ನಾನು ಹಿಂದೂ ಆದರೆ ಹಿಂದು
ಎಂದು ಊರಿಡಿ ತಿರುಗಿ
ಏನೂ ಪ್ರಯೋಜನ ಇಲ್ಲ ಎಂದು
ಹಚ್ಚಿದ ಇಸ್ಲಾಮು ಮುಲಾಮು
ಅದೂ ಸುಖವಿಲ್ಲ ಎನಿಸಿ
ಅರ್ಜಿ ಹಾಕಿದ ಹುಡುಕಿ ಇಗರ್ಜಿ
ಅಲ್ಲೂ ಚಲಾವಣೆಯಾಗದೆ
ತಲೆಗೊಂದು ಬಟ್ಟೆ ಕಟ್ಟಿ
ಸಿಖ್ಖರೊಡನೆ ನೋಡಲು ಸಿಕ್ಕ
ಜೈನರಿಗೆ ಜೈ ಎಂದ
ಬೌದ್ಧ ಹೊದಿಕೆ ಹೊದ್ದ
ಊಹೂಂ..
ಮರಳಿ ಬಂದ
ಎಲ್ಲೆಲ್ಲೂ ಸರಿಕಾಣದೆ…
ಹಚ್ಚಿ ಶ್ರೀಗಂಧ ತಿಲಕವಿಟ್ಟ
ಘೋಷಿಸಿದ ಪುನಃ
ಹಿಂದೂ ನಾನು
ಕೆರಳಿ ತೆರಳಿದ್ದನ್ನು ಮರೆಗೆ ತಳ್ಳಿ
ಮರಳಿ ತವರುಮನೆಗೆ…
ತಲೆಮಾರುಗಳ
ಇತಿಹಾಸ ನಮ್ಮದು
ನಾನು ಎಂದೆಂದಿಗೂ ಹಿಂದು
ಹಿಂದೂ ಹಿಂದೂ ಹಿಂದೂ
ಶ್ರೀಮದ್ ರಮಾರಮಣ
ಗೋವಿಂದಾ ಅಂದ..
“ಗೋವಿಂದ …”
ಅವನೇ ಬೊಬ್ಬೆಯಿಟ್ಟ
ಯಾರೂ ಜತೆಗೂಡಲಿಲ್ಲ
ನೋಡಲಿಲ್ಲ ಅವನೆಡೆಗೆ
ಈಗ ಆಗಾಗ ಖಾದಿ
ಆಗಾಗ ಕಾವಿ
ಗುಂಪಿನಲ್ಲಿ ಗೋವಿಂದ..
* ಗೋಪೀನಾಥ ರಾವ್