ಇಂಪೋಸ್ಟರ್ ಸಿಂಡ್ರೋಮ್

ಗ್ರಾಮೀಣ    ಭಾಗದ   ಇಂಜಿನಿಯರಿಂಗ್  ಕಾಲೇಜಿನಲ್ಲಿ  ಏಳನೇ   ಸೆಮಿಸ್ಟರ್ ನಲ್ಲಿ  ಓದುತ್ತಿದ್ದ ಶಾಲಿನಿ ‌ ಕ್ಯಾಂಪಸ್   ಇಂಟರ್ವ್ಯೂನ ನಿರೀಕ್ಷೆಯಲ್ಲಿದ್ದಳು.  ಗ್ರಾಮೀಣ ‌  ಪ್ರತಿಭೆಯಾಗಿದ್ದ ಶಾಲಿನಿ  ಮೆಟ್ರಿಕ್ ನಲ್ಲಿ  ಇಡೀ   ಜಿಲ್ಲೆಗೆ   ಪ್ರಥಮಳಾಗಿ ಪಾಸಾಗಿದ್ದಳು. ನಂತರ  ‌ಪಿ.ಯು.ಸಿಯಲ್ಲೂ   95% ಮಾಡಿ    ಇಂಜಿನಿಯರಿಂಗ್  ಕಾಲೇಜ್ ಸೇರಿದ್ದಳು.ಪ್ರತಿ   ಸೆಮಿಸ್ಟರ್ನಲ್ಲಿ  ಒಳ್ಳೆಯ  ಅಂಕ  ಗಳಿಸಿ  ಜಾಣ  ವಿದ್ಯಾರ್ಥಿನಿ  ಎಂಬ  ಹೆಗ್ಗಳಿಕೆಗೆ   ಪಾತ್ರಳಾಗಿದ್ದಳು.  ಅವಳ   ನಿರೀಕ್ಷೆಯಂತೆ  ಇಂದು  ಕ್ಯಾಂಪಸ್ ‌ ಇಂಟರ್ವ್ಯೂಗೆ  ಕರೆ  ಬಂದಿತ್ತು.ಅತ್ಯಂತ  ಕಾನ್ಫಿಡೆನ್ಸ್ ನಿಂದ  ಇಂಟರ್ವ್ಯೂ ಅಟೆಂಡ್  ಮಾಡಿ ‌ ಒಳ್ಳೆಯ  ಕಂಪನಿಗೆ ‌ ಸೆಲೆಕ್ಟ ‌ ಆಗಿದ್ದಳು. ಖುಷಿ ಖುಷಿಯಾಗಿ   ಮನೆಗೆ   ಬಂದು ‌ ಅಪ್ಪ,  ಅಮ್ಮನ ‌ ಕಾಲಿಗೆ   ನಮಸ್ಕಾರ‌  ಮಾಡಿ ‌ ತಾನು   ಕ್ಯಾಂಪಸ್  ಇಂಟರ್ವ್ಯೂನಲ್ಲಿ   ಸೆಲೆಕ್ಟ  ಆಗಿದ್ದನ್ನು   ಹೇಳಿದ್ದಳು.

ಅವಳ  ಈ  ಸಾಧನೆಗೆ  ಬೆನ್ನು ತಟ್ಟಿ ಪ್ರೋತ್ಸಾಹ  ನೀಡುವುದರ  ಬದಲು  ಅಪ್ಪ  ರಾಜೇಶ… ” ಶಾಲಿನಿ  ನೀನು  ಆರು,  ಏಳನೇತ್ತೆ ‌ ಇದ್ದಾಗ ‌ ಓದಾಕ  ಒಲ್ಲೆ ‌ ಅಂತಿದ್ದಿ.ಅಗದೀ‌  ಕಟಾನಕಟಿ  ಮಾರ್ಕಸ್  ತೊಗೊಂಡು ‌ ಪಾಸ್  ಆದಾಗ   ನನ್ನ  ಕಡೆ ಚೊಲೋತಂಗ   ಹೊಡತಾ  ತಿಂದಿದ್ದಿ.ನೀ ಏನ ಶ್ಯಾಣೆ ಆಗಂಗಿಲ್ಲ   ಬಿಡು  ಅಂದಿದ್ದೆ . ಅಂತೂ  ಇವತ್ತು  ಇಂಜಿನಿಯರಿಂಗ್  ಓದಿ  ಪಾಸಾಗಿ  ನೌಕರೀನೂ ತೊಗೊಂಡಿ .. ನನಗ  ಆಶ್ಚರ್ಯ ‌ ಆಗೇತಿ ‌ ನೋಡು ” ಎನ್ನುವ  ಧ್ವನಿಯಲ್ಲಿ  ಅವಳ ‌ ಸಾಧನೆಗೆ  ಮೆಚ್ಚುಗೆ ಬದಲು  ಅಪನಂಬಿಕೆ  ಇಣುಕಿತ್ತೇನೋ   ಎಂಬ ಅನಿಸಿಕೆ  ಶಾಲಿನಿಗೆ  ಮೂಡಿತ್ತು. ಎಲ್ಲೋ  ಹೃದಯದ  ಮೂಲೆಯಲ್ಲಿ  ಅಡಗಿದ್ದ  ಆ  ಘಟನೆ ಮತ್ತೆ  ಮುನ್ನಲೆಗೆ  ಬಂದು  ತನ್ನ  ಸಾಧನೆ  ಅಸಿಂಧು ಆಯಿತೇನೋ ‌ ಎಂಬ  ಕೀಳರಿಮೆ  ಉಂಟಾಗಿತ್ತು.

ಅಪ್ಪನ‌ ಹತ್ತಿರ‌ ಆ ದಿನ ಹೊಡೆತ ತಿಂದಮೇಲೆ ಶಾಲಿನಿ ಓದುವ ಕಡೆ ಗಮನ ಹರಿಸಿ‌ ಚೆನ್ನಾಗಿ ‌ಓದಿ ಒಳ್ಳೆಯ ಮಾರ್ಕ್ ತೆಗೆದರೂ ಅಪ್ಪ ಎಂದೂ ಬೆನ್ನು‌ತಟ್ಟದೆ.. ಇನ್ನೂ ಚೆನ್ನಾಗಿ ಮಾರ್ಕ್ ತೆಗೀಬಹುದಾಗಿತ್ತು ಎಂದಾಗ ಪೆಚ್ಚು ಮೋರೆ ಹಾಕುತ್ತಿದ್ದಳು. ಹಠ  ಸಾಧಿಸಿ‌  ಅಪ್ಪನಿಂದ
ಆ ಶಹಬ್ಬಾಸಗಿರಿ ಪಡೆಯ ಬೇಕೆನ್ನುವ ಉತ್ಸಾಹದಿಂದ ಓದಿ rank ಬಂದು ಒಳ್ಳೆಯ ಕೆಲಸ ಪಡೆದರೂ‌ ಅಪ್ಪನಿಂದ ಆ… “ಶಹಬ್ಬಾಸ್‌ ಮಗಳೇ” ಎನ್ನುವ ಮಾತೇ ಬರಲಿಲ್ಲ. ಇವಳ  ಮುಖ ಭಾವದ   ಬದಲಾವಣೆ   ಗಮನಿಸಿದ  ಅಮ್ಮ ಸಾವಿತ್ರಿ  ‘ಅಲ್ಲಾss  ಶಾಲಿನಿ  ನೌಕರಿ  ಸಿಕ್ತು ಅಂತ  ಖುಷಿಯಿಂದ  ಹೇಳಿದ್ರ  ನೀವು  ಹಳೆ  ಪುರಾಣ  ತಗೀತೀರಲ್ಲ  ನಡೀ..  ನಡೀ .. ಶಾಲಿನಿ ‌ ಒಳಗ ಅಡುಗಿ ಮನಿಗೆ  ಹೋಗೋಣು. ಈ  ಖುಷಿಗೆ  ಒಂದಿಷ್ಟ  ರುಚಿಯಾದ  ಶಿರಾ  ,ಕಾಂದಾ  ಬಜಿ  ಮಾಡ್ತೇನಿ  ನಿನ್ನ ಗೆಳತಿ‌‌‌  ಆಶಾನ್ನೂ  ಕರಿ ‌‌ಅಕೀಗೂ ನೌಕರಿ‌  ಸಿಕ್ಕೇತಲ್ಲಾ’ ಎಂದಾಗ  ತನ್ನ  ದುಗುಡದಿಂದ  ಹೊರ ಬಂದಿದ್ದಳು ಶಾಲಿನಿ.

ಕೊನೆಯ ಸೆಮಿಸ್ಟರ್ ಮುಗಿಸಿ  ನೌಕರಿಯ‌ ಆರ್ಡರ್  ಹಿಡಿದು  ಆಶಾ  ಜೊತೆ  ಬೆಂಗಳೂರಿಗೆ  ಬಂದಿದ್ದಳು. ಅಗಾಧವಾಗಿ ಬೆಳೆದಿದ್ದ ಬೆಂಗಳೂರು  ನೋಡಿ  ಪುಟ್ಟ ‌ ಕೆರೆಯಿಂದ  ಸಮುದ್ರಕ್ಕೆ  ಬಿದ್ದಂತಾಗಿತ್ತು‌ ‌ಅವಳ ಪರಿಸ್ಥಿತಿ. ಆಶಾ  ಆವಾಗೀವಾಗ  ಚಿಕ್ಕಮ್ಮನ  ಮನೆಗೆ  ಬಂದು ‌ಹೋಗಿದ್ದರ  ಕಾರಣ ಅವಳಿಗೆ  ಬೆಂಗಳೂರು  ಪರಿಚಿತವಾಗಿತ್ತು. ಚಿಕ್ಕಮ್ಮನ ಮನೆಯಲ್ಲಿ  ಒಂದು ‌ವಾರವಿದ್ದು  ಆಫೀಸಿಗೆ  ಹತ್ತಿರವಾಗುವ ‌   ಯಾವುದಾದರೂ  ಪಿ.ಜಿ. ಹುಡುಕುವ ಯೋಚನೆಯಲ್ಲಿದ್ದರು ಇಬ್ಬರೂ. ಆ ದಿನ ಸ್ನಾನ  ಮಾಡಿ  ತಿಂಡಿ  ತಿಂದು  ಮೆಟ್ರೊ   ಹತ್ತಿ ಕಂಪನಿ ಇದ್ದ  ಸ್ಥಳ  ಹುಡುಕಿಕೊಂಡು ಹೋಗಿದ್ದರು.

ಇಬ್ಬರ  ಕಂಪನಿಯು   ಒಂದೇ  ಏರಿಯಾದಲ್ಲಿದ್ದರೂ… ಒಂದಕ್ಕೊಂದು  ದೂರದಲ್ಲಿದ್ದವು.ಸ್ಥಳ  ನೋಡಿಕೊಂಡು  ಬಂದಿದ್ದರಿಂದ  ‌ಮಾರನೆಯ ದಿನ  ಯಾವ  ಎದೆಗುದಿ  ಇಲ್ಲದೆ  ಮೆಟ್ರೋ  ಹಿಡಿದು  ತಮ್ಮ ತಮ್ಮ‌ ಕಂಪನಿ   ತಲುಪಿದ್ದರು. ಶಾಲಿನಿ ತನ್ನ   ಅಪಾಯಿಂಟಮೆಂಟ್  ಲೆಟರ್  ಕೊಟ್ಟು ಕೆಲಸಕ್ಕೆ ಹಾಜರಾಗಿದ್ದಳು.ಪ್ರಸಿದ್ಧ ಕಂಪನಿಯ ದೊಡ್ಡದಾದ ಆಫೀಸ್  ಅದಾಗಿತ್ತು.  ಹೊಸ   ವಾತಾವರಣ  , ಅರಿಯದ   ಮುಖಗಳು  , ಬೇರೆ ಬೇರೆ ಚೇಂಬರ್ ಗಳು  ಛಗಮಗಿಸುವ  ದೀಪಗಳು  ಎಲ್ಲವನ್ನೂ  ಅಚ್ಚರಿಯ ನೋಟದಿಂದ  ನೋಡುತ್ತ ತನ್ನ  ಟೇಬಲ್ಲಿಗೆ  ಬಂದು  ಮನೆ ದೇವರನ್ನು  ನೆನೆದು ಕೆಲಸ ಪ್ರಾರಂಭಿಸಿದ್ದಳು. ಮೂರು  ತಿಂಗಳು  ಸರಾಗವಾಗಿ ಮುಗಿದಿತ್ತು. ಮೂರನೇ  ತಿಂಗಳ ಕೊನೆಯ ಶುಕ್ರವಾರ ಮೀಟಿಂಗ್  ಅಟೆಂಡ್ ಮಾಡಲು  ಕರೆ ಬಂದಿತ್ತು.

ಆತ್ಮ ವಿಶ್ವಾಸದಿಂದಲೇ ಮೀಟಿಂಗ್  ಹಾಲ್ಗೆ  ಹೋಗಿದ್ದಳು  ಶಾಲಿನಿ. ಅಲ್ಲಿ‌  ಆಗಲೇ  ಮೀಟಿಂಗ್ ಗೆ ಕರೆ ಕಳಿಸಿದವರು  ಖುರ್ಚಿಗಳಲ್ಲಿ ಆಸೀನರಾಗಿದ್ದರು  ಬಾಸ್ ಸಹ  ಬಂದಿದ್ದರು. ಶಾಲಿನಿ  ಇದನ್ನು ಅರಿಯದೆ ಮೀಟಿಂಗ್  ರೂಮ್ನಲ್ಲಿ  ಕಾಲಿಟ್ಟಾಗ… ಬಾಸ್ ..’ಯೂ ಆರ್ ಲೇಟ್ ಬೈ ಒನ್ ಮಿನಿಟ,  ಐ ಥಿಂಕ್ ಯೂ ಆರ್ ದ ನ್ಯೂ ಕಮ್ಮರ್, ಇನ್ ಫ್ಯೂಚರ್  ಯೂ ಶುಡ್ ಬಿ ಪಂಕ್ಚುವಲ್  ‘ ಎಂದಾಗ  ಒಂದು ಕ್ಷಣ  ಶಾಲಿನಿ  ನಡುಗಿ ಹೋಗಿದ್ದಳು.’ ಸಾರಿ  ಸರ್ ‘  ಎಂದು ಹೇಳಿದರೂ  ಅದು ಅವಳಿಗೇ  ಕೇಳದಷ್ಟು ಅವಳ ಧ್ವನಿ ಕ್ಷೀಣವಾಗಿತ್ತು. ಚರ್ಚೆ ಪ್ರಾರಂಭವಾಗಿತ್ತು.  ಪಟ ಪಟನೆ ಇಂಗ್ಲೀಷನಲ್ಲಿ  ಮಾತನಾಡುತ್ತ‌ ಎಲ್ಲರೂ ತಮ್ಮ ಕೆಲಸ, ಅದರ ಬಗ್ಗೆ ತಮ್ಮ ಅನಿಸಿಕೆ  ,ತಮಗೆ ತಿಳಿಯದ ವಿಷಯದ ಬಗ್ಗೆ ಚರ್ಚಿಸಿದ್ದರು.  ಈ  ತಾಂತ್ರಿಕ  ವಿಚಾರ ವಿನಿಮಯದಲ್ಲಿ  ಮಾತನಾಡುವಷ್ಟು ಪ್ರಬುದ್ದತೆ ,ವಿಷಯದ ಬಗ್ಗೆ  ತಿಳುವಳಿಕೆ  ಇದ್ದರೂ  ಶಾಲಿನಿಗೆ
ತಾನು  ಅವರಷ್ಟು ಚೆನ್ನಾಗಿ  ಇಂಗ್ಲಿಷ್‌ನಲ್ಲಿ ಮಾತನಾಡ ಬಲ್ಲೆನೇ , ನನಗೆ  ಅವರಷ್ಟು  ತಾಂತ್ರಿಕತೆಯ  ವಿಷಯ ಗೊತ್ತಿದೆಯೇ  ಅದನ್ನು ಪ್ರಸ್ತುತ ಪಡಿಸುವಷ್ಟು ಸಾಮರ್ಥ್ಯ ನನಗಿದೆಯೇ  ಎಂಬ  ಗೊಂದಲದಲ್ಲಿ ಸಿಲುಕಿ ಮೌನವಾಗಿದ್ದು ಬಿಟ್ಟಳು. ‘ನಿನಗ‌  ಏನೂ ಗೊತ್ತಿಲ್ಲ, ಚಂದಂಗ ಮಾತಾಡಾಕ ಬರಂಗಿಲ್ಲ, ಟೈಂ ಸೀರ  ಕೆಲಸಾ‌ ಮಾಡಂಗಿಲ್ಲ ‘ಎಂದ ಅಪ್ಪನ ಮಾತು ನೆನಪಿಸಿತ್ತು ಬಾಸ್ನ  ಆ ಮಾತು. ಗ್ರಾಮೀಣ  ಹಿನ್ನೆಲೆಯಿಂದ  ಬಂದಿದ್ದರೂ  ಇಂಟರ್ವ್ಯೂನಲ್ಲಿ   ಚೆನ್ನಾಗಿಯೇ  ಇಂಗ್ಲೀಷನಲ್ಲಿ  ಮಾತನಾಡಿ  ಕೆಲಸ  ಪಡೆದು ಕೊಂಡಿದ್ದರೂ  ಅವಳು  ಅದೇಕೋ ತನ್ನ ಬಗ್ಗೆಯೇ  ನಂಬಿಕೆ ‌ ಕಳೆದು ಕೊಳ್ಳತೊಡಗಿದ್ದಳು.

ಕಂಪನಿಗೆ ಹತ್ತಿರವೇ ಸಿಕ್ಕಿದ್ದ ಪಿ.ಜಿಗೆ ಬಂದ ಅವಳು ಸುಮ್ಮನೆ ಕುಳಿತು ಆ ದಿನ ಅಪ್ಪ ಮಾತನಾಡಿದ ಮಾತನ್ನು ನೆನೆಸಿಕೊಂಡು…ನಾನು ಈ ಕೆಲಸಕ್ಕೆ ಅರ್ಹವಿಲ್ಲವಾ? ನನ್ನಲ್ಲಿ ಜಾಣತನವಿಲ್ಲವಾ? ನಾನು ಇಷ್ಟು ದೊಡ್ಡ ಕಂಪನಿಗೆ ಸೇರಬಾರದಿತ್ತಾ?  ಎಂದು ಕೊಳ್ಳುತ್ತ ತಾನು ಕಾಲೇಜಿಗೇ ಫಸ್ಟ ಬಂದಿದ್ದನ್ನು ಮರೆತು ಇಂದು ಆದ ಸಣ್ಣ ವಿಷಯಕ್ಕೇ ಹೆಚ್ಚಿನ ಪ್ರಾಧ್ಯಾನ್ಯತೆ ಕೊಟ್ಡು ಮಂಕಾಗಿದ್ದಳು. ಆಫೀಸಿನಿಂದ ಬಂದ ಆಶಾಳ ಎದುರಿಗೂ ತನ್ನ ದುಗುಡ ಹಂಚಿಕೊಂಡಿದ್ದಳು. ಆಗ ಆಶಾ… ‘ಶಾಲಿನಿ ನೀನು ರ್ಯಾಂಕ್ ಸ್ಟೂಡೆಂಟ್, ಇದು ನಿನ್ನ ಮೊದಲ ಮೀಟಿಂಗ್. ಇಷ್ಟು ಸಣ್ಣ ವಿಷಯಕ್ಕೆ ತಲೆ ಕೆಡಿಸಿಕೊಳ್ಳ ಬೇಡ.ಧೈರ್ಯವಾಗಿರು ಎಲ್ಲ ಸರಿ ಹೋಗುತ್ತೆ’ ಎಂದಿದ್ದಳು.

ಶನಿವಾರ, ಭಾನುವಾರ   ಇಬ್ಬರೂ ಗೆಳತಿಯರು ವಿಧಾನಸೌಧ, ಹೈಕೋರ್ಟ್ , ಕಬ್ಬನ್ ಪಾರ್ಕ  ನೋಡಿಕೊಂಡು ಮೆಟ್ರೋ ರೈಲಿನಲ್ಲಿ ಒಂದಿಷ್ಟು  ಸುತ್ತಾಡಿ ಟೈಮ್ ಪಾಸ್ ಮಾಡಿದ್ದರು.ಶಾಲಿನಿ  ಸೋಮವಾರ  ಆಫೀಸಿಗೆ ಸ್ವಲ್ಪ ಅಳುಕಿನಿಂದಲೇ ಹೋಗಿದ್ದರೂ ನಂತರ ತನ್ನ ಕೆಲಸದಲ್ಲಿ ಮುಳುಗಿದ್ದಳು . ಅಚ್ಚುಕಟ್ಟಾಗಿ  ಕೆಲಸ  ಮಾಡುವ ಇವಳನ್ನು  ಟೀಮ್ ಲೀಡರ್ ಆಕಾಶ ಗಮನಿಸುತ್ತಲೇ ಇದ್ದ. ವೀಕೆಂಡ್ ಗೆ  ಇವಳ ಟೀಮ್ನಲ್ಲಿ ಇದ್ದ ಎಲ್ಲರೂ ಸೇರಿ  ನಂದಿ ಬೆಟ್ಟಕ್ಕೆ ಹೋಗುವ ಪ್ಲ್ಯಾನ್  ಮಾಡಿದಾಗ  ಇವಳಿಗೆ ಅವರೆಲ್ಲರ ಜೊತೆ ಹೋಗಲು ಹಿಂಜರಿಕೆ.ಇವಳ ಹಿಂಜರಿಕೆ‌ ಅರಿತ ಆಕಾಶ್  ಅವಳನ್ನು ಹುರಿದುಂಬಿಸಿ  ಹೊರಡಿಸಿದ್ದ.

ಎಲ್ಲರೂ ಮಿನಿ ಬಸ್  ಮಾಡಿಕೊಂಡು ಬೆಳಿಗ್ಗೆ ಐದು ಗಂಟೆಗೇ  ಹೊರಟಿದ್ದರು.ಬಸ್ಸು ಗುಡ್ಡ ಏರಿದಂತೆಲ್ಲ ಸುತ್ತಲಿನ ಮಂಜು ಮುಸುಕಿದ ಪ್ರಕೃತಿ,ಮಂಜು ಸರಿದಾಗ ಇಣುಕುವ  ಹಸಿರು ಹೊದ್ದ  ಬೆಟ್ಟ,ಇನ ಮೇಲೇರಿದಾಗ  ಕೆಂಬಣ್ಣಕ್ಕೆ ತಿರುಗಿದ  ಆಗಸ, ಹಕ್ಕಿಗಳ
ಚಿಲಿಪಿಲಿ ,ಮರದ ಎಲೆಗಳ ಮೇಲೆ ಮುತ್ತಿನಂತೆ ಕಾಣುವ ಇಬ್ಬನಿಯ ಹನಿಗಳು  ಶಾಲಿನಿಯನ್ನು ಮಂತ್ರಮುಗ್ದವಾಗಿಸಿತ್ತು.ಒಂದು ತಿರುವಿನಲ್ಲಿ  ಪ್ರಕೃತಿಯನ್ನು ಆಸ್ವಾದಿಸಲು  ಇದ್ದ  ವಿವ್ ಪಾಯಿಂಟ್ ನಲ್ಲಿ  ಇಳಿದ ಪಡ್ಡೆ ಹುಡುಗ, ಹುಡುಗಿಯರು  ಸೆಲ್ಫಿ, ರೀಲ್ಸ ತೆಗೆದು ಕೊಂಡು ಗಲಾಟೆ ಮಾಡಿದರೂ ಅವರ ಜೊತೆ ಸೇರದೆ  ಒಬ್ಬಂಟಿಯಾಗಿಯೇ ಉಳಿದಿದ್ದಳು. ಪಿಕ್ನಿಕ್ ಮುಗಿಸಿ ಬಂದಮೇಲೆ‌  ಎಲ್ಲರೂ ಗ್ರುಪ್ನಲ್ಲಿ ಫೋಟೋ, ರೀಲ್ಸ ಹಾಕಿ ಸಂಭ್ರಮ ಪಟ್ಟಿದ್ದರೆ..  ಇವಳು ಮಾತ್ರ ಅವರ ಜೊತೆ  ತನ್ನನ್ನು ಹೋಲಿಸಿಕೊಂಡು ಕೀಳರಿಮೆಯಿಂದ ಬಳಲಿದ್ದಳು.

ಮತ್ತೆ ಮೀಟಿಂಗ್ ಗೆ ಕರೆ ಬಂದಾಗ ಅವಳಿಗೆ ಕೊಟ್ಟ   ಅಸೈನ್ಮೆಂಟ  ಚಾಚೂ ತಪ್ಪದೆ  ಸರಿಯಾಗಿ ಮಾಡಿದ್ದರೂ ಅವಳ ಎದೆ ಹೊಡೆದು ಕೊಳ್ಳುತ್ತಿತ್ತು.ಅಲ್ಲಿ ತನ್ನ  ಅಸೈನ್ಮೆಂಟ ಬಗ್ಗೆ  ಮಾತನಾಡುವಾಗ  ತನ್ನಿಂದ ಇಂಗ್ಲಿಷ್ ನಲ್ಲಿ ಪಟಪಟನೆ ವಿವರಿಸಲು ಆಗದಿದ್ದರೆ ಎಲ್ಲರ ಎದುರಿಗೆ ಅವಮಾನವಾಗುತ್ತಲ್ಲ ಎಂದು ತನ್ನ ಇಂಗ್ಲಿಷ್ ಭಾಷೆಯ ಮೇಲೆ  ಅವಳಿಗೆ  ಹಿಡಿತವಿದ್ದರೂ ಇಲ್ಲವೆಂದು  ಅವಳ ಒಳ ಮನಸ್ಸು  ಯೋಚಿಸುತ್ತಿತ್ತು.ಹೀಗೆ ಅವಳು ತನ್ನಲ್ಲಿರುವ ಪ್ರತಿಭೆಯ ಬಗ್ಗೆಯೇ  ಸಂಶಯ ಪಡುತ್ತ ತಪ್ಪು ಹುಡುವಂತಾಗಿದ್ದಳು . ಈ ಮೀಟಿಂಗ್ ಗಳಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸಿ ಆತ್ಮವಿಶ್ವಾಸ ಹೆಚ್ಚಿಸಿ ಕೊಳ್ಳುವ ಸುಸಂದರ್ಭವಿದ್ದರೂ…  ಅಪ್ಪ ‘ನಿನಗೆ ಏನೂ ಬರೂದಿಲ್ಲ ಎಂದು ಪದೇ ಪದೇ ಹೇಳಿದ ಮಾತು‌ ‘ಈ‌ ಕೆಲಸ ತನಗೆ ಸೂಕ್ತವಲ್ಲ, ತಾನು ಇದನ್ನು ನಿರ್ವಹಿಸಲು ಅಸಮರ್ತಳು ಎಂಬ ನೆಗೆಟಿವ್ ಫೀಲಿಂಗ್  ಅವಳ‌  ಅಂತರಾಳದಲ್ಲಿ ತುಂಬಿತ್ತು.

ಮೀಟಿಂಗ್ ಗೆ ಹೋಗುವ ಮೊದಲು‌  ಆಕಾಶ್ ಶಾಲಿನಿಯ‌  ಛೇಂಬರ್ ನಲ್ಲಿ ಇಣುಕಿದಾಗ ಮಂಕಾಗಿ‌ ಕುಳಿತ ಶಾಲಿನಿಯನ್ನು ನೋಡಿ ‘ಯಾಕೆ ಶಾಲಿನಿ ಇನ್ನೂ ಇಲ್ಲೇ ಇದ್ದೀರಲ್ಲಾ ಟೈಮ್‌  ಆಯ್ತು ಬನ್ನಿ’ ಎಂದಾಗ  ವಿಧಿ ಇಲ್ಲದೆ ಎದ್ದು ಹೋಗಿದ್ದಳು. ಎಲ್ಲರೂ ತಮ್ಮ ಅಸೈನ್ಮೆಂಟ ಬಗ್ಗೆ ವಿವರವಾಗಿ ಮಾತನಾಡಿದ್ದರೆ ಇವಳು‌  ಸಂಕ್ಷಿಪ್ತವಾಗಿ ಹೇಳಿ ಮುಖದ ಮೇಲಿನ ಬೆವರು‌ ಒರೆಸಿಕೊಂಡು ಕುಳಿತಿದ್ದಳು. ಇದನ್ನು ಗಮನಿಸುತ್ತಿದ್ದ ಮ್ಯಾನೇಜರ್ … ಟೀಮ್ ಲೀಡರ್ ಆಕಾಶ್ನನ್ನು ಭೆಟ್ಟಿಯಾಗಲು ಹೇಳಿದ್ದರು.

ಆಕಾಶ  ಬಂದಾಗ‌” ವಾಟ್  ಈಸ್ ರಾಂಗ್ ವಿತ್ ಶಾಲಿನಿ, ಯಾವಾಗಲೂ ಟೆನ್ಷನಲ್ಲೇ ಇರ್ತಾರೆ. ಅವರ  ಕೆಲಸದಲ್ಲಿ ಯಾವುದೇ ತಪ್ಪಿರುವುದಿಲ್ಲ ..ಎಲ್ಲ ಪರ್ಫೆಕ್ಟಾಗಿ ಇರುತ್ತೆ ..ಆದರೆ ಪ್ರೆಸೆಂಟ ಮಾಡುವಾಗ ತಡಬಡಾಯಿಸುತ್ತಾರೆ.. ಕಾರಣ ನಿಮಗೇನಾದರೂ ಗೊತ್ತಾ? …. ಹೌದು ಸರ್ ಶಾಲಿನಿ  ಬ್ರಿಲಿಯಂಟ್ ಸ್ಟೂಡೆಂಟ್  ಹಾಗೆ ಗುಡ್ ವರ್ಕರ್  ಕೂಡಾ.ನಾನು ಇತ್ತೀಚೆಗೆ ಗಮನಿಸುತ್ತಾ ಇದ್ದೇನೆ  .. ಹೊಸದಾಗಿ ಕೆಲಸಕ್ಕೆ ಸೇರಿದಾಗ ಇದ್ದ ಆ ಲವಲವಿಕೆ, ಕಾನ್ಫಿಡೆನ್ಸ್  ಈಗ‌ ಕಾಣ್ತಾ  ಇಲ್ಲ. ಮೊನ್ನೆ  ಅವರ  ಛೇಂಬರ್ಗೆ ಹೋದಾಗಅವರು ಯಾರೋ ಆಶಾ ಅನ್ನುವವರ ಜೊತೆಗೆ ಮೊಬೈಲ್ ನಲ್ಲಿ  ಮಾತನಾಡುತ್ತ … ಆಶಾ  ನಾನು ಈ ಕೆಲಸಕ್ಕೆ ಲಾಯಕ್ ಇಲ್ಲ , ನನಗೆ‌ ಇದನ್ನು ಹ್ಯಾಂಡಲ್ ಮಾಡಲು ಆಗ್ತಾ ಇಲ್ಲ  ,ನಾನು  ಈ  ಕೆಲಸ‌  ಬಿಡ್ತೀನಿ  ಎನ್ನುವ ಮಾತು ಕೇಳಿ ಬಂತು.ನನ್ನನ್ನು ನೋಡಿ ಮಾತು ಅಲ್ಲಿಗೇ ನಿಂತಿತ್ತು.ನಾನು  ಕೆಲಸದ ಬಗ್ಗೆ  ಮಾತನಾಡಿ  ಸುಮ್ಮನೆ ಬಂದಿದ್ದೆ.ಇಂದೂ ಸಹ ಮೀಟಿಂಗ್ ಇದ್ದರೂ ಯಾವುದೋ ಯೋಚನೆಯಲ್ಲಿ ಮುಳುಗಿದ್ದ ಅವರನ್ನು ಎಚ್ಚರಿಸಿ  ಮೀಟಿಂಗಿಗೆ ಬರುವಂತೆ ಮಾಡಿದ್ದೆ ಎನ್ನುತ್ತಾನೆ. ಇದನ್ನೆಲ್ಲ ಕೇಳಿದ  ಮ್ಯಾನೇಜರ್   ಅವರು.. “ಆಕಾಶ್..  ಶಾಲಿನಿಯನ್ನು ಕಂಪನಿಯ ಕೌನ್ಸಿಲರ್ ಹತ್ತಿರ  ಕಳಿಸುವ ವ್ಯವಸ್ಥೆ ಮಾಡಿ.ಅವರು ಯಾವುದೋ ಆತಂಕದಿಂದ ಬಳಲುತ್ತಿರುವ ಹಾಗೆ ಕಾಣುತ್ತೆ” ಎಂದಾಗ ಆಕಾಶ ಒಪ್ಪಿಕೊಂಡಿದ್ದ.

ಅಂದು ಶಾಲಿನಿಗೆ ..ನೀವು ನಿಮ್ಮ ಕೆಲಸದಲ್ಲಿ ಜಾಣರಿದ್ದು ಎಲ್ಲ ಸಮಸ್ಯೆಗಳಿಗೆ  ದಾರಿ ಹುಡುಕುವ ನೀವು,ನಿಮ್ಮ ಜೀವನದ ಪಯಣದಲ್ಲೇ ಎಲ್ಲೋ  ಒಂದು  ಕಡೆ  ದಾರಿ ತಪ್ಪುತ್ತಿದ್ದೀರಿ ಅಂತ ಅನಿಸುತ್ತೆ. ನಿಮ್ಮನ್ನು ಕಾಡುತ್ತಿರುವ ಆ ಆತಂಕದಿಂದ ಹೊರ ತರಲು  ಮ್ಯಾನೇಜರ್ ಅವರು ನಿಮ್ಮನ್ನು  ಕಂಪನಿಯ ಕೌನ್ಸಿಲರ್ ರನ್ನು ಭೇಟಿ ಮಾಡಿಸ   ಬೇಕೆಂದು ಹೇಳಿದ್ದರು ಎಂದು ಹೇಳಿ ಕೌನ್ಸಿಲರ್  ಶರತ್ ಪಾಟೀಲರನ್ನು ಭೇಟಿ ಮಾಡಿಸಿ ತನ್ನ ಕೆಲಸಕ್ಕೆ‌ ಹೋಗಿದ್ದ.

ಶಾಲಿನಿ ಉತ್ತರ ಕರ್ನಾಟಕದವಳು ಎಂದು ಗೊತ್ತಾದಾಗ  ಶರತ್ ಧಾರವಾಡ ಭಾಷೆಯಲ್ಲಿ ಮಾತನಾಡ ತೊಡಗಿದಾಗ  ಶಾಲಿನಿಯ‌  ಕಣ್ಣುಗಳು ಮಿಂಚಿದ್ದವು.ಮೊದಲೇ ಆಕಾಶನಿಂದ ಶಾಲಿನಿಯ ಬಗ್ಗೆ ತಿಳಿದು  ಕೊಂಡಿದ್ದ  ಶರತ್ ಅವರು ಅವಳ ಜೊತೆ ಅತ್ಯಂತ ಆತ್ಮೀಯತೆಯಿಂದ  ಮಾತಾಡಿ  ಅವಳ  ವಿಶ್ವಾಸ  ಗಳಿಸಿದ್ದರು. ಪ್ರಾರಂಭದಲ್ಲಿ  ಅವಳ  ತಂದೆ,ತಾಯಿ  ,ಅವಳ ಬಾಲ್ಯ, ಓದು, ಗೆಳತಿಯರು ಎಲ್ಲದರ ಬಗ್ಗೆ‌ ವಿಚಾರ ‌ ಸಂಗ್ರಹಿಸಿ ‌ ಮತ್ತೆ  ಒಂದು  ವಾರ ಬಿಟ್ಟು ‌ಅವಳ‌ ತಂದೆಯನ್ನು ಕರೆದುಕೊಂಡು ಬರುವಂತೆ‌  ತಿಳಿಸಿದ್ದರು.

ಒಂದು ವಾರದ ನಂತರ‌  ತಂದೆಯ ಜೊತೆ ಬಂದ  ಶಾಲಿನಿ…ನನಗೇನಾಗಿದೆ ಅಂತ ನನ್ನನ್ನು ಇಲ್ಲಿ ಕಳಿಸಿದ್ದಾರೆ ? ಅಪ್ಪನನ್ನೂ ಕರೆದುಕೊಂಡು ಬರಲು ಹೇಳಿದ್ದಾರೆ. ನಾನು ಆರಾಮಾಗೇ ಇದ್ದೀನಿ. ನನಗೇನೂ‌ ತಲೆ ಕೆಟ್ಟಿಲ್ಲ.‌ ಕೆಲಸ ರಿಸೈನ್  ಮಾಡಿ ಊರಿಗೆ ಹೋಗೋದೇ ಲೇಸು. ಯಾಕೋ ಇಲ್ಲಿ ಏನೂ ಸರಿ ಇಲ್ಲ ಅಂತ ಮನಸ್ಸಿನಲ್ಲೇ ಅಂದು ಕೊಳ್ಳುತ್ತ  ಒಳಗೆ ಕಾಲಿಟ್ಟಿದ್ದಳು.ಆಗ  ಶರತ್ ಶಾಲಿನಿಗೆ …ನಿಮ್ಮ ತಂದೆಯ ಜೊತೆ ನಾನು‌ ಸ್ವಲ್ಪ ಮಾತನಾಡಬೇಕು, ನೀವು ಹೊರಗೆ ವೇಟ್ ಮಾಡಿ … ನಂತರ ಕರೆಯುತ್ತೇನೆ‌ ಎಂದಾಗ ಶಾಲಿನಿ ಹೊರಗೆ ಬಂದು ಕುಳಿತಿದ್ದಳು. ಒಳಗೆ ಬಂದು ಕುಳಿತ ಅಪ್ಪ  ರಾಜೇಶರನ್ನು ಮಾತಿಗೆಳೆಯುತ್ತ  ಶರತ್  …ನಿಮ್ಮ ಮಗಳು ತುಂಬಾ ಜಾಣೆ, ಸ್ವ ಸಾಮರ್ಥ್ಯದಿಂದ ಓದಿ ಇಷ್ಟು ಒಳ್ಳೆಯ ಕಂಪನಿಯಲ್ಲಿ ಕೆಲಸ ಪಡೆದಿದ್ದಾಳೆ. ಆದರೆ  ಅಂದು  ಅವಳು ನಿಮಗೆ … ತನಗೆ ಕೆಲಸ ಸಿಕ್ಕಿದ್ದನ್ನು‌‌  ಹೇಳಿದಾಗ ನೀವು‌  ಅವಳ ಸಾಧನೆಗೆ ಸಂತೋಷ ಪಡದೆ  ವ್ಯಂಗ್ಯವಾಗಿ ‌‌ಮಾತನಾಡಿದ ಮಾತು ಅವಳಲ್ಲಿ ಕೀಳರಿಮೆ ಹುಟ್ಟಿಸಿ ಅದನ್ನು ಮನಸ್ಸಿನಲ್ಲಿಟ್ಟು ಕೊಂಡು ಕೊರಗುತ್ತಿದ್ದಾಳೆ. ಅವಳ ಯಾವ ಸಾಧನೆಗೂ ನಿಮ್ಮಿಂದ ಮನಃಪೂರ್ವಕವಾಗಿ ‌ಉತ್ತೇಜನ ‌ಬಂದಿಲ್ಲ.
ನೀವು  ಮಾಡಿದ  ‌ತಪ್ಪಿನಿಂದ‌  ಅವಳಿಗೆ ತನ್ನ  ಗೆಲುವನ್ನು   ಸಂಭ್ರಮಿಸಲು ಆಗುತ್ತಿಲ್ಲ.ನೀವು ಅವಳ ಗೆಲುವನ್ನು   ಸಂತೋಷಿಸದೆ  ಎಂದೋ ಮಾಡಿದ‌  ಸಣ್ಣ ತಪ್ಪನ್ನು ಎತ್ತಿ ಹಿಡಿದು ಅದನ್ನೇ ಪದೇ ಪದೇ‌  ನೆನಪಿಸಿ ಹಿಯಾಳಿಸಿದ ಪರಿಣಾಮ ಇಂದು ಅವಳು ತನ್ನ  ಸಾಧನೆಯನ್ನು ಅನುಭವಿಸದೆ ಕೀಳರಿಮೆ
ಬೆಳೆಸಿಕೊಂಡು ಅಸಹಾಯಕಳಾಗಿದ್ದಾಳೆ. 

ಮಕ್ಕಳ ಸಣ್ಣ‌ ಸಣ್ಣ  ಗೆಲುವುಗಳನ್ನು ಪ್ರೋತ್ಸಾಹಿಸಿ ಸೋಲಿಗೆ  ಸೋತು ಹೋಗದೇ ಮುನ್ನಡೆಯುವ ಆತ್ಮವಿಶ್ವಾಸ  ಬೆಳೆಸ ಬೇಕಾದದ್ದು ಹೆತ್ತವರ ಕರ್ತವ್ಯ ಈ ಕರ್ತವ್ಯದಲ್ಲಿ‌ ನೀವು ಸೋತಿದ್ದೀರಿ. ಇದು ನಿಮ್ಮ ಮಗಳ ಮನಸ್ಸಿನ ಮೇಲೆ ಪ್ರತಿಕೂಲ ‌ಪರಿಣಾಮ ಬೀರಿದ ಕಾರಣ ಅವಳು  ಈಗ‌  ಖಿನ್ನತೆಯ ಅಂಚಿನಲ್ಲಿದ್ದಾಳೆ ಎಂಬ ವಿಷಯ ತಿಳಿಸಿದ್ದರು.ಈ ಮಾತು ರಾಜೇಶರನ್ನು ಚಿಂತೆಗೀಡು ಮಾಡಿತ್ತು.ತಾನೇನು ಮಾಡುತ್ತಿದ್ದೇನೆ ,ಮಾತನಾಡುತ್ತಿದ್ದೇನೆ ಅದು ಮಗಳ ಮೃದು‌ ಹೃದಯದ ಮೇಲೆ ಯಾವ ಪರಿಣಾಮ ಬೀರುತ್ತೆ ಎಂಬ ಅರಿವಿಲ್ಲದೆ ಅಪ್ಪನಾದವನು‌  ಏನು ಬೇಕಾದರೂ ಮಾತನಾಡಬಹುದೆಂಬ ಅಹಂಕಾರದಿಂದ ಆಡಿದ ಮಾತುಗಳು ಮಗಳ ಬಾಳನ್ನೇ ಬಲಿ ತೆಗೆದುಕೊಳ್ಳ ಬಹುದೆಂಬ ವಿಷಯ ತಿಳಿದಾಗ ತಾನೆಂಥ ದೊಡ್ಡ ತಪ್ಪು ಮಾಡಿದೆ ಎಂಬ ಪಶ್ಚಾತ್ತಾಪ ರಾಜೇಶರನ್ನು‌ ಕಾಡಿತ್ತು. ಶರತ್ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡ ರಾಜೇಶ್ ‌ಮಗಳ‌  ಆರೋಗ್ಯದ ಬಗ್ಗೆ ಆತಂಕ‌ ‌ವ್ಯಕ್ತ ಪಡಿಸಿದಾಗ  …ಆತಂಕ ಪಡುವುದೇನೂ ಬೇಡ ಇನ್ನೂ ಆರಂಭದ ಹಂತದಲ್ಲೇ ಶಾಲಿನಿ ಕೌನ್ಸಿಲಿಂಗಿಗೆ‌‌   ಬಂದಿದ್ದರಿಂದ  ಬೇಗ  ರಿಕವರ್‌ ‌ಆಗುತ್ತಾಳೆ‌‌ ಎಂದಿದ್ದರು. ಅಂದಿನ‌ ‌ ಸೆಶನ್ ಮುಗಿಸಿದ್ದ ಶರತ್ ಮುಂದಿನ ವಾರ ಶಾಲಿನಿಗೆ ಬರಲು ಹೇಳಿದ್ದರು.

 ಅಂದು‌  ಬಂದ‌  ಶಾಲಿನಿಗೆ… ನಿಮಗೆ ಭೌತಶಾಸ್ತ್ರದಲ್ಲಿ  ನೊಬೆಲ್  ಪ್ರಶಸ್ತಿ ಪಡೆದ ಆಲ್ಬರ್ಟ ಐನ್ ಸ್ಟೀನ್ ಗೊತ್ತಲ್ವಾ ಎಂದಾಗ
ಓ!  ಗೊತ್ತಿಲ್ದೆ ಏನು? ಎಂದಿದ್ದಳು. ಖ್ಯಾತ ಭೌತಶಾಸ್ತ್ರ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಅವರ ಸತತ  ಓದು, ಜಾಣತನ,  ಪ್ರಯೋಗ,‌‌‌‌ಹಾಗೂ ಶ್ರಮಕ್ಕೆ ಸಿಕ್ಕ ಪಾರಿತೋಷಕ ಇದು.ಆದರೆ   ಈ ಪ್ರಶಸ್ತಿಗೆ ತಾನು ಭಾಜನನಲ್ಲ  ಎಂಬ  ಭಾವನೆ ಅವರಿಗೆ.ಅವರು ತಮ್ಮ ಆಪ್ತರಲ್ಲಿ’ ನನ್ನ ಸಾಮಾನ್ಯ ಕೆಲಸಗಳನ್ನೆಲ್ಲ  ಈ  ಜನ ಇಷ್ಟೊಂದು ಅಟ್ಟಕ್ಕೇರಿಸಿ  ಪ್ರಶಸ್ತಿಗಳನ್ನು ಕೊಟ್ಟು ಪುರಸ್ಕರಿಸುವುದರಿಂದ ನಾನು ಇವರಿಗೆಲ್ಲ ಮೋಸ ಮಾಡುತ್ತಿದ್ದೇನೆ  ಎಂಬ ಅಪರಾಧಿ ಪ್ರಜ್ಞೆ ಕಾಡುತ್ತಿದೆ ‘ ಎಂದು ಹೇಳಿಕೊಂಡಿದ್ದರಂತೆ. ಸಭೆ,ಸಮಾರಂಭಗಳಲ್ಲೂ ಈ ಹೇಳಿಕೆಯನ್ನು ಹಂಚಿಕೊಂಡಿದ್ದರಂತೆ. ಅಷ್ಟು ದೊಡ್ಡ ವಿಜ್ಞಾನಿಯಾಗಿ ,ಸಾಧನೆ ಮಾಡಿ ಪ್ರಶಸ್ತಿ ಪಡೆದಿದ್ದರೂ ಅವರಿಗೆ ತಮ್ಮ ಈ  ಸಾಧನೆಯಲ್ಲಿ ನಂಬಿಕೆ ಇದ್ದಿಲ್ಲ….ಇದಕ್ಕೆ ಕಾರಣ ‘ಇಂಪೋಸ್ಟರ್ ಸಿಂಡ್ರೋಮ್ ‘ ಅಂದ್ರೆ  ಒಬ್ಬ ವ್ಯಕ್ತಿ ತನ್ನ ಸಾಧನೆಯನ್ನೇ ಅನುಮಾನದಿಂದ ನೋಡುವುದು. ತಾನು ಕಷ್ಟ ಪಟ್ಟು ಪರಿಶ್ರಮದಿಂದ ಮುಂದೆ ಬಂದಿದ್ದರೂ  ಅದನ್ನು ಸಂಭ್ರಮಿಸುವುದನ್ನು ಬಿಟ್ಟು ತನ್ನ ಕ್ಷಮತೆಯ ಮೇಲೆಯೇ ಅನುಮಾನ ಪಡುವುದು.ಇಂಥದೊಂದು ಮನಸ್ಥಿತಿಗೆ “ಇಂಪೋಸ್ಟರ್ ಸಿಂಡ್ರೋಮ್”    ಎನ್ನುತ್ತಾರೆ. ಈಗ ನಿಮ್ಮಲ್ಲೂ ಈ  ತರಹದ ಮನಸ್ಥಿತಿ  ಇದೆ.ನಿಮ್ಮ ಕ್ಷಮತೆಯ ಮೇಲೆಯೇ ನಿಮಗೆ ಅನುಮಾನವಿದೆ.

ಶಾಲಿನಿ ನೀವು ಓದಿನಲ್ಲಿ ಜಾಣೆ, ಫಸ್ಟ ರ್ಯಾಂಕ  ಬಂದು, ಒಳ್ಳೆಯ ಕಂಪನಿಯಲ್ಲಿ ಕೆಲಸ ಪಡೆದಿದ್ದರೂ… ಅಪ್ಪನ  ನೇತ್ಯಾತ್ಮಕ ನುಡಿಗಳಿಂದ ನೀವು ನಿಮ್ಮಲ್ಲೇ‌ ಒಂದು ಕೀಳರಿಮೆ ಬೆಳೆಸಿಕೊಂಡು.. ಇದೆಲ್ಲಾ  ನನಗೆ ದೊರಕಿದ್ದು ಆಕಸ್ಮಿಕ  ನಾನು ಇದಕ್ಕೆಲ್ಲ ಲಾಯಕ್ಕಿಲ್ಲ  ಎಂದು    ನಿಮ್ಮ  ಸಾಧನೆಯನ್ನೇ   ಒಪ್ಪಿಕೊಳ್ಳದ ಸ್ವ ವಿಮರ್ಶೆಯ  ಒಂದು‌  ಆತಂಕಕಾರಿಯಾದ  ಮನಸ್ಥಿತಿಗೆ ತುತ್ತಾಗಿದ್ದೀರಿ  ಅಂತ ಅನಿಸುತ್ತೆ. ನಿಮ್ಮ ಸಾಧನೆಗೆ ಹೆಮ್ಮೆ ಪಡುವುದರ ಬದಲು ನೀವು ಅವುಗಳನ್ನೇ  ವಿಮರ್ಶಿಸಿ ಅವುಗಳಲ್ಲೇ ತಪ್ಪು ಹುಡುಕಿ  ಕೀಳರಿಮೆಯಿಂದ ಬಳಲುತ್ತಿದ್ದೀರಿ.ನಿಮಗೆ  ಮೀಟಿಂಗ್ ನಲ್ಲಿ ಒಳ್ಳೆಯ ಅವಕಾಶವಿರುತ್ತದೆ ಅದನ್ನು ಸದುಪಯೋಗ ಪಡಿಸಿಕೊಂಡು  ಧೈರ್ಯದಿಂದ  ನಿಮ್ಮ ಅನಿಸಿಕೆಯನ್ನು ಮುಂದಿಡದೆ‌  ನಾನೆಲ್ಲಿ   ತಪ್ಪುತ್ತೇನೋ ಎಂಬ ಆತಂಕದಲ್ಲಿ ಮಾತನಾಡದೇ‌  ಹಿಂಜರಿದಾಗ  ನಿಮ್ಮ ಆತ್ಮವಿಶ್ವಾಸ  ಕಡಿಮೆಯಾಗುತ್ತಿದೆ. ಇದೇ ಅನಿಸಿಕೆಯನ್ನು ನೀವು ಮನದಲ್ಲಿ ಇಟ್ಟುಕೊಂಡು ಮುಂದುವರಿದರೆ  ಅದು ನಿಮ್ಮ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುವ  ಅಪಾಯವಿದೆ. ನೀವು ನಿಮ್ಮನ್ನೇ ಸ್ವವಿಮರ್ಶೆ ಮಾಡಿಕೊಳ್ಳುವ ಈ ಆತಂಕಕಾರಿ  ಮನೋಸ್ಥಿತಿಯಿಂದ ಹೊರಬರಬೇಕು…. ಎಂದು ಇನ್ನೂ ಅನೇಕ ಉದಾಹರಣೆ ಸಹಿತ ಐದು ಸಿಟ್ಟಿಂಗ್ಸ ಮುಗಿಸಿದಾಗ  ಶಾಲಿನಿಗೆ ತನ್ನ ತಪ್ಪಿನ‌‌ ಅರಿವಾಗಿತ್ತು . ನಾನು ನನ್ನ ಸಾಧನೆಯನ್ನೇ ಸಂಶಯ ದೃಷ್ಟಿಯಿಂದ ನೋಡಿ ನಾನು ಇದಕ್ಕೆ ಅರ್ಹಳಲ್ಲ ಎಂದು ಭ್ರಮಿಸಿ ನನ್ನ  ಭವಿಷ್ಯವನ್ನೇ   ಹಾಳುಮಾಡಿಕೊಳ್ಳುವ ಹಂತಕ್ಕೆ ಬಂದಿದ್ದೆನಲ್ಲ ಎಂದುಕೊಂಡ ಶಾಲಿನಿಗೆ  ತಾನೆಂತಹ ವಿಪತ್ತಿನಿಂದ ಪಾರಾದೆನಲ್ಲ‌ ಎಂಬ ಸತ್ಯ ಅರಿವಾದಾಗ ನಿಡಿದಾದ‌‌  ನಿಟ್ಟುಸಿರು‌  ಬಿಟ್ಟಿದ್ದಳು.

ಯಾವುದೋ ಶಾಪದಿಂದ ತನ್ನ  ಶಕ್ತಿಯನ್ನೇ ಮರೆತಿದ್ದ ಆಂಜನೇಯನಿಗೆ‌, ಶಾಪ ವಿಮೋಚನೆಯ ಪರಿಹಾರವಾಗಿ  ಯಾರಾದರೂ  ಅವನಿಗೆ ಆವನ ಶಕ್ತಿಯನ್ನು ನೆನಪಿಸಿದರೆ ಅವನ ಶಕ್ತಿ ವಾಪಸ್ಸು ಬರುತಿತ್ತು.ಸೀತೆಯನ್ನು  ರಾವಣ ಅಪಹರಿಸಿದ ನಂತರ ಅವಳನ್ನು ಹುಡುಕಲು ಲಂಕೆಗೆ  ತೆರಳಲು  ಹನುಮಂತನಿಗೆ ಕೋರಿದಾಗ …ಸಾಗರವನ್ನು ದಾಟಿ ಲಂಕೆಯಲ್ಲಿ   ಸೀತೆಯನ್ನು  ಹುಡುಕುವ ಕೆಲಸ ತನ್ನಿಂದಾಗದು ಎಂದು ಆತ ಕೈ ಚೆಲ್ಲಿದ್ದ. ಆಗ  ಹನುಮನ  ಶಾಪದ ಅರಿವಿದ್ದ    ಜಾಂಬವಂತ  ಅವನಿಗೆ  ಅವನಲ್ಲಿರುವ ಶಕ್ತಿಯ ಬಗ್ಗೆ  ನೆನೆಪಿಸಿದಾಗ  ಹನುಮ ತನ್ನ ಆತ್ಮ ವಿಶ್ವಾಸವನ್ನು  ಹೆಚ್ಚಿಸಿಕೊಂಡು ಲಂಕೆಗೆ ಹಾರಿ ಸೀತೆಯನ್ನು ಹುಡುಕುವಲ್ಲಿ ಯಶಸ್ವಿಯಾದ  ಎಂಬ ಕಥೆಯಲ್ಲಿ  ಹನುಮನಿಗೆ ಕಾಡಿದ್ದು ಈ ‘ಇಂಪೋಸ್ಟರ್ ಸಿಂಡ್ರೋಮ್ ‘ ಎಂದು  ಶರತ್ ಹೇಳಿದ‌ ಕಥೆ ಕೇಳಿ ಶಾಲಿನಿ  ತನ್ನ ಬದುಕಿನಲ್ಲಿ ಜಾಂಬವಂತನಾಗಿ ಬಂದ ಶರತ್ ಅವರಿಗೆ  ‌ಕೃತಜ್ಞತೆ ಸಲ್ಲಿಸಿದ್ದಳು.

  • ಪುಷ್ಪಾ ಹಾಲಭಾವಿ, ಧಾರವಾಡ.

       ‌‌‌‌     

        ‌‌ 

                ‌

   ‌‌‌‌     ‌‌‌ 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter