ಗುಡ್ಡದ ಇಳಿಜಾರು ಸತತ ಸುರಿದ ಮಳೆಗೆ ಪಾಚಿಗಟ್ಟಲಾರಂಭಿಸಿತ್ತು. ಅಲ್ಲಲ್ಲಿ ನೆಟ್ಟ ತೆಂಗಿನ ಮರಗಳು ಅಡಿಕೆ ಮರಗಳು ಬೀಸುವ ಗಾಳಿಯ ರಭಸಕ್ಕೆ ತೂಗಿ ಬಾಗಿ ಯಾವ ಕ್ಷಣಕ್ಕೆ ಯಾವುದು ಮುರಿದು ಬೀಳುತ್ತದೆಯೋ ಎಂಬ ಭೀತಿ ಹುಟ್ಟಿಸುತ್ತಿತ್ತು. ಕೊಟ್ಟಿಗೆಯ ದನಕರುಗಳು ಚಳಿಗೋ ಭಯಕ್ಕೋ ‘ಅಂಬಾ’ ಎಂದು ಆರ್ತನಾದ ಹೊರಡಿಸುತ್ತಿದ್ದವು. ದೇವರ ಪೂಜೆಗೆ ಕುಳಿತ ರಾಮ ಭಟ್ಟರು ಮನೋಜವಂ ಮಾರುತ ತುಲ್ಯವೇಗಂ…ಎಂದು ಮಂತ್ರ ಪಠಿಸುತ್ತಾ ತಮ್ಮ ಇಷ್ಟದೈವ ಹನುಮಂತನನ್ನು ಪೂಜಿಸುತ್ತಿದ್ದರು.
ಅಪ್ಪೇಹುಳಿಗೆ ಬೆಳ್ಳುಳ್ಳಿಯ ಕಮ್ಮನೆಯ ಒಗ್ಗರಣೆ ಹಾಕಿದ ಸೀತಕ್ಕ… ಹೋಯ್ ಪೂಜೆ ಮುಗತ್ತನ್ರೋ. ಯನ್ನ ಅಡುಗೆ ಅಂತೂ ಮುಗತ್ತು ಎಂದರು. ‘ನೈವೇದ್ಯಕ್ಕೆ ಎಂತೆಂತಾ ಕೊಡತ್ಯ ಕೊಡು. ಮಂಗಳಾರತಿ ಮಾಡ್ತಿ’ ಎಂದರು ಭಟ್ಟರು. ಅನ್ನದ ತಪ್ಪಲೆಗೆ ಒಂದು ಮಿಳ್ಳೆ ತುಪ್ಪ ಹಾಕಿ ಬಾಳೆಲೆ ತುಂಡು ಮುಚ್ಚಿ ದೇವರ ಮುಂದೆ ತಂದಿಟ್ಟಳು ಸೀತಕ್ಕ. ‘ಹಾಲು ಮೊಸರು ಮೊದಲೆ ತಂದಿಟ್ಟಿದ್ನಲಿ… ಈಗ ನಿಂಗ ಆರತಿ ಮಾಡಲಕ್ಕು’ ಎಂದಳು. ಎಡಗೈಯಲ್ಲಿ ಗಂಟೆ ತೂಗುತ್ತಾ ಬಲಗೈಯಲ್ಲಿ ಏಕಾರತಿ ಬೆಳಗುತ್ತಾ ಗಂಡ ಆರತಿ ಮಾಡುವುದನ್ನೇ ನೋಡುತ್ತಾ ಕೈ ಮುಗಿದು ನಿಂತ ಸೀತಕ್ಕನ ಕಣ್ಣಲ್ಲಿ ಅಶ್ರುಧಾರೆ. ಮನದ ತುಂಬೆಲ್ಲ ತಾಳಲಾಗದಂತಹ ತುಮುಲವೇ. .
ಎಂತಾ ಮಾರಾಯ್ತಿ ದೇವರ ಮುಂದೆ ಪೂಜೆ ಹೊತ್ನಲ್ಲಿ ಕಣ್ಣೀರು ಹಾಕ್ತೆ. ಸಮಾಧಾನ ಮಾಡಿಕ್ಯಳೇ. ತಗ ಪ್ರಸಾದವಾ ಎನ್ನುತ್ತಾ ತುಸು ಮೊಗ್ಗಾಗಿಯೇ ಇರುವ ಗುಲಾಬಿಯನ್ನು ಹೆಂಡತಿಯ ಕೈಗಿತ್ತರು. ದಾಸವಾಳ ಹೂ ಕೊಟ್ರೆ ಸೂಡಿಕ್ಯಂಬ್ಲೆ ಚೊಲೋ ಆಗ್ತಿಲ್ಲೆ ಹೇಳ್ತೆ ಅಂತಾ ಇವತ್ತು ಬೆಳಿಗ್ಗೆ ಗುಲಾಬಿ ಮೊಗ್ಗೆ ಕೊಯ್ದಿದ್ದಿ ನಿಂಗೆ ಪ್ರಸಾದಕ್ಕೆ ಕೊಡಲ್ಲೆ ಬೇಕು ಹೇಳಿ’…ರಾಮ ಭಟ್ಟರು ತನ್ನ ಜಾಣ್ಮೆಯ ಬಗ್ಗೆ ತುಸು ಹೆಮ್ಮೆಯಲ್ಲಿ ಹೇಳಿದರು. ಸೀತೆಯ ಮೊಗದಲ್ಲೂ ಅಳು ಸರಿದು ನಸು ಮಂದಹಾಸ ಮೂಡಿತು. ಕಿಡಕಿಯ ಮೇಲಿಟ್ಟ ಕ್ಲಿಪ್ ಹುಡುಕಾಡಿ ತಕ್ಷಣವೇ ಮುಡಿಗೇರಿಸಿದಳು. ತುಸು ನಗುತ್ತಾ ಗಂಡನ ಕಡೆ ಬೆನ್ನು ತಿರುವಿ ‘ನೋಡಿ ಸೂಡಿಕ್ಯಂಡೇ ಬುಟಿ’ ಎಂದಳು. …
‘ಐವತ್ತು ವರ್ಷವಾದರೂ ನೀಳ್ಜಡೆ ಯನ್ನ ಹೆಂಡ್ತಿಗೆ’ ಎನ್ನುತ್ತಾ ಭಟ್ಟರೂ ನಕ್ಕರು.
‘ಹಲಸಿನ ಕಾಯಿ ಹಪ್ಪಳ ಕರಿ ಹೇಳಿದ್ರಿ. ಮರತೆ ಹೋತು. ನೀವು ಒಂದ್ಸಲಾ ಕೊಟ್ಟಿಗಿಗೆ ಹೋಗಿ ದನಗಕ್ಕಿಗೆ ಹುಲ್ಲ ಹಾಕಿಕ್ಕೆ ಬನ್ನಿ ಅಷ್ಟೊತ್ತಿಗೆ ಹಪ್ಪಳಾ ಕರಿದು ಬಾಳೆ ಮಣೆ ಹಾಕ್ತಿ’… ಎನ್ನುತ್ತಾ ಸೀತೆ ಅನ್ನದ ಚರಿಗೆ ಹೊತ್ತು ಅಡುಗೆ ಮನೆಯತ್ತ ನಡೆದಳು. .
‘ಮಗಾ ಸೊಸೆ ಮೊಮ್ಮಗಾ ಇದ್ದಿದ್ರೆ ಸುಮಾರು ಇಪ್ಪತ್ತು ಹಪ್ಪಳಾ ಕರಿಯಕ್ಕಾಗಿತ್ತು. ಈಗೆಂತಾ ನಾಲ್ಕು ಹಪ್ಪಳಾ ಕರಿದ್ರಾತು. ಹ್ಯಾಂಗಿದ್ವ ಎಂತೇನ’ ಎಂದು ಸ್ವಗತವಾಡುತ್ತಾ ಹಪ್ಪಳ ಕರಿಯುವಷ್ಟರಲ್ಲಿ ರಾಮ ಭಟ್ಟರು ಕೊಟ್ಟಿಗೆಯಿಂದ ಹಿಂದಿರುಗಿದರು. ”ಎಂತದೇ ಒಳಬಾಯಲ್ಲಿ ಎಂತಾ ಯನಗೆ ಬೈತಾ ಇದ್ಯ’ ಎಂದರು ಎಂದು ಕೀಟಲೆ ಮಾಡಿದ್ದಕ್ಕೆ ಸೀತಕ್ಕ ಹುಸಿ ಮುನಿಸು ತೋರುತ್ತಾ ಪ್ರೀತಿಯಿಂದ ‘ಇಲ್ರೀ ಮಾರಾಯರೇ, . ಹೆಸರಿಗೆ ತಕ್ಕ ಹಾಂಗೆ ಶ್ರೀರಾಮಚಂದ್ರನಂಥ ಸಮಾಧಾನಿ ಯನ್ನ ಯಜಮಾನರು ಬೈಯದೇ ಬೇಕಾಗ್ತಿಲ್ಲೆ’ ಎಂದಳು.
ಹೊಗಳಿರೆ ಹೊಟ್ಟೆ ತುಂಬತಿಲ್ಯೇ ಸೀತೆ. ಬಡಸು ನೀನೂ ಯನ್ನ ಜೊತಿಗೆ ಊಟಾ ಮಾಡು… ಎಂದವರೇ ರಾಮ ಭಟ್ಟರು ನೀ ಸ್ನಾನಕ್ಕೆ ಹೋದಾಗ ಮಗಾ ಫೋನ್ ಮಾಡಿದ್ದಾ … ಎಂದು ಮೌನ ತಾಳಿದರು. ಸೀತೆಯ ಮೊಗದಲ್ಲಿ ಬೆಳದಿಂಗಳಂತಹ ನಗು. ‘ಐಯ್ ಆನೂ ಮಾತಾಡಕ್ಕಾಗಿತ್ತು ಎರಡು ದಿನಾತು ಅವನ ಧ್ವನಿ ಕೇಳಗಿದ್ದಯಾ, ಎಂತಾ ಸುದ್ದಿ ಹೇಳ್ದಾ? ಯಾವಾಗ ಬತ್ವಡಾ? ನೌಕರಿ ಬಿಟ್ಟಿಕ್ಕೆ ಬರಲ್ಲೊಪ್ಪಿದ್ನ?’ ಕಾತರದಿಂದ ಕೇಳಿದಳು . ಕಲಸಿದ ಹುಳಿಯನ್ನವನ್ನು ಮತ್ತೆ ಮತ್ತೆ ಕಲೆಸುತ್ತಾ ನಿಟ್ಟುಸಿರಿಟ್ಟವರು ಆರಾಮಿದ್ವಡೇ ಮೊಮ್ಮಗನನ್ನು ಮನೆ ಹತ್ರದ ನರ್ಸರಿಗೆ ಒಂದೂವರೆ ಲಕ್ಷ ಕೊಟ್ಟು ಸೇರಿಸಿದ್ವಡಾ. ಅಮ್ಮನ್ನ ಬಿಟ್ಟಿಕ್ಕೆ ಹೋಗತ್ನಿಲ್ಲೆ ಹೇಳಿ ಅಳತ್ನಡಾ. .ಮಾತು ನಿಲ್ಲಿಸಿದಾಗ ಊಟ ಮಾಡುವುದನ್ನು ನಿಲ್ಲಿಸಿದ ಸೀತೆ ‘ಅಂದ್ರೆ ಅಂವಾ ಸಧ್ಯಕ್ಕೆ ಬರತ್ನಿಲ್ಲೆ ಅಂದ ಹಾಂಗಾತನ್ರೀ?’
‘ಹಾಂಗೇ ಆತಲಿ ಸೊಸೆನೂ ನೌಕರಿ ಹುಡುಕ್ತಾ ಇದ್ದಡಾ, ನೀ ಊಟಾ ಸರಿ ಮಾಡು ಮಾರಾಯ್ತಿ, ಯನಗೆ ಇದ್ದಿದ್ದು ಒಂದೇ ಹೆಂಡ್ತಿ’ ಎಂದು ವಾತಾವರಣದ ಬಿಗುವನ್ನು ಕಡಿಮೆ ಮಾಡಲೆತ್ನಿಸಿದರು. ಐದು ವರ್ಷಕ್ಕೆ ವಾಪಸ್ ಬರ್ತಿ ಅಮ್ಮಾ ಹೇಳಿ ತುಂಬಕ್ಕಿ ತಟ್ಟಿಕ್ಕೆ ಹೋದಾ. . ಕಟ್ಟಿಗ್ಯಂಡ ಹೆಂಡ್ತಿಗೆ ಹಳ್ಳಿಗೆ ಬಪ್ಪ ಮನಸ್ಸಿಲ್ಲೆ ಅವನ್ನ ತಲೆ ತಿರುಗಿಸ್ತಕ್ಕು’ ಎಂದು ಸೊಸೆಯತ್ತ ಅಸಮಾಧಾನವನ್ನು ವರ್ಗಾಯಿಸಿದಳು.
ಸೀತೆ ನಮ್ಮ ಕುಮಾರ ಕಂಠೀರವಂಗೆ ಮದುವೆ ಆಗಕ್ಕಾದ್ರೆ ಇಪ್ಪತ್ತೆಂಟು ವರ್ಷ, ಈಗ ಮೂವತ್ತಮೂರು ವರ್ಷಾತು , ಇನ್ನೂ ಬುದ್ದಿ ಬಲಿತಿದ್ದಿಲ್ಲೆ ಅನಸ್ತನೇ ನಿಂಗೆ? ಅವಂಗೆ ಬರ ಮನಸ್ಸಿದ್ರೆ ಹೆಂಡಿನ ಒಪ್ಪಿಸ್ತಿದ್ದಾ ಅಲ್ದ?. ಎಂದ ಗಂಡನ ಮಾತಿಗೆ ಸೀತೆಯ ಕಣ್ಣಲ್ಲಿ ನೀರಾಡಿತು…
“ಜಮೀನು ಮನೆ ಮಾರಿಕ್ಕೆ ನಿಂಗಳೇ ಇಲ್ಲಿಗೆ ಬಂದ್ರೆ ಚೊಲೋ ಅಪಾರ್ಟಮೆಂಟ್ ತಗಳ್ಳಕ್ಕು. ನಿಂಗಕ್ಕಿಗೂ ಸಸಾರ, ಆಗ್ತು ತ್ವಾಟಾ, ಬೆಟ್ಟ, ಬ್ಯಾಣಾ ತಿರಗದಿರತಿಲ್ಲೆ, ಕೊಟ್ಟಿಗೆಲಿ ಸಗಣಿ ಬಾಚದಿರ್ತಿಲ್ಲೆ” ಎಂದು ಕಳೆದ ಸಲ ಬಂದಾಗ ಮಗ ಹೇಳಿದ್ದ. ತಾನು ಗಾಬರಿಬಿದ್ದು ‘ಇಷ್ಟು ಗನಾ ಜಮೀನು ಮನೆ ಕೈಗಳಕಂಡ್ರೆ ಮತ್ತೆ ತಗಂಬ್ಲಾಗ್ತನಾ ಮಗಾ, ಈ ಜಮೀನು ಮಾಡಲ್ಲೆ ನಿನ್ನ ಅಜ್ಜಾ ಅಪ್ಪಾ ಬೆವರಲ್ಲ ರಕ್ತನೇ ಬಸಿದು ದುಡದ್ದ, ಕನಸಿನಲ್ಲೂ ಜಮೀನು ಮಾರ ವಿಚಾರ ಮಾಡಡಾ’ ಎಂದಿರಲಿಲ್ಲವೇ? ಮಗ ‘ಕುಶಾಲಿಗೆ ಹೇಳ್ದಿ ಅಮ್ಮಾ’ ಎಂದು ತಲೆ ಸವರಿ ಹೋಗಿದ್ದು ನೆನಪಾಯಿತು.
ಮನಸ್ಸಿಗೆ ಕವಿದ ನಿರಾಸೆಯಿಂದ ಮಾತಾಡುವ ಹುಮ್ಮಸ್ಸು ಇಬ್ಬರಿಗೂ ಕಡಿಮೆ ಆಯಿತು. ಸೀತಕ್ಕ ಯಾಂತ್ರಿಕವಾಗಿ ಮನೆಯಿಂದಾಚೆ ಹೋಗಿ ಬೆಕ್ಕಿಗೆ ನಾಯಿಗೆ ಅನ್ನ ಹಾಕಿ ಬರುವುದರೊಳಗೆ ಭಟ್ಟರು ಮತ್ತೊಮ್ಮೆ ಹೋಗಿ ಕೊಟ್ಟಿಗೆಗೆ ಹೋಗಿ ಹುಲ್ಲು ಹಾಕಿ ಬಂದು ಜಗುಲಿಯಲ್ಲಿ ಹಾಸಿದ ಕಂಬಳಿಯ ಮೇಲೆ ‘ಶಿವಾ ಶಂಕರಾ’ ಎನ್ನುತ್ತ ಅಡ್ಡಾದರು. ಸಿತಕ್ಕ ಅಡುಗೆ ಮನೆಯನ್ನು ಶುಚಿಗೊಳಿಸಿ ಪಾತ್ರೆಗಳನ್ನೆಲ್ಲ ತೊಳೆದು ಮನೆವಾರ್ತೆ ಮುಗಿಸಿ ಒಳಜಗುಲಿಗೆ ಹೋಗಿ ಮಂಚದ ಮೇಲೆ ಉರುಳಿಕೊಂಡಾಗ ಸೊಂಟದಲ್ಲಿ ಚುಳ್ಳೆನ್ನುವ ನೋವು. ಮಲಗಿ ಒಂದೆರಡು ನಿಮಿಷದ ನಂತರ ನೋವು ತುಸುl ಶಮನ ಆದಂತೆನಿಸಿತು. ಆಯಾಸದಿಂದ ತುಸುವೇ ಮಂಪರು ಕವಿದಂತೆನಿಸಿದರೂ ಹಳೆಯ ನೆನಪುಗಳು ಒತ್ತರಿಸಿ ಬರಲಾರಂಭಿಸಿದವು. ..
‘ಸೀತೇ ಈ ಮನೆತನಾ ನಡೆಸ ಜವಾಬ್ದಾರಿ ಇನ್ನು ಮೇಲೆ ನಿಂದು ತಗ ಇದು ತಿಜೋರಿ ಬೀಗದಕೈ’… ಎಂದು ಮಾವ ತನಗೆ ಜವಾಬ್ದಾರಿ ವಹಿಸಿದಾಗ ಎಷ್ಟು ಆತಂಕವಿತ್ತು. ‘ಅಪ್ಪ ಮಗಾ ಇಬ್ರೇ ಇದ್ವಡಾ ಐದೆಕರೆ ಭಾಗಾಯತ ತೋಟಾ ಎಂಟೆಕರೆ ಗದ್ದೆ ಇದ್ದಡಾ. ಅಪ್ಪಂಗೆ ಹೆಂಡತಿ ಸತ್ತು ಆರೇಳು ವರ್ಷ ಆದ್ರೂ ಮಗಂಗೆ ತೊಂದ್ರೆ ಆದ್ರೆ ಹೇಳಿ ಮದುವೆನೇ ಆಜ್ನಿಲ್ಯಡಾ. ನಾಳೆ ನೋಡಲ್ಲೆ ಬರುವವ್ವು ಒಳ್ಳೆಯ ಗಟ್ಟಿ ಕುಳ’ ಎಂದು ತಿಳಿಸಿ ಹೇಳಿಯೆ ಅಪ್ಪ ಅಮ್ಮ ಮದುವೆಗೆ ಮೊದಲೇ ಜವಾಬ್ದಾರಿಯನ್ನು ಹೊರಿಸಿದ್ದರು. ನೋಡಿದೊಡನೆ ಸೌಮ್ಯ ಸ್ವಭಾವದವನೆಂಬಂತಿದ್ದ ಚೆಲುವ ರಾಮನನ್ನು ಮನಸಾರೆ ಒಪ್ಪಿಕೊಂಡುಬಿಟ್ಟಿದ್ದೆನಲ್ಲವೇ. ಸೊಸೆಯಾಗಿ ಈ ಮನೆ ತುಂಬಿದಾಗ ಹೆತ್ತವರಿಗೆ ಜವಾಬ್ದಾರಿ ಕಳೆದ ಸಂತಸವಾದರೆ, ಮಾವನಿಗೆ ಹೆಣ್ಣು ಜೀವವೊಂದು ಮನೆಗೆ ಬಂದ ಸಂಭ್ರಮ.
ಅಕ್ಕರೆ ಆಸ್ತೆಯಿಂದ ನೋಡಿಕೊಳ್ಳುವ ಗಂಡನೊಡನೆ ಕಾಯಾ ವಾಚಾ ಮನಸಾ ಬೆರೆತುಹೋಗಿದ್ದೆ ಸಂಮೃದ್ಧಿ, ಸ್ವಾತಂತ್ರ್ಯ ಎರಡೂ ಇತ್ತು. ಜೋಡಿ ಎತ್ತುಗಳಂತೆ ಸಂಸಾರದ ಬಂಡಿ ಎಳೆಯುವಾಗ ಎಂದೂ ದಣಿವು ಕಾಣಿಸಿದ್ದೇ ಇಲ್ಲ. ಮಗ ಸುಶಾಂತ ಹುಟ್ಟಿದಾಗ ಮಾವನಿಗೆ ಬಲು ಹಿಗ್ಗು. ಎಳೆಯ ಬೊಮ್ಮಟೆಯಂತಹ ಮಗುವನ್ನು ಮಡಿಲಿನಲ್ಲಿ ಮಲಗಿಸಿಕೊಂಡು ರಾಮ ಭಜನೆ ಹೇಳುತ್ತಿದ್ದರು. ಕೊಂಚ ದೊಡ್ಡವನಾದ ಮೇಲೆ ತಮಗಾದ ವಯಸ್ಸನ್ನು ಮರೆತು ಅವನನ್ನು ಉಪ್ಪು ಮೂಟೆ ಮಾಡುತ್ತಿದ್ದರು,ಹೆಗಲ ಮೇಲೆ ಹೊತ್ತುಕೊಂಡು ತಿರುಗುತ್ತಿದ್ದರು. ಮೊಮ್ಮಗನಿಗೆ ಮೂರು ವರ್ಷವಾದಾಗ ಎರಡು ದಿನ ಜ್ವರ ಬಂದ ನೆವದಲ್ಲೇ ಸಾವನ್ನಪ್ಪಿದಾಗ ಬದುಕು ಮತ್ತೊಂದು ಮಗ್ಗುಲಿಗೆ ಹೊರಳಿದಂತಾಗಿತ್ತು.
ಹತ್ತನೆಯ ತರಗತಿಯವರೆಗೂ ಊರಿನ ಸಮೀಪವೇ ಜಂಬಗೋಡು ಸ್ಕೂಲಿನಲ್ಲಿಯೇ ಓದಿದ ಸುಶಾಂತ ಅಪ್ಪನಂತೆ ಶಾಂತ ಸ್ವಭಾವದವನು. ಮಗನಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಅಪ್ಪ ಮಾಡಿಕೊಟ್ಟರೂ ಅಮ್ಮನಿಗೇ ಹೆಚ್ಚು ಅಂಟಿಕೊಂಡು ಬೆಳೆದ ಹುಡುಗ. ಕಲಿಕೆಯಲ್ಲಿ ಜಾಣ. ಪಿಯೂಸಿ ಕಲಿಕೆಗೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿಗೆ ಕಳಿಸಿದಾಗ ಅಮ್ಮನ ಕಾಳಜಿಯ ನೆಲೆ ತಪ್ಪಿ ಹಾಸ್ಟೆಲ್ಲಿಗೆ ಹೋಗಲು ಕಷ್ಟಪಟ್ಟಿದ್ದ. ಆದರೆ ಕ್ರಮೇಣ ಓದು ಬರಹದ ಆಸಕ್ತಿಯಿಂದ ಕ್ರಮೇಣ ಹಾಸ್ಟೆಲ್ಲಿನ ಕುಂದು ಕೊರತೆಯನ್ನೂ ಒಪ್ಪಿಕೊಂಡ. ಪಿಯೂಸಿ ಯಲ್ಲಿ ಒಳ್ಳೆಯ ಸ್ಕೋರ್ ಮಾಡಿ ಮಂಗಳೂರಿನಲ್ಲಿ ಇಂಜಿನಿಯರಿಂಗ್ ಓದಲು ಎಮ್. ಐ. ಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ ಇಂಜಿನಿಯರಿಂಗ್ ಸೇರಿಕೊಂಡ.
ಕ್ಯಾಂಪಸ್ನಲ್ಲಿ ಸತ್ಯಂ ಎನ್ನುವ ಸಾಫ್ಟವೇರ್ ಕಂಪನಿಯಲ್ಲಿ ಮಗನಿಗೆ ಉದ್ಯೋಗ ಸಿಕ್ಕಿದಾಗ ಒಂದೆಡೆ ಓದಿದ್ದಕ್ಕೆ ತಕ್ಕ ಪ್ರತಿಫಲ ದೊರಕಿತು ಎನ್ನುವ ಸಂತೋಷ ಒಂದೆಡೆ, ಇನ್ನೊಂದೆಡೆ ಪಿತ್ರಾರ್ಜಿತ ಆಸ್ತಿಯನ್ನು ವಯಸ್ಸಾದ ಮೇಲೆ ನಾವೇ ನೋಡಿಕೊಳ್ಳುವುದೆಂತು ಎಂಬ ಆತಂಕ ಶುರುವಾಗಿತ್ತು. ಊರಲ್ಲಿ ಉಳದ್ರೆ ಮಗಂಗೆ ಮದ್ವೆ ಆಗದು ಕಷ್ಟ ಅಲ್ದನೇ ? ಅಂವಾ ಒಂದಷ್ಟು ವರ್ಷಾ ದುಡಿಲಿ. ನಾವು ಹ್ಯಾಂಗೂ ಸಧ್ಯಕ್ಕೆ ಗಟ್ಟಿ ಇದ್ದಾಜಲಿ ಎಂದು ಗಂಡ ಸಮಾಧಾನ ಹೇಳಿದ್ದ.
ಮದುವೆ ಪ್ರಯತ್ನ ನಡೆದಾಗಲೇ ಗಂಡನ ಮಾತಿನ ಸತ್ಯಾಂಶ ಅರ್ಥವಾಯಿತು. ಆಯ್ಕೆಯ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೆ ಇರುವ ಈ ಕಾಲದಲ್ಲಿ ಹೆಣ್ಣು ಹೆತ್ತವರ ಮೊದಲನೆ ಪ್ರಶ್ನೆ ನಿಮ್ಮ ಮಗನಿಗೆ
ವರ್ಷಕ್ಕೆಷ್ಟು ಪ್ಯಾಕೇಜು! ಅದರ ನಂತರ, ಬೈಕಿದೆಯೆ? ಕಾರಿದೆಯೇ? ಸೈಟಿದೆಯೇ? ಸ್ವಂತ ಮನೆ ಇದೆಯೆ? ಉದ್ಯೋಗ ಸಿಕ್ಕ ಒಂದೆರಡು ವರ್ಷ ದಲ್ಲಿಯೇ ಇಷ್ಟೆಲ್ಲವನ್ನು ಹುಡುಗರು ಹೇಗೆ ಗಳಿಸಲು ಸಾಧ್ಯ ಎನ್ನುವ ಸಾಮಾನ್ಯ ಸಂಗತಿಯೂ ಹೆಣ್ಣು ಹೆತ್ತವರಿಗೆ ಅರ್ಥ ವಾಗುವುದಿಲ್ಲವೇ ಎನಿಸಲಾರಂಭಿಸಿತು. ದೂರದ ಸಂಬಂಧಿಗಳಾದ ಮಾದೇವ ಹೆಗಡೆಯವರು ಮಗಳ ಜಾತಕ ತಂದವರು ಇಂತಹ ಯಾವುದೇ ಪ್ರಶ್ನೆ ಕೇಳದೇ ‘ ನಿಂಗಳ ಬಗ್ಗೆ ಯನಗೆ ಯಾವಾಗಲೂ ಗೌರವ ಇದ್ದು. ಜಾತಕ ಕೂಡಿ ಬಂದು ಮಕ್ಕಳು ಒಪ್ಪಿದರೆ, ಋಣಾನುಬಂಧ ಇದ್ದರೆ ನೋಡನ’ ಎಂದು ಹೋಗಿದ್ದರು. ಅವರ ಮಗಳು ಸ್ವಾತಿಯನ್ನು ಮಗನೂ ಒಪ್ಪಿದಾಗ ಮದುವೆ ಹೂವೆತ್ತಿದಂತೆ ಸುಗಮವಾಗಿ ನಡೆದುಹೋಗಿತ್ತು. ‘ಚಾ ಮಾಡತ್ಯನೇ ಸೀತೆ?’ ರಾಮ ಭಟ್ಟರು ಮೆಲ್ಲನೆ ಕೈ ತಟ್ಟಿ ಎಬ್ಬಿಸಿದಾಗ ನೆನಪಿನ ಸಂಕೋಲೆಯಿಂದ ಬಿಡಿಸಿಕೊಂಡು ಮೇಲೆದ್ದೆ.
‘ರಾಜ್ಯದಾದ್ಯಂತ ಇನ್ನೂ ನಾಲ್ಕು ದಿನಾ ಭಾರಿ ಮಳೆ ಆಗ್ತಡಾ ರೆಡ್ ಅಲರ್ಟ ಘೋಷಣೆ ಮಾಡಿದ್ವಡಾ’ ರೇಡಿಯೋದ ಪ್ರದೇಶ ಸಮಾಚಾರಕ್ಕೆ ಕಿವಿ ಅನಿಸಿ ಕುಳಿತ ರಾಮ ಭಟ್ಟರು ಸೀತೆಗೆ ಹೇಳಿದಾಗ ‘ಅಂದ್ರೆ ಬೆಂಗಳೂರಲ್ಲೂ ಮಳೆನೇಯನ ಅಲ್ದ ‘ ಎಂದಳು ಮುಗ್ಧವಾಗಿ. ಭಟ್ಟರು ಮುಗುಳ್ನಗುತ್ತಾ ಬೆಂಗಳೂರು ನಮ್ಮ ರಾಜ್ಯದಲ್ಲೇ ಇದ್ದಲೇ…ಎಂದು ಛೇಡಿಸಿದರು.
‘ಯಾವ್ದಕ್ಕೂ ಒಂದ್ಸಲಾ ಮಗಂಗೆ ಫೋನ್ಮಾಡಿ’ ‘ನಿನ್ನ ಅರ್ಧ ಜೀಂವಾ ಅವನ ಹತ್ರನೇ ಇರ್ತು ತಗ ನೀನೇ ಮಾತಾಡು’ ಎನ್ನುತ್ತಾ ಡಯಲ್ ಮಾಡಿ ಮೊಬೈಲನ್ನು ಹೆಂಡತಿಯ ಕೈಗಿತ್ತರು ಭಟ್ಟರು. ರಿಂಗ್ ಆಗ್ತು ಎತ್ತತ್ನಿಲ್ಯಲಿ ಎನ್ನುತ್ತಾ ಪೇಚಾಡಿಕೊಂಡ ಹೆಂಡತಿಯನ್ನು ನೋಡುತ್ತಾ ‘ಸ್ನಾನ ಗೀನಕ್ಕೆ ಹೋಜ್ನನ ಸ್ವಲ್ಪ ಹೊತ್ತಿನ ಮ್ಯಾಲೆ ಮತ್ತೊಂದ್ಸಲಾ ಕಾಲ್ ಮಾಡಿರಾತು ಬಿಡು’ ಎಂದ ಭಟ್ಟರು ತೋಟದಿಂದ ತಂದ ಬಾಳೆಲೆಗಳನ್ನು ಹತ್ತಿ ಬಟ್ಟೆಯಿಂದ ಒರೆಸಿ ಸಾರ್ಗೆ ಮಾಡಲಾರಂಭಿದರು. ಅಷ್ಟರಲ್ಲಿ ಪೋನ್ ರಿಂಗ್ ಆಯಿತು. ನೋಡೆ ನಿನ್ನ ಮಗಾ ಫೋನ್ಮಾಡಿರವು. ತರಕಾರಿ ಕೊಚ್ಚುತ್ತಿದ್ದ ಸೀತೆ ಕೈ ಕೊಡವಿಕೊಳ್ಳುತ್ತಾ ಉಟ್ಟ ಸೀರೆಯ ಸೆರಗಿನಲ್ಲಿ ಕೈ ಒರೆಸಿಕೊಂಡು ಫೋನ್ ರಿಸೀವ್ ಮಾಡಿ ಹ್ಯಾಂಗಿದ್ರಾ ಮಗಾ? ಎಂದಳು.
‘ಅಮ್ಮಾ ಒಳ್ಳೆ ಫಜೀತಿ ಆಗೋಜು, ನಾಲ್ಕು ವರ್ಷದ ಹಿಂದಿನವರಿಗೂ ಯಂಗ ಇದ್ದ ಅಪಾರ್ಟಮೆಂಟ ಕೆರೆ ಇದ್ದ ಜಾಗ ಆಗಿತ್ತಡಾ, ಮೊನ್ನೆಯಿಂದ ಸತತ ಮಳೆ ಹೊಯ್ದಿದ್ರಿಂದ ಹೊಲಸ ನೀರೆಲ್ಲ ಹರಿದು ಅಪಾರ್ಟಮೆಂಟ್ ಅಂಡರಗ್ರೌಂಡನಲ್ಲೆಲ್ಲ ನೀರು ತುಂಬಿ ಜಲ ದಿಗ್ಭಂಧನಾ ಹಾಕಿದಂಗಾಜು. ರಸ್ತೆ ಮೇಲೂ ನೀರು. ಎರಡ ದಿನದಿಂದಾ ಯಾರೂ ಎಲ್ಲಿಗೂ ಹೋಗ ಹಾಂಗಿಲ್ಲೆ. ಎಂತದೂ ತರಂಗಿಲ್ಲೆ. ವಿಪತ್ತು ನಿರ್ವಹಣೆ ಮಾಡವ್ವು ರಕ್ಷಣಾ ಕಾರ್ಯಚರಣೆ ಮಾಡ್ತಾ ಇದ್ದ. ಇವತ್ತು ತೆಪ್ಪದ ಮೇಲೆ ಆರಾಮಿಲ್ಲದವ್ರನ್ನೆಲ್ಲ ಕರಕಂಡು ಹೋದ. . ಸುಶಾಂತ ಮಾತಾಡುತ್ತಿದ್ದ. ಅವನ ಮಾತನ್ನು ಅರ್ಧ ದಲ್ಲೇ ತಡೆದು ‘ಅಯ್ಯೊ ದೇವ್ರೆ, ಮನೆಲಿ ಕಿರಾಣಿ ಸಾಮಾನಿನಸಂಗ್ರಹ ಅದ್ರೂ ಇದ್ದನಾ? ಅಡುಗೆ ಮಾಡಕ್ಯಂಬಲ್ಲೆ ಆಗ್ತ? ಗಾಭರಿಯಿಂದ ಕೇಳಿದಳು ಸೀತೆ.’ ಎಂತಾ ಆತಡೆ?’ ಎನ್ನುತ್ತಾ ಆತಂಕದಿಂದ ಭಟ್ಟರು ಮಾಡುವ ಕೆಲಸ ನಿಲ್ಲಿಸಿ ಹೆಂಡತಿಯ ಬಳಿ ಬಂದು ನಿಂತರು. ಮೊಬೈಲಿನ ಸ್ಪಿಕರ್ ಬಟಣ್ ಒತ್ತಿದರು.
ಯಂಗಳದ್ದು ಸೆಕೆಂಡ್ ಫ್ಲೋರ್ ಆಗಿದ್ರಿಂದ ಸಮಸ್ಯೆ ಇಲ್ಲೆ. ತರಕಾರಿ ಹಣ್ಣು ಹಂಪಲು ಕಿರಾಣಿ ಸಾಮಾನು ಎಲ್ಲವೂ ಇದ್ದು. ಇಲ್ಲಿ ಇದ್ದವ್ವೆಲ್ಲ ಪರಸ್ಪರ ಸಹಾಯ ಮಾಡಿಕ್ಯತ್ತಾ ಇದ್ದ. ಆದ್ರೆ ಕರೆಂಟಿಲ್ಲೆ , ಮಳೆ ನೀರಿನ ಜೊತಿಗೆ ಎಲ್ಲಾ ಹೊಲಸೂ ಬರದ್ರಿಂದ ಹೇಸಿಗೆ ಅನ್ನಿಸ್ತಾ ಇದ್ದು. ಎಷ್ಟ ದುಡ್ಡಿದ್ರೂ ನಗರದ ಜೀವ್ನಾ ಇಷ್ಟೇಯಾ ಅನ್ನಿಸಿ ಹೋತು. ರಾತ್ರಿ ಕೂತು ಆನು ಸ್ವಾತಿ ನಿರ್ಣ ಯ ಮಾಡಿದ್ಯ. ನೌಕರಿ ಮಾಡಿದ್ದು ಸಾಕು. ಊರಿಗೇ ಬಂದು ನಿಂಗಳ ಜೊತಿಗೆ ಇದ್ದು ಎಂತಾರು ಸ್ಟಾರ್ಟಪ್ ಮಾಡನ, ಕೃಷಿನೂ ಮಾಡನ ಅಲ್ಲೆ ಮಗನ್ನ ಓದಿಸಿರಾತು… ಅಂದಕಂಡ್ಯ. ಹಾಂಗೇ ಮಾಡ್ಲನೇ ಅಮ್ಮಾ? ತಟ್ಟನೆ ಹೆಂಡತಿಯ ಕೈಯಿಂದ ಫೋನ್ ಕಿತ್ತುಕೊಂಡು ಅದು ಕೇಳುವ ವಿಷ್ಯನನಾ? ಬನ್ನಿ ಬನ್ನಿ ಅಪ್ಪಾ ಅಮ್ಮಾ ಜಮೀನು ಮನೆ ಎಲ್ಲವೂ ನಿಂಗಳ ಬರವಿಗೆ ಕಾಯ್ತಾ ಇದ್ದು.
‘ಥಾಂಕ್ಯೂ ಅಪ್ಪಾ’ ಅತ್ತಲಿಂದ ಒಂದು ಬಿಕ್ಕಳಿಕೆ ಜೊತೆ ಮಾತು ತಡೆ ತಡೆದು ಬಂತು. ಸೀತೆ ದೇವರ ಮುಂದೆ ಕೈಮುಗಿದು ಹನಿಗಣ್ಣಾಗಿ ನಿಂತಿದ್ದನ್ನು ಕಡೆಗಣ್ಣಿನಿಂದಲೇ ನೋಡುತ್ತಾ ನೀನು ಅಮ್ಮನ ಮಗನೇಯೋ ಮಾರಾಯಾ! ಎಂದರು ಭಟ್ಟರು ಕೀಟಲೆಯ ದನಿಯಲ್ಲಿ. .
- ಮಾಲತಿ ಹೆಗಡೆ