ನಂಬಿಕೆಯ ನಂದಾದೀಪ

ನಾನು ಮೊದಲಸಲ ದೀಪ ಹಚ್ಚಿದ ದಿನ ನನ್ನ ನೆನಪಿನಲ್ಲಿ ಉಳಿದಿಲ್ಲ. ಆದರೆ ಪ್ರತಿಸಲ ದೀಪ ಹಚ್ಚಿದಾಗಲೂ ಅದೊಂದು ಮೊದಲ ಪ್ರೇಮದ ಅನುಭೂತಿಯಂತೆ ಮುದ ನೀಡುತ್ತದೆ. ನಿನಗೆ ಸೃಷ್ಟಿಯಲ್ಲಿ ಅತೀ ಹೆಚ್ಚು ಇಷ್ಟವಾಗುವ ಸಂಗತಿ ಯಾವುದು ಎಂದು ಯಾರಾದರೂ ನನ್ನನ್ನು ಕೇಳಿದರೆ, ದೀಪ ಹಚ್ಚುವುದು ಎಂದು ಪ್ರಾಮಾಣಿಕವಾಗಿ ಉತ್ತರಿಸುತ್ತೇನೆ. ದೀಪದ ಅಥವಾ ದೀಪ ಹಚ್ಚುವುದರ ಧಾರ್ಮಿಕ-ಆಧ್ಯಾತ್ಮಿಕ ಹಿನ್ನೆಲೆಗಳೇನೇ ಇರಲಿ, ನನ್ನ ಪಾಲಿಗೆ ಅದೊಂದು ಸಕಾರಾತ್ಮಕ ಸಂಬಂಧ; ಸ್ವಾರ್ಥವಿಲ್ಲದ, ಕಪಟವಿಲ್ಲದ, ಸಮಚಿತ್ತದ ಅನುಬಂಧ! ಜೀವಮಾನದಲ್ಲಿಯೇ ಒಮ್ಮೆಯೂ ನೋಯಿಸದ, ಉಸಿರುಗಟ್ಟಿಸದ, ಏಕತಾನತೆಗೆ ತಳ್ಳದ ಏಕೈಕ ಒಲುಮೆಯೆಂದರೆ ಅದು ದೀಪ.

ಅಮ್ಮನ ಮನೆಯಲ್ಲೊಂದು ನಂದಾದೀಪವಿತ್ತು; ದೇವರಪೀಠದ ಎಡಗಡೆಯಲ್ಲಿ ಆಕಾಶದಿಂದೆಲ್ಲೋ ಇಳಿದುಬಂದಂತೆ ತೂಗುತ್ತಿತ್ತು. ಅಮ್ಮ ಪ್ರತಿದಿನ ಬೆಳಗ್ಗೆ ಎದ್ದು ಮಾಡುತ್ತಿದ್ದ ಮೊದಲ ಕೆಲಸವೆಂದರೆ ದೀಪ ಹಚ್ಚುವುದು. ಅವಳು ಎರಡೂ ಕೈಗಳಿಂದ ಅದನ್ನು ಹಿಡಿದುಕೊಂಡು ಬತ್ತಿಯನ್ನು ಸರಿಮಾಡಿ ದೀಪ ಹಚ್ಚಿದಾಗಲೆಲ್ಲ ಸ್ವಲ್ಪ ಹೊತ್ತು ನಿಧಾನವಾಗಿ ತೂಗಾಡಿ ಶಾಂತವಾಗುತ್ತಿತ್ತು. ದೀಪದ ಮಂದವಾದ ಬೆಳಕು ಅಮ್ಮನ ಮುಖದ ಮೇಲೆ ಹರಡಿ, ತೂಗಾಡುವ ಅವಳ ಉದ್ದಜಡೆಯನ್ನು ಸ್ಪರ್ಶಿಸುವಾಗ ಅವಳು ದೇವತೆಯಂತೆ ಕಂಗೊಳಿಸುತ್ತಿದ್ದಳು. ದೇವರು ದೀಪದ ಬೆಳಕಿಗಾಗಿ ಕಾಯುತ್ತಿರುವಂತೆ, ದೀಪ ಅಮ್ಮನ ಸ್ಪರ್ಶಕ್ಕಾಗಿ ಕಾಯುತ್ತಿರುವಂತೆ, ಅದನ್ನು ಹಚ್ಚುವ ಅಮ್ಮ ನಮ್ಮೆಲ್ಲರ ಬದುಕುಗಳನ್ನು ಕಾಯುತ್ತಿರುವಂತೆ ಆ ಕ್ಷಣಕ್ಕೆ ಭಾಸವಾಗುತ್ತಿತ್ತು. ಸುಂದರವಾದ ಬೆಳಗುಗಳ ಆ ದೀಪದ ಬೆಳಕೇ ಈಗಲೂ ಬದುಕನ್ನು ಉದ್ದೀಪನಗೊಳಿಸುತ್ತಿರುವ ಭಾವ ಜೀವಂತವಾಗಿದೆ; ಜೀವಂತಿಕೆಯ ಸರಳ ಸೂತ್ರವೊಂದನ್ನು ದೀಪದ ಬೆಳಕು ಬಾಲ್ಯದಲ್ಲೇ ಕಲಿಸಿಕೊಟ್ಟಿದೆ ಎಂದು ಮತ್ತೆಮತ್ತೆ ಅನ್ನಿಸುತ್ತಲೇ ಇರುತ್ತದೆ.

ಮಧ್ಯಾಹ್ನ ಅಪ್ಪ ಹಚ್ಚುತ್ತಿದ್ದ ತುಪ್ಪದದೀಪಕ್ಕೊಂದು ವಿಶಿಷ್ಟವಾದ ಸುವಾಸನೆಯಿರುತ್ತಿತ್ತು. ಹಿತ್ತಾಳೆಯ ಪುಟ್ಟ ದೀಪವೊಂದರಲ್ಲಿ ತಿಳಿಹಳದಿ ಬಣ್ಣದ ತುಪ್ಪದ ಮಧ್ಯೆ ಮಲ್ಲಿಗೆ ಹೂವಿನಂಥ ಬತ್ತಿ ಪ್ರಶಾಂತವಾಗಿ ಉರಿಯುತ್ತ ದೇವರ ಬಲಭಾಗವನ್ನು ತನ್ನದಾಗಿಸಿಕೊಳ್ಳುತ್ತಿತ್ತು. ಪೀಠದ ಎತ್ತರಕ್ಕೆ ಸರಿಸಮವಾಗಿ ತುಪ್ಪದದೀಪಕ್ಕೆಂದೇ ಮೀಸಲಾದ ಪುಟ್ಟ ಜಾಗವೊಂದಿತ್ತು. ಎಲ್ಲ ಗತ್ತು-ಗೈರತ್ತುಗಳೊಂದಿಗೆ ತನ್ನ ಜಾಗದಲ್ಲಿ ಆಸೀನವಾಗುತ್ತಿದ್ದ ಆ ಪುಟ್ಟ ದೀಪದ ಬೆಳಕಿಗೆ ಆತ್ಮವನ್ನೇ ಬೆಳಗುವ ಶಕ್ತಿಯಿತ್ತು. ದೇವರು-ದೈವತ್ವಗಳ ಕುರಿತಾಗಿ ಜಿಜ್ಞಾಸೆಯೊಂದು ಹುಟ್ಟಿಕೊಂಡಿದ್ದ ವಯಸ್ಸಿನಲ್ಲೂ ತುಪ್ಪದದೀಪದ ಕಾಂತಿ ಕಳೆಗುಂದಿದ್ದಿಲ್ಲ; ಅದರ ಪರಿಮಳದೆಡೆಗಿನ ಪ್ರೀತಿ ಕಡಿಮೆಯಾಗಿದ್ದಿಲ್ಲ. ಅಪ್ಪ ಹಚ್ಚಿದ ದೀಪದ ಪರಿಮಳವೇ ಒಳಗೆಳೆದುಕೊಳ್ಳುವ ಪ್ರತಿ ಉಸಿರಿನಲ್ಲೂ ಬೆರೆತಿರುವಂಥ ಭಾವವೊಂದು ಈಗಲೂ ಬದುಕಿಗೆ ಉಲ್ಲಾಸವನ್ನು ತುಂಬುತ್ತಿರುವುದು ಸುಳ್ಳಲ್ಲ.

ಇಳಿಸಂಜೆಯ ಹೊತ್ತಿಗೆ ಸರಿಯಾಗಿ ಮನೆಯ ಪ್ರಧಾನ ಬಾಗಿಲಿನ ಬಲಬದಿಗೆ ದೀಪ ಹಚ್ಚಿಟ್ಟ ಅಮ್ಮ ಮಹಾಲಕ್ಷ್ಮ್ಯಷ್ಟಕ ಸ್ತೋತ್ರ ಹೇಳುತ್ತ ನಮಸ್ಕಾರ ಮಾಡುತ್ತಿದ್ದಳು. ದೀಪ ಹಚ್ಚಿದ ನಂತರ ಮನೆಯ ಹೊರಬಾಗಿಲನ್ನು ಮುಚ್ಚುವ ಸಂಪ್ರದಾಯವಿತ್ತು. ಸಂಜೆ ದೀಪ ಹಚ್ಚಿದ ತಕ್ಷಣ ಅದೃಷ್ಟ ದೇವತೆ ಲಕ್ಷ್ಮಿ ಮನೆಯೊಳಗೆ ಬರುತ್ತಾಳೆ; ಅವಳು ಮನೆಯೊಳಗೇ ಉಳಿದುಕೊಳ್ಳಲಿ ಎನ್ನುವ ಕಾರಣಕ್ಕೆ ಹೊರಗಿನ ಬಾಗಿಲನ್ನು ಹಾಕಿಬಿಡಬೇಕು ಎನ್ನುವ ಅಮ್ಮನ ಮಾತನ್ನು ನಮ್ಮ ಮುಗ್ಧಮನಸ್ಸು ಒಪ್ಪಿಕೊಂಡು, ನಾವೆಲ್ಲರೂ ಆ ಸಂಪ್ರದಾಯವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದೆವು. ನಾನು ಸ್ವಲ್ಪ ದೊಡ್ಡವಳಾದ ಮೇಲೆ, “ನಮ್ಮ ಮನೆಯ ಚಳಿ ತಾಳಲಾರದೇ ಒಳಗೆ ಬಂದ ಲಕ್ಷ್ಮಿ ಪ್ರತಿದಿನವೂ ಹಿತ್ತಿಲಿನ ಬಾಗಿಲಿನಿಂದ ಹೊರಗೆ ಹೋಗಿಬಿಡುತ್ತಾಳೆ, ನಿನಗದು ಗೊತ್ತೇ ಆಗುವುದಿಲ್ಲ” ಎಂದು ಅಮ್ಮನಿಗೆ ತಮಾಷೆ ಮಾಡುತ್ತಿದ್ದೆನಾದರೂ ಆ ಸಂಪ್ರದಾಯದ ಹಿಂದಿರುವ ವೈಜ್ಞಾನಿಕ ಹಾಗೂ ಭದ್ರತೆಯ ಕಾರಣಗಳನ್ನೆಲ್ಲ ಅರ್ಥಮಾಡಿಕೊಳ್ಳಬಲ್ಲವಳಾಗಿದ್ದೆ. ನಾಲ್ಕಂಕಣದ ಮನೆಯ ಜಗಲಿಯುದ್ದಕ್ಕೂ ಹರಡಿಕೊಳ್ಳುತ್ತಿದ್ದ ಆ ದೀಪದ ಬೆಳಕು ಆರಾಮಕುರ್ಚಿಯಲ್ಲಿ ಕುಳಿತ ಅಜ್ಜನ ಮಡಿಲ ಮೇಲಿನ ಮೊಮ್ಮಗುವಿನಿಂದ ಹಿಡಿದು, ಕಂಬಕ್ಕೆ ಒರಗಿ ಕುಳಿತು ಪರೀಕ್ಷೆಗೆ ತಯಾರಿ ನಡೆಸುತ್ತಿರುವವರನ್ನೂ ಒಳಗೊಂಡು, ಎಲ್ಲರ ಬದುಕುಗಳನ್ನೂ ಒಂದುಗೂಡಿಸುತ್ತಿತ್ತು. ಸೊಸೈಟಿಯ ಸಾಲವಾಗಲೀ, ಅಣ್ಣ-ತಮ್ಮಂದಿರ ಒಳಜಗಳವಾಗಲೀ, ಅತ್ತೆ-ಸೊಸೆಯಂದಿರ ಸಣ್ಣಪುಟ್ಟ ಕಿತ್ತಾಟಗಳಾಗಲೀ ಎಲ್ಲವೂ ಮರೆಯಾಗಿ ಮನೆಯಲೊಂದು ಶಾಂತವಾದ ವಾತಾವರಣ ಸೃಷ್ಟಿಯಾಗುವ ಸಂಧಿಕಾಲ ಅದಾಗಿತ್ತು.

ಸಕಾರಾತ್ಮಕತೆಯ ಮೂರ್ತಸ್ವರೂಪದಂತೆ ಮೂರು ಹೊತ್ತೂ ಮನೆಯನ್ನು ಬೆಳಗುತ್ತಿದ್ದ ದೀಪಗಳ ಸುತ್ತ ಬದುಕುಗಳು ನಿರ್ಮಮವಾಗಿ, ಮನಸ್ಸುಗಳು ನಿಶ್ಚಿಂತವಾಗಿ ಅರಳಿಕೊಳ್ಳುತ್ತಿದ್ದವು. ಯಾವ ದೀಪವೂ ತನ್ನ ಸಾಮರ್ಥ್ಯವನ್ನು ಮೀರಿ ಉರಿಯುವ ಹಠಕ್ಕೆ ಬೀಳುತ್ತಿರಲಿಲ್ಲ; ಎಣ್ಣೆ ಮುಗಿದಮೇಲೆ ಆರಿಹೋಗಲೇಬೇಕೆಂಬ ಸ್ಪಷ್ಟ ಕಲ್ಪನೆಯೊಂದು ಅದರ ಹೊಟ್ಟೆಯಲ್ಲಿದೆಯೇನೋ ಎಂದು ಭಾಸವಾಗುವಂತೆ ನೆಮ್ಮದಿಯ ಭಾವದಲ್ಲಿ ಉರಿಯುತ್ತಿತ್ತು. ನಿನ್ನ ಜೀವನದ ಉದ್ದೇಶವೇನು ಎಂದು ಯಾರಾದರೂ ದೀಪವನ್ನು ಕೇಳಿದರೆ, “ಹಚ್ಚಿದವನಿಗೆ ಗೌರವಕೊಟ್ಟು ಆರುವವರೆಗೂ ಪ್ರಜ್ವಲಿಸುವುದು” ಎಂದು ಉತ್ತರಿಸಬಹುದೇನೋ ಎನ್ನುವ ಕಲ್ಪನೆಯೊಂದು ಮನುಷ್ಯ ಜೀವನದ ಉದ್ದೇಶವನ್ನೂ ಸ್ಪಷ್ಟಗೊಳಿಸಿದಂತೆ ಭಾಸವಾಗುತ್ತದೆ. ಅಷ್ಟೇ ಜಾಗ, ಅದೇ ಅಳತೆ, ಅಷ್ಟೇ ಉದ್ದದ ಬತ್ತಿ; ಅದನ್ನು ಮೀರಿ ಕಾಲುಚಾಚುವ ದುರಾಸೆಯನ್ನೆಂದೂ ದೀಪ ವ್ಯಕ್ತಪಡಿಸಿಯೇ ಇಲ್ಲ. ಈ ಜಾಗವನ್ನು ಬಿಟ್ಟು ಇನ್ಯಾವುದೋ ಜಾಗದಲ್ಲಿ ತನ್ನನ್ನು ಇಟ್ಟಿದ್ದರೆ ತಾನು ಇನ್ನೇನೋ ಆಗಿರುತ್ತಿದ್ದೆ ಎನ್ನುವ ಅಸಮಾಧಾನವೇನಾದರೂ ದೀಪದ ಮನಸ್ಸಿನಲ್ಲಿ ಇದ್ದಿರಬಹುದೇ; ಕೇಳಿದವರಿಲ್ಲ! ಸಮಚಿತ್ತ, ಸಮಾಧಾನ, ಸಂಭ್ರಮಗಳೇ ಎಂದೆಂದಿಗೂ ದೀಪದ ಬದುಕಿನ ಧ್ಯೇಯಗಳಾಗಿದ್ದರಿಂದಲೇ ನನ್ನ ಬಾಲ್ಯಕ್ಕೊಂದು ಹೊಳಪು ದೊರಕಿತಲ್ಲ ಎನ್ನುವ ಕೃತಜ್ಞತೆಯ ಭಾವವೊಂದು ಈಗಲೂ ಇದೆ.

ಬಾಲ್ಯದ ಬಹುದೊಡ್ಡ ಸಂಭ್ರಮವೆಂದರೆ ದೀಪಾವಳಿ. ಆ ಸಂಭ್ರಮವನ್ನು ಸದಾಕಾಲ ಜೀವಂತವಾಗಿರಿಸುವಲ್ಲಿಯೂ ದೀಪದ ಪಾತ್ರವೇ ದೊಡ್ಡದು ಎನ್ನುವುದು ನನ್ನ ಯಾವತ್ತಿನ ನಂಬಿಕೆ. ಹೊಸಬಟ್ಟೆ, ಕಾಲ್ಗೆಜ್ಜೆ, ಹಳೆಹಾಡು, ಪಟಾಕಿ ಎಲ್ಲ ಇದ್ದೂ ದೀಪವಿರದೇ ಇದ್ದಿದ್ದರೆ! ಪ್ರತಿವರ್ಷವೂ ಹಬ್ಬ ಮುಗಿದಮೇಲೆ ಅಟ್ಟ ಸೇರುತ್ತಿದ್ದ ಮಣ್ಣಿನ ಹಣತೆಗಳ ಗಂಟು ದೀಪಾವಳಿಗೆ ಎರಡು ದಿನಗಳ ಮುಂಚೆ ಅಟ್ಟ ಇಳಿದು ಜಗಲಿಗೆ ಬರುತ್ತಿತ್ತು. ಅಜ್ಜನ ಹಳೆ ಪಂಜಿಯಿಂದ ಒಂದೊಂದೇ ಹಣತೆಗಳನ್ನು ಒರೆಸಿ, ಮೆತ್ತನೆಯ ಹತ್ತಿಗಳನ್ನು ಬಿಡಿಸಿ ಬತ್ತಿ ಹೊಸೆಯುವುದರೊಂದಿಗೆ ದೀಪಾವಳಿಯ ಸಡಗರ ಶುರುವಾಗುತ್ತಿತ್ತು. ಜಗಲಿಯ ಕಂಬಗಳನ್ನು, ಕಿಟಕಿಯ ಸರಳುಗಳನ್ನು, ಕೊಟ್ಟಿಗೆಯ ಮೋಟುಗೋಡೆಯನ್ನು, ಬಾವಿಕಟ್ಟೆ-ತುಳಸಿಕಟ್ಟೆಗಳನ್ನು ಒಂದೊಂದಾಗಿ ಆಶ್ರಯಿಸುತ್ತಿದ್ದ ಹಣತೆಯೊಳಗಿನ ಬತ್ತಿಗಳೆಲ್ಲವೂ ಸಂಜೆಯಾಗುವುದನ್ನೇ ಕಾಯುತ್ತಿರುವ ಮಲ್ಲಿಗೆ ಮೊಗ್ಗಿನಂತೆ ಕಾಣಿಸುತ್ತಿದ್ದವು. ಕಾಲ್ಗೆಜ್ಜೆ-ಹೊಸ ಫ್ರಾಕು ತೊಟ್ಟು, ಜಡೆ ಕುಣಿಸುತ್ತ ಹಣತೆ ಹಚ್ಚುತ್ತಿದ್ದರೆ ಪ್ರಪಂಚದ ಸಕಲ ಸುಖ-ಸಂತೋಷಗಳೂ ಅಂಗೈಯಲ್ಲಿಯೇ ಇರುವಂತಹ ಭಾವನೆ ಮನಸ್ಸನ್ನು ತುಂಬಿಕೊಳ್ಳುತ್ತಿತ್ತು. ಅಂಗೈಯಗಲದ ಪುಟ್ಟ ಹಣತೆಯೊಂದು ಇಡೀ ಬದುಕಿಗಾಗುವಷ್ಟು ಭರಪೂರ ಸಂಭ್ರಮವನ್ನು ಕರುಣಿಸುವುದಾದರೆ ಜಗಲಿಯ ಮೇಲೆ ಗತ್ತಿನಲ್ಲಿ ನಿಂತ ಮಹಾರಾಜನಂಥ ಮರದ ಕಂಬಗಳ ಮೇಲೆ, ಮಹಾರಾಜನನ್ನು ಕಾಯುವ ಸೈನಿಕರಂಥ ಕಬ್ಬಿಣದ ಸರಳುಗಳ ಮೇಲೆ, ಆ ಸರಳುಗಳ ನಡುವೆ ಕುಳಿತಿರುವ ಮುದ್ದಾದ ಮಣ್ಣಿನ ಹಣತೆಗಳ ಮೇಲೆ ಪ್ರೀತಿ ಹುಟ್ಟದೇ ಇದ್ದೀತೇ!

ಈಗಲೂ ಎಲ್ಲವೂ ಹಾಗೆಯೇ ಇವೆ; ಬಾಲ್ಯ ಮುಗಿದುಹೋದ ಸಣ್ಣದೊಂದು ಸಂಕಟವನ್ನುಳಿದು! ಬದುಕು ಸುಂದರವಾಗಿದೆ ಎನ್ನುವ ಸಮಾಧಾನವೊಂದು ನಮ್ಮನ್ನು ಸಲಹುತ್ತಿದೆಯೆಂದಾದರೆ, ಅಲ್ಲಿ ಬಾಲ್ಯದ ಪಾತ್ರ ಮಹತ್ತರವಾದದ್ದು. ಬಾಲ್ಯದ ಒಡನಾಟ, ನೆನಪುಗಳು, ಸಡಗರಗಳು ಬದುಕಿನುದ್ದಕ್ಕೂ ನಮ್ಮೊಂದಿಗೆ ಹೆಜ್ಜೆ ಹಾಕುತ್ತಲೇ ಇರುತ್ತವೆ. ಬಾಲ್ಯವನ್ನು ಮೀರಿ ನಾನೊಂದು ಬದುಕು ಕಟ್ಟಿಕೊಳ್ಳಲು ಹೊರಟಿದ್ದೇನೆ ಎನ್ನುವುದು ಸಾಮಾಜಿಕವಾದ ಹೊಂದಾಣಿಕೆಯಾಗಬಹುದೇ ಹೊರತು, ಬದುಕಿನ ಪ್ರತಿ ಕ್ಷಣವನ್ನೂ ಸಂತಸದಿಂದ ಅನುಭವಿಸುವ ಸಹಜ ಕ್ರಿಯೆಯಾಗಿ ಅನಾವರಣಗೊಳ್ಳಲು ಸಾಧ್ಯವಿಲ್ಲ. ಹಂತಹಂತವಾಗಿ ಬದುಕು ನಮ್ಮೆದುರು ತೆರೆದುಕೊಳ್ಳುತ್ತ ಹೋಗುವ ಪ್ರಕ್ರಿಯೆಯಲ್ಲಿ ಪ್ರೀತಿ-ವಾತ್ಸಲ್ಯಗಳ, ತಿಳಿವಳಿಕೆಯ, ಸುಜ್ಞಾನದ ಬೆಳಕನ್ನು ನಮ್ಮೊಳಗೆ ಸದಾ ಬೆಳಗಿಸುವ ದೀವಿಗೆಯೊಂದು ಬೆನ್ನಹಿಂದೆ ನಿಂತು ಎಲ್ಲ ಹೋರಾಟಗಳನ್ನು ಸಹ್ಯಗೊಳಿಸುತ್ತ ಹೋಗುವ ಸೃಷ್ಟಿಕ್ರಿಯೆ ಅಚ್ಚರಿ ಹುಟ್ಟಿಸುವಂಥದ್ದು. ಆ ಬೆಳಕು ಹುಟ್ಟಿಕೊಂಡ ಗಳಿಗೆ, ನಡೆದು ಬಂದ ದಾರಿ, ಕಾಣಿಸಿದ ಹೊಳಹು, ತೆರೆದಿಟ್ಟ ಕನಸಿನ ಹಾದಿ ಎಲ್ಲವೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದಾದರೂ ಕೈಹಿಡಿದು ಮುನ್ನಡೆಸುವ ಚೈತನ್ಯದ ಸ್ವರೂಪ ಮಾತ್ರ ಒಂದೇ.

ನಮ್ಮೊಳಗೆ ಸದಾಕಾಲ ಪ್ರವಹಿಸುವ ಜೀವಂತಿಕೆಯ ಸೆಲೆಯನ್ನು ಹುಡುಕುತ್ತ ಹೊರಟರೆ ಅಲ್ಲೊಂದಿಷ್ಟು ಅಸ್ಪಷ್ಟವಾದ ಘಟನೆಗಳು, ಅವಿಸ್ಮರಣೀಯವೆನ್ನಿಸಬಹುದಾದಂತಹ ತಾಣಗಳು, ಮನಸ್ಸಿನ ಆಳದಲ್ಲೆಲ್ಲೋ ಅಚ್ಚೊತ್ತಿರುವ ಚಹರೆಗಳು ಎಲ್ಲವೂ ಕಾಣಸಿಗುತ್ತವೆ. ಅವೆಲ್ಲವೂ ಒಂದಕ್ಕೊಂದು ತಳುಕು ಹಾಕಿಕೊಂಡು ಜಾತಿ, ಧರ್ಮ, ಕಾಲ, ಖಾಸಗಿತನ ಈ ಎಲ್ಲ ಅಂತರಗಳನ್ನು ಮೀರಿ ಹೊಸತನದ ಹೊಳಹುಗಳನ್ನು ಕಾಣಿಸುತ್ತವೆ. ಆ ಹುಡುಕಾಟದ ಪ್ರಕ್ರಿಯೆಯಲ್ಲಿ ದೀಪದ ಬೆಳಕು ಹೊಸಹೊಸ ರೂಪ-ಆಕಾರಗಳಲ್ಲಿ, ವ್ಯಕ್ತಿ-ಅಭಿವ್ಯಕ್ತಿಗಳಲ್ಲಿ, ಮಾಧ್ಯಮ-ಸಂವಹನಗಳ ಮೂಲಕ ಜೀವಂತವಾಗಿದ್ದಿರಬಹುದೆನ್ನುವ ನಂಬಿಕೆಯೊಂದು ಬಲಗೊಳ್ಳುತ್ತ ಹೋಗುತ್ತದೆ. ಕನ್ನಡಶಾಲೆಯ ಶಾರದಾಪೂಜೆಗೆಂದು ಸಿಂಗರಿಸಿದ ಶಾರದೆಯ ಭಾವಚಿತ್ರದ ಅಕ್ಕಪಕ್ಕ ಉರಿಯುತ್ತಿರುವ ಪುಟ್ಟಪುಟ್ಟ ದೀಪಗಳು ಕೈಮುಗಿದು ನಿಂತ ಪುಟ್ಟಮಕ್ಕಳ ಪಿಳಿಪಿಳಿ ಕಣ್ಣುಗಳೊಳಗೆ ಜ್ಞಾನದೀವಿಗೆಯಾಗಿ ಪ್ರತಿಫಲಿಸುತ್ತಿರಬಹುದು; ಹೈಸ್ಕೂಲಿನ ಗ್ಯಾದರಿಂಗ್ ಉದ್ಘಾಟನೆಗೆ ಬೆಳಗಿದ ಆಳೆತ್ತರದ ದೀಪದ ಪ್ರಭೆಯೊಂದು ಆಗಷ್ಟೇ ಅರಳುತ್ತಿರುವ ಮಕ್ಕಳ ಹೂವಿನಂಥ ಮನಸ್ಸನ್ನು ಕಂಗೆಡದಂತೆ ಕಾಪಾಡಬಹುದು; ಕಾಲೇಜಿನ ಸಹಪಾಠಿಯೊಬ್ಬಳು ಹೊಸವರ್ಷಕ್ಕೆ ತಂದುಕೊಟ್ಟ ದೀಪದ ಚಿತ್ರವಿರುವ ಗ್ರೀಟಿಂಗ್ ಕಾರ್ಡೊಂದು ಹುಡುಗನ ಹೃದಯದಲ್ಲಿ ಜೀವನಪ್ರೀತಿಯನ್ನು ಹುಟ್ಟಿಸಿರಬಹುದು; ಆಫೀಸಿನ ವೈಸ್ ಪ್ರೆಸಿಡೆಂಟ್ ಕಳುಹಿಸಿದ ದೀಪಾವಳಿ ಬೋನಸ್ಸಿನ ಇಮೇಲೊಂದು ಉದ್ಯೋಗಿಯ ಮುಖದಲ್ಲಿ ನಗುವನ್ನು ಅರಳಿಸಿರಬಹುದು. ಬೆಳಕಿನ ಪರಿಕಲ್ಪನೆಯೊಂದು ನಮ್ಮೊಳಗೆ ಜೀವನಪ್ರೀತಿಯಾಗಿ, ಸದಾಕಾಲ ಜೀವಂತವಾಗಿರುವ ಕನಸಾಗಿ ಉಳಿದುಕೊಳ್ಳುವುದೇ ಹಾಗೆ; ನಂದಾದೀಪವೊಂದು ಉರಿದಂತೆ!

ಹುಟ್ಟಿಕೊಂಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಹಾದಿಯುದ್ದಕ್ಕೂ ಬೆಳಕ ಹಾಯಿಸುವ ದೀವಿಗೆಗಳಾಗಿ ಸಮಯಪ್ರಜ್ಞೆ, ಪರಿಶ್ರಮ, ಆಶೀರ್ವಾದ, ಅದೃಷ್ಟಗಳೆಲ್ಲವೂ ಒಂದಕ್ಕೊಂದು ಪೂರಕವಾದ ಪಾತ್ರವನ್ನು ನಿರ್ವಹಿಸುತ್ತಿರುತ್ತವೆ. ಅಮ್ಮನ ಮಮತೆ-ವಾತ್ಸಲ್ಯಗಳ ಬೆಳಕಿನಲ್ಲಿ ಹೆಜ್ಜೆಯಿಡಲು ಕಲಿಯುವ ಮಗುವೊಂದು ಅಪ್ಪನ ಕಿರುಬೆರಳಿನ ನೆರವಿನಿಂದ ಹೊರಬಾಗಿಲು ದಾಟಿ, ಬೆಳಕಿನ ಹಿಂದೆಯೇ ಆವರಿಸಿಕೊಳ್ಳುವ ಕತ್ತಲಿನ ವಾಸ್ತವ ಪ್ರಪಂಚವನ್ನೆದುರಿಸುವ ಗಟ್ಟಿತನವನ್ನು ತನ್ನದಾಗಿಸಿಕೊಳ್ಳುತ್ತದೆ. ಅದು ಅಂಗಳಕ್ಕಿಳಿದ ಅದ್ಯಾವುದೋ ಸೋಜಿಗದ ಕ್ಷಣದಲ್ಲಿ ಕನಸಿನ ಬೀಜವೊಂದು ಮೊಳಕೆಯೊಡೆದಿರಬಹುದು; ಆ ಮೊಳಕೆಗೊಂದು ಮಣ್ಣಿನ ಮಡಿಲು ಮತ್ತೆಲ್ಲೋ ಸಿಕ್ಕಬಹುದು! ಚಿಗುರಿದ ಸಸಿಗೆ ಸೂರ್ಯನ ಬೆಳಕಿನ ದೀವಿಗೆ; ಹಸಿರಾದ ಕನಸಿನ ಮರಕ್ಕೆ ಅನುಬಂಧಗಳ ಜೋಕಾಲಿ!

ಬದುಕಿನ ಅಷ್ಟೂ ಅನುಬಂಧಗಳನ್ನು ತನ್ನ ತೆಕ್ಕೆಯಲ್ಲಿ ಬೆಚ್ಚಗಿಡುವ ಬೆಳಕೆನ್ನುವ ಬೆರಗು, ಆ ಬೆಳಕನ್ನು ಮುಷ್ಟಿಯಲ್ಲಿ ಹಿಡಿದಿಟ್ಟು ಅಂಗೈಯೊಳಗೆ ಬೆರಗಿನ ಲೋಕವನ್ನೇ ತೆರೆದಿಡುವ ದೀಪ, ಆ ಲೋಕದ ಪ್ರತಿಫಲನವೊಂದು ಕಣ್ಣುಗಳೊಳಗೆ ತುಂಬಿಕೊಂಡು ಹುಟ್ಟಿಸುವ ರೋಮಾಂಚನ ಎಲ್ಲವೂ ಭಾವಲೋಕಕ್ಕೆ ಮಾತ್ರ ದಕ್ಕಬಹುದಾದ ಸುಂದರ ಅನುಭವಗಳು. ಆ ಲೋಕದಲ್ಲಿ ಕಷ್ಟ-ನಷ್ಟಗಳ ಆತಂಕಗಳಿಲ್ಲ; ಆಗುಹೋಗುಗಳ ಲೆಕ್ಕಾಚಾರವಿಲ್ಲ; ಅಪನಂಬಿಕೆಗಳ ಭೀತಿಯಿಲ್ಲ. ಅಲ್ಲಿರುವುದೆಲ್ಲ ಭರವಸೆಯ ಬೆಳಗು, ಮುದನೀಡುವ ಸಾಂಗತ್ಯ, ಸುಮಧುರ ರಾಗದ ಆಲಾಪ; ಅದೊಂದು ಸುಂದರ ಕನಸುಗಳ ಪರಂಪರೆ. ಆ ಕನಸುಗಳ ಸಾಲಿನುದ್ದಕ್ಕೂ ಹಬ್ಬಿರುವ ಹಣತೆಗಳ ಎಣ್ಣೆಯೆಂದೂ ಖಾಲಿಯಾದದ್ದಿಲ್ಲ; ಭರವಸೆಯ ಸೊಡರು ಆರುವುದಿಲ್ಲ. ನಂಬಿಕೆಯ ದೀಪ ನಿರಂತರವಾಗಿ ಉರಿಯುತ್ತಿರುವಂತೆ ಜೋಪಾನ ಮಾಡುವ ಕಾಣದ ಕೈಗಳು ಎಲ್ಲೆಲ್ಲೂ ಇವೆ; ನಮ್ಮೊಳಗೂ! ಅಮ್ಮನ ಆಲಿಂಗನದಲ್ಲಿ, ಅಪ್ಪನ ಆಶೀರ್ವಾದದಲ್ಲಿ, ಸ್ನೇಹಿತರ ಸಖ್ಯದಲ್ಲಿ, ಮಕ್ಕಳ ಸಾಂಗತ್ಯದಲ್ಲಿ, ಪ್ರಕೃತಿಯ ಒಡನಾಟದಲ್ಲಿ ಎಲ್ಲೆಲ್ಲಿಯೂ ನಂಬಿಕೆಯ ನಂದಾದೀಪ ಉರಿಯುತ್ತಲೇ ಇದೆ. ನೋಟದಲ್ಲೊಂದು ಸೂಕ್ಷ್ಮತೆಯ, ಹೃದಯದಲ್ಲೊಂದು ಧನ್ಯತೆಯ, ಮನಸ್ಸಿನಲ್ಲೊಂದು ನಮ್ರತೆಯ ಭಾವವುಳಿದಿದ್ದರೆ ಸಾಕು ಆ ದೀಪದ ಬೆಳಕು ಬದುಕನ್ನು ಬೆಳಗುತ್ತದೆ.

ಎಲ್ಲ ಸೌಕರ್ಯ, ಅಲಂಕಾರ-ಆಡಂಬರಗಳ ಹೊರತಾಗಿಯೂ ಜೀವನದ ನಿಜವಾದ ಸಮಾಧಾನವಿರುವುದು ನೆನಪು, ನಂಬಿಕೆ, ಕನಸು, ಭರವಸೆ, ಸಂಬಂಧಗಳ ಸಮ್ಮುಖದಲ್ಲಿ. ಗ್ರಹಿಕೆ-ದೃಷ್ಟಿಕೋನಗಳಲ್ಲಿ ಭಿನ್ನತೆಯಿರಬಹುದಾದರೂ ಭಾವನೆಗಳಿಂದ ಬಹಿರ್ಮುಖವಾದ ಸಂಗತಿಗಳೆಲ್ಲ ಕೃತ್ರಿಮ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಎಷ್ಟೇ ಐಶ್ವರ್ಯವಿರಲೀ, ಸಾಮಾಜಿಕ ಮನ್ನಣೆಯಿರಲೀ ಅಂತಿಮವಾಗಿ ಮನುಷ್ಯ ಮರಳುವುದು ತನ್ನ ಸಂಗಾತಿ, ಮಕ್ಕಳು, ಸ್ನೇಹಿತರು, ಬಂಧು-ಬಳಗವೆನ್ನುವ ಸೀಮಿತ ವಲಯಕ್ಕೆ; ಅಲ್ಲೊಂದು ಒಲವಿನ ಸೆಲೆ, ಪ್ರೀತಿಯ ಆಲಿಂಗನ, ಜೊತೆಗೊಂದು ಏಕಾಂತದ ಮಾತುಕತೆ ಇವುಗಳೇ ಆತ್ಮಸಂಗಾತಿಗಳು. ಅಂತಹ ಒಂದಲ್ಲ ಒಂದು ಬಂಧನದೆಡೆಗಿನ ಅವಲಂಬನೆಯೇ ನಮ್ಮನ್ನು ಸದಾಕಾಲ ಆರ್ದ್ರವಾಗಿರಿಸುವ ಜೊತೆಗೇ ಬೆಚ್ಚನೆಯ ಭಾವವನ್ನು ಒದಗಿಸುವ ನಮ್ಮೊಳಗಿನ ಹಣತೆ ಆರದಂತೆ ಕಾಪಾಡುತ್ತದೆ. ಬಿಡುಗಡೆಯೆನ್ನುವುದು ಆ ಕ್ಷಣಕ್ಕೆ ಆಕರ್ಷಕವೆನ್ನಿಸಬಹುದೇ ಹೊರತು, ಸಾಮರಸ್ಯದ ಬಂಧನದಲ್ಲಿಯೇ ಬದುಕಿನ ಅಂತಃಸತ್ವ ಅಡಗಿದೆ. ಆ ಸಾಂಗತ್ಯದ ಸೌಂದರ್ಯವನ್ನು ಬೆಳಗುವಂತೆ ಮಾಡುವ, ಸಂಬಂಧಗಳನ್ನು ಜೋಡಿಸುವ ಅಮ್ಮ ಹಚ್ಚಿದ ನಂದಾದೀಪವೊಂದು ಸದಾ ಉರಿಯುತ್ತಿದೆ.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on “ನಂಬಿಕೆಯ ನಂದಾದೀಪ”

  1. ಶೇಖರಗೌಡ ವೀ ಸರನಾಡಗೌಡರ್

    ದೀಪಪಾರಾಧನೆ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು.

  2. Raghavendra Mangalore

    ಆರದ ನಂದಾದೀಪದ ಸ್ಥಿತಪ್ರಜ್ಞೆಯ ಪ್ರಶಾಂತ ಬೆಳಕಿನ ಭಾವದ ಬರಹ ತುಂಬಾ ಆಪ್ತವೆನಿಸಿತು. ಅಭಿನಂದನೆಗಳು ಮೇಡಂ

  3. ಗೋಪಾಲ ತ್ರಾಸಿ

    ಆಹಾ!!!!! ಪದಪುಂಜ,ಭಾವಬಂಧಗಳ ದೇದೀಪ್ಯಮಾನ ಹೊಳಪೇ…!!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter