“ಕನ್ನಡ ರಾಜ್ಯೋತ್ಸವ ಶುಭ ಹಾರೈಕೆಗಳು.”
ಕನ್ನಡ ನಾಡಿನಲ್ಲಿ ವಾಸವಾಗಿರುವ ನಾವಾಡುವ ನುಡಿ ಕನ್ನಡವೇ ಆದರೂ ಪ್ರತಿ ತಾಲೂಕಿನವರೂ ಆಡುವ ಮಾತಿನ ಧಾಟಿಯಲ್ಲಿ, ಪದ ಪ್ರಯೋಗದಲ್ಲಿ ಭಿನ್ನತೆ ಇದೆ. ಚೆಂದವಿದೆ. ಅಂತಹ ಕೆಲವು ಆಡುಗನ್ನಡವನ್ನು ಪುಟ್ಟ ಕಥೆಗಳಲ್ಲಿ ಹಿಡಿಯುವ ಯತ್ನ.
ಹೊಂದಾಣಿಕೆ
‘ಎಲ್ಲರ ಮನೆಲೂ ಗೋಪೂಜೆ ಮಾಡ್ತ ಇವತ್ತು. ಯನಗೆ ಕೈ ನೋವು ನಿಂಗಕ್ಕಿಗೆ ಸೊಂಟ ನೋವು ಹೇಳದು ಇದ್ದ ದನ ಕರಗಳನ್ನೆಲ್ಲ ಮಾರಿಯ್ಯಾಗೋತು. ಈಗ ಅಡುಗೆ ಮಾಡದು ನೈವೇದ್ಯ ಮಾಡಿಕ್ಯಂಡು ತಿಂಬದು ಅಷ್ಟೇ ಆಗೋಜು’ ಸಪ್ಪೆ ದ್ವನಿಯಲ್ಲಿ ಗಂಡನಿಗೆ ಹೇಳಿದಳು ಸುಮಾ.
‘ಹೌದೇ ಆಳಗ ಆದ್ರೂ ಮೊದಲಿನ ಹಾಂಗೆ ಬರ್ತಾ ಇದ್ದಿದ್ರೆ, ಅಥ್ವಾ ಮಕ್ಕಳಾದ್ರೂ ನಮ್ಮ ಜೊತಿಗಿದ್ದಿದ್ರೆ ಧೈರ್ಯ ಮಾಡಲಾಗಿತ್ತು’… ಅಸಹಾಯಕತೆಯಿಂದ ನುಡಿದ ಗಂಡನನ್ನು ನೋಡಿ ಹನಿಗೂಡಿದ ಕಣ್ಣೀರೊರೆಸಿಕೊಂಡಳು.
‘ದೇವರು ನಡೆಸಿದ್ಹಂಗೆ ಆಗ್ಲಿ ತಗಳಿ’.. ನಡೀರಿ ಮಾವಿನೆಲೆ ತೋರಣಾ ಕಟ್ಟನ… ಎಂದಳು ಸುಧಾ.
ಕರುಣೆ
‘ಅಮ್ಮೋ ನಗೊಂದ್ಹತ್ತು ಹಣ್ಣಡಿಕೆ ಕೊಡ್ರಾ’ ಸುತ್ತಿಕೊಂಡ ಟವೆಲ್ಲನ್ನು ಬಿಗಿಯಾಗಿಸಿಕೊಳ್ಳುತ್ತಾ ಹೇಳಿದ ಯಂಕ.
‘ಅಡಕೆ ಕೊಡ್ವಾ , ನಿಮ್ಮನಿಲಿ ಕಾಲ್ನೆಡೆ ಇಲ್ವಲಾ. ಕವಳಾ ಹಾಕೂಕನಾ ಅಡಕೆ?’ ಕೇಳಿದಳು ಸುಮಿತ್ರೆ.
‘ಇಲ್ರಾ ಅಮ್ಮಾ ಮೊನ್ನಿ ಕುಮಟಿಗೆ ಹೋಗಿದ್ದೆ. ಗಂಡ ಕರಾನ ಕಟ್ಕರು ತಕಂಡು ಹೋಗುದ ನೋಡ್ದೆ. ಪಾಪ ಕಂಡ್ತು. ತಂದು ಸಾಕ್ದ್ರೆ ನಮ್ಮನಿ ಹಿತ್ತಲಕ್ಕೆ ಬೇಕಾದಷ್ಟು ಸಗಣಿ ಹಾಕತದೆ. ನಾ ಕೆಲಸಕ್ಕೆ ಹ್ವಾದಾಗ ನಮ್ಮವ್ವನ ಜೊತಿಗಿರೂಕೂ ಒಂದ ಜೀವ ಇರ್ತದೆ ಕಂಡತು. ಐನೂರು ರೂಪಾಯಿ ಕೊಟ್ಟ ತಂದೆನ್ರಾ’ ….ಎಂದ ಯಂಕ.
ಸುಮಿತ್ರೆ ಅಡಿಕೆಯ ಜೊತೆಗಷ್ಟು ಬಾಳೆಹಣ್ಣನ್ನೂ ಒಳಗಿನಿಂದ ತಂದು ‘ಯಂಕಾ ತಕಳಾ, ಒಳ್ಳೆ ಕೆಲ್ಸಾ ಮಾಡಿದೆ.. ನಿಮ್ಮನಿ ಕರಕ್ಕೆ ನಮ್ಮನಿ ಹಣ್ಣೂ ತಿನ್ಸು ಆಯ್ತಾ. ಇದ್ನೂ ತಕಂಡುಹೋಗು.. ಎಂದಳು.
ಮೌನ
ಕೇತನಳ್ಳಿಯಲ್ಲಿದ್ದ ಜಮೀನು, ಮನೆ ಮಾರಿ ನಗರದಲ್ಲಿ ಹೆಚ್ಚು ಗಣ ಗಳಿಸುವಾಸೆಯಲ್ಲಿ ಮೈಸೂರಿನಲ್ಲಿ ಬಾಡಿಗೆ ಮನೆ ಹಿಡಿದ ಲಕ್ಷ್ಮಿ ಮರುದಿನ ಬೆಳಿಗ್ಗೆ ಪಾಕೀಟು ಕತ್ತರಿಸಿ ಹಾಲನ್ನು ಪಾತ್ರೆಗೆ ಹಾಕುತ್ತಿದ್ದಳು. ಎರಡನೆ ತರಗತಿ ಓದುತ್ತಿದ್ದ ಮುತ್ತು ಕೇಳಿದಳು. ‘ಇದು ಯಾನಾ’..
‘ಆಲು ಕನವ್ವಾ, ನಿಂಗೇಂತ ತಂದಿವ್ನಿ’
‘ ನಾ ಕುಡಿಯಾಕಿಲ್ಲವ್ವಾ. ಪ್ಲಾಸ್ಟಿಕ್ಕು ಜೀಂವಕೆ ಒಳ್ಳೆದಲ್ಲಂತ ಇಸ್ಕೂಲದಾಗ ಹೇಳವ್ರೆ…ಊರಾಗ ಕೊಟ್ಟಂಗೆ ಹಸೀನ ಆಲು ಕೊಡವ್ವೋ…
‘ಹಟ್ಟಿ ಎಲ್ಲೈತವಾ ಇಲ್ಲಿ. ಇದೊಂದ ಕಿತಾ ಕುಡೀವ್ವಾ’
ನಾ ಒಲ್ಲೆ… ನಾ ಬೇಕಾರೆ ಹಿಟ್ಟೂಂಡೀನೂ. ಈ ಆಲೂ ಬ್ಯಾಡಾ… ಮುತ್ತು ಚೀರಿದಳು.
ತೃಪ್ತಿ
ಧಾರವಾಡದಂಚಿಗೆ ಹೊಂದಿಕೊಂಡ ಹಳ್ಳಿಯೊಂದರಲ್ಲಿ ದೊಡ್ಡ ಕೊಟ್ಟಿಗೆಯೊಂದರೆದುರು ಕಲ್ಲಪ್ಪ ಹಾಲನ್ನು ಕ್ಯಾನಿಗೆ ತುಂಬುತ್ತಿದ್ದ. ಬೈಕಿನಲ್ಲಿ ಭರ್ರನೇ ಬಂದ ಮಾದೇವಪ್ಪ ಕಲ್ಲಪ್ಪನ ಪಕ್ಕದಲ್ಲಿಯೇ ನಿಂತು ‘ಏ ಕಲ್ಲಪ್ಪಣ್ಣ ಧಾಡದಾಗಿನ ಮನೋಹರ ಮಂದಿರ ಹೊಟೆಲ್ಲದಾಗ ಚುಲೋ ರೇಟಿನ್ಯಾಗ ಪನೀರ್ ತುಗೋತಾರಂತ. ನಿನಗ ಪನೀರ್ ಹ್ಯಾಂಗ ಮಾಡಬೇಕನ್ನೋದು ಗೊತ್ತಿಲ್ಲಂದ್ರ ಅವ್ರ ಕಲಿಸಿಕೊಡತಾರ. ..
‘ಏ ಬ್ಯಾಡ ಬಿಡಪ್ಪಾ ಚೊಲೋ ಹಾಲಿನ್ಯಾಗ ಹುಳಿ ಹಿಂಡಿ ಒಡಿಯಾಕ ನನಗ ಮನ್ಸು ಬರಂಗಿಲ್ಲಪಾ. ಹದ್ನೈದು ವರಸಾತು ನಾ ಮನಿ ಮನೀ ಹಾಲು ಹಾಕಾಕತ್ತಿ. ಅವ್ರೆಲ್ಲಾ ನನ್ನ ಭಾಳಾ ಹಚ್ಚಗೊಂಡಾರ. ಕಷ್ಟಾ ಸುಖಕ್ಕ ಒದಗತಾರ. ನನಗ ಬದುಕಾಕ ಸಾಕಪ್ಪಾ ಅವ್ರು ಕೊಡೋ ರೊಕ್ಕಾ. ಏಟು ರೊಕ್ಕಿದ್ರೇನು ಸತ್ತ ಮ್ಯಾಲ ಹೊತಗೊಂಡ ಹೋಗಾಕಾಕ್ಕೇತೇನು?ನನಗ ನಾಕ ಮಂದಿ ವಿಸ್ವಾಸ ಬೇಕೇನಪಾ ಅದs ದೋಡ್ಡ ಆಸ್ತಿ ನನಗ…..
ಬಿಡುವು
ಎಂತದು ಮಾರಾಯ ಒಂದೇ ಒಂದು ದಿನ ಯಾರ ಮನೆಗೂ ಬರಲಿಕ್ಕೆ ಪುರುಸೊತ್ತಾಗುವುದಿಲ್ಲವೋ ನಿನಗೆ’ ಗೆಳೆಯನನ್ನು ಗದರುತ್ತಿದ್ದ .ಶಿವರಾಮ.
‘ನೀನೂ ನನ್ನ ಹಾಗೆ ಕೊಟ್ಟಿಗೆಯಲ್ಲೊಂದು ಹಸುವನ್ನು ಕಟ್ಟಿ ನೋಡು ಆಮೇಲೆ ನನ್ನ ಬಳಿ ನ್ಯಾಯ ಮಾಡು ಆಯಿತಾ? ಪ್ರತ್ಯುತ್ತರ ನೀಡಿದ ನಿತಿನ್.
ಅಲ್ಲವೋ ನೀನು ದನವನ್ನು ಕೊಟ್ಟಿಗೆಯಲ್ಲಿ ಕಟ್ಟಿಕೊಂಡದ್ದೋ ಕೊರಳಿಗೆ ಕಟ್ಟಿಕೊಂಡದ್ದೋ ?
- ಮಾಲತಿ ಹೆಗಡೆ
4 thoughts on “ಆಡುಗನ್ನಡದಲ್ಲಿ ಪುಟ್ಟ ಕಥೆಗಳು”
ತುಂಬಾ ಸ್ವಾರಸ್ಯವಾಗಿದೆ
ಎಲ್ಲರ ಭಾಷೆ ಕನ್ನಡವೇ ಆದ್ರೂ ಮನದಾಳದಿಂದ ಬರುವ ಮಾತು ಮತ್ತು ಅದರ ಶೈಲಿ ಅಪ್ಯಾಯಮನ. ಕನ್ನಡದ ಚಂದ ತಿಳಿಸುತ್ತಾ, ಮಾಲತಿ ಹೆಗಡೆಯವರು ‘ಆಡುಗನ್ನಡದಲ್ಲಿ ಪುಟ್ಟ ಕಥೆಗಳು’ (ಕಣಕಥೆಗಳು) ಮೂಲಕ ‘ಸ್ನೇಹಿತರ ಒಡನಾಟ’, ‘ಪ್ರಾಮಾಣಿಕ ವಿಶ್ವಾಸ ಮತ್ತು ಬದುಕು’, ‘ಪ್ಲಾಸ್ಟಿಕ್ ಮತ್ತು ಆರೋಗ್ಯ’, ‘ಜೀವಕ್ಕೊಂದು ಜೊತೆ’, ‘ಬಿಡಿ ಬಿಡಿಯಾದ ಕುಟುಂಬ, ಇವುಗಳಬಗ್ಗೆ ಮಾರ್ಮಿಕವಾಗಿ ಹಾಗೇ ಸ್ಪಷ್ಟವಾಗಿ ಮನಮುಟ್ಟಿಸಿದ್ದಾರೆ. ಅಭಿನಂದನೆಗಳು.
ಎಷ್ಟು ಚೆನ್ನಾಗಿ ಕಥೆಗಳನ್ನು ಗ್ರಹಿಸಿದ್ದೀರಿ ಸರ್. ನಿಮ್ಮ ಪ್ರತಿಕ್ರಿಯೆ ಓದಿ ಸಂತೋಷವಾಯ್ತು.
ಧನ್ಯವಾದಗಳು ಸರ್