ಕರ್ಮ ಫಲ

ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ `ಧೋ' ಎಂದು ಮಳೆ ಒಂದೇ ಸಮನೆ ಸುರಿಯತೊಡಗಿತ್ತು. ಕುಂಭದ್ರೋಣ ಮಳೆ. ನಾಲ್ಕು ದಿನಗಳಿಂದ ರಣಮಳೆ ಹೀಗೇ ಸುರಿಯುತ್ತಿದೆ. ಧರೆಯೊಡಲಲ್ಲಿ ಎಲ್ಲೆಲ್ಲೂ ನೀರೇ ನೀರು. ಗುಡುಗು, ಕಣ್ಣು ಕೋರೈಸುವ ಮಿಂಚಿನ ಸೆಳಕು ಜನರೆದೆಗಳನ್ನು ನಡುಗಿಸುತ್ತಿವೆ. ಛಟ್... ಛಟ್... ಛಟೀಲ್ ಎಂದೆನ್ನುವ ಸಿಡಿಲಿನ ಆರ್ಭಟ ಗಂಡೆದೆಗಳಲ್ಲೂ ಭಯ ಹುಟ್ಟಿಸುತ್ತಿತ್ತು. ಗುಡುಗು, ಕೋಲ್ಮಿಂಚು, ಸಿಡಿಲುಗಳ ಭಯಾನಕ ಶಬ್ದಗಳಿಗೆ ಜನ ತತ್ತರಿಸಿ ಹೋಗಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದೆ, ಸ್ತಬ್ಧವಾಗಿದೆ. ತಗ್ಗು ಪ್ರದೇಶಗಳ ಮನೆಗಳಂತೂ ನೀರಲ್ಲೇ ನೆನೆಯತೊಡಗಿವೆ. ಸಾಂಕ್ರಾಮಿಕ ರೋಗಗಳು ಹಬ್ಬತೊಡಗಿವೆ. ಊರಲ್ಲಿನ ಕೆಲವೊಂದಿಷ್ಟು ಮಣ್ಣಿನ ಮನೆಗಳು, ಜಂತಿ ಮನೆಗಳು ಸಂಪೂರ್ಣವಾಗಿ, ಕೆಲವೊಂದಿಷ್ಟು ಭಾಗಶಃ ಬಿದ್ದು ಹೋಗಿವೆ, ನಿತ್ಯವೂ ಬಿದ್ದು ಹೋಗತೊಡಗಿವೆ. ಹಳೆಯ, ಜಂತಿ ಮನೆಗಳಿಗೆ ಆಯುಷ್ಯ ಕ್ಷೀಣಗೊಳ್ಳತೊಡಗಿದೆ. ಇತ್ತೀಚಿಗೆ ಕಟ್ಟಿಸಿದ ಮನೆಗಳು ಒಂದಿಷ್ಟು ಸುರಕ್ಷಿತವಾಗಿದ್ದರೂ ಮಳೆ ಇದೇ ರೀತಿ ಅಬ್ಬರಿಸಿ ಬೊಬ್ಬರಿಯುತ್ತಾ ಮುಂದುವರಿದರೆ ತಮ್ಮ ಮನೆಗಳಿಗೂ ಉಳಿಗಾಲವಿಲ್ಲವೇನೋ ಎಂಬ ಹೆದರಿಕೆ, ಅಳುಕು ಜನರ ಎದೆಯೊಳಗೆ ಕಾಡತೊಡಗಿದೆ. ಹಳೆಯ ಮನೆಗಳ ಜನರಿಗೆ ತಮ್ಮ ಮನೆಗಳು ಯಾವಾಗಲಾದರೂ ಬೀಳಬಹುದು ಎಂಬ ಡವಡವ ಎದೆಯೊಳಗೆ. ಊರಿನಲ್ಲಿರುವುದು ಬಹುತೇಕ ಮಣ್ಣಿನ ಮನೆಗಳೇ. ಆರ್‍ಸಿಸಿ ಮನೆಗಳು ಒಂದಿಷ್ಟು ಸುರಕ್ಷಿತವಾಗಿರೋದು.

 `ಮೊನ್ನೆ ಕುಂಬಾರ ಓಣಿಯಲ್ಲಿ ಅವರ ಮನೆಗಳು ಬಿದ್ದವು, ನಿನ್ನೆ ಮುಸ್ಲಿಮರ ಓಣಿಯಲ್ಲಿ ಇವರ ಮನೆಗಳು ಬಿದ್ದವು, ಜಖಂಗೊಂಡವು, ನಾಯಕರ ಓಣಿಯಲ್ಲಿ ಅವರ ಮನೆಗಳು ಬಿದ್ದವು, ಇಂದು ಕುರುಬರ ಓಣಿಯಲ್ಲಿ ಇಂಥಹವರ ಮನೆಗಳು ಅರ್ಧಮರ್ಧ ಬಿದ್ದವು, ಬಡಿಗೇರ ಓಣಿಯಲ್ಲಿ ಅವರ ಮನೆಗಳು ಬಿದ್ದವು, ಲಿಂಗಾಯಿತರ ಓಣಿಯಲ್ಲಿ ಇವರ ಮನೆಗಳು ನೆಲಕಚ್ಚಿದವು, ಬ್ರಾಹ್ಮಣ ಓಣಿಯಲ್ಲಿ ಅವರ ಮನೆಗಳು ಹೇಳಹೆಸರಿಲ್ಲದಂತಾದವು' ಎಂಬ ಸುದ್ದಿಗಳು ಬೆಳಗಾದರೆ ಕೇಳಿಬರತೊಡಗಿದವು. ಮೇವು, ಮಿಡಚಿ ಇಲ್ಲದೇ ಜಾನುವಾರುಗಳು ಅರಚತೊಡಗಿದವು. ಅಲ್ಲಲ್ಲಿ ಸಾವು, ನೋವಿನ ಸುದ್ದಿಗಳೂ ಕೇಳಿಬರತೊಡಗಿದವು. ಸರಕಾರಿ ಅಧಿಕಾರಿಗಳು ನಿದ್ದೆ-ನೀರಡಿಕೆಗಳನ್ನು ಬದಿಗೊತ್ತಿ ಶಕ್ತಿಮೀರಿ ಪರಿಹಾರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿತ್ತಾದರೂ, ಅಷ್ಟಾಗಿ ಜನತೆಗೆ ಸಕಾಲದಲ್ಲಿ ತಲುಪುತ್ತಿಲ್ಲ ಎಂಬ ಅಸಮಾಧಾನದ ಒಡಕು ಮಾತುಗಳಿಗೇನು ಬರವಿರಲಿಲ್ಲ.

ಊರಿನ ದೊಡ್ಡ ಜಮೀನುದಾರರಾಗಿದ್ದ ರಂಗಣ್ಣ ಪಟವಾರಿಯವರ ಮನೆಯ ಕಥೆಯೂ ಅದೇ. ಎಪ್ಪತ್ತು-ಎಂಭತ್ತು ವರ್ಷದ ಹಳೇ ಜಂತಿ ಮನೆ. ಎರಡಂತಸ್ತಿನ ಕಟ್ಟಡ. ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ಅರಮನೆಯಂಥ ಮನೆ ಅದು. ದೊಡ್ಡ ಬಂಕದ ಕಟ್ಟೆ, ಎಂಟಡಿ ಎತ್ತರ, ನಾಲ್ಕಡಿ ಅಗಲದ ಸಾಗವಾನಿ ಕಟ್ಟಿಗೆಯ, ಕುಸುರಿ ಕೆಲಸದಿಂದ ಸಿಂಗಾರಗೊಂಡಿದ್ದ ತಲಬಾಗಿಲು, ವಿಶಾಲವಾದ ತೆರೆದ ಒಳಾಂಗಣ. ಮತ್ತೆ ಕಟ್ಟೆಯ ಮೇಲೆ ವಿಶಾಲವಾದ ಹಾಲ್, ವಿಶಾಲವಾದ ಮಲಗುವ ಮೂರು ಕೋಣೆಗಳು, ಅಡುಗೆ ಮನೆ, ಊಟದ ಮನೆ, ದೇವರಮನೆ, ಬಚ್ಚಲುಮನೆ ಇತ್ಯಾದಿ, ಇತ್ಯಾದಿಗಳು. ಮೇಲಿನ ಮಹಡಿಯಲ್ಲಿ ಮಲಗುವ ಎರಡು ಶಾಲವಾದ ಕೋಣೆಗಳು. ಮಳೆಯ ಹೊಡೆತಕ್ಕೆ ಆಗಲೇ ಒಂದು ಕೋಣೆ ಜಖಂಗೊಂಡಿದೆ. ಅಲ್ಲಲ್ಲಿ ಮನೆಯ ತೊಲೆಗಳು ಹುಳುಕು ತಿಂದಿವೆ, ಜಂತಿಯ ಕಟ್ಟಿಗೆಗಳು ತಮ್ಮ ಶಕ್ತಿ ಕಳೆದುಕೊಂಡಿವೆ. ಈಗಲೋ, ಆಗಲೋ ಬೀಳಬಹುದು ಎಂಬ ಶಂಕೆ ರಂಗಣ್ಣನವರ ಮನೋಭಾವದಲ್ಲಿ ಕುಣಿಕುಣಿದು ಅವರನ್ನು ಅಧೀರನನ್ನಾಗಿಸುತ್ತಿದೆ. 

ಅರವತ್ತೈದರ ಇಳಿವಯಸ್ಸಿನ ಬಾಳ ದೋಣಿಯಲ್ಲಿ ಪಯಣಿಸುತ್ತಿರುವ ರಂಗಣ್ಣನವರಿಗೆ ಇವರಿಗಿಂತ ಎರಡು ವರ್ಷ ದೊಡ್ಡವಳಾದ ಅಕ್ಕ ತುಳಸಾಬಾಯಿ ಇರುವುದಲ್ಲದೇ ಇವರಿಗಿಂತ ಮೂರು ವರ್ಷ ಚಿಕ್ಕವಳಾದ ತಂಗಿ ಶಕುಂತಲಾಬಾಯಿಯೂ ಇದ್ದಾಳೆ. ತುಳಸಮ್ಮ, ಶಕುಂತಲಮ್ಮ ಒಂದು ಕೋಣೆಯಲ್ಲಿ ಮಲಗಿದ್ದರೆ ರಂಗಣ್ಣ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಮಹಾಗನಿ ಕಟ್ಟಿಗೆಯಿಂದ ತಯಾರಾಗಿದ್ದ ಮಜಭೂತಾದ ಮಂಚಗಳು. ಮೂವರಿಗೂ ಲಗ್ನವೇ ಆಗಿಲ್ಲ. ಸೂಕ್ತ ವಯಸ್ಸಿನಲ್ಲಿ ಯಾವ ಸಂಬಂಧಗಳೂ ಇವರಿಗೆ ಹತ್ತಲಿಲ್ಲ. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಸಾಂದ್ರತೆ ಮತ್ತಷ್ಟೂ ಹೆಚ್ಚಾಗತೊಡಗಿತು. ರಂಗಣ್ಣನವರ ಎದೆಯೊಳಗಿನ ತಳಮಳ ಕತಕತನೇ ಕುದಿಯತೊಡಗಿತ್ತು.
                     ****

ರಂಗಣ್ಣ ಮೂವತ್ತನೇ ವಯಸ್ಸಿಗೆ ಕಾಲಿಡುವಷ್ಟರಲ್ಲಿ ಹೆತ್ತವರಾದ ಶ್ರೀಪಾದರಾಯರು ಮತ್ತು ರುಕ್ಮಿಣಿಬಾಯಿ ಇಬ್ಬರೂ ವೈಕುಂಠವಾಸಿಗಳಾಗಿದ್ದರು. ಸಾವಿನ ಅಂತಿಮ ದಿನಗಳಲ್ಲಿ ಹಿರಿ ಜೀವಿಗಳ ಮನದಲ್ಲಿದ್ದುದು, `ನಾವು ಅದೇನು ಪಾಪ ಮಾಡಿರುವೆವೋ, ಅದೇನು ಕರ್ಮದ ಫಲವೋ ಏನೋ, ನಮ್ಮ ಮಕ್ಕಳು ಮೂವರಿಗೂ ಕಂಕಣ ಬಲ ಕೂಡಿಬರಲಿಲ್ಲ...' ಎಂಬ ಒಂದೇ ಕೊರಗು. ಶ್ರೀಮಂತಿಕೆಯ ಅಹಮಹಿಕೆಯಲ್ಲಿ ಮೆರೆದಿದ್ದ ಆ ಕುಟುಂಬದ ಹೊಳಹು ಅದೇಕೋ ಮಸುಕಾಗತೊಡಗಿತ್ತು. ಶ್ರೀಪಾದರಾಯರು ಮತ್ತು ಅವರ ತಂದೆ ಕೃಷ್ಣರಾಯರು ಹೇಗೋ ಗಳಿಸಿದ್ದ ಅಪಾರ ಆಸ್ತಿ ಹಾಗೇ ಕರಗಿ ಹೋಗಿತ್ತು. ಮುನ್ನೂರು ಎಕರೆಗಿಂತಲೂ ಹೆಚ್ಚಿನ ಜಮೀನಿನ ಒಡೆತನ ಅವರಿಗಿತ್ತು. `ಉಳುವವನೇ ಭೂಮಿಯ ಒಡೆಯ' ಎಂಬ ಕಾನೂನಿನಡಿ ಭೂಮಿ ಎಲ್ಲವೂ ಉಳುವವರ ಪಾಲಾಗಿತ್ತು. ಕೊನೆಗೆ ಉಳಿದಿದ್ದು ಕೇವಲ ಐವತ್ತು ಎಕರೆ ಅಷ್ಟೇ. 

ತಮ್ಮ ಕಣ್ಣೆದುರಿಗೇ ಜಮೀನು ಹೆರವರ ಪಾಲಾಗಿದ್ದನ್ನು ಶ್ರೀಪಾದರಾಯರು ಅರಗಿಸಿಕೊಳ್ಳದವರಾಗಿದ್ದರು. ಅವಮಾನ, ಬಾಳ ಪಥದಲ್ಲಿ ಹಿನ್ನಡೆ, ಮಾನಸಿಕ ಹಿಂಸೆ, ಜನರ ಏಟು ಮಾತು, ಕುಹಕ ನೋಟಗಳಿಗೆ ಜರ್ಜರಿತರಾಗಿದ್ದು ನಿಜ. ಬರೀ ಗೆದ್ದ ಜೀವನದ ಸವಿಯನ್ನು ಅನುಭವಿಸಿದ್ದ ಅವರಿಗೆ ಸೋಲಿನ ಜೀವನದ ಕಹಿಯನ್ನು ಅರಗಿಸಿಕೊಳ್ಳಲಾಗಲಿಲ್ಲ. ಸುಸ್ಥಿತಿಯಲ್ಲಿದ್ದ ಆರೋಗ್ಯದಲ್ಲಿ ಏರುಪೇರಾಗಿತ್ತು. ಇನ್ನೂ ಹತ್ತಿಪ್ಪತ್ತು ವರ್ಷ ಬಾಳಬೇಕಾಗಿದ್ದ ಅವರು ತಮ್ಮ ಐವತ್ನಾಲ್ಕನೇ ವಯಸ್ಸಿಗೇ ಭೂಮಿಯ ಋಣ ಕಡಿದುಕೊಂಡಿದ್ದರು. ಗಂಡನ ಅಗಲಿಕೆಯ ನೋವನ್ನು ಸಹಿಸಿಕೊಳ್ಳದ ರುಕ್ಮಿಣಿಬಾಯಿಯವರೂ ಆರು ತಿಂಗಳ ನಂತರ ಪಂಚಭೂತಗಳಲ್ಲಿ ಒಂದಾಗಿ ಗಂಡನನ್ನು ಸೇರಿಕೊಂಡಿದ್ದಳು. ರಂಗಣ್ಣನನ್ನು ಓದಿಸಿ ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕೆಂಬ ಶ್ರೀಪಾದರಾಯರ ಕನಸು ನನಸಾಗಲಿಲ್ಲ. ರಂಗಣ್ಣನ ಓದು ಎಸ್ಸೆಸ್ಸೆಲ್ಸಿಗೇ ಮೊಟಕುಗೊಂಡಿತ್ತು. ವಿದ್ಯೆ ಏಕೋ ಅವನ ತಲೆಗೆ ಹತ್ತಲಿಲ್ಲ. ಶಾರದಾ ಮಾತೆಯ ಕೃಪಾದೃಷ್ಟಿ ಅವನ ಮೇಲೆ ಬೀಳಲೇ ಇಲ್ಲ. 

ಇತ್ತೀಚಿನ ದಿನಗಳಲ್ಲಿ ಇದ್ದ ಐವತ್ತು ಎಕರೆ ಭೂಮಿಯನ್ನೂ ಸಾಗುವಳಿ ಮಾಡಲಾರದಂಥಹ ಪರಿಸ್ಥಿತಿ ಒದಗಿತ್ತು. ಆವಾಗ ಮನೆಯಲ್ಲಿ ಕೈಗೊಂದು, ಕಾಲಿಗೊಂದರಂತೆ ಆಳುಕಾಳುಗಳಿದ್ದವು. ಆದರೆ ಈಗಿನ ಪರಿಸ್ಥಿತಿಯೇ ಬೇರೆಯಾಗಿಬಿಟ್ಟಿದೆ. ಯಾರೂ ಯಾರ ಮಾತನ್ನು ಕೇಳದವರಾಗಿದ್ದಾರೆ. ಪಾಲಿಗೆ, ಕೋರಿಗೆ ಜಮೀನು ಮಾಡುವುದಕ್ಕೂ ರೈತಾಪಿ ಜನರು ಮುಂದೆ ಬರುತ್ತಿರಲಿಲ್ಲ. ಹೀಗಾಗಿ ಊರಿನಿಂದ ದೂರದ ಮೂವತ್ತು ಎಕರೆ ಜಮೀನು ಸುಮಾರು ಆರೇಳು ವರ್ಷಗಳಿಂದ ಬೀಳು ಬಿದ್ದಿದೆ. ಆಳೆತ್ತರದ ಬಳ್ಳಾರಿ ಜಾಲಿ ಭೂಮಿಯನ್ನು ಆಕ್ರಮಿಸಿ ಗಹಗಹಿಸಿ ನಗುತ್ತಿದೆ. ಊರಿಗೆ ಸಮೀಪದ ಹತ್ತೆಕರೆ ಭೂಮಿಯನ್ನು ಒಕ್ಕಲಿಗರ ಬಸಪ್ಪ ಸಾಗುವಳಿ ಮಾಡುತ್ತಿರುವನು. ಅದರ ಮೇಲೆಯೇ ರಂಗಣ್ಣನ ಕುಟುಂಬದ ಜೀವನ ನಡೆದಿತ್ತು. ಹಿರಿಯರು ಗಳಿಸಿದ್ದ ಬಂಗಾರದೊಡವೆಗಳೂ ನಿಧಾನವಾಗಿ ಕರಗಿ ಹೋಗ ತೊಡಗಿದ್ದವು. ಅಂಥಹ ಶೋಚನೀಯ ಸ್ಥಿತಿ ಬಂದಿತ್ತು ರಂಗಣ್ಣನ ಮನೆತನಕ್ಕೆ. ಏನೂ ಸ್ಥಿರಾಸ್ತಿ ಇಲ್ಲದ ದುಡಿಯುವ ವರ್ಗದವರ ಜೀವನಕ್ಕಿಂತಲೂ ಇವರ ಜೀವನ ಕೆಳಮಟ್ಟ ತಲುಪಿತ್ತು. ಮೈಯಲ್ಲಿ ಬೆವರಿಳಿಸಿ ದುಡಿದು ಜೀವಿಸುವವರಿಗೆ ಉಂಬುವುದಕ್ಕೆ, ಉಡುವುದಕ್ಕೆ ಕೊರತೆಯೇನಿರಲಿಲ್ಲ. ಇವರಿಗೆ ಭೂಮಿ-ಸಾಮಿ ಇದ್ದರೂ ಉಡಲು, ಉಣ್ಣಲು ಕೊರತೆ ಎದ್ದು ಕಾಣತೊಡಗಿತ್ತು.

ರಂಗಣ್ಣನ ದೊಡ್ಡಪ್ಪ ತಿರುಮಲರಾವ್ ಅವರ ಮನೆಯ ಪರಿಸ್ಥಿತಿಯೂ ಬೇರೆ ಏನಿರಲಿಲ್ಲ. ಅವರದೂ ಬಹುತೇಕ ಜಮೀನುಗಳು ಟೆನ್ಯಾನ್ಸಿ ಕಾಯಿದೆ ಅಡಿ ಉಳುವವರ ಪಾಲಾಗಿ ಹೋಗಿಬಿಟ್ಟಿವೆ. ಉಳಿದಿದ್ದ ನಲವತ್ತೈದು ಎಕರೆಯಲ್ಲಿ ಮೂವತ್ತು ಎಕರೆ ಜಮೀನನ್ನು ಮಾರಿಬಿಟ್ಟಿದ್ದಾರೆ. ಉಳಿದಿರುವ ಹದಿನೈದು ಎಕರೆ ಜಮೀನನ್ನು ಉತ್ತಿ, ಬಿತ್ತಿ ಬೆಳೆ ಬೆಳೆಯುವವರಿಲ್ಲದೇ ಬೀಳು ಬಿದ್ದಿದೆ. ಅವರಿಗಿದ್ದುದು ಇಬ್ಬರು ಗಂಡು ಮಕ್ಕಳು ಅಷ್ಟೇ. ಹಿರಿ ಮಗ ಭರ್ಜರಿ ಯೌವನದ ವಯಸ್ಸಿನಲ್ಲೇ ದುರ್ಮರಣಕ್ಕೀಡಾಗಿ ತೀರಿಹೋದ. ಎರಡನೇ ಮಗ ವೆಂಕಣ್ಣ ಪಿಯುಸಿ ಮಟ ಓದಿದವ ಬೆಂಗಳೂರು ಸೇರಿಕೊಂಡಿದ್ದಾನೆ. ಪೈರಿವಿ ಕೆಲಸಮಾಡುತ್ತಾ ಹೊಟ್ಟೆಹೊರೆಯುತ್ತಿದ್ದಾನೆ. ತಿರುಮಲರಾವ್ ದಂಪತಿಗಳು ಒಂಥರ ಅನಾಥರಂತೆ ತೀರಿಕೊಂಡು ನಾಲ್ಕೈದು ವರ್ಷಗಳಾಗಿವೆ. ಅವರದೂ ದೊಡ್ಡ ಮನೆಯೇ. ವಾಸಿಸುವವರಿಲ್ಲದೇ ಪಾಳು ಬಿದ್ದಿದ್ದ ಮನೆ ಮಳೆಯ ಹೊಡೆತಕ್ಕೆ ನಿನ್ನೆ ರಾತ್ರಿಯಷ್ಟೇ ಬಿದ್ದು ಹೋಯಿತು. `ನಮ್ಮ ಮನೆಯ ಗತಿಯೂ ಹೀಗೇ ಆಗುತ್ತೇನೋ...?' ಎಂಬ ಭಯ ರಂಗಣ್ಣನವರಿಗೆ.
                     ****

ಇತ್ತೀಚಿಗೆ ರಂಗಣ್ಣನವರೇಕೋ ಅಂತರ್ಮುಖಿಯಾಗ ತೊಡಗಿದ್ದಾರೆ. ಮೊದಲೆಲ್ಲ ಪಟಪಟ ಅಂತ ಹರಳು ಹುರಿದಂತೆ ಮಾತಾಡುತ್ತಿದ್ದ ರಂಗಣ್ಣನವರು ಮೌನವನ್ನು ಅಪ್ಪಿಕೊಂಡು ಮೌನದ ಚಿಪ್ಪಿನೊಳಗೆ ತೂರಿಕೊಂಡಿದ್ದಾರೆಂದರೆ ತಪ್ಪಾಗಲಾರದು. ತುಳಸಾಬಾಯಿ ಮತ್ತು ಶಕುಂತಲಾ ಬಾಯಿಯವರು ಮೌನಕ್ಕೆ ಜಾರಿ ಅದೆಷ್ಟು ವರ್ಷಗಳಾಗಿವೆಯೋ ಏನೋ? ರಂಗಣ್ಣನವರು ತನ್ನೊಳಗೆ ತಾನು ಇಳಿಯತೊಡಗಿದ್ದಾರೆ. ಯಾವಾಗಲೂ ಅದೇನೋ ಗಾಢವಾದ ಯೋಚನೆ, ಚಿಂತೆಯ ಬೇಗುದಿಯಲ್ಲಿ ಬೇಯುತ್ತಿರುತ್ತಾರೆ. `ಕೋಟೆಕಟ್ಟಿ ಮೆರೆದೋರೆಲ್ಲ ಏನಾದರು...?' ಎಂದು ಎಲ್ಲೋ ಓದಿದ್ದು ಮನದಲ್ಲಿ ಸದಾ ಗಿರಕಿ ಹೊಡೆಯುತ್ತಿರುತ್ತದೆ.

"ಹೌದು, ನಮ್ಮ ಮನೆತನಕ್ಕೇ ಯಾಕೀ ಅಕಾಲಿಕ ವೈಧವ್ಯ...? ನಾವೇನಂಥ ಪಾಪ ಮಾಡಿದ್ದೇವೆ? ನಾವೇನಂಥಹ ಅಪರಾಧ ಎಸಗಿದ್ದೇವೆ? ನನಗೆ ನೆನಪಿದ್ದಾಗಿನಿಂದ ನಾವ್ಯಾರೂ ಅಂಥಹ ಅಕ್ಷಮ್ಯ ಅಪರಾಧ, ತಪ್ಪು, ಅನ್ಯಾಯ ಮಾಡಿಲ್ಲವಲ್ಲ...? ಆದರೂ ನಮ್ಮ ಮನೆತನಕ್ಯಾಕೆ ಇಂಥ ಘೋರ ಶಿಕ್ಷೆ...? ಹೇಗಿದ್ದ ಮನೆತನ ಹೇಗಾಗಿ ಹೋಗಿದೆ? ಕಾಲಚಕ್ರದಡಿಯಲ್ಲಿ ಎಲ್ಲವೂ ಉಲ್ಟಾಪಲ್ಟಾ. ನಿರ್ಗತಿಕರಾಗಿದ್ದ ಅದೆಷ್ಟೋ ನಮ್ಮೂರ ಕುಟುಂಬದವರು ಈಗ ಆಗರ್ಭ ಶ್ರೀಮಂತರಾಗಿ ಮೆರೆಯುತ್ತಿದ್ದಾರೆ. ಕಾಲನ ಮಹಿಮೆ ಒಂದೂ ಅರ್ಥವಾಗುತ್ತಿಲ್ಲ. ಯಾರದಾದರೂ ಶಾಪಕ್ಕೆ ನಮ್ಮ ಕುಟುಂಬ ಬಲಿಯಾಗಿದೆಯೇ? ಅದ್ಯಾರ ಶಾಪ ನಮಗೆ ತಟ್ಟಿರಬಹುದು...? ನಮ್ಮೂರಿನ ಹಿರಿಯ ನಾಗರೀಕರನ್ನು ಕಂಡು ಮಾತಾಡಿಸಿ ಅವರ ಆಂತರ್ಯವನ್ನು ಕೆದಕಿದರೆ ಏನಾದರೂ ಹೂರಣ ಹುಟ್ಟಬಹುದೇ...? ಅಂಥಹ ಹಿರಿಯ ನಾಗರೀಕರಾದರೂ ಯಾರಿದ್ದಾರೆ? ನನ್ನ ಸಮಕಾಲೀನ ಒಂದಿಷ್ಟು ಜನರೂ ಆಗಲೇ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. 

ಹಾಂ...! ಕುರುಬರ ಆ ಮಾಳಪ್ಪ ಈಗಾಗಲೇ ನೂರರ ವಿಜಯೋತ್ಸವ ಆಚರಿಸಿ ಮುಂದಡಿ ಇಡುತ್ತಿರುವ ಒಬ್ಬ ವ್ಯಕ್ತಿ. ಕಣ್ಣು ತುಸು ಮಸುಕಾಗಿವೆ. ಕಿವಿಗಳು ಇನ್ನೂ ಚುರುಕಾಗೇ ಇವೆ. ಎದೆಯೊಳಗೆ ಗೂಡು ಕಟ್ಟಿರುವ ನೆನಪುಗಳನ್ನು ಈಗಲೂ ಕಣ್ಣೆದುರಿಗೆ ಕಟ್ಟುವಂತೆ ವಟಗುಡುವ ಅಸಾಮಿ. ಒಳ್ಳೇ ಮಾತುಗಾರ. ನೂರರ ಅಂಚಿನಲ್ಲಿರುವ ಇನ್ನೂ ಒಬ್ಬ ಮುದಿಯ ಇದ್ದಾನಲ್ಲ...? ಕೇರಿಯಲ್ಲಿರುವ ದ್ಯಾಮಜ್ಜನೂ ಇನ್ನೂ ಸುಸ್ಥಿತಿಯಲ್ಲಿರುವ ಮನುಷ್ಯನೇ...? ದ್ಯಾಮಜ್ಜನ ಮಾತುಗಳು, `ಅರಲು ಗೋಡೆಯ ಮೇಲೆ ಅಳ್ಳು ಒಗೆದಂತೆ' ಅಂತ ಜನರು ಮಾತಾಡಿಕೊಳ್ಳುವುದನ್ನು ನಾನೂ ಕೇಳಿದ್ದೇನೆ. ಇಬ್ಬರ ದನಿ ಇನ್ನೂ ನಡುಗುತ್ತಿಲ್ಲ. ಏರುದನಿಯಲ್ಲೇ ಮಾತಾಡುತ್ತಾರೆ ಆಸಾಮಿಗಳು. ಇವರಿಬ್ಬರನ್ನು ಬಿಟ್ಟರೆ ಮತ್ತೆ ಅಂಥ ವಯಸ್ಸಾದ ಹಿರಿಯ ವ್ಯಕ್ತಿಗಳು ನನ್ನ ಮನದ ನಜರಿಗೆ ಬರುತ್ತಿಲ್ಲ. ಕುರುಬರ ಓಣಿಗೆ ಆಗೊಮ್ಮೆ ಈಗೊಮ್ಮೆ ಹೋಗಿರುವೆನಾದರೂ ಕೇರಿಗೆ ಹೋದ ನೆನಪಿಲ್ಲ. ದ್ಯಾಮಜ್ಜ ಈ ಕಡೆಗೆ ಬಂದಾಗಲೇ ಆತನನ್ನು ನೋಡಿದ್ದು. ಅವ ನಮ್ಮ ಹೊಲದಾಗ ಕೆಲಸ ಮಾಡಿದವನೇ. ಟೆನ್ಯಾನ್ಸಿ ಎಕ್ಟ್‍ನಲ್ಲಿ ಅವನೂ ನಮ್ಮ ನಾಕೆಕರೆ ಹೊಲಕ್ಕೆ ಒಡೆಯನಾಗಿದ್ದಿದೆ. ಹೌದು, ನಾನು ಅಲ್ಲಿಗೆ ಹೋಗಿ ಮಾಳಪ್ಪಜ್ಜನ್ನ ಮತ್ತು ದ್ಯಾಮಜ್ಜನ್ನ ಕಂಡು ಬರಲೇ ಹೆಂಗೆ...? ನಾ ಅಲ್ಲಿಗೆ ಹೋಗಿ ಬಂದದ್ದನ್ನು ನೋಡಿದ ಜನ ಏನಂದುಕೊಳ್ಳುತ್ತಾರೋ ಏನೋ...? ಏನಂದುಕೊಂಡರೂ ನನಗೇನು...? ನನಗೊಂದಿಷ್ಟು ಮಾಹಿತಿ ಬೇಕು ಅಷ್ಟೇ. ಸರಿ, ಸರಿ ಹೋಗಿ ಬರುವುದೇ ಒಳ್ಳೆಯದು. 

ಅಂದುಕೊಂಡಂತೆ ಒಂದಿನ ಬೆಳಗಿನ ನಾಷ್ಟಾ ಮಾಡಿಕೊಂಡು ಹೊರಟೇಬಿಟ್ಟೆ. ಮೊದಲು ಹೋಗಿದ್ದು ಮಾಳಪ್ಪಜ್ಜನ ಹತ್ತಿರ. ಮನೆಯ ಮುಂದಿನ ಕಟ್ಟೆಯ ಮೇಲೆ ಮರಿಮೊಮ್ಮಕ್ಕಳ ಜೊತೆಗೆ ಆಡುತ್ತಾ ಕುಳಿತಿದ್ದ. ಒಬ್ಬ ಮೊಮ್ಮಗ ನಾನು ಬಂದ ಸುದ್ದಿಯನ್ನು ಕಿವಿಯಲ್ಲಿ ಹೇಳಿದಾಗ, ಕಣ್ಣಿಗೆ ಕೈಹಿಡಿದು ನೋಡಿದ ಮಾಳಪ್ಪಜ್ಜ ಎರಡೂ ಕೈಗಳನ್ನು ಜೋಡಿಸಿ ನನಗೆ ನಮಸ್ಕರಿಸುತ್ತಾ, `ಅಯ್ಯೋ ಧಣೇರಾ, ನೀವ್ಯಾಕ ಇಲ್ಲಿತನಕ ಬಂದ್ರಿ...? ಹೇಳಿ ಕಳಿಸಿದ್ರೆ ಮೊಮ್ಮಗನ ಕೈಹಿಡ್ಕೊಂಡು ನಾನೇ ನಿಮ್ಮನಿಗೆ ಬರ್ತಿದ್ದೆ. ನೀವು ಸುಮ್ಮನೇ ತ್ರಾಸು ತೊಗಂಡ್ರಿ... ಬರ್ರಿ ಬರ್ರಿ...' ಎಂದೆನ್ನುತ್ತಾ ಜಮಖಾನ ತರಲು ಮೊಮ್ಮಗನನ್ನು ಓಡಿಸಿದ. 

ಮೊದಲು ಅಜ್ಜನ ಯೋಗಕ್ಷೇಮ ವಿಚಾರಿಸಿದೆ. `ಊರು ಹೋಗು ಅಂತದ. ಸುಡುಗಾಡು ಬಾ ಅಂತದ' ಅಂದ. `ಎಜ್ಜಾ, ಹಂಗ್ಯಾಕಂತೀದಿ? ದೇವ್ರು ನಿನ್ಗೆ ಒಳ್ಳೇ ಆರೋಗ್ಯ ಕೊಟ್ಟಾನ. ಚಿಂತೀ ಮಾಡ್ಬ್ಯಾಡ. ಇರ್ಲಿ, ಏನೋ ಬರ್ಬೇಕು ಅಂತ ಅನಿಸಿತು, ಬಂದೆ. ನಿಮ್ಮಂಥ ದೊಡ್ಡೋರ ಜೊತಿಗೆ ಒಂದೀಟು ಮಾತಾಡೋದು ಇತ್ತು...' ಎಂದು ರಾಗವೆಳೆದೆ. ಮೊಮ್ಮಗ ಹಾಸಿದ ಜಮಖಾನೆಯ ಮೇಲೆ ಕುಳಿತೆ. `ಅದೇನ್ರಪಾ ದೇವ್ರೇ ಅಂಥಾದ್ದು? ನೀವು ಮುದ್ದಾಂ ಇಲ್ಲೀ ತನ್ಕ ಬಂದೀರಿ ಅಂದ್ಮ್ಯಾಲೆ ಏನೋ ದೊಡ್ ವಿಷಯಾನೇ ಇರ್ಬೇಕು. ಚಾ, ಪಾ ಮಾಡ್ಸಬೇಕು ಅಂದ್ರೆ ನೀವು ಹೊರ್ಗೇನು ತೊಗಣಾಂಗಿಲ್ಲಲ್ಲ? ಇರ್ಲಿ ಬಿಡ್ರಿ ಅದೇನೇಂದು ಹೇಳ್ರಿ ಮತ್ತೆ...' ನಾ ಅಜ್ಜನ ತಿಳುವಳಿಕೆ ಬಂದಂಥ ಮೊಮ್ಮಕ್ಕಳ ಕಡೆಗೆ ದೃಷ್ಟಿಸಿ ಹರಿಸಿದಾಗ ನನ್ನ ಮನದಿಂಗಿತ ಅರಿತವನಂತೆ, `ಹುಡುಗ್ರಾ, ನೀವು ಆ ಕಡೀಗೆ ದೂರ ಆಡಾಕ ಹೋಗ್ರಿ' ಅಂತ ಅಜ್ಜ ಅವರೆಲ್ಲರನ್ನೂ ಆಚೆ ಕಳುಹಿಸಿದ. 

`ಅದೇನೆಂದು ಈಗರ ಹೇಳ್ರಿ ಧಣೇರಾ...?' ಎಂದ. ನಿಧಾನವಾಗಿ ನನ್ನ ಮನದಳಲನ್ನು ತೋಡಿಕೊಂಡೆ. ಎಲ್ಲವನ್ನೂ ಶಾಂತಚಿತ್ತದಿಂದ ಕೇಳಿಸಿಕೊಂಡ ಅಜ್ಜ, `ಚು... ಚು...' ಅಂತ ಅನುಕಂಪ ವ್ಯಕ್ತಪಡಿಸಿದ. ದೃಷ್ಟಿಯನ್ನು ಆಕಾಶದ ಕಡೆಗೆ ನೆಟ್ಟ. ಏನನ್ನೋ ಗೇನಿಸಿಕೊಂಡ ತುಸು ಹೊತ್ತು. `ದೊಡ್ಡವರ ವಿಷ್ಯ. ಅದೆಂಗ ನಾ ಹೇಳೋಕಾಗ್ತದೆ ಧಣೇರೇ...? ಹೇಳಿದ್ರೆ ತೆಪ್ಪಾಗ್ತದೆ. ಮಾಡಿದೋರ ಪಾಪ ಆಡಿದೋರ ಬಾಯಾಗ ಅಂತ ಹೇಳ್ತಾರೆ. ಬ್ಯಾಡಬಿಡ್ರಿ...' ಎಂದ ಸತ್ಯವನ್ನು ಬಯಲಿಗಿಡಲು ಮುಜುಗರ ಪಟ್ಟವನಂತೆ. ನಾನೂ ಮೌನಿಯಾದೆ. ವಿಷಯ ಗಂಭೀರವಾಗಿ ಇರಬೇಕು ಅಂತ ಅಂದುಕೊಂಡೆ. `ಅಜ್ಜ, ಅದೇನಿದ್ರೂ ಹೇಳ್ಬಿಡು. ನಾ ತಪ್ಪು ತಿಳ್ಕೊಳ್ಳಂಗಿಲ್ಲ. ಕಲ್ಲು ಮನ್ಸು ಮಾಡ್ಕೊಂಡೇ ಬಂದೀನಿ. ಈ ವಯಸ್ಸಿನ್ಯಾಗ ನನ್ಗೆ ಆಗೋದಾದ್ರೂ ಏನೈತಿ? ಹೆಂಗೂ ನಮ್ ವಂಶ ನಿರ್ವಂಶ ಆಗ್ಯಾದ' ಎಂದೆ ಸೋತ ದನಿಯಲ್ಲಿ. ಅಜ್ಜ ಮತ್ತೆ ಸುಮ್ಮನಾದೆ. ನನಗ್ಯಾಕೋ ದುಃಖ ಉಕ್ಕಿ ಬಂತು. ಗಳಗಳ ಅಂತ ಅಳಲು ಮುಂದಾದೆ. `ಧಣೇರೇ, ಸಣ್ಣ ಹುಡುಗ್ರಂಗೆ ಅಳಬ್ಯಾಡ್ರಿ. ಸುಮ್‍ಸುಮ್ನೇ ಯಾಕ್ ಕಣ್ಣೀರು ತೆಗ್ಯಾಕತ್ತೀರಿ? ಒಂದೀಟು ಸಮಾಧಾನ ಇರ್ಲಿ. ಜೀವನಾನೇ ಮುಗಿಲಿಕ್ಕೆ ಬಂದೈತಿ. ಈಗ ಬ್ಯಾಸ್ರ ಮಾಡ್ಕೊಂಡ್ರೇನು ಬರ್ತೈತಿ? ಮೊದ್ಲು ಕಣ್ಣೀರು ಒರ್ಸಿಕೊಳ್ರಿ. ನಾ ನನ್ಗೆ ಗೊತ್ತಿದ್ದದ್ದು ಹೇಳ್ತೀನಿ. ಕೇಳ್ಸಿಕೊಂಡ್ಮ್ಯಾಲೆ ಮತ್ತೆ ದುಃಖ ಪಡ್ಬಾರ್ದು ಅಟ್ಟೇ...' ಎಂದ ತಣ್ಣನೆಯ ದನಿಯಲ್ಲಿ. ಅಂದ್ರೆ ಏನೋ ನಡೀಬಾರ್ದು ನಡದೈತಿ ನಮ್ಮ ಮನಿತನದಾಗ ಅಂತ ನನ್ ಮನದರಿವಿಗೆ ತಾಕಿತು. ಅಜ್ಜ ಒಮ್ಮೆ ಜೋರಾಗಿ ಕೆಮ್ಮಿದ. ಗಂಟಲಿಗೆ ಬಂದ ಕಫವನ್ನು ಕ್ಯಾಕರಿಸಿ ಉಗುಳಿದ. ಮತ್ತೆ ಆಕಾಶ ನೋಡತೊಡಗಿದ. ಮೌನಕ್ಕೆ ಶರಣಾದ. ಏನೋ ಆಲೋಚನೆಗೆ ಬಿದ್ದಿದೆ ಅಜ್ಜನ ಮನಸ್ಸು ಅಂತ ಅಂದುಕೊಂಡೆ. ನಿಧಾನಕ್ಕೆ ಮಾತಿಗೆ ಮುಂದಾದ.

`ಅಪ್ಪಾರೇ, ನಿಮ್ತಾತ, ನಿಮ್ಮಪ್ಪನ ದರ್ಬಾರ ಬಾಳ ಜೋರಿತ್ತು ಬಿಡ್ರಿ. ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರ, ಅನಾಚಾರ ಬಾಳ ಮಾಡ್ಯಾರ. ಬಿರಾಡಾ ಕಟ್ಲಿಲ್ಲ ಅಂತ ಓದೋಕೆ ಬರ್ಲಾರ್ದ ನಮ್ಮಂತೋರ ಭೂಮೀನ ತಮ್ಮ ಹೆಸ್ರಿಲೆ ಮಾಡ್ಕೊಂಡ್ರು. ಇಬ್ರಿಗೂ ಹೆಣ್ಣಿನ ಚಟ ಬಾಳ ಇತ್ರಿ. ಊರಾಗ ಬಡವರ ಮನಿ ಕೆಲ ಅಸಹಾಯಕ ಹೆಣ್ಣುಗೋಳನ್ನ ಅನುಭೋಗಿಸ್ಯಾರ್ರಿ. ಕೇರ್ಯಾಗ ಹನುಮಿ ಅಂತ ಒಬ್ಬಾಕಿ ಬಸವಿ ಇದ್ಳು. ಒಳ್ಳೇ ಚೆಲುವಿ. ಮೈಕೈ ತುಂಬ್ಕೊಂಡು ನೋಡಾಕ ಬಾಳ ಚೆಂದ ಇದ್ಳು. ಆಕೀನ್ನ ಮಾಲೀಗೌಡ್ರು ತನ್ನ ತೋಟದ ಮನ್ಯಾಗ ಇಟ್ಕೊಂಡಿದ್ರು. ಆಕಿ ಮಗ್ಳು ಚೆಂದ್ರಿ ಅಂತ. ಕೆಂಪು ಕೆಂಪನೆಯ ಮೈಬಣ್ಣದ ರತಿ ಅಂತ ಸುಂದ್ರಿ ಆಕಿ. ನೆದರು ಬರಂಗ ಇತ್ತು ಆ ಪಾಪ. ಚಂದ್ರಿ ದೊಡ್ಡಾಕಿ ಆಗೋದನ್ನೇ ಕಾಯ್ತಿದ್ದ ನಿಮ್ಮಪ್ಪ. ದೊಡ್ಡಾಕಿ ಆಗುತ್ಲೇ ಎತ್ತಾಕ್ಕೊಂಡು ಬಂದು ಊರ ಮುಂದಿನ ಹೊಲದಾಗಿನ ಮನ್ಯಾಗ ಇಟ್ಕೊಂಡ್ರು. ಇಂಥಾವು ಬಾಳ ಮಾಡ್ಯಾರ. ಹೊಲಕ್ಕೆ ಕೆಲಸಕ್ಕೆ ಬರ್ತಿದ್ದ ಕೆಲವೊಂದಿಷ್ಟು ಹೆಣ್ಣಾಳುಗಳ ಜೊತಿಗೆ ಸುಖ ಅನುಭವಿಸ್ಯಾರ. ಆವತ್ತು ನಮ್ಮ ಸಂಬಂಧಿಕ ಸಗರಪ್ಪನ ಸೊಸಿ ಶಾಂತವ್ವ ನಿಮ್ಮ ಹೊಲಕ್ಕೆ ಕೆಲಸಕ್ಕ ಹೋಗಿದ್ಳಂತ. ಹದಿನೆಂಟು ವಯಸ್ಸಿನ ಸಣ್ಣ ಹುಡುಗಿ. ಆಗರ ಗಂಡನ ಮನಿಗೆ ನಡ್ಯಾಕ ಬಂದಿತ್ತು. ಹೊಲ್ದಾಗಿನ ಕೆಲ್ಸ ಮುಗ್ದಮ್ಯಾಲೆ ಒಂದೀಟು ಮೇವು ಮಾಡ್ಕೊಂಡು ಹೋಗ್ಬೇಕಂತ ಬದುವು, ನೆಟ್ಟಿನ್ಯಾಗ ಮೇವು ಕೊಯ್ಯಾಕತ್ತಿತ್ತಂತೆ ಆ ಕೂಸು. ಮುಂದೆ ನೋಡ್ಕೊಂಡು ಮೇವು ಮಾಡಾಕತ್ತಿದ್ಯಾಗ ಹಿಂದಿನಿಂದ ಬಂದು ನಿಮ್ಮಪ್ಪ ಆ ಕೂಸಿನ ಎದಿಗೆ ಕೈಹಾಕಿದ್ರಂತೆ. ಆ ಹುಡುಗಿ ಬಿಡ್ಸಿಕೊಳ್ಳಾಕ ಕೊಸ್ರ್ಯಾಡಿತಂತೆ. ಕೈಯಾಗಿದ್ದ ಕುಡುಗೋಲನ್ನು ತೋರ್ಸಿ ಕಣ್ಣು ಕೆಂಪಗೆ ಮಾಡಿ ಒದರ್ಯಾಡಿದ್ಳಂತೆ. `ನಾ ನಿಮ್ಮ ಮಗ್ಳ ಸಮಾನ, ನನ್ನ ಕೆಡ್ಸಬ್ಯಾಡ್ರಿ' ಅಂತ ಬಡ್ಕೊಂಡಿತಂತೆ. ಆದ್ರೆ ನಿಮ್ಮಪ್ಪನ ಮನಸ್ಸು ಕರ್ಗಲಿಲ್ಲ. ನಿಮ್ಮಪ್ಪಾರ ಬಲದ ಮುಂದೆ ಆ ಹುಡುಗಿ ಸೋತೋದ್ಳಂತೆ. `ನಾಯಿ ಮುಟ್ಟಿದ ಮಡ್ಕಿಯಾಗಿ ನಾ ಜೀವನ ಮಾಡಾಕಿ ಅಲ್ರೀ. ನನ್ ಶೀಲ ಕೆಡಿಸಿದ ನಿಮ್ಮ ವಂಶ ನಾಶ ಆಗ್ಲಿ. ನನ್ನ ಉಸುರು ನಿಮ್ ಮನಿತನಕ್ಕೆ ತಟ್ಟದೇ ಇರಂಗಿಲ್ಲ ನೋಡ್ರಿ' ಎಂದು ರಂಪಾಟ ಮಾಡಿತಂತೆ ಆ ಹೆಣ್ಣು. 

ಅತ್ಯಾಚಾರ ಮಾಡಿದ ಮ್ಯಾಲೆ ನಿಮ್ಮಪ್ಪ ಮೀಸೆ ತಿರ್ವಿಕೋತ ಧೋತ್ರ ಉಟ್ಕೊಂಡು ಹೋಗ್ಬಿಟ್ರಂತೆ. ಆದ್ರೆ ಶಾಂತವ್ವ ಮನಿಗೆ ಹೋಗ್ಲಿಲ್ಲ. ಮೇವು ಕಟ್ಟಿಕೊಳ್ಳಾಕ ಒಯ್ದಿದ್ದ ಹಗ್ಗ ತೊಗೊಂಡು ಊರು ಸಮೀಪದ ಬೇವಿನ ಗಿಡಕ್ಕೆ ಉರ್ಲು ಹಾಕ್ಕೊಂಡು ಜೀವ ಕಳ್ಕೊಂಡ್ಬಿಟ್ತುರೀ. ಆ ಹೆಣ್ಣು ಜೀವ ಅದೆಷ್ಟು ಮರ ಮರ ಅಂತ ಮರ್ಗಿರ್ಬೇಕು ಅನ್ನೋದು ಆಕೀಗೇ ಗೊತ್ತು. ಆ ಹುಡುಗಿ ಉಸುರು ನಿಮ್ಮ ಮನಿತನಕ್ಕೆ ತಟ್ಟಿರ್ಬೇಕು ಅಂತ ಅನಸ್ತದ. ಇಂಥಾ ಸಂಗತಿಗೋಳು ಬಾಳ ಅದಾವ್ರೀ. ಬೆಳತನ ಕುಂತ್ಕೊಂಡು ಹೇಳಿದ್ರೂ ಮುಗ್ಯಾಂಗಿಲ್ಲ ಬಿಡ್ರಿ ಧಣೇರೇ...' ಅಂತ ಮಾಳಪ್ಪಜ್ಜ ಅಷ್ಟಕ್ಕೇ ಮಾತು ಮುಗಿಸಿದ್ದ. ನಾನು ಮಾತಿಲ್ಲದ ಮೂಕನಾಗಿಬಿಟ್ಟೆ. ಮುಖ ಮುಚ್ಚಿಕೊಂಡು ಮತ್ತೆ ಕಣ್ಣೀರು ಹಾಕಿದೆ. ಅಜ್ಜನೇ, `ಆಗಿದ್ದು ಆಗಿಹೋಗೈತಿ. ಈಗ ಚಿಂತಿಸಿ ಫಲವಿಲ್ಲ' ಅಂತ ನನ್ನ ಬೆನ್ನಮೇಲೆ ಕೈಯಾಡಿಸುತ್ತಾ ಸಾಂತ್ವನದ ಮಾತು ಹೇಳಿದ. ಅಜ್ಜನಿಗೆ ಧನ್ಯವಾದ ಹೇಳುತ್ತಾ ನಮಸ್ಕರಿಸಿ ಅಲ್ಲಿಂದ ಹೊರಟೆ. ಮನಸ್ಸು ಪ್ರಕ್ಷುಬ್ಧಗೊಂಡಿತ್ತು. ಮನದಲ್ಲಿ ಅವ್ಯಕ್ತ ವೇದನೆ ಮಡುವುಗಟ್ಟತೊಡಗಿತ್ತು. ಹೃದಯದಲ್ಲಿ ಹಿಂಡಿದ ಅನುಭವವಾಗತೊಡಗಿತ್ತು.

ಕೇರಿಗೆ ಹೋಗಿ ದ್ಯಾಮಜ್ಜನ ಕಾಣೋದೋ, ಬಿಡೋದೋ ಎಂಬ ದ್ವಂದ್ವದಲ್ಲಿತ್ತು ಮನಸ್ಸು. ಆದರೂ ಕಾಲುಗಳು ನನಗರಿವಿಲ್ಲದಂತೆ ಕೇರಿಯ ಕಡೆಗೆ ಎಳೆದುಕೊಂಡು ಹೋಗಿದ್ದವು. ಎದೆಯೊಳಗೆ ತುಡಿತ ಇತ್ತಲ್ಲ? ನನ್ನ ನೋಡುತ್ತಲೇ ದ್ಯಾಮಜ್ಜ, `ಅಡ್ಡಬಿದ್ದೆ ಬುದ್ಧೀ... ಈ ಹೊಲಸು ಕೊಂಪಿಗ್ಯಾಕ ಬಂದ್ರಿ...? ಹೇಳಿ ಕಳಿಸಿದ್ರೆ ನಾನೇ ಬರ್ತಿದ್ದೆ...' ಅಂತ ಹೇಳಿ ಮೈಬಗ್ಗಿಸಿ ನಮಸ್ಕರಿದ ವಿನೀತ ಭಾವದಲ್ಲಿ. ಪ್ರತಿ ನಮಸ್ಕಾರ ಹೇಳ್ದೆ. ನಾ ಪ್ರತಿ ನಮಸ್ಕಾರ ಹೇಳಿದ್ದಕ್ಕೆ ಅವನಿಗೆ ಗಾಬರಿ. `ಅದೇನು ಬುದ್ಧೀ, ಇಷ್ಟು ದೂರ ಬಂದ್ರೀ...? ಇತ್ಲಾಗ ಏನಾರ ಕೆಲ್ಸ ಇತ್ತೇನ್ರೀ...?' ಎಂದ ಮೈಯನ್ನು ಹಿಡಿಯಾಗಿಸಿಕೊಂಡು. `ಅಜ್ಜಾರೇ, ಏನೋ ಕೆಲಸದ ಮ್ಯಾಲೆ ಈ ಕಡೀಗೆ ಬಂದಿದ್ದೆ. ನಿಮ್ಮನ್ನೂ ಒಂಚೂರು ಮಾತಾಡ್ಸಿಕೊಂಡು ಹೋಗ್ಬೇಕಂತ ಅನಿಸಿತು, ಬಂದೆ.' ಪೀಠಿಕೆ ಹಾಕುತ್ತಾ ದ್ಯಾಮಜ್ಜನ ಯೋಗಕ್ಷೇಮ ವಿಚಾರಿಸಿದೆ. `ದೊಡ್ ಮಾತಾತು ನಿಮ್ದು ಧಣೇರೆ.' `ಅಜ್ಜ, ನಮ್ ಮನೀತನಕ್ಕೆ ಯಾರ್ದೋ ಶಾಪ ಅಂಟಿಕೊಂಡಂಗೆ ಕಾಣ್ತಿದೆ. ನಿಮ್ಗೆ ಗೊತ್ತೈತಿ, ನಮ್ ಮನಿತನ ಹೆಂಗಿದ್ದುದ್ದು ಹೆಂಗಾಗೇದ ಅಂತ. ನಮ್ ಮನ್ಯಾಗ ಯಾರಿಂದಾನೋ ಏನೋ ತಪ್ಪಾಗೈತಿ ಅಂತ ಅನಸ್ತೈತಿ. ನೀವು ಹಿರೇರು ಅದೀರಿ. ನಮ್ತಾತ, ನಮ್ಮಪ್ಪಾಜೀ ಕಾಲದ ವಿಷ್ಯ ನಿಮ್ಗೆ ಗೊತ್ತಿರ್ತದೆ.

 ಅದ್ಕೇ ಕೇಳ್ಕೊಂಡು ಹೋಗಾನಂತ ಬಂದೆ. ನಿಮ್ಗೆ ಗೊತ್ತಿದ್ದಿದ್ರೆ ಯಾವ್ದೇ ಅಂಜಿಕಿ, ಅಳುಕು ಇಲ್ದೇ ಹೇಳ್ಬಿಡ್ರಿ. ಹೆಂಗೂ ನಮ್ ಮನಿತನ ನಿರ್ವಂಶ ಆಗ್ಬಿಟ್ಟೈತಿ. ನಮ್ದು ಈಗ ಮುಳ್ಗೋ ಹಡಗು. ಯಾವಾಗಾದ್ರೂ ಮುಳ್ಗಿ ಹೋಗ್ಬೋದು. ಹೋಗೋಕೆ ಮುಂಚೆ ಒಂದೀಟು ಸತ್ಯ ತಿಳ್ಕೊಂಡು ಹೋಗಾನ ಅಂತ...' ಆಕಾಶ ನೋಡುತ್ತಾ, ದ್ಯಾಮಜ್ಜನ ಮುಖದ ಭಾವನೆಗಳನ್ನು ಓದುತ್ತಾ ಹೇಳಿದೆ. ಅವನೂ ನನ್ನ ಮುಖದ ಭಾವನೆಗಳನ್ನು ಗಮನಿಸುತ್ತಿದ್ದ. ಒಂದು ಕ್ಷಣ ಅವನ ಮುಖ ಗಡುಸಾಗಿ ಮತ್ತೆ ಸಹಜ ಸ್ಥಿತಿಗೆ ಬಂದಿದ್ದನ್ನು ನನ್ನ ಗಮನಕ್ಕೆ ಬಂತು. ಏನು ತಿಳಿಯಿತೋ ಏನೋ, ಕಣ್ಣುಗಳನ್ನು ಮುಚ್ಚಿಕೊಂಡ, ಮೌನಿಯಾಗಿಬಿಟ್ಟ. `ಯಾಕಜ್ಜ, ಏನಾಯಿತು? ಸುಮ್ಮನಾಗಿಬಿಟ್ಟೆಯಲ್ಲ? ಹೇಳುವ ಮನಸ್ಸಿಲ್ಲೇನು?' ಮೌನ ಮುರಿದು ನಾನೇ ಕೇಳಿದೆ. `ಎಪ್ಪಾ, ಏನಂತ ಹೇಳ್ಲೀ...? ದೊಡ್ಡವರ ಮಾತು ಹೇಳೋದ್ಕಿಂತ ಸುಮ್ನೇ ಇದ್ರೆ ಚೊಲೋ ಏನೋ?' ದ್ಯಾಮಜ್ಜ ಹೇಳೋದಿಕ್ಕೆ ಅನುಮಾನಿಸತೊಡಗಿದ. 

`ಹಂಗಾದ್ರೆ ಸತ್ಯ ಸುಳ್ಳಿನ ಕವಚದಾಗ ಹಂಗೇ ಮುಚ್ಚಿಹೋಗ್ಲಿ ಅಂತ ಅಂತೀಯೇನು?' ಮತ್ತೆ ಯೋಚನೆಗೆ ಬಿದ್ದ ದ್ಯಾಮಜ್ಜ. ಮೌನದ ಚಿಪ್ಪಿನೊಳಗೆ ತೂರಿಕೊಂಡ. `ಎಪ್ಪಾ, ನಿಮ್ತಾತ, ನಿಮ್ಮಪ್ಪ, ಮಾಲೀಗೌಡನ ಉಪಟಳ ಏನಂತ ಹೇಳ್ಲೀ? ಇವ್ರು ಮೂವಾರೂ ಸೇರ್ಕೊಂಡು ನಮ್ಮೂರಾಗ ಬಾಳ ಹೆಣ್ಮಕ್ಳ ಜೀವನ ಹಾಳು ಮಾಡಿದ್ರು. ಇವ್ರು ಮಾಡಿದ ನೀಚ ಕಾರ್ಯ ಸಹಿಸಿಕೊಳ್ಲಾರ್ದೇ ಸಗರಪ್ಪನ ಸೊಸಿ, ಲಿಂಗಾಯಿತರ ಶಿವಪ್ಪನ ಮಗ್ಳು ಉರ್ಲಾಕಿಕೊಂಡು ಸತ್ರು. ಇವ್ರ ಅತ್ಯಾಚಾರಕ್ಕೆ ತುತ್ತಾದ ಹೆಣ್ಣುಗಳ ಶಾಪಾನೇ ನಿಮ್ ಮನಿತನದ ನಾಶಕ್ಕೆ ಕಾರಣ ಅಂತ ನಾ ಅಂದ್ಕೊಂಡೀನಿ. ಹಂಗೇ ಇವ್ರು ಮೂವಾರೂ ಸೇರ್ಕೊಂಡು ನಮ್ಮಂತ ಬಡವರ ಭೂಮೀನೂ ನುಂಗಿದ್ರು. ಹೆಂಗ್ ನುಂಗಿದ್ರೋ ಹಂಗೇ ಅದೇನೋ ಉಳುವವನೇ ಒಡೆಯ ಎಂಬ ಸರಕಾರದ ಕಾನೂನಿನ್ಯಾಗ ವಾಪಾಸು ಕಕ್ಕಿಯೂ ಬಿಟ್ರು. ನಂದೂ ಒಂದೀಟು ಜಮೀನು ಹೋಗಿತ್ತು, ಮತ್ತೆ ಬಂತು. 

ನಿಮ್ಗೂ ಗೊತ್ತೈತಿ, ಈಗಿನ ಮಾಲಿಗೌಡ್ರ ಹಿರಿಮಗ ಅಪಘಾತದಾಗ ತೀರ್ಕೊಂಡಿದ್ದು. ಅವನ ಊರುಣಿಗೀನೂ ಬಾಳ ಆಗಿತ್ತಲ್ಲ? ಎರ್ಡನೇ ಮಗ ಪರದೇಶದಾಗ ನೌಕರಿ ಮಾಡಾಕ ವಿಮಾನದಾಗ ಹೋಗಾವತ್ತಿನ್ಯಾಗ ವಿಮಾನ ಅಪಘಾತ ಆಗಿ ಅಲ್ಲೇ ಆಕಾಶದಾಗ ಮಿಂಡ್ರಿಕೊಂಡು ಹೋದ್ನಲ್ಲ? ಮಕ್ಳು, ಮರಿ ಇಲ್ದೇ ಮಾಲಿಗೌಡ ಪರದೇಶಿಯಂತೆ ಪ್ರಾಣ ಬಿಟ್ನಲ್ಲ? ನಾ ಹೇಳಿದ್ದಕ್ಕೆ ಬ್ಯಾಸ್ರ ಮಾಡ್ಕೋಬ್ಯಾಡ್ರಿ. ಆಗಿದ್ದು ಆಗಿ ಹೋಗೈತಿ. ಆ ದೇವ್ರಿಚ್ಛೆ ಹಂಗಿತ್ತೋ ಏನೋ? ಆ ಶಾಪ ನೀವು ಉಣ್ಣಾಕತ್ತಿರೋದನ್ನು ಕಣ್ಣಾರೆ ಕಂಡು ನಮ್ಗೆ ಕಳ್ಳು ಕಿವಿಚಿದಂಗಾಗ್ಲಿಕತ್ತೇದ.' ಅಜ್ಜ ತನ್ನ ಮಾತಿಗೆ ಅಲ್ಲಿಗೇ ಪೂರ್ಣವಿರಾಮ ಹಾಕಿದ. ಅಜ್ಜನ ಕೈಹಿಡಿದುಕೊಂಡು ಕಣ್ಣಿಗೊತ್ತಿಕೊಂಡು ಅಲ್ಲಿಂದ ಭಾರವಾದ ಹೃದಯ ಹೊತ್ತು ಮನೆಗೆ ಬಂದಿದ್ದೆ. ಅಂದಿನಿಂದ ನನ್ನ ಮಾತುಗಳು ಮೊಟಕುಗೊಂಡಿದ್ದವು."  
                     ****

ಅಂದು ಹಗಲಿನಲ್ಲಿ ತುಸು ಬಿಡುವು ಕೊಟ್ಟಿದ್ದ ಮಳೆರಾಯ ರಾತ್ರಿ ವೇಗೋತ್ಕರ್ಷ ಪಡೆದುಕೊಂಡಿದ್ದ. ಜೋರಾಗಿ ಸುರಿಯತೊಡಗಿದ. ಮಳೆಯ ಆರ್ಭಟ ಎಲ್ಲರೆದೆಗಳಲ್ಲಿ ಭಯ ಹುಟ್ಟಿಸುವಂತಾಗಿತ್ತು. ಎದೆ ಝಲ್ಲೆನಿಸುವ ಗುಡುಗು, ಮಿಂಚು, ಸಿಡಿಲುಗಳ ಆರ್ಭಟದೊಂದಿಗೆ ಮಳೆರಾಯ ಆಕಾಶದಿಂದ ಧರೆಗಿಳಿಯತೊಡಗಿದ್ದ. ಆ ಮಳೆಯ ಹೊಡೆತಕ್ಕೆ ಊರಾಗಿನ ಒಂದಿಷ್ಟು ಮಣ್ಣಿನ ಮನೆಗಳು ನೆಲ ಕಚ್ಚತೊಡಗಿದ್ದವು. ವಿದ್ಯುತ್ ಯಾವಾಗಲೋ ಕೈಕೊಟ್ಟಿತ್ತು. ಗಾಢ ಗಾಢಾಂಧಕಾರದಲ್ಲಿ ಮಳೆ, ಗಾಳಿಯ ಶಬ್ದಗಳು ಕಿವಿಗಳಿಗೆ ಕಠೋರ ಎನಿಸತೊಡಗಿದ್ದವು. ರಂಗಣ್ಣನವರಿಗೂ ಜೀವದಲ್ಲಿ ಜೀವ ಇಲ್ಲದಂತಾಗಿತ್ತು. ನಿದ್ದೆ ಅನ್ನೋದು ಎತ್ತಲೋ ಹಾರಿಹೋಗಿತ್ತು. ಕಣ್ಣಿಗೆ ಕಣ್ಣು ಹಚ್ಚದೇ ಹಾಗೇ ಸೂರನ್ನು ದಿಟ್ಟಿಸುತ್ತಾ ಬಿದ್ದುಕೊಂಡಿದ್ದರು. ಚಿಮಣಿಯ ಬೆಳಕಿನಲ್ಲಿ ಎಲ್ಲವೂ ಮಸುಕು, ಮಸುಕು. `ನಮ್ಮ ಜೀವನವೇ ಮಸುಕಾಗಿ ಮರೆಯಾಗತೊಡಗಿದೆಯಲ್ಲ...?' ಎಂಬ ಉದ್ಘಾರ ಹೊರಟಿತ್ತು ರಂಗಣ್ಣನವರ ಹೃದಯಾಂತರಾಳದಿಂದ. ತುಳಸಾಬಾಯಿ ಮತ್ತು ಶಕುಂತಲಾಬಾಯಿಯವರ ಕಥೆಯೂ ಅದೇ ಆಗಿತ್ತು. ಭಯ ಅವರೆದೆಯೊಳಗೂ ಮಡುವುಗಟ್ಟತೊಡಗಿತ್ತು. 

ರಾತ್ರಿ ಏರಿದಂಗೆಲ್ಲ ಮಳೆಯ ಆರ್ಭಟ ತಾರಕಕ್ಕೇರತೊಡಗಿತ್ತು. ಆಗಲೇ ಸರಿ ರಾತ್ರಿ ಸರಿದಿತ್ತು. ಮಳೆಯ ವೇಗದೊಂದಿಗೆ ಗಾಳಿಯೂ ಸ್ಪರ್ಧೆಗಿಳಿದಂತೆ ಕಾಣುತ್ತಿತ್ತು. ಮಳೆ, ಗಾಳಿಯ ಜುಗಲ್‍ಬಂಧಿಗಳಿಗೆ ಮಣ್ಣಿನ ಮನೆಗಳು ಬಲಿಪಶುವಾಗತೊಡಗಿದ್ದವು. ಧಡಲ್, ಧಡಲ್ ಎಂದು ಅಲ್ಲಲ್ಲಿ ಮನೆಗಳು ಬೀಳುವ ಶಬ್ದ ಆಗಾಗ ಕೇಳಿಬರತೊಡಗಿತ್ತು. ದೇವರ ನಾಮ ಜಪಿಸುತ್ತಾ ರಂಗಣ್ಣನವರು ಮಲಗಿದ್ದರು. ಅಷ್ಟರಲ್ಲಿ ಧಡಲ್, ಧಡಲ್ ಅಂತ ಅವರ ಇಡೀ ಭವ್ಯ ಮನೆ ಕುಸಿದಿತ್ತು. ಮಣ್ಣಿನ ಅವಶೇಷಗಳ ನಡುವೆ ರಂಗಣ್ಣ ಮತ್ತು ಅವರ ಸಹೋದರಿಯರು ಮಣ್ಣಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋದರು. ಕಾಲಾಯ ತಸ್ಮೈ ನಮಃ. 

* ಶೇಖರಗೌಡ ವೀ ಸರನಾಡಗೌಡರ್,
ತಾವರಗೇರಾ-583 279, ತಾ:ಕುಷ್ಟಗಿ, ಜಿ:ಕೊಪ್ಪಳ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಕರ್ಮ ಫಲ”

  1. JANARDHANRAO KULKARNI

    ಹಳ್ಳಿಯಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆದ ಕಥೆ. ಚನ್ನಾಗಿದೆ.

  2. Raghavendra Mangalore

    ಗ್ರಾಮೀಣ ಭಾಗದ ಅಂದಿನ ಧನಿಕರ ದೌರ್ಜನ್ಯಕ್ಕೆ ತುತ್ತಾಗಿ ಶಾಪ ಹಾಕಿದವರ ಫಲ ಅವರ ಈಗಿನ ಕುಟುಂಬ ಸದಸ್ಯರು ಅನುಭವಿಸಬೇಕಾಗಿ ಬಂದದ್ದು ದುರ್ದೈವ. ನಿಜಕ್ಕೂ ಮನ ಮಿಡಿಯುವ ಕಥೆ. ಗ್ರಾಮೀಣ ಸೊಗಡಿನ ಭಾಷೆ ಇನ್ನೂ ಚಂದ. ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter