ಕರ್ನಾಟಕದ ನೈಋತ್ಯ ಭಾಗದಲ್ಲಿರುವ ವಿಶ್ವವಿಖ್ಯಾತ ವಿಶ್ವವಿದ್ಯಾಲಯದ ಜಗತ್ಪ್ರಸಿದ್ಧ ಕನ್ನಡ ವಿಭಾಗದಲ್ಲಿ ಪಿಎಚ್.ಡಿ. ಮಾಡಿದ ಉದಯೋನ್ಮುಖ ಲೇಖಕನೊಬ್ಬನಿಗೆ ಕಾರ್ತೀಕ ಮಾಸದ ಚಳಿರಾತ್ರಿಯಲ್ಲೊಂದು ದಿನ ಗಡದ್ದಾಗಿ ಊಟ ಮಾಡಿ ಮಲಗಿದಾಗ ಕನಸೊಂದು ಬಿತ್ತು. ಆ ಸುಂದರ ಕನಸು ಅವನನ್ನು ಅದೆಷ್ಟು ಸಂತೋಷ ಪಡಿಸಿತೆಂದರೆ ಅದರಿಂದ ಉತ್ತೇಜಿತನಾಗಿ ಅವನೊಂದು ಲಲಿತ ಪ್ರಬಂಧ ಬರೆದ. ಅದರ ಹೆಸರು, “ನಾನು ಸಿರಿವಂತನಾದರೆ…” ಅದರ ಪಠ್ಯವನ್ನು ಯಥಾವತ್ತಾಗಿ ಕೆಳಗೆ ಕೊಡಲಾಗಿದೆ.
ನಾನು ಸಿರಿವಂತನಾದರೆ ಮೊದಲು ಒಂದು ಭವ್ಯ ಬಂಗಲೆ ಕಟ್ಟಿಸುತ್ತೇನೆ. ಬಂಗಲೆಗೆ ‘ಸಾಹಿತ್ಯ ಭವನ’ ಎಂದು ಹೆಸರಿಡುತ್ತೇನೆ. ನಾನು ತುಂಬ ಒಳ್ಳೆಯ ಓದುಗ ಎಂದು ತೋರಿಸಿಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಪ್ರಕಟಿಸಿದ, ಯಾರೂ ಓದದ, ಬೃಹತ್ ಗಾತ್ರದ ಗ್ರಂಥಗಳನ್ನು ಕೊಂಡು ಗಾಜಿನ ಕಪಾಟುಗಳಲ್ಲಿ ಜೋಡಿಸಿಡುತ್ತೇನೆ. ಬುದ್ಧಿಜೀವಿಗಳು ಭಯ, ಭಕ್ತಿಯಿಂದ ಕಾಣುವ ಪಾಶ್ಚಾತ್ಯ ಲೇಖಕರ ಇಂಗ್ಲಿಷ್ ಆವೃತ್ತಿಯ ಬಣ್ಣ ಬಣ್ಣದ ಪುಸ್ತಕಗಳನ್ನು ಸಹ ಜೋಡಿಸಿಡುತ್ತೇನೆ. ನಾನು ಇವುಗಳನ್ನು ಓದುವ ವಿಷಯ ಇಲ್ಲಿ ಅಪ್ರಕೃತ!
ಕರ್ನಾಟಕದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಸ್ಥಾಪಿತವಾಗಿರುವ ವಿಶ್ವವಿದ್ಯಾಲಯಗಳ ಯಾವುದಾದರೊಂದು ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಮಾತ್ರಕ್ಕೆ ಕೇಂದ್ರಾಡಳಿತ ಪ್ರದೇಶವೊಂದರ ಲೆಫ್ಟಿನೆಂಟ್ ಗವರ್ನರ್ ಆದ ಹಾಗೆ ವರ್ತಿಸುವ ಅನೇಕ ಜನರನ್ನು ನಾನು ನೋಡಿದ್ದೇನೆ. ಆದ್ದರಿಂದ ನಾನೂ ಸಹ ಹಣ ಖರ್ಚು ಮಾಡಿ ಒಂದು ಸಹಾಯಕ ಪ್ರಾಧ್ಯಾಪಕ ಹುದ್ದೆ ಖರೀದಿಸಿ, ಲೆಫ್ಟಿನೆಂಟ್ ಗವರ್ನರ್ ತರಹ ಮರೆಯುತ್ತೇನೆ. ಪಿಎಚ್.ಡಿ. ಮಾಡುವ ಅರ್ಧಂಬರ್ಧ ಓದಿದವರು ನನ್ನ ಭಕ್ತರಾಗುವಂತೆ ಮಾಡುತ್ತೇನೆ. ಪಿಎಚ್.ಡಿ. ಮಾಡುವ ಮಹಿಳಾ ಮಣಿಗಳ ನಡುವೆ ವೃದ್ಧ ಕೃಷ್ಣನಂತೆ ಮಿಂಚುವ, ಐವತ್ತರ ಹರೆಯದ ಸಹಾಯಕ ಪ್ರಾಧ್ಯಾಪಕನ ದಾಖಲೆ ಮುರಿಯುತ್ತೇನೆ. “ಇದೆಲ್ಲ ಹೇಗೆ ಸಾಧ್ಯ?” ಎಂದು ನೀವು ಕೇಳಬಹುದು. ಇದಕ್ಕೆ, “ಸ್ವತಂತ್ರ ಭಾರತದಲ್ಲಿ ಎಲ್ಲವೂ ಸಾಧ್ಯ” ಎಂಬುದು ನನ್ನ ನಮ್ರ ಉತ್ತರ!
ಉದಯೋನ್ಮುಖ ಲೇಖಕನಾದ ನನಗೆ ಹೆಚ್ಚು ಪ್ರಸಿದ್ಧಿ ಮತ್ತು ಪ್ರಚಾರ ಸಿಗುತ್ತಿಲ್ಲ. ಆದ್ದರಿಂದ ನಾನು ಲೇಖಕ ಮಾತ್ರವಲ್ಲ, ಪ್ರಕಾಶಕನೂ ಆಗುತ್ತೇನೆ. ನನ್ನ ಹಾಗೆಯೇ ಹೆಸರು ಮಾಡಲು ಹಂಬಲಿಸುತ್ತಿರುವ ಉದಯೋನ್ಮುಖ ಲೇಖಕ/ಕಿಯರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಒಂದು ಪ್ರಶಸ್ತಿ ಕೊಡುತ್ತೇನೆ. ಅವರ ಪುಸ್ತಕಗಳನ್ನು ಪ್ರಕಟಿಸುತ್ತೇನೆ. ಕೆಲವರನ್ನು ಹುರಿದುಂಬಿಸಿ ಬೇರೆ ಭಾಷೆಯ ಜನಪ್ರಿಯ ಕೃತಿಗಳನ್ನು ಅನುವಾದ ಮಾಡಿಸುತ್ತೇನೆ. ಹೀಗೆ ಮಾಡಿಯೇ ವಿಶ್ವವಿಖ್ಯಾತಿ ಪಡೆದ ಬಾಣಲಿ ತಲೆಯ ಲೇಖಕನೊಬ್ಬ ಬೆಂಗಳೂರಿನಲ್ಲಿದ್ದಾನೆ. ಅವನಿಗೆ ಇದೆಲ್ಲ ಸಾಧ್ಯವಾಗಬಹುದಾದರೆ, ನನಗೇಕೆ ಆಗಬಾರದು?
ಇತ್ತೀಚೆಗೆ ಕನ್ನಡದಲ್ಲಿ ತಲೆದಿಂಬಿನ ಗಾತ್ರದ ಐತಿಹಾಸಿಕ ಕಾದಂಬರಿಗಳನ್ನು ಬರೆಯುವ ಟ್ರೆಂಡು ಹೆಚ್ಚಾಗುತ್ತಿದೆ. ನಾನು ಮಾತ್ರ ಇದರಿಂದ ಹೊರಗುಳಿಯಲು ಹೇಗೆ ಸಾಧ್ಯ? ನಾನೂ ಕೂಡ ಹತ್ತು ಹಲವು ಆಕರ ಗ್ರಂಥಗಳನ್ನಿಟ್ಟುಕೊಂಡು ಅಭ್ಯಾಸ ಮಾಡಿ, ಐದಾರು ನೂರು ಪುಟಗಳ ದಪ್ಪನೆಯ ಕಾದಂಬರಿ ಬರೆಯುತ್ತೇನೆ. ಅದರ ಗುಣಮಟ್ಟ ಹೇಗೆಯೇ ಇರಲಿ, ಭೇಟಿಯಾದಾಗಲೆಲ್ಲ ಕಾಲಿಗೆ ಬಿದ್ದು ನಮಸ್ಕಾರ ಮಾಡುವ ಮೂಲಕ ವಿಧೇಯತೆ ತೋರಿಸಿದರೆ ಸಂತೋಷ ಪಡುವ ಬೆಂಗಳೂರಿನ ಹಿರಿಯ ಸಾಹಿತಿಗಳಿಂದ ಮುನ್ನುಡಿ, ಬೆನ್ನುಡಿ ಬರೆಯಿಸುತ್ತೇನೆ. ಸಚಿವರು, ಶಾಸಕರ ಹಿಂದೆ ಶ್ವಾನಗಳಂತೆ ಓಡಾಡುವ ಬುದ್ಧಿಜೀವಿಗಳನ್ನು ಕರೆಯಿಸಿ ಅದ್ದೂರಿಯಾಗಿ ಪುಸ್ತಕ ಬಿಡುಗಡೆ ಮಾಡಿಸುತ್ತೇನೆ. ಫೇಸ್‌ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ಪ್ರಚಾರ ಮಾಡುತ್ತೇನೆ. ಇದಕ್ಕಾಗಿ ಬರವಣಿಗೆಯ ಶ್ರೀಕಾರ ಗೊತ್ತಿರದಿದ್ದರೂ ಗಿಮಿಕ್ಕುಗಳನ್ನು ಮಾಡಿಯೇ ಖ್ಯಾತಿ ಪಡೆದ ಬೆಂಗಳೂರಿನ ಕೆಲವು ಲೇಖಕ/ಕಿಯರ ನೆರವು ಪಡೆಯುತ್ತೇನೆ. ತಾವು ಬರೆದ ಕಳಪೆ ಪುಸ್ತಕಗಳನ್ನು ಶಾಂಪೂ, ಸೋಪುಗಳಂತೆ ಮಾರಾಟ ಮಾಡುವ ಭಂಡ ಲೇಖಕ/ಕಿಯರಿರುವಾಗ ಇದು ಯಾವ ಮಹಾ ವಿಷಯ?
ನನ್ನ ಐತಿಹಾಸಿಕ ಕಾದಂಬರಿ ಪ್ರಕಟವಾದ ನಂತರ ಉತ್ತರ ಕರ್ನಾಟಕ, ಹಳೆ ಮೈಸೂರು ಮತ್ತು ಕರಾವಳಿ ಭಾಗದ ಫೇಸ್‌ಬುಕ್ ವಿಮರ್ಶಕರಿಂದ ಯದ್ವಾತದ್ವಾ ಹೊಗಳಿ ವಿಮರ್ಶೆ ಬರೆಯಿಸುತ್ತೇನೆ. ಇನ್ಸ್ಟಾಗ್ರಾಂನಲ್ಲಿ ನನ್ನ ಪುಸ್ತಕ ಹಿಡಿದು ಫೋಟೋ ತೆಗೆಯಿಸಿದ ಓದುಗರ ಫೋಟೋ ಹಾಕುತ್ತೇನೆ. ಕೆಲಸವಿಲ್ಲದ ಮಂದಿ ವಾಟ್ಸಪ್ ಗುಂಪಿನಲ್ಲಿ ನನ್ನ ಪುಸ್ತಕದ ಬಗ್ಗೆ ಚರ್ಚೆ ಮಾಡುವಂತೆ ಮಾಡುತ್ತೇನೆ. ಪುಸ್ತಕದ ಪ್ರಚಾರಕ್ಕಾಗಿಯೇ ಸಾಹಿತ್ಯಕ ಪ್ರವಾಸ ಕೈಗೊಳ್ಳುತ್ತೇನೆ. ನನ್ನ ಪುಸ್ತಕಗಳನ್ನು ಮಾರಾಟ ಮಾಡಬಲ್ಲ ಸಾಮರ್ಥ್ಯವಿರುವ ಪುಸ್ತಕ ಮಾರಾಟ ಮಳಿಗೆಗಳಿಗೆ ಮಾತ್ರ ಭೇಟಿ ನೀಡುತ್ತೇನೆ. ಯಾರಿಗೂ ಒಂದೇ ಒಂದು ಗೌರವ ಪ್ರತಿ ಕೊಡುವುದಿಲ್ಲ. ಕೊಂಡು ಓದುವ ಓದುಗರಿಗೆ ಮಾತ್ರ ಹಸ್ತಾಕ್ಷರ ನೀಡುತ್ತೇನೆ. ನನ್ನ ಪುಸ್ತಕದ ಬಗ್ಗೆ ಟೀಕೆ ಮಾಡುವವರ ಮೇಲೆ ನನ್ನ ಹಿಂಬಾಲಕರ ಮೂಲಕ ಬೆದರಿಕೆ ಹಾಕಿಸುತ್ತೇನೆ. ಬೆಂಗಳೂರಿನ ಬಾಣಲಿ ತಲೆಯ ಲೇಖಕನೊಬ್ಬ ಹೀಗೆಯೇ ಮಾಡುತ್ತಾನೆ. ನಾನು ಮಾಡಿದರೆ ತಪ್ಪೇನು ಸ್ವಾಮಿ?
ಇಷ್ಟೆಲ್ಲ ಮಾಡಿದ ನಂತರ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನೀಡುವ ಕನಿಷ್ಠ ಮೂರ್ನಾಲ್ಕು ಪ್ರಶಸ್ತಿ ಸಿಗದಿದ್ದರೆ ಏನು ಮಾಡಿದಂತಾಯಿತು? ಕರ್ನಾಟಕದ ಸಣ್ಣಪುಟ್ಟ ಪಟ್ಟಣಗಳ ಗಲ್ಲಿಗಲ್ಲಿಗಳಲ್ಲಿ ಉಡುಪಿ ಹೋಟೆಲುಗಳಂತೆ ತಲೆಯೆತ್ತಿರುವ ವಿವಿಧ ಪ್ರತಿಷ್ಠಾನಗಳ, ವೈವಿಧ್ಯಮಯ ಪ್ರಶಸ್ತಿಗಳನ್ನು ಹಣ ಕೊಟ್ಟು ಖರೀದಿಸುತ್ತೇನೆ. ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳು ನೀಡುವ ಪ್ರಶಸ್ತಿಗಳನ್ನು ವಿಶ್ವಪ್ರಯತ್ನ ಪಟ್ಟು ನನ್ನದಾಗಿಸಿಕೊಳ್ಳುತ್ತೇನೆ. ಇಂತಹ ಪ್ರಶಸ್ತಿ ಸಮಿತಿಗಳಲ್ಲಿರುವ ವೃದ್ಧ ಲೇಖಕರಿಗೆ ಮದ್ಯ, ಮಾಂಸಾದಿಗಳಿಂದ ತುಂಬಿದ ಭೋಜನ ಕೂಟ ಏರ್ಪಡಿಸುತ್ತೇನೆ. ಐದು ರೂಪಾಯಿ ಬೆಲೆಯ ಅಂಚೆ ಲಕೋಟೆಯ ಗಾತ್ರದ ಕವರಿನಲ್ಲಿ ಐನೂರರ ಕೆಲವು ನೋಟುಗಳನ್ನಿಟ್ಟು ಕೊಡುತ್ತೇನೆ. ಕೆಲವರಿಗೆ ಕಾಲಿಗೆ ಬಿದ್ದು ನಮಸ್ಕರಿಸುವ ಪ್ರಸಂಗ ಬಂದರೆ ಅದಕ್ಕೂ ಸಿದ್ಧ. ವೃದ್ಧರ ಕಾಲಿಗೆ ಬಿದ್ದರೆ ತಪ್ಪೇನು? ಷಡಾನನ, ಭುವನೇಂದ್ರ, ರಾಮಾಪುರ, ರಜಾಕ್, ಕಪಿಲಾನಂದ, ನಿತ್ಯಾನಂದ, ಸದಾನಂದ, ನಿಶಾ, ಸ್ತಂಭಿನಿ, ಕುಂಭಿನಿ, ರತಿ, ಕಾವ್ಯಶ್ರೀ, ಭಾಗ್ಯ, ಲಕ್ಷತಾ, ರುಖಿಯಾ ಸೇರಿದಂತೆ ಮುಂತಾದವರು ಹೀಗೆಯೇ ಮಾಡಿ ಪ್ರಶಸ್ತಿ ಪಡೆದ ವಿಷಯ ಎಲ್ಲರಿಗೂ ಗೊತ್ತಿರುವಂತಹದೇ ಆಗಿದೆ. ನಾನು ಇವರ ಮಟ್ಟಕ್ಕಂತೂ ಇಳಿಯುವುದಿಲ್ಲ!
ಬೆಂಗಳೂರು, ಮೈಸೂರು ಅಥವಾ ಮಂಗಳೂರಿನಲ್ಲಿ ಕಾಮವೀರಬ್ರಹ್ಮ ಪುಸ್ತಕ ಸಂತೆ 3.0 ಆಯೋಜಿಸುತ್ತೇನೆ. ಪ್ರಚಾರ ಮತ್ತು ಪ್ರಸಿದ್ಧಿಗಾಗಿ ಹಪಾಹಪಿಯುಳ್ಳ ಎಲ್ಲ ವಯೋಮಾನದ ಲೇಖಕ/ಕಿಯರನ್ನು ಪುಸ್ತಕದಂಗಡಿಯಲ್ಲಿ ಸೇಲ್ಸ್‌ಮನ್/ಸೇಲ್ಸವುಮೆನ್ ತರಹ ಕೂಡಿಸಿ, ಪುಸ್ತಕ ಕೊಂಡ ಓದುಗರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮತ್ತು ಹಸ್ತಾಕ್ಷರ ನೀಡಲು ಹಚ್ಚುತ್ತೇನೆ. ವಿವಿಧೆಡೆಯ ಪುಸ್ತಕ ಮಾರಾಟಗಾರರನ್ನು ಕರೆಸಿ, ಇದೊಂದು ಯಾರೂ ಮಾಡದ ಕಾರ್ಯ ಮಾಡುತ್ತಿದ್ದೇನೆಂದು ಡಂಗುರ ಹೊಡೆಸುತ್ತೇನೆ. ಪುಸ್ತಕ ಸಂತೆ 3.0 ಹಾವಳಿಯಿಂದಾಗಿ ಐದು ಕೋಟಿ ರೂಪಾಯಿಗಳ ವ್ಯವಹಾರ ನಡೆಯಿತೆಂದು ಶಂಖ ಊದುತ್ತೇನೆ. ಬೆಂಗಳೂರಿನ ಅತೃಪ್ತ ಆತ್ಮಗಳಂತಿರುವ ಸಾಹಿತಿಗಳಿಂದ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ನನ್ನ ಪುಸ್ತಕ ಸಂತೆ 3.0 ಅಭೂತಪೂರ್ವ ಯಶಸ್ಸನ್ನು ಗಳಿಸಿದೆಯೆಂದು ಕಮೆಂಟು ಹಾಕಿಸುತ್ತೇನೆ, ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿಸುತ್ತೇನೆ. ನನ್ನ ಕಾಮವೀರಬ್ರಹ್ಮ ಸಾಹಸಗಾಥೆಯ ಕುರಿತು ಸರ್ಪಭೂಷಣ ಸ್ವಾಮಿ, ಪ್ರಜ್ಞಾವಂತ ಕಾಮತ್, ಅಬ್ದುಲ್ ರಜಾಕ್, ಶೋಭನಾ, ನಂದನಾ, ಸಂಜನಾ, ಪೌರ್ಣಮಿ, ರತಿ ಮುಂತಾದ ಲೇಖಕ/ಕಿಯರ ನೇತೃತ್ವದಲ್ಲಿ ತಲಾ ಒಂದು ಸಾವಿರ ಪುಟಗಳ ಹತ್ತು ಸಂಪುಟಗಳನ್ನು ತರುತ್ತೇನೆ. ಎಲ್ಲರನ್ನೂ ಲೇವಡಿ ಮಾಡಿ ಬರೆಯುವ ಮತ್ತು ಭಾಷಣ ಮಾಡುವ ಉತ್ತರ ಕರ್ನಾಟಕದ ತುಂಟ ಬಾಲಕ ವಿಕ್ರಾಂತ ಸಹ ನನ್ನ ಸಾಧನೆ ಒಪ್ಪಿಕೊಳ್ಳುವಂತೆ ಮಾಡುತ್ತೇನೆ.
ನನ್ನ ಕಾಮವೀರಬ್ರಹ್ಮ ಪ್ರಕಾಶನದಲ್ಲಿ ಯುವ ಮತ್ತು ಮಧ್ಯವಯಸ್ಕ ಲೇಖಕಿಯರಿಗೆ ವಿಶೇಷ ಸವಲತ್ತುಗಳನ್ನು ನೀಡುತ್ತೇನೆ. ಅವರು ಏನು ಬರೆದರೂ ಪ್ರಕಟಿಸುತ್ತೇನೆ. ಅವರ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸುತ್ತೇನೆ. ಅವರಿಗೆ ಸಣ್ಣಪುಟ್ಟ ಪ್ರಶಸ್ತಿ ಕೊಡಿಸುತ್ತೇನೆ. ಮಹಿಳಾ ಮಣಿಗಳಿಗಾಗಿಯೇ ಪ್ರತ್ಯೇಕ ಫಂಡ್ ತೆಗೆದಿರಿಸುತ್ತೇನೆ. ಬೆಂಗಳೂರಿನ ಖತರ್ನಾಕ್ ಉದ್ಯಮಿಯೊಬ್ಬ ಹೀಗೆ ಮಾಡಿಯೇ ಅಪಾರ ಖ್ಯಾತಿ ಪಡೆದಿದ್ದಾನೆ. ಕನ್ನಡದ ತುಂಬ ಜನ ಲೇಖಕ/ಕಿಯರು ಸ್ವಾಭಿಮಾನ, ಪ್ರತಿಷ್ಠೆ ಎಲ್ಲ ಬದಿಗಿಟ್ಟು ಅವನ ಮುಂದೆ ಮಂಡಿಯೂರಿದ್ದಾರೆ. ಖ್ಯಾತ ಲೇಖಕ ದೇವನೂರರು ಹೇಳುವಂತೆ, “ಸಂಬಂಜ ಅನ್ನೋದು ದೊಡ್ಡದು ಕಣಾ!” ಎಂಬುದು ಈಗ, “ದುಡ್ಡು ಅನ್ನೋದು ದೊಡ್ಡದು ಕಣಾ!” ಎಂಬ ಸಂದರ್ಭ ಉಂಟಾಗಿದೆ. ಹೀಗಾಗಿ ನಾನು ಇದನ್ನೆಲ್ಲ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಇತ್ತೀಚೆಗೆ ಬರೆಯುತ್ತಿರುವ ಲೇಖಕ/ಕಿಯರಿಗೆ ಒಣ ಆದರ್ಶಗಳಿಲ್ಲ. ಹೇಗಾದರೂ ಮಾಡಿ ಹೆಸರು ಮತ್ತು ಹಣ ಮಾಡಬೇಕೆಂಬ ಹಪಾಹಪಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀಮಂತರನ್ನು ಹೇಗೆ ಗೌರವಿಸಬೇಕೆಂದು ಈಗಿನವರಿಗೆ ಗೊತ್ತಿದೆ! ಆದ್ದರಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ನನ್ನಂಥ ಶ್ರೀಮಂತರಿಗೆ ಈಗ ಶುಕ್ರದೆಸೆ ಆರಂಭವಾಗಿದೆ.
*******
4 thoughts on “ಉದಯೋನ್ಮುಖ ಲೇಖಕನಿಗೆ ಬಿದ್ದ ಕನಸು”
ಸಾಹಿತ್ಯ ಕಟ್ಟುವ ಸದ್ಯದ ಲೇಖಕರ ‘ ಸ್ಕ್ಯಾನಿಂಗ್ ‘ ತೆಗೆದು ನಮಗೆ ತೋರಿಸಿ ಮುಂದಿನ ದಾರಿ ಹೀಗಿರಬೇಕೆಂದು ಮಾರ್ಗದರ್ಶನ ಮಾಡಿದ ಉದಯೋನ್ಮುಖ ಲೇಖಕನಿಗೆ ಹೃತ್ಪೂರ್ವಕ ಧನ್ಯವಾದಗಳು.
( ಕೃಪೆ : ವಿಕಾಸ ಹೊಸಮನಿ )
ಕಟು ವಾಸ್ತವವನ್ನು ವಿಡಂಬನೆಯ ರೂಪದಲ್ಲಿ ಚಿತ್ರಿಸಿದ ಲೇಖಕನಿಗೆ ಅಭಿನಂದನೆಗಳು.
ಪ್ರಚಲಿತ ಸಾಹಿತ್ಯ ಲೋಕದ ಅಸಲೀ ಒಳಹೊರಗನ್ನು ಸವಿಸ್ತಾರವಾಗಿ ತಿವಿಯುತ್ತ ಬರೆದ ವಿಡಂಬನೆ ಸೊಗಸಾಗಿದೆ.
ಅಭಿನಂದನೆಗಳು
Very nice 😊