*ಜೀವನ ಸದಾ ಸುಖಮಯವಾಗಿರುವುದಿಲ್ಲ. ಎಲ್ಲವೂ ಚನ್ನಾಗಿದ್ದ ಕಾಲಕ್ಕೆ ಯಾರು ಯಾರನ್ನೂ ಯಾವುದಕ್ಕೂ ದೂಷಿಸಿಸುವುದಿಲ್ಲ. ಎಲ್ಲರೂ ಎಲ್ಲರನ್ನೂ ಖುಷಿಯಿಂದಲೇ ಮಾತನಾಡಿಸುತ್ತಾರೆ, ಖುಷಿಯಿಂದ ನಡೆದುಕೊಳ್ಳುತ್ತಾರೆ.*
“ಇವಳ ಹೊಟ್ಟೆಯೂ ಬತ್ತಿಹೋಗಿದೆ, ಈ ನದಿಯೂ ಬತ್ತಿಹೋಗಿದೆ” ಬತ್ತಿಹೋಗಿ ಬರೀ ಕಲ್ಲು, ಮಣ್ಣು, ಮುಳ್ಳಿನ ಗಿಡ ಬೆಳೆದಿರುವ ಕುಮದ್ವತಿ ನದಿಯ ದಡದಲ್ಲಿ ಮೌನವಾಗಿ ಕುಳಿತ ಕುಮದ್ವತಿಯನ್ನು ನೋಡಿ ಕೂಲಿಗೆ ಹೊರಟಿದ್ದ ಹೆಂಗಸರು ಪಿಸುದನಿಯಲ್ಲಿ ಆಡಿದ ಮಾತು ಅವಳ ಕಿವಿಗೆ ಬೀಳುತ್ತದೆ. ಅವಳಿಗೆ ಈಗ ನೋವೇನೂ ಆಗುವುದಿಲ್ಲ. ಒಡಲು ಬತ್ತಿದ್ದರೂ, ಎಲ್ಲ ಭಾವನೆಗಳೂ ಹಾಗೆಯೇ ಇವೆ. ದೇಹದಲ್ಲಿ ಅಂತಹ ಬದಲಾವಣೆ ಏನೂ ಆಗಿಲ್ಲ. “ಮಕ್ಕಳಾಗಿದ್ದರೆ ತಾನೇ ಸ್ವಲ್ಪ ಅಲ್ಲಿ ಇಲ್ಲಿ ದಪ್ಪಗಾಗೋದು” ಎಂದು ಕೆಲ ಹೆಂಗಸರು ಆಡಿಕೊಂಡರೂ, ಅವಳ ಸುಂದರ ದೇಹ ಕಂಡು ಕುರುಬುವುದೂ ಇದೆ. “ನಮಗೂ ಮಕ್ಕಳಾಗದಿದ್ದರೆ ನಾವೂ ಇನ್ನೂ ಚನ್ನಾಗಿ ಕಾಣಿಸುತಿದ್ದೆವು” ಎಂದು ತಮ್ಮ ಅಸೂಯೆಗೆ ತಾವೇ ಮದ್ದು ಅರೆಯುತ್ತಾರೆ. ತನ್ನ ನೆಚ್ಚಿನ ಸ್ಥಳದಲ್ಲಿ ಕುಳಿತ ಕುಮಧ್ವತಿ ಎಲ್ಲ ಮಾತುಗಳಿಗೂ ಒಂದು ಸುಂದರ ನಗೆ ಸೂಸಿಸುತ್ತಾಳೆ. ತನ್ನ ಮಧುರ ಭಾವದುಂಬಿದ ಮನಸಿಗೆ ಘಾಸಿ ಮಾಡಿಕೊಳ್ಲದೆ, ಯಾವುದೋ ಕವಿಯ ಭಾವಗೀತೆ ಗುಣಿಗುಣಿಸುತ್ತಾಳೆ. ಆದರೆ ಅವಳ ಅತ್ತೆ ಶಾಂತಮ್ಮ ಊರ ಹೆಂಗಸರ ಮಾತುಗಳಿಗೆ ಸರಿಯಾಗಿಯೇ ತಿರುಗೇಟು ಕೊಟ್ಟು ಓಡಿಸುತ್ತಾಳೆ. “ಯಾರ ಸುದ್ದಿಗೂ ಹೋಗದ ನನ್ನ ಸೊಸೆ ಸುದ್ದಿ ನಿಮಗ್ಯಾಕ್ರೆ” ಎಂದು ರೇಗಿ, ಸೊಸೆಯನ್ನು ಹೆಮ್ಮೆಯಿಂದ, ಮುದ್ದಿನಿಂದ ನೋಡುತ್ತಾಳೆ. ಅತ್ತೆಯನ್ನು ನೋಡಿದ ಸೊಸೆ ಒಂದು ಮುಗುಳನಗೆ ಬೀರುತ್ತಾಳೆ, ಅಲ್ಲಿಗೆ ಅತ್ತೆಯ ಕೋಪ ಶಮನವಾಗುತ್ತದೆ.
ಕುಮದ್ವತಿಯನ್ನು ನೋಡಲು ಮಸರ ಎನ್ನುವ ಊರಿನಿಂದ ಹುಡುಗ ಬರುತ್ತಿದ್ದಾನೆ ಎಂದು ಸುದ್ದಿ ಕೇಳಿ ಕುಮದ್ವತಿ ಪುಳಕಗೊಂಡಿದ್ದಳು. ಹುಡುಗನಿಗಿಂತ ಮಸರ ಎನ್ನುವ ಹೆಸರಿನ ಊರೇ ಅವಳಿಗೆ ಸಂತೋಷ ಹೆಚ್ಚಿಸಿತ್ತು. ಅದಕ್ಕೆ ಕಾರಣ ಮಸರದ ಪಕ್ಕದಲ್ಲೇ ಹರಿಯುವ ಕುಮದ್ವತಿ ನದಿ. ನದಿ ಎಂದರೆ ಕಾವೇರಿ, ತುಂಗಭದ್ರಾದಂತಹ ದೊಡ್ಡ ನದಿ ಅಲ್ಲದಿದ್ದರೂ, ನದಿಗಳೇ ಇಲ್ಲದ ಪ್ರದೇಶದಲ್ಲಿ ಬೆಳೆದ ಕುಮದ್ವತಿಗೆ, ಚಿಕ್ಕ ತೊರೆಯೂ ದೊಡ್ಡ ನದಿಯಾಗಿ ಕಾಣಿಸುವುದು, ಭಾವಿಸುವುದು ಅಂತಹ ಆಶ್ಚರ್ಯವೆನೆಲ್ಲ. ಅದರಲ್ಲೂ ತನ್ನ ಹೆಸರು ನದಿಯ ಹೆಸರು ಒಂದೇ ಆದ್ದರಿಂದ, ಇನ್ನೂ ಹೆಚ್ಚು ಸಂತಸವಾಗಿತ್ತು. ಹುಡುಗ ಹೇಗಿದ್ದರೂ ಒಪ್ಪಿಕೊಳ್ಳಲು ಅವಳು ಸಿದ್ಧಳಿದ್ದಳು. ಹುಡುಗನನ್ನು ನೋಡಿ ಊರಿಗೆ ಊರೇ ಮೆಚ್ಚಿಕೊಂಡಿತ್ತು. ಉದ್ದನೆಯ, ದೃಢಕಾಯದ ಹುಡುಗನನ್ನು ಕುಮದ್ವತಿಯೂ ಕಣ್ತುಂಬಿಕೊಂಡಿದ್ದಳು. ಹುಡುಗ ರಮೇಶನ ಅಪ್ಪ ಮೂರು ವರುಷದ ಹಿಂದೆ ತೀರಿಕೊಂಡಿದ್ದರಿಂದ, ತಾಯಿ ಶಾಂತಮ್ಮನೊಡನೆ ಎಲ್ಲ ಮಾತುಕತೆ ಆಯಿತು.
ಮದುವೆ ಮುಗಿದು, ಮಸರದ ಮನೆಗೆ ಬಂದಾಗ ರಾತ್ರಿ ಹತ್ತು ಗಂಟೆ. ಎಲ್ಲರೂ ಸುಸ್ತಾಗಿ ಹೋಗಿದ್ದರಿಂದ ಬೇಗನೆ ಮಲಗಿಬಿಟ್ಟರು. ರಾತ್ರಿ ಜುಳು ಜುಳು ಎಂದು ಹರಿಯುವ ನೀರಿನ ಸದ್ದುಕೇಳಿ ಕುಮದ್ವತಿ, ನದಿ ಹತ್ತಿರದಲ್ಲಿ ಇದೆಯೇ ಎಂದು ಗಂಡನನ್ನು ಕೇಳಿದ್ದಳು. ಅವಳನ್ನು ಬೆಳಿಗ್ಗೆ ವಿಸ್ಮಯಗೊಳಿಸಲು ರಮೇಶ, ಏನೂ ಹೇಳದೆ ಅವಳನ್ನು ತಬ್ಬಿಕೊಂಡು ತಬ್ಬಿಬ್ಬು ಮಾಡಿದ್ದ.
ಬೆಳಿಗ್ಗೆ ಕುಮದ್ವತಿಗೆ ಎಚ್ಚರವಾದಾಗ ಗಂಡ ಪಕ್ಕದಲ್ಲಿ ಇರಲಿಲ್ಲ. ಕಿಟಿಕಿಗೆ ಹಾಕಲಾಗಿದ್ದ ತೆರೆ ಸರಿಸಿ ನೋಡಿದಾಗ, ಅವಳ ಬಾಯಿಂದ ಶಬ್ದವೇ ಹೊರಡಲಿಲ್ಲ. ಸಂತೋಷದಿಂದ ಕಿರಿಚುವ ಪ್ರಯತ್ನ ಕೈಗೂಡಲಿಲ್ಲ. ಕುಮದ್ವತಿ ಮನೆಯ ಹಿಂದೆಯೇ ಹರಿಯುತ್ತಿತ್ತು. ನಿಧಾನವಾಗಿ, ತಿಳಿಯಾಗಿ, ಜುಳು ಜುಳು ಎನ್ನುತ್ತಾ ಹರಿಯುತ್ತಿದ್ದ ನದಿಯನ್ನು ನೋಡಿ, ಹೊರಗಡೆ ಓಡಿ ಬಂದಳು. ಎದ್ದ ತಕ್ಷಣ ಹೊರಗೆ ಓಡಿ ಹೋದ ಹುಡುಗಿಯನ್ನು ನೋಡಿ ದೊಡ್ಡವರು ಆಶ್ಚರ್ಯಗೊಂಡರೆ, ಮಕ್ಕಳು ಹೊ ಎಂದು ಕುಮದ್ವತಿಯ ಹಿಂದೆ ಓಡಿದರು. ನದಿಯ ತಟಕ್ಕೆ ಬಂದು ನಿಂತ ಕುಮದ್ವತಿ ನದಿಯನ್ನು ನೋಡುತ್ತಾ ನಿಂತುಬಿಟ್ಟಳು. ಸ್ವಲ್ಪ ಸಮಯದ ನಂತರ ಹೊ ಎಂದು ಕಿರುಚಿಬಿಟ್ಟಳು, ಸಂತೋಷದಿಂದ ಕುಣಿದುಬಿಟ್ಟಳು. ಅವಳು ಚಿಕ್ಕ ಹುಡುಗಿಯ ಹಾಗೆ ಕುಣಿಯುತ್ತಿದ್ದನ್ನು ನೋಡಿ ಎಲ್ಲರ ಮುಖದಲ್ಲಿ ದೊಡ್ಡ ನಗೆ ಅರಳಿತ್ತು.
ಅಂದಿನಿಂದ ಕುಮದ್ವತಿ ಸಮಯ ಸಿಕ್ಕಿದಾಗ ನದಿಯ ದಡದಲ್ಲಿ ಕುಳಿತು, ನದಿಯ ಜೊತೆ ಮಾತನಾಡುತ್ತಿದ್ದಳು. ಒಬ್ಬಳೇ ಮಗಳಾಗಿದ್ದರಿಂದ ಅವಳೊಡನೆ ಮಾತನಾಡಲು ತಾಯಿ, ತಂದೆ ಬಿಟ್ಟರೆ ಯಾರೂ ಇರಲಿಲ್ಲ, ಅವಳ ಮೌನ ಮತ್ತು ಅನ್ಯಮನಸ್ಕ ಮನಸ್ಸಿಗೆ ಹೆಚ್ಚಾಗಿ ಸ್ನೇಹಿತರೂ ಇರಲಿಲ್ಲ. ನದಿಯಲ್ಲಿ ತೇಲಿಬರುವ ಎಲೆ, ಹೂವು ಎಲ್ಲರದ ಬಗ್ಗೆಯೂ ಕುತೂಹಲ ತಾಳಿಕೊಂಡು ಕುಳಿತಿರುತ್ತಿದ್ದಳು. ಪತ್ನಿಯ ಸಂತೋಷ ಕಂಡು ರಮೇಶನೂ ಪುಳಕಗೊಂಡಿದ್ದ. ತನ್ನ ಹೆಂಡತಿ ಕವಿ ಮನಸ್ಸಿನವಳು ಎಂದು ಎಲ್ಲರಿಗೂ ಹೇಳುತ್ತಿದ್ದ. ಅವರ ಮನೆ ಊರಿನ ಬೇರೆ ಮನೆಗಳಿಗಿಂತ ಸ್ವಲ್ಪ ದೂರ ಇದುದ್ದರಿಂದ ಯಾರೂ ಅವಳಿಗೆ ತೊಂದರೆಯೂ ಕೊಡುತ್ತಿರಲಿಲ್ಲ. ಕಾಲ ಸುಖಮಯವಾಗಿ ಸಾಗುತ್ತಿತ್ತು.
ಮನೆಯ ಹತ್ತಿರವೇ ನದಿ ಹರಿಯುತ್ತಿರುವುದರಿಂದ ಅವರಿಗೆ ನೀರಿನ ತೊಂದರೆಯೂ ಇರಲಿಲ್ಲ. ಹೊಲಗಳಲ್ಲಿ ಬೋರ್ವೆಲ್ ಕೊರೆಸಿ ರಮೇಶ ಒಳ್ಳೆಯ ಪಸಲು ತೆಗೆಯುತ್ತಿದ್ದ. ಹೆಚ್ಚಿನ ನೀರನ್ನು ಬೇರೆ ಹೊಲಗಳಿಗೆ ಹರಿಸಿ ಸ್ವಲ್ಪ ಹಣ ಮಾಡುತ್ತಿದ್ದ. ಹೀಗೆಯೇ ನಾಲ್ಕೈದು ವರುಷ ಸರಿದುಹೋಯಿತು.
ಜೀವನ ಸದಾ ಸುಖಮಯವಾಗಿರುವುದಿಲ್ಲ. ಎಲ್ಲವೂ ಚನ್ನಾಗಿದ್ದ ಕಾಲಕ್ಕೆ ಯಾರು ಯಾರನ್ನೂ ಯಾವುದಕ್ಕೂ ದೂಷಿಸಿಸುವುದಿಲ್ಲ. ಎಲ್ಲರೂ ಎಲ್ಲರನ್ನೂ ಖುಷಿಯಿಂದಲೇ ಮಾತನಾಡಿಸುತ್ತಾರೆ, ಖುಷಿಯಿಂದ ನಡೆದುಕೊಳ್ಳುತ್ತಾರೆ.
ಪ್ರಪಂಚದ ಎಲ್ಲೆಡೆ ತಮ್ಮದಲ್ಲದ ತಪ್ಪಿಗೆ, ಯಾರದೋ ಅತ್ಯಾಸೆಗೆ ಹೇಗೆ ಮುಗ್ದಜನ ಬಲಿಯಾಗುತ್ತಿದ್ದಾರೋ ಹಾಗೆಯೇ, ನಿಸರ್ಗದ ಬದಲಾವಣೆಯಿಂದ ಮಸರಕ್ಕೂ ಮಳೆಯ ಅಭಾವ ಕಾಡತೊಡಗಿತು. ವರುಷಗಳೂ ಉರುಳುತ್ತಿದಂತೆ ಮಳೆ ಬೀಳುವುದು ಕಡಿಮೆಯಾಗಿ ಹೋಯಿತು. ಇದರ ಜೊತೆ ನದಿಯಿಂದ ಜನ ರಾತ್ರಿ ಕಳ್ಳತನದಿಂದ ಮರಳನ್ನು ಅಗಿದು ಹೊತ್ತೊಯ್ದು, ನದಿಯ ನೀರು ಮುಂದಕ್ಕೆ ಹರಿಯದೆ ಅಲ್ಲಿಯೇ ಇಂಗತೊಡಗಿತು. ನೀರು ಹರಿಯದ ಕಡೆ ಮುಳ್ಳಿನ ಗಿಡ ಬೆಳೆದು ನದಿ ಬತ್ತತೊಡಗಿತು. ಹೊಲದ ಕೊಳವೆ ಬಾವಿಗಳಲ್ಲಿ ನೀರು ಬರುವುದು ಕ್ರಮೇಣ ನಿಂತುಹೋಯಿತು. ಹೆಚ್ಚು ನೀರಿನ ಬೆಳೆ ಬೆಳೆಯದೆ, ರಮೇಶ ರಾಗಿ, ಮುಸಕಿನ ಜೋಳದಂತಹ ಅಲ್ಲಿ ಇಲ್ಲಿ ಸುರಿವ ಮಳೆಗೆ ಬೆಳೆಯುವ ಬೆಳೆಗಳನ್ನು ಬೆಳೆತೊಡಗಿದ. ಊಟಕ್ಕೆ ರಾಗಿ ಮುದ್ದೆ, ಮುಸುಕಿನ ಜೋಳದ ರೊಟ್ಟಿ ಗತಿಯಾಯಿತು. ಕುಮದ್ವತಿ ಹೇಗೋ ಮನೆಮುಂದೆ ಸ್ವಲ್ಪ ತರಕಾರಿ ಬೆಳೆಸಿ ಸಾರು, ಪಲ್ಯಕ್ಕೆ ತೊಂದರೆ ಇಲ್ಲದ ಹಾಗೆ ಮಾಡಿದ್ದಳು. ನದಿಯ ಉದ್ದಕ್ಕೂ ಹೋಗಿ ಅತ್ತೆ ಸೊಸೆ ಸಿಕ್ಕ ನೀರನ್ನು ತಂದು ತರಕಾರಿ ಬೆಳೆಯುತ್ತಿದ್ದರು. ಕ್ರಮೇಣ ನದಿ ಪೂರ್ತಿ ಬತ್ತಿ ಹೋಯಿತು. ರಮೇಶ ಹೇಗೋ ಹಣ ಹೊಂದಿಸಿಕೊಂಡು ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡಿಸಿಕೊಟ್ಟ.
ಈ ನಡುವೆ ಜನ ಊರುಬಿಟ್ಟು ನಗರಕ್ಕೆ ಹೋಗುವುದಕ್ಕೆ ಶುರುಮಾಡಿದ್ದರು. ನಗರದಲ್ಲಿ ಏನಾದರೂ ಕೆಲಸ ಸಿಗುತಿತ್ತು, ಹಳ್ಳಿಯಲ್ಲಿ ವ್ಯವಸಾಯ ಮಾಡುವುದು ಕಡಿಮೆಯಾಗಿ ಜನಕ್ಕೆ ಕೂಲಿಯ ಕೆಲಸವೂ ಸಿಗುತ್ತಿರಲಿಲ್ಲ. ರಮೇಶ ಕುಮದ್ವತಿಯ ಮಾತಿನಂತೆ ಎಲ್ಲ ಸರಿಯಿದ್ದಾಗ ಕೂಲಿ ಕೆಲಸಕ್ಕೆ ಬರುತ್ತಿದ್ದವರಿಗೆ ಅಲ್ಲೋ ಇಲ್ಲೋ ಕೆಲಸಕೊಟ್ಟು ಕೂಲಿ ಕೊಡುತ್ತಿದ್ದ. ತನ್ನ ಉಳಿತಾಯದ ಹಣ ದಿನೇ ದಿನೇ ಕರುಗುತ್ತಿರುವುದು ಅವರ ಗಮನಕ್ಕೆ ಬಂದರೂ ದೇವರೇ ದಾರಿ ತೋರಿಸುತ್ತಾನೆ ಎಂದುಕೊಳ್ಳುತ್ತಿದ್ದರು .
ಇಷ್ಟು ದಿನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಶಾಂತಮ್ಮ ಸೊಸೆಯ ಮೇಲೆ ಸಿಡಿ ಮಿಡಿ ಗೊಳ್ಳಲು ಸುರು ಮಾಡಿದಳು. ಇಷ್ಟು ಬೇಗ ಮಕ್ಕಳು ಬೇಡ ಎನ್ನುತ್ತಿದ್ದ ಸೊಸೆಯ ಮಾತಿಗೆ ಒಪ್ಪಿಕೊಂಡಿದ್ದವಳು, ಇದ್ದಕಿದ್ದಿದಂತೆ ವರಾತ ಸುರು ಮಾಡಿದಳು. “ಮದ್ವೆ ಆಗಿ ಐದು ವರುಷ ಆಯಿತು. ಇನ್ನು ಮಕ್ಕಳಾಗಲಿಲ್ಲ, ಮುಂದಕ್ಕೆ ಹಾಕಿ ಹಾಕಿ ಮಕ್ಕಳಾಗದಂತೆ ಆಗುತ್ತೋ ಏನೋ, ಹೆಸರಿಗೆ ತಕ್ಕ ಹಾಗೆ ಕುಮದ್ವತಿಯಂತೆ ಇವಳ ಹೊಟ್ಟೆ ಬತ್ತಿ ಹೋಯಿತೇ ಎಂದು ಗೊಣಗತೊಡಗಿದಳು. ಅತ್ತೆಯ ಮಾತುಗಳಿಗೆ ಅವಳಿಗೆ ಕೋಪವೇನೂ ಬರುವುದಿಲ್ಲ, ಮನೆಯ, ಊರಿನ ಪರಿಸ್ಥಿತಿ, ಅತ್ತೆಯನ್ನು ಹಾಗೆ ಮಾತನಾಡಿಸುತ್ತಿದೆ ಎಂದು ಅವಳು ಅರಿಯದವಳೇನೂ ಅಲ್ಲ. ಅತ್ತೆಗೆ ಮನದ ನೋವನ್ನು ಶಮನಗೊಳಿಸಿಕೊಳ್ಳಲು ತನಗೆ ಮಕ್ಕಳಾಗದೇ ಇರುವುದು ಒಂದು ನೆಪ ಅಷ್ಟೆ ಅಂದುಕೊಂಡಳು.
ಮಕ್ಕಳಿಗಾಗಿ ರಮೇಶ, ಕುಮದ್ವತಿಯ ಪ್ರಯತ್ನ ಈಗ್ಗೆ ಎರಡು ಮೂರು ವರುಷಗಳಿಂದ ನಡೆಯುತ್ತಿತ್ತು. ಮದುವೆಯಾಗಿ ಐದು ವರುಷಗಳಾದರೂ ಮಕ್ಕಳಾಗಲಿಲ್ಲ ಎನ್ನುವ ಕೊರಗು ಅವರಿಗೂ ಇತ್ತು. ಧೃಢಕಾಯದ, ಆರೋಗ್ಯದಿಂದ ಇರುವ ಗಂಡನಲ್ಲಿ ಲೋಪ ಇರಲು ಸಾಧ್ಯವಿಲ್ಲ, ತನ್ನೆಲ್ಲೇ ಏನೋ ಲೋಪವಿರಬೇಕು ಎಂದು ಅವಳಿಗೆ ಅನಿಸಿತ್ತು. ತನ್ನ ತಂದೆ ತಾಯಿಗೂ ಒಬ್ಬಳೇ ಮಗಳಾಗಿದ್ದು ಮತ್ತು ಅವರು ಇನ್ನೊಂದು ಮಗುವಿಗಾಗಿ ವ್ಯರ್ಥಪ್ರಯತ್ನ ಮಾಡಿದ್ದು ಗೊತ್ತಿತು. ಅವರಿಗೆ ಇನ್ನೊಂದು ಮಗುವಾಗಿರಲಿಲ್ಲ, ಆದ್ದರಿಂದಲೇ ತನಗೂ ಮಕ್ಕಳಾಗಲಿಲ್ಲವೇ ಎಂದು ಕೊಳ್ಳುತ್ತಿದ್ದಳು. ಯಾವುದಾದರೂ ವೈದ್ಯರ ಹತ್ತಿರ ಹೋಗೋಣ ಎಂದು ಅವಳು ಗಂಡನಿಗೆ ಅನೇಕ ಸಲ ಹೇಳಿದ್ದಳು, ಈಗ ಬರಗಾಲ ಪ್ರಾರಂಭವಾದ ಮೇಲೆ, ಅದನ್ನು ಅಲ್ಲಿಗೆ ಬಿಡಬೇಕಾಯಿತು. ಈಗ ಮಗುವಾದರೆ ಅದನ್ನು ಪೋಷಿಸಲು ಕಷ್ಟ ಆಗಬಹದು ಎಂದುಕೊಂಡಳು.
ಊರಿನವರ ಜೊತೆ ಅತ್ತೆಯೂ ತನಗ ಮಕ್ಕಳಾಗದ್ದನ್ನು ಆಡಿಕೊಳ್ಳುತ್ತಿರುವುದು ಸಹಿಸಲಾಗದೆ ಒಂದು ದಿನ, ಕುಮದ್ವತಿ ಯಾರೊಡನೆಯೂ ಫೋನ್ ನಂಬರ್ ತೆಗೆದುಕೊಂಡು ವೈದ್ಯರೊಬ್ಬರಿಗೆ ಫೋನ್ ಮಾಡಿದಳು. ಅವರು ಗಂಡ- ಹೆಂಡತಿ ಇಬ್ಬರೂ ತಪಾಸಣೆಗೆ ಬರಬೇಕು ಎಂದರು . ಒಂದು ಒಳ್ಳೆಯ ದಿನ ನೋಡಿ ಆಸ್ಪತ್ರೆಗೆ ಹೋಗಲು ಸಿದ್ಧವಾದರು, ಅತ್ತೆಯೂ ಜೊತೆಯಲ್ಲಿ ಬರುತ್ತೇನೆ ಎಂದಾಗ ಇಲ್ಲ ಅನ್ನಲಾಗಲಿಲ್ಲ.
ವೈದ್ಯರ ತಪಾಸಣೆ ಹಾಗು ಅನೇಕ ಪರೀಕ್ಷೆಗಳ ನಂತರ, ಒಂದು ದಿನ ಮಾತನಾಡಲು ಅವರನ್ನು ಬರಲು ವೈದ್ಯರು ತಿಳಿಸಿದರು. ರಮೇಶನಿಗೆ ಹೊಲದ ಕೆಲಸವಿದ್ದುದರಿಂದ, ಅತ್ತೆ ಸೊಸೆ ಆಸ್ಪತ್ರೆಗೆ ಬಂದರು. ವೈದ್ಯರು ಅವರಿಗೆ ಕುಳಿತುಕೊಳ್ಳಲು ಹೇಳಿ, ರೂಮಿನ ಬಾಗಿಲು ಮುಚ್ಚಿ ಬಂದು ಕುಳಿತು ದೀರ್ಘವಾಗಿ ಉಸಿರೆಳೆದುಕೊಂಡರು. ಅವರನ್ನೇ ನೋಡುತ್ತಾ ” ನೋಡಿ ನಿಮ್ಮ ಸೊಸೆಗೆ ಯಾವುದೇ ತೊಂದರೆ ಇಲ್ಲ, ಆದರೆ ನಿಮ್ಮ ಮಗನಲ್ಲಿ ತೊಂದರೆ ಇದೆ, ಅವರಿಗೆ ಚಿಕೆತ್ಸೆಯ ಅಗತ್ಯವಿದೆ” ನುಡಿದರು.
ಅತ್ತೆ ಸೊಸೆ ಅವಾಕ್ಕಾಗಿ ಅವರನ್ನೇ ನೋಡಿದರು. ವೈದ್ಯರು “ನೋಡಿ ಇದು ನಾರ್ಮಲ್, ಗಾಭರಿಗೊಳ್ಳುವ ಅವಶ್ಯಕೆತೆ ಇಲ್ಲ, ಸರಿಹೋಗುತ್ತೆ, ನಿಮ್ಮ ಗಂಡ ಚಿಕಿತ್ಸೆಗೆ ಸಹಕಾರ ನೀಡಬೇಕಷ್ಟೆ” ಎಂದರು ಕುಮದ್ವತಿ ವೈದ್ಯರನ್ನು ಮತ್ತು ಅತ್ತೆಯನ್ನು ನೋಡುತ್ತಾ “ನೋಡಿ ಇದನ್ನು ಸದ್ಯ ಅವರಿಗೆ ಹೇಳಬೇಡಿ, ನಾವು ಮತ್ತೆ ಬಂದು ನಿಮ್ಮನ್ನು ನೋಡುತ್ತೇವೆ” ಎಂದು ಎದ್ದು ಹೊರಬಂದಳು, ಅತ್ತೆ ಸೊಸೆಯನ್ನು ಹಿಂಬಾಲಿಸಿದಳು.
ಹೊರಗಡೆ ಬಂದು ಯಾರೂ ಇಲ್ಲದ ಒಂದು ಸ್ಥಳದಲ್ಲಿ ಕುಳಿತರು. ಏನು ಮಾಡುವುದು ಎಂದು ಕುಮದ್ವತಿ ಅತ್ತೆಯನ್ನು ನೋಡಿದಳು. ಅತ್ತೆ ” ನೀನೇನೂ ಹೆದರಬೇಡ, ನಾನು ರಮೇಶನಿಗೆ ಹೇಳುತ್ತೇನೆ, ಅವನಿಗೆ ಅರ್ಥವಾಗಲಿ” ಎಂದರು. ಕುಮದ್ವತಿ “ಬೇಡಿ ಅತ್ತೆ ಈಗೇನೂ ಹೇಳಬೇಡಿ, ನನ್ನಲ್ಲೇ ಲೋಪವಿದೆ ಎಂದು ಹೇಳೋಣ, ಗಂಡು ಜೀವ ವಿಷಯ ತಡೆದುಕೊಳ್ಳುವುದಿಲ್ಲ. ನಾನೇ ಕೆಲವು ಮಾತ್ರೆಗಳನ್ನು ಸೇವಿಸಿದರೆ ಸಾಕು ಎಂದು ಹೇಳೋಣ”
ಶಾಂತಮ್ಮ ಅವಾಕ್ಕಾಗಿ ಕುಮದ್ವತಿಯನ್ನೇ ನೋಡಿದಳು. ತನ್ನ ಸೊಸೆ ಒಳ್ಳೆಯವಳು ಎಂದು ಗೊತ್ತಿತು ಆದರೆ ಇಷ್ಟು ಒಳ್ಳೆಯವಳ. ಶಾಂತಮ್ಮ ಕುಮದ್ವತಿಯ ಕೈ ಹಿಡಿದು “ನಿನ್ನ ಮೇಲೆ ಕೋಪ ತೋರಿಸಿಬಿಟ್ಟೆ, ನನ್ನನ್ನು ಕ್ಷಮಿಸಿಬಿಡು ತಾಯಿ” ಅಂದಳು
“ಪರವಾಗಿಲ್ಲ ಅತ್ತೆ”.
“ರಮೇಶ ಹಾಸಿಗೆಯಲ್ಲಿ ಸರಿ ಇದ್ದಾನ?” ಅತ್ತೆ ಕೇಳಿದಳು
ಕುಮದ್ವತಿ ನಾಚಿಕೆಯಿಂದ, ಎಲ್ಲಾ ಸರಿಯಿದೆ ಎಂಬಂತೆ ತಲೆ ಆಡಿಸಿದಳು. ಅತ್ತೆ ಮಮತೆಯಿಂದ ಸೊಸೆಯ ತಲೆ ನೇವರಿಸಿದಳು.
ವಿಷಯ ತಿಳಿದು ರಮೇಶ ಅಷ್ಟೇನು ವಿಚಿಲಿತನಾಗಲಿಲ್ಲ. ಮಕ್ಕಳು ನಿಧಾನವಾಗಿ ಆಗಲಿ ಎಂದು ಎಂದಿನಂತೆ ತನ್ನ ಕೆಲಸಗಳಲ್ಲಿ ಮಗ್ನನಾದ. “ಗಂಡು ಹೆಣ್ಣಿನ ನೋವನ್ನು ಅರ್ಥಮಾಡಿಕೊಳ್ಳುವ ರೀತಿಯೇ ಬೇರೆ” ಎಂದುಕೊಂಡರು ಶಾಂತಮ್ಮ. ಲೋಪ ತನ್ನಲ್ಲೇ ಇದೆ ಎಂದು ತಿಳಿದಿದ್ದರೆ ರಮೇಶ ಹೀಗೆ ಸುಲಭವಾಗಿ ತೆಗೆದುಕೊಳ್ಳುತ್ತಿದ್ದನಾ, ಕುಂಗಿಹೋಗುತ್ತಿದ್ದ ಎಂದುಕೊಂಡು ನಿಟ್ಟುಸಿರು ಬಿಟ್ಟರು.
ಹೀಗೆಯೇ ತಿಂಗಳುಗಳು ಸರಿದವು. ಅತ್ತೆ ಸೊಸೆ ಆಸ್ಪತ್ರೆಗೆ ಹೋಗಿಬಂದಿರುವ ವಿಷಯ ತಿಳಿದಿದ್ದ ಜನ, ಕುಮದ್ವತಿಯಲ್ಲೇ ಲೋಪವಿದೆ ಎಂದು ತೀರ್ಮಾನಿಸಿ, ಮನೆಗೆ ಬಂದು ಹಲವಾರು ಉಚಿತ ಸಲಹೆಗಳನ್ನು ಕೊಟ್ಟುಹೋದರು.
ಇದೆಲ್ಲ ನೋಡಿ ಸಹಿಸಲಾಗದೆ ಒಂದು ದಿನ ಶಂತಮ್ಮ ತನ್ನ ಸೊಸೆಯನ್ನು ಯಾರು ಇಲ್ಲದ ವೇಳೆ ಒಂದು ರೂಮಿಗೆ ಕರೆದುಕೊಂಡು ಹೋಗಿ ಬಾಗಿಲಿಕ್ಕಿದಳು.
“ಕುಮ್ಮು ಹೀಗೆ ಹೇಳುತ್ತೇನೆ ಎಂದು ಅಸಹ್ಯ ಮಾಡಿಕೊಳ್ಲಬೇಡ, ನನಗೆ ತೋಚಿದ್ದನ್ನು ಹೇಳುತ್ತೇನೆ, ರಮೇಶನಿಗೆ ವಿಷಯ ಹೇಳುವುದು ಸುಲಭವಲ್ಲ, ನೀನು ನಿನ್ನದಲ್ಲದ ತಪ್ಪಿಗೆ ತಾಯಿಯಾಗದಿರುವುದು ಒಳ್ಳೆಯದಲ್ಲ, ನನಗೊಂದು ಉಪಾಯ ಹೊಳೆದಿದೆ. ಬೆಂಗಳೂರಿನಲ್ಲಿ ನನ್ನ ತಂಗಿಯ ಮಗ ಇದ್ದಾನಲ್ಲ, ಅದೇ ಸುಧೀರ ನಾನು ಅವರೊಡನೆ ಮಾತನಾಡುತ್ತೇನೆ, ನಿನಗೆ ಒಪ್ಪಿಗೆ ಇದ್ದರೆ, ಅವನಿಂದ ಒಂದು ಮಗು ಪಡೆಯಬಹದು” ಕುಮಧ್ವತಿ ಪಕ್ಕನೆ ನಕ್ಕು ಬಿಟ್ಟಳು, ಜೋರಾಗಿ ಇನ್ನೂ ಜೋರಾಗಿ ನಕ್ಕುಬಿಟ್ಟಳು.
“ನಾನು ಗಂಭೀರವಾಗಿ ಹೇಳುತ್ತಿದ್ದರೆ, ನೀನು ನಗುತ್ತಿದ್ದಿಯಲ್ಲೇ”
“ಅತ್ತೆ ಅದೆಲ್ಲ ಏನೂ ಬೇಡ, ನನಗೆ ಮಕ್ಕಳಾಗದಿದ್ದರೂ ಪರವಾಗಿಲ್ಲ, ಒಂದು ವೇಳೆ ಹಾಗೇ ಮಕ್ಕಳಾದರೂ ಇಡೀ ಜೀವನ ಭಯದಿಂದ ಬದಕಬೇಕು, ಬೇರೆ ಮಾರ್ಗಗಳು ಬೇಕಾದಷ್ಟಿವೆ, ರಾತ್ರಿ ಏನಾದರೂ ಮಹಾಭಾರತ ಓದುದ್ರಾ ” ಎಂದು ಮತ್ತೆ ನಕ್ಕಳು.
“ಏನೇ ಆಗಲಿ, ನೀವು ಆಧುನಿಕ ಅತ್ತೆ” ಎಂದು ಮತ್ತೆ ಮತ್ತೆ ನಕ್ಕಳು.
ಬತ್ತಿ ಹೋಗಿರುವ ನದಿಯ ದಡದಲ್ಲಿ ಕುಳಿತು ಹರಿಯುವ ನದಿಯನ್ನು ಕಲ್ಪಿಸಿಕೊಂಡು ಸುಖಪಡುತ್ತಿದ್ದ ಕುಮದ್ವತಿಗೆ, ಎಲ್ಲವೂ ವೇಗವಾಗಿ ಮನಸಿನಲಿ ಸುಳಿದುಹೋದವು. ಕೆಲವು ಸಲ ಊರಿನವರ ಮಾತುಗಳಿಗೆ ಬೇಸರವಾದರೂ, ಪ್ರೀತಿಸುವ ಗಂಡನಿಂದ ಎಲ್ಲವೂ ಮರೆಯುತ್ತಿದ್ದಳು. ಸೊಸೆಯ ಒಳ್ಳೆಯತನ ಕಂಡಮೇಲೆ ಅತ್ತೆ ಇನ್ನೂ ಹತ್ತಿರವಾಗಿದ್ದರು. ಸೊಸೆಗೆ ಯಾವುದೇ ತೊಂದರೆ ಆಗದಂತೆ, ತನ್ನ ಮಗನಿಂದ ಅವಳಿಗೆ ಅನ್ಯಾಯ ಆಯಿತಲ್ಲ ಎನ್ನುವ ಪಾಪ ಪ್ರಜ್ಞೆಯಿಂದ ಸೊಸೆಯನ್ನು ಇನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಕುಮದ್ವತಿ ತನಗೆ ಮಕ್ಕಳಾಗಲಿಲ್ಲವಲ್ಲ ಎನ್ನುವುದಕ್ಕಿಂತ ಕುಮದ್ವತಿ ಬತ್ತಿಹೋಯಿತು ಎನ್ನುವುದು ಹೆಚ್ಚು ದುಃಖದ ವಿಷಯವಾಗಿತ್ತು. ಎಲ್ಲೂ ನೀರಿನ ಪಸೆಯೂ ಕಾಣದೆ ಬರೀ ಗುಂಡಿಗಳೇ ಕಾಣುತ್ತಿರುವ ಕುಮದ್ವತಿ ತನ್ನಂತಯೇ ದುಃಖತಪ್ತೆಯಾಗಿ ಕಂಡಳು. ನದಿಗಾಗಿರುವ ದುಃಖ ತನಗಿಂತ ಹೆಚ್ಚು ಎಂದುಕೊಂಡಳು. ನದಿಯಲ್ಲಿ ಹಾಗು ತನ್ನಲ್ಲಿ ಸುಖ ಮರುಕಳಿಸುವುದೇ ಎನಿಸಿತು. ನದಿಯಲ್ಲಿ ನೀರುಹರಿದರೆ ತನ್ನಲ್ಲಿ ಸುಖ ತುಂಬಿದಂತೆಯೇ ಎಂದುಕೊಂಡಳು.
ಹೆಣ್ಣೂ, ನದಿ ಒಂದೇ, ನದಿಯೂ ತನ್ನಲ್ಲಿ ಅನೇಕ ಭಾವನೆಗಳನ್ನು, ನೋವನ್ನು ಏಳಿರಿಳಿತದಲಿ ಹಿಡಿದು ಸಾಗಿದಂತೆ, ಹೆಣ್ಣು ತನ್ನ ನೋವನ್ನು ನುಂಗಿಕೊಂಡು ಮುಗುಳ್ನಗುತ್ತಾಳೆ. ಇಬ್ಬರ ಮೌನ ಅನೇಕ ಅರ್ಥಗಳನ್ನು ಧ್ವನಿಸುತ್ತದೆ, ಆಲಿಸುವ ಮನಗಳು ಇಲ್ಲದಿದ್ದರೆ, ವಿಕೋಪ ಕಾಣಬೇಕಾಗುತ್ತದೆ . ನದಿಗೆ ಸಾಗರಸಂಗಮದಲ್ಲಿ ಸುಖ ಕಂಡುಕೊಂಡರೆ, ಹೆಣ್ಣು ತನ್ನ ಪತಿ, ಮಕ್ಕಳ ಸಂತೋಷಕ್ಕೆ ಬಾಳೆರೆದು ಸುಖ ಕಂಡುಕೊಳ್ಳುತ್ತಾಳೆ. ನದಿಗೂ, ಹೆಣ್ಣಿಗೂ ಜೀವನದ ಕೊನೆಯಲ್ಲಿ ತನ್ನ ಇರುವಿಕೆ ಎಲ್ಲಿ ಎಂದು ಹುಡುಕಬೇಕಾಗುತ್ತದೆ. ಪ್ರಕೃತಿಯಂತೆ, ಹೆಣ್ಣೂ ತನ್ನನ್ನು ಆಲಿಸಲು ಸ್ವಲ್ಪ ಸಮಯ ಕೊಡುತ್ತಾಳೆ, ಕೇಳದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಪ್ರಕೃತಿಯ ಮಾತನ್ನು ಕೇಳದಿರುವುದಕ್ಕೆ ಅತೀವೃಷ್ಟಿ, ಅನಾವೃಷ್ಟಿಯ ಸ್ಥಿತಿ ನಿರ್ಮಾಣವಾಗಿದೆ. ಹೆಣ್ಣಿನ ಮಾತನ್ನು ಈಗಲಾದರೂ ಕೇಳದಿದ್ದರೆ ಮಾನವನ ಇರುವಿಕೆ ಮುಂದೆ ಭೂಮಿಯಲ್ಲಿ ಪಳುವಳಿಕೆ ಆಗುತ್ತದೆ.
“ಕುಮ್ಮೂ ಇಲ್ಲಿ ನೋಡು ಯಾರು ಬಂದಿದ್ದಾರೆ” ಎಂದು ಅತ್ತೆ ಮನೆಯ ಪಕ್ಕದಲ್ಲಿ ನಿಂತು ಕೂಗಿದ್ದು ಕೇಳಿ, ಯಾರಿರಬಹುದು ಎಂದು ಎದ್ದು ಬಂದಳು. ನೋಡಿದರೆ ಅಪ್ಪ ಅಮ್ಮ ಇಬ್ಬರೂ ಬಂದಿದ್ದರು. ಸಂತೋಷದಿಂದ ಓಡಿಬಂದು ಅಮ್ಮನನ್ನು ತಬ್ಬಿಕೊಂಡಳು. “ಚನ್ನಾಗಿದೀಯಾ ತಾಯಿ” ಅಪ್ಪ ಮಮತೆಯಿಂದ ಕೇಳಿದರು. ಕುಮದ್ವತಿ ಹೌದು ಎನ್ನುವಂತೆ ತಲೆ ಆಡಿಸಿದಳು.
ಒಳಗೆ ಹೋಗಿ ಅಪ್ಪ ಅಮ್ಮನಿಗೆ ನೀರು ತಂದುಕೊಟ್ಟು ಅವರ ಪಕ್ಕ ಕುಳಿತಳು. ರಮೇಶ ಇನ್ನು ಹೊಲದ ಕೆಲಸದಿಂದ ಬಂದಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅಮ್ಮ ಮಗಳು ಸೇರಿ ಅಡುಗೆ ಮನೆ ಸೇರಿಕೊಂಡು ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡಹತ್ತಿದರು. ಸ್ವಲ್ಪಹೊತ್ತಿನಲ್ಲಿ ಮನೆಗೆ ಬಂದ ರಮೇಶ ಮಾವನ ಜೊತೆ ಕುಳಿತು ಹರಟೆಹೊಡೆಯುತ್ತಿದ್ದ.
ಊಟ ಮುಗಿದಮೇಲೆ ಮನೆಯ ಅಂಗಳದಲ್ಲಿ ಎಲ್ಲರೂ ಬಂದು ಕುಳಿತರು. ಕುಮದ್ವತಿಯ ಅಪ್ಪ ಶಾಂತಮ್ಮನನ್ನು ನೋಡುತ್ತಾ “ನಮ್ಮನ್ನು ಕ್ಷಮಿಸಿ ನಮ್ಮ ಮಗಳಿಂದ ನಿಮ್ಮ ವಂಶ ಮುಂದಕ್ಕೆ ಹೋಗುತ್ತಿಲ್ಲ” ಎಂದರು
“ಹಾಗೇನೂ ಇಲ್ಲ, ನಿಮ್ಮ ಮಗಳೇನು ಮುದುಕಿಯೇ, ಇನ್ನು ಚಿಕ್ಕವಳು, ಮಾತ್ರೆ ತಗೋತಾ ಇದಾಳೆ, ಮಕ್ಕಳಾಗುತ್ತೆ ಬಿಡಿ, ಅಂತಹ ಅವಸರವೇನೂ ಇಲ್ಲ”
” ನಿಮ್ಮಂತವರ ಮನೆಗೆ ಅವಳು ಬಂದಿದ್ದು ಅವಳ ಅದೃಷ್ಟ, ನೀವೇನು ತಪ್ಪು ತಿಳಿಯುವುದಿಲ್ಲ ಅಂದರೆ ಒಂದು ಮಾತು ಕೇಳಬಹದೇ”.
” ಕೇಳಿ ಅದಕ್ಕೇನು”
” ಏನಿಲ್ಲ, ಈ ಚಿಕಿತ್ಸೆಗೆ ತುಂಬಾ ಹಣ ಬೇಕಾಗುತ್ತೆ ಅಂದರು, ಆ ಹಣದ ವ್ಯವಸ್ಥೆ ನಾನು ಮಾಡಿದ್ರೆ ನೀವು ತಪ್ಪು ತಿಳಿಯಲ್ಲ ತಾನೇ?”
“ಅದೆಲ್ಲ ಬೇಡ” ಎಂದ ರಮೇಶ.
“ನಮಗೆ ತಾನೇ ಇನ್ನು ಯಾರಿದ್ದಾರೆ, ಅದೂ ಅಲ್ಲದೆ ನಮಗೆ ಅಷ್ಟೇನೂ ಮನೆ ಖರ್ಚು ಸಹ ಈಗ ಇಲ್ಲ, ಸ್ವಲ್ಪ ಹಣ ಇದೆ”
ಕುಮದ್ವತಿ ಅಪ್ಪನ ಮುಖ ನೋಡುತ್ತಾ ” ಅಪ್ಪ ಹಣ ಬೇಕು, ಆದರೆ ಹಾಗೆ ಕೊಡಬೇಡಿ, ಸಾಲ ಅಂತ ಕೊಡಿ”.
“ಅದೆಲ್ಲಾ ಯಾಕಮ್ಮ” ಅಂದರು ಕುಮದ್ವತಿ ಅಮ್ಮ. ಅವರ ನಡುವಲ್ಲೇ ತುಂಡರಿಸಿದ ಕುಮದ್ವತಿ ” ಸಾಲ ಅಂತ ಕೊಟ್ಟರೆ ತೆಗೆದುಕೊಳ್ಳುತ್ತೇವೆ ಇಲ್ಲ ಅಂದರೆ ಬೇಡ”.
ಮಗಳ ಸ್ವಾಭಿಮಾನ ಗೊತ್ತಿದ್ದ ಅಪ್ಪ ” ಸರಿ ಅಮ್ಮ” ಎಂದರು.
ರಮೇಶ ಮಾತ್ರ “ಈಗ ಹಣ ಏಕೆ ?” ಅಂದ.
ಕುಮದ್ವತಿ “ಆಮೇಲೆ ಹೇಳುತ್ತೇನೆ” ಅಂದಳು.
ಅಪ್ಪ ಹೊರಡುವ ಮುಂಚೆ ಒಳ್ಳೆಯ ಮೊತ್ತದ ಹಣ ಕೊಟ್ಟು ಹೊರಟರು. ಕುಮದ್ವತಿ ಅವರ ಕಾಲಿಗೆ ನಮಸ್ಕರಿಸಿ ಬೀಳ್ಕೊಟ್ಟಳು.
ಮರುದಿನ ರಮೇಶ ಹೊರಗೆ ಹೋರಟ ಮೇಲೆ, ಶಾಂತಮ್ಮ ಸೊಸೆಯನ್ನು ಕರೆದು ಕುಳ್ಳಿಸಿರಿ, “ನಿನ್ನ ಮನಸಿನಲ್ಲಿ ಏನಿದೆ” ಎಂದು ಕೇಳಿದರು. ಕುಮದ್ವತಿ ನಿಧಾನವಾಗಿ “ಅತ್ತೆ ಅವರಿಗೆ ವಿಷಯ ಹೇಳೋಣ, ಅವರು ಚಿಕಿತ್ಸೆ ತೆಗೆದುಕೊಳ್ಳಬೇಕು, ಆರೋಗ್ಯವಾಗಿದ್ದಾರೆ, ಎಲ್ಲಾ ಸರಿ ಹೋಗುತ್ತೆ, ಅದೂ ಅಲ್ಲದೆ ಅವರಿಗೆ ಮುಂದೆ ವಿಷಯ ತಿಳಿದರೂ ಬೇಸರಗೊಳ್ಳಬಹದು”
“ನೀನು ಹೇಳೋದು ಸರಿಯಿದೆ, ಹೇಳಿದರೆ ಅವನಿಗೆ ಈಗ ಸ್ವಲ್ಪ ಬೇಸರವಾಗಬಹದು, ಮುಂದೆ ತಿಳಿದರೆ ಇನ್ನೂ ಬೇಸರಗೊಳ್ಳಬಹದು, ಅವನ ಮನಸಿನಲ್ಲಿ ಏನಿದೆ ಎಂದು ತಿಳಿಯುವ ಅವಕಾಶವೇ ಇಲ್ಲವಾಗುತ್ತದೆ”.
ಒಂದು ದಿನ, ಸಂಜೆ ಬೇಗ ಮನೆಗೆ ಬರುವಂತೆ ರಮೇಶನಿಗೆ ಕುಮದ್ವತಿ ಹೇಳಿದಳು. ಏನು ವಿಶೇಷ ಇರಬಹುದು ಎಂದು ಕೂತೂಹಲದಿಂದ ಅವಳ ಮುಖ ನೋಡಿದ, ಸಂಜೆ ಹೇಳುತ್ತೇನೆ ಎಂದಳು.
ಹೆಂಡತಿ ಎಂದರೆ ರಮೇಶನಿಗೆ ಪ್ರೀತಿ, ಅಭಿಮಾನ, ಗೌರವ, ಹೆಮ್ಮೆ ಎಲ್ಲ ಇತ್ತು. ಅವಳ ಸುಂದರ ಮುಖಕ್ಕೆ ಮತ್ತು ವ್ಯಕ್ತಿತ್ವಕ್ಕೆ ಮನ ಸೋಲಿದ್ದ. ಬಂದ ಹಣವನ್ನು ಅವಳ ಕೈಗೆ ಹಾಕಿ ನಿಶ್ಚಿಂತೆ ಇದ್ದ. ಮನೆಯನ್ನು ಯಾವುದೇ ತೊಂದರೆ ಇಲ್ಲದೆ ಅಚ್ಚು ಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಳು. ಮನೆಯಲ್ಲಿ ತರಕಾರಿ ಬೆಳೆಸಿ, ಹಸುವೊಂದನ್ನು ಸಾಕಿ ಸಹಾಯವಾಗಿದ್ದಳು. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಬರಗಾಲದ ಸಮಯದಲ್ಲಿ, ಕೂಲಿಗೆ ಬರುವವರಿಗೆ, ಕೆಲಸವಿರಲಿ ಇಲ್ಲದಿರಲಿ ದಿನಾ ಮದ್ಯಾನ್ಹ ಅಡುಗೆ ಮಾಡಿ ಬಡಿಸುತ್ತಿದ್ದಳು. ಮಕ್ಕಳ ಶಾಲೆಯ ಶುಲ್ಕವನ್ನು ಕೊಡುತ್ತಿದ್ದಳು. ಅವಳ ವ್ಯಕ್ತಿತ್ವಕ್ಕೆ ಸೋತಿದ್ದ ರಮೇಶ ಅವಳಿಗೆ ಯಾವುದಕ್ಕೂ ಅಡ್ಡಿ ಹೇಳುತ್ತಿರಲಿಲ್ಲ.
ಸಂಜೆ ರಮೇಶ ಮನೆಗೆ ಬಂದಾಗ, ಎದಿನಂತೆ ಬಿಸಿ, ಬಿಸಿ ಅಡುಗೆ ಸಿದ್ದವಾಗಿತ್ತು. ಮೂವರು ಸೇರಿ ಊಟ ಮಾಡಿದರು. ಸಲ್ಪ ಹೊತ್ತಾದ ಮೇಲೆ, ಕುಮದ್ವತಿ ಬಾಗಿಲನ್ನು ಮುಚ್ಚಿ ಚಿಲುಕ ಹಾಕಿ ಬಂದಳು, ವಿಷಯ ಗಂಭೀರಾವಾಗಿದೆ ಎಂದುಕೊಂಡ ರಮೇಶ.
ಕುಮದ್ವತಿ “ನೋಡಿ ನಾನು ಹೇಳುತ್ತಿರುವ ವಿಷಯಕ್ಕೆ ನೀವು ನೋವು ಪಡಬಾರದು, ಸಿಟ್ಟು ಮಾಡಿಕೊಳ್ಳಬಾರದು” ಎಂದಳು.
“ನಾನು ಎಂದಾದರೂ ನಿನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದೇನೆಯೇ” ಎಂದ ರಮೇಶ.
“ಗೊತ್ತು ಆದರೆ ಇದು ಬೇರೆ”.
“ಸರಿ ಹೇಳು”.
ಕುಮದ್ವತಿ ನಿಧಾನವಾಗಿ ಎಲ್ಲ ವಿಷಯವನ್ನು ತಿಳಿಸಿದಳು. ಕುಮದ್ವತಿ, ಶಾಂತಮ್ಮ ರಮೇಶನ ಮುಖ ನೋಡುತ್ತಾ ಭಯದಿಂದ ಕುಳಿತರು. ರಮೇಶ ಸ್ವಲ್ಪಹೊತ್ತು ತಲೆ ಕೆಳಗೆ ಹಾಕಿ, ಕುಳಿತ, ಇದ್ದಕಿದ್ದಂತೆ ಎದ್ದು ಬಂದು ಬಿಗಿಯಾಗಿ ಪತ್ನಿಯನ್ನು ತಬ್ಬಿಕೊಂಡ. ಅಮ್ಮ ಇರುವುದನ್ನೂ ಲೆಕ್ಕಿಸಿದೆ ಪತ್ನಿಗೆ ಕೆನ್ನೆಗೆ ಮುತ್ತುಕೊಟ್ಟ. ಬಳಿಕ ಜೋರಾಗಿ ನಕ್ಕು ಬಿಟ್ಟ.
“ಇದನ್ನು ಹೇಳೋಕೆ ಇಷ್ಟು ದಿನ ಕಾದು ಕುಂತ್ರಾ, ನಿನ್ನ ಮೇಲೆ ಲೋಪ ಹಾಕಿಕೊಂಡ್ಯಾ, ಇದೇನು ದೊಡ್ಡ ವಿಷಯ, ನನಗೇನು ಇದರಿಂದ ನೋವಿಲ್ಲ, ಚಿಕಿತ್ಸೆಗೆ ಯಾವಾಗ ಹೋಗಬೇಕು ಆಗ ಹೋಗೋಣ, ಇದಕ್ಕೇನಾ ಮಾವನಿಂದ ಹಣ ತಗೆದುಕೊಂಡಿದ್ದು ” ಎಂದು ಒಂದೇ ಉಸುರಿಗೆ ಹೇಳಿದ.
ಶಾಂತಮ್ಮನಿಗೆ ಇದ್ದಕಿದ್ದಂತೆ ಪ್ರಪಂಚದಲ್ಲಿರುವ ಜನರೆಲ್ಲಾ ಒಳ್ಳೆಯವರೇ ಅನಿಸಿತು. ಅದರಲ್ಲಿ ಮಗ ಸೊಸೆ ಎಲ್ಲರಿಗಿಂತಾ ಒಳ್ಳೆಯವರು ಎನಿಸಿತು. ಮಗ ಇಷ್ಟು ಸುಲಭವಾಗಿ ವಿಷಯನ್ನು ತೆಗೆದುಕೊಳ್ಳುತ್ತಾನೆ ಎಂದುಕೊಳ್ಳಲಿಲ್ಲ.
ಕುಮದ್ವತಿ ” ಈ ವಿಷಯ ನಮ್ಮ ಮೂವರಲ್ಲೇ ಇರಲಿ, ಬೇರೆಯರಿಗೆ ಎಂದೂ ಗೊತ್ತಾಗುವುದು ಬೇಡ, ಚಿಕಿತ್ಸೆ ನನಗೇ ಎಂದು ಎಲ್ಲರೂ ಅಂದುಕೊಳ್ಳಲಿ” ಅಂದಳು ಇಬ್ಬರೂ ಸರಿ ಎಂಬಂತೆ ತಲೆ ಆಡಿಸಿದರು.
ಚಿಕಿತ್ಸೆ ಶುರುವಾಗಿ, ಆರು ತಿಂಗಳಲ್ಲಿ ಮಳೆಗಾಲ ಶುರುವಾಯಿತು. ಎಡೆಬಿಡದೆ ಮಳೆ ಧೋ ಎಂದು ಹತ್ತು ದಿನಗಳ ಕಾಲ ಸುರಿಯಿತು. ಕೆರೆ ಕುಂಟೆಗಳಲೆಲ್ಲಾ ತುಂಬಿ ಹರಿದವು. ಕುಮದ್ವತಿ ಹಿಂದಿನಂತೆ ತುಂಬಿ ಹರಿಯತೊಡಗಿದಳು. ಊರ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ, ಇನ್ನು ಬದುಕಿಕೊಂಡೆವು ಎಂದು ಎಲ್ಲರಿಗೂ ಅನಿಸಿತು. ಎಲ್ಲರ ಬಾಯಲ್ಲಿ ಇದೆ ಮಾತು. ರಮೇಶನಂತೋ ಸಿಳ್ಳೆ ಹೊಡೆದುಕೊಂಡು ಮನೆಯಲ್ಲಾ ಸಂತೋಷದಿಂದ ಓಡಾಡುತ್ತಿದ್ದ. ಕುಮದ್ವತಿ ಕಿಟಕಿಯಿಂದ ನದಿ ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿದ್ದಳು.
ಒಂದು ದಿನ ಮಳೆ ಬಿಡುವು ಕೊಟ್ಟಿತು, ಅತ್ತೆ ಶಾಂತಮ್ಮ ಹಾಗು ಪತಿ ರಮೇಶನನ್ನು ತಾನು ಕುಳಿತು ನದಿ ಹರಿಯುತ್ತಿದ್ದನ್ನು ನೋಡುತಿದ್ದ ಸ್ಥಳಕ್ಕೆ ಕುಮದ್ವತಿ ಕರೆದುಕೊಂಡು ಹೋದಳು. ತಾನು ಕುಳಿತುಕೊಳ್ಳುತ್ತಿದ್ದ ಕಲ್ಲು ಬಂಡೆಯ ಮೇಲೆ ಅತ್ತೆ, ಪತಿಯನ್ನು ಕುಳ್ಳಿರಿಸಿ, ಅವರ ಕೈಯನ್ನು ತನ್ನ ಹೊಟ್ಟೆಯಮೇಲೆ ಇರಿಸಿಕೊಂಡು, ನಾಚಿಕೆಯಿಂದ ತಲೆ ತಗ್ಗಿಸಿಕೊಂಡಳು.
“ನಿಜವೇನೇ” ಶಾಂತಮ್ಮ ಎದ್ದು ಸೊಸೆಯನ್ನು ತಬ್ಬಿಕೊಂಡಳು , ಕುಮದ್ವತಿ ಸಂತೋಷದಿಂದ ಹೌದು ಎನ್ನುವಂತೆ ತಲೆ ಆಡಿಸಿದಳು. ರಮೇಶ ಪತ್ನಿಯನ್ನು ಎತ್ತಿಕೊಂಡು ಮುದ್ದಾಡಿದ.
ಕುಮದ್ವತಿ ಮೈದುಂಬಿ ಕೆಂಪಗೆ ಹರಿಯುತ್ತಿದ್ದಳು.
******
4 thoughts on “ಕುಮದ್ವತಿ”
ಕುಮದ್ವತಿ ಒಂದು ಅತ್ಯುತ್ತಮ ಕಥೆ.ಬಯಲು ಸೀಮೆಯಲ್ಲಿ ಮರಳು ತೆಗೆದು ದುಡ್ಡು ನೋಡಿದ ಜನ ಬರಗಾಲವನ್ನೂ ನೋಡಬೇಕಾಯಿತು.ಕುಮದ್ವತಿಯ ಬಂಜೆತನ ಒಂದು ಸಾಂಕೇತಿಕ. ಮಾನವನ ಸ್ವಯಂಕೃತ ಅಪರಾದಗಳಿಂದ ನದಿಗಳು ಬತ್ತುತ್ತಿವೆ ಅದನ್ನು ಸರಿಪಡಿಸಲು ಪ್ರಕೃತಿಗೆ ಮಾನವನೆ ಚಿಕಿತ್ಸೆ ನೀಡಬೇಕಾಗಿದೆ.
ನಿಜಕ್ಕೂ ಅದ್ಭುತ ವಾದ ಕಥೆ, ಇದನ್ನು ಮಕ್ಕಳಿಗೆ ಪಠ್ಯ ಪುಸ್ತಕ ವಾಗಿ ಇಟ್ಟರೆ ಮುಂದಿನ ಪೀಳಿಗೆಗೆ ತುಂಬಾ ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ.
ಈ ನಿಟ್ಟಿನಲ್ಲಿ ಸ್ವಾರ್ಥ ಗಳನ್ನು ಬದಿಗಿಟ್ಟು ಯಾರಾದರೂ ಸಹಾಯಮಾಡಿದರೆ ಒಳ್ಳೆಯ ದಾಗುತ್ತದೆ ಮತ್ತು ಸಾಹಿತ್ಯದಲ್ಲಿ ರಾಜಕಾರಣ,ಜಾತೀಯತೆ ಅರಿವಿರದ ಹೊರದೇಶದ ಯುವ ಕನ್ನಡಿಗನಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.
ಧನ್ಯವಾದಗಳು
ಮನಸ್ಸಿಗೆ ಮುದ ನೀಡುವ ಮಧುರ ಕಥೆ. ಸೊಗಸಾದ ನಿರೂಪಣೆ.
ಅಭಿನಂದನೆಗಳು.
ಧನ್ಯವಾದಗಳು ಸರ್