ತಂದೆ ಮಕ್ಕಳ ಕನ್ನಡಮ್ಮನ ಸೇವೆ


ಹಾಸ್ಯ/ವಿಡಂಬನೆ ಬರಹ

ಯು(ಗ)ವ ಕವಿ ಗುಂಡಣ್ಣನ ದೇಹದಲ್ಲಿ ಕನ್ನಡ ಸಾಹಿತ್ಯದ ರಕ್ತ ಸಿಕ್ಕಾಪಟ್ಟೆ ಹರಿಯುತ್ತಿದೆ. ಗುಂಡಣ್ಣನ ಡಿ ಎನ್ ಏ ಟೆಸ್ಟ್ ಮಾಡಿಸದೇ ಇದನ್ನು ಖಚಿತವಾಗಿ ಹೇಳಬಹುದು. ಕಾರಣ ಕವಿ ಗುಂಡಣ್ಣನ ತೀರ್ಥರೂಪ (ತಂದೆ) ಹಿರಿಯ ಕವಿ ದಿವಂಗತ ರಂಗಣ್ಣ ಭತ್ತದ ಕಣಜ ಎಂದು ರಾಜ್ಯಾದ್ಯಂತ ಹೆಸರು ಮಾಡಿದ ಊರಲ್ಲಿ ಅಕ್ಕಿ ವ್ಯಾಪಾರದ ಜೊತೆ ಪುಸ್ತಕಗಳ ಪ್ರಕಾಶನ ಸ್ಥಾಪಿಸಿ ಕನ್ನಡ ತಾಯಿಯ ಅಪೂರ್ವ ಸೇವೆ ಗೈದ ಸಾಕ್ಷಿಯಿದೆ. ಹಿರಿಯ ಕವಿ ದಿ. ರಂಗಣ್ಣ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯನೂ ಆಗಿದ್ದ. ಆ ಕಾಲದಲ್ಲೇ ಹತ್ತಾರು ಸ್ವಂತ ಕಾವ್ಯಗಳನ್ನು (ಹೇಗೋ ಕಷ್ಟ ಪಟ್ಟು…) ಬರೆದು ಅಲ್ಲಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ (ಗಟ್ಟಿ ಧ್ವನಿಯಲ್ಲಿ) ವಾಚಿಸಿ ನೆರೆದ ಕಾವ್ಯಾಸಕ್ತರನ್ನು ಪಾವನಗೊಳಿಸಿದ (ಹೆದರಿಸಿದ!) ದಾಖಲೆಗಳು ಇನ್ನೂ ಹಚ್ಚ ಹಸಿರಾಗಿ ಉಳಿದುಕೊಂಡಿವೆ. ಹಿರಿಯ ಕವಿ ದಿ.ರಂಗಣ್ಣ ಅರೆ ಕಾಲಿಕ ಪುಸ್ತಕಪ್ರಕಾಶನದ (ಈಗಿನಂತೆ ಡಿಜಿಟಲ್ ಮಾಧ್ಯಮ ಇಲ್ಲದ ಕಾರಣ) ಮಾಲೀಕನಾದ ಕಾರಣಕ್ಕೆ ಎಲ್ಲ ಕವಿಗಳು, ಸಾಹಿತಿಗಳು, ಸಾಹಿತ್ಯ ಪ್ರೇಮಿಗಳು (ಭಯಭಕ್ತಿಯಿಂದ!) ಗೌರವ ಕೊಡುತ್ತಿದ್ದರು. ಅಲ್ಲದೇ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸದಸ್ಯರ ಜೊತೆ ದಿ. ರಂಗಣ್ಣನ ನಿರಂತರ ಸಂಪರ್ಕ ವರ್ಷಪೂರ್ತಿ (ವ್ಯವಹಾರ!) ವಿದ್ದುದರಿಂದ ಸಾಹಿತ್ಯ ವಲಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮರ್ಯಾದೆ ಸಿಗುತ್ತಿತ್ತು. ದಿ. ರಂಗಣ್ಣ ಅಕ್ಕಿ ವ್ಯಾಪಾರದ ಹಣ ವಸೂಲಿಗೆ ಗೋವಾ, ಮದರಾಸಿಗೆ ಹೋಗಿದ್ದರೂ ಬೆಂಗಳೂರಿಗೆ ಕನ್ನಡ ಪ್ರಕಾಶನ ಸಂಸ್ಥೆಗಳ ಕೆಲಸಕ್ಕೆ ಹೋಗಿದ್ದ ಎಂದು ಗೆಳೆಯರ ಮೂಲಕ ಸುದ್ದಿ ಹಬ್ಬಿಸುತ್ತಿದ್ದ. ಆಕಾರದಲ್ಲಿ ಕಿಲಾಡಿ ಕುಳ್ಳನಾಗಿದ್ದರೂ ವ್ಯಾಪಾರದಲ್ಲಿ ಮಾತ್ರ ಮಳ್ಳನೇನಲ್ಲ ರಂಗಣ್ಣ!

ವರ್ಷಕ್ಕೆ ಎರಡೋ ಮೂರೋ ಪುಸ್ತಕಗಳು ಪ್ರಕಟಿಸಿ (ಸಾಹಿತಿಗಳಿಗೆ ಗೌರವ ಧನ ಕೊಡದೆ!) ಕನ್ನಡ ತಾಯಿ ಭುವನೇಶ್ವರಿ ಸೇವೆ ಮಾಡುತ್ತಿರುವ ‘ ಅಕ್ಷರ ಸಂತ ‘ ಎಂದು ತನ್ನ ಗೆಳೆಯರ ದಿನಪತ್ರಿಕೆಯಲ್ಲಿ (ವರ್ಷಕ್ಕೆ ದೀಪಾವಳಿ ಸಂಚಿಕೆಯಂತೆ ಯಾವಾಗಲೋ ಒಮ್ಮೆ ಪ್ರಕಟ!) ಆ ಸುದ್ದಿ ಹೈಲೈಟ್ ಮಾಡಿಸಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ. ಕನ್ನಡ ರಾಜ್ಯೋತ್ಸವದ ಕುರಿತು ಪ್ರತೀ ವರ್ಷ ತಾಲೂಕು ಆಫೀಸಿನಿಂದ ನಡೆಯುವ ಪೂರ್ವ ಭಾವಿ ಸಭೆಯಲ್ಲಿ ಹಿರಿಯ ಕವಿ ಕಂ ಅಕ್ಕಿ ವ್ಯಾಪಾರಿ ದಿ. ರಂಗಣ್ಣ ಜೋರಾಗಿ ಟೇಬಲ್ಲು ಕುಟ್ಟಿ ಮಾತನಾಡದಿದ್ದರೆ ನೆರೆದ ಕನ್ನಡ ನಾಯಕರುಗಳಿಗೆ (ವಸೂಲಿ ವೀರರಿಗೆ!) ಮತ್ತು ವಿಶೇಷವಾಗಿ ಕನ್ನಡಾಭಿಮಾನಿಗಳಿಗೆ (ನವಂಬರ್ ತಿಂಗಳ ಕನ್ನಡ ಪ್ರೇಮಿಗಳಿಗೆ!) ಏನೋ ಒಂದು ಅಸಂತೃಪ್ತಿಯ ಭಾವನೆ.

ಕನ್ನಡ ಪುಸ್ತಕಗಳ ಪ್ರಕಾಶಕನೆನ್ನುವ ಖ್ಯಾತಿ ಜೊತೆ ಸಮಕಾಲೀನ ಕವಿಗಳಲ್ಲಿ ಹಿರಿಯ ಕವಿ (ಆಪಾದನೆ!) ಎನ್ನುವ ಹೆಸರು ಗಳಿಸಿದ್ದಕ್ಕೆ ಇಡೀ ಶಿಕ್ಷಣ ಇಲಾಖೆ ದಿ.ರಂಗಣ್ಣನ ಮಾತು ಕೇಳಿದ ಉದಾಹರಣೆಗಳೂ ಸಾಕಷ್ಟಿವೆ. ಹಿರಿಯ ಕವಿ ದಿ.ರಂಗಣ್ಣ ತನ್ನ ಅನೇಕ ಸ್ವಂತ ಕವನ ಸಂಗ್ರಹಗಳ ಜೊತೆ ತಾನು ಪ್ರಕಟಿಸಿದ ಇತರ ಸಾಹಿತಿಗಳ ಪುಸ್ತಕಗಳನ್ನು ಸಾಹಿತ್ಯ ಸಮ್ಮೇಳನಗಳಲ್ಲಿ, ಶಾಲೆಗಳಲ್ಲಿ, ವಾರದ ಸಂತೆಗಳಲ್ಲಿ, ಜಾತ್ರೆಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ತನ್ನ ಸರಕನ್ನು ಖಾಲಿ ಮಾಡುತ್ತಿದ್ದ ಚಾಣಾಕ್ಷ ಅಕ್ಕಿ ಕಂ ಪುಸ್ತಕ ವ್ಯಾಪಾರಿ.

ಇನ್ನು ಹಿರಿಯ ಕವಿ ರಂಗಣ್ಣ ಹಠಾತ್ ಮರಣ ಹೊಂದಿದ್ದು ಕನ್ನಡ ತಾಯಿಯು ಒಬ್ಬ ಹೆಮ್ಮೆಯ ಸುಪುತ್ರನನ್ನು ಕಳೆದುಕೊಂಡಿದ್ದಾಳೆ ಎನ್ನುವುದನ್ನು ತುಂಬಾ ಭಾವನಾತ್ಮಕವಾಗಿ ಭತ್ತದ ನಾಡಿನಲ್ಲಿ ಬಿತ್ತರಿಸಿದ್ದು ಬೇರೆ ಯಾರೂ ಅಲ್ಲ… ಸ್ವತಃ ಹಿರಿಯ ಕವಿ ರಂಗಣ್ಣನ ಮಗ ಯುವ ಕವಿ ಗುಂಡಣ್ಣ! ಆತನೂ ಅಪ್ಪನ ಕುಲ ಕಸುಬನ್ನೇ ಮುಂದುವರೆಸಿದ್ದು ಕನ್ನಡಿಗರ ಅ(ದುರ)ದೃಷ್ಟ ಅಂತಾನೆ ಹೇಳಬಹುದು. ಯಥಾ ರೀತಿ ಕುಟುಂಬದ ಅಕ್ಕಿಯ ವ್ಯಾಪಾರದ ಜೊತೆ ಪುಸ್ತಕದ ನಂಟು! ಜೊತೆಗೆ ಗುಂಡಣ್ಣನ ಸೋದರ ರಾಮಣ್ಣನಿಗೆ ಸ್ಥಳೀಯ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ. ಹೀಗಾಗಿ ಅಲ್ಲೂ ಸಾಹಿತ್ಯದ ಪರಿಮಳ ಹರಡಿತ್ತು… ಗುಂಡಣ್ಣ ಸ್ಪರ್ಧಾತ್ಮಕ ನವ ಯುಗದ ಡಿಜಿಟಲ್ ಕವಿ ಮತ್ತು ಉತ್ತಮ ಸಂಘಟಕ. ಸಮಯ ಬಿದ್ದರೆ ಅಕ್ಕಿ ವ್ಯಾಪಾರದ ಲಾಭವನ್ನು ಸಾಹಿತ್ಯ ಸೇವೆಗೆ ಮರಳಿಸುವುದು ನಿಕ್ಕಿ! ಡಿಜಿಟಲ್ ಪ್ಲಾಟ್ ಫಾರಂ ಬಳಸುವ ಗುಂಡಣ್ಣ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸುವ ಚತುರ. ಆಗಾಗ್ಗೆ ಕವಿ ಗೋಷ್ಟಿಗಳನ್ನು ಊರವರ ನೆರವಿನಿಂದ (ಚಂದಾ ಹಣದಿಂದ…) ಏರ್ಪಡಿಸುತ್ತಿದ್ದ. ತನ್ನ ಪ್ಯಾನಲ್ಲಿನಲ್ಲಿ ಹೊಗಳು ಭಟ್ಟರಿಗೆ ಪ್ರಾಶಸ್ತ್ಯ ನೀಡಿದ್ದ. ಹೀಗಾಗಿ ಒಂದೊಂದು ಕವನ (ಅಕ್ಷರಗಳನ್ನು ಜೋಡಿಸಿದ್ದೇ ತಡ!) ಫೇಸ್ ಬುಕ್ ನಲ್ಲಿ ಹಾಕಿದ ಕೂಡಲೇ ತನ್ನ ಶಿಷ್ಯ ಕೋಟಿಯಿಂದ ಹಳೆಯ ರಾಜಕಾರಣಿಗಳು ಆಗಿನ ಕಾಲಕ್ಕೆ ನಂಬಿಕೆಯ ಭಂಟರಿಂದ ಎಡಗೈ ಬಲಗೈಯಿಂದ ಮತ ಒತ್ತಿಸಿಕೊಳ್ಳುವ ರೀತಿಯಲ್ಲಿ ಯುವ ಕವಿ ಗುಂಡಣ್ಣ ಅವರಿವರಿಂದ ತನ್ನ ಕಾವ್ಯಕ್ಕೆ ಲೈಕ್ಸ್ (ಕೆಲವು ಸಲ ಬಲವಂತ ಮಾಡಿ…) ಒತ್ತಿಸಿಕೊಳ್ಳುತ್ತಿದ್ದ ಫೇಸ್ ಬುಕ್ಕಿನಲ್ಲಿ. ಈ ಎಲ್ಲ ಸದ್ಭಾವನಾ ಕಾರ್ಯಗಳಿಗೆ ಸೋದರ ರಾಮಣ್ಣ ಮತ್ತು ಆತನ ಶಿಕ್ಷಣ ಇಲಾಖೆಯ ಸಂಪೂರ್ಣ ಬೆಂಬಲವಿತ್ತು.

ಈಗಿನ ಕನ್ನಡ ಪತ್ರಿಕೆಗಳ ಸಂಪಾದಕರು ‘ ಪೂರ್ವಾಗ್ರಹ ‘ ಪೀಡಿತರು ಎಂದು ಚೆನ್ನಾಗಿ ಅರಿತಿದ್ದ ಗುಂಡಣ್ಣ ಅವುಗಳ ತಂಟೆಗೆ ಹೋಗದೆ ಫೇಸ್ ಬುಕ್, ಟ್ವಿಟ್ಟರ್, ವಾಟ್ಸಪ್ ಅಥವಾ ಇನ್ಸ್ತಾಗ್ರಾಂ ಇತರೆಗಳ ಮುಖಾಂತರ ತನ್ನ ಹೊಸ ಹೊಸ ಕವಿತೆಗಳನ್ನು ದಿನಪತ್ರಿಕೆಗಳ ದಿನಂಪ್ರತಿ ‘ ಸುಭಾಷಿತ ‘ ದಂತೆ ಹಂಚಿಕೊಂಡು ಸಂತೋಷ (ಓದುಗರನ್ನು ದುಃಖಕ್ಕೆ ತಳ್ಳುತ್ತಿದ್ದ!) ಪಡುತ್ತಿದ್ದ. ಆನ್ಲೈನ್ ಮುಖಾಂತರ ಹಲವು ಕಾವ್ಯ ಕಮ್ಮಟಗಳನ್ನು ಏರ್ಪಡಿಸಿ ಕ್ಷಣಾರ್ಧದಲ್ಲಿ (ಅಲ್ಲೇ ಡ್ರಾ…ಅಲ್ಲೇ ಬಹುಮಾನ ತತ್ವದಲ್ಲಿ!) ಬಹುಮಾನಗಳನ್ನು ಘೋಷಿಸಿ ಡಿಜಿಟಲ್ ಸರ್ಟಿಫಿಕೆಟುಗಳನ್ನು ಕವಿ ಪುಂಗವರಿಗೆ ರವಾನಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ತನ್ನ ತಂಡದಿಂದ. ಹೊಸದಾಗಿ ಕವಿತೆಗಳನ್ನು ಬರೆದು (ಹೊಸೆದು) ಧಿಡೀರ್ ಖ್ಯಾತಿ ಗಳಿಸಬೇಕೆಂಬ ‘ ಅರ್ಜೆಂಟ್ ‘ ಕವಿಗಳಿಂದ ಅವರು ಕಳಿಸುವ ಕವಿತೆಗಳಿಗೆ ಪ್ರವೇಶ ಶುಲ್ಕ ಎಂದು ಪಡೆಯದೆ ‘ ಕನ್ನಡಮ್ಮನ ಸೇವೆಯ ‘ ದೇಣಿಗೆ ಎಂದು ಕವಿ ಗುಂಡಣ್ಣ ಜಾಣತನದಿಂದ ವಸೂಲಿ ಮಾಡುತ್ತಿದ್ದ ನೂತನ ಕವಿಪುಂಗವರಿಂದ. ಅಲ್ಲದೇ ಆಗಾಗ್ಗೆ ತನ್ನ ಸ್ನೇಹಿತರ, ಬಂಧು ಬಾಂಧವರಿಂದ ಮತ್ತು ಹಿತೈಷಿಗಳ ಅಖಂಡ ಬೆಂಬಲದಿಂದ ಬೇರೆ ಬೇರೆ ಊರುಗಳಲ್ಲಿ ತನ್ನ ಸ್ವಂತ ಬಂಡವಾಳದ ಜೊತೆ (ಸಹ ಪ್ರಾಯೋಜಕರ ನೆರವಿನಿಂದ) ಸ್ನೇಹ ಬಳಗ ಟ್ರಸ್ಟ್… ಕರ್ನಾಟಕ ಸಾಹಿತ್ಯ ಬಳಗ…ಹಲಗಿಮಠ ಪ್ರತಿಷ್ಠಾನ…ಸದ್ಭಾವನಾ ಟ್ರಸ್ಟ್…ಸಿಡಿಲ ಮರಿ ಸಾಂಸ್ಕೃತಿಕ ವೇದಿಕೆ… ಕಲ್ಯಾಣ ಕರ್ನಾಟಕ ಸಂಘ… ಗಂಡು ಮೆಟ್ಟಿದ ನಾಡು…ಕವಿ ಕೋಗಿಲೆ ಸಂಗೀತ – ಸಾಹಿತ್ಯ ಕಲಾಭಿಮಾನಿಗಳು ಇತ್ಯಾದಿ ವೇದಿಕೆಗಳ ಅಡಿಯಲ್ಲಿ ಕವಿ ಸಾಹಿತಿಗಳಿಗೆ ಮತ್ತು ಹೇಗಾದರೂ ಸರಿ ಯಾವುದಾದರೂ ಒಂದು ಪ್ರಶಸ್ತಿ ಮುಡಿಗೆ ಏರಿಸಿಕೊಳ್ಳಬೇಕೆನ್ನುವ (ಹೊಡೆಯಬೇಕೆಂಬ!) ಹಪಾ ಹಪಿ ಇದ್ದ ಸಾಹಿತಿಗಳಿಗೆ ತಾಲೂಕು, ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನ ಕಡಲೇಪುರಿಯಂತೆ ಯಾವುದೋ ಒಂದು ಗೋಷ್ಠಿಯಲ್ಲಿ (ಒಂದೊಂದು ಬಿರುದು ಬಾವಲಿಗೆ ಇಂತಿಷ್ಟು ಎಂದು ನಿಗದಿ ಪಡಿಸಿದ ದರ ವಸೂಲಿ ಮಾಡಿ) ಹಂಚಿ ಕೃತಾರ್ಥನಾಗುತ್ತಿತ್ತು ಕವಿ ಗುಂಡಣ್ಣನ ತಂಡ.

ಕನ್ನಡ ಸಾಹಿತ್ಯದ ಸೇವೆಯನ್ನು ‘ ಹೀಗೂ ಸುಲಭವಾಗಿ ‘ ಮಾಡಬಹುದು ಎಂದು ಗೊತ್ತಾದ ಬಳಿಕ ಕೆಲವೇ ಕೆಲವು ವರ್ಷಗಳಲ್ಲಿ ಹತ್ತಾರು ಕವನ ಸಂಕಲನಗಳನ್ನು ಡಿಜಿಟಲ್ ಪ್ಲಾಟ್ ಫಾರಂ ಮೂಲಕ ಪ್ರಕಟಿಸಿ ಯಶಸ್ವಿಯಾದ ಬಳಿಕ ಕವಿ ಗುಂಡಣ್ಣ ತನ್ನಷ್ಟಕ್ಕೆ ತಾನೇ ‘ ಯು(ಗ) ಕವಿ ‘ ಎನ್ನುವ ಭ್ರಮೆಗೆ ನಿಧಾನವಾಗಿ ಸಿಲುಕತೊಡಗಿದ. ಅಷ್ಟಕ್ಕೇ ತೃಪ್ತಿ ಪಡದೆ ತನ್ನ ‘ ಅಮೋಘ ‘ ಕವನ ಸಂಕಲನಗಳನ್ನು ಸ್ವಂತ ಪ್ರೆಸ್ಸಿನಲ್ಲಿ ಪ್ರಿಂಟ್ ಹಾಕಿಸಿ ಬಿಡುಗಡೆಗೊಳಿಸಿ ಆಗಾಗ್ಗೆ ಕಾವ್ಯಾಸಕ್ತರ ಮನಸಿಗೆ ಲಗ್ಗೆ (ಬೆಂಕಿ!) ಹಾಕುತ್ತಿದ್ದ.

ತನ್ನ ಪ್ರಕಾಶಕ ಸಂಸ್ಥೆಯಲ್ಲಿ ಮುದ್ರಿಸಿದ ಕವನ ಸಂಕಲನಗಳನ್ನು ತನ್ನ ಮನೆ ಕಂ ಅಂಗಡಿ ಕಂ ಪುಸ್ತಕ ಮಳಿಗೆಯಲ್ಲಿ ಎಲ್ಲರಿಗೂ ಕಾಣುವಂತೆ ನೀಟಾಗಿ ಜೋಡಿಸಿ ಇಡುತ್ತಿದ್ದ. ಅವುಗಳ ಬಿಡುಗಡೆ ಸಮಾರಂಭವನ್ನು ಸಂದರ್ಭಕ್ಕೆ ಅನುಗುಣವಾಗಿ ‘ ಜಾತ್ಯತೀತ ಕವಿ ‘ ಗುಂಡಣ್ಣ ತಮ್ಮ ಜಾತಿಯ ಪೀಠಾಧಿಪತಿಗಳನ್ನು ಕರೆಸಿ ಸ್ಥಳೀಯ ಸಾಹಿತ್ಯ ಪರಿಷತ್ ಭವನದಲ್ಲಿ ನೆರೆದ ಕವಿ ಗುಂಡಣ್ಣನ ಮಿತ್ರರು, ಬಂಧುಗಳು, ಕಾವ್ಯಾಸಕ್ತರು (ಒತ್ತಾಯಕ್ಕೆ ಹಾಜರಾದವರೇ ಹೆಚ್ಚು!), ಮಾಧ್ಯಮದವರು, ಮರಿ – ಹಿರಿ ಪುಢಾರಿಗಳ ಸಮ್ಮುಖದಲ್ಲಿ ಭರ್ಜರಿ ಊಟ (ನಿಜ ಹೇಳಬೇಕೆಂದರೆ ಕವಿತೆಗಳಿಗಿಂತ ಇದಕ್ಕೇ ಹೆಚ್ಚು ಜನರನ್ನು ಸೆಳೆಯುವ ಶಕ್ತಿ ಇರುವುದು!) ಹಾಕಿಸಿ ನಂತರ ಕಾವ್ಯ ಸಂಕಲನಗಳನ್ನು ಬಿಡುಗಡೆ ಮಾಡುತ್ತಿದ್ದ. ಯಥಾ ರೀತಿ ‘ ಪೇಡ್ (ಹಣವನ್ನು ಸ್ವೀಕರಿಸಿದ…) ಅತಿಥಿಗಳು ‘ ಕವಿ ಗುಂಡಣ್ಣನನ್ನು ಪುಂಖಾನುಪುಂಖವಾಗಿ ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸದೆ ಅಟ್ಟದ ಎತ್ತರಕ್ಕೆ ಏರಿಸಿ ಕೃತಾರ್ಥರಾಗುತ್ತಿದ್ದರು.

ಹಾಜರಾದ ಕಾವ್ಯಾ(ನಿರಾ!) ಸಕ್ತರಲ್ಲಿ ಯಾರು ಸಂಪೂರ್ಣ ಹಣ ಕೊಟ್ಟು ಪ್ರಕಟಿತ ಕವನ ಸಂಕಲನ ಖರೀದಿಸುವರೋ ಅವರಿಗೆ ಮಾತ್ರ ಹಸ್ತಾಕ್ಷರ ಹಾಕಿ ಕೊಡುವದಾಗಿ ಸಭೆಯಲ್ಲಿ ಜನಪ್ರಿಯ ಕವಿಯೆಂಬ ಭ್ರಾಂತಿ ಹೆಚ್ಚಾಗಿ ಅಹಂಕಾರದ ಸ್ವರದಲ್ಲಿ ಸ್ವಯಂ ಘೋಷಿಸಿದ ಕವಿ ಗುಂಡಣ್ಣ. ಕವನ ಸಂಕಲನ ಖರೀದಿಸುವ ದುಸ್ಸಾಹಸಕ್ಕೆ ಯಾರೂ ಹೋಗಲಿಲ್ಲ… ಆದರೂ ಗೌರವ ಪ್ರತಿ ಕೊಡುವ ವ್ಯವಸ್ಥೆ ಮಾಡುವುದಿಲ್ಲ ಎಂದು ಕವಿಯ ಸೋದರ ರಾಮಣ್ಣ ಅದೇ ಸಭೆಯಲ್ಲಿ ಸಮಜಾಯಿಷಿ ನೀಡಿದ್ದು ಸಾಹಿತ್ಯ ಲೋಕದ ಅಪರೂಪದ ಘಟನೆಗಳಲ್ಲಿ ಒಂದು ಅಂತ ಹೇಳಬಹುದು. ಮಾಧ್ಯಮದವರಿಗೆ (ಗುಪ್ತ) ಕಾಣಿಕೆ ಕೊಟ್ಟಿದ್ದರಿಂದ ಸ್ಥಳೀಯ ಪತ್ರಿಕೆಗಳು ಹಾಗೂ ಲೋಕಲ್ ಟಿ ವಿ ಚಾನೆಲ್ ಗಳು ಸಮಾರಂಭದ ಕುರಿತು ದೊಡ್ಡದಾಗಿಯೇ ಸುದ್ದಿ ಪ್ರಕಟಿಸಿದವು. ಗುಂಡಣ್ಣನ ಅಮೋಘ ಕವನ ಸಂಕಲನಗಳನ್ನು ಮಾರಾಟ ಮಾಡಲು ಸ್ಥಳೀಯ ಪುಸ್ತಕ ಮಾರಾಟಗಾರರು ಧೈರ್ಯ ತೋರಲಿಲ್ಲ. ಗೆಳೆಯರು ಮತ್ತು ಬಂಧು ಹಿತೈಷಿಗಳು ಗುಂಡಣ್ಣನ ಕವನಗಳನ್ನು ಓದಿ ಜೀರ್ಣಿಸಿಕೊಳ್ಳುವ ‘ ಶಕ್ತಿ ‘ ತಮಗಿಲ್ಲ ಎಂದು ಕವಿ ಗುಂಡಣ್ಣನಿಂದ ದೂರಾನೇ ಉಳಿದರು…ಹೀಗಾಗಿ ತನ್ನ ಕುಲ ಕಸುಬುಗಳಲ್ಲಿ ಒಂದಾದ ಗ್ರಂಥಾಲಯಕ್ಕೆ ಪ್ರಕಾಶಕರ ಪರವಾಗಿ ಕವನ ಸಂಕಲನಗಳನ್ನು ಆಯ್ಕೆ ಮಾಡಲು ‘ ರಾಜಕೀಯ ‘
ಲಾಬಿಗೆ ಕೂಡಲೇ ಸಿದ್ಧನಾದ.

ವಿಧಾನ ಸೌಧದಲ್ಲಿ ನಡೆಯುವ ಒಂದು ಮಳೆಗಾಲ ಹಾಗೂ ಚಳಿಗಾಲದ ಅಧಿವೇಶನದ ಅವಧಿ ಅಂದರೆ ಸುಮಾರು ಆರು ತಿಂಗಳ ಬಳಿಕ ಕವಿ ಪುಂಗವ ಗುಂಡಣ್ಣನಿಗೆ ವಾಸ್ತವ ಸ್ಥಿತಿ ಮನದಟ್ಟಾಗಿ ಒಂದಲ್ಲ ಎರಡು ಮೆಟ್ಟಿಲು ಕೆಳಗಿಳಿದು ತನ್ನ ಅಪೂರ್ವ ಕೃತಿಗಳಿಗೆ ಕೂಡಲೇ ಶೇಕಡಾ ಇಪ್ಪತ್ತೈದರಷ್ಟು ರಿಯಾಯಿತಿ ನೀಡಲಾಗುವದು ಎಂದು ತನ್ನ ಪುಸ್ತಕ ಪ್ರಕಾಶನದ ಮುಂದೆ ದೊಡ್ಡ ಬ್ಯಾನರ್ ಕಟ್ಟಿದ. ದಿನಪತ್ರಿಕೆಗಳಲ್ಲಿ ಹ್ಯಾಂಡ್ ಬಿಲ್ ಹಾಕಿದ. ಅದರ ಫಲವಾಗಿ ಅಚ್ಚುಕಟ್ಟಾಗಿ ಜೋಡಿಸಿಟ್ಟ ಪುಸ್ತಕಗಳ ರಾಶಿ ಸ್ವಲ್ಪ ತೆವಳಿದ್ದು ಮಾತ್ರ ಸುಳ್ಳಲ್ಲ. ಆದರೂ ಖರೀದಿ ಮಾಡಿ ಓದುವ ಕಾವ್ಯ ಪ್ರೇಮಿ (ದ್ವೇಷಿ!)ಗಳು ಸಿಗಲಿಲ್ಲ. ಇದನ್ನು ಅರಿತ ಚಾಣಾಕ್ಷ ಕವಿ ಗುಂಡಣ್ಣ ಮತ್ತಷ್ಟು ಹೆಚ್ಚಿನ ಕಡಿತ ಅಂದರೆ ಶೇಕಡಾ ಐವತ್ತಕ್ಕೆ ಬಂದು ನಿಂತ. ತದನಂತರ ಶೇಕಡಾ ಎಪ್ಪತ್ತೈದಕ್ಕೆ ಸಹಾ ಸಿದ್ಧನಾದ ಪಾಪ… ಕವಿ ಗುಂಡಣ್ಣ!. ಜೊತೆಗೆ ಅಂಚೆ ವೆಚ್ಚವನ್ನು ಕೂಡ ತಾನೇ ಭರಿಸುವುದಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ. ಊಹೂ… ಜಪ್ಪಯ್ಯ ಎಂದರೂ ಹೆಚ್ಚು ಕರಗಲಿಲ್ಲ ಅಂದವಾಗಿ ಜೋಡಿಸಿಟ್ಟ ಕವಿ ಗುಂಡಣ್ಣನ ಕವನ ಸಂಗ್ರಹಗಳ ಪುಸ್ತಕ ರಾಶಿ…

ಕೊನೆಗೆ ಒಂದು ದಿವಿನಾದ ಐಡಿಯಾ ಹೊಳೆಯಿತು ಬಕ್ಕತಲೆಯ ಕವಿ ಗುಂಡಣ್ಣನಿಗೆ…ಮೊದಲೇ ತನ್ನ ಅಂಗಡಿ ಕಂ ಪ್ರಕಾಶನ ಕಂ ಮನೆ ಹಳೆಯದ್ದು…ಇಲಿ ಹೆಗ್ಗಣಗಳ ಕಾಟ ಬೇರೆ. ತಾನು ಹಾಗೆಯೇ ಬಿಟ್ಟರೆ ತನ್ನ ಎಲ್ಲಾ ಪುಸ್ತಕಗಳು ಓದುಗ ದೊರೆಗಳನ್ನು (ಶೋಷಿತರನ್ನು) ತಲುಪದೇ ಅಲ್ಲಿಯೇ ಜೀರ್ಣಾವಸ್ಥೆ ತಲುಪಿ ಒಂದು ಗತಿ ಕಾಣಬಹುದು. ಅದರ ಬದಲು ಪ್ಲಾಸ್ಟಿಕ್ ವಸ್ತುಗಳು, ಹಳೆಯ ಕಬ್ಬಿಣದ ತುಂಡುಗಳು ಮತ್ತು ಹಳೆಯ ದಿನಪತ್ರಿಕೆಗಳನ್ನು ಖರೀದಿ ಮಾಡುವ ಸಾಬಿಗಾದರೂ ತೂಕಕ್ಕೆ ಹಾಕಬೇಕು…ಆದರೆ ಅಂತಹ ದುಸ್ಥಿತಿ ಯಾವ ಕವಿಗೂ ಬರಬಾರದೆಂದು ಹೊಸ ಐಡಿಯಾ ಹುಡುಕಿದ. ಅದು ಏನೆಂದರೆ ವಾಟ್ಸಪ್, ಫೇಸ್ ಬುಕ್ ಇತ್ಯಾದಿ ಮಾಧ್ಯಮಗಳ ಮೂಲಕ ತಮ್ಮ ಮನೆಯ ವಿಳಾಸ ತನಗೆ ಕಳಿಸಿದರೆ ಅಂಚೆ ವೆಚ್ಚವನ್ನು ತಾನೇ ಭರಿಸಿ ತನ್ನ ಕವನ ಸಂಕಲನಗಳನ್ನು ಉಚಿತವಾಗಿ ಓದುಗ ದೊರೆಗಳ ಮನೆ ಮುಟ್ಟಿಸುವದಾಗಿ ಮನವಿ ಮಾಡಿದ.

ಒಂದು ಕಾಲದಲ್ಲಿ ನಮ್ಮ ಹೆಮ್ಮೆಯ ಸಾಹಿತಿಗಳು ಕನ್ನಡ ಪುಸ್ತಕಗಳ ಗಂಟುಗಳನ್ನು ತಮ್ಮ ಭುಜಗಳ ಮೇಲೆ ಹೊತ್ತುಕೊಂಡು ಊರೂರು ಸುತ್ತುತ್ತಾ ಮನೆ ಮನೆಗೆ ತಲುಪಿಸುತ್ತಿದ್ದರಂತೆ. ಈಗ ಜನಪ್ರಿಯ ಕವಿ ಗುಂಡಣ್ಣನ ಸರದಿ ಅಷ್ಟೇ… ನೀವು ಗುಂಡಣ್ಣನ ಮೊಬೈಲ್ ನಂಬರಿಗೆ ಮಿಸ್ಡ್ ಕಾಲ್ ಕೊಟ್ಟರೆ ಸಾಕು, ಆಗ ಆತನೇ ನಿಮ್ಮನ್ನು ಸಂಪರ್ಕಿಸಿ ನಿಮ್ಮ ವಿಳಾಸ ಪಡೆದು ಮನೆಗೆ ಅಂಚೆ ಮೂಲಕ ತನ್ನ ಕವನ ಸಂಕಲನಗಳನ್ನು ಪೂರ್ತಿ ಉಚಿತವಾಗಿ (ಬೈಬಲ್ ಸಾಹಿತ್ಯದಂತೆ!) ಕಳಿಸುವ ವ್ಯವಸ್ಥೆ ಮಾಡುವನು.

ನೀವು ಈಗ ತುರ್ತಾಗಿ ಮಾಡುವ ಕೆಲಸ ಇಷ್ಟೇ…ಜನಪ್ರಿಯ ಕವಿ ಗುಂಡಣ್ಣ ಅವರ ಮೊಬೈಲ್ ಸಂಖ್ಯೆ 9977553311 ಮೊದಲು ನೋಟ್ ಮಾಡಿಕೊಳ್ಳಿ. ಕೆಲವೇ ದಿನಗಳಲ್ಲಿ ಪುಸ್ತಕಗಳ ದಾಸ್ತಾನು ಮುಗಿಯುವ ಆತಂಕವಿರುವದರಿಂದ ಕೂಡಲೇ ಕವಿ ಮಹಾಶಯರಿಗೆ ಮಿಸ್ಡ್ ಕಾಲ್ ಕೊಡಿ…ತಡ ಮಾಡದೆ ಈ ಅಪೂರ್ವ ಸುವರ್ಣಾವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಿ. ರಾಜ್ಯಾದ್ಯಂತ ನವೆಂಬರ್ ತಿಂಗಳ ಕನ್ನಡ ಅಭಿಯಾನದಲ್ಲಿ (ಉಳಿದ ಹನ್ನೊಂದು ತಿಂಗಳು ಕನ್ನಡಿಗರ ಅಭಿಮಾನ ಯಥಾ ರೀತಿ ಶೂನ್ಯ!) ಸಕ್ರಿಯವಾಗಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕವಿ ಗುಂಡಣ್ಣನ ಕಳಕಳಿಯ ಮನವಿ. ಇನ್ನೇಕೆ ತಡ… ಈಗಲೇ ಕವಿ ಗುಂಡಣ್ಣನ ಮೊಬೈಲ್ ಫೋನಿಗೆ ಮಿಸ್ಡ್ ಕಾಲ್ ಕೊಟ್ಟು ಕವಿ ಗುಂಡಣ್ಣ ವಿರಚಿತ ಪುಸ್ತಕಗಳನ್ನು ತರಿಸಿಕೊಂಡು ನಿಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಿ…
ಜೈ ಕರ್ನಾಟಕ! ಜೈ ಜೈ ಕನ್ನಡಮ್ಮ!!
*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

11 thoughts on “ತಂದೆ ಮಕ್ಕಳ ಕನ್ನಡಮ್ಮನ ಸೇವೆ”

  1. JANARDHANRAO KULKARNI

    ತಂದೆ ಮಕ್ಕಳ ಕನ್ನಡಮ್ಮನ ಸೇವೆ, ವಿಡಂಬನೆ ಲೇಖನ, ರಾಜ್ಯೋತ್ಸವದ ಸಮಯದಲ್ಲಿ ಸಮಯೋಚಿತ. ಸಾಹಿತಿಗಳ ಕೃತಿಗಳ ಮಾರಾಟದ ವಾಸ್ತವ ಸ್ಥಿತಿಯನ್ನು ನೈಜವಾಗಿ ಸೊಗಸಾಗಿ ಚಿತ್ರಿಸಿದ್ದಾರೆ ರಾಘವೇಂದ್ರ ಮಂಗಳೂರು ಅವರು. ಅಭಿನಂದನೆಗಳು.

  2. ಧರ್ಮಾನಂದ ಶಿರ್ವ

    ‘ತಂದೆ ಮಕ್ಕಳ ಕನ್ನಡಮ್ಮನ ಸೇವೆ’ ವಿಶ್ವಧ್ವನಿ ಜಾಲತಾಣದಲ್ಲಿ ಪ್ರಕಟವಾದ ನಿಮ್ಮ ವಿಡಂಬನೆ ಪುಸ್ತಕ ಪ್ರಕಟಣೆಯ ಬವಣೆಯನ್ನು, ಅದರಲ್ಲೂ ಜೊಳ್ಳು ಸಾಹಿತ್ಯದ ಪ್ರಕಟಣೆಯನ್ನು ಅದರ ಖರ್ಚಾಗುವಿಕೆಯನ್ನು ಮೊನಚಾಗಿ ತಿವಿದಿದೆ.
    ಅಭಿನಂದನೆಗಳು 🌹

    1. ಮ.ಮೋ.ರಾವ್ ರಾಯಚೂರು

      ಈಗಿನ ಡಿಜಿಟಲ್ ಅಲ್ಲದೆ ಮೊಬೈಲ್ ಕಾಲದಲ್ಲಿ ಪುಸ್ತಕ ಓಡುವವರೇ ಕಡಿಮೆಯಾಗಿದ್ದಾರೆ. ಯುವಕವಿ, ಜನಪ್ರಿಯ ಕವಿ, ಕವಿಪುಂಗವ, ಅಮೋಘಕವಿ ವಂಶ ಪಾರಂಪರಿಕ ಕವಿ ಗುಂಡಣ್ಣ, ಸಾಹಿತ್ಯದ ಪುಸ್ತಕಗಳನ್ನು ಕೊಳ್ಳುವವರ ನರ ಸರಿಯಾಗೇ ಹಿಡಿದಿದ್ದಾರೆ. ಸಾಹಿತ್ಯ ರಚನೆಯಷ್ಟೇ ಆ ಗ್ರಂಥಗಳನ್ನು ಓದುಗರ ಮನೆಗೆ ಮುಟ್ಟಿಸುವುದೂ ಬಹುಮಖ್ಯ ಎಂದು ತಿಳಿದು ಮಹಾಪ್ರಾಯತ್ನ ಮಾಡಿದ್ದಾರೆ. ಈ ವಿಡಂಬನೆಯ ಮೂಲಕ ಬರಗಾಲ್ ಸಾಹಿತಿಯ ಬವಣೆ ಹೊರಬಿಟ್ಟಿದ್ದಾರೆ. ಈ ಲಹರಿ ಸುಲಲಿತವಾಗಿ ಹಾಗೆ ವೇಗವಾಗಿ ಓದಿಸಿಕೊಳ್ಳುತ್ತದೆ. ‘ಕನ್ನಡಮ್ಮನ ಸೇವೆಯ ದೇಣಿಗೆ’ ‘ಗೌರವ ಪ್ರತಿ ಕೊಡುವುದಿಲ್ಲ’ ‘ಮಿಸ್ಡ್ ಕಾಲ್ ಸೇವೆ’ ಮುಂ. ಕಥೆಯ ಸೌಂದರ್ಯವನ್ನು ಹೆಚ್ಚಿಸಿವೆ. ಅಭಿನಂದನೆಗಳು.

  3. ಶೇಖರಗೌಡ ವೀ ಸರನಾಡಗೌಡರ್

    “ತಂದೆ ಮಕ್ಕಳ ಕನ್ನಡಮ್ಮನ ಸೇವೆ” ನಡೆದಿರುವುದು ಇದೇ ರೀತಿ ಈಗ. ವಿಡಂಬನೆಗಳಲ್ಲಿ ಮಿಂಚುತ್ತಿರುವ ರಾಘವೇಂದ್ರ ಅವರ ಲೇಖನಿಯಲ್ಲಿ ವಾಸ್ತವದ ಚಿತ್ರಣ ಅತ್ಯದ್ಭುತವಾಗಿ ಮೂಡಿಬಂದಿದೆ.
    ಅಭಿನಂದನೆಗಳು ರಾಘವೇಂದ್ರ ಅವರಿಗೆ.

  4. MURALIDAHR JOSHI , GANGAVATHI

    ನಿಮ್ಮ ಗುಂಡಣ್ಣನ ಕಲ್ಪನಾ ವಿಲಾಸ ಅದ್ಭುತ. ವಿಡಂಬನೆ ಮೂಲಕ ಜೊಳ್ಳು ಕವಿತೆಗಳನ್ನು ಬರೆಯುವ ಇಂದಿನಕಾಲದಲ್ಲಿ ದುಡ್ಡಿದ್ದವರು ಪ್ಲೆಕ್ಸ್ ಮತ್ತಿತರ ಪ್ರಚಾರ ಹುಚ್ಚಿನಿಂದ ಇಲ್ಲ ಲೈಬ್ರರಿ ತೂಕಕ್ಕೆ ಹಾಕುವ ಇಂದಿನ ದಿನಮಾನಗಳಲ್ಲಿ ನಾವು ಬರೆದ ಸಾಹಿತ್ಯ ನಮ್ಮ ಊರಿನವರಿಗೆ ಗೊತ್ತೇ ಇರುವುದಿಲ್ಲ. ಹೆಚ್ಚು ಓದಿನಿಂದ ಗಟ್ಟಿ ಸಾಹಿತ್ಯ ಅಗತ್ಯತೆ ಇದೆ ಎಂದು ಗುಂಡಣ್ಣ ವಿಡಂಬನೆ ಇಂದಿನ ಕಾಲದಲ್ಲಿ ಪ್ರಸ್ತುತತೆಯನ್ನು ಪಡೆದುಕೊಂಡಿದೆ. ನಿಮ್ಮ ಬರಹ ರಾಜ್ಯಾದಾದ್ಯಂತ ಹೊಸದೊಂದನ್ನು ಸೃಷ್ಠಿಸುವತ್ತ ಸಾಗಲಿ.

    ಮುರಳಿಧರ ಜೋಷಿ
    ಗಂಗಾವತಿ

  5. ಹಾಸ್ಯ ಜಬರ್ದಸ್ತ್ ಆಗಿದೆ ಸರ್.ವ್ಯಾಪಾರಿ ತಂದೆ ಮಗನ ಸಾಹಿತ್ಯ ರಚನೆ ವಿಡಂಬನೆ ಸೂಪರ್ 👍🏻🙏🏻

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter