ಕಾಲವೊಂದಿತ್ತು. ‘ಮೂರೂಸಂಜಾತು ಕಥೆ ಪುಸ್ತಕ ಕೈಲಿದ್ರೆ ದೀಪ ಹಚ್ಚದೂ ಮರತಗಂಡು ಓದ್ತಾ ಕೂತ್ಗತ್ತೆ. ಅರೆಗತ್ತಲಲ್ಲಿ ಅಕ್ಷರ ಕಾಂಬದಾದ್ರೂ ಹೌದ?’ ಎಂದು ಆಯಿ ಗದರಿದಾಗಲೇ ಈ ಜಗತ್ತಿಗೂ ನನಗೂ ಸಂಬಂಧ ಬರುತ್ತಿತ್ತು. ತಾಲೂಕಾ ಸ್ಥಳ ಶಿರಸಿಯಿಂದ ಎಂಟೇ ಕಿಲೋ ಮೀಟರ್ ದೂರದಲ್ಲಿ ನಮ್ಮೂರಿದ್ದರೂ ನಾನು ಕಾಲೇಜು ಮೆಟ್ಟಿಲು ಹತ್ತುವವರೆಗೂ ಅಲ್ಲಿಗೆ ಕರೆಂಟ್ ಕನೆಕ್ಷನ್ ಎಂಬುದಿರಲಿಲ್ಲ. ಕತ್ತಲಾಗುವುದರೊಳಗೆ ನಾಲ್ಕಾರು ಚಿಮಣಿ ಬುರುಡೆಗಳ ಮುಚ್ಚಳ ತೆಗೆದು ಪುನಿಲ್ ಹಾಕಿ ಬಾಟಲಿಯಲ್ಲಿರುವ ಚಿಮಣಿ ಎಣ್ಣೆ ಅರ್ಥಾತ್ ಸೀಮೆಎಣ್ಣೆಯನ್ನು ತುಂಬಿ ಲಾಟೀಣ್, ಲ್ಯಾಂಪುಗಳ ಗಾಜಿನ ಮಸಿ ಒರೆಸಿ ಅವುಗಳಿಗೂ ಎಣ್ಣೆ ತುಂಬಿಸಿಡ ಬೇಕಿತ್ತು. ಅವುಗಳಲ್ಲಿರುವ ಬತ್ತಿಯ ಮಸಿಯಾದ ಕಕ್ಕನ್ನು ತೆಗೆದು ಚೆನ್ನಾಗಿ ಬೆಳಕು ಕೊಡುವಂತೆ ಸಿದ್ಧಪಡಿಸಬೇಕಿತ್ತು.
ಹಿತ್ತಾಳಿಯದು, ತಗಡಿನದು, ಗಾಜಿನ ಬಾಟಲಿಯದು ..ಹೀಗೆ ಚಿಮಣಿಯ ಆಕಾರ ಹಲವು ಬಗೆಯದ್ದಾಗಿರುತ್ತಿತ್ತು, ಕೆಲವು ಅತ್ಯಂತ ಕಲಾತ್ಮಕವಾಗಿತುತ್ತಿತ್ತು. ಇರುವುದರಲ್ಲಿ ಚೆನ್ನಾಗಿ ಉರಿಯುವ ದೀಪ ಗಂಡಸರು ಕುಳಿತುಕೊಳ್ಳುವ ಜಗುಲಿಗೆ!. ಹೊಸ್ತಿಲ ಬಳಿಯಲ್ಲೊಂದು ಒಳ್ಳೆಣ್ಣೆ ದೀಪವನ್ನಿಟ್ಟು, ದೇವರ ಮುಂದಿನ ನಂದಾದೀಪದ ಕುಡಿಯನ್ನೆಳೆದು ಸರಿ ಕಕ್ಕನ್ನು ಕುಕ್ಕಿ ಪ್ರಜ್ವಲಿಸಿ ಉರಿಯುವಂತೆ ಮಾಡಿ, ಜೋಡಿ ತುಪ್ಪದ ದೀಪವನ್ನು ಹಚ್ಚಿ ಭಜನೆ ಮಾಡುವುದು ನಿತ್ಯದ ವಾಡಿಕೆಯಾಗಿತ್ತು. ಮಾಳಿಗೆಗೆ, ಅಡುಗೆ ಮನೆಗೆ, ಬಚ್ಚಲು ಮನೆಗೆ ಹೀಗೆ ಅಲ್ಲಲ್ಲಿ ಒಂದೊಂದು ಚುಮಣಿ ಬುಡ್ಡಿಯನ್ನಿಟ್ಟು ಮನೆ ಎದುರಿಗೊಂದು ಲಾಟೀಣು ತೂಗಿ ಬಿಡಬೇಕಿತ್ತು. ಹೀಗೆಲ್ಲ ವ್ಯವಸ್ಥೆ ಮಾಡುವ ನಮಗೆ ಒಂದರ್ಥದಲ್ಲಿ ನಿತ್ಯವೂ ಪುಟ್ಟ ದೀಪಾವಳಿಯೇ ಆಗಿತ್ತು.
ಚೆನ್ನಾಗಿ ಉರಿಯುವ ಚಿಮಣಿ ದೊಡ್ಡ ಮಕ್ಕಳಿಗೆ, ಕುರುಡು ಬೆಳಕಿನ ದೀಪ ಚಿಕ್ಕ ಮಕ್ಕಳಿಗೆ. ಜಿಪುಣರ ಮನೆಯಲ್ಲಿ ಒಂದೇ ದೀಪದ ಸುತ್ತ ನಾಲ್ಕಾರು ಮಕ್ಕಳು. ಕಣ್ಣನ್ನು ಸಾಧ್ಯವಾದಷ್ಟು ಅಗಲಿಸಿ ಪುಸ್ತಕದ ಮೇಲೆ ಕೀಲಿಸಿ ದೊಡ್ಡದಾಗಿ ಓದದಿದ್ದರೆ ಹಿರಿಯರಿಗೆ ಸಮಾಧಾನವಾಗುತ್ತಿರಲಿಲ್ಲ. ಚಿಕ್ಕ ಮಕ್ಕಳು ರಾಗವಾಗಿ ಹಾಡನ್ನೋ ಮಗ್ಗಿಯನ್ನೋ ಹೇಳುತ್ತಿದ್ದರೆ ದೊಡ್ಡ ಮಕ್ಕಳು ಎರಡು ತೋರು ಬೆರಳಲ್ಲಿ ಕಿವಿ ಮುಚ್ಚಿಕೊಂಡು ಮನಸ್ಸಿನಲ್ಲಿ ಓದುತ್ತಿದ್ದರು, ಅಷ್ಟೇ ಅಲ್ಲ ಆಗಾಗ ಕಣ್ಣು ಕೆಕ್ಕರಿಸಿಕೊಂಡು ಇವರ ಕಾಟವಿಲ್ಲದಿದ್ದರೆ ಆರಾಮವಾಗಿ ಓದಬಹುದಿತ್ತು ಎನ್ನುವಂತೆ ನೋಡುತ್ತಿದ್ದರು.
ಚಿಮಣಿಯ ಹತ್ತಿರವೇ ಕುಳಿತು ಓದಬೇಕೆಂದು ಸರಿದು ಮುಂಗುರುಳು ಸುಟ್ಟು ಕಮಟು ವಾಸನೆ ಬಂದು ದುಃಖ ಉಕ್ಕಿ ಬರುವಾಗ ಎದುರಿಗೆ ಕುಳಿತವರು ತೋರು ಬೆರಳು ಕುಣಿಸುತ್ತಾ ಹಾಂಗೇ ಆಗಬೇಕು ಎನ್ನುವಂತೆ ಅಭಿನಯಿಸುತ್ತಿದ್ದರು!ಇಷ್ಟು ನಿಷ್ಕರುಣಿಯಾದ ಅಕ್ಕನಿಗೋ ತಮ್ಮನಿಗೋ ನಾನೂ ಒಂದಲ್ಲಾ ಒಂದು ದಿನ ಹೀಗೆಯೇ ಕೈಬೆರಳು ಕುಣಿಸುವ ಅವಕಾಶ ಬಂದೇ ಬರುತ್ತದೆ ಎಂದುಕೊಳ್ಳುತ್ತಿದ್ದೆ. ಹೊಗೆಗೆ ಕಣ್ಣುರಿಯುವುದೆಲ್ಲ ನಮಗೆ ಮಾಮೂಲಿ ವಿಷಯವಾಗಿತ್ತು. ಆಗಾಗ ಚಿಕ್ಕ ಪುಟ್ಟ ಕದನ, ಜಿಗುಟುವುದು, ಹೊಡೆದುಕೊಳ್ಳುವುದು ಪ್ಯಾ ಎಂದು ರಾಗ ತೆಗೆಯುವುದು ಎಲ್ಲಕ್ಕೂ ದೀಪವೇ ಸಾಕ್ಷಿಯಾಗಿರುತ್ತಿತ್ತು.
‘ಬಾಳೆಮಣೆ ಹಾಕಲಕ್ಕಡಿ ಬನ್ನಿ ಊಟಕ್ಕಾತು’ ಎಂದು ಆಯಿ ಹೇಳಿದಾಗ ಚಿಮಣಿ ಬುರುಡೆಯ ಸಮೇತ ಅಡುಗೆ ಮನೆಗೆ ದೌಡಾಯಿಸುತ್ತಿದ್ದೆವು. ಹುಷಾರು ಕೈಯಲ್ಲಿ ಚಿಮಣಿ ಇದ್ದು ನಿತ್ಯವೂ ಹೇಳುತ್ತಲೇ ಇರುವ ಹಿರಿಯರಿಗೆ ಏನಾದರೂ ಅನಾಹುತವಾದರೆ ಎಂಬ ಆತಂಕ. ಮನೆಯೊಳಗೆ ಎಲ್ಲಿ ಮೆಟ್ಟಿಲು, ಎಲ್ಲಿ ತಗ್ಗಾದ ಬಾಗಿ¯ಪಟ್ಟಿ, ಎಷ್ಟು ಹೆಜ್ಜೆ ನಡೆದರೆ ಹಾಕಿದ ಬಾಗಿಲಿನ ಮೀಡ ತೆಗೆಯಬಹುದು ಎಂಬುದೆಲ್ಲವನ್ನೂ ನಮ್ಮ ಆರನೆಯ ಇಂದ್ರಿಯ ರೂಢಿ ಮಾಡಿಕೊಂಡಿರುತ್ತಿತ್ತು. ಅರೆಗತ್ತಲಿನಲ್ಲಿ ನಾವು ಆರಾಮವಾಗಿಯೇ ಓಡಾಡುತ್ತಿದ್ದೆವು.
ಶುಕ್ಲ ಪಕ್ಷ ಬಂದಾಗ ನಮಗೆ ಎಲ್ಲಿಲ್ಲದ ಸಮಾಧಾನ. ಹಿತ್ತಿಲಿಗೋ ಅಂಗಳಕ್ಕೋ ಹೋಗಿ ಕೂತು ಆರಾಮವಾಗಿ ಬೆಳದಿಂಗಳನ್ನು ಆಸ್ವಾದಿಸುತ್ತಿದ್ದೆವು. ಚಂದ್ರಾಮ ನಮ್ಮ ಪ್ರೀತಿಯ ಮಾಮ. ಕೆಲವು ಹಿರಿಯರು ಬೆಳದಿಂಗಳ ಬೆಳಕಿನಲ್ಲಿ ಭತ್ತ, ಕರಡದ ಕುಯಿಲು ಮಾಡಲು ಹೋಗುತ್ತಿದ್ದರು. ಕೆಲವರು ಹೆಜ್ಜೇನು ಹುಡುಕಿಕೊಂಡು ಅಲೆಯುತ್ತಿದ್ದರು, ಅಮಾವಾಸ್ಯೆ ಸಮೀಪಿಸಿದಾಗ ಜೇನು ಕುಯಿಲು ಮಾಡುತ್ತಿದ್ದರು. ಒಕ್ಕಲು ಮಕ್ಕಳು ಬೇಟೆಯಾಡಲೂ ಹೋಗುತ್ತಿದ್ದರು.
ಚುಮಣಿ ಬುರುಡೆಗಿಂತ ಉತ್ತಮವೆನ್ನುವಂತೆ ಬೆಳಕು ನೀಡುವ ಲ್ಯಾಂಪು ಹೈಸ್ಕೂಲು ಓದುವಾಗ ನಮ್ಮ ಮನೆಗೆ ಬಂತು. ಅದನ್ನು ಅತೀ ಕಾಳಜಿಯಿಂದ ಬಳಸಬೇಕಿತ್ತು. ಮಸಿ ಒರೆಸುವಾಗಲೋ ಹಿಡಿದುಕೊಂಡು ಹೋಗುವಾಗಲೋ ಸ್ವಲ್ಪ ಅಲಕ್ಷ್ಯವಾದರೂ ಬಿದ್ದು ಗಾಜು ಒಡೆದುಹೋಗುತ್ತಿತ್ತು. ಲ್ಯಾಂಪಿನ ಗಾಜು ಒಡದ್ಯೇನೆ? ಅಪ್ಪ ಕೊಂಚ ದ್ವನಿ ಎತ್ತರಿಸಿದರೆ ಸಾಕು ಕಣ್ಣೀರ ಧಾರೆ ಕೆನ್ನೆಯ ಮೇಲಿಳಿಯುತ್ತಿತ್ತು. ಹೊಸತೊಂದನ್ನು ಮಾರುಕಟ್ಟೆಯಿಂದ ನಾಜೂಕಾಗಿ ಒಡೆಯದಂತೆ ತರುವ ತಲೆಬಿಸಿ ಅಪ್ಪನಿಗಿರುತ್ತಿತ್ತೆಂಬುದು ಈಗ ಅರ್ಥವಾಗುತ್ತದೆ.
ನೆಂಟರಿಷ್ಟರು ಬಂದಾಗ ಹಚ್ಚುವ ಗ್ಯಾಸ್ ಲೈಟುಗಳೆಡು ನಮ್ಮ ಮನೆಯಲ್ಲಿದ್ದವು. ಲೀಟರ್ಗಟ್ಟಲೆ ಚಿಮಣಿ ಎಣ್ಣೆ ಹಿಡಿಸುವ ಬುರುಡೆಯ ಮೇಲೆ ಗಾಜು ಅದರೊಳಗೊಂದು ಬರ್ನರ್. ಅದಕ್ಕೆ ಸುತ್ತಲೂ ಜೋಡಿಸಿದ ಬಿಳಿಯ ಪುಟ್ಟ ಪರದೆಯಂತಹ ಮೆಂಟಲ್ಸ. ಪಂಪ್ ಹೊಡೆದು ಮೇಲೆ ಎಣ್ಣೆ ಚಿಮ್ಮಿದ ತಕ್ಷಣ ಬೆಂಕಿಕಡ್ಡಿ ಗೀರಿ ಹಚ್ಚಿ ಮತ್ತೆ ಪುಸು ಪುಸುನೇ ಪಂಪ ಹೊಡೆದು ಬೆಳಕಾಗಿಸುವುದು ಒಂದು ಕಲೆಯೇ ಸೈ. ಅಪ್ಪನಿಗೆ ಅಂಥದ್ದೊಂದು ಕೌಶಲ ಸಿದ್ದಿಸಿತ್ತು. ಅರ್ಧ ಜಗುಲಿಗೇ ಬೆಳಕಾಗಿರುವ ಅದನ್ನು ಹಚ್ಚಿದಾಗ ಬರುವ ಹೆಬ್ಬೆಳಕನ್ನು ನೋಡುವಾಗ ಎಲ್ಲರಿಗೂ ಸಂಭ್ರಮವೇ.
‘ದಿನಾ ರಾತ್ರಿ ಕರಿಕೆ ಕಾಂಬವ್ವೂ ಇವತ್ತು ಬೆಳಿಕೆ ಕಾಣ್ತ’ ಎಂದು ಆಯಿ ನಗುತ್ತ ಹೇಳುತ್ತಿದ್ದಾಗ ನಮಗೂ ಹೌದಲ್ಲಾ ಎನಿಸುತ್ತಿತ್ತು. ಸ್ವಿಚ್ ಒತ್ತಿದಾಗ ಜಗ್ಗೆಂದು ಹೊತ್ತಿಕೊಳ್ಳುವ ಕರೆಂಟ್ ಬೆಳಕು ನಮ್ಮೂರಿಗೆ ಬಂದ ನಂತರ ಹಲವಾರು ಇಂತಹ ಬೆಳಕಿನ ಸಾಧನಗಳೂ ನೇಪಥ್ಯಕ್ಕೆ ಸರಿದವು. ಆದರೂ ಮಲೆನಾಡಿನ ಮಳೆಗಾಲದ ಬಿರುಮಳೆಗೆ ಧರೆಗುರುಳುವ ಮರಗಳಿಂದ ಕರೆಂಟ್ ಕಂಬಗಳು ನೆಲಕ್ಕುರುಳಿ ನಾಲ್ಕಾರು ದಿನ ವಿದ್ಯುತ್ ಇಲ್ಲದಾಗ ಮತ್ತೆ ಮುನ್ನೆಲೆಗೆ ಹಲವು ದೀಪಗಳು ಮತ್ತೆ ಮುನ್ನೆಲೆಗೆ ಬರುವುದುಂಟು.
ದೀಪಾವಳಿ ಬಂದಾಗ ಮಣ್ಣಿನ ಹಣತೆಗಳನ್ನು ತಂದು ನೀರಿನಲ್ಲೊಮ್ಮೆ ತೊಳೆದು, ಬಿಸಿಲಿಗೆ ಒಣಗಿಸಿ, ಎಣ್ಣೆ ತುಂಬಿ ಸಾಲಾಗಿ ಮನೆ ಎದುರಿಗಿನ ಕಟ್ಟೆಯ ಮೇಲೆ ತುಳಸಿಯ ಕಟ್ಟೆಯ ಮುಂದೆ ಬೆಳಗುವುದೆಷ್ಟು ಚೆಂದ. ಜೋಡಿಯಾದ ಹಿತ್ತಾಳಿ ದೀಪಸ್ಥಂಭಗಳನ್ನು ಉಪ್ಪು ಹುಣಿಸೇಹಣ್ಣು ಹಚ್ಚಿ ತಿಕ್ಕಿ ಫಳ ಫಳನೇ ಹೊಳೆಯುಂತೆ ಬೆಳಗುವುದೆಷ್ಟು ಸವಾಲು. ದೀಪಾವಳಿಯಲ್ಲಿ ಹೂವಿನಲ್ಲಿ ಧಾನ್ಯದಲ್ಲಿ ಮಾಡುವ ಆರತಿ ಬಟ್ಟಲಿನಲ್ಲಿ, ರಂಗೋಲಿಯ ಸುತ್ತ… ಹೀಗೆಲ್ಲ ಬೆಳಗುವ ದೀಪದ ಚೆಲುವು ಇಮ್ಮಡಿಗೊಳ್ಳುವುದೆಷ್ಟು ಸತ್ಯ. ಕಾರ್ತಿಕಮಾಸ ಮುಗಿಯುವವರೆಗೂ ಮನೆಗಳಲ್ಲಿ ಗುಡಿಗಳಲ್ಲಿ ಅದೆಷ್ಟು ಕೋಟಿ ಕೋಟಿ ದೀಪಗಳು ಉರಿಯುತ್ತವೆಯೋ ಲೆಕ್ಕ ಇಟ್ಟವರಾರು? ಬೆಳಕು ಅಲ್ಪವೇ ಆದರೂ ಹಣತೆಯ ದೀಪ ಕೊಡುವ ಅಲೌಕಿಕವಾದ ಅನುಭವವನ್ನು, ಚೆಲುವನ್ನೂ ಉಳಿದ ದೀಪ ಕೊಡಲಾರದು. ಪ್ರತಿ ರಾತ್ರಿಯನ್ನೂ ಸಹ್ಯವಾಗಿಸಿ ಕೆಲಸ ಮಾಡಲನುವು ಮಾಡಿಕೊಡುವ ಎಲ್ಲ ಬಗೆಯ ದೀಪಗಳಿಗೆ ನಾವೆಷ್ಟು ಕೃತಜ್ಞರು ಅಲ್ಲವೇ?
*****
4 thoughts on “ದೀಪಾ ಹಲವು ರೂಪಾ”
ಚಂದದ ಬರಹ
ಧನ್ಯವಾದಗಳು ಸರ್
ಕಡಿಮೆ ಬೆಳಕು ನೀಡುವಾಗಲೇ ದೀಪಕ್ಕೆ ಹೆಚ್ಚು ಮಹತ್ವ ಇತ್ತು. ಈಗಿನ ದೀಪಕ್ಕೆ ಬೆಳಕು ಹೆಚ್ಚು ಆದರೆ ಖದರ್ ಕಡಿಮೆ.
ಹೌದು. ಧನ್ಯವಾದಗಳು ಸರ್