ಅ(ಸತ್ಯಂ) ಶಿವಂ ಸುಂದರಂ!


ಹಾಸ್ಯ/ವಿಡಂಬನೆ ಬರಹ

  • ರಾಘವೇಂದ್ರ ಮಂಗಳೂರು

ಸತ್ಯ ಇನ್ನೂ ಮನೆಯ ಹೊಸ್ತಿಲು ದಾಟಿಲ್ಲ. ಆದರೆ ಸುಳ್ಳು ಆಗಲೇ ಊರೆಲ್ಲ ಸುತ್ತಾಡಿ ಬಂತಂತೆ…

ಸತ್ಯಕ್ಕೆ ಸಾವಿಲ್ಲ. ಸುಳ್ಳಿಗೆ ಸುಖವಿಲ್ಲ. ಇದು ‘ ಅಂದ ಕಾಲತ್ತಿಲ್ ‘ ಗಾದೆ. ಈಗ ಎಲ್ಲವೂ ಉಲ್ಟಾ ಪಲ್ಟಾ.

ಸತ್ಯವಂತರಿಗಿದು ಕಾಲವಲ್ಲ. ದುಷ್ಟ ಜನರಿಗೆ ಸುಭಿಕ್ಷ ಕಾಲ.

  • ಪುರಂದರ ವಿಠಲ

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮ ಮನೆ ದೇವರು.

ಸತ್ಯವೇ ಮಿಥ್ಯ… ಮಿಥ್ಯವೇ ಸತ್ಯ ನಿನ್ನೆ, ಇಂದು, ನಾಳೆ ಮತ್ತು ಎಂದೆಂದಿಗೂ…


ಅಲ್ಲಲ್ಲಿ ಹರಿದು ಕೊಳಕಾದ ಖದ್ದರ್ ಬಿಳಿ ಜುಬ್ಬಾ… ಮಾಸಿದ ಇಸ್ತ್ರೀ ಮಾಡದ ಪೈಜಾಮ…ಎಷ್ಟೋ ದಿನಗಳಿಂದ ಎಣ್ಣೆ ಕಾಣದ ತಲೆ…ಮುಖದಲ್ಲಿ ಬೆಳ್ಳಿ ಬಣ್ಣದ ಕುರುಚಲು ಗಡ್ಡ…ತಲೆ ಮೇಲೊಂದು ಗಾಂಧಿ ಟೋಪಿ…ಕಪ್ಪು ಮೈ ಬಣ್ಣ… ಬೆನ್ನಿಗೆ ಅಂಟಿಕೊಂಡ ಹೊಟ್ಟೆ…ಆದರೆ ಕಣ್ಣುಗಳು ಶಾಂತಿ ದೀಪದಂತೆ ಬೆಳಗುತ್ತಿವೆ. ಈ ವ್ಯಕ್ತಿಯ ಹೆಸರು ಸತ್ಯಣ್ಣ.

ಬ್ರಾಂಡೆಡ್ ಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್… ಕಾಲಿಗೆ ಮಿರಿ ಮಿರಿ ಮಿಂಚುವ ಕಪ್ಪು ಬಣ್ಣದ ರಿಬೋಕ್ ಶೂಗಳು…ಕಣ್ಣುಗಳನ್ನು ಅಲಂಕರಿಸಿದ ರೇ-ಬಾನ್ ಗ್ಲಾಸಸ್… ಮುಖದ ಬಣ್ಣ ಕಪ್ಪಾದರೂ ‘ ಫೇರ್ & ಲವ್ಲಿ ‘ ಕ್ರೀಮು ಹೆಚ್ಚಾಗಿ ಹಚ್ಚಿದ್ದರಿಂದ ‘ ಗೌರವ ವರ್ಣದ ‘ ಮುಖ ಮಿರ ಮಿರನೆ ಮಿಂಚುತ್ತಿತ್ತು. ಗುಂಗುರು ಕೂದಲಿನ ಕ್ರಾಪು (ಬೋಳು ತಲೆಗೆ ಹಾಕಿದ ವಿಗ್ಗು!) ಮುಖದ ಹೊಳಪು ಹೆಚ್ಚು ಮಾಡಿತ್ತು. ಡೊಳ್ಳು ಹೊಟ್ಟೆಯ ಬೊಜ್ಜು ಕಾಣದಂತೆ ಸಡಿಲವಾದ ಉಡುಪು. ಕಣ್ಣಲ್ಲಿ ತೀಕ್ಷ್ಣ ಕಾಂತಿ ಅಲ್ಲ ಬದಲಾಗಿ ದಗುಲುಬಾಜಿತನ, ಆಸೆಬುರುಕುತನದ ಛಾಯೆ! ಈತನ ಹೆಸರು ದೇವರಾಣೆ ‘ ಸತ್ಯಣ್ಣ ‘ ಅಂತೂ ಅಲ್ಲವೇ ಅಲ್ಲ…ಮತ್ತೆ ಇನ್ನೇನು?… ಅಸತ್ಯಣ್ಣ ಅರ್ಥಾತ್ ಗುಂಡಣ್ಣ.

ಸತ್ಯ ಎನ್ನುವ ಹೆಸರಿನ ವ್ಯಕ್ತಿಗೂ ‘ ಸತ್ಯವಲ್ಲ ‘ ಎನ್ನುವ ಹೆಸರಿನ ವ್ಯಕ್ತಿಗೂ ಎಷ್ಟು ವ್ಯತ್ಯಾಸ! ಸತ್ಯ ಎನ್ನುವ ಹೆಸರಿನ ಮುಂದೆ ‘ ಅ ‘ ಸೇರಿಸಿದರೆ ಸತ್ಯ ಎನ್ನುವ ವ್ಯಕ್ತಿಯ ಹೆಸರು ‘ ಅಸತ್ಯ ಅಥವಾ ಗುಂಡಣ್ಣ ಆಗಿಬಿಡುತ್ತದೆ. ನಿಜ ಹೇಳಬೇಕೆಂದರೆ ಸತ್ಯಣ್ಣ ಎಂದೋ ಭೂಗತವಾಗಿದ್ದಾನೆ. ಈಗ ಏನಿದ್ದರೂ ಗುಂಡಣ್ಣನ ಯುಗ. ಏಕೆಂದರೆ ಇದು ಕಲಿ ಕಾಲ! ಅದೊಂದು ದಿನ ಸತ್ಯಣ್ಣ ಮತ್ತು ಗುಂಡಣ್ಣ ಸಡನ್ ಆಗಿ ಪರಸ್ಪರ ಎದುರಾದರು. ಕಳಾ ಹೀನ ಮುಖ ಮತ್ತು ಮಾಸಿದ ಬಟ್ಟೆಗಳ ಮಾಲಕನಾದ ಸತ್ಯಣ್ಣ ತನ್ನನ್ನು ತಾನು ‘ ಸತ್ಯಣ್ಣ ‘ ಎಂದು ಪರಿಚಯಿಸಿಕೊಂಡ.

” ನೀನು ಸತ್ಯಣ್ಣನಾ? ನೋಡಿದರೆ ದೇವಸ್ಥಾನದ ಮುಂದೆ ಕೂಡುವ ಭಿಕ್ಷುಕನ ತರಹ ಕಾಣುತ್ತಿರುವೆ… ಅದು ಸರಿ…ಇಲ್ಲಿ ನಿನಗೇನು ಕೆಲಸ…ಇದು ನನ್ನ ದೇಶ. ಅಲ್ಲದೇ ನನ್ನ ಕಾಲ. ಈಗ ಇಲ್ಲಿ ನಡೆಯುತ್ತಿರುವುದು ನನ್ನದೇ ಹವಾ… ತಿಳಿಯಿತಾ? ನನ್ನನ್ನೇ ಇಲ್ಲಿಯ ಪ್ರಜೆಗಳು ಸತ್ಯಣ್ಣ ಎಂದು ಕೂಗುತ್ತಾರೆ ಮತ್ತು ನನ್ನನ್ನೇ ನಂಬಿ ಆರಾಧಿಸುತ್ತಾರೆ. ಇಲ್ಲಿ ನಿನಗೇನು ಕೆಲಸವಿಲ್ಲ … ದಾರಿಯಲ್ಲಿ ಅಡ್ಡಡ್ಡ ನಿಲ್ಲದೆ ಮೊದಲು ಇಲ್ಲಿಂದ ತೊಲಗು ” ಎಂದು ಗಟ್ಟಿ ಧ್ವನಿಯಲ್ಲಿ ಝೇಂಕರಿಸಿದ ಗುಂಡಣ್ಣ.

” ಒಹೋ ಈಗ ಅರ್ಥವಾಯಿತು ಅಸತ್ಯಣ್ಣ ಅರ್ಥಾತ್ ಗುಂಡಣ್ಣ ಅಂದರೆ ನೀನೇನಾ?… ನಿನ್ನ ನಕಲಿ ವೇಷ ಭೂಷಣ ನೋಡಿದರೇನೆ ಗೊತ್ತಾಗುತ್ತೆ! ನಾನು ಸದ್ಯ ಜನಗಳಿಂದ ಮರೆಯಾಗಿರಬಹುದು. ಆದರೆ ಯಾವತ್ತಿದ್ದರೂ ಸತ್ಯ ಅದೇ ಸತ್ಯಣ್ಣನಾದ ನನಗೇ ಜಯ ಎನ್ನುವುದನ್ನು ಮರೆಯಬೇಡ. ಸತ್ಯ ಮೇವ ಜಯತೆ… ” ಎಂದು ಮೆತ್ತನೆಯ ಧ್ವನಿಯಲ್ಲಿ ಉಸುರಿದ ಸತ್ಯಣ್ಣ.

” ಸತ್ಯ ಮೇವ ಜಯತೆ! ಇದು ಯಾವ ಓಬಿರಾಯನ ಕಾಲದ ಸ್ಲೋಗನ್…ಸುಮ್ಮನೆ ನನ್ನ ಮಾತು ಕೇಳಿ ಇಲ್ಲಿಂದ ಬೇಗ ಓಡಿ ಹೋಗು… ಇಲ್ಲವೆಂದರೆ ಇಲ್ಲಿಯ ಮನುಷ್ಯರು ನಿನ್ನನ್ನು ತುಂಡು ತುಂಡು ಮಾಡಿ ಸಾಯಿಸುತ್ತಾರೆ…ಇಲ್ಲಾ ಸುಟ್ಟು ಬೂದಿ ಮಾಡುತ್ತಾರೆ. ಅದಕ್ಕೆ ಅವಕಾಶ ಕೊಡದೆ ಬೇಗ ಪರಾರಿಯಾಗು…” ಎಂದ ಗುಂಡಣ್ಣ ವ್ಯಂಗ್ಯವಾಗಿ ತನ್ನ ಪೊದೆ ಮೀಸೆಯನ್ನು ತಿರುವುತ್ತಾ…

” ನಿನ್ನ ಗೊಡ್ಡು ಬೆದರಿಕೆಗೆ ಹೆದರುವವನಲ್ಲ. ನಾನು ಸತ್ಯ… ಸತ್ಯಣ್ಣ! ನೀನು ಎಂತೆಂತಹ ಕಪಟ ನಾಟಕ ಆಡಿದರೂ ಕೊನೆಗೆ ಗೆಲ್ಲೋದು ನಾನೇ… ಈ ಸೃಷ್ಟಿ ಇರುವವರೆಗೆ ನಾನು ಇರುತ್ತೇನೆ. ಏಕೆಂದರೆ ನಾನು ಸತ್ಯ!. ನೆನಪಿಡು ” ಎಂದು ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಗುಡುಗಿ ಸತ್ಯಣ್ಣ ದಾರಿ ಬಿಟ್ಟು ದೂರ ಸರಿದ.

” ಇವನೂ…ಇವನ ಸತ್ಯವೂ! ” ಎಂದು ವ್ಯಂಗ್ಯವಾಗಿ ಜೋರಾಗಿ ನಕ್ಕು ವಿಜಿಲ್ ಹಾಕುತ್ತಾ ಖುಷಿಯಿಂದ ಕುಪ್ಪಳಿಸುತ್ತಾ ಮುಂದೆ ನಡೆದ ಗುಂಡಣ್ಣ.

*****

” ಈ ಕೇಸು ನಾವೇ 100% ಗೆಲ್ಲುತ್ತೇವೆ ಡೌಟೇ ಬೇಡ… ” ಎಂದ ಕಪ್ಪು ಕೋಟು ಹಾಕಿದ ಅದೇ ಬಣ್ಣದ ಲಾಯರ್.

” ನನಗೆ ಮರ್ಯಾದೆ, ಸಮಾಜದಲ್ಲಿ ಸ್ಥಾನ ಮುಖ್ಯ. ಮನೆ, ಹೊಲ, ಹಣ, ಬಂಗಾರ ಎಲ್ಲ ಹೋದರೂ ಚಿಂತೆಯಿಲ್ಲ ನಾನು ಕೇಸು ಸೋಲಬಾರದು ಸಾರ್ …” ಎಂದು ರೋಷದಿಂದ ಗುಡುಗಿದ ಕೇಸಿಗೆ ಸಂಭಂಧಿಸಿದ ವ್ಯಕ್ತಿ.

” ಮುಠ್ಠಾಳ…ಎಲ್ಲವನ್ನು ಕಳೆದುಕೊಂಡು ಕುಟುಂಬದವರನ್ನು ಬೀದಿಗೆ ತಳ್ಳಬೇಡ…ಸ್ವಲ್ಪ ವಿಚಾರ ಮಾಡು. ಈ ಪುಟುಗೋಸಿ ಲಾಯರ್ ಇಲ್ಲಿಯವರೆಗೆ ಒಂದೇ ಒಂದು ಕೇಸು ಸಹಾ ಗೆದ್ದಿಲ್ಲ. ಅವಸರ ಮಾಡಿ ನಿರ್ಧಾರ ತಗೋಬೇಡ ” ಎಂದು ಸತ್ಯಣ್ಣ ಆರಚಿದ. ಆದರೆ ಅದನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಲಾಯರ್ ಪಕ್ಕದಲ್ಲಿದ್ದ ಗುಂಡಣ್ಣ ಮಾತ್ರ ಕನ್ನಡ ಸಿನಿಮಾದ ವಜ್ರಮುನಿಯಂತೆ ಗಹಗಹಿಸಿ ನಕ್ಕ.

ಡಾಕ್ಟರ್ ರೋಗಿಯ ಒಂದೊಂದೇ ರಿಪೋರ್ಟ್ ಒಂದಲ್ಲ ಎರಡೆರಡು ಸಲ ನೋಡಿ ಹೇಳಿದ ” ನೀವೇನು ಭಯ ಬೀಳಬೇಡಿ. ನಿಮ್ಮ ಮಗನ ರೋಗವನ್ನು ಸಂಪೂರ್ಣವಾಗಿ ಗುಣ ಮಾಡುವ ಜವಾಬ್ದಾರಿ ನಂದು. ಸ್ವಲ್ಪ ಹೆಚ್ಚು ಹಣ ಖರ್ಚಾಗುತ್ತದೆ ಅಷ್ಟೇ… ಮನುಷ್ಯನಿಗೆ ಜೀವಕ್ಕಿಂತ ಹಣ ಹೆಚ್ಚು ಅಂತ ನೀವು ಭಾವಿಸುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು ” ಎಂದು ಶಾಂತ ಸ್ವರದಲ್ಲಿ ನುಡಿದ ಬಿಳಿ ಕೋಟಿನ ಡಾಕ್ಟರ್.

” ಆಗಲಿ ಸಾರ್…ಎಷ್ಟು ಖರ್ಚಾದರೂ ಪರವಾಗಿಲ್ಲ. ಸಮಯ ಬಂದರೆ ಮನೆ, ಹೊಲ, ಬಂಗಾರ ಆದರೂ ವತ್ತೆ ಇಟ್ಟಾದರೂ ಮಗನ ಜೀವ ಉಳಿಸಿಕೊಳ್ಳುತ್ತೇನೆ ” ಎಂದು ಕಂಬನಿ ಮಿಡಿದ ರೋಗಿಯ ತಂದೆ.

” ಎಲ್ಲ ಶುದ್ಧ ಸುಳ್ಳು. ಈ ದಗುಲ್ಬಾಜಿ ಡಾಕ್ಟರ್ ಮಾತು ನಂಬಬೇಡ. ಇದು ಕಾರ್ಪೊರೇಟ್ ಹಾಸ್ಪಿಟಲ್. ನಿನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ. ನನ್ನ ಮಾತು ನಂಬು. ಈಗ ಸೀದಾ ನಿಮ್ಮ ಊರಿಗೆ ಹೋಗು. ದುರದೃಷ್ಟವಶಾತ್ ಮಗ ಹೋದರೂ ಹೆಚ್ಚು ಚಿಂತೆ ಮಾಡಬೇಡ… ಕುಟುಂಬದ ಹಣವಾದರೂ ಉಳಿಯುತ್ತದೆ… ಇಲ್ಲವೆಂದರೆ ಈ ಕಡೆ ಮಗನ ಜೀವ, ಆ ಕಡೆ ಆಸ್ತಿ ಪಾಸ್ತಿ ಎಲ್ಲ ಕಳೆದುಕೊಂಡು ರಸ್ತೆಗೆ ಕುಟುಂಬದೊಂದಿಗೆ ಬಂದು ನಿಲ್ಲಬೇಕಾಗುತ್ತದೆ…ಬೇಡ. ನನ್ನ ಮಾತು ಕೇಳು ” ಎಂದು ಜೋರಾಗಿ ಕೂಗಿ ಹೇಳಿದ ಸತ್ಯಣ್ಣ. ಆದರೆ ಅದನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಡಾಕ್ಟರ್ ಪಕ್ಕದಲ್ಲೇ ನಿಂತಿದ್ದ ಗುಂಡಣ್ಣ ವಜ್ರಮುನಿಯಂತೆ ಗಹಗಹಿಸಿ ನಕ್ಕ.

” ಸಾರ್… ನಮ್ಮ ಶಾಲೆ ಒಂದು ರೂಪಾಯಿ ಡೊನೇಷನ್ ಸಹಾ ತೆಗೆದುಕೊಳ್ಳುವುದಿಲ್ಲ. ಬೇರೆ ಸ್ಕೂಲಿನಂತೆ ನಾವು ಹಗಲು ದರೋಡೆಗೆ ಇಳಿಯುವುದಿಲ್ಲ… ಕೇವಲ ನೀವು ಫೀಸು, ಯೂನಿಫಾರ್ಮ್ ಕಾಸ್ಟ್ ಕಟ್ಟಿದರೆ ಸಾಕು…” ಎಂದು ಪ್ರತಿಷ್ಠಿತ ಸ್ಕೂಲಿನ ಹೆಡ್ ಮಿಸ್ಟ್ರೆಸ್ ಸ್ವಚ್ಛ ಆಂಗ್ಲ ಭಾಷೆಯಲ್ಲಿ ಹೇಳಿದಳು ಮಗಳನ್ನು ಸ್ಕೂಲಿಗೆ ಸೇರಿಸಲು ಬಂದ ತಂದೆಯೊಂದಿಗೆ.

” ಆಗಲಿ ಮೇಡಂ…ಹೆಚ್ಚು ಖರ್ಚು ಇರೋದಿಲ್ಲ ಅಂತ ತಾವು ಭರವಸೆ ನೀಡಿದ್ದೀರಿ. ನನ್ನ ಗೆಳೆಯರು, ಬಂಧುಗಳಿಗೆ ಕೂಡ ನಿಮ್ಮ ಸ್ಕೂಲಿಗೆ ಸೇರಿಸಲು ನಾನು ಕ್ಯಾನ್ವಾಸ್ ಮಾಡುವೆ…” ಎಂದು ಉದ್ವೇಗದಿಂದ ನುಡಿದ ಬಾಲಕಿಯ ತಂದೆ.

” ಇದು ಹೆಸರಿಗಷ್ಟೇ ಇಂಟರ್ನ್ಯಾಷನಲ್ ಸ್ಕೂಲು. ನಿಜ ಹೇಳಬೇಕೆಂದರೆ ಕಚಡಾ ಸ್ಕೂಲು… ತಿಳಿಯಿತಾ… ಮೊದಲು ಮಗುವನ್ನು ಅಡ್ಮಿಷನ್ ಮಾಡಿಸಿಕೊಂಡು ನಂತರ ನಿಧಾನವಾಗಿ ಬಾಲ ಬಿಚ್ಚುತ್ತಾರೆ. ನನ್ನ ಮಾತು ಕೇಳು…ಸುಮ್ಮನೆ ಇಂಗ್ಲೀಷ್ ಶಬ್ದಗಳನ್ನು ಕಲಿಸಿಕೊಡುವ ಈ ಕಾನ್ವೆಂಟ್ ಸ್ಕೂಲ್ ಬೇಡ. ಇದರ ಬದಲು ಇದಕ್ಕಿಂತ ಚೆನ್ನಾಗಿ ಪಾಠ ಹೇಳಿ ಕೊಡುವ, ಯೂನಿಫಾರ್ಮ್, ಸ್ಕೂಲು ಬ್ಯಾಗು, ಶೂಸ್, ಪುಸ್ತಕಗಳನ್ನು ಫ್ರೀ ಆಗಿ ನೀಡಿ ಜೊತೆಗೆ ಬಿಸಿ ಊಟವನ್ನೂ ಕೊಟ್ಟು ಅತ್ಯಂತ ಕಡಿಮೆ ಫೀಸು ಕಟ್ಟಿಸಿಕೊಳ್ಳುವ ಸರ್ಕಾರಿ ಕನ್ನಡ ಶಾಲೆಗೆ ಸೇರಿಸು… ಈ ಇಂಟರ್ನ್ಯಾಷನಲ್ ಸ್ಕೂಲಿನ ಮೋಹದ ಚಕ್ರವ್ಯೂಹದಲ್ಲಿ ಸಿಲುಕಿ ಒದ್ದಾಡಬೇಡ…” ಎಂದು ಸತ್ಯಣ್ಣ ತನ್ನ ಹಿತೋಕ್ತಿಯನ್ನು ಜೋರಾಗಿ ಒದರಿ ಹೇಳಿದ ಪಾಲಕನಿಗೆ. ಆದರೆ ಅದನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಗುಂಡಣ್ಣ ಸ್ಕೂಲಿನ ಹೆಡ್ ಮಿಸ್ಟ್ರೆಸ್ ಪಕ್ಕದಲ್ಲಿ ನಿಂತು ವಜ್ರಮುನಿಯಂತೆ ಗಹಗಹಿಸಿ ನಕ್ಕ.

” ನಾನು ಗೆದ್ದ ಬಳಿಕ ನಿಮ್ಮ ಮಗನಾಗಿ ನಿಮ್ಮೆಲ್ಲರ ಕಷ್ಟ ಸುಖ ನೋಡಿಕೊಳ್ಳುವೆ. ನಿಮ್ಮ ಕುಟುಂಬದ ಸದಸ್ಯನಾಗಿ ಮತ್ತೊಮ್ಮೆ ನಿಮಗಾಗಿ ಹಗಲಿರುಳು ದುಡಿಯುವೆ. ನಾನು ನೀಡಿದ ಚುನಾವಣೆ ಭರವಸೆಗಳೇ ನನ್ನ ‘ ಸಂವಿಧಾನ ‘…ತಾವು ಕಳೆದ ಬಾರಿಯೂ ಈ ‘ ನಿಮ್ಮ ಮನೆ ಮಗ ‘ ನ ಕೈ ಬಿಟ್ಟಿಲ್ಲ. ಈಗಲೂ ಬಿಡುವುದಿಲ್ಲ ಎನ್ನುವ ಭರವಸೆ ನನಗಿದೆ. ತಮ್ಮ ಅಮೂಲ್ಯ ಮತ ಹಾಕಿದ ಬಳಿಕ ಗೆದ್ದ ಕೂಡಲೇ ನೀಡಿದ ಭರವಸೆಗಳನ್ನು ಒಂದೊಂದಾಗಿ ಈಡೇರಿಸುವೆ. ಒಂದು ವೇಳೆ ಸರ್ಕಾರ ನನ್ನ ಕಾರ್ಯಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡದಿದ್ದರೂ ಸರಿ ನಾನು ಸ್ವಂತ ಹಣದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವೆ. ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ… ನನ್ನ ಮಾತು ನಂಬಿ ಮತ್ತು ನಿಮ್ಮ ಅಮೂಲ್ಯ ಮತವನ್ನ ನನಗೇ ನೀಡಿರಿ …” ಎಂದು ಶಾಸಕನಾಗಿ ಮರು ಆಯ್ಕೆ ಬಯಸಿದ ಅಭ್ಯರ್ಥಿ ಮತದಾರರ ಮುಂದೆ ಭಾವನಾತ್ಮಕವಾಗಿ (ಮೊಸಳೆ) ಕಣ್ಣೀರು ಸುರಿಸುತ್ತಾ ನುಡಿದ.

” ಎಲ್ಲ ಶುದ್ಧ ಸುಳ್ಳು. ಈಡೇರಿಸಲಾಗದ ಭರವಸೆಗಳನ್ನು ಕೊಟ್ಟು ‘ ಅಂಗೈಯಲ್ಲಿ ಸ್ವರ್ಗ ‘ ತೋರಿಸುವ ಇಂಥ ರಾಜಕೀಯ ನಾಟಕಕಾರರ ಮಾತುಗಳು ನಂಬಬೇಡ. ಈಗಾಗಲೇ ಏನೊಂದೂ ಕೆಲಸ ಮಾಡದ ಶಾಸಕನನ್ನು ಒಮ್ಮೆ ಆಯ್ಕೆ ಮಾಡಿ ಪಶ್ಚಾತ್ತಾಪ ಪಟ್ಟಿರುವಿರಿ. ಹಗಲು ಕಂಡ ಬಾವಿಯಲ್ಲಿ ಇರುಳಲ್ಲಿ ಮತ್ತೆ ಬೀಳೋದು ಬೇಡ… ದಯವಿಟ್ಟು ನನ್ನ ಮಾತು ಕೇಳಿ…” ಎಂದು ಕೈ ಜೋಡಿಸಿ ಜೋರಾಗಿ ಹೇಳಿದ ಸತ್ಯಣ್ಣ. ಆದರೆ ಅದನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಅಭ್ಯರ್ಥಿಯ ಪಕ್ಕದಲ್ಲಿ ನಿಂತ ಗುಂಡಣ್ಣ ಮತ್ತೊಮ್ಮೆ ವಜ್ರಮುನಿಯಂತೆ ಗಹಗಹಿಸಿ ನಕ್ಕ.


ಸತ್ಯಣ್ಣ ಕಾಲಿಡುವ ಮುಂಚೆಯೇ ಗುಂಡಣ್ಣ ಇಡೀ ರಾಜ್ಯವನ್ನು ತನ್ನ ಕಬಂಧಕ ಬಾಹುಗಳಿಂದ ಆವರಿಸಿ ಸತ್ಯಣ್ಣನನ್ನು ಉಸಿರುಗಟ್ಟುವಂತೆ ಮಾಡಿದ್ದ. ಆಫೀಸಿನಲ್ಲಿ, ವ್ಯಾಪಾರದಲ್ಲಿ, ಶಿಕ್ಷಣದಲ್ಲಿ, ಮಾರ್ಕೆಟಿಂಗಿನಲ್ಲಿ, ಸಮಾಜದಲ್ಲಿ ಕೊನೆಗೆ ಕುಟುಂಬದಲ್ಲೂ ಸಹಾ ಸತ್ಯಣ್ಣನಿಗೆ ಜಾಗ ಸಿಗುತ್ತಿರಲಿಲ್ಲ. ಏಕೆಂದರೆ ಗುಂಡಣ್ಣನೇ ಎಲ್ಲ ಕಡೆ ರಾಜ್ಯ ಭಾರ ಮಾಡುತ್ತಿದ್ದ. ಇಲ್ಲಿಯ ಜನರು ನಿಜವಾದ ‘ ಸತ್ಯಣ್ಣನನ್ನು ಮರೆತು ಎಷ್ಟೋ ದಶಕಗಳು ಆಗಿವೆ. ಗುಂಡಣ್ಣನೇ ಸತ್ಯಣ್ಣ ಎಂದು ಗಾಢವಾಗಿ ನಂಬಿ ಬದುಕು ಸಾಗಿಸುತ್ತಿದ್ದಾರೆ ಭಾರತ ಮಾತೆಯ ಅದರಲ್ಲೂ ತಾಯಿ ‘ ಭುವನೇಶ್ವರಿ ‘ ಯ ಮುದ್ದು ಮಕ್ಕಳು.

ಇನ್ನು ರಾಜ್ಯದಲ್ಲಿ ಅಲ್ಲ ಈ ದೇಶದಲ್ಲೇ ತನಗೆ ಉಳಿಗಾಲವಿಲ್ಲವೆಂದು ಮನಗಂಡ ಸತ್ಯಣ್ಣ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ‘ ಡೆತ್ ನೋಟ್ ‘ ಬರೆದಿಟ್ಟು ಒಂದು ದಿನ ಧಿಡೀರ್ ಆಗಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಮಾತ್ರ ಅಸತ್ಯವಲ್ಲ. ಏಕೆಂದರೆ ಸತ್ತ ಸತ್ಯಣ್ಣನ ಸುದ್ದಿಯನ್ನು ಎಲ್ಲ ಪ್ರಿಂಟ್ ಮತ್ತು ದೃಶ್ಯ ಮಾಧ್ಯಮಗಳು ಒಂದೇ ಸವನೆ ‘ ನಾವೇ ಮೊದಲು ‘ ಎನ್ನುವಂತೆ ಬ್ರೇಕಿಂಗ್ ನ್ಯೂಸ್ ಹಾಕಿ ನಾಡಿನ ಜನರನ್ನು ಹಗಲೂ ರಾತ್ರಿ ಹಿಂಸಿಸಲು ಆರಂಭಿಸಿದವು!


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

11 thoughts on “ಅ(ಸತ್ಯಂ) ಶಿವಂ ಸುಂದರಂ!”

  1. JANARDHANRAO KULKARNI

    ಎಲ್ಲೆಲ್ಲೂ ಅಸತ್ಯ ತಾಂಡವ ನೃತ್ಯ ಮಾಡುತ್ತಿರುವಾಗ ಸತ್ಯ ಅನ್ನುವುದು ಆತ್ಮಹತ್ಯೆ ಮಾಡಿಕೊಳ್ಳುವುದೇ ಅಂತಿಮ ದಾರಿ ಎನ್ನುವುದನ್ನು ವಿಡಂಬನಾತ್ಮಕವಾಗಿ ಚೆನ್ನಾಗಿ ಹೇಳಿದ್ದೀರಿ. ಅಭಿನಂದನೆಗಳು.

  2. ಧರ್ಮಾನಂದ ಶಿರ್ವ

    ತುಂಬ ವಿಡಂಬನಾತ್ಮಕವಾಗಿ ಬರೆದ ಬರಹ ಚೆನ್ನಾಗಿದೆ. ನ್ಯಾಯ, ಆರೋಗ್ಯ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ರಾರಾಜಿಸುತ್ತಿರುವ ಅಸತ್ಯವನ್ನು ಬಯಲಿಗೆಳೆದ ಪರಿ ಚೆನ್ನಾಗಿದೆ. ಸತ್ಯ ಸೋತು ಆತ್ಮಹತ್ಯೆ ಮಾಡಿಕೊಂಡ ಮಾರ್ಮಿಕ ಕ್ಷಣ ಮಾತ್ರ ಮರೆಯುವಂತಹದ್ದಲ್ಲ. ಸತ್ಯವೆಂದಿದ್ದರೂ ಮತ್ತೆ ಎದ್ದು ಬರಲೇಬೇಕು; ಮರುಜನ್ಮದೊಂದಿಗೆ.

  3. ಮ. ಮೋ. ರಾವ್, ರಾಯಚೂರು

    ಅನೇಕ ರಂಗಗಳಲ್ಲಿಯ ಅಸತ್ಯವನ್ನು, ಅದರ ಪ್ರಖರತೆಯನ್ನು ಪ್ರತಿಧ್ವನಿಯಾಗಿ ತಿಳಿಸಿದ್ದಾರೆ ಕವಿ ರಾಘವೇಂದ್ರ ಮಂಗಳೂರವರು. ಕೊನೆಯಲ್ಲಿ ಸತ್ಯಣ್ಣ ಅಸತ್ಯದ ಗುಂಡಣ್ಣನಿಗೆ ತಲೆಬಾಗಿ ಸುಳ್ಳು ‘ಡೆತ್ ನೋಟನ್ನು’ ಬರೆಯಬೇಕಾದದ್ದು ವಿಪರ್ಯಾಸ. ಅಭಿನಂದನೆಗಳು

  4. MURALIDAHR JOSHI , GANGAVATHI

    ನಿಮ್ಮ ಮಾರ್ಮಿಕತೆಯ ಲೇಖನ ನಮ್ಮ ಮನದ ಬಿಂಬವಾಗಿದೆ. ಹಾಸ್ಯದ ಮೂಲಕ ನೀತಿ ಹೇಳುವ ನಿಮ್ಮ ಕಲೆಗೆ ಒಂದು ಸಲಾಂ

    ಮುರಳಿಧರ ಜೋಷಿ, ಗಂಗಾವತಿ

  5. ಶೇಖರಗೌಡ ವೀ ಸರನಾಡಗೌಡರ್

    ವಾಸ್ತವದ ಚಿತ್ರಣ ಅದ್ಭುತವಾಗಿ ಮೂಡಿಬಂದಿದೆ. ನಿತ್ಯ ಜೀವನದ ವಿವಿಧ ಕ್ಷೇತ್ರಗಳಲ್ಲಿ ವಿಜೃಂಭಿಸುತ್ತಿರುವ ಸುಳ್ಳಿನ ಅಟ್ಟಹಾಸದ ಚಿತ್ರಣ ನಿಜವೇ.
    ಅಭಿನಂದನೆಗಳು.

  6. ಅಸತ್ಯವೆಂದರೆ ಗುಂಡಣ್ಣ ವಿಡಂಬನಾತ್ಮಕ ಲೇಖನ
    ತುಂಬಾ ಚೆನ್ನಾಗಿ ಮೂಡಿ ಬಂದಿದೆ.
    ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter