‘ಪಟೇಲರ ಹುಲಿ ಬೇಟೆ’- ಕೃತಿ ಪರಿಚಯ

ಕೃತಿ: ಪಟೇಲರ ಹುಲಿ ಬೇಟೆ.
ಕೃತಿಕಾರರು: ವೆಂಕಟ್ರಾಜ ಯು. ರಾವ್
ಪ್ರಕಾಶನ: ಶ್ರೀ ರಾಮ ಪ್ರಕಾಶನ, ಮಂಡ್ಯ.

ಎಲ್ಲರೂ ತಮ್ಮ ಜೀವನದಲ್ಲಿ ಅನೇಕ ಘಟನೆ, ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಾರೆ. ಅವುಗಳಲ್ಲಿ ಕೆಲವು ನಗೆಯುಕ್ಕಿಸುವ ಪ್ರಸಂಗಗಳು ಚಿರಕಾಲ ಮನದಲ್ಲಿ ಉಳಿದು ನೆನಪಾದಾಗಲೆಲ್ಲ ಮುದ ನೀಡುವಂತಹವಾಗಿರುತ್ತವೆ. ಇತರರಿಂದ ಕೇಳಿದ ಕೆಲ ವಿನೋದ ಘಟನೆಗಳನ್ನೂ ನಮ್ಮ ಮನಸ್ಸು ಊಹಿಸಿಕೊಂಡು ಕಚಗುಳಿಯನ್ನನುಭವಿಸುತ್ತದೆ. ಅಂತಹ ಸಂದರ್ಭಗಳನ್ನು ಕತೆಗಾರ ಲಘು ಹಾಸ್ಯ ಶೈಲಿಯಲ್ಲಿ ಕತೆಗಳನ್ನಾಗಿಸಿದಾಗ ಓದುಗ ಕೂಡ ಆ ಭಾವಗಳಲ್ಲಿ ತೇಲಿ ಮನ ಪ್ರಫುಲ್ಲಿತವಾಗಲು ಸಹಕಾರಿಯಾಗುತ್ತದೆ. ಇಂತಹ ನವಿರು ಹಾಸ್ಯ ಕತೆಗಳ ಸಂಕಲನ ವೆಂಕಟ್ರಾಜ ಯು ರಾವ್ ಅವರ ‘ಪಟೇಲರ ಹುಲಿ ಬೇಟೆ’. ಈ ಸಂಕಲನದಲ್ಲಿ ನಿರೂಪಿತವಾಗಿರುವ ಅನೇಕ ರಂಜಕ ಪ್ರಸಂಗಗಳು ಮನಸೆಳೆಯುತ್ತವೆ.

‘ಪಟೇಲರ ಹುಲಿ ಬೇಟೆ’ ಕೃತಿಯು ಹಿರಿಯ ಲೇಖಕ ವೆಂಕಟ್ರಾಜ ಯು. ರಾವ್ ಅವರ ಚೊಚ್ಚಲ ಕನ್ನಡ ಕೃತಿಯಾಗಿದೆ. ನಿವೃತ್ತ ಅಭಿಯಂತರರು, ಉದ್ಯಮಿಯಾಗಿರುವ ಅವರು ಪ್ರವೃತ್ತಿಯಲ್ಲಿ ಚಿತ್ರ ಕಲಾವಿದರೂ, ಅನುವಾದಕರೂ ಆಗಿದ್ದಾರೆ. ಅವರು ಕನ್ನಡದ ಖ್ಯಾತ ಲೇಖಕಿ ಮಿತ್ರಾ ವೆಂಕಟ್ರಾಜ್ ಅವರ ಸಣ್ಣ ಕತೆಗಳನ್ನು ‘ದ ವೈಟ್ ಶಿಫಾನ್ ಸಾರಿ’ ಎಂಬ ಹೆಸರಿನಲ್ಲಿ ಮತ್ತು ‘ಪಾಚಿ ಕಟ್ಟಿದ ಪಾಗಾರ’ ಕಾದಂಬರಿಯನ್ನು ‘ದಿ ವಾರ್ಪ್ ಡ್ ಸ್ಪೇಸ್ ‘ ಹೆಸರಿನಲ್ಲಿ ಸಮರ್ಥವಾಗಿ ಆಂಗ್ಲಭಾಷೆಗೆ ಅನುವಾದಿಸಿದ್ದಾರೆ. ಆ ಕೃತಿಗಳು ಈಗಾಗಲೇ ಜನಮನ್ನಣೆಯನ್ನು ಗಳಿಸಿವೆ.

ಮಂಡ್ಯದ ಶ್ರೀರಾಮ ಪ್ರಕಾಶನದಿಂದ ಮುದ್ರಣ ಕಂಡ ಪಟೇಲರ ಹುಲಿ ಬೇಟೆ ಕೃತಿಯ ಆಕರ್ಷಕ ಮುಖಪುಟ ಚಿತ್ರವನ್ನು ಸ್ವತಃ ವೆಂಕಟ್ರಾಜ್ ಅವರೇ ರಚಿಸಿದ್ದಾರೆ. ಒಳಪುಟಗಳಲ್ಲಿ ಕಥನಗಳಿಗೆ ಸಾಂದರ್ಭಿಕ ರೇಖಾಚಿತ್ರಗಳನ್ನು ಶ್ರೀಧರ ರಾವ್ ಮತ್ತು ವೆಂಕಟ್ರಾಜ್ ರಾವ್ ಅವರು ಬರೆದಿದ್ದಾರೆ.

ಈ ಕೃತಿಯಲ್ಲಿ ಒಟ್ಟು 19 ಸಂಕಥನಗಳಿವೆ. ಉತ್ತಮ ಪುರುಷ ನಿರೂಪಣೆಯಲ್ಲಿ ಸಾಗುವ ಇಲ್ಲಿಯ ಕೆಲವು ಕಥಾನಕಗಳು ಅನುಭವಜನ್ಯ ಎಂಬಂತಹ ಭಾವನೆಯನ್ನು ಪೋಷಿಸುತ್ತಾ ಲಲಿತ ಪ್ರಬಂಧ ಮತ್ತು ಹರಟೆ ಶೈಲಿಯಲ್ಲಿ ರಸವತ್ತಾಗಿ ಚಿತ್ರಣಗೊಂಡಿವೆ. ಲಘು ಹಾಸ್ಯದೊಂದಿಗೆ ನಿರೂಪಿತಗೊಂಡಿರುವ ಇಲ್ಲಿಯ ಬಹುತೇಕ ರಚನೆಗಳು ಓದುಗನ ಮೊಗದಲ್ಲಿ ನಗುನೆರಳು ಹಾದುಹೋಗುವಂತೆ ಮಾಡುವಲ್ಲಿ ಸಫಲವಾಗುತ್ತವೆ. ಜೀವನಾನುಭವದ ಸಾಂದ್ರತೆ ಮತ್ತು ವಿನೋದ ಇಲ್ಲಿಯ ಸಂಕಥನಗಳಲ್ಲಿ ಅಂತಃಸ್ಥವಾಗಿದೆ ಮತ್ತು ಹಾಸ್ಯಲೇಪಿತ ನಾಟಕೀಯ ವಿವರಗಳ ಮೂಲಕವೇ ಸತ್ಯದರ್ಶನವನ್ನೂ ಮಾಡಿಸುತ್ತವೆ ಎಂದರೆ ತಪ್ಪಾಗಲಾರದು. ಲೇಖಕರು ಇಲ್ಲಿನ ಕಥಾನಕಗಳಲ್ಲಿ ಕೊಡುವ ಹೋಲಿಕೆಗಳು ನವನವೀನವಾಗಿವೆ.

ಒಂದು ತಲೆಮಾರು ಹಿಂದಿನ ಬದುಕು ಮತ್ತು ಅನುಭವಗಳು ವಿಶಿಷ್ಟ. ಪ್ರಕೃತಿಯ ಒಡನಾಟ ಮತ್ತು ಹಳ್ಳಿಜನರ ಸಹಜೀವನದ ಬಾಳ್ವೆ ಬದುಕಿಗೊಂದು ವಿಶಿಷ್ಟ ಆಯಾಮವನ್ನೇ ನೀಡುತ್ತವೆ ಎಂಬುದನ್ನು ಇಲ್ಲಿಯ ಕೆಲವು ಕಥನಗಳಲ್ಲಿ ಗಮನಿಸಬಹುದು. ಫಟಿಂಗ ಪಪ್ಪು, ಸಣ್ಣಜ್ಜ, ಕೋಳಿ ಸಾಗಣೆಯ ಟೆಂಪೋ, ಪಟೇಲರ ಹುಲಿ ಬೇಟೆ, ಅಪ್ಪಣ್ಣನ ಅವಸ್ಥೆ, ದಾಸು ನಾಯಿಯು ಬೇಟೆ ನಾಯಿಯಾದ ಪ್ರಕರಣ ಮತ್ತು ನೂರು ರೂಪಾಯಿಯ ನೋಟು -ಇವು ಪೂರ್ಣ ಪ್ರಮಾಣದ ಕತೆಗಳಾಗಿ ಮೂಡಿಬಂದು ಹೃದಯಸ್ಪರ್ಶಿಯಾಗಿವೆ.

ಗ್ರಾಮ್ಯ ಜೀವನದ ತುಣುಕುಗಳನ್ನು ಇವು ಉಣಬಡಿಸುವುದಷ್ಟೇ ಅಲ್ಲದೆ ಬಾಲಸಹಜ ಕುತೂಹಲ ಮತ್ತು ತುಂಟಾಟಗಳು ಇಲ್ಲಿನ ಎರಡು ಕತೆಗಳ ವಸ್ತುಗಳಾಗಿವೆ. ಪಟೇಲರು ಅಪ್ಪಣ್ಣನ ಜೊತೆಗೆ ಹುಲಿ ಬೇಟೆಗೆ ಹೋದಂತಹ ಪ್ರಸಂಗ, ಅಪ್ಪಣ್ಣನ ಕೊರಳಿಗೆ ಹಾವು ಹಾರವಾದಂತಹ ಪ್ರಸಂಗ, ದಾಸು ನಾಯಿ ಕಂಪನಿ ದೊರೆಗಳನ್ನು ಬೆನ್ನು ಹತ್ತಿದ ಪ್ರಸಂಗ.. ಇಂತಹ ಅನೇಕ ರಸಪ್ರಸಂಗಗಳು ಬಹಳ ಸ್ವಾರಸ್ಯವಾಗಿವೆ. ಯಜಮಾನ – ಆಳು ಅಷ್ಟೇ ಅಲ್ಲದೆ, ಪಾನಬಂಧುತ್ವವನ್ನು ಹೊಂದಿರುವ ಪಟೇಲ -ಅಪ್ಪಣ್ಣ ಜೋಡಿಯ ಮೂರು ಮುಖ್ಯ ಕತೆಗಳಲ್ಲಿ ಪಟೇಲರು ಊರಿಗೆ ಕುಳವಾದರೂ ಕಂಪನಿ ದೊರೆಗಳಿಗೆ ತಗ್ಗಿ ಬಗ್ಗಿ ನಡೆಯಬೇಕಾದ ವಿವಶತೆಗೆ, ಅವರನ್ನು ಮೆಚ್ಚಿಸಬೇಕಾದ ಅನಿವಾರ್ಯತೆಗೆ ಓದುಗನ ಮನಸು ಕುದಿಯುವಂತಾಗುತ್ತದೆ.

‘ಯುಗಾಂತರ’ ಮತ್ತು ‘ಶುಭ ದಿನಗಳು ಕಾಲಿರಿಸಿದಾಗ..’ ಕತೆಗಳಲ್ಲಿ ಲೇಖಕರ ಕಲ್ಪನೆಯ ವರದಿಗಳು ವಿಜೃಂಭಿಸಿದ್ದು ಓದುಗನಿಗೆ ಹಿತಭಾವದ ಕಚಗುಳಿಯನ್ನಿಡುತ್ತವೆ. ರಾಜಕೀಯ ವಿದ್ಯಮಾನಗಳ ಕುರಿತ ವಿಡಂಬನಾತ್ಮಕ ವಕ್ರನೋಟದಿಂದಾಗಿ ಇವು ಓದುಗರ ಗಮನ ಸೆಳೆಯುತ್ತವೆ. ಮುಂಬೈ ನಗರದಲ್ಲಿ ಹಬ್ಬಗಳ ಆಚರಣೆಗಳ ಕುರಿತ ವ್ಯಂಗ್ಯಭರಿತ ಲೇಖ ಓದುಗನಲ್ಲಿ ನಗೆ ಬುಗ್ಗೆ ಉಕ್ಕಿಸುತ್ತದೆ. ‘ಬ್ರೌನಿ’ ಎಂಬ ನಾಯಿ, ‘ಸೀತು ರಾಮು’ ಎಂಬ ಗಿಳಿ ಜೋಡಿ, ಕೇರೆ ಹಾವುಗಳಂತಹ ಪ್ರಾಣಿ ಪಕ್ಷಿಗಳು ಕೂಡ ಲೇಖಕರ ರಚನೆಗಳಲ್ಲಿ ಪಾತ್ರಗಳಾಗಿ ಮೂಡಿಬಂದಿವೆ. ಕುಮಾರ ದಂಪತಿಯ ಉಚಿತ ಕೊಡೆ ತಂದ ಪೀಕಲಾಟ, ಕಾರ್ಪೆಂಟರ್ ತಂದ ಬವಣೆ , ಕಾಲಾಸಿಂಘ್ ತಂದಿತ್ತ ಪೇಚಾಟ, ಶಾಂತಿನಿಕೇತನದಲ್ಲಿ ಡ್ರೈವರ್ ಒದಗಿಸಿದ ಪರದಾಟದ ಪ್ರಸಂಗ, ಬಹುಮುಖಿ ಡ್ರೈವರ್ ಮೂಡಿಸಿದ ತಲ್ಲಣ…ಇವೆಲ್ಲವೂ ಓದುಗರನ್ನು ಬಹುವಿಧದಲ್ಲಿ ರಂಜಿಸುತ್ತವೆ.

ಕೃತಿಗೆ ‘ನುಡಿಸೇಸೆ’ಯನ್ನು ಬರೆದಿರುವ ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮುಖ್ಯಸ್ಥರು ಪ್ರಾಧ್ಯಾಪಕರೂ ಆಗಿರುವ ಪ್ರೊ. ಜಿ ಎನ್ ಉಪಾಧ್ಯ ಅವರು ” ಜೀವನಯಾನದ ಅನುಭವಗಳನ್ನು, ಸಮಕಾಲೀನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ಕಥನದ ಚೌಕಟ್ಟಿನಲ್ಲಿ ಎರಕ ಹೊಯ್ದಿರುವುದು ಇಲ್ಲಿನ ಬರವಣಿಗೆಯ ಅನನ್ಯತೆ” ಎಂದು ಕಥಾಸಂಕಲನದ ಅತಿಶಯತೆಯನ್ನು ಎತ್ತಿ ತೋರಿಸಿದ್ದಾರೆ.

ಕೃತಿಕಾರರಾದ ಶ್ರೀಯುತ ಉದ್ಯಾವರ ವೆಂಕಟ್ರಾಜ ರಾವ್ ಅವರು ತಮ್ಮ ಮುಮ್ಮಾತಿನಲ್ಲಿ, ತಮ್ಮ ಕಥನ ಬರೆಯುವ ಪಯಣದ ಬಗ್ಗೆ ಬೆಳಕು ಬೀರುತ್ತಾ, ” ಇಲ್ಲಿಯ ಕಥೆಗಳ ಇತಿ – ಮಿತಿ, ಆಯಕಟ್ಟು,‌ ಆಯಾಮಗಳನ್ನು ರೂಪಿಸಿದ್ದು ಅಚ್ಚಳಿಯದೆ ಉಳಿದ ಕೆಲವು ಘಟನೆಗಳ ನೆನಪುಗಳು ಮತ್ತು ಅವುಗಳೊಂದಿಗೆ ಬೆಸೆದುಕೊಂಡ ಮನೋಭಾವಗಳು”ಎಂದು ವಿಷದೀಕರಿಸಿದ್ದಾರೆ.
✍️ ಸವಿತಾ ಅರುಣ್ ಶೆಟ್ಟಿ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter