ಬಹಿರಂಗ ಹರಾಜು ಮತ್ತು ಅಧ್ಯಕ್ಷ ಸ್ಥಾನ!


ಹಾಸ್ಯ/ವಿಡಂಬನೆ ಬರಹ

ರಾಜ್ಯದ ಅದೊಂದು ಹಿಂದುಳಿದ ಜಿಲ್ಲೆ… ಅದರೊಳಗೊಂದು ಹಿಂದುಳಿದ ತಾಲೂಕು… ಅದರೊಳಗೊಂದು ಹಿಂದುಳಿದ ಪುಟ್ಟ ಹೋಬಳಿಯಂತಹ ಗ್ರಾಮ. ಎಂಟು ಕುಗ್ರಾಮಗಳ ನಡುವೆ ಅದೊಂದೇ ಗ್ರಾಮ! ಹೀಗಾಗಿ ಅಲ್ಲೇ ಪಂಚಾಯತಿ ಕೇಂದ್ರ ಇದೆ. ಊರು ಪ್ರಗತಿ ಪಥದತ್ತ ದಾಪುಗಾಲು ಹಾಕುತ್ತಿದೆ ಎನ್ನುವದಕ್ಕೆ ಸಾಕ್ಷಿಯೆಂದರೆ ಜ(ಧ)ನ ನಾಯಕ ಗುಂಡಣ್ಣನ ಒಡೆತನದ ಬ್ರಾಂದಿ ಅಂಗಡಿ ಅಲ್ಲಿಯ ಸಾರ್ವಜನಿಕರಿಗೆ ಹಗಲೂ ರಾತ್ರಿ ಬಾಗಿಲು ಮುಚ್ಚದ ಪೊಲೀಸ್ ಸ್ಟೇಶನ್ ತರಹ ಸೇವೆಗೈಯುತ್ತಿದೆ.

ಊರು ಅಂದ ಮೇಲೆ ಒಂದು ಗುಡಿ ಮತ್ತು ಹಳೆಯ ಸರ್ಕಾರಿ ಶಾಲೆ ಇದ್ದೇ ಇರುತ್ತವೆ. ಸುಣ್ಣ ಬಣ್ಣ ಬಳಿದ ಗುಡಿ ಅಲ್ಲಲ್ಲಿ ಕಾಣಬಹುದು. ಆದರೆ ಅಂತಹ ಭಾಗ್ಯ ಸರಕಾರಿ ಶಾಲೆಗೆಲ್ಲಿ? ಶಾಲೆಯಲ್ಲಿ ಯಾರ ಕಣ್ಣಿಗಾದರೂ ಥಟ್ಟನೆ ರಾಚುವ ಮುರಿದ ಟೇಬಲ್ಲುಗಳು, ಕುರ್ಚಿಗಳು, ಬೆಂಚುಗಳು (ಇದ್ದರೆ!), ಬಣ್ಣ ಕಾಣದ ಗೋಡೆಗಳು ಮತ್ತು ಇಂದೋ ನಾಳೆಯೋ ಬೀಳಬಹುದಾದಂತಹ ಚಾವಣಿಗಳು. ಇವು ಸರಕಾರಿ ಶಾಲೆಯ ಆಸ್ತಿಗಳು. ” ಮೂರು ಸ್ಟೀಲ್ ತಟ್ಟೆಗಳು ಆರು ಸ್ಟೀಲ್ ಗ್ಲಾಸುಗಳು ಹನ್ನೆರಡು ನೋಟ್ ಪುಸ್ತಕಗಳು ” ಸರಕಾರಿ ಶಾಲಾ ಮಕ್ಕಳಿಗೆ ಕೊಟ್ಟ ದಾನಿಗಳು ತೆಗೆಸಿಕೊಂಡ ಸೆಲ್ಫಿಗಳ ಫೋಟೋ ಮತ್ತು ವೀಡಿಯೊಗಳು ವೈರಲ್ ಆಗುತ್ತಿವೆ ಇತ್ತೀಚಿಗೆ.

ಶಾಲೆ ಮುಖ್ಯವೋ ಗುಡಿ ಮುಖ್ಯವೋ ಎಂದು ಯಾರನ್ನು ಕೇಳಿದರೂ ಒಂದೇ ಉತ್ತರ…ಗುಡಿಯೇ ಮುಖ್ಯ ಎಂದು. ಗುಡಿ ಎಂದರೆ ಭಯ ಭಕ್ತಿಯ ಶ್ರದ್ಧಾಕೇಂದ್ರ. ಅದಕ್ಕೆ ಸ್ಥಳೀಯ ಭಕ್ತರ ಅಪಾರ ಬೆಂಬಲ ಬೇರೆ. ಗುಡಿ ಜೀರ್ಣೋದ್ಧಾರಕ್ಕೆ ಬೇಕಾದರೆ ಊರಿನ ಜನ ಪಟ್ಟಿ ಹಾಕಿಕೊಳ್ಳುವರು. ಇನ್ನು ಗುಡಿ ನಿರ್ಮಾಣ ಮಾಡಬೇಕೆಂದು ಮನಸು ಮಾಡುವ ಭಕ್ತ ಮೊದಲು ದೇವರ ಆಶೀರ್ವಾದ ಪಡೆದು ಕಪ್ಪು ಹಣವನ್ನು ಬಿಳುಪಾಗಿಸುವ ವರ ಬೇಡುತ್ತಾನೆ. ಜೊತೆಗೆ ಪುಣ್ಯಾತ್ಮರು – ಧರ್ಮ ಪ್ರಭುಗಳು ಎನ್ನುವ ಹೆಸರು ಬೇರೆ ಗಳಿಸುತ್ತಾನೆ. ಹೀಗಾಗಿ ಗುಡಿ – ಗೋಪುರಗಳತ್ತ ಎಲ್ಲರ ಗಮನವೇ ಹೊರತು ಸರಕಾರಿ ಶಾಲೆಯ ಗೋಜಿಗೆ ಯಾರೂ ಹೋಗುವುದಿಲ್ಲ.

ಶಾಲೆ ಕಟ್ಟಿಸಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಉತ್ತಮ ಪ್ರಜೆಗಳನ್ನು ಮಾಡಿದರೆ ನಾಳೆ ಅವರೇ ಪ್ರಶ್ನಿಸಲು ಶುರು ಮಾಡುತ್ತಾರೆ… ಮತದಾನದ ಹಕ್ಕಿನ ಕುರಿತು ಮಾತನಾಡುತ್ತಾರೆ… ಅಲ್ಲದೇ ಬಹಳ ಓದದವರನ್ನು ಆಯ್ಕೆ ಮಾಡಲು ತುಂಬಾ ಓದಿದ ‘ ಪ್ರಜ್ಞಾವಂತ ‘ ಮತದಾರರ ಅವಶ್ಯಕತೆ ಇಲ್ಲವೇ ಇಲ್ಲ… ಅದಕ್ಕೇ ಸರ್ಕಾರ ಮಕ್ಕಳಿಗೆ ವಿದ್ಯೆ ಕಲಿಸುವ ಕೆಲಸವನ್ನು ಪ್ರೈವೇಟ್ ಸಂಸ್ಥೆಗಳಿಗೆ ಒದಗಿಸಿ ಕೈ ತೊಳೆದುಕೊಂಡಿದೆ. ಟಿ ವಿ ಮಾರುವವನಿಗೆ ಟಿ ವಿ ಅಸೆಂಬ್ಲಿ ಸೆಟ್…ಕಾರುಗಳನ್ನು ಮಾರುವವನಿಗೆ ಕಾರ್ ಡ್ರೈವಿಂಗ್ ಬಗ್ಗೆ ಮಾಹಿತಿ ಇರಬೇಕೆಂದೇನಿಲ್ಲ. ಅದರಂತೆ ವಿದ್ಯಾ ಸಂಸ್ಥೆಗಳನ್ನು ನಡೆಸುವ ಅಧಿಪತಿಗಳು ವಿದ್ಯಾವಂತರಾಗಿಬೇಕೆಂಬ ಕಾನೂನು ಎಲ್ಲೂ ಇಲ್ಲವಲ್ಲ.

ದೊಡ್ಡ ಶಿಕ್ಷಣ ಸಂಸ್ಥೆಯ ಮಾಲಕರು ‘ ಕನ್ನಡ ಶಿಕ್ಷಣ ಪ್ರೇಮಿ ‘ ( ಹೆಸರಿಗೆ ಮಾತ್ರ… ಮಾಡುವದು ಮಾತ್ರ ಅಪ್ಪಟ ಇಂಗ್ಲೀಷ್ ಅಕ್ಷರ ವ್ಯಾಪಾರ! ) ಎಂದು ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡು ತಮ್ಮ ಸಂಸ್ಥೆಯ ಅಂಗಡಿಗಳನ್ನು ( ಶಾಖೆಗಳನ್ನು ) ರಾಜ್ಯದ ಉದ್ದಗಲಕ್ಕೂ ವಿಸ್ತರಿಸಿ ವ್ಯಾಪಾರದ ಮಾರುಕಟ್ಟೆ ಬೆಲೆಗೆ ಶಿಕ್ಷಣವನ್ನು ತಮ್ಮ ಅಂಗಡಿಗಳ ( ಶಾಖೆಗಳ ) ಮೂಲಕ ಮಾರಾಟ ಮಾಡಿ ಲಾಭ ಮಾಡುವದು ಸರ್ವೇ ಸಾಮಾನ್ಯ. ಇದು ಈ ರಾಜ್ಯದ ‘ ದೊಡ್ಡ ಶಿಕ್ಷಣ ಪ್ರೇಮಿಗಳು ‘ ಮೊದಲಿನಿಂದ ಮಾಡುತ್ತಾ ಬಂದ ಅಮೂಲ್ಯ ಸಾರ್ವಜನಿಕ ಸೇವೆ.

ಸರಿ ಅದು ಏನೇ ಇರಲಿ…ಎಲ್ಲ ಊರಲ್ಲಿ ಇದ್ದಂತೆ ಆ ಊರಲ್ಲೂ ಒಂದು ಶಾಲೆ ಇದೆ. ಅದರಲ್ಲಿ ಯಾವ ಸೌಲಭ್ಯಗಳೂ ಇಲ್ಲ. ಕಾರಣ ಅದು ಸರಕಾರಿ ಶಾಲೆ ಎಂದು ಬೇರೆ ಹೇಳಬೇಕಾಗಿಲ್ಲ. ಒಂದು ಕಾಲದಲ್ಲಿ ಎಂಟು ಶಿಕ್ಷಕರಿದ್ದ ಶಾಲೆ ಈಗ ‘ ಏಕೋಪಾಧ್ಯಾಯ ‘ ಶಾಲೆಯ ಮೇಲಿನ ಹಂತ ತಲುಪಿದೆ. ಅಂದರೆ ಪ್ರಸ್ತುತ ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ. ಶಾಲೆಯು ಈ ದುಸ್ಥಿತಿಗೆ ಬರಲು ಶಾಲೆಯ ( ರಾಜಕೀಯ ) ಅಭಿವೃದ್ಧಿ ಸದಸ್ಯರು ಹೆಚ್ಚಿನ ಕೊಡುಗೆ ನೀಡಿದ್ದು ಸುಳ್ಳಲ್ಲ. ಒಂದು ತರಗತಿಯ ಚಾವಣಿ ಕುಸಿದು ಬಿದ್ದರೆ ಪಕ್ಕದ ತರಗತಿಯಲ್ಲಿ ಎರಡು ಕ್ಲಾಸುಗಳು ಒಟ್ಟಿಗೇ ನಡೆಸಬಹುದು. ಜೀರ್ಣಾವಸ್ಥೆಯ ಗುಡಿ ಜೀರ್ಣೋದ್ಧಾರ ಆಗುವ ಅವಕಾಶಗಳಿರುತ್ತವೆ. ಆದರೆ ಸರಕಾರಿ ಶಾಲೆ? ನೋ ಚಾನ್ಸ್…

ಹೊಸದಾಗಿ ಕೆಲವು ಕೊಠಡಿಗಳನ್ನು ಕಟ್ಟಬೇಕು ಎಂದು ಊರಿನ ಜನ ಪಂಚಾಯತಿಯ ಮುಖಾಂತರ ತಾಲೂಕಿನ ಬಿ ಈ ಓ ಸಾಹೇಬರಿಗೆ ಅರ್ಜಿಗಳನ್ನು ಗುಜರಾಯಸಿದ್ದು ಆಯಿತೇ ಹೊರತು… ಪ್ರತೀ ಫಲ ಮಾತ್ರ ಎಂದಿನಂತೆ ಶೂನ್ಯ. ಒಂದು ಮಳೆಯಾದರೆ ಸಾಕು ಭೂ ಕುಸಿತವಾಗುವ ರಸ್ತೆಗಳನ್ನು, ಕಟ್ಟಿದಕೂಡಲೇ ಬಿದ್ದು ಹೋಗುವ ಸೇತುವೆಗಳನ್ನು ನಿರ್ಮಿಸಲು ಮೀಸಲಿಟ್ಟ ಹಣದಲ್ಲಿ ಶಾಲೆಗಳನ್ನು ಕಟ್ಟಲು ಹೇಗೆ ಸಾಧ್ಯ? ಎಂದಿನಂತೆ ಬಜೆಟ್ ಇಲ್ಲ ಎಂದು ಸರ್ಕಾರದ ಸಿದ್ಧ ಉತ್ತರ ಬಂತು. ಗ್ರಾಮದಲ್ಲಿನ ಹೆಚ್ಚಿನ ಜನ ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡಿ ಬದುಕಿನ ಬಂಡಿ ಸಾಗಿಸುವವರು.

ಸರ್ಕಾರದವರೇನು ತಮ್ಮ ಸ್ವಂತ ಹಣವನ್ನು ಖರ್ಚು ಮಾಡುವುದಿಲ್ಲ. ಬದಲಾಗಿ ನಾವು ಕಟ್ಟುವ ತೆರಿಗೆಗಳಿಂದ ತಾನೇ ಎಂದು ಜೋರಾಗಿ ಅರಚಿ ಕೂಗಿ ಹೇಳಬೇಕು ಅಂದುಕೊಂಡರು ಊರಿನ ಜನರು…ಪಾಪ ಅದಾಗದೆ ಬಾಯಿ ಮುಚ್ಚಿಕೊಂಡು ಸುಮ್ಮನಾದರು. ಶಾಲೆಯನ್ನು ಉದ್ಧಾರ ಮಾಡುತ್ತೇನೆ ಎಂದು ಭರವಸೆ ಕೊಟ್ಟು ಪಂಚಾಯತಿ ಅಧ್ಯಕ್ಷ ಪದವಿ ಗೇರಿದ ಹಲವರ ಸಮ್ಮುಖದಲ್ಲಿ ‘ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ‘ ತಮ್ಮ ಅಹವಾಲನ್ನು ಅವರ ಮುಂದೆ ಇಟ್ಟೂ ಇಟ್ಟು ಸುಸ್ತಾಯಿತು ಗ್ರಾಮದ ಜನತೆ.

ಪಂಚಾಯತಿ ಅಧ್ಯಕ್ಷರ, ಎಂ ಎಲ್ ಎ, ಎಂ .ಪಿ. ಗಳ ಸ್ಥಾನಗಳೇನು ಶಾಶ್ವತವೇ? ಅವೂ ಕ್ಷಣಿಕ,ಹೆಚ್ಚೆಂದರೆ ಐದು ವರ್ಷ ಮಾತ್ರ. ಅಲ್ಲದೇ ಆ ಪಟ್ಟವನ್ನು ಕಾಪಾಡಿಕೊಳ್ಳಲು ತಕ್ಕ ಮಟ್ಟಿಗೆ ಬಂಡವಾಳ ಹೂಡಬೇಕು. ನಂತರ ಅದನ್ನು ಬಡ್ಡಿ ಸಮೇತ ವಸೂಲಿ ಮಾಡಲು ‘ ಕಪ್ಪು ‘ ಬಣ್ಣದ ( ಭ್ರಷ್ಟಾಚಾರದ ) ಕನ್ನಡಕ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಗೆದ್ದವರಿಗೆ!. ಮತ್ತೊಮ್ಮೆ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುವ ಅವಕಾಶ ಬಂತು. ಈ ಸಲವಾದರೂ ಸರಕಾರಿ ಶಾಲೆಯನ್ನು ‘ ಉದ್ಧಾರ ‘ ಮಾಡುವ ಅಭ್ಯರ್ಥಿಗೆ ಅಮೂಲ್ಯವಾದ ಮತ ನೀಡಲು ಪಣ ತೊಟ್ಟರು ಅಲ್ಲಿಯ ಮಾನ್ಯ ಮತದಾರರೆಲ್ಲ ಸೇರಿ… ಎಲ್ಲಾ ನಿಟ್ಟಿನಲ್ಲಿ ಆಲೋಚನೆ ಮಾಡಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದರು.

ಈ ಸಲ ಯಾವ ಪಕ್ಷಗಳು, ವ್ಯಕ್ತಿಗಳ ಜೊತೆ ಸಂಬಂಧ ಬೇಡವೇ ಬೇಡ. ಹಣವಿಲ್ಲದೆ ಈ ಪ್ರಪಂಚದಲ್ಲಿ ಏನೂ ನಡೆಯುವುದಿಲ್ಲ. ಆದ್ದರಿಂದ ಸಮಸ್ತ ಜೀವ ರಾಶಿಯನ್ನು ಸೆಳೆಯುವ ತಾಕತ್ತು ಇರುವ ‘ ಹಣ ‘ ಕ್ಕೇ ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಮೀಸಲು ಇಡೋಣವೆನ್ನುವ ತಾತ್ವಿಕ ಒಮ್ಮತಕ್ಕೆ ಬಂದರು ಮತದಾರರು. ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹಲವಾರು ಕನಸು ಕಂಡವರು ಈ ಚುನಾವಣೆಯಲ್ಲಿ ತಮ್ಮ ‘ ತಾಕತ್ತು ‘ ತೋರಿಸಲು ನಿರ್ಣಯಿಸಿದರು. ನಾವು ಮತದಾನ ಮಾಡುವುದಿಲ್ಲ ಎಂದು ಇಡೀ ತಾಲೂಕಿಗೆ ಕೇಳುವಷ್ಟು ‘ ಗಟ್ಟಿ ಧ್ವನಿ ‘ ಯಲ್ಲಿ ಅಲ್ಲಿನ ನಾಯಕರು ನುಡಿದರು. ಮತದಾನವಾಗದೆ ಪಂಚಾಯತಿ ಸದಸ್ಯರ ಚುನಾವಣೆಗಳು ನಡೆಯುವದಾದರೂ ಹೇಗೆ? ಅದಾದರೆ ತಾನೇ ಅಧ್ಯಕ್ಷರು ಆಯ್ಕೆಯಾಗುವುದು? ಯಾವ ಚುನಾವಣೆ ಪ್ರಕ್ರಿಯೆ ನಡೆಯದೇ ‘ ಬೆಲೆ ಬಾಳುವ ಅಮೂಲ್ಯ ‘ ಮತ ಹಾಕದೆ ಪಂಚಾಯತಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು ಗ್ರಾಮದ ಯುವಕರು, ನಾಯಕರು ಮತ್ತು ಮುದುಕರು ಒಟ್ಟಾಗಿ.

ಮತದಾನದ ( ಪ್ರಜಾಪ್ರಭುತ್ವ ಹಬ್ಬದ ) ದಿನ ಬಂದೇ ಬಿಡ್ತು. ಮತದಾರರು ಮತ್ತು ಅವರ ನಾಯಕರು ಗುಡಿಯ ಎದುರಿನ ಅರಳೀ ಮರದ ಕಟ್ಟೆಯ ಹತ್ತಿರ ಬಂದರು. ಊರಿನ ಸರ್ಕಾರಿ ಶಾಲೆಯ ಒಳಿತಿಗಾಗಿ ಕೈಗೊಂಡ ನಿರ್ಧಾರದ ಫಲ ನಾವು ಇಲ್ಲಿಗೆ ಬಂದದ್ದು ಎಂದು ಸಭೆಗೆ ತಿಳಿಸಿದರು. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅರಚಿತು ಹತ್ತಿರದ ತಾಲೂಕಿನಿಂದ ಬಂದ ಸರಕಾರಿ ಅಧಿಕಾರಿಗಳ ದಂಡು ಮತ್ತು ‘ ಪ್ರಜಾಪ್ರಭುತ್ವದ ರಕ್ಷಕರು ‘ ಎನ್ನುವ ನಾಟಕದ ನಕಲಿ ಪಾತ್ರಧಾರಿಗಳ ತಂಡ. ಅವರ ಹಿಂದೆಯೇ ಆಗಮಿಸಿತು ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ತಂಡ ಗ್ರಾಮದ ಚೋದ್ಯವನ್ನು ‘ ಲೈವ್ ‘ ಆಗಿ ಬಿತ್ತರಿಸಲು.

ಸ್ವಲ್ಪ ಹೊತ್ತು ಅರಳೀ ಕಟ್ಟೆಯ ಮೇಲೆ ನೆರೆದ ಎಲ್ಲ ಮತದಾರರು ನಿಶ್ಯಬ್ದವಾಗಿ ಕೂತಿದ್ದರು. ಅವರಿಗೆ ಊರಿನ ನಾಯಕರು ಮತ್ತು ಪತ್ರಿಕಾ ಮಿತ್ರರು ‘ ಸಾಥ್ ‘ ಕೊಟ್ಟರು. ಇದ್ದಕ್ಕಿದ್ದಂತೆ ಗುಂಡಣ್ಣನ ಬಲಗೈ ಬಂಟ ತಿಮ್ಮಣ್ಣ ಸಭೆಯ ಮುಂದೆ ಬಂದು ” ನಮ್ಮ ಮಹಾನ್ ಜ(ಧ)ನ ನಾಯಕರಾದ ಶ್ರೀ ಗುಂಡಣ್ಣ ಅವರು ಗ್ರಾಮ ಪಂಚಾಯತಿ ಅಭಿವೃದ್ಧಿ ( ಇತ್ತೀಚಿಗೆ ತಾಲೂಕು ಪಂಚಾಯತಿಗಿಂತ ಹೆಚ್ಚೆಚ್ಚು ಗ್ರಾಂಟುಗಳು ಗ್ರಾಮ ಪಂಚಾಯತಿಗೆ ಬರುವ ವಿಷಯ ತಿಳಿದು…) ಮತ್ತು ಪುಟ್ಟ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ತಮ್ಮೆಲ್ಲರ ಪರ ಅಲಂಕರಿಸುವದಕ್ಕಾಗಿ (ಸ್ಪರ್ಧೆ ಇಲ್ಲದೆ ಒಮ್ಮತದ ಅಭ್ಯರ್ಥಿಯಾಗಿ! ) ಶಾಲೆಯ ಏಳಿಗೆಗಾಗಿ ಹತ್ತು ಲಕ್ಷ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಲು ಸಿದ್ಧರಾಗಿದ್ದಾರೆ. ಆ ಕಾರಣದಿಂದ ಅವರನ್ನು ಎಲ್ಲರೂ ಬೆಂಬಲಿಸಬೇಕೆಂದು ನನ್ನ ಸವಿನಯ ಮನವಿ ” ಎಂದು ಘೋಷಿಸಿದ. ಇದನ್ನು ಕೇಳಿದ ಉಳಿದ ಪುಡಿ – ಹಿರಿಯ ನಾಯಕರು ತಾವೇನು ಕಡಿಮೆ ಎನ್ನುವಂತೆ ಅಧ್ಯಕ್ಷ ಸ್ಥಾನವನ್ನೇ ಹರಾಜಿಗಿಡಲು ದುಂಬಾಲು ಬಿದ್ದರು.

ಗ್ರಾಮದ ಮುಖಂಡರು ಈ ಗೌಜು, ಗದ್ದಲ ಹಾಗೂ ಹರಾಜಿನ ವಿಷಯ ತಿಳಿದು ಒಂದು ತೀರ್ಮಾನಕ್ಕೆ ಬಂದರು. ಗ್ರಾಮದ ಪ್ರಮುಖರ ಪರವಾಗಿ ಶ್ರೀ ಸೀನಪ್ಪ, ಮಾಜಿ ಪಂಚಾಯತಿ ಅಧ್ಯಕ್ಷ ಯಾರು ಅಧಿಕ ಮೊತ್ತಕ್ಕೆ ‘ ಹರಾಜು ಹಣ ‘ ಕೂಗುತ್ತಾರೋ ಅವರಿಗೆ ಮಾತ್ರ ಪಂಚಾಯತಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಪಬ್ಲಿಕ್ ಆಗಿ ಘೋಷಣೆ ಮಾಡಿ ನಂತರ ಅಭ್ಯರ್ಥಿಗಳಲ್ಲಿ ಒಂದು ಮನವಿ ಮಾಡಿದ ” ಹರಾಜುದಾರರಿಗೆ ಹತ್ತು ನಿಮಿಷದ ಅವಧಿ ನೀಡುತ್ತೇವೆ. ಯಾರು ಹೆಚ್ಚಿನ ಹಣಕ್ಕೆ ಹರಾಜು ಕೂಗುತ್ತಾರೋ ಅವರಿಗೆ ನಮ್ಮ ಹಳ್ಳಿಯ ಪಂಚಾಯತ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡಲಾಗುವುದು. ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಮಾಡುವ ಹರಾಜು ಆದ್ದರಿಂದ ಹೆಚ್ಚು ಆಕಾಂಕ್ಷಿಗಳು ಪಾಲ್ಗೊಳ್ಳಬೇಕು ಮತ್ತು ಹೆಚ್ಚಿನ ಮೊತ್ತಕ್ಕೆ ಹರಾಜು ಹಣವನ್ನು ಘೋಷಿಸಬೇಕು. “

ನಾ ಮುಂದೆ ತಾ ಮುಂದೆ ಎಂದು ಊರಿನ ಎಲ್ಲಾ ಪಕ್ಷದ ಬೆಂಬಲಿತ ಅಭ್ಯರ್ಥಿಗಳ, ನಾಯಕರ ಮಧ್ಯೆ ಪೈಪೋಟಿ ಶುರುವಾಯಿತು. ಆದರೆ ಕೊನೆಗೆ ಹೆಚ್ಚು ಹಣಕ್ಕೆ ಅಂದರೆ ಇಪ್ಪತ್ತೈದು ಲಕ್ಷ ರೂಪಾಯಿಗಳಿಗೆ ಹರಾಜು ಕೂಗಿದ ಅತ್ಯಂತ ಯಶಸ್ವಿ ಅಭ್ಯರ್ಥಿಯಾಗಿ ಗುಂಡಣ್ಣ ಹೊರ ಹೊಮ್ಮಿದ. ಅದನ್ನೇ ನೆರೆದ ಸಭೆಯಲ್ಲಿ ಘೋಷಿಸಿತು ಶ್ರೀ ಸೀನಪ್ಪನ ತಂಡ. ಕೇವಲ ಹತ್ತು ನಿಮಿಷದಲ್ಲಿ ಐದು ಹೂವಿನ ಮಾಲೆಗಳನ್ನು ಧರಿಸಿ ಬಲಗೈನ ಎರಡು ಕೈ ಬೆರಳಿಂದ ವಿಜಯದ ಸಂಕೇತ ತೋರಿಸುತ್ತಾ ನಿಂತ ಜ(ಧ)ನ ನಾಯಕ ಗುಂಡಣ್ಣನನ್ನು ಪತ್ರಕರ್ತರು ಸುತ್ತುವರೆದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನರಸಪ್ಪ ಹಿತ್ತಲಮನಿ ಅವರು ಗುಂಡಣ್ಣನನ್ನು ಉದ್ದೇಶಿಸಿ ” ನೀವು ಪಂಚಾಯತಿ ಅಧ್ಯಕ್ಷರಾಗಲು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದಿರಿ. ಮತದಾರರಿಗೆ ಅಲ್ಲದೇ ಪಂಚಾಯತಿ ಸದಸ್ಯರಿಗೆ ಆಮಿಷ ತೋರಿಸಿ ನೀವು ಹರಾಜಿನ ಮೂಲಕ ಪದವಿ ದಕ್ಕಿಸಿಕೊಂಡಿರಿ… ಇದು ತಪ್ಪು ಅಂತ ತಮಗೆ ಅನಿಸುವುದಿಲ್ಲವೇ? ಈ ರೀತಿ ಮಾಡಲು ನಿಮ್ಮ ಆತ್ಮ ಸಾಕ್ಷಿ ಹೇಗೆ ಒಪ್ಪಿತು? ಇಂತಹ ಕೆಲಸ ಮಾಡಲು ನಿಮಗೆ ನಾಚಿಕೆಯಾಗುವದಿಲ್ಲವೇ? ” ಎಂದು ವ್ಯಂಗ್ಯ ಮಿಶ್ರಿತ ಸ್ವರದಲ್ಲಿ ಕೋಪದಿಂದ ಬುಸುಗುಟ್ಟಿದ.

ನುರಿತ ಅಪ್ಪಟ ರಾಜಕಾರಿಣಿ ಗುಂಡಣ್ಣ ಪತ್ರಕರ್ತ ಮಿತ್ರನ ಕೊಂಕು ನುಡಿ ಕೇಳಿ ಸ್ವಲ್ಪವೂ ವಿಚಲಿತನಾಗದೆ ಮುಗುಳು ನಗೆ ಸೂಸುತ್ತಾ ” ಮಿತ್ರರೇ, ನೀವು ಹೇಳಿದ್ದು ಸರಿಯಾಗಿದೆ. ಆಶೆ ಆಮಿಷಗಳಿಗೆ ಬಲಿಯಾಗದೆ ಮತದಾರರು ತಮ್ಮ ಆತ್ಮ ಸಾಕ್ಷಿಗೆ ( ಇದ್ದರೆ! ) ಅನುಗುಣವಾಗಿ ಮತ ಹಾಕಿ ಗೆಲ್ಲಿಸಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ಹಲವಾರು ರಾಷ್ಟ್ರೀಯ ರಾಜಕೀಯ ಪಕ್ಷಗಳು ತಮ್ಮ ಪಕ್ಷವನ್ನು ರಾಜ್ಯಗಳಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ತರಲು ಎಂತೆಂತಹ ಉಚಿತ ಭರವಸೆಗಳನ್ನು ತಮ್ಮ ಮ್ಯಾನಿ ಫೆಸ್ಟಿನಲ್ಲಿ ಸೇರಿಸಿದ್ದಾರೆ ಎಂದು ಎಂದಾದರೂ ಗಮನಿಸಿದ್ದೀರಾ? ಪ್ರಜೆಗಳು ಐದು ವರ್ಷಕ್ಕೊಮ್ಮೆ ಚುನಾವಣೆ ಬೂತಿಗೆ ಬಂದು ಮತ ಹಾಕಿದರೆ ಸಾಕು.

ಮತ್ತೈದು ವರ್ಷ ಅವರು ಮನೆಯಿಂದ ಹೊರಗೆ ಕಾಲಿಡುವದು ಬೇಡ ಎನ್ನುವಂತೆ ಎಲ್ಲವನ್ನೂ ಅವರ ಮನೆಯ ಬಾಗಿಲಿಗೆ ತಲುಪಿಸುವ ಭರವಸೆಗಳ ಬಗ್ಗೆ ಯಾಕೆ ತಾವು ಪತ್ರಕರ್ತರು ಮಾತನಾಡುವುದಿಲ್ಲ ಮತ್ತು ಅದರ ಬಗ್ಗೆ ತಗಾದೆ ತೆಗೆಯುವುದಿಲ್ಲ. ಇದು ಇಂದಿನ ಪರಿಷ್ಕೃತ ಪ್ರಜಾಪ್ರಭುತ್ವ! ಮಿತ್ರರಿಗೆ ನನ್ನ ಮಾತುಗಳು ಅರ್ಥವಾಗಿರಬೇಕು. ” ಎಂದು ಯಾವುದೇ ಅಳುಕಿಲ್ಲದೆ ಖಡಕ್ಕಾಗಿ ನುಡಿದಾಗ ಗುಂಡಣ್ಣನ ಅಪಾರ ಬೆಂಬಲಿಗರು ಅಷ್ಟೇ ಅಲ್ಲ ಇಡೀ ಊರಿನ ಜನರೆಲ್ಲ ಆತನ ಮಾತಿಗೆ ತಲೆದೂಗಿ ಚಪ್ಪಾಳೆ ತಟ್ಟಲು ಶುರು ಮಾಡಿದರು. ಇಂತಹ ನೇರ ಮತ್ತು ದಿಟ್ಟ ಕಾರ್ಯಕ್ರಮವನ್ನು ರಾಜ್ಯದ ಟಿ ವಿ ವಾಹಿನಿಗಳು ನೇರ ಪ್ರಸಾರ ಮಾಡಿ ಆ ಕ್ಷಣಕ್ಕೆ ತಮ್ಮ ಟಿ ಪಿ ರೇಟಿಂಗ್ ಹೆಚ್ಚು ಮಾಡಿಕೊಂಡು ಸಾರ್ಥಕವಾದವು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

10 thoughts on “ಬಹಿರಂಗ ಹರಾಜು ಮತ್ತು ಅಧ್ಯಕ್ಷ ಸ್ಥಾನ!”

  1. JANARDHANRAO KULKARNI

    ಬಹಿರಂಗ ಹರಾಜು ಮತ್ತು ಅಧ್ಯಕ್ಷ ಸ್ಥಾನ ವಿಡಂಬನಾತ್ಮಕ ಲೇಖನ ತುಂಬಾ ಚೆನ್ನಾಗಿದೆ. ವಿಷಯದ ಆಯ್ಕೆ ಚನ್ನಾಗಿದೆ ತಿವಿತದ ಮೊನಚು ಇನ್ನೂ ಚೂಪಾಗಿ ಇರಬೇಕಿತ್ತು ಅನ್ನಿಸಿತು. ಸರಳವಾಗಿ ಹೇಳಿದ್ದು ಕಾಣಿಸಿತು.

  2. ನೀ ಕೊ ದಲಬಂಜನ

    ಅಧಿಕಾರ ವಿಕೇದ್ರೀಕರಣದ ಸದುಪಯೋಗ ಆಗದಯೆ,,ಹಳ್ಳಿ ಜೀವನದ ಸಾಮರಸ್ಯ ಕಲಕುವ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ.ಅದಲ್ಲದೆಯೇ ಶಿಕ್ಷಣದ ಬಗ್ಗೆ ಇರುವ ದಿವ್ಯ ನಿರ್ಲಕ್ಷ್ಯ ಹಾಗೂ ಇಂದಿನ ಸಾಮಾಜಿಕ ಸ್ಥಿತಿಗೆ ,ಲೇಖಕರು ಮನಮುಟ್ಟುವಂತೆ ಲೇಖನ ಬರೆದಿದ್ದಾರೆ.ಶ್ರೀ ಎಂ ರಾಘವೇಂದ್ರರಾವ್ ರವರಿಗೆ ಅಭಿನಂದನೆಗಳು
    ನೀ ಕೋ ದಲಬಂಜನ್.

  3. ಶೇಖರಗೌಡ ವೀ ಸರನಾಡಗೌಡರ್

    ವಾಸ್ತವದ ಚಿತ್ರಣ ಅತ್ಯದ್ಭುತ. ತುಂಬಾ ಇಷ್ಟವಾಯಿತು.
    ಅಭಿನಂದನೆಗಳು.

  4. ಧರ್ಮಾನಂದ ಶಿರ್ವ

    ಗ್ರಾಮಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನು ಹರಾಜಿಗಿಟ್ಟು ಆಯ್ಕೆ ಮಾಡಿದ ಪ್ರಜಾಪ್ರಭುತ್ವದ ಅಣಕು ವಿಡಂಬನೆಯಲ್ಲಿ ಢಾಳಾಗಿ ಮೂಡಿ ಬಂದಿದೆ.
    ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter