ದಿಗಂತಕ್ಕೆ ಸರಿದ ಎಂ.ಟಿ.ವಾಸುದೇವನ್ ನಾಯರ್

ಮಲಯಾಳ ಸಣ್ಣಕತೆಗಳು ಕಾದಂಬರಿಗಳು, ಚಿತ್ರಕತೆಗಳಿಗೆ ನವಚೈತನ್ಯ ನೀಡಿದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ಎಂಟಿ ವಾಸುದೇವನ್ ನಾಯರ್ ತಮ್ಮ ಇಹಲೋಕದ ಯಾತ್ರೆ ಮುಗಿಸಿದರು.(15.7.1933 – 25.12.2024) ಕೇರಳದ ಕೋಷಿಕ್ಕೋಡಿನಲ್ಲಿ ನೆಲೆಗೊಂಡಿದ್ದ ಅವರು ತಮ್ಮ ಸಾಹಿತ್ಯ ವ್ಯವಸಾಯದೊಂದಿಗೆ ಮಲಯಾಳ ಚಲನಚಿತ್ರ ವಲಯಕ್ಕೂ ಪ್ರವೇಶಿಸಿ ಪ್ರಸಿದ್ಧರಾದರು. ಕಳೆದ ಶತಕದ ಉತ್ತರಾರ್ಧದಲ್ಲಿ ಚಿತ್ರರಂಗ ಪ್ರವೇಶಮಾಡಿದ ಕೇರಳದ ಇಬ್ಬರು ಪ್ರಮುಖ ಸಾಹಿತಿಗಳಲ್ಲಿ ಎಂಟಿವಿ ಒಬ್ಬರು. ಇನ್ನೊಬ್ಬರು ಒಎನ್ವಿ (ಒ ಎನ್ ವಿ ಕುರುಪ್). ಎಂಟಿವಿ ಯವರು ತಮ್ಮ ಕತೆ, ಕಾದಂಬರಿಗಳಿಗೆ ತಾವೇ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿ ರಾಷ್ಟ್ರಮಟ್ಟದ ಅದೆಷ್ಟೋ ಪ್ರಶಸ್ತಿಗಳಿಗೆ ಭಾಜನರಾದರು. ಒಎನ್ ವಿಯವರು ಚಲನಚಿತ್ರಗಳಿಗೆ ಹಾಡುಗಳನ್ನು ಬರೆದು ಪ್ರಸಿದ್ಧರಾದರು.

ಹಾಡುಗಳಿಗೆ ಸಾಹಿತ್ಯದ ಗಟ್ಟಿಲೇಪ ಹಚ್ಚಿದ ಒಎನ್ ವಿ, ಚಿತ್ರಕತೆಗಳಿಗೆ ಸಾಹಿತ್ಯವನ್ನೇ ಧಾರೆಯೆರೆದ ಎಂಟಿವಿ. ಒಟ್ಟಿನಲ್ಲಿ ಮಲಯಾಳದ ಚಲನಚಿತ್ರಗಳ ಗತಿಯನ್ನೇ ಬದಲಾಯಿಸಿದವರು ಇವರಿಬ್ಬರು. ಎಂ.ಟಿ.ವಾಸುದೇವನ್ ನಾಯರ್ ಏಳು ಚಲನಚುತ್ರಗಳನ್ನು ನಿರ್ದೇಶಿಸಿದ್ದರು. ಐವತ್ನಾಲ್ಕು ಚಿತ್ರಗಳಿಗೆ ಚಿತ್ರಕತೆ ರಚಿಸಿದ್ದರು. ಪ್ರತಿಯೊಂದು ಚಿತ್ರವೂ ಅದರದ್ದೇ ಆದ ಸಾಹಿತ್ಯಕ ಹಾಗೂ ಕಲಾತ್ಮಕ ಮೌಲ್ಯಗಳಿಂದ ಯಶಸ್ಸು ಸಾಧಿಸಿದ್ದವು.
ಸುಮಾರು ಅದೇ ಹೊತ್ತಿಗೆ ಕರ್ನಾಟಕದ ಪಿ.ಲಂಕೇಶ್ ಹಾಗೂ ಚಂದ್ರಶೇಖರ ಕಂಬಾರರು ಕನ್ನಡ ಚಲನ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೊಸತರದ ಪ್ರಯೋಗಗಳನ್ನು ಮಾಡಿ ಜನಪ್ರಿಯರಾದರು. ಆದರೆ ಎಂಟಿವಿ ಹಾಗೂ ಒಎನ್ ವಿ ಯವರು ಮಲಯಾಳ ಚಲನ ಚಿತ್ರರಂಗದ ಚಿಂತನೆಯನ್ನೇ ಬದಲಾಯಿಸಿದಂತೆ ಲಂಕೇಶ, ಕಂಬಾರರು ಕನ್ನಡ ಚಿತ್ರರಂಗದಲ್ಲಿ ಪ್ರಭಾವ ಬೀರಲಿಲ್ಲ.

ಸಾಹಿತಿಗಳು ಪ್ರಾಯೋಗಿಕ ರಂಗಕ್ಕೆ ಧುಮುಕುವಾಗ ಅರೆಮನಸ್ಸಿನ ಪ್ರವೇಶ ಯಾವತ್ತೂ ಪರಿಣಾಮಕಾರಿಯಾಗದು ಎಂಬುದಕ್ಕೆ ನಮ್ಮ ಸಾಹಿತಿಗಳ ಚಿತ್ರರಂಗ ಪ್ರವೇಶ ಉತ್ತಮ ನಿದರ್ಶನ. ನಿರ್ಮಾಲ್ಯಮ್, ಕಡವ್, ಒರು ಚೆರು ಪುಂಜಿರಿ, ಒರು ವಡಕ್ಕನ್ ವೀರಗಾಥ, ಸದಯಂ ಮುಂತಾದ ಚಲನ ಚಿತ್ರಗಳು ಎಂ.ಟಿ.ಯವರ ಹೆಸರನ್ನು ಅಮರಗೊಳಿಸಿವೆ. ‘ಗೋಪುರ ನಡೆಯಿಲ್’ ಎಂಬುದು ಅವರು ಬರೆದ ಏಕೈಕ ನಾಟಕ.

ಸದಾ ಒಂದು ಬೀಡಿಯನ್ನು ಬಾಯಲ್ಲಿಟ್ಟು ನಿಧಾನವಾಗಿ -ನಮ್ಮ ಕುವೆಂಪು ಅವರಂತೆ- ಮಾತಿಗಿಳಿಯುವ ಎಂಟಿಯವರು ಜನಸಾಮಾನ್ಯರ ಸಾಮಾಜಿಕ ಬದುಕಿನ ಬಗ್ಗೆ ವಿಶೇಷ ಕಾಳಜಿ ಉಳ್ಳವರಾಗಿದ್ದರು. ಯುವ ತಲೆಮಾರಿನ ಸಾಹಿತಿಗಳನ್ನು ಹುಡುಕಿ ಅವರಿಗೆ ತಾವು ಸಂಪಾದಕರಾಗಿದ್ದ ‘ಮಾತೃಭೂಮಿ’ (ಪ್ರಸಿದ್ಧ ಮಲಯಾಳಂ ದಿನಪತ್ರಿಕೆ) ಯಲ್ಲಿ ಅವಕಾಶಗಳನ್ನು ಕೊಡುತ್ತಿದ್ದರು. ರಾಜಕೀಯ ಚಿಂತನೆಗಳನ್ನು ಬಹಿರಂಗವಾಗಿ ಒರೆಗೆ ಹಚ್ಚಿ ಗದ್ದಲವೆಬ್ಬಿಸುವ ಜಾಯಮಾನ ಅವರದಲ್ಲ.

ಇತ್ತ ಎಸ್ ಎಲ್ ಭೈರಪ್ಪ ‘ಮಹಾಭಾರತ’ ವನ್ನು ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಅಜರಾಮರವಾಗಿಸುವ ‘ಪರ್ವ’ ಬರೆದರೆ ಅತ್ತ ಎಂಟಿ ವಾಸುದೇವನ್ ನಾಯರ್ ‘ರಂಡಾಮೂಷಂ’ನ್ನು ಬರೆದು ಮಹಾಭಾರತದ ಭೀಮಸೇನನನ್ನು ಭಿನ್ನ ದೃಷ್ಟಿಯಲ್ಲಿ ಹೊರತಂದರು.ಕರ್ನಾಟಕದ ಸಾಹಿತಿಗಳಂತೆಯೇ ಮಲಯಾಳದ ಸಾಹಿತಿಗಳು ಕೂಡ ಪುರಾಣದ ಮೂಲಧಾತುವಿನೊಂದಿಗೆ ಸಂಸರ್ಗ ಬೆಳೆಸಿ ತಮ್ಮತನವನ್ನು ಮರೆದಿದ್ದಾರೆ ಅಂಥವರಲ್ಲಿ ಮಲಯಾಳದ ಪ್ರಸಿದ್ಧ ಸಾಹಿತಿ ಎಂ ಟಿ ವಾಸುದೇವನ್ ನಾಯರ್ ಒಬ್ಬರು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter