ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಯುವಕ ಕುವೆಂಪು!! ಗಾಂಧೀಜಿ ದರ್ಶನ!!

ರಾಷ್ಟ್ರಕವಿ ಕುವೆಂಪು ಅವರು ಯುವಕರಾಗಿದ್ದಾಗಳೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಗಾಂಧೀಜಿಯವರ ಗಾಢವಾದ ಪ್ರಭಾವ ಅವರ ಮೇಲಾಗಿತ್ತು. 1924ರ ಡಿಸೆಂಬರ್ ತಿಂಗಳ ಕೊನೆಗೆ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಪಾಲ್ಗೊಂಡು ಗಾಂಧೀಜಿಯವರ ದರ್ಶನವನ್ನು ಪಡೆದು ಧನ್ಯರಾದ ಆ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದವರು ಯುವಕ ಪುಟ್ಟಪ್ಪ ಅರ್ಥಾತ್ ಕುವೆಂಪು. ಈಗ ಈ ವಿದ್ಯಮಾನಕ್ಕೆ ಶತಮಾನದ ಸಂಭ್ರಮ. ಆ ಹಿನ್ನೆಲೆಯಲ್ಲಿ ಕಿರು ಲೇಖನ.

ದೇಶದ ಸ್ವಾತಂತ್ರ್ಯ ಹೋರಾಟ ಇಪ್ಪತ್ತನೆಯ ಶತಮಾನದ ಮಹಾ ಕಥನ. ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಆ ಸಂಗ್ರಾಮಕ್ಕೆ ದೇಶಕ್ಕೆ ದೇಶವೇ ಅವರ ಬೆಂಬಲಕ್ಕೆ ನಿಂತಿತು. ವಿದ್ಯಾರ್ಥಿಗಳು, ಯುವಕರು ತಮ್ಮ ಭವಿಷ್ಯದ ಬಗೆಗೆ ಚಿಂತಿಸದೆ ಶಾಲೆ, ಕಾಲೇಜುಗಳಿಗೆ ಬೆನ್ನು ಹಾಕಿ ಸ್ವಾತಂತ್ರ್ಯ ಸಮರಕ್ಕೆ ಧುಮುಕಿದರು.ಯುವಕ ಪುಟ್ಟಪ್ಪ ಸಹ ಈ ಮಹಾ ಸಂಗ್ರಾಮದ ಭಾಗವಾಗಿದ್ದರು.

ಕುವೆಂಪು ಅವರು ತೀರ್ಥಹಳ್ಳಿಯಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 1920ರ ಸುಮಾರಿಗೆ ಮೈಸೂರಿಗೆ ಬಂದರು. ಆಗ ತಾನೇ ಭರತ ಖಂಡದ ಎಲ್ಲೆಡೆ ಸ್ವಾತಂತ್ರ್ಯ ಸಂಗ್ರಾಮದ ಬಿಸುಪು
ಜೋರಾಗಿತ್ತು.ಜನ ಸಾಮಾನ್ಯರಲ್ಲೂ ರಾಜಕೀಯ ಪ್ರಜ್ಞೆ ಮೂಡುತ್ತಿದ ಸಮಯವದು. ಕುವೆಂಪು ಅವರು ಆ ದಿನಗಳನ್ನು ಹೀಗೆ ನೆನಪು ಮಾಡಿಕೊಂಡಿದ್ದಾರೆ.

ಹೈಸ್ಕೂಲಿನ ಮೊದಲನೆಯ ವರ್ಷದ ವಿದ್ಯಾರ್ಥಿಯಾಗಿದ್ದಾಗಲೆ, 1920ರಲ್ಲಿ, ಮಹಾತ್ಮ ಗಾಂಧೀಜಿ ಅಸಹಕಾರ ಚಳವಳಿ ಘೋಷಿಸಿದ ಸುಮಾರಿನಲ್ಲಿ, ಬಾಲಗಂಗಾಧರ ತಿಲಕರು ತೀರಿಕೊಂಡು ರಾಷ್ಟ್ರದಲ್ಲಿ ಎಲ್ಲೆಲ್ಲಿಯೂ ಹರತಾಳ ಸಭೆ ಮೆರವಣಿಗೆ ವಿದೇಶೀ ವಸ್ತ್ರದಹನ ಮೊದಲಾದವುಗಳ ರೂಪದಲ್ಲಿ ದೇಶಭಕ್ತಿಯ ಜ್ವಾಲಾಮುಖಿ ಆಸ್ಫೋಟಿಸಿ ಬ್ರಿಟಿಷರ ವಿರುದ್ಧವಾದ ವೈರಭಾವದ ಲಾವಾರಸ ಪ್ರವಹಿಸಿತು. ಕ್ರಾಂತಿ ಸಮುದ್ರದಲ್ಲಿ ಶಾಂತಿದ್ವೀಪದಂತಿದ್ದ ಮೈಸೂರು ಸಂಸ್ಥಾನಕ್ಕೂ ಆ ಅಗ್ನಿಹೋತದಿಂದ ಹೊಮ್ಮಿದ ಕಿರುದೊರೆಗಳು ಪ್ರವೇಶಿಸದೆ ಬಿಡಲಿಲ್ಲ. ಕ್ರೈಸ್ತ ಸಂಸ್ಥೆಯಾಗಿದ್ದು ಬ್ರಿಟಿಷರ ಆಶ್ರಯದ ರಕ್ಷೆಯಲ್ಲಿ ಅವರ ಪರವಾಗಿದ್ದ ವೆಸ್ಲಿಯನ್ ಮಿಷನ್ ಸಂಸ್ಥೆಯ ಹೈಸ್ಕೂಲಿನ ವಿದ್ಯಾರ್ಥಿಗಳು ಮಾತ್ರ ತಮ್ಮ ಭಾರತೀಯತೆಯನ್ನು ಬಿಟ್ಟುಕೊಡಲಿಲ್ಲ ಎಂಬುದನ್ನು ನೆನಪು ಮಾಡಿಕೊಳ್ಳುತ್ತಲೇ ಸ್ವಾತಂತ್ರ್ಯ ಹೋರಾಟದಲ್ಲಿ ತಾವು ಸಹ ಭಾಗಿಯಾದ ಬಗೆಯನ್ನು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.

ಹಾದಿ ಬೀದಿಗಳಲ್ಲಿ ದಿನವಹಿ ಸ್ವಾತಂತ್ರ್ಯದ ಸೊಲ್ಲು ಕೇಳಿಬರುತ್ತಿದ ಕಾಲವದು.ಒಮ್ಮೆ ಯುವಕ ಪುಟ್ಟಪ್ಪ ಮೈಸೂರಿನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಕಾಂಗ್ರೆಸ್ ನಾಯಕರೊಬ್ಬರ ಭಾಷಣವನ್ನು ಕೇಳಿದ್ದಲ್ಲದೇ ವಿದೇಶಿ ವಸ್ತ್ರ ದಹನಕ್ಕೆಆ ನಾಯಕ ಕರೆ ನೀಡಿದಾಗ ಕುವೆಂಪು ತಮ್ಮ ಉಳಿತಾಯದ ಹಣದಲ್ಲಿ ಖರೀದಿ ಮಾಡಿದ್ದ ಟೋಪಿ ಹಾಗೂ ಕೋಟನ್ನು ಬೆಂಕಿಗೆ ಎಸೆದು ಇನ್ನು ಮುಂದೆ ಗಾಂಧಿ ಟೋಪಿ ಮತ್ತು ಖಾದಿ ಬಟ್ಟೆಯನ್ನು ತೊಡುವ ವ್ರತ ತೊಟ್ಟರಂತೆ.ಆ ಘಟನೆಯನ್ನು ಅವರು ನೆನಪಿನ ದೋಣಿಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ,

ದೇಶಭಕ್ತಿಯ ಆವೇಶದ ಸುಳಿಗೆ ಸಿಕ್ಕಿ ಅನೈಚ್ಛಿಕವಾಗಿಯೋ, ಐಚ್ಛಿಕವಾಗಿಯೋ ಅಥವಾ ಇತರರು ದೇಶದ್ರೋಹಿ ಎಂದು ಕರೆದು ಮೂದಲಿಸಿ ಅವಮಾನ ವಾಗುತ್ತದೆಂದೋ ನಾನು ನನ್ನ ತಲೆಯಲ್ಲಿದ್ದ, ಹೊಸದಾಗಿ ಕೊಂಡಿದ್ದ, ಫೆಲ್ಟ್ ಕ್ಯಾಪನ್ನು ಎಸೆದೇ ಬಿಟ್ಟೆ! ಆದರೆ ಒಡನೆಯೆ ಮನಸ್ಸಿಗೆ ಸಂಕಟವಾಯಿಯಿತು, ಮನೆಯವರು ನಿರ್ವಾಹವಿಲ್ಲದೆ ಕಳಿಸಿದ್ದ ಸುಮಿತ ಪ್ರಮಾಣದ ತಿಂಗಳ ಖರ್ಚಿನ ಹಣದಲ್ಲಿ ಕೊಂಡಿದ್ದ ಟೋಪಿಯನ್ನು ಅನ್ಯಾಯವಾಗಿ ಬೆಂಕಿಗೆ ಹಾಕಿದೆನಲ್ಲಾ ಎಂದು. ಆದರೆ ಏನು ಮಾಡುವುದು? ಗಾಂಧಿಯವರು ಕೊಟ್ಟ ಕರೆಯಂತೆ ‘ವಿದೇಶೀ ವಸ್ತ್ರದಹನ’ವೂ ದೇಶಭಕ್ತಿಯ ಒಂದು ಪ್ರಧಾನ ಲಕ್ಷಣವೆಂದು ಭಾವಿಸಿ ಅನೇಕ ಮಿತ್ರರು ತಮ್ಮ ವಸನಗಳನ್ನೂ, ಕಡೆಗೆ ವಿದೇಶೀಯವೆಂದು ಕಂಡುಬಂದ ಪಾದುಕೆಗಳನ್ನೂ (ಬೂಟ್ಸ್) ಎಸೆದಿರುವಾಗ ನಾನು ‘ಕರಿಕುರಿ’ ಎನ್ನಿಸಿಕೊಳ್ಳಲಾಗುತ್ತದೆಯೆ?

ಟೋಪಿ ಹೋದುದಕ್ಕೇ ಆತಂಕಗೊಂಡು ನಿಂತಿದ್ದ ನನ್ನನ್ನು ಕೆಲವು ಮಿತ್ರರು ಕೋಟನ್ನೂ ಎಸೆಯುವಂತೆ ಹೇಳಿದರು. ‘ಆಜ್ಞಾಪಿಸಿದರು’ ಎಂದರೂ ತಪ್ಪಾಗುವುದಿಲ್ಲ. ಹಾಗೆ ಆಜ್ಞಾಪಿಸಿದವರಲ್ಲಿ ಕೆಲವರಾದರೂ ಶ್ರೀಮಂತವರ್ಗದವರಾಗಿ ಮನೆಯಲ್ಲಿ ನಾಲ್ಕು ಅಥವಾ ಐದು ವಿದೇಶೀಬಟ್ಟೆಯ ಬೆಲೆಯುಳ್ಳ ಕೋಟುಗಳನ್ನು ಪಡೆದಿದ್ದವರೇ! ಅವರು ಈಗ ಹಾಕಿಕೊಂಡಿದ್ದ ಕೋಟನ್ನು ಬೆಂಕಿಗೆ ಎಸೆದರೂ ನಾಳೆ ಸ್ಕೂಲಿಗೆ ಹಾಕಿಕೊಂಡು ಹೋಗಲು ಕೋಟುಗಳಿದ್ದೇ ಇರುತ್ತವೆ ಎಂಬ ಧೈರ್ಯ. ಆದರೆ ನನಗೆ ಸ್ಕೂಲಿಗೆ ಹಾಕಿಕೊಂಡು ಹೋಗುವಷ್ಟರ ಮಟ್ಟಿನ ಕೋಟು ಅದೊಂದೇ. ತಮ್ಮ ಬಳಿ ಇದ್ದ ಒಂದೇ ಒಂದು ಕೋಟನ್ನು ಕಳೆದು ಕೊಂಡು ತುಸು ಬೇಸರ ಪಟ್ಟರೂ ಆ ಘಟನೆ ಅವರಲ್ಲಿ ದೇಶ ಪ್ರೇಮ ಮೊಳೆಯಲು ಕಾರಣವಾಯಿತು. ಅದೇ ಹೊತ್ತಿಗೆ ಬಡವರ ತ್ಯಾಗ, ಉಳ್ಳವರ ಬೂಟಾಟಿಕೆಯ ದರ್ಶನ ಸಹ ಅವರಿಗಾಯಿತು.

ಬೆಳಗಾವಿಗೆ ದಂಡಯಾತ್ರೆ

ಯುವಕ ಕುವೆಂಪು ಬೆಳಗಾವಿಗೆ ಪ್ರಯಾಣಿಸಿದ ಆ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ,
ನಾನು ಮೊದಲನೆ ವರ್ಷದ ಬಿ.ಎ. ತರಗತಿಯಲ್ಲಿ ಓದುತ್ತಿದ್ದಾಗ 1924ನೆಯ ಡಿಸೆಂಬರ್ ತಿಂಗಳ ಉತ್ತರಾರ್ಧದಲ್ಲಿ ಬೆಳಗಾಂನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆಯುತ್ತವೆಂದು ಗೊತ್ತಾಯಿತು. ಶಸ್ತ್ರ ಚಿಕಿತ್ಸೆಯ ಅನಂತರ ಆಗತಾನೆ ಸೆರೆಮನೆಯಿಂದ ಬಿಡುಗಡೆಯಾಗಿದ್ದ ಮಹಾತ್ಮಾಗಾಂಧಿಯವರು ಆ ಅಧಿವೇಶನದ ಅಧ್ಯಕ್ಷತೆ ವಹಿಸುತ್ತಾರೆ ಎಂಬ ವಾರ್ತೆ ನಮ್ಮನ್ನೆಲ್ಲ ಆಕರ್ಷಿಸಿತು. ಭರತಖಂಡದ ಬದುಕನ್ನೆಲ್ಲ ತುಂಬಿಕೊಂಡಿದ್ದರು. ಗಾಂಧೀಜಿ. ಅವರಿಗೆ ಶಿಕ್ಷೆಯಾಗಿದ್ದು, ಶಸ್ತ್ರ ಚಿಕಿತ್ಸೆಯಾಗಿದ್ದು ಸೆರೆಯ ಅವಧಿ ಮುಗಿಯುವ ಮುನ್ನವೆ ಅವರು ಬಿಡುಗಡೆ ಹೊಂದಿ ಹೊರಗೆ ಬಂದದ್ದು ಎಲ್ಲವೂ ಪತ್ರಿಕೆಗಳಲ್ಲಿ ದಿನವೂ ಅನೇಕ ತಿಂಗಳುಗಳಿಂದ ದಪ್ಪಕ್ಷರದ ಮೊದಲನೆಯ ಪುಟದ ವಾರ್ತೆ ಗಳಾಗಿ, ಜನತೆಯ ಹೃದಯ ಸಮುದ್ರ ಕಡೆದಂತಾಗಿ, ದೇಶದ ಬದುಕು ವಿಕ್ಷುಬ್ಧವಾಗಿತ್ತು. ಕಾಂಗ್ರೆಸ್ ಅಧಿವೇಶನದ ಸಮಯಕ್ಕೆ ಸರಿಯಾಗಿ ಕ್ರಿಸ್‌ಮಸ್‌ ರಜವೂ ಪ್ರಾರಂಭವಾಗುತಿತ್ತಾದ್ದರಿಂದ ನಾವು ಕೆಲವರು ವಿದ್ಯಾರ್ಥಿ ಮಿತ್ರರು ಬೆಳಗಾವಿಗೆ ಹೋಗಲು ನಿಶ್ಚಯಿಸಿದೆವು.

ರೈಲು ಪ್ರಯಾಣವೂ ಒಂದು ಸಾಹಸವೆ ಆಗಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸುವ ಕಾಂಗ್ರೆಸ್ ಅಧಿವೇಶನಕ್ಕೆ ಹೊರಟ ಅಕ್ಷರಶಃ ಲಕ್ಷಾಂತರ ಜನರ ನೂಕುನುಗ್ಗಲು ಉಸಿರುಕಟ್ಟಿಸುತ್ತಿತ್ತು. ಚಳಿಗಾಲವಾಗಿದ್ದರೂ ಕಾಂಪಾರ್ಟುಮೆಂಟಿನ ಒಳಗೆ ಕುದಿಯುವ ಸೆಕೆ! ಪ್ರತಿಯೊಂದು ನಿಲ್ದಾಣದಲ್ಲಿಯೂ ಆಗಲೆ ಕಿಕ್ಕಿರಿದಿದ್ದ ಗಾಡಿಗೆ ಹತ್ತಲು ಪ್ರಯತ್ನಿಸುವವರ ಮತ್ತು ಮೊದಲೇ ಹತ್ತಿ ನಿಲ್ಲಲು ಕೂಡ ಜಾಗವಿಲ್ಲದೆ ಜೋತು ಬಿದ್ದವರ ನಡುವೆ ಜಗಳ, ಬೈಗುಳ, ಗುದ್ದಾಟ, ಆ ಕಿಕ್ಕಿರಿಕೆ, ನುಗ್ಗಾಟ, ಕೆಟ್ಟ ಉಸಿರಿನ ಬೆವರಿನ ಕೊಳಕು ವಾಸನೆ ಇವುಗಳನ್ನು ತಡೆಯಲಾರದೆ, ರೈಲನ್ನು ಹೊರಡಲು ಬಿಡದಂತೆ ಸರಪಣಿ ಎಳೆದದ್ದೂ ಎಳೆದದ್ದೆ ! ನಮ್ಮ ಗುಂಪಿನವರೆ ಮೂರು ನಾಲ್ಕು ಸಲ ಹಾಗ ಮಾಡಬೇಕಾಯ್ತು. ಕಡೆಗೆ ಗಾರ್ಡು-ಸ್ಟೇಷನ್ ಮಾಸ್ಟರು ಬಂದು ಕೇಳಿಕೊಂಡ ಮೇಲೆಯ, ದಾಕ್ಷಿಣ್ಯಕ್ಕೆ, ಸರಪಣಿ ಎಳೆಯುವುದನ್ನು ನಿಲ್ಲಿಸಿದೆವು. ಹೂಜಿಗಳಲ್ಲಿ ರೈಲು ತಂಬಿಗೆಗಳಲ್ಲಿ ಇದ್ದ ನೀರೆಲ್ಲ ಖಾಲಿಯಾಗಿ ದಗೆಗೆ ಮೂರ್ಛೆ ಹೋಗುವುದೊಂದು ಬಾಕಿ! ಅಂತೂ ಹೋಗಿ ಇಳಿದೆವು ಬೆಳಗಾವಿ ಸ್ಟೇಷನ್ನಿನಲ್ಲಿ” ಗಾಂಧೀಜಿಯವರನ್ನು ನೋಡುವ ತವಕ, ಈ ನಡುವೆ ತಮ್ಮ ಪ್ರವಾಸ ಬಹು ಪ್ರಾಯಾಸಕರವಾದದನ್ನು ಕುವೆಂಪುರವರು ತೋಡಿ ಕೊಂಡಿದ್ದಾರೆ.

ಅಧಿವೇಶನದ ಜಾಗಕ್ಕೆ ಸ್ವಲ್ಪ ದೂರವಾಗಿದ್ದ ಬೆಳಗಾವಿಯ ಊರಿನಲ್ಲಿ ಮಿತ್ರರೊಬ್ಬರ ಬಂಧುಗಳ ಮನೆಯಲ್ಲಿಯಲ್ಲಿ ಉಳಿದುಕೊಳ್ಳಲು ಏರ್ಪಾಡಾಗಿತ್ತು. ಉತ್ತರ ಕರ್ನಾಟಕದ ಸಂಸ್ಕೃತಿ, ಅಲ್ಲಿನ ಊಟ ಉಪಚಾರಗಳ ಕುರಿತು ಕುವೆಂಪುರವರು ಸ್ವಾರಸ್ಯ ಪೂರ್ಣವಾಗಿ ಹೀಗೆ ಬರೆದುಕೊಂಡಿದ್ದಾರೆ,

ಭೀಮಾಭಿರುಚಿ

ಅಧಿವೇಶನದ ಭಾಷಣ ವೇದಿಕೆಯ ಸುವಿಸ್ತ್ರತವಾದ ಪ್ರಧಾನ ಮಂಟಪದಷ್ಟೆ ಭವ್ಯವಾಗಿತ್ತು ಆ ಬೃಹತ್ ಭೋಜನ ಶಾಲೆ. ನನಗಂತೂ ಆ ಊಟ ತಿಂಡಿಯ ಔತಣವನ್ನು ಕಂಡು ಬೆರಗು ಬಡಿದಿತ್ತು. ಕೇಳಿದಷ್ಟು ಸಿಹಿ, ಕೇಳಿದಷ್ಟು ಹಾಲು, ತುಪ್ಪ, ಚಪಾತಿ, ಶ್ರೀಖಂಡ ಮತ್ತೂ ಏನೇನೊ ನಾನಾ ಪ್ರಾಂತಗಳ ತರತರದ ಭಕ್ಷ್ಯಭೋಜ್ಯಗಳು: ನನ್ನ ಗ್ರಾಮೀಣತೆ ತತ್ತರಿಸಿತ್ತು! ನಾನಾ ಪ್ರಾಂತಗಳ ನಾನಾ ರೀತಿಯ ಜನರ ಪರಿಚಯ ಅಧಿವೇಶನದ ಮುಖ್ಯಸ್ಥಾನದಲ್ಲಿ ಆಗುವುದಕ್ಕಿಂತಲೂ ಅತಿಶಯವಾಗಿ ಈ ಭೋಜನಶಾಲೆಯಲ್ಲಿ ನಮಗೆ ಅತಿನಿಕಟವಾಗಿ ಲಭಿಸಿತು. ನಮ್ಮ ಎದುರು ಪಂಕ್ತಿಯಲ್ಲಿಯೆ ಕುಳಿತು ಉಣ್ಣುತ್ತಿದ್ದ ಉತ್ತರದ ಕಡೆಯ ಜನರ ಭೀಮಾಕಾರ, ಭೀಮೋದರ, ಭೀಮಾಭಿರುಚಿ, ಭೋಜನದಲ್ಲಿ ಅವರಿಗಿದ್ದ ಭೀಮೋತ್ಸಾಹ ಇವುಗಳನ್ನೆಲ್ಲ ಬೆಕ್ಕಸ ಬೆರಗಾಗಿ ನೋಡುತ್ತಿದ್ದೆವು ನಾವು!

ನಾವು ಆ ಬಲಿಷ್ಠವಾಗಿರುತ್ತಿದ್ದ ಚಪಾತಿಗಳಲ್ಲಿ ಒಂದನ್ನೆ ತಿಂದು, ಹೊಟ್ಟೆ ತುಂಬಿಹೋಗಿ, ಮುಂದೆ ಅದಕ್ಕಿಂತಲೂ ರುಚಿ ರುಚಿಯಾಗಿರುತ್ತಿದ್ದ ಉಣಿಸುಗಳನ್ನು ತಿನ್ನಲಾರದೆ ಎದುರಿಗಿದ್ದವರನ್ನು ಕರುಬಿನಿಂದ ನೋಡುತ್ತಿದ್ದರೆ, ಅವರು ಒಂದಲ್ಲ ಎರಡಲ್ಲ ಏಳೆಂಟು ಚಪಾತಿಗಳನ್ನೂ ಲೀಲಾಜಾಲವಾಗಿ ತಿಂದು, ಹಾಲು ತುಪ್ಪ ಶ್ರೀಖಂಡಗಳನ್ನು ಯಥೇಚ್ಛವಾಗಿ ಸೇವಿಸಿ, ಮತ್ತೂ ತರತರದ ಅನ್ನ ಪಾಯಸಾದಿಗಳನ್ನು ಬಡಿಸಿಕೊಂಡು ತಿನ್ನುತ್ತಿದ್ದರು! ಮತ್ತೆ, ಅವರೇನು ಊಟಕ್ಕೆ ಹೆಚ್ಚು ದುಡ್ಡು ಕೊಡುತ್ತಿರಲಿಲ್ಲ, ನಾವು ಕೊಟ್ಟಷ್ಟೆ, ಒಂದೆ ರೂಪಾಯಿ! ಬಡಕಲಾಗಿದ್ದು ತಿನ್ನಲಾರದ ಸಣಕಲು ಹೊಟ್ಟೆಯ ನಮಗೆ ಆಗುತ್ತಿದ್ದ ನಷ್ಟವನ್ನು ನೆನೆದಾಗ ನಮಗೆ ಲಭಿಸುತ್ತಿದ್ದ ಲಾಭ ಬರಿಯ ಹೊಟ್ಟೆಯ ಕಿಚ್ಚು! ಪರಿಣಾಮ: ಅವರಿಗೆ ತಿಳಿಯದಿದ್ದ ಕನ್ನಡದಲ್ಲಿ ನಾವು ಅವರ ಲೋಭ ಬುದ್ದಿಯನ್ನೂ ಹೊಟ್ಟೆಬಾಕತನವನ್ನೂ ಗಜವರಾಹ ಗಾತ್ರವನ್ನೂ ಖಂಡಿಸುತ್ತಾ ಟೀಕಿಸುತ್ತಾ ಲೇವಡಿ ಮಾಡಿ ನಗುತ್ತಾ ಪ್ರತೀಕಾರವೆಸಗಿದೆವೆಂದು ಭಾವಿಸಿ ತೃಪ್ತರಾಗುವುದೆಷ್ಟೋ ಅಷ್ಟೆ!

ಸಣ್ಣಪುತ್ತಲಿಯ ಗೊಂಬೆ

ಆ ಅಧಿವೇಶನದಲ್ಲಿ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸುಪ್ರಸಿದ್ದರಾಗಿದ್ದ ಅನೇಕ ವ್ಯಕ್ತಿಗಳು ನೆರೆದಿದ್ದರು. ಆದರೆ ನಮಗಿದ್ದುದು ಮುಖ್ಯವಾಗಿ ಒಂದೇ ಲಕ್ಷ್ಯ: ಗಾಂಧೀಜಿಯ ದರ್ಶನ! ಆದರೆ ಅದೇನು ಸುಲಭ ಸಾಧ್ಯವಾಗಿತ್ತೇ? ಆ ಜನಜಂಗುಳಿಯ ನೂಕುನುಗ್ಗಲಲ್ಲಿ ? ಅಧಿವೇಶನದ ವೇದಿಕೆಯ ಮೇಲೆ ಅವರನ್ನೇನೋ ನೋಡಬಹುದಾಗಿತ್ತು. ಆದರೆ ಅದು ನಾವು ಕೊಂಡಿದ್ದ ಟಿಕೆಟ್ಟಿನ ಸ್ಥಳಕ್ಕೆ ಬಹು ಬಹುದೂರವಾಗಿತ್ತು. ಅಲ್ಲಿಂದ ಗಾಂಧೀಜಿ ಸಣ್ಣದೊಂದು ಪುತ್ತಲಿಯ ಗೊಂಬೆಯಷ್ಟೆ ಆಕಾರದಲ್ಲಿ ಕಾಣಿಸುತ್ತಿದ್ದರು. ಅದಕ್ಕಾಗಿ ನಾವು ಅವರು ಅಧಿವೇಶನಕ್ಕೆ ಬರುವ ಹೊತ್ತನ್ನೂ ಅವರು ಪ್ರವೇಶಿಸುವ ಮಹಾದ್ವಾರ ವನ್ನೂ ಪತ್ತೆಹಚ್ಚಿ ಬಿಸಿಲಿನಲ್ಲಿ ಕಾದೆವು.

ಅಧಿವೇಶನದ ವಲಯವನ್ನು ಸಮೀಪಿಸುತ್ತಿರುವಾಗಲೆ ಒಂದು ಧೂಳೀಧೂಸರವಾದ ಆಕಾಶಮಂಡಲ ಕಾಣಿಸುವುದರ ಜೊತೆಗೆ ಜನಸ್ತೋಮದ ಚಲನವಲನದಿಂದ ಹೊಮ್ಮಿದ ತುಮುಲ ಶಬ್ದಮಂಡಲವೂ ಕರ್ಣಗೋಚರವಾಯಿತು. ತುಸು ಹೊತ್ತು ಅಧಿವೇಶನದ ದೃಶ್ಯಾವಳಿಗಳನ್ನು ವೀಕ್ಷಿಸುತ್ತಾ ಅಲ್ಲಿ ಇಲ್ಲಿ ಅಲೆದೆವು. ನೋಡುತ್ತೇನೆ: ನನ್ನ ಮಿತ್ರರೊಬ್ಬರು ಇದ್ದಕ್ಕಿದ್ದಂತೆಯೆ ಸಂನ್ಯಾಸಿಯಾದಂತೆ ಕಾವಿಧಾರಿಯಾಗಿದ್ದಾರೆ! ಅಚ್ಚರಿಯಿಂದ ನೋಡುತ್ತೇನೆ: ಮತ್ತೂ ಒಬ್ಬರು ಹಾಗೆಯೆ ಬಣ್ಣ ಬದಲಾಯಿಸಿದ್ದಾರೆ! ನೋಡಿಕೊಳ್ಳುತ್ತೇನೆ: ನನ್ನ ಉಡುಪೂ ಕೆಮ್ಮಣ್ಣು ಬಣ್ಣಕ್ಕೆ ತಿರುಗಿದೆ! ಕಡೆಗೆ ಗೊತ್ತಾಯಿತು, ಅಲ್ಲಿನ ಮಣ್ಣಿನ ಬಣ್ಣವೇ ಕೆಂಪು ಎಂದು; ಅಲ್ಲಿ ಬಿಳಿ ಬಟ್ಟೆ ಹಾಕಿಕೊಂಡು ಶುಚಿಯಾಗಿ ಕಾಣುವುದೇ ಅಸಾಧ್ಯ ಎಂದು. ಒಂದೆರಡು ದಿನವೇನೋ ಬೆಳ್ಳಗೆ ಮಡಿಯಾಗಿರಲು ಪ್ರಯತ್ನಪಟ್ಟೆವು. ಏನೇನೂ ಪ್ರಯೋಜನವಾಗಲಿಲ್ಲ, ಶುಚಿತ್ವವನ್ನೆ ಕೈಬಿಟ್ಟೆವು. ಮೈಸೂರಿಗೆ ಮತ್ತೆ ಬರುವವರೆಗೆ,ಮೈಗೆಂಪಾಗಿ ಬಟ್ಟೆಗೆಂಪಾಗಿ ಒಂದು ಮಹಾದ್ವಾರದೆಡೆ ನೂಕು ನುಗ್ಗಲಿನಲ್ಲಿ ನಿಂತು ನೋಡುತ್ತಿದ್ದವು.

ಗೌರವ ಸಮಸ್ತ ಸಾಷ್ಟಾಂಗ

ನೆರೆದ ಜಾತ್ರೆಯ ಜನಜಂಗುಳಿಯ ನಡುವೆ ಆನೆಯೊಂದು ನಡೆದು ಬರುತ್ತಿದ್ದರೆ ಹೇಗೆ ಮೇಲೆದ್ದು ಕಾಣಿಸುವುದೋ ಹಾಗೆ ಜನಸಮುದ್ರದಲ್ಲಿ ತೇಲಿ ಬರುವ ಹಡಗುಗಳಂತೆ ಇಬ್ಬರು ಬೃಹದ್ ವ್ಯಕ್ತಿಗಳು ಬರುತ್ತಿದ್ದುದು ಕಾಣಿಸಿತು. ಗುಸುಗುಸು ಹಬ್ಬಿತು, ಗಾಂಧೀಜಿ ಬರುತ್ತಿದ್ದಾರೆ ಎಂದು ಕತ್ತು ನಿಕ್ಕುಳಿಸಿ ನೋಡಿದೆ. ಗಾಂಧೀಜಿ ಎಲ್ಲಿ??ಪಕ್ಕದಲ್ಲಿದ್ದವರು ಹೇಳಿದರು: “ಮೇಲೆದ್ದು ಕಾಣಿಸುತ್ತಾ ಬರುತ್ತಿದ್ದಾರಲ್ಲಾ ಅವರಿಬ್ಬರು ಆಲಿ ಸಹೋದರರು ಕಣ್ರಿ! ಅವರ ಮಧ್ಯೆ ನಡೆದು ಬರುತ್ತಿದ್ದಾರೆ ಗಾಂಧೀಜಿ.

ಅಣುರೂಪಿ ಗಾಂಧೀಜಿಯ ಆಕೃತಿ, ಅವರಿಬ್ಬರ ನಡುವೆ. ನಮ್ಮ ಗೌರವ ಸಮಸ್ತವೂ ಸಾಷ್ಟಾಂಗವೆರಗಿತ್ತು ಅವರ ಪದತಲದಲ್ಲಿ: ‘ವಂದೇ ಮಾತರಂ! ಭಾರತ ಮಾತಾಕೀ ಜೈ! ಮಹಾತ್ಮಾ ಗಾಂಧೀ ಕೀ ಜೈ!’ ಮೊದಲಾದ ಘೋಷಗಳು ಕಿವಿ ಬಿರಿಯುವಂತೆ ಗಗನದೇಶವನ್ನೆಲ್ಲ ತುಂಬಿದುವು. ಆ ಉತ್ಸಾಹ ಸಾಗರಕ್ಕೆ ನನ್ನ ಕೀಚು ಕೊರಳೂ ತನ್ನ ದನಿಹನಿಯ ನೈವೇದ್ಯವನ್ನು ನೀಡಿ ಧನ್ಯವಾಗಿತ್ತು!
ಮೂರು ನಾಲ್ಕು ದಿನಗಳ ಅಧಿವೇಶನದಲ್ಲಿ ನಾವು ಪ್ರೇಕ್ಷಕರಾಗಿ ಭಾಗಿಗಳಾಗಿದ್ದೆವು. ಸ್ವಾತಂತ್ರ್ಯದೀಕ್ಷೆಯನ್ನು ತೊಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮ್ಮಿಕ್ಕುವ ಭಾರತೀಯ ಸಮಷ್ಟಿ ಚೈತನ್ಯದ ಅಗ್ನಿಸ್ಪರ್ಶ ನನ್ನ ಕವಿಚೇತನಕ್ಕೂ ತಗುಲಿತ್ತು. ತತ್ಕಾಲದಲ್ಲಿ ರಚಿಸಿದ ಕೆಲವು ಇಂಗ್ಲಿಷ್ ಕವನಗಳೂ, ತರುವಾಯ ರಚಿತವಾಗಿ ಸುಪ್ರಸಿದ್ಧವಾಗಿರುವ ಕನ್ನಡ ಕವನಗಳೂ ಆ ದೀಕ್ಷೆಗೆ ಸಾಕ್ಷಿ ನಿಂತಿವೆ.
‘ಜಲಿಯನ್‌ವಾಲಾ ಬಾಗ್’ ಮತ್ತು ‘ಟು ದೇಶಬಂಧು ದಾಸ್’ ಎಂಬೆರಡನ್ನು ಪದ್ಯಗಳನ್ನು ಈ ಸಂದರ್ಭದಲ್ಲಿ ಇಂಗ್ಲಿಷ್ ನಲ್ಲಿ ಬರೆದದ್ದನ್ನು ಅವರು ಉಲ್ಲೇಖಿಸಿದ್ದಾರೆ. (ನೋಡಿ ನೆನಪಿನ ದೋಣಿಯಲ್ಲಿ, 452-455)

ನಿರೂಪಣೆ, ಲೇಖನ :

  • ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ ವಿಶ್ವವಿದ್ಯಾಲಯ. ಮುಂಬೈ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter