‘ಕೇಳು ಪಾಪಕ್ಕ’ – ಕಥಾ ಸಂಕಲನ

ಸುನಂದಾ ಬೆಳಗಾಂವಕರರ ‘ಕೇಳು ಪಾಪಕ್ಕ’

ಬಾಲ್ಯದಲ್ಲಿ ಕೇಳಿದ ಅಜ್ಜಿ ಕತೆಗಳು ಹಿಂದೆಂದೋ ನಡೆದ ಘಟನೆಗಳ ಪ್ರತಿಫಲನವಾಗಿವೆ. ಮಕ್ಕಳ ಮನಸ್ಸಿಗೆ ಮುದವನ್ನು ನೀಡುವಂಥ ಅದ್ಭುತ ರಮ್ಯ ಕತೆಗಳಿಂದ ತೊಡಗಿ ವ್ಯಕ್ತಿಗಳ ಸ್ವಭಾವವನ್ನು ತೋರಿಸುವ, ಸಮಾಜ ಜೀವನವನ್ನು ಬಿಂಬಿಸುವ, ತ್ಯಾಗವೀರ – ಯುದ್ಧವೀರರನ್ನು ಬಣ್ಣಿಸುವ ಪವಾಡ ಕತೆಗಳೂ ಸೇರಿದಂತೆ ವೇದಾಂತವನ್ನು ಬೋಧಿಸುವ ಪೌರಾಣಿಕ ಕತೆಗಳವರೆಗೆ ಇದರ ವ್ಯಾಪ್ತಿಯಿದೆ. ಜಾನಪದ ಸೊಗಡು ಮತ್ತು ಆಧುನಿಕ ಸಣ್ಣ ಕತೆಗಳಿಗೆ ಹೊಂದುವಂಥ ವಿಚಾರಗಳನ್ನು ಒಳಗೊಂಡಿರುವ ಇಂಥ ಕತೆಗಳನ್ನು ಹೇಳುವ, ಕೇಳುವ, ಬರೆಯುವ, ಬರೆದದ್ದನ್ನು ಓದುವ, ಅದಕ್ಕೆ ಇನ್ನಷ್ಟು ಉಪ್ಪು ಖಾರ ಹಚ್ಚಿ ಜನರಿಗೆ ಉಣಬಡಿಸುವ ಕಲೆಯು ಸುಲಭ ಸಾಧ್ಯವಲ್ಲ. ಕೈಕಾಲುಗಳಿಲ್ಲದ್ದರೂ ಕಾಲದೇಶಗಳನ್ನು ಮೀರಿ ಓಡುವ ಕತೆಗಳು ಎಲ್ಲ ಪೀಳಿಗೆಯ ಓದುಗರಿಗೆ ತಲುಪುತ್ತವೆ, ಚಿಂತನೆಗೆ ಹಚ್ಚುತ್ತವೆ. ಸುನಂದಾ ಬೆಳಗಾಂವಕರರ ‘ಕೇಳು ಪಾಪಕ್ಕ’ ಕಥಾ ಸಂಕಲನವು ಅದಕ್ಕೆ ಉತ್ತಮ ಉದಾಹರಣೆಯಾಗಿದೆ.

ನಿರೂಪಕನು ಕತೆಯ ಹೊರಗೆ ನಿಂತು ಮಾತನಾಡುವ ‘ಅನ್ಯಕಥನ’ ಮತ್ತು ಕತೆಯ ಒಳಗಿದ್ದುಕೊಂಡು ಕಥನಕ್ಕೆ ತೊಡಗುವ ‘ಅಂತಃಕಥನ’ಗಳು ಕಥನ ಸಾಹಿತ್ಯದ ಮುಖ್ಯ ಪ್ರಕಾರಗಳಾಗಿವೆ. ಅನ್ಯಕಥನದಲ್ಲಿ ಕತೆಗಾರನಿಗೆ ಸರ್ವಸಾಕ್ಷಿತ್ವದ ಅಧಿಕಾರವಿದ್ದರೂ ಕತೆಯ ಕ್ಷೇತ್ರವು ಸೀಮಿತವಾಗಿರುತ್ತದೆ. ಒಂದೇ ಕತೆಯಲ್ಲಿ ಈ ಎರಡೂ ರೀತಿಯ ಕಥನವನ್ನು ಹೊಂದಿರುವ ರಚನೆಗೆ ಉದಾಹರಣೆಯಾಗಿರುವ ‘ಕೇಳು ಪಾಪಕ್ಕ’ ಎಂಬ ಕತೆಯು ಧಾರವಾಡದ ಜನಮಾನಸದಲ್ಲಿ ಪ್ರಚಲಿತವಾಗಿದ್ದ ದುರಂತ ಪ್ರೇಮದ ಕತೆಯಾಗಿದೆ. ಲೇಖಕಿಯು ತನ್ನ ಗೆಳತಿಯಾದ ಪಾಪಕ್ಕನಿಗೆ ತಾನು ಬರೆದ ಕತೆಯನ್ನು ಓದಲು ಕೊಡುವ ರೀತಿಯಲ್ಲಿ ಕತೆಯ ಸಂವಿಧಾನವಿದೆ. ಇದು ‘ಹೇಳುವ’ ಕತೆಯಾಗಿರದೆ ‘ಬರೆದ’ ಕತೆಯಾಗಿರುವುದರಿಂದ ಕತೆಗೆ ವಿಶೇಷ ಅಲಂಕಾರ, ಓಜಸ್ಸು, ತೇಜಸ್ಸುಗಳು ದೊರಕಿವೆ.

ಕಳ್ಳರ ತಂಡದ ನಾಯಕ ಗುಡ್ಡದಪ್ಪನ ಜೊತೆಯಲ್ಲಿ ಬಾಳುತ್ತಿದ್ದ ರುದ್ರಿಯು ಆತನ ಕಾಮುಕ ಜೀವನದೊಂದಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಾಳೆ. ಬಸುರಿಯಾದಾಗ ಗುಡ್ಡದಪ್ಪನು ಆಕೆಯನ್ನು ಹೊರದಬ್ಬುತ್ತಾನೆ. ಹೆರಿಗೆಯ ನೋವನ್ನು ತಾಳದೆ ನರಳುತ್ತಾ ಬಿದ್ದಿರುವಾಗ ಮುದುಕಿಯೊಬ್ಬಳು ಆಕೆಯ ಹೆರಿಗೆಯನ್ನು ಮಾಡಿಸುತ್ತಾಳೆ. ಮಗ ಲಚ್ಚಮ್ಯಾ (ಲಕ್ಷ್ಮಣ) ಶಾಲೆಯಲ್ಲಿ ಕಲಿಯುತ್ತಿರುವಾಗ ಆತನನ್ನು ಹೊರಗೆ ಹಾಕುವಂತೆ ಇತರ ಪೋಷಕರು ಅರ್ಜಿಯನ್ನು ಸಲ್ಲಿಸುತ್ತಾರೆ. ‘ಆ ಸೂಳೆಮಗನೊಂದಿಗೆ ಬೆರೆಯಬೇಡಿ. ಆಡಬೇಡಿ’ ಎಂದು ವಿಷಬೀಜವನ್ನು ಬಿತ್ತುತ್ತಾರೆ. ಮಗುವಿನ ಮನಸ್ಸು ಕಹಿಯಾಗತೊಡಗುತ್ತದೆ. ಸಮಾಜವು ಆತನನ್ನು ಮುಖ್ಯವಾಹಿನಿಯಿಂದ ದೂರವಿರಿಸಿದ್ದರಿಂದ ತಾಯಿಯ ಆಸೆಯಂತೆ ಸಜ್ಜನನಾಗಿ ಬಾಳಲು ಸಾಧ್ಯವಾಗದೆ ಕಳ್ಳನಾಗುತ್ತಾನೆ. ಆತನ ಬಾಲ್ಯ ಜಗತ್ತಿನ ಮೇಲೆ ಸಹಪಾಠಿಗಳು, ಮೇಷ್ಟ್ರು, ಪೋಷಕರು ಮಾಡುವ ಆಘಾತಗಳು ಬೇರೆ ಬೇರೆ ಸ್ತರಗಳಲ್ಲಿ ಓದುಗರನ್ನು ತಟ್ಟುತ್ತವೆ. ಸಾಮಾಜಿಕ ಅಸಮಾನತೆಯನ್ನು ಇಲ್ಲವಾಗಿಸಬೇಕಿದ್ದ ಶಾಲೆಯೇ ಸಾಮಾಜಿಕ ಅಸಮಾನತೆಯ ತಾಣವಾಗಿರುವ ವ್ಯಂಗ್ಯವನ್ನು ಕಾಣುತ್ತೇವೆ. ಒಳ್ಳೆಯವರೆನಿಸಿಕೊಂಡವರ ಕೆಟ್ಟ ಮುಖ ಮತ್ತುಕೆಟ್ಟವರೆನಿಸಿಕೊಂಡವರ ಒಳ್ಳೆಯ ಮುಖವನ್ನು ಕಾರ್ಯ ಕಾರಣ ಸಂಬಂಧದ ಹಿನ್ನೆಲೆಯಲ್ಲಿ ನೋಡುವ ಪ್ರಯತ್ನ, ಸಮಾಜ ಸುಧಾರಕನಾಗಬೇಕಾದವನು ಸಮಾಜಕಂಟಕನಾಗುವುದಕ್ಕೆ ವ್ಯವಸ್ಥೆಯ ದೌರ್ಜನ್ಯವೇ ಕಾರಣ ಎಂಬ ದನಿಯು ಇಲ್ಲಿದೆ. ಕಳ್ಳನ ಮಗನು ಕಳ್ಳನೇ ಆಗುವ ವಿಪರ್ಯಾಸವನ್ನು ವ್ಯಂಜಿಸುತ್ತದೆ.

ಲಚ್ಚಮ್ಯಾ ಮತ್ತು ಸಿಂಗಾರಿಯ ಭೇಟಿಗೆ ಗೆಳೆಯನ ಜಾತ್ರೆಯ ಆವರಣವು ಚೌಕಟ್ಟನ್ನು ಒದಗಿಸುತ್ತದೆ. ಲಚ್ಚಮ್ಯಾನ ಮೈಗೆ ಬೀಸಿ ಬಡಿದ ಸಿಂಗಾರಿಯ ಜಡೆಯನ್ನು ಆತನು ಪಕ್ಕಕ್ಕೆ ಬೀಸಿ ತೂರಿದಾಗ ಆಕೆಯು ತಿರಸ್ಕಾರದಿಂದ ನಕ್ಕು ‘ಈ ಸೂಳಿಮಗ ಇದಾನ ಅಲ್ಲೆ’ ಎಂದಾಗ ಕನಲಿದ ಲಚ್ಚಮ್ಯಾನು ಆಕೆಯನ್ನು ಅಪಹರಿಸುತ್ತಾನೆ. ‘ನನ್ನನ್ನು ಸೂಳೆ ಎಂದ ನೀನು ಈಗ ನನ್ನ ಸೂಳೆ’ ಎಂದು ಆಕೆಯ ಮೇಲೆ ಕೈಮಾಡುತ್ತಾನೆ. ಆಗ ಆತನ ಅಂತರಾತ್ಮವು ತಾಯಿಯ ರೂಪದಲ್ಲಿ ಕಾಣಿಸಿಕೊಂಡು “ಹೆಣ್ಣು ಬರೇ ಭೋಗಕ್ಕಲ್ಲ. ಆಕಿ ಹಡೆದವ್ವ, ಅಕ್ಕ ತಂಗಿ ಮಗಳು. ಯಾ ಮನಸ್ಯಾ ಈ ಮಾತ ತಿಳೀದ ನಡೀತಾನ ಅವನ ಮನ್ಯಾಗ ದೇವಿ ಕಾಲ ಮುರದ ಬಿದ್ದಿರತಾಳ” (ಪುಟ 15) ಎಂದಂತೆ ಭಾಸವಾಗಿ ಪಶ್ಚಾತ್ತಾಪ ಪಡುತ್ತಾನೆ. ಸಿಂಗಾರಿಯ ಮೇಲಿನ ದ್ವೇಷವು ತೊಲಗಿ ಪ್ರೀತಿಯು ಕಾಣಿಸಿಕೊಳ್ಳುತ್ತದೆ. ಜಾತಿ, ಸಂಸ್ಕಾರ, ಸಾಮಾಜಿಕ ಸ್ತರ, ನೀತಿ ನಿಯಮಗಳು ಯಾವ ವಿಷಯಗಳಲ್ಲೂ ಸಮಾನತೆಯಿಲ್ಲದ ಇವರಿಬ್ಬರನ್ನು ಪ್ರೇಮವು ಬೆಸೆಯುತ್ತದೆ. ಅದಕ್ಕೆ ಯಾವುದೇ ರೀತಿಯ ಹಿಂದು ಮುಂದುಗಳಿಲ್ಲ. ಒಂದು ಹೆಣ್ಣು ಒಂದು ಗಂಡು. ಅದಕ್ಕಿಂತ ಹೆಚ್ಚೇನಿದೆ ಎಂಬ ಭಾವವನ್ನು ಇಲ್ಲಿ ಕಾಣಬಹುದು. ಸಿಂಗಾರಿಯೂ ಆತನ ಪ್ರೇಮಕ್ಕೆ ತೀವ್ರವಾಗಿ ಸ್ಪಂದಿಸುತ್ತಾಳೆ. ಸೂರ್ಯ ಕೆಂಡದುಂಡೆಗಳನ್ನು ಕಾರುತ್ತಿದ್ದರೆ ಭೂಮಿ ಮಳೆಗಾಗಿ ಹಂಬಲಿಸುತ್ತಾಳೆ. ಸಿಂಗಾರಿಯ ಅಣ್ಣ ವೀರೇಂದ್ರಗೌಡನ ಮನದಲ್ಲಿ ಪ್ರತೀಕಾರದ ಜ್ವಾಲೆ. ಪ್ರಕೃತಿಯು ಲಚ್ಮ್ಯಾ, ಸಿಂಗಾರಿ ಮತ್ತು ವೀರೇಂದ್ರನ ಪರಿಸ್ಥಿತಿಗೆ ಒಡ್ಡಿದ ರೂಪಕವಾಗಿ ಕಂಗೊಳಿಸುತ್ತದೆ. ನೀರಿಗಾಗಿ ಪರದಾಡುವ ಪರಿಸ್ಥಿಯಲ್ಲಿ ವೀರೇಂದ್ರನು ಬಂದೂಕುಧಾರಿ ತಂಡದೊಂದಿಗೆ ಲಚ್ಚಮ್ಯಾ ಉಳಿದುಕೊಂಡಿದ್ದ ಮಾಳಗುಡ್ಡಕ್ಕೆ ಮುತ್ತಿಗೆಯನ್ನು ಹಾಕುತ್ತಾನೆ. ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಾಗ ಲಚ್ಚಮ್ಯಾನ ಸಂಗಡಿಗರಲ್ಲಿ ಒಬ್ಬನಾದ ಗೋಪಾಲಿಯು ನೀರಿನ ಚೀಲ ಹೊತ್ತು ತಂದು ಊರಿನವರ ಜೀವವನ್ನು ಉಳಿಸಿದರೂ ವೀರೇಂದ್ರ ಕಡೆಯವರ ಗುಂಡೇಟಿಗೆ ಬಲಿಯಾಗುತ್ತಾನೆ. ಲಚ್ಚಮ್ಯಾನ ತಂಡದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಳ್ಳುತ್ತದೆ. ಸಿಂಗಾರಿಯನ್ನು ಆಕೆಯ ಮನೆಯವರಿಗೆ ಒಪ್ಪಿಸಬೇಕೆಂದು ಕೆಲವರು ಹೇಳಿದರೆ ಆಕೆಯನ್ನು ಪ್ರೀತಿಸುತ್ತಿದ್ದ ಲಚ್ಚಮ್ಯಾನಿಗೆ ಇಬ್ಬಂದಿತನ ಉಂಟಾಗುತ್ತದೆ. ತನ್ನೊಂದಿಗೆ ದಿನ ಕಳೆದುದರಿಂದ ಸಿಂಗಾರಿಯ ಬಾಳು ಹಾಳಾಯಿತು. ಮುಂದೆ ಆಕೆಗೆ ಒಳ್ಳೆಯ ಭವಿಷ್ಯವಿಲ್ಲ. ಆದ್ದರಿಂದ ಅವರಿಬ್ಬರೂ ಮಳೆ ಬರುವ ಹೊತ್ತಿನಲ್ಲಿ ಕೆರೆಯ ನಡುವೆ ಬಂದು ಪರಸ್ಪರ ತಬ್ಬಿಕೊಂಡು ಮುಳುಗಿ ಸಾಯುತ್ತಾರೆ. ಇವರು ಸತ್ತ ಕೂಡಲೇ ರೇಣುಕೆಯು ಮಗುವಿಗೆ ಜನ್ಮ ನೀಡುವ ಮೂಲಕ ಸಾವು ಬದುಕಿನ ಜಿಜ್ಞಾಸಯನ್ನು ತೀವ್ರಗೊಳಿಸುವ ಕತೆಯು ಗ್ರಾಮೀಣ ವಾಸ್ತವದ ಅಂಗವಾದ ಪ್ರೀತಿ, ದ್ವೇಷ ಮತ್ತು ಹಿಂಸೆಯ ಸ್ವರೂಪವನ್ನು ತೆರೆದಿಡುತ್ತದೆ.

‘ಒಂಭತ್ತೂಗೂಟ’ ಎಂಬ ಕತೆಯಲ್ಲಿ ವಿಷಾದವು ಸ್ಥಾಯಿಯಾಗಿದೆ. ಲೇಖಕಿಯದ್ದು ಸಂಯಮದ ಬರಹವಾಗಿರುವುದರಿಂದ ಕತೆಯಲ್ಲಿ ಅತಿ ವಿಷಾದ ಮತ್ತು ಭಾವಾತಿರೇಕಗಳಿಗೆ ಸ್ಥಾನವಿಲ್ಲ. ಬದುಕಿನ ಜಟಿಲತೆಯನ್ನು ಹಿಡಿದಿಡುವ ಕತೆಯು ತಂತ್ರದ ದೃಷ್ಟಿಯಿಂದಲೂ ವಿಶಿಷ್ಟವಾಗಿದೆ. “ಹೆಣ್ಣುಮಕ್ಕಳ, ನೀವು ಬಿಕ್ಕಿ ಬಿಕ್ಕಿ ಅತ್ತರ ನಿಮ್ಮ ಬೀಸುಕಲ್ಲು ತಿರುಗೂದಿಲ್ಲ. ಅದಕ್ಕೆ ಬಡವ ಬಲ್ಲಿದ ಭೇದವಿಲ್ಲ. ಎತ್ತಿದವರ ಕೂಸು ಇದ್ದಂಗ ತಿರುಗಿಸಿದವರ ಕೈಯಾಗ ಅದು ಅನ್ನ” (ಪುಟ 41) ಮತ್ತು “ಬೀಸುವ ಕಲ್ಲಿಗೆ ಯಾರ ಮೇಲೂ ಮರುಕವಿಲ್ಲ. ದಯಾ ದಾಕ್ಷಿಣ್ಯ, ಕೋಪ, ಭಯ, ಪಕ್ಷಪಾತವೇನೂ ಇಲ್ಲ. ಅದು ನಿರ್ವಿಕಾರ. ನೆತ್ತಿಗೆ ಕಟ್ಟಿಗೆ ಗೂಟ ಬಡಿಸಿಕೊಂಡು, ಹೊಟ್ಟೆಯಲ್ಲಿ ಉಕ್ಕಿನ ಗೂಟ ನಡೆಸಿಕೊಂಡು ನಿಸ್ವಾರ್ಥ ಬುದ್ಧಿಯಿಂದ ಜನಸೇವೆಯಲ್ಲಿ ನಿರತವಾಗಿರುತ್ತದೆ” (ಪುಟ 43) ಹಾಗೂ “ಬೀಸೋ ಕಲ್ಲಂದ್ರ ಸಾಕ್ಷಾತ್ ಲಕ್ಷ್ಮಿ ಅನ್ನಪೂರ್ಣೇಶ್ವರಿ. ಎಲ್ಲಾರ ಹೊಟ್ಟೇನೂ ತುಂಬಸ್ತಾಳವ್ವ. ಗೂಟ ಅಂದ್ರ ಆಕಿ ಕಯಯಾಗಿನ ಆಯುಧ ಅಂತ ಲಕ್ಷ್ಮಿ ಬರೋ ಮುಂದ ಒಂಬತ್ತು ಗೂಟ ಕೈಯಾಗ ಹಿಡಿದು ಬರತಾಳಂತ” (ಪುಟ 44) ಎಂಬ ಸಾಲುಗಳಲ್ಲಿ ಇದರಲ್ಲಿ ಬೀಸುವ ಕಲ್ಲು ಕಾಲ ಬದುಕು ಮತ್ತು ದೈವಿಕತೆಯ ರೂಪಕವಾಗಿ ಮೂಡಿ ಬಂದಿದೆ. ‘ಒಂಭತ್ತು ಗೂಟ’ ಎಂಬ ಪದವು ಸಮೃದ್ಧಿಯನ್ನು ಸೂಚಿಸುತ್ತದೆ.

ಮೇಲುನೋಟಕ್ಕೆ ಕೌಟುಂಬಿಕ ಕತೆ ಎನಿಸಿಕೊಳ್ಳುವ ಈ ರಚನೆಯಲ್ಲಿ ಕತೆಯನ್ನು ಹೇಳುವ ತಂತ್ರವನ್ನು ಬಳಸಲಾಗಿದೆ. ಕತೆಯನ್ನು ಆರಂಭಿಸುವ ಲೇಖಕಿಯು ಅದಕ್ಕೆ ತಕ್ಕ ಪ್ರಾಥಮಿಕ ಹಿನ್ನೆಲೆಯನ್ನು ಒದಗಿಸಿದ ಬಳಿಕ ಹಿಂದೆ ಸರಿದು ಪಾತ್ರವೊಂದರ ಮೂಲಕ ಕತೆಯನ್ನು ಹೇಳುತ್ತಾರೆ. ಅದರಲ್ಲಿ ಬರಲಿರುವ ದಾರುಣ ಸನ್ನಿವೇಶದ ಸೂಚನೆಯನ್ನು ಕೊಡದೆ ಸಂಭ್ರಮ ಸಡಗರದ ಧಾಟಿಯೊಂದಿಗೆ ಆರಂಭವಾಗುವ ಕತೆಯಲ್ಲಿ ಸೆರಗಿನ ಶ್ರೀಪಾದರಾವ ನಾಯಕರ ಮರಿ ಮೊಮ್ಮಗ ಶ್ರೀನಿಧಿರಾಯರ ಮಗ ಶ್ರೀಶನ ಮದುವೆಯನ್ನು ನೋಡುವಾಗ ಸಾವಕ್ಕನು ತಾನು ಕೇಳಿ ತಿಳಿದುಕೊಂಡಿದ್ದ ಕತೆಯನ್ನು ತನ್ನ ಗೆಳತಿಯಾದ ಜೀವಕ್ಕನಿಗೆ ಹೇಳುತ್ತಾಳೆ.

ಯಾವುದೋ ಒಂದು ವಸ್ತು, ಘಟನೆ ಅಥವಾ ಒಂದು ಸನ್ನಿವೇಶವನ್ನು ಹೋಲುವ ಇನ್ನೊಂದು ಸನ್ನಿವೇಶವನ್ನು ನೋಡಿ ಅದಕ್ಕೆ ಸಂಬಂಧಿಸಿದ ನೆನಪುಗಳನ್ನು ಮುಂದಿಟ್ಟುಕೊಂಡು ಕತೆಯನ್ನು ಹೇಳುವ ತಂತ್ರವು ನವೋದಯದ ಅನೇಕ ಕತೆಗಳಲ್ಲಿ ಕಂಡು ಬರುತ್ತದೆ. ಇಲ್ಲಿಯ ವಿಶೇಷವೆಂದರೆ ಕತೆಯನ್ನು ಸಾವಕ್ಕಳು ಹೇಳಿದಳೆಂದು ಸೂಚನೆಯನ್ನು ಕೊಟ್ಟು ಲೇಖಕಿಯು ತನ್ನ ಭಾಷೆಯಲ್ಲೇ ಕತೆಯನ್ನು ಹೇಳುವುದಿಲ್ಲ. ಸಾವಕ್ಕಳಿಗೆ ಅವಳದ್ದೇ ಆದ ವ್ಯಕ್ತಿತ್ವ, ಭಾಷೆ, ಶೈಲಿಗಳನ್ನು ಕೊಟ್ಟು ಅವುಗಳ ಮೂಲಕ ಕತೆಯನ್ನು ಹೇಳಿಸುತ್ತಾಳೆ. ಆದ್ದರಿಂದ ತನ್ನ ಮಗಳ ನಡತೆಯನ್ನು ಸಮರ್ಥಿಸಿಕೊಳ್ಳುತ್ತಾ ತನ್ನದೇ ಆದ ವಿಶಿಷ್ಟ ಮಾತುಗಾರಿಕೆಯ ಮೂಲಕ ಆಕೆಯು ಕತೆಯನ್ನು ಹೇಳುವಾಗ ಉಲ್ಲೇಖಗೊಳ್ಳುವ ಸಾವಕ್ಕನ ಬದುಕಿನ ವಿವರಗಳು ಮಹಿಳೆಯ ದುಸ್ಥಿತಿಗೆ ಒತ್ತು ನೀಡಿದರೂ ಆಕೆಯ ಸ್ವಾಭಿಮಾನ, ಬದುಕಿ ಉಳಿಯುವ ಛಲ ಗಮನಾರ್ಹವಾಗಿವೆ. ವ್ಯಾವಹಾರಿಕ ತಿಳುವಳಿಕೆ, ಧರ್ಮಶ್ರದ್ಧೆ, ವಿಧಿಯ ಕೈವಾಡದ ಅರಿವು, ವಾಸ್ತವ ಪ್ರಜ್ಞೆ, ಕರುಳಿನ ನೋವು, ಇವೆಲ್ಲ ಮನಸ್ಸನ್ನು ವಿರುದ್ಧ ದಿಕ್ಕಿಗೆ ಎಳೆಯುತ್ತಿದ್ದರೂ ಅವುಗಳನ್ನು ಒಂದೆಡೆಯಲ್ಲಿ ಕೂಡಿಸಿ ಹಿಡಿದ ಮನೋಧರ್ಮವು ಅಚ್ಚರಿಯನ್ನು ಉಂಟು ಮಾಡುತ್ತದೆ. ಸಾವಕ್ಕಳು ದುಃಖವನ್ನು ನುಂಗಿಕೊಂಡು ಕುಳಿತುಕೊಳ್ಳುವವಳಲ್ಲ. ಕತೆಯನ್ನು ಹೇಳುತ್ತಾ ಆಕೆಯು ಅಳುತ್ತಾಳೆ. ಅಳುವಿನ ಹಿಂದೆ ಕಾಣುವ ಸಂಯಮ, ತಿಳುವಳಿಕೆಗಳು ಮಹತ್ವದ್ದಾಗಿವೆ.

ಹೆಂಡತಿ ಮನೋರಮೆಯ ಮರಣದ ಬಳಿಕ ಶ್ರೀಪಾದರಾಯರು ವೈರಾಗ್ಯಪರರಾಗಿ ತಮ್ಮ ಮನೆಯ ಮೇಲಿನ ಮಹಡಿಯಲ್ಲಿ ಒಬ್ಬರೇ ವಾಸಿಸುತ್ತಾರೆ. ಅವರ ಮಗನಾದ ಶ್ರೀಕಾಂತನ ಮಡದಿ ಶ್ರೀದೇವಿಗೆ ಮಹಡಿ ಮನೆಯಿಂದ ತೂಗುಮಂಚವು ಅಲ್ಲಾಡುವ ಸದ್ದು, ಮಲ್ಲಿಗೆಯ ಪರಿಮಳ, ಗೆಜ್ಜೆ ಕಾಲುಂಗುರಗಳ ದನಿ ಕೇಳಿಸಿದಾಗ ಮಾವನವರ ನಡತೆಯ ಕುರಿತು ಸಂದೇಹಪಡುತ್ತಾಳೆ. ಕೆಲಸದಾಳು ಶಂಭುವಿಗೆ ರಾಯರ ಕೋಣೆಯಲ್ಲಿ ಚದುರಂಗದ ಪಟ, ಪಾರಿಜಾತದ ಹೂಗಳು ಕಂಡರೂ ಒಡೆಯರನ್ನು ಶಂಕಿಸುವುದಿಲ್ಲ. ರತ್ನಗಂಬಳಿಯ ಮೇಲೆ ಅಂಗಾತ ಮಲಗಿದ ರಾಯರ ಎದೆಯ ಮೇಲೆ ತುರುಬಿಗೆ ಸುತ್ತಿದ ಕೆಂಡಸಂಪಿಗೆಯ ಮಾಲೆ, ಹಾಲು ಕುಡಿದಿಟ್ಟ ಎರಡು ಬೆಳ್ಳಿ ಲೋಟಗಳನ್ನು ಕಂಡರೂ ಅವನಿಗೆ ರಾಯರ ಮೇಲಿನ ಗೌರವವು ಕಡಿಮೆಯಾಗುವುದಿಲ್ಲ. ಸೊಕ್ಕು, ಹಿರಿಯರ ಬಗ್ಗೆ ಅಸಡ್ಡೆ, ತಿರಸ್ಕಾರ ಮತ್ತು ಅಪನಂಬಿಕೆಗಳನ್ನು ತೋರುವ ಮನೋಭಾವದವಳಾದ ಆಕೆಯು ಮಾವನವರ ಚಾರಿತ್ರ್ಯದ ಬಗ್ಗೆ ಆರೋಪವನ್ನು ಮಾಡುತ್ತಾಳೆ. ಹಸಿದ ಕೈಗೂಸಿಗಾಗಿ ಅನ್ನವನ್ನು ಬೇಡಿದ ತಾಯಿಯನ್ನು ಬೈದು ಓಡಿಸುತ್ತಾಳೆ. ರಾಯರ ಕೋಣೆಯಲ್ಲಿ ಹೆಣ್ಣಿನ ಮಾತು ಕೇಳಿಸುತ್ತದೆ. “ಈ ಮನಿಯೊಳಗ ನನ್ನ ಅಪಮಾನ. ನನ್ನ ಅಪಮಾನ ಆದಲ್ಲೆ ನಾ ನಿಂದ್ರೂದಿಲ್ಲ. ನಾ ತಲಿಬಾಗಿಲಿನಿಂದ ಬರ್ತೀನಿ. ತಲಿಬಾಗಿಲಿನಿಂದ ಹೋಗ್ತೀನಿ” (ಪುಟ 65) ಎನ್ನುತ್ತಿದ್ದಂತೆ ಬಾಗಿಲಿಗೆ ಕಿವಿಗೊಟ್ಟು ನಿಂತಿದ್ದವರು ನೋಡುತ್ತಿದ್ದಂತೆ ಗಾಳಿ ಬೀಸುತ್ತದೆ. ಬಾಗಿಲು ತೆರೆಯುತ್ತದೆ. ಗಾಳಿ ಮಾತ್ರ ಹೊರಗೆ ಹೋಗುತ್ತದೆ. ರಾಯರ ಕೈಯಲ್ಲಿ ಸೀರೆಯ ಸೆರಗಿನ ತುಂಡು ಉಳಿದಿರುತ್ತದೆ. ಕಾಣದ ಶಕ್ತಿಯ ಕಾರ್ಯ ವೈಖರಿಯ ಕುರಿತು ಶೋಧನೆಯಾಗುತ್ತದೆ. ಪ್ರಪಂಚವು ತನ್ನ ಕರ್ಮದ ಎಳೆಗಳಲ್ಲಿ ಸಿಲುಕಿದೆ ಎಂಬ ನಿಲುವನ್ನು ಪ್ರತಿಪಾದಿಸಿದರೂ, ವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸದೆ ಸ್ವಾತಂತ್ರ್ಯದ ಬಳಕೆಯ ತೊಡಕನ್ನು, ಬದುಕಿನ ಸಂಕೀರ್ಣತೆಯನ್ನು ಎತ್ತಿ ಹಿಡಿಯುವಲ್ಲಿ ಕತೆಯ ಶಕ್ತಿಯು ಪ್ರಕಟವಾಗುತ್ತದೆ. ಅಲೌಕಿಕ ಅನುಭವಗಳನ್ನು ತಮ್ಮೊಳಗೆ ಅಳವಡಿಸಿಕೊಂಡು ದೈನಂದಿನ ಬದುಕಿನ ವಾಸ್ತವದಾಚೆಗೆ ಕೊಂಡೊಯ್ಯುವ ಈ ಕತೆಯ ಧ್ವನಿಯು ಗಮನಾರ್ಹವಾಗಿದೆ. ವಾಸ್ತವ ಜಗತ್ತಿನಲ್ಲಿ ಲೋಕಾಭಿರಾಮದ ಮಾತುಗಳಿಂದ ಆರಂಭವಾಗುವ ಕತೆಯ ಭಾಷೆಯು ಹೆಜ್ಜೆ ಹೆಜ್ಜೆಗೂ ಗಂಭೀರವಾಗುತ್ತದೆ. ವೇಗವಾಗಿ, ಪಾತ್ರಗಳನ್ನು ಸ್ಫುಟಗೊಳಿಸುತ್ತಾ ಮುಂದುವರಿಯುವ ಕತೆಯು ಕುತೂಹಲ ಮತ್ತು ನಿಗೂಢತೆಯನ್ನು ಉಳಿಸಿಕೊಳ್ಳುತ್ತಾ ಸಾಗಿ, ಗಾಢವಾದ ಪರಿಣಾಮವನ್ನು ಸಾಧಿಸುತ್ತದೆ. ನವೋದಯದ ಕಡೆಗೆ ಒಲವನ್ನು ತೋರುವ ಕತೆಯು ನಿಯಮ ಬದ್ಧವಾದ, ಅರ್ಥ ಮಾಡಿಕೊಳ್ಳಬಹುದಾದ, ಅನುಭವಗಳಾಚೆಯ ಅನುಭವಗಳಲ್ಲಿ ಆಸಕ್ತಿಯನ್ನು ವಹಿಸುತ್ತದೆ. ಅನುಭವದ ನೆಲೆಗಳು ವಾಸ್ತವತೆಯ ಪಾತಳಿಯಲ್ಲಿ ಜರಗುತ್ತಿದ್ದರೂ ಕಣ್ಣಿಗೆ ಕಾಣಿಸದ, ಮಾನವ ಲೋಕವನ್ನು ಮೀರಿದ ಶಕ್ತಿಗಳು ನಮ್ಮ ಸುತ್ತಲೂ ಇವೆ ಎಂಬ ಭಾವನೆಯು ವ್ಯಕ್ತವಾಗುತ್ತದೆ. ಕತೆಯು ಅತೀಂದ್ರಿಯ ಅಂಶಗಳನ್ನು ಒಳಗೊಂಡಿರುವುದರಿಂದ ರಹಸ್ಯಮಯವಾಗಿದೆ. ಇಂಥ ಕತೆಗಳನ್ನು ಅನುಮಾನಗಳಿಲ್ಲದೆ ಹೇಳುವಂತಿಲ್ಲ ಎಂಬ ಅರಿವು ಕತೆಯ ಶರೀರದಲ್ಲಿ ಇದೆ. “ನನಗನಸ್ತೈತಿ ಸುಬ್ಬು ಅದು ಮನೋರಮ ಬಾಯವರ ಆತ್ಮ” (ಪುಟ 54) ಎಂಬ ಮಾತು ಅದಕ್ಕೆ ಸಾಕ್ಷಿಯಾಗಿದೆ. ಒಂದು ನಂಬಿಕೆಯನ್ನು ಮೂಢನಂಬಿಕೆ ಎಂದಾಕ್ಷಣ ಅದರ ಪ್ರಭಾವದಿಂದ ಬಿಡಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಓದುಗನ ಮನದಲ್ಲಿ ಹುಟ್ಟಿಸುವ ಕತೆಯು ಓದುಗನನ್ನು ಲಕ್ಷ್ಯದಲ್ಲಿಟ್ಟುಕೊಂಡು ಮೂಡಿ ಬಂದಿರುವುದರಿಂದ ನಂಬಿಕೆಯೊಳಗಿನ ಬೇರೆ ದೃಷ್ಟಿಗಳನ್ನು ಗಮನಿಸುವ ಅಗತ್ಯವಿದೆ.

ವ್ಯಕ್ತಿ, ಕುಟುಂಬ ಮತ್ತು ಸಮುದಾಯಗಳ ಕತೆಯನ್ನು ಏಕಕಾಲಕ್ಕೆ ಹೇಳುತ್ತಾ ತನ್ನೆಲ್ಲ ಸಂಕೀರ್ಣತೆಯೊಂದಿಗೆ ಬಿಚ್ಚಿಕೊಳ್ಳುವ ‘ಗುಳ್ಳಾಚಾರ ಹೊಲ’ವು ಈ ಸಂಕಲನದ ಭಿನ್ನ ರಚನೆಗಳಲ್ಲೊಂದು. ಕಥಾನಾಯಕನಾದ ಗುಳ್ಳನ ಚಿಂತೆ, ಚಿಂತನೆ ಮತ್ತು ಚಟುವಟಿಕೆಗಳು, ಅವನ ಸುತ್ತ ಜರಗುವ ವಿದ್ಯಮಾನಗಳು ಕತೆಯ ವಿನ್ಯಾಸವನ್ನು ರೂಪಿಸುತ್ತವೆ. ಆತನ ಆದರ್ಶ, ಕನಸುಗಳನ್ನು ದಾಖಲಿಸುತ್ತಾ ಅವನ ವ್ಯಕ್ತಿತ್ವ ಮತ್ತು ನೈತಿಕ ಸಂಘರ್ಷಗಳನ್ನು ವಿವರಿಸುವ ಲೇಖಕಿಯ ಕಥನ ಕೌಶಲವು ಗಮನವನ್ನು ಸೆಳೆಯುತ್ತದೆ.

ಮತಿವಂತ ಮಡಿವಂತರಾದ ಸಾಲಿಗ್ರಾಮ ರಾಮಾಚಾರ್ಯರ ಮುಂಜಾವದ ಹೊತ್ತಿನಲ್ಲಿ ಬೆಳಗಿನ ಸ್ನಾನ ಮತ್ತು ಪೂಜೆಯನ್ನು ಮುಗಿಸಿ ತಮ್ಮ ಆರಾಧ್ಯದೈವವಾದ ಹಯಗ್ರೀವ ಸ್ತುತಿಯನ್ನು ಮಾಡುವಾದ ಅವರ ಮನೆಯಾಳಾಗಿದ್ದ ಗುಳ್ಳನೆಂಬ ಹುಡುಗನು ಅವರ ನಿತ್ಯಕರ್ಮಗಳಿಂದ ಪ್ರಭಾವಿತನಾಗಿ ಬ್ರಾಹ್ಮಣ ಸಂಸ್ಕøತಿಗೆ ಮಾರುಹೋಗುತ್ತಾನೆ. ಆಚಾರ್ಯರು ಹಾಡುವ ‘ಕುದುರೆ ಬಂದಿದೆ ಚೆಲುವಾ’ ಎಂಬ ವಾದಿರಾಜ ಸ್ತುತಿಯನ್ನು ಕೇಳಿದಾಗ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಬಂದು ಭಕ್ತಿ ಪರವಶನಾಗಿ ನಿಂತುಕೊಳ್ಳುತ್ತಾನೆ. ಆಚಾರ್ಯರು ಮಡಿ ಮೈಲಿಗೆಯ ಬಗ್ಗೆ ಚಿಂತಿಸದೆ ಅವನನ್ನು ತಮ್ಮೆದುರು ಕುಳ್ಳಿರಿಸಿ ಹಾಡುತ್ತಿದ್ದುದಲ್ಲದೆ ಅಕ್ಷರಾಭ್ಯಾಸಕ್ಕೂ ವ್ಯವಸ್ಥೆಯನ್ನು ಮಾಡುತ್ತಾರೆ. ಬೆಳೆಯುವ ಅಥವಾ ಬೆಳೆಸುವ ಕ್ರಮದಲ್ಲಿ ಅಸ್ಮಿತೆಯ ನಿರ್ಧಾರವಾಗುತ್ತದೆಯೇ ಹೊರತು ಹುಟ್ಟಿನಿಂದಲ್ಲ ಎಂಬಂತೆ ಜನ್ಮದಿಂದ ದಲಿತನಾಗಿದ್ದ ಮಗು ಕರ್ಮದಿಂದ ಬ್ರಾಹ್ಮಣನಾಗುತ್ತಾನೆ. ಮನುಷ್ಯನ ಸಾಮಾಜಿಕ ವರ್ತನೆಯ ಮೂಲವೆಲ್ಲಿದೆ? ಅವನ ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶ ಯಾವುದು? ಎಂಬ ಪ್ರಶ್ನೆಗಳ ಆಧಾರದಲ್ಲಿ ಕತೆಯು ವ್ಯಕ್ತಿಯ ಬದುಕನ್ನು ಹೆಣೆಯುತ್ತದೆ.

ತಾಯಿ ಗುದ್ಲೆವ್ವನ ಮಾತಿಗೆ ಅನುಸಾರವಾಗಿ ಬದನೆಯ ಬೀಜಗಳನ್ನು ಬಿತ್ತಲು ಬಂದಾಗ ಬೆಳಗಿನ ವಾತಾವರಣದಿಂದ ಸ್ಫೂರ್ತಿಯನ್ನು ಪಡೆದು ‘ಕುದುರಿ ಬಂದದೆ ಚಲುವಾ’ ಎಂದು ಹಾಡಿದಾಗ ಬಾನಿನಿಂದ ಬಂದಿಳಿದ ಕುದುರೆಯು ಅವನ ಹಾಡಿನ ಲಯಕ್ಕೆ ತಕ್ಕಂತೆ ಕುಣಿದು ಮಾಯವಾಗುತ್ತದೆ. ಸಮ್ಮೋಹನಕ್ಕೆ ಒಳಗಾದವನಂತೆ ಮನೆಗೆ ಹಿಂತಿರುಗಿದವನಿಗೆ ಬೀಜಗಳನ್ನು ಬಿತ್ತಲು ಮರೆತು ಬಂದುದರ ನೆನಪಾಗಿ ಹೊಲಕ್ಕೆ ಹೋದಾಗ ಅಲ್ಲಿ ಯಾರೋ ಬೀಜವನ್ನು ಬಿತ್ತಿರುತ್ತಾರೆ. ನೀರು ಸೇದುವ ಹಗ್ಗವನ್ನು ತಗೆದುಕೊಳ್ಳಲು ಹತ್ತಿರ ಹೋದಾಗ ಅದು ಸಿಂಬೆ ಸುತ್ತಿದ ಹಾವಾಗಿ ಮಾರ್ಪಟ್ಟು ಗದ್ದೆಯಲ್ಲಿ ಮೈಹೊರಳಿಸಿ ಕಾಣದಾಗುತ್ತದೆ. ಕೆಲವೇ ದಿನಗಳಲ್ಲಿ ಬೀಜಗಳು ಮೊಳಕೆಯೊಡೆದು ಸಸಿಗಳಾಗಿ ಬದನೆಕಾಯಿಗಳು ತೂಗಾಡತೊಡಗುತ್ತವೆ. ಅವುಗಳು ಉತ್ತರ ಕನ್ನಡದ ಮಣ್ಣಿನಲ್ಲಿ ಬೆಳೆಯುವ ಬದನೆಗಳಾಗಿರದೆ ಕರಾವಳಿಯಲ್ಲಿ ಬೆಳೆಯುವಂಥ ಗುಳ್ಳಬದನೆಗಳಾಗಿರುತ್ತವೆ. ಈ ಘಟನೆಗೆ ಕೊಂಡಿಯಾಗಿ ಕನಕ – ಪುರಂದರ ಮೊದಲಾದ ದಾಸವರೇಣ್ಯರ ಸಮಕಾಲೀನರಾದ ವಾದಿರಾಜಸ್ವಾಮಿಗಳ ಬದುಕಿನ ಕತೆಯು ಉಪಾಖ್ಯಾನವಾಗಿ ಸೇರಿಕೊಳ್ಳುತ್ತದೆ. ವಾದಿರಾಜಸ್ವಾಮಿಗಳು ಶ್ರೀಮನ್ನಾರಾಯಣನಿಗೆ ಅರ್ಪಿಸಿದ ಎಡೆಯನ್ನು ದೇವರು ಕುದುರೆಯ ರೂಪದಲ್ಲಿ ಬಂದು ಸೇವಿಸುತ್ತಾರೆ. ನೈವೇದ್ಯವು ಕಡಿಮೆಯಾಗಿರುವುದನ್ನು ಕಂಡ ದೇವಾಲಯದ ಮಂದಿಯು ವಾದಿರಾಜರು ನೈವೇದ್ಯವನ್ನು ಕದ್ದು ತಿನ್ನುವರೆಂದು ಸಂಶಯಪಟ್ಟು ಅದರಲ್ಲಿ ವಿಷವನ್ನು ಬೆರೆಸುತ್ತಾರೆ. ಎಂದಿನಂತೆ ನೈವೇದ್ಯ ಸಮರ್ಪಣೆಯಾದ ಬಳಿಕ ಭೂಮಿ ಒಡೆಯುವಂತೆ ಓಡಿಬಂದ ಕುದುರೆಯು ಸಿಟ್ಟಿನಿಂದ ಹೇಷಾರವವನ್ನು ಮಾಡಿ ವಾದಿರಾಜರ ಹೆಗಲ ಮೇಲೆ ಮುಂಗಾಲುಗಳನ್ನಿಟ್ಟು ಹೂರಣವನ್ನು ತಿಂದು ಮಾಯವಾಗುತ್ತದೆ. ವಿಷವನ್ನು ಹಾಕಿದವರು ನೆತ್ತರು ಕಾರಿ ಸಾಯುತ್ತಾರೆ. ವಿಷಪ್ರಾಶನದ ಘಟನೆ ನಡೆದುದರಿಂದ ಗುಳ್ಳಬದನೆಯಲ್ಲಿ ಹಸಿರು ಕಲೆ ಈಗಲೂ ಉಳಿದುಕೊಂಡಿದೆ ಎಂಬ ದಂತಕತೆಯು ಲೇಖಕಿಯ ಮೇಲೆ ಪ್ರಭಾವವನ್ನು ಬೀರಿ ‘ಗುಳ್ಳಾಚಾರರ ಹೊಲ’ದ ಹುಟ್ಟಿಗೆ ಪ್ರೇರಣೆಯನ್ನು ನೀಡಿರುವ ಸಾಧ್ಯತೆಯಿದೆ.

ಗುಳ್ಳನ ಹೊಲದಲ್ಲಿ ಗುಳ್ಳಬದನೆ ಬೆಳೆದ ಸುದ್ದಿಯನ್ನು ಕೇಳಿ ಊರಿನವರು ಆತನ ಭೇಟಿಗೆ ಬರುತ್ತಾರೆ. ಆತನು ಪವಾಡ ಪುರುಷನೆಂದು ಬಗೆದು ಉದ್ದಂಡ ನಮಸ್ಕಾರವನ್ನು ಮಾಡುತ್ತಾರೆ. ಗುದ್ಲೆವ್ವಳು ಹೊಲದ ಅರ್ಧಭಾಗವನ್ನು ಮಠಕ್ಕೆ ದಾನ ಮಾಡಲು ಸಿದ್ಧಳಾಗುತ್ತಾಳೆ. ತನ್ನ ತಮ್ಮನ ಹೆಂಡತಿಯಾದ ಗುದ್ಲೆವ್ವಳು ಬ್ರಾಹ್ಮಣರೊಂದಿಗೆ ಸೇರಿಕೊಂಡು ಅವರ ಮಠಕ್ಕೆ ಹೊಲವನ್ನು ದಾನ ಮಾಡಲಿರುವ ವಿಚಾರವನ್ನು ತಿಳಿದ ಗುಳ್ಳನ ದೊಡ್ಡಪ್ಪನಾದ ಅಂದಾನೆಪ್ಪನು ಮುಂಡರಗಿಯಿಂದ ಬರುತ್ತಾನೆ. ಲೋಭಿಯೂ, ಕಚ್ಚೆಹರುಕನೂ ಆಗಿರುವ ಆತನಿಗೆ ತಮ್ಮನ ಹೊಲ ಮತ್ತು ಅವನ ಹೆಂಡತಿ ತನ್ನ ಪಾಲಿಗೆ ಬಾರದಿದ್ದಾಗ ಹುಟ್ಟಿದ ಅಸೂಯೆಯು ಹೊಗೆಯಾಡುತ್ತಿದ್ದುದರಿಂದ ಬ್ರಾಹ್ಮಣ ವಿರೋಧಿ ಮಾತುಗಳನ್ನಾಡುತ್ತಾ ಜಗಳವನ್ನು ಮಾಡುತ್ತಾನೆಯೇ ಹೊರತು ಪ್ರಗತಿಪರನಾಗಿರುವುದರಿಂದಲ್ಲ. ಶಾಸ್ತ್ರೋಕ್ತವಾದ ರೀತಿಯಲ್ಲಿ ದಾನ ನಡೆಯುವ ಹೊತ್ತಿನಲ್ಲಿ ರಾಮಾಚಾರ್ಯರನ್ನು ಹೊಡೆದು ಸಾಯಿಸುವ ಆತನು ಕ್ರೌರ್ಯದ ಪ್ರತೀಕವಾಗಿದ್ದಾನೆ. ಸಿಟ್ಟಿಗೆದ್ದ ಗುಳ್ಳನ ದೇಹದಲ್ಲಿ ದೇವಾಶ್ವದ ಶಕ್ತಿಯು ತುಂಬಿ ದೊಡ್ಡಪ್ಪನನ್ನು ಒದ್ದು ಕೊಲ್ಲುತ್ತಾನೆ. ನಿರಪರಾಧಿಯಾದ ಆಚಾರ್ಯರನ್ನು ಕೊಂದ ಸಿಟ್ಟಿನಲ್ಲಿ ಅಂದಾನೆಪ್ಪನನ್ನು ಕೊಂದೆನೆಂದು ಸುಳ್ಳು ಹೇಳಿ ಸೆರೆಮನೆಯನ್ನು ಸೇರುವ ಗುದ್ಲೆವ್ವಳು ಮಾತೃಪ್ರೇಮ ಮತ್ತು ತ್ಯಾಗದ ಸಂಕೇತವಾಗುತ್ತಾಳೆ.

ಬ್ರಾಹ್ಮಣ ಸಮಾಜ ಮತ್ತು ದಲಿತ ಸಮುದಾಯಗಳನ್ನು ಏಕರೀತಿಯ ಶಿಲ್ಪವಾಗಿ ಕಡೆಯದ ಲೇಖಕಿಯು ರಾಮಾಚಾರ್ಯ ಮತ್ತು ಗುಳ್ಳನ ಕುಟುಂಬದೊಳಗಿನ ಭಿನ್ನ ನೆಲೆಗಳನ್ನು ಗುರುತಿಸಿರುವುದು ಅವರ ಸೂಕ್ಷ್ಮತೆಗೆ ನಿದರ್ಶನವಾಗಿದೆ. “ಹುಚ್ಚ ಸೂಳಿ ಮಗನ, ಹೇಳಿದ ಕೆಲಸ ಮಾಡೋದು ಬಿಟ್ಟು ಕುದರಿ ಹಾಡ ಕೇಳ್ಳಾಕ ನಿಂತಿದ್ದೀಯಾ ಕತ್ತೆ, ಮೊದ್ಲ ಕೆಲಸ ಮುಗಿಸು. ನಮ್ಮಪ್ಪ ಹಿಡಿದ ತಾಳ ನಿನಗೂ ಕೊಡ್ತಾನೇನ, ಹಾಕು ಎರಡೂ ಕೈಲೇ ಹೊಟ್ಟಿಗೆ ಕೇರು” (ಪುಟ 70) ಎಂಬ ವಾದಿರಾಜನ ಮಾತಿನಲ್ಲಿ ಮೇಲುಜಾತಿಯವರಿಗೆ ಬಡವರ ಮೇಲಿರುವ ತಿರಸ್ಕಾರ “ನಿನ್ನ ಹೊಲ ಸೋದೆ ಮಠಕ್ಕ ದಾನ ಮಾಡು. ಇದು ಶ್ರೀಹರಿ ಇಚ್ಛಾ” (ಪುಟ 92) ಎಂದ ಮಠದ ಯತಿಗಳ ನುಡಿಯಲ್ಲಿ ಹೊಲವನ್ನು ಪಡೆಯುವ ಉದ್ದೇಶವು ವ್ಯಕ್ತವಾಗುತ್ತದೆ. ಗುದ್ಲೆವ್ವ ಒಪ್ಪದಿದ್ದ ಬೆನ್ನಲ್ಲೇ ಗುಳ್ಳ ನಾಪತ್ತೆಯಾಗುತ್ತಾನೆ. ಹೊಲವನ್ನು ಬಿಟ್ಟುಕೊಡದ ಸಿಟ್ಟಿನಿಂದ ಯತಿಗಳು ಈ ಕೆಲಸವನ್ನು ಮಾಡಿದ್ದಾರೆ ಎಂಬ ಸಂಶಯದ ಪ್ರಶ್ನೆಗೆ ಉತ್ತರಿಸುತ್ತಾ “ನಿನ್ನ ಮಗು ದೇವರ ಮಗು. ಹಯಗ್ರೀವ ಕೃಪಾ ಅದರ ಮೇಲಿದೆ ತಾಯಿ. ನಿನ್ನ ಹೊಲ ಮಠಕ್ಕೆ ಬೇಡ. ಹೊಲದಾಸೆಗೆ ಮಗುವಿನ ಬಲಿ ತಗೊಳ್ಳುವಷ್ಟು ಹೃದಯಹೀನರು ನಾವಲ್ಲಮ್ಮಾ” (ಪುಟ 94) ಎನ್ನುವಲ್ಲಿ, ಬ್ರಾಹ್ಮಣರನ್ನು ಗೌರವಿಸುವ ಜನರ ನಡುವೆ ಅಂಧವಾದ ಬ್ರಾಹ್ಮಣ ದ್ವೇಷವನ್ನು ವಿನಾಕಾರಣವಾಗಿ ತಲೆಗೇರಿಕೊಂಡ ಅಂದಾನೆಪ್ಪನಂಥ ಕೆಟ್ಟ ಪಾತ್ರವನ್ನು ಸೃಷ್ಟಿಸುವ ಮೂಲಕ ಲೇಖಕಿಯು ಸೈದ್ಧಾಂತಿಕ ಸಮತೋಲವನ್ನು ಕಾಯ್ದುಕೊಂಡಿದ್ದಾರೆ. ಮೇಲು ಜಾತಿಯವರನ್ನ ಶೋಷಕರಾಗಿ, ಕೆಳಜಾತಿಯವರನ್ನು ಶೋಷಿತರಾಗಿ ಕಲ್ಪಿಸಿ ಅಭ್ಯಾಸವಾಗಿರುವ ಈ ಹೊತ್ತಿನಲ್ಲಿ ಅದಕ್ಕೆ ವಿರುದ್ಧವಾದ ದೃಷ್ಟಿಕೋನವನ್ನು ಒದಗಿಸುವ ಮೂಲಕ ಲೇಖಕಿಯು ವಾಸ್ತವದ ಇನ್ನೊಂದು ಮಗ್ಗುಲಿಗೆ ಕಣ್ಣು ಹಾಯಿಸಲು ಪ್ರೇರಣೆಯನ್ನು ನೀಡಿದ್ದಾರೆ. ರಾಮಾಚಾರ್ಯ – ಅಂದಾನೆಪ್ಪ, ಗುಳ್ಳ – ವಾದಿರಾಜ, ಸೀತಮ್ಮ – ಗುದ್ಲೆವ್ವಳ ನಡುವಿನ ವ್ಯತ್ಯಾಸಗಳು ಕೇವಲ ವ್ಯಕ್ತಿಗತ ಭಿನ್ನತೆಗಳಲ್ಲ. ಗುಳ್ಳನು ಕೆಳಜಾತಿಯವನಾಗಿದ್ದರೂ ರಾಮಾಚಾರ್ಯ ದಂಪತಿಗಳು ಅವನ ಮೇಲೆ ತೋರ್ಪಡಿಸಿದ ಪ್ರೀತಿಗೆ ಕಳಂಕ ಹಚ್ಚುವಂತಿಲ್ಲ. ಬದುಕಿನ ಏರಿಳಿತಗಳು, ಬಾಂಧವ್ಯದ ಮೇಲೆ ಬೀಳುವ ನೆರಳು ಸಂಬಂಧಗಳನ್ನು ವಕ್ರಗೊಳಿಸುವ ರೀತಿ, ಸಾಮಾನ್ಯ ಘಟನೆಗಳು ತಿರುಚಿಕೊಂಡು ಜೀವನವನ್ನು ದುರಂತಮಯಗೊಳಿಸುವ ಬಗೆ ಮನಮುಟ್ಟುವಂತೆ ಮೂಡಿ ಬಂದಿದೆ. ಜಾತೀಯತೆಯನ್ನು ಮೀರಿ ಮಾನವೀಯತೆಯನ್ನು ಎತ್ತಿ ಹಿಡಿಯುವ ಕತೆಯು ಗುಳ್ಳನ ಬೆಳವಣಿಗೆ, ತಾಯಿಯ ತುಮುಲ, ಸಂಪ್ರದಾಯನಿಷ್ಠರ ಔದಾರ್ಯ, ತಿರಸ್ಕಾರ, ಜಾತಿ ಬಾಂಧವರ ಕ್ರೌರ್ಯ, ಸ್ವಾರ್ಥಲಾಲಸೆ, ಹಳ್ಳಿಯ ಬದುಕಿನ ಒಳಹೊರಗುಗಳನ್ನು ಅನಾವರಣಗೊಳಿಸುತ್ತದೆ. ಗುಳ್ಳನ ಕ್ರಿಯೆ-ಪ್ರತಿಕ್ರಿಯೆಗಳನ್ನು ಸಾಮಾಜಿಕ ಸಂದರ್ಭದಲ್ಲಿಟ್ಟು ನೋಡುತ್ತಾ ಅವನಿಗಿಂತ ತೀರಾ ಭಿನ್ನ ನೆಲೆಯ ಪಾತ್ರಗಳನ್ನೂ ಅಷ್ಟೇ ಸಂಕೀರ್ಣವಾಗಿ ಬಿಡಿಸುತ್ತದೆ. ಸಮಾಜದೊಳಗಿನ ಭಿನ್ನ ವ್ಯಕ್ತಿಗಳ ಮಾದರಿಯನ್ನು ಸೃಷ್ಟಿಸುತ್ತಾ ಸಾಮರಸ್ಯದ ಸಂದೇಶವನ್ನು ನೀಡುತ್ತದೆ. ಯಾವುದನ್ನೂ ವೈಭವೀಕರಿಸದೆ, ಹೀಗೆಳೆಯದೆ ಸೈದ್ಧಾಂತಿಕ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

‘ಗಿಡ್ಡ ಗಿಣ್ಣ’ ಎಂಬ ಕತೆಯು ಮನಕಲಕುವ ರಚನೆಗಳಲ್ಲಿ ಒಂದು. ‘ಮೈದಾ ಹಿಟ್ಟಿನಂಥ ಮುಖ. ಅದರಲ್ಲಿ ಬೆರಳೊತ್ತಿದಂತೆ ಕಣ್ಣು ಮೂಗುಗಳು. ಜೋಳದ ಪುಚ್ಛದಂತಿರುವ ಕೆಂಪು ಕೂದಲು. ಗಿಡ್ಡ ಕೈಕಾಲುಗಳು.” (ಪುಟ 106) ಎಂಬ ವಾಕ್ಯಗಳು ಗಿಣ್ಣ ಎಂಬ ಅಡ್ಡ ಹೆಸರನ್ನು ಹೊಂದಿದ ಗಣೇಶ ಎಂಬ ಹುಡುಗನ ಸಮಸ್ಯಾತ್ಮಕ ಪರಿಸ್ಥಿತಿಯನ್ನು ಸೂಚಿಸುತ್ತದೆ. ಮನಃಶಾಸ್ತ್ರೀಯ ಸಿದ್ಧಾಂತಗಳ ಗೋಜಿಗೆ ಹೋಗದೆ ಲೇಖಕಿಯು ತಮ್ಮ ಪ್ರತಿಭೆಯ ಒಳನೋಟಗಳಿಂದ ಗಿಣ್ಣನ ಬದುಕಿನ ಗಂಟುಗಳನ್ನು ಮತ್ತು ಕತೆಯ ಆಶಯವನ್ನು ಬಿಡಿಸಿ ತೋರಿಸುತ್ತಾರೆ. “ಅಂಗವಿಕಲರು, ಹುಚ್ಚರು, ದುಃಖಿಗಳು, ದೀನರು ಇವರನ್ನು ಪ್ರೀತಿಯಿಂದ ನೋಡಿಕೊಳ್ಳೋದ ಒಂದ ಪ್ರಾರ್ಥನಾ; ಪರಮಾತ್ಮನ ಪೂಜಿ. ಮಾನವತಾ ಮನೋಧರ್ಮ ಶ್ರೇಷ್ಠ ಧರ್ಮ. ಇದ ಭಕ್ತಿ ಮಾರ್ಗ; ಮುಕ್ತಿ ಮಾರ್ಗ. ಕೃಷ್ಣ, ಕ್ರೈಸ್ತ, ಮುಹಮ್ಮದ, ಬುದ್ಧ, ಬಸವಣ್ಣ, ಗಾಂಧಿ ಇದನ್ನೇ ಹೇಳ್ಯಾರ. ನಮ್ಮ ಗಿಣ್ಣ ಅಡಗಿ ಮಹಾದೇವ ಭಟ್ಟ ಮತ್ತು ಶಂಕರವ್ವನ ಮಗ. ಗಿಣ್ಣ ಹುಟ್ಟಿ ಒಂದು ವರ್ಷಕ್ಕ ಮಹಾದೇವ ಕಾಲ ಜಾರಿ ಬಿದ್ದು, ತಲಿಗೆ ಪೆಟ್ಟ ಹತ್ತಿ ತೀರಿಕೊಂಡ. ಅವ ಬಿಟ್ಟು ಹೋದ ಆಸ್ತಿ ಅಂದ್ರ ಪೊಳಪಾಟ, ಲಟ್ನಿ, ಸೌಟು. ಶಂಕರವ್ವ್ಗ ಮಡಿ ಆಗಲಿಲ್ಲ. ಸಕೇಶಿ ಅಂತ ಬ್ರಾಹ್ಮಣರು ಅಡಿಗೆಗ ಕರೀತಿರಲಿಲ್ಲ. ಹೀಗಾಗಿ ಯಾರ್ಯಾರ ಮನಿ ಕೆಲಸ ಮಾಡತಿದ್ಲು. ಆದರ ಗಿಣ್ಣ ಬೆಳಿಲೇ ಇಲ್ಲ. ಶಂಕರವ್ವನ ತಾರುಣ್ಯ ಸೌಂದರ್ಯ, ಒಂಟಿತನದ ಲಾಭ ತಗೋಬೇಕಂತ ಒಬ್ಬ ವ್ಯಕ್ತಿಗೆ ಅನಸ್ತು. ಆತ ಶಂಕ್ರವ್ವನ ಮನೆಗೆ ಬಂದು ಬಾಗಲ ಹಾಕಿ ಮೈಗೆ ಕೈ ಹಚ್ಚಿ ಸೆರಗೆಳೆದಾನ. ಆ ಕೊಸರಾಟದಾಗ ಕಂದೀಲ ಉರುಳಿ, ಎಣ್ಣಿ ಚೆಲ್ಲಿ, ಗಿಣ್ಣನ ಚಣ್ಣ ತೊಯ್ದು, ಉರಿ ಹತ್ತಿ ಗಾಬರ್ಯಾಗಿ ಶಂಕ್ರವ್ವ ‘ಗಿಣ್ಣ ಗಿಣ್ಣ ಕಳಿ ಚಣ್ಣ’ ಅಂತ ಕೂಗಿಕೊಂಡ್ಲು. ಆ ವ್ಯಕ್ತಿ ಶಂಕ್ರವ್ವನ ಬಾಯಿಗೆ ಅರಿವಿ ತುರುಕಿ, ಕೆಳಗೆ ಕೆಡವಿ, ಮೂಗು ಒತ್ತಿ ಹಿಡಿದ. ಆಕಿಗೆ ಉಸುರುಗಟ್ಟಿತು. ಮನಿಗೆ ಬೆಂಕಿ ಹತ್ತಿತು. ಅವ ಬಾಗಲ ತೆಗದು ಓಡಿಹೋದ. ಗಿಣ್ಣ ಹೊರಬಂದು ಲಬೋಲಬೋ ಹೊಯ್ಕೊಳ್ಳ ಹತ್ತಿದ. ಆಕಿ ಮೈಗೆ ಬೆಂಕಿ ಹತ್ತಿ ಸತ್ತದ್ದು ನೋಡ್ಯಾನ. ಶಾಕ್ ಆಗಿ ಮಾನಸಿಕ ರೋಗಿ ಆಗ್ಯಾನ. ತಾಯಿ ಕೂಗಿದ ಕೂಗು ಅವನ ಕಿವ್ಯಾಗ ಕೂತದ. ಟ್ರೀಟಮೆಂಟ್ ಕೊಟ್ರೆ ಗುಣ ಆಗತದ. ಶಂಕ್ರವ್ವ ಸತ್ತು ಹೋಗ್ಯಾಳ. ಆದರ ಜೀವಂತ ಗಿಣ್ಣನ್ನ ಉಳಿಸಕೋಬೇಕದ” (ಪುಟ 119-120) ಎಂಬ ಪ್ರಹ್ಲಾದ ಮೇಷ್ಟ್ರ ಅಂತಃಕರಣದ ನುಡಿಗಳು ಅದಕ್ಕೆ ಉದಾಹರಣೆಯಾಗಿವೆ. ಗಿಣ್ಣನ ಮೇಲೆ ಹೆಚ್ಚಿನವರಿಗೆ ಅನುಕಂಪ ಬೆರೆತ ಪ್ರೀತಿಯಿದೆ. ಕೆಲವರಿಗೆ ಸ್ವಲ್ಪವೂ ಸಹಾನುಭೂತಿಯಿಲ್ಲ. ಬೀದಿಯ ಮಕ್ಕಳ ಕೀಟಲೆ ಒಂದು ಬಗೆಯಾದರೆ ಪೂಜಾರಿ ಶುಕ್ರಾಚಾರಿಯ ಕ್ರೌರ್ಯ ಇನ್ನೊಂದು ಬಗೆ. ‘ಗಿಡ್ಡ ಗಿಣ್ಣ ಗಿಡ್ಡ ಗಿಣ್ಣ ಕಳಿ ಚಣ್ಣ’ ಎಂದು ಹುಡುಗರು ಹೇಳುತ್ತಿದ್ದಂತೆ ಚಡ್ಡಿ ಕಳಚಿ ನಿಲ್ಲುವ ಹುಡುಗನು ಅವರ ಪಾಲಿಗೆ ಮೋಜಿನ ವಸ್ತು. ಆದರೆ ಶುಕ್ರಾಚಾರಿಯು ಅವನ ಲಿಂಗಕ್ಕೆ ಕಲ್ಲು ಹೊಡೆದು ಪ್ರಾಣ ತೆಗೆದ ಕ್ರೂರಿ. ಗಿಣ್ಣನು ತನ್ನ ತಾಳ್ಮೆ, ಮುಗ್ಧತೆ, ಅಂತಃಕರಣದಿಂದ ಜನರ ಪ್ರೀತಿಯನ್ನು ಗಳಿಸಿದ ಹುಡುಗ. ಆದರೆ ಸಜ್ಜನನಿಗೂ ವೈರಿ ಇರುತ್ತಾನೆ. ಮಾನಗೆಟ್ಟವನು ಮರ್ಯಾದೆ ಇರುವವನನ್ನು ನೋಯಿಸುತ್ತಾನೆ ಎಂಬುದಕ್ಕೆ ಗಿಣ್ಣನ ಬದುಕು ಸಾಕ್ಷಿಯಾಗಿದೆ. ಶುಕ್ರಾಚಾರಿಯು ಮಡಿಯಲ್ಲಿ ಮಿಂದ. ಮಡಿಯಲ್ಲಿ ಉಂಡ. ಮಡಿಯುಟ್ಟು ಪೂಜಿಸಿದ. ದೇಹವನ್ನು ಹಗಲು ಮಡಿಯಲ್ಲಿಟ್ಟ. ರಾತ್ರಿ ನಾಗಿಗೆ ಕೊಟ್ಟ. ಮಡಿವಂತನೆನಿಸಿಕೊಂಡವನ ಮೈಮನಗಳೆರಡೂ ಮೈಲಿಗೆ. ಅರಿಷಡ್ವೈರಿಗಳ ಗುಲಾಮನಾದ ಆತನಿಗೆ ದ್ವೇಷ ಸಾಧಿಸುವುದು ಸುಲಭ. ಪ್ರೀತಿಸುವುದು ಕಷ್ಟ. ಆದರೆ ಗಿಣ್ಣನು ತನ್ನ ಪ್ರೀತಿಪಾತ್ರ ನಡೆನುಡಿಗಳಿಂದ ಎಲ್ಲರನ್ನೂ ಗೆದ್ದು ಹೋಗಿಬಿಟ್ಟಿದ್ದ. ಗಿಣ್ಣ ಸತ್ತ ಎರಡೇ ವರ್ಷಗಳಲ್ಲಿ ಗುಹ್ಯರೋಗದಿಂದ ನರಳಿ ಸತ್ತ ಶುಕ್ರಾಚಾರಿಯ ಹೆಣಕ್ಕೆ ಮುನಿಸಿಪಾಲಿಟಿಯವರು ಮೂಗು ಮುಚ್ಚಿ ಬೆಂಕಿಯನ್ನು ಇಡುತ್ತಾರೆ. ಆತನು ಜೀವಂತವಿದ್ದಾಗ ಮಾತ್ರವಲ್ಲ ಸತ್ತಾಗಲೂ ಕೆಟ್ಟ ವಾಸನೆಯನ್ನೇ ಬೀರಿ ಹೋಗುತ್ತಾನೆ.

ನ್ಯಾಯವಾದಿಯಾದ ವ್ಯಾಸರಾಯರ ಮನೆಯ ಗಜ್ಜೆಟೀಕನ್ನು ಕದ್ದ ಅಪವಾದಕ್ಕೆ ಬಲಿಯಾದ ಹನ್ನೊಂದರ ಹರೆಯದ ಪ್ರಹ್ಲಾದನು ಆತ್ಮಹತ್ಯೆಯನ್ನು ಮಾಡುವ ಘಟನೆಯು ‘ಗೆಜ್ಜೀಟೀಕೆ’ ಎಂಬ ಕತೆಯಲ್ಲಿ ನಡೆಯುವ ಮುಖ್ಯವಾದ ಘಟನೆಯಾಗಿದೆ. ಕಳವು ನಡೆಯಿತು ಎನ್ನಲಾದ ಹೊತ್ತಿನಲ್ಲಿ ವ್ಯಾಸರಾಯರ ಕಾರಖೂನನಾದ ಮಾಧವಾಚಾರ್ಯರ ಮಗ ಪ್ರಹ್ಲಾದನು ಅಲ್ಲೇ ಇದ್ದುದರಿಂದ ವ್ಯಾಸರಾಯರ ಹೆಂಡತಿ ಬಕುಲಾಬಾಯಿಯು ಅವನ ಮೇಲೆ ಆರೋಪವನ್ನು ಹೊರಿಸುತ್ತಾಳೆ. ಆತನು ತಪ್ಪಿತಸ್ಥನಲ್ಲದಿದ್ದರೂ ವ್ಯಾಸರಾಯರಿಂದ ಏಟುಗಳನ್ನು ತಿನ್ನುವುದಲ್ಲದೆ ಬೇರೆ ದಾರಿಯಿಲ್ಲ. ಇದರಿಂದ ನೊಂದ ಪ್ರಹ್ಲಾದನು ಕುತ್ತಿಗೆಗೆ ಹಗ್ಗ ಬಿಗಿದು ತನ್ನ ಬದುಕನ್ನು ಕೊನೆಗೊಳಿಸುತ್ತಾನೆ. ಲಕ್ಷ್ಮೀಪೂಜೆಯಂದು ಹಿಟ್ಟಿನ ಭರಣಿಗೆ ಕೈಹಾಕಿದಾಗ ಅದರೊಳಗಿನಿಂದ ಗಜ್ಜೆಟೀಕು ಹೊರಬರುತ್ತದೆ. ವಿಚಾರಣೆಯನ್ನು ಮಾಡಿದಾಗ ವ್ಯಾಸರಾಯರ ಸೋದರಳಿಯನಾದ ಅರವಿಂದನೇ ಆ ಕೆಲಸವನ್ನು ಮಾಡಿದ್ದನೆಂದು ತಿಳಿಯುತ್ತದೆ. ಪ್ರಹ್ಲಾದ ಮತ್ತು ಅರವಿಂದ ವ್ಯಾಸರಾಯರ ಮನೆಯಲ್ಲಿ ಉಳಿದುಕೊಂಡು ಕಲಿಯುತ್ತಿದ್ದರು. ಆಟಪಾಠಗಳಲ್ಲಿ ಮುಂದಿದ್ದ ಪ್ರಹ್ಲಾದನ ಮೇಲೆ ಅಸೂಯೆಯನ್ನು ಹೊಂದಿದ್ದ ಅರವಿಂದನು ಮಾತು ಮಾತಿಗೂ ಹಂಗಿಸಿ ನೋಯಿಸುತ್ತಿದ್ದುದಲದೆ ಗಜ್ಜೆಟೀಕನ್ನು ಕದ್ದು ಪ್ರಹ್ಲಾದನ ಮೇಲೆ ಆರೋಪವನ್ನು ಹೊರಿಸಿ ಆತನ ಮರಣಕ್ಕೆ ಕಾರಣನಾಗುತ್ತಾನೆ. ಕದ್ದವರ ಬಗ್ಗೆ ಹೆಂಗಸರ ಊಹೆಗಳು, ಹುಡುಗನ ಮರಣ ಸುತ್ತುಮುತ್ತಲಿನವರ ಮನಸ್ಸನ್ನು ಆವರಿಸುವ ಬಗೆ, ದುಡುಕಿದವರ, ಮತ್ತು ಹುಡುಗನ ವಿರುದ್ಧ ಮಸಲತ್ತು ಮಾಡಿದವರ ಪಾಪಪ್ರಜ್ಞೆ, ವ್ಯಾಸರಾಯ – ಮಾಧವಾಚಾರ್ಯರ ಸಂಬಂಧ, ಬಕುಲಾಬಾಯಿಯ ಸೊಕ್ಕಿನ ಕುರಿತು ಅಡುಗೆಯ ಸುಂದರವ್ವ ಮತ್ತು ವೆಂಕಜ್ಜಿಯ ಪ್ರತಿಕ್ರಿಯೆಗಳೇ ಮುಂತಾಗಿ ಕುತೂಹಲವನ್ನು ಕೆರಳಿಸುವ ಕಥಾಜಗತ್ತನ್ನು ಸೃಷ್ಟಿಸುವುದರಲ್ಲಿ ಲೇಖಕಿಯು ಯಶಸ್ವಿಯಾಗಿದ್ದಾರೆ.

ಮಕ್ಕಳ ಬಗ್ಗೆ ತಾಯಿಯ ಹೃದಯದಲ್ಲಿ ತುಂಬಿದ ಭಾವನೆಗಳು ದೇಶಕಾಲ ಪರಿಮಿತವಾದುದಲ್ಲ. ಕರುಳಬಳ್ಳಿಯ ಉದ್ಧಾರಕ್ಕಾಗಿ ತುಡಿಯುವ ಮಾತೃಹೃದಯವು ಮಗುವಿನ ಜೀವನವು ಉದ್ಧಾರವಾದುದನ್ನು ಕಂಡಾಗ ನೆಮ್ಮದಿಯನ್ನು ಅನುಭವಿಸಿದರೆ ಮಗುವಿನಿಂದ ಬೇರೆಯದಾಗ ಇನ್ನಿಲ್ಲದ ಯಾತನೆಯನ್ನು ಅನುಭವಿಸುತ್ತದೆ. ‘ಓಮಿಯ ಗಂಟು’ ಎಂಬ ಕತೆಯಲ್ಲಿ ಮಾತೃ ಹೃದಯದ ತುಮುಲ ತಲ್ಲಣಗಳು ಚಿತ್ರಿತವಾಗಿವೆ. ಓಮಿಯ ಗಂಡ ಮಹೇಶನು ಒಳ್ಳೆಯವನಾದರೂ ಸಾಧು ಸಂತರ ಸಂಗ ಮಾಡಿದುದರ ಪರಿಣಾಮವಾಗಿ ಮೂಢನಂಬಿಕೆಗಳನ್ನು ಮೈಗೂಡಿಸಿಕೊಂಡಿರುತ್ತಾನೆ. ಮಗನು ಸನ್ಯಾಸಿಯಾಗಿ ಲೋಕೋದ್ಧಾರಕನಾಗುವ ಸಾಧ್ಯತೆಯಿದೆ ಎಂದ ಸಂತನ ಮಾತಿಗೆ ಮರುಳಾದ ಆತನು ಓಮಿಗೆ ನಿದ್ದೆ ಬರಿಸುವ ಔಷಧಿಯನ್ನು ಕುಡಿಸಿ ಮಗುವನ್ನು ಎತ್ತಿಕೊಂಡು ಸನ್ಯಾಸಿಗಳ ಜೊತೆಗೆ ಊರನ್ನು ಬಿಟ್ಟು ಹೋಗುತ್ತಾನೆ. ಗಂಡ ಮತ್ತು ಮಗನನ್ನು ಕಳೆದುಕೊಂಡ ಓಮಿಯು ಹುಚ್ಚಳಾಗಿ ಬಡಬಡಿಸುತ್ತಾ ಗಂಟೊಂದನ್ನು ನಿಧಿಯಂತೆ ಎದೆಗವಚಿಕೊಂಡು ಬೀದಿಗಳಲ್ಲಿ ಅಲೆಯುತ್ತಾ ಕೊರಗಿ ಪ್ರಾಣವನ್ನು ಬಿಡುತ್ತಾಳೆ. ಆಕೆಯ ಕೈಯಲ್ಲಿದ್ದ ಗಂಟನ್ನು ಬಿಚ್ಚಿ ನೋಡಿದಾಗ ತನ್ನ ಮಗು ಕಾಣೆಯಾದ ದಿನ ಹಾಕಿಕೊಂಡಿದ್ದ ಬಟ್ಟೆಗಳು ಕಾಣಿಸುತ್ತವೆ. ಮಗುವನ್ನು ಕಳೆದುಕೊಂಡ ತಾಯಿಯ ಪರಿಸ್ಥಿತಿಯು ಮನಕರಗಿಸುತ್ತದೆ.

‘ಮೃತ್ಯುಂಜಯ’ದ ಕತೆಯ ಎಳೆಯು ತೆಳ್ಳಗಿದೆ. ತಾನು ಪ್ರೀತಿಸುತ್ತಿದ್ದ ಅರ್ಪಿತಾಳನ್ನು ಮದುವೆಯಾಗಲು ಹಿರಿಯರು ಒಪ್ಪಿಗೆಯನ್ನು ಕೊಡದಿದ್ದುದರಿಂದ ನೊಂದ ಅಚ್ಯುತಾನಂತನು ಉತ್ತರ ಭಾರತಕ್ಕೆ ಹೋಗುತ್ತಾನೆ. ಅಲಕನಂದಾ ತೀರದ ಮೇಲೆ ಕೇದಾರನಾಥಕ್ಕೆ ಹೋಗುವ ಹಾದಿಯ ನಡುವೆ ವಿಷ್ಣುಪ್ರಯಾಗದಲ್ಲಿ ಆತ್ಮಹತ್ಯೆಯನ್ನು ಮಾಡಲು ಬಯಸುತ್ತಾನೆ. ದಾರಿ ತಪ್ಪಿ ಕಾಡು ಪಾಲಾದಾಗ ಹುಲಿಯ ಗರ್ಜನೆಯನ್ನು ಕೇಳಿ ಹೆದರಿದ ಆತನಿಗೆ ಜೀವದ ಮೇಲೆ ಆಸೆಯು ಹುಟ್ಟುತ್ತದೆ. ಇದ್ದಕ್ಕಿದ್ದಂತೆ ಜಗ್ಗನೆ ಬೆಳಕು ಬಂದು ಅದರೊಳಗಿನಿಂದ ತೇಜಸ್ವಿಯಾದ ಬ್ರಾಹ್ಮಣನು ಬಂದು ಅವನ ಕೈಹಿಡಿದು ಯಾತ್ರಾರ್ಥಿಗಳ ತಂಡಕ್ಕೆ ಬಿಡುತ್ತಾನೆ. ಅಚ್ಯುತಾನಂತನ ಪ್ರೇಯಸಿಯಾಗಿದ್ದುದರಿಂದ ಹೆಸರು ಕೆಟ್ಟುದರ ಪರಿಣಾಮವಾಗಿ ವರನ ಕಡೆಯವರು ಅರ್ಪಿತಾಳೊಂದಿಗಿನ ಸಂಬಂಧವನ್ನು ಕಡಿದುಕೊಂಡಿರುತ್ತಾರೆ. ಪ್ರೇಮಿಗಳಾದವರು ದೇವರ ದಯೆಯಿಂದ ಅಡೆತಡೆಗಳನ್ನು ಮೀರಿ ಆಕೆಯನ್ನು ಮದುವೆಯಾಗುವ ಕ್ರಿಯೆಯು ಇಲ್ಲಿದೆ.

ದೇವದಾಸಿ ಸಮಸ್ಯೆಯು ನವೋದಯದ ಹಲವು ಕತೆಗಳಿಗೆ ವಸ್ತುವಾಗಿತ್ತು. ಆನಂದರ ‘ನಾನು ಕೊಂದ ಹುಡುಗಿ’, ವಿ. ಜಿ. ಶ್ಯಾನಭಾಗರ ‘ದೇವದಾಸಿ’ ಮುಂತಾದವುಗಳು ಈ ವಸ್ತುವನ್ನು ಒಳಗೊಂಡ ಶ್ರೇಷ್ಠ ಕತೆಗಳಾಗಿವೆ. ಸಣ್ಣಕತೆಯ ಚೌಕಟ್ಟಿನೊಳಗೆ ಕಾದಂಬರಿಯ ವ್ಯಾಪ್ತಿಯನ್ನು ನಿರ್ವಹಿಸುವ ‘ಚೌಡಿಕೆ ಚಂದ್ರಿ’ಯು ಆ ಮಟ್ಟಕ್ಕೆ ತಲುಪದಿದ್ದರೂ ತನ್ನ ಮಿತಿಗಳೊಂದಿಗೆ ನೋಡಿದಾಗ ಒಳ್ಳೆಯ ಕತೆಯಾಗಿ ಗಮನಕ್ಕೆ ಬರುತ್ತದೆ. ಅಜ್ಜಿಯ ಹರಕೆಗೆ ಅನುಗುಣವಾಗಿ ದೇವದಾಸಿಯಾಗಲು ಒಪ್ಪದ ಚಂದ್ರಿಯು ಶಿಕ್ಷಣವನ್ನು ಪಡೆದರೂ ಚೌಡಿಕೆ ಬಾರಿಸುವುದನ್ನು ನಿಲ್ಲಿಸುವುದಿಲ್ಲ. ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಬಂದ ಮುಂಬಯಿ ನಿವಾಸಿ ಇಂದ್ರನೀಲನು ಆಕೆಯ ಚೌಡಿಕೆ ವಾದನಕ್ಕೆ ಮರುಳಾಗಿ ಚಂದ್ರಿಯ ಮಾವನಾದ ಅಪ್ಪಣ್ಣ ಶಿಷ್ಯನಾಗಿ ಚೌಡಿಕೆ ಬಾರಿಸುವುದನ್ನು ಕಲಿಯತೊಡಗುತ್ತಾನೆ. ಚಂದ್ರಿಯ ಸಂಗವನ್ನು ಮಾಡಿ ಆಕೆಯ ಬಸಿರಿಗೆ ಕಾರಣನಾಗುತ್ತಾನೆ. ಮದುವೆಯಾಗಲು ಹೊರಟಾಗ ಜಾತಿ, ಅಂತಸ್ತುಗಳು ಅಡ್ಡ ಬರುತ್ತವೆ. ತಂದೆತಾಯಿಯರೊಂದಿಗೆ ಜಗಳವಾಡಿ ಊರು ಬಿಟ್ಟು ಹೋಗುತ್ತಾನೆ. ಚಂದ್ರಿಯು ತಂದೆಯಿಲ್ಲದ ಕೂಸನ್ನು ಹೆರುತ್ತಾಳೆ. ಇಲ್ಲಿ ಚಂದ್ರಿಯು ಶೋಷಿತೆಯಾದರೂ ಅಸಹಾಯಕಳಲ್ಲ. ಕುಲಧರ್ಮದಂತೆ ದೇವದಾಸಿಯಾಗದೆ ಸ್ವತಂತ್ರ ಬದುಕನ್ನು ಆಯ್ದುಕೊಳ್ಳುತ್ತಾಳೆ. ಚೆಲುವು, ಅಚ್ಚುಕಟ್ಟುತನ, ಆಳವಾದ ಭಾವನೆಗಳಿದ್ದರೂ ಇಂದ್ರನೀಲನ ಮೇಲಿನ ಪ್ರೇಮದಿಂದಾಗಿ ಸುಖದ ಬಾಗಿಲನ್ನು ಮುಚ್ಚಿಕೊಳ್ಳುತ್ತಾಳೆ. ಆಕೆಯು ಸ್ವಾರ್ಥಿಯಾಗಿದ್ದರೆ ದೇವದಾಸಿಯಾಗಲು ಒಪ್ಪಿ ಎಲ್ಲ ಬಗೆಯ ಸುಖವನ್ನು ಪಡೆದುಕೊಳ್ಳಬಹುದಿತ್ತು. ಆದರೆ ಆಕೆಯು ಆ ಮಾರ್ಗವನ್ನು ಆಯ್ದುಕೊಳ್ಳುವುದಿಲ್ಲ. ಈ ಶಕ್ತಿಯು ಆಕೆಯ ವ್ಯಕ್ತಿತ್ವಕ್ಕೆ ಗಟ್ಟಿತನವನ್ನು ಒದಗಿಸುತ್ತದೆ. ಇಂದ್ರನೀಲನ ಹುಡುಕಾಟದಲ್ಲಿದ್ದ ಚಂದ್ರಿಯ ಪಾಲಿಗೆ ದೈವಕೃಪೆಯ ಪರಿಣಾಮವಾಗಿ ಒದಗಿ ಬರುವ ಸೋಮಲದೇವಿಯು ಆಕೆಯ ಕಷ್ಟವನ್ನು ಬಗೆಹರಿಸಲು ನಾನಾ ರೀತಿಯ ಸಹಾಯವನ್ನು ಮಾಡುತ್ತಾಳೆ. ದೇವರ ಒಲುಮೆಯಿಂದಾಗಿ ಆಕೆಯು ಪೂಜಾರಿಯ ಮೋಸ ವಂಚನೆ ಮತ್ತು ಕಾಮುಕತೆಗಳಿಂದ ಪಾರಾಗಿ ಇಂದ್ರನೀಲನನ್ನು ಸೇರುತ್ತಾಳೆ. ಇಲ್ಲಿನ ಹೆಂಗಸರು ಪುರುಷನಿರ್ಮಿತ ವ್ಯಸವಸ್ಥೆಯ ವಿರುದ್ಧ ಬಂಡೇಳದಿದ್ದರೂ ಅದನ್ನು ಸಮರ್ಥಿಸುವುದಿಲ್ಲ. ಬದುಕಿನ ಹೋರಾಟದಲ್ಲಿ ಅವರು ಹಿಮ್ಮೆಟ್ಟಿದರೂ ನಂತರ ಸಾಫಲ್ಯದ ಹಾದಿಯನ್ನು ಕಂಡುಕೊಳ್ಳುತ್ತಾರೆ. ಅವರ ವಿವೇಕ, ವಾಸ್ತವ ಪ್ರಜ್ಞೆ, ಬದುಕುಳಿಯುವ ಸಾಹಸ ಮತ್ತು ಹೃದಯವಂತಿಕೆಗೆ ಒತ್ತು ನೀಡುವ ಕತೆಯು ಹೆಣ್ಣಿಗೂ ವ್ಯಕ್ತಿತ್ವವಿದೆ ಎಂಬುದನ್ನು ಸೂಚಿಸುತ್ತದೆ.

ಸುನಂದಾ ಬೆಳಗಾಂವಕರರು ‘ಕೇಳು ಪಾಪಕ್ಕ’ ಎಂಬ ಸಂಕಲನಕ್ಕೆ ‘ಪವಾಡ ಕಥೆಗಳು’ ಎಂಬ ಉಪಶೀರ್ಷಿಕೆಯನ್ನು ನೀಡಿದ್ದಾರೆ. ಹೆಚ್ಚಿನ ಕತೆಗಳಲ್ಲಿ ಅತಿಮಾನವ ಗುಣದ ವ್ಯಕ್ತಿಗಳು ಸಮಸ್ಯೆಯನ್ನು ಪರಿಹರಿಸುತ್ತಾರೆ. ಇದು ಇಲ್ಲಿನ ಕತೆಗಳ ಲಕ್ಷಣ ಮತ್ತು ಅವುಗಳ ದೋಷ ಕೂಡ. ಯಾಕೆಂದರೆ ಪವಾಡ ಪುರುಷ/ಸ್ತ್ರೀಯರ ಪ್ರವೇಶವು ಕತೆಯ ಸಹಜತೆಯನ್ನು ಕೆಡಿಸುತ್ತದೆ. ಹಾಗೆಂದು ಎಲ್ಲ ಕತೆಗಳೂ ಪವಾಡ ಕತೆಗಳಲ್ಲ. ‘ಕೇಳು ಪಾಪಕ್ಕ’, ‘ಓಮಿಯ ಗಂಟು’, ‘ಗಿಡ್ಡ ಗಿಣ್ಣ’ ಎಂಬ ಕತೆಗಳು ಸಾಮಾಜಿಕ ಕತೆಗಳಾಗಿಯೇ ಅನುಭವಕ್ಕೆ ಬರುತ್ತವೆ. ‘ಇದೊಂದು ಪವಾಡವೋ ಎಂಬಂತೆ ಅವರಿಬ್ಬರ (ಗಿಣ್ಣ ಮತ್ತು ಶುಕ್ರಾಚಾರಿ) ಜೀವನದ ಕಥೆ ಕೊನೆಗೊಂಡಿತ್ತು’ (ಪುಟ 130) ಎಂದರೂ ‘ಗಿಡ್ಡ ಗಿಣ್ಣ ’ ಕತೆಯು ಲೇಖಕಿಯು ಉದ್ದೇಶಿಸಿದಂತೆ ಪವಾಡ ಕತೆಯಾಗುವುದಿಲ್ಲ. ಮಿಕ್ಕ ಕತೆಗಳನ್ನು ‘ಪವಾಡ ಸದೃಶ ಘಟನೆಗಳನ್ನು ಆಧರಿಸಿದ ಕತೆ’ ಎನ್ನಲು ಅಡ್ಡಿಯಿಲ್ಲ. ಸಜ್ಜನರಿಗೆ ಸಾತ್ವಿಕರಿಗೆ ಬಂದ ಕಷ್ಟಗಳು ದೈವೀಶಕ್ತಿಗಳಿಂದ ನಿವಾರಣೆಯಾಗುತ್ತವೆ ಎಂಬ ನಂಬಿಕೆಯನ್ನು ಹೊಂದಿದ ಕತೆಗಳು ಇಂದಲ್ಲ ನಾಳೆಯಾದರೂ ಕಷ್ಟಗಳು ಪರಿಹಾರವಾಗಬಹುದೆಂಬ ಆಶಾವಾದವನ್ನು ಹುಟ್ಟಿಸುತ್ತವೆ. ಆದರೆ ಅಂಥ ಸುಖವನ್ನು ಕಾಣದೆ ನಿರ್ಗಮಿಸಿದವರೇ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಲ್ಲಿರುವುದರಿಂದ ಇಲ್ಲಿನ ಕತೆಗಳು ಸುಖಾಂತವಾಗಿಲ್ಲ. ‘ಚೌಡಿಕೆ ಚಂದ್ರಿ’, ‘ಮೃತ್ಯುಂಜಯ’ ವನ್ನು ಹೊರತುಪಡಿಸಿದ ಕತೆಗಳಲ್ಲಿ ದುರಂತದ ನೆರಳು ದಟ್ಟವಾಗಿದೆ. ಅಪರಾಧಿಗಳು ಪಾರಾಗಿ ನೊಂದವರೇ ಶಿಕ್ಷೆಗೆ ಒಳಗಾಗುವ ಕ್ರಿಯೆಯು ಗ್ರಾಮೀಣ ವಾಸ್ತವದ ಅಂಗವಾಗಿ ಹೃದಯವನ್ನು ತಟ್ಟಿದರೂ ಅಪರಾಧಿಗಳು ಕಾಲಕ್ರಮೇಣ ಶಿಕ್ಷೆಯನ್ನು ಅನುಭವಿಸಿಯೇ ತೀರುತ್ತಾರೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಇಲ್ಲಿನ ಕತೆಗಳು ಮೂಡಿ ಬಂದಿವೆ.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter