಕುಸಿದೇ ಹೋದರೆ ಎಂದು ಭಯ ಹುಟ್ಟಿಸುತ್ತಿದ್ದ ಗೋಡೆಯನ್ನು ದಿಟ್ಟಿಸುತ್ತ ಕುಳಿತೆ. ಚಿಮಣಿ ಬೆಳಕಿನಿಂದ ಹೊರಬರುವ ಹೊಗೆಯಾಗಲಿ, ಸುರಿವ ಮಳೆಯಾಗಲಿ ನನಗೇನು ಎನ್ನುವಂತೆ ನಿಶ್ಚಿಂತೆಯಿಂದ ಕಂಬಳಿ ಹೊದ್ದು ಮಲಗಿದ ಮಗ ರಾಮುವಿನೆಡೆ ಒಮ್ಮೆ ನೋಡಿದೆ. ನಾವಿರುವವವರೆಗೇನೋ ಇವನ ಬದುಕು ಸಾಗುತ್ತದೆ ಮುಂದೇನು? ಏಯ್ಯ.. ಎಂದೇನೋ ಒಂದು ಸಪ್ಪಳ ಹೊರಡಿಸಿ ಮಗ್ಗುಲಾದ ರಾಮು.. ಇಂತಹ ಸಪ್ಪಳ ಹೊರಡಿಸುವ ಹೊರತು ಒಂದೂ ಮಾತನಾಡಲಾರದ ಮಗನನ್ನು ವಾತ್ಸಲ್ಯದಿಂದಲೇ ನೋಡುತ್ತಿದ್ದಂತೆಯೇ ಕಂಠ ಉಬ್ಬಿ ಬಂದು ಕಣ್ಣೀರು ಹರಿಯಲಾರಂಭಿಸಿತು.. ‘ಮಾದೇವಿ, ಮಗ ರಾಮು ನೋಡಲ್ಲೆ ಒಳ್ಳೆ ಮನ್ಮಥಾ ಇದ್ದ ಹಾಂಗಿದ್ದಾ, ಆದ್ರೆಂತಾ ಮಾತೂ ಬತ್ತಿಲ್ಲೆ ಕಿವಿನೂ ಕೇಳ್ತಿಲ್ಲೆ’.. ಹೇಳಿದವರು ಒಬ್ಬಿಬ್ಬರಲ್ಲ.. ಊರಿನವರು, ನೆಂಟರಿಷ್ಟರು, ಕಂಡ ಕಂಡವರ ಬಾಯಲ್ಲೆಲ್ಲ ಇದೇ ಮಾತು. ‘ಅಯ್ಯೋ ಪಾಪ ಕಾಣ್ತು’ ಎಂಬ ರಾಗ, ಛೇ. ಕನಿಕರವೆಂಬುವುದು ಗಾಯದ ಮೇಲೆಳೆವ ಬರೆ ಎಂಬುದು ಜನರಿಗೆ ಅರ್ಥವೇ ಆಗುವುದಿಲ್ಲವೇನೊ. ಮೈಸೂರಿಗೆ ಹೋದವ್ರು ಇವ್ರು ಯಾವಾಗ ಬತ್ರ ಹ್ಯಾಂಗೆ ಬತ್ರ ಏನೇಂತ. ಎಂದು ಗೊಣಗುತ್ತ ಮನೆಯಲ್ಲಿ ಸೋರದೇ ಇದ್ದ ಜಾಗವನ್ನು ನೋಡಿ ಹಾಸಿಗೆ ಹಾಕಿಕೊಂಡು ಚಿಮಣಿಯನ್ನು ಆರಿಸಿ ಹೊದಿಕೆಯೊಳಗೆ ತೂರಿಕೊಂಡೆ. ಹೊರಗೆ ಮಳೆ ಸುರಿದಂತೆಯೇ ಮನದೊಳಗೂ ನೆನಪಿನ ಮಳೆ ಸುರಿಯಲಾರಂಭಿಸಿತ್ತು….
ಹೈಸ್ಕೂಲಿನವರಿಗೆ ಅಂತೂ ಇಂತೂ ಶಾಲಿಗೆ ಕಳಿಸಿದ್ದಾತು.. ಇನ್ನು ನಿನ್ನ ಮದ್ವೆ ಮಾಡಿ ಕೊಡದೆಯೇ ಕೂಸೆ ಎಂದು ಅಪ್ಪಯ್ಯ ಹೇಳಿದಾಗ ‘ಯನಗೀಗ್ಲೆ ಮದ್ವೆ ಬ್ಯಾಡಾ ಆನಿನ್ನು ಕಲಿತಿ’ ಎಂದು ಹಠ ಹಿಡಿದಿದ್ದೆ. ಪಾಶ್ರ್ವವಾಯುವಾಗಿ ಹಾಸಿಗೆ ಹಿಡಿದ ಅಪ್ಪ ಅಸಹಾಯಕತೆಯಿಂದ ನನ್ನನ್ನು ನೋಡುತ್ತಾ ‘ನಿನ್ನಣ್ಣ ಕಲಿಸಲ್ಲೆ ಒಪ್ಪಿದ್ರೆ ಕಲಿ’ ಎಂದ. ಅಣ್ಣಯ್ಯ ದುರು ದುರು ದಿಟ್ಟಿಸುತ್ತಾ ನನ್ನನ್ನು ನೋಡಿ ‘ನಿನ್ನ ಮದ್ವೆ ಆದ ಹೊರ್ತು ಆನು ಮದ್ವೆ ಆಪ ಹಾಂಗಿಲ್ಲೆ ಹೇಳ್ತು ಅಮ್ಮಾ. ಯನಗೆ ಮೂವತ್ತು ವರ್ಷಾಗ್ತಾ ಬಂತು. ತೆಪ್ಪಗೆ ಮದ್ವೆ ಮಾಡಿಕ್ಯಳಲ್ಲೆ ಒಪ್ಪಿಗ್ಯ. ನಾಳೆನಿಂದ ಜಾತ್ಕ ಹೊರಗೆ ಹಾಕ್ತಿ’ ಎಂದಾಗ ಅಳುತ್ತಾ ಎಂತಕ್ಕಾದ್ರೂ ಹೆಣ್ಣಾದ್ನನ ಎಂದುಕೊಳ್ಳುವುದರ ಹೊರತು ಮತ್ತೇನೂ ಮಾಡಲಾಗಲೇ ಇಲ್ಲ. ಒಂದೇ ತಿಂಗಳಿನಲ್ಲಿ ‘ಕೂಸಿನ ಜಾತಕ ಆಗ್ತು’ ಎಂದು ನೋಡಲು ಬಂದ ಹುಡುಗ ರಮೇಶ ಚಿಕ್ಕಂದಿನಲ್ಲೇ ಅಪ್ಪ ಅಮ್ಮನನ್ನು ಕಳೆದುಕೊಂಡ ಅನಾಥ. ನೋಡಲು ಕಟ್ಟುಮಸ್ತಾದ ಆಳು. ಗೆಳೆಯನೊಬ್ಬನ ಜೊತೆ ನಮ್ಮ ಮನೆಗೆ ಬಂದಿದ್ದ ಅವನು ‘ಯನಗೆ ಕೂಸು ಒಪ್ಪಿಗೆ ಎಂದು ತಿಳಿಸಿಯೇ ಹೋದ. ನಾವು ಒಪ್ಪಿಕೊಳ್ಳುವ ಮುನ್ನ ಅವನ ಬಗ್ಗೆ ವಿಚಾರಿಸಿದಾಗ ತಿಳಿದು ಬಂದಿದ್ದು ಇಷ್ಟು…… ಕನಕನಹಳ್ಳಿ ಪರಂಭಟ್ಟರು ರಮೇಶನಿಗೆ ದೂರದ ಸಂಬಂಧಿ. ‘ಪಾಪ ಯಾರು ದಿಕ್ಕಿಲ್ಲದವನು’ ಎಂದು ಕರುಣೆಯಿಂದ ತಮ್ಮ ಮೂವರು ಮಕ್ಕಳೊಂದಿಗೆ ಇರು ಬಾ ಎಂದು ಕರೆ ತಂದು ಏಳನೆಯ ಕ್ಲಾಸಿನವರೆಗೆ ಓದಿಸಿದರು.
ಅದ್ಯಾಕೋ ವಿದ್ಯೆ ರಮೇಶನ ತಲೆಗೆ ಹತ್ತಲಿಲ್ಲ. ಸದಾ ನಪಾಸಾಗುವ ಭೀತಿ.. ‘ಆನು ಶಾಲಿಗೆ ಹೋಗ್ನಿಲ್ಲೆ. ಜಮೀನು ಮನೆಲಿ ಕೆಲ್ಸಾ ಮಾಡ್ತಿ’ ಎನ್ನುತ್ತಲೇ ರಮೇಶ ಹಗಲಿಡೀ ಪರಂಭಟ್ಟರ ಜೊತೆ ಜಮೀನಿನಲ್ಲಿ ದುಡಿಯುತ್ತಿದ್ದ. ಬೆಳಿಗ್ಗೆ ರಾತ್ರಿ ಭಟ್ಟರ ಹೆಂಡತಿ ಸಾವಿತ್ರಕ್ಕನ ಜೊತೆ ಅಡುಗೆ ಮಾಡುವುದಕ್ಕೆ ಸಹಾಯ ಮಾಡುತ್ತಿದ್ದ. ಪರಂಭಟ್ರು ಸಾವಿತ್ರಕ್ಕಂಗೆ ಹೊಟ್ಟೆಲಿ ಹುಟ್ಟಿದ ಮಕ್ಕಳಷ್ಟೇ ರಮೇಶನ ಮೇಲೂ ಮಮತೆ. ‘ಕಷ್ಟಪಟ್ಟು ದುಡಿತಾ. ಒಂದ ಹನಿ ಆಲಸ್ಯ ಇಲ್ದೆ ದುಡಿಯ ಮಾಣಿ ರಮೇಶ’ ಎಂದು ಕಂಡವರ ಮುಂದೆಲ್ಲ ಹೊಗಳುತ್ತಿದ್ದರು. ಪರಂಭಟ್ರು ಕೃಷಿ ಕೆಲ್ಸದಲ್ಲಿ ಬಲು ಜಾಣರು. ಸೊಪ್ಪು ಕಡಿಯದು, ಹುಲ್ಲ ಕೊಯ್ಯದು, ದನಾ ಕರಿಯದು, ಗದ್ದೆ ಕೊಯ್ಲು, ಗೊಣವೆ ಕಟ್ಟದು..ಹಿಂಗೆ ತಮಗೆ ಬರುವ ಎಲ್ಲ ಕೆಲಸಗಳನ್ನೂ ರಮೇಶಂಗೆ ಕಲ್ಸಿದ್ರು. ಸಾವಿತ್ರಕ್ಕ ಸಣ್ಣಾ ಪುಟ್ಟ ಒಗ್ಗರಣೆ ಹಾಕದ್ರಿಂದಾ ಹಿಡಿದು ಮದುವೆ ಮುಂಜಿ ಕಾರ್ಯಕ್ಕೆ ಅಡುಗೆ ಮಾಡುವವರೆಗಿನ ಕೆಲ್ಸ ಕಲ್ಸಿತ್ತು. ‘ಮದ್ವೆ ವಯಸ್ಸಿಗೆ ಬಂದಾಗ ನಿಂದು ಅಂತ ಒಂದ ಮನೆ ಬೇಕಾ ಮಾಣಿ’ ಎಂದು ತಮ್ಮದೇ ಒಂದೆಕರೆಗದ್ದೆಯನ್ನು ರಮೇಶನ ಹೆಸರಿಗೆ ಬರೆದಿದ್ದರು
ಗದ್ದೆಯಂಚಿಗೆ ಇರುವ ತಮ್ಮ ಹಳೆಯ ಮನೆಯನ್ನು ವಾಸ್ತವ್ಯ ಹೂಡುವುದಕ್ಕೆ ಬಿಟ್ಟುಕೊಟ್ಟಿದ್ದರು. ಚೋಲೋತ್ನಾಗಿ ದುಡಿತಾ ಎನ್ನುವುದೇ ರಮೇಶನಿರುವ ಮುಖ್ಯವಾದ ಅರ್ಹತೆಯಾಗಿತ್ತು. ಇಂತಹ ಹಲವು ವಿಷಯ ತಿಳಿದ ಮೇಲೆಯೂ ನಾನೂ ರಮೇಶನನ್ನು ಒಪ್ಪಿಕೊಂಡಿದ್ದೆ. ನಮ್ಮೂರಿನ ಶಂಭುಲಿಂಗನ ದೇವಸ್ಥಾನದ ಆವರಣದಲ್ಲಿ ಸರಳವಾಗಿ ಮದುವೆಯಾಗಿ ಊರಿನವರು ಸಂಬಂಧಿಗಳೆಲ್ಲ ಪಾಯಸದ ಊಟ ಉಂಡು ಹರಸಿ ಹೋದರು. ಪರಂಭಟ್ರು, ಸಾವಿತ್ರಕ್ಕನೇ ಮುಂದಾಗಿ ಮನೆ ತುಂಬಿಸಿಕೊಳ್ಳುವ ಕಾರ್ಯ ಮಾಡಿದರು. ರಮೇಶನೊಂದಿಗೆ ಸಂಸಾರ ಆರಂಭಿಸಿದೆ. ಮನೆಯಲ್ಲಿ ಬಡತನವಿದ್ದರೂ ಊಟಕ್ಕೆ ಕೊರತೆಯಾಗದಿರುವಷ್ಟು ಸಾಮಾನು ಸರಂಜಾಮು ಹೊಂದಿಸಿಕೊಡುವ ರಮೇಶನನ್ನು ಕಂಡರೆ ನನಗೂ ಗೌರವ ಆದರ ಪ್ರೀತಿಗಳು ಹುಟ್ಟಿಕೊಂಡವು. ಊರಿನಲ್ಲಿ ಯಾರ ಮನೆಯಲ್ಲಿ ಮುದುವೆ ಮುಂಜಿಯಾಗಲಿ ಚಪ್ಪರ ಹಾಕುವುದರಿಂದ ಅಡುಗೆ ತಯಾರಿಯವರೆಗೆ ಯಾವುದೇ ಕೆಲಸಕ್ಕೆ ಕರೆದರೂ ರಮೇಶ ಉತ್ಸಾಹದಿಂದಲೇ ಹೋಗುತ್ತಿದ್ದ. ಕೃಷಿ ಕಾಯಕದಲ್ಲಿಯೂ ಅಷ್ಟೇ ಅಡಿಕೆ ಆರಿಸುವುದರಿಂದ ಕೊನೆ ಹೊರುವವರೆಗಿನ ಎಲ್ಲ ಕೆಲಸವನ್ನು ಬಲ್ಲವನಾಗಿದ್ದರಿಂದ ಎಲ್ಲರೂ ಕರೆದು ಕೆಲಸಮಾಡಿಸುತ್ತಿದ್ದರು. ಅಪ್ಪ ಅಮ್ಮ ‘ಇನ್ನೂ ಸ್ವಲ್ಪ ಅನುಕೂಲಸ್ಥರ ಮನೆ ಹುಡುಕಕ್ಕಾಗಿತ್ತೆ ನಿಂಗೆ’ ಎಂದು ಒಮ್ಮೊಮ್ಮೆ ಹಲುಬುತ್ತಿದ್ದರು.. ‘ನಿಂಗ ನೊಂದಕಳಡಿ ದುಡಿದು ತಿಂಬದ್ರಲ್ಲಿ ತಪ್ಪೆಂತ ಇದ್ದು ಯಂಗ ಆರಾಮಿದ್ಯ’ ಎಂದು ಸಮಾಧಾನಪಡಿಸುತ್ತಿದ್ದೆ. ಮದುವೆ ಆಗಿ ವರುಷ ತುಂಬುವಷ್ಟರಲ್ಲಿ ಬಸುರಿಯಾಗಿದ್ದೆ.
ರಮೇಶನಿಗೆ ಎಲ್ಲಿಲ್ಲದ ಹಿಗ್ಗು ‘ನೀ ಇನ್ನು ಹೆಚ್ಗೆ ಕೆಲಸಾ ಮಾಡದು ಬ್ಯಾಡಾ, ಈ ನಮನಿ ವಾಂತಿ ಮಾಡ್ತೆ ಆರಾಮಿರು’ ಎನ್ನುತ್ತಾ ಬೆಳಗಿನ ತಿಂಡಿ ಮಾಡುವುದರೊಂದಿಗೇ ಅಡುಗೆಯನ್ನೂ ಮಾಡಿ ಮುಗಿಸಿ ಹೊರಗಿನ ಕೆಲಸಕ್ಕೆ ಹೋಗುತ್ತಿದ್ದ. ಐದು ತಿಂಗಳು ಮುಗಿಯುವುದರೊಳಗೆ ಅಪ್ಪನ ಸಾವಿನ ಸುದ್ದಿ ಬಂತು. ಪರಾಧೀನವಾಗಿ ಯಾತನೆ ಅನುಭವಿಸುತ್ತಿದ್ದವನು ಸತ್ತು ಸಂಕಟದಿಂದ ಪಾರಾದನೆಂದು ಉಳಿದವರು ಹೇಳಿದರೂ ಕೊಂಚವೂ ಬೇಸರವಿಲ್ಲದೇ ಅವನ ಸೇವೆ ಮಾಡುತ್ತಿದ್ದ ಅಮ್ಮ ಮಾತ್ರ ಗಂಡನ ಸಾವಿನ ಕೊರಗು ಹಚ್ಚಿಕೊಂಡು ಮೂಲೆ ಸೇರಿದಳು. ಅದನ್ನೆಲ್ಲ ಗಮನಿಸಿದ ರಮೇಶ ‘ಅತ್ತೆ ನಿನ್ನ ಮಗಳನ್ನ ಒಬ್ಬಳನ್ನೇ ಬಿಟ್ಟಿಕ್ಕೆ ಹೊರಗೆ ಕೆಲಸಕ್ಕೆ ಹೋಗದು ಕಷ್ಟ ಅನ್ನಿಸ್ತು ಯನಗೆ ನೀ ಯಮ್ಮನಿಗೆ ಬಾ’ ಎಂದು ಒತ್ತಾಯಿಸಿ ದಿನಕಾರ್ಯ ಮುಗಿದೊಡನೆ ಅಮ್ಮನನ್ನು ನಮ್ಮ ಮನೆಗೆ ಕರೆತಂದಿದ್ದ. ‘ಪೀಡೆ ತೊಲಗಿತು’ ಎಂಬಂತೆ ನಡೆದುಕೊಂಡ ಅಣ್ಣ ನನ್ನನ್ನು ಹೋಗಲಿ ಅಮ್ಮನನ್ನು ಮಾತಾಡಿಸುವುದಕ್ಕೂ ನಮ್ಮ ಮನೆಗೆ ಬರಲೇ ಇಲ್ಲ. ನವಮಾಸಗಳು ಕಳೆದು ಶಿರಸಿಯ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಯಿತು. ಮಗು ಆರೋಗ್ಯವಾಗಿತ್ತು, ಮುದ್ದುಮುದ್ದಾಗಿತ್ತು. ಮೊಮ್ಮಗನ ಆಗಮನದ ನಂತರ ಅಮ್ಮನೂ ಕೊಂಚ ಗೆಲುವಾದಳು. ಹಿಳ್ಳೆ ಬಾಣಂತಿ ಕೆಲಸವನ್ನೆಲ್ಲ ನಿಭಾಯಿಸಿದಳು. ‘ನಿನ್ನ ಬಾಣಂತನ ಚಳಿಗಾಲದಲ್ಲಿ ಬಂದಿದ್ದು ಚೊಲೋ ಆತು ಕೂಸೆ, ಮಾಣಿ ಅಷ್ಟೆಲ್ಲಾ ಉಚ್ಚೆ ವಸ್ತ್ರನೇ ಮಾಡತ್ನಿಲ್ಲೆ, ತೊಳೆದು ಹಾಕಿದ ಬಟ್ಟೆ ಎಲ್ಲ ಲಗೂ ಲಗೂ ಒಣಗ್ತು’ ಎನ್ನುವಂತಹ ಪುಣ್ಣ ಕಾರಣಗಳಿಗೆಲ್ಲ ಖುಷಿಪಟ್ಟುಕೊಳ್ಳುತ್ತಿದ್ದ ಅಮ್ಮನನ್ನು ರಮೇಶನೂ ತಾಯಿಯಂತೆಯೇ ಆದರಿಸುತ್ತಿದ್ದ. ಮಗುವಿಗೆ ರಾಮೂ ಎಂದು ಅಮ್ಮನೇ ಹೆಸರಿಟ್ಟಳು. ‘ಅತ್ತೆ ಮಗಂಗೆ ಹ್ಯಾಂಗೂ ಮದುವೆ ಮಾಡಿದ್ದೆ ಅವಂಗೆ ಹೆಂಡ್ತಿ ಅಡುಗೆ ಮಾಡಿ ಹಾಕ್ತು ಹ್ಯಾಂಗೂವಾ ನೀ ಯಂಗಳ ಸಂತಿಗೆ ಒಳಕಂಡು ಮೊಮ್ಮಗನ್ನ ಆಡಿಶ್ಗ್ಯಂಡಿರು’ ಎನ್ನುತ್ತಿದ್ದ. ಸಿಡುಕ ಮಗನಿಗಿಂತ ಪ್ರೀತಿಸುವ ಅಳಿಯ ಅಮ್ಮನಿಗೂ ಇಷ್ಟವಾದಂತಿತ್ತು. ‘ಅಕ್ಕು ಹಾಂಗೇ ಮಾಡ್ತಿ’ ಎನ್ನುತ್ತಾ ಅಮ್ಮ ತಲೆ ಆಡಿಸುತ್ತಿದ್ದಳು. ‘ಇದ್ದರೆ ಇರಲವ್ವ ಈ ಕೂಸು ನನಗಿರಲಿ ಕೆಟ್ಟರೆ ಕೆಡಲಿ ಮನೆ ಕೆಲಸ ಕಂದನಂತೆ ಮಕ್ಕಳಿರಲವ್ವಾ ಮನಿ ತುಂಬಾ’ ಎಂದು ಹಾಡು ಹೇಳುತ್ತಾ ಮೊಮ್ಮಗನನ್ನು ಆಡಿಸುತ್ತಿದ್ದಳು.
ಮೇ ತಿಂಗಳಿನ ಕೊನೆಯ ವಾರದಲ್ಲಿ ಅದೊಂದು ದಿನ ಗುಡುಗು ಸಿಡಿಲು ಸಮೇತ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಅಜ್ಜಿಯ ಮಡಿಲಿನಲ್ಲಿ ಆಡುತ್ತಿದ್ದ ಮೊಮ್ಮಗ ಬೊಚ್ಚು ಬಾಯಿ ಬಿಟ್ಟು ನಗುತ್ತಿದ್ದ. ‘ಇಂಥಾ ಭಯಂಕರ ಸಪ್ಪಳಕ್ಕೂ ಯನ್ನ ಮಗ ಒಂದ ಚೂರು ಹೆದರತ್ನಿಲ್ಯಲೇ ಅಮ್ಮಾ’ ಎಂದೆ ಹೆಮ್ಮೆಯಿಂದ. ಮೊಮ್ಮಗನೆಡೆಗೆ ಪರೀಕ್ಷಕ ದೃಷ್ಟಿಯಿಂದ ನೋಡುತ್ತಿದ್ದ ಅಮ್ಮನ ಮೊಗ ಯಾಕೋ ಕಪ್ಪಿಟ್ಟಿತ್ತು. ಮಗುವಿನ ಕಿವಿ ಮುಚ್ಚುವಂತೆ ಕಟ್ಟಿದ ಟೊಪ್ಪಿಯನ್ನು ಬಿಚ್ಚಿ ಕಿಡಕಿಯಾಚೆಗೆ ಕಾಣುವ ಆಗಸದೆಡೆಗೆ ಒಮ್ಮೆ ಮಗುವಿನ ಕಡೆಗೆ ಒಮ್ಮೆ ನೋಡಲಾರಂಭಿಸಿದಳು. ಧಡ್ ಧಡಲ್ ಎಂಬ ಸಪ್ಪಳ ದೀಪಾವಳಿಯಲ್ಲಿ ಹಚ್ಚಿದ ಸರ ಪಟಾಕಿಯಂತೆ ಸತತವಾಗಿ ಕೇಳಿಸಿತು. ಮಗು ನಗುತ್ತಿತ್ತು ಅಮ್ಮನ ಕಣ್ಣಲ್ಲಿ ಧಾರಾಕಾರವಾಗಿ ನೀರು! ಮಗುವನ್ನೆತ್ತಿಕೊಂಡು ದೇವರ ಪೀಠದೆದುರು ಮಲಗಿಸಿ ನಮಸ್ಕರಿಸಿದಳು. ‘ದೇವರೇ ನೀನೇ ಕಾಯಪ್ಪಾ’ ಎಂದು ಸಶಬ್ದವಾಗಿ ನಿಟ್ಟುಸಿರಿಟ್ಟಳು. ‘ಎಂತಾ ಆತೆ ಅಮ್ಮಾ ಎಂತೆಂತೋ ಮಾಡ್ತಾ ಇದ್ದೆ’ ಎಂದು ಗಾಭರಿಯಿಂದ ಅಮ್ಮನ ಹೆಗಲು ಮುಟ್ಟಿದೆ. ‘ನೀನು ಮನಸ್ಸು ಗಟ್ಟಿ ಮಾಡ್ಕ್ಯ ಆನೊಂದು ವಿಷ್ಯಾ ಹೇಳ್ತಿ’ ಎಂದ ಅಮ್ಮನ ಮಾತು ಗುಹೆಯಿಂದ ಬಂದಂತಿತ್ತು. ‘ಹೂ ಅದೆಂತ ಹೇಳತ್ಯ ಹೇಳು’ ಎಂದೆ. ‘ನಾಳೆ ನಿಂಗ ಇಬ್ರೂ ಮಗನ್ನ ಕರಕಂಡು ಆಸ್ಪತ್ರೆಗೆ ಹೋಗಿ ಬನ್ನಿ, ಪಾಪೂಂಗೆ ಕಿವಿ ಕೇಳತಿಲ್ಯನ ಅನ್ನಿಸ್ತಾ ಇದ್ದು ಯನಗೆ. ಆರು ತಿಂಗಳದ ಮಗು ಇಷ್ಟು ಗಲಾಟಿಗೆ ಬೆಚ್ಚಿ ಬೀಳತ ಅನ್ನದು ಯಗಿದ್ದ ಅನುಭವಾ. ಮಾಣಿ ಅಳಲ್ಲೂ ಸಣ್ಣಗೆ ಅಳತ ಮಾತೂ ಬತ್ಯ ಇಲ್ಯ ಎಂತೇನ.. ಎಂದು ಅಳುಕುತ್ತಲೇ ಹೇಳಿದ ಅಮ್ಮನ ಮಾತನ್ನು ನಾನು ಸುತಾರಂ ಒಪ್ಪಲೇ ಇಲ್ಲ. .. ‘ಎಂತಾರು ಹೇಳಡ್ದೆ ಅಮ್ಮಾ’ ಮೊದಲಬಾರಿಗೆ ಹೆತ್ತವಳೆಂಬುದನ್ನೂ ಮರೆತು ಗದರಿದೆ. ಮಗನನ್ನ ಅವಳ ಕೈಯಿಂದ ಕಸಿದು ತಬ್ಬಿಕೊಂಡೆ ಮಗು ಮುದ್ದಾಗಿ ನಕ್ಕು ಪುಟ್ಟ ಕೈಬೀಸಿ ಬಾಗಿದ್ದ ನನ್ನ ಕೆನ್ನೆಗೆ ಪುಟ್ಟ ಪೆಟ್ಟು ಕೊಟ್ಟಿತು.
ಅಮ್ಮ ಹೇಳಿದ್ದು ಸುಳ್ಳಾಗಲಿ ದೇವರೇ ಮಗುವನ್ನು ಎದೆಗವಚಿಕೊಂಡಾಗ ಕಣ್ಣೀರ ಧಾರೆಯೇ ಹರಿದಿತ್ತು. ಇವೆಲ್ಲವನ್ನು ನೋಡುತ್ತಿದ್ದ ರಮೇಶ ‘ಹಾಂಗೆಂತ ಆಗಿದ್ದು ಸುಳ್ಳು, ಕಂಗಾಲಾಗಡಾ ನಾಳೆನೇ ಆಸ್ಪತ್ರೆಗೆ ಹೋಗಿ ಬಪ್ಪನ. ನಿನ್ನ ಅಮ್ಮ ನಮಗೆಂತಾ ಕೆಟ್ಟದ್ದು ಬಯಸ್ತ. ನಮ್ಮ ಒಳ್ಳೆಯದಕ್ಕೇ ಹಿರಿಯಂದಿಕ್ಕ ಹೇಳದು’ ಎಂದು ಸಮಾಧಾನ ಹೇಳಿದ. ನಾವೂ ಪರೀಕ್ಷೆ ಮಾಡನ, ದೇವರ ಮನೆಲಿದ್ದ ಗಂಟೆ ಜಾಗಟೆ ಶಂಖ ಮೂರೂ ತಗಂಡು ಬನ್ನಿ. ಪಾಪೂನ ಹತ್ರ ಸಪ್ಪಳ ಮಾಡಿ ಎಂದೆ. ರಮೇಶ ಆಗ್ಲಿ ಮಾರಾಯ್ತಿ ಎನ್ನುತ್ತಾ ಗಂಟೆ ತೂಗಿದ ಜಾಗಟೆ ಬಾರಿಸಿದ, ಶಂಖವನ್ನೂ ಊದಿದ. ಮಗು ಮಾಮೂಲಾಗಿ ಕೈ ಕಾಲು ಕುಣಿಸಿ ಆಡುತ್ತಿತ್ತೆ ಹೊರತು ಸಪ್ಪಳವನ್ನು ಗ್ರಹಿಸಿದಂತೆ ಕಾಣಿಸಲಿಲ್ಲ. ವಿಷಯದ ಗಂಭೀರತೆ ಅರ್ಥವಾಗಿ ರಮೇಶನೂ ಕುಸಿದು ಕುಳಿತ. ಆರ್ತ ಭಾವದಿಂದ ಅಮ್ಮನೆಡೆ ನೋಡಿದೆ. ಸಮೀಪ ಬಂದ ಅಮ್ಮ ನೆತ್ತಿ ಸವರಿ ‘ಬಂದಿದ್ದೆಲ್ಲ ಎದುರಿಸದೇ ಜೀವ್ನಾ ಮಗಳೇ’ ಹಗುರಾಗಿ ತಬ್ಬಿಕೊಂಡಳು. ಅವಳ ಕಣ್ಣೀರು ನನ್ನ ನೆತ್ತಿಯ ಮೇಲೆ ನನ್ನ ಕಣ್ಣೀರು ಮಗುವಿನ ಮೇಲೆ. ಏನೂ ಅರಿಯದ ಕಂದಮ್ಮ ಮಡಿಲೊಳಗೆ ಆಗಾಗ ನಗುತ್ತಾ, ಅಳುತ್ತಾ, ಆಟವಾಡುತ್ತಾ ಸುಸ್ತಾಗಿ ಮಲಗಿತು. ನಮ್ಮ ಭಯ ನಿಜವಾಗಿತ್ತು. ಮರುದಿನ ಶಿರಸಿಯ ಟಿ.ಎಸ್ ಎಸ್ ಆಸ್ಪತ್ರೆಯಲ್ಲಿ ಇ.ಎನ್.ಟಿ. ಸ್ಪೆಶಲಿಸ್ಟ ಮಗುವನ್ನು ಹಲವು ಪರೀಕ್ಷೆಗಳಿಗೆ ಒಡ್ಡಿದರು. ನಂತರ ಅವರು ‘ಮಗುವಿಗೆ ಕಿವಿ ಕೇಳಿಸುವುದಿಲ್ಲ, ಮಿದುಳಿನಿಂದ ಕಿವಿಯ ಭಾಗದಲ್ಲಿರುವ ನರಗಳಿಗೇ ಶಕ್ತಿ ಕಡಿಮೆ. ಹಾಗಾಗಿ ಮಾತೂ ಬರುವುದಿಲ್ಲ. ಇದು ಚಿಕಿತ್ಸೆ ಇಲ್ಲದ ಪರಿಸ್ಥಿತಿ ನೀವು ಯಾವ ಆಸ್ಪತ್ರೆಗೆ ಹೋದರೂ ಮಗುವಿನ ಸ್ಥಿತಿಯಲ್ಲಿ ಬದಲಾವಣೆಯಾಗುವುದಿಲ್ಲ, ಆದರೆ ಉಳಿದಂತೆ ಮಗು ತುಂಬಾ ಹೆಲ್ದಿಯಾಗಿದೆ. ಅದನ್ನು ಯೋಗ್ಯ ರೀತಿಯಲ್ಲಿ ಬೆಳೆಸುವುದು ಹೇಗೆ ಎಂದು ವಿಚಾರ ಮಾಡಿ ಎಂದು ರಮೇಶನ ಹೆಗಲ ಮೇಲೆ ಕೈ ಇಟ್ಟರು. ನಿಮ್ಮ ಹೆಂಡತಿ ತುಂಬಾ ಕಂಗಾಲಾಗಿದ್ದಾರೆ ನೀವು ಅವರಿಗೆ ಧೈರ್ಯ ಹೇಳಿ’ ಎಂದರು.
‘ದೇವರೇ ನನ್ನ ಮಗಾ ಏನು ತಪ್ಪು ಮಾಡಿತ್ತು ಹೇಳಿ ಈ ಶಿಕ್ಷೆ ಕೊಟ್ಟೆ? ಹೆತ್ತವ್ವು ಯಂಗಳೂ ಯಾರಿಗೂ ಕೇಡು ಬಯಸಿದವ್ವಲ್ಲಾ’ ಎಂದು ಆಘಾತದಿಂದ ಒಂದೇ ಸಮನೆ ಹಲುಬುತ್ತಿದ್ದೆ. ‘ನೋಡು ಜಗತ್ತಿನಲ್ಲಿ ಯಾರಿಗೂ ಬರದೇ ಇದ್ದ ಕಷ್ಟ ನಮಗೆ ಬಂಜಿಲ್ಲೆ ನಿನ್ನ ಹಾಂಗೆ ಅಂಗವೈಕಲ್ಯ ಇರುವ ಮಕ್ಕಳ ಅಪ್ಪ ಅಮ್ಮ ಎಲ್ಲರೂ ನಿನ್ನ ಹಾಂಗೇ ವಿಚಾರ ಮಾಡಿರೆ ಕಂಗಾಲಾದ್ರೆ ಆ ಮಕ್ಕಳೆಲ್ಲ ಬೀದಿಲೇ ಇರಕ್ಕಾಗಿತ್ತು. ಎಷ್ಟೋ ಜನ ಇಂತಹ ಮಕ್ಕಳ ಪಾಲಕರು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು ಮಕ್ಕಳನ್ನು ಯಾವ್ಯಾವುದೋ ಸಾಧನೆ ಮಾಡಲ್ಲೆ ಹಚ್ಚಿದ್ದ. ನಾವೂ ಅಂಥದ್ದೆಂತಾದ್ರೂ ವಿಚಾರ ಮಾಡನ, ಸಧ್ಯಕ್ಕೆ ಮನಿಗೆ ಹೋಪನ ನಡಿ’ ಎಂದು ಧೈರ್ಯ ಹೇಳಿದ್ದ ರಮೇಶ. *
ದಿನಗಳೆದಂತೆ ಸತ್ಯ ಒಪ್ಪಿಕೊಳ್ಳುವುದರ ಹೊರತು ನಮಗೆ ಬೇರೆ ಮಾರ್ಗವೇ ಇರಲಿಲ್ಲ. ಮಗು ದೊಡ್ಡದಾದಂತೆ ಸನ್ನೆಯ ಮೂಲಕವೇ ತನಗೆ ಬೇಕಾದದ್ದನ್ನು ಹೇಳಲಾರಂಭಿಸಿತು. ತುಂಟನಾಗಿದ್ದ ಮಗು ಬಿದ್ದರೂ ಗಟ್ಟಿಯಾಗಿ ಅಳುವುದಿಲ್ಲವಾದ ಕಾರಣ ಸದಾ ಅವನನ್ನು ಗಮನಿಸುತ್ತಲೇ ಇರಬೇಕಾಗುತ್ತಿತ್ತು…. ಆರು ವರ್ಷವಾದಾಗ ಮಗು ಚೂಟಿಯಾಗಿದ್ದರೂ ಊರಿನಲ್ಲಿರುವ ಶಾಲೆಗೆ ಹೆಸರು ಹಚ್ಚಿಕೊಳ್ಳಲು ಶಿಕ್ಷಕರು ಒಪ್ಪಿಕೊಳ್ಳಲಿಲ್ಲ. ಇಂಥವರಿಗೆ ನಗರಗಳಲ್ಲಿ ವಿಶೇಷ ಶಾಲೆಗಳಿರುತ್ತವೆ, ಅಲ್ಲಿ ಬೇಕಾದರೆ ಸೇರಿಸಿ ಎಂದು ನಿರ್ಧಾಕ್ಷಿಣ್ಯವಾಗಿ ಹೇಳಿದರು.
‘ಇದ್ದೂರನ್ನು ಬಿಟ್ಟು ನಗರ ಸೇರುವಷ್ಟು ಆರ್ಥಿಕ ಬಲ, ವಿದ್ಯೆಯ ಬಲ ಎರಡೂ ನಮಗಿಲ್ಲೆ ಶಾಲೆಲಿ ಕಲತ್ರೊಂದೇ ಕಲತಾಂಗಲ್ಲ. ನಮಗೆ ಗೊತ್ತಿದ್ದಿದ್ದನ್ನೇ ಕಲಸನ. ಬದುಕಲ್ಲೆ ಸಾಕು. ರಮೇಶ ಜಿದ್ದಿಗೆ ಬಿದ್ದಂತೆ ಮಗನಿಗೆ ಕಲಿಸಲಾರಂಭಿಸಿದ. ಶಾಲ್ಮಲಾ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವಲ್ಲಿ ಕರೆದುಕೊಂಡು ಹೋಗಿ ಈಜಲು ಕಲಿಸುತ್ತಿದ್ದ. ಮಗಾ ಇನ್ನೊಂದು ಸ್ವಲ್ಪ ದೊಡ್ಡಾದ ಮೇಲೆ ಅಡುಗೆ ಮಾಡದನ್ನೂ ಕಲಿಸೇ ಮಗಂಗೆ’ ಎನ್ನುತ್ತಿದ್ದ. ಅಮ್ಮ ಅಳಿಯನ ಪಕ್ಷಕ್ಕೆ ಸೇರಿದಳು. ಹೂ ಕೊಯ್ಯದು, ದೇವರ ಪೂಜೆ ಮಾಡದು, ಕೊಟ್ಟಿಗೆಯ ದನ ಕರುಗಳಿಗೆ ನೀರು ಹುಲ್ಲು ಹಾಕಿಸದು.. ಹೀಗೆ ಪ್ರತಿ ಕೆಲಸದಲ್ಲೂ ನಾನೂ ಅಮ್ಮನೂ ಮಗನನ್ನು ಒಡಗೊಂಡೇ ಕೆಲಸ ಮಾಡುತ್ತಿದ್ದೆವು. ಮಗನಿಗೆ ಏಳು ವರ್ಷವಾಗಿತ್ತು. ಅದೊಂದು ದಿನ ‘ಮಗಾ ಒಳ್ಳೆ ಮೀನಿನ ಹಾಂಗೆ ಈಜು ಹೊಡಿತಾ ನಾಳೆ ನೀನು ಅಮ್ಮ ಇಬ್ರೂ ಬನ್ನಿ ನೋಡಲಕ್ಕಡಿ’ ಎಂದು ಗಂಡ ಹೇಳಿದಾಗ ಅರೆ ಮನಸ್ಸಿಂದಲೇ ಮರುದಿನ ನದಿ ದಡಕ್ಕೆ ಹೋದೆ. ಎಳೆ ಬಿಸಿಲಿಗೆ ನಿರ್ಮಲವಾದ ನೀರು ಸಳ ಸಳನೇ ಹರಿಯುತ್ತಿತ್ತು. ಅಪ್ಪ ಮಗ ಇಬ್ಬರೂ ಉತ್ಸಾಹದಿಂದ ಸ್ಪರ್ಧೆಗೆ ಬಿದ್ದವರಂತೆ ಈಜಿದರು. ನೋಡ ನೋಡುತ್ತಾ ಆನಂದಭಾಷ್ಪ ಹರಿಯಿತು.
‘ಮಗಂಗೆ ಮಾತು ಬತ್ತಿಲ್ಲೆ ಕಿವಿ ಕೇಳತಿಲ್ಲೆ ಎನ್ನುವ ನೋವು ಸಂಕಟ ಯನ್ನ ಹಾಂಗೇ ನನ್ನ ಗಂಡಂಗೂ ಇದ್ದೇ ಇದ್ದು. ಆನು ಕೊರಗದ್ಹೆಚ್ಚು. ಅಂವಾ ಸಮಸ್ಯೆಯ ಪರಿಹಾರಕ್ಕೆ ತನ್ನದೇ ಆದ ರೀತಿಯ ಪರಿಹಾರ ಹುಡುಕ್ತಾ ಇದ್ದಾ. ಮಗನನ್ನು ಬದುಕಿಗೆ ಯೋಗ್ಯನನ್ನಾಗಿಸ್ತ ಇದ್ದಾ…. ಎಂದೆ ಪಕ್ಕದಲ್ಲೇ ನಿಂತಿದ್ದ ಅಮ್ಮನ ಬಳಿ.
‘ಹೌದು ಆನೂ ನಿನ್ನ ಹತ್ರ ಅದನ್ನ ಹೇಳನ ಅಂತ ಎಷ್ಟೋ ಸಲಾ ಅಂದಕಂಡಿ. ನೀನೂ ಆಕಾಶ ತಲೆ ಮೇಲೆ ಕಳಚಿಗ್ಯಂಡು ಬಿದ್ದವ್ರ ಹಾಂಗೆ ಇರದು ಬಿಟ್ಟು ಮಗಂಗೆ ಇನ್ನೂ ಏನೇನು ಕಲಿಸಲ್ಲೆ ಆಗ್ತು ನೋಡು’ ಎಂದಳು ಅಮ್ಮ. ನೀರಿನಿಂದ ಎದ್ದು ಬಂದ ಅಪ್ಪ ಮಗನ ಮುಖ ಹೆಮ್ಮೆಯಿಂದ ಮಿಂಚುತ್ತಿತ್ತು. ಮಗುವನ್ನು ಬಾಚಿ ತಬ್ಬಿ ಎತ್ತಿಕೊಂಡು ಎರಡೂ ಕೆನ್ನೆಗೆ ಮುದ್ದಿಕ್ಕಿದೆ. ಎಷ್ಟು ಚೋಲೋ ಈಜದು ಕಲಿಸಿದ್ರಿ ಇವಂಗೆ ಗ್ರೇಟ್! ಎಂದಾಗ ಇವರು ತಮಾಷೆಯಾಗಿ ಎಷ್ಟೋ ದಿನಾ ಆದ ಮ್ಯಾಲೆ ಯನ್ನ ಹೆಂಡ್ತಿ ಯನ್ನ ಈ ನಮನಿ ಹೊಗಳ್ತ ಇದ್ದು! ಎಂದು ತುಂಟ ನಗು ಬೀರಿದರು. ಎಲ್ಲರೂ ನಗುತ್ತಾ ಮನೆಗೆ ಬಂದೆವು ಶಾವಿಗೆ ಪಾಯಸ ಮಾಡಿ ಅಡುಗೆ ಮಾಡಿ ಬಡಿಸಿದೆ. ಮನವೇಕೋ ಹಗುರಾಗಿ ಹಕ್ಕಿಯಂತೆ ಹಾರಾಡಲಾರಂಭಿಸಿತ್ತು. ಅಂದಿನಿಂದಲೇ ಮಗನನ್ನು ಮಡಿಲಿನಲ್ಲಿ ಕುಳ್ಳಿರಿಸಿಕೊಂಡು ಮಗನಿಗೆ ಚಿತ್ರ ಬಿಡಿಸಲು ಕಲಿಸಲಾರಂಭಿಸಿದೆ.
ಕೈಯಲ್ಲಿ ಸ್ಲೇಟು ಬಳಪ ಹಿಡಿದುಕೊಂಡು ಚಿತ್ರ ಬಿಡಿಸಿ ಅದರ ಮೇಲೆ ತಿದ್ದಿಸಲಾರಂಭಿಸಿದೆ., ನಡು ನಡುವೆ ಪ್ರೀತಿಯಿಂದ ಅವನನ್ನು ತಬ್ಬಿ ಮುದ್ದಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಅವನಿಗೆ ಚಿತ್ರ ಬಿಡಿಸುವುದು ಬೇಜಾರಾಗಿ ಬಳಪವನ್ನು ಕಸಿದುಕೊಂಡು ಇಡೀ ಪಾಟಿಯ ತುಂಬ ಗರಗರನೇ ಗೀಚಿ ನಗುತ್ತಿದ್ದ. ತಾಳ್ಮೆಯಿಂದ ಹಾಗೆಲ್ಲ ಮಾಡಬಾರದು ಎಂದು ಸನ್ನೆ ಮಾಡಿ ಮರುದಿನ ಮತ್ತೆ ಕಲಿಸಲಾರಂಭಿಸುತ್ತಿದ್ದೆ. ಸುಮಾರು ಒಂದು ತಿಂಗಳ ಪ್ರಯತ್ನದ ನಂತರ ಅವನು ಪುಟ್ಟ ಪುಟ್ಟ ಚಿತ್ರವನ್ನು ಸ್ವತಂತ್ರವಾಗಿ ಬಿಡಿಸಲಾರಂಭಿಸಿದ. ಅಂಕಲಿಪಿಯನ್ನು ತರಿಸಿ ಅಕ್ಷರಾಭ್ಯಾಸ ಮಾಡಿಸಲಾರಂಭಿಸಿದೆ. ಚಿತ್ರದಂತೆಯೆ ನೋಡಿ ನೋಡಿ ಬರೆದರೂ ಹೇಳುವಾಗ ಇರುವ ವ್ಯತ್ಯಾಸವನ್ನು ಹೇಗೆ ಮನವರಿಕೆ ಮಾಡಿಸಬೇಕೋ ಅರ್ಥವಾಗಲೇ ಇಲ್ಲ. ಅದಾದ ಕೆಲವು ದಿನಗಳ ನಂತರ ಜ್ವರ ಬಂದಿದ್ದೇ ನೆವವಾಗಿ ಅಮ್ಮ ತೀರಿ ಹೋದಾಗ ರಾಮುವಿಗೇನೂ ಅರ್ಥವಾಗಲಿಲ್ಲ. ಅವಳುಡುವ ಸೀರೆಯನ್ನು ತಂದು ಅಜ್ಜಿ ಎಲ್ಲಿದ್ದಾಳೆ, ನನಗೆ ಬೇಕು ಎಂದು ಸನ್ನೆ ಮಾಡುತ್ತಿದ್ದ. ಸಾವಿನಂತಹ ಕ್ಲಿಷ್ಟ ಸಂಗತಿಯನ್ನು ಅವನಿಗೆ ಅರ್ಥ ಮಾಡಿಸಲಾಗದೇ ಒದ್ದಾಡಿ ಅವಳು ಮಾವನ ಮನೆಗೆ ಹೋಗಿದ್ದಾಳೆ ಎಂದು ಅಳುತ್ತಾ ಹೇಳಿದೆ. ನನ್ನ ಕಣ್ಣೀರನ್ನು ನೋಡಿ ಅವನಿಗೇಗೆನ್ನಿಸಿತೋ ಏನೋ ಅಂದಿನಿಂದ ಅಜ್ಜಿಯ ವಿಷಯ ಕೇಳುವುದನ್ನವ ನಿಲ್ಲಿಸಿದ.
***
ಒಂದು ದಿನ ಸಾಗರಕ್ಕೆ ಮದುವೆ ಮನೆಯ ಅಡುಗೆ ಕೆಲಸಕ್ಕೆ ಹೋದ ರಮೇಶ ಬರುವಾಗ ತುಂಬು ಉತ್ಸಾಹದಿಂದ ಬಂದಿದ್ದ. ಮೈಸೂರಿನಲ್ಲಿ ಇದ್ದವ್ರೊಬ್ಬರು ಪುರೋಹಿತರು ಮದ್ವಿಗೆ ಬಂದಿದ್ರು. ಮೈಸೂರಲ್ಲಿ ಕಿವುಡ ಮೂಕ ಮಕ್ಕಳಿಗೆ ಕಲಿಸುವ ಶಾಲೆ ಇದ್ದಡಾ. ನಮ್ಮ ಮಗನ ವಿಷಯ ಕೇಳಿ ಅಲ್ಲಿಗೆ ಮಗನ್ನ ಸೇರಿಸಿ ಅವು ಕಲಿಸ್ತ ಅಂದ್ರು. ಜ್ಯೂನ್‍ನಲ್ಲಿ ಶಾಲೆ ಶುರುವಾಗ್ತಡಾ, ಆನು ಪುರೋಹಿತರು ಅಂದ್ನಲಿ ಅವರ ಮನಿಗೆ ಹೋಗಿ ಅವರ ಜೊತಿಗೆ ಶಾಲಿಗೆ ಹೋಗಿ ಬರ್ತಿ. ಈಗಾಗ್ಲೆ ಮೂರನೇತ್ತಿಗೆ ಹೋಗುವ ವಯಸ್ಸಾಜು ನಮ್ಮನೆ ಪೋರಂಗೆ. ಆದ್ರೂ ಪ್ರಯತ್ನ ಮಾಡನ. .. ನನಗೂ ಸಂತೋಷವಾದರೂ ಬರಿಗೈ ಬಂಟರಾದ ನಮ್ಮಂಥವರು ನಗರದ ಶಾಲೆಗೆ ಕಳಿಸುವುದೆಂತು? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತು. ರಮೇಶ ತುಂಬು ಧೈರ್ಯದಿಂದಿದ್ದ. ‘ಮಗಾ ಶಾಲಿಗೆ ಹೋಗತ್ಯನಾ?’ ಎಂದ. ಅವನಿಗೇನು ಅರ್ಥವಾಯಿತೋ ‘ಹೌದು’ ಎಂದು ಉತ್ಸಾಹದಿಂದ ಮೇಲೆ ಕೆಳಗೆ ತಲೆ ಆಡಿಸಿದ.
ಮೇ ಕೊನೆಯ ವಾರದಲ್ಲಿಯೇ ‘ಇದೋ ನೋಡು ನಾನು ಬಂದೇ ಬಿಟ್ಟೆ’ ಎನ್ನುವಂತೆ ವರುಣ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಬಂದೇಬಿಟ್ಟ. .”ಗಡಿ ಹತ್ತುವ ಸಮಯದಲ್ಲಿದ್ದ ಕೆಲಸ ಮುಗಿಯದ್ರೊಳಗೆ ಮಳೆ ಶುರು ಆಗೋತಲೆ, ಎಂತಾರು ಆಗ್ಲಿ ಹೊಳೆ ಮ್ಯಾಲೆ ಹೊಳೆ ಹೋಗ್ಲಿ ಆನು ಮೈಸೂರಿಗೆ ಹೋಗಿ ವಿಚಾರಿಶಿಗ್ಯಂಡು ಬರ್ತಿ.ಆನು ಹೋದ್ರೆ ನೀನು ಮಗಾ ಇಬ್ರೇ ಆಗೋಗತ್ರಿ ಮನೆಲ್ಲಿ…. ಎಂತಾ ಮಾಡದು ಹ್ಯಾಂಗಾದ್ರೂ ಸುಧಾರಿಶ್ಗ, ಎಂತಾರು ಸಹಾಯ ಬೇಕಾದ್ರೆ ಭಟ್ಟರ ಮನಿಗೆ ಹೋಗಿ ಬಾ” ಎನ್ನುತ್ತಾ ನಾಲ್ಕು ದಿನಗಳಿಗಾಗುವಷ್ಟು ಬಟ್ಟೆಯನ್ನು ಬ್ಯಾಗಿನಲ್ಲಿ ತುಂಬಿಕೊಂಡು ರಮೇಶ ಮೈಸೂರಿಗೆ ಹೋಗಿ ನಾಲ್ಕು ದಿನಗಳೇ ಆಗಿಹೋದವು. ಇದ್ದೊಂದು ಮೊಬೈಲನ್ನು ರಮೇಶನೇ ಒಯ್ದಿದ್ದರಿಂದ ಹೋದವನು ಬರುವವರೆಗೆ ಯಾವ ಸುದ್ದಿಯೂ ಗೊತ್ತಾಗುವಂತಿರಲೂ ಇಲ್ಲ. ಆತಂಕವನ್ನು ಅದುಮಿಡುತ್ತಾ ಹೊದಕಲನ್ನು ಕುತ್ತಿಗೆಯವರೆಗೆಳೆಯುತ್ತಾ ನೆನಪನ್ನು ತೆರೆಗೆ ಸರಿಸಿದ ಎಷ್ಟೋ ಹೊತ್ತಿನ ನಂತರ ನಿದ್ದೆ ಆವರಿಸಿತು.
***
ಬೆಳಿಗ್ಗೆ ರಮೇಶ ಬಂದು ಬಾಗಿಲು ಬಡಿದಾಗಲೇ ಎಚ್ಚರವಾಯ್ತು.
‘ಸುರಕ್ಷಿತವಾಗಿ ಬಂದ್ರಲ್ರೀ ಮಾರಾಯರೇ. ಮಳೆ ಅಬ್ಬರ ನೋಡಿ ಹೆದರಿಕೆ ಆಗೋಗಿತ್ತು, ಹೋದ ಕೆಲಸ ಎಂತಾತು’ ಕಾತರದಿಂದ ಕೇಳುತ್ತಲೇ ಗಂಡನನ್ನು ಸ್ವಾಗತಿಸಿ ಅವನ ಕೈಲಿದ್ದ ಬ್ಯಾಗನ್ನು ತೆಗೆದುಕೊಂಡೆ. ‘ಮತ್ತೆ ಇನ್ನೆರಡು ದಿನಕ್ಕೆ ಹೊರಡದೇಯಾ ಹೆಂಡ್ತಿ ಕೂಸೆ, ಮೈಸೂರಿನಲ್ಲಿರುವ ಕಿವುಡ ಮೂಕರ ಶಾಲೆಗೆ ಮಗಂಗೆ ಸೀಟು ಸಿಕ್ಕಿದ್ದು. ನಾವು ಅಲ್ಲೇ ಹೋಗಿ ಉಳಕಂಡು ದಿನಾ ಶಾಲಿಗೆ ಕಳಸಕಾಗ್ತು’ ರಮೇಶನ ಮೊಗದಲ್ಲಿ ಯುದ್ದ ಗೆದ್ದ ಕಳೆ ಇತ್ತು.
‘ಮತ್ತೆ ಈ ಜಮೀನು ಮನೆ?’ … ರಾಗ ತೆಗೆದೆ.
“ಜಮೀನು ಕೊಟ್ಟವರಿಗೇ ಹಿಂದಿರುಗಿಸಿ ಗೇಯ್ಸಿಗ್ಯಳಿ ಹೇಳಿರಾತು. ಮನೆ ಏನೂ ಗಟ್ಟಿ ಇಲ್ಲೆ ನಿನಗೇ ಗೊತ್ತಿದ್ದು, ದುಡಿಯವ್ವಕೆ ಯಾವೂರಾದ್ರೆಂತ? ಮೈಸೂರಿನಲ್ಲಿ ಶಿರಸಿಯ ಹಿತೇಂದ್ರ ಶಾಸ್ತ್ರೀ ಎನ್ನುವವರ ಕೇಟರಿಂಗ್ ಉದ್ಯಮ ಇದ್ದು. ಅಲ್ಲಿ ಕೆಲಸ ಕೊಡ್ತೆ ಹೇಳಿದ್ರು. ಅವರ ಮನೆ ಹಿಂದೆ ಮೂರು ಖೋಲಿ ಔಟ್‍ಹೌಸಿದ್ದು ಅದ್ರಲ್ಲಿ ಉಳಕಂಬನ, ಮಗನ ಜೊತೆಗೆ ನೀನೂ ಪ್ರತಿ ದಿನ ಶಾಲಿಗೆ ಹೋಗಿ ಅವಂಗೆ ಕಲಿಸದು ಹ್ಯಾಂಗೇ ಹೇಳಿ ಟ್ರೇನಿಂಗ್ ತಗಳಕಾಗ್ತಡಾ. ಎಂಟು ವರ್ಷ ಅಂದ್ರೆ ಲೇಟಾತು ಅಂತ ಮೊದಲು ಸೇರಿಸ್ಗಳದಕ್ಕೆ ಹಿಂದ ಮುಂದ ನೋಡ್ದ ಶಾಲೆಯವ್ವು. ಆವಾಗ ಆನು ಮಗಾ ಈಜು ಹೊಡೆಯ ವೀಡಿಯೋ ನೋಡಿ ಹೇಳಿ ತೋರಸ್ದಿ. ಅಲ್ಲಿ ಪ್ರಿನ್ಸಿಪಾಲರಿಗೆ ರಾಶಿ ಖುಷಿ ಆಗಿ ಎಡ್ಮಿಶನ್ ಕೊಟ್ಟಿದ್ರು ಗೊತ್ತಿದ್ದ? ಸ್ವಿಮಿಂಗ್‍ನಲ್ಲಿ ಇನ್ನೂ ಟ್ರೇನಿಂಗ್ ಕೊಡಿಸ್ವಡಾ. ಅಂಗವಿಕಲರ ಕ್ರೀಡಾ ಕೂಟಗಳಲ್ಲಿ ಸ್ಪರ್ಧಿ ಮಾಡಲಕ್ಕು ನಿಮ್ಮ ಮಗನ್ನಾ ಅಂದ್ರು. ಆ ಶಾಲೆಯಲ್ಲಿ ಕಲಿತ ಮಕ್ಕಳು ದೊಡ್ಡವ್ವಾದ ಮೇಲೆ ಒಳ್ಳೊಳ್ಳೆ ನೌಕರಿ ಎಲ್ಲಾ ಮಾಡ್ತಾ ಇದ್ವಡಾ” ಎಂದೆಲ್ಲ ತನ್ನ ನಿರ್ಣಯವನ್ನು ಉತ್ಸಾಹದಿಂದಲೇ ರಮೇಶ ವಿವರಿಸಿದ.
ಮಗನದ್ದು ಬಣ್ಣಗೇಡು ಬದುಕೇನೋ ಎಂದು ಸದಾ ಚಿಂತಿಸುತ್ತಿದ್ದ ನನಗೆ ಕಾಮನ ಬಿಲ್ಲಿನ ಸಕಲ ವರ್ಣಗಳು ಮಗನ ಬದುಕಿಗಿಳಿದು ತುಂಬಿಕೊಂಡಂತೆನಿಸಿತು. ಗಂಡನ ನಿರ್ಣಯಕ್ಕೆ ಸಮ್ಮತಿ ಸೂಚಿಸಿದೆ. ಮಲಗಿದ್ದ ಮಗನ ಹಣೆಗೂದಲನ್ನು ಸರಿಸಿ ಹೂಮುತ್ತನ್ನೊತ್ತಿದೆ. ಹಿತವಾದ ಭಾವದಿಂದ ಕಿಡಕಿಯಾಚೆಗೆ ಕಣ್ಣಾಡಿಸಿದೆ,ಮಳೆ ನಿಂತಿತ್ತು. ಅಂಗಳದಲ್ಲಿ ಅರಳಿದ ಹೂಗಳು ಎಳೆ ಬಿಸಿಲಿಗೆ ಹೊಳೆಯುತ್ತಿದ್ದವು.
- ಮಾಲತಿ ಹೆಗಡೆ








8 thoughts on “ಪರೀಕ್ಷೆ”
Super
ಧನ್ಯವಾದಗಳು
ಸೊಗಸಾಗಿ ಮೂಡಿಬಂದ ಕತೆ. ಕೊನೆಯವರೆಗೂ ಬಿಡದೆ ಓದಿಸಿಕೊಂಡು ಹೋಗುವ ಬಂಧ ಕಸುವು I ಕತೆಗಿದೆ.
ಧನ್ಯವಾದಗಳು ಮೇಡಂ
ಚಂದದ ಕತೆ ಮಾಲತಿ. ಅಂಥದೊದು ಹುಡಿಗಿ ನಮ್ಮ ತಮ್ಮನಿಗೂ ಇದೆ. ತಮ್ಮನ ಹೆಂಡತಿ ಟೀಚರು. ಅವಳೂ ಮಗಳಿಗೂ ಸಿತಾರ್ ಕಲಿಸುತ್ತಿದ್ದಾಳೆ. ಶಾಲೆಗೆ ಹಾಕಿದ್ದಾಳೆ.
ಹೌದೇ? ಮಗಳಿಗೆ ಸಂಗೀತದ ಅಭಿರುಚಿ ಹುಟ್ಟಿಸಿದ ನಿಮ್ಮ ನಾದಿನಿಯ ಪ್ರಯತ್ನ ಶ್ಲಾಘನೀಯ. ಧನ್ಯವಾದಗಳು ಅಕ್ಕಾ
ಒಳ್ಳೆಯ ಕಥೆ. ನಿರೂಪಣೆ ಆಪ್ತವಾಗಿದೆ.
ಧನ್ಯವಾದಗಳು ಸರ್