ತಲೆತಲಾಂತರಗಳಿಂದ ನಮ್ಮ ಆಚಾರ ವಿಚಾರಗಳಿಗೆ ಜಾನಪದ ಸೊಗಡಿನೊಂದಿಗೆ ಯಕ್ಷ ಭಾಷೆಯ ಸೊಬಗನ್ನು ಕೊಟ್ಟು ಇಂದಿಗೂ ಉಳಿದುಕೊಂಡು ಬಂದಿರುವ, ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಹೆಮ್ಮೆಯ ಕಲೆ ಯಕ್ಷಗಾನ. ಪರಂಪರೆಯ ಚೌಕಟ್ಟಿನಲ್ಲಿ ಹಿಮ್ಮೇಳ, ಸಂಗೀತ-ನೃತ್ಯ ವೇಷಭೂಷಣ, ಅತ್ಯಾಕರ್ಷಕ ವಾಕ್ಪಟುತ್ವ, ಸಂವಾದ, ಸಾಹಿತ್ಯ, ಅಭಿನಯ ಎಲ್ಲ ಕಲೆಗಳ ಔಚಿತ್ಯಪೂರ್ಣ ಸಾಮರಸ್ಯವಿರುವ, ನವರಸಗಳ ಆಸ್ವಾದನೆಯ ಅನುಭೂತಿಯನ್ನು ನೀಡುವ ಕರ್ನಾಟಕದ ಪ್ರಾತಿನಿಧಿಕ ಶ್ರೀಮಂತ ಕಲೆಯಿದು. ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕ ಸಂದೇಶವನ್ನು ನೀಡಿ ಸಮಾಜವನ್ನು ಸುಸ್ಥಿತಿಯಲ್ಲಿಡುವ ನೆಲೆಯಲ್ಲಿ ಯಕ್ಷಗಾನದ ಕೊಡುಗೆ ದೊಡ್ಡದು. ಕರ್ನಾಟಕದ ವಿವಿಧ ಪ್ರಾಂತಗಳಲ್ಲಿ ವಿವಿಧ ರೀತಿಯಲ್ಲಿ ನಾಮಾಂಕಿತಗೊಂಡು ಪ್ರದರ್ಶಿಸಲ್ಪಡುತ್ತಿರುವ ಯಕ್ಷಗಾನ ಕಲೆಯು ಗ್ರಾಮೀಣ ಜನರ ಉತ್ಕೃಷ್ಟ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಬದುಕನ್ನು ಕಟ್ಟಿಕೊಳ್ಳಲು ವಲಸೆ ಬಂದಿರುವ ಜನರ ಮೂಲಕ ಇಂದು ಯಕ್ಷಗಾನವು ತನ್ನ ನೆಲೆಯನ್ನು ನಗರಗಳಿಗೂ, ಸಪ್ತ ಸಾಗರಗಳಾಚೆಗೂ ವಿಸ್ತರಿಸುತ್ತಿರುವುದು ಇದರ ಹಿರಿಮೆ ಎನ್ನಬಹುದು.
ಡಾ.ಜಿ. ಎಲ್. ಹೆಗಡೆ
ಇಂತಹ ಪರಿಪೂರ್ಣ ಕಲೆಯ ಕುರಿತು ಸಮಗ್ರವಾಗಿ ಸ್ವತಃ ಅರಿತು ಹೊಸ ತಲೆಮಾರಿನ ಸಹೃದಯರಿಗೆ ಈ ಅರಿವನ್ನು ದಾಟಿಸುವ ಕೆಲಸವನ್ನು ಮಾಡುತ್ತಿರುವ ವಿದ್ವಾಂಸರು ಬೆರಳೆಣಿಕೆಯಷ್ಟು ಮಾತ್ರ. ಅಂತಹ ವಿದ್ವಾಂಸರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಜಿ. ಎಲ್. ಹೆಗಡೆ ಅವರು ಅಗ್ರಪಂಕ್ತಿಯಲ್ಲಿರುವವರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಡಾ. ಜಿ.ಎಲ್. ಹೆಗಡೆ ಅವರು ತನ್ನ ಪಾಂಡಿತ್ಯದ ಪರಿಧಿಯನ್ನು ಕನ್ನಡ ಭಾಷೆ ಸಾಹಿತ್ಯಕ್ಕಷ್ಟೇ ಸೀಮಿತವಾಗಿಡಲಿಲ್ಲ. ಬದಲಾಗಿ ಯಕ್ಷಗಾನವೆಂಬ ಉತ್ಕೃಷ್ಟ ಕಲೆಯ ಆಳ-ಅಗಲಗಳಲ್ಲಿ ವಿಸ್ತರಿಸಿದ್ದಾರೆ. ಕುಮಟಾದ ಡಾ. ಎ. ವಿ. ಬಾಳಿಗಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ ಶ್ರೀಯುತರು ಯಾವುದೇ ಫಲಾಪೇಕ್ಷೆ ಇಲ್ಲದೆ ತನ್ನ ಸ್ವಂತ ಆಸಕ್ತಿ, ಪ್ರತಿಭೆ ಹಾಗೂ ಅಧ್ಯಯನದೊಂದಿಗೆ ಈ ಕ್ಷೇತ್ರದಲ್ಲಿ ನಿರಾಯಾಸವಾಗಿ ವಿಹರಿಸಿದ ಅಪ್ಪಟ ಅನುಭವಿ. ಹಳಗನ್ನಡ, ಹೊಸಗನ್ನಡ ಸಾಹಿತ್ಯದ ಅನೇಕ ವಿಚಾರಗಳನ್ನೂ, ಸಾಮಾಜಿಕ ಚಿಂತನೆಗಳನ್ನೂ ಪರಂಪರಾಗತ ಮಹಾಕಾವ್ಯಗಳ ಪ್ರಸಂಗಗಳೊಂದಿಗೆ ಸಮಯೋಚಿತವಾಗಿ ಮೇಳೈಸಿ ಮಾತನಾಡುವ ಇವರು ಯಕ್ಷಗಾನ ತಾಳಮದ್ದಳೆಯ ಪಾತ್ರ ನಿರ್ವಹಣೆಯಲ್ಲಿ ಎತ್ತಿದ ಕೈ. ಸಂಘಟಕರಾಗಿ, ಸಂಶೋಧಕರಾಗಿ, ಯಕ್ಷಗಾನ ಸಂಶೋಧನ ಕೇಂದ್ರದ ಸಂಸ್ಥಾಪಕ, ನಿರ್ದೇಶಕರಾಗಿ, ಯಕ್ಷಗಾನ ಪ್ರಸಂಗಕರ್ತರೂ ಕಲಾವಿದರೂ ಆಗಿ, ತಾಳಮದ್ದಳೆಯ ಅಪೂರ್ವ ಅರ್ಥಧಾರಿಯಾಗಿ ಡಾ. ಹೆಗಡೆ ಅವರು ಜನಪ್ರಿಯರಾಗಿದ್ದಾರೆ.
ಯಕ್ಷಗಾನದ ಅಂಗೋಪಾಂಗಗಳ ಅಂದ ಚಂದವನ್ನು ದರ್ಶಿಸುವಂತಹ ಅಪೂರ್ವ ದಾಖಲೆಗಳನ್ನು ಕಲೆಹಾಕುವ ಹಾಗೂ ಅದಕ್ಕೆ ಪೂರಕವಾದ ಹೊಸ ಹೊಸ ಚಿಂತನೆಗಳನ್ನು ಲೋಕಮುಖಕ್ಕೆ ಪರಿಚಯಿಸುವ ಕಾಯಕದಲ್ಲಿ ಅವರು ತನ್ನನ್ನು ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಈ ನಿಟ್ಟಿನಲ್ಲಿ ಇತರರಿಗೂ ಹೆಗಲುಗೊಡುತ್ತಾ ಬಂದಿದ್ದಾರೆ. ಶೇಣಿ ರಾಮಾಯಣ, ಶೇಣಿ ಭಾರತ, ಸಂಸ್ಕೃತ ಕಾವ್ಯ ವಿನೋದ, ಯಕ್ಷಗಾನ ವರ್ಣವೈಭವ, ನಮ್ಮ ಚಿಟ್ಟಾಣಿ, ಪರಮಾನಂದ ಚರಿತೆ, ಚಿನ್ನದ ಕಿರೀಟ ಮುಂತಾದ ಹದಿನಾಲ್ಕು ಕೃತಿಗಳನ್ನು ರಚಿಸಿರುವ ಜಿ.ಎಲ್. ಹೆಗಡೆ ಅವರು 6 ನೃತ್ಯರೂಪಕಗಳನ್ನೂ ರಚಿಸಿರುತ್ತಾರೆ. ಅನೇಕ ಸಂಶೋಧನ ಲೇಖನಗಳು ಇವರ ಲೆಕ್ಕಣಿಕೆಯಿಂದ ಮೂಡಿವೆ. ಪ್ರಾಚೀನ ಸಾಹಿತ್ಯದ ಪೂರ್ವ ಸೂರಿಗಳ ಪರಂಪರೆಯ ಮುಂದುವರಿದ ಕೊಂಡಿ ಶ್ರೀಯುತರು ಎನ್ನಬಹುದು. ಪರಮೇಶಿ ಪ್ರೇಮ ಪ್ರಸಂಗ, ನಮ್ಮೂರ ಮಂದಾರ ಹೂವೆ ಚಲನಚಿತ್ರಗಳಲ್ಲಿ ಹಾಗೂ ಕೆಲವು ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ ನಟನೆ, ಹಾಗೂ ನಿರ್ದೇಶನ ಇವೆಲ್ಲವೂ ಅವರ ಕಲಾ ನಿಪುಣತೆಯ ವಿವಿಧ ಮುಖಗಳು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಚಂದ್ರಶೇಖರ ಕಂಬಾರ ಅವರು “ಕನ್ನಡ ಭಾಷೆಯ ವೈವಿಧ್ಯತೆ ಹಾಗೂ ಸೂಕ್ಷ್ಮತೆಗಳನ್ನು ಅರಿತ ನನ್ನ ಶಿಷ್ಯ ಗೋಪಾಲಕೃಷ್ಣ ಹೆಗಡೆ ಯಕ್ಷಗಾನದ ಶ್ರೇಷ್ಠ ನಟ, ಯಕ್ಷಗಾನ ಸಂಶೋಧಕ ಹಾಗೂ ಮಾರ್ಗದರ್ಶಕ. ಕ್ಯಾಮೆರಾ ಕಣ್ಣನ್ನು ಲೀಲಾಜಾಲವಾಗಿ ಎದುರಿಸಿ ಗೆಲ್ಲುವ ಚಲನಚಿತ್ರ ಹಾಗೂ ಕಿರುತೆರೆಯ ಕಲಾವಿದ. ತಾಳಮದ್ದಲೆಯಲ್ಲಿ ಸುಂದರ ಕಾವ್ಯ ನಿರ್ಮಿಸಬಲ್ಲ ಆಶುಕವಿ. ತರ್ಕಕ್ಕೆ ಪ್ರತಿ ತರ್ಕ ಮಂಡಿಸಿ ಚುರುಕುಮುಟ್ಟಿಸುವ ಮಾತುಗಾರ. ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಸ್ತುತ್ಯಾರ್ಹ.” ಎಂಬುದಾಗಿ ಹೆಮ್ಮೆಯಿಂದ ಹೆಗಡೆಯವರನ್ನು ಕೊಂಡಾಡಿದ್ದಾರೆ.
ಸ್ವತಃ ಶೇಣಿಯವರು “ತನ್ನ ಪ್ರಸಂಗಗಳಲ್ಲಿ ಅದ್ವೈತವನ್ನು ಹುಡುಕಿದ ಸಂಶೋಧಕ” ಎಂಬುದಾಗಿ ಪ್ರಮಾಣೀಕರಿಸಿರುವುದು ಹೆಗಡೆಯವರ ಅಗ್ಗಳಿಕೆ. ನಾಡಿನ ವಿದ್ವಾಂಸರಾದ ಡಾ. ಪುರುಷೋತ್ತಮ ಬಿಳಿಮಲೆಯವರು “ಔಚಿತ್ಯಪೂರ್ಣ ಮಂಡನೆ, ಖಂಡನೆಗಳ ಸ್ವಾರಸ್ಯಕರ ಮಾತುಗಾರಿಕೆ ಅವರಿಗೆ ಒಲಿದಿದೆ” ಎನ್ನುತ್ತ ಅವರ ಬಲರಾಮನೊಂದಿಗೆ ತಮ್ಮ ನಾರದನ ಪಾತ್ರವನ್ನು ನಿರ್ವಹಿಸಿದ ಸಂತಸವನ್ನು ವ್ಯಕ್ತಪಡಿಸಿರುವುದು, ವಿದ್ವಾಂಸರಾದ ಪ್ರಭಾಕರ ಜೋಶಿ ಅವರು ಹೆಗಡೆಯವರ ಕುರಿತು “ವೇಷಧಾರಿ, ಅರ್ಥದಾರಿ, ಸಂಶೋಧಕ, ಸಂಘಟಕರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಒಂದು ದಾಖಲೆ” ಎಂದಿರುವುದು, ಯಕ್ಷಗಾನ ದಿಗ್ಗಜರಾದ ಕೆರೆಮನೆ ಶಂಭು ಹೆಗಡೆಯವರು “ಯಕ್ಷಗಾನದ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ನಮ್ಮ ಜಿಲ್ಲೆಯ ಶ್ರೇಷ್ಠ ಚಿಂತಕರೆಂದು ಕರೆದಿರುವುದು, ಅಷ್ಟೇ ಅಲ್ಲ ಸಾಮಾಜಿಕ ವಲಯದಲ್ಲೂ ಅಪಾರ ಪ್ರೀತಿ, ವಿಶ್ವಾಸ, ಗೌರವವನ್ನು ಪಡೆದಿರುವುದು ಗೋಪಾಲಕೃಷ್ಣ ಹೆಗಡೆಯವರ ಬಹುಜ್ಞತೆಗೆ ಸಾಕ್ಷಿ. ಯಕ್ಷಗಾನದ ಹಲವು ಪ್ರಕಾರಗಳಲ್ಲಿ ಪರಂಪರೆಯ ಗುಣಗ್ರಹಣದೊಂದಿಗೆ, ಅದನ್ನು ಪೋಷಿಸಿ, ಬೆಳೆಸಿ, ವಿಸ್ತರಿಸುವ ಸದುದ್ದೇಶವನ್ನು ಇಟ್ಟುಕೊಂಡಿರುವ ಜಿ.ಎಲ್. ಹೆಗಡೆಯವರಂಥ ಬಹುಶ್ರುತ ವಿದ್ವಾಂಸರು ಉತ್ತರ ಕನ್ನಡದ ನಿಜ ನಿಧಿಯಾಗಿ ನಮ್ಮೊಂದಿಗಿದ್ದಾರೆ. ಅವರ ಶೇಣಿ ರಾಮಾಯಣದ ಕುರಿತು ಯಥಾಮತಿ ಬರೆಯಲು ಸಂತೋಷವಾಗುತ್ತಿದೆ.
ಅನಾದಿಕಾಲದಿಂದಲೂ ರಾಮಾಯಣವು ದರ್ಶನ ಗ್ರಂಥವಾಗಿ ಪರಿಗಣಿಸಲ್ಪಟ್ಟಿದೆ. ಅರ್ಥವೇ ಹೇಳುವಂತೆ ರಾಮ ಪಥಿಸಿದ ಜೀವನ ಪಥವೇ ರಾಮಾಯಣ. ಅದೊಂದು ಆದರ್ಶ ಕಾವ್ಯವಾಗಿ ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಮೂಲ ರಾಮಾಯಣದ ಕಥೆಯ ಒಂದೊಂದು ಎಳೆಯನ್ನು ಎತ್ತಿಕೊಂಡು ವಿಶ್ಲೇಷಣೆಗೆ ಇಳಿದರೆ ಪ್ರತಿಯೊಂದರಲ್ಲೂ ಹಲವು ಆಯಾಮಗಳನ್ನು, ಆದರ್ಶಗಳನ್ನು ಕಂಡುಕೊಳ್ಳಲು ಅವಕಾಶಗಳಿವೆ. ಅಪಾರ ಅಂತಃಶಕ್ತಿಯುಳ್ಳ ಮಹತ್ತರವಾದ ರಾಮಾಯಣ ಮಹಾಕಾವ್ಯವು ಭಾರತದಲ್ಲಷ್ಟೇ ಅಲ್ಲ, ಕಾಂಬೋಡಿಯಾ, ಜಾವಾ, ಬಾಲಿ, ಸುಮಾತ್ರಾ ಮುಂತಾದ ದ್ವೀಪಗಳಲ್ಲಿಯೂ ವಿವಿಧ ರೀತಿಯ ಕಥೆಗಳಿಂದ ಪ್ರಚಲಿತದಲ್ಲಿದೆ. ದೇವಾಲಯಗಳ ಶಿಲ್ಪಗಳಲ್ಲಿಯೂ, ಚಿತ್ರಗಳಲ್ಲಿಯೂ ಸಂಗೀತ, ನೃತ್ಯ, ನಾಟಕ, ಗೀತ ರೂಪಕ, ಹರಿಕಥೆ ಇತ್ಯಾದಿ ಹಲವು ಕಲೆಗಳಲ್ಲಿ ಅಳವಟ್ಟಿರುವ ಈ ಕಾವ್ಯವು ಹಂತ ಹಂತದಲ್ಲೂ ಕೊನರಿ ಹೊಸ ಹೊಸ ಹೊಳಹುಗಳನ್ನು ನೀಡುವ ಮೂಲಕ ಜನ ಮನದಲ್ಲಿ ಅರಿವಿನ ಆಗರವಾಗಿದೆ.
ತಮಿಳಿನ ಕಂಬ ರಾಮಾಯಣ, ಹಿಂದಿ ಭಾಷೆಯ ತುಲಸೀ ರಾಮಾಯಣಗಳಂತೆ ಕನ್ನಡದಲ್ಲಿ ವಾಲ್ಮೀಕಿ ರಾಮಾಯಣ, ಶಿವರಾಮಕಾರಂತರ ‘ಕೌಶಿಕ ರಾಮಾಯಣ’, ಕುವೆಂಪು ಅವರ ‘ರಾಮಾಯಣ ದರ್ಶನಂ’, ಮೂಲ ಮರಾಠಿಯ ಭಾವಾನುವಾದ ಹೇಮಂತರಾಜರ ‘ವಾಸ್ತವ ರಾಮಾಯಣ’, ಮಂದಾರ ರಾಮಾಯಣ, ಸುಂದರ ರಾಮಾಯಣ, ಅಧ್ಯಾತ್ಮ ರಾಮಾಯಣ, ರವಿಷೇಣ ರಾಮಾಯಣ, ಜನಪ್ರಿಯ ಕನ್ನಡ ವಾಲ್ಮೀಕಿ ರಾಮಾಯಣ, ಶ್ರೀ ರಾಮಾಯಣ ಪಾತ್ರ ಪ್ರಪಂಚ, ರಾಮಾಯಣದ ಮಹಾಪುರುಷರು, ಶ್ರೀರಾಮಚರಿತವು, ತೊರವೆ ರಾಮಾಯಣ, ಪಂಪ ರಾಮಾಯಣ ಇನ್ನೂ ಮುಂತಾದ ಹಲವಾರು ರಾಮಾಯಣದ ಗ್ರಂಥಗಳು ರಚನೆಗೊಂಡಿದ್ದು ಅದಕ್ಕೀಗ ಹೊಸ ಸೇರ್ಪಡೆ ಎಂಬಂತೆ ‘ಪ್ರಸಂಗ ದರ್ಶನ – ಶೇಣಿ ರಾಮಾಯಣ’ ಕೃತಿಯನ್ನು ಗೋಪಾಲಕೃಷ್ಣ ಹೆಗಡೆಯವರು ರಚಿಸಿರುವುದು ಕರ್ನಾಟಕದ ಶ್ರೇಷ್ಠ ಕಲೆಯಾದ ಯಕ್ಷಗಾನ ಕ್ಷೇತ್ರಕ್ಕೆ ಒಂದು ಅಪೂರ್ವ ಕಾಣಿಕೆಯಾಗಿದೆ. ಯಕ್ಷಗಾನದ ಒಂದು ಅಂಗವ್ಯವಸ್ಥೆಯಾದ ತಾಳಮದ್ದಳೆಯ ನಿರ್ದಿಷ್ಟ ಪಾತ್ರಗಳ ವ್ಯಾಖ್ಯಾನ ಮತ್ತು ವಿಶೇಷವಾದ ಅಭಿವ್ಯಕ್ತಿಯೊಂದಿಗೆ ಪಾತ್ರಗಳ ಮನೋಧರ್ಮಕ್ಕೆ ಸ್ಪಂದಿಸಿ, ವಾಚಕಾಭಿನಯದ ಮೂಲಕ ಅರ್ಥಗಾರಿಕೆಯನ್ನು ಮಾಡುವಂತಹ ಸದ್ಗುಣವು ಸಿದ್ಧಿಸಿರುವ ಅರ್ಥಧಾರಿಯ ಆಶುಭಾಷಣವನ್ನು ಓದುವುದೆಂದರೆ ಅದೊಂದು ಅದ್ಭುತ ಅನುಭವ. ಪುರಾಣದ ಕಥೆಗಳನ್ನು ಸಮಕಾಲೀನ ಸಂದರ್ಭದಲ್ಲಿ ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಿ, ಮೂಲ ಕಥೆಗೂ ಅಪಚಾರವಾಗದಂತೆ ಅತೀವ ಕಾಳಜಿಯಿಂದ ಮುರಿದು ಕಟ್ಟಿ ಜನ ಮಾಧ್ಯಮದಲ್ಲಿ ಮಾತಿನ ಮೂಲಕ ಪ್ರಚುರಪಡಿಸುವುದು ಅರ್ಥಗಾರಿಕೆ. ಇದರಲ್ಲಿ ಪ್ರತಿ ಬಾರಿಯೂ ಹೊಸತನವನ್ನು ತರುವುದು ಅರ್ಥಗಾರನ ಬುದ್ಧಿಚಾತುರ್ಯವನ್ನು ಅವಲಂಬಿಸಿದೆ. ಏಕೆಂದರೆ ಮತ್ತೆ ಮತ್ತೆ ಅದೇ ಪರಂಪರೆ, ವ್ಯಾಕರಣ, ಪಠ್ಯ ಇವೆಲ್ಲವುಗಳೊಡನೆ ಪುರಾಣದ ಕಥೆಯು ಬಂದಾಗ ಆ ಮಾತುಗಾರಿಕೆಯು ಸೋಲುತ್ತದೆ.
ಯಕ್ಷಗಾನವನ್ನು ಊರ್ಜಿತಗೊಳಿಸಬಲ್ಲ ವಿಧಾನಗಳಲ್ಲಿ ಮಾತುಗಾರಿಕೆಯು ಮುಖ್ಯ ಪಾತ್ರವನ್ನು ವಹಿಸುತ್ತದೆ. ರಾಮ ರಾಮನೇ ರಾವಣ ರಾವಣನೇ ಆಗಿರುತ್ತಾನೆಯಾದರೂ ಅದನ್ನು ಪ್ರತಿಯೊಂದು ಪ್ರಸಂಗಗಳಲ್ಲೂ ಭಿನ್ನ ಬಗೆಯಲ್ಲಿ ಅಭಿವ್ಯಕ್ತಿಪಡಿಸಿದರೆ ಮಾತ್ರ ಪ್ರೇಕ್ಷಕರ ಅಭಿರುಚಿಯು ಹೆಚ್ಚುತ್ತದೆ, ಅಷ್ಟೇ ಅಲ್ಲ ಕಲೆಯೂ ಬೆಳೆಯುತ್ತದೆ. ಒಂದು ರೀತಿಯಲ್ಲಿ ಪರಂಪರೆಯನ್ನು ಸ್ಥಗಿತಗೊಳಿಸದೆ ಸುಧಾರಣೆಯ ಪಥದಲ್ಲಿ ಕೊಂಡು ಹೋಗುವ ಸೂತ್ರಧಾರಿಯು ಪ್ರಸಂಗದ ಪಾತ್ರಧಾರಿಯೇ ಆಗಿರುತ್ತಾನೆ. ಈ ಎಲ್ಲವನ್ನೂ ಸಮರ್ಥವಾಗಿ ರೂಢಿಸಿಕೊಂಡು ಯಕ್ಷಗಾನ ಕಲೆಯು ಉಳಿದು ಬೆಳೆದು ಮುಂದುವರಿದುಕೊಂಡು ಹೋಗುವಂತೆ ಮಾಡಿದ ಪ್ರತಿಭಾ ಸಂಪನ್ನತೆಯಿಂದಾಗಿಯೇ ಶೇಣಿ ಗೋಪಾಲಕೃಷ್ಣ ಭಟ್ ಅವರು ಇಂದು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ರಾಮಾಯಣದ ಕಥಾ ವಸ್ತುವಿನ ಪ್ರಸಂಗಗಳಲ್ಲಿ ಸಮರ್ಥವಾಗಿ ನಿರ್ವಹಿಸಿದ ಹದಿನೈದು ಪಾತ್ರಗಳ ಮಾತುಗಾರಿಕೆಯು ‘ಪ್ರಸಂಗ ದರ್ಶನ’ ಕೃತಿಯಲ್ಲಿ ಅಷ್ಟೇ ಕಲಾತ್ಮಕವಾಗಿ ದಾಖಲಾಗಿರುವುದು ವಿಶೇಷ.
ಮೂಲತಃ ಹರಿದಾಸರಾಗಿ ಪುರಾಣದ ಕುರಿತಾದ ವಿವಿಧ ಅರ್ಥಗಳನ್ನು ಹೊಳೆಯಿಸುವ ಮಾತುಗಾರಿಕೆ ಮತ್ತು ಕಂಚಿನ ಕಂಠವನ್ನು ಹೊಂದಿದ ಶೇಣಿ ಗೋಪಾಲಕೃಷ್ಣ ಭಟ್ಟರು ಯಕ್ಷಗಾನದ ಅರ್ಥಗಾರಿಕೆಯಲ್ಲಿಯೂ ತನ್ನ ಹಿರಿತನವನ್ನು ಮೆರೆದಿದ್ದಾರೆ ಎನ್ನುವುದು ಈ ಕ್ಷೇತ್ರದ ಸರ್ವಮಾನ್ಯವಾದ ಅಭಿಪ್ರಾಯ. ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ಕರಾರುವಾಕ್ಕಾದ ಅಧಿಕಾರವಾಣಿಯಲ್ಲಿ ಹೇಳಬಹುದಾದಂತಹ ಪ್ರಾವೀಣ್ಯತೆ ಅವರದು. ಯಾರೂ ಊಹಿಸಲಸಾಧ್ಯವಾದ ರೀತಿಯಲ್ಲಿ ಬತ್ತದ ಒರತೆಯಂತೆ ಹೊಸ ಹೊಸ ಹೊಳಹುಗಳೊಂದಿಗೆ ಅರ್ಥಗಳನ್ನು ಸೃಜಿಸಬಲ್ಲ, ಪಾತ್ರಗಳನ್ನು ಸೃಷ್ಟಿಸಬಲ್ಲ ತಾಕತ್ತು ಶೇಣಿಯವರಲ್ಲಿತ್ತು. ತಾಳಮದ್ದಳೆ ಮಾತಿನಲ್ಲಿ ಅದ್ವಿತೀಯರೆನಿಸಿಕೊಂಡ ಅವರು ತಾನು ವಹಿಸಿಕೊಂಡ ಪಾತ್ರವನ್ನು ಒಂದು ನಿರ್ದಿಷ್ಟ ಸಾಲಿನೊಂದಿಗೆ ನಿಧಾನವಾಗಿ ಆರಂಭಿಸಿ ವಿಸ್ತರಿಸುತ್ತ ಹೋದಂತೆ ಅಲ್ಲಲ್ಲಿ ರಸಸ್ಥಾನಗಳನ್ನು ಸೃಷ್ಟಿಸಿ, ಪೋಷಿಸಿ ಬದುಕಿನ ಮೌಲ್ಯಗಳೊಂದಿಗೆ ಪುರಾಣದ ಸಾಲುಗಳನ್ನು ಸಮೀಕರಿಸಿ ಕೊನೆಯಲ್ಲಿ ಅದ್ಭುತವೆನಿಸುವಂತೆ ಮೊದಲು ಎತ್ತಿದ ಮಾತಿನ ಅರ್ಥಕ್ಕೆ ಸರಾಗವಾಗಿ ಬಂದು ಸೇರಿಬಿಡುವಾಗ ಈ ಜಾಣ್ಮೆ ಶೇಣಿಯವರಲ್ಲದೆ ಮತ್ತ್ಯಾರಿಗೆ ಇದೆ ಹೇಳಿ! ಎಂಬ ಉದ್ಗಾರ ತಂತಾನೇ ಬರುವುದು ಸಹಜ.
ಆಗ ಎಂತಹ ಸಶಕ್ತ ಎದುರಾಳಿ ಮಾತುಗಾರನಾದರೂ ಕುಬ್ಜನಾಗುವುದೊಂದೇ ದಾರಿ, ಎಂತಹ ಹಿಮ್ಮೇಳವೂ ಹಿಂಜಿ ಹೋಗುವ ಬಾರಿ. ಶೇಣಿ ಅವರು ಯಕ್ಷಗಾನ ಬಯಲಾಟದ ಹಾಗೂ ತಾಳಮದ್ದಳೆಯ ಜನಪ್ರಿಯತೆಯನ್ನು, ಶ್ರೀಮಂತಿಕೆಯನ್ನು ಹೆಚ್ಚಿಸಿದ ಅಸಾಮಾನ್ಯ ಮಾತುಗಾರರಾಗಿದ್ದರು ಎನ್ನುವುದರಲ್ಲಿ ಸಂಶಯ ತುಸುವೂ ಇಲ್ಲ. ಪುರಾಣದ ಮೌಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಅರ್ಥಧಾರಿ ಶೇಣಿಯವರ ಪಾತ್ರ ಮಹತ್ವದ್ದು. ಒಂದು ಪ್ರಸಂಗದಲ್ಲಿ ಅಡಕವಾಗಿರುವ ನವರಸಗಳ ವಿವಿಧ ಸ್ತರಗಳಲ್ಲಿ ನಿರುಮ್ಮಳವಾಗಿ ಸಂಚರಿಸಿ ನೀರು, ನೊರೆ, ತೆರೆಗಳಿಗೆ ಔಚಿತ್ಯ ಪೂರ್ಣವಾಗಿ ಸ್ಪಂದಿಸಿ ಅದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ದಾಟಿಸುವ ಕಲೆ ಶೇಣಿಯವರ ಅನನ್ಯತೆ. ಸನ್ನಿವೇಶಗಳ ತೀವ್ರ ಗತಿವಿನ್ಯಾಸಕ್ಕೆ ಮಿಂಚಿನ ವೇಗದಲ್ಲಿ ಬದಲಾಗಬೇಕಾದ ಸಂಚಾರಿ ಭಾವಗಳನ್ನು ನಿಭಾಯಿಸಿ ಪ್ರೇಕ್ಷಕರ ಹೃದಯಕ್ಕೆ ದಾಟಿಸುವ ಕೌಶಲ್ಯ ಅವರಿಗೆ ಕರಗತವಾಗಿತ್ತು. ಜಿ.ಎಲ್. ಹೆಗಡೆಯವರಿಗೆ ಯಕ್ಷಗಾನ ಕ್ಷೇತ್ರದ ಇಂತಹ ಒಂದು ಮಹಾನ್ ಪ್ರತಿಭೆಯ ಜೊತೆಯಲ್ಲಿ ಒಡನಾಡುವ, ಅವರ ತಾಳಮದ್ದಳೆ, ಪ್ರಸಂಗಗಳಲ್ಲಿ ಭಾಗವಹಿಸುವ, ಅವರೊಂದಿಗೆ ಮಾತನಾಡುವ, ಚರ್ಚಿಸುವ, ಅವರ ಬಗ್ಗೆ ಬರೆಯುವ ಅವಕಾಶವಾದುದೇ ಅವರಿಗೆ ಈ ಕೃತಿ ರಚನೆಗೆ ಪ್ರೇರಣೆಯಾಯಿತೋ ಅಥವಾ ಅವರಲ್ಲಿಯೂ ಅಂಥದ್ದೊಂದು ಶಕ್ತಿ ಪ್ರವಹಿಸುತ್ತಿದೆಯೋ ಎಂಬ ಗುಮಾನಿ ಬರುವಷ್ಟರಮಟ್ಟಿಗೆ ಇಲ್ಲಿ ಮಾತು ಧಾತುಗಳು ಸರಿಯಾಗಿ ಕೊಂಡಿಯಾಗಲು ಸಾಧ್ಯವಾಗಿದೆ.
ಶೇಣಿ ರಾಮಾಯಣವೆಂದರೆ ‘ಯಕ್ಷಗಾನ ಕಲಾನಿಧಿ’ ಶೇಣಿ ಗೋಪಾಲಕೃಷ್ಣ ಭಟ್ಟರು ಯಕ್ಷಗಾನ ರಾಮಾಯಣ ಪ್ರಸಂಗದ ನಿರ್ದಿಷ್ಟ ಪದ್ಯಗಳಿಗೆ ಹೇಳಿದ ಅರ್ಥಗಳಿಂದ ನಿರ್ಮಿಸಿದ ಗದ್ಯಕಾವ್ಯ. “ಇದೊಂದು ಆಶು ಕಾವ್ಯ” ಎಂಬುದಾಗಿ ಹೆಗಡೆಯವರು ತಮ್ಮ ಮಾತಿನಲ್ಲಿ ಹೇಳಿಕೊಂಡಿರುವುದು ಅಕ್ಷರಶಃ ಸತ್ಯ ಎನ್ನುವುದು ಈ ಕೃತಿಯನ್ನು ಓದುವಾಗ ವಿಧಿತವಾಗುತ್ತದೆ. ಈ ಕೃತಿಯ ಆರಂಭದ ಮುನ್ನುಡಿಯಲ್ಲಿ ಅವರು ಪ್ರಸಂಗ ಎಂದರೇನು? ಯಕ್ಷಗಾನಕ್ಕಿಂತ, ಹರಿಕಥೆ ಗಿಂತ ಅದು ಹೇಗೆ ವಿಶಿಷ್ಟವೂ ಭಿನ್ನವೂ ಆಗಿದೆ? ಹಿಮ್ಮೇಳ ಹೇಗಿರಬೇಕು? ಅಲ್ಲಿರುವ ಪಠ್ಯ ಅಥವಾ ಗ್ರಂಥಗಳು ಹೇಗಿರುತ್ತವೆ? ಅದನ್ನು ಅರ್ಥಧಾರಿಯು ಹೇಗೆ ನಿರ್ವಹಿಸಬೇಕಾಗುತ್ತದೆ? ತಾಳಮದ್ದಳೆಯ ಪರಿಪಾಠವೇನು? ಅದರಲ್ಲಿ ಸ್ಥಿತಿಸ್ಥಾಪಕತ್ವ ಗುಣ ಹೇಗಿರುತ್ತದೆ?, ಯಕ್ಷಗಾನಕ್ಕೂ ತಾಳಮದ್ದಳೆಗೂ ಯಾವ ಸಂಬಂಧವಿದೆ? ಅಗತ್ಯ, ಅನಿವಾರ್ಯತೆಗಳ ನಡುವೆ ಪ್ರಾಸಂಗಿಕವಾಗಿ ಆಶುರೂಪದಲ್ಲಿ ಗದ್ಯಕಾವ್ಯವು ಇಲ್ಲಿ ಯಾವ ರೀತಿ ಹುಟ್ಟಿಕೊಳ್ಳುತ್ತದೆ? ಪ್ರಸಂಗ ಸಾಹಿತ್ಯದ ವಿವಿಧ ಅಂಗಗಳು ಯಾವವು? ಹೀಗೆ ಹಲವಾರು ವಿಷಯಗಳನ್ನ ಅತ್ಯಂತ ಪರಿಣಾಮಕಾರಿಯಾಗಿ ಕಾವ್ಯಾತ್ಮಕ ಗದ್ಯದ ರೂಪದಲ್ಲಿ ಹೇಳಿದ್ದಾರೆ. ಶೇಣಿಯವರ ಜೀವನ ಪಥ, ಅವರ ಲೇಖನಿಯ ಸಾಧನೆ, ಶೇಣಿಯವರ ಅರ್ಥಗಾರಿಕೆ, ಶೇಣಿಯವರ ಶೈಲಿ ಇತ್ಯಾದಿಗಳ ಕುರಿತು ಬರೆದ ನಲ್ನುಡಿಯು ಸುಭಗವಾಗಿದ್ದು ಏಕಕಾಲದಲ್ಲಿ ಯಕ್ಷಗಾನದ ಕುರಿತು ಹಾಗೂ ಶೇಣಿ ವ್ಯಕ್ತಿತ್ವದ ಹಿರಿಮೆಯ ಕುರಿತು ತಿಳುವಳಿಕೆಯನ್ನು ವಿಸ್ತರಿಸುತ್ತದೆ ಎಂದಷ್ಟೇ ಹೇಳಬಹುದೇ ವಿನಃ ಪ್ರತ್ಯೇಕವಾಗಿ ವಿವರಿಸಲು ಹೋದರೆ ಎಳೆ ಎಳೆಯೂ ಮಹತ್ವದ್ದೇ ಎಂದೆನಿಸುತ್ತದೆ.
ಈ ಕೃತಿಯಲ್ಲಿ ಕೃಷ್ಣ-ಕೃಷ್ಣರ ಮಾತಿನ ಶೈಲಿಯು ಮಥಿಸಿ ನಾದವೊಂದು ಹೊರಹೊಮ್ಮಿದೆ. ಡಿ.ವಿ.ಜಿಯವರು ಹೇಳುವಂತೆ “ಮನುಷ್ಯನಿಗೆ ಇರುವಂತೆ ಮಾತಿಗೂ ಒಂದು ಸ್ವಭಾವ ಅಥವಾ ಮರ್ಜಿ ಉಂಟು. ಈ ಮರ್ಜಿಯನ್ನು ತಿಳಿದು ಮಾತುಗಳನ್ನು ಹೊಂದಿಸಿರುವುದೇ ಒಳ್ಳೆಯ ಬರವಣಿಗೆಯ ಗುರುತು. ಕೈಗೆ ಸಿಗುವ ಹೂವಿನಲ್ಲಿ ಕೈಗೆ ಸಿಕ್ಕದ ವಾಸನೆಯೊಂದು ಇರುವಂತೆ ವ್ಯಾಕರಣ ನಿಘಂಟುಗಳಿಗೆ ಸಿಕ್ಕುವ ಮಾತುಗಳಲ್ಲಿ ವ್ಯಾಕರಣ ನಿಘಂಟುಗಳಿಂದ ಚೆನ್ನಾಗಿ ವಿವರಿಸಲಾಗದ ಭಾವ ವಿಶೇಷಗಳಿರುವವು. ಆ ಭಾವ ವಿಶೇಷಗಳು ಮಾತಿನ ಅಂತರಂಗ. ಮಾತಿನ ಅಂತರಂಗಧರ್ಮವನ್ನರಿತುಕೊಂಡು, ಆ ಮಾತನ್ನು ತಕ್ಕ ಸಂದರ್ಭದಲ್ಲಿ ಉಪಯೋಗಿಸಿ ಅದುವರೆಗೂ ಗುಟ್ಟಾಗಿ ಆ ಮಾತಿನಲ್ಲಿ ಅಡಗಿಕೊಂಡಿದ್ದ ಒಂದು ಗುಣವನ್ನು ಹೊಸದಾಗಿ ಪ್ರಕಾಶಕ್ಕೆ ತರುವ ಕವಿಯು (ಲೇಖಕನು) ಬಗೆಬಗೆಯ ಸಂದರ್ಭಗಳಲ್ಲಿ ಬಗೆ ಬಗೆಯಾಗಿ ಪದಸಂಯೋಜನೆಗಳನ್ನು ಮಾಡಿ ಬಗೆ ಬಗೆಯ ಶಬ್ದ ಮರ್ಮಗಳನ್ನು ಹೊರಪಡಿಸುವನು.” (ಡಿವಿಜಿ ಕೃತಿ ಶ್ರೇಣಿ -೧, ಪು೧೨೩) ಈ ಮಾತಿನಂತೆ ಪ್ರಸಂಗ ದರ್ಶನ ಕೃತಿಯಲ್ಲಿ ಶೇಣಿಯವರ ಮೌಖಿಕ ರೂಪದಲ್ಲಿದ್ದ ರಾಮಾಯಣದ ಪ್ರಸಂಗ ದರ್ಶನವು ಚಿಕಿತ್ಸಕ ದೃಷ್ಟಿಕೋನದಿಂದ ಮಾಡಿದ ಜೀವನ ವಿಮರ್ಶೆಯೂ ಆಗಿ ಮೂಡಿಬಂದಿದೆ. ವಾಲ್ಮೀಕಿ ಪ್ರಸಂಗದಿಂದ ಹಿಡಿದು ‘ರಾಮನ ಮಹಾ ವಿದಾಯ’ದವರೆಗೆ ಇಡೀ ರಾಮಾಯಣ ಕಥೆಯನ್ನು ಒಳಗೊಂಡ ಇಪ್ಪತ್ತೆರಡು ಪ್ರಸಂಗಗಳಲ್ಲಿ ಶೇಣಿಯವರು ರಚಿಸಿದ ‘ರಾಮಾಯಣ’ವನ್ನು ದಾಖಲಿಸಲಾಗಿದೆ. ಈ ಕೃತಿಯು ಓರ್ವ ಮಹಾಕಲಾವಿದನ ಮಹಾಕಾವ್ಯದ ಅರ್ಥಗಾರಿಕೆಯ ದರ್ಶನವನ್ನು ತನ್ನದೇ ಆದ ವಿಶೇಷ ಭಾಷಾಶೈಲಿಯಲ್ಲಿ ಅಕ್ಷರ ರೂಪದಲ್ಲಿ ಹಿಡಿದಿಡುವ ಮೂಲಕ ಯಕ್ಷಗಾನ ಸಾಹಿತ್ಯ ಪರಂಪರೆಯಲ್ಲಿ ಹೊಸ ಅಧ್ಯಾಯವೊಂದನ್ನು ತೆರೆದಿದೆ, ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿದೆ ಎನ್ನಬಹುದು.
“ಶೇಣಿಯವರ ಅರ್ಥಗಾರಿಕೆ ಎಂದರೆ ಅದು ಸರಸ್ವತಿಯ ತೀರ್ಥಾವತಾರ. ಅದು ಕನ್ನಡಾಂಬೆಯ ವಿಜಯಯಾತ್ರೆಯ ಆಶುಕಥನದ ಅವಿನಾಶೀಧ್ವಜ. ಸಿದ್ಧಕಾವ್ಯದ ಸಣ್ಣ ಎಳೆ ಯೊಂದನ್ನು ಆಧರಿಸಿ ಲೋಕ, ಶಾಸ್ತ್ರ, ಕಾವ್ಯ, ಪುರಾಣಗಳ ಮೌಲಿಕ, ಮೌಖಿಕ ವಿಮರ್ಶೆಯೊಂದಿಗೆ ಆತ್ಮವಿಮರ್ಶೆಯ ಬೆಳಕಿನಲ್ಲಿ ಸಾಂಸ್ಕೃತಿಕ ಚರಿತ್ರೆಗಳ ಒಳತಿರುಳಿನ ಸಾರ್ವಕಾಲಿಕ ಸೈದ್ಧಾಂತಿಕ ತಿಳುವಳಿಕೆಯನ್ನು ದರ್ಶಿಸುವ ಶೇಣಿ ರಾಮಾಯಣವು ಪ್ರಸಂಗ ದರ್ಶನವೂ ಹೌದು; ತತ್ವಶಾಸ್ತ್ರಗಳ ಗತಿ ಬಿಂಬದ ಸಮ್ಯಗ್ದರ್ಶನವೂ ಹೌದು. ಬುದ್ಧಿ ಭಾವಗಳ ವಿದ್ಯುದಾಲಿಂಗನದೊಂದಿಗೆ ರಾಮಾಯಣದ ಹೊಸ ಹೊಸ ಅರ್ಥ ವಲಯಗಳ ಶೋಧವನ್ನು ಶೇಣಿಯವರ ಶೈಲಿಯೊಂದಿಗೆ ಲಿಪಿ ರೂಪದಲ್ಲಿ ದಾಖಲಿಸುವ ಮೊದಲ ಸಾಹಸ ಇದು” ಎನ್ನುವ ಜಿ. ಎಲ್ ಹೆಗಡೆಯವರು ಮನ್ವಂತರದ ಮಾತುಗಾರರು ನಿರ್ವಹಿಸುವ ರಾಮಾಯಣದ ಪಾತ್ರಗಳ ಮೌಖಿಕ ಸಾಹಿತ್ಯ ರಾಶಿಯಿಂದ ಆಯ್ದ ಮುತ್ತುಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿದ್ದಾರೆ. ಜೀವನ ದರ್ಶನವೇ ಮಡುಗಟ್ಟಿರುವ ಇಲ್ಲಿನ ಸಂಭಾಷಣೆಗಳು ಬದುಕನ್ನು ಪ್ರೀತಿಸುವ ಕಲೆಯನ್ನು ಹೇಳಿಕೊಡುತ್ತವೆ.
‘ಅವರವರ ತಲೆಗೆ ಅವರವರ ಕೈ’ ‘ಯಾರಿಗೂ ಯಾರಿಲ್ಲ ಎರವಿನ ಸಂಸಾರ’ ‘ಬೆಳಕನ್ನು ಕಾಣುವುದಕ್ಕೆ ಗುರುವಿನ ಅನುಗ್ರಹ ಬೇಕು’ “ಕತ್ತಲೆಗೆ ಎಷ್ಟು ಕಾಲ ಅಂತ ನಾವು ಲೆಕ್ಕ ಮಾಡೋದಿಲ್ಲ. ನೂರು ವರ್ಷ ಇರಬಹುದು ಒಂದು ಕಡೆಯಲ್ಲಿ ಕತ್ತಲೆ. ಆದರೆ ಕತ್ತಲೆಯ ನಿವಾರಣೆಗೆ ಆ ನಿಮಿಷ ಒಂದು ದೀಪವನ್ನು ಹೊತ್ತಿಸಿದರೆ ಸಾಕಾಗ್ತದೆ.” ಇಂತಹ ಚೇತೋಹಾರಿ ಮಾತುಗಳು ಮೊದಲನೆಯ ಅಧ್ಯಾಯ ‘ವಾಲ್ಮೀಕಿ ದರ್ಶನ’ದಲ್ಲಿ ಬರುತ್ತವೆ. ಕಿರಾತನಾದ ನ್ಯಗ್ರೋಧನ ಮಗಳು ಶಬರಿಯು ಮತಂಗ ಮುನಿಗಳ ಆಶ್ರಮಕ್ಕೆ ಬಂದು ತನ್ನ ವಿಚಾರವನ್ನು ತಿಳಿಸಿದಾಗ ಮತಂಗ ಮುನಿಯು ಶಬರಿಯೊಂದಿಗೆ ಮಾಡುವ ಸಂಭಾಷಣೆಯು ವರ್ಣವಸ್ಥೆ ಮಾನವೀಯತೆ, ನಿಷ್ಕಾಮ ಕರ್ಮಯೋಗ, ಚೂತಫಲದ ಆರೋಗ್ಯವರ್ಧಕ ಗುಣ ಇಂತಹ ಅನೇಕ ಅಂಶಗಳನ್ನು ಚರ್ಚಿಸುತ್ತದೆ. “ಕುಮಾರೀ, ನ್ಯಗ್ರೋಧ ಹಾಗಾದರೆ ಇನ್ನಿಲ್ಲವೇ? ಒಳ್ಳೆಯದಕ್ಕೇ ಆಯ್ತು. ಜೀವನದಲ್ಲಿ ಸುಖ ಸವಿಯಲು ಸಾಕಷ್ಟು ಸಿಗ್ತದೆ ಅಂತ ಆದ್ರೆ, ಪ್ರಪಂಚದ ಕುರಿತಾದ ವಿರಕ್ತಿ ಹುಟ್ಟುವುದೇ ಇಲ್ಲ. ಶಿಲೆಯೊಂದು ಹಲವಾರು ವಿಧವಾದ ಪೆಟ್ಟನ್ನು ತಿಂದು ಉಳಿಯ ಘಾಯವನ್ನು ತಡೆದು ಮತ್ತೂ ಅದು ಉಳಿದರೆ ವಿಚಿತ್ರತರವಾದಂತಹ ಶಿಲ್ಪವಾಗ್ತದೆ. ಚಿನ್ನವನ್ನು ಕಾಯಿಸಿ ಹೊಡೆದು ಎಳೆದು ಆಕೃತಿಯನ್ನು ತರುವಂತೆ ಸುಕೃತಿಗಳಾದಂತಹ ಜೀವರಿಗೆ ಕಾಲ ಮತ್ತು ಪ್ರಾರಬ್ಧ, ಈ ರೀತಿಯಾದಂತಹ ಶಿಕ್ಷೆಯನ್ನು ಸ್ಥೂಲರೂಪದಿಂದ ವಿಧಿಸುತ್ತದೆ ಅಂತಾದ್ರೂ ಶಿಕ್ಷೆ ಅಲ್ಲ ಅದು. ಅದು ಶಿಕ್ಷಣ. ಪರಿಶುದ್ಧವಾದಂತಹ ಜೀವನವನ್ನು ರೂಪಿಸುವುದಕ್ಕೆ ಬುನಾದಿಯಾಗ್ತದೆ. ಮಗಳೇ ನಿನ್ನನ್ನು ನನ್ನ ಕರಕಮಲ ಸಂಜಾತೆಯಾದಂತಹ ಪುತ್ರಿಯಂತೆ ನಾನು ಸ್ವೀಕರಿಸುತ್ತೇನೆ. ಮಾತ್ರವಲ್ಲ, ವಿಶೇಷವಾದಂತಹ ಧರ್ಮವೊಂದಿದೆ ಜಗತ್ತಿನಲ್ಲಿ ಅದಕ್ಕೆ ಸೇವಾಧರ್ಮ ಅಂತ ಹೆಸರು. ಈ ಸೇವೆಯಲ್ಲಿ, ಯಾವುದೇ ಕೊಳ್ಳುವ ವ್ಯವಹಾರ ಇರುವುದಿಲ್ಲ. ಕೊಡುವ ವ್ಯವಹಾರ ಮಾತ್ರ ಇರ್ತದೆ.
ಈ ರೂಪದ ಸೇವೆಗೆ ಪರಮಪ್ರೀತಿಯೇ ಬುನಾದಿ. ಎಲ್ಲರನ್ನೂ ನಮ್ಮ ಆತ್ಮದಂತೆ ನಾವು ಪ್ರೀತಿಸಿದಾಗ ಬರುವಂತಹ ಆನಂದ ಇದೆಯಲ್ಲ, ಅದೇ ಬ್ರಹ್ಮಾನಂದ.”(ಪು13). ‘ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ’ ಎಂಬ ಮನುವಿನ ಮಾತನ್ನು ಶೇಣಿಯವರು ಅರ್ಥೈಸುವುದು ಹೀಗೆ- “ಮನುವೂ ಹೇಳಿದ್ದಾನೆ- ಹೆಣ್ಣು ರಕ್ಷಣೆಯಲ್ಲಿ ಇರ್ಬೇಕು ಎಂದು. ರಕ್ಷಣೆಯ ವಿಷಯದಲ್ಲಿ ‘ನ ಸ್ತ್ರೀ ಸ್ವಾತಂತ್ರ್ಯ ಮರ್ಹಸಿ’ ಅಂತಲೇ ಹೇಳಿರುವುದು. ಪಿತಾ ರಕ್ಷತಿ – ಆ ರಕ್ಷಣೆ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾದದ್ದು. (ಇಂದಿನ ಸಂದರ್ಭದಲ್ಲಿ ಆರಕ್ಷಣೆ ಪದವು ಅತ್ಯಂತ ಸೂಕ್ತವಾಗಿದೆ). ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ ಎಂತ ಹೇಳಿದರೆ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲವೇ ಇಲ್ಲ ಎಂದು ಅಪಾರ್ಥ ಮಾಡಕೂಡದು. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಇಲ್ಲಿ ಹೆಂಗಸರು ಪೂಜಿಸಲ್ಪಡುವಂತಹ ದಿವ್ಯ ಪ್ರತಿಮೆಗಳಾಗಬೇಕು. ದಿವ್ಯವಾದದ್ದು ಮತ್ತು ಬಹಳಷ್ಟು ಬೆಲೆಯುಳ್ಳದ್ದು ದೇವರ ವಿಗ್ರಹದಂತೆ ಇದ್ದದ್ದು, ಅದು ಇನ್ನೊಬ್ಬರ ರಕ್ಷಣೆಯಲ್ಲಿ ಇರಬೇಕಾದದ್ದು ಅನಿವಾರ್ಯ.”
ಮೂರ್ತಿ ಪೂಜೆಗೆ ಕೊಡುವ ವ್ಯಾಖ್ಯಾನವೂ ವಿಶೇಷವೇ ಆಗಿದೆ. “ಮೂರ್ತಿಪೂಜೆಯ ಹಿನ್ನಲೆಯೇ ಅದು. ಇದರಲ್ಲಿ ಇದ್ದುದೇನು? ‘ಯದ್ ಭಾವಂ ತದ್ಭವತಿ’ ಆದಕಾರಣ ನಮ್ಮ ಭಾವನೆಯೇ ಮೂರ್ತಸ್ವರೂಪದಲ್ಲಿ ನಮ್ಮ ಭಾವನೆಯನ್ನು ಈಡೇರಿಸುತ್ತದೆ ಎಂಬುದು ತಾತ್ಪರ್ಯ”( ಪು 15)ಇಲ್ಲಿ ಶೇಣಿಯವರ ಗೂಢಾರ್ಥದ ಸೂಕ್ಷ್ಮತೆಯ ವಿಶಾಲ ಅರಿವು ಪ್ರೇಕ್ಷಕರಿಗೂ ಇದ್ದರೆ ಸಮಾಜ ಬದಲಾವಣೆಯು ಸುಲಭವೆನಿಸುತ್ತದೆ. ಹೆಣ್ಣನ್ನು ಪೂಜಿಸಲ್ಪಡುವ ದಿವ್ಯ ಪ್ರತಿಮೆಗೂ ಪೆಟ್ಟಿಗೆಯಲ್ಲಿ ಇಡುವ ಚಿನ್ನಕ್ಕೂ ಹೋಲಿಸಿರುವುದು ಮನಸ್ಸಿರದ ನಿರ್ಜೀವ ವಸ್ತುವಾಗಿ ಅಲ್ಲ, ಬದಲಾಗಿ ತನ್ನದೇ ಆದ ಅಸ್ತಿತ್ವದಿಂದ ಎಲ್ಲರೊಂದಿಗೆ ಬೆರೆಯುವ ಸ್ವಾತಂತ್ರ್ಯದೊಂದಿಗೆ ಆಕೆಯನ್ನೂ ಒಳಗೊಳ್ಳಬೇಕಾದ ಸಮಾಜವು ಅವಳಿಗೆ ಯಾವುದೇ ಬಾಧೆ ಬರದ ಹಾಗೆ ರಕ್ಷಣೆಯನ್ನೂ ಮಾಡಬೇಕಾದಂತಹ ಅಗತ್ಯತೆಯನ್ನು ಒತ್ತಿ ಹೇಳುವಂತಿದೆ. ಮುಂದೆ “ಪುರುಷಾತಿಕ್ರಮಣ” ಎನ್ನುವ ಪ್ರಸಂಗದಲ್ಲಿ ಶೂರ್ಪನಖಿಯ ಪಾತ್ರದಲ್ಲಿ ಮಾತನಾಡುವಾಗ ಅಂದರೆ, ಶೂರ್ಪನಖಿ ಮತ್ತು ರಾಮನ ಸಂವಾದದಲ್ಲಿ “ ಅಯ್ಯಾ ನಾನು ಕೇಳಿದ್ದೇನೆ, ನಿಮ್ಮ ಆರ್ಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಗೌರವದ ಸ್ಥಾನ ಮಂತ್ರದಲ್ಲಿದ್ರೂ ಬಳಕೆಯಲ್ಲಿ ಇನ್ನೂ ಆ ಸ್ಥಾನ ಕಲ್ಪಿಸಲಾಗಲಿಲ್ಲ ಅಂತ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಅಂತ ಹೇಳಿದ್ದು ನಿಮ್ಮವರೇ, ಹಾಗೆಂತ ಮಕ್ಕಳನ್ನು ಹೆರುವ ಯಂತ್ರ ಹೆಣ್ಣು ಅಂತ ಮಾಡಿದ್ದೂ ಹೌದು. ಇಲ್ಲದೇ ಇದ್ರೆ ಆ ಜಮದಗ್ನಿ ಕುಲಪತಿ ರೇಣುಕೆಯಂತಹ ಹೆಂಡತಿ ಒಂದ್ ನಿಮಿಷ ಯೇನೋ…. ಗಂಧರ್ವ ದಂಪತಿಗಳನ್ನು ಕಂಡು ತನ್ನ ಅನುಭವಕ್ಕೆ ಇಲ್ಲದೆ ಇದ್ದಂತಹ ದೃಶ್ಯದಲ್ಲಿ ಸಂತೋಷಪಟ್ಟಾವಾಗ ಈ ಬ್ರಾಹ್ಮಣ “ಅವಳ ತಲೆ ಕಡಿಯತಕ್ಕದ್ದು, ಮಾನಸಿಕ ವ್ಯಭಿಚಾರ” ಅಂತೇಳಿದನಂತೆ. ಅದೇ ಬ್ರಾಹ್ಮಣರು ಶಿವನನ್ನು ಗಂಗಾಧರ, ಮತ್ತೊಬ್ಬನನ್ನು ಲಕ್ಷ್ಮೀವಕ್ಷ ಇನ್ನೊಬ್ಬನನ್ನು ಶಾರದಾಮುಖಿ – ಬ್ರಹ್ಮನ ಮುಖದಲ್ಲಿ ಹೆಣ್ಣನ್ನು ಕಾಣುವ ದೃಷ್ಟಿ, ಶಿವನತಲೆಯಲ್ಲಿ ಹೆಣ್ಣನ್ನು ಕೂರಿಸುವ ದೃಷ್ಟಿ, ನಾರಾಯಣನ ವಕ್ಷಸ್ಥಲದಲ್ಲಿ ಹೆಣ್ಣನ್ನು ಪ್ರತಿಷ್ಠಾಪಿಸುವ ದೃಷ್ಟಿ ಕೆಲವು ಸಲ ತಮ್ಮ ಮನೆಯಲ್ಲಿದ್ದ ಹೆಣ್ಣು ಮಕ್ಕಳ ಕಡೆಗೆ ವಕ್ರದೃಷ್ಟಿಯಾಗಿ ಅವಳು ಬರೇ ದಾಸಿ, ಹೇಸಿ ಎಂತ ಮಾಡಿದ್ದಾರೆ ಎಂಬುದು ನನ್ನ ಅನಿಸಿಕೆ. ತಪ್ಪಾದ್ರೆ ತಿದ್ದಿಕೊಳ್ತೇನೆ”. ಎಂದೂ ಹೇಳಿರುವ ಶೇಣಿಯವರು ಸಾಮಾಜಿಕ ವಾಸ್ತವಕ್ಕೆ ನಿಷ್ಠವಾಗಿ ಮಾತನ್ನು ವಿಡಂಬನಾತ್ಮಕವಾಗಿ ಬಿಂಬಿಸಿರುವುದನ್ನು ಎತ್ತಿ ತೋರಿಸುತ್ತದೆ.
ಶೇಣಿಯವರು ಹೇಗೆ ಪಾತ್ರದ ಆತ್ಮವನ್ನು ಮುಟ್ಟಿ ಬರುವರೋ ಅಂತೆಯೇ ಅವರ ಮಾತುಗಳ ಆತ್ಮವನ್ನೂ ಮುಟ್ಟಿದರೆ ಇದೊಂದು ಅದ್ಭುತ ರಾಮಾಯಣವೇ ಆಗಿದೆ. ಇದೇ ಸಂವಾದದ ಮುಂದುವರಿದ ಭಾಗದಲ್ಲಿ ರಾಮನನ್ನು ಉದ್ದೇಶಿಸಿ “ಆದ್ರೆ ನೀನ್ ಹಾಗಲ್ಲ. ಇದಕ್ಕೆಲ್ಲ ಅಪವಾದ ನೀನು. ನಿಮ್ಮಲ್ಲಿ ಸ್ತ್ರೀ ಪ್ರಾಧಾನ್ಯತೆ ಉಂಟಂತೆ. ರಾಜ್ಯಾಂಗದ ಮೇಲಾಗಲಿ, ನ್ಯಾಯಾಂಗದ ಮೇಲಾಗಲಿ ಚಕ್ರವರ್ತಿಯ ತೀರ್ಮಾನವಾಗಲಿ, ಮಂತ್ರಿ ಮುತ್ಸದ್ದಿಗಳ ಹೇಳಿಕೆಯಾಗಲಿ, ಬವಿಷ್ಯದ್ವಾಣಿಯನ್ನು ಹೇಳುವ ಮಹಾಜ್ಞಾನಿಗಳ ನಿಘಂಟಾಗಲಿ ಎಲ್ಲ ಅಡಿಮೇಲಾಗ್ತದಂತೆ! ನಿಮ್ಮ ಅರಮನೆಗೆ, ವೃದ್ಧನಿಗೆ ಹೆಂಡತಿಯಾಗಿ ಬಂದಂತವಳು ಕೈಕೇಯಿ. ಆ ಕೈಕೇಯಿಯ ವಾಂಛೆಯನ್ನು ಪೂರೈಸುವುದು ಕರ್ತವ್ಯ ಅಂತ ನಿನ್ನ ಪರಂಪರಾಗತವಾದ ಹಕ್ಕನ್ನು ಒಂದು ಹೆಣ್ಣಿನ ಆಸೆಗೆ ಬೇಕಾಗಿ ಬಲಿಕೊಟ್ಟು….” ಎಂದು ಹೇಳುತ್ತಾ ವಾಸ್ತವದಲ್ಲಿರುವ ಸಾಮಾಜಿಕ ಸ್ಥಿತಿಯ ಎರಡು ಮುಖಗಳಿಗೆ ಕನ್ನಡಿ ಹಿಡಿದಿದ್ದಾರೆ. ಮೊಗೆದಷ್ಟೂ ಶೇಣಿಯವರ ಮಹಿಮೆಯನ್ನು ಮುನ್ನೆಲೆಗೆ ತರುವ “ಶೇಣಿ ರಾಮಾಯಣ” ಕೃತಿಯು ವಾಸ್ತವಕ್ಕೆ ಹತ್ತಿರವಾಗುತ್ತ ಹೋಗುವುದು.
‘ಮುಖ್ಯಮಂತ್ರಿಗಳ ನೀತಿ’ ಎನ್ನುವ ಅಧ್ಯಾಯದಲ್ಲಿ (ಅ16) ಸಂಧಾನಕ್ಕಾಗಿ ರಾವಣನ ಆಸ್ಥಾನಕ್ಕೆ ಬಂದ ಅಂಗದನನ್ನು ಕಂಡು “ಅಂತೂ ಒಂದು ಕಡೆ ಪೀಠಹಾಕಿ ಕುಳಿತನೋ ಇಲ್ಲೊ? ಬಹಳ ಅಪಾಯ ಇದು. ಈ ಬಾಲಮಾತ್ರ ಬೆಳೆದವರಲ್ಲಿ ನಾವು ತಲೆ ಬೆಳೆದವರು ಹೇಗೆ ವ್ಯವಹರಿಸುವುದು? ಕೂತಮೇಲೆ ಮಾತನಾಡಿಸಬಹುದು. ಏನೋ ಹೇಳ್ತಾ ಇದ್ದಾನೆ. ನಮ್ಮ ವಿರೋಧಿ ಪಕ್ಷದಿಂದ ಬಂದವ. ನಮ್ಮನ್ನು – ಆಕ್ಷೇಪಿಸುತ್ತಾ ಇದ್ದಾನೆ! ಇಲ್ಲಿ ಯಾರೂ ಮಾತನಾಡಿಸುವುದಿಲ್ಲ, ಆಸನ ಕೊಟ್ಟು ಸತ್ಕರಿಸುವುದಿಲ್ಲ ಅಂತ. ಕೊಡುವವರೆಗೆ ಕಾಯುವುದಕ್ಕೆ ತಾಳ್ಮೆಯೂ ಇವನಿಗಿಲ್ಲ. ನಾನೇ ಮಾತನಾಡಿಸ್ತೇನೆ – ಮುಗುಳುನಗೆಯನ್ನು ಬೀರಿ, ಇವನನ್ನು ಯೇನ್ಮಾಡಿಯಾದ್ರೂ ಮಂಕು ಮರಳು ಮಾಡಿ, ಮತ್ತೇನೂ ಇಲ್ಲ, ಹುಟ್ಟುಗುಣ ಬಿಟ್ಟು ಹೋಗ್ತದೋ? ಆದ್ದರಿಂದ ಮಾತನಾಡಿಸೋಣ.” ಮಂತ್ರಿ ಪ್ರಹಸ್ತನಾಗಿ ಶೇಣಿಯವರ ಈ ಮಾತು ಕಟು ವ್ಯಂಗ್ಯ, ವಿಡಂಬನೆ, ವರ್ತಮಾನದ ವಿಶ್ಲೇಷಣೆಯನ್ನು ಒಳಗೊಂಡಿದೆ. “ಈಶಾ ವಾಸ್ಯಂ ಇದಂ ಸರ್ವಂ ಹೌದೋ? ಎಲ್ಲರಿಗೂ ದರ್ಶನವಾಗ್ತದೋ…? ಯಾಕಾಗೋದಿಲ್ಲ? ಕಾಣುವ ಕಣ್ಣು ಬೇಕು. ಕೂತಲ್ಲಿಂದ ಏಳು, ನನ್ನ ಕಣ್ಣಿನಿಂದ ನೋಡು, ನಿನ್ನ ಕಣ್ಣು ಸಾಲದು – ರಾವಣನನ್ನು ನೋಡ್ಲಿಕ್ಕೆ”(ಪು160)ಇವು ಹೆಗಡೆಯವರು ಗುರುತಿಸಿದ ಶೇಣಿಯವರ ಮಾತಿನ ಸಾರ್ವಕಾಲಿಕವಾದ ಸಮಾಜ ನೀತಿ.
ಅತಿಕಾಯನೀತಿ (ಅ17) ಪ್ರಸಂಗದಲ್ಲಿ ಶೇಣಿಯವರ ಹರಿ-ಹರ ತತ್ತ್ವದರ್ಶನವು ವರ್ತಮಾನಕ್ಕೆ ಅತ್ಯಂತ ಹತ್ತಿರವೂ ಅಗತ್ಯವೂ ಆಗಿದೆ. ಅತಿಕಾಯನು ತಂದೆಗೆ ಬೋಧಿಸುವ ಮಾತು – “ವ್ಯವಹಾರಿಕ ಜಗತ್ತಿನಲ್ಲಿ ದೇವರು ಜೀವರು ಜಗತ್ತು ಈ ಮೂರು ಅಂಗೀಕರಿಸಲ್ಪಡ್ತದೆ ತಾನೇ? ಶಿವನನ್ನು ಒಪ್ಪುವವ ನಾರಾಯಣನನ್ನು ಒಪ್ಪಿಕೊಳ್ಳುತ್ತಾನೆ. ಶಾಸ್ತ್ರದಲ್ಲಿ -ಹರಿ – ಹರ ಅಂತ ಭೇದ ಮಾಡುವುದಿಲ್ಲ. ಕೇವಲ ಶಬ್ದ ಭೇದವನ್ನು ಮಾತ್ರ ಗುರುತಿಸುತ್ತಾರೆ ಅಷ್ಟೇ.” “ತಮಗೇಕೋ ನಾರಾಯಣ ಅಂತ ಕೇಳ್ದಾಗ( ಏನಾಗ್ತದೆ ಅಂತ ನನಗೆ ಗೊತ್ತಿಲ್ಲ. ಇದು ಅಜ್ಞಾನವಾಗಿರ್ಲಿಕ್ಕಿಲ್ಲ. ಹಾಗೆ ಅಂತ ಜ್ಞಾನ ಆಗ್ಲಿಕ್ಕೂ ಸಾಧ್ಯವಿಲ್ಲ. ಯಾಕೆ ಜ್ಞಾನ ಆಗೋದಕ್ಕೆ ಸಾಧ್ಯವಿಲ್ಲ? ಅಪ್ಪಯ್ಯಾ, ಈ ನಮ್ಮ ರಾಕ್ಷಸರಿಗೆ ಅರ್ಥ ಆಗುವ ಹಾಗೆ ಹೇಳ್ತೇನೆ ನಿಮಗೆ ಅರ್ಥ ಆಗ್ಲಿ ಅಂತಲ್ಲ ಇಲ್ಲಿ ಗಮನಿಸಬೇಕಾದುದು ಶೇಣಿಯವರ ಮಾತಿನ ವಿಸ್ತರಣೆಯನ್ನು) – ನಾವು ರಾಜರು, ರಾಜಪುರುಷರು ನಾವು ಕೆಲವಾರು ವಿಚಾರಗಳಿಗೆ ಬೇಕಾಗಿ ಕೆಲವಾರು ಪ್ರಾಣಿಗಳನ್ನೆಲ್ಲಾ ಸಾಕ್ತೇವೆ ಹೌದಲ್ಲ? ಬೇಟೆಗಾಗಿ ಕೆಲವು ಪ್ರಾಣಿಗಳಿಲ್ಲವೇ? ಅವುಗಳನ್ನು ನಿಕೃಷ್ಟ ಅಂತ ಹೇಳ್ತವೆ – ಬೇಟೆನಾಯಿಗಳು ಅಂತ. ನೀವಾಗ್ಲಿ ನಾನಾಗ್ಲಿ ಯಾವ ವೇಷವನ್ನೇ ಹಾಕಿ ಹೋಗ್ಲಿ ಅವು ಬಂದು ಪಾದ ನೆಕ್ತಾವೆ, ಮೂಸ್ತಾವೆ. ಹೌದೊ? ನಾವು ವೇಷಾಂತರದಿಂದ ಹೋದ್ರೂ ಆ ಪ್ರಾಣಿಗಳಿಗೆ ಸ್ವಾಮಿಭಕ್ತಿ ಇದ್ದೇ ಇರ್ತದೆ. ಅಂಥ ಪ್ರಾಣಿಗಳಾದ್ರೂ ವೇಷ ಪಲ್ಲಟವಾಗುವಾಗ ಗುರುತಿಸ್ತಾವಂತೆ, ಶಾಸ್ತ್ರ ಓದಿದ ವಿದ್ವಾಂಸನಿಗೆ, ಪರಮಾತ್ಮ ವೇಷ ಪಲ್ಲಟ ಮಾಡಿದ್ರೆ ಗೊತ್ತಾಗೋದಿಲ್ಲವೇ?…. ಹರಿ ಹರ ಅಂತ ಜುಟ್ಟು ಜುಟ್ಟು ಹಿಡಕೊಂಡು ಜಗಳವಾಡ್ತಾರಂತೆ, ಅಂತ ಹೇಳುವಾಗ ಅಂತವರ ಜನ್ಮಕ್ಕೆ ನಾನು ಏನೂ ಅಂತ ಹೇಳಲಿ?” “ಹಗ್ಗವನ್ನು ಕಂಡು ಹಾವು ಅಂತ ಹೇಳುತ್ತಾನೆ. ಅದು ಅಜ್ಞಾನ ಅಲ್ಲ. ಯಾಕೆ? ಹಾವು ಅನ್ನುವುದೂ ಒಂದು ಜ್ಞಾನವೇ ಹಗ್ಗ ಎಂಬುದೂ ಒಂದು ಜ್ಞಾನವೇ.” (ಪು168).
ರಾಮ ರಾವಣರ ಯುದ್ಧ ಆರಂಭವಾಗಿದೆ. ರಾವಣನ ಸೈನ್ಯ ಸೋಲನ್ನು ಉಣ್ಣುತ್ತಾ ಇದೆ. “ನಾನೇ ಯುದ್ಧಕ್ಕೆ ಹೊರಡುವೆ, ರಾಮ ಕುರಿ, ನಾನು ಹೆಬ್ಬುಲಿ ಅಂಜಲಾರೆ” ಎಂದು ಪ್ರಸಂಗದ ಎದುರಾಳಿ ರಾವಣ ತಯಾರಾಗಿದ್ದ ಸಂದರ್ಭದಲ್ಲಿ ಅತಿ ಕಾಯನ ಪಾತ್ರದಲ್ಲಿ ಶೇಣಿ- “ಕುರಿ ಯಾರು? ಹೆಬ್ಬುಲಿ ಯಾರು? ನಮ್ಮ ತಂದೆಯವರು ಹೆಬ್ಬುಲಿಯೇ ಹೌದಾಗಿದ್ರೆ, ಕುರಿಯನ್ನು ಕೊಲ್ಲುವುದಕ್ಕೆ ಮೊದಲು ಪ್ರತಿಜ್ಞೆಯೇ! ಈ ನಮ್ಮ ಹೆಬ್ಬುಲಿಯನ್ನು ಉದ್ಘಾಟಿಸಿಕೊಂಡ ವ್ಯಕ್ತಿ. ಪ್ರತಿಜ್ಞಾಬದ್ಧರಾಗಿ ನಿಂತಿದ್ದಾರೆ! ಹಾಗಾದರೆ ಕೇಳುವವರು ಕುರಿಗಳು ಅಂತಲೋ?”(ಪು 163). ಮುಂದುವರಿದು ದಶಕಂಠನ ಹೆಸರಿಗೇ ಕೈ ಹಾಕಿ ಮಾಡುವ ವಿಶ್ಲೇಷಣೆ ಮಾರ್ಮಿಕವಾಗಿ ಮನೋಜ್ಞವಾಗಿ ಇಲ್ಲಿ ಮೂಡಿಬಂದಿದೆ
“ಹೇಳ್ತಾರೆ ವಿದ್ವಾಂಸರೆಲ್ಲ – ಏನು ದಶಕಂಠ ಅಂತಂದ್ರೆ! ಒಂಭತ್ತು ಕೂಡಿಸು ಒಂದು ಹತ್ತಾಗ್ತದೆ; ಆದರೆ ಹಾಗಲ್ಲ, ನಾಲ್ಕು ಮುಖಗಳಿಂದ ನಾಲ್ಕು ವೇದಗಳನ್ನು ಬೇರೆ ಬೇರೆಯಾಗಿ, ಮಿಕ್ಕ ಆರು ಮೋರೆಗಳಿಂದ ಆರು ಶಾಸ್ತ್ರಗಳನ್ನು ಏಕಕಾಲದಲ್ಲಿ ಹೇಳುವವರು ಮಾತ್ರವಲ್ಲ ಬಾಕಿ ಇದ್ದವರಿಗೆ ಕೇಳಿಸುವವರು. ಇಲ್ಲಿ ದಶರಥ ಅಂತಂದ್ರೆ ಹತ್ತೇ ರಥವನ್ನು ಇಟ್ಟುಕೊಂಡವರು ಹೇಗೆ ಅಲ್ವೋ, ಹಾಗೆ ದಶಕಂಠ ದಶಮುಖರು, ಎಣಿಕೆಯಿಂದ ಹತ್ತು ತಲೆಯನ್ನು ಹೊತ್ತು ತಿರುಗುವವರಾಗಬೇಕಾದ್ದಿಲ್ಲ. ನಾಲ್ಕು ವೇದವನ್ನು ಆರು ಶಾಸ್ತ್ರವನ್ನು ಹೇಳುವವರು ತಿಳಿದು ತಾನೆ ಹೇಳುವುದು? ಅಲ್ಲ ಓದಿ ಹೇಳುವುದೋ? ತಿಳಿದೇ ಹೇಳಬೇಕು ತಾನೆ? ಈಗ, ಸ್ವಲ್ಪ ಓದಿದವನಿಗಾದರೂ ಸಂದೇಹ ಆಗ್ತದೆ ಇವು ತಿಳಿದು ಹೇಳಿದ್ದೋ ಅಲ್ಲೋ ಅಂತ.” ವಸ್ತು ನಿಷ್ಠವಾದ ಮಾತುಗಳನೂ ಬಲ್ಲ ಶೇಣಿಯವರ ವಿಸ್ತಾರವಾದ ಪಾತ್ರ ಪ್ರಪಂಚವನ್ನು ಜಿ ಎಲ್ ಹೆಗಡೆಯವರು “ಬುದ್ದಿ ಭಾವಗಳ ವಿದ್ಯುದಾಲಿಂಗನದೊಂದಿಗೆ ರಾಮಾಯಣದ ಹೊಸ ಹೊಸ ಅರ್ಥ ವಲಯಗಳ ಶೋಧ” ಎಂದು ಗುರುತಿಸಿರುವುದು ಅತ್ಯಂತ ಸಮಂಜಸವಾಗಿದೆ.
ರಾವಣನ ಮಂತ್ರಿ ‘ಪ್ರಹಸ್ತ’ನಾಗಿ ಮತ್ತು ಬೇರೊಂದು ಪ್ರಸಂಗದಲ್ಲಿ ಅಂಗದನಾಗಿ ಮಾತನಾಡುವಾಗ ‘ಪ್ರಹಸ್ತ’ನಾಗಿ ಆಡಿದ ಮಾತನ್ನೇ ಅರ್ಥವ್ಯತ್ಯಾಸ ಮಾಡಿ ಅಷ್ಟೇ ಅರ್ಥಪೂರ್ಣವೂ ಆಗಿ ಎದುರಾಳಿ ಅಂಗದನ ಮಾತಾಗಿ ಪರಿವರ್ತಿಸುವ ವಾಕ್ಚಾತುರ್ಯವು ಇಲ್ಲಿ ದಾಖಲಾಗಿದೆ. ಗೋಪಾಲಕೃಷ್ಣ ಹೆಗಡೆಯವರ ಸಂಶೋಧನ ಪ್ರವೃತ್ತಿ ಇಲ್ಲಿ ಎದ್ದು ಕಾಣುತ್ತದೆ. ‘ಪ್ರಹಸ್ತ’ನಾಗಿ ಶೇಣಿ – “ಆರೋ ಬಂದವನೊಬ್ಬ ಕಪಿ ಅಂತ ನಾವೆಲ್ಲ ಸುಮ್ಮನಾದದ್ದು” ಅದೇ ಶೇಣಿ ಅಂಗದನಾದರೆ – “ಆರಲ್ಲ, ಏಳು ಏಳು” ಅಂದರೆ ಬಂದದ್ದು ಆರು ಕಪಿಗಳಲ್ಲ ಎಪ್ಪತ್ತೇಳು ಕೋಟಿ ಕಪಿಗಳು ಎಂಬುದು ಧ್ವನಿ (ಪು 156).
ಪ್ರಹಸ್ತನಾಗಿ ಶೇಣಿ – ರಾವಣನನ್ನು ಕಂಡಾಗ ಈ ಹೆಣ್ಣು ಮಕ್ಕಳಲ್ಲಿ ಆವೇಶ ಆಗ್ಯದೆ. ‘ಉಟ್ಟ ಪಟ್ಟೆಯ ನೆರಿ, ಪಟ್ಟೆ ಬಳಿದ ಭಸ್ಮ ಮಾಸಲಿಲ್ಲ. ಹೆಣ್ಣಿನೊಂದಿಗೆ ರಾವಣ ಮಲಗಿದ್ದ’ ಅಂತ ನಿನ್ನ ಬಾವನೇ ಊರಲ್ಲಿ ಪ್ರಚಾರ ಮಾಡಿದ್ದಾನಂತೆ. ಅಂಗದನಾಗಿ ಶೇಣಿ – ಅಯ್ಯಾ ಹೌದು, ನಮ್ಮ ಹನುಮಂತ ದೇವರು ರಾಮನಲ್ಲಿ ಲಂಕೆಯ ಕಥೆ ಹೇಳುವಾಗ ಈ ಮಾತನ್ನು ಹೇಳಿದ್ದ ಆದರೆ ಅದಕ್ಕೆ ನನ್ನ ಅನಿಸಿಕೆ ಹೇಗೆಂದರೆ ರಾವಣ ಮಂಡೋದರಿಯ ಜೊತೆ ಮಲಗಿದ್ದಾಗ ಭಸ್ಮ ಅಳಿಸದೇ ಇರುವುದಕ್ಕೆ, ಪಟ್ಟೆಯ ನೆರಿ ಮುರಿಯದೇ ಇರುವುದಕ್ಕೆ ರಾವಣನ ಇಂದ್ರಿಯ ನಿಗ್ರಹ ಕಾರಣವಲ್ಲ. ಸೀತೆಯನ್ನು ಕಂಡಾಗಿನಿಂದ ಮಂಡೋದರಿಯ ಕುರಿತು ಬಂದ ವಿರಕ್ತಿಯೇ ಕಾರಣ”( ಪು೧೬೧).
ಇದು ಒಂದು ಉದಾಹರಣೆ ಅಷ್ಟೇ, ಇಂತಹ ಉದಾಹರಣೆಗಳನ್ನು ಇಲ್ಲಿರುವ 22 ಪ್ರಸಂಗಗಳಲ್ಲಿ ಪ್ರತಿಯೊಂದು ಪರಿಚ್ಛೇದಗಳಲ್ಲೂ ಕಾಣಬಹುದಾಗಿದೆ. ಓದುತ್ತಾ ಓದುತ್ತಾ ಹೋದಂತೆ ಮಾತು ಕೂಡ ಗೊತ್ತಿಲ್ಲದೆ ಮಾತುಗಾರನದೆ ದಾಟಿಯಲ್ಲಿ ನಮ್ಮ ಬಾಯಿಂದ ಹೊರಬರುವಂತಹ ಪದಗಳ ಬಳಕೆಯು ಕೃತಿಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರೆ ಅತಿಶಯೋಕ್ತಿಯಾಗದು. ಇಲ್ಲಿನ ಚಿಂತನೆಗಳು ಕೇವಲ ಯಕ್ಷಗಾನಕ್ಕಷ್ಟೇ ಅಲ್ಲ, ಸಾಹಿತ್ಯ ಲೋಕದಲ್ಲೂ ಮಹಾಕಾವ್ಯಗಳ ಪುರಾಣ ಕಥೆಗಳ ಮರುಚಿಂತನೆಗೆ ಹಲವು ಆಯಾಮಗಳನ್ನು ಹುಡುಕಿಕೊಡುತ್ತವೆ. ಶೇಣಿಯವರು ಕಡೆದು ನಿಲ್ಲಿಸುವ ಪಾತ್ರಗಳ ಮೂಲಕ ಬದಲಾಗುತ್ತಿರುವ ವರ್ತಮಾನದ ಹಲವು ಗೊಂದಲಗಳಿಗೆ, ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗುವಂತಿವೆ.
ಸದೇಹಿಯಾಗಿ ಸ್ವರ್ಗವನ್ನು ಪಡೆಯಲು ತಪಸ್ಸನ್ನು ಆಚರಿಸುತ್ತಿರುವ ಶಂಬುೂಕನ ಗರ್ವದ ಮಾತಿಗೆ ರಾಮನು ಉತ್ತರ ಕೊಡುವಾಗ “ ಛೇ…. ಅಲ್ಪವಿದ್ಯಾ ಮಹಾಗರ್ವಿ, ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯ. ‘ಅನಾಭ್ಯಾಸೇ ಶಾಸ್ತ್ರಂ ವಿಷಂ” ಅದು ಇಲ್ಲಿ ಪ್ರತ್ಯಕ್ಷ. ಈಗ ಏನಂತೆ…. ಇವನು? ಸದೇಹಿಯಾಗಿ ಸ್ವರ್ಗಕ್ಕೆ ಹೋಗ್ತಾನಂತೆ. ಇದಕ್ಕೆ ಆತ್ಮಕಲ್ಯಾಣ ಅಂತ ಹೆಸರಿಸ್ತಾರೆ. ದೇಹ ಬೇರೆ ಆತ್ಮ ಬೇರೆ. ಆತ್ಮಕಲ್ಯಾಣಕ್ಕಾಗಿ ಶೂದ್ರನೋ, ಚಂಡಾಲನೋ ಹೆಣ್ಣು ಗಂಡು ಎಂಬ ಪ್ರಭೇದವಿಲ್ಲದೆ ಯಾರು ಬೇಕಾದರೂ ನಮ್ಮ ರಾಜ್ಯದಲ್ಲಿ ತಪಸ್ಸನ್ನು ಆಚರಿಸಬಹುದು. ನಮ್ಮ ಪರಂಪರೆಯೇ ಅದು. ಮಹಾಕವಿಯೂ ಮಹರ್ಷಿಯೂ ಆದಂತಹ ವಾಲ್ಮೀಕಿಯ ಪೂಜೆ ಮಾಡುವವರು ನಾವು. ನಮ್ಮ ಜಾತಿಯಲ್ಲಿ ಹುಟ್ಟಿ, ಬ್ರಹ್ಮತ್ವವನ್ನು ಸ್ಥಾಪಿಸಿದಂತಹ ಭಗವಾನ್ ವಿಶ್ವಾಮಿತ್ರರನ್ನು ಆಚಾರ್ಯರೆಂದು ಅಂಗೀಕರಿಸುವವರು ನಾವು. ಜಾಬಾಲಿ, ಐತರೇಯ ಇವರ ಕುಲಗೋತ್ರಗಳನ್ನು ನೋಡಿಯೋ ನಾವು ಪ್ರಥಮ ಪೂಜಿಸುವವರು? ಅವರೆಲ್ಲಾ ಆತ್ಮಕಲ್ಯಾಣವಾದಂತಹ ಮಾರ್ಗದಲ್ಲಿ ಜೀವಭಾವನ್ನು ತೊರೆದು ದಿವ್ಯತ್ವವನ್ನು
ತುಂಬಿಕೊಂಡವರು. ಅಂಥವರ ಸಮಾಜದಲ್ಲಿ, ಈತನೇನ್ ಹೇಳ್ತಾನೆ? ನಾನು ಶೂದ್ರ. ಯಾರು ಕೇಳಿದರು? ನಾನವನ ಜಾತಿ ಕೇಳಿದೆನೆ? ಹಾಗಾದರೆ ಏನೋ ಒಳಗಿಂದೊಂದು ಸಂಘರ್ಷದ ವಿಷವರ್ತುಲ ಇರಬೇಕು ಇವನ ಹೃದಯದಲ್ಲಿ” ಇಂತಹ ಮಾತುಗಳು ಹೇರಳವಾಗಿ ಈ ಕೃತಿಯಲ್ಲಿ ಪಾಕ ಗೊಂಡಿವೆ. ಒಟ್ಟಿನಲ್ಲಿ ಸಾಂಸ್ಕೃತಿಕ ಬದುಕನ್ನು ಉನ್ನತಗೊಳಿಸುವ ನಿಟ್ಟಿನಲ್ಲಿ ಈ ಕೃತಿಯು ಮಹತ್ವದ್ದಾಗಿದೆ. ಈ ಕೃತಿಯಲ್ಲಿ ಗೋಪಾಲಕೃಷ್ಣ ಹೆಗಡೆಯವರು ಶೇಣಿಯವರ ಬಗೆಗೆ ತಮ್ಮದೇ ಆದ ಮನೋ ಚಿತ್ರವನ್ನು ಮಾಡಿಕೊಂಡು ಅದನ್ನು ಓದುಗರ ಮುಂದೆ ಇಟ್ಟಿದ್ದಾರೆ. ಸೈದ್ಧಾಂತಿಕವಲ್ಲದ ಅಧ್ಯಾತ್ಮದ ಹೊಸ ಹೊಳಪನ್ನು ಇಲ್ಲಿನ ಪಾತ್ರಗಳು ನೀಡುತ್ತವೆ. ವರ್ತಮಾನದಲ್ಲಿ ಪ್ರಚಲಿತವಿರುವ ಸಂಗತಿಗಳಿಗೆ ರಾಮಾಯಣ ಕಾವ್ಯ ಮಾಧ್ಯಮದ ಮುಖಾಂತರ ದರ್ಶನವನ್ನು ಕಂಡುಕೊಂಡು, ಕಾಣಿಸಿ ಮನಸ್ಸನ್ನು ತೆಳುವಾಗಿಸುವ ರೀತಿಯಲ್ಲಿ ಇಲ್ಲಿನ ಪ್ರಸಂಗಗಳು ಸಾಗಿವೆ. ಕಾವ್ಯ ಪಠ್ಯದ ಚೌಕಟ್ಟನ್ನು ಕೆಡಿಸದೆ ಅದನ್ನು ಮೀರಿ ವರ್ಣಿಸುವ ರೀತಿ, ಒಳಾರ್ಥಗಳನ್ನು ತೆರೆಯುವ, ಉದ್ದೇಶಗಳನ್ನು ಪೂರ್ಣಗೊಳಿಸುವ ಅದ್ವೈತ ಅಧ್ಯಾತ್ಮದರ್ಶನವು ಶೇಣಿ ರಾಮಾಯಣ ಗ್ರಂಥದಲ್ಲಾಗುತ್ತದೆ.
ಇಲ್ಲಿ ಬಳಸಿರುವುದು ತೀರಾ ಹಗೂರಾದ ಆಡುಭಾಷೆಯಲ್ಲ. ಬದಲಾಗಿ ವಾಕ್ಪಟು ಶೇಣಿಯವರ ಮಾತಿನ ಏರಿಳಿತಗಳಿಗೆ ಪೂರಕವಾಗಿ ಪಠ್ಯ ಭಾಷೆಗಿಂತ ಭಿನ್ನವಾದ ಪ್ರೌಢ ಭಾಷೆ. ಉದಾ- ‘ ಯಾರೋ ಅದು?’ ‘ಒಹ್ಹೋ!’ ‘ಯೇನು ಬಂದದ್ದು?’ ‘ರಾsssಮನ ದಂಡು ಬಂದ್ಯದೆ!!’ ‘ಆಗ್ತದೆ’ ‘ಪ್ರಕಟಿಸ್ತೇನೆ’ ‘’ನನಗ್ಗೊತ್ತುಂಟು’ ‘ಕೇಳ್ತೇನೆ’ ‘ಸುದ್ದಿಕೊಡ್ವ’ ಇತ್ಯಾದಿ. ಕ್ರಿಯಾಪದಗಳನ್ನು ಬಳಸುವಾಗ ಈ ರೀತಿಯಲ್ಲಿ ಆಡು ಭಾಷೆಯನ್ನು ಪ್ರೌಢವಾಗಿ ಬಳಸಿಕೊಂಡಿರುವುದು ಕಥೆಯನ್ನು ನೈಜವಾಗಿ ಆಪ್ತವಾಗಿ ಓದಿಸಿಕೊಂಡು ಹೋಗುತ್ತದೆ.
ಸರ್ವೇಸಾಮಾನ್ಯವಾಗಿ ತಿಳಿದಿರುವ ಮಹಾಕಾವ್ಯ ರಾಮಾಯಣವನ್ನು ಪರಾಮರ್ಶೆಗೆ ಒಳಪಡಿಸಿ ಹಂತ ಹಂತದಲ್ಲೂ ಹೊಸತನವನ್ನು ತುಂಬಿ ಮತ್ತೊಮ್ಮೆ ಮೊಗದೊಮ್ಮೆ ಓದಬೇಕೆಂಬ ಹಂಬಲವನ್ನು ಉಂಟುಮಾಡುವ ಶೇಣಿ ರಾಮಾಯಣವು ಕೇವಲ ಯಕ್ಷಗಾನ ಕ್ಷೇತ್ರದಲ್ಲಷ್ಟೇ ಅಲ್ಲ, ಒಂದು ಸಾಂಸ್ಕೃತಿಕ ಪಠ್ಯವಾಗಿ ಕನ್ನಡ ಸಾರಸ್ವತ ಲೋಕದಲ್ಲಿ, ಸಾಮಾನ್ಯ ಓದುಗರ ಮನದಲ್ಲಿ ಶಾಶ್ವತವಾಗಿ ಉಳಿಯಬಲ್ಲ ಗುಣಪೂರ್ಣ ಕೃತಿ. ತಮಗೆ ಸಿದ್ಧಿಸಿರುವುದನ್ನು ತೀಕ್ಷ್ಣ ಬುದ್ಧಿಯ ಮೂಲಕ ತಲುಪಿಸಿ ಜನಕೋಟಿಯ ಜ್ಞಾನವನ್ನು ಉದ್ದೀಪನ ಗೊಳಿಸುವ ಪ್ರಯತ್ನದಲ್ಲಿ ಶ್ರೀಯುತ ಗೋಪಾಲಕೃಷ್ಣ ಹೆಗಡೆಯವರು ಸಫಲರಾಗಿದ್ದಾರೆ. ವಿರಳ ಲಭ್ಶವಿರುವ ಶೇಣಿ ರಾಮಾಯಣ ಮರು ಮುದ್ರಣದ ಅವಶ್ಯಕತೆ ಇವತ್ತು ನಮ್ಮ ಮುಂದಿದೆ.
- ಕಲಾ ಭಾಗ್ವತ್, ಮುಂಬೈ