ಕಾರಣ (ಕಿರುಗತೆ)
“ಶಾಂತಲಾ…ಇವತ್ತು ನಿನ್ನ ಮಗನ ಶಾಲೆಗೆ ಕಳಿಸಬೇಡ” ಶಾಂತವಾಗಿ ನುಡಿದ ಗೌರಕ್ಕ ನ ಮಾತು ಕೇಳಿ ಸಿಟ್ಟು ನೆತ್ತಿಗೇರಿತು ಸೊಸೆಗೆ. “ಯಾಕೆ ಅತ್ತೆ ? ಶುರುಮಾಡಿದ್ರ ನಿಮ್ಮ ಹಳೇ ಚಾಳಿ. ನಿಮ್ಮ ಮಾತು ಕೇಳಿ ನನ್ ಮಗ ಪ್ರಶಾಂತ ಹೋದ ವರ್ಷವಿಡೀ ಪದೇ ಪದೇ ರಜೆ ಹಾಕಿ ಹಾಜರಿಯೇ ಕಡಿಮೆ ಆಗಿತ್ತು. ಹೆಂಗೋ ಪರೀಕ್ಷೆ ಬರೆದು ಪಾಸ್ ಆಗಿದ್ದೇ ದೊಡ್ಡ ಮಾತು. ನಿಮ್ಮ ಮೊಮ್ಮಗ ಇನ್ನೂ ಸಣ್ಣವ ಅಂದುಕೊಂಡಿದೀರ?? ಪ್ರೈಮರಿ ಶಾಲೆ ಮುಗಿದು ಈಗ ಐದನೇ ತರಗತಿಗೆ ಹೋಗಬೇಕು ಗೊತ್ತೇನು.? ಅದೂ ಅಲ್ಲದೆ ಇಂದು ಈ ವರ್ಷದ ಶಾಲಾ ಪ್ರಾರಂಭ ದಿನ. ಇವತ್ತೇ ಹೋಗದಿದ್ರೆ ಹೇಗೆ? ಅದೆಲ್ಲ ಕೇಳಲ್ಲ ನಾ ಕಳ್ಸಿಯೇ ಕಳಿಸ್ತೀನಿ” ಎನ್ನುತ್ತಾ ಮಗನಿಗೆ ದೊಡ್ಡಕೆ ಕಣ್ಣು ಬಿಟ್ಟು ಹೆದರಿಸಿ ಟವೆಲ್ ಕೊಟ್ಟು ಸ್ನಾನಕ್ಕೆ ಕಳಿಸಿದಳು ಶಾಂತಲಾ.
“ಆಯ್ತು ಬಿಡು ಇನ್ನೇನು ಮಾಡೋದು. ತುದಿ ಮನೇ ಜ್ಯೋತಿದು ಇವತ್ತು ಎರಡನೇ ಸೀಮಂತ ನೆನಪಿಲ್ವೇ? ಪಾಪ ಒತ್ತಾಯದಿಂದ ಎಲ್ಲರೂ ಬನ್ನಿ ಎಂದು ಬಾಯಿತುಂಬಾ ಕರೆದು ಹೋಗಿದ್ದಾರೆ. ನೀನಂತೂ ಮನೆ ಬಿಟ್ಟು ಆಚೆ ನಾಲ್ಕು ಹೆಜ್ಜೆ ಇಡೋಳಲ್ಲ. ಹುಡುಗನ ಕರ್ಕೊಂಡು ನಾನಾದ್ರು ಹೋಗಿ ಬರ್ತಿದ್ದೆ ” ಎಂದು ನಿಟ್ಟುಸಿರಿಟ್ಟು ತಮ್ಮ ಪಾಡಿಗೆ ದೇವರ ಪೂಜೆಗೆ ಹೂ ಕೊಯ್ಯಲು ತೆರಳಿದಳು ಗೌರಕ್ಕ.
ಆ ವರ್ಷ ಪ್ರಶಾಂತ ಅಮ್ಮನ ಮಾತು ಮೀರದೆ ಶಾಲೆಗೆ ತಪ್ಪದೇ ಹೋಗತೊಡಗಿದ್ದ. ಇದರಿಂದ ಶಾಂತಲಾ ಗೆ ಖುಷಿಯೋ ಖುಷಿ. ಆದರೆ… ಊರಲ್ಲಿ ಅದೆಷ್ಟು ಮದುವೆ, ಮುಂಜಿ ಮಂಗಲ ಕಾರ್ಯಗಳು ನಡೆಯಿತೋ… ಪಾಪ ಗೌರಕ್ಕ ಮಾತ್ರ ಯಾರ ಮನೆಗೂ ಹೋಗದೆ ಮನೆಯಲ್ಲೇ ಇರುತ್ತಿದ್ದರು. ಊರಲ್ಲಿ ವಿಶೇಷ ಕಾರ್ಯಗಳು ಇರುವ ದಿನ ಬೀದಿಯಲ್ಲಿ ಸಡಗರದಿಂದ ಹಿಂದೆ ಮುಂದೆ ಓಡಾಡುವ ಜನರನ್ನ ಕಿಟಕಿ ಕಿಂಡಿಯಲ್ಲೇ ನೋಡಿ ಓ ಅವರು ಬಂದರು , ಇವರು ಹೋದರು …ಎಂದು ಗುರುತಿಸಿ ತಮಗೆ ತಾವೇ ಖುಷಿಪಡುತ್ತಿದ್ದರು.
ಅದೊಂದು ದಿನ ಸಂಜೆ ಹೊತ್ತಿಗೆ ಮೇಲಿನ ಕೇರಿಯ ಶಾಂತಕ್ಕ
(ಗೌರಕ್ಕನ ಆತ್ಮೀಯ ಗೆಳತಿ )ಇವರ ಮನೆಗೆ ಬಂದರು. ಉಭಯ ಕುಶಲೋಪರಿ ಮುಗಿದ ಬಳಿಕ ಶಾಂತಕ್ಕ ಗೌರಕ್ಕನ ಹತ್ತಿರಕ್ಕೆ ಬಂದು ಸಣ್ಣಕೆ ಕಿವಿಯಲ್ಲೇನೋ ಪಿಸುಗುಡುತ್ತಿದ್ದರು ! “ಯಾಕೆ ಗೌರಿ… ಕಳೆದ ಕಾರ್ತೀಕ ಮಾಸದಲ್ಲಿ ನಡೆದ ಶಾನುಭೋಗರ ಮಗಳು ಮದುವೆಗೆ ನೀ ಬರ್ಲೆ ಇಲ್ಲ??! ಐದು ದಿನವೂ ಶಾಸ್ತ್ರದ ಪ್ರಕಾರ ಎಷ್ಟು ಭರ್ಜರಿಯಾಗಿ ಕಾರ್ಯ ನಡೆಯಿತು. ಭೋಜನವೂ ಅಷ್ಟೇ ರುಚಿ ರುಚಿಯಾಗಿತ್ತು. ಈ ಬೇಸಿಗೆಯಲ್ಲಿ ಪಟೇಲರ ಮೊಮ್ಮೊಗನ ಉಪನಯನವನ್ನು ಒಳ್ಳೇ ಮದುವೆ ಕಾರ್ಯದಂತೆ ವಿಜೃಂಭಣೆಯಿಂದ ಮಾಡಿದ್ರು.. ನಿಮ್ಮನೆಗೆ ಕರೆದೇ ಇಲ್ವಾ ಏನು??
ಅದಕ್ಕೂ ನೀ ಪತ್ತೆ ಇಲ್ಲ! ನೀ ಜೊತೆಗಿಲ್ಲದೆ ನಾನೊಬ್ಬಳೇ ಓಡಾಡಲು ಎಷ್ಟು ಬೇಜಾರಾಗ್ತಿತ್ತು ಗೊತ್ತಾ. ಏನೇ ಆಗ್ಲಿ ಒಂದು ಸಾರಿ ವಿಚಾರಿಸಿಕೊಂಡು ಹೋಗಿಬಿಡೋಣ ಅಂತಲೇ ಪುರುಸೊತ್ತು ಮಾಡ್ಕೊಂಡು ಬಂದೆ ಇವತ್ತು.. ಅಲ್ಲ…ಮನೇಲಿ ಮಗ ಸೊಸೆ ಏನಾದ್ರೂ ನಿನ್ನ ಕಳಿಸಲು ತಕರಾರು ಮಾಡಿದ್ರ ಹೇಗೆ??”
“ಹಾಗೇನು ಇಲ್ಲ ಶಾಂತ…. ತೋರಣ ಕಟ್ಟಿದ ಶುಭ ಕಾರ್ಯದ ಮನೆ ಬಾಗಿಲಿಗೆ ಒಂದು ಅರಿಶಿಣ, ಕುಂಕುಮ ಇಲ್ಲದ ಈ ಹಾಳು ಮುಖ ತಗೊಂಡು ಹೆಂಗಾದ್ರೂ ಬರ್ಲಿ ಹೇಳು?! ನಾಳೆ ದಿನ ಏನಾದ್ರೂ ಹೆಚ್ಚು ಕಡಿಮೆ ಆಗಿ ಸಸೂತ್ರ ನಡೆವ ಕಾರ್ಯ ನಿಂತು ಹೋದ್ರೆ… ಅದು ನನ್ನಿಂದ ಆದ ಅಪಶಕುನ ಅನ್ನುವ ಅಪವಾದ ಯಾಕೆ ಹೊತ್ತುಕೊಳ್ಳಲಿ?? ಇಷ್ಟು ದಿನ ಹಾಗಲ್ಲ ನನ್ನ ಮುಂದೆ ಮೊಮ್ಮಗ ಇರುತ್ತಿದ್ದ! ಹೆಬ್ಬಾಗಿಲಲ್ಲಿ ನೆರೆದ ನೆಂಟರಿಷ್ಟರ ಗಮನವೆಲ್ಲ ಅವನತ್ತ ಇರುತಿತ್ತು! ಅವನ ಹಿಂದೆ ನನ್ ಪಾಡಿಗೆ ನಾ ತಲೆತಗ್ಗಿಸಿಕೊಂಡು ಸೆರಗು ಹೊದ್ದು ನಡೆದು ಚಪ್ಪರದ ಅಂಗಳದ ಮೂಲೆ ಸೇರಿಕೊಳ್ಳುತ್ತಿದ್ದೆ” ಹೂಂ…ಇಷ್ಟು ವರ್ಷ ಹೆಂಗೋ ನಡೆದೋಯಿತು. ಕೈ ಕಾಲು ಗಟ್ಟಿ ಇತ್ತು ಎಲ್ಲರ ಮನೆಗೂ ಬಂದು ಅವರವರ ಕೆಲಸದಲ್ಲಿ ನನ್ನ ಕೈಲಾದಷ್ಟು ನೆರವೂ ಆದೆ. ನಮ್ಮ ಕಾಲದಂತೆ ಬಂಧು ಬಳಗ, ಊರು ಮನೆ ಅಂತ ಸಂಬಂಧ ಬೆಳೆಸಿಕೊಂಡು ಹೋಗಲು ಈಗಿನ ಜನಕ್ಕೆ ಸಮಯವಾದ್ರೂ ಎಲ್ಲಿದೆ ಹೇಳು… ಅದೂ ಅಲ್ಲದೆ ನನಗೂ ಈಗೀಗ ವಿಶೇಷ ಊಟ ಉಂಡು ಜಯಿಸಿಕೊಳ್ಳೋಕು ಕಷ್ಟವೇ…” ಶಾಂತಕ್ಕನ ಬೇಸರದ ಪ್ರಶ್ನೆಗೆ, ಕಾರಣ ಸಹಿತ ಸಮಾಧಾನದ ಉತ್ತರ ಕೊಟ್ಟು ನಿರಾಳವಾದರು ಗೌರಕ್ಕ.
ಇಬ್ಬರೂ ಸೇರಿಕೊಂಡು ತನ್ನ ಬಗ್ಗೆ ಏನೋ ದೂರು ಹೇಳುತ್ತಿದ್ದಾರೆ ಎಂದು ಗೋಡೆ ಹಿಂದೆ ಕಿವಿಗೊಟ್ಟು ನಿಂತು ಕುತೂಹಲದಿಂದ ಮುಖ ಗಂಟಿಕ್ಕಿಕೊಂಡು ಆಲಿಸುತ್ತಿದ್ದ ಶಾಂತಲಾಗೆ ಅತ್ತೆಯ ಸಣ್ಣ ದನಿಯ ಆ ದೊಡ್ಡ ಮಾತುಗಳ ಕೇಳಿ ಒಮ್ಮೆ ಎದೆಗೆ ಚುಚ್ಚಿದ ಅನುಭವವಾಯಿತು.
ಸ್ವಲ್ಪ ದಿನದಲ್ಲೇ ಪಕ್ಕದ ಕೇರಿಯ ಶಾಸ್ತ್ರಿಗಳ ಮನೆಯಲ್ಲಿ ಸತ್ಯನಾರಾಯಣ ಪೂಜೆ ! ಶಾಂತಲಾ ಮನಸ್ಸಿಗೆ ಏನು ಅನ್ನಿಸಿತೋ…ಅವತ್ತು ಬೇಗನೆ ಸ್ನಾನ ಮಾಡಿ ಸೀರೆ ಉಟ್ಟು ಸಿಂಗರಿಸಿಕೊಂಡು “ಅತ್ತೆ ಲೇಟಾಯಿತು….ಬೇಗ ರೆಡಿಯಾಗಿ ನಾವಿಬ್ಬರೂ ಇವತ್ತು ಪೂಜೆಗೆ ಹೋಗಿ ಬರೋಣ” ಎಂದಾಗ ಅತ್ತೆಗೆ ಆಶ್ಚರ್ಯವೂ ಸಂತೋಷವೂ ಒಟ್ಟಿಗೆ ಆಯಿತು. ಅಂದು ಸೊಸೆ ತನ್ನ ಕೈ ಹಿಡಿದುಕೊಂಡು ಊರ ಮುಂದೆ ಜೊತೆ ಜೊತೆ ನಡೆಯುವಾಗ ನೆರಿಗೆ ಹೂಡಿದ ಗೌರಕ್ಕ ನ ಮುಖದಲ್ಲಿ ಕಂಡೂ ಕಾಣದ ತಿಳಿನಗೆಯೊಂದು ಮೂಡಿತ್ತು!
✍️ ಕುಸುಮಾ.ಜಿ.ಭಟ್
2 thoughts on “ಕಾರಣ”
ಕಥೆ ಸಣ್ಣದಾದರೂ ಒಳ್ಳೆಯದಿತ್ತು.
ಕುಸುಮಾ ಜಿ.ಭಟ್ಟ್ ರವರ ಕಾರಣ ಎರಡೂ ಪೀಳಿಗೆ ಮಧ್ಯೆ ಇರಬೇಕಾಗಿರುವ ಹೊಂದಾಣಿಕೆಯ ಅನಿವಾರ್ಯತೆಯನ್ನು ಎತ್ತಿ ಹಿಡಿಯುವ ಅರ್ಥಪೂರ್ಣ ಕಥೆ.