ವಿಜಯೀ ಭವ! ದಿಗ್ವಿಜಯೀ ಭವ!!


ಹಾಸ್ಯ/ವಿಡಂಬನೆ

ಭವ್ಯ ಭಾರತದ ಯಾವ ರಾಜ್ಯದಲ್ಲಾದರೂ ಇಂತಹ ಪ್ರಹಸನಗಳು ಸಂಭವಿಸುತ್ತಲೇ ಇರುತ್ತವೆ. ಅದರಲ್ಲಿ ಸಂಶಯವಿಲ್ಲ. ನಮ್ಮ ಕರುನಾಡು ಕರ್ನಾಟಕದ ಒಂದು ಝಲಕ್ ಹೀಗಿದೆ…

ಮನೆಗಿಂತ ಗುಡಿ ಶ್ರೇಷ್ಠ. ಇದು ಹಳೆಯ ಗಾದೆ. ಮನೆಗಿಂತ ಜೈಲೇ ಶ್ರೇಷ್ಠ. ಇದು ಹೊಸ ಗಾದೆ. ನಿಜ ಹೇಳಬೇಕೆಂದರೆ ಇಡೀ ಪ್ರಪಂಚವೇ ಒಂದು ದೊಡ್ಡ ಕಾರಾಗೃಹ. ಮನುಷ್ಯನ ಭೌತಿಕ ಆಕಾರವೇ ಜೈಲು ಮತ್ತು ಅದರೊಳಗೇ ಆತ್ಮ ಅಡಗಿದೆ ಎಂದು ಹಲವು ತತ್ವ ಜ್ಞಾನಿಗಳ ಅಂಬೋಣ. ಅದಿರಲಿ, ಯಾರು ಏನೇ ಹೇಳಿದರೂ ಮಾನವ ಸಮಾಜದಲ್ಲಿ ಜೈಲಿಗೆ ಇರುವ ಜನಪ್ರಿಯತೆ ಕಡಿಮೆಯೇನಲ್ಲ. ಜೈಲಿಗೆ ಹೋಗಿ ಬರುವ ವಿಷಯ ಸಣ್ಣದಲ್ಲ. ಅಲ್ಲದೆ ಆ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಸಣ್ಣ ಪುಟ್ಟ ಕಳ್ಳತನ ಅಥವಾ ಪಿಕ್ ಪಾಕೆಟ್ ಮಾಡಿದವರು ಜೈಲಿನ ಚರಿತ್ರೆಯ ಪುಟಗಳಲ್ಲಿ ದಾಖಲಾಗುವುದಿಲ್ಲ. ಅಲ್ಲಿ ಪುಟಗೋಸಿಗಳಿಗೆ ಜಾಗವಿಲ್ಲ. ಆನೆಯ ಕುಂಭಸ್ಥಳಕ್ಕೆ ಹೊಡೆದವರು, ಕೋಟಿಗಟ್ಟಲೆ ಹಣ ಬಾಚಿದವರು, ಭ್ರಷ್ಟಾಚಾರದ ಪಿತಾಮಹರು ಜೈಲಿಗೆ ಹೋದರೆ ಅದು ಚರಿತ್ರೆ! ಸಾಕ್ಷ್ಯಾಧಾರಗಳು ಸಿಗದೇ ಜೈಲಿನಿಂದ ವಾಪಸು ಬಂದರೆ (ಮೊದಲು ಜಾಮೀನಿನ ಮೇಲೆ) ಅದು ಮತ್ತೊಂದು ಚರಿತ್ರೆ!!. ಒಂದು ಕಾಲದಲ್ಲಿ ಜೈಲಿಗೆ ಹೋಗಿ ಬಂದವರನ್ನು ದೇಶ ಭಕ್ತರು ಎನ್ನುತ್ತಿದ್ದರು. ಕಾಲ ಬದಲಾಗಿದೆ. ಈಗ ಜೈಲಿಗೆ ಹೋಗಿ ಬಂದವರು ಶಾಸಕರು, ಮಂತ್ರಿಗಳು ಅಷ್ಟೇ ಅಲ್ಲ ಜಾಕ್ ಪಾಕೆಟ್ ಹೊಡೆದರೆ ಮುಖ್ಯಮಂತ್ರಿಗಳು ಸಹಾ ಆಗಬಹುದು. ಏಕೆಂದರೆ ನಮಗೆ ಸಂವಿಧಾನವೇ ದೇವರು… ಪ್ರಜಾಪ್ರಭುತ್ವವೇ ದೇಗುಲ. ಈಗ ಜೈಲಿಗೆ ಹೋಗಿ ಬರುವವರು ಅದೃಷ್ಟಶಾಲಿಗಳು ಎಂದೇ ಭಾವಿಸುವರು. ಇವರು ಒಂದು ತರಹ ಸರಕಾರಿ ನೌಕರ ಲೋಕಾಯುಕ್ತ ಬಲೆಯಲ್ಲಿ ಸಿಲುಕಿ ಸಸ್ಪೆಂಡ್ ಆಗಿ ಕೆಲವು ತಿಂಗಳ ಬಳಿಕ ಈಗಿದ್ದ ಹುದ್ದೆಗಿಂತ ಉನ್ನತ ಹುದ್ದೆಗೆ ಪ್ರಮೋಷನ್ ಪಡೆದು ಪಕ್ಕದ ಜಿಲ್ಲೆಗೆ (ನಸೀಬು ಇದ್ದರೆ ಅದೇ ಜಿಲ್ಲೆಯಲ್ಲಿ!) ಕೇವಲ ಕಣ್ಣೊರೆಸುವ ವರ್ಗಾವಣೆ ಶಿಕ್ಷೆಗೆ ಒಳಗಾಗುವ ‘ ಅಮಾಯಕ ‘ ವ್ಯಕ್ತಿ ಎಂದರೂ ತಪ್ಪಿಲ್ಲ.

” ಅಣ್ಣಾ… ಅದೇ ನಮ್ಮೆಲ್ಲರ ಪ್ರೀತಿಯ ನಾಯಕ ಗುಂಡಣ್ಣ ಯಾವಾಗ ಹೊರಗೆ ಬರುತ್ತಾನೆ ” ಎಂದು ಕೇಳಿದ ತಮ್ಮನಲ್ಲದ ತಮ್ಮನನ್ನು ಅಣ್ಣನಲ್ಲದ ಅಣ್ಣ! ಕೇಳಿದವನು ಬೇರೆ ಯಾರೂ ಅಲ್ಲ ಒಂದು ರಾಜಕೀಯ ಪಕ್ಷದ ಧೀಮಂತ ನಾಯಕ ಗುಂಡಣ್ಣನ ಚೇಲಾ ಭಕ್ತ ಗಣದ ಸದಸ್ಯ. ಈಗ ಅಂತಹ ಭಕ್ತರು ಸುತ್ತುವರೆದದ್ದು ಬೇರೆ ಎಲ್ಲಿಯೋ ಅಲ್ಲ…ಸಾಕ್ಷಾತ್ ಪರಪ್ಪನ ಅಗ್ರಹಾರದ (ಕರ್ನಾಟಕದ ಜೈಲುಗಳ ಹೆಡ್ ಆಫೀಸ್!) ಮೇನ್ ಗೇಟಿನ ಮುಂದೆ. ಅಲ್ಲಿ ಅವರಷ್ಟೇ ಅಲ್ಲ ಅಣ್ಣನಲ್ಲದ ಅಣ್ಣಂದಿರು… ತಮ್ಮನಲ್ಲದ ತಮ್ಮಂದಿರು… ಮಾವನಲ್ಲದ ಮಾವಂದಿರು… ಅಳಿಯನಲ್ಲದ ಅಳಿಯಂದಿರು…ಹೀಗೆ ಗೇಟಿನ ಎರಡೂ ಬದಿ ಶಿಸ್ತಾಗಿ ಸಾಲಾಗಿ ನಿಂತಿದ್ದರು. ತಮ್ಮ ಅಚ್ಚುಮೆಚ್ಚಿನ ನಾಯಕ ಗುಂಡಣ್ಣ ಯಾವಾಗ ಹೊರ ಬರುತ್ತಾರೋ ಎಂದು ತುಂಬಾ ಕಾತುರದಿಂದ ಎದುರು ನೋಡುತ್ತಿದ್ದರು.

ಒಳಗಿದ್ದ ಅಣ್ಣನೇನು ಸಾಮಾನ್ಯ ವ್ಯಕ್ತಿಯಲ್ಲ… ಸಮಾಜದಲ್ಲಿ ದೊಡ್ಡ ಸ್ಥಾನ, ನೂರು ಅಲ್ಲ ಸಾವಿರಾರು ಹಿಂಬಾಲಕರನ್ನು ಹೊಂದಿದ ಅತ್ಯಂತ ಜನಪ್ರಿಯ ರಾಜಕೀಯ ನೇತಾರ ಗುಂಡಣ್ಣ…ಗುಂಡಣ್ಣ ಸಾಮಾನ್ಯನೇನು? ಜನರು (ಮತದಾರರು) ತಮ್ಮ ಬಾಯಿಗಳಿಂದ ‘ ಅಬ್ಬಾ… ಅಬ್ಬಬ್ಬಾ …’ ಎಂದು ಜೋರಾಗಿ ಉದ್ಗರಿಸಿ ಮೂಗಿನ ಮೇಲೆ ಬೆರಳಿಟ್ಟು ಚಿಕಿತರಾಗಿಸುವಂತಹ ದೊಡ್ಡ ‘ ಸ್ಕ್ಯಾಮ್ ‘ ನ ಪಿತಾಮಹ. ಕೋರ್ಟು ಮತ್ತು ಇ.ಡಿ (ಇಕ್ಕಳ!) ಎನ್ನುವ ವಿಚಾರಣೆ ಸಂಸ್ಥೆಗಳು ಹಲವು ತಿಂಗಳು (ಆಗೊಮ್ಮೆ…ಈಗೊಮ್ಮೆ) ಕಾರ್ಯಾಚರಣೆ ನಡೆಸಿದರೂ ಪೂರ್ತಿ ವಿಚಾರಣೆ ಮುಗಿಯದ ಕಾರಣ ಗುಂಡಣ್ಣನಿಗೆ ತಾತ್ಕಾಲಿಕ ಬೇಲ್ ಕೊಟ್ಟು ಕೋರ್ಟು ಸಹಕರಿಸಿತು. ಹೆಸರಾಂತ (ದುಬಾರಿ!) ಕಡು ಕಪ್ಪು ಕೋಟುಗಳು ದೆಹಲಿಯಿಂದ ಆಗಮಿಸಿ ಗುಂಡಣ್ಣನಿಗೆ ಬೇಲ್ ಸಿಗಲು ದಣಿವಿಲ್ಲದೆ ಹೋರಾಟ ಮಾಡಿ ಕೊನೆಗೂ ಯಶಸ್ವಿಯಾದವು. ಕಾಲ, ಗಡಿಯಾರ ಮತ್ತು ಮನುಷ್ಯನ ಆಲೋಚನೆ ಎಂದೂ ಒಂದು ಕಡೆ ಸ್ಥಿರವಾಗಿ ನಿಲ್ಲುವುದಿಲ್ಲ. ಅದರಂತೆ ನಿನ್ನೆಯ ತಪ್ಪು ಇಂದು ಒಪ್ಪಾಗಿ (ಕ್ರಮವಾಗಿ) ಕಾಣಬಹುದು. ಗುಂಡಣ್ಣನ ದಿನ ನಿತ್ಯ ಜೈಲಿನ ಕಂಬಿಗಳನ್ನು (ಬೇಸರದಿಂದ) ಎಣಿಸುವ ಮಹತ್ತರ ಕಾರ್ಯಕ್ಕೆ ಕೊನೆಗೂ ಮುಕ್ತಿ ಸಿಕ್ತು. ನಾಳೆಯೇ ಜೈಲಿನಿಂದ ಬಿಡುಗಡೆ ಭಾಗ್ಯ!

ಅಜ್ಞಾತವಾಸ ಮುಗಿಸಿಕೊಂಡು ಜನ ನಾಯಕ ಗುಂಡಣ್ಣ ಜೈಲಿನಿಂದ ಹೊರ ಬರುತ್ತಾನೆಂದರೆ ಅದೇನು ಸಾಮಾನ್ಯ ವಿಷಯವೇ! ಪ್ರಿಂಟ್ ಮತ್ತು ದೃಶ್ಯ ಮಾಧ್ಯಮದ ಮಿತ್ರರು, ಕಂಚಿ ಮೇಳ, ನಾದ ಸ್ವರದ ತಂಡ, ಪುರೋಹಿತರ ದಂಡು, ಬ್ಯಾಂಡ್ – ಡ್ರಮ್ ಸೆಟ್ ಟೀಮುಗಳೊಂದಿಗೆ ಡಿ ಜೆ ಸಂಗೀತದ ಅಬ್ಬರಕ್ಕೆ ಅನುಗುಣವಾಗಿ ತಮಗೆ ಇಷ್ಟವೆನಿಸಿದ ಭಂಗಿಗಳ ನೃತ್ಯವನ್ನು ರಸ್ತೆಯಲ್ಲಿ ಮಾಡುತ್ತಾ, ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸುತ್ತಾ ಜೈಲಿನ ಮುಂದಿನ ಮೇನ್ ಗೇಟಿನತ್ತ ಸೇರಿತು ಅಭಿಮಾನಿಗಳ ದೊಡ್ಡ ಬಳಗ. ಗುಂಡಣ್ಣನ ಕೊರಳಲ್ಲಿ ಗಜ ಗಾತ್ರದ ಹೂವಿನ ಹಾರ ಹಾಕಲು ಜೇಸಿಬಿ ಸಿದ್ಧವಾಗಿ ನಿಂತು ಆಗಲೇ ಬಹಳ ಹೊತ್ತಾಗಿತ್ತು. ಒಟ್ಟಿನಲ್ಲಿ ಪರಪ್ಪ ಅಗ್ರಹಾರದಿಂದ ಹೊರ ಬಂದ ಕೂಡಲೇ ಸ್ವಾಗತಿಸಿ ಭಾರೀ ಮೆರವಣಿಗೆಯಲ್ಲಿ ‘ ಹೊಸ ಮದುಮಗನಂತೆ ‘ ಕರೆದುಕೊಂಡು ಹೋಗಿ ಸಂಭ್ರಮಿಸಲು ಸಿದ್ಧರಾಗಿ ಬಂದಿದ್ದರು ಅಸಾಮಾನ್ಯ ಕಾರ್ಯಕರ್ತರು ಮತ್ತು ಹುಚ್ಚು (ಸಂಭಾವನೆ ಪಡೆದ) ಅಭಿಮಾನಿಗಳು. ಸಾಮಾನ್ಯ ಜನ (ಗೌರವಾನ್ವಿತ ಮತದಾರರು!) ಆಸಕ್ತಿಯಿಂದ ರಸ್ತೆಯ ಎರಡೂ ಬದಿಯಲ್ಲಿ ನಿಂತು ಜನ ನಾಯಕನ ದರ್ಶನ ಭಾಗ್ಯಕ್ಕಾಗಿ ಎದುರು ನೋಡುತ್ತಿದ್ದರು.

” ಅಗೋ ಅಲ್ಲಿ ನೋಡು… ಅಣ್ಣಾ…” ಎಂದು ಯಾರೋ ಜೋರಾಗಿ ಕೂಗಿದರು. ನೆರೆದ ಅಭಿಮಾನಿ ಬಳಗದ ಸದಸ್ಯರೆಲ್ಲ ಜೈಲಿನ ಗೇಟಿನತ್ತ ಜಯ ಘೋಷಣೆ ಮಾಡುತ್ತಾ ಓಡಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಲು ಶುರು ಮಾಡಿದರು. ” ಅಣ್ಣಾ ಬಂದಿಲ್ಲ..ಯಾರೋ ಬೇವರ್ಸಿ ಬೋ…ಮಗನೇ, ಅಣ್ಣಾ ಬಂದ ಅಂತ ಸುಳ್ಳು ಒದರಿದ್ದು ..” ಎಂದು ಕೋಪಗೊಂಡ ಭಕ್ತ ಗಣಾದಿಯ ಪುಡಿ ನಾಯಕ ರೋಷದಿಂದ ಅರಚಿದ. ಆಗ ತಾನೇ ಜೈಲಿನಿಂದ ಹೊರ ಬಂದವನು ಎಕ್ಸ್ ರೌಡಿ, ಮರಿ ಪುಢಾರಿ, ಶಿಕ್ಷಣ ಪ್ರೇಮಿ, ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ನಾಯಕ ರಂಗಪ್ಪ. ” ನನ್ನನ್ನೇ ನಿಮ್ಮ ಅಣ್ಣಾ… ಎಂದು ಭಾವಿಸಿ ” ಎನ್ನುತ್ತಾ ಕೈ ಮುಗಿದು ಪರಿ ಪರಿಯಾಗಿ ಹೇಳಿದರೂ ತಮ್ಮಂದಿರು ಯಾರೂ ಕ್ಯಾರೆ ಎನ್ನಲಿಲ್ಲ. ಪಾಪ…ಇನ್ನೇನು ಮಾಡದೆ ಸುಮ್ಮನೆ ತಲೆ ತಗ್ಗಿಸಿಕೊಂಡು ಮುಂದೆ ನಡೆದ ಎಕ್ಸ್ ರೌಡಿ.

ಯಾವುದು ಯಾವಾಗ ಆಗಬೇಕು ಅದು ಆಗೇ ಆಗುತ್ತದೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ನಿಜ ತಾನೇ! ಕೊನೆಗೂ ‘ ಅಣ್ಣಾ…’ ಹೊರ ಬಂದು ನೆರೆದ ಅಭಿಮಾನಿ ಬಳಗದತ್ತ ಬಲ ಕೈ ಮೇಲೆತ್ತಿ ಎರಡು ಬೆರಳುಗಳ ಮೂಲಕ ‘ ವಿಕ್ಟರಿ ‘ ಸಿಂಬಲ್ ತೋರಿದ…ಅದನ್ನು ನೋಡಿದ್ದೇ ತಡ ಸಮುದ್ರದ ಭಾರೀ ತೆರೆಗಳಂತೆ ಅಭಿಮಾನಿಗಳು ಕೇಕೆ ಹಾಕುತ್ತಾ ಜೈಲಿನ ಮುಂಬಾಗಿಲತ್ತ ಜೈಕಾರ ಹಾಕುತ್ತಾ ನುಗ್ಗಿದರು. ಅಲ್ಲಿ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಆಯ್ತು. ಜೈಲಿನಿಂದ ಹೊರ ಬಂದ ಅಣ್ಣಾ ಮತ್ತೊಮ್ಮೆ ಅಭಿಮಾನಿಗಳತ್ತ ಕೈ ಬೀಸಿದ… ಅಣ್ಣನ ಮುಖದಲ್ಲಿ ಈಗ ದೊಡ್ಡ ಯುದ್ಧದಲ್ಲಿ ಗೆದ್ದು ಬೀಗಿದ ಮಹಾರಾಜನ ಸಂಭ್ರಮ! ವಿರೋಧ ಪಕ್ಷದ ನಾಯಕರನ್ನು ಹುಚ್ಚೆಬ್ಬಿಸುವ ಕುಹಕ ನಗೆ!. ಒಂದೆರಡು ಕ್ಷಣದಲ್ಲಿ ಅಭಿಮಾನಿಗಳು ಪ್ರೀತಿಯಿಂದ ಹಾಕಿದ ಹೂವಿನ ಹಾರಗಳಿಂದ ಅಣ್ಣನ ಕುತ್ತಿಗೆ ತುಂಬಿಹೋಯಿತು.

ಇನ್ನು ವಿಜಯ ಯಾತ್ರೆ ಶುರು. ಅಣ್ಣಾ… ಒಬ್ಬರ ಸೊತ್ತಲ್ಲ.. ಇಡೀ ಸಮಾಜದ ಸೊತ್ತು! ಅಣ್ಣಾ ಎಲ್ಲ ವರ್ಗಕ್ಕೂ ಸೇರಿದವನು. ಎಲ್ಲರಿಗೂ ದರ್ಶನ ಭಾಗ್ಯ ಸಿಗಬೇಕು. ಹೀಗಾಗಿ ಒಂದೇ ನಿಮಿಷದಲ್ಲಿ ಒಂದು ಓಪನ್ ಜೀಪ್ ಜೈಲಿನ ಗೇಟಿನ ಮುಂದೆ ಬಂದು ನಿಂತಿತು. ಅಣ್ಣಾ ಎಲ್ಲರತ್ತ ಗತ್ತಿನಿಂದ ಕೈ ಬೀಸಿ ಓಪನ್ ಜೀಪ್ (ಈ ಸಲ ಪೊಲೀಸ್ ಜೀಪ್ ಅಲ್ಲ!) ಹತ್ತಿದ.

ನಿಜವಾದ ದೇಶ ಭಕ್ತಿ ಅಂದರೆ ಇದು. ” ಮುಂದಿನ ದಿನಗಳಲ್ಲಿ ನನ್ನಂತಹ ಅಮಾಯಕನನ್ನು ವಿರೋಧ ಪಕ್ಷದವರು ನೂರೆಂಟು ನೆಪ ಒಡ್ಡಿ, ಆಪಾದನೆಗಳನ್ನು ಮಾಡಿ, ಹಸಿ ಸುಳ್ಳು ಹೇಳಿ, ಮಾಡದ (ಮಾಡದೇ ಇದ್ದದ್ದು ಯಾವುದಿಲ್ಲ!) ತಪ್ಪಿಗೆ ಜೈಲಿಗೆ ಕಳಿಸಿದರೂ, ನಂತರ ಆ ಜನ ನಾಯಕ ‘ ಜಾಮೀನು ಭಾಗ್ಯ ‘ ಪಡೆದು ಬಿಡುಗಡೆಗೊಂಡರೆ ನನ್ನಂತೆಯೇ ಓಪನ್ ಜೀಪಿನಲ್ಲಿ ಅಭಿಮಾನಿಗಳು ಮೆರವಣಿಗೆ ಮಾಡಲೇಬೇಕು. ಏಕೆಂದರೆ ಆನೆ ನಡೆದದ್ದೇ ದಾರಿ… ಇಂತಹ ಕೆಲಸಕ್ಕೆ ನಾನೇ ರೋಲ್ ಮಾಡೆಲ್. ಈ ಬಿಡುಗಡೆ ಸತ್ಯ ಮತ್ತು ಪ್ರಾಮಾಣಿಕತೆಗೆ ಸಿಕ್ಕ ಗೆಲುವು…ನ್ಯಾಯಾಂಗದ ಮೇಲಿಟ್ಟ ನಂಬಿಕೆಯ ಕುರುಹು” ಎಂದು ಓಪನ್ ಜೀಪಿನಿಂದಲೇ ತನ್ನ ಅಂತರಂಗದ ಅನಿಸಿಕೆಯನ್ನು ಬಹಿರಂಗಗೊಳಿಸಿ ” ಜಯಹೋ…” ಎಂದು ಒಮ್ಮೆ ಸಂತೋಷದಿಂದ ಚೀರಿದ. ‘ ಕುರಿಗಳು ಸಾರ್ ಕುರಿಗಳು ‘ ಎನ್ನುವುದನ್ನು ನಿಜಗೊಳಿಸಿ, ನೆರೆದ ಸಾವಿರಾರು ಕುರಿಗಳು ” ಜಯಹೋ… ಜಯಹೋ ” ಎಂದು ಕೋರಸ್ಸಾಗಿ ಪ್ರತಿಧ್ವನಿಸಿ ತಮ್ಮ ಆನಂದವನ್ನು ವ್ಯಕ್ತಪಡಿಸಿದವು.

ಓಪನ್ ಜೀಪಿನಲ್ಲಿ ರಸ್ತೆಯುದ್ದಕ್ಕೂ ಅಭಿಮಾನಿಗಳ ಜಯ ಘೋಷಣೆಗಳ ಮಧ್ಯೆ ಮನೆ ಮುಂದೆ ಬಂದ ಜನನಾಯಕ ಗುಂಡಣ್ಣ. ಅಲ್ಲಿ ಆಗಲೇ ನೆರೆದ ಪಕ್ಷದ ಮುತ್ತೈದೆಯರು ಕುಂಬಳಕಾಯಿಯಿಂದ ದೃಷ್ಟಿ ನಿವಾಳಿಸಿದರು. ಹಾರ ಹಾಕಲು, ಶಾಲು ಹೊದಿಸಿ ಸನ್ಮಾನಿಸಲು ಮತ್ತು ನಾಯಕನ ಪಾದ ಪದ್ಮಗಳಿಗೆ ನಮಸ್ಕರಿಸಲು ಸಾವಿರಾರು ಅಭಿಮಾನಿಗಳು ನಗರದ ಮೂಲೆ ಮೂಲೆಯಿಂದ ಬಂದು ಆಗಲೇ ಜಮಾಯಿಸಿ ಹಾಕಿದ ದೊಡ್ಡ ಟೆಂಟಿನಡಿ ಕ್ಯೂನಲ್ಲಿ ನಿಂತಿದ್ದರು. ಮನೆಯ ಒಳಗಡೆ ಜನ ನಾಯಕ ಗುಂಡಣ್ಣನನ್ನು ” ವಿಜಯೀ ಭವ… ದಿಗ್ವಿಜಯೀ ಭವ ” ಎಂದು ಹರಸಿ ಆಶೀರ್ವಾದ ಮಾಡಲು ಗುಂಡಣ್ಣನ ಕುಲದ ಮಠಾಧೀಶರು ಸಾಲಾಗಿ ಕುಳಿತು ಕಾಯುತ್ತಿದ್ದರು!

ಮತದಾರರು ಭರ್ಜರಿ ಬಹುಮತದೊಂದಿಗೆ ಗೆಲ್ಲಿಸಿ ಆಶೀರ್ವದಿಸಿ ಗದ್ದುಗೆ ಹತ್ತಿಸಿದ ಬಳಿಕ ನಾಯಕರು ಮಾಡುವ ಜನ ಸೇವೆಯಲ್ಲಿ ಹಾಗೂ ‘ ಅಭಿವೃದ್ಧಿ ‘ ಕಾರ್ಯಗಳಲ್ಲಿ ಏನೋ ಅಲ್ಪ ಸ್ವಲ್ಪ ಎಡವಟ್ಟಾಗಬಹುದು. ಒಂದು… ಹತ್ತು… ಇಲ್ಲಾ ಇಪ್ಪತ್ತು ಕೋಟಿಗಳು ಆ ಕಡೆ – ಈ ಕಡೆ ಆಗಿ ಸ್ವಲ್ಪ ಲಫಡಾ ಆಗಬಹುದು. ಇಷ್ಟು ಮಾತ್ರಕ್ಕೆ ಹಾಲಿನಂತಹ ಪರಿಶುಭ್ರ ಮತ್ತು ಅಮಾಯಕ ಗುಂಡಣ್ಣನಂತಹ ಜನಪ್ರಿಯ ನಾಯಕರನ್ನು ಸೇಡಿನಿಂದ ಜೈಲಿಗೆ ಕಳಿಸಿದರೆ ಏನಾಗುತ್ತದೆ? ಏನೂ ಆಗುವುದಿಲ್ಲ… ಜಾಮೀನು ಪಡೆದ ಜನ ನಾಯಕ ಗುಂಡಣ್ಣನಂಥವರಿಗೆ ಓಪನ್ ಜೀಪಿನಲ್ಲಿ ಮೆರವಣಿಗೆ ಭಾಗ್ಯ ಸಿಗುತ್ತದೆ ಅಷ್ಟೇ!.

ಜೈ ಕನ್ನಡಾಂಬೆ! ಜೈ ಜೈ ಭಾರತಾಂಬೆ!!


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

18 thoughts on “ವಿಜಯೀ ಭವ! ದಿಗ್ವಿಜಯೀ ಭವ!!”

  1. JANARDHANRAO KULKARNI

    ಭ್ರಷ್ಟ ರಾಜಕಾರಣಿಗಳ ಜೈಲು ವಾಸ, ಜಾಮೀನು, ಬಿಡುಗಡೆ, ನಂತರದ ಸನ್ಮಾನ, ಮೆರವಣಿಗೆ ಎಲ್ಲಾ ವಿಷಯಗಳ ವಿಡಂಬನಾತ್ಮಕ ವಿಜಯೀ ಭವ ದಿಗ್ವಿಜಯೀ ಭವ ಲೇಖನ ಚೆನ್ನಾಗಿದೆ. ಅಭಿನಂದನೆಗಳು ರಾಘಣ್ಣ.

  2. MURALIDAHR JOSHI , GANGAVATHI

    ಇಂದಿನ ರಾಜಕೀಯ ಮತ್ತು ಜನರು ಜೀವನದ ಕನ್ನಡಿ ಈ ಲೇಖನ. ನಿಮ್ಮ ಸಾಮಾಜಿಕ ಜವಾಬ್ದಾರಿ ಶ್ಲಾಘನೀಯ

  3. ಶೇಖರಗೌಡ ವೀ ಸರನಾಡಗೌಡರ್

    ವಾಸ್ತವದ ಚಿತ್ರಣ ಸೊಗಸಾಗಿ ಬರೆದಿದ್ದೀರಿ. ಓದುತ್ತಾ ಹೋದಂತೆ ಅಬ್ಬಾ ಅದ್ಭುತವಾದ ವಿಷಯಗಳ ಮಂಡನೆ ಎನಿಸಿತು. ಓದುಗರ ಮನಸ್ಸು ತುಂಬುವ ಬರಹ. ವಿಡಂಬನಾತ್ಮಕ ಬರವಣಿಗೆಯಲ್ಲಿ ನಿಮ್ಮದು ಪಳಗಿದ ಕೈ.
    ಮನದುಂಬಿದ ಅಭಿನಂದನೆಗಳು.

  4. ಸುನೀಲ್ ಕುಲಕರ್ಣಿ

    ಸಮಾಜದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ಮತ್ತು ಹಾಸ್ಯಮಯವಾಗಿ ಪ್ರಸ್ತುತಪಡಿಸಿದ್ದಾರೆ

  5. ಧರ್ಮಾನಂದ ಶಿರ್ವ

    ಪ್ರಸ್ತುತ ರಾಜಕೀಯ ನಾಯಕರ ಅಸಲೀ ಮುಖವನ್ನು ಅನಾವರಣ ಮಾಡಿದೆ ಈ ವಿಡಂಬನಾ ಬರಹ. ಅಭಿನಂದನೆಗಳು.

  6. ಇಂದಿನ ರಾಜಕಾರಣದ ವಿದ್ಯಮಾನ ಗಳನ್ನು ಗುಂಡಣ್ಣ ನ ಮೂಲಕ ಪ್ರಸ್ತುತ ಪಡಿಸಿದ ವಿಡಂಬನಾತ್ಮಕ ಬರಹ ತುಂಬಾ ಚೆನ್ನಾಗಿ ಮೂಡಿಬಂದಿದೆ.
    ಅಭಿನಂದನೆಗಳು

  7. ಬಿ.ಟಿ.ನಾಯಕ್.

    ವಿಡಂಬನಾ ಲೇಖನಗಳು ಲೇಖಕರಿಗೆ ಕರಗತವಾಗಿವೆ. ಅದರಲ್ಲೂ ರಾಜಕೀಯ ವಿಡಂಬನೆಗಳೆಂದರೆ ಇವರಿಗೆ ಉತ್ಸಾಹದ ಚಿಲುಮೆ ಇದ್ದ ಹಾಗೆ. ಇವು ಬರೀ ವಿಡಂಬನೆಗಳಲ್ಲ, ಬದಲಿಗೆ ಪ್ರಸ್ತುತ ಬೆಂಕಿ ಉಂಡೆಗಳಂತಿರುವವು. ರಾಜಕೀಯ ವ್ಯಕ್ತಿಗಳಿಗೆ ನಾಚಿಕೆ, ಮಾನ ಮತ್ತು ಮರ್ಯಾದೆ ಎಂಬವುಗಳು ಮೈಲಿ ದೂರ. ಅಭಿನಂದನೆಗಳು ಎಂ.ರಾಘವೇಂದ್ರ🌹🌹: BTN.

  8. ವಿಡಂಬನೆ ಚೆನ್ನಾಗಿದೆ. ಇಂದಿನ ರಾಜಕೀಯ ಪುಡಾರಿಗಳ ಚರಿತ್ರೆ ಸರಿಯಾಗಿ ಮೂಡಿಬಂದಿದೆ.

  9. ಜೈಲು ವಾಸ ರಾಜ ಕಾರಣಿಗಳಿಗೆ ಒಂದು ಪ್ರತಿಷ್ಠೆ
    ಹೊರಗೆ ಬಂದರೆ ಏನು ಸ್ವಾಗತ ಆಳೆತ್ತರ ದ ಹಾರಗಳು ಮೆರವಣಿಗೆ
    ವಾಂತಿ ಬರುವ ಹಾಗಾಗುತ್ತ ದೆ
    ಸರಳ ವಾದ ನಿರೂಪಣೆ ಗಮನ ಸೆಳೆಯುತ್ತದೆ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter