ಕರಿ ನಾಗರದಂತೆ ಅಂಕುಡೊಂಕಾಗಿ ಮಲಗಿತ್ತು ರಾಜ್ಯ ಹೆದ್ದಾರಿ. ರಾತ್ರಿಯಷ್ಟೇ ಮಳೆಯಾಗಿದ್ದರಿಂದ ರಸ್ತೆಯ ಮೇಲಿನ ಕೊಳೆ ತೊಳೆದುಹೋಗಿ ಕಂತಿಯಿಟ್ಟ ಲಿಂಗದಂತೆ ಕರ್ರಗೆ ಮಿರಿಮಿರಿ ಮಿಂಚುತ್ತಿತ್ತು. ಮಳೆಯಲ್ಲಿ ಮಿಂದಿದ್ದ ಸಸ್ಯಶಾಮಲೆ ಹಸಿರುಡುಗೆಯುಟ್ಟು ಲಕಲಕ ಹೊಳೆಯುತ್ತಿದ್ದಳು. ಮಳೆರಾಯನ ಆರ್ಭಟಕ್ಕೆ ಭೂದೇವಿ ತಣಿದಿದ್ದಳು. ಸಂತೃಪ್ತಿಯಿಂದ ಬೀಗಿದ್ದಳು. ಹಸಿರುಡುಗೆಯುಟ್ಟು ನಳನಳಿಸಿ ಮಿಂಚುತ್ತಿದ್ದ, ನವಿರಾದ ತಂಗಾಳಿಗೆ ವಯ್ಯಾರದಿಂದ ಬಳುಕುತ್ತಿದ್ದ ಸಸ್ಯಶಾಮಲೆಯರ ಚೆಲುವನ್ನು ಕಣ್ಮನಗಳಲ್ಲಿ ತುಂಬಿಕೊಂಡು ಆಸ್ವಾದಿಸುತ್ತ ಕುಳಿತಿದ್ದರು ಎಪ್ಪತ್ತೈದರ ಇಳಿವಯಸ್ಸಿನ ಗಿರಿಜಾಶಂಕರ್. ಕಾರು ರಸ್ತೆ ಬದಿಯ ಗಿಡ-ಮರಗಳನ್ನು ಹಿಂದಕ್ಕೆ ಹಾಕುತ್ತಾ ನಿರ್ಭಯವಾಗಿ ಮುಂದೋಡುತ್ತಿತ್ತು. ಅಷ್ಟೇನೂ ವಾಹನ ದಟ್ಟಣೆ ಇರಲಿಲ್ಲ. ಅವರ ಮಗ ಸದ್ಭವ್ ಕಾರನ್ನು ಲೀಲಾಜಾಲವಾಗಿ ಓಡಿಸುತ್ತಿದ್ದ. ಐದು ವರ್ಷದ ಮೊಮ್ಮಗಳು ಆಕೃತಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಗಿರಿಜಾಶಂಕರರ ಜೊತೆಗೆ ಕುಳಿತಿದ್ದಳು. ಸದ್ಭವನ ಪಕ್ಕದ ಸೀಟಿನಲ್ಲಿ ಸೊಸೆ ವಚನಾ, ಮೂರು ವರ್ಷದ ಮೊಮ್ಮಗ ಅಕ್ಷರ್ ಕುಳಿತಿದ್ದರು. `ತಾತ, ಆ ಗಿಡ ನೋಡು. ಅದೆಷ್ಟು ಎತ್ತರವಿದೆ? ಈ ಗಿಡ ನೋಡು ಅದರ ಎಲೆಗಳು ಅದೆಷ್ಟು ಕೆಂಪಗಿವೆ? ಆ ಹಳದಿ, ಕೆಂಪು, ನೇರಳೆ ಬಣ್ಣದ ಹೂವುಗಳು ಅದೆಷ್ಟು ಚೆಂದ! ಆ ಬಳ್ಳಿ ಅದೆಷ್ಟು ಸೊಗಸಾಗಿ ಮರವೇರಿದೆ?’ ಅಂತ ಆಕೃತಿಯ ಕಮೆಂಟ್ರಿ ಅವ್ಯಾಹತವಾಗಿ ಸಾಗಿತ್ತು. `ಹೌದಲ್ವಾ, ಆ ಮರ ತುಂಬಾ ಎತ್ತರ; ಆ ಎಲೆಗಳು ತುಂಬಾ ಕೆಂಪು; ಹಳದಿ, ಕೆಂಪು, ನೇರಳೆ ಬಣ್ಣದ ಆ ಹೂವುಗಳು ತುಂಬಾ ಸುಂದರ; ಆ ಅಂಕುಡೊಂಕಿನ ಲತಾಂಗಿ ತುಂಬಾ ಮನಮೋಹಕ’ ಅಂತ ಮೊಮ್ಮಗಳ ಮಾತಿಗೆ ಪ್ರತಿಕ್ರಿಯಿಸುತ್ತಾ ತಲೆದೂಗುತ್ತಿದ್ದರು ಗಿರಿಜಾಶಂಕರ್. ಎಡಗಡೆಯ ಕಿಟಕಿಯ ಪಕ್ಕದಲ್ಲಿ ಗಿರಿಜಾಶಂಕರ್ ಕುಳಿತಿದ್ದರೆ ಬಲಗಡೆಯ ಕಿಟಕಿಯ ಸೀಟು ಖಾಲಿಯಿತ್ತು. ಮೊದಲಾದರೆ ಪ್ರತಿ ಪ್ರವಾಸದಲ್ಲಿ ಅವರ ಮುದ್ದಿನ ಮಡದಿ, ಜೀವದ ಗೆಳತಿ, ಜೊತೆಗಾತಿ, ಐವತ್ತು ವಸಂತಗಳ ಕಾಲ ಜೊತೆಜೊತೆಗಿದ್ದ ಜೀವನ ಸಂಗಾತಿ ರೋಹಿಣಿ ಬಲಗಡೆಯ ಸೀಟಿನಲ್ಲಿ ಕುಳಿತಿರುತ್ತಿದ್ದಳು. ಖಾಲಿ ಸೀಟನ್ನು ಕಂಡ ತಕ್ಷಣ ಅವರೆದೆಯೊಳಗೆ ಭಾವನೆಗಳ ಭೋರ್ಗರೆತ. ಎದೆ ಬಿಗಿದುಕೊಂಡ ಅನಿಸಿಕೆ. ಎದೆಗೂಡಿನಲ್ಲಿನ ಹೃದಯದ ಬಡಿತ ನಿಂತಂತೆ ಭಾಸ. ಹೃದಯದಲ್ಲಿ ಹಿಂಡಿದಂಥ ನೋವು. ಜೀವನವೆಲ್ಲವೂ ಖಾಲಿ, ಖಾಲಿ ಎಂಬ ಭಾವ. ಜೀವನ ಸಂಗಾತಿ, ಮನ ಮೆಚ್ಚಿನ ಮಡದಿ ಈಗ ಜೊತೆಗಿಲ್ಲ. ರೋಹಿಣಿ ತನ್ನ ಎಪ್ಪತ್ತೊಂದನೇ ವಯಸ್ಸಿನಲ್ಲಿ ಗಿರಿಜಾಶಂಕರರನ್ನು ಒಂಟಿಯಾಗಿಮಾಡಿ ಜೀವನವೆಂಬ ನಾಟಕದ ಅಂಕದ ಪರದೆಯಿಂದ ಮರೆಯಾಗಿ ಈಗಷ್ಟೇ ವರ್ಷ ತುಂಬುತ್ತಿದೆ.
ಯೋಚನೆಯ ಪ್ರವಾಹದ ಸುಳಿಯಲ್ಲಿ ಸಿಲುಕಿಕೊಂಡುಬಿಟ್ಟರು ಗಿರಿಜಾಶಂಕರ್. “ರೋಹಿಣಿ, ಎಪ್ಪತ್ತೈದರ ಇಳಿ ವಯಸ್ಸಿನಲ್ಲಿ ನನ್ನನ್ನು ನೀನು ಹೀಗೆ ಒಂಟಿಮಾಡಿ ಕಣ್ಮರೆಯಾಗಿ ಹೋಗಬಾರದಿತ್ತು? ನೀನೇನೋ ಕಾಣದ ಲೋಕ, ಭೂತಾಯಿಯ ಒಡಲು, ಮಡಿಲನ್ನು ಸೇರಿಕೊಂಡುಬಿಟ್ಟಿ. ನಿನ್ನ ಜೊತೆಗೆ ನನ್ನನ್ನೂ ಕರೆದುಕೊಂಡು ಹೋಗಿದ್ದರೆ ಚೆನ್ನಾಗಿತ್ತು. ನನ್ನದೂ ಕಲ್ಲು ಹೃದಯ, ಒಂಟಿಯಾಗಿ ಜೀವಿಸಲು ಉಳಿದುಕೊಂಡುಬಿಟ್ಟಿದೆ. ನಿನ್ನದೂ ಕಲ್ಲು ಮನಸ್ಸೇ. ನಾನೆಷ್ಟೇ ಬೇಡಿಕೊಂಡರೂ ನೀನು ನಿನ್ನ ಮಾತಿಗೇ ಅಂಟಿಕೊಂಡು ಏನನ್ನೋ ಸಾಧಿಸಿದವಳೆಂಬಂತೆ ನಡೆದೇಬಿಟ್ಟಿ. ನಿವೃತ್ತಿಯ ನಂತರ ನನ್ನದು ದಿನನಿತ್ಯ ಒಂದೇ ಜಪವಾಗಿತ್ತು. ಆ ಭಗವಂತ ಮೊದಲು ನನ್ನನ್ನೇ ಕರೆಸಿಕೊಳ್ಳಲಿ ಅಂತ. ಅದಕ್ಕೆ ನೀನು ನಿನ್ನ ಅಹವಾಲನ್ನೂ ಸೇರಿಸುತ್ತಿದ್ದಿ. ಅದೇನೆಂದರೆ, `ನಿಮ್ಮ ಮುಂದೆ ಕಂಕಣ ಕೈತಿರುವಿ, ಕುಂಕುಮ ಹಚ್ಚಿಕೊಂಡು ನಾ ಹೋಗಬೇಕು. ನನಗೆ ಮತ್ತೈದೆ ಸಾವು ಬರಬೇಕು. ಅರಿಷಿಣ, ಕುಂಕುಮ, ಹೂ, ಬಳೆ, ಮಾಂಗಲ್ಯ ಕರಿಮಣೆ, ಕಾಲುಂಗರಗಳು ನನ್ನ ಜೊತೆಗೇ ಭೂತಾಯಿಯ ಮಡಿಲು ಸೇರಬೇಕು’ ಅಂತ ನೀನು ನಿನ್ನ ಮಂತ್ರವನ್ನೇ ಪ್ರತಿಪಾದಿಸುತ್ತಿದ್ದಿ.
ರೋಹಿ, ಸಪ್ತಪದಿ ತುಳಿದು ಜೊತೆಯಾದ ನಂತರ ನಾವಿಬ್ಬರೂ ಜೊತೆಜೊತೆಯಾಗೇ ಹೆಜ್ಜೆ ಹಾಕಿದ್ದೇವೆ. ದಾಂಪತ್ಯ ಜೀವನದ ಸವಿಯನ್ನು ಮೊಗೆಮೊಗೆದು ಸವಿದಿದ್ದೇವೆ. ಜೀವನದ ಬಾಳದೋಣಿಯಲ್ಲಿ ಕೈಕೈ ಹಿಡಿದುಕೊಂಡು ಪಯಣಿಸಿದ್ದೇವೆ. ನನ್ನನ್ನೆಂದೂ ನೀನು ಒಂಟಿಯಾಗಿಬಿಟ್ಟು ಹೋಗಬೇಡವೆಂದು ಬಡಿದುಕೊಳ್ಳುತ್ತಿದ್ದೆ. ಅದಕ್ಕೂ ಒಂದು ಕಾರಣವಿದೆ. ಅದೇನೆಂದರೆ ನಾನು ಜೀವನವೆಂಬ ನಾಟಕದ ಪಾತ್ರದ ನಿರ್ವಹಣೆಯ ಪ್ರತಿಯೊಂದು ಎಪಿಸೋಡ್‍ದಲ್ಲಿ ನಿನ್ನನ್ನೇ ಅವಲಂಬಿಸಿದ್ದೆ. ಬೆಳಿಗ್ಗೆ ಎದ್ದಾಗಿನಿಂದ, ನನ್ನ ಟವೆಲ್ ಎಲ್ಲಿದೆ; ಟೂಥ್ ಬ್ರಶ್, ಪೇಸ್ಟ್ ಎಲ್ಲಿವೆ; ಇಂದು ಯಾವ ಡ್ರೆಸ್ ಧರಿಸಲಿ; ಕರ್ಚೀಫ್ ಎಲ್ಲಿದೆ; ಸಾಕ್ಸ್, ಶೂಜ್ ಎಲ್ಲಿವೆ; ಶೂಜ್‍ಗೆ ಪಾಲಿಶ್ ಹಾಕಿರುವಿಯಾ; ಆಫೀಸ್ ಬ್ಯಾಗ್ ಎಲ್ಲಿದೆ; ಪರ್ಸ್ ಎಲ್ಲಿದೆ; ಊಟದ ಡಬ್ಬಿ ರೆಡಿನಾ…?’ ಆಫೀಸಿಗೆ ಹೊರಡುವುದಕ್ಕೆ ಮುಂಚೆ ಹೀಗೆ ನನ್ನ ಹಲವಾರು ಬೇಡಿಕೆಗಳಿಗೆ ನಗುಮೊಗದಿಂದ ಸ್ಪಂದಿಸಿ ಈಡೇರಿಸುತ್ತಿದ್ದವಳು ನೀನೇ. ಒಂದೆರಡು ದಿನ ಅಂತ ನೀನು ತವರಿಗೆ ಹೋದರೂ ನನ್ನ ಜೀವ ತಳಮಳಿಸುತ್ತಿತ್ತು, ಚಡಪಡಿಸುತ್ತಿತ್ತು. ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಖುಷಿ ಎಂಬ ನಿತ್ಯಸತ್ಯದ ಮಾತು ನಿನಗೂ ಗೊತ್ತಿತ್ತು. ನೀನು ಒಂದರೆಕ್ಷಣ ನಂಜೊತೆಗಿರದಿದ್ದರೆ ನಾನು ತಾಯಿಯನ್ನಗಲಿದ ಕರುವಿನಂತೆ ಪರಿತಪಿಸುತ್ತಿದ್ದೆನಲ್ಲವೇ?
ನಿನಗೆ ನಾನು, ನನಗೆ ನೀನು ಎಂಬಂತಿದ್ದೆವು ನಾವು. ಇವರದು ಎರಡು ದೇಹ, ಒಂದೇ ಜೀವ ಎಂದು ನಮ್ಮ ಹಿತೈಷಿಗಳು ಮೆಚ್ಚುಗೆ ಸೂಚಿಸುತ್ತಿದ್ದರಲ್ಲವೇ? ನೀನು ನನಗೆ ಬರೀ ಹೆಂಡತಿಯಾಗಿರಲಿಲ್ಲ. ತಾಯಿ, ಸಹೋದರಿ, ಸ್ನೇಹಿತೆ, ಆಪ್ತಸಮಾಲೋಚಕಿ ಎಲ್ಲವೂ ನೀನೇ. ರೂಪೇಷು ಲಕ್ಷ್ಮಿಯಂತಿದ್ದ ನೀನು ಕಾರ್ಯೇಸು ದಾಸಿ, ಕರಣೇಶು ಮಂತ್ರಿ, ಭೋಜ್ಜೇಸು ಮಾತಾ, ಕ್ಷಮಯಾ ಧರಿತ್ರಿ, ಶಯನೇಸು ರಂಭಾಳೂ ಆಗುತ್ತಿದ್ದಿ.”
“ಅಪ್ಪಾಜೀ, ಬನವಾಸಿ ಮಧುಕೇಶ್ವರ ದೇವಸ್ಥಾನ ಬಂದಿತು” ಎಂದು ಸದ್ಭವ್ ಹೇಳಿದಾಗಲೇ ಗಿರಿಜಾಶಂಕರ್ ಅವರ ಯೋಚನಾ ಲಹರಿಗೆ ತಡೆಬಿದ್ದಿತು.
“ಹೌದಾ…? ಸರಿ ಸರಿ” ಎಂದೆನ್ನುತ್ತಾ ಗಿರಿಜಾಶಂಕರ್ ವಾಸ್ತವಕ್ಕೆ ಮರಳಿದ್ದರು.
“ಅಪ್ಪಾ, ನಾನೂ ತುಂಬಾ ಹೊತ್ತಿನಿಂದ ಗಮನಿಸುತ್ತಿದ್ದೇನೆ. ನೀವು ಅದ್ಯಾಕೋ ಏನೂ ಮಾತಾಡಿಲ್ಲ? ಒಂಥರ ಮೌನವ್ರತದಲ್ಲಿದ್ದೀರಿ. ಯಾವುದೋ ಯೋಚನೆ ನಿಮ್ಮನ್ನು ಕಾಡುತ್ತಿರುವ ಹಾಗಿದೆ…? ನೀವೆಲ್ಲೋ ಕಳೆದು ಹೋಗಿದ್ದಿರಿ. ಅಕ್ಷರನ ಮಾತಿಗೂ ಸ್ಪಂದಿಸುತ್ತಿರಲಿಲ್ಲ. ಅವನು ಏನೇನೋ ಕೇಳುತ್ತಿದ್ದ. ನೀವು ಸುಮ್ಮನೇ ಕೂತಿದ್ದಿರಿ.”
“ಹೌದಾ…? ಹಾಗೇನಿಲ್ಲ. ಪ್ರಕೃತಿ ಸೌಂದರ್ಯ ಸವಿಯುವುದರಲ್ಲಿ ಮಗ್ನನಾಗಿದ್ದೆ ಅಷ್ಟೇ” ಎಂದು ತೇಲಿಸಿ ಮಾತಾಡಿದರು ಗಿರಿಜಾಶಂಕರ್ ಮಗನ ಮಾತಿಗೆ. ಅವನೂ ಮಾತು ಬೆಳೆಸದೇ ಅಷ್ಟಕ್ಕೇ ಸುಮ್ಮನಾದ.
****
ಬೃಹದಾಕಾರದ ಮಧುಕೇಶ್ವರ ಲಿಂಗಕ್ಕೆ ಭಕ್ತಿಯಿಂದ ಕೈಮುಗಿದುಕೊಂಡು ನಿಂತರು ಗಿರಿಜಾಶಂಕರರು ಮಗ, ಸೊಸೆ, ಮೊಮ್ಮಕ್ಕಳೊಂದಿಗೆ. ಅರ್ಚಕರಿಂದ ಮಂಗಳಾರತಿಯಾಯಿತು. ತಟ್ಟೆಗೆ ಒಂದಿಷ್ಟು ನೋಟುಹಾಕಿ ಮಂಗಳಾರತಿಗೆ ನಮಿಸಿ ಅರ್ಚಕರು ನೀಡಿದ ತೀರ್ಥವನ್ನು ಸ್ವೀಕರಿಸಿ ಕಣ್ಣಿಗೊತ್ತಿಕೊಳ್ಳುತ್ತಾ ಸೇವಿಸಿ ಕೃತಾರ್ಥರಾದರು. ಮಧುಕೇಶ್ವರನ ಪಕ್ಕದ ಗುಡಿಯಲ್ಲಿ ಪಾರ್ವತಿದೇವಿ ವಿರಾಜಮಾನಳಾಗಿದ್ದಳು. ಶಿವೆಗೂ ಭಕ್ತಿಯಿಂದ ನಮಸಿ ಮಧುಕೇಶ್ವರನ ಎದುರಿಗೆ ಕಂಗೊಳಿಸುತ್ತಿದ್ದ ಬೃಹತ್ ನಂದಿಯ ವಿಗ್ರಹವನ್ನು ಸ್ಪರ್ಶಿಸಿ ಪುಲಕಿತಗೊಂಡು ನಮಸ್ಕರಿಸಿ ಪುನೀತರಾದ ಭಾವವನ್ನು ಮೈಮನಗಳಲ್ಲಿ ತುಂಬಿಕೊಂಡು ಭುಲ್ಲವಿಸಿದರು ತಮ್ಮೊಳಗೇ. ಒಂದಿಷ್ಟು ಹೊತ್ತು ನಂದೀಶನ ಪಕ್ಕದಲ್ಲಿ ಕುಳಿತು ಮತ್ತೆ ಮತ್ತೆ ಮಧುಕೇಶ್ವರ ಲಿಂಗು ಮತ್ತು ಪಾರ್ವತಿದೇವಿಯ ಮೂರ್ತಿಯನ್ನು ಮೈಮನಗಳಲ್ಲಿ ತುಂಬಿಕೊಂಡು ಮುದಗೊಂಡರು. ಅರೆಕ್ಷಣದಲ್ಲಿ ಗಿರಿಜಾಶಂಕರರ ಮನಸ್ಸು ಮತ್ತೆ ಅಲ್ಲಾಡಿತು.
“ರೀ, ಈ ನಂದಿಯ ವಿಶೇಷತೆ ನಿಮಗೆ ತಿಳಿದಿದೆಯೇ…?”
“ರೋಹಿಣಿ, ಗೊತ್ತಿಲ್ಲ ಕಣೇ…”
“ಗರ್ಭಗುಡಿಯ ಮುಂದಿನ ಪ್ರಾಂಗಣದಲ್ಲಿ ತಾರಸಿಯ ಎತ್ತರದವರೆಗೆ ಕುಸುರಿ ಕೆತ್ತನೆಯ ನುಣುಪಾದ ಶಿಲೆಗಳ ಹಲವಾರು ಸ್ಥಂಭಗಳಿವೆ. ನಂದಿಯ ವಿಗ್ರಹ ಮಧುಕೇಶ್ವರಸ್ವಾಮಿಯ ಗರ್ಭಗುಡಿಯ ಮುಂದಿದ್ದು ಅದರ ಸುತ್ತ-ಮುತ್ತಲೂ ಕಂಬಗಳಿವೆ. ಇಲ್ಲಿ ಗಮನಿಸಿ. ಮಧುಕೇಶ್ವರಸ್ವಾಮಿಯ ಗರ್ಭಗುಡಿಯ ಮುಂದಿನಿಂದ ನೋಡಿದರೆ ನಂದಿಯ ಎಡಗಣ್ಣು ಮಧುಕೇಶ್ವರಸ್ವಾಮಿಯನ್ನೇ ದಿಟ್ಟಿಸುತ್ತಿರುವುದು ಕಾಣುತ್ತಿದೆ. ಬಲಗಣ್ಣು ಕಂಬದಲ್ಲಿ ಮರೆಯಾಗಿದೆ. ಇಲ್ಲಿ ಪಾರ್ವತಿ ಅಮ್ಮನವರ ಗರ್ಭಗುಡಿಯ ಮುಂದಿನಿಂದ ನೋಡಿದರೆ ನಂದೀಶನ ಬಲಗಣ್ಣು ಅಮ್ಮನವರನ್ನೇ ನೋಡುತ್ತಿದೆ. ಎಡಗಣ್ಣು ಕಂಬದಿಂದ ಮರೆಯಾಗಿದೆ.”
“ಹೌದಲ್ವೇ…? ನೀನು ಹೇಳುತ್ತಿರುವುದು ನಿಜವಾದದ್ದೇ. ನಿನಗಿದ್ಯಾವಾಗ ಗೊತ್ತಾಗಿದ್ದು…?”
“ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಇಲ್ಲಿಗೆ ಬಂದಿದ್ದೆವು. ಆಗ ಮಾರ್ಗದರ್ಶಿಯೊಬ್ಬರು ಹೇಳಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ.”
ಗಿರಿಜಾಶಂಕರ್ ಮಡದಿ ರೋಹಿಣಿಗಾಗಿ ಸುತ್ತಮುತ್ತ ಕಣ್ಣಾಡಿಸಿದರು. ಕಾಣಲಿಲ್ಲ. ತಾವು ಮಡದಿಯ ಜೊತೆಗೆ ಮೊದಲ ಸಲ ಬನವಾಸಿಗೆ ಬಂದಿದ್ದಾಗ ರೋಹಿಣಿ ಹೇಳಿದ್ದು ಅವರ ನೆನಪಿನಂಗಳದಲ್ಲಿ ಸುತ್ತಾಡಿತ್ತು. ಮಡದಿಯ ನೆನಪು ಮರುಕಳಿಸಿದಾಗ ಗಿರಿಜಾಶಂಕರ್ ಸಪ್ಪಗಾಗಿಬಿಟ್ಟರು. ಹೃದಯ ಭಾರವೆನಿಸಿತು. ಒಂಥರ ವೇದನೆ ಎದೆಯೊಳಗೆ ತಳಮಳಿಸತೊಡಗಿತು. ಕಣ್ಣಾಲಿಗಳು ಆದ್ರ್ರವಾಗತೊಡಗಿದವು. ಅಷ್ಟರಲ್ಲಿ ಮೊಮ್ಮಗ ಅಕ್ಷರ್, `ತಾತಾ, ಅಪ್ಪಾಜಿ ಕರೆಯುತ್ತಿದ್ದಾರೆ. ಕಲ್ಲಿನ ಮಂಚ ನೋಡಲು ಬರಬೇಕಂತೆ’ ಎಂದಾಗ ಆ ಕಡೆಗೆ ಮುಖ ತಿರುಗಿಸಿಕೊಂಡು ಕರವಸ್ತ್ರದಿಂದ ಕಣ್ಣುಗಳನ್ನು ಒರೆಸಿಕೊಂಡು ಮೊಮ್ಮಗನೊಂದಿಗೆ ಹೆಜ್ಜೆ ಹಾಕಿದರು. ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ನುಣುಪಾದ ಗ್ರೆನೈಟ್ ಶಿಲೆಯಿಂದ ತಯಾರಿಸಲ್ಪಟ್ಟಿರುವ ಮಂಚವನ್ನು ವೀಕ್ಷಿಸಿ ಖುಷಿಪಟ್ಟರು. ದೇವಸ್ಥಾನದಿಂದ ಹೊರಬಂದು ಎದುರಿಗೆ ಕೆಲವೇ ಹೆಜ್ಜೆಗಳ ದೂರದಲ್ಲಿ ಜುಳುಜುಳು ನಿನಾದಗೈಯುತ್ತಾ ಹರಿಯುತ್ತಿದ್ದ ವರದೆಯನ್ನು ಕಣ್ಮನಗಳಲ್ಲಿ ತುಂಬಿಕೊಂಡು ಸಂತಸಗೊಂಡರು ಗಿರಿಜಾಶಂಕರ್. ಖುಷಿಯಿಂದ ಕೇಕೆಹಾಕಿ ಕುಣಿಯುತ್ತಿದ್ದ ಮೊಮ್ಮೊಕ್ಕಳ ಸಂಭ್ರಮದಲ್ಲಿ ತಾವೂ ಪಾಲ್ಗೊಂಡರು.
****
ಪಯಣ ನಿಸರ್ಗತಾಣ ಶಿರಸಿಯತ್ತ ಮುಂದುವರಿಯಿತು. ತಾಯಿ ಮಾರಿಕಾಂಬೆಯ ದರ್ಶನ ಪಡೆದು ಕೃತಾರ್ಥರಾಗುವುದಿತ್ತು. ಮೊಮ್ಮಕ್ಕಳು ಗಿರಿಜಾಶಂಕರರ ಪಕ್ಕವೇ ಕುಳಿತು ಪ್ರಕೃತಿಯ ಸೊಬಗನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ತುಡುಗಿ ಜೀವ ಗಡಗಿಯಲ್ಲಿ ಎಂಬಂತೆ ಗಿರಿಜಾಶಂಕರರ ತಪ್ತ ಮನಸ್ಸು ಮತ್ತೆ ಮನದಂಗಳದಲ್ಲಿ ಶತಪಥ ಹಾಕಲು ಮುಂದಾಗಿತ್ತು.
`ರೋಹಿಣಿ, ನೀನು ಅಷ್ಟವಸರ ಮಾಡಿ ಹೊರಟಿದ್ದಾದರೂ ಏಕೆ? ನನ್ನ ಬಗ್ಗೆ ಒಂಚೂರೂ ಕರುಣೆ, ಅನುಕಂಪ ಬರಲಿಲ್ಲವೇ? ಹೋಗೋದು ಹೋದಿ, ಜೊತೆಗೆ ನನ್ನನ್ನೂ ಕರೆದುಕೊಂಡು ಹೋಗಿದ್ದರೆ ನನಗೆ ಯಾವ ತಾಪತ್ರಯವೂ ಇರುತ್ತಿರಲಿಲ್ಲವಲ್ಲ? ನಿಷ್ಕರುಣಿ, ನೀನು ನಿಷ್ಕರುಣಿ!’
`ನಿನಗೆ ಗೊತ್ತಿಲ್ಲದಿರುವುದೇನಿದೆ? ಜಾತಸ್ಯ ಮರಣಂ ಧ್ರುವಂ ಅಲ್ಲವೇ? ಹುಟ್ಟಿದವರು ಒಂದಲ್ಲ ಒಂದು ದಿನ ಸಾಯಲೇ ಬೇಕಲ್ಲ? ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಅಂತಾನೂ ಹಿರಿಯರು ಹೇಳಿದ್ದಾರೆ. ಯಾರು, ಯಾವ್ಯಾಗ್ಯಾವಾಗ ಕಂತೆ ಒಗೆಯುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲವಲ್ಲ? ಹಿಂಚು-ಮುಂಚು ಅಷ್ಟೇ. ಒಬ್ಬರು ಮುಂದೆ ಹೋದರೆ ಇನ್ನೊಬ್ಬರು ಅವರ ಹಿಂದೆ ಹೌದಲ್ಲವೇ..? ಒಂಟಿಯಾಗಿ ಬಂದ ಜೀವ ಒಂಟಿಯಾಗಿ ಹೋದಾಗ ಇನ್ನೊಬ್ಬರ ಬದುಕು ನಿಲ್ಲುವುದೇನು? ಉಹೂಂ. ಸೃಷ್ಟಿಯಲ್ಲಿ ನಡೆಯುವುದೆಲ್ಲವೂ ಸೃಷ್ಟಿಕರ್ತನ ನಿಯಮದಂತೆ ಅಲ್ಲವೇ? ಅದೂ ಅಲ್ಲದೇ ರೋಹಿಣಿಯದು ಅಕಾಲಿಕ ಮರಣವೇನು ಅಲ್ಲವಲ್ಲ? ಆಕೆ ಸಾರ್ಥಕ ತುಂಬು ಜೀವನ ನಡೆಸಿ ಶಿವೈಕ್ಯಳಾದಳಲ್ಲವೇ? ಪ್ರೀತಿಸುವ ಗಂಡ, ಮಕ್ಕಳು, ಎಲ್ಲರನ್ನೂ ಕಂಡು ಕಣ್ಮುಚ್ಚಿದಳಲ್ಲ? ಸಾದ್ವಿ ಶಿರೋಮಣಿ ಮುತೈದೆಯಾಗಿ ಹೋದಳು. ನಿಜವಾದ ಸತಿ ಬಯಸುವುದು ಅದನ್ನೇ. ಆ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅವರವರ ಸತ್ಕರ್ಮದ ಫಲದಿಂದ ಪುಣ್ಯ ಲಭಿಸುತ್ತದೆ ಅಷ್ಟೇ. ನೀನ್ಯಾಕೆ ಇಷ್ಟು ಚಿಂತಿ ಮಾಡುತ್ತಿರುವಿಯೋ ಏನೋ…?’
`ನಾನ್ಯಾಕೆ ಚಿಂತೆ ಮಾಡುತ್ತಿರುವೆನಂದರೆ ಐವತ್ತು-ಐವತ್ತೈದು ವರ್ಷಗಳಿಂದ ನಾನು ಅಲರ್ಜಿಯಿಂದ ನರಳುತ್ತಿದ್ದೇನೆ. ತೀರ್ಥ ತೆಗೆದುಕೊಂಡರೆ ಶೀತ, ಆರತಿ ತೆಗೆದುಕೊಂಡರೆ ಉಷ್ಣ ಎನ್ನುವ ಪ್ರಕೃತಿ ನನ್ನದು. ತಜ್ಞ ಡಾಕ್ಟರರ ಹತ್ತಿರ ಸಾಕಷ್ಟು ತೋರಿಸಿ ಸೋತು ಹೋಗಿದ್ದೇನೆ. ಹಣ ಖರ್ಚಾಯಿತೇ ವಿನಃ ಅಲರ್ಜಿ ಕಡಿಮೆಯಾಗಲಿಲ್ಲ. ಸೈನಸೈಟಿಸ್ ಅಂತ ಮೂರು ಸಾರೆ ನೇಸಲ್ ಆಪರೇಷನ್ ಮಾಡಿಸಿಕೊಂಡೆ. ಆದರೆ ಪರಿಣಾಮ…? ಬಿಗ್ ಜೀರೋ ಅಷ್ಟೇ. ನೇಸಲ್ ಡ್ರಾಪ್ಸ್/ಸ್ಪ್ರೇ ಬಳಸುವುದು ನಿಂತಿಲ್ಲ. ಧೂಳು, ಶೀತ ಇನ್ನೂ ಎದೆದರದೋ ಅಲರ್ಜಿ. ಬೆಳಗ್ಗೆ ನಾನು ಹಲ್ಲುಜ್ಜುತ್ತಿದ್ದಂತೆ ರೋಹಿಣಿ ಶುಂಠಿಕಷಾಯ, ಹವೀಜದ ಕಷಾಯ ಮಾಡಿಕೊಡುತ್ತಿದರಿಂದ ಅಲರ್ಜಿ ತಕ್ಕ ಮಟ್ಟಿಗೆ ಕಂಟ್ರೋಲಿನಲ್ಲಿದೆ. ಅಸ್ತಮಾ ಉಲ್ಬಣಿಸಿದಾಗ ಎದೆಗೆ ವಿಕ್ಸ್ ಹಚ್ಚಿ ಕಾವು ಕೊಡುತ್ತಿದ್ದಳು. ಅದೆಷ್ಟೋ ರಿಲೀಫ್ ಕೊಡುತ್ತಿತ್ತು.
ಮತ್ತೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನನಗೆ ಥೈರಾಯ್ಡ್ ಆಪರೇಷನ್ ಆದಾಗಿನಿಂದ ಒಂದು ಮಾತ್ರೆಯನ್ನು ಖಾಯಂ ತೆಗೆದುಕೊಳ್ಳಬೇಕಿದೆ. ಅದೂ ಅಲ್ಲದೇ ಕೆಲಸದಿಂದ ನಿವೃತ್ತಿಯಾಗುವ ವರ್ಷವೇ ನನಗೆ ಹೃದಯದ ರಕ್ತನಾಳದಲ್ಲಿ ಎರಡು ಬ್ಲಾಕೇಜ್ ಕಂಡಿದ್ದರಿಂದ ಎರಡು ಸ್ಟೆಂಟ್ ಅಳವಡಿಸಿ ಎಂಜಿಯೋಪ್ಲಾಸ್ಟಿ ಮಾಡಿದ್ದಾರೆ ಹೃದ್ರೋಗ ತಜ್ಞರು. ಅವರ ಮಾರ್ಗದರ್ಶನದಲ್ಲಿ ಮಾತ್ರೆಗಳನ್ನು ಚಾಚೂ ತಪ್ಪದೇ ಪ್ರತಿನಿತ್ಯ ತೆಗೆದುಕೊಳ್ಳುತ್ತಿದ್ದೇನೆ. ಅವಳು ಬೆಳಗಿನ ನಾಷ್ಟಾ, ಮಧ್ಯಾಹ್ನದ ಊಟ, ರಾತ್ರಿಯ ಊಟ ಮುಗಿಯುತ್ತಿದ್ದಂತೆ ಕ್ರಮಬದ್ಧವಾಗಿ ನನಗೆ ಮಾತ್ರೆಗಳನ್ನು ತೆಗೆದುಕೊಳ್ಳಲು ಜ್ಞಾಪಿಸುತ್ತಿದ್ದಳು ಇಲ್ಲವೇ ತಾನೇ ಮಾತ್ರೆಗಳನ್ನು ಕೊಡುತ್ತಿದ್ದಳು. ಮಗುವಿನಂತೆ ನನ್ನನ್ನು ನೋಡಿಕೊಳ್ಳುತ್ತಿದ್ದಳು. ನನ್ನ ಬೇಕು-ಬೇಡಗಳನ್ನು ಅರಿತುಕೊಂಡು ನಡೆಯುತ್ತಿದ್ದಳು. ಅಡುಗೆಯಲ್ಲಿ ಆದಷ್ಟು ಕಡಿಮೆ ಉಪ್ಪು, ಹುಳಿ, ಖಾರ, ಎಣ್ಣೆ ಬಳಸಿ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಳು. ಅವಳು ನನ್ನ ಜೊತೆಗಿದ್ದರೆ ನನಗ್ಯಾವುದರ ಬಗ್ಗೆಯೂ ಚಿಂತೆ ಇರಲಿಲ್ಲ.’
`ಹೌದಪ್ಪಾ, ಈಗ ನಿನಗೇನು ಕಾಳಜಿ ಕಡಿಮೆಯಾಗಿದೆ ಅಂತ ಈ ರೀತಿ ಹಲುಬುತ್ತಿರುವಿ? ಸೊಸೆ ವಚನಾ ನಿನ್ನೆಲ್ಲಾ ಬೇಕು-ಬೇಡಗಳನ್ನು ಅರಿತುಕೊಂಡು ನಡೆಯುತ್ತಿಲ್ಲವೇ? ನಿನ್ನ ದಿನನಿತ್ಯದ ಮಾತ್ರೆಗಳನ್ನು ಅವಳು ನಿನಗೆ ನಿಯಮಿತವಾಗಿ ಜ್ಞಾಪಿಸಿ ಸೇವಿಸಲು ಕೊಡುತ್ತಿಲ್ಲವೇ? ಅಡುಗೆಯಲ್ಲೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲವೇ? ನಿನಗಾಗಿ ಮಗ, ಸೊಸೆ ಸಪ್ಪೆ ಸಪ್ಪೆ ಊಟ ಮಾಡುತ್ತಿಲ್ಲವೇ? ಮಗ, ಸೊಸೆ ಇಬ್ಬರೂ ನಿನ್ನ ಆರೋಗ್ಯದ ಸಲುವಾಗಿ ಟೊಂಕಟ್ಟಿ ನಿಂತಿಲ್ಲವೇ? ಮೊಮ್ಮಕ್ಕಳು ನಿಮ್ಮನ್ನು ಉಲ್ಲಸಿತವಾಗಿ, ಚೈತನ್ಯದಾಯಕವಾಗಿ, ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತಿರುವುದಂತೂ ಸತ್ಯ. ಮತ್ತಿನ್ನೇನು ಬೇಕು ಸುಖೀ ಜೀವನಕ್ಕೆ? ನಿನಗಿರುವುದು ಒಂದೇ ಕೊರತೆ. ಅದು ನಿನ್ನ ಅರ್ಧಾಂಗಿ ನಿನ್ನ ಜೊತೆಗಿಲ್ಲ ಅಂತ. ಅವಳ ಆಯುಷ್ಯ ಮುಗಿದಿತ್ತು. ಹೊರಟುಬಿಟ್ಟಳು. ಆಯುಷ್ಯ ಮುಗಿದ ಮೇಲೆ ಒಂದು ಸಕೆಂಡೂ ಇಲ್ಲಿರಲು ಬಿಟ್ಟಾನೆಯೇ ಆ ಭಗವಂತ? ಸುಮ್ಮಸುಮ್ಮನೇ ಯಾಕೆ ಹಲುಬುತ್ತಿರುವಿ? ನಿನ್ನಂಥಹ ಸುಖೀ ಮನುಷ್ಯ ನಿಜವಾಗಿಯೂ ಯಾರೂ ಇಲ್ಲ. ನಿನ್ನ ಹೆಂಡತಿ ಇಲ್ಲದ ಕೊರತೆಯನ್ನು ಮರೆಸಲು ಮಗ, ಸೊಸೆ ಬಹಳಷ್ಟು ಪ್ರಯತ್ನಿಸುತ್ತಿರುವುದಂತೂ ನಿಜ. ನಿನ್ನ ಮನಸ್ಸಿನ ಭ್ರಾಂತಿಯನ್ನು ತೆಗೆದುಹಾಕು.’
`ಮಗ, ಸೊಸೆ ನನ್ನ ಇಷ್ಟಾನಿಷ್ಟಗಳನ್ನು, ಬೇಕು-ಬೇಡಗಳನ್ನು ಅರಿತುಕೊಂಡು ಚಾಚೂ ತಪ್ಪದೇ ಈಡೇರಿಸುತ್ತಿರುವಂತೂ ಸತ್ಯ. ಆದರೆ ಅವರಿಗೆ ನಾನು ಹೊರೆಯಾಗುವುದು ಬೇಡ ಎಂದು ಅನಿಸುತ್ತಿದೆ. ಪಾಪ, ನನಗಾಗಿ ಅವರು ಹೆಣಗುವುದು ನನಗಿಷ್ಟವಾಗುತ್ತಿಲ್ಲ. ಅವರ ಸೇವೆಯ ಋಣದಲ್ಲಿ ಬದುಕಲು ನನಗೆ ಸರಿ ಅನಿಸುತ್ತಿಲ್ಲ. ಮೊಮ್ಮಕ್ಕಳೊಂದಿಗೆ ಆಟ-ಪಾಟದಲ್ಲಿ ನಾನು ನನ್ನ ವಯಸ್ಸನ್ನೇ ಮರೆತುಬಿಡುತ್ತೇನೆ. ಅವರ ಚಿಲಿಪಿಲಿಗಾನ, ಕಲರವದಲ್ಲಿ ನನ್ನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ.’
‘ಹಾಂ, ಏನಂದೀ…? ಹೊರೆ, ಋಣ…! ಯಾರಿಗೆ ಯಾರು ಹೊರೆ! ಯಾರು ಯಾರ ಋಣದಲ್ಲಿ ಬದುಕುತ್ತಿರುವುದು! ಮಕ್ಕಳಿಗೆ ತಂದೆ-ತಾಯಿಗಳು ಹೊರೆಯೇ? ಅದು ಅವರ ಕರ್ತವ್ಯ. ನೀನು ನಿನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಮಕ್ಕಳಿಗೆ ಒಳ್ಳೇ ವಿದ್ಯಾಭ್ಯಾಸ, ಆಚಾರ-ವಿಚಾರಗಳನ್ನು ಕೊಡಿಸಿದ್ದಕ್ಕೆ ತಾನೇ ಅವರೀಗ ಒಳ್ಳೇ ಸ್ಥಿತಿಯಲ್ಲಿರುವುದು? ಅವರ ಏಳಿಗೆಗಾಗಿ ಆರ್ಥಿಕ ಜವಾಬ್ದಾರಿಗಳನ್ನು ಹೊರುವಾಗ ನೀನು ನಿನ್ನ ಸುಖ-ಸಂತೋಷಗಳನ್ನು ತ್ಯಾಗ ಮಾಡಿಲ್ಲವೇ? ಮತ್ತೆ ಋಣ…! ತಂದೆ-ತಾಯಿಗಳು, ಮಕ್ಕಳು ಇವರಲ್ಲಿ ಅದ್ಯಾವ ಋಣದ ಭಾರವಿರುತ್ತದೆ? ಇಲ್ಲಿ ಋಣದ ಪ್ರಶ್ನೆಯೇ ಬರುವುದಿಲ್ಲ. ಇಲ್ಲಿರುವುದು ಬರೀ ಕರ್ತವ್ಯದ ನಿರ್ವಹಣೆ ಅಷ್ಟೇ. ನಿನ್ನ ತಂದೆ-ತಾಯಿಗಳು ನಿನಗೆ ಮಾಡಿದ್ದನ್ನು ನೀನು ನಿನ್ನ ಮಕ್ಕಳಿಗೆ ಮಾಡಿದಿ. ನಿನ್ನ ತಂದೆ-ತಾಯಿಗಳನ್ನು ನೀನು ನೋಡಿಕೊಳ್ಳಲಿಲ್ಲವೇ? ಹೌದು ತಾನೇ? ಹಾಗೆಯೇ ಈಗ ನಿನ್ನ ಮಕ್ಕಳು ನಿನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಸೊಸೆ ವಚನಾ ನಿನ್ನ ಮನೆಗೆ ಸೊಸೆಯಾಗಿ ಬರದೇ ಮನೆಮಗಳಾಗಿ ಬಂದಿದ್ದಾಳೆ. ಈಗಿನ ಕಾಲದಲ್ಲಿ ಮದುವೆಯಾಗುತ್ತಲೇ ಬೇರೆ ಮನೆ ಹೂಡುತ್ತಾರೆ ಯುವ ಜನತೆ. ತಾನಾಯಿತು, ತನ್ನ ಹೆಂಡತಿಯಾಯಿತು, ತನ್ನ ಮಕ್ಕಳಾಯಿತು ಎಂಬಂತೆ ಇದ್ದುಬಿಡುತ್ತಾರೆ. ಆದರೆ ನಿನ್ನ ಮಕ್ಕಳು ಇದಕ್ಕೆ ಅಪವಾದ. ನಿಜವಾಗಿಯೂ ನೀನು ತುಂಬಾ ಅದೃಷ್ಟವಂತ. ಕಾಲನ ಪರಿಧಿಯಲ್ಲಿ ನಿಧಾನಕ್ಕೆ ರೋಹಿಣಿಯ ನೆನಪು ಮಸುಕಾಗಬೇಕು. ಆಗ ಎಲ್ಲವೂ ಸರಿ ಹೋಗುತ್ತದೆ.’
`ಹೌದಾ…? ಹೀಗಂತೀಯಾ…? ನಾನೂ ಅವಳ ನೆನಪಿನ ಸುಳಿಯ ತೀವ್ರತೆಯಿಂದ ಹೊರಬರಲು ಪ್ರಯತ್ನಿಸುತ್ತಿರುವೆನಾದರೂ ಸಾಧ್ಯವಾಗುತ್ತಿಲ್ಲ. ಅಷ್ಟು ಬಲವಾಗಿ ಆಹ್ವಾನಿಸಿಕೊಂಡು ಬಿಟ್ಟಿದ್ದಾಳೆ ರೋಹಿಣಿ ನನ್ನನ್ನು ತನ್ನೆದೆಯೊಳಗಿನ ಪ್ರೀತಿಯ ಅಮೃತದಲ್ಲಿ. ಅದು ಅಷ್ಟು ಬೇಗ ನೆನಪಿನಂಗಳದಿಂದ ಅಳಿಸಿ ಹೋಗುವ ಬಂಧನದ ಬಾಂಧವ್ಯವೂ ಅಲ್ಲ ತಾನೇ…? ಒಂದೇ, ಎರಡೇ…? ಐವತ್ತು ವರ್ಷಳ ಮೇಲಿನ ನಮ್ಮ ಅವಿನಾಭಾವ ಸಂಬಂಧ ಅಷ್ಟು ಬೇಗ ಕಳಚಿಕೊಳ್ಳಲು ಸಾಧ್ಯವೇ? ಒಂದೇ ಜೀವ ಎರಡು ದೇಹಗಳಂತೆ ಇದ್ದೆವು. ಅವಳ ಪ್ರೀತಿ, ಒಲುಮೆ, ಸ್ನೇಹ, ಒಡನಾಟ, ತುಂಟಾಟ, ಆತ್ಮೀಯತೆ, ಮಾತೃತ್ವ, ಮಮತೆ, ಅಷ್ಟು ಬೇಗ ಮರೆಯಲು ಸಾಧ್ಯವೇ? ಉಹೂಂ, ಸಾಧ್ಯವಿಲ್ಲ. ಜನ್ಮ ಜನ್ಮಾಂತರಗಳ ಪರಿಕಲ್ಪನೆಯಲ್ಲಿ ನನಗೆ ನಂಬಿಕೆ ಇರದಿದ್ದರೂ ಅಂಥಹ ಜೊತೆಗಾತಿಯನ್ನು ಪಡೆಯಲು ನಾನು ಏಳೇಳು ಜನ್ಮದಲ್ಲಿ ಪುಣ್ಯಮಾಡಿರಬೇಕು ಎಂದೆನಿಸುತ್ತಿದೆ. ಸರಿ ಸರಿ. ನಿನ್ನ ಹಿತವಚನದ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ರೋಹಿಣಿಯನ್ನು ಮರೆಯಲು ಪ್ರಯತ್ನಿಸುವೆ. ಓಕೇನಾ…?’ ಮನಸ್ಸುಗಳೆರಡರ ಮಾತುಗಳ ಮಂಥನದಿಂದ ಗಿರಿಜಾಶಂಕರರ ಮನಸ್ಸಿಗೆ ತುಸು ನೆಮ್ಮದಿ ಎನಿಸಿತು.
****
ಶಿರಸಿಯ ಮಾರಿಕಾಂಬಾ ದೇವಸ್ಥಾನದ ಮುಂದೆ ಕಾರು ನಿಂತಾಗಲೇ ಗಿರಿಜಾಶಂಕರ್ ಮನಸ್ಸಿನ ತಾಕಲಾಟದಿಂದ ಹೊರಬಂದಿದ್ದರು. `ಅಪ್ಪಾಜೀ, ಮೊದಲು ಅಮ್ಮನವರ ದರ್ಶನ ಪಡೆದುಕೊಳ್ಳೋಣವೇ…?’ ಎಂದು ಸದ್ಭವ್ ಕೇಳಿದಾಗ, `ಹಾಗೇ ಆಗಲಿ’ ಎಂದರು ಗಿರಿಜಾಶಂಕರ್. ಆಕೃತಿ ಮತ್ತು ಅಕ್ಷರ್ ತಾತನ ಕೈಹಿಡಿದುಕೊಂಡರು. ಸದ್ಭವ್ ಮತ್ತು ವಚನಾ ಜೊತೆಜೊತೆಯಾಗಿ ಹೆಜ್ಜೆ ಹಾಕಿದರು. ಕೈಕಾಲು ಮುಖ ತೊಳೆದುಕೊಂಡು ದೇವಸ್ಥಾನ ಪ್ರವೇಶಿಸಿದರು. ಸಂಜೆಯ ಸಮಯವಾಗಿದ್ದರಿಂದ ದೇವಸ್ಥಾನದಲ್ಲಿ ಹೇಳಿಕೊಳ್ಳುವಂಥಹ ಜನಸಂದಣಿ ಇರಲಿಲ್ಲ. ತಾಯಿ ಮಾರಿಕಾಂಬೆಯ ದರ್ಶನ ಸುಲಭವಾಗಿ ಲಭಿಸಿತು. ಮಂಗಳಾರತಿಯ ಸಮಯದಲ್ಲಿ ಗಿರಿಜಾಶಂಕರ್ ಭಕ್ತಿಭಾವದಲ್ಲಿ ದೇವಿಯ ಎದುರು ಕಣ್ಮುಚ್ಚಿ, ಕೈಮುಗಿದು ನಿಂತುಕೊಂಡರು. ಈ ಮೊದಲು ಅವರು ಐದಾರು ಸಲ ಶಿರಸಿಗೆ ಬಂದಿದ್ದರು ಮಾರಿಕಾಂಬೆಯ ದರ್ಶನಕ್ಕೆಂದು. ಆದರೆ ಬಂದಿದ್ದು ಯಾವಾಗಲೂ ರೋಹಿಣಿಯ ಜೊತೆಜೊತೆಗೆ. ಒಬ್ಬಂಟಿಗರಾಗಿ ಹಿಂದೆಂದೂ ಬಂದಿರಲಿಲ್ಲ. ಇದು ನೆನಪಾದಾಗ ಗಿರಿಜಾಶಂಕರರು ತುಂಬಾ ಡಲ್ಲಾಗಿಬಿಟ್ಟರು. ಹಾಗೂ, ಹೀಗೂ ಮನಸ್ಥಿತಿಯನ್ನು ಹೇಗೋ ಸಂಭಾಳಿಸಿಕೊಂಡು ಮಂಗಳಾರತಿಗೆ ಭಕ್ತಿಭಾವದಿಂದ ನಮಿಸಿ ತೀರ್ಥ ಪ್ರಸಾದ ತೆಗೆದುಕೊಂಡು ದೇವಿಯ ಎದುರಿಗಿನ ಪ್ರಾಂಗಣಕ್ಕೆ ಬಂದು ಕಣ್ಮುಚ್ಚಿ ಕುಳಿತರು.
“ಏನ್ರೀ, ನನ್ನನ್ನು ಮಣ್ಣಲ್ಲಿ ಮುಚ್ಚಿ ಹೀಗೆ ಒಬ್ಬರೇ ದೇವಿಯ ದರ್ಶನಕ್ಕೆ ಬಂದಿರುವಿರಲ್ಲ, ನಿಮಗೆ ಮನಸ್ಸಾದರೂ ಹೇಗೆ ಬಂತು…? ನನ್ನನ್ನೂ ನಿಮ್ಮ ಜೊತೆಗೆ ಕರೆದುಕೊಂಡು ಬಂದಿದ್ದರೆ ನಿಮಗೇನು ತೊಡಕಾಗುತ್ತಿತ್ತು…? ಕಲ್ಲು ಮನಸ್ಸಿನವರು ನೀವು.” ಪತ್ನಿ ರೋಹಿಣಿಯ ಮಾತಿಗೆ ಬೆಚ್ಚಿಬಿದ್ದ ಗಿರಿಜಾಶಂಕರ್ ಥಟ್ಟಂತ ಸುತ್ತಲೂ ಕಣ್ಣಾಡಿಸತೊಡಗಿದರು. ರೋಹಿಣಿ ಎಲ್ಲೂ ಕಾಣಲಿಲ್ಲ. ಅಕ್ಕ-ಪಕ್ಕ ಮಗ-ಸೊಸೆ, ಮೊಮ್ಮಕ್ಕಳು ಕುಳಿತಿದ್ದನ್ನು ಕಂಡರು. `ಅಂದರೆ ರೋಹಿಣಿಯ ಆ ಮಾತುಗಳು…? ನನ್ನ ಮನಸ್ಸಿನ ಭ್ರಮೆಯೇ…? ಕಣ್ಮುಚ್ಚಿಕೊಂಡು ಕುಳಿತರೂ ಅವಳದೇ ಧ್ಯಾನವಾಗಿದೆ. ಆದರೆ ಕಣ್ಣಿಗೆ ಕಾಣುತ್ತಿಲ್ಲ, ಕೈಗೆ ಸಿಗುತ್ತಿಲ್ಲ.’ ಮತ್ತೆ ಗಿರಿಜಾಶಂಕರರು ದ್ವಂದ್ವಕ್ಕೆ ಬಿದ್ದರು. ಎದೆಯಲ್ಲಿ ಮತ್ತೆ ನೋವಿನ ಸುಳಿ. ತುಂಬಾ ಸಪ್ಪಗಾಗಿ ಬಿಟ್ಟರು.
“ಅಪ್ಪಾಜಿ, ಅಮ್ಮ ನೆನಪಾದಳೇ…?” ತಂದೆಯ ಮನಃಸ್ಥಿತಿಯನ್ನು ಅರಿತವನಂತೆ ಸದ್ಭವ್ ಪ್ರಶ್ನಿಸಿದ್ದ. ಗಿರಿಜಾಶಂಕರ್ ಮಗನ ಕಡೆಗೆ ಕಣ್ಣೋಡಿಸಿದರು. ಆ ಕಣ್ಣೋಟದಲ್ಲಿ ಜೀವದ ಕಳೆಯ ಲವಲೇಶವೂ ಇಲ್ಲ ಎಂಬುದು ಸದ್ಭವನ ಹೃದಯದರಿವಿಗೆ ಬರದಿರಲಿಲ್ಲ. ಮಗನ ಪ್ರಶ್ನೆಗೆ ಉತ್ತರಿಸುವ ಗೊಡವೆಗೆ ಹೋಗಲಿಲ್ಲ. ಸುಮ್ಮನೇ ಅವನನ್ನೇ ನೋಡಿದರು. ಎಲ್ಲವೂ ಅರ್ಥವಾಯಿತೆಂಬಂತೆ ಸದ್ಭವ್ ಮಾತು ಬೆಳಸಲಿಲ್ಲ.
ಹೋಟೆಲ್ ರೂಮ್ ಸೇರಿಕೊಂಡಾಗ ಗಿರಿಜಾಶಂಕರರಿಗೆ ಏಕಾಂತ ಸಿಕ್ಕಿತು. ಮೊಮ್ಮಕ್ಕಳಿಬ್ಬರೂ ಅವರ ಜೊತೆಗೇ ಬಂದರು. ಅವರು ಅಜ್ಜನೊಂದಿಗೆ ಮಾತಿಗಿಳಿಯಲಿಲ್ಲ. ಪ್ರಯಾಣದ ಆಯಾಸದಿಂದ ಬಳಲಿದ್ದರು. ತುಸು ಹೊತ್ತಿನಲ್ಲೇ ನಿದ್ದಾದೇವಿಗೆ ಶರಣಾದರು. ಗಿರಿಜಾಶಂಕರರೂ ಹಾಗೇ ಹಾಸಿಗೆಯಲ್ಲಿ ಅಡ್ಡಾದರು. ವಯಸ್ಸಿನ ಪ್ರಭಾವದಿಂದ ಅವರಿಗೂ ಸಕತ್ತಾಗಿ ದಣಿವಾಗಿತ್ತು. ಇನ್ನೇನು ನಿದ್ರೆ ಹತ್ತೇಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೇ ಪತ್ನಿ ರೋಹಿಣಿ ಧುತ್ತೆಂದು ಪ್ರತ್ಯಕ್ಷಳಾದಳು. ನಿದ್ರೆ ಹೇಳ ಹೆಸರಿಲ್ಲದಂತೆ ದೂರಾಗಿತ್ತು. ಮತ್ತೆ ಅವರ ಪ್ರಲಾಪ ಹೇಳಲಸದಳ.
`ರೋಹಿಣಿ, ನೀನಿಲ್ಲದ ನನ್ನ ಬಾಳ ಪಯಣ ಮರುಭೂಮಿಯ ಪಯಣದಂತಾಗಿದೆ. ಏನೇನೂ ಹಸಿರಿಲ್ಲ, ಜೀವಜಲವಿಲ್ಲ, ಫಲವಿಲ್ಲ. ಎಲ್ಲೆಲ್ಲೂ ಮುಳ್ಳುಕಂಟಿಗಳೇ. ನೀರಿನಿಂದ ಹೊರತೆಗೆದ ಮೀನಿನಂತೆ ಚಡಪಡಿಸುತ್ತಿದೆ ಈ ಜೀವ ನಿನಗಾಗಿ. ಆ ದೇವರು ನಿರ್ದಯಿ. ನನ್ನ ಮನದಾಳವನ್ನು ಅರ್ಥಮಾಡಿಕೊಳ್ಳಲಿಲ್ಲ. ರೋಹಿ, ನೀನಿಲ್ಲದೇ ನಾನ್ಹೇಗಿರಲಿ, ಎಲ್ಲಿರಲಿ…? ನನ್ನನ್ನೂ ನಿನ್ನಲ್ಲಿಗೆ ಕರೆದುಕೊಂಡುಬಿಡು. ನಿನ್ನ ಜೊತೆಗಿರಲು ಈ ಜೀವ ಪರಿತಪಿಸುತ್ತಿದೆ. ರೋಹೀ, ಕೈಚಾಚು. ಹಿಡಿದುಕೊಳ್ಳುವೆ. ಹಿಡಿದುಕೋ ನನ್ನನ್ನು. ಗಟ್ಟಿಯಾಗಿ ಹಿಡಿದುಕೋ. ಕೈಬಿಡಬೇಡ.’
“ಏನ್ರೀ, ಹಿಂಗ್ಯಾಕ ಕನವರಿಸಕತ್ತೀರಿ…? ನಾನೆಲ್ಲಿ ಹೋಗೀನಿ? ಇಲ್ಲೇ ಇದ್ದೀನಿ. ತುಸು ಕಣ್ಬಿಟ್ಟಾದ್ರೂ ನೋಡ್ರಿ.”
“ರೋಹಿಣಿ, ನೀನು ಇಲ್ಲೇ ಇದ್ದೀಯಾ…? ಇಲ್ಲೇ ಅಂದ್ರೆ ಎಲ್ಲಿ…? ಮತ್ತೆ…”
“ಹೌದ್ರಿ, ಇಲ್ಲೇ ಅಂದ್ರೆ ನಿಮ್ಮ ಜೊತೆಗೇ ಇದ್ದೀನಿ. ನಿಮ್ಮನ್ನು ಬಿಟ್ಟು ನಾನೆಲ್ಲಿಗೆ ಹೋಗಲಿ? ಮತ್ತೆ ಅಂದರೆ ಅದೇನ್ರೀ…? ಮೊದಲು ಕಣ್ತೆಗೆದು ನನ್ನ ಕಡೆಗೆ ನೋಡ್ರಿ.”
“ಹೌದಲ್ವಾ, ನಾವು ನಮ್ಮ ಮನೇಲೇ ಇದ್ದೀವಿ. ರೋಹಿ, ಇದು ಕನಸೋ, ನನಸೋ…? ಒಂದೂ ಅರ್ಥವಾಗುತ್ತಿಲ್ಲ. ನಾನು ಶಿರಸಿಯ ಲಾಡ್ಜ್‍ನಲ್ಲಿ ಇಲ್ಲವೇ…?”
“ಇದು ನನಸೇ ಕಣ್ರೀ. ನೀವು ಶಿರಸಿಯ ಲಾಡ್ಜ್‍ನಲ್ಲಿ…? ನಿಮ್ಮ ನಡೆ ನನಗೂ ಅರ್ಥವಾಗುತ್ತಿಲ್ಲ…? ಕನಸು-ಗಿನಸೇನಾದರೂ ಕಂಡಿರಾ…?” ಗಿರಿಜಾಶಂಕರರು ತುಸು ಹೊತ್ತು ತಲೆ ಕೆರೆದುಕೊಂಡರು. `ನನ್ನ ರೋಹಿ, ನನ್ನ ಪಕ್ಕದಲ್ಲೇ ಇದ್ದಾಳೆ. ಅಂದರೆ ನಾನು ಇದುವರೆಗೂ ಕಂಡಿದ್ದು ಕನಸಾ…? ಹೌದು, ಕನಸಲ್ಲದೇ ಮತ್ತಿನ್ನೇನು…? ನನ್ನ ರೋಹಿ ನನಗೆ ಸಿಕ್ಕುಬಿಟ್ಟಳು. ನಾನು ತುಂಬಾ ಅದೃಷ್ಟವಂತ’ ಎಂದು ಮನದೊಳಗೇ ಅಂದುಕೊಳ್ಳುತ್ತಾ ರೋಹಿಣಿಯನ್ನು ತಬ್ಬಿಕೊಂಡು ಮನಸಾರೆ ಮುದ್ದಿಸಿದರು. ರೋಹಿಣಿಗೆ ತನ್ನವರ ನಡೆ ಒಂದೂ ಅರ್ಥವಾಗಲಿಲ್ಲ. ಅವರ ಹುಚ್ಚುಚ್ಚಾಟವನ್ನು ಸುಮ್ಮನೇ ಸಹಿಸಿಕೊಂಡಳು.
“ಈ ವಯಸ್ಸಿನಲ್ಲಿ ನಿಮ್ಮದು ಅತಿಯಾಯಿತು. ಸರಿ, ಮುದ್ದಾಟ ಸಾಕು. ಅದೇನಾಯಿತು ಎಂದು ಹೇಳಿರಿ…?”
“ರೋಹಿ, ಎದೆ ಝಲ್ಲೆನಿಸುವ ಭಯಾನಕ ಕನಸು ಕಂಡೆ. ನಿನಗೆ ನೆನಪಿರಬಹುದು, ನಾವು ನಾಲ್ಕು ವರ್ಷಗಳ ಹಿಂದೆ, `ನಿಸರ್ಗ ಟ್ರಾವೆಲ್ಸ್’ ಮೂಲಕ ಹನ್ನೊಂದು ದಿನಗಳ ದಕ್ಷಿಣ ಭಾರತದ ಪ್ರವಾಸಕ್ಕೆ ಹೋಗಿದ್ದೆವು.”
“ಹೌದು, ಹೋಗಿದ್ದೆವಲ್ಲ…? ಪ್ರವಾಸ ತುಂಬಾ ಚೆನ್ನಾಗಿತ್ತು.”
“ನಾವು ಪ್ರವಾಸವನ್ನು ಸಕತ್ತಾಗಿ ಎಂಜಾಜ್ ಮಾಡಿದ್ದಂತೂ ನಿಜ. ನಮ್ಮ ಸಹಪ್ರಯಾಣಿಕರಲ್ಲಿ ಒಬ್ಬರು ಜ್ಯೋತಿಷಿಗಳು ಇದ್ದರು. ಪ್ರವಾಸ ಕೊನೆಗೊಳ್ಳುವ ದಿನ ಅವರು, `ನಿಮ್ಮಿಬ್ಬರ ಅನ್ಯೋನ್ಯ ಜೋಡಿ ಅನುರೂಪವಾದದ್ದು. ನಿಮ್ಮ ಪರಿಚಯದಿಂದ ತುಂಬಾ ಖುಷಿಯಾಗಿದೆ. ಸಹೋದರಿಯವರು ಅಗಾಧ ದೈವಭಕ್ತರು. ತಮ್ಮಿಚ್ಛೆಯಂತೆ ಅವರು ತಮ್ಮ ಎಪ್ಪತ್ತು ಅಥವಾ ಎಪ್ಪತ್ತೊಂದನೇ ವಯಸ್ಸಿನಲ್ಲಿ ಮುತ್ತೈದೆಯಾಗಿ ಇಹಲೋಕ ಯಾತ್ರೆ ಮುಗಿಸುತ್ತಾರೆ’ ಎಂದು ಹೇಳಿದ್ದು ನಿನಗೂ ನೆನಪಿರಬಹುದು. ಜ್ಯೋತಿಷ್ಯದಲ್ಲಿ ನನಗೆ ನಂಬಿಕೆ ಇರದಿದ್ದರೂ ಅಂದಿನಿಂದ ನನ್ನೆದೆಯಲ್ಲಿ ಒಂಥರ ನಡುಕ! ನಿತ್ಯವೂ ಅವರ ಮಾತು ನನ್ನೆದೆಯನ್ನು ಕುಟುಕುತ್ತಿತ್ತು. ಅದೇ ಆತಂಕ, ಕಳವಳದಲ್ಲಿ ದಿನಗಳಲ್ಲಿ ದೂಡುತ್ತಿದ್ದೆ. ಇಂದು ಅದೇನಾಯಿತೋ ಏನೋ? ಭಯಂಕರ ಕೆಟ್ಟ ಕನಸು. ನೀನು ಒಂದು ವರ್ಷದ ಹಿಂದೇನೇ ನನ್ನನ್ನು ಒಂಟಿಯಾಗಿಮಾಡಿ ಬಿಟ್ಟುಹೋಗಿದ್ದಿ” ಎಂದೆನ್ನುತ್ತಾ ಗಿರಿಜಾಶಂಕರ್ ತಮ್ಮ ಮನಸ್ಸಿನೊಳಗಾಗುತ್ತಿದ್ದ ಮಂಥನದ ಜೊತೆಗೆ ಮಗ, ಸೊಸೆ ಮತ್ತು ಮೊಮ್ಮಕ್ಕಳ ಜೊತೆಗೆ ಬನವಾಸಿ ಮತ್ತು ಶಿರಸಿಯ ಪ್ರವಾಸಕ್ಕೆ ಹೋಗಿದ್ದರ ಬಗ್ಗೆ ವಿವರಿಸಿದರು.
“ರೀ, ನಿಮ್ಮನ್ನು ಒಂಟಿಯಾಗಿ ಮಾಡಿ ನಾನೊಬ್ಬಳೇ ಹೋಗಲು ಸಾಧ್ಯವೇ…? ಇಬ್ಬರನ್ನೂ ಜೊತೆಯಾಗಿ ಕರೆಸಿಕೊಳ್ಳಲು ಭಗವಂತನಲ್ಲಿ ಪ್ರಾರ್ಥಿಸೋಣ.”
“ರೋಹಿ, ನಿನ್ನ ಮಾತು ಕೇಳಿ ನನಗೆ ಹೋಳಿಗೆ-ತುಪ್ಪ ಉಂಡಷ್ಟು ಖುಷಿಯಾಗುತ್ತಿದೆ” ಎಂದೆನ್ನುತ್ತಾ ಗಿರಿಜಾಶಂಕರ್ ಪತ್ನಿಯನ್ನು ಬಿಗಿದಪ್ಪಿಕೊಂಡು ಸಂಭ್ರಮಿಸತೊಡಗಿದರು. ಇಳಿ ವಯಸ್ಸಿನ ಸಂಗಾತಿಗಳ ಆನಂದಾತೀರೇಕಕ್ಕೆ ಕೊನೆ ಇರಲಿಲ್ಲ.
ಶೇಖರಗೌಡ ವೀ ಸರನಾಡಗೌಡರ್
*****
1 thought on “ಕನವರಿಕೆ”
ಇಳಿ ವಯಸ್ಸಿನ ದಂಪತಿಗಳ ಅನ್ಯೋನ್ಯತೆ, ಪ್ರೀತಿಯನ್ನು ಚೆನ್ನಾಗಿ ಎಳೆ ಎಳೆಯಾಗಿ ಬಿಡಿಸಿದ್ದೀರಿ. ಅರ್ಥಪೂರ್ಣ ಕವನವನ್ನು ಅಸ್ವಾದಿಸಿದ ರೀತಿ ಕಥೆ ಓದಿ ಸಂತಸವಾಯಿತು. ಭಾವೋದ್ವೇಗ ಕಥೆಯನ್ನು ಗಟ್ಟಿಗೊಳಿಸಿದೆ. ಅಭಿನಂದನೆಗಳು.